ತೀರ್ಪಿನ ತಗ್ಗಿನಲ್ಲಿ ನ್ಯಾಯತೀರ್ಪು ಜಾರಿಗೊಳಿಸಲ್ಪಡುವುದು
“ಜನಾಂಗಗಳು . . . ಯೆಹೋವನ ನ್ಯಾಯತೀರ್ಪಿನ [“ಯೆಹೋಷಾಫಾಟನ,” NW] ತಗ್ಗಿಗೆ ಬರಲಿ; ಅಲ್ಲೇ ಸುತ್ತಣ ಜನಾಂಗಗಳಿಗೆಲ್ಲಾ ನ್ಯಾಯತೀರಿಸಲು ಆಸೀನನಾಗುವೆನು.”—ಯೋವೇಲ 3:12.
1. “ತೀರ್ಪಿನ ತಗ್ಗಿನಲ್ಲಿ” ಗುಂಪುಗಳು ಒಟ್ಟುಸೇರಿರುವುದನ್ನು ಯೋವೇಲನು ನೋಡುತ್ತಾನೆ ಏಕೆ?
“ಆಹಾ, ತೀರ್ಪಿನ ತಗ್ಗಿನಲ್ಲಿ ಗುಂಪು ಗುಂಪು!” ನಾವು ಈ ಮನಕಲಕುವಂತಹ ಮಾತುಗಳನ್ನು ಯೋವೇಲ 3:14ರಲ್ಲಿ ಓದುತ್ತೇವೆ. ಈ ಗುಂಪುಗಳು ಏಕೆ ಒಟ್ಟುಸೇರಿವೆ? ಯೋವೇಲನು ಉತ್ತರಿಸುವುದು: “ಯೆಹೋವನ ದಿನವು ಸಮೀಪಿಸಿದೆ.” ಅದು ಯೆಹೋವನ ನಿರ್ದೋಷೀಕರಣದ ಮಹಾ ದಿನವಾಗಿದೆ—ಕ್ರಿಸ್ತ ಯೇಸುವಿನ ಅಧೀನದಲ್ಲಿರುವ ದೇವರ ಸ್ಥಾಪಿತ ರಾಜ್ಯವನ್ನು ತಿರಸ್ಕರಿಸಿರುವ ಬಹುಸಂಖ್ಯಾತರ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸುವ ದಿನ. ಕೊನೆಯಲ್ಲಿ, ಪ್ರಕಟನೆ ಅಧ್ಯಾಯ 7ರ “ನಾಲ್ಕು ಮಂದಿ ದೇವದೂತರು . . . ಭೂಮಿಯ ಚತುರ್ದಿಕ್ಕುಗಳ ಗಾಳಿಗಳ” ಮೇಲಿರುವ ಅವರ ಬಿಗಿಯಾದ ಹಿಡಿತವನ್ನು ಸಡಿಲಿಸಲಿದ್ದಾರೆ. ಇದು ‘ಲೋಕ ಹುಟ್ಟಿದ್ದು ಮೊದಲುಗೊಂಡು ಇದುವರೆಗೂ ಆಗಿರದ, ಇನ್ನು ಮೇಲೆ ಆಗದಿರುವ ಮಹಾ ಸಂಕಟ’ (NW)ದಲ್ಲಿ ಫಲಿಸುವುದು.—ಪ್ರಕಟನೆ 7:1; ಮತ್ತಾಯ 24:21.
2. (ಎ) ಯೆಹೋವನ ನ್ಯಾಯತೀರ್ಪನ್ನು ಜಾರಿಗೊಳಿಸಲಿಕ್ಕಾಗಿರುವ ಸ್ಥಳವು, ಸೂಕ್ತವಾಗಿಯೇ “ಯೆಹೋಷಾಫಾಟನ ತಗ್ಗು” ಎಂದು ಕರೆಯಲ್ಪಟ್ಟಿರುವುದು ಏಕೆ? (ಬಿ) ಆಕ್ರಮಣಕ್ಕೊಳಗಾದಾಗ ಯೆಹೋಷಾಫಾಟನು ಯೋಗ್ಯವಾಗಿ ಪ್ರತಿಕ್ರಿಯಿಸಿದ್ದು ಹೇಗೆ?
2 ಯೋವೇಲ 3:12ರಲ್ಲಿ, ನ್ಯಾಯತೀರ್ಪಿನ ಈ ಜಾರಿಗೊಳಿಸುವಿಕೆಯ ನಿವೇಶನವನ್ನು, “ಯೆಹೋಷಾಫಾಟನ ತಗ್ಗು” (NW) ಎಂದು ಕರೆಯಲಾಗಿದೆ. ಸೂಕ್ತವಾಗಿಯೇ, ಯೆಹೂದದ ಇತಿಹಾಸದ ಪ್ರಕ್ಷುಬ್ಧ ಸಮಯವೊಂದರಲ್ಲಿ, ಯೆಹೋವನು ಒಳ್ಳೆಯ ರಾಜನಾದ ಯೆಹೋಷಾಫಾಟನ ಪರವಾಗಿ ನ್ಯಾಯತೀರ್ಪನ್ನು ಜಾರಿಗೊಳಿಸಿದನು. ಯೆಹೋಷಾಫಾಟನ ಹೆಸರಿನ ಅರ್ಥ, “ಯೆಹೋವನು ನ್ಯಾಯಧೀಶನು” ಎಂದಾಗಿದೆ. ಆ ಸಮಯದಲ್ಲಿ ಏನು ಸಂಭವಿಸಿತೊ ಅದರ ಪರಿಗಣನೆಯು, ನಮ್ಮ ಸಮಯದಲ್ಲಿ ಬೇಗನೆ ಏನು ನಡೆಯಲಿದೆಯೊ ಅದನ್ನು ಹೆಚ್ಚು ಉತ್ತಮವಾಗಿ ಗ್ರಹಿಸುವಂತೆ ನಮಗೆ ಸಹಾಯ ಮಾಡುವುದು. ಆ ದಾಖಲೆಯು 2 ಪೂರ್ವಕಾಲವೃತ್ತಾಂತ ಅಧ್ಯಾಯ 20ರಲ್ಲಿ ಕಂಡುಬರುತ್ತದೆ. ಆ ಅಧ್ಯಾಯದ 1ನೆಯ ವಚನದಲ್ಲಿ, “ಮೋವಾಬ್ಯರೂ ಅಮ್ಮೋನಿಯರೂ ಮೆಗೂನ್ಯರಲ್ಲಿ ಕೆಲವರೂ ಯೆಹೋಷಾಫಾಟನಿಗೆ ವಿರೋಧವಾಗಿ ಯುದ್ಧಕ್ಕೆ ಬಂದರು” ಎಂಬುದನ್ನು ನಾವು ಓದುತ್ತೇವೆ. ಯೆಹೋಷಾಫಾಟನು ಹೇಗೆ ಪ್ರತಿಕ್ರಿಯಿಸಿದನು? ಯೆಹೋವನ ನಂಬಿಗಸ್ತ ಸೇವಕರು ಬಿಕ್ಕಟ್ಟಿನ ಸ್ಥಿತಿಯಲ್ಲಿರುವಾಗ ಯಾವಾಗಲೂ ಮಾಡುವಂತಹ ಸಂಗತಿಯನ್ನೇ ಅವನು ಮಾಡಿದನು. “ನಮ್ಮ ದೇವರೇ, ಅವರನ್ನು ದಂಡಿಸದೆ ಬಿಡುವಿಯೋ? ನಮ್ಮ ಮೇಲೆ ಬಂದ ಈ ಮಹಾಸಮೂಹದ ಮುಂದೆ ನಿಲ್ಲುವದಕ್ಕೆ ನಮ್ಮಲ್ಲಿ ಬಲವಿಲ್ಲ, ಏನು ಮಾಡಬೇಕೆಂಬದೂ ತಿಳಿಯದು; ನಮ್ಮ ಕಣ್ಣುಗಳು ನಿನ್ನನ್ನೇ ನೋಡುತ್ತವೆ” ಎಂದು ಉತ್ಕಟಭಾವದಿಂದ ಪ್ರಾರ್ಥಿಸುತ್ತಾ, ಅವನು ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ತಿರುಗಿದನು.—2 ಪೂರ್ವಕಾಲವೃತ್ತಾಂತ 20:12.
ಯೆಹೋವನು ಒಂದು ಪ್ರಾರ್ಥನೆಯನ್ನು ಉತ್ತರಿಸುತ್ತಾನೆ
3. ಯೆಹೂದವು, ನೆರೆಹೊರೆಯ ಜನಾಂಗಗಳ ದಾಳಿಯನ್ನು ಎದುರಿಸುತ್ತಿದ್ದಾಗ ಯೆಹೋವನು ಯಾವ ಸೂಚನೆಗಳನ್ನು ಕೊಟ್ಟನು?
3 “ಎಲ್ಲಾ ಯೆಹೂದ್ಯರೂ ಅವರ ಹೆಂಡತಿಮಕ್ಕಳೂ ಯೆಹೋವನ ಸನ್ನಿಧಿಯಲ್ಲಿ ನಿಂತಿ”ದ್ದಾಗ ಯೆಹೋವನು ಪ್ರತಿಕ್ರಿಯಿಸಿದನು. (2 ಪೂರ್ವಕಾಲವೃತ್ತಾಂತ 20:13) ಪ್ರಾರ್ಥನೆಯ ಮಹಾ ಕೇಳುಗನು ಇಂದು ತನ್ನ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳ”ನ್ನು ಉಪಯೋಗಿಸುವಂತೆಯೇ, ನೆರೆದಿದ್ದವರಿಗೆ ತನ್ನ ಉತ್ತರವನ್ನು ಕೊಡಲು ಆತನು ಲೇವಿ ಯಾಜಕನಾದ ಯಹಜೀಯೇಲನನ್ನು ಶಕ್ತಗೊಳಿಸಿದನು. (ಮತ್ತಾಯ 24:45) ನಾವು ಹೀಗೆ ಓದುತ್ತೇವೆ: “ಯೆಹೋವನು ಹೇಳುವದನ್ನು ಕೇಳಿರಿ! ಈ ಮಹಾಸಮೂಹದ ನಿಮಿತ್ತವಾಗಿ ಕಳವಳಗೊಳ್ಳಬೇಡಿರಿ, ಹೆದರಬೇಡಿರಿ. ಯುದ್ಧವು ನಿಮ್ಮದಲ್ಲ, ದೇವರದೇ. . . . ಈ ಸಾರಿ ನೀವು ಯುದ್ಧಮಾಡುವದು ಅವಶ್ಯವಿಲ್ಲ. . . . ಸುಮ್ಮನೆ ನಿಂತುಕೊಂಡು ಯೆಹೋವನು ನಿಮಗೋಸ್ಕರ ನಡಿಸುವ ರಕ್ಷಣಾಕಾರ್ಯವನ್ನು ನೋಡಿರಿ; ಹೆದರಬೇಡಿರಿ, ಕಳವಳಗೊಳ್ಳಬೇಡಿರಿ. ನಾಳೆ ಅವರೆದುರಿಗೆ ಹೊರಡಿರಿ, ಯೆಹೋವನು ನಿಮ್ಮ ಸಂಗಡ ಇರುವನು.”—2 ಪೂರ್ವಕಾಲವೃತ್ತಾಂತ 20:15-17.
4. ಶತ್ರುವಿನ ಪಂಥಾಹ್ವಾನವನ್ನು ಎದುರಿಸುತ್ತಿದ್ದಾಗ, ತನ್ನ ಜನರು ನಿಷ್ಕ್ರಿಯರಾಗಿರದೆ, ಯಾವ ವಿಧದಲ್ಲಿ ಸಕ್ರಿಯರಾಗಿರುವಂತೆ ಯೆಹೋವನು ಅಪೇಕ್ಷಿಸಿದನು?
4 ರಾಜ ಯೆಹೋಷಾಫಾಟನು ಮತ್ತು ಅವನ ಜನರು ಒಂದು ಅದ್ಭುತಕರವಾದ ವಿಮೋಚನೆಗಾಗಿ ಕಾಯುತ್ತಾ, ಸುಮ್ಮನೆ ಕುಳಿತುಕೊಂಡಿರುವುದಕ್ಕಿಂತಲೂ ಹೆಚ್ಚನ್ನು ಮಾಡುವಂತೆ ಯೆಹೋವನು ಅಪೇಕ್ಷಿಸಿದನು. ಶತ್ರುವಿನ ಪಂಥಾಹ್ವಾನವನ್ನು ನಿಭಾಯಿಸುವುದರಲ್ಲಿ ಅವರು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಬೇಕಿತ್ತು. ರಾಜನು ಮತ್ತು ‘ಎಲ್ಲಾ ಯೆಹೂದ್ಯರೂ ಅವರ ಹೆಂಡತಿಮಕ್ಕಳೂ,’ ವಿಧೇಯತೆಯಿಂದ ಬೆಳಗ್ಗೆ ಬೇಗನೆ ಎದ್ದು, ದಾಳಿಮಾಡುತ್ತಿದ್ದ ದಂಡುಗಳನ್ನು ಎದುರಿಸಲು ಸಾಲುಗಟ್ಟಿ ಮುನ್ನಡೆದಾಗ, ಬಲವಾದ ನಂಬಿಕೆಯನ್ನು ವ್ಯಕ್ತಪಡಿಸಿದರು. ದಾರಿಯಲ್ಲಿ, ರಾಜನು ಅವರಿಗೆ ಹೀಗೆ ಪ್ರೇರಿಸುತ್ತಾ, ದೇವಪ್ರಭುತ್ವ ಉಪದೇಶ ಮತ್ತು ಪ್ರೋತ್ಸಾಹವನ್ನು ಕೊಡುತ್ತಾ ಮುಂದುವರಿದನು: “ಯೆಹೋವನಲ್ಲಿ ಭರವಿಸವಿಡಿರಿ [“ನಂಬಿಕೆಯಿಡಿರಿ,” NW], ಆಗ ಸುರಕ್ಷಿತರಾಗಿರುವಿರಿ; ಆತನ ಪ್ರವಾದಿಗಳನ್ನು ನಂಬಿರಿ, ಆಗ ಸಾರ್ಥಕರಾಗುವಿರಿ.” (2 ಪೂರ್ವಕಾಲವೃತ್ತಾಂತ 20:20) ಯೆಹೋವನಲ್ಲಿ ನಂಬಿಕೆ! ಆತನ ಪ್ರವಾದಿಗಳಲ್ಲಿ ನಂಬಿಕೆ! ಅದು ತಾನೇ ಯಶಸ್ಸಿಗೆ ಕೀಲಿ ಕೈಯಾಗಿತ್ತು. ಅದೇ ರೀತಿಯಲ್ಲಿ ಇಂದು, ನಾವು ಯೆಹೋವನ ಸೇವೆಯಲ್ಲಿ ಸಕ್ರಿಯರಾಗಿ ಮುಂದುವರಿದಂತೆ, ಆತನು ನಮ್ಮ ನಂಬಿಕೆಯನ್ನು ಜಯಶಾಲಿಯನ್ನಾಗಿ ಮಾಡುವನೆಂಬುದನ್ನು ನಾವು ಎಂದೂ ಸಂದೇಹಿಸದಿರೋಣ!
5. ಯೆಹೋವನ ಸಾಕ್ಷಿಗಳು ಇಂದು ಯೆಹೋವನನ್ನು ಸ್ತುತಿಸುತ್ತಿರುವಾಗ ಹೇಗೆ ಸಕ್ರಿಯರಾಗಿದ್ದಾರೆ?
5 ಯೆಹೋಷಾಫಾಟನ ದಿನದ ಯೆಹೂದ್ಯರಂತೆ, ನಾವು ‘ಯೆಹೋವನ ಕೃಪೆಯು ಶಾಶ್ವತವಾಗಿರುವುದರಿಂದ ಆತನಿಗೆ ಕೃತಜ್ಞತಾಸ್ತುತಿ’ ಮಾಡಬೇಕು. ನಾವು ಈ ಸ್ತುತಿಯನ್ನು ಸಲ್ಲಿಸುವುದು ಹೇಗೆ? ನಮ್ಮ ಹುರುಪಿನ ರಾಜ್ಯ ಸಾರುವಿಕೆಯ ಮೂಲಕ! ಆ ಯೆಹೂದ್ಯರು “ಉತ್ಸಾಹಧ್ವನಿಯಿಂದ ಕೀರ್ತಿಸುವದಕ್ಕೆ ಪ್ರಾರಂಭಿ”ಸಿದಂತೆ, ನಾವು ನಮ್ಮ ನಂಬಿಕೆಗೆ ಕ್ರಿಯೆಗಳನ್ನು ಕೂಡಿಸುತ್ತೇವೆ. (2 ಪೂರ್ವಕಾಲವೃತ್ತಾಂತ 20:21, 22) ಹೌದು, ಯೆಹೋವನು ನಮ್ಮ ಶತ್ರುಗಳ ವಿರುದ್ಧ ಕ್ರಿಯೆಗೈಯಲಿಕ್ಕಾಗಿ ಮುನ್ನಡೆಯಲು ತಯಾರಿಸುವಾಗ, ನಾವು ತದ್ರೀತಿಯ ಅಪ್ಪಟ ನಂಬಿಕೆಯನ್ನು ಪ್ರದರ್ಶಿಸೋಣ! ಮಾರ್ಗವು ಉದ್ದವೆಂದು ತೋರಬಹುದಾದರೂ, ಭೂಮಿಯ ಕ್ಲೇಶಭರಿತ ಪರಿಸ್ಥಿತಿಗಳಿಂದ ಬಾಧಿತವಾಗಿರುವ ಕ್ಷೇತ್ರಗಳಲ್ಲಿ ನಮ್ಮ ಜಯಶಾಲಿ ಸಹೋದರರು ಮಾಡುತ್ತಿರುವಂತೆ ನಾವು ನಂಬಿಕೆಯಲ್ಲಿ ಸಕ್ರಿಯರಾಗಿರುತ್ತಾ, ತಾಳಿಕೊಳ್ಳಲು ದೃಢನಿರ್ಧಾರವುಳ್ಳವರಾಗಿರೋಣ. ಯೆಹೋವನ ಸಾಕ್ಷಿಗಳ 1998ರ ವರ್ಷಪುಸ್ತಕ (ಇಂಗ್ಲಿಷ್)ವು ವರದಿಸುವಂತೆ, ಹಿಂಸೆ, ಹಿಂಸಾಚಾರ, ಕ್ಷಾಮ ಮತ್ತು ದಾರುಣವಾದ ಆರ್ಥಿಕ ಪರಿಸ್ಥಿತಿಗಳಿಂದಾಗಿ ತೀವ್ರವಾಗಿ ಬಾಧಿತವಾಗಿರುವ ಕೆಲವು ದೇಶಗಳಲ್ಲಿ ನಮ್ಮ ನಂಬಿಗಸ್ತ ಸಹೋದರರು ಗಮನಾರ್ಹವಾದ ಬೆಳವಣಿಗೆಯನ್ನು ಅನುಭವಿಸುತ್ತಿದ್ದಾರೆ.
ಯೆಹೋವನು ತನ್ನ ಜನರನ್ನು ರಕ್ಷಿಸುತ್ತಾನೆ
6. ಬಲವಾದ ನಂಬಿಕೆಯು, ನಮ್ಮನ್ನು ಇಂದು ನಿಷ್ಠಾವಂತರನ್ನಾಗಿ ಇಡುವುದು ಹೇಗೆ?
6 ಯೆಹೂದವನ್ನು ಸುತ್ತುವರಿದಿದ್ದ ಭಕ್ತಿಹೀನ ಜನಾಂಗಗಳು ದೇವರ ಜನರ ಮೇಲೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು, ಆದರೆ ಇವರು ಯೆಹೋವನ ಸ್ತುತಿಗಳನ್ನು ಹಾಡುವ ಮೂಲಕ ಆದರ್ಶಪ್ರಾಯ ನಂಬಿಕೆಯಿಂದ ಪ್ರತಿಕ್ರಿಯಿಸಿದರು. ಇಂದು ನಾವು ಅದೇ ರೀತಿಯ ನಂಬಿಕೆಯನ್ನು ವ್ಯಕ್ತಪಡಿಸಬಲ್ಲೆವು. ಯೆಹೋವನಿಗೆ ಸ್ತುತಿ ತರುವ ಕೆಲಸಗಳಿಂದ ನಮ್ಮ ಜೀವಿತಗಳನ್ನು ತುಂಬಿಸುವ ಮೂಲಕ, ಸೈತಾನನ ಕುತಂತ್ರದ ಉಪಕರಣಗಳು ಛೇದಿಸಲು ಅವಕಾಶ ಕೊಡದೆ, ನಮ್ಮ ಆತ್ಮಿಕ ಯುದ್ಧಕವಚವನ್ನು ನಾವು ಬಲಪಡಿಸಿಕೊಳ್ಳುತ್ತೇವೆ. (ಎಫೆಸ 6:11) ಬಲವಾದ ನಂಬಿಕೆಯು, ನಮ್ಮ ಸುತ್ತಲಿರುವ ಲೋಕದ ಲಕ್ಷಣಗಳಾಗಿರುವ, ಕೀಳ್ಮಟ್ಟದ ಮನೋರಂಜನೆ, ಪ್ರಾಪಂಚಿಕತೆ, ಮತ್ತು ಉದಾಸೀನತೆಯಿಂದ ನಾವು ವಿಕರ್ಷಿಸಲ್ಪಡುವ ಶೋಧನೆಯನ್ನು ಅದುಮಿಬಿಡುವುದು. ಈ ಅಭೇದ್ಯ ನಂಬಿಕೆಯು, “ಹೊತ್ತುಹೊತ್ತಿಗೆ” ಒದಗಿಸಲ್ಪಡುವ ಆತ್ಮಿಕ ಆಹಾರದ ಪಥ್ಯದಿಂದ ನಾವು ನಿರಂತರವಾಗಿ ಪೋಷಿಸಲ್ಪಡುತ್ತಿರುವಾಗ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ’ನೊಂದಿಗೆ ನಾವು ನಿಷ್ಠೆಯಿಂದ ಸೇವೆಯನ್ನು ಸಲ್ಲಿಸುವಂತೆ ಮಾಡುವುದು.—ಮತ್ತಾಯ 24:45.
7. ಯೆಹೋವನ ಸಾಕ್ಷಿಗಳು, ತಮ್ಮ ವಿರುದ್ಧ ಮಾಡಲ್ಪಟ್ಟ ವಿಭಿನ್ನ ಆಕ್ರಮಣಗಳಿಗೆ ಹೇಗೆ ಪ್ರತಿಕ್ರಿಯಿಸಿದ್ದಾರೆ?
7 ನಮ್ಮ ಬೈಬಲ್ ಆಧಾರಿತ ನಂಬಿಕೆಯು, ಮತ್ತಾಯ 24:48-51ರ ‘ಕೆಟ್ಟ ಆಳಿನ’ ಆತ್ಮವನ್ನು ಪ್ರದರ್ಶಿಸುವವರಿಂದ ಕೆದಕಿಸಲ್ಪಡುವ ದ್ವೇಷ ಚಳುವಳಿಗಳ ವಿರುದ್ಧ ನಮ್ಮನ್ನು ಸಂರಕ್ಷಿಸುವುದು. ಈ ಪ್ರವಾದನೆಯನ್ನು ಒಂದು ಗಮನಾರ್ಹ ವಿಧದಲ್ಲಿ ನೆರವೇರಿಸುತ್ತಾ, ಇಂದು ಧರ್ಮಭ್ರಷ್ಟರು ಅನೇಕ ದೇಶಗಳಲ್ಲಿ ಸುಳ್ಳುಗಳನ್ನು ಮತ್ತು ಅಪಪ್ರಚಾರವನ್ನು ಬಿತ್ತುತ್ತಿದ್ದಾರೆ. ಅವರು ರಾಷ್ಟ್ರಗಳ ನಡುವೆ ಅಧಿಕಾರದಲ್ಲಿರುವವರೊಂದಿಗೆ ಪಿತೂರಿಯನ್ನೂ ನಡೆಸುತ್ತಿದ್ದಾರೆ. ಸೂಕ್ತವಾಗಿರುವಾಗಲೆಲ್ಲ, ಯೆಹೋವನ ಸಾಕ್ಷಿಗಳು ಫಿಲಿಪ್ಪಿ 1:7ರಲ್ಲಿ (NW) ವರ್ಣಿಸಲ್ಪಟ್ಟಿರುವಂತೆ, ‘ಸುವಾರ್ತೆಯನ್ನು ಸಮರ್ಥಿಸುತ್ತಾ, ನ್ಯಾಯಬದ್ಧವಾಗಿ ಸ್ಥಾಪಿಸುವ’ ಮೂಲಕ ಪ್ರತಿಕ್ರಿಯಿಸಿದ್ದಾರೆ. ಹೀಗೆ ವಿಚಾರ, ಮನಸ್ಸಾಕ್ಷಿ, ಮತ್ತು ನಂಬಿಕೆಯ ಸ್ವಾತಂತ್ರ್ಯ ಹಾಗೂ ತಮ್ಮ ನಂಬಿಕೆಯನ್ನು ಪ್ರಸಿದ್ಧಪಡಿಸುವ ಹಕ್ಕನ್ನು ಅನುಭವಿಸಲು ಅರ್ಹವಾಗಿರುವ “‘ಜ್ಞಾತ ಧರ್ಮ’ದ ಸ್ವರೂಪನಿರೂಪಣೆಯೊಳಗೆ ಯೆಹೋವನ ಸಾಕ್ಷಿಗಳು ಬರುತ್ತಾರೆ” ಎಂಬುದನ್ನು ಸೆಪ್ಟೆಂಬರ್ 26, 1996ರಂದು, ಗ್ರೀಸ್ನ ಒಂದು ಮೊಕದ್ದಮೆಯಲ್ಲಿ, ಸ್ಟ್ರಾಸ್ಬರ್ಗ್ನಲ್ಲಿರುವ ಮಾನವ ಹಕ್ಕುಗಳ ಯೂರೋಪಿಯನ್ ನ್ಯಾಯಾಲಯದ ಒಂಬತ್ತು ನ್ಯಾಯಾಧೀಶರು ಸರ್ವಾನುಮತದಿಂದ ಪುನರ್ದೃಢೀಕರಿಸಿದರು. ಧರ್ಮಭ್ರಷ್ಟರ ಕುರಿತಾದರೊ, 2 ಪೇತ್ರ 2:22ರಲ್ಲಿ ಕಂಡುಬರುವ ದೇವರ ನ್ಯಾಯತೀರ್ಪು ತಿಳಿಸುವುದು: “ನಾಯಿ ತಾನು ಕಕ್ಕಿದ್ದನ್ನು ನೆಕ್ಕುವದಕ್ಕೆ ತಿರುಗಿಕೊಂಡಿತು ಮತ್ತು ತೊಳೆದ ಹಂದಿ ಕೆಸರಿನಲ್ಲಿ ಹೊರಳುವದಕ್ಕೆ ಹೋಯಿತು ಎಂಬ ನಿಜವಾದ ಗಾದೆಗೆ ಸರಿಯಾಗಿ ನಡೆದಿದ್ದಾರೆ.”—2 ಪೇತ್ರ 2:22.
8. ಯೆಹೋಷಾಫಾಟನ ದಿನದಲ್ಲಿ, ತನ್ನ ಜನರ ಶತ್ರುಗಳ ವಿರುದ್ಧ ಯೆಹೋವನು ನ್ಯಾಯತೀರ್ಪನ್ನು ಜಾರಿಗೊಳಿಸಿದ್ದು ಹೇಗೆ?
8 ಯೆಹೋಷಾಫಾಟನ ದಿನದಲ್ಲಿ ಯೆಹೋವನು ನ್ಯಾಯತೀರ್ಪನ್ನು ಜಾರಿಗೊಳಿಸುವ ಕುರಿತಾಗಿ ನಾವು ಓದುವುದು: “ಯೆಹೋವನು ಯೆಹೂದ್ಯರಿಗೆ ವಿರೋಧವಾಗಿ ಬಂದ ಅಮ್ಮೋನಿಯರನ್ನೂ ಮೋವಾಬ್ಯರನ್ನೂ ಸೇಯೀರ್ ಪರ್ವತದವರನ್ನೂ ನಶಿಸುವದಕ್ಕೋಸ್ಕರ ಅವರಲ್ಲಿ ಹೊಂಚುಹಾಕುವವರನ್ನು ಇರಿಸಿದ್ದರಿಂದ ಅಮ್ಮೋನಿಯರೂ ಮೋವಾಬ್ಯರೂ ಸೇಯೀರ್ ಪರ್ವತದವರ ಮೇಲೆ ಬಿದ್ದು ಅವರನ್ನು ಪೂರ್ಣವಾಗಿ ಸಂಹರಿಸಿಬಿಟ್ಟರು; ಅವರನ್ನು ಮುಗಿಸಿಬಿಟ್ಟ ಮೇಲೆ ತಾವೇ ಒಬ್ಬರನೊಬ್ಬರು ಕೊಲ್ಲುವದಕ್ಕೆ ಪ್ರಾರಂಭಿಸಿದರು.” (2 ಪೂರ್ವಕಾಲವೃತ್ತಾಂತ 20:22, 23) ಯೆಹೂದ್ಯರು ಆ ಸ್ಥಳವನ್ನು ಬೆರಾಕದ ತಗ್ಗು ಎಂದು ಹೆಸರಿಸಿದರು. ಬೆರಾಕದ ಅರ್ಥ “ಆಶೀರ್ವಾದ” ಎಂದಾಗಿದೆ. ಆಧುನಿಕ ಸಮಯಗಳಲ್ಲೂ, ಯೆಹೋವನು ತನ್ನ ಶತ್ರುಗಳ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸುವುದು, ತನ್ನ ಸ್ವಂತ ಜನರಿಗಾಗಿ ಮಹಾ ಆಶೀರ್ವಾದಗಳಲ್ಲಿ ಫಲಿಸುವುದು.
9, 10. ಯೆಹೋವನ ಪ್ರತಿಕೂಲ ನ್ಯಾಯತೀರ್ಪಿಗೆ ತಮ್ಮನ್ನು ಅರ್ಹರನ್ನಾಗಿ ತೋರಿಸಿಕೊಂಡಿರುವವರು ಯಾರು?
9 ಆಧುನಿಕ ಸಮಯಗಳಲ್ಲಿ ಯೆಹೋವನಿಂದ ಒಂದು ಪ್ರತಿಕೂಲ ನ್ಯಾಯತೀರ್ಪನ್ನು ಪಡೆಯಲಿರುವವರು ಯಾರು? ಎಂದು ನಾವು ಕೇಳಬಹುದು. ಆ ಪ್ರಶ್ನೆಗೆ ಉತ್ತರವನ್ನು ಪಡೆದುಕೊಳ್ಳಲು, ನಾವು ಯೋವೇಲನ ಪ್ರವಾದನೆಗೆ ತಿರುಗಬೇಕು. ‘ಸೂಳೆಗಾಗಿ ಹುಡುಗನನ್ನು ಬದಲುಮಾಡುವ, ದ್ರಾಕ್ಷಾರಸಕ್ಕೆ ಹುಡುಗಿಯನ್ನು ಬದಲುಕೊಟ್ಟು ಪಾನಮಾಡುವ’ ತನ್ನ ಜನರ ಶತ್ರುಗಳ ಕುರಿತಾಗಿ ಯೋವೇಲ 3:3 ಮಾತಾಡುತ್ತದೆ. ಹೌದು, ಅವರು ದೇವರ ಸೇವಕರನ್ನು ತಮಗಿಂತಲೂ ಕಡಮೆ ಅಂತಸ್ತಿನವರು, ಅವರ ಮಕ್ಕಳನ್ನು ಒಬ್ಬ ಸೂಳೆಗೆ ಕೊಡುವ ಕೂಲಿಗಿಂತ ಅಥವಾ ದ್ರಾಕ್ಷಾರಸದ ಹೂಜಿಯ ಬೆಲೆಗಿಂತ ಹೆಚ್ಚು ಯೋಗ್ಯತೆಯಿಲ್ಲದವರಾಗಿ ವೀಕ್ಷಿಸುತ್ತಾರೆ. ಅದಕ್ಕಾಗಿ ಅವರು ಉತ್ತರ ಕೊಡಬೇಕಾಗುವುದು.
10 ಆತ್ಮಿಕ ಸೂಳೆಗಾರಿಕೆಯನ್ನು ನಡಿಸುವವರು ಅಷ್ಟೇ ಸಮಾನವಾಗಿ ತೀರ್ಪಿಗರ್ಹರಾಗಿದ್ದಾರೆ. (ಪ್ರಕಟನೆ 17:3-6) ಮತ್ತು ಯೆಹೋವನ ಸಾಕ್ಷಿಗಳನ್ನು ಹಿಂಸಿಸಲು ಮತ್ತು ಅವರ ಚಟುವಟಿಕೆಯನ್ನು ಅಡ್ಡಗಟ್ಟಿಸಲು ರಾಜಕೀಯ ಶಕ್ತಿಗಳನ್ನು ಪ್ರೇರಿಸುವವರು ವಿಶೇಷವಾಗಿ ದೂಷಣಾರ್ಹರಾಗಿದ್ದಾರೆ. ಇತ್ತೀಚಿನ ಸಮಯಗಳಲ್ಲಿ, ಗಲಭೆಯನ್ನುಂಟುಮಾಡುತ್ತಿರುವ ಧಾರ್ಮಿಕ ಮುಖಂಡರು ಪೂರ್ವ ಯೂರೋಪಿನಲ್ಲಿ ಹಾಗೆಯೇ ಮಾಡುತ್ತಿದ್ದಾರೆ. ಅಂತಹ ದುಷ್ಟತನವನ್ನು ನಡಿಸುವವರೆಲ್ಲರ ವಿರುದ್ಧ ಕ್ರಿಯೆಗೈಯುವ ತನ್ನ ದೃಢನಿರ್ಧಾರವನ್ನು ಯೆಹೋವನು ವ್ಯಕ್ತಪಡಿಸುತ್ತಾನೆ.—ಯೋವೇಲ 3:4-8.
“ಯುದ್ಧವನ್ನು ಪವಿತ್ರೀಕರಿಸಿರಿ!”
11. ಯುದ್ಧಕ್ಕೆ ಬರುವಂತೆ ಯೆಹೋವನು ಹೇಗೆ ತನ್ನ ಶತ್ರುಗಳನ್ನು ಪಂಥಾಹ್ವಾನಿಸುತ್ತಾನೆ?
11 ಮುಂದೆ, ಜನಾಂಗಗಳ ನಡುವೆ ಈ ಪಂಥಾಹ್ವಾನವನ್ನು ಘೋಷಿಸುವಂತೆ ಯೆಹೋವನು ತನ್ನ ಜನರಿಗೆ ಕರೆ ನೀಡುತ್ತಾನೆ: “ಸನ್ನದ್ಧರಾಗಿರಿ, [“ಯುದ್ಧವನ್ನು ಪವಿತ್ರೀಕಿಸಿರಿ!” NW] ಶೂರರನ್ನು ಎಚ್ಚರಪಡಿಸಿರಿ, ಯೋಧರೆಲ್ಲರೂ ಕೂಡಲಿ, ಯುದ್ಧಕ್ಕೆ ಹೊರಡಲಿ.” (ಯೋವೇಲ 3:9) ಇದು ಒಂದು ಅಸಾಮಾನ್ಯ ವಿಧದ ಸಂಗ್ರಾಮದ—ಧಾರ್ಮಿಕ ಸಂಗ್ರಾಮದ—ಒಂದು ಘೋಷಣೆಯಾಗಿದೆ. ಸುಳ್ಳು ಅಪಪ್ರಚಾರಕ್ಕೆ ಪ್ರತಿಕ್ರಿಯೆ ತೋರಿಸಿದಂತೆ, ಸತ್ಯದೊಂದಿಗೆ ಸುಳ್ಳನ್ನು ಎದುರಿಸುವುದಕ್ಕಾಗಿ ಯೆಹೋವನ ನಿಷ್ಠಾವಂತ ಸಾಕ್ಷಿಗಳು ಆತ್ಮಿಕ ಆಯುಧಗಳ ಮೇಲೆ ಆತುಕೊಳ್ಳುತ್ತಾರೆ. (2 ಕೊರಿಂಥ 10:4; ಎಫೆಸ 6:17) ಬೇಗನೆ, “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧ”ವನ್ನು ದೇವರು ಪವಿತ್ರೀಕರಿಸುವನು. ಅದು, ದೇವರ ಪರಮಾಧಿಕಾರದ ಎಲ್ಲ ವಿರೋಧಿಗಳನ್ನು ಭೂಮಿಯಿಂದ ತೆಗೆದುಹಾಕುವುದು. ಭೂಮಿಯ ಮೇಲಿರುವ ಆತನ ಜನರು ಅದರಲ್ಲಿ ಶಾರೀರಿಕವಾಗಿ ಯಾವುದೇ ಪಾಲನ್ನು ತೆಗೆದುಕೊಳ್ಳುವುದಿಲ್ಲ. ಅಕ್ಷರಶಃವಾಗಿ ಮತ್ತು ಸಾಂಕೇತಿಕವಾಗಿ ಅವರು “ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ” ಮಾಡಿದ್ದಾರೆ. (ಯೆಶಾಯ 2:4) ವ್ಯತಿರಿಕ್ತವಾಗಿ, ಯೆಹೋವನು ವಿರೋಧಿ ಜನಾಂಗಗಳಿಗೆ ಅದಕ್ಕೆ ತದ್ವಿರುದ್ಧವಾದುದನ್ನು ಮಾಡುವಂತೆ ಪಂಥಾಹ್ವಾನಿಸುತ್ತಾನೆ: “ನಿಮ್ಮ ಗುಳಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನಾಗಿಯೂ ಕುಡುಗೋಲುಗಳನ್ನು ಬರ್ಜಿಗಳನ್ನಾಗಿಯೂ ಮಾಡಿರಿ.” (ಯೋವೇಲ 3:10) ಅವರು ಹೋರಾಟದಲ್ಲಿ ತಮ್ಮ ಯುದ್ಧ ಯಂತ್ರಗಳ ಮತ್ತು ಆಧುನಿಕ ಶಸ್ತ್ರಾಸ್ತ್ರಗಳ ಇಡೀ ಸಂಗ್ರಹವನ್ನು ವಿನಿಯೋಗಿಸುವಂತೆ ಆತನು ಅವರನ್ನು ಆಮಂತ್ರಿಸುತ್ತಾನೆ. ಆದರೆ ಅವರು ಯಶಸ್ಸನ್ನು ಗಳಿಸಲಾರರು, ಯಾಕಂದರೆ ಹೋರಾಟವೂ, ವಿಜಯವೂ ಯೆಹೋವನಿಗೆ ಸೇರಿದೆ!
12, 13. (ಎ) ಶೀತಲ ಯುದ್ಧದ ಅಂತ್ಯದ ಎದುರಿನಲ್ಲೂ, ಅನೇಕ ರಾಷ್ಟ್ರಗಳು ತಾವು ಇನ್ನೂ ಯುದ್ಧಕ್ಕೆ ಸಿದ್ಧವಾಗಿವೆಯೆಂಬುದನ್ನು ಹೇಗೆ ತೋರಿಸಿವೆ? (ಬಿ) ರಾಷ್ಟ್ರಗಳು ಯಾವುದಕ್ಕಾಗಿ ಸಿದ್ಧರಾಗಿಲ್ಲ?
12 1990ಗಳ ಆದಿ ಭಾಗದಲ್ಲಿ, ಶೀತಲ ಯುದ್ಧವು ಕೊನೆಗೊಂಡಿದೆಯೆಂದು ರಾಷ್ಟ್ರಗಳು ಘೋಷಿಸಿದವು. ಅದರ ನೋಟದಲ್ಲಿ, ವಿಶ್ವ ಸಂಸ್ಥೆಯ ಪ್ರಧಾನ ಗುರಿಯಾದ ಶಾಂತಿ ಮತ್ತು ಭದ್ರತೆಯು ಸಾಧಿಸಲ್ಪಟ್ಟಿದೆಯೊ? ಇಲ್ಲ! ಇರಾಕ್, ಡಿಮೊಕ್ರ್ಯಾಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಬುರುಂಡಿ, ಹಿಂದಿನ ಯುಗೊಸ್ಲಾವಿಯಾ, ರುಆಂಡ, ಲೈಬೀರಿಯ, ಮತ್ತು ಸೋಮಾಲಿಯದಲ್ಲಿನ ಇತ್ತೀಚಿನ ಘಟನೆಗಳು ನಮಗೆ ಏನನ್ನು ಹೇಳುತ್ತವೆ? ಯೆರೆಮೀಯ 6:14ರ ಮಾತುಗಳಲ್ಲಿ, ಅವರು “ಶಾಂತಿಯಿಲ್ಲದಿರುವಾಗ ‘ಶಾಂತಿ ಇದೆ! ಶಾಂತಿ ಇದೆ!’” (NW) ಎಂದು ಹೇಳುತ್ತಿದ್ದಾರೆ.
13 ನೇರವಾದ ಯುದ್ಧವು ಕೆಲವು ಸ್ಥಳಗಳಲ್ಲಿ ನಿಂತಿರುವುದಾದರೂ, ಯುಎನ್ನ ಸದಸ್ಯ ರಾಷ್ಟ್ರಗಳು ಈಗಲೂ ಒಂದು ಇನ್ನೊಂದರೊಂದಿಗೆ, ಯುದ್ಧದ ಹೆಚ್ಚೆಚ್ಚು ಜಟಿಲವಾದ ಆಯುಧಗಳನ್ನು ಉತ್ಪಾದಿಸುವುದರಲ್ಲಿ ಸ್ಪರ್ಧಿಸುತ್ತಿವೆ. ಕೆಲವು ರಾಷ್ಟ್ರಗಳು ನ್ಯೂಕ್ಲಿಯರ್ ಆಯುಧಗಳ ದಾಸ್ತಾನುಗಳನ್ನು ದುರಸ್ತಾಗಿಡುವುದನ್ನು ಮುಂದುವರಿಸುತ್ತಾ ಇವೆ. ಇತರ ರಾಷ್ಟ್ರಗಳು ಸಾಮೂಹಿಕ ನಾಶನದ ರಾಸಾಯನಿಕ ಅಥವಾ ರೋಗಗಳನ್ನುಂಟುಮಾಡುವ ಶಸ್ತ್ರಗಳನ್ನು ವಿಕಸಿಸಿಕೊಳ್ಳುತ್ತಿವೆ. ಅರ್ಮಗೆದೋನ್ ಎಂಬ ಸಾಂಕೇತಿಕ ನಿವೇಶನಕ್ಕೆ ಆ ರಾಷ್ಟ್ರಗಳು ಒಟ್ಟುಗೂಡಿದಂತೆ, ಆತನು ಅವರಿಗೆ ಪಂಥಾಹ್ವಾನವೊಡ್ಡುವುದು: “ದುರ್ಬಲನೂ ಶೂರನೆಂದುಕೊಳ್ಳಲಿ. ಸುತ್ತಣ ಜನಾಂಗಗಳೇ, ತ್ವರೆಪಡಿರಿ, ನೀವೆಲ್ಲರೂ ಬನ್ನಿರಿ, ಕೂಡಿಕೊಳ್ಳಿರಿ.” ಯೋವೇಲನು ಅನಂತರ ತನ್ನ ಸ್ವಂತ ಕೋರಿಕೆಯೊಂದಿಗೆ ಮಧ್ಯೆ ಪ್ರವೇಶಿಸುತ್ತಾನೆ: “ಯೆಹೋವನೇ, ನಿನ್ನ ಶೂರರನ್ನು [ರಣರಂಗಕ್ಕೆ] ಇಳಿಸು.” (ಓರೆಅಕ್ಷರಗಳು ನಮ್ಮವು.)—ಯೋವೇಲ 3:10, 11.
ಯೆಹೋವನು ತನ್ನ ಸ್ವಂತ ಜನರನ್ನು ಸಂರಕ್ಷಿಸುತ್ತಾನೆ
14. ಯೆಹೋವನ ಶೂರರು ಯಾರು?
14 ಯೆಹೋವನ ಶೂರರು ಯಾರು? ಬೈಬಲಿನಲ್ಲಿ ಸುಮಾರು 280 ಸಲ ನಿಜ ದೇವರನ್ನು “ಸೇನಾಧೀಶ್ವರನಾದ ಯೆಹೋವನು” ಎಂದು ಕರೆಯಲಾಗಿದೆ. (2 ಅರಸುಗಳು 3:14) ಈ ಸೇನೆಗಳು, ಯೆಹೋವನ ಅಪ್ಪಣೆಯನ್ನು ಪಾಲಿಸಲು ಸಿದ್ಧರಾಗಿ ನಿಲ್ಲುವ ಸ್ವರ್ಗದಲ್ಲಿನ ದೇವದೂತ ಸೈನ್ಯಗಳಾಗಿವೆ. ಸಿರಿಯದವರು ಎಲೀಷನನ್ನು ಬಂಧಿಸಲು ವ್ಯರ್ಥವಾಗಿ ಪ್ರಯತ್ನಿಸಿದಾಗ, ಅವರು ಏಕೆ ಯಶಸ್ವಿಯಾಗುವುದಿಲ್ಲವೆಂಬುದನ್ನು ನೋಡಲಿಕ್ಕಾಗಿ ಯೆಹೋವನು ಕೊನೆಯಲ್ಲಿ ಎಲೀಷನ ಸೇವಕನ ಕಣ್ಣುಗಳನ್ನು ತೆರೆದನು: “ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥರಥಾಶ್ವಗಳು” ಇದ್ದವು. (2 ಅರಸುಗಳು 6:17) ಯೇಸು ತನ್ನ ತಂದೆಗೆ “ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು” ಬೇಡಿಕೊಳ್ಳಸಾಧ್ಯವಿತ್ತೆಂದು ಅವನು ಹೇಳಿದನು. (ಮತ್ತಾಯ 26:53) ಅರ್ಮಗೆದೋನಿನಲ್ಲಿ ನ್ಯಾಯತೀರ್ಪನ್ನು ಜಾರಿಗೊಳಿಸಲು ಯೇಸು ಮುಂದೆ ಸವಾರಿಗೈಯುವುದನ್ನು ವರ್ಣಿಸುತ್ತಾ, ಪ್ರಕಟನೆ ತಿಳಿಸುವುದು: “ಪರಲೋಕದಲ್ಲಿರುವ ಸೈನ್ಯದವರು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಹತ್ತಿದವರಾಗಿ ಆತನ ಹಿಂದೆ ಬರುತ್ತಿದ್ದರು. ಜನಾಂಗಗಳನ್ನು ಹೊಡೆಯುವದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಬರುತ್ತದೆ. ಆತನು ಅವರನ್ನು ಕಬ್ಬಿಣದ ಕೋಲಿನಿಂದ ಆಳುವನು. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷೆಯ ತೊಟ್ಟಿಯಲ್ಲಿರುವದನ್ನು ತುಳಿಯುತ್ತಾನೆ.” (ಪ್ರಕಟನೆ 19:14, 15) ಆ ಸಾಂಕೇತಿಕ ದ್ರಾಕ್ಷೆತೊಟ್ಟಿಯು, “ದೇವರ ಉಗ್ರಕೋಪವೆಂಬ ದ್ರಾಕ್ಷೆಯ ತೊಟ್ಟಿ”ಯೆಂದು ಕಣ್ಣಿಗೆ ಕಟ್ಟುವಂತಹ ಶಬ್ದಗಳಲ್ಲಿ ವರ್ಣಿಸಲ್ಪಟ್ಟಿದೆ.—ಪ್ರಕಟನೆ 14:17-20.
15. ಜನಾಂಗಗಳ ವಿರುದ್ಧ ಯೆಹೋವನ ಸಂಗ್ರಾಮವನ್ನು ಯೋವೇಲನು ಹೇಗೆ ವರ್ಣಿಸುತ್ತಾನೆ?
15 ದೇವರ ಸ್ವಂತ ಶೂರರನ್ನು ಇಳಿಸುವ ಯೋವೇಲನ ಬೇಡಿಕೆಯನ್ನು ಯೆಹೋವನು ಹೇಗೆ ಉತ್ತರಿಸುತ್ತಾನೆ? ಅದು, ಈ ಸುಸ್ಪಷ್ಟ ವರ್ಣನೆಯ ಮಾತುಗಳಲ್ಲಿದೆ: “ಜನಾಂಗಗಳು ಎಚ್ಚರಗೊಂಡು ಯೆಹೋವನ ನ್ಯಾಯತೀರ್ಪಿನ [“ಯೆಹೋಷಾಫಾಟನ,” NW] ತಗ್ಗಿಗೆ ಬರಲಿ; ಅಲ್ಲೇ ಸುತ್ತಣ ಜನಾಂಗಗಳಿಗೆಲ್ಲಾ ನ್ಯಾಯತೀರಿಸಲು ಆಸೀನನಾಗುವೆನು. [ಯೆಹೋವನ ಶೂರರೇ,] ಕುಡುಗೋಲನ್ನು ಹಾಕಿರಿ, ಫಲವು ಪಕ್ವವಾಗಿದೆ; ಬನ್ನಿರಿ, ತುಳಿಯಿರಿ; ದ್ರಾಕ್ಷೆಯ ಅಲೆಯು ಭರ್ತಿಯಾಗಿದೆ, ತೊಟ್ಟಿಗಳು ತುಂಬಿತುಳುಕುತ್ತಿವೆ; ಜನಾಂಗಗಳ ದುಷ್ಟತನವು ವಿಪರೀತವೇ ಸರಿ. ಆಹಾ, ತೀರ್ಪಿನ ತಗ್ಗಿನಲ್ಲಿ ಗುಂಪು ಗುಂಪು! ತೀರ್ಪಿನ ತಗ್ಗಿನಲ್ಲಿ ಯೆಹೋವನ ದಿನವು ಸಮೀಪಿಸಿದೆ. ಸೂರ್ಯಚಂದ್ರರು ಮಂಕಾಗುತ್ತಾರೆ, ನಕ್ಷತ್ರಗಳು ಕಾಂತಿಯನ್ನು ಅಡಗಿಸಿಕೊಳ್ಳುತ್ತವೆ. ಯೆಹೋವನು ಚೀಯೋನಿನಿಂದ ಗರ್ಜಿಸುತ್ತಾನೆ, ಯೆರೂಸಲೇಮಿನಿಂದ ದನಿಗೈಯುತ್ತಾನೆ; ಭೂಮ್ಯಾಕಾಶಗಳು ನಡುಗುತ್ತವೆ.”—ಯೋವೇಲ 3:12-16.
16. ಯಾರ ವಿರುದ್ಧ ಯೆಹೋವನು ನ್ಯಾಯತೀರ್ಪನ್ನು ಜಾರಿಗೊಳಿಸುವನೊ ಅವರೊಳಗೆ ಯಾರು ಸೇರಿರುವರು?
16 ಯೆಹೋಷಾಫಾಟನ ಹೆಸರಿನ ಅರ್ಥವು, “ಯೆಹೋವನು ನ್ಯಾಯಾಧೀಶನು” ಎಂಬುದು ಎಷ್ಟು ನಿಶ್ಚಿತವೊ, ಅಷ್ಟೇ ನಿಶ್ಚಿತವಾಗಿ ನಮ್ಮ ದೇವರಾದ ಯೆಹೋವನು ನ್ಯಾಯತೀರ್ಪನ್ನು ಜಾರಿಗೊಳಿಸುವುದರಿಂದ ತನ್ನನ್ನು ಪೂರ್ಣವಾಗಿ ನಿರ್ದೋಷೀಕರಿಸಿಕೊಳ್ಳುವನು. ಪ್ರತಿಕೂಲವಾದ ನ್ಯಾಯತೀರ್ಪನ್ನು ಪಡೆಯುವವರನ್ನು ‘ತೀರ್ಪಿನ ತಗ್ಗಿನಲ್ಲಿರುವ ಗುಂಪು, ಗುಂಪು’ ಎಂದು ಪ್ರವಾದನೆಯು ವರ್ಣಿಸುತ್ತದೆ. ಸುಳ್ಳು ಧರ್ಮದ ಉಳಿದಿರುವ ಯಾವುದೇ ಸಮರ್ಥಕರು ಆ ಗುಂಪುಗಳಲ್ಲಿ ಇರುವರು. ಕೀರ್ತನೆ ಎರಡರಲ್ಲಿ ವರ್ಣಿಸಲ್ಪಟ್ಟಿರುವ, ‘ಯೆಹೋವನನ್ನು ಭಯಭಕ್ತಿಯಿಂದ ಸೇವಿಸುವ’ದಕ್ಕಿಂತ ಹೆಚ್ಚಾಗಿ ಈ ಲೋಕದ ಭ್ರಷ್ಟ ವ್ಯವಸ್ಥೆಯನ್ನು ಇಷ್ಟಪಟ್ಟಿರುವ ಅನ್ಯಜನಗಳು, ಜನಾಂಗಗಳವರು, ಭೂಪತಿಗಳು ಅಧಿಕಾರಿಗಳು ಸಹ ಸೇರಿರುವರು. ಇವರು ‘ಮಗನಿಗೆ ಮುತ್ತಿಡಲು’ ನಿರಾಕರಿಸುತ್ತಾರೆ. (ಕೀರ್ತನೆ 2:1, 2, 11, 12) ಅವರು ಯೇಸುವನ್ನು, ಯೆಹೋವನ ಜೊತೆ ರಾಜನಾಗಿ ಅಂಗೀಕರಿಸುವುದಿಲ್ಲ. ಇನ್ನೂ ಹೆಚ್ಚಾಗಿ, ನಾಶನಕ್ಕಾಗಿ ಗುರುತಿಸಲ್ಪಟ್ಟಿರುವ ಆ ಗುಂಪುಗಳು, ಯಾರನ್ನು ಮಹಿಮಾಭರಿತನಾದ ರಾಜನು “ಆಡುಗಳು” ಎಂದು ತೀರ್ಪುಕೊಡುವನೊ ಆ ಎಲ್ಲ ಜನರನ್ನು ಒಳಗೊಳ್ಳುವವು. (ಮತ್ತಾಯ 25:33, 41) ಸ್ವರ್ಗೀಯ ಯೆರೂಸಲೇಮಿನಿಂದ ಗರ್ಜಿಸುತ್ತ ಹೊರಬರಲಿಕ್ಕಾಗಿರುವ ಯೆಹೋವನ ತಕ್ಕ ಸಮಯದಲ್ಲಿ, ಆತನ ಜೊತೆ ರಾಜಾಧಿರಾಜನು ಆ ನ್ಯಾಯತೀರ್ಪನ್ನು ಜಾರಿಗೊಳಿಸಲು ಸವಾರಿಗೈಯುವನು. ಸ್ವರ್ಗಭೂಮಿಗಳು ನಿಶ್ಚಯವಾಗಿಯೂ ನಡುಗುವವು! ಆದಾಗಲೂ, “ಯೆಹೋವನು ತನ್ನ ಜನರಿಗೆ ಆಶ್ರಯವೂ ಇಸ್ರಾಯೇಲ್ಯರಿಗೆ ರಕ್ಷಣದುರ್ಗವೂ ಆಗುವನು” ಎಂಬ ಆಶ್ವಾಸನೆ ನಮಗಿದೆ.—ಯೋವೇಲ 3:16.
17, 18. ಮಹಾ ಸಂಕಟವನ್ನು ಪಾರಾಗುವವರಾಗಿ ಯಾರನ್ನು ಗುರುತಿಸಲಾಗಿದೆ, ಮತ್ತು ಅವರು ಯಾವ ಪರಿಸ್ಥಿತಿಗಳಲ್ಲಿ ಆನಂದಿಸುವರು?
17 ಪ್ರಕಟನೆ 7:9-17, ಮಹಾ ಸಂಕಟವನ್ನು ಪಾರಾಗಿ ಬಂದವರನ್ನು, ಯೇಸುವಿನ ರಕ್ತದ ಪ್ರಾಯಶ್ಚಿತ್ತಗೊಳಿಸುವ ಶಕ್ತಿಯಲ್ಲಿ ನಂಬಿಕೆಯನ್ನಿಟ್ಟಿರುವ ಒಂದು “ಮಹಾ ಸಮೂಹ”ವೆಂದು ಗುರುತಿಸುತ್ತದೆ. ಇವರು ಯೆಹೋವನ ದಿನದಲ್ಲಿ ಸಂರಕ್ಷಣೆಯನ್ನು ಕಂಡುಕೊಳ್ಳುವರು. ವ್ಯತಿರಿಕ್ತವಾಗಿ, ಯೋವೇಲನ ಪ್ರವಾದನೆಯ ಕಿಕ್ಕಿರಿಯುತ್ತಿರುವ ಗುಂಪುಗಳು, ತೀರ್ಪಿನ ತಗ್ಗಿನಲ್ಲಿ ಪ್ರತಿಕೂಲ ನ್ಯಾಯತೀರ್ಪನ್ನು ಎದುರಿಸಬೇಕಾಗುವುದು. ಪಾರಾಗುವವರಿಗೆ ಯೋವೇಲನು ಹೇಳುವುದು: “ನಾನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನಲ್ಲಿ”—ಯೆಹೋವನ ಸ್ವರ್ಗೀಯ ನಿವಾಸ—“ನೆಲೆಯಾಗಿ ನಿಮ್ಮ ದೇವರಾದ ಯೆಹೋವನಾಗಿದ್ದೇನೆ ಎಂದು ನಿಮಗೆ ದೃಢವಾಗುವದು.”—ಯೋವೇಲ 3:17ಎ.
18 ದೇವರ ಸ್ವರ್ಗೀಯ ರಾಜ್ಯದ ಕ್ಷೇತ್ರವು “ಪವಿತ್ರವಾಗಿರುವದು; ಮ್ಲೇಚ್ಛರು [“ಪರಕೀಯರು,” NW] ಇನ್ನು ಅದನ್ನು ಹಾದುಹೋಗರು” ಎಂದು ಆ ಪ್ರವಾದನೆಯು ಅನಂತರ ನಮಗೆ ತಿಳಿಸುತ್ತದೆ. (ಯೋವೇಲ 3:17ಬಿ) ಸ್ವರ್ಗದಲ್ಲಿ ಮತ್ತು ಆ ಸ್ವರ್ಗೀಯ ರಾಜ್ಯದ ಭೂಕ್ಷೇತ್ರದಲ್ಲಿ, ಪರಕೀಯರು ಯಾರೂ ಇರುವುದಿಲ್ಲ, ಯಾಕಂದರೆ ಎಲ್ಲರೂ ಶುದ್ಧ ಆರಾಧನೆಯಲ್ಲಿ ಐಕ್ಯರಾಗಿರುವರು.
19. ಇಂದು ದೇವರ ಜನರಿಗಿರುವ ಪ್ರಮೋದವನೀಯ ಸಂತೋಷವು ಯೋವೇಲನಿಂದ ಹೇಗೆ ವರ್ಣಿಸಲ್ಪಟ್ಟಿದೆ?
19 ಇಂದು ಕೂಡ, ಇಲ್ಲಿ ಭೂಮಿಯ ಮೇಲೆ ಯೆಹೋವನ ಜನರ ನಡುವೆ ಶಾಂತಿಯ ಸಮೃದ್ಧತೆಯು ಚಾಲ್ತಿಯಲ್ಲಿದೆ. ಐಕ್ಯವಾಗಿ, ಅವರು 230ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಮತ್ತು 300ಕ್ಕಿಂತಲೂ ಹೆಚ್ಚು ವಿಭಿನ್ನ ಭಾಷೆಗಳಲ್ಲಿ ಆತನ ನ್ಯಾಯತೀರ್ಪುಗಳನ್ನು ಘೋಷಿಸುತ್ತಿದ್ದಾರೆ. ಅವರ ಸಮೃದ್ಧತೆಯು ಯೋವೇಲನಿಂದ ಸುಂದರವಾಗಿ ವರ್ಣಿಸಲ್ಪಟ್ಟಿದೆ: “ಆ ಕಾಲದಲ್ಲಿ ಬೆಟ್ಟಗಳಿಂದ ದ್ರಾಕ್ಷಾರಸವು ಸುರಿಯುವದು, ಗುಡ್ಡಗಳಿಂದ ಹಾಲುಹರಿಯುವದು, ಯೆಹೂದದ ತೊರೆಗಳಲ್ಲೆಲ್ಲಾ ನೀರುತುಂಬಿರುವದು.” (ಯೋವೇಲ 3:18) ಹೌದು, ಯೆಹೋವನು ಭೂಮಿಯ ಮೇಲಿರುವ ತನ್ನ ಸ್ತುತಿಗಾರರ ಮೇಲೆ, ಆನಂದಕರ ಆಶೀರ್ವಾದಗಳ ಒಂದು ಪ್ರವಾಹ, ಮತ್ತು ಸಮೃದ್ಧತೆ ಮತ್ತು ಬಹುಮೂಲ್ಯ ಸತ್ಯದ ಹೆಚ್ಚುತ್ತಿರುವ ಹೊನಲನ್ನು ಸುರಿಸುವುದನ್ನು ಮುಂದುವರಿಸುವನು. ಯೆಹೋವನ ಪರಮಾಧಿಕಾರವು ತೀರ್ಪಿನ ತಗ್ಗಿನಲ್ಲಿ ಸಂಪೂರ್ಣವಾಗಿ ನಿರ್ದೋಷೀಕರಿಸಲ್ಪಡುವುದು, ಮತ್ತು ಆತನು ತನ್ನ ಬಿಡುಗಡೆಗೊಳಿಸಲ್ಪಟ್ಟಿರುವ ಜನರ ನಡುವೆ ಸದಾಕಾಲ ವಾಸಿಸಿದಂತೆ ಆನಂದವು ತುಂಬಿತುಳುಕುವುದು.—ಪ್ರಕಟನೆ 21:3, 4.
ನೀವು ಜ್ಞಾಪಿಸಿಕೊಳ್ಳಬಲ್ಲಿರೊ?
◻ ಯೆಹೋಷಾಫಾಟನ ದಿನಗಳಲ್ಲಿ ಯೆಹೋವನು ತನ್ನ ಜನರನ್ನು ಹೇಗೆ ರಕ್ಷಿಸಿದನು?
◻ ಯೆಹೋವನು ಯಾರನ್ನು “ತೀರ್ಪಿನ ತಗ್ಗಿನಲ್ಲಿ” ನಾಶನಕ್ಕಾಗಿ ಅರ್ಹರೆಂದು ತೀರ್ಪು ಮಾಡುತ್ತಾನೆ?
◻ ದೇವರ ಶೂರರು ಯಾರು ಮತ್ತು ಕೊನೆಯ ಸಂಘರ್ಷಣೆಯಲ್ಲಿ ಅವರು ಯಾವ ಪಾತ್ರವನ್ನು ವಹಿಸುವರು?
◻ ನಂಬಿಗಸ್ತ ಆರಾಧಕರು ಯಾವ ಆನಂದಗಳನ್ನು ಅನುಭವಿಸುತ್ತಾರೆ?
[ಪುಟ 21 ರಲ್ಲಿರುವ ಚಿತ್ರ]
ಯೆಹೂದಕ್ಕೆ ಹೀಗೆ ಹೇಳಲಾಯಿತು: ‘ಹೆದರಬೇಡಿ. ಯುದ್ಧವು ನಿಮ್ಮದಲ್ಲ, ದೇವರದ್ದು’
[ಪುಟ 23 ರಲ್ಲಿರುವ ಚಿತ್ರ]
ಯೆಹೋವನು ತನ್ನ ಶತ್ರುಗಳಿಗೆ, ‘ತಮ್ಮ ಗುಳಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನಾಗಿ ಮಾಡುವಂತೆ’ ಪಂಥಾಹ್ವಾನಿಸುತ್ತಾನೆ
[ಪುಟ 24 ರಲ್ಲಿರುವ ಚಿತ್ರ]
ಬೈಬಲು, ಮಹಾ ಸಂಕಟವನ್ನು ಪಾರಾಗುವವರ ಒಂದು ಮಹಾ ಸಮೂಹವನ್ನು ಗುರುತಿಸುತ್ತದೆ