ಅಪೊಸ್ತಲರ ಕಾರ್ಯ
7 ಆಗ ಮಹಾ ಪುರೋಹಿತ ಸ್ತೆಫನನಿಗೆ “ಇವರು ಹೇಳೋದು ಸತ್ಯನಾ?” ಅಂತ ಕೇಳಿದ. 2 ಅದಕ್ಕೆ ಸ್ತೆಫನ ಹೀಗೆ ಹೇಳಿದ “ಸಹೋದರರೇ, ನನಗೆ ತಂದೆ ತರ ಇರುವವರೇ, ದಯವಿಟ್ಟು ನಾನು ಹೇಳೋದನ್ನ ಕೇಳಿ. ನಮ್ಮ ಪೂರ್ವಜ ಅಬ್ರಹಾಮ ಹಾರಾನಿನಲ್ಲಿ+ ವಾಸ ಮಾಡೋದಕ್ಕಿಂತ ಮುಂಚೆ ಮೆಸಪಟೇಮ್ಯದಲ್ಲಿ ಇದ್ದ. ಆಗ ಮಹಾ ದೇವರು ಅವನಿಗೆ ಕಾಣಿಸಿ 3 ‘ನಿನ್ನ ದೇಶ, ಸಂಬಂಧಿಕರನ್ನ ಬಿಟ್ಟು ನಿನಗೆ ತೋರಿಸೋ ದೇಶಕ್ಕೆ ಹೋಗು’ ಅಂತ ಹೇಳಿದನು.+ 4 ದೇವರು ಹೇಳಿದ ಹಾಗೇ ಅಬ್ರಹಾಮ ಕಲ್ದೀಯರ ದೇಶ ಬಿಟ್ಟು ಹಾರಾನಿಗೆ ಬಂದು ವಾಸ ಮಾಡಿದ. ಅವನ ಅಪ್ಪ ತೀರಿಹೋದ+ ಮೇಲೆ ದೇವರು ಅವನಿಗೆ ನೀವು ವಾಸಿಸ್ತಿರೋ ಈ ದೇಶಕ್ಕೆ ಹೋಗೋಕೆ ಹೇಳಿದನು.+ 5 ಹಾಗಿದ್ರೂ ಈ ದೇಶದಲ್ಲಿ ದೇವರು ಅವನಿಗೆ ಆಸ್ತಿಯಾಗಿ ಏನನ್ನೂ ಕೊಡಲಿಲ್ಲ. ಕಡಿಮೆಪಕ್ಷ ಕಾಲಿಡುವಷ್ಟು ಜಾಗನೂ ಕೊಡಲಿಲ್ಲ. ಆದ್ರೆ ಅವನಿಗೆ, ಆಮೇಲೆ ಅವನ ವಂಶಕ್ಕೆ+ ಈ ದೇಶವನ್ನ ಆಸ್ತಿಯಾಗಿ ಕೊಡ್ತೀನಿ ಅಂತ ದೇವರು ಅವನಿಗೆ ಮಾತು ಕೊಟ್ಟನು. ಆಗಿನ್ನೂ ಅಬ್ರಹಾಮನಿಗೆ ಮಕ್ಕಳೇ ಆಗಿರ್ಲಿಲ್ಲ. 6 ಅಷ್ಟೇ ಅಲ್ಲ ಅವನ ಸಂತಾನದವರು ಬೇರೆ ದೇಶದಲ್ಲಿ ವಿದೇಶಿಯರಾಗಿ ಇರ್ತಾರೆ ಮತ್ತು ಆ ದೇಶದ ಜನ ಇವ್ರನ್ನ ಗುಲಾಮರಾಗಿ 400 ವರ್ಷ+ ದುಡಿಸ್ಕೊಂಡು ಕಷ್ಟ ಕೊಡ್ತಾರೆ ಅಂತ ದೇವರು ಅವನಿಗೆ ಹೇಳಿದನು. 7 ಆದ್ರೆ ‘ಯಾವ ದೇಶದವರು ಅವ್ರನ್ನ ಗುಲಾಮರಾಗಿ ದುಡಿಸ್ಕೊಂಡ್ರೋ ಅವ್ರಿಗೆ ನಾನು ಶಿಕ್ಷೆ ಕೊಡ್ತೀನಿ.+ ಆಮೇಲೆ ಅವರು ಆ ದೇಶದಿಂದ ಹೊರಗೆ ಬಂದು ಈ ಸ್ಥಳದಲ್ಲಿ ನನ್ನ ಆರಾಧನೆ ಮಾಡ್ತಾರೆ’+ ಅಂತ ದೇವರು ಹೇಳಿದನು.
8 “ಅಷ್ಟೇ ಅಲ್ಲ ದೇವರು ಅಬ್ರಹಾಮನ ಜೊತೆ ಒಂದು ಒಪ್ಪಂದ ಮಾಡ್ಕೊಂಡನು. ಅದ್ರ ಸೂಚನೆಯಾಗಿ ಅವನು ಮತ್ತು ಅವನ ವಂಶದಲ್ಲಿ ಹುಟ್ಟೋ ಎಲ್ಲಾ ಗಂಡು ಮಕ್ಕಳು ಸುನ್ನತಿ ಮಾಡ್ಕೊಬೇಕಿತ್ತು.+ ಹಾಗಾಗಿ ಇಸಾಕ ಹುಟ್ಟಿ ಎಂಟು ದಿನ+ ಆದಮೇಲೆ ಅಬ್ರಹಾಮ ಅವನಿಗೆ ಸುನ್ನತಿ ಮಾಡಿಸಿದ. ಈ ಇಸಾಕನಿಗೆ+ ಯಾಕೋಬ ಹುಟ್ಟಿದ. ಯಾಕೋಬನಿಗೆ ನಮ್ಮ 12 ಮಂದಿ ಪೂರ್ವಜರು ಹುಟ್ಟಿದ್ರು. 9 ಆ ನಮ್ಮ ಪೂರ್ವಜರು ಅವ್ರ ತಮ್ಮ ಯೋಸೇಫನ ಮೇಲೆ ಹೊಟ್ಟೆಕಿಚ್ಚು ಪಟ್ಟು+ ಅವನನ್ನ ಈಜಿಪ್ಟ್ ದೇಶದವ್ರಿಗೆ ಮಾರಿಬಿಟ್ರು.+ ಆದ್ರೆ ದೇವರು ಅವನ ಜೊತೆ ಇದ್ದನು.+ 10 ಅವನಿಗೆ ಬಂದ ಎಲ್ಲ ಕಷ್ಟಗಳಿಂದ ಅವನನ್ನ ಪಾರುಮಾಡಿದನು. ಅವನಿಗೆ ಎಂಥಾ ಸಾಮರ್ಥ್ಯ ಕೊಟ್ಟನಂದ್ರೆ ಈಜಿಪ್ಟಿನ ರಾಜ ಫರೋಹ ಅವನನ್ನ ನೋಡಿ ತುಂಬ ಇಷ್ಟಪಟ್ಟ. ಯೋಸೇಫ ಅವನ ಮುಂದೆ ಒಬ್ಬ ವಿವೇಕಿಯಾದ. ಫರೋಹ ಅವನನ್ನ ಈಜಿಪ್ಟಿನ ಮೇಲೆ, ತನ್ನ ಅರಮನೆ ಮೇಲೆ ಅಧಿಕಾರಿಯನ್ನಾಗಿ ನೇಮಿಸಿದ.+ 11 ಆದ್ರೆ ಈಜಿಪ್ಟಲ್ಲಿ ಮತ್ತು ಕಾನಾನ್ ದೇಶದಲ್ಲಿ ದೊಡ್ಡ ಬರ ಬಂತು. ಆಗ ಎಲ್ರಿಗೂ ತುಂಬ ಕಷ್ಟ ಆಯ್ತು. ನಮ್ಮ ಪೂರ್ವಜರ ಹತ್ರನೂ ತಿನ್ನೋಕೇನೂ ಇಲ್ಲದ ಹಾಗೆ ಆಯ್ತು.+ 12 ಆದ್ರೆ ಈಜಿಪ್ಟಲ್ಲಿ ದವಸಧಾನ್ಯ ಇದೆ ಅಂತ ಗೊತ್ತಾದಾಗ ಯಾಕೋಬ ನಮ್ಮ ಪೂರ್ವಜರನ್ನ ಮೊದಲ ಸಲ ಅಲ್ಲಿಗೆ ಕಳಿಸಿದ.+ 13 ಅವರು ಎರಡನೇ ಸಲ ಹೋದಾಗ ಯೋಸೇಫ ತಾನು ಯಾರಂತ ತನ್ನ ಅಣ್ಣತಮ್ಮಂದಿರಿಗೆ ಹೇಳಿದ. ಆಗ ಯೋಸೇಫನ ಕುಟುಂಬದ ಬಗ್ಗೆ ಫರೋಹನಿಗೂ ಗೊತ್ತಾಯ್ತು.+ 14 ಹಾಗಾಗಿ ಯೋಸೇಫ ತನ್ನ ಅಪ್ಪ ಯಾಕೋಬನಿಗೆ, ತನ್ನ ಸಂಬಂಧಿಕರಿಗೆ ಕಾನಾನ್ ದೇಶದಿಂದ ಈಜಿಪ್ಟಿಗೆ ಬರೋಕೆ ಹೇಳಿ ಕಳಿಸಿದ.+ ಅವರು ಒಟ್ಟು 75 ಜನ ಇದ್ರು.+ 15 ಹೀಗೆ ಯಾಕೋಬ ಈಜಿಪ್ಟಿಗೆ ಹೋದ.+ ಅವನು ಅಲ್ಲೇ ತೀರಿಹೋದ.+ ನಮ್ಮ ಪೂರ್ವಜರೂ ಅಲ್ಲೇ ತೀರಿಹೋದ್ರು.+ 16 ಅವ್ರ ಎಲುಬುಗಳನ್ನ ಶೇಕೆಮಿಗೆ ತಗೊಂಡು ಹೋಗಿ ಅಲ್ಲಿ ಸಮಾಧಿ ಮಾಡಲಾಯ್ತು. ಶೇಕೆಮಿನ ಈ ಹೊಲವನ್ನ ಅಬ್ರಹಾಮ ಬೆಳ್ಳಿಯ ಹಣ ಕೊಟ್ಟು ಹಮೋರನ ಮಕ್ಕಳಿಂದ ತಗೊಂಡಿದ್ದ.+
17 “ದೇವರು ಅಬ್ರಹಾಮನಿಗೆ ಕೊಟ್ಟ ಮಾತು ನಿಜ ಆಗೋ ಸಮಯ ಹತ್ರ ಆಗ್ತಾ ಇತ್ತು. ಈಜಿಪ್ಟಲ್ಲಿ ಇಸ್ರಾಯೇಲ್ಯರ ಸಂಖ್ಯೆನೂ ಹೆಚ್ಚಾಗ್ತಾ ಇತ್ತು. 18 ಆಮೇಲೆ ಈಜಿಪ್ಟಲ್ಲಿ ಒಬ್ಬ ಹೊಸ ರಾಜ ಆಳೋಕೆ ಶುರುಮಾಡಿದ. ಅವನಿಗೆ ಯೋಸೇಫನ ಬಗ್ಗೆ ಗೊತ್ತಿರಲ್ಲ.+ 19 ಈ ರಾಜ ನಮ್ಮ ಪೂರ್ವಜರ ವಿರುದ್ಧ ಒಳಸಂಚು ಮಾಡಿದ. ಅವ್ರ ಜೊತೆ ಕೆಟ್ಟದಾಗಿ ನಡ್ಕೊಂಡ. ಅವ್ರ ಮಕ್ಕಳು ಹುಟ್ಟಿದ ತಕ್ಷಣ ಆ ಕೂಸುಗಳನ್ನ ಸಾಯಿಸೋಕೆ ಬಿಟ್ಟುಬಿಡಬೇಕಂತ ಒತ್ತಾಯಿಸಿದ.+ 20 ಆ ಸಮಯದಲ್ಲೇ ಮೋಶೆ ಹುಟ್ಟಿದ. ಅವನು ದೇವ್ರ ದೃಷ್ಟಿಯಲ್ಲಿ ತುಂಬ ಸುಂದರನಾಗಿದ್ದ. ಅವನ ಅಪ್ಪಅಮ್ಮ ಮೂರು ತಿಂಗಳು ಅವನನ್ನ ಮನೆಯಲ್ಲೇ ಸಾಕಿದ್ರು.+ 21 ಆಮೇಲೆ ಬಿಟ್ಟುಬಿಟ್ಟಾಗ+ ಫರೋಹನ ಮಗಳ ಕೈಗೆ ಸಿಕ್ಕಿದ. ಅವಳು ಅವನನ್ನ ತಗೊಂಡು ತನ್ನ ಸ್ವಂತ ಮಗನ ತರ ಸಾಕಿದಳು.+ 22 ಹಾಗಾಗಿ ಈಜಿಪ್ಟಿನ ಎಲ್ಲ ಶಿಕ್ಷಣವನ್ನ ಮೋಶೆ ಪಡ್ಕೊಂಡ. ನಿಜ ಹೇಳಬೇಕಂದ್ರೆ ಅವನು ತುಂಬ ಚೆನ್ನಾಗಿ ಮಾತಾಡ್ತಾ ಇದ್ದ. ದೊಡ್ಡದೊಡ್ಡ ಕೆಲಸಗಳನ್ನ ಮಾಡ್ತಾ ಇದ್ದ.+
23 “ಅವನಿಗೆ 40 ವರ್ಷ ಆದಾಗ, ತನ್ನ ಸಹೋದರರನ್ನ ಅಂದ್ರೆ ಇಸ್ರಾಯೇಲ್ಯರನ್ನ ನೋಡ್ಬೇಕಂತ ಮನಸ್ಸು ತುಡಿತಿತ್ತು.+ 24 ಆ ರೀತಿ ಒಂದಿನ ಹೋದಾಗ ಈಜಿಪ್ಟಿನ ಒಬ್ಬ ವ್ಯಕ್ತಿ ಇಸ್ರಾಯೇಲ್ಯನ ಜೊತೆ ಅನ್ಯಾಯವಾಗಿ ನಡ್ಕೊಳ್ಳೋದು ಇವನ ಕಣ್ಣಿಗೆ ಬಿತ್ತು. ಮೋಶೆ ತನ್ನ ಸಹೋದರನನ್ನ ಕಾಪಾಡಿದ. ಅವನ ಪರವಾಗಿ ಸೇಡು ತೀರಿಸ್ಕೊಳ್ಳೋಕೆ ಹೋಗಿ ಆ ಈಜಿಪ್ಟಿನವನನ್ನ ಹೊಡೆದು ಸಾಯಿಸಿಬಿಟ್ಟ. 25 ದೇವರು ತನ್ನಿಂದ ಅವ್ರನ್ನ ಕಾಪಾಡ್ತಿದ್ದಾನೆ ಅಂತ ತನ್ನ ಸಹೋದರರು ಅರ್ಥ ಮಾಡ್ಕೊಳ್ತಾರಂತ ಅವನು ಅಂದ್ಕೊಂಡ. ಆದ್ರೆ ಅವರು ಅರ್ಥ ಮಾಡ್ಕೊಳ್ಳಲಿಲ್ಲ. 26 ಮಾರನೇ ದಿನ ಅವನು ಅವ್ರ ಹತ್ರ ಹೋದಾಗ ಇಬ್ರು ಇಸ್ರಾಯೇಲ್ಯರು ಜಗಳ ಮಾಡ್ತಿದ್ರು. ಅವನು ಅವ್ರನ್ನ ಸಮಾಧಾನ ಮಾಡ್ತಾ ‘ನೀವಿಬ್ರು ಸಹೋದರರು. ಯಾಕೆ ಜಗಳ ಮಾಡ್ತಾ ಇದ್ದೀರಾ?’ ಅಂತ ಕೇಳಿದ. 27 ಆದ್ರೆ ತನ್ನ ಸಹೋದರನನ್ನ ಹೊಡಿತಿದ್ದ ವ್ಯಕ್ತಿ ಮೋಶೆನ ತಳ್ಳಿ ‘ನಮ್ಮ ಮೇಲೆ ಅಧಿಕಾರಿಯನ್ನಾಗಿ, ನ್ಯಾಯಾಧೀಶನನ್ನಾಗಿ ನಿನ್ನನ್ನ ನೇಮಿಸಿದವರು ಯಾರು? 28 ನಿನ್ನೆ ಆ ಈಜಿಪ್ಟಿನವನನ್ನ ಸಾಯಿಸಿದ ತರ ನನ್ನನ್ನೂ ಸಾಯಿಸಬೇಕಂತ ಇದ್ದೀಯಾ?’ ಅಂತ ಕೇಳಿದ. 29 ಇದನ್ನ ಕೇಳಿ ಮೋಶೆ ಓಡಿಹೋದ. ಮಿದ್ಯಾನ್ ದೇಶದಲ್ಲಿ ಒಬ್ಬ ವಿದೇಶಿಯಾಗಿ ಜೀವಿಸಿದ. ಅಲ್ಲಿ ಅವನಿಗೆ ಇಬ್ರು ಗಂಡುಮಕ್ಕಳು ಹುಟ್ಟಿದ್ರು.+
30 “ಅಲ್ಲಿ 40 ವರ್ಷ ಕಳೆದ ಮೇಲೆ ಮೋಶೆ ಸಿನಾಯಿ ಬೆಟ್ಟದ ಹತ್ರದಲ್ಲಿದ್ದ ಅರಣ್ಯ ಪ್ರದೇಶದಲ್ಲಿದ್ದಾಗ ಒಬ್ಬ ದೇವದೂತ ಮುಳ್ಳಿನ ಪೊದೆಯೊಳಗೆ ಉರಿಯೋ ಬೆಂಕಿಯಲ್ಲಿ ಕಾಣಿಸ್ಕೊಂಡ.+ 31 ಅದನ್ನ ನೋಡಿ ಮೋಶೆಗೆ ಆಶ್ಚರ್ಯ ಆಯ್ತು. ಏನಿದು ಅಂತ ನೋಡೋಕೆ ಅದ್ರ ಹತ್ರ ಹೋಗ್ತಿದ್ದಾಗ ಯೆಹೋವನ* ಈ ಧ್ವನಿ ಅವನಿಗೆ ಕೇಳಿಸ್ತು 32 ‘ನಾನು ನಿಮ್ಮ ಪೂರ್ವಜರ ದೇವರು. ಅಂದ್ರೆ ಅಬ್ರಹಾಮ, ಇಸಾಕ, ಯಾಕೋಬನ ದೇವರು.’+ ಆಗ ಮೋಶೆಗೆ ಭಯ ಆಯ್ತು. ಅದ್ರ ಕಡೆ ಕಣ್ಣೆತ್ತಿ ನೋಡೋಕೂ ಧೈರ್ಯ ಬರ್ಲಿಲ್ಲ. 33 ಆಗ ಯೆಹೋವ* ಮೋಶೆಗೆ ‘ನಿನ್ನ ಚಪ್ಪಲಿ ಬಿಚ್ಚಿಡು. ಯಾಕಂದ್ರೆ ನೀನು ನಿಂತಿರೋ ನೆಲ ಪವಿತ್ರವಾಗಿದೆ. 34 ಈಜಿಪ್ಟಲ್ಲಿ ನನ್ನ ಜನ ಕಷ್ಟ ಪಡ್ತಿರೋದನ್ನ ನಾನು ಕಣ್ಣಾರೆ ನೋಡಿದ್ದೀನಿ. ನಾನು ಅವ್ರ ನರಳಾಟವನ್ನ ಕೇಳಿದ್ದೀನಿ.+ ಅದಕ್ಕೆ ಅವ್ರನ್ನ ಕಾಪಾಡಬೇಕಂತ ಇಳಿದುಬಂದಿದ್ದೀನಿ. ಬಾ, ನಾನು ನಿನ್ನನ್ನ ಈಜಿಪ್ಟಿಗೆ ಕಳಿಸ್ತೀನಿ’ ಅಂದನು. 35 ಯಾರನ್ನ ಅವರು ‘ನಮ್ಮ ಮೇಲೆ ಅಧಿಕಾರಿಯನ್ನಾಗಿ, ನ್ಯಾಯಾಧೀಶನನ್ನಾಗಿ ನಿನ್ನನ್ನ ನೇಮಿಸಿದವರು ಯಾರು?’+ ಅಂತ ಹೇಳಿ ಕಡೆಗಣಿಸಿದ್ರೋ ಆ ಮೋಶೆಯನ್ನೇ ದೇವರು ಅಧಿಕಾರಿಯಾಗಿ ರಕ್ಷಕನಾಗಿ ಕಳಿಸಿದನು.+ ಮುಳ್ಳಿನ ಪೊದೆಯಲ್ಲಿ ಕಾಣಿಸ್ಕೊಂಡ ದೇವದೂತನ ಮೂಲಕ ಅವನನ್ನ ಕಳಿಸಿದನು. 36 ಮೋಶೆ ಈಜಿಪ್ಟಲ್ಲಿ, ಕೆಂಪು ಸಮುದ್ರದ+ ಹತ್ರ ಮತ್ತು 40 ವರ್ಷ ಕಾಡಲ್ಲಿ+ ಎಷ್ಟೋ ಅದ್ಭುತಗಳನ್ನ ಮಾಡಿ+ ಇಸ್ರಾಯೇಲ್ಯರನ್ನ ಅಲ್ಲಿಂದ ಕರ್ಕೊಂಡು ಬಂದ.+
37 “‘ದೇವರು ನಿಮಗಾಗಿ ನಿಮ್ಮ ಸಹೋದರರಲ್ಲೇ ನನ್ನಂಥ ಒಬ್ಬ ಪ್ರವಾದಿಯನ್ನ ಆರಿಸ್ಕೊಳ್ತಾನೆ’ ಅಂತ ಇಸ್ರಾಯೇಲ್ಯರಿಗೆ ಹೇಳಿದವನು ಈ ಮೋಶೆನೇ.+ 38 ಕಾಡಲ್ಲಿ ಇಸ್ರಾಯೇಲ್ಯರ ಜೊತೆ ಇದ್ದವನು ಇವನೇ. ಸಿನಾಯಿ ಬೆಟ್ಟದಲ್ಲಿ ಮಾತಾಡಿದ+ ದೇವದೂತನ+ ಜೊತೆ ಮತ್ತು ನಮ್ಮ ಪೂರ್ವಜರ ಜೊತೆ ಇದ್ದಿದ್ದು ಈ ಮೋಶೆನೇ. ದೇವ್ರಿಂದ ಜೀವ ಇರೋ ಸಂದೇಶ ಪಡ್ಕೊಂಡು ನಮಗೆ ಕೊಟ್ಟವನು ಇವನೇ.+ 39 ಆದ್ರೆ ನಮ್ಮ ಪೂರ್ವಜರು ಅವನ ಮಾತನ್ನ ಕೇಳಲಿಲ್ಲ. ಅವನು ನಮಗೆ ಬೇಡ ಅಂತ ಹೇಳಿ,+ ಅವರು ಮತ್ತೆ ಈಜಿಪ್ಟಿಗೆ ವಾಪಸ್ ಹೋಗಬೇಕು ಅಂದ್ಕೊಂಡ್ರು.+ 40 ಅವರು ಆರೋನನಿಗೆ ‘ನಮ್ಮನ್ನ ಈಜಿಪ್ಟಿಂದ ಕರ್ಕೊಂಡು ಬಂದ ಮೋಶೆಗೆ ಏನಾಯ್ತೋ ಗೊತ್ತಿಲ್ಲ. ನಮ್ಮನ್ನ ಮುಂದಕ್ಕೆ ಕರ್ಕೊಂಡು ಹೋಗೋಕೆ ನಮಗೊಂದು ದೇವ್ರನ್ನ ಮಾಡ್ಕೊಡು’ ಅಂದ್ರು.+ 41 ಆ ಸಮಯದಲ್ಲಿ ಅವರು ಒಂದು ಕರುವಿನ ಮೂರ್ತಿ ಮಾಡಿದ್ರು. ಅದಕ್ಕೆ ಬಲಿ ಅರ್ಪಿಸಿದ್ರು. ಆಮೇಲೆ ತಮ್ಮ ಕೈಯಾರೆ ಮಾಡಿದ್ದನ್ನ ನೋಡಿ ಖುಷಿಯಿಂದ ಹಬ್ಬ ಮಾಡಿದ್ರು.+ 42 ಹಾಗಾಗಿ ಪ್ರವಾದಿಗಳ ಪುಸ್ತಕದಲ್ಲಿ ಬರೆದ ಹಾಗೆ ಸೂರ್ಯಚಂದ್ರ ನಕ್ಷತ್ರಗಳನ್ನ ಆರಾಧಿಸೋ+ ಹಾಗೆ ದೇವರು ಅವ್ರನ್ನ ಬಿಟ್ಟುಬಿಟ್ಟನು. ಆ ಪುಸ್ತಕದಲ್ಲಿ ಪ್ರವಾದಿಗಳು ಹೀಗೆ ಬರೆದಿದ್ದಾರೆ ‘ಇಸ್ರಾಯೇಲ್ ಜನ್ರೇ, ಕಾಡಲ್ಲಿ ನೀವು 40 ವರ್ಷ ಬಲಿ ಕೊಟ್ಟಿದ್ದು, ಅರ್ಪಿಸಿದ್ದು ನನಗಾ? ನನಗಲ್ಲ. 43 ನೀವು ಮೊಲೋಖನ+ ಗುಡಾರವನ್ನ, ರೇಫಾ ದೇವತೆಯ ನಕ್ಷತ್ರದ ಮೂರ್ತಿಯನ್ನ ಹೊತ್ಕೊಂಡು ಹೋದ್ರಿ. ಆರಾಧನೆ ಮಾಡೋಕೆ ಆ ಮೂರ್ತಿಗಳನ್ನ ನೀವೇ ಮಾಡ್ಕೊಂಡ್ರಿ. ಹಾಗಾಗಿ ನಾನು ನಿಮ್ಮನ್ನ ಗಡೀಪಾರು ಮಾಡ್ತೀನಿ, ಬಾಬೆಲನ್ನೂ ದಾಟಿ ಕಳಿಸ್ತೀನಿ.’+
44 “ಕಾಡಲ್ಲಿ ದೇವಗುಡಾರ ಇತ್ತು. ನಮ್ಮ ಪೂರ್ವಜರ ಜೊತೆ ದೇವರಿದ್ದಾನೆ ಅನ್ನೋದಕ್ಕೆ ಅದು ಸಾಕ್ಷಿ ಆಗಿತ್ತು. ಅದನ್ನ ಕಟ್ಟೋಕೆ ದೇವರು ಮೋಶೆಗೆ ಹೇಳಿದ್ದನು. ದೇವರು ಅವನಿಗೆ ಕೊಟ್ಟ ನಮೂನೆ ತರಾನೇ ಅವರು ಕಟ್ಟಿದ್ರು.+ 45 ಆಮೇಲೆ ಆ ಗುಡಾರ ನಮ್ಮ ಪೂರ್ವಜರ ಮಕ್ಕಳಿಗೆ ಸಿಕ್ತು. ಅವರು ಯೆಹೋಶುವನ ಜೊತೆ ಈ ದೇಶಕ್ಕೆ ಬಂದಾಗ ಅದನ್ನ ತಂದ್ರು.+ ಆಗ ಈ ದೇಶದಲ್ಲಿದ್ದ ಜನ್ರನ್ನ ದೇವರು ನಮ್ಮ ಪೂರ್ವಜರ ಕಣ್ಮುಂದೆನೇ ಓಡಿಸಿಬಿಟ್ಟನು.+ ದಾವೀದನ ಕಾಲದ ತನಕ ಆ ಗುಡಾರ ಇಲ್ಲೇ ಇತ್ತು. 46 ದಾವೀದನ ಮೇಲೆ ದೇವ್ರ ಆಶೀರ್ವಾದ ಇತ್ತು. ಅವನು ಯಾಕೋಬನ ದೇವ್ರಿಗೆ ಆಲಯ ಕಟ್ಟೋ ಸುಯೋಗ ಕೊಡು ಅಂತ ಕೇಳ್ಕೊಂಡ.+ 47 ಆದ್ರೆ ದೇವಾಲಯವನ್ನ ಸೊಲೊಮೋನ ಕಟ್ಟಿದ.+ 48 ಆದ್ರೆ ಮಹೋನ್ನತ ದೇವರು ಮನುಷ್ಯ ಕಟ್ಟಿದ ಆಲಯದಲ್ಲಿ ವಾಸಮಾಡಲ್ಲ.+ ಇದ್ರ ಬಗ್ಗೆ ಒಬ್ಬ ಪ್ರವಾದಿ ಹೀಗೆ ಬರೆದ 49 ‘ಯೆಹೋವ* ಹೀಗೆ ಹೇಳ್ತಿದ್ದಾನೆ: ಆಕಾಶ ನನ್ನ ಸಿಂಹಾಸನ,+ ಭೂಮಿ ನನ್ನ ಪಾದಪೀಠ.+ ಹಾಗಿರುವಾಗ ನೀವು ನನಗಾಗಿ ಎಂಥಾ ಮನೆ ಕಟ್ತೀರಾ? ನಾನಿರೋಕೆ ಎಂಥಾ ಜಾಗ ಮಾಡ್ತೀರ? 50 ನಾನೇ ಅಲ್ವಾ ಇದೆಲ್ಲ ಮಾಡಿದ್ದು?’+
51 “ಮೊಂಡ ಜನ್ರೇ, ನೀವು ನಿಮ್ಮ ಕಿವಿಗಳನ್ನ ಮುಚ್ಕೊಂಡು ಬಿಟ್ಟಿದ್ದೀರ. ನಿಮ್ಮ ಆಲೋಚನೆಯನ್ನ ಬದಲಾಯಿಸ್ಕೊಳ್ಳೋಕೆ ತಯಾರಿಲ್ಲ. ನೀವು ಯಾವಾಗ್ಲೂ ಪವಿತ್ರಶಕ್ತಿಯನ್ನ ವಿರೋಧಿಸ್ತೀರ. ನಿಮ್ಮ ಪೂರ್ವಜರೂ ಅದನ್ನೇ ಮಾಡಿದ್ರು.+ 52 ನಿಮ್ಮ ಪೂರ್ವಜರು ಯಾವ ಪ್ರವಾದಿಗೆ ಹಿಂಸೆ ಕೊಡದೆ ಹಾಗೇ ಬಿಟ್ರು?+ ಒಬ್ಬ ನೀತಿವಂತ ಬರ್ತಾನೆ ಅಂತ ಮುಂಚೆನೇ ಹೇಳಿದ ಪ್ರವಾದಿಗಳನ್ನ ಅವರು ಕೊಂದುಹಾಕಿದ್ರು.+ ಈಗ ಆ ನೀತಿವಂತನಿಗೆ ನೀವು ಮೋಸ ಮಾಡಿದ್ರಿ, ಅವನನ್ನ ಸಾಯಿಸಿದ್ರಿ.+ 53 ದೇವದೂತರ ಮೂಲಕ ದೇವ್ರೇ ನಿಮಗೆ ನಿಯಮ ಪುಸ್ತಕ ಕೊಟ್ಟನು.+ ಆದ್ರೆ ನೀವು ಅದನ್ನ ಪಾಲಿಸಲಿಲ್ಲ.”
54 ಸ್ತೆಫನನ ಈ ಮಾತುಗಳನ್ನ ಕೇಳಿ ಅಲ್ಲಿದ್ದವ್ರಿಗೆ ತುಂಬ ಕೋಪ ಬಂತು. ಅವನನ್ನ ಕೊಲ್ಲಬೇಕಂತ ಅಂದ್ಕೊಂಡ್ರು. 55 ಆದ್ರೆ ಅವನು ಪವಿತ್ರಶಕ್ತಿಯನ್ನ ಪಡ್ಕೊಂಡು ಆಕಾಶದ ಕಡೆ ನೋಡ್ತಾ ಇದ್ದ. ದೇವರು ಉನ್ನತ ಸ್ಥಾನದಲ್ಲಿ ಕೂತಿರೋದನ್ನ ಮತ್ತು ದೇವ್ರ ಬಲಗಡೆಯಲ್ಲಿ ಯೇಸು ನಿಂತಿರೋದನ್ನ ನೋಡಿದ.+ 56 ಆಗ ಅವನು “ನೋಡಿ, ಆಕಾಶ ತೆರೆದಿದೆ. ಮನುಷ್ಯಕುಮಾರ+ ದೇವ್ರ ಬಲಗಡೆಯಲ್ಲಿ+ ನಿಂತಿರೋದು ನನಗೆ ಕಾಣ್ತಿದೆ” ಅಂದ. 57 ಅದನ್ನ ಕೇಳಿದ ತಕ್ಷಣ ಅವರು ಜೋರಾಗಿ ಕೂಗಾಡ್ತಾ ತಮ್ಮ ಕಿವಿಗಳನ್ನ ಮುಚ್ಕೊಂಡು ಅವನ ಮೇಲೆ ಮುಗಿಬಿದ್ರು. 58 ಅವನನ್ನ ಊರ ಹೊರಗೆ ಎಳ್ಕೊಂಡು ಹೋಗಿ ಕಲ್ಲು ಹೊಡಿಯೋಕೆ ಶುರುಮಾಡಿದ್ರು.+ ಅವನ ಮೇಲೆ ಸುಳ್ಳುಸಾಕ್ಷಿ ಹೇಳಿದವರು+ ತಮ್ಮ ಅಂಗಿಗಳನ್ನ ಸೌಲ ಅನ್ನೋ ಹೆಸ್ರಿನ ಒಬ್ಬ ಯುವಕನ ಕೈಗೆ ಕೊಟ್ರು.+ 59 ಅವರು ಸ್ತೆಫನನಿಗೆ ಕಲ್ಲು ಹೊಡಿತಾ ಇದ್ದಾಗ ಸ್ತೆಫನ ಹೀಗೆ ಪ್ರಾರ್ಥಿಸಿದ “ಪ್ರಭು, ಯೇಸು, ನನ್ನ ಪ್ರಾಣವನ್ನ ನಿನಗೆ ಒಪ್ಪಿಸ್ತಾ ಇದ್ದೀನಿ.” 60 ಆಮೇಲೆ ಮಂಡಿಯೂರಿ “ಯೆಹೋವನೇ,* ಈ ಪಾಪಕ್ಕೆ ಇವ್ರನ್ನ ಶಿಕ್ಷಿಸಬೇಡ” ಅಂತ ಜೋರಾಗಿ ಕೂಗಿದ.+ ಇದನ್ನ ಹೇಳಿ ಪ್ರಾಣಬಿಟ್ಟ.