10 ಸೊಲೊಮೋನನ ನಾಣ್ಣುಡಿಗಳು.+
ವಿವೇಕಿ ತನ್ನ ಅಪ್ಪನ ಮನಸ್ಸನ್ನ ಸಂತೋಷ ಪಡಿಸ್ತಾನೆ,+
ಆದ್ರೆ ಮೂರ್ಖ ತನ್ನ ಅಮ್ಮ ಕೊರಗೋ ತರ ಮಾಡ್ತಾನೆ.
2 ಕೆಟ್ಟ ಕೆಲಸದಿಂದ ಹಣ ಮಾಡಿದ್ರೆ ಏನು ಉಪಯೋಗ ಇಲ್ಲ,
ಆದ್ರೆ ಪ್ರಾಮಾಣಿಕತೆ ಒಬ್ಬನನ್ನ ಸಾವಿಂದ ಕಾಪಾಡುತ್ತೆ.+
3 ಒಳ್ಳೆಯವರು ಊಟ ಇಲ್ಲದೆ ಸಾಯೋ ಹಾಗೆ ಯೆಹೋವ ಬಿಡಲ್ಲ,+
ಆದ್ರೆ ಕೆಟ್ಟವರ ಆಸೆಗಳ ಮೇಲೆ ಆತನು ನೀರು ಸುರಿತಾನೆ.
4 ದುಡಿಯದ ಕೈಗಳಿಗೆ ಬಡತನ,+
ಶ್ರಮಪಡೋ ಕೈಗಳಿಗೆ ಸಿರಿತನ.+
5 ಬುದ್ಧಿವಂತ ಮಗ ಸುಗ್ಗಿ ಕಾಲದಲ್ಲಿ ಫಸಲು ಕೂಡಿಸ್ತಾನೆ,
ಕೊಯ್ಲಿನ ಕಾಲದಲ್ಲಿ ಗಾಢ ನಿದ್ದೆ ಮಾಡೋ ಮಗ ಅವಮಾನ ಕೊಯ್ತಾನೆ.+
6 ನೀತಿವಂತನ ತಲೆ ಮೇಲೆ ಆಶೀರ್ವಾದ ಇರುತ್ತೆ,+
ಕೆಟ್ಟವನ ಮಾತುಗಳಲ್ಲಿ ಹಿಂಸೆ ಅಡಗಿರುತ್ತೆ.
7 ನೀತಿವಂತನನ್ನ ನೆನಪಿಸ್ಕೊಂಡು ಅವನಿಗೆ ಆಶೀರ್ವಾದ ಕೊಡ್ತಾರೆ,+
ಕೆಟ್ಟವನ ಹೆಸ್ರು ಕೊಳೆತು ನಾರುತ್ತೆ.+
8 ವಿವೇಕಿ ಬುದ್ಧಿ ಮಾತನ್ನ ಕೇಳ್ತಾನೆ,+
ಬುದ್ಧಿಯಿಲ್ಲದೆ ಮಾತಾಡುವವನು ನಾಶ ಆಗ್ತಾನೆ.+
9 ಸರಿ ದಾರಿಯಲ್ಲಿ ನಡಿಯುವವನು ಸುರಕ್ಷಿತನಾಗಿ ಇರ್ತಾನೆ,+
ಅಡ್ಡ ದಾರಿಯಲ್ಲಿ ನಡಿಯುವವನು ಸಿಕ್ಕಿಹಾಕೊಳ್ತಾನೆ.+
10 ಮೋಸದಿಂದ ಕಣ್ಣು ಹೊಡಿಯುವವನಿಗೆ ಕಷ್ಟ ಖಂಡಿತ,+
ಮೂರ್ಖತನದಿಂದ ಮಾತಾಡುವವನಿಗೆ ನಾಶ ಖಂಡಿತ.+
11 ನೀತಿವಂತನ ಬಾಯಲ್ಲಿ ಜೀವದ ಬುಗ್ಗೆ ಇದೆ,+
ಕೆಟ್ಟವನ ಬಾಯಲ್ಲಿ ಹಿಂಸೆ ಅಡಗಿದೆ.+
12 ದ್ವೇಷ ಜಗಳ ಎಬ್ಬಿಸುತ್ತೆ,
ಪ್ರೀತಿ ಎಲ್ಲ ತಪ್ಪುಗಳನ್ನ ಮುಚ್ಚುತ್ತೆ.+
13 ವಿವೇಚನೆ ಇರೋ ವ್ಯಕ್ತಿಯ ತುಟಿಗಳಲ್ಲಿ ವಿವೇಕ ಇರುತ್ತೆ,+
ಬುದ್ಧಿ ಇಲ್ಲದವನ ಬೆನ್ನಿಗೆ ಬೆತ್ತದ ಏಟು ಬೀಳುತ್ತೆ.+
14 ವಿವೇಕಿಗಳು ಜ್ಞಾನವನ್ನ ನಿಧಿ ತರ ಕೂಡಿಸಿ ಇಟ್ಕೊಳ್ತಾರೆ,+
ಮೂರ್ಖನ ಬಾಯಿ ನಾಶವನ್ನ ಕೈಬೀಸಿ ಕರೆಯುತ್ತೆ.+
15 ಶ್ರೀಮಂತನಿಗೆ ಅವನ ಆಸ್ತಿನೇ ಭದ್ರ ಕೋಟೆ.
ಬಡವನಿಗೆ ಅವನ ಬಡತನದಿಂದಾನೇ ನಾಶನ.+
16 ನೀತಿವಂತನ ಕೆಲಸಗಳು ಜೀವಕ್ಕೆ ನಡಿಸುತ್ತೆ,
ಕೆಟ್ಟವನ ಕೆಲಸಗಳು ಪಾಪಕ್ಕೆ ನಡಿಸುತ್ತೆ.+
17 ಶಿಸ್ತನ್ನ ಸ್ವೀಕರಿಸುವವನು ಬೇರೆಯವ್ರಿಗೂ ಜೀವದ ದಾರಿ ತೋರಿಸ್ತಾನೆ,
ತಿದ್ದಿದಾಗ ಕೇಳದೆ ಇರುವವನು ಜನ್ರನ್ನ ತಪ್ಪುದಾರಿಗೆ ಎಳಿತಾನೆ.
18 ದ್ವೇಷವನ್ನ ತನ್ನಲ್ಲೇ ಬಚ್ಚಿಟ್ಕೊಳ್ಳೋನು ಸುಳ್ಳು ಹೇಳ್ತಾನೆ,+
ಇನ್ನೊಬ್ರ ಹೆಸ್ರನ್ನ ಹಾಳು ಮಾಡೋಕೆ ಗಾಳಿಸುದ್ದಿ ಹಬ್ಬಿಸುವವನು ಮೂರ್ಖ.
19 ಲಂಗು ಲಗಾಮಿಲ್ಲದೆ ಮಾತಾಡುವವ್ರಿಗೆ ಪಾಪ ತಪ್ಪಿದ್ದಲ್ಲ,+
ಮಾತಿನ ಮೇಲೆ ಹತೋಟಿ ಇಟ್ಕೊಳ್ಳುವವರು ವಿವೇಚನೆಯಿಂದ ನಡ್ಕೊಳ್ತಾರೆ.+
20 ನೀತಿವಂತನ ಮಾತುಗಳು ಶ್ರೇಷ್ಠ ಬೆಳ್ಳಿ,+
ಕೆಟ್ಟವನ ಯೋಚ್ನೆ ಹುಲ್ಲುಕಡ್ಡಿಗೆ ಸಮ.
21 ನೀತಿವಂತನ ಮಾತು ಅನೇಕರನ್ನ ನೋಡ್ಕೊಳ್ಳುತ್ತೆ,+
ಬುದ್ಧಿ ಕಮ್ಮಿ ಇರೋದ್ರಿಂದ ಮೂರ್ಖ ಸಾಯ್ತಾನೆ.+
22 ಯೆಹೋವನ ಆಶೀರ್ವಾದ ಒಬ್ಬನನ್ನ ಶ್ರೀಮಂತ ಮಾಡುತ್ತೆ,+
ಅದ್ರ ಜೊತೆ ಯಾವುದೇ ರೀತಿಯ ನೋವನ್ನ ದೇವರು ಸೇರಿಸಲ್ಲ.
23 ನಾಚಿಕೆಗೆಟ್ಟ ಕೆಲಸ ಮಾಡೋದಂದ್ರೆ ಮೂರ್ಖನಿಗೆ ಒಂಥರಾ ಖುಷಿ,
ಆದ್ರೆ ವಿವೇಚನೆ ಇರುವವನು ವಿವೇಕಕ್ಕಾಗಿ ಹುಡುಕ್ತಾನೆ.+
24 ಕೆಟ್ಟವನು ಯಾವುದಕ್ಕೆ ಭಯಪಡ್ತಾನೋ ಅದೇ ಅವನ ಮೇಲೆ ಬರುತ್ತೆ,
ಆದ್ರೆ ನೀತಿವಂತನ ಆಸೆ ಈಡೇರುತ್ತೆ.+
25 ಸುಂಟರಗಾಳಿ ಬೀಸಿದಾಗ ಕೆಟ್ಟವನು ಹಾರಿಹೋಗ್ತಾನೆ,+
ಆದ್ರೆ ನೀತಿವಂತ ಅಡಿಪಾಯದ ತರ ಗಟ್ಟಿಯಾಗಿ ಇರ್ತಾನೆ.+
26 ಹಲ್ಲಿಗೆ ಹುಳಿ, ಕಣ್ಣಿಗೆ ಹೊಗೆ ಹೇಗೋ
ಯಜಮಾನನಿಗೆ ಸೋಮಾರಿ ಹಾಗೇ.
27 ಯೆಹೋವನ ಮೇಲೆ ಭಯ ಇದ್ರೆ ಹೆಚ್ಚು ವರ್ಷ ಇರ್ತಾರೆ,+
ಕೆಟ್ಟವನ ಆಯಸ್ಸು ಕಮ್ಮಿ ಆಗುತ್ತೆ.+
28 ನೀತಿವಂತನ ಆಸೆ ಖುಷಿ ತರುತ್ತೆ,+
ಕೆಟ್ಟವನ ಆಸೆ ಮಣ್ಣುಪಾಲಾಗುತ್ತೆ.+
29 ಯೆಹೋವನ ಮಾರ್ಗ ತಪ್ಪು ಮಾಡದವ್ರಿಗೆ ಭದ್ರಕೋಟೆ,+
ಆದ್ರೆ ತಪ್ಪು ಮಾಡುವವ್ರಿಗೆ ನಾಶನ.+
30 ನೀತಿವಂತ ಯಾವತ್ತೂ ಬಿದ್ದು ಹೋಗಲ್ಲ,+
ಕೆಟ್ಟವನು ಮುಂದೆ ಯಾವತ್ತೂ ಭೂಮಿ ಮೇಲೆ ಇರಲ್ಲ.+
31 ನೀತಿವಂತನ ಬಾಯಿಂದ ವಿವೇಕದ ಮಾತುಗಳು ಬರುತ್ತೆ,
ಹಠಮಾರಿಯ ಬಾಯಿ ಶಾಶ್ವತವಾಗಿ ಮುಚ್ಚುತ್ತೆ.
32 ನೀತಿವಂತನ ತುಟಿಗಳಿಗೆ ಒಳ್ಳೇ ಮಾತು ಹೇಳೋಕೆ ಗೊತ್ತು,
ಕೆಟ್ಟವನ ಬಾಯಿಂದ ಬರೋದೆಲ್ಲ ಕೆಟ್ಟ ಮಾತು.