ಗುಣಮುಖವಾಗುವ ಹಾದಿ
ಹೃದಯಾಘಾತದ ಫಲಾಂತರದಲ್ಲಿ, ಒಬ್ಬ ವ್ಯಕ್ತಿಯು ಭಯ ಮತ್ತು ಚಿಂತೆಯನ್ನು ಅನುಭವಿಸುವುದು ಸಾಮಾನ್ಯ. ನನಗೆ ಇನ್ನೊಂದು ಆಘಾತವಾದೀತೆ? ಬೇನೆ ಮತ್ತು ಶಕ್ತಿ ಮತ್ತು ಚೈತನ್ಯನಷ್ಟದಿಂದಾಗಿ ನಾನು ದೌರ್ಬಲ್ಯನು ಅಥವಾ ಪರಿಮಿತನಾಗುವೆನೊ?
ನಮ್ಮ ಎರಡನೆಯ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟ ಜಾನ್, ಸಮಯ ದಾಟಿದಷ್ಟಕ್ಕೆ ದೈನಂದಿನ ಅಸುಖ ಮತ್ತು ಎದೆನೋವು ಕಡಮೆಯಾಗುವುದೆಂದು ನಿರೀಕ್ಷಿಸಿದ್ದನು. ಆದರೆ ಕೆಲವು ತಿಂಗಳುಗಳ ಬಳಿಕ ಅವನಂದದ್ದು: “ಇಷ್ಟರ ವರೆಗೆ ಅವು ಹೋಗಿರುವುದಿಲ್ಲ. ಅದು, ಬೇಗನೆ ದಣಿಯುವುದು ಮತ್ತು ನನ್ನ ಹೃದಯದ ತುಡಿತಗಳೊಂದಿಗೆ, ‘ನಾನು ಇನ್ನೊಂದು ಆಘಾತದ ಅಂಚಿನಲ್ಲಿದ್ದೇನೊ?’ ಎಂದು ಸತತವಾಗಿ ಕೇಳಿಕೊಳ್ಳುವಂತೆ ಮಾಡುತ್ತದೆ.”
ತನ್ನ ಹೃದಯಾಘಾತದ ಸಮಯ ಯುವ ವಿಧವೆಯಾಗಿದ್ದ ಅಮೆರಿಕದ ಜೇನ್ ಎಂಬವಳು ಒಪ್ಪಿಕೊಂಡದ್ದು: “ನಾನು ಜೀವಿಸುತ್ತ ಹೋಗುವುದಿಲ್ಲ ಅಥವಾ ನನಗೆ ಇನ್ನೊಂದು ಆಘಾತವಾಗಿ ಸಾಯುತ್ತೇನೆ ಎಂದೆಣಿಸಿದೆ. ನೋಡಿಕೊಳ್ಳಲು ಮೂವರು ಮಕ್ಕಳಿದ್ದುದರಿಂದ ನಾನು ವಿಪರೀತ ಗಾಬರಿಗೊಂಡೆ.”
ಜಪಾನ್ನ ಹೀರೋಶೀ ಹೇಳಿದ್ದು: “ನನ್ನ ಹೃದಯ ಮೊದಲಿನಂತೆ ಕಾರ್ಯನಡೆಸಲಾರದೆಂದು ಹೇಳಲ್ಪಟ್ಟದ್ದು ನನಗೆ ಧಕ್ಕೆಯಂತೆ ಬಂತು; ನನ್ನ ಹೃದಯದ ಪಂಪುಮಾಡುವ ಪ್ರಮಾಣವು 50 ಪ್ರತಿಶತ ಕೆಳಗಿಳಿದಿತ್ತು. ಯೆಹೋವನ ಸಾಕ್ಷಿಗಳ ಶುಶ್ರೂಷಕನಾಗಿ ನನ್ನ ಕೆಲವು ಚಟುವಟಿಕೆಗಳನ್ನು ನಾನು ಕಡಮೆಮಾಡಲೇಬೇಕೆಂದು ನನಗೆ ಹೆಚ್ಚುಕಡಮೆ ಖಾತರಿಯಾಗಿ ಗೊತ್ತಿತ್ತು. ಏಕೆಂದರೆ ನಾನು ಮಾಡುತ್ತಿದ್ದುದಕ್ಕಿಂತ ಅರ್ಧಾಂಶಕ್ಕಿಂತಲೂ ಕಡಮೆ ಕೆಲಸವನ್ನು ನಾನು ಮಾಡಶಕ್ತನಾಗಿದ್ದೆ.”
ಒಬ್ಬನು ಸೀಮಿತ ಶಕ್ತಿಯಿಂದ ಎದುರಿಸಲ್ಪಟ್ಟಾಗ, ಖಿನ್ನತೆಯ ಸರದಿಗಳು, ಅನುಪಯುಕ್ತತೆಯ ಅನಿಸಿಕೆಗಳು ಬಂದು ನೆಲೆಸಬಹುದು. ಯೆಹೋವನ ಸಾಕ್ಷಿಗಳ ಸಾರುವ ಕೆಲಸಕ್ಕೆ ತನ್ನನ್ನು ಪೂರ್ಣ ಸಮಯ ಮೀಸಲಾಗಿಟ್ಟುಕೊಂಡಿದ್ದ 83 ವರ್ಷ ಪ್ರಾಯದ ಆಸ್ಟ್ರೇಲಿಯನ್ ಮರೀ ಎಂಬವರು ಪ್ರಲಾಪಿಸಿದ್ದು: “ಹಿಂದೆ ಇದ್ದಷ್ಟೇ ಚಟುವಟಿಕೆಯುಳ್ಳವಳಾಗಿರುವ ನನ್ನ ಅಸಾಮರ್ಥ್ಯವು ನನ್ನನ್ನು ದುಃಖಿಯನ್ನಾಗಿ ಮಾಡಿತು. ಇತರರಿಗೆ ಸಹಾಯಮಾಡುವ ಬದಲು ನನಗೇ ಸಹಾಯದ ಅವಶ್ಯವಿತ್ತು.” ದಕ್ಷಿಣ ಆಫ್ರಿಕದ ಹ್ಯಾರಲ್ಡ್ ಹೇಳಿದ್ದು: “ನಾನು ಮೂರು ತಿಂಗಳುಗಳ ವರೆಗೆ ಕೆಲಸಮಾಡಲು ಅಶಕ್ತನಾದೆ. ತೋಟದ ಸುತ್ತ ನಡೆಯುವುದೇ ನನಗೆ ಮಾಡಸಾಧ್ಯವಿದ್ದ ಅತಿ ಹೆಚ್ಚಿನ ಕೆಲಸವಾಗಿತ್ತು. ಅದು ಹತಾಶೆಯನ್ನು ಹುಟ್ಟಿಸುವಂತಹದ್ದಾಗಿತ್ತು!”
ಆಸ್ಟ್ರೇಲಿಯದ ಥಾಮಸ್ನಿಗೆ ಎರಡನೆಯ ಬಾರಿ ಹೃದಯಾಘಾತವಾದಾಗ ಬೈಪಾಸ್ ಶಸ್ತ್ರಚಿಕಿತ್ಸೆ ಅಗತ್ಯವಾಯಿತು. ಅವನಂದದ್ದು: “ಬೇನೆ ಸಹಿಸಿಕೊಳ್ಳುವ ಒಳ್ಳೆಯ ಸಾಮರ್ಥ್ಯ ನನಗಿಲ್ಲ. ಮತ್ತು ದೊಡ್ಡ ರೀತಿಯ ಶಸ್ತ್ರಚಿಕಿತ್ಸೆಯ ಕುರಿತು ಚಿಂತಿಸುವುದೂ ತೀರ ದೊಡ್ಡ ವಿಷಯವಾಯಿತು.” ಬ್ರೆಸಿಲ್ನ ಸಾರ್ಸ ಎಂಬವನು ಹೃದಯ ಶಸ್ತ್ರಚಿಕಿತ್ಸೆಯ ಫಲಾಂತರದ ಸಂಬಂಧದಲ್ಲಿ ಹೇಳಿದ್ದು: “ನನ್ನ ಬಡ ಆರ್ಥಿಕ ಸ್ಥಿತಿಯ ಕಾರಣ, ನನ್ನ ಹೆಂಡತಿಯನ್ನು ಒಂಟಿಗಳಾಗಿ ಮತ್ತು ಸಹಾಯಶೂನ್ಯಳಾಗಿ ಬಿಡುವ ವಿಷಯದಲ್ಲಿ ನಾನು ಭಯಪಟ್ಟೆ. ನಾನು ಹೆಚ್ಚು ದೀರ್ಘಕಾಲ ಉಳಿಯಲಾರೆ ಎಂದು ನನಗನಿಸಿತು.”
ವಾಸಿಯಾಗುವಿಕೆ
ಅನೇಕರು ಗುಣಹೊಂದುವಂತೆ ಮತ್ತು ತಮ್ಮ ಭಾವೋದ್ರೇಕಗಳನ್ನು ಸಮಸ್ಥಿತಿಯಲ್ಲಿಡುವಂತೆ ಯಾವುದು ಸಹಾಯಮಾಡಿದೆ? ಜೇನ್ ಅವಲೋಕಿಸಿದ್ದು: “ನಾನು ಗಾಬರಿಗೊಂಡಾಗ, ಪ್ರಾರ್ಥನೆಯಲ್ಲಿ ಸದಾ ಯೆಹೋವನ ಬಳಿ ಹೋಗಿ, ನನ್ನ ಹೊರೆಗಳನ್ನು ಆತನ ಮೇಲೆ ಹಾಕಿ, ಅವನ್ನು ಅಲ್ಲಿಯೇ ಬಿಡುತ್ತಿದ್ದೆ.” (ಕೀರ್ತನೆ 55:22) ಪ್ರಾರ್ಥನೆಯು, ಒಬ್ಬ ವ್ಯಕ್ತಿಯು ಕಳವಳಗಳನ್ನು ಎದುರಿಸುವಾಗ ಅಗತ್ಯವಿರುವ ಬಲ ಮತ್ತು ಮನಶ್ಶಾಂತಿಯನ್ನು ಪಡೆಯುವರೆ ಅವನಿಗೆ ಸಹಾಯ ನೀಡುತ್ತದೆ.—ಫಿಲಿಪ್ಪಿ 4:6, 7.
ಜಾನ್ ಮತ್ತು ಹೀರೋಶೀ ಪುನರಾರೋಗ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಉತ್ತಮ ಆಹಾರಪಥ್ಯಕ್ರಮ ಮತ್ತು ವ್ಯಾಯಾಮವು ಅವರ ಹೃದಯಗಳನ್ನು ಬಲಪಡಿಸಿದ ಕಾರಣ ಅವರಿಬ್ಬರೂ ಕೆಲಸ ಮಾಡಲಾರಂಭಿಸಿದರು. ಅವರು ತಮ್ಮ ಮಾನಸಿಕ ಹಾಗೂ ಭಾವಾತ್ಮಕ ವಾಸಿಯಾಗುವಿಕೆಗೆ ದೇವರಾತ್ಮದ ಪೋಷಕ ಶಕ್ತಿಯೇ ಕಾರಣವೆಂದರು.
ತನ್ನ ಕ್ರೈಸ್ತ ಸಹೋದರರ ಬೆಂಬಲದ ಮೂಲಕ ಥಾಮಸ್ ತನ್ನ ಶಸ್ತ್ರಚಿಕಿತ್ಸೆಯನ್ನು ಎದುರಿಸಲು ಧೈರ್ಯವನ್ನು ಕಂಡುಕೊಂಡನು. ಅವನು ಹೇಳಿದ್ದು: “ಆಪರೇಷನ್ನ ಮೊದಲು ಒಬ್ಬ ಮೇಲ್ವಿಚಾರಕರು ನನ್ನನ್ನು ಭೇಟಿಮಾಡಿ, ನನ್ನ ಜೊತೆಯಲ್ಲಿ ಪ್ರಾರ್ಥನೆಮಾಡಿದರು. ತೀವ್ರೋತ್ಸಾಹದ ಪ್ರಾರ್ಥನೆಯಲ್ಲಿ ಯೆಹೋವನು ನನ್ನನ್ನು ಬಲಪಡಿಸುವಂತೆ ಅವರು ಕೇಳಿಕೊಂಡರು. ಆ ರಾತ್ರಿ ನಾನು ಅವರ ಪ್ರಾರ್ಥನೆಯ ಮೇಲೆ ಕೇಂದ್ರೀಕರಿಸಿದಾಗ, ಭಾವಾತ್ಮಕ ಅವಧಿಗಳಲ್ಲಿ ಯಾರ ಅನುಭೂತಿಯು ತಾನೇ ವಾಸಿಯಾಗುವ ವಿಧಾನದ ಭಾಗವಾಗಿದೆಯೊ ಅವರಂತಹ ಹಿರಿಯರಿರುವುದಕ್ಕೆ ನಾನು ಅನುಗ್ರಹಿತನೆಂದೆಣಿಸಿದೆ.”
ಇಟೆಲಿಯ ಆನಾ ಖಿನ್ನತೆಯನ್ನು ಈ ರೀತಿಯಲ್ಲಿ ನಿಭಾಯಿಸಿದಳು: “ನಾನು ನಿರುತ್ಸಾಹಪಡುವಾಗ, ದೇವರ ಸೇವಕರಲ್ಲಿ ಒಬ್ಬಳಾಗಿ ನಾನು ಈಗಾಗಲೇ ಪಡೆದಿರುವ ಆಶೀರ್ವಾದಗಳ ಕುರಿತು ಮತ್ತು ದೇವರ ರಾಜ್ಯದ ಕೆಳಗೆ ಬರಲಿರುವ ಆಶೀರ್ವಾದಗಳ ಕುರಿತು ಯೋಚಿಸುತ್ತೇನೆ. ನಾನು ಪ್ರಶಾಂತತೆಯನ್ನು ಪುನಃ ಪಡೆಯಲು ಇದು ಸಹಾಯಮಾಡುತ್ತದೆ.”
ಯೆಹೋವನ ಸಹಾಯಕ್ಕಾಗಿ ಮರೀ ಕೃತಜ್ಞಳು. ಆಕೆಯ ಕುಟುಂಬ ಆಕೆಗೆ ಬೆಂಬಲಕೊಡುತ್ತಿತ್ತು. ಆಕೆ ಹೇಳುವುದು: “ತಮ್ಮ ಸ್ವಂತ ಹೊರೆಗಳನ್ನು ಹೊತ್ತುಕೊಳ್ಳಬೇಕಾಗಿರುವ ನನ್ನ ಆತ್ಮಿಕ ಸೋದರ, ಸೋದರಿಯರು, ನನಗೆ ಭೇಟಿಕೊಡಲು, ಟೆಲಿಫೋನ್ನಲ್ಲಿ ಮಾತಾಡಲು ಅಥವಾ ಕಾರ್ಡುಗಳನ್ನು ಕಳುಹಿಸಲು ಸಮಯವನ್ನು ತೆಗೆದುಕೊಂಡರು. ಈ ರೀತಿಯ ಪ್ರೀತಿಯು ತೋರಿಸಲ್ಪಟ್ಟಾಗ ನಾನು ಹೇಗೆ ದುಃಖಿತಳಾಗಿರಸಾಧ್ಯವಿದೆ?”
ಒಂಟಿಭಾವದ ಹೃದಯಗಳಿಲ್ಲ
ವಾಸಿಹೊಂದುತ್ತಿರುವ ಹೃದಯವು, ಒಂಟಿ ಹೃದಯವಾಗಿರಬಾರದು ಎಂದು ಹೇಳಲಾಗಿದೆ. ಯಾರ ಹೃದಯವು ಅಕ್ಷರಾರ್ಥದಲ್ಲಿಯೂ ಸಂಕೇತಾರ್ಥದಲ್ಲಿಯೂ ದುರಸ್ತುಗೊಳ್ಳಬೇಕೊ ಅಂತಹವರ ವಾಸಿಯಾಗುವಿಕೆಯಲ್ಲಿ ಕುಟುಂಬ ಮತ್ತು ಸ್ನೇಹಿತರ ಬೆಂಬಲವು ಒಂದು ದೊಡ್ಡ, ಇತ್ಯಾತ್ಮಕವಾದ ಪಾತ್ರವನ್ನು ವಹಿಸುತ್ತದೆ.
ದಕ್ಷಿಣ ಆಫ್ರಿಕದ ಮೈಕಲ್ ಹೇಳಿದ್ದು: “ವಿಷಣ್ಣನಾಗಿರುವುದೆಂದರೇನೆಂದು ಇತರರಿಗೆ ವಿವರಿಸುವುದು ಕಷ್ಟಕರ. ಆದರೆ ನಾನು ರಾಜ್ಯ ಸಭಾಗೃಹವನ್ನು ಪ್ರವೇಶಿಸುವಾಗ, ಸಹೋದರರು ನನ್ನ ಕಡೆಗೆ ತೋರಿಸುವ ಚಿಂತೆಯು ನನಗೆ ಅತಿ ಹೃದಯೋಲ್ಲಾಸಕರ ಮತ್ತು ಆತ್ಮೋನ್ನತಿದಾಯಕ.” ಆಸ್ಟ್ರೇಲಿಯದ ಹೆನ್ರಿ ಸಹ, ತನ್ನ ಸಭೆಯು ತೋರಿಸಿದ ಗಾಢವಾದ ಪ್ರೀತಿ ಮತ್ತು ಗ್ರಹಣಶಕ್ತಿಯಿಂದ ಬಲಹೊಂದಿದನು. ಅವನು ಹೇಳಿದ್ದು: “ಪ್ರೋತ್ಸಾಹಕರವಾದ ಆ ಮೃದುಮಾತುಗಳು ನನಗೆ ನಿಜವಾಗಿಯೂ ಆವಶ್ಯಕವಾಗಿದ್ದವು.”
ಸಾರ್ಸ, ತಾನು ಕೆಲಸಮಾಡಲು ಶಕ್ತನಾಗುವ ತನಕ, ತನ್ನ ಕುಟುಂಬಕ್ಕೆ ಆರ್ಥಿಕವಾಗಿ ನೆರವಾದ ಇತರರ ಆಳವಾದ ಚಿಂತೆಯನ್ನು ಗಣ್ಯಮಾಡಿದನು. ಅದೇ ರೀತಿ, ಸ್ವೀಡನ್ನ ಆಲ್ಗ, ತನಗೂ ತನ್ನ ಕುಟುಂಬಕ್ಕೂ ಅನೇಕ ಆತ್ಮಿಕ ಸೋದರ, ಸೋದರಿಯರು ಕೊಟ್ಟ ಪ್ರಾಯೋಗಿಕ ಸಹಾಯವನ್ನು ಗಣ್ಯಮಾಡಿದಳು. ಕೆಲವರು ಆಕೆಗಾಗಿ ವಸ್ತುಗಳನ್ನು ಖರೀದಿಸಿದಾಗ, ಇತರರು ಅವಳ ಮನೆಯನ್ನು ಸ್ವಚ್ಛಗೊಳಿಸಿದರು.
ಅನೇಕ ವೇಳೆ, ಹೃದ್ರೋಗಿಗಳು ತಮಗೆ ಅತಿ ಇಷ್ಟಕರವಾಗಿದ್ದ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಸೀಮಿತಗೊಳಿಸಬೇಕಾಗುತ್ತದೆ. ಸ್ವೀಡನ್ನ ಸ್ವೆನ್ ಹೇಳಿದ್ದು: “ಕೆಲವು ಬಾರಿ, ಹವಾಮಾನವು ತೀರ ಗಾಳಿಮಯವೂ ಚಳಿಯುಳ್ಳದ್ದೂ ಆಗಿರುವುದಾದರೆ, ಅದು ರಕ್ತನಾಳದ ಸೆಡೆತವನ್ನು ಹುಟ್ಟಿಸುವುದರಿಂದ, ಶುಶ್ರೂಷೆಯಲ್ಲಿ ಭಾಗವಹಿಸುವುದನ್ನು ನಾನು ವರ್ಜಿಸಬೇಕಾಗುತ್ತದೆ. ಈ ವಿಷಯದಲ್ಲಿ ನನ್ನ ಅನೇಕ ಜೊತೆಸಾಕ್ಷಿಗಳು ತೋರಿಸುವ ಗ್ರಹಣಶಕ್ತಿಯನ್ನು ನಾನು ಗಣ್ಯಮಾಡುತ್ತೇನೆ.” ಮತ್ತು ಹಾಸಿಗೆ ಹಿಡಿದಿರುವಾಗ, ಸ್ವೆನ್ ಕೂಟಗಳನ್ನು ಕೇಳಶಕ್ತನಾಗುತ್ತಾನೆ, ಏಕೆಂದರೆ ಸಹೋದರರು ಪ್ರೀತಿಯಿಂದ ಅದನ್ನು ಟೇಪ್ನಲ್ಲಿ ರೆಕಾರ್ಡ್ ಮಾಡುತ್ತಾರೆ. “ಸಭೆಯಲ್ಲಿ ನಡೆಯುತ್ತಿರುವ ವಿಷಯಗಳ ಕುರಿತು ಅವರು ನನಗೆ ಮಾಹಿತಿಕೊಡುತ್ತಿರುವುದರಿಂದ, ನನಗೆ ಅದರಲ್ಲಿ ಭಾಗವಹಿಸಿದ ಅನಿಸಿಕೆಯಾಗುತ್ತದೆ.”
ಹಾಸಿಗೆ ಹಿಡಿದಿರುವ ಮರೀ, ಬೈಬಲ್ ಅಭ್ಯಸಿಸಲು ತನ್ನ ಬಳಿಗೆ ಬರುವವರು ಇರುವುದಕ್ಕಾಗಿ ತಾನು ಅನುಗ್ರಹಿತಳೆಂದೆಣಿಸುತ್ತಾಳೆ. ಈ ರೀತಿಯಲ್ಲಿ, ತಾನು ಮುನ್ನೋಡುತ್ತಿರುವ ಅದ್ಭುತ ಭವಿಷ್ಯತ್ತಿನ ಕುರಿತು ಅವಳಿಗೆ ಚರ್ಚಿಸುತ್ತ ಮುಂದುವರಿಯಲು ಸಾಧ್ಯವಾಗುತ್ತದೆ. ತನಗೆ ತೋರಿಸಲ್ಪಡುತ್ತಿರುವ ಪರಿಗಣನೆಗಾಗಿ ಥಾಮಸ್ ಕೃತಜ್ಞನು. “ಹಿರಿಯರು ತೀರ ವಿಚಾರಪರರಾಗಿದ್ದು, ನನಗೆ ಅವರು ಕೊಡುವ ನೇಮಕಗಳ ಸಂಖ್ಯೆಯನ್ನು ಕಡಮೆಮಾಡಿದ್ದಾರೆ.”
ಕುಟುಂಬಗಳಿಗೆ ಬೆಂಬಲ ಅಗತ್ಯ
ಹಾದಿಯು ರೋಗಿಗೆ ಎಷ್ಟೊ ಕುಟುಂಬ ಸದಸ್ಯರಿಗೂ ಅಷ್ಟೇ ಕಷ್ಟಕರವಾಗಿದ್ದೀತು. ಅವರೂ ತೀರ ಒತ್ತರ ಮತ್ತು ಭಯಕ್ಕೊಳಗಾಗುತ್ತಾರೆ. ತನ್ನ ಹೆಂಡತಿಯ ಕಳವಳದ ಕುರಿತು ದಕ್ಷಿಣ ಆಫ್ರಿಕದ ಆಲ್ಫ್ರೆಡ್ ಗಮನಿಸಿದ್ದು: “ನಾನು ಆಸ್ಪತ್ರೆಯಿಂದ ಮನೆಗೆ ಬಂದಾಗ, ರಾತ್ರಿವೇಳೆ ನನ್ನ ಹೆಂಡತಿ, ನಾನು ಚೆನ್ನಾಗಿದ್ದೇನೊ ಎಂದು ನೋಡಲು ನನ್ನನ್ನು ಅನೇಕ ಬಾರಿ ಎಬ್ಬಿಸುತ್ತಿದ್ದಳು, ಮತ್ತು ತಪಾಸಣೆಗಾಗಿ, ನಾನು ಪ್ರತಿ ಮೂರು ತಿಂಗಳಿಗೊಮ್ಮೆ ಡಾಕ್ಟರರಿಗೆ ಭೇಟಿಕೊಡುವಂತೆ ಪಟ್ಟುಹಿಡಿಯುತ್ತಿದ್ದಳು.”
‘ಹೃದಯದಲ್ಲಿ ಕಳವಳವು ಅದನ್ನು ಕುಗ್ಗಿಸುವುದು,’ ಎನ್ನುತ್ತದೆ ಜ್ಞಾನೋಕ್ತಿ 12:25. ತನಗಾದ ಹೃದಯಾಘಾತದ ಬಳಿಕ, ತನ್ನ ಪ್ರೀತಿಯ ಮತ್ತು ಬೆಂಬಲಿಗ ಹೆಂಡತಿಯು, “ಖಿನ್ನತೆಗೊಳಗಾಗಿದ್ದಾಳೆ” ಎಂದನು ಇಟೆಲಿಯ ಕಾರ್ಲೊ. ಆಸ್ಟ್ರೇಲಿಯದ ಲಾರೆನ್ಸ್ ಹೇಳಿದ್ದು: “ನಿಮ್ಮ ಸಹಭಾಗಿಯನ್ನು ಪರಾಮರಿಸಲಾಗುತ್ತಿದೆಯೊ ಎಂಬುದು ಲಕ್ಷಿಸಬೇಕಾದ ವಿಷಯಗಳಲ್ಲಿ ಒಂದು. ಸಹಭಾಗಿಯ ಮೇಲೆ ಬರಬಹುದಾದ ಒತ್ತರವು ಅತಿ ಮಹತ್ತರವಾಗಿರಬಲ್ಲದು.” ಹೀಗೆ, ನಾವು ಮಕ್ಕಳನ್ನು ಸೇರಿಸಿ, ಕುಟುಂಬದಲ್ಲಿರುವ ಎಲ್ಲರ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಪರಿಸ್ಥಿತಿಯು ಅವರಿಂದ ಭಾವಾತ್ಮಕವಾಗಿಯೂ ಶಾರೀರಿಕವಾಗಿಯೂ ಬಲಿಯನ್ನು ತೆಗೆದುಕೊಳ್ಳಸಾಧ್ಯವಿದೆ.
ನಮ್ಮ ಎರಡನೆಯ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟ ಜೇಮ್ಸ್, ತನ್ನ ತಂದೆಯ ಹೃದಯಾಘಾತದ ಅನಂತರ ಸಂಕೋಚ ಪ್ರವೃತ್ತಿಯವನಾದನು. ಅವನಂದದ್ದು: “ನನಗೆ ಇನ್ನು ಮುಂದೆ ವಿನೋದದಲ್ಲಿ ತೊಡಗಸಾಧ್ಯವಿಲ್ಲ, ಏಕೆಂದರೆ ಹಾಗೆ ಮಾಡಿದೊಡನೆ, ಏನಾದರೂ ಕೆಟ್ಟದ್ದು ಸಂಭವಿಸಬಹುದೆಂದು ನಾನೆಣಿಸಿದೆ.” ತನ್ನ ಭಯವನ್ನು ತನ್ನ ತಂದೆಗೆ ವ್ಯಕ್ತಪಡಿಸಿ, ಇತರರೊಂದಿಗೆ ಉತ್ತಮ ಸಂಪರ್ಕವನ್ನಿಟ್ಟುಕೊಳ್ಳಲು ಕಾರ್ಯನಡೆಸಿದ್ದು, ಅವನ ಚಿಂತೆಯನ್ನು ಶಮನಮಾಡಲು ಸಹಾಯಮಾಡಿತು. ಆ ಸಮಯದಲ್ಲಿ ಜೇಮ್ಸ್, ತನ್ನ ಜೀವನದ ಮೇಲೆ ಮಹಾ ಪರಿಣಾಮವನ್ನು ಬೀರಿದ ಬೇರೆ ಯಾವುದೋ ಕೆಲಸವನ್ನು ಮಾಡಿದನು. ಅವನಂದದ್ದು: “ಬೈಬಲಿನ ನನ್ನ ಸ್ವಂತ ಅಭ್ಯಾಸ ಮತ್ತು ನಮ್ಮ ಕ್ರೈಸ್ತ ಕೂಟಗಳಿಗಾಗಿ ಸಿದ್ಧತೆಯನ್ನು ನಾನು ಹೆಚ್ಚಿಸಿದೆ.” ಮೂರು ತಿಂಗಳುಗಳ ಅನಂತರ, ಅವನು ತನ್ನ ಜೀವವನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ಅದನ್ನು ಜಲ ದೀಕ್ಷಾಸ್ನಾನದ ಮೂಲಕ ಸಂಕೇತಿಸಿಕೊಂಡನು. “ಅಂದಿನಿಂದ ನಾನು ಯೆಹೋವನೊಂದಿಗೆ ತೀರ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದೇನೆ. ಆತನಿಗೆ ಉಪಕಾರ ಹೇಳಲು ನಿಜವಾಗಿಯೂ ನನಗಿರುವ ಸಂಗತಿಗಳೊ ಅನೇಕ,” ಎನ್ನುತ್ತಾನೆ ಅವನು.
ಹೃದಯಾಘಾತದ ಫಲಾಂತರದಲ್ಲಿ, ತನ್ನ ಜೀವನವನ್ನು ಪುನಃ ಪರೀಕ್ಷಿಸಲು ಒಬ್ಬನಿಗೆ ಸಮಯವಿದೆ. ಉದಾಹರಣೆಗೆ, ಜಾನ್ನ ಕಣ್ನೆಲೆ ಬದಲಾವಣೆಹೊಂದಿತು. ಅವನು ಹೇಳಿದ್ದು: “ಲೌಕಿಕ ಕಸಬುಗಳ ವ್ಯರ್ಥತೆಯನ್ನು ನೀವು ನೋಡಿ, ಕುಟುಂಬ ಮತ್ತು ಸ್ನೇಹಿತರ ಪ್ರೀತಿ ಅದೆಷ್ಟು ಪ್ರಾಮುಖ್ಯ ಮತ್ತು ಯೆಹೋವನಿಗೆ ನಾವೆಷ್ಟು ಅಮೂಲ್ಯರು ಎಂಬುದನ್ನು ಗ್ರಹಿಸಿಕೊಳ್ಳುತ್ತೀರಿ. ಯೆಹೋವನೊಂದಿಗೆ, ನನ್ನ ಕುಟುಂಬ ಮತ್ತು ನನ್ನ ಆತ್ಮಿಕ ಸಹೋದರ, ಸಹೋದರಿಯರೊಂದಿಗೆ ಇರುವ ನನ್ನ ಸಂಬಂಧಕ್ಕೆ ಈಗ ಇನ್ನೂ ಹೆಚ್ಚಿನ ಆದ್ಯತೆಯಿದೆ.” ತನ್ನ ರೋಗಾನುಭವದ ಕುರಿತು ಚಿಂತಿಸಿಕೊಳ್ಳುತ್ತ, ಅವನು ಕೂಡಿಸಿದ್ದು: “ಈ ವಿಷಯಗಳು ಸರಿಪಡಿಸಲ್ಪಡುವ ಒಂದು ಸಮಯದ ನಿರೀಕ್ಷೆಯಿಲ್ಲದವನಾಗಿ ಇದನ್ನು ನಿಭಾಯಿಸುವುದನ್ನು ನಾನು ಭಾವಿಸಿಕೊಳ್ಳಲಾರೆ. ವಿಷಯಗಳು ನನ್ನನ್ನು ಖಿನ್ನನನ್ನಾಗಿ ಮಾಡುವಾಗ, ನಾನು ಭವಿಷ್ಯತ್ತಿನ ಕುರಿತು ಚಿಂತಿಸಲಾಗಿ, ಈಗ ಸದ್ಯದಲ್ಲಿ ಏನು ಸಂಭವಿಸುತ್ತಿದೆಯೊ ಅದು ಕಡಮೆ ಗಮನಾರ್ಹವಾಗಿ ಕಾಣುತ್ತದೆ.”
ಗುಣಮುಖವಾಗುವ ಹಾದಿಯ ಏರುತಗ್ಗುಗಳನ್ನು ತಾವು ಅನುಭವಿಸುವಾಗ, ಈ ಹೃದಯಾಘಾತದಿಂದ ಬದುಕಿ ಉಳಿದವರ ನಿರೀಕ್ಷೆಯು, ಯೇಸು ನಮಗೆ ಯಾವುದಕ್ಕಾಗಿ ಪ್ರಾರ್ಥಿಸಲು ಕಲಿಸಿದನೊ ಆ ರಾಜ್ಯದಲ್ಲಿ ಸ್ಥಿರವಾಗಿ ಬೇರೂರಿದೆ. (ಮತ್ತಾಯ 6:9, 10) ದೇವರ ರಾಜ್ಯವು ಮಾನವರಿಗೆ, ಒಂದು ಭೂಪ್ರಮೋದವನದಲ್ಲಿ ಪರಿಪೂರ್ಣತೆಯಲ್ಲಿ ನಿತ್ಯಜೀವವನ್ನು ತರುವುದು. ಆಗ ಹೃದ್ರೋಗ ಮತ್ತು ಇತರ ಎಲ್ಲ ಅಸಾಮರ್ಥ್ಯಗಳು ಎಂದೆಂದಿಗೂ ನಿರ್ಮೂಲಗೊಳ್ಳುವುವು. ಆ ನೂತನ ಲೋಕವು ಇನ್ನೇನು ಮುಂದೆಯೇ ಇದೆ. ನಿಜವಾಗಿಯೂ, ಅತ್ಯುತ್ಕೃಷ್ಟ ಜೀವನವು ಇನ್ನೂ ಬರಲಿದೆ!—ಯೋಬ 33:25; ಯೆಶಾಯ 35:5, 6; ಪ್ರಕಟನೆ 21:3-5.
[ಪುಟ 24 ರಲ್ಲಿರುವ ಚಿತ್ರ]
ವಾಸಿಯಾಗುವಿಕೆಯಲ್ಲಿ, ಕುಟುಂಬ ಮತ್ತು ಸ್ನೇಹಿತರ ಬೆಂಬಲವು ಒಂದು ಇತ್ಯಾತ್ಮಕವಾದ ಪಾತ್ರವನ್ನು ವಹಿಸುತ್ತದೆ