ಲೂಕ
24 ವಾರದ ಮೊದಲನೇ ದಿನ ಅವರು ಬೆಳಿಗ್ಗೆ ಬೇಗ ಎದ್ದು ತಾವು ಸಿದ್ಧ ಮಾಡಿದ್ದ ಒಳ್ಳೇ ವಾಸನೆಯ ಎಣ್ಣೆ ತಗೊಂಡು ಸಮಾಧಿ ಹತ್ರ ಬಂದ್ರು.+ 2 ಆದ್ರೆ ಸಮಾಧಿಗೆ ಮುಚ್ಚಿದ್ದ ಕಲ್ಲನ್ನ ಯಾರೋ ಉರುಳಿಸಿದ್ರು.+ 3 ಅವರು ಒಳಗೆ ಹೋಗಿ ನೋಡಿದ್ರೆ ಒಡೆಯನಾದ ಯೇಸುವಿನ ದೇಹ ಅಲ್ಲಿ ಇರ್ಲಿಲ್ಲ.+ 4 ಅವ್ರಿಗೆ ತುಂಬ ಗಾಬರಿ ಆಯ್ತು. ಆಗ ಇದ್ದಕ್ಕಿದ್ದ ಹಾಗೆ ಇಬ್ಬರು ಗಂಡಸರು ಪಕ್ಕದಲ್ಲಿ ಬಂದು ನಿಂತ್ರು. ಅವರ ಬಟ್ಟೆ ಬೆಳ್ಳಗೆ ಹೊಳಿತಾ ಇತ್ತು. 5 ಆಗ ಆ ಸ್ತ್ರೀಯರು ಭಯಪಟ್ಟು ತಲೆ ತಗ್ಗಿಸಿ ನಿಂತುಬಿಟ್ರು. ಆ ಗಂಡಸರು “ಬದುಕಿರೋ ವ್ಯಕ್ತಿನ ಸತ್ತುಹೋಗಿರೋ ಜನ್ರ ಮಧ್ಯ ಯಾಕೆ ಹುಡುಕ್ತಾ ಇದ್ದೀರ?+ 6 ಆತನು ಇಲ್ಲಿಲ್ಲ. ಆತನಿಗೆ ಮತ್ತೆ ಜೀವ ಬಂದಿದೆ. ಆತನು ಗಲಿಲಾಯದಲ್ಲಿ ಇದ್ದಾಗ ನಿಮಗೆ ಏನು ಹೇಳಿದ್ದನು ಅಂತ ನೆನಪಿದ್ಯಾ? 7 ಮನುಷ್ಯಕುಮಾರನನ್ನ ಕಂಬಕ್ಕೆ ಜಡಿಯೋಕೆ ಪಾಪಿಗಳ ಕೈಗೆ ಒಪ್ಪಿಸ್ತಾರೆ. ಆದ್ರೆ ಮೂರನೇ ದಿನ ಆತನು ಮತ್ತೆ ಬದುಕಿ ಬರ್ತಾನೆ ಅಂತ ಹೇಳಿದ್ದನು”+ ಅಂದ್ರು. 8 ಆಗ ಅವ್ರಿಗೆ ಯೇಸು ಹೇಳಿದ ಮಾತುಗಳು ನೆನಪಾಯ್ತು.+ 9 ಸಮಾಧಿಯಿಂದ ವಾಪಸ್ ಹೋಗಿ ಈ ವಿಷ್ಯಗಳನ್ನೆಲ್ಲ 11 ಶಿಷ್ಯರಿಗೂ ಉಳಿದವ್ರಿಗೂ ಹೇಳಿದ್ರು.+ 10 ಇವ್ರಲ್ಲಿ ಮಗ್ದಲದ ಮರಿಯ, ಯೊಹನ್ನ ಮತ್ತು ಯಾಕೋಬನ ತಾಯಿ ಮರಿಯ ಇದ್ರು. ಜೊತೆಗೆ ಬೇರೆ ಸ್ತ್ರೀಯರೂ ಇದ್ರು. ಅವರು ಸಹ ಅಪೊಸ್ತಲರಿಗೆ ಈ ವಿಷ್ಯಗಳನ್ನ ಹೇಳಿದ್ರು. 11 ಆದ್ರೆ ಅವರು ಅರ್ಥಪರ್ತ ಇಲ್ಲದೆ ಏನೇನೋ ಮಾತಾಡ್ತಿದ್ದಾರೆ ಅಂತ ಅಪೊಸ್ತಲರು ಅವ್ರ ಮಾತನ್ನ ನಂಬಲಿಲ್ಲ.
12 ಆದ್ರೆ ಪೇತ್ರ ಸಮಾಧಿಗೆ ಓಡಿ ಬಂದ. ಸಮಾಧಿ ಒಳಗೆ ಬಗ್ಗಿ ನೋಡಿದಾಗ ಅಲ್ಲಿ ನಾರುಬಟ್ಟೆ ಮಾತ್ರ ಕಾಣ್ತಾ ಇತ್ತು. ಏನು ಆಗಿರಬಹುದು ಅಂತ ಯೋಚನೆ ಮಾಡ್ತಾ ಅಲ್ಲಿಂದ ಹೋಗಿಬಿಟ್ಟ.
13 ಅದೇ ದಿನ ಇಬ್ರು ಶಿಷ್ಯರು ಯೆರೂಸಲೇಮಿಂದ ಎಮ್ಮಾಹು ಅನ್ನೋ ಹಳ್ಳಿಗೆ ಹೋಗ್ತಾ ಇದ್ರು. ಆ ಹಳ್ಳಿ ಯೆರೂಸಲೇಮಿಂದ ಹೆಚ್ಚುಕಮ್ಮಿ 11 ಕಿಲೋಮೀಟರ್* ದೂರದಲ್ಲಿತ್ತು. 14 ನಡೆದ ಘಟನೆಗಳ ಬಗ್ಗೆ ಅವರಿಬ್ರೂ ಮಾತಾಡ್ತಾ ಹೋಗ್ತಿದ್ರು.
15 ಅವರು ಮಾತಾಡ್ತಾ ಇದ್ದಾಗ ಯೇಸು ಅವ್ರ ಹತ್ರ ಬಂದು ಅವ್ರ ಜೊತೆ ನಡೆದನು. 16 ಆದ್ರೆ ಅದು ಯೇಸು ಅಂತ ಅವ್ರಿಗೆ ಗೊತ್ತಾಗಲಿಲ್ಲ.+ 17 ಆತನು “ನೀವು ಅಷ್ಟು ಹೊತ್ತಿಂದ ಯಾವುದರ ಬಗ್ಗೆ ಮಾತಾಡ್ತಾ ಇದ್ದೀರಾ?” ಅಂತ ಕೇಳಿದನು. ಅವರು ಅಲ್ಲೇ ನಿಂತುಬಿಟ್ರು. ದುಃಖದಲ್ಲಿ ಅವ್ರ ಮುಖ ಬಾಡಿಹೋಯ್ತು. 18 ಅವ್ರಲ್ಲಿ ಕ್ಲೀಯಾಫ ಯೇಸುಗೆ “ನೀನು ಈ ಊರಿನವನು ಅಲ್ವಾ? ಮೊನ್ನೆಮೊನ್ನೆ ಯೆರೂಸಲೇಮಲ್ಲಿ ನಡೆದ ವಿಷ್ಯಗಳು ನಿನಗೆ ಗೊತ್ತಿಲ್ವಾ?” ಅಂತ ಕೇಳಿದ. 19 ಆಗ ಯೇಸು “ಏನು ನಡಿತು?” ಅಂದನು. ಆಗ “ನಜರೇತಿನ ಯೇಸುವಿಗೆ+ ಏನಾಯ್ತು ಅಂತ ನೀನು ಕೇಳಿಸ್ಕೊಂಡಿಲ್ವಾ? ಆತನು ಒಬ್ಬ ಪ್ರವಾದಿ. ದೇವರ ಮುಂದೆ ಮತ್ತು ಜನ್ರ ಮುಂದೆ ತುಂಬ ಅದ್ಭುತ ಮಾಡಿದ್ದಾನೆ. ಆತನ ಮಾತಲ್ಲೂ ತುಂಬ ಶಕ್ತಿ ಇತ್ತು.+ 20 ಆದ್ರೆ ನಮ್ಮ ಮುಖ್ಯ ಪುರೋಹಿತರು, ನಾಯಕರು ಯೇಸುಗೆ ಮರಣದಂಡನೆ ಕೊಡಿಸಿದ್ರು.+ ಆತನನ್ನ ಕಂಬಕ್ಕೆ ಜಡಿದ್ರು. 21 ಆತನೇ ಇಸ್ರಾಯೇಲ್ಯರನ್ನ ಬಿಡಿಸ್ತಾನೆ ಅಂತ ನಾವು ನಂಬಿದ್ವಿ.+ ಈ ಎಲ್ಲ ಘಟನೆಗಳು ನಡೆದು ಈಗ ಮೂರು ದಿನ ಆಯ್ತು. 22 ಇಷ್ಟೇ ಅಲ್ಲ ಕೆಲವು ಸ್ತ್ರೀಯರು ಹೇಳಿದ ವಿಷ್ಯ ಕೇಳಿದ್ರೆ ಆಶ್ಚರ್ಯ ಆಗುತ್ತೆ. ಅವರು ಬೆಳಬೆಳಿಗ್ಗೆ ಸಮಾಧಿ ಹತ್ರ ಹೋಗಿದ್ರಂತೆ.+ 23 ಆದ್ರೆ ಆತನ ದೇಹ ಅಲ್ಲಿ ಇರ್ಲಿಲ್ಲ. ದೇವದೂತರು ಕಾಣಿಸ್ಕೊಂಡು ಯೇಸುಗೆ ಮತ್ತೆ ಜೀವ ಬಂತು ಅಂದ್ರು. ಆ ಸ್ತ್ರೀಯರು ಇದನ್ನೆಲ್ಲ ನಮಗೆ ಹೇಳಿದ್ರು. 24 ಆಗ ನಮ್ಮ ಜೊತೆ ಇದ್ದ ಕೆಲವರು ಸಮಾಧಿ ಹತ್ರ ಹೋಗಿ ನೋಡಿದ್ರು.+ ಆ ಸ್ತ್ರೀಯರು ಹೇಳಿದ ಹಾಗೆ ಆ ಸಮಾಧಿ ಖಾಲಿ ಆಗಿತ್ತು. ಯೇಸು ದೇಹ ಅಲ್ಲಿ ಇರ್ಲಿಲ್ಲ” ಅಂದ್ರು.
25 ಆಗ ಯೇಸು “ಬುದ್ಧಿ ಇಲ್ಲದವ್ರೇ, ಪ್ರವಾದಿಗಳು ಹೇಳಿದ ವಿಷ್ಯಗಳನ್ನ ನಂಬೋಕೆ ನೀವ್ಯಾಕೆ ಹಿಂದೆಮುಂದೆ ನೋಡ್ತೀರಾ? 26 ಕ್ರಿಸ್ತ ತನ್ನ ಮಹಿಮೆಯನ್ನ ಪಡ್ಕೊಳ್ಳೋ ಮುಂಚೆ ಈ ಎಲ್ಲ ಕಷ್ಟ ಅನುಭವಿಸಬೇಕಿತ್ತು ತಾನೇ?”+ ಅಂತ ಕೇಳಿದನು. 27 ಆಮೇಲೆ ಪವಿತ್ರ ಗ್ರಂಥದಲ್ಲಿ ಮೋಶೆ ಮತ್ತು ಪ್ರವಾದಿಗಳು+ ತನ್ನ ಬಗ್ಗೆ ಬರೆದಿರೋ ಎಲ್ಲ ವಚನಗಳನ್ನ ಒಂದೊಂದಾಗಿ ಬಿಡಿಸಿ ವಿವರಿಸಿದನು.
28 ಕೊನೆಗೆ ಶಿಷ್ಯರು ಹೋಗಬೇಕಾಗಿದ್ದ ಹಳ್ಳಿ ಬಂತು. ಆದ್ರೆ ಯೇಸು ಇನ್ನೂ ಮುಂದೆ ಪ್ರಯಾಣ ಮಾಡ್ಬೇಕು ಅನ್ನೋ ತರ ನಟಿಸಿದನು. 29 ಆಗ ಅವರು “ನಮ್ಮ ಜೊತೆ ಉಳ್ಕೋ. ಯಾಕಂದ್ರೆ ಸೂರ್ಯ ಮುಳುಗಿ ಬಿಟ್ಟಿದ್ದಾನೆ. ಇನ್ನೇನು ಕತ್ತಲಾಗುತ್ತೆ” ಅಂತ ಒತ್ತಾಯ ಮಾಡಿದ್ರು. ಆಗ ಅವ್ರ ಜೊತೆ ಹೋದನು. 30 ಊಟಕ್ಕೆ ಕೂತಿರುವಾಗ ರೊಟ್ಟಿ ತಗೊಂಡು ಪ್ರಾರ್ಥನೆ ಮಾಡಿ ಮುರಿದು ಅವ್ರಿಗೆ ಕೊಟ್ಟನು.+ 31 ಆಗ ಅದು ಯೇಸು ಅಂತ ಅವ್ರಿಗೆ ಗೊತ್ತಾಯ್ತು. ಆದ್ರೆ ಯೇಸು ಅವ್ರಿಗೆ ಕಾಣಿಸದೆ ಮಾಯವಾದನು.+ 32 ಇದನ್ನ ನೋಡಿ ಅವರು “ದಾರಿಯಲ್ಲಿ ಆತನು ನಮ್ಮ ಜೊತೆ ಮಾತಾಡ್ತಿದ್ದಾಗ ನಮಗೆ ವಚನಗಳ ಅರ್ಥ ವಿವರಿಸ್ತಿದ್ದಾಗ* ನಮ್ಮ ಹೃದಯ ಕುದಿತಲ್ವಾ?” ಅಂತ ಮಾತಾಡ್ಕೊಂಡ್ರು. 33 ತಕ್ಷಣ ಅವರು ಅಲ್ಲಿಂದ ಯೆರೂಸಲೇಮಿಗೆ ವಾಪಸ್ ಹೋದ್ರು. ಅಲ್ಲಿ 11 ಶಿಷ್ಯರು ಮತ್ತು ಬೇರೆ ಶಿಷ್ಯರು ಸೇರಿಬಂದಿದ್ರು. 34 ಅಲ್ಲಿದ್ದವರು “ಸ್ವಾಮಿಗೆ ಮತ್ತೆ ಜೀವ ಬಂದಿರೋದು ಸುಳ್ಳಲ್ಲ, ನಿಜ. ಸೀಮೋನ ಆತನನ್ನ ನೋಡಿದ್ದಾನೆ”+ ಅಂದ್ರು. 35 ಆಗ ಈ ಇಬ್ರು ಶಿಷ್ಯರು ದಾರಿಯಲ್ಲಿ ಆದ ಘಟನೆ ವಿವರಿಸಿದ್ರು. ಅಷ್ಟೇ ಅಲ್ಲ ರೊಟ್ಟಿ ಮುರಿದು ಕೊಟ್ಟಾಗಲೇ ಅದು ಯೇಸು ಅಂತ ಅವ್ರಿಗೆ ಗೊತ್ತಾಯ್ತು ಅಂದ್ರು.+
36 ಅವರು ಈ ವಿಷ್ಯಗಳನ್ನ ಮಾತಾಡ್ತಿದ್ದಾಗ ಯೇಸುನೇ ಅವ್ರ ಮಧ್ಯ ನಿಂತು “ನಮಸ್ಕಾರ!”+ ಅಂದನು. 37 ದೇವದೂತ ಅಂದ್ಕೊಂಡು ಅವರು ಭಯಪಟ್ರು. 38 ಆಗ ಯೇಸು “ಯಾಕೆ ಭಯಪಡ್ತಿದ್ದೀರಾ? ಯಾಕೆ ಸಂಶಯ ಪಡ್ತಾ ಇದ್ದೀರಾ? 39 ನನ್ನ ಕೈಕಾಲು ನೋಡಿ, ಇದು ನಾನೇ. ನನ್ನನ್ನ ಮುಟ್ಟಿನೋಡಿ, ನನಗೆ ಮಾಂಸ, ಮೂಳೆ ಇದೆ. ಆದ್ರೆ ದೇವದೂತರಿಗೆ ಇದ್ಯಾವುದೂ ಇರಲ್ಲ” ಅಂದನು. 40 ಇದನ್ನ ಹೇಳ್ತಾ ತನ್ನ ಕೈಕಾಲು ತೋರಿಸಿದನು. 41 ಆಗ ಅವ್ರಿಗೆ ಒಂದುಕಡೆ ಖುಷಿ, ಆಶ್ಚರ್ಯವಾದ್ರೆ ಇನ್ನೊಂದು ಕಡೆ ನಂಬೋಕೆ ಕಷ್ಟ ಆಯ್ತು. ಹಾಗಾಗಿ ಯೇಸು “ನಿಮ್ಮ ಹತ್ರ ತಿನ್ನೋಕೆ ಏನಾದ್ರೂ ಇದ್ಯಾ?” ಅಂತ ಕೇಳಿದನು. 42 ಅವರು ಸುಟ್ಟ ಮೀನಿನ ಒಂದು ತುಂಡು ಕೊಟ್ರು. 43 ಅದನ್ನ ತಗೊಂಡು ಅವ್ರ ಕಣ್ಮುಂದೆನೇ ತಿಂದನು.
44 ಆಮೇಲೆ “ನಾನು ನಿಮ್ಮ ಜೊತೆ ಇದ್ದಾಗ ಏನು ಹೇಳಿದ್ದೆ ಅಂತ ನೆನಪಿಸ್ಕೊಳ್ಳಿ.+ ಮೋಶೆಯ ಪುಸ್ತಕದಲ್ಲಿ, ಪ್ರವಾದಿಗಳ ಪುಸ್ತಕದಲ್ಲಿ, ಕೀರ್ತನೆಗಳಲ್ಲಿ ನನ್ನ ಬಗ್ಗೆ ಬರೆದಿರೋ ಮಾತುಗಳೆಲ್ಲ ನಿಜ ಆಗಲೇಬೇಕು ಅಂತ ಹೇಳಿದ್ದೆ”+ ಅಂದನು. 45 ಆಮೇಲೆ ಆತನು ಗ್ರಂಥದಲ್ಲಿರೋ ಮಾತುಗಳು ಚೆನ್ನಾಗಿ ಅರ್ಥ ಆಗೋ ತರ ವಿವರಿಸಿದನು.+ 46 ಆತನು ಅವ್ರಿಗೆ “ಗ್ರಂಥದಲ್ಲಿ ಹೀಗೆ ಬರೆದಿದೆ ಕ್ರಿಸ್ತ ಕಷ್ಟ ಅನುಭವಿಸಿ ಮೂರನೇ ದಿನ ಮತ್ತೆ ಬದುಕಿ ಬರ್ತಾನೆ.+ 47 ಪಾಪಗಳಿಗೆ ಕ್ಷಮೆ ಸಿಗಬೇಕಂದ್ರೆ ಪಶ್ಚಾತ್ತಾಪಪಡಿ ಅನ್ನೋ ಸಂದೇಶ ಸಾರ್ತಾರೆ.+ ಈ ಸಂದೇಶ ಆತನ ಹೆಸ್ರಲ್ಲಿ ಯೆರೂಸಲೇಮಿಂದ ಆರಂಭಿಸಿ ಎಲ್ಲ ದೇಶಗಳಿಗೆ ಹೇಳ್ತಾರೆ.+ 48 ನೀವೇ ಇದಕ್ಕೆ ಸಾಕ್ಷಿ.+ 49 ನೋಡಿ, ನನ್ನ ತಂದೆ ನಿಮಗೆ ಕೊಡ್ತೀನಂತ ಮಾತುಕೊಟ್ಟ ಶಕ್ತಿಯನ್ನ ನಿಮ್ಮ ಮೇಲೆ ಕಳಿಸ್ಕೊಡ್ತೀನಿ. ಆದ್ರೆ ಸ್ವರ್ಗದಿಂದ ಆ ಶಕ್ತಿ ನಿಮಗೆ ಸಿಗೋ ತನಕ ನೀವು ಈ ಪಟ್ಟಣದಲ್ಲೇ ಇರಿ”+ ಅಂದನು.
50 ಆಮೇಲೆ ಆತನು ಅವ್ರನ್ನ ಬೇಥಾನ್ಯದ ತನಕ ಕರ್ಕೊಂಡು ಹೋಗಿ ಕೈಗಳನ್ನ ಎತ್ತಿ ದೇವರ ಆಶೀರ್ವಾದ ಅವ್ರ ಮೇಲಿರಲಿ ಅಂತ ಪ್ರಾರ್ಥಿಸಿದನು. 51 ಹೀಗೆ ಆಶೀರ್ವಾದಕ್ಕಾಗಿ ಕೇಳ್ತಾ ಇದ್ದಾಗಲೇ ಅವ್ರನ್ನ ಬಿಟ್ಟು ಸ್ವರ್ಗಕ್ಕೆ ಹೋದನು.+ 52 ಆಗ ಶಿಷ್ಯರು ನೆಲದ ಮೇಲೆ ಅಡ್ಡಬಿದ್ರು. ತುಂಬ ಸಂತೋಷದಿಂದ ಯೆರೂಸಲೇಮಿಗೆ ವಾಪಸ್ ಬಂದ್ರು.+ 53 ಪ್ರತಿದಿನ ಆಲಯಕ್ಕೆ ಹೋಗಿ ದೇವರನ್ನ ಹೊಗಳ್ತಾ ಇದ್ರು.+