ರೂತ್
1 ಅದು ನ್ಯಾಯಾಧೀಶರು+ ಆಳ್ತಿದ್ದ ಕಾಲ. ಆಗ ಯೆಹೂದ ದೇಶದಲ್ಲಿ ಬರ ಬಂತು. ಯೆಹೂದದ ಬೆತ್ಲೆಹೇಮ್ನಲ್ಲಿದ್ದ+ ಒಬ್ಬ ತನ್ನ ಹೆಂಡ್ತಿ, ಇಬ್ರು ಗಂಡು ಮಕ್ಕಳ ಜೊತೆ ಮೋವಾಬ್+ ಪ್ರದೇಶಕ್ಕೆ ಹೋದ. 2 ಅವನ ಹೆಸ್ರು ಎಲೀಮೆಲೆಕ.* ಹೆಂಡ್ತಿ ಹೆಸ್ರು ನೊವೊಮಿ.* ಗಂಡುಮಕ್ಕಳ ಹೆಸ್ರು ಮಹ್ಲೋನ್* ಮತ್ತು ಕಿಲ್ಯೋನ್.* ಅವರು ಎಫ್ರಾತ ಅಂದ್ರೆ ಯೆಹೂದದ ಬೆತ್ಲೆಹೇಮಿಂದ ಮೋವಾಬ್ ಪ್ರದೇಶಕ್ಕೆ ಹೋಗಿ ಅಲ್ಲಿದ್ರು.
3 ಸ್ವಲ್ಪ ಸಮಯ ಆದ್ಮೇಲೆ ನೊವೊಮಿ ಗಂಡ ಎಲೀಮೆಲೆಕ ತೀರಿಹೋದ. ಅವಳಿಗೆ ಇಬ್ರು ಗಂಡುಮಕ್ಕಳು ಬಿಟ್ರೆ ಬೇರೆ ಯಾರೂ ಇರ್ಲಿಲ್ಲ. 4 ಅವಳ ಮಕ್ಕಳು ಮೋವಾಬ್ ಸ್ತ್ರೀಯರನ್ನ ಮದುವೆ ಆದ್ರು. ಒಬ್ಬಳ ಹೆಸ್ರು ಒರ್ಫಾ, ಇನ್ನೊಬ್ಬಳ ಹೆಸ್ರು ರೂತ್.+ ಸುಮಾರು 10 ವರ್ಷ ಅಲ್ಲಿದ್ರು. 5 ಮಹ್ಲೋನ್ ಮತ್ತು ಕಿಲ್ಯೋನ್ ಕೂಡ ತೀರಿಹೋದ್ರು. ನೊವೊಮಿಗೆ ಈಗ ಗಂಡನೂ ಇಲ್ಲ, ಮಕ್ಕಳೂ ಇಲ್ಲ. 6 ಯೆಹೋವ ತಮ್ಮ ಜನ್ರನ್ನ ಮತ್ತೆ ಆಶೀರ್ವದಿಸಿ ಆಹಾರ ಕೊಡ್ತಿದ್ದಾನೆ ಅಂತ ನೊವೊಮಿಗೆ ಸುದ್ದಿ ಸಿಕ್ತು. ಅದಕ್ಕೆ ಸೊಸೆಯರ ಜೊತೆ ಮೋವಾಬಿಂದ ಸ್ವದೇಶಕ್ಕೆ ಹೊರಟಳು.
7 ನೊವೊಮಿ ಸೊಸೆಯರ ಜೊತೆ ಯೆಹೂದಕ್ಕೆ ಹೋಗ್ತಿರುವಾಗ ದಾರೀಲಿ 8 “ನೀವು ತೌರುಮನೆಗೆ ವಾಪಸ್ ಹೋಗಿ. ನನಗೆ ಮತ್ತು ತೀರಿಹೋದ ನನ್ನ ಮಕ್ಕಳಿಗೆ ನೀವು ಶಾಶ್ವತ ಪ್ರೀತಿ* ತೋರಿಸಿರೋ ತರ ಯೆಹೋವ ಕೂಡ ನಿಮಗೆ ಶಾಶ್ವತ ಪ್ರೀತಿ ತೋರಿಸ್ತಾನೆ.+ 9 ನೀವು ಮದುವೆಯಾಗಿ ಗಂಡನ ಮನೇಲಿ ಖುಷಿಯಾಗಿ ಜೀವನ ಮಾಡೋ ತರ ಯೆಹೋವ ಆಶೀರ್ವದಿಸ್ತಾನೆ”*+ ಅಂತ ಹೇಳಿ ಇಬ್ರಿಗೂ ಮುತ್ತು ಕೊಟ್ಟಳು. ಅವರು ಜೋರಾಗಿ ಅಳ್ತಾ 10 “ಇಲ್ಲ ನಿನ್ನ ಜೊತೆನೇ ನಿನ್ನ ಜನ್ರ ಹತ್ರಾನೇ ಬರ್ತೀವಿ” ಅಂತ ಹೇಳ್ತಾ ಇದ್ರು. 11 ಆಗ ನೊವೊಮಿ “ಮಕ್ಕಳೇ, ನನ್ನ ಜೊತೆ ಯಾಕೆ ಬರ್ತಿರಾ? ದಯವಿಟ್ಟು ಹೋಗಿ. ನಿಮಗೆ ಮದುವೆ ಮಾಡಿ ಕೊಡೋಕೆ ನನಗೀಗ ಮಕ್ಕಳು ಆಗುತ್ತಾ?+ 12 ವಾಪಸ್ ಹೋಗಿ. ನನಗೆ ಮದುವೆಯಾಗೋ ವಯಸ್ಸಲ್ಲ. ಇವತ್ತು ರಾತ್ರಿನೇ ನಾನು ಮದುವೆಯಾಗಿ ಗಂಡು ಮಕ್ಕಳು ಹುಟ್ಟಿದ್ರೂ 13 ಅವರು ದೊಡ್ಡವರಾಗೊ ತನಕ ಕಾಯ್ತಿರಾ? ಮದುವೆ ಆಗ್ದೆ ಇರ್ತಿರಾ? ನನ್ನ ಮಾತು ಕೇಳಿ, ಯೆಹೋವ ದೇವ್ರ ಕೈ ನನ್ನ ವಿರುದ್ಧ ಇರೋದ್ರಿಂದ ಇಷ್ಟೆಲ್ಲ ಆಗಿದೆ. ನನ್ನಿಂದಾಗಿ ನೀವೂ ಕಷ್ಟ ಪಡ್ತಿರೋದನ್ನ ನೋಡಕ್ಕಾಗ್ತಿಲ್ಲ” ಅಂದಳು.+
14 ಮತ್ತೆ ಅವರು ಜೋರಾಗಿ ಅತ್ರು. ಒರ್ಫಾ ಅತ್ತೆಗೆ ಮುದ್ದಿಟ್ಟು ವಾಪಸ್ ಹೋದಳು. ಆದ್ರೆ ರೂತ್ ಅತ್ತೆನ ಬಿಟ್ಟು ಹೋಗಲಿಲ್ಲ. 15 ಆಗ ನೊವೊಮಿ “ನೋಡು, ಒರ್ಫಾ ತನ್ನ ಜನ್ರ ಹತ್ರ, ದೇವರುಗಳ ಹತ್ರ ವಾಪಸ್ ಹೋಗ್ತಿದ್ದಾಳೆ. ನೀನೂ ಅವಳ ಜೊತೆ ಹೋಗು” ಅಂದಳು.
16 ಆಗ ರೂತ್ “ನನ್ನನ್ನ ವಾಪಸ್ ಹೋಗು, ನನ್ನ ಜೊತೆ ಬರಬೇಡ ಅಂತ ದಯವಿಟ್ಟು ಹೇಳಬೇಡ. ನೀನು ಹೋಗೋ ಕಡೆ ನಾನೂ ಬರ್ತಿನಿ. ನೀನಿರೋ ಕಡೆ ನಾನೂ ಇರ್ತಿನಿ. ನಿನ್ನ ಜನ್ರೇ ನನ್ನ ಜನ್ರು, ನಿನ್ನ ದೇವರೇ ನನ್ನ ದೇವ್ರು.+ 17 ನೀನೆಲ್ಲಿ ಸಾಯ್ತಿಯೋ ನಾನೂ ಅಲ್ಲೇ ಸಾಯ್ತಿನಿ. ಅಲ್ಲೇ ನನಗೂ ಸಮಾಧಿ ಆಗಬೇಕು. ಸಾವು ಮಾತ್ರ ನಿನ್ನಿಂದ ನನ್ನನ್ನ ದೂರ ಮಾಡುತ್ತೆ. ಬೇರೆ ಕಾರಣಕ್ಕೆ ದೂರವಾದ್ರೆ ಯೆಹೋವ ನನಗೆ ಕಠಿಣ ಶಿಕ್ಷೆ ಕೊಡ್ಲಿ” ಅಂದಳು.
18 ಏನು ಮಾಡಿದ್ರೂ ರೂತ್ ಹೋಗಲ್ಲ ಅಂತ ಗೊತ್ತಾದಾಗ ನೊವೊಮಿ ಒತ್ತಾಯ ಮಾಡಲಿಲ್ಲ. 19 ಇಬ್ರೂ ಪ್ರಯಾಣ ಮಾಡಿ ಬೆತ್ಲೆಹೇಮಿಗೆ ಬಂದ್ರು.+ ಅವರು ಅಲ್ಲಿ ಕಾಲಿಟ್ಟಾಗ ಗದ್ದಲ ಶುರು ಆಯ್ತು. ಸ್ತ್ರೀಯರು “ಇವಳು ನೊವೊಮಿ ಅಲ್ವಾ?” ಅಂತ ಮಾತಾಡ್ತಾ ಇದ್ರು. 20 ಆಗ ನೊವೊಮಿ “ನನ್ನನ್ನ ನೊವೊಮಿ ಅಂತ ಕರಿಬೇಡಿ, ಮಾರಾ* ಅನ್ನಿ. ಯಾಕಂದ್ರೆ ಸರ್ವಶಕ್ತ ದೇವರು ನನ್ನ ಜೀವನವನ್ನ ದುಃಖದಲ್ಲಿ ಮುಳುಗಿಸಿದ್ದಾನೆ.+ 21 ಇಲ್ಲಿಂದ ಹೋಗುವಾಗ ನನ್ನ ಹತ್ರ ಎಲ್ಲಾ ಇತ್ತು, ಆದ್ರೆ ಈಗ ಬರಿಗೈಯಲ್ಲಿ ಬರೋ ಹಾಗೆ ಯೆಹೋವ ಮಾಡಿದ್ದಾನೆ. ಯೆಹೋವ ನನಗೆ ವಿರುದ್ಧ ಆಗಿರುವಾಗ, ಸರ್ವಶಕ್ತ ದೇವ್ರೇ ನಾನು ಕಷ್ಟಪಡೋಕೆ ಬಿಟ್ಟಿರುವಾಗ ನೀವ್ಯಾಕೆ ನನ್ನನ್ನ ನೊವೊಮಿ ಅಂತ ಕರಿತೀರಾ?” ಅಂದಳು.+
22 ಹೀಗೆ ನೊವೊಮಿ ರೂತ್ ಜೊತೆ ಮೋವಾಬ್+ ಬಿಟ್ಟು ಬೆತ್ಲೆಹೇಮಿಗೆ ವಾಪಸ್ ಬಂದಳು. ಆಗ ಅಲ್ಲಿ ಬಾರ್ಲಿ* ಕೊಯ್ಲು ಶುರು ಆಗಿತ್ತು.+