ನ್ಯಾಯಸ್ಥಾಪಕರು
10 ಅಬೀಮೆಲೆಕನ ನಂತ್ರ ತೋಲ ಇಸ್ರಾಯೇಲ್ಯರನ್ನ ರಕ್ಷಿಸೋಕೆ ಬಂದ.+ ಇವನು ಇಸ್ಸಾಕಾರ್ ಕುಲದವನು, ದೋದೋವಿನ ಮೊಮ್ಮಗ, ಪೂವನ ಮಗ. ಎಫ್ರಾಯೀಮ್ ಬೆಟ್ಟ ಪ್ರದೇಶದ ಶಾಮೀರಲ್ಲಿ ವಾಸ ಇದ್ದ. 2 ಅವನು ಇಸ್ರಾಯೇಲ್ಯರಿಗೆ ನ್ಯಾಯಾಧೀಶನಾಗಿ 23 ವರ್ಷ ಕೆಲಸಮಾಡಿದ. ಆಮೇಲೆ ತೀರಿಹೋದ. ಅವನನ್ನ ಶಾಮೀರಲ್ಲಿ ಸಮಾಧಿ ಮಾಡಿದ್ರು.
3 ಅವನ ನಂತ್ರ ಗಿಲ್ಯಾದ್ಯನಾದ ಯಾಯೀರ 22 ವರ್ಷ ಇಸ್ರಾಯೇಲ್ಯರಿಗೆ ನ್ಯಾಯಾಧೀಶ ಕೆಲಸಮಾಡಿದ. 4 ಅವನಿಗೆ 30 ಮಕ್ಕಳಿದ್ರು. ಸವಾರಿಗಾಗಿ ಅವ್ರ ಹತ್ರ 30 ಕತ್ತೆ ಇತ್ತು. ಗಿಲ್ಯಾದಲ್ಲಿ 30 ಊರು ಇತ್ತು. ಅದನ್ನೆಲ್ಲ ಇವತ್ತಿಗೂ ಹವತ್-ಯಾಯೀರ್+ ಅಂತ ಕರಿತಾರೆ. 5 ಯಾಯೀರ ತೀರಿಹೋದ ಮೇಲೆ ಅವನನ್ನ ಕಾಮೋನಿನಲ್ಲಿ ಸಮಾಧಿ ಮಾಡಿದ್ರು.
6 ಇಸ್ರಾಯೇಲ್ಯರು ಯೆಹೋವನಿಗೆ ಸ್ವಲ್ಪನೂ ಇಷ್ಟ ಆಗದ ವಿಷ್ಯಗಳನ್ನ ಮಾಡಿದ್ರು.+ ಅವರು ಬಾಳ್ ದೇವರುಗಳನ್ನ,+ ಅಷ್ಟೋರೆತ್ ಮೂರ್ತಿಗಳನ್ನ, ಅರಾಮ್ಯರ,* ಸೀದೋನ್ಯರ, ಮೋವಾಬ್ಯರ,+ ಅಮ್ಮೋನಿಯರ+ ಮತ್ತು ಫಿಲಿಷ್ಟಿಯರ+ ದೇವರುಗಳನ್ನ ಆರಾಧಿಸೋಕೆ ಶುರು ಮಾಡಿದ್ರು. ಅವರು ಯೆಹೋವನನ್ನ ಆರಾಧಿಸಲಿಲ್ಲ. ಆತನನ್ನ ಬೇಡ ಅಂದುಬಿಟ್ರು. 7 ಆಗ ಇಸ್ರಾಯೇಲ್ಯರ ಮೇಲೆ ಯೆಹೋವನಿಗೆ ತುಂಬ ಕೋಪ ಬಂತು. ಅವ್ರನ್ನ ಫಿಲಿಷ್ಟಿಯರಿಗೆ, ಅಮ್ಮೋನಿಯರಿಗೆ ಒಪ್ಪಿಸಿಬಿಟ್ಟನು.+ 8 ಹಾಗಾಗಿ ಅವರು ಆ ವರ್ಷ ಇಸ್ರಾಯೇಲ್ಯರ ಮೇಲೆ ಕ್ರೂರವಾಗಿ ದಬ್ಬಾಳಿಕೆ ಮಾಡಿ, ಅವ್ರಿಗೆ ತುಂಬ ತೊಂದ್ರೆ ಕೊಟ್ರು. ಯೋರ್ದನಿನ ಆ ಕಡೆಗಿದ್ದ ಎಲ್ಲ ಇಸ್ರಾಯೇಲ್ಯರನ್ನ 18 ವರ್ಷ ತುಂಬ ಹಿಂಸೆ ಕೊಟ್ರು. ಗಿಲ್ಯಾದಿನ ಈ ಪ್ರದೇಶ ಒಂದು ಕಾಲದಲ್ಲಿ ಅಮೋರಿಯರ ಪ್ರದೇಶ ಆಗಿತ್ತು. 9 ಅಮ್ಮೋನಿಯರು ಕೂಡ ಯೆಹೂದ, ಬೆನ್ಯಾಮೀನ್, ಎಫ್ರಾಯೀಮ್ಯರ ಮನೆತನಗಳ ಜೊತೆ ಯುದ್ಧ ಮಾಡೋಕೆ ಯೋರ್ದನನ್ನ ದಾಟಿ ಬರ್ತಿದ್ರು. ಇದ್ರಿಂದ ಇಸ್ರಾಯೇಲ್ಯರಿಗೆ ತುಂಬ ಕಷ್ಟ ಆಯ್ತು. 10 ಆಗ ಅವರು “ನಮ್ಮ ದೇವರೇ ನಾವು ನಿನ್ನನ್ನ ಬಿಟ್ಟು ಬಾಳ್ ದೇವರುಗಳನ್ನ ಆರಾಧಿಸಿ+ ನಿನ್ನ ವಿರುದ್ಧ ಪಾಪ ಮಾಡಿದ್ದೀವಿ” ಅಂತ ಹೇಳ್ತಾ ಸಹಾಯಕ್ಕಾಗಿ ಯೆಹೋವನನ್ನ ಬೇಡ್ಕೊಂಡ್ರು.+
11 ಆದ್ರೆ ಯೆಹೋವ ಇಸ್ರಾಯೇಲ್ಯರಿಗೆ “ನಾನು ನಿಮ್ಮನ್ನ ಈಜಿಪ್ಟಿಂದ ಕಾಪಾಡಲಿಲ್ವಾ?+ ಅಮೋರಿಯರು,+ ಅಮ್ಮೋನಿಯರು, ಫಿಲಿಷ್ಟಿಯರು,+ 12 ಸೀದೋನ್ಯರು, ಅಮಾಲೇಕ್ಯರು, ಮಿದ್ಯಾನ್ಯರು ನಿಮ್ಮ ಮೇಲೆ ದಬ್ಬಾಳಿಕೆ ಮಾಡಿದಾಗ ನಿಮ್ಮನ್ನ ಕಾಪಾಡಲಿಲ್ವಾ? ನೀವು ಸಹಾಯ ಕೇಳಿದಾಗ ನಿಮ್ಮನ್ನ ಅವ್ರ ಕೈಯಿಂದ ಬಿಡಿಸ್ದೆ. 13 ಆದ್ರೆ ನೀವು ನನ್ನನ್ನ ಬಿಟ್ಟು ಬೇರೆ ದೇವರುಗಳನ್ನ ಆರಾಧಿಸಿದ್ರಿ.+ ನಾನು ನಿಮ್ಮನ್ನ ಕಾಪಾಡಲ್ಲ.+ 14 ನೀವು ಆರಿಸ್ಕೊಂಡ ಆ ದೇವರುಗಳ ಹತ್ರಾನೇ ಹೋಗಿ ಸಹಾಯಕ್ಕಾಗಿ ಅವುಗಳನ್ನೇ ಕರಿರಿ.+ ನಿಮ್ಮ ಕಷ್ಟದ ಸಮಯದಲ್ಲಿ ಅವು ನಿಮ್ಮನ್ನ ಕಾಪಾಡ್ಲಿ”+ ಅಂದನು. 15 ಆಗ ಇಸ್ರಾಯೇಲ್ಯರು ಯೆಹೋವನಿಗೆ “ನಾವು ಪಾಪ ಮಾಡಿದ್ದೀವಿ. ನಿನಗೇನು ಸರಿ ಅನ್ಸುತ್ತೋ ಅದನ್ನೇ ಮಾಡು. ಆದ್ರೆ ದಯವಿಟ್ಟು ಇವತ್ತು ಮಾತ್ರ ನಮ್ಮ ಕೈಬಿಡಬೇಡ” ಅಂದ್ರು. 16 ಅವರು ಬೇರೆ ದೇವರುಗಳನ್ನ ತಮ್ಮ ಮಧ್ಯದಿಂದ ತೆಗೆದುಹಾಕಿ ಯೆಹೋವನನ್ನ ಆರಾಧಿಸಿದ್ರು.+ ಹಾಗಾಗಿ ಆತನಿಗೆ ಇಸ್ರಾಯೇಲ್ಯರ ಸಂಕಟ ನೋಡಿ ಸಹಿಸೋಕೆ ಆಗಲಿಲ್ಲ.+
17 ಸ್ವಲ್ಪ ಸಮಯ ಆದ್ಮೇಲೆ ಅಮ್ಮೋನಿಯರು+ ಒಟ್ಟಾಗಿ ಬಂದು ಗಿಲ್ಯಾದಲ್ಲಿ ಪಾಳೆಯ ಹೂಡಿದ್ರು. ಇಸ್ರಾಯೇಲ್ಯರು ಕೂಡ ಒಟ್ಟಾಗಿ ಬಂದು ಮಿಚ್ಪಾದಲ್ಲಿ ಪಾಳೆಯ ಹೂಡಿದ್ರು. 18 ಆಗ ಗಿಲ್ಯಾದಿನ ಜನ ಮತ್ತು ನಾಯಕರು ಒಬ್ರಿಗೊಬ್ರು “ಅಮ್ಮೋನಿಯರ ವಿರುದ್ಧ ಯುದ್ಧ ಮಾಡೋಕೆ ನಮಗೆ ಯಾರು ನಾಯಕ ಆಗ್ತೀರ?+ ನಾಯಕ ಆಗೋನೇ ಗಿಲ್ಯಾದಿನ ಎಲ್ಲ ಜನ್ರ ಮೇಲೆ ಅಧಿಪತಿ ಆಗ್ಲಿ” ಅಂತ ಮಾತಾಡ್ಕೊಂಡ್ರು.