ಹಿಮವಾಗಲಿ ಮಳೆಯಾಗಲಿ ಮೊತ್ತವಾಗಲಿ ಟಪಾಲನ್ನು ನಿಲ್ಲಿಸುವುದಿಲ್ಲ
“ಅಂಚೆಯವರು ಇರುವಷ್ಟರ ತನಕ ಜೀವನಕ್ಕೆ ಹುರುಪಿರುವುದು.”—ವಿಲ್ಯಮ್ ಜೇಮ್ಸ್, ಅಮೆರಿಕದ ತತ್ವಜ್ಞಾನಿ (1842-1910)
ಹೆಚ್ಚುಕಡಮೆ ಪ್ರತಿಯೊಬ್ಬನಿಗೂ ಟಪಾಲು ಸೇವೆಯ ಕುರಿತು ಹೇಳಲು ಜುಗುಪ್ಸೆಯ ಕಥೆಯೊಂದಿದೆ. ಅವನು ಕಳುಹಿಸಿದ ಪತ್ರ ನಿರೀಕ್ಷಿಸಿದ್ದುದಕ್ಕಿಂತ ಅನೇಕ ವಾರಗಳು ಯಾ ತಿಂಗಳುಗಳು ಸಹ ತಡವಾಗಿ ಮುಟ್ಟಿತು, ಟಪಾಲಿನ ದರ ತೀರಾ ವೇಗವಾಗಿ ಏರುತ್ತಿದೆ, ಯಾ ಪೋಸ್ಟ್ ಆಫೀಸಿನಲ್ಲಿ ಸರದಿ ಕಾಯುತ್ತಿರುವ ಜನರ ಸಾಲು ಕೆರಳಿಸುವಂತಹದ್ದು. ಅಕ್ಟೋಬರ 1966ರಲ್ಲಿ ಒಂದು ಟಪಾಲು ವ್ಯವಸ್ಥೆಯನ್ನು ಒಂದು ದುರಂತವು ಅಪಾಯಕ್ಕೀಡುಮಾಡಿತು. “ಶಿಕಾಗೋವಿನ ಕವಲೊಡೆತದಲ್ಲಿ, ಅಮೆರಿಕದ ಆಗಿನ ಅತಿ ದೊಡ್ಡ ಟಪಾಲು ಸೌಕರ್ಯವು ಅಡಚಿಕೊಂಡು ಟಪಾಲನ್ನು ನಿಭಾಯಿಸಲು ಅಶಕ್ತನಾದ ಕಾರಣ ಕಾರ್ಯತಃ ನಿಂತುಹೋಯಿತು.”
ಟಪಾಲಿನ ಹರಿವು ನಿಲ್ಲದಂತೆ ಮತ್ತು ನಿಮ್ಮ ಪತ್ರ ಅದರ ಗಮ್ಯಸ್ಥಾನವನ್ನು ಮುಟ್ಟುವಂತೆ ಏನು ಮಾಡಲಾಗಿದೆ? ನೀವು ಪಡೆಯುವ ಸೇವೆಯನ್ನು ಉತ್ತಮಗೊಳಿಸಲು ನೀವೇನಾದರೂ ಮಾಡಬಲ್ಲಿರೊ? ಶತಮಾನಗಳಿಂದಲೂ ಪತ್ರವಿತರಣೆಯ ವಿಧಾನ ಮತ್ತು ಭರವಸಾರ್ಹತೆಯಲ್ಲಿ ಗಮನಾರ್ಹವಾದ ಬದಲಾವಣೆಗಳಾಗಿವೆಯೆ?
ಪುರಾತನ ಕಾಲದ ಟಪಾಲು ಖಾತೆ
ಅತಿ ಆದಿಯ ಸಂಘಟಿತ ಟಪಾಲು ಖಾತೆಗಳು ಪೂರ್ತಿಯಾಗಿ ಸರಕಾರೀ ಉಪಯೋಗಕ್ಕಾಗಿದ್ದವು. ಇಂಥ ವ್ಯವಸ್ಥೆಗಳು ಪುರಾತನ ಕಾಲದ ಚೈನ, ಈಜಿಪ್ಟ್, ಅಸ್ಸಿರಿಯ, ಪರ್ಸಿಯ, ಮತ್ತು ಗ್ರೀಸ್ನಲ್ಲಿದ್ದವು. ರೋಮನ್ ಟಪಾಲು ಖಾತೆಯನ್ನು ಕೂರ್ಸುಸ್ ಪೂಬಿಕ್ಲುಸ್, ಅಕ್ಷರಾರ್ಥವಾಗಿ, “ಸಾರ್ವಜನಿಕ ಮಾರ್ಗ”ವೆಂದು ಹೆಸರಿಸಲಾಗಿದ್ದರೂ ಅದು ಪ್ರಧಾನವಾಗಿ ಸರಕಾರದ ಏಕಮಾತ್ರ ಖಾತೆಯಾಗಿತ್ತು. ರಸಕರವಾಗಿ, ಎಫೆಸ, ಕೊಲೊಸ್ಸೆ ಸಭೆಗಳಿಗೆ, ಮತ್ತು ಫಿಲೆಮೋನನಿಗೆ ಬೈಬಲ್ ಲೇಖಕ ಪೌಲನು ಬರೆದ ಪತ್ರಗಳನ್ನು ರೋಮನ್ ಸರಕಾರದ ಟಪಾಲು ಖಾತೆಯ ಮೂಲಕವಲ್ಲ, ಖಾಸಗಿ ಏರ್ಪಾಡುಗಳಿಂದ ರವಾನಿಸಲಾಗಿತ್ತು.—ಎಫೆಸ 6:21, 22; ಕೊಲೊಸ್ಸೆ 4:7-9; ಫಿಲೆಮೋನ 21, 22.
ಪತ್ರಗಳ ರವಾನೆ ಮತ್ತು ಬಟವಾಡೆಯಲ್ಲಿ 19ನೆಯ ಶತಮಾನದ ತನಕ ಅತಿ ಕಡಮೆ ಬದಲಾವಣೆಯಾಗಿದ್ದರೂ, ಖಾಸಗಿ ಟಪಾಲು ಸೇವೆಯನ್ನು ನಿಯಂತ್ರಿಸುವ ಯಾ ರದ್ದುಮಾಡುವ ಬಗೆಗೆ ವೀಕ್ಷಣಗಳು ಈ ಮೊದಲೇ ವಿಕಸನಗೊಳ್ಳಲು ಆರಂಭವಾದವು. ಏಕೆ? ಏಕೆಂದರೆ ಖಾಸಗಿ ಸಂಪರ್ಕಗಳ ಮೇಲೆ ಅಧಿಕಾರವನ್ನಿಟ್ಟುಕೊಳ್ಳಬೇಕೆಂದು ಅಧಿಕಾರಿಗಳಿಗನಿಸಿತು. ದಿ ಯುನಿವರ್ಸಲ್ ಪೋಸ್ಟಲ್ ಯೂನಿಯನ್ ಎಂಬ ಪುಸ್ತಕದಲ್ಲಿ ಜಾರ್ಜ್ ಎ. ಕಾಡಿಂಗ್, ಟಪಾಲು ಖಾತೆಯ ಮೇಲೆ ಸರಕಾರೀ ಏಕಾಧಿಕಾರವಿರಲು ಎರಡು ದೊಡ್ಡ ಕಾರಣಗಳನ್ನು ಕೊಡುತ್ತಾರೆ. ಒಂದನೆಯದಾಗಿ, ಇದರ ಆದಾಯವು “ಅಧಿಕೃತ ಖಾತೆಗೆ ಸಹಾಯಧನವನ್ನು ಒದಗಿಸಲು ಉತ್ಕೃಷ್ಟ ಮಾಧ್ಯಮ” ಆಗಿತ್ತು. ಎರಡನೆಯದಾಗಿ, ಒದಗಿಸಲ್ಪಟ್ಟ ಭದ್ರತೆಯು ಸರಕಾರದ ವಿರೋಧಿಗಳು ಮಾಡುವ ಸಮಾಚಾರ ಸಂಬಂಧವನ್ನು ನಿಯಂತ್ರಿಸಲು ಸಹಾಯಕವಾಗಿತ್ತು.
ಹೀಗೆ, 1464ರಲ್ಲಿ ಫ್ರೆಂಚ್ ರಾಯಲ್ ಪೋಸ್ಟ್, ಸ್ವಲ್ಪ ಸಾರ್ವಜನಿಕ ಟಪಾಲನ್ನು ರವಾನಿಸಲು ಆರಂಭಿಸಿತು. ಮತ್ತು 1635ರಲ್ಲಿ ಇಂಗ್ಲೆಂಡಿನ Iನೆಯ ಚಾರ್ಲ್ಸ್, ಜನತೆಗೆ ರಾಯಲ್ ಮೆಯ್ಲ್ ಸರ್ವಿಸನ್ನು ದೊರಕಿಸಿದನು. ಇತರ ಸರಕಾರಗಳೂ ಇದೇ ರೀತಿ ಕಾರ್ಯ ನಡೆಸಿ, ಜನರ ನಡುವಣ ವಿನಿಮಯವನ್ನು ನಿಯಂತ್ರಿಸಿ, ಹೀಗೆ ಟಪಾಲು ಖಾತೆಯ ಏಕಸ್ವಾಮ್ಯವನ್ನು ಪಡೆದವು.
ರೋಮನ್ ಸಾಮ್ರಾಜ್ಯ ತನ್ನ ಟಪಾಲು ಜಾಲವನ್ನು ಬ್ರಿಟನಿಗೆ ಹೇಗೆ ವಿಸ್ತರಿಸಿತೋ ಹಾಗೆಯೇ ಅಮೆರಿಕದ ಆದಿ ವ್ಯವಸ್ಥೆಯನ್ನು ಬ್ರಿಟನ್ ದೇಶ ನಿಯಂತ್ರಿಸಿತು. ರೋಮನ್ ಪದ್ಧತಿಯು ಯಾವುದು ಸಾ.ಶ.ಪೂ. ಆರನೆಯ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಿತೋ ಆ ಟಪ್ಪೆಯಾಗಿ ಕೆಲಸ ಮಾಡುತ್ತಿದ್ದ ಕುದುರೆ ಸವಾರ ಓಲೆಕಾರರ ಪರ್ಸಿಯನ್ ಏರ್ಪಾಡಿನಲ್ಲಿ ಹೆಚ್ಚಿನದನ್ನು ನಕಲು ಮಾಡಿತು. ಹೀಗೆ, ಅನೇಕ ಟಪಾಲು ಪದ್ಧತಿಗಳ ಲಕ್ಷಣಗಳನ್ನು ಪರ್ಸಿಯಕ್ಕೆ ಪತ್ತೆ ಹಚ್ಚಸಾಧ್ಯವಿದೆ.
ವಸಾಹತುವಾಗಿದ್ದ ಅಮೆರಿಕದ ಟಪಾಲು ಪದ್ಧತಿಯು 1639ರಲ್ಲಿ ಅಧಿಕೃತವಾಗಿ ಕಡಲಾಚೆಯ ಅಂಚೆಯನ್ನು, ಮತ್ತು 1673ರಲ್ಲಿ ಬಾಸ್ಟನ್ನಿಂದ ನ್ಯೂ ಯಾರ್ಕ್ ಸಿಟಿಯ ತನಕ ದೇಶೀಯ ಟಪಾಲನ್ನು ರವಾನಿಸತೊಡಗಿತು. ಈ ಅಲ್ಪಾಯುಷಿ ಟಪಾಲು ಮಾರ್ಗವು ಈಗ ಯು.ಎಸ್. ಹೈವೇ 1ರ ಭಾಗವಾಗಿರುವ ಬಾಸ್ಟನ್ ಪೋಸ್ಟ್ ರೋಡ್ ಎಂದು ಕರೆಯಲ್ಪಟ್ಟಿತು. ಹತ್ತೊಂಬತ್ತನೆಯ ಶತಮಾನದ ಮಧ್ಯದೊಳಗೆ, ಟಪಾಲನ್ನು ಟಪ್ಪಾ ಬಂಡಿ, ಉಗಿದೋಣಿ, ಮತ್ತು ರೆಯ್ಲಿನ ಮೂಲಕ ರವಾನಿಸಲಾಗುತ್ತಿತ್ತು. ನ್ಯೂ ಯಾರ್ಕ್ ಸಿಟಿಯಿಂದ ಕ್ಯಾಲಿಫೋರ್ನಿಯದ ಸಾನ್ ಫ್ರಾನ್ಸಿಸ್ಕೊ ನಗರಕ್ಕೆ ಟಪಾಲನ್ನು ತಂದು ಬಟವಾಡೆ ಮಾಡಲು ಹಡಗಿನ ಮೂಲಕ ಒಂದು ತಿಂಗಳು ಅಥವಾ ಹೆಚ್ಚು ಸಮಯ ಮತ್ತು ಟಪ್ಪಾ ಬಂಡಿಯ ಮೂಲಕ ಅದಕ್ಕಿಂತಲೂ ಹೆಚ್ಚು ಸಮಯ ಹಿಡಿಯುತ್ತಿತ್ತು.
ಪೋನಿ ಎಕ್ಸ್ಪ್ರೆಸ್
ಅಮೆರಿಕ ಭೂಖಂಡದಲ್ಲಿ ಬಟವಾಡೆಯನ್ನು ಶೀಘ್ರಗೊಳಿಸಲು ಟಪ್ಪಾ ಬಂಡಿ ಯಾ ಹಡಗಿಗಿಂತ ಭಿನ್ನವಾದ ಯಾವುದೋ ಬೇಕಾಗಿತ್ತು. ಈ ಸಮಸ್ಯೆಯನ್ನು ಯಾವುದು ಪರಿಹರಿಸುವುದು? ಶತಮಾನಗಳಷ್ಟು ಹಳೆಯದಾದ ಟಪಾಲು ಸವಾರ ಮತ್ತು ಕುದುರೆಯನ್ನು ಉಪಯೋಗಿಸಲಾಯಿತು. ಹಿಸ್ಟರಿ ಆಫ್ ದಿ ಯು.ಎಸ್. ಪೋಸ್ಟಲ್ ಸರ್ವಿಸ್ 1775-1984 ಎಂಬ ಪುಸ್ತಕ ಮಾರ್ಚ್ 1860ರಿಂದ ವಾರ್ತಾಪತ್ರಿಕೆಗಳ ಜಾಹೀರಾತುಗಳನ್ನು ಉಲ್ಲೇಖಿಸುತ್ತದೆ:
“ಬೇಕಾಗಿದ್ದಾರೆ: ಎಳೆಯ, ಸಣಕಲಾದ, ತಂತಿ ಗಟ್ಟಿಯ, 18 ವಯಸ್ಸು ಮೀರದವರು. ಅವರು ನುರಿತ ಸವಾರರೂ, ಪ್ರತಿದಿನ ಮರಣಾಪಾಯವನ್ನು ಎದುರಿಸಬಯಸುವವರೂ ಆಗಿರಬೇಕು. ಅನಾಥರು ಆಯ್ಕೆಗೆ ಹೆಚ್ಚು ಅರ್ಹರು.”
ಕೆಲಸಕ್ಕೆ ಹಿಡಿಯಲ್ಪಟ್ಟವರು “ದುರ್ಭಾಷೆಯನ್ನು ಉಪಯೋಗಿಸುವುದಿಲ್ಲ, ಜಗಳವಾಡುವುದಿಲ್ಲ, ಯಾ ತಮ್ಮ ಪ್ರಾಣಿಗಳನ್ನು ಅಪಪ್ರಯೋಗಿಸುವುದಿಲ್ಲ, ಮತ್ತು ತಾವು ಪ್ರಾಮಾಣಿಕರಾಗಿ ನಡೆಯುತ್ತೇವೆ ಎಂದು ಬೈಬಲಿನ ಮೇಲೆ ಪ್ರಮಾಣ ಮಾಡಬೇಕಾಗಿತ್ತು.” ಇದೇ ಪ್ರಸಿದ್ಧವಾದ ಪೋನಿ ಎಕ್ಸ್ಪ್ರೆಸ್. ಇದು ಅಮೆರಿಕದ ಪಶ್ಚಿಮ ಕರಾವಳಿಯಿಂದ ಸೆಂಟ್ ಜೋಸೆಫ್ಗೆ ಇದ್ದ 3,200 ಕಿಲೊಮೀಟರ್ ದೂರದಲ್ಲಿ ಬಟವಾಡೆಯ ಸಮಯವನ್ನು ಹತ್ತು ದಿನಗಳಿಗೆ ಇಳಿಸಿತು. ಹದಿನೈದರಿಂದ 25 ಕಿಲೊಮೀಟರ್ಗಳನ್ನು ಅತಿ ವೇಗದಲ್ಲಿ ಸವಾರಿ ಮಾಡಿ, ಬಳಿಕ ಕುದುರೆಗಳನ್ನು ವಿಳಂಬಿಸದೆ ಬದಲಾಯಿಸಿ, ಆ ಯುವ ಸವಾರರು ಪರ್ವತಗಳನ್ನು, ಬಯಲುಗಳನ್ನು ಮತ್ತು ನದಿಗಳನ್ನು ಸಕಲ ರೀತಿಯ ಹವಾಮಾನಗಳಲ್ಲಿ ಬಹಳ ವೇಗದಲ್ಲಿ ದಾಟಿದರು. ಈ ಪೋನಿ ಎಕ್ಸ್ಪ್ರೆಸ್ ಅಸ್ತಿತ್ವದಲ್ಲಿ ಇದ್ದಾಗೆಲ್ಲ, ಅವರ ಅತಿ ವೇಗದ ಕುದುರೆಗಳ ಕಾರಣ, ಈ ನಿರ್ಭೀತ ಓಲೆಕಾರರು ಅಮೆರಿಕದ ಇಂಡಿಯನರನ್ನೂ ದಾರಿಗಳ್ಳರನ್ನೂ ಸವಾರಿಯಲ್ಲಿ ಸೋಲಿಸಿದರು: ಆದರೂ ಒಬ್ಬ ಸವಾರನು ಕೊಲ್ಲಲ್ಪಟ್ಟನು.
ಎಪ್ರಿಲ್ 3, 1860ರಿಂದ ಅಕ್ಟೋಬರ 26, 1861 ವರೆಗೆ ಚಾಲ್ತಿಯಲ್ಲಿದ್ದ ಈ ಧೈರ್ಯದ ಟಪಾಲು ಸೇವೆಯನ್ನು ಐತಿಹ್ಯವು ಹೊಗಳಿದೆ. ಭೂಖಂಡವನ್ನು ಹಾದುಹೋಗುವ ಟೆಲಿಗ್ರಾಫ್ ಖಾತೆ ಆರಂಭವಾದಾಗ ಈ ವ್ಯಾಪಾರ ಅಂತ್ಯಗೊಂಡಿತು. ಹೀಗೆ ಅಮೆರಿಕದ ಟಪಾಲು ಇತಿಹಾಸದ ಅತ್ಯಂತ ವರ್ಣರಂಜಿತ ಅಧ್ಯಾಯಗಳಲ್ಲಿ ಒಂದನ್ನು ಇದು ಮುಗಿಸಿತು.
ಆಧುನಿಕ ವಿಧಾನಗಳು
ನಾವು ಇಂದು ಒಂದು ಪತ್ರವನ್ನು ಟಪಾಲಿಗೆ ಹಾಕಿ ಅದು ಹೇಗೆ ನಿರ್ವಹಿಸಲ್ಪಡುತ್ತದೆಂದು ನೋಡೋಣ. ನೀವು ಈ ಖಾತೆಯನ್ನು ಹೇಗೆ ಉಪಯೋಗಿಸುತ್ತೀರಿ ಎಂಬುದರ ಮೇಲೆ ಬಟವಾಡೆಯ ಸಮಯವು ಹೊಂದಿಕೊಂಡಿರುತ್ತದೆ.
ನೀವು ನಿಮ್ಮ ದಿನದ ವ್ಯಾಪಾರವನ್ನು ಮುಗಿಸಿದ ಬಳಿಕ, ಶೇಖರವಾದ ಪತ್ರವ್ಯವಹಾರವನ್ನು ಟಪಾಲಿಗೆ ಕಳುಹಿಸಲಾಗುತ್ತದೆ. ಇದು ನಮ್ಮಲ್ಲಿ ಹೆಚ್ಚಿನವರಿಗೆ ರೂಢಿಯಾಗಿರುವುದರಿಂದ, ದಿನಾಂತ್ಯ ಭಾಗದಲ್ಲಿ ಟಪಾಲಿನ ಒಂದು ನೆರೆಯೇ ಟಪಾಲಿನ ಪ್ರವಾಹವನ್ನು ಸೇರುತ್ತದೆ. ಹೀಗೆ, ದಿನದ ಮೊದಲ ಭಾಗದಲ್ಲಿ ನಿಮ್ಮ ಟಪಾಲನ್ನು ನೀವು ಕಳುಹಿಸುವಲ್ಲಿ, ಅದು ನಿಮಗೆ ಕೆಲವು ತಾಸುಗಳ ಪ್ರಯೋಜನವನ್ನು ಕೊಟ್ಟು ನಿಮ್ಮ ಪತ್ರಗಳನ್ನು ಆ ದಿನದ ಟಪಾಲಿನ ಮೊತ್ತದ ಎದುರಲ್ಲಿ ಹಾಕುತ್ತದೆ. ಅಮೆರಿಕದಲ್ಲಿ ಈ ಟಪಾಲಿನ ಹರಿವಿನ ಪ್ರತಿದಿನದ ಮೊತ್ತವು 1991ರಲ್ಲಿ, ನ್ಯೂ ಯಾರ್ಕ್ ಸಿಟಿಯ 1 ಕೋಟಿ 33 ಲಕ್ಷ ಅಂಚೆಯ ವಸ್ತುಗಳೊಂದಿಗೆ, 45 ಕೋಟಿ 40 ಲಕ್ಷ ಅಂಚೆಯ ವಸ್ತುಗಳು. ಫ್ರಾನ್ಸ್, ಪ್ಯಾರಿಸಿನ 55 ಲಕ್ಷಗಳೊಂದಿಗೆ 7 ಕೋಟಿ 10 ಲಕ್ಷ ಅಂಚೆಯ ವಸ್ತುಗಳು; ಜಪಾನ್, ಟೋಕಿಯೋದ 1 ಕೋಟಿ 70 ಲಕ್ಷಗಳೊಂದಿಗೆ 6 ಕೋಟಿ 25 ಲಕ್ಷ ಅಂಚೆಯ ವಸ್ತುಗಳು; ಮತ್ತು ಬ್ರಿಟನ್, 6 ಕೋಟಿ.
ದಾರಿಯ ಟಪಾಲು ಪೆಟ್ಟಿಗೆಯಲ್ಲಿ ಯಾ ಚಿಕ್ಕ ಪೋಸ್ಟ್ ಆಫೀಸಿನ ಪೆಟ್ಟಿಗೆಯಲ್ಲಿ ಹಾಕಿದ ಪತ್ರಗಳನ್ನು ಒಂದು ಹೆಚ್ಚು ದೊಡ್ಡ ಪೋಸ್ಟ್ ಆಫೀಸಿಗೆ ತರಲಾಗುತ್ತದೆ. ನಿಮ್ಮ ಟಪಾಲನ್ನು ಸಂಗ್ರಹಿಸುವ ಸಮಯಕ್ಕೆ ತುಸು ಮೊದಲು ಹಾಕುವುದಾದರೆ ಮತ್ತು, ಪ್ರಾಯೋಗಿಕವಾಗಿರುವಲ್ಲಿ ದೊಡ್ಡ ಪೋಸ್ಟ್ ಆಫೀಸಿನ ಸಮೀಪ ಹಾಕುವುದಾದರೆ, ಇದು ಬಟವಾಡೆಯ ಸಮಯವನ್ನು ಉತ್ತಮಗೊಳಿಸುತ್ತದೆ.
ನಿಮ್ಮ ಸ್ಥಳಿಕ ಪೋಸ್ಟ್ ಆಫೀಸಿನಲ್ಲಿ ನಿಮ್ಮ ಪತ್ರವನ್ನು ಚೀಲದೊಳಕ್ಕೆ ಹಾಕಿ ಅಲ್ಲಿಂದ ವಿಭಾಗೀಯ ಕೇಂದ್ರವೆಂದು ಕರೆಯಲ್ಪಡುವ ಟಪಾಲಿನ ಸೌಕರ್ಯಕ್ಕೆ ರವಾನಿಸಲಾಗುತ್ತದೆ. ಇಲ್ಲಿ ಸ್ವಯಂಚಾಲಿತ ಟಪಾಲು ವಿಂಗಡಣೆಯ ಉಪಕರಣಗಳನ್ನು ಉಪಯೋಗಿಸಲಾಗುತ್ತದೆ. ಇಲ್ಲಿ ದಕ್ಷವಾಗಿ ರಚಿಸಲ್ಪಟ್ಟ ಯಂತ್ರಗಳ ಮೂಲಕ ಪತ್ರಗಳು ಸಾಗಣೆಯ ಬೆಲ್ಟ್ಗಳಲ್ಲಿ ಮುಂದುವರಿದು ಪ್ರತ್ಯೇಕಿಸಲ್ಪಟ್ಟು, ಮೇಲಕ್ಕೆ ತಿರುಗಿಸಲ್ಪಟ್ಟು, ರದ್ದುಗೊಳಿಸಲ್ಪಟ್ಟು, ವಿಂಗಡಿಸಲ್ಪಟ್ಟು, ಒಟ್ಟಲ್ಪಡುವಾಗ ಅವುಗಳು ಮಿಡಿಸಲ್ಪಟ್ಟು ಸ್ವಯಂಚಾಲಿತವಾಗಿ ತಿರುಗಿಸಲ್ಪಡುತ್ತವೆ. ಇಂತಹ ಫೇಸರ್-ಕ್ಯಾನ್ಸಲರ್ ಮೆಷೀನ್ ಎಂದು ಕರೆಯಲ್ಪಡುವ ಒಂದು ಯಂತ್ರ, ಒಂದು ತಾಸಿನಲ್ಲಿ 27,000 ಪತ್ರಗಳನ್ನು ರದ್ದುಗೊಳಿಸಿ ಅಂಚೆಯ ಮುದ್ರೆ ಒತ್ತಿ, ವೇಗವಾಗಿ ಚಲಿಸುತ್ತದೆ.
ಮಧ್ಯಾಹ್ನದ ಮೇಲೆ ಮತ್ತು ರಾತ್ರಿಯಲ್ಲಿ, ಹೊರಗೆ ಹೋಗುವ ಟಪಾಲನ್ನು ಬೇರ್ಪಡಿಸಲಾಗುತ್ತದೆ. ಸುಲಭವಾಗಿ ಓದಸಾಧ್ಯವಿರುವ—ಟೈಪ್ ಮಾಡಿರುವ, ಮುದ್ರಿಸಿದ, ಕೈಬರಹದ—ವಿಳಾಸಗಳಿರುವ ಪತ್ರಗಳನ್ನು ಯಂತ್ರವು ಬೇರ್ಪಡಿಸಬಹುದು. ಹೆಚ್ಚು ಹೊಸತಾದ ಯಂತ್ರಗಳು ಜಿಪ್ ಕೋಡ್ ಯಾ ಪೋಸ್ಟಲ್ ಕೋಡ್; ನಗರ, ರಾಜ್ಯ, ಯಾ ಪ್ರಾಂತ್ಯ; ಮತ್ತು ಬೀದಿಯ ಹೆಸರುಗಳಿರುವ ಎರಡು ಗೆರೆಗಳನ್ನು ಅರ್ಥ ಮಾಡಿಕೊಳ್ಳುತ್ತವೆ.
ಇಂಥ ಯಂತ್ರಗಳು ಮತ್ತು ಸಂಬಂಧಿತ ಉಪಕರಣಗಳು ತಾಸಿಗೆ ಸಾವಿರಾರು ವಿಳಾಸಗಳನ್ನು ಸ್ವಯಂಚಾಲಕವಾಗಿ “ಓದಿ” ಟಪಾಲಿನ ವಿಶೇಷ ಸಂಕೇತಗಳನ್ನು ಮುದ್ರಿಸಬಲ್ಲವು. ಯಂತ್ರಗಳಿಂದ ಕ್ರಮಗೊಳಿಸಲಾಗದ ಒಂದನೆಯ ದರ್ಜೆಯ ಟಪಾಲನ್ನು ಕೈಯಿಂದ, ಒಂದು ತಾಸಿಗೆ ಸರಾಸರಿ 800 ಅಂಚೆಯ ವಸ್ತುಗಳಂತೆ ಬೇರ್ಪಡಿಸಬೇಕು. ಸುಲಭವಾಗಿ ಓದಸಾಧ್ಯವಿರುವ ವಿಳಾಸವು, ಅಮೆರಿಕದಲ್ಲಿ ಜಿಪ್ ಕೋಡ್ (ಅನೇಕ ದೇಶಗಳಲ್ಲಿ ಪೋಸ್ಟಲ್ ಯಾ ಪೋಸ್ಕ್ಟೋಡ್) ನೊಂದಿಗೆ, ನಿಮ್ಮ ಪತ್ರವು ಹೆಚ್ಚು ವೇಗವಾಗಿ, ಹೆಚ್ಚು ಕಾರ್ಯಸಾಧಕವಾಗಿ ಕ್ರಮಪಡಿಸಲ್ಪಡುವಂತೆ ಅನುಮತಿಸುವುದು.
ಹೊರಗೆ ಕಳುಹಿಸಲ್ಪಡುವ ಟಪಾಲನ್ನು ವಿಮಾನದ ಮೂಲಕವೋ, ಭೂತಲದ ಸಾರಿಗೆಗಳ ಮೂಲಕವೋ ರವಾನಿಸಲಾಗುವುದು. ಪ್ರಥಮ ದರ್ಜೆಯ ಟಪಾಲನ್ನು ಸಾಮಾನ್ಯವಾಗಿ ರಾತ್ರಿಯಲ್ಲಿ ನಿಶ್ಚಿತ ನಗರಗಳಿಗೆ ಮತ್ತು ವಿಭಾಗೀಯ ಕೇಂದ್ರಗಳಿಗೂ, ಎರಡು ದಿವಸಗಳಲ್ಲಿ ಸ್ಥಳಿಕ ನಿಯುಕ್ತ ರಾಜ್ಯಗಳಿಗೂ, ಮತ್ತು ಮೂರು ದಿವಸಗಳಲ್ಲಿ ಅಮೆರಿಕದ ಇತರ ಎಲ್ಲ ಕಡೆಗಳಿಗೆ ರವಾನಿಸಲಾಗುತ್ತದೆ. ಬ್ರಿಟನಿನಲ್ಲಿ ಪ್ರಥಮ ದರ್ಜೆಯ ಟಪಾಲಿನಲ್ಲಿ 90 ಪ್ರತಿಶತವನ್ನು ಮುಂದಿನ ಕೆಲಸ ಮಾಡುವ ದಿನದೊಳಗೆ ಮತ್ತು ಎರಡನೆಯ ದರ್ಜೆಯ ಟಪಾಲಿನಲ್ಲಿ 97.4 ಪ್ರತಿಶತವನ್ನು ಮೂರನೆಯ ದಿನದೊಳಗೆ ಬಟವಾಡೆ ಮಾಡಬೇಕು. ಮೇ 1992ರಲ್ಲಿ ಪ್ರಕಟಿಸಿದ ಫ್ರೆಂಚ್ ಪೋಸ್ಟಲ್ ಸಮೀಕ್ಷೆಗಳು, 96.3 ಪ್ರತಿಶತ ಪೋಸ್ಟಲ್ ವಸ್ತುಗಳು ಭಾನುವಾರಗಳನ್ನು ಮತ್ತು ರಜಾದಿನಗಳನ್ನು ಬಿಟ್ಟು ಎರಡು ದಿವಸಗಳೊಳಗೆ ವಿತರಣೆ ಮಾಡಲ್ಪಡುತ್ತವೆಂದು ತೋರಿಸುತ್ತವೆ. ಹೀಗೆ, ರಾತ್ರಿಯಲ್ಲಿ ಬಹಳ ತಡವಾಗಿ, ಈ ಹೊರಗೆ ಹೋಗುವ ಟಪಾಲು ಏರಿಯ ಮೆಯ್ಲ್ ಪ್ರೊಸೆಸಿಂಗ್ ಸೌಕರ್ಯಗಳಲ್ಲಿ ಮತ್ತು ಗಮ್ಯ ಪೋಸ್ಟ್ ಆಫೀಸುಗಳಲ್ಲಿ ಒಳಬರುವ ಟಪಾಲಾಗುತ್ತದೆ. ರಾತ್ರಿಯಿಡೀ ಮತ್ತು ಮುಂಜಾನೆಯ ತನಕ ಈ ಒಳಬರುವ ಟಪಾಲನ್ನು ಬಟವಾಡೆಗಾಗಿ ಬೇರ್ಪಡಿಸಲಾಗುತ್ತದೆ.
ವಾಚ್ಟವರ್ ಸೊಸೈಟಿಯಂತಹ ಹೆಚ್ಚು ದೊಡ್ಡ ಪೋಸ್ಟಲ್ ಗಿರಾಕಿಗಳು, ಪೋಸ್ಟ್ ಆಫೀಸು ರವಾನಿಸುವವರ ಸ್ಥಾವರದಲ್ಲಿ ಸರಕು ರವಾನೆಯ ವಾಹನದ ಮೂಲಕ ತಮ್ಮ ಟಪಾಲನ್ನು ತಯಾರಿಸುತ್ತಾರೆ. ಈ ಟಪಾಲನ್ನು ಪೋಸ್ಟ್ ಆಫೀಸು ನೇರವಾಗಿ ದೇಶಾದ್ಯಂತ ಟಪಾಲು ವಿತರಣೆಯ ಸಿಬ್ಬಂದಿಗಳಿಗೆ ಕಳುಹಿಸುತ್ತದೆ. ಪೋಸ್ಟಲ್ ಖಾತೆಗಳು ಎಲೆಕ್ಟ್ರಾನಿಕ್ ಟಪಾಲಿನಂತಹ, ಸಂಪರ್ಕದ ಸ್ಪರ್ಧಾತ್ಮಕ ಮಾಧ್ಯಮಗಳನ್ನು ಹೆಚ್ಚು ಉಪಯೋಗಿಸುತ್ತಿವೆ. ಫ್ರೆಂಚ್ ಪದ್ಧತಿಯು ಕಳೆದ ವರ್ಷ ದೂರ ಮುದ್ರಣ (ಎಲೆಕ್ಟ್ರಾನಿಕ್ ಮೆಯ್ಲ್)ದ ಒಂದು ಕೋಟಿ ಅಂಚೆ ವಸ್ತುಗಳ ಟಪಾಲನ್ನು ಕಳುಹಿಸಿತು.
ಟಪಾಲಿನ ಕ್ರಮವು ವಿವಿಧ ದೇಶಗಳಲ್ಲಿ ವಿಭಿನ್ನವಾಗಿರಬಹುದಾದರೂ, ಲೋಕದ ಅಧಿಕಾಂಶ ಟಪಾಲು, ಯಾವುದು ಲೋಕದ ಟಪಾಲಿನ ಮೊತ್ತದಲ್ಲಿ 40 ಪ್ರತಿಶತವನ್ನು ನಿರ್ವಹಿಸುತ್ತದೋ ಆ ಅಮೆರಿಕದ ಪೋಸ್ಟಲ್ ಖಾತೆಯ ಕಾರ್ಯಗತಿಯನ್ನು ವರ್ಣಿಸಿದ ರೀತಿಯಲ್ಲಿ ನಿರ್ವಹಿಸಲ್ಪಡುತ್ತದೆ.
ಇತರ ಟಪಾಲು ಸೇವೆಗಳು
ಕೇವಲ ಟಪಾಲು ರವಾನೆಗಿಂತಲೂ ಹೆಚ್ಚಿನ ಸೇವೆಗಳನ್ನು ಟಪಾಲು ಪದ್ಧತಿಗಳು ಒದಗಿಸುತ್ತವೆ. ಅಮೆರಿಕದ ಪೋಸ್ಟ್ ಆಫೀಸು, ನಿಮಗೆ ಒಂದು ಪಾಸ್ಪೋರ್ಟನ್ನು ಪಡೆಯಲು ಸಹಾಯ ಮಾಡುತ್ತದೆ. ಜ್ಯಾಪನೀಸ್ ಪೋಸ್ಟ್ ಆಫೀಸಿನಲ್ಲಿ ಯಾ ಬ್ರಿಟಿಷ್ ಜೈರೋಬ್ಯಾಂಕ್ (ಮೊದಲು ಬ್ರಿಟಿಷ್ ಪೋಸ್ಟಲ್ ಸರ್ವಿಸಿನ ಸೊತ್ತು)ನಲ್ಲಿ ದ್ರವ್ಯ ವ್ಯವಹಾರ ಮಾಡಬಹುದು. ಅಲ್ಲದೆ, ರವಾನಿಸಿದ ಸರಕುಗಳು ನಷ್ಟವಾಗುವಲ್ಲಿ ಯಾ ಅವುಗಳಿಗೆ ಹಾನಿಯಾಗುವಲ್ಲಿ ಅವುಗಳ ಖರ್ಚು ದೊರೆಯುವಂತೆ ಅವುಗಳನ್ನು ವಿಮೆ ಯಾ ರಿಜಿಸ್ಟರ್ ಮಾಡಬಹುದು. ರವಾನಿಸುವ ಟಪಾಲಿಗೆ ಅದನ್ನು ರವಾನಿಸುವ ಯಾ ಬಟವಾಡೆ ಮಾಡುವ ರುಜುವಾತು ಮಾತ್ರ ಬೇಕಾಗುವಲ್ಲಿ, ಅದನ್ನು ಸರ್ಟಿಫೈಡ್ ಮಾಡಿ ಕಳುಹಿಸುವಲ್ಲಿ ರಿಜಿಸ್ಟರ್ ಮಾಡುವುದಕ್ಕಿಂತ ಕಡಮೆ ಖರ್ಚು ಅದಕ್ಕೆ ತಗಲಬಹುದು. ಜ್ಯಾಪನೀಸ್ ಪೋಸ್ಟಲ್ ಸರ್ವಿಸಿನಲ್ಲಿ ಜನರು ಜೀವವಿಮೆಯನ್ನೂ ಪಡೆಯಬಹುದು.
ಕೇಳಿಕೊಳ್ಳುವಲ್ಲಿ, ಅಮೆರಿಕದಂಥ ಕೆಲವು ಪೋಸ್ಟಲ್ ಪದ್ಧತಿಗಳು ದೊರೆಯುವಂತೆ ವಿಳಾಸ-ತಿದ್ದುಪಾಟನ್ನು ಒದಗಿಸುತ್ತವೆ. ಲಕೋಟೆಯ ಮುಖದಲ್ಲಿ ಕಳುಹಿಸುವವನ ವಿಳಾಸದ ತುಸು ಕೆಳಗೆ, “ವಿಳಾಸವನ್ನು ತಿದ್ದಬೇಕೆಂದು ವಿನಂತಿ” ಅಥವಾ “ಮುಂದಕ್ಕೆ ಕಳುಹಿಸಬೇಡಿ” ಎಂದು ಬರೆಯಿರಿ. ಹೆಚ್ಚಿಗೆಯ ಹಣದ ಖರ್ಚಿಲ್ಲದೆನೇ ಪ್ರಥಮ ದರ್ಜೆಯ ಟಪಾಲು ಹೊಸ ವಿಳಾಸದೊಂದಿಗೆ (ಒಂದು ವರ್ಷಕ್ಕೂ ಕಡಮೆ ಹಳೆಯದಾಗಿರುವಲ್ಲಿ) ಅಥವಾ ಬಟವಾಡೆಯಾಗದಿರುವ ಇತರ ಕಾರಣದೊಂದಿಗೆ ನಿಮಗೆ ಹಿಂದಿರುಗಿಸಲ್ಪಡುವುದು.
ಈ ಮತ್ತು ಇತರ ಸೇವೆಗಳ ಕಾರಣ, ಲೋಕವು ಪೋಸ್ಟಲ್ ಪದ್ಧತಿಯ ಮೇಲೆ ತೀರಾ ಆತುಕೊಂಡಿರುತ್ತದೆ. ಇವ್ಯಾಲ್ಯುಏಷನ್ ಆಫ್ ದಿ ಯುನೊಯಿಟೆಡ್ ಸ್ಟೇಟ್ಸ್ ಪೋಸ್ಟಲ್ ಸರ್ವಿಸ್ ಎಂಬ ವರದಿ ಹೇಳುವುದು: “ಈ ಪೋಸ್ಟಲ್ ಪದ್ಧತಿಯು ಭಾರಿ ಮೊತ್ತದ ಟಪಾಲನ್ನು ನಿರ್ವಹಿಸುತ್ತಾ ಉತ್ತಮವಾದ ಕೆಲಸವನ್ನು ಮಾಡುತ್ತದೆ. ಆದರೆ ಟಪಾಲು ವ್ಯವಸ್ಥೆಯಿಂದ ವಾಸ್ತವವಾಗಿ ಏನನ್ನು ನಿರೀಕ್ಷಿಸಬಹುದೆಂದು ತಿಳಿಯಲು, ವರ್ಜಿಸಸಾಧ್ಯವಿಲ್ಲದ ತಪ್ಪುಗಳನ್ನು ಸಾರ್ವಜನಿಕರು ಅಂಗೀಕರಿಸುತ್ತಾ ಮುಂದುವರಿಯಬೇಕು.” ಅಮೆರಿಕದಲ್ಲಿ, ಪ್ರತಿದಿನ ಬರುವ ಪ್ರಥಮ ದರ್ಜೆಯ 25 ಕೋಟಿ ಟಪಾಲಿನಲ್ಲಿ ಕೇವಲ 5 ಪ್ರತಿಶತ ತಡವಾಗಿ ಬರುವುದಾದರೆ, ಅದು ಪ್ರತಿ ದಿನ 1 ಕೋಟಿ 20 ಲಕ್ಷ ಅಂಚೆ ವಸ್ತುಗಳ ಮೊತ್ತದಲ್ಲಿರುತ್ತದೆ. ಇದರ ಪರಿಣಾಮವು ತಡವಾಗಿ ಬಟವಾಡೆಯಾಗುತ್ತವೆಂಬ ಅನೇಕ ದೂರುಗಳೇ.
ತೊಂದರೆಯ ಆರ್ಥಿಕ ಪರಿಸ್ಥಿತಿಗಳು ಪೋಸ್ಟಲ್ ಪದ್ಧತಿಯನ್ನು ಬಾಧಿಸಿವೆ. ಹೆಚ್ಚುತ್ತಿರುವ ಬೆಲೆಗಳು, ಹಾನಿಯಾಗಿರುವ ವಸ್ತುಗಳು, ತಡವಾಗಿ ಬರುವ ಟಪಾಲು, ಮತ್ತು ಆಧುನಿಕ ಯಂತ್ರಕಲಾ ವಿಜ್ಞಾನ—ಇವು ಸರಕಾರೀ ನಿಯಂತ್ರಿತ ವ್ಯವಸ್ಥೆಯೊಂದಿಗೆ ಹೆಚ್ಚುತ್ತಿರುವ ಸ್ಪರ್ಧೆಯನ್ನು ಹುಟ್ಟಿಸಿವೆ. ನವೀನತೆಯ ನಿರ್ವಹಣ ವಿಧಾನಗಳು ಟಪಾಲಿನ ಕಾರ್ಯಗತಿಯನ್ನು ಉತ್ತಮಗೊಳಿಸಿವೆಯಾದರೂ, ಎಲ್ಲ ಸಂಸ್ಥೆಗಳ ಮೇಲೆ ಬಂದಿರುವ ಒತ್ತಡವು ಟಪಾಲಿನ ಪದ್ಧತಿಗೆ ಸಂದಿಗ್ಧ ಸಮಯಗಳನ್ನು ತಂದೊಡ್ಡಿದೆ. ಅಮೆರಿಕದ ಪೋಸ್ಟಲ್ ಖಾತೆಯ ಆದಾಯದಲ್ಲಿ 1991ರಲ್ಲಿ ಸುಮಾರು 150 ಕೋಟಿ ಡಾಲರ್ ಕೋತಾ ಬಂದಿತ್ತು. ಪ್ರಚಲಿತ ಸೇವೆಯನ್ನು ಮುಂದುವರಿಸಲು ಟಪಾಲಿನ ದರದಲ್ಲಿ ದೊಡ್ಡ ವೃದ್ಧಿ, ಸಿಬ್ಬಂದಿಗಳ ಸಂಖ್ಯೆಯಲ್ಲಿ ಕಡಿತವು ಬೇಕಾಗಿ ಬಂದೀತು.
ಹಳೆಯ ಕಾಲದ ಹನಿಯಿಂದ ಇಂದು ನುಗ್ಗುತ್ತಿರುವ ಪ್ರವಾಹವಾಗಿರುವ ಟಪಾಲು, ಸಮಸ್ಯೆಗಳ ಎದುರಲ್ಲಿಯೂ ಹರಿಯುತ್ತಾ ಮುಂದುವರಿಯುತ್ತಿದ್ದು ಸಂಪರ್ಕಿಸುವ ಸಹಜವಾದ ಆವಶ್ಯಕತೆಯನ್ನು ತೃಪ್ತಿಗೊಳಿಸುತ್ತಿದೆ.—ಟಪಾಲಿನ ಒಬ್ಬ ಕೆಲಸಗಾರನಿಂದ.
[ಪುಟ 18 ರಲ್ಲಿರುವ ಚೌಕ/ಚಿತ್ರಗಳು]
ಟಪಾಲಿನ ಬಟವಾಡೆ ಪರ್ಸಿಯನ್ ಶೈಲಿ
ಹಳೆಯ ಪರ್ಸಿಯನ್ ಸಾಮ್ರಾಜ್ಯದ ದೃಶ್ಯ. ಲಿಖಿತ ಶಾಸನಗಳನ್ನು ಜಾಗರೂಕತೆಯಿಂದ ತಯಾರಿಸಿ, ಅಧಿಕೃತವಾಗಿ ಮುದ್ರೆಯೊತ್ತಿ, ಸರಕಾರೀ ಟಪಾಲು ಖಾತೆಯ ಮುಖಾಂತರ ರವಾನಿಸಲಾಗುತ್ತಿತ್ತು. ಅಪ್ಪಣೆಯನ್ನು ಒಡನೆ ಮುಟ್ಟಿಸದಿರುವಲ್ಲಿ ಮತ್ತು ತಡವಿಲ್ಲದೆ ತಕ್ಕ ಕ್ರಮ ಕೈಕೊಳ್ಳದಿರುವಲ್ಲಿ ಅನೇಕರು ಪ್ರಾಣನಷ್ಟಹೊಂದುವರು. ಆದರೆ ಈ ಟಪಾಲನ್ನು ಹೇಗೆ ತಲಪಿಸಲಾಗುವುದು? “ಪತ್ರಗಳನ್ನು ರಾಜಾಶಶ್ವಾಲೆಗಳ ಕುದುರೆಗಳ ಮೇಲೆ ಸವಾರಿ ಮಾಡುವ ಓಲೆಕಾರರ ಮೂಲಕ ಕಳುಹಿಸಲಾಗುತ್ತಿತ್ತು. . . . ಹೀಗೆ, ರಾಜನಿಂದ ತುರ್ತು ಆಜ್ಞೆ ಬಂದಾಗ ರಾಜಾಶ್ವರೂಢರಾದ ಓಲೆಕಾರರನ್ನು ಕ್ಷಿಪ್ರಗತಿಯಿಂದ ಕಳುಹಿಸಲಾಗುತ್ತಿತ್ತು,” ಎಂದು ದ ನ್ಯೂ ಇಂಗ್ಲಿಷ್ ಬೈಬಲ್ ಎಸ್ತೇರಳು 8:10, 14ರಲ್ಲಿ ಹೇಳುತ್ತದೆ.
ಸುಮಾರು 23 ಕಿಲೊಮೀಟರ್ಗಳ ಅಂತರದಲ್ಲಿ ಕುದುರೆಗಳುಳ್ಳವರಾಗಿದ್ದ ಈ ವಿಶ್ವಾಸಾರ್ಹ ಟಪ್ಪೆ ಸವಾರರು, ಸಾ.ಶ.ಪೂ. ಐದನೆಯ ಶತಮಾನದಲ್ಲಿ ಯೆಹೂದ್ಯರನ್ನು ಕುಲಹತ್ಯೆಯಿಂದ ಬಚಾವು ಮಾಡಲು ರಾಜ ಅಹೆಷ್ವೇರೋಷನು ಕೊಟ್ಟ ಪ್ರತಿಕಟ್ಟಳೆಯನ್ನು ತಲಪಿಸಲು ಇಷ್ಟಪಟ್ಟ ಮಾಧ್ಯಮವಾಗಿದ್ದರು. ಈ ಪತ್ರ ವಾಹಕರು, “ಹಿಮದಲ್ಲಾಗಲಿ, ಮಳೆಯಲ್ಲಾಗಲಿ, ಉಷ್ಣದಲ್ಲಾಗಲಿ, ಯಾ ರಾತ್ರಿಯ ಅಂಧಕಾರದಲ್ಲಾಗಲಿ ಆ ಅಂತರವನ್ನು ಅವರ ಅತ್ಯುತ್ತಮ ವೇಗದಲ್ಲಿ ಸಾಧಿಸುವುದರಿಂದ ತಡೆಯಲ್ಪಡುತ್ತಿರಲಿಲ್ಲ” ಎಂದು ಇತಿಹಾಸಗಾರ ಹಿರಾಡಟಸ್ ಹೇಳುತ್ತಾನೆ. ಇದು ಪರ್ಸಿಯನ್ ಸಾಮ್ರಾಜ್ಯದಾದ್ಯಂತ ನಡೆಯುತ್ತಿದ್ದ ದೈನಂದಿನ ಸರಕಾರೀ ಸುದ್ದಿ ಸಂಪರ್ಕ ಪದ್ಧತಿಯಾಗಿತ್ತು.
[ಪುಟ 17 ರಲ್ಲಿರುವ ಚಿತ್ರ]
ಯಂತ್ರಗಳು ಸ್ವಯಂಚಾಲಕವಾಗಿ ಪ್ರತಿ ತಾಸಿಗೆ ಸಾವಿರಾರು ಪತ್ರಗಳನ್ನು ಓದಿ ಬೇರ್ಪಡಿಸುತ್ತವೆ
[ಕೃಪೆ]
USPS Photo