ಕೊರಿಂಥದವರಿಗೆ ಬರೆದ ಮೊದಲನೇ ಪತ್ರ
14 ಪ್ರೀತಿ ತೋರಿಸೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ. ಜೊತೆಗೆ, ದೇವರು ಕೊಡೋ ಸಾಮರ್ಥ್ಯಗಳನ್ನ, ಅದ್ರಲ್ಲೂ ಭವಿಷ್ಯ ಹೇಳೋ ಸಾಮರ್ಥ್ಯವನ್ನ ಪಡಿಯೋಕೆ ಪ್ರಯತ್ನ ಮಾಡ್ತಾ ಇರಿ.+ 2 ಬೇರೆ ಭಾಷೆಯಲ್ಲಿ ಮಾತಾಡುವವನು ಮನುಷ್ಯರ ಜೊತೆ ಅಲ್ಲ, ದೇವರ ಜೊತೆ ಮಾತಾಡ್ತಾನೆ. ಯಾಕಂದ್ರೆ ಅವನು ಪವಿತ್ರಶಕ್ತಿಯ ಸಹಾಯದಿಂದ ಪವಿತ್ರ ರಹಸ್ಯಗಳನ್ನ+ ಮಾತಾಡಿದ್ರೂ ಯಾರಿಗೂ ಅರ್ಥ ಆಗಲ್ಲ.+ 3 ಆದ್ರೆ ಭವಿಷ್ಯ ಹೇಳುವವನು ತನ್ನ ಮಾತಿಂದ ಬೇರೆಯವ್ರನ್ನ ಬಲಪಡಿಸ್ತಾನೆ, ಹುರಿದುಂಬಿಸ್ತಾನೆ, ಸಮಾಧಾನ ಮಾಡ್ತಾನೆ. 4 ಬೇರೆ ಭಾಷೆ ಮಾತಾಡುವವನು ತನ್ನನ್ನ ಮಾತ್ರ ಬಲಪಡಿಸ್ಕೊಳ್ತಾನೆ, ಆದ್ರೆ ಭವಿಷ್ಯ ಹೇಳುವವನು ಸಭೆಯನ್ನ ಬಲಪಡಿಸ್ತಾನೆ. 5 ನೀವೆಲ್ಲ ಬೇರೆ ಬೇರೆ ಭಾಷೆಗಳಲ್ಲಿ ಮಾತಾಡಬೇಕು+ ಅಂತ ನಂಗಿಷ್ಟ. ಆದ್ರೆ ಅದಕ್ಕಿಂತ, ನೀವು ಭವಿಷ್ಯ ಹೇಳಬೇಕು+ ಅನ್ನೋದು ನಂಗೆ ಇನ್ನೂ ಇಷ್ಟ. ಬೇರೆ ಭಾಷೆಗಳಲ್ಲಿ ಮಾತಾಡುವವನು ಸಭೆಯನ್ನ ಬಲಪಡಿಸೋಕೆ ಅದನ್ನ ಭಾಷಾಂತರ* ಮಾಡದಿದ್ರೆ ಅವನಿಗಿಂತ ಭವಿಷ್ಯ ಹೇಳುವವನಿಂದಾನೇ ಸಭೆಗೆ ತುಂಬ ಪ್ರಯೋಜನ ಆಗುತ್ತೆ. 6 ಆದ್ರೆ ಸಹೋದರರೇ, ನಾನೀಗ ನಿಮ್ಮ ಹತ್ರ ಬಂದು ದೇವರು ಕೊಟ್ಟ ಸಂದೇಶನ ನಿಮಗೆ ಹೇಳದೆ,+ ನಿಮಗೆ ಜ್ಞಾನ ಕೊಡದೆ,+ ಭವಿಷ್ಯ ಹೇಳದೆ ಅಥವಾ ನಿಮಗೇನೂ ಕಲಿಸದೆ ಬೇರೆ ಭಾಷೆಗಳಲ್ಲಿ ಮಾತಾಡ್ತಾ ಇದ್ರೆ ನಿಮಗೇನಾದ್ರೂ ಪ್ರಯೋಜನ ಆಗುತ್ತಾ?
7 ಹಾಗೇ, ನಿರ್ಜೀವ ವಸ್ತುಗಳಾದ ಕೊಳಲು ಮತ್ತು ತಂತಿವಾದ್ಯದಿಂದ ಬೇರೆ ಬೇರೆ ಸಂಗೀತ ಬರದೆ ಇದ್ರೆ ಕೊಳಲಿನ ಸಂಗೀತ ಯಾವುದು, ತಂತಿವಾದ್ಯದ ಸಂಗೀತ ಯಾವುದು ಅಂತ ಹೇಗೆ ಗೊತ್ತಾಗುತ್ತೆ? 8 ಯುದ್ಧಕ್ಕೆ ತಯಾರಾಗಬೇಕಂತ ಸೂಚನೆ ಕೊಡೋಕೆ ತುತ್ತೂರಿಯನ್ನ ಸ್ಪಷ್ಟವಾಗಿ ಊದದೆ ಇದ್ರೆ ಯಾರು ತಾನೆ ಯುದ್ಧಕ್ಕೆ ತಯಾರಾಗ್ತಾರೆ? 9 ಅದೇ ತರ ಜನ್ರಿಗೆ ಸುಲಭವಾಗಿ ಅರ್ಥ ಆಗೋ ಹಾಗೆ ನೀವು ಮಾತಾಡದೆ ಇದ್ರೆ ನಿಮ್ಮ ಮಾತು ಯಾರಿಗೆ ತಾನೇ ಅರ್ಥ ಆಗುತ್ತೆ? ನೀವು ಗಾಳಿ ಜೊತೆ ಮಾತಾಡಿದ ಹಾಗೆ ಇರುತ್ತೆ. 10 ಲೋಕದಲ್ಲಿ ತುಂಬ ಭಾಷೆ ಇದೆ, ಆದ್ರೆ ಅರ್ಥ ಆಗದ ಭಾಷೆ ಯಾವುದೂ ಇಲ್ಲ. 11 ಒಂದುವೇಳೆ ಬೇರೆ ಭಾಷೆ ಮಾತಾಡುವವನ ಮಾತು ನನಗೆ ಅರ್ಥ ಆಗದೆ ಇದ್ರೆ ಅವನು ನನಗೆ ವಿದೇಶಿ ತರ ಇರ್ತಾನೆ, ಅವನಿಗೂ ನಾನು ವಿದೇಶಿ ತರ ಇರ್ತಿನಿ. 12 ನಿಮ್ಮ ವಿಷ್ಯದಲ್ಲೂ ಹೀಗೇ ಆಗುತ್ತೆ. ಪವಿತ್ರಶಕ್ತಿ ಕೊಡೋ ಸಾಮರ್ಥ್ಯಗಳನ್ನ ಪಡಿಬೇಕು ಅನ್ನೋ ತವಕ ನಿಮ್ಮಲ್ಲಿ ಇದೆ. ಹಾಗಾಗಿ ನೀವು ಸಭೆಯನ್ನ ಬಲಪಡಿಸೋ ಸಾಮರ್ಥ್ಯಗಳನ್ನ ಪಡಿಯೋಕೆ ಜಾಸ್ತಿ ಪ್ರಯತ್ನ ಮಾಡಿ.+
13 ಅದಕ್ಕೇ ಬೇರೆ ಭಾಷೆಯಲ್ಲಿ ಮಾತಾಡುವವನು ಅದನ್ನ ಭಾಷಾಂತರಿಸೋ* ಸಾಮರ್ಥ್ಯಕ್ಕಾಗಿ ಪ್ರಾರ್ಥಿಸ್ಲಿ.+ 14 ನಾನು ಬೇರೆ ಭಾಷೆಯಲ್ಲಿ ಪ್ರಾರ್ಥಿಸಿದ್ರೆ ಪವಿತ್ರಶಕ್ತಿ ಕೊಟ್ಟಿರೋ ಸಾಮರ್ಥ್ಯದಿಂದ ಪ್ರಾರ್ಥಿಸ್ತಾ ಇದ್ದೀನಿ. ಆದ್ರೆ ನನಗದು ಅರ್ಥ ಆಗ್ತಿಲ್ಲ. 15 ಹಾಗಾದ್ರೆ ನಾನೇನು ಮಾಡ್ಲಿ? ಪವಿತ್ರಶಕ್ತಿ ಕೊಟ್ಟಿರೋ ಸಾಮರ್ಥ್ಯದಿಂದ ಪ್ರಾರ್ಥನೆ ಮಾಡ್ತೀನಿ. ಆದ್ರೆ ಅದನ್ನ ಅರ್ಥ ಮಾಡ್ಕೊಂಡು ಪ್ರಾರ್ಥನೆ ಮಾಡ್ತೀನಿ. ಪವಿತ್ರಶಕ್ತಿ ಕೊಟ್ಟಿರೋ ಸಾಮರ್ಥ್ಯದಿಂದ ನಾನು ಹಾಡುಗಳನ್ನ ಹಾಡಿ ಹೊಗಳ್ತೀನಿ. ಆದ್ರೆ ಅದನ್ನ ಅರ್ಥ ಮಾಡ್ಕೊಂಡು ಹಾಡ್ತೀನಿ. 16 ದೇವರಿಗೆ ಧನ್ಯವಾದ ಹೇಳೋಕೆ ನೀನು ಪವಿತ್ರಶಕ್ತಿ ಕೊಟ್ಟಿರೋ ಸಾಮರ್ಥ್ಯದಿಂದ ಪ್ರಾರ್ಥಿಸಿದಾಗ ನಿಮ್ಮ ಜೊತೆ ಇರೋ ಒಬ್ಬ ಸಾಮಾನ್ಯ ವ್ಯಕ್ತಿಗೆ ಅದು ಅರ್ಥ ಆಗದೆ ಇದ್ರೆ ಅವನು ಹೇಗೆ “ಆಮೆನ್” ಅಂತ ಹೇಳಕ್ಕಾಗುತ್ತೆ? 17 ನೀನೇನೋ ಚೆನ್ನಾಗಿ ದೇವರಿಗೆ ಪ್ರಾರ್ಥನೆ ಮಾಡ್ತೀಯ, ಆದ್ರೆ ಅದು ಅವನನ್ನ ಬಲಪಡಿಸ್ತಿಲ್ವಲ್ಲಾ? 18 ನಿಮ್ಮೆಲ್ಲರಿಗಿಂತ ನಾನು ತುಂಬ ಭಾಷೆಗಳಲ್ಲಿ ಮಾತಾಡೋದಕ್ಕೆ ದೇವರಿಗೆ ಧನ್ಯವಾದ ಹೇಳ್ತೀನಿ. 19 ಆದ್ರೆ ನಾನು ಸಭೆಯಲ್ಲಿ ಮಾತಾಡುವಾಗ ಹತ್ತು ಸಾವಿರ ಪದಗಳನ್ನ ಅರ್ಥ ಆಗದ ಭಾಷೆಯಲ್ಲಿ ಹೇಳೋ ಬದ್ಲು ಬೇರೆಯವರಿಗೆ ಕಲಿಸೋಕೆ ಐದೇ ಐದು ಪದಗಳನ್ನ ಅರ್ಥ ಆಗೋ ಭಾಷೆಯಲ್ಲಿ ಹೇಳೋಕೆ ಇಷ್ಟ ಪಡ್ತೀನಿ.+
20 ಸಹೋದರರೇ, ಕೆಟ್ಟತನದ ವಿಷ್ಯದಲ್ಲಿ ಮಗು ತರ ಇರಿ,+ ಆದ್ರೆ ಬುದ್ಧಿವಂತಿಕೆಯಲ್ಲಿ ಮಗು ತರ ಇರದೆ,+ ದೊಡ್ಡವ್ರ ತರ ಇರಿ.+ 21 ನಿಯಮ ಪುಸ್ತಕದಲ್ಲಿ ಏನು ಹೇಳಿದೆ ಅಂದ್ರೆ “‘ನಾನು ಈ ಜನ್ರ ಜೊತೆ ವಿದೇಶಿಯರ ಮತ್ತು ಅಪರಿಚಿತರ ಭಾಷೆಗಳಲ್ಲಿ ಮಾತಾಡ್ತೀನಿ. ಆದ್ರೂ ಅವರು ನನ್ನ ಮಾತು ಕೇಳಲ್ಲ’ ಅಂತ ಯೆಹೋವ* ಹೇಳ್ತಾನೆ.”+ 22 ಬೇರೆ ಭಾಷೆಗಳಲ್ಲಿ ಮಾತಾಡೋ ಸಾಮರ್ಥ್ಯ ಯೇಸು ಮೇಲೆ ನಂಬಿಕೆ ಇಟ್ಟವ್ರಿಗಲ್ಲ, ನಂಬಿಕೆ ಇಡದವ್ರಿಗೆ ಗುರುತಾಗಿದೆ.+ ಆದ್ರೆ ಭವಿಷ್ಯ ಹೇಳೋ ಸಾಮರ್ಥ್ಯ ನಂಬಿಕೆ ಇಡದವ್ರಿಗಲ್ಲ, ನಂಬಿಕೆ ಇಟ್ಟವ್ರಿಗೆ ಗುರುತಾಗಿದೆ. 23 ಹಾಗಾಗಿ ಇಡೀ ಸಭೆ ಒಂದು ಜಾಗದಲ್ಲಿ ಸೇರಿದಾಗ ಎಲ್ರೂ ಬೇರೆ ಬೇರೆ ಭಾಷೆಗಳಲ್ಲಿ ಮಾತಾಡಿದ್ರೆ ಸಾಮಾನ್ಯ ಜನ್ರು ಅಥವಾ ನಂಬಿಕೆ ಇಲ್ಲದವರು ಅಲ್ಲಿಗೆ ಬಂದಾಗ ನಿಮಗೆ ತಲೆಕೆಟ್ಟಿದೆ ಅಂತ ಹೇಳಲ್ವಾ? 24 ಆದ್ರೆ ನೀವೆಲ್ಲ ಭವಿಷ್ಯ ಹೇಳುವಾಗ ನಂಬಿಕೆ ಇಲ್ಲದವನು ಅಥವಾ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲಿಗೆ ಬಂದ್ರೆ ಅವನು ಕೇಳಿಸ್ಕೊಳ್ಳೋ ವಿಷ್ಯಗಳಿಂದ ಅವನು ತಿದ್ಕೊಳ್ತಾನೆ, ತನ್ನನ್ನ ಚೆನ್ನಾಗಿ ಪರೀಕ್ಷೆ ಮಾಡ್ಕೊಳ್ತಾನೆ. 25 ತನ್ನ ಹೃದಯದಲ್ಲಿರೋ ರಹಸ್ಯ ಆಗ ಅವನಿಗೆ ಅರ್ಥ ಆಗುತ್ತೆ. ಹಾಗಾಗಿ ಅವನು ಅಡ್ಡಬಿದ್ದು ದೇವರನ್ನ ಆರಾಧಿಸ್ತಾ “ನಿಜವಾಗ್ಲೂ ದೇವರು ನಿಮ್ಮ ಜೊತೆ ಇದ್ದಾನೆ” ಅಂತ ಹೇಳ್ತಾನೆ.+
26 ಹಾಗಾದ್ರೆ ಸಹೋದರರೇ, ಏನು ಮಾಡಬೇಕು? ನೀವು ಒಟ್ಟಾಗಿ ಬಂದಾಗ ಒಬ್ಬ ಕೀರ್ತನೆ ಹಾಡ್ತಾನೆ, ಇನ್ನೊಬ್ಬ ಕಲಿಸ್ತಾನೆ, ಮತ್ತೊಬ್ಬ ದೇವರಿಂದ ಸಿಕ್ಕಿದ ಸಂದೇಶವನ್ನ ತಿಳಿಸ್ತಾನೆ, ಇನ್ನೊಬ್ಬ ಬೇರೆ ಭಾಷೆಯಲ್ಲಿ ಮಾತಾಡ್ತಾನೆ, ಮತ್ತೊಬ್ಬ ಭಾಷಾಂತರ* ಮಾಡ್ತಾನೆ.+ ನೀವು ಇದನ್ನೆಲ್ಲ ಒಬ್ರನ್ನೊಬ್ರು ಬಲಪಡಿಸೋಕೆ ಮಾಡಿ. 27 ಒಂದುವೇಳೆ ಬೇರೆ ಭಾಷೆಯಲ್ಲಿ ಮಾತಾಡೋರಿದ್ರೆ ಇಬ್ರು ಅಥವಾ ಮೂವರು ಮಾತಾಡ್ಲಿ, ಅದೂ ಒಬ್ರಾದ ಮೇಲೆ ಒಬ್ರು ಮಾತಾಡ್ಲಿ. ಆದ್ರೆ ಯಾರಾದ್ರೂ ಅದನ್ನ ಭಾಷಾಂತರ* ಮಾಡಬೇಕು.+ 28 ಭಾಷಾಂತರಗಾರ ಇಲ್ಲದೆ ಇದ್ರೆ ಅವರು ಸಭೆಯಲ್ಲಿ ಮೌನವಾಗಿರಬೇಕು. ತಮ್ಮ ಹೃದಯದಲ್ಲೇ ದೇವರ ಜೊತೆ ಮಾತಾಡ್ಕೊಬೇಕು. 29 ಭವಿಷ್ಯ ಹೇಳುವವರು ಇದ್ರೆ ಇಬ್ರು ಅಥವಾ ಮೂವರು ಮಾತಾಡ್ಲಿ,+ ಬೇರೆಯವರು ಕೇಳಿಸ್ಕೊಂಡು ಅರ್ಥ ಮಾಡ್ಕೊಳ್ಳಲಿ. 30 ಆದ್ರೆ ಇನ್ನೊಬ್ಬನಿಗೆ ಅಲ್ಲಿ ಕೂತಿರುವಾಗ ದೇವರಿಂದ ಸಂದೇಶ ಸಿಕ್ಕಿದ್ರೆ ಮೊದ್ಲು ಮಾತಾಡ್ತಿದ್ದವನು ಸುಮ್ಮನಾಗ್ಲಿ. 31 ನೀವೆಲ್ಲ ಒಬ್ಬೊಬ್ಬರಾಗಿ ಭವಿಷ್ಯ ಹೇಳಬೇಕು, ಆಗ ಎಲ್ರೂ ಕಲಿತಾರೆ, ಎಲ್ರಿಗೂ ಪ್ರೋತ್ಸಾಹ ಸಿಗುತ್ತೆ.+ 32 ಪವಿತ್ರಶಕ್ತಿಯಿಂದ ಭವಿಷ್ಯ ಹೇಳೋ ಸಾಮರ್ಥ್ಯ ಪಡ್ಕೊಂಡವರು ಆ ಸಾಮರ್ಥ್ಯವನ್ನ ಹೇಗೆ ಬೇಕೋ ಹಾಗೆ ಬಳಸದೆ ಸ್ವನಿಯಂತ್ರಣ ತೋರಿಸಬೇಕು. 33 ಯಾಕಂದ್ರೆ ದೇವರು ಶಾಂತಿಯ ದೇವರು, ಎಲ್ಲ ಅಚ್ಚುಕಟ್ಟಾಗಿ ಮಾಡೋ ದೇವರು.*+
ಪವಿತ್ರ ಜನ್ರ ಎಲ್ಲ ಸಭೆಗಳಲ್ಲಿ ಇರೋ ತರ 34 ಸ್ತ್ರೀಯರು ಸಭೆಯಲ್ಲಿ ಸುಮ್ನೆ ಇರಲಿ. ಯಾಕಂದ್ರೆ ಅವ್ರಿಗೆ ಮಾತಾಡೋಕೆ ಅನುಮತಿ ಇಲ್ಲ.+ ನಿಯಮ ಪುಸ್ತಕದಲ್ಲೂ ಹೇಳಿರೋ ಹಾಗೆ ಅವರು ಅಧೀನರಾಗಿ ಇರಲಿ.+ 35 ಅವರು ಏನಾದ್ರೂ ತಿಳ್ಕೊಳ್ಳೋಕೆ ಇಷ್ಟಪಟ್ರೆ ಮನೆಯಲ್ಲಿ ತಮ್ಮ ಗಂಡನನ್ನ ಕೇಳಲಿ. ಯಾಕಂದ್ರೆ ಸ್ತ್ರೀ ಸಭೆಯಲ್ಲಿ ಮಾತಾಡೋದು ಅಗೌರವ ತರುತ್ತೆ.
36 ದೇವರ ಮಾತುಗಳು ನಿಮ್ಮಿಂದಾನೇ ಬಂತಾ? ಅವು ನಿಮಗೆ ಮಾತ್ರ ಸಿಕ್ಕಿದ್ವಾ?
37 ಯಾರಾದ್ರೂ ‘ನಾನು ಪ್ರವಾದಿ, ಪವಿತ್ರಶಕ್ತಿಯಿಂದ ನನಗೆ ಸಾಮರ್ಥ್ಯ ಸಿಕ್ಕಿದೆ’ ಅಂತ ನೆನಸಿದ್ರೆ ನಾನು ಬರೆದಿರೋ ಮಾತುಗಳು ಒಡೆಯನ ಆಜ್ಞೆ ಅಂತ ಅವನು ಒಪ್ಕೊಬೇಕು. 38 ಒಪ್ಪದೆ ಬೇಡ ಅಂತ ಹೇಳುವವನನ್ನ ದೇವರೂ ಬೇಡ ಅಂತ ಹೇಳ್ತಾನೆ.* 39 ಹಾಗಾಗಿ ನನ್ನ ಸಹೋದರರೇ, ಭವಿಷ್ಯ ಹೇಳೋ ಸಾಮರ್ಥ್ಯ ಪಡ್ಕೊಳ್ಳೋಕೆ ಪ್ರಯತ್ನ ಮಾಡ್ತಾ ಇರಿ.+ ಆದ್ರೂ ಬೇರೆ ಬೇರೆ ಭಾಷೆಗಳಲ್ಲಿ ಮಾತಾಡೋದನ್ನ ತಡಿಬೇಡಿ.+ 40 ಆದ್ರೆ ಎಲ್ಲ ವಿಷ್ಯಗಳು ಸರಿಯಾಗಿ, ಅಚ್ಚುಕಟ್ಟಾಗಿ* ನಡೀಲಿ.+