ಎರಡನೇ ಪೂರ್ವಕಾಲವೃತ್ತಾಂತ
20 ಆಮೇಲೆ ಮೋವಾಬ್ಯರು,+ ಅಮ್ಮೋನಿಯರು+ ಮತ್ತು ಕೆಲವು ಅಮ್ಮೊನಿಯಮ್* ಜನ್ರು ಸೇರಿ ಯೆಹೋಷಾಫಾಟನ ವಿರುದ್ಧ ಯುದ್ಧಕ್ಕೆ ಬಂದ್ರು. 2 ಆಗ ಯೆಹೋಷಾಫಾಟನಿಗೆ ಈ ಸಂದೇಶ ಬಂತು “ಸಮುದ್ರ* ಪ್ರದೇಶದ ಕಡೆಯಿಂದ, ಎದೋಮಿನ+ ಕಡೆಯಿಂದ ಒಂದು ದೊಡ್ಡ ಸೈನ್ಯ ನಿನ್ನ ವಿರುದ್ಧ ಯುದ್ಧಕ್ಕೆ ಬರ್ತಿದೆ. ಅದು ಈಗ ಹಚಚೋನ್-ತಾಮರಿನಲ್ಲಿ ಅಂದ್ರೆ ಏಂಗೆದಿಯಲ್ಲಿದೆ.”+ 3 ಇದನ್ನ ಕೇಳಿಸಿಕೊಂಡ ಯೆಹೋಷಾಫಾಟನಿಗೆ ಭಯ ಆಯ್ತು. ಯೆಹೋವ ಏನು ಹೇಳ್ತಾನೆ ಅಂತ ತಿಳ್ಕೊಳ್ಳೋಕೆ ಅವನು ದೃಢತೀರ್ಮಾನ ಮಾಡಿದ.+ ಹಾಗಾಗಿ ಅವನು ಯೆಹೂದದಲ್ಲಿದ್ದ ಎಲ್ಲರಿಗೂ ಉಪವಾಸ ಮಾಡೋಕೆ ಹೇಳಿದ. 4 ಆಗ ಯೆಹೋವನ ಸಹಾಯ ಕೇಳೋಕೆ ಯೆಹೂದದ ಜನ್ರು ಒಟ್ಟುಸೇರಿದ್ರು. ಯೆಹೋವ ಏನು ಹೇಳ್ತಾನೆ ಅಂತ ಕೇಳೋಕೆ ಅವ್ರೆಲ್ಲ ಕಾಯ್ತಿದ್ರು.+
5 ಯೆಹೂದ ಮತ್ತು ಯೆರೂಸಲೇಮಿನ ಜನ್ರು ಯೆಹೋವನ ಆಲಯದಲ್ಲಿ ಹೊಸ ಅಂಗಳದ ಮುಂದೆ ಸೇರಿಬಂದಿದ್ರು. ಆಗ ಯೆಹೋಷಾಫಾಟ ಅವ್ರ ಮುಂದೆ ನಿಂತು, 6 ಹೀಗಂದ
“ನಮ್ಮ ಪೂರ್ವಜರ ದೇವರಾಗಿರೋ ಯೆಹೋವನೇ, ಸ್ವರ್ಗದಲ್ಲಿರೋ ದೇವರು ನೀನೇ!+ ದೇಶದ ಎಲ್ಲ ರಾಜ್ಯಗಳ ಮೇಲೆ ನಿನಗೆ ಅಧಿಕಾರ ಇದೆ.+ ನಿನ್ನ ಕೈಯಲ್ಲಿ ಶಕ್ತಿ ಮತ್ತು ಬಲ ಇದೆ. ಹಾಗಾಗಿ ನಿನಗೆ ವಿರುದ್ಧವಾಗಿ ಯಾರೂ ನಿಲ್ಲಕ್ಕಾಗಲ್ಲ.+ 7 ನಮ್ಮ ದೇವರೇ, ನಿನ್ನ ಜನ್ರಾದ ಇಸ್ರಾಯೇಲ್ಯರ ಮುಂದಿಂದ ಈ ದೇಶದ ನಿವಾಸಿಗಳನ್ನ ನೀನು ಓಡಿಸಿಬಿಟ್ಟೆ ಅಲ್ವಾ? ನಿನ್ನ ಸ್ನೇಹಿತ ಅಬ್ರಹಾಮನ ಸಂತತಿಗೆ ನೀನು ಈ ದೇಶನ ಶಾಶ್ವತ ಆಸ್ತಿಯಾಗಿ ಕೊಟ್ಟೆ ಅಲ್ವಾ?+ 8 ಅವರು ಇಲ್ಲಿ ವಾಸಮಾಡಿದ್ರು. ಅವರು ಇಲ್ಲಿ ನಿನ್ನ ಹೆಸ್ರಿಗಾಗಿ ಒಂದು ಆರಾಧನಾ ಸ್ಥಳ ಕಟ್ಟಿದ್ರು+ ಮತ್ತು ಹೀಗೆ ಹೇಳಿದ್ರು 9 ‘ನಮಗೆ ಕತ್ತಿಯಿಂದ, ಕಠಿಣ ಶಿಕ್ಷೆಯಿಂದ, ಅಂಟುರೋಗದಿಂದ ಅಥವಾ ಬರದಿಂದ ಕಷ್ಟ ಬಂದ್ರೆ ನಾವು ಈ ಆಲಯದ ಮುಂದೆ ಮತ್ತು ನಿನ್ನ ಮುಂದೆ ನಿಂತು (ಯಾಕಂದ್ರೆ, ಈ ಆಲಯದಲ್ಲಿ ನಿನ್ನ ಹೆಸ್ರಿದೆ)+ ನಮ್ಮ ಸಂಕಷ್ಟಗಳಲ್ಲಿ ನಮಗೆ ಸಹಾಯಮಾಡು ಅಂತ ಮೊರೆಯಿಟ್ರೆ ನೀನು ನಮ್ಮ ಪ್ರಾರ್ಥನೆ ಕೇಳಿಸ್ಕೊಂಡು ನಮ್ಮನ್ನ ಕಾಪಾಡು.’+ 10 ಈಗ ಅಮ್ಮೋನ್, ಮೋವಾಬ್ ಮತ್ತು ಸೇಯೀರ್ ಬೆಟ್ಟ ಪ್ರದೇಶದ+ ಜನ್ರು ಏನು ಮಾಡ್ತಿದ್ದಾರೆ ನೋಡು. ಇಸ್ರಾಯೇಲ್ಯರು ಈಜಿಪ್ಟಿಂದ ಹೊರಗೆ ಬಂದಾಗ ಈ ದೇಶಗಳ ಮೇಲೆ ಯುದ್ಧಕ್ಕೆ ಹೋಗದೆ ಇರೋ ತರ ನೀನೇ ತಡೆದೆ. ಇಸ್ರಾಯೇಲ್ಯರು ಅವ್ರನ್ನ ನಾಶಮಾಡೋದಿರಲಿ ಅವ್ರ ಹತ್ರಾನೂ ಹೋಗಲಿಲ್ಲ.+ 11 ಆ ಜನ್ರನ್ನ ನಾಶಮಾಡದೆ ಬಿಟ್ಟು ನಾವು ತಪ್ಪು ಮಾಡಿದ್ವಿ. ಈಗ ಅವರು ನೀನು ನಮಗೆ ಆಸ್ತಿಯಾಗಿ ಕೊಟ್ಟಿರೋ ಈ ನಿನ್ನ ದೇಶದಿಂದ ನಮ್ಮನ್ನ ಓಡಿಸಿಬಿಡೋಕೆ ಬರ್ತಿದ್ದಾರೆ.+ 12 ನಮ್ಮ ದೇವರೇ, ನೀನು ಅವ್ರನ್ನ ಶಿಕ್ಷಿಸಲ್ವಾ?+ ನಮ್ಮ ಮೇಲೆ ಬರ್ತಿರೋ ಆ ದೊಡ್ಡ ಸೈನ್ಯದ ವಿರುದ್ಧ ಹೋಗೋಕೆ ನಮಗೆ ಶಕ್ತಿನೇ ಇಲ್ಲ. ನಾವು ಏನು ಮಾಡಬೇಕು ಅಂತ ಗೊತ್ತಾಗ್ತಿಲ್ಲ.+ ನಮ್ಮ ಕಣ್ಣುಗಳು ನಿನ್ನನ್ನೇ ನೋಡ್ತಿವೆ.”+
13 ಅದೇ ಸಮಯಕ್ಕೆ ಯೆಹೂದದ ಗಂಡಸರೆಲ್ಲ ತಮ್ಮ ಹೆಂಡತಿ, ಮಕ್ಕಳು, ಅಷ್ಟೇ ಯಾಕೆ ತಮ್ಮ ಚಿಕ್ಕ ಮಕ್ಕಳನ್ನೂ ಕರ್ಕೊಂಡು ಬಂದು ಯೆಹೋವನ ಮುಂದೆ ನಿಂತಿದ್ರು.
14 ಆಗ ಯೆಹೋವನ ಪವಿತ್ರಶಕ್ತಿ ಸಭೆ ಮಧ್ಯದಲ್ಲಿದ್ದ ಜೆಕರ್ಯನ ಮಗನಾದ ಯಹಜೀಯೇಲನ ಮೇಲೆ ಬಂತು. ಜೆಕರ್ಯ ಬೆನಾಯನ ಮಗ. ಬೆನಾಯ ಯೆಗೀಯೇಲನ ಮಗ. ಯೆಗೀಯೇಲ ಲೇವಿ ಮತ್ತನ್ಯನ ಮಗ. ಮತ್ತನ್ಯ ಆಸಾಫನ ವಂಶಕ್ಕೆ ಸೇರಿದವನಾಗಿದ್ದ. 15 ಯಹಜೀಯೇಲ ಹೀಗೆ ಹೇಳಿದ “ಯೆಹೂದದ ಜನ್ರೇ, ಯೆರೂಸಲೇಮಿನ ನಿವಾಸಿಗಳೇ ಮತ್ತು ರಾಜ ಯೆಹೋಷಾಫಾಟನೇ ನೀವೆಲ್ಲರೂ ಗಮನಕೊಟ್ಟು ಕೇಳಿ. ಯೆಹೋವ ನಿಮಗೆ ಹೀಗೆ ಹೇಳುತ್ತಿದ್ದಾನೆ ‘ಆ ದೊಡ್ಡ ಸೈನ್ಯ ನೋಡಿ ನೀವು ಭಯಪಡಬೇಡಿ, ಹೆದರಬೇಡಿ. ಯಾಕಂದ್ರೆ ಯುದ್ಧ ನಿಮ್ಮದಲ್ಲ. ದೇವರದ್ದೇ.+ 16 ನಾಳೆ ನೀವು ಅವ್ರ ವಿರುದ್ಧ ಹೋಗಿ. ಅವರು ಚೀಚ್ ಘಟ್ಟದ ದಾರೀಲಿ ಬರೋವಾಗ ನೀವು ಯೆರೂವೇಲ್ ಕಾಡಿನ ಮುಂದೆ ಇರೋ ಕಣಿವೆಯ* ಕೊನೆಯಲ್ಲಿ ಇರ್ತೀರ. 17 ಈ ಯುದ್ಧದಲ್ಲಿ ನೀವು ಹೋರಾಡೋ ಅವಶ್ಯಕತೆ ಇಲ್ಲ. ನೀವು ನಿಮ್ಮ ಜಾಗದಲ್ಲಿ ಸ್ಥಿರವಾಗಿ ನಿಂತು+ ಯೆಹೋವ ನಿಮ್ಮನ್ನ ಹೇಗೆ ಕಾಪಾಡ್ತಾನೆ ಅನ್ನೋದನ್ನ ನೋಡಿ.*+ ಯೆಹೂದ ಯೆರೂಸಲೇಮಿನ ಜನ್ರೇ ನೀವು ಹೆದರಬೇಡಿ, ಗಾಬರಿಪಡಬೇಡಿ.+ ನಾಳೆ ಅವ್ರ ವಿರುದ್ಧ ಹೋಗಿ. ಯೆಹೋವ ನಿಮ್ಮ ಜೊತೆ ಇರ್ತಾನೆ.’”+
18 ತಕ್ಷಣ ಯೆಹೋಷಾಫಾಟ ನೆಲದ ತನಕ ಬಗ್ಗಿ ದೇವರಿಗೆ ನಮಸ್ಕರಿಸಿದ. ಯೆಹೂದದ ಮತ್ತು ಯೆರೂಸಲೇಮಿನ ಎಲ್ಲ ಜನ್ರು ಯೆಹೋವನ ಮುಂದೆ ಅಡ್ಡಬಿದ್ರು ಮತ್ತು ಯೆಹೋವನನ್ನ ಆರಾಧಿಸಿದ್ರು. 19 ಆಗ ಕೆಹಾತ್ಯರ+ ಮತ್ತು ಕೋರಹಿಯರ ವಂಶದವರಾದ ಲೇವಿಯರು ಗಟ್ಟಿಯಾಗಿ ಇಸ್ರಾಯೇಲಿನ ದೇವರಾದ ಯೆಹೋವನನ್ನ ಹಾಡಿ ಹೊಗಳೋಕೆ ಎದ್ದುನಿಂತ್ರು.+
20 ಅವರು ಮಾರನೇ ದಿನ ಬೆಳಿಗ್ಗೆ ಎದ್ದು ತೆಕೋವದ+ ಕಾಡಿಗೆ ಹೋದ್ರು. ಅವರು ಹೋಗ್ತಿದ್ದಾಗ ಯೆಹೋಷಾಫಾಟ ಎದ್ದು ನಿಂತು ಹೀಗೆ ಹೇಳಿದ “ಯೆಹೂದ ಮತ್ತು ಯೆರೂಸಲೇಮಿನ ಜನ್ರೇ, ನಾನು ಹೇಳೋದನ್ನ ಕೇಳಿ! ನಿಮ್ಮ ದೇವರಾದ ಯೆಹೋವನ ಮೇಲೆ ನಂಬಿಕೆ ಇಡಿ. ಆಗ ನಿಮಗೆ ಸ್ಥಿರವಾಗಿ ನಿಲ್ಲೋಕೆ* ಆಗುತ್ತೆ. ಆತನ ಪ್ರವಾದಿಗಳ ಮೇಲೆ ನಂಬಿಕೆಯಿಡಿ.+ ಆಗ ನೀವು ಗೆಲ್ತೀರ.”
21 ಯೆಹೋಷಾಫಾಟ ಮಾತಾಡಿದ ಮೇಲೆ ಯೆಹೋವನನ್ನ ಸ್ತುತಿಸಿ ಹಾಡುಗಳನ್ನ ಹಾಡೋಕೆ ಮತ್ತು ಪವಿತ್ರ ಬಟ್ಟೆಗಳನ್ನ ಹಾಕೊಂಡು ಆತನನ್ನ ಹೊಗಳೋಕೆ ಗಂಡಸರನ್ನ ನೇಮಿಸಿದ.+ ಅವರು ಆಯುಧಗಳನ್ನ ಹಿಡ್ಕೊಂಡಿದ್ದ ಸೈನಿಕರ ಮುಂದೆ ನಡೀತಾ “ಯೆಹೋವನಿಗೆ ಧನ್ಯವಾದ ಹೇಳಿ. ಯಾಕಂದ್ರೆ ಆತನ ಪ್ರೀತಿ ಶಾಶ್ವತ”+ ಅಂತ ಹಾಡ್ತಿದ್ರು.
22 ಅವರು ಖುಷಿಖುಷಿಯಾಗಿ ಹಾಡೋಕೆ ಶುರುಮಾಡಿದ ತಕ್ಷಣ ಯೆಹೋವ ಯೆಹೂದದ ಮೇಲೆ ಯುದ್ಧಕ್ಕೆ ಬಂದಿದ್ದ ಅಮ್ಮೋನಿನ, ಮೋವಾಬಿನ ಮತ್ತು ಸೇಯೀರ್ ಬೆಟ್ಟ ಪ್ರದೇಶದ ಜನ್ರು ಅವ್ರಲ್ಲೇ ಒಬ್ಬರ ಮೇಲೆ ಒಬ್ಬರು ಹೊಂಚುಹಾಕಿ ಸಾಯಿಸಿಕೊಳ್ಳೋ ತರ ಮಾಡಿದನು.+ 23 ಸೇಯೀರ್ ಬೆಟ್ಟ ಪ್ರದೇಶದ+ ಜನ್ರ ವಿರುದ್ಧ ಅಮ್ಮೋನಿಯರು ಮತ್ತು ಮೋವಾಬ್ಯರು ತಿರುಗಿಬಿದ್ದು ಅವ್ರನ್ನ ಪೂರ್ತಿ ನಾಶಮಾಡಿದ್ರು. ಅವ್ರನ್ನ ನಾಶಮಾಡಿದ ಮೇಲೆ ಅವರವರೇ ಒಬ್ಬರನ್ನೊಬ್ರು ಕೊಂದುಹಾಕಿದ್ರು.+
24 ಆದ್ರೆ ಯೆಹೂದದ ಜನ್ರು ಕಾಡಲ್ಲಿದ್ದ ಕಾವಲುಗೋಪುರದ ಹತ್ರ ಬಂದು+ ಆ ಸೈನ್ಯದ ಕಡೆ ನೋಡಿದಾಗ ಅವ್ರಿಗೆ ನೆಲದ ಮೇಲೆ ಬಿದ್ದಿದ್ದ ಶತ್ರುಗಳ ಶವಗಳು ಕಾಣಿಸಿದ್ವು.+ ಅವ್ರಲ್ಲಿ ಯಾರೂ ಉಳಿದಿರಲಿಲ್ಲ. 25 ಹಾಗಾಗಿ ಯೆಹೋಷಾಫಾಟ ಮತ್ತು ಅವನ ಜನ್ರು ಅವ್ರನ್ನ ಕೊಳ್ಳೆಹೊಡೆಯೋಕೆ ಹೋದ್ರು. ಅವ್ರಿಗೆ ತುಂಬ ವಸ್ತುಗಳು, ಬಟ್ಟೆಗಳು, ಅಮೂಲ್ಯ ಸಾಮಗ್ರಿಗಳು ಸಿಕ್ಕಿದ್ವು. ಸತ್ತುಬಿದ್ದಿದ್ದ ಶತ್ರುಗಳಿಂದ ಇವನ್ನೆಲ್ಲ ಅವರು ಕೊಳ್ಳೆ ಹೊಡೆದ್ರು. ತಮ್ಮಿಂದ ಎಷ್ಟು ಹೊರೋಕೆ ಆಯ್ತೋ ಅಷ್ಟನ್ನೂ ಅವರಿಂದ ಕೊಳ್ಳೆ ಹೊಡೆದ್ರು.+ ಅದನ್ನು ಹೊತ್ಕೊಂಡು ಹೋಗೋಕೆ ಅವ್ರಿಗೆ ಮೂರು ದಿನ ಹಿಡೀತು. 26 ನಾಲ್ಕನೇ ದಿನ ಅವರು ಬೆರಾಕ ಕಣಿವೆಯಲ್ಲಿ ಸೇರಿ ಬಂದು ಯೆಹೋವನನ್ನ ಹಾಡಿ ಹೊಗಳಿದ್ರು. ಹಾಗಾಗಿ ಆ ಸ್ಥಳಕ್ಕೆ ಬೆರಾಕ* ಕಣಿವೆ ಅಂತ ಹೆಸ್ರಿಟ್ರು.+ ಈ ದಿನದ ತನಕ ಆ ಜಾಗನ ಹಾಗೇ ಕರಿತಾರೆ.
27 ಆಮೇಲೆ ಯೆಹೂದ ಮತ್ತು ಯೆರೂಸಲೇಮಿನ ಜನ್ರು ಯೆಹೋವ ತಮ್ಮ ಶತ್ರುಗಳ ವಿರುದ್ಧ ಜಯ ಕೊಟ್ಟಿದ್ರಿಂದ ಖುಷಿಯಾಗಿ ಯೆರೂಸಲೇಮಿಗೆ ವಾಪಸ್ ಬಂದ್ರು.+ ಯೆಹೋಷಾಫಾಟ ಅವ್ರ ನಾಯಕನಾಗಿದ್ದ. 28 ಅವರು ತಂತಿವಾದ್ಯಗಳನ್ನ ಬಾರಿಸ್ತಾ,+ ತುತ್ತೂರಿ ಊದುತ್ತಾ+ ಯೆರೂಸಲೇಮಿಗೆ ಬಂದು ಯೆಹೋವನ ಆಲಯಕ್ಕೆ ಹೋದ್ರು.+ 29 ಯೆಹೋವ ಇಸ್ರಾಯೇಲಿನ ಶತ್ರುಗಳ ವಿರುದ್ಧ ಹೋರಾಡಿದ್ದಾನೆ ಅಂತ ಎಲ್ಲ ರಾಜ್ಯದ ಜನ್ರಿಗೆ ಗೊತ್ತಾದಾಗ ಅವರು ಆತನಿಗೆ ತುಂಬ ಭಯಪಟ್ರು.+ 30 ಹಾಗಾಗಿ ಯೆಹೋಷಾಫಾಟನ ರಾಜ್ಯದಲ್ಲಿ ಯಾವ ಸಮಸ್ಯೆನೂ ಇರಲಿಲ್ಲ. ಅವನ ದೇವರು ಅವನನ್ನ ಸುತ್ತ ಇದ್ದ ಶತ್ರುಗಳ ಕೈಯಿಂದ ಬಿಡಿಸಿ ಅವನಿಗೆ ಶಾಂತಿ ಸಮಾಧಾನ ಕೊಡ್ತಾ ಹೋದನು.+
31 ಹೀಗೆ ಯೆಹೋಷಾಫಾಟ ಯೆಹೂದದ ಮೇಲೆ ತನ್ನ ಆಳ್ವಿಕೆಯನ್ನ ಮುಂದುವರಿಸಿದ. ಅವನು ರಾಜನಾದಾಗ ಅವನಿಗೆ 35 ವರ್ಷ. ಅವನು ಯೆರೂಸಲೇಮಲ್ಲಿದ್ದು 25 ವರ್ಷ ಆಳಿದ. ಅವನ ಅಮ್ಮನ ಹೆಸ್ರು ಅಜೂಬ. ಅವಳು ಶಿಲ್ಹಿಯ ಮಗಳು.+ 32 ಯೆಹೋಷಾಫಾಟ ಅವನ ತಂದೆ ಆಸನ ತರಾನೇ ನಡ್ಕೊಂಡ.+ ಅದನ್ನ ಬಿಟ್ಟು ಬೇರೆ ದಾರಿ ಹಿಡಿಲಿಲ್ಲ. ಅವನು ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡಿದ.+ 33 ಆದ್ರೆ ಅವನು ದೇವಸ್ಥಾನಗಳನ್ನ ತೆಗೆದುಹಾಕಲಿಲ್ಲ.+ ಜನ್ರು ತಮ್ಮ ಪೂರ್ವಜರ ದೇವರನ್ನ ಆರಾಧಿಸೋಕೆ ಅವ್ರ ಹೃದಯನ ಇನ್ನೂ ಸಿದ್ಧ ಮಾಡಿರಲಿಲ್ಲ.+
34 ಯೆಹೋಷಾಫಾಟನ ಇಡೀ ಜೀವನಚರಿತ್ರೆ ಬಗ್ಗೆ ಹನಾನೀಯ+ ಮಗ ಯೇಹು+ ಬರೆದಿದ್ದಾನೆ. ಅದು ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿದೆ. 35 ಇದಾದ್ಮೇಲೆ ಯೆಹೂದದ ರಾಜ ಯೆಹೋಷಾಫಾಟ ಇಸ್ರಾಯೇಲಿನ ರಾಜನಾದ ಅಹಜ್ಯನ ಜೊತೆ ಬೀಗತನ ಮಾಡ್ಕೊಂಡ. ಅಹಜ್ಯ ಕೆಟ್ಟ ಕೆಲಸಗಳನ್ನ ಮಾಡ್ತಿದ್ದ.+ 36 ತಾರ್ಷೀಷಿಗೆ+ ಹೋಗೋ ಹಡಗುಗಳನ್ನ ಮಾಡೋ ಕೆಲಸದಲ್ಲಿ ಅಹಜ್ಯ ತನ್ನ ಜೊತೆ ಯೆಹೋಷಾಫಾಟನನ್ನ ಸೇರಿಸ್ಕೊಂಡ. ಅವರು ಎಚ್ಯೋನ್-ಗೆಬೆರಿನಲ್ಲಿ+ ಹಡಗುಗಳನ್ನ ಕಟ್ಟಿದ್ರು. 37 ಆದ್ರೆ ಮಾರೇಷಾದ ದೋದಾವಾಹುನ ಮಗ ಎಲೀಯೆಜರ ಯೆಹೋಷಾಫಾಟನ ವಿರುದ್ಧ ಭವಿಷ್ಯ ಹೇಳ್ತಾ “ನೀನು ಅಹಜ್ಯನ ಜೊತೆ ಬೀಗತನ ಬೆಳೆಸಿದ್ರಿಂದ ಯೆಹೋವ ನಿನ್ನ ಕೆಲಸಗಳನ್ನ ನಾಶಮಾಡ್ತಾನೆ”+ ಅಂತ ಹೇಳಿದ. ಅವನು ಹೇಳಿದ ಹಾಗೇ ಹಡಗುಗಳೆಲ್ಲ ಒಡೆದು ಹೋಗಿದ್ರಿಂದ+ ಆ ಹಡಗುಗಳು ತಾರ್ಷೀಷಿಗೆ ಹೋಗಲಿಲ್ಲ.