ಅರಣ್ಯಕಾಂಡ
11 ಜನ ತುಂಬ ಕೋಪದಿಂದ ಯೆಹೋವನ ಮುಂದೆ ದೂರೋಕೆ ಶುರು ಮಾಡಿದ್ರು. ಇದನ್ನ ಕೇಳಿ ಯೆಹೋವನಿಗೆ ಕೋಪ ಬಂತು. ಯೆಹೋವ ಬೆಂಕಿ ಕಳಿಸಿ ಪಾಳೆಯದ ಅಂಚಲ್ಲಿದ್ದ ಜನ್ರಲ್ಲಿ ಕೆಲವರನ್ನ ಸುಟ್ಟುಬಿಟ್ಟನು. 2 ಆಗ ಜನ ಸಹಾಯಕ್ಕಾಗಿ ಮೋಶೆಯನ್ನ ಬೇಡ್ಕೊಂಡ್ರು. ಅವನು ಯೆಹೋವನಿಗೆ ಅಂಗಲಾಚಿ ಬೇಡಿದ+ ಮೇಲೆ ಬೆಂಕಿ ಆರಿಹೋಯ್ತು. 3 ಯೆಹೋವ ಬೆಂಕಿ ಕಳಿಸಿ ಅವರನ್ನ ಸುಟ್ಟುಬಿಟ್ಟಿದ್ರಿಂದ ಆ ಸ್ಥಳಕ್ಕೆ ತಬೇರಾ* ಅಂತ ಹೆಸರಿಟ್ರು.+
4 ಇಸ್ರಾಯೇಲ್ಯರ ಮಧ್ಯ ಇದ್ದ ವಿದೇಶೀ ಜನ*+ ಮಾಂಸ ತಿನ್ನೋಕೆ ಅತಿ ಆಸೆ ಪಟ್ರು.+ ಇಸ್ರಾಯೇಲ್ಯರು ಅವ್ರ ಜೊತೆ ಸೇರಿ ಮತ್ತೆ ಅಳ್ತಾ “ಅಯ್ಯೋ, ನಮಗೆ ತಿನ್ನೋಕೆ ಮಾಂಸ ಇಲ್ವಲ್ಲಾ.+ 5 ಈಜಿಪ್ಟಲ್ಲಿದ್ದಾಗ ತಿಂತಿದ್ದ ಆಹಾರ ನೆನಪಾಗ್ತಿದೆ. ಅಲ್ಲಿ ನಮಗೆ ಮೀನು ಪುಕ್ಕಟೆ ಸಿಗ್ತಿತ್ತು, ಬೇಕಾದಷ್ಟು ತಿಂತಿದ್ವಿ! ಸೌತೆಕಾಯಿ, ಕಲ್ಲಂಗಡಿ, ಈರುಳ್ಳಿ, ಬೆಳ್ಳುಳ್ಳಿ ಯಾವುದಕ್ಕೂ ಕಡಿಮೆ ಇರಲಿಲ್ಲ!+ 6 ಆದ್ರೆ ಇಲ್ಲಿ ಮನ್ನ+ ಬಿಟ್ರೆ ತಿನ್ನೋಕೆ ಬೇರೇನೂ ಇಲ್ಲ, ಸೊರಗಿ ಹೋಗ್ತಾ ಇದ್ದೀವಿ” ಅಂತ ಹೇಳೋಕೆ ಶುರು ಮಾಡಿದ್ರು.
7 ಮನ್ನ+ ಕೊತ್ತುಂಬರಿ ಬೀಜದ ತರ ಇತ್ತು.+ ಅದು ಸುಗಂಧ ಅಂಟಿನ ತರ* ಕಾಣ್ತಿತ್ತು. 8 ಜನ ಸುತ್ತಮುತ್ತ ಎಲ್ಲ ಕಡೆ ಹೋಗಿ ಅದನ್ನ ಕೂಡಿಸ್ಕೊಳ್ತಾ ಇದ್ರು. ಅದನ್ನ ಬೀಸೋ ಕಲ್ಲಲ್ಲಿ ಅರಿತಿದ್ರು ಅಥವಾ ಒರಳಲ್ಲಿ ಕುಟ್ತಿದ್ರು. ಆಮೇಲೆ ಪಾತ್ರೆಯಲ್ಲಿ ಹಾಕಿ ಬೇಯಿಸ್ತಿದ್ರು ಅಥವಾ ದುಂಡಗಿನ ರೊಟ್ಟಿಗಳನ್ನ ಮಾಡ್ತಿದ್ರು.+ ಅದ್ರ ರುಚಿ ಎಣ್ಣೆ ಬೆರೆಸಿ ಮಾಡಿದ ತೆಳುವಾದ ಸಿಹಿ ರೊಟ್ಟಿ ತರ ಇತ್ತು. 9 ರಾತ್ರಿ ಹೊತ್ತಲ್ಲಿ ಇಬ್ಬನಿ ಪಾಳೆಯದಲ್ಲಿ ಬೀಳ್ತಿದ್ದಾಗ ಅದ್ರ ಜೊತೆ ಮನ್ನನೂ ಬೀಳ್ತಿತ್ತು.+
10 ಪ್ರತಿಯೊಬ್ರೂ ಪ್ರತಿಯೊಂದು ಕುಟುಂಬನೂ ತಮ್ಮತಮ್ಮ ಡೇರೆ ಬಾಗಿಲಲ್ಲಿ ನಿಂತ್ಕೊಂಡು ಅಳ್ತಾ ಇರೋದು ಮೋಶೆಗೆ ಕೇಳಿಸ್ತು. ಜನ ಹೀಗೆ ಮಾಡೋದನ್ನ ನೋಡಿ ಯೆಹೋವನಿಗೆ ತುಂಬ ಕೋಪ ಬಂತು.+ ಮೋಶೆಗೂ ತುಂಬ ಬೇಜಾರಾಯ್ತು. 11 ಆಗ ಮೋಶೆ ಯೆಹೋವನಿಗೆ “ನಾನೇನು ಮಾಡ್ದೆ ಅಂತ ನನಗೆ ಈ ಕಷ್ಟಕೊಡ್ತಾ ಇದ್ದೀಯ? ನಾನು ನಿನ್ನ ಮೆಚ್ಚಿಗೆ ಕಳ್ಕೊಂಡಿದ್ದೀನಾ? ಅದಕ್ಕೇ ಇಷ್ಟು ಜನ್ರನ್ನ ನೋಡ್ಕೊಳ್ಳೋ ಭಾರವಾದ ಜವಾಬ್ದಾರಿನ ನನ್ನ ಮೇಲೆ ಹಾಕಿದ್ದೀಯಾ?+ 12 ಇವ್ರ ಪೂರ್ವಜರಿಗೆ ಕೊಡ್ತೀನಂತ ನೀನು ಮಾತುಕೊಟ್ಟ ದೇಶಕ್ಕೆ+ ಇವರನ್ನ ಕರ್ಕೊಂಡು ಹೋಗೋಕೆ, ‘ಹಾಲು ಕುಡಿಯೋ ಮಗುನ ಎದೆಗೆ ಎತ್ಕೊಂಡು ಹೋಗೋ ಸೇವಕನ ತರ ಇವ್ರನ್ನ ಎತ್ಕೊಂಡು ಹೋಗೋಕೆ’ ನನಗೆ ಹೇಳ್ತಾ ಇದ್ದೀಯಲ್ಲಾ. ನಾನೇನು ಇವ್ರನ್ನ ನನ್ನ ಹೊಟ್ಟೆಯಲ್ಲಿ ಹೊತ್ತು ಹೆತ್ತಿದ್ದೀನಾ? 13 ಈ ಜನ ನನ್ನ ಹತ್ರ ಬಂದು ಅಳ್ತಾ ‘ನಮಗೆ ಮಾಂಸ ಬೇಕು, ಮಾಂಸ ಬೇಕು’ ಅಂತ ಕೇಳ್ತಿದ್ದಾರೆ. ಇಷ್ಟೊಂದು ಜನ್ರಿಗೆ ಎಲ್ಲಿಂದ ಮಾಂಸ ತಂದ್ಕೊಡ್ಲಿ? 14 ಇಷ್ಟು ಜನ್ರನ್ನ ನೋಡ್ಕೊಳ್ಳೋ ಭಾರನ ನಾನೊಬ್ಬನೇ ಹೊತ್ತು ಹೊತ್ತು ಸಾಕಾಗಿ ಹೋಗಿದೆ. ಇನ್ನು ನನ್ನಿಂದಾಗಲ್ಲ.+ 15 ನನ್ನ ಮೇಲಿಂದ ಈ ಭಾರನ ನೀನು ತೆಗಿಯಲ್ಲಾಂದ್ರೆ ಈಗ್ಲೇ ನನ್ನನ್ನ ಸಾಯಿಸಿಬಿಡು.+ ನನ್ನ ಮೇಲೆ ದಯೆ ಇದ್ರೆ ನನಗೆ ಇನ್ನೂ ಕಷ್ಟ ಬರೋಕೆ ಬಿಡಬೇಡ” ಅಂದ.
16 ಅದಕ್ಕೆ ಯೆಹೋವ ಮೋಶೆಗೆ ಹೀಗಂದನು: “ಇಸ್ರಾಯೇಲ್ಯರ ಹಿರಿಯರಲ್ಲಿ ಸಮರ್ಥರೂ ಜನ್ರ ಅಧಿಕಾರಿಗಳೂ ಅಂತ ನಿನಗೆ ಗೊತ್ತಿರೋ 70 ಜನ್ರನ್ನ ಆರಿಸು.+ ಅವರನ್ನ ದೇವದರ್ಶನ ಡೇರೆಗೆ ಕರ್ಕೊಂಡು ಹೋಗು. ಅಲ್ಲಿ ಅವರು ನಿನ್ನ ಜೊತೆ ನಿಲ್ಲಲಿ. 17 ನಾನು ಅಲ್ಲಿಗೆ ಇಳಿದು ಬಂದು+ ನಿನ್ನ ಜೊತೆ ಮಾತಾಡ್ತೀನಿ.+ ನಿನಗೆ ಕೊಟ್ಟಿರೋ ನನ್ನ ಪವಿತ್ರಶಕ್ತಿಯಲ್ಲಿ+ ಸ್ವಲ್ಪ ತೆಗೆದು ಅವರಿಗೆ ಕೊಡ್ತೀನಿ. ಆಗ ಜನ್ರನ್ನ ನೋಡ್ಕೊಳ್ಳೋ ಭಾರನ ನೀನೊಬ್ಬನೇ ಹೊರಬೇಕಾಗಿಲ್ಲ.+ ಅವರು ನಿನಗೆ ಸಹಾಯ ಮಾಡ್ತಾರೆ. 18 ನೀನು ಜನ್ರಿಗೆ ‘ನಾಳೆಗಾಗಿ ನಿಮ್ಮನ್ನ ಶುದ್ಧ ಮಾಡ್ಕೊಳ್ಳಿ.+ ನಾಳೆ ನಿಮಗೆ ತಿನ್ನೋಕೆ ಖಂಡಿತ ಮಾಂಸ ಸಿಗುತ್ತೆ. ಯಾಕಂದ್ರೆ “ನಮಗೆ ತಿನ್ನೋಕೆ ಮಾಂಸ ಇಲ್ಲ, ನಾವು ಈಜಿಪ್ಟಲ್ಲಿ ಇದ್ದಾಗ್ಲೇ ಸುಖವಾಗಿದ್ವಿ”+ ಅಂತ ನೀವು ಅಳ್ತಾ ಹೇಳಿದ್ದನ್ನ ಯೆಹೋವ ಕೇಳಿಸ್ಕೊಂಡಿದ್ದಾನೆ.+ ಯೆಹೋವ ನಿಮಗೆ ಖಂಡಿತ ಮಾಂಸ ಕೊಡ್ತಾನೆ, ನೀವು ತಿಂತೀರ.+ 19 ನೀವು ಮಾಂಸನ ಒಂದು ದಿನ ಅಲ್ಲ, 2 ದಿನ ಅಲ್ಲ, 5, 10, 20 ದಿನ ಅಲ್ಲ, 20 ಒಂದು ತಿಂಗಳು ಪೂರ್ತಿ ತಿಂತೀರ. ಅದು ನಿಮ್ಮ ಮೂಗಲ್ಲಿ ಬರೋವಷ್ಟು ತಿಂತೀರ. ಅದನ್ನ ತಿಂದು ತಿಂದು ವಾಕರಿಕೆಯಾಗಿ ನಿಮಗೇ ಅಸಹ್ಯ ಆಗುತ್ತೆ.+ ಯಾಕಂದ್ರೆ ನೀವು ಅಳ್ತಾ “ಯಾಕಾದ್ರೂ ಈಜಿಪ್ಟನ್ನ ಬಿಟ್ಟುಬಂದ್ವೋ”+ ಅಂತ ಹೇಳಿದ್ದೀರ. ನಿಮ್ಮ ಮಧ್ಯ ಇದ್ದ ಯೆಹೋವನನ್ನ ತಿರಸ್ಕರಿಸಿದ್ದೀರ’ ಅಂತ ಹೇಳು.”
21 ಅದಕ್ಕೆ ಮೋಶೆ “ನನ್ನ ಜೊತೆ ಸೈನಿಕರೇ 6,00,000 ಇದ್ದಾರೆ.+ ಆದ್ರೆ ನೀನು ಎಲ್ಲ ಜನ್ರಿಗೆ ಮಾಂಸ ಕೊಡ್ತೀನಿ, ಅದೂ ಇಡೀ ತಿಂಗಳಿಗೆ ಬೇಕಾಗುವಷ್ಟು ಮಾಂಸ ಕೊಡ್ತೀನಿ ಅಂತ ಹೇಳ್ತಾ ಇದ್ದಿಯಲ್ಲಾ! 22 ಅದು ಹೇಗೆ ಸಾಧ್ಯ? ನಮ್ಮ ಹತ್ರ ಇರೋ ಎಲ್ಲ ಕುರಿದನಗಳನ್ನ ಕಡಿದ್ರೂ ಇಷ್ಟು ಜನ್ರಿಗೆ ಸಾಕಾಗಲ್ಲ. ಸಮುದ್ರದಲ್ಲಿರೋ ಎಲ್ಲ ಮೀನುಗಳನ್ನ ಹಿಡಿದ್ರೂ ಸಾಕಾಗಲ್ಲ” ಅಂದ.
23 ಆಗ ಯೆಹೋವ ಮೋಶೆಗೆ “ಯೆಹೋವನ ಕೈಯಿಂದ ಮಾಡೋಕೆ ಆಗದೇ ಇರೋ ವಿಷ್ಯ ಏನಾದ್ರೂ ಇದ್ಯಾ?*+ ನಾನು ಹೇಳಿದ ತರ ಆಗುತ್ತೋ ಇಲ್ವೋ ಅಂತ ನೀನೇ ನೋಡ್ತೀಯ” ಅಂದನು.
24 ಮೋಶೆ ಹೋಗಿ ಯೆಹೋವ ಹೇಳಿದ್ದನ್ನೆಲ್ಲ ಜನ್ರಿಗೆ ತಿಳಿಸಿದ. ಅಷ್ಟೇ ಅಲ್ಲ ಇಸ್ರಾಯೇಲ್ಯರ ಹಿರಿಯರಿಂದ 70 ಜನ್ರನ್ನ ಆರಿಸಿ ದೇವದರ್ಶನ ಡೇರೆಯ ಸುತ್ತ ನಿಲ್ಲಿಸಿದ.+ 25 ಆಗ ಯೆಹೋವ ಒಂದು ಮೋಡದಲ್ಲಿ ಇಳಿದು ಬಂದು+ ಮೋಶೆ ಜೊತೆ ಮಾತಾಡಿದ.+ ಆತನು ಅವನಿಗೆ ಕೊಟ್ಟಿದ್ದ ತನ್ನ ಪವಿತ್ರಶಕ್ತಿಯಲ್ಲಿ ಸ್ವಲ್ಪ ತೆಗೆದು+ ಆ 70 ಜನ ಹಿರಿಯರಲ್ಲಿ ಪ್ರತಿಯೊಬ್ಬನಿಗೆ ಕೊಟ್ಟನು. ಪವಿತ್ರಶಕ್ತಿ ಅವ್ರ ಮೇಲೆ ಬಂದ ಕೂಡ್ಲೇ ಅವರು ಪ್ರವಾದಿಗಳ ತರ ನಡ್ಕೊಳ್ಳೋಕೆ* ಶುರು ಮಾಡಿದ್ರು.+ ಆದ್ರೆ ಆಮೇಲೆ ಅವರು ಯಾವತ್ತೂ ಹಾಗೆ ನಡ್ಕೊಳ್ಳಲಿಲ್ಲ.
26 ಆ 70 ಹಿರಿಯರಲ್ಲಿ ಎಲ್ದಾದ್, ಮೇದಾದ್ ಅನ್ನೋ ಇಬ್ರು ದೇವದರ್ಶನ ಡೇರೆ ಹತ್ರ ಹೋಗಿರಲಿಲ್ಲ, ಪಾಳೆಯದಲ್ಲೇ ಇದ್ರು. ಅವ್ರ ಮೇಲೂ ದೇವರ ಪವಿತ್ರಶಕ್ತಿ ಬಂತು. ಹಾಗಾಗಿ ಅವರು ಪಾಳೆಯದಲ್ಲೇ ಪ್ರವಾದಿಗಳ ತರ ನಡ್ಕೊಳ್ಳೋಕೆ ಶುರು ಮಾಡಿದ್ರು. 27 ಅದನ್ನ ನೋಡಿ ಒಬ್ಬ ಯುವಕ ಓಡಿ ಹೋಗಿ ಮೋಶೆಗೆ “ಎಲ್ದಾದ್ ಮತ್ತೆ ಮೇದಾದ್ ಇಬ್ರೂ ಪಾಳೆಯದಲ್ಲಿ ಪ್ರವಾದಿಗಳ ತರ ನಡ್ಕೊಳ್ತಿದ್ದಾರೆ!” ಅಂದ. 28 ಆಗ ನೂನನ ಮಗನೂ ಯೌವನ ಪ್ರಾಯದಿಂದಾನೇ ಮೋಶೆಗೆ ಸೇವಕನೂ ಆಗಿದ್ದ ಯೆಹೋಶುವ+ ಕೂಡ್ಲೇ ಮೋಶೆಗೆ “ಸ್ವಾಮಿ ನೀನು ಅವರನ್ನ ತಡಿಬೇಕು!” ಅಂದ.+ 29 ಅದಕ್ಕೆ ಮೋಶೆ “ಯಾಕೆ? ನನ್ನ ಗೌರವ ಕಡಿಮೆ ಆಗುತ್ತೆ ಅಂತ ಭಯನಾ? ಹಾಗೆ ನೆನಸಬೇಡ. ಯೆಹೋವನ ಜನ್ರೆಲ್ಲ ಪ್ರವಾದಿಗಳಾಗಬೇಕು, ಯೆಹೋವ ಅವರಿಗೆಲ್ಲ ತನ್ನ ಪವಿತ್ರಶಕ್ತಿ ಕೊಡಬೇಕು ಅನ್ನೋದೇ ನನ್ನಾಸೆ” ಅಂದ. 30 ಆಮೇಲೆ ಮೋಶೆ ಇಸ್ರಾಯೇಲ್ಯರ ಹಿರಿಯರ ಜೊತೆ ಪಾಳೆಯಕ್ಕೆ ವಾಪಸ್ ಹೋದ.
31 ಆಗ ಯೆಹೋವ ಗಾಳಿ ಬೀಸೋ ತರ ಮಾಡಿದನು. ಆ ಗಾಳಿ ಸಮುದ್ರದ ಕಡೆಯಿಂದ ಲಾವಕ್ಕಿಗಳನ್ನ ಹೊತ್ಕೊಂಡು ಬಂದು ಇಸ್ರಾಯೇಲ್ಯರ ಪಾಳೆಯದ ಸುತ್ತ ಬೀಳಿಸ್ತು.+ ಪಾಳೆಯದ ಎರಡೂ ಬದಿಗಳಲ್ಲಿ ಒಂದು ದಿನದ ಪ್ರಯಾಣದಷ್ಟು ದೂರದ ತನಕ ಲಾವಕ್ಕಿಗಳು ಬಿದ್ದಿದ್ವು. ಅವು ನೆಲದಿಂದ ಎರಡು ಮೊಳ* ಎತ್ತರದಷ್ಟು ಬಿದ್ದಿದ್ವು. 32 ಜನ ಆ ಇಡೀ ದಿನ, ಇಡೀ ರಾತ್ರಿ, ಅಷ್ಟೇ ಅಲ್ಲ ಮಾರನೇ ದಿನನೂ ಲಾವಕ್ಕಿಗಳನ್ನ ಕೂಡಿಸ್ಕೊಳ್ತಾ ಇದ್ರು. ನಿದ್ದೆನೂ ಮಾಡ್ದೆ ಕೂಡಿಸ್ಕೊಳ್ತಾ ಇದ್ರು. ಒಬ್ಬೊಬ್ರೂ ಕಡಿಮೆ ಅಂದ್ರೆ ಹತ್ತು ಹೋಮೆರ್ನಷ್ಟು* ಲಾವಕ್ಕಿಗಳನ್ನ ಕೂಡಿಸ್ಕೊಂಡ್ರು. ಅವರು ಅವುಗಳನ್ನ ಪಾಳೆಯದ ಸುತ್ತ ಹರಡಿ ಒಣಗಿಸಿದ್ರು. 33 ಆದ್ರೆ ಮಾಂಸವನ್ನ ಅವರು ಬಾಯಲ್ಲಿಟ್ಟು ಅಗಿಯೋಕೂ ಮುಂಚೆನೇ ಅವ್ರ ಮೇಲೆ ಯೆಹೋವನ ಕೋಪ ಹೊತ್ತಿ ಉರಿತು. ಯೆಹೋವ ತುಂಬ ಜನ್ರನ್ನ ಘೋರ ವ್ಯಾಧಿಯಿಂದ ಸಾಯಿಸಿದನು.+
34 ಆ ಸ್ಥಳಕ್ಕೆ ಅವರು ಕಿಬ್ರೋತ್-ಹತಾವಾ*+ ಅಂತ ಹೆಸರಿಟ್ರು. ಯಾಕಂದ್ರೆ ಆಹಾರಕ್ಕಾಗಿ ಅತಿಯಾಸೆ ಪಟ್ಟು ನಾಶವಾದ ಜನ್ರನ್ನ ಅಲ್ಲಿ ಸಮಾಧಿ ಮಾಡಿದ್ರು.+ 35 ಆಮೇಲೆ ಜನ ಕಿಬ್ರೋತ್-ಹತಾವಾದಿಂದ ಹೊರಟು ಹಚೇರೋತಿಗೆ+ ಬಂದು ಉಳ್ಕೊಂಡ್ರು.