ಯೆಹೋವನು ತನ್ನ ಮಹಿಮೆಯನ್ನು ದೀನರಿಗೆ ಪ್ರಕಟಪಡಿಸುತ್ತಾನೆ
“ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ.”—ಜ್ಞಾನೋಕ್ತಿ 22:4.
ಸ್ತೆಫನನು “ಪವಿತ್ರಾತ್ಮಭರಿತನೂ ನಂಬಿಕೆಯಿಂದ ತುಂಬಿದವನೂ” ಆಗಿದ್ದನು. ಅವನು ‘ಕೃಪೆಯಿಂದಲೂ ಬಲದಿಂದಲೂ ತುಂಬಿದವನಾಗಿದ್ದನು.’ ಯೇಸುವಿನ ಆರಂಭದ ಶಿಷ್ಯರಲ್ಲಿ ಒಬ್ಬನಾಗಿದ್ದ ಅವನು, ಜನರ ಮಧ್ಯೆ ಮಹಾ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡುತ್ತಾ ಇದ್ದನು. ಒಂದು ಸಂದರ್ಭದಲ್ಲಿ, ಕೆಲವು ವ್ಯಕ್ತಿಗಳು ಅವನೊಂದಿಗೆ ತರ್ಕಮಾಡಲು ಪ್ರಯತ್ನಿಸಿದರು, ಆದರೆ ಅವರು “ಅವನ ಮಾತಿನಲ್ಲಿ ಕಂಡುಬಂದ ಜ್ಞಾನವನ್ನೂ ಪವಿತ್ರಾತ್ಮಶಕ್ತಿಯನ್ನೂ ಎದುರಿಸಲಾರದೆ ಹೋದರು.” (ಅ. ಕೃತ್ಯಗಳು 6:5, 8-10) ಸ್ತೆಫನನು ದೇವರ ವಾಕ್ಯದ ಶ್ರದ್ಧಾಪೂರ್ವಕ ವಿದ್ಯಾರ್ಥಿಯಾಗಿದ್ದನು ಎಂಬುದು ಸುವ್ಯಕ್ತ, ಮತ್ತು ತನ್ನ ದಿನದ ಯೆಹೂದಿ ಧಾರ್ಮಿಕ ಮುಖಂಡರ ಮುಂದೆ ಅದನ್ನು ಸಮರ್ಥಿಸಲಿಕ್ಕಾಗಿ ಕೌಶಲಭರಿತ ರೀತಿಯಲ್ಲಿ ತರ್ಕಮಾಡಿದನು. ಅಪೊಸ್ತಲರ ಕೃತ್ಯಗಳು 7ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ಅವನ ಸವಿವರ ಸಾಕ್ಷ್ಯವು, ದೇವರ ಉದ್ದೇಶದ ಕ್ರಮೇಣವಾದ ಪ್ರಕಟಪಡಿಸುವಿಕೆಯಲ್ಲಿ ಅವನಿಗಿದ್ದ ತೀವ್ರವಾದ ಆಸಕ್ತಿಯನ್ನು ರುಜುಪಡಿಸುತ್ತದೆ.
2 ಯಾರ ಸ್ಥಾನಮಾನ ಹಾಗೂ ಜ್ಞಾನವು ಅವರನ್ನು ಜನಸಾಮಾನ್ಯರಿಗಿಂತಲೂ ಶ್ರೇಷ್ಠರೆಂದು ನೆನಸುವಂತೆ ಮಾಡಿತ್ತೋ ಆ ಧಾರ್ಮಿಕ ಮುಖಂಡರಿಗೆ ಅಸದೃಶವಾಗಿ, ಸ್ತೆಫನನು ದೀನಭಾವದವನಾಗಿದ್ದನು. (ಮತ್ತಾಯ 23:1-7; ಯೋಹಾನ 7:49) ಅವನು ಶಾಸ್ತ್ರವಚನಗಳಲ್ಲಿ ತುಂಬ ಪಾರಂಗತನಾಗಿದ್ದರೂ, ಅಪೊಸ್ತಲರು “ಪ್ರಾರ್ಥನೆಯನ್ನೂ ವಾಕ್ಯೋಪದೇಶವನ್ನೂ ಮಾಡುವುದರಲ್ಲಿ” ನಿರತರಾಗಸಾಧ್ಯವಾಗುವಂತೆ, ‘ಜನರಿಗೆ ಊಟವನ್ನು ಒದಗಿಸಲು ಸಹಾಯಮಾಡುವ’ (ಪರಿಶುದ್ಧ ಬೈಬಲ್a) ನೇಮಕವು ಅವನಿಗೆ ಕೊಡಲ್ಪಟ್ಟಾಗ ಅವನು ಅತ್ಯಾನಂದಪಟ್ಟನು. ಸಹೋದರರ ನಡುವೆ ಸ್ತೆಫನನಿಗೆ ಒಳ್ಳೇ ಹೆಸರಿತ್ತು; ಆದುದರಿಂದಲೇ, ಪ್ರತಿ ದಿನ ಆಹಾರವನ್ನು ವಿತರಿಸುವ ಈ ಕೆಲಸವನ್ನು ನಿರ್ವಹಿಸಲಿಕ್ಕಾಗಿ ಆಯ್ಕೆಮಾಡಲ್ಪಟ್ಟಿದ್ದ ಏಳು ಮಂದಿ ಪ್ರಮಾಣೀಕೃತ ಪುರುಷರಲ್ಲಿ ಇವನೂ ಒಬ್ಬನಾಗಿದ್ದನು. ಅವನು ದೀನಭಾವದಿಂದ ಈ ಜವಾಬ್ದಾರಿಯನ್ನು ಸ್ವೀಕರಿಸಿದನು.—ಅ. ಕೃತ್ಯಗಳು 6:1-6.
3 ಸ್ತೆಫನನ ದೀನಭಾವ ಹಾಗೂ ಅವನ ಆಧ್ಯಾತ್ಮಿಕತೆ ಮತ್ತು ಸಮಗ್ರತೆಯು ಯೆಹೋವನಿಂದ ಗಮನಿಸಲ್ಪಡದೇ ಹೋಗಲಿಲ್ಲ. ಹಿರೀಸಭೆಯ ಯೆಹೂದಿ ಮುಖಂಡರ ಹಗೆಭರಿತ ಗುಂಪಿಗೆ ಸ್ತೆಫನನು ಸಾಕ್ಷಿ ನೀಡುತ್ತಿದ್ದಾಗ, ಅವನ ವಿರೋಧಿಗಳು “ಅವನ ಮುಖವು ದೇವದೂತನ ಮುಖದಂತೆ ಇರುವದನ್ನು ಕಂಡರು.” (ಅ. ಕೃತ್ಯಗಳು 6:15) ಅವನ ಮುಖಭಾವವು ದೇವರ ಸಂದೇಶವಾಹಕನೊಬ್ಬನ ಮುಖಭಾವದಂತಿದ್ದು, ಅದರಲ್ಲಿ ಮಹಿಮಾಯುತ ದೇವರಾಗಿರುವ ಯೆಹೋವನಿಂದ ಬಂದ ಶಾಂತಿಯು ಕಾಣುತ್ತಿತ್ತು. ಹಿರೀಸಭೆಯ ಸದಸ್ಯರಿಗೆ ಧೈರ್ಯದಿಂದ ಸಾಕ್ಷಿ ನೀಡಿದ ಬಳಿಕ, ದೇವರ ಅಪಾತ್ರ ಕೃಪೆಯ ಅದ್ಭುತಕರ ಪ್ರದರ್ಶನದ ಅನುಭವ ಸ್ತೆಫನನಿಗಾಯಿತು. “ಅವನು ಪವಿತ್ರಾತ್ಮಭರಿತನಾಗಿ ಆಕಾಶದ ಕಡೆಗೆ ದೃಷ್ಟಿಸಿ ನೋಡಿ ದೇವರ ಪ್ರಭಾವವನ್ನೂ” ಅಂದರೆ ಮಹಿಮೆಯನ್ನೂ “ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ” ಕಂಡನು. (ಅ. ಕೃತ್ಯಗಳು 7:55) ಸ್ತೆಫನನಿಗಾದರೋ, ಈ ನಯನಮನೋಹರ ದರ್ಶನವು ದೇವಕುಮಾರನೋಪಾದಿ ಹಾಗೂ ಮೆಸ್ಸೀಯನೋಪಾದಿ ಯೇಸುವಿನ ಸ್ಥಾನವನ್ನು ಪುನರ್ದೃಢೀಕರಿಸಿತು. ದೀನಭಾವದವನಾಗಿದ್ದ ಸ್ತೆಫನನನ್ನು ಇದು ಇನ್ನಷ್ಟು ಬಲಪಡಿಸಿತು ಮತ್ತು ತನಗೆ ಯೆಹೋವನ ಅನುಗ್ರಹವಿದೆ ಎಂಬ ಆಶ್ವಾಸನೆಯನ್ನು ಅವನಿಗೆ ನೀಡಿತು.
4 ಸ್ತೆಫನನಿಗೆ ಕೊಡಲ್ಪಟ್ಟ ದರ್ಶನವು ತೋರಿಸುವಂತೆ, ಯಾರು ದೀನಭಾವದವರಾಗಿದ್ದಾರೋ ಮತ್ತು ಯಾರು ಆತನೊಂದಿಗಿರುವ ತಮ್ಮ ಸಂಬಂಧವನ್ನು ಅಮೂಲ್ಯವಾಗಿ ಪರಿಗಣಿಸುತ್ತಾರೋ ಅಂಥ ದೇವಭಯವುಳ್ಳ ವ್ಯಕ್ತಿಗಳಿಗೆ ಯೆಹೋವನು ತನ್ನ ಮಹಿಮೆ ಹಾಗೂ ಉದ್ದೇಶವನ್ನು ಪ್ರಕಟಪಡಿಸುತ್ತಾನೆ. “ಧನ ಮಾನ [“ಮಹಿಮೆ,” NW] ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ” ಎಂದು ಬೈಬಲ್ ತಿಳಿಸುತ್ತದೆ. (ಜ್ಞಾನೋಕ್ತಿ 22:4) ಆದುದರಿಂದ, ನಿಜವಾದ ದೀನಭಾವವು ಏನಾಗಿದೆ, ಈ ಪ್ರಮುಖ ಗುಣವನ್ನು ನಾವು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ, ಮತ್ತು ಜೀವಿತದ ಎಲ್ಲಾ ಕ್ಷೇತ್ರಗಳಲ್ಲಿ ಇದನ್ನು ತೋರಿಸುವುದರಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಾವಶ್ಯಕವಾಗಿದೆ.
ದೀನಭಾವ—ಒಂದು ದೈವಿಕ ಗುಣ
5 ಇಡೀ ವಿಶ್ವದಲ್ಲೇ ಪರಮೋಚ್ಛನಾಗಿರುವ ಮತ್ತು ಮಹಿಮಾವಂತನಾಗಿರುವ ಯೆಹೋವ ದೇವರು, ದೀನಭಾವದಲ್ಲಿ ಅತ್ಯುಚ್ಛ ಮಾದರಿಯಾಗಿದ್ದಾನೆ ಎಂಬುದು ಕೆಲವರಿಗೆ ಆಶ್ಚರ್ಯದ ಸಂಗತಿಯಾಗಿರಬಹುದು. ರಾಜ ದಾವೀದನು ಯೆಹೋವನಿಗೆ ಹೇಳಿದ್ದು: “ನೀನೇ ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ. ನಿನ್ನ ಬಲಗೈ ನನಗೆ ಆಧಾರ; ನಿನ್ನ ಕೃಪಾಕಟಾಕ್ಷವು [“ದೀನಭಾವವು,” NW] ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ.” (ಕೀರ್ತನೆ 18:35) ಯೆಹೋವನನ್ನು ದೀನಭಾವದವನು ಎಂದು ವರ್ಣಿಸುವಾಗ ದಾವೀದನು, “ತಲೆ ಬಗ್ಗಿಸಿಕೊಂಡಿರು” ಎಂಬರ್ಥವುಳ್ಳ ಹೀಬ್ರು ಮೂಲ ಪದವೊಂದನ್ನು ಆಧಾರವಾಗಿ ಉಪಯೋಗಿಸಿದನು. “ದೀನಭಾವ” ಎಂಬ ಪದವಲ್ಲದೆ, ಇದೇ ಮೂಲ ಪದಕ್ಕೆ ಸಂಬಂಧಿಸಿರುವ ಇತರ ಪದಗಳಲ್ಲಿ, “ದೈನ್ಯ,” “ಸೌಮ್ಯಭಾವ,” ಮತ್ತು “ತಗ್ಗಿ ನಡೆಯುವಿಕೆ” ಎಂಬವೂ ಸೇರಿವೆ. ಹೀಗೆ, ಅಪರಿಪೂರ್ಣ ಮನುಷ್ಯನಾದ ದಾವೀದನೊಂದಿಗೆ ವ್ಯವಹರಿಸಲಿಕ್ಕಾಗಿ ಯೆಹೋವನು ತನ್ನನ್ನು ತಗ್ಗಿಸಿಕೊಂಡಾಗ ಮತ್ತು ಅವನನ್ನು ತನ್ನ ಪ್ರತಿನಿಧಿ ರಾಜನೋಪಾದಿ ಉಪಯೋಗಿಸಿದಾಗ ಆತನು ದೀನಭಾವವನ್ನು ತೋರಿಸಿದನು. ಕೀರ್ತನೆ 18ರ ಮೇಲ್ಬರಹವು ತೋರಿಸುವಂತೆ, ಯೆಹೋವನು ದಾವೀದನನ್ನು “ಸೌಲನ ಕೈಯಿಂದಲೂ ಎಲ್ಲಾ ಶತ್ರುಗಳ ಕೈಯಿಂದಲೂ” ತಪ್ಪಿಸಿ ಕಾಪಾಡುವ ಮೂಲಕ ಅವನನ್ನು ಸಂರಕ್ಷಿಸಿದನು ಮತ್ತು ಬೆಂಬಲಿಸಿದನು. ತದ್ರೀತಿಯಲ್ಲಿ, ಒಬ್ಬ ರಾಜನೋಪಾದಿ ತಾನು ಸಾಧಿಸಬಹುದಾದ ಹಿರಿಮೆ ಅಥವಾ ಮಹಿಮೆಯು, ಯೆಹೋವನು ದೀನಭಾವದಿಂದ ತನ್ನ ಪರವಾಗಿ ನಡಿಸುವ ಕ್ರಿಯೆಯ ಮೇಲೆ ಹೊಂದಿಕೊಂಡಿದೆ ಎಂಬುದು ದಾವೀದನಿಗೆ ತಿಳಿದಿತ್ತು. ಈ ಗ್ರಹಿಕೆಯು ದಾವೀದನಿಗೆ ದೀನಭಾವದಿಂದಿರಲು ಸಹಾಯಮಾಡಿತು.
6 ನಮ್ಮ ಕುರಿತಾಗಿ ಏನು? ಯೆಹೋವನು ನಮಗೆ ಸತ್ಯವನ್ನು ಕಲಿಸುವ ಆಯ್ಕೆಮಾಡಿದ್ದಾನೆ, ಮತ್ತು ತನ್ನ ಸಂಸ್ಥೆಯ ಮೂಲಕ ಆತನು ನಮಗೆ ವಿಶೇಷ ಸೇವಾ ಸುಯೋಗಗಳನ್ನು ದಯಪಾಲಿಸಿರಬಹುದು ಅಥವಾ ತನ್ನ ಚಿತ್ತವನ್ನು ಪೂರೈಸುವ ಕೆಲಸದಲ್ಲಿ ನಮ್ಮನ್ನು ಯಾವುದೋ ಒಂದು ರೀತಿಯಲ್ಲಿ ಉಪಯೋಗಿಸಿರಬಹುದು. ಈ ಎಲ್ಲಾ ಸುಯೋಗಗಳ ಕುರಿತು ನಮಗೆ ಯಾವ ಅನಿಸಿಕೆಯಿರಬೇಕು? ಇದು ನಮ್ಮನ್ನು ದೀನರನ್ನಾಗಿ ಮಾಡಬೇಕಲ್ಲವೋ? ನಾವು ಯೆಹೋವನ ದೀನಭಾವಕ್ಕಾಗಿ ಕೃತಜ್ಞರಾಗಿದ್ದು, ಖಂಡಿತವಾಗಿಯೂ ಅವನತಿಗೆ ನಡೆಸಸಾಧ್ಯವಿರುವಂಥ ಸ್ವತಃ ನಮ್ಮನ್ನು ಮೇಲೇರಿಸಿಕೊಳ್ಳುವ ಗುಣವನ್ನು ತೋರಿಸುವುದರಿಂದ ದೂರವಿರಬೇಕಲ್ಲವೋ?—ಜ್ಞಾನೋಕ್ತಿ 16:18; 29:23.
7 ಯೆಹೋವನು ಅಪರಿಪೂರ್ಣ ಮಾನವರೊಂದಿಗೆ ವ್ಯವಹರಿಸುವ ಮೂಲಕ ಅತ್ಯಧಿಕ ದೀನಭಾವವನ್ನು ತೋರಿಸಿದ್ದಾನೆ ಮಾತ್ರವಲ್ಲ, ಯಾರು ದೀನಮನಸ್ಸಿನವರಾಗಿದ್ದಾರೋ ಅಂಥವರಿಗೆ ಕರುಣೆಯನ್ನು ತೋರಿಸಲು, ಯಾರು ತಮ್ಮನ್ನು ತಗ್ಗಿಸಿಕೊಳ್ಳುತ್ತಾರೋ ಅಂಥವರನ್ನು ಮೇಲೆತ್ತಲು ಅಥವಾ ಅವರನ್ನು ಉನ್ನತಿಗೇರಿಸಲು ಸಹ ಆತನು ಸಿದ್ಧಮನಸ್ಸನ್ನು ತೋರಿಸಿದ್ದಾನೆ. (ಕೀರ್ತನೆ 113:4-7) ಉದಾಹರಣೆಗೆ, ಯೆಹೂದದ ರಾಜನಾದ ಮನಸ್ಸೆಯನ್ನು ತೆಗೆದುಕೊಳ್ಳಿ. ಒಬ್ಬ ರಾಜನೋಪಾದಿ ಅವನಿಗಿದ್ದ ಉನ್ನತ ಸ್ಥಾನವನ್ನು ಅವನು ದುರುಪಯೋಗಿಸಿ, ಸುಳ್ಳಾರಾಧನೆಯನ್ನು ಪ್ರವರ್ಧಿಸಿದನು ಮತ್ತು “ಯೆಹೋವನು ಕೆಟ್ಟದ್ದು ಎಂದು ಹೇಳಿದ್ದನ್ನೆಲ್ಲಾ ಅವನು ಮಾಡಿದ್ದರಿಂದ [ಯೆಹೋವನು] ಅವನ ಮೇಲೆ ಬಹಳವಾಗಿ ಕೋಪಗೊಂಡನು.” (2 ಪೂರ್ವಕಾಲವೃತ್ತಾಂತ 33:6, ಪರಿಶುದ್ಧ ಬೈಬಲ್) ಅಂತಿಮವಾಗಿ, ಅಶ್ಶೂರದ ಅರಸನು ಮನಸ್ಸೆಯ ಸಿಂಹಾಸನವನ್ನು ಕಸಿದುಕೊಳ್ಳುವಂತೆ ಅನುಮತಿಸುವ ಮೂಲಕ ಯೆಹೋವನು ಅವನಿಗೆ ಶಿಕ್ಷೆಯನ್ನು ವಿಧಿಸಿದನು. ಸೆರೆಮನೆಯಲ್ಲಿ ಮನಸ್ಸೆಯು ‘ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನಿಗೆ ಪ್ರಾರ್ಥಿಸಿದನು.’ ಆಗ ಯೆಹೋವನು ಅವನನ್ನು ಯೆರೂಸಲೇಮಿನಲ್ಲಿದ್ದ ಸಿಂಹಾಸನಕ್ಕೆ ಪುನಃಸ್ಸ್ಥಾಪಿಸಿದನು, ಮತ್ತು ‘ಯೆಹೋವನೇ [ಸತ್ಯ] ದೇವರೆಂಬದು ಮನಸ್ಸೆಗೆ ಮಂದಟ್ಟಾಯಿತು.’ (2 ಪೂರ್ವಕಾಲವೃತ್ತಾಂತ 33:11-13) ಹೌದು, ಕಟ್ಟಕಡೆಗೂ ಮನಸ್ಸೆಯ ದೀನ ಮನೋಭಾವವು ಯೆಹೋವನಿಗೆ ಮೆಚ್ಚಿಗೆಯಾಯಿತು; ಇದಕ್ಕೆ ಪ್ರತಿಯಾಗಿ ಮನಸ್ಸೆಯನ್ನು ಕ್ಷಮಿಸುವ ಮೂಲಕ ಮತ್ತು ಅವನನ್ನು ಪುನಃ ಅರಸನನ್ನಾಗಿ ಮಾಡುವ ಮೂಲಕ ಯೆಹೋವನು ದೀನಭಾವವನ್ನು ತೋರಿಸಿದನು.
8 ಕ್ಷಮಿಸಲು ಯೆಹೋವನಿಗಿದ್ದ ಸಿದ್ಧಮನಸ್ಸು ಮತ್ತು ಮನಸ್ಸೆಯ ಪಶ್ಚಾತ್ತಾಪದ ಮನೋಭಾವವು, ದೀನಭಾವದ ಕುರಿತು ನಮಗೆ ಪ್ರಾಮುಖ್ಯ ಪಾಠಗಳನ್ನು ಕಲಿಸುತ್ತದೆ. ನಮಗೆ ಕೋಪವನ್ನು ಉಂಟುಮಾಡಿರಬಹುದಾದ ವ್ಯಕ್ತಿಗಳನ್ನು ನಾವು ಉಪಚರಿಸುವ ವಿಧ ಮತ್ತು ಪಾಪಮಾಡಿದಾಗ ನಾವು ತೋರಿಸುವ ಮನೋಭಾವವು, ಯೆಹೋವನು ನಮ್ಮೊಂದಿಗೆ ವ್ಯವಹರಿಸುವ ವಿಧದ ಮೇಲೆ ಪರಿಣಾಮ ಬೀರಸಾಧ್ಯವಿದೆ ಎಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದುವೇಳೆ ನಾವು ಮನಃಪೂರ್ವಕವಾಗಿ ಇತರರ ಕುಂದುಕೊರತೆಗಳನ್ನು ಕ್ಷಮಿಸುವಲ್ಲಿ ಮತ್ತು ನಮ್ಮ ತಪ್ಪುಗಳನ್ನು ದೀನಭಾವದಿಂದ ಒಪ್ಪಿಕೊಳ್ಳುವಲ್ಲಿ, ಯೆಹೋವನ ಕರುಣೆಗಾಗಿ ನಾವು ಆತನ ಕಡೆಗೆ ನೋಡಸಾಧ್ಯವಿದೆ.—ಮತ್ತಾಯ 5:23, 24; 6:12.
ದೈವಿಕ ಮಹಿಮೆಯು ದೀನಭಾವದವರಿಗೆ ಪ್ರಕಟಪಡಿಸಲ್ಪಟ್ಟದ್ದು
9 ಆದರೂ, ದೀನಭಾವ ಹಾಗೂ ಇದಕ್ಕೆ ಸಂಬಂಧಿಸಿದ ಗುಣಗಳನ್ನು, ದೌರ್ಬಲ್ಯದ ಸಂಕೇತದೋಪಾದಿ ಅಥವಾ ಯಾವುದು ತಪ್ಪಾಗಿದೆಯೋ ಅದನ್ನು ಮನ್ನಿಸಲಿಕ್ಕಾಗಿರುವ ಒಂದು ಪ್ರವೃತ್ತಿಯೋಪಾದಿ ಅಪಾರ್ಥಮಾಡಿಕೊಳ್ಳಬಾರದು. ಪವಿತ್ರ ಶಾಸ್ತ್ರವು ಸಾಕ್ಷ್ಯ ನೀಡುವಂತೆ, ಯೆಹೋವನು ದೀನಭಾವದವನಾಗಿದ್ದಾನೆ, ಆದರೂ, ಸನ್ನಿವೇಶಗಳು ಅಗತ್ಯಪಡಿಸುವಾಗ ಆತನು ನೀತಿಭರಿತ ಕೋಪವನ್ನು ಹಾಗೂ ಭಯಭಕ್ತಿಪ್ರೇರಕ ಶಕ್ತಿಯನ್ನು ತೋರ್ಪಡಿಸುತ್ತಾನೆ. ತನ್ನ ದೀನಭಾವದ ಕಾರಣದಿಂದಲೇ ಯೆಹೋವನು ದೀನ ಮನಸ್ಸುಳ್ಳವರಿಗೆ ಅನುಗ್ರಹಭರಿತ ಗಮನವನ್ನು, ಅಥವಾ ವಿಶೇಷ ಪರಿಗಣನೆಯನ್ನು ತೋರಿಸುತ್ತಾನೆ, ಆದರೆ ಆತನು ಅಹಂಕಾರಿಗಳಿಂದ ದೂರಸರಿಯುತ್ತಾನೆ. (ಕೀರ್ತನೆ 138:6) ದೀನಭಾವವುಳ್ಳ ತನ್ನ ಸೇವಕರಿಗೆ ಯೆಹೋವನು ಹೇಗೆ ವಿಶೇಷ ಪರಿಗಣನೆಯನ್ನು ತೋರಿಸಿದ್ದಾನೆ?
10 ತನ್ನ ಕ್ಲುಪ್ತ ಕಾಲದಲ್ಲಿ ಮತ್ತು ತಾನು ಆಯ್ಕೆಮಾಡಿರುವ ಸಂವಾದ ಮಾಧ್ಯಮದ ಮೂಲಕ ಯೆಹೋವನು ದೀನ ಜನರಿಗೆ ತನ್ನ ಉದ್ದೇಶಗಳನ್ನು ಹೇಗೆ ಪೂರೈಸುವನೆಂಬುದರ ಕುರಿತಾದ ವಿವರಗಳನ್ನು ಪ್ರಕಟಪಡಿಸಿದ್ದಾನೆ. ಯಾರು ಹೆಮ್ಮೆಯಿಂದ ಮಾನವ ವಿವೇಕ ಅಥವಾ ಆಲೋಚನೆಯ ಮೇಲೆ ಅವಲಂಬಿತರಾಗಿದ್ದಾರೋ ಅಥವಾ ಹಟಮಾರಿತನದಿಂದ ಅದಕ್ಕೆ ಅಂಟಿಕೊಂಡಿದ್ದಾರೋ ಅಂಥವರಿಗೆ ಈ ಮಹಿಮಾಯುತ ವಿವರಗಳು ಮರೆಯಾಗಿ ಉಳಿದಿವೆ. (1 ಕೊರಿಂಥ 2:6-10) ಆದರೆ, ಯೆಹೋವನ ಉದ್ದೇಶದ ನಿಷ್ಕೃಷ್ಟ ತಿಳಿವಳಿಕೆಯನ್ನು ಪಡೆದುಕೊಂಡಿರುವ ದೀನಭಾವದ ಜನರು ಯೆಹೋವನ ಭಾವಪರವಶಗೊಳಿಸುವಂಥ ಮಹಿಮೆಯನ್ನು ಇನ್ನಷ್ಟು ಅಮೂಲ್ಯವಾಗಿ ಪರಿಗಣಿಸುವುದರಿಂದ ಆತನನ್ನು ಇನ್ನಷ್ಟು ಮಹಿಮೆಪಡಿಸುವಂತೆ ಪ್ರಚೋದಿಸಲ್ಪಡುತ್ತಾರೆ.
11 ಪ್ರಥಮ ಶತಮಾನದಲ್ಲಿ, ಕ್ರೈಸ್ತರೆಂದು ಹೇಳಿಕೊಂಡಂಥ ಕೆಲವರನ್ನು ಸೇರಿಸಿ ಇನ್ನೂ ಅನೇಕರು ದೀನಭಾವದ ಕೊರತೆಯನ್ನು ತೋರಿಸಿದರು ಮತ್ತು ದೇವರ ಉದ್ದೇಶದ ಕುರಿತು ಅಪೊಸ್ತಲ ಪೌಲನು ಅವರಿಗೆ ಏನನ್ನು ಪ್ರಕಟಪಡಿಸಿದನೋ ಅದು ಅವರನ್ನು ಎಡವಿಸಿತು. ಪೌಲನು “ಅನ್ಯಜನರಿಗೆ ಅಪೊಸ್ತಲ”ನಾದನು, ಆದರೆ ಇದು ಅವನ ಜನಾಂಗ, ಶಿಕ್ಷಣ, ವಯಸ್ಸು, ಅಥವಾ ಸತ್ಕಾರ್ಯಗಳ ದೀರ್ಘವಾದ ದಾಖಲೆಯ ಕಾರಣದಿಂದಲ್ಲ. (ರೋಮಾಪುರ 11:13) ಅನೇಕವೇಳೆ, ಶಾರೀರಿಕ ಮನೋಭಾವವಿರುವ ವ್ಯಕ್ತಿಗಳು, ಯೆಹೋವನು ಯಾರನ್ನು ತನ್ನ ಸಾಧನವಾಗಿ ಉಪಯೋಗಿಸಬೇಕು ಎಂಬುದನ್ನು ಈ ಅಂಶಗಳೇ ನಿರ್ಧರಿಸುತ್ತವೆ ಎಂದು ನೆನಸುತ್ತಾರೆ. (1 ಕೊರಿಂಥ 1:26-29; 3:1; ಕೊಲೊಸ್ಸೆ 2:18, 19) ಆದರೆ, ಪೌಲನು ಯೆಹೋವನ ಆಯ್ಕೆಯಾಗಿದ್ದನು ಮತ್ತು ಇದು ಆತನ ಪ್ರೀತಿಪರ ದಯೆ ಹಾಗೂ ನೀತಿಭರಿತ ಉದ್ದೇಶಕ್ಕೆ ಹೊಂದಿಕೆಯಲ್ಲಿತ್ತು. (1 ಕೊರಿಂಥ 15:8-10) ಪೌಲನು ಯಾರನ್ನು “ಅತಿಶ್ರೇಷ್ಠರಾದ ಅಪೊಸ್ತಲರು” ಎಂದು ವರ್ಣಿಸಿದನೋ ಅವರು ಹಾಗೂ ಇತರ ವಿರೋಧಿಗಳು, ಪೌಲನನ್ನು ಮತ್ತು ಅವನು ಶಾಸ್ತ್ರಗಳಿಂದ ತರ್ಕಿಸುತ್ತಿದ್ದ ವಿಷಯಗಳನ್ನು ಅಂಗೀಕರಿಸಲು ನಿರಾಕರಿಸಿದರು. ಅವರಲ್ಲಿದ್ದ ದೀನಭಾವದ ಕೊರತೆಯು, ಯೆಹೋವನು ತನ್ನ ಉದ್ದೇಶವನ್ನು ಪೂರೈಸುವ ಮಹಿಮಾಯುತ ವಿಧದ ಕುರಿತಾದ ಜ್ಞಾನ ಹಾಗೂ ತಿಳಿವಳಿಕೆಯನ್ನು ಪಡೆದುಕೊಳ್ಳುವುದರಿಂದ ಅವರನ್ನು ತಡೆಯಿತು. ತನ್ನ ಚಿತ್ತವನ್ನು ಪೂರೈಸಲಿಕ್ಕಾಗಿ ಯಾರನ್ನು ಉಪಯೋಗಿಸಬೇಕೆಂದು ಯೆಹೋವನು ಆಯ್ಕೆಮಾಡುತ್ತಾನೋ ಅವರನ್ನು ನಾವೆಂದಿಗೂ ಕಡೆಗಣಿಸದಿರೋಣ ಅಥವಾ ಅವರ ಬಗ್ಗೆ ಅವಸರದ ತೀರ್ಮಾನವನ್ನು ಮಾಡದಿರೋಣ.—2 ಕೊರಿಂಥ 11:4-6.
12 ಇನ್ನೊಂದು ಕಡೆಯಲ್ಲಿ, ಯಾವ ರೀತಿಯಲ್ಲಿ ದೀನಭಾವದ ಜನರು ದೇವರ ಮಹಿಮೆಯ ಒಂದು ನಸುನೋಟವನ್ನು ಪಡೆದುಕೊಳ್ಳುವಂತೆ ಅನುಗ್ರಹಿಸಲ್ಪಟ್ಟರು ಎಂಬುದನ್ನು ಎತ್ತಿತೋರಿಸುವಂಥ ಅನೇಕ ಬೈಬಲ್ ಉದಾಹರಣೆಗಳಿವೆ. ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ “ಬಹುಸಾತ್ವಿಕ”ನಾಗಿದ್ದ ಮೋಶೆಯು ದೇವರ ಮಹಿಮೆಯನ್ನು ನೋಡಿದನು ಮತ್ತು ಆತನೊಂದಿಗೆ ಅನ್ಯೋನ್ಯ ಸಂಬಂಧದಲ್ಲಿ ಆನಂದಿಸಿದನು. (ಅರಣ್ಯಕಾಂಡ 12:3) ಒಬ್ಬ ನಮ್ರ ಕುರುಬನೋಪಾದಿ 40 ವರ್ಷಗಳನ್ನು—ಇವುಗಳಲ್ಲಿ ಹೆಚ್ಚಿನ ಸಮಯವನ್ನು ಅರೇಬಿಯನ್ ದ್ವೀಪಕಲ್ಪದಲ್ಲಿ—ಕಳೆದ ಈ ದೀನ ವ್ಯಕ್ತಿಯು, ಸೃಷ್ಟಿಕರ್ತನಿಂದ ಅನೇಕ ವಿಧಗಳಲ್ಲಿ ಅಪಾರ ಅನುಗ್ರಹಕ್ಕೆ ಪಾತ್ರನಾದನು. (ವಿಮೋಚನಕಾಂಡ 6:12, 30) ಯೆಹೋವನ ಬೆಂಬಲದಿಂದ ಮೋಶೆಯು ಇಸ್ರಾಯೇಲ್ ಜನಾಂಗಕ್ಕೆ ದೇವರ ಪ್ರತಿನಿಧಿಯೂ ಅದರ ಮುಖ್ಯ ವ್ಯವಸ್ಥಾಪಕನೂ ಆದನು. ಅವನು ದೇವರೊಂದಿಗೆ ಮತ್ತು ದೇವರು ಅವನೊಂದಿಗೆ ನಡೆಸಿದ ಸಂವಾದದಲ್ಲಿಯೂ ಆನಂದಿಸಿದನು. ಒಂದು ದರ್ಶನದ ಮೂಲಕ ಅವನು “ಯೆಹೋವನ ಸ್ವರೂಪ”ವನ್ನು ಕಂಡನು. (ಅರಣ್ಯಕಾಂಡ 12:7, 8; ವಿಮೋಚನಕಾಂಡ 24:10, 11) ದೇವರ ಈ ದೀನಭಾವದ ಸೇವಕನನ್ನು ಮತ್ತು ಪ್ರತಿನಿಧಿಯನ್ನು ಅಂಗೀಕರಿಸಿದವರು ಸಹ ಆಶೀರ್ವಾದಪಾತ್ರರಾದರು. ತದ್ರೀತಿಯಲ್ಲಿ, ಮೋಶೆಗಿಂತ ದೊಡ್ಡ ಪ್ರವಾದಿಯಾಗಿರುವ ಯೇಸುವನ್ನು ಹಾಗೂ ಅವನಿಂದ ನೇಮಿಸಲ್ಪಟ್ಟಿರುವ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು’ ಅಂಗೀಕರಿಸಿ ಅವರಿಗೆ ವಿಧೇಯರಾಗುವಲ್ಲಿ ನಾವು ಸಹ ಆಶೀರ್ವದಿಸಲ್ಪಡುವೆವು.—ಮತ್ತಾಯ 24:45, 46; ಅ. ಕೃತ್ಯಗಳು 3:22.
13 ‘ಒಬ್ಬ ರಕ್ಷಕನ, ಕರ್ತನಾಗಿರುವ ಕ್ರಿಸ್ತನ’ ಜನನದ ಕುರಿತಾದ ಶುಭಸಮಾಚಾರವನ್ನು ದೇವದೂತನ ಮೂಲಕ ಪ್ರಕಟಿಸುವುದರೊಂದಿಗೆ, ಯಾರಿಗೆ ‘ಯೆಹೋವನ ಪ್ರಭೆಯು ಪ್ರಕಾಶಿಸಿತು’? ಅಹಂಕಾರದಿಂದ ತುಂಬಿದ್ದ ಧಾರ್ಮಿಕ ಮುಖಂಡರಿಗಲ್ಲ ಅಥವಾ ದೊಡ್ಡ ಸ್ಥಾನಮಾನಗಳಲ್ಲಿದ್ದ ವ್ಯಕ್ತಿಗಳಿಗಲ್ಲ, ಬದಲಾಗಿ “ಹೊಲದಲ್ಲಿದ್ದುಕೊಂಡು ರಾತ್ರಿಯಲ್ಲಿ ತಮ್ಮ ಕುರೀಹಿಂಡನ್ನು” ಕಾಯುತ್ತಿದ್ದ ದೀನಭಾವದ ಕುರುಬರಿಗೇ. (ಲೂಕ 2:8-11) ಈ ವ್ಯಕ್ತಿಗಳು ತಮ್ಮ ಅರ್ಹತೆಗಳು ಮತ್ತು ಕೆಲಸಕ್ಕಾಗಿ ತುಂಬ ಹೆಸರುವಾಸಿಯಾಗಿದ್ದ ವ್ಯಕ್ತಿಗಳೇನಾಗಿರಲಿಲ್ಲ. ಆದರೂ, ಇವರನ್ನು ಯೆಹೋವನು ಗಮನಿಸಿದನು ಮತ್ತು ಮೆಸ್ಸೀಯನ ಜನನದ ಕುರಿತಾದ ಮಾಹಿತಿಯನ್ನು ಮೊದಲು ತಿಳಿಯಪಡಿಸಲು ಈ ವ್ಯಕ್ತಿಗಳನ್ನೇ ಆತನು ಆಯ್ಕೆಮಾಡಿದನು. ಹೌದು, ಯೆಹೋವನು ತನ್ನ ಮಹಿಮೆಯನ್ನು ದೀನಭಾವ ಹಾಗೂ ದೇವಭಯವಿರುವ ಜನರಿಗೆ ಪ್ರಕಟಪಡಿಸುತ್ತಾನೆ.
14 ಈ ಉದಾಹರಣೆಗಳು ನಮಗೆ ಏನನ್ನು ಕಲಿಸುತ್ತವೆ? ಯೆಹೋವನು ದೀನಭಾವದ ಜನರಿಗೆ ಅನುಗ್ರಹವನ್ನು ತೋರಿಸುತ್ತಾನೆ ಮತ್ತು ತನ್ನ ಉದ್ದೇಶದ ಕುರಿತಾದ ಜ್ಞಾನ ಹಾಗೂ ತಿಳಿವಳಿಕೆಯನ್ನು ಅವರಿಗೆ ಪ್ರಕಟಪಡಿಸುತ್ತಾನೆ ಎಂಬುದನ್ನು ಇವು ರುಜುಪಡಿಸುತ್ತವೆ. ಕೆಲವು ಜನರು ಅಪೇಕ್ಷಿಸುವಂಥ ರೀತಿಯ ಅರ್ಹತೆಗಳು ಇಲ್ಲದಿರುವ ವ್ಯಕ್ತಿಗಳನ್ನು ಆರಿಸಿಕೊಂಡು, ಅವರನ್ನು ತನ್ನ ಮಹಿಮಾಯುತ ಉದ್ದೇಶವನ್ನು ಇತರರಿಗೆ ತಿಳಿಯಪಡಿಸುವ ಸಾಧನವಾಗಿ ಆತನು ಉಪಯೋಗಿಸುತ್ತಾನೆ. ಇದು ನಾವು ಯೆಹೋವನಿಂದ, ಆತನ ಪ್ರವಾದನ ವಾಕ್ಯದಿಂದ, ಮತ್ತು ಆತನ ಸಂಸ್ಥೆಯಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳುತ್ತಾ ಮುಂದುವರಿಯುವಂತೆ ನಮ್ಮನ್ನು ಪ್ರಚೋದಿಸಬೇಕು. ತನ್ನ ಮಹಿಮಾಯುತ ಉದ್ದೇಶದ ಪ್ರಕಟಪಡಿಸುವಿಕೆಯ ಕುರಿತು ಯೆಹೋವನು ತನ್ನ ದೀನಭಾವದ ಸೇವಕರಿಗೆ ಸತತವಾಗಿ ಮಾಹಿತಿಯನ್ನು ಒದಗಿಸುತ್ತಾ ಇರುವನು ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ. ಪ್ರವಾದಿಯಾದ ಆಮೋಸನು ಘೋಷಿಸಿದ್ದು: “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು.”—ಆಮೋಸ 3:7.
ದೀನಭಾವವನ್ನು ಬೆಳೆಸಿಕೊಳ್ಳಿರಿ ಮತ್ತು ದೇವರ ಅನುಗ್ರಹಕ್ಕೆ ಪಾತ್ರರಾಗಿ
15 ನಿತ್ಯವಾದ ದೈವಿಕ ಅನುಗ್ರಹವನ್ನು ಪಡೆದುಕೊಳ್ಳಬೇಕಾದರೆ, ನಾವು ದೀನಭಾವದವರಾಗಿ ಉಳಿಯಬೇಕು. ಜೀವಿತದ ಯಾವುದೊ ಹಂತದಲ್ಲಿ ದೀನಭಾವದವನಾಗಿದ್ದ ವ್ಯಕ್ತಿಯೊಬ್ಬನು ಸದಾ ದೀನಭಾವದವನಾಗಿಯೇ ಉಳಿಯುವನು ಎಂದು ಹೇಳಸಾಧ್ಯವಿಲ್ಲ. ಒಬ್ಬ ವ್ಯಕ್ತಿಯು ದೀನಭಾವವನ್ನು ಕಳೆದುಕೊಳ್ಳುವ ಮತ್ತು ಅಹಂಕಾರ ಹಾಗೂ ಗರ್ವಕ್ಕೆ ಒಳಗಾಗುವ ಸಾಧ್ಯತೆಯಿದೆ, ಮತ್ತು ಇವು ದುರಭಿಮಾನ ಹಾಗೂ ವಿಪತ್ತಿಗೆ ನಡೆಸಬಲ್ಲವು. ಇಸ್ರಾಯೇಲಿನ ಪ್ರಥಮ ಅರಸನಾಗಿ ಅಭಿಷೇಕಿಸಲ್ಪಟ್ಟ ಸೌಲನ ವಿಷಯದಲ್ಲಿ ಇದೇ ಸಂಭವಿಸಿತು. ಆರಂಭದಲ್ಲಿ ಅವನು ಆಯ್ಕೆಮಾಡಲ್ಪಟ್ಟಾಗ, ಅವನ ‘ದೃಷ್ಟಿಯಲ್ಲೇ ಅವನು ಅಲ್ಪನಾಗಿದ್ದನು.’ (1 ಸಮುವೇಲ 15:17) ಆದರೆ, ಕೇವಲ ಎರಡು ವರ್ಷಗಳ ವರೆಗೆ ರಾಜ್ಯಭಾರ ನಡೆಸಿದ ಬಳಿಕ ಅವನು ದುರಭಿಮಾನದಿಂದ ಕ್ರಿಯೆಗೈದನು. ಪ್ರವಾದಿಯಾದ ಸಮುವೇಲನ ಮೂಲಕ ಯಜ್ಞಗಳನ್ನು ಅರ್ಪಿಸಲಿಕ್ಕಾಗಿದ್ದ ಯೆಹೋವನ ಏರ್ಪಾಡನ್ನು ಅವನು ಕಡೆಗಣಿಸಿದನು, ಮತ್ತು ತನ್ನಿಷ್ಟ ಬಂದಂತೆ ಕಾರ್ಯನಡಿಸಿದ್ದಕ್ಕೆ ಅನೇಕ ನೆಪಗಳನ್ನು ನೀಡಿದನು. (1 ಸಮುವೇಲ 13:1, 8-14) ಅವನಲ್ಲಿದ್ದ ದೀನಭಾವದ ಕೊರತೆಯನ್ನು ಸುಸ್ಪಷ್ಟವಾಗಿ ಬಯಲುಪಡಿಸಿದಂಥ ಘಟನೆಗಳ ಸರಮಾಲೆಯಲ್ಲಿ ಇದು ಕೇವಲ ಆರಂಭವಾಗಿತ್ತಷ್ಟೆ. ಇದರ ಫಲಿತಾಂಶವಾಗಿ ಅವನು ದೇವರಾತ್ಮವನ್ನು ಹಾಗೂ ದೇವರ ಅನುಗ್ರಹವನ್ನು ಕಳೆದುಕೊಂಡನು, ಮತ್ತು ಕ್ರಮೇಣ ಇದು ಅವನ ಅಪಮಾನಕರ ಮರಣಕ್ಕೆ ಮುನ್ನಡಿಸಿತು. (1 ಸಮುವೇಲ 15:3-19, 26; 28:6; 31:4) ಇದರಿಂದ ಈ ಪಾಠವನ್ನು ಕಲಿಯಬಹುದು: ನಾವು ದೀನಭಾವವನ್ನು ಹಾಗೂ ಅಧೀನತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಸ್ವಪ್ರಾಮುಖ್ಯತೆಯ ಅನಿಸಿಕೆಗಳನ್ನು ನಿಗ್ರಹಿಸಬೇಕು, ಮತ್ತು ಹೀಗೆ ಯೆಹೋವನ ಅಸಮ್ಮತಿಯನ್ನು ತರಸಾಧ್ಯವಿರುವ ಯಾವುದೇ ದುರಭಿಮಾನದ ಕೃತ್ಯಗಳಿಂದ ದೂರವಿರಬೇಕು.
16 ದೀನಭಾವವು ದೇವರಾತ್ಮದಿಂದ ಉಂಟಾಗುವ ಫಲದ ಒಂದು ಭಾಗವಾಗಿ ಪಟ್ಟಿಮಾಡಲ್ಪಟ್ಟಿಲ್ಲವಾದರೂ, ಇದು ಬೆಳೆಸಿಕೊಳ್ಳಲೇಬೇಕಾಗಿರುವ ಒಂದು ದೈವಿಕ ಗುಣವಾಗಿದೆ. (ಗಲಾತ್ಯ 5:22, 23; ಕೊಲೊಸ್ಸೆ 3:10, 12) ಇದರಲ್ಲಿ ಮಾನಸಿಕ ಸ್ಥಿತಿ, ಅಂದರೆ ಸ್ವತಃ ನಮ್ಮನ್ನು ಹಾಗೂ ಇತರರನ್ನು ನಾವು ಹೇಗೆ ಪರಿಗಣಿಸುತ್ತೇವೆ ಎಂಬುದು ಒಳಗೂಡಿರುವುದರಿಂದ, ದೀನಭಾವವನ್ನು ಬೆಳೆಸಿಕೊಳ್ಳುವುದು ಉದ್ದೇಶಪೂರ್ವಕ ಪ್ರಯತ್ನವನ್ನು ಅಗತ್ಯಪಡಿಸುತ್ತದೆ. ಯೆಹೋವನೊಂದಿಗಿನ ಹಾಗೂ ಜೊತೆ ಮಾನವರೊಂದಿಗಿನ ನಮ್ಮ ಸಂಬಂಧದ ಕುರಿತು ಗಂಭೀರವಾಗಿ ಆಲೋಚಿಸುವುದು ಹಾಗೂ ಧ್ಯಾನಿಸುವುದು, ನಾವು ದೀನಭಾವದವರಾಗಿ ಉಳಿಯುವಂತೆ ಸಹಾಯಮಾಡಬಲ್ಲದು. ದೇವರ ದೃಷ್ಟಿಯಲ್ಲಿ ಅಪರಿಪೂರ್ಣ ನರಜಾತಿಯೆಲ್ಲಾ, ಸ್ವಲ್ಪ ಕಾಲ ಬೆಳೆದು ನಂತರ ಬಾಡಿ ಒಣಗಿಹೋಗುವ ಹುಲ್ಲಿನಂತಿದೆ. ಮಾನವರೆಲ್ಲಾ ಒಂದು ಹೊಲದಲ್ಲಿನ ಮಿಡತೆಗಳಂತಿದ್ದಾರೆ. (ಯೆಶಾಯ 40:6, 7, 22) ಹುಲ್ಲಿನ ಒಂದು ಗರಿಯು ಬೇರೆ ಗರಿಗಳಿಗಿಂತ ಸ್ವಲ್ಪ ಉದ್ದವಿದ್ದ ಮಾತ್ರಕ್ಕೆ ತನ್ನ ಬಗ್ಗೆ ಜಂಬಪಟ್ಟುಕೊಳ್ಳಲು ಅದಕ್ಕೆ ಕಾರಣವಿದೆಯೋ? ಒಂದು ಮಿಡತೆಯು ಇತರ ಮಿಡತೆಗಳಿಗಿಂತ ಸ್ವಲ್ಪ ಹೆಚ್ಚು ದೂರದ ವರೆಗೆ ಹಾರಸಾಧ್ಯವಿರುವ ಮಾತ್ರಕ್ಕೆ ತನ್ನ ಸಾಮರ್ಥ್ಯದ ಕುರಿತು ಕೊಚ್ಚಿಕೊಳ್ಳಲು ಅದಕ್ಕೆ ಕಾರಣವಿದೆಯೋ? ಹೀಗೆ ಆಲೋಚಿಸುವುದು ಸಹ ಹುಚ್ಚುತನವಾಗಿದೆ. ಹೀಗೆ, ಅಪೊಸ್ತಲ ಪೌಲನು ತನ್ನ ಜೊತೆ ಕ್ರೈಸ್ತರಿಗೆ ಜ್ಞಾಪಕ ಹುಟ್ಟಿಸಿದ್ದು: “ನಿನಗೂ ಇತರರಿಗೂ ತಾರತಮ್ಯ ಮಾಡಿದವರು ಯಾರು? ದೇವರಿಂದ ಹೊಂದದೆ ಇರುವಂಥದು ನಿನ್ನಲ್ಲಿ ಒಂದಾದರೂ ಉಂಟೋ? ಹೊಂದಿದ ಮೇಲೆ ಹೊಂದದವನಂತೆ ನೀನು ಯಾಕೆ ಹಿಗ್ಗಿಕೊಳ್ಳುತ್ತೀ?” (1 ಕೊರಿಂಥ 4:7) ಇಂಥ ಬೈಬಲ್ ವಚನಗಳ ಕುರಿತು ಧ್ಯಾನಿಸುವುದು, ದೀನಭಾವವನ್ನು ಬೆಳೆಸಿಕೊಳ್ಳಲು ಮತ್ತು ಅದನ್ನು ತೋರಿಸಲು ನಮಗೆ ಸಹಾಯಮಾಡಬಲ್ಲದು.
17 ಇಬ್ರಿಯ ಪ್ರವಾದಿಯಾದ ದಾನಿಯೇಲನು, ತನ್ನನ್ನು ‘ತಗ್ಗಿಸಿಕೊಂಡದ್ದರಿಂದ’ ಅಂದರೆ ಅವನ ದೀನಭಾವದ ಕಾರಣದಿಂದ ಅವನು ದೇವರ ದೃಷ್ಟಿಯಲ್ಲಿ “ಅತಿಪ್ರಿಯ”ನೆಂದು ಘೋಷಿಸಲ್ಪಟ್ಟನು. (ದಾನಿಯೇಲ 10:11, 12) ದೀನಭಾವವನ್ನು ಬೆಳೆಸಿಕೊಳ್ಳುವಂತೆ ಯಾವುದು ದಾನಿಯೇಲನಿಗೆ ಸಹಾಯಮಾಡಿತು? ಮೊದಲನೆಯದಾಗಿ, ಅವನು ಕ್ರಮವಾಗಿ ಪ್ರಾರ್ಥನೆಯಲ್ಲಿ ಯೆಹೋವನ ಕಡೆಗೆ ತಿರುಗುವ ಮೂಲಕ ಆತನಲ್ಲಿ ಅಚಲವಾದ ಅವಲಂಬನೆಯನ್ನು ತೋರಿಸಿದನು. (ದಾನಿಯೇಲ 6:10, 11) ಅಷ್ಟುಮಾತ್ರವಲ್ಲ, ದಾನಿಯೇಲನು ದೇವರ ವಾಕ್ಯದ ಒಬ್ಬ ಶ್ರದ್ಧಾಭರಿತ ಹಾಗೂ ಯೋಗ್ಯವಾಗಿ ಪ್ರಚೋದಿತನಾದ ವಿದ್ಯಾರ್ಥಿಯಾಗಿದ್ದನು; ಇದು ದೇವರ ಮಹಿಮಾಯುತ ಉದ್ದೇಶದ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಅವನಿಗೆ ಸಹಾಯಮಾಡಿತು. ಅವನು ತನ್ನ ಜನರ ಲೋಪದೋಷಗಳನ್ನು ಮಾತ್ರವಲ್ಲ, ತನ್ನ ಸ್ವಂತ ಲೋಪದೋಷಗಳನ್ನು ಒಪ್ಪಿಕೊಳ್ಳಲು ಸಹ ಸಿದ್ಧನಿದ್ದನು. ಮತ್ತು ಸ್ವನೀತಿಯನ್ನಲ್ಲ ಬದಲಾಗಿ ದೇವರ ನೀತಿಯನ್ನು ಎತ್ತಿಹಿಡಿಯುವುದರಲ್ಲಿ ಅವನು ನಿಜವಾಗಿಯೂ ಆಸಕ್ತನಾಗಿದ್ದನು. (ದಾನಿಯೇಲ 9:2, 5, 7) ನಾವು ದಾನಿಯೇಲನ ಎದ್ದುಕಾಣುವಂಥ ಮಾದರಿಯಿಂದ ಪಾಠವನ್ನು ಕಲಿತು, ನಮ್ಮ ಜೀವಿತದ ಎಲ್ಲಾ ಕ್ಷೇತ್ರಗಳಲ್ಲಿ ದೀನಭಾವವನ್ನು ಬೆಳೆಸಿಕೊಳ್ಳಲು ಮತ್ತು ತೋರಿಸಲು ಪ್ರಯತ್ನಿಸಬಲ್ಲೆವೋ?
18 “ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ” ಎಂದು ಜ್ಞಾನೋಕ್ತಿ 22:4 ಹೇಳುತ್ತದೆ. ಹೌದು, ದೀನಭಾವದವರಿಗೆ ಯೆಹೋವನು ಅನುಗ್ರಹವನ್ನು ತೋರಿಸುತ್ತಾನೆ, ಮತ್ತು ಇದರ ಫಲಿತಾಂಶ ಮಹಿಮೆ ಮತ್ತು ಜೀವವೇ ಆಗಿದೆ. ದೇವರ ಸೇವೆಯನ್ನು ಬಹುಮಟ್ಟಿಗೆ ತೊರೆದಿದ್ದು, ಸಮಯಾನಂತರ ಯೆಹೋವನಿಂದ ಅವನ ಆಲೋಚನೆಯು ಸರಿಪಡಿಸಲ್ಪಟ್ಟ ಕೀರ್ತನೆಗಾರನಾದ ಆಸಾಫನು ದೀನಭಾವದಿಂದ ಒಪ್ಪಿಕೊಂಡದ್ದು: “ನಿನ್ನ ಚಿತ್ತವನ್ನು ತಿಳಿಯಪಡಿಸಿ ನನ್ನನ್ನು ನಡಿಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ.” (ಕೀರ್ತನೆ 73:24) ಇಂದಿನ ಕುರಿತಾಗಿ ಏನು? ಯಾರು ದೀನಭಾವವನ್ನು ತೋರಿಸುತ್ತಾರೋ ಅವರಿಗೆ ಯಾವ ಮಹಿಮೆ ಕಾದಿದೆ? ಯೆಹೋವನೊಂದಿಗೆ ಅನುಗ್ರಹಿತ ಸ್ಥಿತಿ ಮತ್ತು ಆಶೀರ್ವದಿತ ಸಂಬಂಧದಲ್ಲಿ ಆನಂದಿಸುವುದರ ಜೊತೆಗೆ, ರಾಜ ದಾವೀದನ ಪ್ರೇರಿತ ಮಾತುಗಳ ನೆರವೇರಿಕೆಯನ್ನು ಕಾಣಲು ಅವರು ಎದುರುನೋಡಸಾಧ್ಯವಿದೆ: “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” ಖಂಡಿತವಾಗಿಯೂ ಒಂದು ಮಹಿಮಾಯುತ ಭವಿಷ್ಯತ್ತು ಇದಾಗಿದೆ!—ಕೀರ್ತನೆ 37:11.
[ಪಾದಟಿಪ್ಪಣಿ]
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
ನೀವು ಜ್ಞಾಪಿಸಿಕೊಳ್ಳುವಿರೋ?
• ಯಾವ ರೀತಿಯಲ್ಲಿ ಸ್ತೆಫನನು, ಯೆಹೋವನು ಯಾರಿಗೆ ತನ್ನ ಮಹಿಮೆಯನ್ನು ಪ್ರಕಟಪಡಿಸಿದನೋ ಅಂಥ ದೀನಭಾವದ ವ್ಯಕ್ತಿಗೆ ಒಂದು ಉದಾಹರಣೆಯಾಗಿದ್ದಾನೆ?
• ಯಾವ ವಿಧಗಳಲ್ಲಿ ಯೆಹೋವ ದೇವರು ದೀನಭಾವವನ್ನು ತೋರಿಸಿದ್ದಾನೆ?
• ಯೆಹೋವನು ತನ್ನ ಮಹಿಮೆಯನ್ನು ದೀನಭಾವದ ಜನರಿಗೆ ಪ್ರಕಟಪಡಿಸುತ್ತಾನೆ ಎಂಬುದನ್ನು ಯಾವ ಉದಾಹರಣೆಗಳು ತೋರಿಸುತ್ತವೆ?
• ದಾನಿಯೇಲನ ಉದಾಹರಣೆಯು ದೀನಭಾವವನ್ನು ಬೆಳೆಸಿಕೊಳ್ಳಲು ನಮಗೆ ಹೇಗೆ ಸಹಾಯಮಾಡಬಲ್ಲದು?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಸ್ತೆಫನನು “ಪವಿತ್ರಾತ್ಮಭರಿತನೂ ನಂಬಿಕೆಯಿಂದ ತುಂಬಿದವನೂ” ಆಗಿದ್ದನು ಎಂಬುದನ್ನು ಅಪೊಸ್ತಲರ ಕೃತ್ಯಗಳು ಪುಸ್ತಕವು ಹೇಗೆ ತೋರಿಸುತ್ತದೆ? (ಬಿ) ಸ್ತೆಫನನು ದೀನಭಾವದವನಾಗಿದ್ದನು ಎಂಬುದಕ್ಕೆ ಯಾವ ಪುರಾವೆಯಿದೆ?
3. ದೇವರ ಅಪಾತ್ರ ಕೃಪೆಯ ಯಾವ ಅದ್ಭುತಕರ ಪ್ರದರ್ಶನದ ಅನುಭವ ಸ್ತೆಫನನಿಗಾಯಿತು?
4. ಯೆಹೋವನು ಯಾರಿಗೆ ತನ್ನ ಮಹಿಮೆಯನ್ನು ಪ್ರಕಟಪಡಿಸುತ್ತಾನೆ?
5, 6. (ಎ) ದೀನಭಾವ ಎಂದರೇನು? (ಬಿ) ಯೆಹೋವನು ಹೇಗೆ ದೀನಭಾವವನ್ನು ತೋರಿಸಿದ್ದಾನೆ? (ಸಿ) ಯೆಹೋವನ ದೀನಭಾವದಿಂದ ನಾವು ಹೇಗೆ ಪ್ರಭಾವಿಸಲ್ಪಡಬೇಕು?
7, 8. (ಎ) ಯೆಹೋವನು ಮನಸ್ಸೆಯೊಂದಿಗೆ ವ್ಯವಹರಿಸುವಾಗ ಹೇಗೆ ದೀನಭಾವವನ್ನು ತೋರಿಸಿದನು? (ಬಿ) ದೀನಭಾವವನ್ನು ತೋರಿಸುವುದರಲ್ಲಿ ಯೆಹೋವನು ಹಾಗೂ ಮನಸ್ಸೆಯು ಯಾವ ರೀತಿಯಲ್ಲಿ ನಾವು ಅನುಸರಿಸಲಿಕ್ಕಾಗಿ ಒಂದು ಮಾದರಿಯನ್ನಿಟ್ಟಿದ್ದಾರೆ?
9. ದೀನಭಾವವು ದೌರ್ಬಲ್ಯದ ಸಂಕೇತವಾಗಿದೆಯೊ? ವಿವರಿಸಿ.
10. ಒಂದನೆಯ ಕೊರಿಂಥ 2:6-10ರಲ್ಲಿ ಸೂಚಿಸಲ್ಪಟ್ಟಿರುವಂತೆ, ಯೆಹೋವನು ದೀನಭಾವದವರಿಗೆ ಏನನ್ನು ಪ್ರಕಟಪಡಿಸುತ್ತಾನೆ?
11. ಪ್ರಥಮ ಶತಮಾನದಲ್ಲಿ, ಕೆಲವರು ಹೇಗೆ ದೀನಭಾವದ ಕೊರತೆಯನ್ನು ತೋರಿಸಿದರು, ಮತ್ತು ಇದು ಅವರಿಗೆ ಹೇಗೆ ಹಾನಿಕರವಾಗಿ ರುಜುವಾಯಿತು?
12. ದೀನಭಾವದ ಜನರಿಗೆ ಯೆಹೋವನು ಅನುಗ್ರಹವನ್ನು ತೋರಿಸುತ್ತಾನೆ ಎಂಬುದನ್ನು ಮೋಶೆಯ ಉದಾಹರಣೆಯು ಹೇಗೆ ರುಜುಪಡಿಸುತ್ತದೆ?
13. ಪ್ರಥಮ ಶತಮಾನದಲ್ಲಿ, ದೀನಭಾವದ ಕುರುಬರಿಗೆ ಯೆಹೋವನ ಮಹಿಮೆಯು ಹೇಗೆ ಪ್ರಕಟಪಡಿಸಲ್ಪಟ್ಟಿತು?
14. ದೀನಭಾವದ ಜನರಿಗೆ ದೇವರಿಂದ ಯಾವ ಆಶೀರ್ವಾದಗಳು ದೊರಕುತ್ತವೆ?
15. ನಾವು ಏಕೆ ದೀನಭಾವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು, ಮತ್ತು ಇಸ್ರಾಯೇಲಿನ ಅರಸನಾಗಿದ್ದ ಸೌಲನ ವಿಷಯದಲ್ಲಿ ಇದು ಹೇಗೆ ಎತ್ತಿತೋರಿಸಲ್ಪಟ್ಟಿದೆ?
16. ಯೆಹೋವನೊಂದಿಗಿನ ಹಾಗೂ ಜೊತೆ ಮಾನವರೊಂದಿಗಿನ ನಮ್ಮ ಸಂಬಂಧದ ಕುರಿತು ಧ್ಯಾನಿಸುವುದು, ದೀನಭಾವವನ್ನು ಬೆಳೆಸಿಕೊಳ್ಳಲು ನಮಗೆ ಹೇಗೆ ಸಹಾಯಮಾಡಬಲ್ಲದು?
17. ದೀನಭಾವವನ್ನು ಬೆಳೆಸಿಕೊಳ್ಳಲು ಪ್ರವಾದಿಯಾದ ದಾನಿಯೇಲನಿಗೆ ಯಾವುದು ಸಹಾಯಮಾಡಿತು, ಮತ್ತು ನಾವು ಕೂಡ ಅದನ್ನೇ ಮಾಡಲು ನಮಗೆ ಯಾವುದು ಸಹಾಯಮಾಡಸಾಧ್ಯವಿದೆ?
18. ಇಂದು ದೀನಭಾವವನ್ನು ತೋರಿಸುವವರಿಗೆ ಯಾವ ಮಹಿಮೆಯು ಕಾದಿದೆ?
[ಪುಟ 12ರಲ್ಲಿರುವ ಚೌಕ]
ದೃಢಮನಸ್ಸಿನವರಾದರೂ ದೀನಭಾವದವರು
ಯು.ಎಸ್.ಎ.ಯ ಒಹಾಯೋದ ಸೀಡರ್ ಪಾಯಿಂಟ್ನಲ್ಲಿ 1919ರಲ್ಲಿ ನಡೆದ ಬೈಬಲ್ ವಿದ್ಯಾರ್ಥಿಗಳ (ಇಂದು ಅವರು ಯೆಹೋವನ ಸಾಕ್ಷಿಗಳೆಂದು ಪ್ರಸಿದ್ಧರು) ಅಧಿವೇಶನದಲ್ಲಿ, ಆಗ ಮೇಲ್ವಿಚಾರಕರಾಗಿ ಕಾರ್ಯನಡಿಸುತ್ತಿದ್ದ 50 ವರ್ಷ ಪ್ರಾಯದ ಜೆ. ಎಫ್. ರದರ್ಫರ್ಡರು, ಅಧಿವೇಶನದ ಪ್ರತಿನಿಧಿಗಳ ಲಗೇಜನ್ನು ಎತ್ತಿಕೊಂಡು ಅವರನ್ನು ಹೋಟೇಲ್ ಕೋಣೆಗಳ ವರೆಗೆ ತಲಪಿಸುತ್ತಾ, ಸಾಮಾನು ಹೊರುವವರೋಪಾದಿ ಕೆಲಸಮಾಡಲು ಮುಂದೆ ಬಂದರು. ಅಧಿವೇಶನದ ಕೊನೆಯ ದಿನ, ಅವರ ಈ ಮಾತುಗಳಿಂದ 7,000 ಮಂದಿ ಸಭಿಕರಲ್ಲಿ ವಿದ್ಯುತ್ಸಂಚಾರವಾಯಿತು: “ನೀವು ರಾಜರ ರಾಜನೂ ಕರ್ತರ ಕರ್ತನೂ ಆದಾತನ ರಾಯಭಾರಿಯಾಗಿದ್ದು, ನಮ್ಮ ಕರ್ತನ ಮಹಿಮಾಭರಿತ ರಾಜ್ಯವನ್ನು . . . ಜನರಿಗೆ ಪ್ರಕಟಿಸುವವರಾಗಿದ್ದೀರಿ.” ಸಹೋದರ ರದರ್ಫರ್ಡರು ಬಲವಾದ ನಿಶ್ಚಿತಾಭಿಪ್ರಾಯಗಳಿದ್ದ ವ್ಯಕ್ತಿಯಾಗಿದ್ದು, ಯಾವುದು ಸತ್ಯವೆಂದು ಅವರು ನಂಬಿದ್ದರೋ ಅದರ ಕುರಿತು ದೃಢವಿಶ್ವಾಸದಿಂದ ಮತ್ತು ಯಾವುದೇ ರೀತಿಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳದೆ ಅದನ್ನು ತಿಳಿಸುವವರೆಂದು ಹೆಸರುವಾಸಿಯಾಗಿದ್ದರಾದರೂ, ದೇವರ ಮುಂದೆ ಅವರು ನಿಜವಾಗಿಯೂ ದೀನಭಾವದವರೂ ಆಗಿದ್ದರು. ಬೆತೆಲ್ನಲ್ಲಿನ ಬೆಳಗ್ಗಿನ ಆರಾಧನೆಯಲ್ಲಿ ಅವರು ಮಾಡುತ್ತಿದ್ದ ಪ್ರಾರ್ಥನೆಗಳಲ್ಲಿ ಇದು ಅನೇಕವೇಳೆ ವ್ಯಕ್ತವಾಗುತ್ತಿತ್ತು.
[ಪುಟ 9ರಲ್ಲಿರುವ ಚಿತ್ರ]
ಶಾಸ್ತ್ರವಚನಗಳಲ್ಲಿ ತುಂಬ ಪಾರಂಗತನಾಗಿದ್ದ ಸ್ತೆಫನನು ದೀನಭಾವದಿಂದ ಆಹಾರವನ್ನು ವಿತರಿಸಿದನು
[ಪುಟ 10ರಲ್ಲಿರುವ ಚಿತ್ರ]
ಮನಸ್ಸೆಯ ದೀನಭಾವವು ಯೆಹೋವನನ್ನು ಮೆಚ್ಚಿಸಿತು
[ಪುಟ 12ರಲ್ಲಿರುವ ಚಿತ್ರ]
ಯಾವುದು ದಾನಿಯೇಲನನ್ನು “ಅತಿಪ್ರಿಯ”ನನ್ನಾಗಿ ಮಾಡಿತು?