ಯುವ ಜನರಿಗೆ ಧರ್ಮವು ಎಷ್ಟರ ಮಟ್ಟಿಗೆ ಆಸಕ್ತಿಕರವಾಗಿದೆ?
ಫ್ರಾನ್ಸಿನ ಎಚ್ಚರ! ಸುದ್ದಿಗಾರರಿಂದ
ಸಭಿಕರಲ್ಲಿದ್ದ 7,50,000 ಯೌವನಸ್ಥರಿಗೆ, ಇದು ಸಡಗರದ ಒಂದು ಸಂಜೆಯಾಗಿತ್ತು. ಅವರು ಧ್ವಜಗಳನ್ನು ಆಡಿಸಿದರು, ಹಾಡಿದರು ಮತ್ತು ಚಪ್ಪಾಳೆ ತಟ್ಟಿದರು. ಗಗನದಲ್ಲಿ ಲೇಸರ್ ಬೆಳಕು ಮತ್ತು ಪಟಾಕಿಗಳು ಸಿಡಿಸಲ್ಪಟ್ಟವು ಮತ್ತು ಸಂಗೀತಗಾರರು ತಮ್ಮ ಸಂಗೀತದಿಂದ ಜನಸಮೂಹವನ್ನು ಕಾವೇರಿಸಿದರು. ಆ ವಾತಾವರಣವು, ಒಂದು “ಅನುಗೊಳಿಸಲ್ಪಟ್ಟ ದೊಡ್ಡ ಡಿಸ್ಕೋ ಸಂತೋಷಕೂಟ”ಕ್ಕೆ ಹೋಲಿತು. ಕಡೆಗೆ, ಹೊಗಳುವಿಕೆಯ ಅಬ್ಬರಿಸುವಿಕೆಗಳೊಂದಿಗೆ, ಅವರು ಕಾಯುತ್ತಿದ್ದ ವ್ಯಕ್ತಿಯು ಸ್ಟೇಜಿನ ಮೇಲೆ ಬಂದನು.
ಯಾವುದೋ ರಾಕ್ ತಂಡದ ವರ್ಲ್ಡ್ ಟೂರಿನ ಪ್ರಾರಂಭವು ಇದಾಗಿತ್ತೋ? ಇಲ್ಲ. ಅದು ಕ್ಯಾಥೊಲಿಕ್ ವರ್ಲ್ಡ್ ಯೂತ್ ಡೇಸ್ನ ಸಂದರ್ಭದಲ್ಲಿ ಪ್ಯಾರಿಸ್ನಲ್ಲಿ ಏರ್ಪಡಿಸಲ್ಪಟ್ಟ ಒಂದು ಧಾರ್ಮಿಕ ಕೂಟವಾಗಿತ್ತು. ಮತ್ತು ಆ ವ್ಯಕ್ತಿಯು ಪೋಪ್ ಜಾನ್ ಪಾಲ್ II ಅಲ್ಲದೆ ಇನ್ಯಾರೂ ಆಗಿರಲಿಲ್ಲ!
ಇಂಥ ಒಂದು ಧರ್ಮಕ್ಕೆ ಸಂಬಂಧಿಸಿದ ಉತ್ಸವದಲ್ಲಿ ಯುವ ಜನರಿಗಿರುವ ಆಸಕ್ತಿಯು, ಕೆಲವರಿಗೆ ವಿಚಿತ್ರವಾಗಿ ತೋರಬಹುದು. ಆದರೆ ಈಗ, ವಾರ್ತಾಮಾಧ್ಯಮವು ಯೌವನಸ್ಥರ ಮಧ್ಯೆ ಧಾರ್ಮಿಕ ಪುನರುಜ್ಜೀವನದ ಕುರಿತು ಮಾತಾಡುತ್ತಿದೆ.
ಹೊರತೋರಿಕೆಗಳು
ಮೇಲ್ನೋಟದಲ್ಲಿ, ಧರ್ಮವು ಒಂದು ಉತ್ತಮ ಸ್ಥಿತಿಯಲ್ಲಿರುವಂತೆ ತೋರಿಬರಬಹುದು. ಸುಮಾರು ಶೇಕಡ 68ರಷ್ಟು ಯುವ ಯೂರೋಪಿಯನ್ನರು ತಾವು ಒಂದು ಧರ್ಮಕ್ಕೆ ಸೇರಿದ್ದವರೆಂದು ಹೇಳುತ್ತಾರೆ ಮತ್ತು ಐರ್ಲೆಂಡ್ನಲ್ಲಿ ಈ ಸಂಖ್ಯೆಯು ಶೇಕಡ 90ನ್ನು ಮೀರುತ್ತದೆ. ಒಂದು ಸಮಯದಲ್ಲಿ, ಧರ್ಮವು, ಸಂದುಹೋದ ಶಕದಿಂದ ಬಿಟ್ಟುಹೋದ ಪ್ರಾಚೀನಾವಶೇಷವಾಗಿದೆ ಎಂದು ಅನೇಕರು ನೆನಸಿದ, ಹಿಂದಿನ ಸೋವಿಯತ್ ಒಕ್ಕೂಟವಾದ ಅರ್ಮೆನಿಯದಲ್ಲಿ, ಒಮ್ಮೆ ಪಾಳುಬಿದ್ದಿದ್ದ ಚರ್ಚುಗಳು ಈಗ ತುಂಬಿಹೋಗಿರುವ ವಿಷಯದ ಬಗ್ಗೆ ಒಬ್ಬ ಪಾದ್ರಿಯು ಹೀಗೆ ಹೇಳಿದ್ದು: “ಯುವ ಪೀಳಿಗೆಗಾಗಿ ಧರ್ಮವು ಹೊಂದಿರುವ ಆಕರ್ಷಣೆಯನ್ನು ನೋಡಿ ನಾನು ಆಶ್ಚರ್ಯಚಕಿತನಾಗಿದ್ದೇನೆ.”
ಅನೇಕ ದೇಶಗಳಲ್ಲಿ ಮಾಧ್ಯಮವು, ಕುಪಂಥಗಳಲ್ಲಿ ಮತ್ತು ಕ್ಯಾರಿಸ್ಮಾಟಿಕ್ ಗುಂಪುಗಳಲ್ಲಿ ಯುವ ಜನರ ಒಳಗೂಡುವಿಕೆಯನ್ನು ವ್ಯಾಪಕವಾಗಿ ಪ್ರಚುರಪಡಿಸಿದೆ. ಈ ಮುಂಚೆ ಉಲ್ಲೇಖಿಸಲ್ಪಟ್ಟಂಥ ಧಾರ್ಮಿಕ ಉತ್ಸವಗಳು ಜನಪ್ರಿಯವಾಗಿವೆ. ನಿಜವಾಗಿ ಒಳಗೇನು ನಡೆಯುತ್ತಿದೆ ಎಂಬುದನ್ನು ನೋಡುವಾಗ ನಾವು ಏನನ್ನು ಕಂಡುಕೊಳ್ಳುವೆವು?
ನಿಕಟ ನೋಟವೊಂದನ್ನು ತೆಗೆದುಕೊಳ್ಳುವುದು
ನಿಕಟ ನೋಟವು ತೋರಿಸುತ್ತದೇನೆಂದರೆ, 1967ರಲ್ಲಿ ಶೇಕಡ 81ರಷ್ಟು ಫ್ರೆಂಚ್ ಯೌವನಸ್ಥರು ದೇವರನ್ನು ನಂಬಿದರಾದರೂ, 1997ರಲ್ಲಿ ಆ ಶೇಕಡದ ಪ್ರಮಾಣವು ಅರ್ಧಕ್ಕಿಂತಲೂ ಕಡಿಮೆಯಾಗಿತ್ತು. ಯೂರೋಪಿನಲ್ಲಿ, ಶೇಕಡ 28ರಷ್ಟು ಯುವ ಜನರು ಮಾತ್ರ ವೈಯಕ್ತಿಕ ದೇವರಲ್ಲಿ ನಂಬಿಕೆಯನ್ನಿಟ್ಟಿದ್ದಾರೆ. ಕೇವಲ ಶೇಕಡ 12ರಷ್ಟು ಯೂರೋಪಿನ ಯೌವನಸ್ಥರು ಆಗಾಗ್ಗೆ ಪ್ರಾರ್ಥಿಸುತ್ತಾರೆಂಬ ವಿಷಯದಲ್ಲಿ ಆಶ್ಚರ್ಯಪಡಬೇಕಾಗಿಲ್ಲ. ಯೌವನಸ್ಥರು ಧರ್ಮವನ್ನು ವೀಕ್ಷಿಸುವ ರೀತಿಯಲ್ಲಿ ಇದು ಹೇಗೆ ಪ್ರತಿಫಲಿಸಲ್ಪಟ್ಟಿದೆ?
ಡೆನ್ಮಾರ್ಕ್ನಲ್ಲಿ ಶೇಕಡ 90ರಷ್ಟು ಯುವ ಜನರು ತಾವು ರಾಷ್ಟ್ರೀಯ ಚರ್ಚಿಗೆ ಸೇರಿದ್ದೇವೆಂದು ಹೇಳುತ್ತಾರೆ. ಅದರಲ್ಲಿ ಶೇಕಡ 3ರಷ್ಟು ಯೌವನಸ್ಥರು ಮಾತ್ರ ಸಕ್ರಿಯ ಸದಸ್ಯರೆಂದು ಹೇಳಿಕೊಳ್ಳುತ್ತಾರೆ. ಫ್ರಾನ್ಸಿನ ಒಂದು ಕ್ಯಾಥೊಲಿಕ್ ವಾರ್ತಾಪತ್ರಿಕೆಯು, 1997ರಲ್ಲಿ ಲೆ ಕ್ರ್ವೆ ಮೂಲಕ ಮಾಡಿದ ಸಮೀಕ್ಷೆಯಲ್ಲಿ, ಶೇಕಡ 70ರಷ್ಟು ಫ್ರೆಂಚ್ ಯೌವನಸ್ಥರು, ಧರ್ಮವು ತಮ್ಮ ಜೀವಿತಗಳಲ್ಲಿ ನಿಜವಾಗಿಯೂ ಯಾವುದೇ ರೀತಿಯ ಒಂದು ಪಾತ್ರವನ್ನು ವಹಿಸುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ ಎಂದು ತೋರಿಸಿತು. ಅವರಲ್ಲಿ ಮುಕ್ಕಾಲು ಭಾಗ ಯೌವನಸ್ಥರು, ಒಂದು ಧರ್ಮದ ಕಲಿಸುವಿಕೆಗಿಂತ ಹೆಚ್ಚಾಗಿ ವೈಯಕ್ತಿಕ ಅನುಭವಕ್ಕೆ ಮಹತ್ತ್ವವನ್ನು ಕೊಡುತ್ತಾರೆ. ಇದು ಬಹುಮಟ್ಟಿಗೆ ಇತರ ಯೂರೋಪಿಯನ್ ದೇಶಗಳಲ್ಲಿಯೂ ಸತ್ಯವಾಗಿದೆ.
ಚರ್ಚುಗಳಿಂದ ಯುವ ಜನರು ಏಕೆ ದೂರಸರಿಯುತ್ತಿದ್ದಾರೆ? ಅವರಲ್ಲಿ ಹೆಚ್ಚಿನವರಿಗೆ, ಮುಖ್ಯವಾಗಿ ಧರ್ಮಗಳು ಭರವಸೆಯ ಸ್ಫೂರ್ತಿಯನ್ನು ಕೊಡುವುದಿಲ್ಲ. ಉದಾಹರಣೆಗೆ, ಫ್ರಾನ್ಸಿನಲ್ಲಿರುವ ಯೌವನಸ್ಥರಲ್ಲಿ ಹೆಚ್ಚಿನವರು ಲೋಕದಲ್ಲಿ ಧರ್ಮವು ವಿಂಗಡಿಸುವ ಒಂದು ಅಂಶವಾಗಿದೆ ಎಂದು ನೆನಸುತ್ತಾರೆ. ಇನ್ನೂ ಹೆಚ್ಚಾಗಿ, ಒಬ್ಬ ಕ್ಯಾಥೊಲಿಕ್ ಆಗಿರುವ ಸ್ಪೇನ್ನ 15 ವರ್ಷ ಪ್ರಾಯದ ಹುಡುಗಿಯಾದ ಹೂಡೀತ್ಳಂತೆಯೇ ಅನೇಕ ಯೌವನಸ್ಥರು ನೆನಸುವುದು ಅಸಾಮಾನ್ಯವಾದ ಸಂಗತಿಯಾಗಿರುವುದಿಲ್ಲ. ಅವಳು ಹೇಳಿದ್ದು: “ನೈತಿಕತೆಯ ಬಗ್ಗೆ ಚರ್ಚು ಏನು ಹೇಳುತ್ತದೋ ಅದನ್ನು ನಾನು ಒಪ್ಪುವುದಿಲ್ಲ.” ಅದೇ ರೀತಿಯಲ್ಲಿ, ತೈವಾನಿನ 20 ವರ್ಷ ಪ್ರಾಯದ ಜೋಸಫ್, ಧರ್ಮವು “ತೀರ ಸಾಂಪ್ರದಾಯಿಕ”ವಾಗಿದೆ ಎಂದು ಹೇಳುತ್ತಾನೆ. ಅನೇಕ ಯುವ ಜನರು ತಮ್ಮ ಸ್ವಂತ ಧಾರ್ಮಿಕ ಶಿಕ್ಷಣಗಳೊಂದಿಗೆ ಸಮ್ಮತಿಸುವುದಿಲ್ಲವೆಂದರೆ, ಅವರು ಇನ್ಯಾವುದರಲ್ಲಿ ನಂಬಿಕೆಯನ್ನಿಡುತ್ತಾರೆ?
ತಮಗೆ ಇಷ್ಟವಾದ ಧರ್ಮ
ಮೆನ್ಯು ಕಾರ್ಡಿನಿಂದ ತಮಗೆ ಇಷ್ಟವಾದ ತಿಂಡಿಯನ್ನು ಆರಿಸಿಕೊಳ್ಳುವಂತೆ ಇಂದು ಯುವ ಜನರು ಧಾರ್ಮಿಕ ನಂಬಿಕೆಗಳನ್ನು ಆರಿಸಿಕೊಳ್ಳುತ್ತಾರೆ. ಇದನ್ನು ಒಂದು ಪತ್ರಿಕೆಯು, “ತಮಗೆ ಇಷ್ಟವಾದ ಆಚರಣೆ” ಎಂದು ಕರೆಯುತ್ತದೆ. ಒಂದು ಕ್ಯಾಥೊಲಿಕ್ ಪತ್ರಿಕೆಯು ಇದನ್ನು, “ಧಾರ್ಮಿಕ ಶಾಪಿಂಗ್” ಎಂದು ಕರೆಯಿತು. ಅಸ್ವೀಕಾರಗೊಳ್ಳುತ್ತಿದ್ದ ವಿಚಾರಗಳು ಇಂದು ತುಂಬ ಸಾಮಾನ್ಯ ಬಳಕೆಯಲ್ಲಿವೆ. ಹೀಗೆ, ಯೂರೋಪಿನಲ್ಲಿ ಶೇಕಡ 33ರಷ್ಟು ಯುವ ಜನರು ಅದೃಷ್ಟ ತಾಯಿತಗಳಲ್ಲಿ ನಂಬಿಕೆಯಿಡುತ್ತಾರೆ, ಶೇಕಡ 40ರಷ್ಟು ಮಂದಿ ಕಣಿಹೇಳುವವರು ಭವಿಷ್ಯತ್ತನ್ನು ಮುಂತಿಳಿಸಬಲ್ಲರೆಂದು ನಂಬುತ್ತಾರೆ ಮತ್ತು ಶೇಕಡ 27ರಷ್ಟು, ಜನ್ಮ ನಕ್ಷತ್ರಗಳು ಜನರ ಜೀವಿತಗಳ ಮೇಲೆ ಪ್ರಭಾವಬೀರುತ್ತವೆ ಎಂದು ನಂಬುತ್ತಾರೆ. ಪುನರ್ಜನ್ಮದಂಥ ವಿಚಾರಗಳು ಇಂದು ಅನೇಕ ಯುವ ಯೂರೋಪಿಯನ್ನರ ನಂಬಿಕೆಗಳ ಒಂದು ಭಾಗವಾಗಿಹೋಗಿವೆ.
ಎಷ್ಟೊಂದು ಬಗೆಬಗೆಯ ಧಾರ್ಮಿಕ ನಂಬಿಕೆಗಳಿವೆಯೆಂದರೆ, ಯುವ ಜನರು ತಮ್ಮ ರುಚಿಗಳಿಗೆ ತಕ್ಕ ವಿಚಾರಗಳನ್ನು ಆರಿಸಿಕೊಳ್ಳಸಾಧ್ಯವಿದೆ. ಒಂದೇ ಒಂದು ಧರ್ಮವು ಮಾತ್ರ ಸತ್ಯದ ಮೇಲೆ ಪೂರ್ಣಾಧಿಕಾರವನ್ನು ಹೊಂದಿದೆ ಎಂಬುದನ್ನು ಕೆಲವರು ಮಾತ್ರವೇ ನಂಬುತ್ತಾರೆ. ಯುವ ಜನರು ಮನ ಬಂದಂತೆ ಆರಿಸಿಕೊಳ್ಳುತ್ತಿರುವದರಿಂದ ಅವರ ಧಾರ್ಮಿಕ ನಂಬಿಕೆಗಳ ನಡುವೆ ಇರುವ ವ್ಯತ್ಯಾಸವು ಅಸ್ಪಷ್ಟಗೊಳ್ಳುತ್ತಿದೆ. ಹೀಗೆ ಇಂದು ಸಮಾಜಶಾಸ್ತ್ರಜ್ಞರು, ವಿಧಿವಿಹಿತ ಸಿದ್ಧಾಂತಗಳ “ಪ್ರಗತಿಪರ ಸಂಪೂರ್ಣ ನಾಶನ” ಅಥವಾ “ಸಾಮಾನ್ಯ ಸವೆತ”ದ ಕುರಿತಾಗಿ ಮಾತಾಡುತ್ತಾರೆ. ಈ ಆತ್ಮಿಕ ವಾತಾವರಣದಲ್ಲಿ, ಸಾಂಪ್ರದಾಯಿಕ ಧರ್ಮಗಳು ಯಾವ ರೀತಿಯಲ್ಲಿ ಪ್ರತಿವರ್ತಿಸುತ್ತಿವೆ?
ಯುವಕರಿಗಾಗಿ ಧರ್ಮದ ಅನ್ವೇಷಣೆ
ಯೌವನಸ್ಥರನ್ನು ಆಕರ್ಷಿಸುವುದು ಒಂದು ಸವಾಲಾಗಿದೆ ಎಂಬುದನ್ನು ಧರ್ಮಗಳು ಕಂಡುಕೊಳ್ಳುತ್ತಿವೆ. ಪ್ಯಾರಿಸ್ನಲ್ಲಿ ಕ್ಯಾಥೊಲಿಕ್ ವರ್ಲ್ಡ್ ಯೂತ್ ಡೇಸ್ ಉತ್ಸವದಲ್ಲಿ ಭಾಗವಹಿಸುತ್ತಿದ್ದ ಸಮೂಹವನ್ನು ಒಬ್ಬ ಪ್ರೆಂಚ್ ಪಾದ್ರಿಯು ಹೀಗೆ ಕೇಳಿದ್ದು: “ಇಷ್ಟೊಂದು ಯುವ ವ್ಯಕ್ತಿಗಳು ಎಲ್ಲಿಂದ ಬಂದಿದ್ದಾರೆ? ನನ್ನ ಚರ್ಚುಗಳಲ್ಲಿ ಯೌವನಸ್ಥರೇ ಇಲ್ಲ. ನಾನು ಅವರನ್ನು ಎಂದೂ ನೋಡಿಲ್ಲ.” ಆಕರ್ಷಿಸುವ ಮತ್ತು ಯೌವನಸ್ಥರ ಗಮನವನ್ನು ಹಿಡಿದಿಟ್ಟುಕೊಳ್ಳುವುದರಲ್ಲಿನ ಅದರ ಅನ್ವೇಷಣೆಯಲ್ಲಿ, ಕ್ಯಾಥೊಲಿಕ್ ಚರ್ಚು ಅದು ಕೊಡುವ ಪ್ರಸಂಗವನ್ನು ಮತ್ತು ಅದರ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಬೇಕಾಗಿ ಬಂದಿದೆ.
“ಚರ್ಚು ತನ್ನ ಧಾಟಿಯನ್ನು ಬದಲಾಯಿಸಿಕೊಳ್ಳುತ್ತದೆ!” ಎಂದು ಫ್ರೆಂಚ್ ವಾರ್ತಾಪತ್ರಿಕೆಯಾದ ಲೆ ಫೀಗಾರೊ ಹೇಳಿತು. ಪ್ಯಾರಿಸಿನಲ್ಲಿ 12ನೇ ವರ್ಲ್ಡ್ ಯೂತ್ ಡೇಸ್ ಉತ್ಸವಕ್ಕಾಗಿ, ಕಾರ್ಯಕ್ರಮವನ್ನು ನಡೆಸಿಕೊಂಡುಹೋಗಲು ರಾಕ್ ಸಂಗೀತವನ್ನು ಏರ್ಪಡಿಸಲಿಕ್ಕಾಗಿ, ಹೆಚ್ಚು ಅನುಭವವುಳ್ಳ ಏಜೆನ್ಸಿಗಳನ್ನು ಚರ್ಚು ಬಳಸಿಕೊಂಡಿತು. 100ಕ್ಕಿಂತಲೂ ಹೆಚ್ಚು ದೇಶಗಳಿಂದ ಬಂದಿದ್ದ ಯೌವನಸ್ಥರನ್ನು ಮನೋರಂಜಿಸಲು 300ಕ್ಕಿಂತಲೂ ಹೆಚ್ಚು ಕಾರ್ಯಕ್ರಮವನ್ನು ಪ್ರಾಯೋಜಿಸಲಾಯಿತು, ಪಾದ್ರಿಗಳಿಗಾಗಿ ವಿಶೇಷ ವಿನ್ಯಾಸದ ಉಡುಗೆಗಳನ್ನು ತಯಾರಿಸಲಾಯಿತು.
ಇಂದಿನ ಯುವ ಜನರ ಬಗ್ಗೆ ಸರಿಯಾದ ತಿಳಿವಳಿಕೆಯಿಲ್ಲದ ಕಾರಣ, ಅವರಿಗೆ ಹೊಂದಿಕೊಳ್ಳುವ ಅಗತ್ಯವನ್ನು ಮನದಲ್ಲಿಡುತ್ತಾ, ಅನೇಕ ಧರ್ಮಗಳು ಎಲ್ಲ ರೀತಿಯ ನಂಬಿಕೆಗಳನ್ನು ತಮ್ಮದ್ದಾಗಿ ಮಾಡಿಕೊಳ್ಳುತ್ತಿವೆ. ಈ ತಂತ್ರವನ್ನು ಮನಸ್ಸಿನಲ್ಲಿಡುತ್ತಾ, ಪ್ಯಾರಿಸಿನಲ್ಲಿ ವರ್ಲ್ಡ್ ಯೂತ್ ಡೇಸ್ ಉತ್ಸವವನ್ನು ಏರ್ಪಡಿಸಿದ್ದ ಪಾದ್ರಿಯಾದ ಮೀಷೆಲ್ ಡ್ಯುಬೋ ಹೇಳಿದ್ದು: “ಎಲ್ಲ ದೀಕ್ಷಾಸ್ನಾನಿತ ವ್ಯಕ್ತಿಗಳು ಕ್ರಿಸ್ತನಿಗೆ ನಂಬಿಗಸ್ತರಾಗಿರಬೇಕೆಂದು ನಾನು ಇಷ್ಟಪಡುತ್ತೇನೆ ನಿಜ. ಒಂದು ಪಕ್ಷ ಅವರು ನಂಬಿಗಸ್ತರಾಗಿಲ್ಲದಿದ್ದರೂ ಚರ್ಚಿನಲ್ಲಿ ಅವರಿಗೆ ಸ್ಥಳವಿದೆ.”
ಉತ್ತರಗಳಿಗಾಗಿ ಯೌವನಸ್ಥರ ಅನ್ವೇಷಣೆ
ಒಂದು ವಾರ್ತಾಪತ್ರಿಕೆಯು, ಉತ್ತರಗಳಿಗಾಗಿ ಯೌವನಸ್ಥರ ಅನ್ವೇಷಣೆಯು ನಿಶ್ಚಯವಾಗಿ ನಿಜವಾಗಿದೆ ಎಂಬುದನ್ನು ಎತ್ತಿತೋರಿಸುತ್ತಾ, ಪ್ಯಾರಿಸಿನ ಧಾರ್ಮಿಕ ಉತ್ಸವದಲ್ಲಿ ಯೌವನಸ್ಥರ ಭಾಗವಹಿಸುವಿಕೆಯನ್ನು, “ನಂಬಿಕೆಯ ಅಭಿವ್ಯಕ್ತಿಗಿಂತ, ನಂಬಿಕೆಗಾಗಿ ಕಳಕಳಿಯಾದ ಮೊರೆ” ಎಂದು ವರ್ಣಿಸಿತು. ಅಂಥ ಒಂದು ಮೊರೆಯು ಕ್ಯಾಥೊಲಿಕ್ ಚರ್ಚಿನಿಂದ ಉತ್ತರಿಸಲ್ಪಟ್ಟಿತೊ?
ಚರ್ಚಿನ ಹೊರತೋರಿಕೆಯನ್ನು ನೀವು ಕಡೆಗಣಿಸುವಾಗ ಇಲ್ಲವೇ ಒಂದು ಕ್ಯಾಥೊಲಿಕ್ ವಾರ್ತಾಪತ್ರಿಕೆಯು, ದೊಡ್ಡ ಧಾರ್ಮಿಕ ಉತ್ಸವಗಳನ್ನು “ಕಣ್ಕಟ್ಟು” ಎಂದು ಕರೆಯುವ ವಿಷಯದೊಳಗೆ ನೋಡುವಾಗ, ಏನು ಕಾಣಸಿಗುತ್ತದೆ? ಲೆ ಮೊಂಡ್ ಎಂಬ ಫ್ರೆಂಚ್ ವಾರ್ತಾಪತ್ರಿಕೆಯು, ಚರ್ಚಿನೊಳಗೆ “ನಿಜವಾದ ಹುರುಳಿನ ಕೊರತೆ”ಯ ಬಗ್ಗೆ ಹೇಳಿಕೆಯನ್ನು ನೀಡುತ್ತದೆ.
ಆಹಾರವನ್ನು ತಯಾರಿಸುವ ವಿಧವು ಪ್ರಾಮುಖ್ಯವಾಗಿರುವುದಾದರೂ, ಅದು ಪೌಷ್ಟಿಕದಾಯಕವೂ ಆಗಿರಬೇಕು. ಜೀವಿತದ ಅರ್ಥದ ಕುರಿತಾದ ಯುವ ಜನರ ಪ್ರಶ್ನೆಗಳಿಗೆ, ಆತ್ಮಿಕವಾಗಿ ಪೌಷ್ಟಿಕದಾಯಕವಾದ ಉತ್ತರಗಳು ಆವಶ್ಯಕವಾಗಿವೆ. ಆಕರ್ಷಣೀಯವೂ ಆದರೆ ಪೊಳ್ಳು ಉತ್ತರಗಳು ಯೌವನಸ್ಥರನ್ನು ತೃಪ್ತಿಗೊಳಿಸುವುದಿಲ್ಲ.
ಅರ್ಥಹೀನಗೊಂಡಿರುವ ಇಂಥ ಧಾರ್ಮಿಕ ಸಂದರ್ಭಗಳು, ಇಂದಿನ ಯೌವನಸ್ಥರಿಗೆ ಯಾವುದಾದರೂ ಒಳ್ಳೆಯ ಪರಿಣಾಮವನ್ನು ಬೀರಿವೆಯೋ? ಫ್ರೆಂಚ್ ಸಮಾಜಶಾಸ್ತ್ರಜ್ಞೆಯಾದ ಡ್ಯಾನಿಯಲ್ ಎರ್ವ್ಯೋ-ಲೇಸೇ ಹೇಳಿದ್ದು: “ಈ ನಯನಮನೋಹರ ಏರ್ಪಾಡುಗಳು ಸ್ಥಿರವಾದ ಸಾಮಾಜಿಕ ಪರಿಣಾಮಗಳನ್ನು ವಿಕಸಿಸುವುದು ತೀರ ಕಡಿಮೆ.” ಯೌವನಸ್ಥರು ತಮ್ಮ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರಗಳನ್ನು ಎಲ್ಲಿ ತಾನೇ ಕಂಡುಕೊಳ್ಳಬಲ್ಲರು?
ಸಂತೃಪ್ತಿಕರ ಉತ್ತರಗಳು
1997ರಲ್ಲಿ ಲೆ ಪ್ವಾನ್ ಎಂಬ ಫ್ರೆಂಚ್ ಪತ್ರಿಕೆಯು, ಯೌವನಸ್ಥರು ಎದುರಿಸುವಂಥ ಕಷ್ಟಕಾರ್ಪಣ್ಯಗಳ ಕುರಿತು ಒಂದು ಲೇಖನವನ್ನು ಪ್ರಕಟಪಡಿಸಿತು. ಹೆಚ್ಚಿನ ಯೌವನಸ್ಥರಿಗೆ ಸರ್ವೇಸಾಮಾನ್ಯವಾಗಿರುವ ಜೀವಿತದ ಅರ್ಥದ ಕುರಿತ ಪ್ರಶ್ನೆಗಳಲ್ಲದೆ, ಅಪರಾಧ ಮತ್ತು ಹಿಂಸೆಯೊಡನೆ ಸಹ ಯೌವನಸ್ಥರು ಹೋರಾಡಬೇಕಾಗಿರುತ್ತದೆ. ಇದನ್ನು ಜಯಿಸಸಾಧ್ಯವೋ? ಆ ಪತ್ರಿಕೆಯ ಲೇಖನವು ವಿವರಿಸಿದ್ದು: “ಮದ್ಯಪಾನ, ಅಮಲೌಷಧ, ಮತ್ತು ಹಿಂಸೆಯು ತನ್ನ ದೇಹದ ಮೇಲೆ ಉಂಟುಮಾಡುವ ಹಾನಿಯ ಕುರಿತು ಡೇವಿಡ್ 30 ವರ್ಷ ಪ್ರಾಯದವನಾಗಿದ್ದಾಗ ಚಿಂತಿಸಲಾರಂಭಿಸಿದ. ಅಪರಾಧೀಭಾವದಿಂದ ಹೊರಬರಲಿಕ್ಕಾಗಿದ್ದ ಅವನ ನಿರೀಕ್ಷೆಗಳಿಗೆ ಉತ್ತರವಾಗಿ ಯೆಹೋವನ ಸಾಕ್ಷಿಗಳು ಅವನ ಮನೆಬಾಗಿಲನ್ನು ತಟ್ಟಿದರು. ಅವನು ಬೈಬಲ್ ಅಭ್ಯಾಸಮಾಡಿ, ಪರಿವರ್ತನೆಗೊಂಡನು. ಅವನು ಜೂಜಾಟದಲ್ಲಿ ಕೊಡಬೇಕಾಗಿದ್ದ ಹಣವನ್ನು ಹಿಂತಿರುಗಿಸಿದನು, ಮತ್ತು ಅವನು ಇಸ್ಪೀಟಾಟದಲ್ಲಿ ಮೋಸಗೊಳಿಸಿದ್ದನು ಎಂಬುದನ್ನು ಅರಿಯದವರಿಗೂ—ಎಲ್ಲರಿಗೂ—ಪುನಃ ಹಣವನ್ನು ಭರ್ತಿಮಾಡಿಕೊಟ್ಟನು. ಅವನು ಈಗ, ಧೂಮಪಾನ ಮಾಡುವುದಿಲ್ಲ, ಕುಡಿಯುವುದಿಲ್ಲ ಇಲ್ಲವೇ ಜಗಳವಾಡುವುದಿಲ್ಲ.”
ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಭ್ಯಾಸಮಾಡಿದ ಇತರ ಯೌವನಸ್ಥರ ವಿಷಯದಲ್ಲಿ, ಈ ಲೇಖನವು ಮುಂದುವರಿಸಿ ಹೇಳುವುದು: “ಅವರು ತಮ್ಮ ಎಲ್ಲ ಪ್ರಶ್ನೆಗಳಿಗೆ, ಎಲ್ಲ ಉತ್ತರಗಳನ್ನು ಕಂಡುಕೊಂಡಿದ್ದಾರೆ.” ಒಬ್ಬ ಯುವ ಸಾಕ್ಷಿಯು ಅದನ್ನು ಸರಳವಾಗಿ ಹೀಗೆ ಹೇಳಿದ್ದು: “ಎರಡು ಸಾವಿರ ವರ್ಷಗಳಿಂದ ಬೈಬಲು ಸತ್ಯವನ್ನೇ ಹೇಳುತ್ತಾ ಬಂದಿದೆ, ಆದುದರಿಂದ ಮಾರ್ಗದರ್ಶನಕ್ಕಾಗಿ ನಾನು ಬೇರೆ ಕಡೆ ಏಕೆ ಹೋಗಬೇಕು?”
ದೇವರ ವಾಕ್ಯವು ಯೌವನಸ್ಥರಿಗಾಗಿ ಒಂದು ಸಂದೇಶವನ್ನು ಹೊಂದಿದೆ. ಅದರ ಪ್ರಾಯೋಗಿಕ ಸಲಹೆಯು, ಇಂದಿನ ಸಮಸ್ಯೆಗಳನ್ನು ನಿಭಾಯಿಸಲು ಸಹಾಯಮಾಡುತ್ತದೆ ಮತ್ತು ಶಾಂತಿ ಹಾಗೂ ಸಹೋದರತ್ವದ ಒಂದು ಭವಿಷ್ಯತ್ತಿನಲ್ಲಿ ನಂಬಿಕೆಯನ್ನಿಡುವುದಕ್ಕಾಗಿ ಬಲವಾದ ಒಂದು ಆಧಾರವನ್ನು ಅವರಿಗೆ ಕೊಡುತ್ತದೆ. ನಿರಂತರವಾಗಿ ಬದಲಾಗುತ್ತಿರುವ ಲೋಕದಲ್ಲಿ, ಬೈಬಲು ನೀಡುವ ನಿರೀಕ್ಷೆಯು, ದೃಢತೆಯನ್ನು ಮತ್ತು ಸಾಂತ್ವನವನ್ನು ಒದಗಿಸುತ್ತಾ, “ನಮ್ಮ ಪ್ರಾಣಕ್ಕೆ ಲಂಗರದ ಹಾಗಿದ್ದು ಭರವಸಕ್ಕೆ ಯೋಗ್ಯವಾದದ್ದೂ ಸ್ಥಿರವಾದದ್ದೂ” ಆಗಿದೆ. (ಇಬ್ರಿಯ 6:19) ನೂರಾರು ಸಾವಿರಾರು ಯೌವನಸ್ಥರು, ಯೆಹೋವನ ಸಾಕ್ಷಿಗಳೊಂದಿಗೆ ವೈಯಕ್ತಿಕ ಬೈಬಲ್ ಅಭ್ಯಾಸಮಾಡಿರುವ ಕಾರಣ ತಮ್ಮ ಜೀವಿತಗಳಿಗೆ ನಿಜವಾದ ಅರ್ಥವನ್ನು ಕಂಡುಕೊಂಡಿದ್ದಾರೆ. ಕೇವಲ ಹೊರತೋರಿಕೆಗಳಿಗಿಂತ ಹೆಚ್ಚಿನ ಬದಲಾವಣೆಗಳನ್ನು ಬೈಬಲು ಹೇಗೆ ತರುತ್ತದೆ ಎಂಬುದನ್ನು ಅವರು ನೋಡಿದ್ದಾರೆ. ಬೈಬಲಿನ ಉತ್ತರಗಳನ್ನು ಅಂಗೀಕರಿಸಿಕೊಳ್ಳುವ ಮೂಲಕ, ಯುವ ಜನರು ನಿಜವಾದ ನಂಬಿಕೆಗಾಗಿರುವ ತಮ್ಮ ಅನ್ವೇಷಣೆಗೆ ಪ್ರತಿಫಲವನ್ನು ಕಂಡುಕೊಳ್ಳುತ್ತಾರೆ.
[ಪುಟ 25 ರಲ್ಲಿರುವ ಚಿತ್ರ]
ಪ್ಯಾರಿಸ್ನಲ್ಲಿ ಸಾವಿರಾರು ಯೌವನಸ್ಥರನ್ನು ಧಾರ್ಮಿಕ ಉತ್ಸವವು ಆಕರ್ಷಿಸುತ್ತದೆ
[ಪುಟ 26 ರಲ್ಲಿರುವ ಚಿತ್ರ]
ಪ್ಯಾರಿಸ್ನಲ್ಲಿ ವರ್ಲ್ಡ್ ಯೂತ್ ಡೇಸ್—ನಿಜವಾದ ಒಂದು ಧಾರ್ಮಿಕ ಪುನರುಜ್ಜೀವನವೋ?