ಧರ್ಮೋಪದೇಶಕಾಂಡ
24 ಒಬ್ಬ ಪುರುಷ ಮದುವೆಯಾದ ಮೇಲೆ ಅವನ ಹೆಂಡತಿ ಅಸಹ್ಯವಾಗಿ ನಡ್ಕೊಂಡಿದ್ದು ಗೊತ್ತಾಗಿ ಅವಳ ಜೊತೆ ಜೀವನ ಮಾಡೋಕೆ ಇಷ್ಟ ಇಲ್ಲದಿದ್ರೆ ಅವನು ವಿಚ್ಛೇದನ ಪತ್ರ ಬರೆದು+ ಕೊಟ್ಟು ಅವಳನ್ನ ಮನೆಯಿಂದ ಕಳಿಸಿಬಿಡಬೇಕು.+ 2 ಅವಳು ಅವನ ಮನೆ ಬಿಟ್ಟು ಬಂದ್ಮೇಲೆ ಇನ್ನೊಬ್ಬನನ್ನ ಮದುವೆ ಆಗಬಹುದು.+ 3 ಎರಡನೇ ಗಂಡಾನೂ ಅವಳನ್ನ ದ್ವೇಷಿಸಿ,* ವಿಚ್ಛೇದನ ಪತ್ರ ಬರೆದು ಕೊಟ್ಟು ಮನೆಯಿಂದ ಕಳಿಸಿಬಿಟ್ರೆ ಅಥವಾ ಅವನು ಸತ್ತುಹೋದ್ರೆ 4 ಅವಳನ್ನ ಈ ಮುಂಚೆ ಮನೆಯಿಂದ ಕಳಿಸಿಬಿಟ್ಟ ಅವಳ ಮೊದಲ್ನೇ ಗಂಡ ಅವಳನ್ನ ಮತ್ತೆ ಮದುವೆ ಆಗೋ ಹಾಗಿಲ್ಲ. ಯಾಕಂದ್ರೆ ಈಗಾಗ್ಲೇ ಅವಳು ಅಶುದ್ಧಳು. ಹಾಗೆ ಮದುವೆ ಆಗೋದು ಯೆಹೋವನಿಗೆ ಅಸಹ್ಯ. ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ದೇಶದಲ್ಲಿ ನೀವು ಇಂಥ ಪಾಪ ಮಾಡಬಾರದು.
5 ಹೊಸದಾಗಿ ಮದುವೆಯಾದ ಪುರುಷ ಸೈನ್ಯಕ್ಕೆ ಸೇರಬಾರದು, ಅವನಿಗೆ ಬೇರೆ ಯಾವ ಕೆಲಸಾನೂ ಕೊಡಬಾರದು. ಒಂದು ವರ್ಷ ಮನೆಯಲ್ಲೇ ಇರೋಕೆ ಅವನನ್ನ ಬಿಡಬೇಕು. ಅವನು ಆ ವರ್ಷ ಮನೆಯಲ್ಲಿದ್ದು ತನ್ನ ಹೆಂಡತಿನ ಖುಷಿಪಡಿಸಬೇಕು.+
6 ಇನ್ನೊಬ್ಬನಿಗೆ ಸಾಲ ಕೊಡುವಾಗ ಯಾರೂ ಬೀಸೋ ಕಲ್ಲಾಗ್ಲಿ ಅದ್ರ ಮೇಲಿನ ಕಲ್ಲಾಗ್ಲಿ ಅಡ ಇಟ್ಕೊಬಾರದು.+ ಅದನ್ನ ಅಡ ಇಟ್ಕೊಂಡ್ರೆ ಅವನ ತಿನ್ನೋ ಊಟನೇ* ಕಿತ್ಕೊಂಡ ಹಾಗೆ.
7 ಒಬ್ಬ ತನ್ನ ಇಸ್ರಾಯೇಲ್ಯ ಸಹೋದರನನ್ನ ಅಪಹರಿಸಿ ಅವನಿಗೆ ಕಷ್ಟಕೊಟ್ಟು ಅವನನ್ನ ಮಾರಿದ್ದಾನೆ+ ಅಂತ ಗೊತ್ತಾದ್ರೆ ಅಪಹರಿಸಿದವನನ್ನ ಸಾಯಿಸಬೇಕು.+ ನಿಮ್ಮ ಮಧ್ಯದಿಂದ ಆ ಕೆಟ್ಟತನನ ತೆಗೆದುಹಾಕಬೇಕು.+
8 ಕುಷ್ಠರೋಗ* ಬಂದ್ರೆ ಲೇವಿಯರಾದ ಪುರೋಹಿತರು ನಿಮಗೆ ಏನೆಲ್ಲ ನಿರ್ದೇಶನ ಕೊಡ್ತಾರೋ ಅದನ್ನೆಲ್ಲ ಸರಿಯಾಗಿ ಪಾಲಿಸಬೇಕು.+ ನಾನು ಅವರಿಗೆ ಆಜ್ಞೆ ಕೊಟ್ಟ ಪ್ರಕಾರನೇ ನೀವೂ ಮಾಡಬೇಕು. 9 ನೀವು ಈಜಿಪ್ಟಿಂದ ಬರ್ತಿದ್ದಾಗ ದಾರಿಯಲ್ಲಿ ನಿಮ್ಮ ದೇವರಾದ ಯೆಹೋವ ಮಿರ್ಯಾಮಗೆ ಏನು ಮಾಡಿದ ಅಂತ ಮರಿಬೇಡಿ.+
10 ನೀವು ಒಬ್ಬನಿಗೆ ಸಾಲ ಕೊಟ್ರೆ+ ಅವನು ಅಡ ಇಡ್ತೀನಿ ಅಂತ ಹೇಳಿರೋ ವಸ್ತುನ ನೀವೇ ಅವನ ಮನೆ ಒಳಗೆ ಹೋಗಿ ತಗೊಬಾರದು. 11 ನೀವು ಮನೆ ಹೊರಗೆ ನಿಂತ್ಕೊಬೇಕು. ನಿಮ್ಮಿಂದ ಸಾಲ ತಗೊಂಡವನೇ ಆ ವಸ್ತು ತಂದು ಕೊಡಬೇಕು. 12 ಸಾಲ ತಗೊಂಡವನು ಬಡವನಾಗಿದ್ರೆ ಅವನು ಅಡ ಇಟ್ಟ ಕಂಬಳಿನ ನೀವು ಮಾರನೇ ದಿನದ ತನಕ ನಿಮ್ಮ ಹತ್ರ ಇಟ್ಕೊಬಾರದು.+ 13 ಅದನ್ನ ಅದೇ ದಿನ ಸೂರ್ಯ ಮುಳುಗಿದ ತಕ್ಷಣ ಅವನಿಗೆ ಕೊಟ್ಟುಬಿಡಬೇಕು. ಆಗ ಅವನು ಮಲಗೋವಾಗ ಅದನ್ನ ಹೊದ್ಕೊಂಡು+ ನಿಮ್ಮನ್ನ ಆಶೀರ್ವದಿಸ್ತಾನೆ. ಹೀಗೆ ಮಾಡಿದ್ರೆ ನಿಮ್ಮ ದೇವರಾದ ಯೆಹೋವನ ಮುಂದೆ ನೀವು ನೀತಿವಂತರಾಗಿ ಇರ್ತಿರ.
14 ಕಷ್ಟದಲ್ಲಿರೋ, ಬಡವನಾಗಿರೋ ಕೂಲಿ ಕೆಲಸ ಮಾಡೋನಿಗೆ ನೀವು ಮೋಸ ಮಾಡಬಾರದು. ಅವನು ನಿಮ್ಮ ಸಹೋದರ ಆಗಿದ್ರೂ, ನಿಮ್ಮ ಪಟ್ಟಣದಲ್ಲಿ ವಾಸಿಸೋ ವಿದೇಶಿ ಆಗಿದ್ರೂ ಹಾಗೆ ಮಾಡಬಾರದು.+ 15 ಕಷ್ಟದಲ್ಲಿರೋ ವ್ಯಕ್ತಿಗೆ ಆ ಕೂಲಿಯಿಂದಾನೇ ಜೀವನ ನಡೀಬೇಕು. ಹಾಗಾಗಿ ಅವನ ಕೂಲಿನ ಅದೇ ದಿನ ಸೂರ್ಯ ಮುಳುಗೋ ಮುಂಚೆ ಕೊಟ್ಟುಬಿಡಬೇಕು.+ ಅವನಿಗೆ ಕೂಲಿ ಕೊಡಲಿಲ್ಲಾಂದ್ರೆ ಅವನು ನಿಮ್ಮನ್ನ ಬೈತಾ ಯೆಹೋವನಿಗೆ ಪ್ರಾರ್ಥಿಸ್ತಾನೆ, ನೀವು ಆತನ ದೃಷ್ಟಿಯಲ್ಲಿ ಪಾಪಿಗಳಾಗ್ತೀರ.+
16 ಮಕ್ಕಳು ಮಾಡಿದ ಪಾಪಕ್ಕೆ ತಂದೆಗೆ ಮರಣಶಿಕ್ಷೆ ಆಗಬಾರದು. ತಂದೆ ಮಾಡಿದ ಪಾಪಕ್ಕೆ ಮಕ್ಕಳಿಗೆ ಮರಣಶಿಕ್ಷೆ ಆಗಬಾರದು.+ ಪಾಪ ಮಾಡಿದವ್ರಿಗೇ ಮರಣಶಿಕ್ಷೆ ಆಗಬೇಕು.+
17 ನ್ಯಾಯವಿಚಾರಣೆ ಮಾಡುವಾಗ ನಿಮ್ಮ ಮಧ್ಯ ವಾಸಿಸೋ ವಿದೇಶಿಯರಿಗೆ, ಅನಾಥ ಮಕ್ಕಳಿಗೆ*+ ಅನ್ಯಾಯವಾಗಿ ತೀರ್ಪು ಕೊಡಬಾರದು. ವಿಧವೆಗೆ ಸಾಲ ಕೊಡುವಾಗ ಅವಳ ಬಟ್ಟೆ ಅಡ ಇಟ್ಕೊಬಾರದು.+ 18 ನೀವು ಈಜಿಪ್ಟಲ್ಲಿ ಗುಲಾಮರಾಗಿದ್ರಿ ಅನ್ನೋದನ್ನ ಮರಿಬೇಡಿ. ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಅಲ್ಲಿಂದ ಬಿಡಿಸ್ಕೊಂಡು ಬಂದನು.+ ಅದಕ್ಕೇ ನಿಮಗೆ ಈ ಆಜ್ಞೆಗಳನ್ನ ಕೊಡ್ತಾ ಇದ್ದೀನಿ.
19 ನೀವು ಹೊಲದಲ್ಲಿ ಕೊಯ್ಲು ಮಾಡಿ ಒಂದು ತೆನೆ ಕಟ್ಟನ್ನ ಮರೆತು ಬಂದಿದ್ರೆ ಅದನ್ನ ತರೋಕೆ ಮತ್ತೆ ಹೊಲಕ್ಕೆ ಹೋಗಬಾರದು. ಅದನ್ನ ವಿದೇಶಿಯರಿಗೆ, ಅನಾಥ ಮಕ್ಕಳಿಗೆ, ವಿಧವೆಯರಿಗೆ ಬಿಟ್ಟುಬಿಡಬೇಕು.+ ಹೀಗೆ ಮಾಡಿದ್ರೆ ನಿಮ್ಮ ದೇವರಾದ ಯೆಹೋವ ನೀವು ಮಾಡೋ ಎಲ್ಲ ಕೆಲಸನ ಆಶೀರ್ವದಿಸ್ತಾನೆ.+
20 ಆಲಿವ್ ಮರದ ಕೊಂಬೆಗಳನ್ನ ಹೊಡೆದು ಒಂದು ಸಲ ಕಾಯಿ ಉದುರಿಸಿದ ಮೇಲೆ ಮತ್ತೆ ಕೊಂಬೆಗಳನ್ನ ಹೊಡೆದು ಕಾಯಿ ಉದುರಿಸಬಾರದು. ಮರದಲ್ಲಿ ಉಳಿದ ಕಾಯಿಗಳನ್ನ ವಿದೇಶಿಯರಿಗೆ, ಅನಾಥ ಮಕ್ಕಳಿಗೆ, ವಿಧವೆಯರಿಗೆ ಬಿಟ್ಟುಬಿಡಬೇಕು.+
21 ನಿಮ್ಮ ದ್ರಾಕ್ಷಿತೋಟದಲ್ಲಿ ಹಣ್ಣುಗಳನ್ನ ಒಂದುಸಲ ಕೂಡಿಸ್ಕೊಂಡು ಬಂದ ಮೇಲೆ ಮತ್ತೆ ಹೋಗಿ ಉಳಿದ ಹಣ್ಣುಗಳನ್ನ ಕೂಡಿಸ್ಕೊಬಾರದು. ಅವನ್ನ ವಿದೇಶಿಯರಿಗೆ, ಅನಾಥ ಮಕ್ಕಳಿಗೆ, ವಿಧವೆಯರಿಗೆ ಬಿಟ್ಟುಬಿಡಬೇಕು. 22 ನೀವು ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ರಿ ಅನ್ನೋದನ್ನ ಮರಿಬೇಡಿ. ಅದಕ್ಕೇ ನಿಮಗೆ ಈ ಆಜ್ಞೆಗಳನ್ನ ಕೊಡ್ತಾ ಇದ್ದೀನಿ.