ಕೊರಿಂಥದವರಿಗೆ ಬರೆದ ಮೊದಲನೇ ಪತ್ರ
12 ಸಹೋದರರೇ, ದೇವರು ಕೊಡೋ ಸಾಮರ್ಥ್ಯಗಳ*+ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರಬೇಕಂತ ನಾನು ಇಷ್ಟಪಡ್ತೀನಿ. 2 ನೀವು ಕ್ರೈಸ್ತರಾಗೋ ಮುಂಚೆ* ಮೂಕ ಮೂರ್ತಿಗಳನ್ನ+ ಆರಾಧಿಸ್ತಾ ಇದ್ರಿ ಮತ್ತು ಅವಕ್ಕೆ ಇಷ್ಟ ಆಗೋ ತರ ನಡೀತಿದ್ರಿ ಅಂತ ನಿಮಗೆ ಗೊತ್ತಿದೆ. 3 ಹಾಗಾಗಿ ನಿಮಗಿದು ಅರ್ಥ ಆಗಬೇಕಂತ ಬಯಸ್ತೀನಿ. ಏನಂದ್ರೆ ಯಾರೂ ಪವಿತ್ರಶಕ್ತಿಯ ಸಹಾಯದಿಂದ “ಯೇಸು ಮೇಲೆ ಶಾಪ ಇದೆ” ಅಂತ ಹೇಳಲ್ಲ. ಯಾರೂ ಪವಿತ್ರಶಕ್ತಿಯ ಸಹಾಯ ಇಲ್ದೆ “ಯೇಸು ಪ್ರಭು!” ಅಂತ ಹೇಳೋಕೆ ಆಗಲ್ಲ.+
4 ಬೇರೆ ಬೇರೆ ಸಾಮರ್ಥ್ಯಗಳಿವೆ, ಆದ್ರೆ ಅದನ್ನ ಕೊಡೋ ಪವಿತ್ರಶಕ್ತಿ ಒಂದೇ.+ 5 ಬೇರೆ ಬೇರೆ ಸೇವೆಗಳಿವೆ,+ ಆದ್ರೆ ಅದನ್ನೆಲ್ಲ ಮಾಡೋದು ಒಬ್ಬನೇ ಒಡೆಯನಿಗೆ. 6 ಬೇರೆ ಬೇರೆ ಕೆಲಸಗಳಿವೆ, ಆದ್ರೆ ಆ ಎಲ್ಲ ಕೆಲಸಗಳನ್ನ ಮಾಡಿಸ್ತಿರೋ ದೇವರು ಒಬ್ಬನೇ.+ 7 ಆದ್ರೆ ಪವಿತ್ರಶಕ್ತಿ ಸಹಾಯ ಮಾಡೋದು ಎಲ್ರಲ್ಲೂ ಸ್ಪಷ್ಟವಾಗಿ ಕಾಣುತ್ತೆ. ಅದನ್ನ ದೇವರು ಎಲ್ರ ಪ್ರಯೋಜನಕ್ಕಾಗಿ ಕೊಡ್ತಾನೆ.+ 8 ಉದಾಹರಣೆಗೆ, ಒಬ್ಬನಿಗೆ ಪವಿತ್ರಶಕ್ತಿ ವಿವೇಕದಿಂದ ಮಾತಾಡೋಕೆ ಸಹಾಯ ಮಾಡುತ್ತೆ,* ಇನ್ನೊಬ್ಬನಿಗೆ ಅದೇ ಪವಿತ್ರಶಕ್ತಿ ಜ್ಞಾನದಿಂದ ಮಾತಾಡೋಕೆ ಸಹಾಯ ಮಾಡುತ್ತೆ. 9 ಇನ್ನೊಬ್ಬನಿಗೆ ಅದೇ ಪವಿತ್ರಶಕ್ತಿ ನಂಬಿಕೆಯಿಂದ ಇರೋಕೆ ಸಹಾಯ ಮಾಡುತ್ತೆ,+ ಇನ್ನೊಬ್ಬನಿಗೆ ಅದೇ ಪವಿತ್ರಶಕ್ತಿ ಕಾಯಿಲೆ ಗುಣಪಡಿಸೋ ಸಾಮರ್ಥ್ಯ ಕೊಡುತ್ತೆ.+ 10 ಅದೇ ಪವಿತ್ರ ಶಕ್ತಿ ಒಬ್ಬನಿಗೆ ಅದ್ಭುತ ಮಾಡೋಕೆ,+ ಒಬ್ಬನಿಗೆ ಭವಿಷ್ಯ ಹೇಳೋಕೆ, ಒಬ್ಬನಿಗೆ ಒಂದು ಮಾತು ದೇವರಿಂದ ಬಂತಾ ಇಲ್ವಾ ಅಂತ ಅರ್ಥ ಮಾಡ್ಕೊಳ್ಳೋಕೆ,+ ಒಬ್ಬನಿಗೆ ಬೇರೆ ಬೇರೆ ಭಾಷೆ ಮಾತಾಡೋಕೆ,+ ಒಬ್ಬನಿಗೆ ಬೇರೆ ಬೇರೆ ಭಾಷೆಗಳನ್ನ ಭಾಷಾಂತರ ಮಾಡೋಕೆ* ಸಹಾಯ ಮಾಡುತ್ತೆ.+ 11 ಈ ಎಲ್ಲ ಕೆಲಸಗಳು ಒಂದೇ ಪವಿತ್ರಶಕ್ತಿಯ ಸಹಾಯದಿಂದ ಆಗುತ್ತೆ. ಅದು ಇವನ್ನೆಲ್ಲ ದೇವರ* ಇಷ್ಟದ ಪ್ರಕಾರ ಪ್ರತಿಯೊಬ್ಬನಿಗೆ ಹಂಚಿಕೊಡುತ್ತೆ.
12 ಒಂದು ದೇಹದಲ್ಲಿ ತುಂಬ ಅಂಗಗಳಿವೆ. ಅಂಗಗಳು ತುಂಬ ಇದ್ರೂ ದೇಹ ಒಂದೇ.+ ಕ್ರಿಸ್ತನ ವಿಷ್ಯದಲ್ಲೂ ಹೀಗೇ. 13 ನಾವೆಲ್ಲ ಯೆಹೂದ್ಯರಾಗಿರಲಿ ಗ್ರೀಕರಾಗಿರಲಿ, ದಾಸರಾಗಿರಲಿ ಸ್ವತಂತ್ರರಾಗಿರಲಿ ಒಂದೇ ದೇಹ ಆಗೋಕೆ ಒಂದೇ ಪವಿತ್ರಶಕ್ತಿಯಲ್ಲಿ ದೀಕ್ಷಾಸ್ನಾನ ಪಡ್ಕೊಂಡ್ವಿ. ಅಷ್ಟೇ ಅಲ್ಲ, ನಾವೆಲ್ಲ ಒಂದೇ ಪವಿತ್ರಶಕ್ತಿಯನ್ನ ಪಡ್ಕೊಂಡ್ವಿ.*
14 ಒಂದೇ ಅಂಗದಿಂದ ದೇಹ ಆಗಲ್ಲ, ತುಂಬ ಅಂಗಗಳು ಕೂಡಿದಾಗ್ಲೇ ಒಂದು ದೇಹ ಆಗುತ್ತೆ.+ 15 ಒಂದುವೇಳೆ ಪಾದ “ನಾನು ಕೈಯಲ್ಲ, ಹಾಗಾಗಿ ನಾನು ದೇಹದ ಭಾಗ ಅಲ್ಲ” ಅಂತ ಹೇಳಿದ್ರೆ ಅದೇನು ದೇಹದ ಭಾಗವಾಗಿ ಇರಲ್ವಾ? 16 ಒಂದುವೇಳೆ ಕಿವಿ “ನಾನು ಕಣ್ಣಲ್ಲ, ಹಾಗಾಗಿ ನಾನು ದೇಹದ ಭಾಗ ಅಲ್ಲ” ಅಂತ ಹೇಳಿದ್ರೆ ಅದೇನು ದೇಹದ ಭಾಗವಾಗಿ ಇರಲ್ವಾ? 17 ಇಡೀ ದೇಹ ಕಣ್ಣಾಗಿದ್ರೆ ನಾವು ಹೇಗೆ ಕೇಳಿಸ್ಕೊಳ್ಳೋಕೆ ಆಗುತ್ತೆ? ಇಡೀ ದೇಹ ಕಿವಿ ಆಗಿದ್ರೆ ನಾವು ಹೇಗೆ ವಾಸನೆ ಕಂಡುಹಿಡಿಯೋಕೆ ಆಗುತ್ತೆ? 18 ದೇವರು ತನ್ನ ಇಷ್ಟದ ಪ್ರಕಾರ ದೇಹದಲ್ಲಿ ಪ್ರತಿಯೊಂದು ಅಂಗವನ್ನ ಸರಿಯಾದ ಜಾಗದಲ್ಲಿ ಇಟ್ಟಿದ್ದಾನೆ.
19 ಒಂದುವೇಳೆ ಎಲ್ಲ ಒಂದೇ ಅಂಗವಾಗಿದ್ರೆ ಅದನ್ನ ದೇಹ ಅನ್ನೋಕೆ ಆಗುತ್ತಾ? 20 ದೇಹದಲ್ಲಿ ತುಂಬ ಅಂಗಗಳಿವೆ, ಆದ್ರೆ ದೇಹ ಒಂದೇ. 21 ಕಣ್ಣು ಕೈಗೆ, “ನೀನು ನನಗೆ ಬೇಕಾಗಿಲ್ಲ” ಅಂತ, ತಲೆ ಕಾಲಿಗೆ, “ನೀವು ನನಗೆ ಬೇಕಾಗಿಲ್ಲ” ಅಂತ ಹೇಳೋಕೆ ಆಗಲ್ಲ. 22 ನಿಜ ಏನಂದ್ರೆ, ದೇಹದಲ್ಲಿ ಬಲಹೀನವಾಗಿ ಕಾಣೋ ಅಂಗಗಳೂ ನಮಗೆ ಬೇಕೇ ಬೇಕು. 23 ನಮ್ಮ ದೇಹದಲ್ಲಿ ಯಾವ ಅಂಗಗಳಿಗೆ ಅಷ್ಟು ಗೌರವ ಇಲ್ಲ ಅಂತ ನಾವು ನೆನಸ್ತೀವೋ ಅವಕ್ಕೇ ಜಾಸ್ತಿ ಗೌರವ ಕೊಡ್ತೀವಿ.+ ಹೀಗೆ ಅಂದ ಇಲ್ಲದ ಅಂಗಗಳಿಗೆ ತುಂಬ ಗೌರವ ಕೊಡ್ತೀವಿ. 24 ಆದ್ರೆ ಅಂದವಾದ ಅಂಗಗಳಿಗೆ ನಾವು ಏನೂ ಮಾಡೋ ಅಗತ್ಯ ಇಲ್ಲ. ಹಾಗಿದ್ರೂ ಕಮ್ಮಿ ಗೌರವ ಇರೋ ಅಂಗಕ್ಕೆ ಜಾಸ್ತಿ ಗೌರವ ಸಿಗೋ ಹಾಗೆ ದೇವರು ದೇಹದಲ್ಲಿ ಅಂಗಗಳನ್ನ ಜೋಡಿಸಿದ್ದಾನೆ. 25 ದೇಹದಲ್ಲಿ ಜಗಳ ಇರಬಾರದು ಮತ್ತು ಎಲ್ಲ ಅಂಗಗಳು ಒಂದು ಇನ್ನೊಂದ್ರ ಬಗ್ಗೆ ಚಿಂತೆ ಮಾಡಬೇಕು+ ಅಂತ ದೇವರು ಹಾಗೆ ಮಾಡಿದ್ದಾನೆ. 26 ಒಂದು ಅಂಗ ಕಷ್ಟಪಡ್ತಿದ್ರೆ ಬೇರೆಲ್ಲ ಅಂಗಗಳು ಅದ್ರ ಜೊತೆ ಕಷ್ಟಪಡುತ್ತೆ.+ ಒಂದು ಅಂಗಕ್ಕೆ ಗೌರವ ಸಿಕ್ಕಿದ್ರೆ ಬೇರೆಲ್ಲ ಅಂಗಗಳೂ ಅದ್ರ ಜೊತೆ ಖುಷಿಪಡುತ್ತೆ.+
27 ನೀವು ಕ್ರಿಸ್ತನ ದೇಹವಾಗಿದ್ದೀರ,+ ನಿಮ್ಮಲ್ಲಿ ಪ್ರತಿಯೊಬ್ಬರು ಆ ದೇಹದ ಒಂದೊಂದು ಅಂಗವಾಗಿ ಇದ್ದೀರ.+ 28 ದೇವರು ಸಭೆಯಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಜಾಗ ಕೊಟ್ಟಿದ್ದಾನೆ. ಮೊದಲ್ನೇದಾಗಿ ಅಪೊಸ್ತಲರು,+ ಎರಡ್ನೇದಾಗಿ ಪ್ರವಾದಿಗಳು,+ ಮೂರನೇದಾಗಿ ಬೋಧಕರು,+ ಆಮೇಲೆ ಅದ್ಭುತ ಮಾಡುವವರು,+ ಆಮೇಲೆ ಕಾಯಿಲೆಗಳನ್ನ ವಾಸಿ ಮಾಡುವವರು,+ ಬೇರೆಯವ್ರಿಗೆ ಸಹಾಯ ಮಾಡುವವರು, ಮಾರ್ಗದರ್ಶಿಸೋ ಸಾಮರ್ಥ್ಯ ಇರುವವರು+ ಮತ್ತು ಬೇರೆ ಬೇರೆ ಭಾಷೆ ಮಾತಾಡುವವರು.+ 29 ಅವ್ರೆಲ್ಲ ಅಪೊಸ್ತಲರಾ? ಅವ್ರೆಲ್ಲ ಪ್ರವಾದಿಗಳಾ? ಅವ್ರೆಲ್ಲ ಬೋಧಕರಾ? ಅವ್ರೆಲ್ಲ ಅದ್ಭುತ ಮಾಡುವವ್ರಾ? 30 ಅವರೆಲ್ಲರಿಗೂ ರೋಗಗಳನ್ನ ವಾಸಿ ಮಾಡೋ ಸಾಮರ್ಥ್ಯ ಇದ್ಯಾ? ಅವ್ರೆಲ್ಲ ಬೇರೆ ಬೇರೆ ಭಾಷೆ ಮಾತಾಡ್ತಾರಾ?+ ಅವ್ರೆಲ್ಲ ಭಾಷಾಂತರ ಮಾಡ್ತಾರಾ?* ಇಲ್ಲ ತಾನೇ?+ 31 ಆದ್ರೆ ನೀವು ಈ ಎಲ್ಲದಕ್ಕಿಂತ ಒಳ್ಳೇ ಸಾಮರ್ಥ್ಯಗಳನ್ನ ಪಡಿಯೋಕೆ ಶ್ರಮ ಹಾಕ್ತಾ ಇರಿ.+ ಇದೆಲ್ಲದಕ್ಕಿಂತ ದೊಡ್ಡ ದಾರಿಯನ್ನ ನಾನು ನಿಮಗೆ ತೋರಿಸ್ತೀನಿ.+