ಒಂದನೇ ಸಮುವೇಲ
16 ಸ್ವಲ್ಪ ಸಮಯ ಆದ್ಮೇಲೆ ಯೆಹೋವ ಸಮುವೇಲನಿಗೆ “ಇಸ್ರಾಯೇಲಿನ ರಾಜನಾಗಿ ಸೌಲ ಆಳೋದು ಬೇಡ ಅಂತ ನಾನೇ ಹೇಳಿದ ಮೇಲೆ+ ನೀನು ಅವನಿಗಾಗಿ ಇನ್ನೂ ಎಷ್ಟು ದಿನ ದುಃಖಪಡ್ತೀಯಾ?+ ಕೊಂಬಲ್ಲಿ ಎಣ್ಣೆ ತುಂಬಿಸ್ಕೊಂಡು+ ಹೋಗು. ನಾನು ನಿನ್ನನ್ನ ಬೆತ್ಲೆಹೇಮಿನ ಇಷಯನ+ ಹತ್ರ ಕಳಿಸ್ತೀನಿ. ಯಾಕಂದ್ರೆ ನಾನು ಅವನ ಮಕ್ಕಳಲ್ಲಿ ಒಬ್ಬನನ್ನ ರಾಜನಾಗಿ ಆರಿಸ್ಕೊಂಡಿದ್ದೀನಿ”+ ಅಂದನು. 2 ಆಗ ಸಮುವೇಲ “ನಾನು ಹೇಗೆ ಹೋಗ್ಲಿ? ಇದ್ರ ಬಗ್ಗೆ ಸೌಲನಿಗೆ ಗೊತ್ತಾದ್ರೆ ಅವನು ನನ್ನನ್ನ ಸಾಯಿಸಿಬಿಡ್ತಾನೆ”+ ಅಂದ. ಅದಕ್ಕೆ ಯೆಹೋವ “ಹೋಗುವಾಗ ಒಂದು ಕಡಸನ್ನ ತಗೊಂಡು ‘ನಾನಿಲ್ಲಿ ಯೆಹೋವನಿಗೆ ಬಲಿ ಅರ್ಪಿಸೋಕೆ ಬಂದಿದ್ದೀನಿ’ ಅಂತ ಹೇಳು. 3 ನೀನು ಬಲಿ ಅರ್ಪಿಸೋ ಸ್ಥಳಕ್ಕೆ ಇಷಯನಿಗೆ ಬರೋಕೆ ಹೇಳು. ಆಮೇಲೆ ಏನು ಮಾಡಬೇಕಂತ ಹೇಳ್ತೀನಿ. ನಾನು ಯಾರನ್ನ ತೋರಿಸ್ತೀನೋ ಅವನನ್ನ ನೀನು ನನ್ನ ಪರವಾಗಿ ಅಭಿಷೇಕಿಸಬೇಕು” ಅಂದನು.+
4 ಯೆಹೋವ ಹೇಳಿದ ಹಾಗೇ ಸಮುವೇಲ ಮಾಡಿದ. ಅವನು ಬೆತ್ಲೆಹೇಮಿಗೆ+ ಬಂದಾಗ ಪಟ್ಟಣದ ಹಿರಿಯರು ಅವನನ್ನ ನೋಡಿ ಭಯದಿಂದ ನಡುಗ್ತಾ ಅವನನ್ನ ಭೇಟಿಯಾಗಿ “ನೀನು ಬಂದಿರೋದು ಒಳ್ಳೇ ವಿಷ್ಯಕ್ಕಾಗಿ ತಾನೇ?” ಅಂತ ಕೇಳಿದ್ರು. 5 ಅದಕ್ಕೆ ಸಮುವೇಲ “ಹೌದು, ಒಳ್ಳೇ ವಿಷ್ಯಾನೇ. ನಾನು ಯೆಹೋವನಿಗೆ ಬಲಿ ಅರ್ಪಿಸೋಕೆ ಬಂದಿದ್ದೀನಿ. ನಿಮ್ಮನ್ನ ಶುದ್ಧ ಮಾಡ್ಕೊಂಡು ಬಲಿ ಅರ್ಪಿಸೋಕೆ ನನ್ನ ಜೊತೆ ಬನ್ನಿ” ಅಂದ. ಆಮೇಲೆ ಅವನು ಇಷಯನನ್ನ, ಅವನ ಮಕ್ಕಳನ್ನ ಶುದ್ಧೀಕರಿಸಿ ಬಲಿ ಅರ್ಪಿಸೋ ಸ್ಥಳದಲ್ಲಿ ಅವ್ರನ್ನ ಒಟ್ಟುಸೇರಿಸಿದ. 6 ಹೀಗೆ ಅವರು ಅಲ್ಲಿಗೆ ಬಂದಾಗ ಸಮುವೇಲ ಎಲೀಯಾಬನನ್ನ+ ನೋಡಿ “ಇವನನ್ನೇ ಯೆಹೋವ ಆರಿಸ್ಕೊಂಡಿದ್ದಾನೆ”* ಅಂದ್ಕೊಂಡ. 7 ಆದ್ರೆ ಯೆಹೋವ ಸಮುವೇಲನಿಗೆ “ನಾನು ಅವನನ್ನ ಆರಿಸ್ಕೊಂಡಿಲ್ಲ. ನೀನು ಅವನ ಹೊರತೋರಿಕೆ, ಎತ್ತರ ನೋಡಬೇಡ.+ ಮನುಷ್ಯರು ನೋಡೋ ತರ ದೇವರು ನೋಡಲ್ಲ. ಮನುಷ್ಯರು ಕಣ್ಣಿಗೆ ಕಾಣಿಸೋದನ್ನ ನೋಡ್ತಾರೆ. ಆದ್ರೆ ಯೆಹೋವ ಹೃದಯದಲ್ಲಿ ಇರೋದನ್ನ ನೋಡ್ತಾನೆ”+ ಅಂದನು. 8 ಆಮೇಲೆ ಇಷಯ ಅಬೀನಾದಾಬನನ್ನ+ ಕರೆದು ಸಮುವೇಲನ ಮುಂದೆ ನಿಲ್ಲಿಸಿದ. ಆದ್ರೆ ಸಮುವೇಲ “ಯೆಹೋವ ಇವನನ್ನೂ ಆರಿಸ್ಕೊಂಡಿಲ್ಲ” ಅಂದ. 9 ಇಷಯ ಶಮ್ಮಾನನ್ನ+ ಸಮುವೇಲನ ಮುಂದೆ ನಿಲ್ಲಿಸಿದ. ಆದ್ರೆ ಸಮುವೇಲ “ಯೆಹೋವ ಇವನನ್ನೂ ಆರಿಸ್ಕೊಂಡಿಲ್ಲ” ಅಂದ. 10 ಹೀಗೆ ಇಷಯ ತನ್ನ ಏಳೂ ಮಕ್ಕಳನ್ನ ಕರೆದು ಸಮುವೇಲನ ಮುಂದೆ ನಿಲ್ಲಿಸಿದ. ಆದ್ರೆ ಸಮುವೇಲ ಇಷಯನಿಗೆ “ಇವ್ರಲ್ಲಿ ಯಾರನ್ನೂ ಯೆಹೋವ ಆರಿಸ್ಕೊಂಡಿಲ್ಲ” ಅಂದ.
11 ಕೊನೆಗೆ ಸಮುವೇಲ ಇಷಯನಿಗೆ “ನಿನಗಿರೋದು ಇಷ್ಟೇ ಗಂಡು ಮಕ್ಕಳಾ?” ಅಂತ ಕೇಳಿದ. ಅದಕ್ಕೆ ಅವನು “ಎಲ್ರಿಗಿಂತ ಚಿಕ್ಕವನು+ ಕುರಿ ಮೇಯಿಸೋಕೆ+ ಹೋಗಿದ್ದಾನೆ. ಇನ್ನೂ ಬಂದಿಲ್ಲ” ಅಂದ. ಆಗ ಸಮುವೇಲ ಇಷಯನಿಗೆ “ಅವನನ್ನ ಕರ್ಕೊಂಡು ಬರೋಕೆ ಹೇಳು. ಅವನು ಬರೋ ತನಕ ನಾವು ಊಟಕ್ಕೆ ಕೂರೋದು ಬೇಡ” ಅಂದ. 12 ಹಾಗಾಗಿ ಇಷಯ ಅವನನ್ನ ಕರೆಸಿದಾಗ ಅವನು ಬಂದ. ಅವನು ಕೆಂಪಗಿದ್ದ, ಅವನ ಕಣ್ಣುಗಳು ಬೇರೆಯವ್ರನ್ನ ಆಕರ್ಷಿಸ್ತಿತ್ತು. ನೋಡೋಕೆ ತುಂಬ ಸುಂದರವಾಗಿದ್ದ.+ ಯೆಹೋವ ಸಮುವೇಲನಿಗೆ “ಎದ್ದು, ಇವನನ್ನ ಅಭಿಷೇಕಿಸು. ನಾನು ಆರಿಸ್ಕೊಂಡವನು ಇವನೇ!”+ ಅಂದನು. 13 ಹಾಗಾಗಿ ಸಮುವೇಲ ಎಣ್ಣೆಯಿದ್ದ ಕೊಂಬನ್ನ+ ತಗೊಂಡು ಅವನ ಸಹೋದರರ ಮುಂದೆನೇ ಅವನನ್ನ ಅಭಿಷೇಕಿಸಿದ. ಅವತ್ತಿಂದ ಯೆಹೋವನ ಪವಿತ್ರಶಕ್ತಿ ದಾವೀದನನ್ನ ಬಲಪಡಿಸೋಕೆ ಶುರುಮಾಡ್ತು.+ ಆಮೇಲೆ ಸಮುವೇಲ ರಾಮದ+ ದಾರಿಹಿಡಿದ.
14 ಯೆಹೋವನ ಪವಿತ್ರಶಕ್ತಿ ಸೌಲನನ್ನ ಬಿಟ್ಟುಹೋಗಿತ್ತು.+ ಸೌಲನ ಕೆಟ್ಟ ಮನಸ್ಥಿತಿ ಅವನನ್ನ ಭಯಪಡಿಸೋ ತರ ಯೆಹೋವ ಅನುಮತಿಸಿದನು.+ 15 ಸೌಲನ ಸೇವಕರು ಅವನಿಗೆ “ನೋಡು, ನಿನ್ನ ಕೆಟ್ಟ ಮನಸ್ಥಿತಿ ನಿನ್ನನ್ನ ಭಯಪಡಿಸೋ ತರ ದೇವರು ಅನುಮತಿಸಿದ್ದಾನೆ. 16 ಹಾಗಾಗಿ ತಂತಿವಾದ್ಯ ನುಡಿಸೋದ್ರಲ್ಲಿ ಪ್ರವೀಣನಾಗಿರೋ+ ವ್ಯಕ್ತಿಯನ್ನ ಹುಡುಕೋಕೆ ದಯಮಾಡಿ ನಮ್ಮ ಒಡೆಯ ತನ್ನ ಮುಂದಿರೋ ಈ ಸೇವಕರಿಗೆ ಅಪ್ಪಣೆ ಕೊಡು. ಯಾವಾಗೆಲ್ಲ ನಿನಗೆ ಕೆಟ್ಟ ಮನಸ್ಥಿತಿ ಬರೋ ತರ ದೇವರು ಅನುಮತಿಸ್ತಾನೋ ಆಗೆಲ್ಲ ಆ ವ್ಯಕ್ತಿ ತಂತಿವಾದ್ಯ ನುಡಿಸ್ತಾನೆ. ಆಗ ನಿನಗೆ ಆರಾಮ ಅನಿಸುತ್ತೆ” ಅಂದ್ರು. 17 ಅದಕ್ಕೆ ಸೌಲ ತನ್ನ ಸೇವಕರಿಗೆ “ದಯವಿಟ್ಟು, ಚೆನ್ನಾಗಿ ತಂತಿವಾದ್ಯ ನುಡಿಸೋ ಒಬ್ಬ ವ್ಯಕ್ತಿನ ನನಗಾಗಿ ಹುಡುಕಿ ನನ್ನ ಹತ್ರ ಕರ್ಕೊಂಡು ಬನ್ನಿ” ಅಂದ.
18 ಸೌಲನ ಸೇವಕರಲ್ಲಿ ಒಬ್ಬ “ಇಗೋ, ಬೆತ್ಲೆಹೇಮಿನ ಇಷಯನ ಮಗನೊಬ್ಬ ಚೆನ್ನಾಗಿ ನುಡಿಸೋದನ್ನ ನೋಡಿದ್ದೀನಿ. ಅವನು ಧೈರ್ಯಶಾಲಿ, ವೀರ ಸೈನಿಕ.+ ಅವನು ತುಂಬ ಚೆನ್ನಾಗಿ ಮಾತಾಡ್ತಾನೆ, ತುಂಬ ಸುಂದರ+ ಮತ್ತು ಯೆಹೋವ ಅವನ ಜೊತೆ ಇದ್ದಾನೆ”+ ಅಂದ. 19 ಸೌಲ ಇಷಯನ ಹತ್ರ ಸಂದೇಶವಾಹಕರನ್ನ ಕಳಿಸಿ “ಕುರಿ ಮೇಯಿಸೋ ನಿನ್ನ ಮಗ ದಾವೀದನನ್ನ ನನ್ನ ಹತ್ರ ಕಳಿಸು”+ ಅಂದ. 20 ಹಾಗಾಗಿ ಇಷಯ ರೊಟ್ಟಿ, ದ್ರಾಕ್ಷಾಮದ್ಯದ ಬುದ್ದಲಿ, ಎಳೇ ಆಡನ್ನ ಕತ್ತೆ ಮೇಲೆ ಹೊರಿಸಿ ಅವುಗಳನ್ನ ತನ್ನ ಮಗ ದಾವೀದನ ಜೊತೆ ಸೌಲನ ಹತ್ರ ಕಳಿಸ್ಕೊಟ್ಟ. 21 ಹೀಗೆ ದಾವೀದ ಸೌಲನ ಹತ್ರ ಬಂದು ಅವನ ಸೇವೆ ಮಾಡೋಕೆ ಶುರುಮಾಡಿದ.+ ಸೌಲ ಅವನ ಮೇಲೆ ತುಂಬ ಪ್ರೀತಿ ಬೆಳೆಸ್ಕೊಂಡ. ದಾವೀದ ಅವನ ಆಯುಧಗಳನ್ನ ಹೊರುವವನಾದ. 22 ಸೌಲ ಇಷಯನಿಗೆ “ದಾವೀದನಂದ್ರೆ ನನಗೆ ಇಷ್ಟ, ದಯವಿಟ್ಟು ಅವನು ಇಲ್ಲೇ ಇದ್ದು ನನ್ನ ಸೇವೆಮಾಡ್ಲಿ” ಅಂತ ಸಂದೇಶ ಕಳಿಸಿದ. 23 ಸೌಲನಿಗೆ ಕೆಟ್ಟ ಮನಸ್ಥಿತಿ ಬರೋ ತರ ದೇವರು ಅನುಮತಿಸಿದಾಗೆಲ್ಲ ದಾವೀದ ತಂತಿವಾದ್ಯ ನುಡಿಸ್ತಿದ್ದ. ಆಗ ಸೌಲನಿಗೆ ನೆಮ್ಮದಿ ಸಿಗ್ತಿತ್ತು, ಹಾಯನಿಸ್ತಿತ್ತು ಮತ್ತು ಕೆಟ್ಟ ಮನಸ್ಥಿತಿ ದೂರವಾಗ್ತಿತ್ತು.+