ಬೈಬಲಿನ ದೃಷ್ಟಿಕೋನ
ಸುಳ್ಳಾಡುವುದನ್ನು ಸರಿಯೆಂದು ಎಂದಾದರೂ ಸಮರ್ಥಿಸಸಾಧ್ಯವೊ?
“ಒಂದು ಚಿಕ್ಕ ಸುಳ್ಳನ್ನು ಹೇಳಿ, ಉದ್ದವಾದ ವಿವರಣೆ ಕೊಡುವುದನ್ನು ಕೆಲವೊಮ್ಮೆ ತಪ್ಪಿಸಬಹುದು.”
ಸುಳ್ಳಾಡುವುದರ ಕುರಿತು ಅನೇಕ ಜನರ ಅನಿಸಿಕೆ ಏನು ಎಂಬುದನ್ನು ಈ ಹೇಳಿಕೆಯು ದೃಷ್ಟಾಂತಿಸುತ್ತದೆ. ಸುಳ್ಳಾಡುವುದರಿಂದ ಯಾರಿಗೂ ಹಾನಿಯಾಗದಿರುವಲ್ಲಿ, ಸುಳ್ಳು ಹೇಳುವುದು ತಪ್ಪೇನಲ್ಲ ಎಂಬುದು ಅವರ ವಿವರಣೆಯಾಗಿದೆ. ಇಂತಹ ತರ್ಕಕ್ಕೆ, ಪರಿಸ್ಥಿತಿಗನುಗುಣವಾದ ನೈತಿಕತೆ ಎಂಬ ಶೈಕ್ಷಣಿಕ ಹೆಸರೂ ಇದೆ; ಪ್ರೀತಿಯ ನಿಯಮವೇ ನೀವು ಅನುಸರಿಸಬೇಕಾದ ಏಕಮಾತ್ರ ನಿಯಮವಾಗಿದೆ ಎಂದು ಇದು ಹೇಳುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, “ನೀವು ಸುಳ್ಳು ಹೇಳಿದ ಕಾರಣವು ಸರಿಯಾಗಿರುವಲ್ಲಿ ಮತ್ತು ನಿಮ್ಮ ಮನಸ್ಸಿನ ಹೇತುವು ಒಳ್ಳೇದಾಗಿರುವಲ್ಲಿ (ಆಗ) ನೀವು ಸುಳ್ಳಾಡಿದಿರಿ ಎಂಬ ವಾಸ್ತವಾಂಶವು . . . ಖಂಡಿತವಾಗಿಯೂ ಕ್ಷುಲ್ಲಕವಾಗಿದೆ” ಎಂದು ಲೇಖಕಿಯಾದ ಡೈಆನ್ ಕೋಂಪ್ ವಿವರಿಸುತ್ತಾರೆ.
ಇಂದಿನ ಲೋಕದಲ್ಲಿ ಈ ದೃಷ್ಟಿಕೋನವು ಸರ್ವಸಾಮಾನ್ಯವಾಗಿದೆ. ಅಗ್ರಗಣ್ಯ ರಾಜಕಾರಣಿಗಳು ಮತ್ತು ಇನ್ನಿತರ ಲೋಕ ಮುಖಂಡರಿಂದ ಹೇಳಲ್ಪಟ್ಟಿರುವ ಸುಳ್ಳುಗಳನ್ನು ಒಳಗೊಂಡಿರುವ ಹಗರಣಗಳು ಸಮಾಜಕ್ಕೆ ಆಘಾತವನ್ನು ಉಂಟುಮಾಡಿವೆ. ಈ ರೀತಿಯ ವಾತಾವರಣದಿಂದ ಪ್ರಭಾವಿತರಾಗಿರುವ ಅನೇಕರು, ಸತ್ಯವನ್ನು ಹೇಳುವ ತಮ್ಮ ನಿರ್ಧಾರವನ್ನು ಸ್ವಲ್ಪಮಟ್ಟಿಗೆ ಸಡಿಲಿಸಿದ್ದಾರೆ. ಕೆಲವೊಂದು ಕ್ಷೇತ್ರಗಳಲ್ಲಿ, ಸುಳ್ಳಾಡುವುದು ಅಧಿಕೃತ ಧೋರಣೆಯಾಗಿಬಿಟ್ಟಿದೆ. “ಸುಳ್ಳು ಹೇಳಲಿಕ್ಕಾಗಿ ನನಗೆ ಹಣ ಕೊಡಲಾಗುತ್ತದೆ. ಸುಳ್ಳಾಡಿದರೆ ನಾನು ಸೇಲ್ಸ್ ಸ್ಪರ್ಧೆಗಳಲ್ಲಿ ಗೆಲ್ಲುತ್ತೇನೆ ಮತ್ತು ಪ್ರತಿ ವರ್ಷ ನನಗೆ ಅತಿ ಪ್ರಶಂಸೆಯ ವಿಮರ್ಶೆಗಳು ಸಿಗುತ್ತವೆ. . . . ಎಲ್ಲ ಕಡೆಗಳಲ್ಲೂ ಇರುವ ಚಿಲ್ಲರೆ ಮಾರಾಟದ ತರಬೇತಿಗೆ ಇದು ಅತ್ಯಗತ್ಯವಾಗಿರುವಂತೆ ತೋರುತ್ತದೆ” ಎಂದು ಒಬ್ಬ ಸೇಲ್ಸ್ ವ್ಯಕ್ತಿಯು ಆಪಾದಿಸುತ್ತಾನೆ. ಸದುದ್ದೇಶದಿಂದ ಕೂಡಿದ ಕ್ಷಮಾರ್ಹವಾದ ಸುಳ್ಳಿನಿಂದ ಯಾವುದೇ ಹಾನಿಯಾಗುವುದಿಲ್ಲ ಎಂದು ಅನೇಕರು ನಂಬುತ್ತಾರೆ. ಇದು ನಿಜವೊ? ಕ್ರೈಸ್ತರು ಒಂದು ಸುಳ್ಳನ್ನು ಸರಿಯೆಂದು ಸಮರ್ಥಿಸುವಂತಹ ಯಾವುದಾದರೂ ಸಂದರ್ಭಗಳು ಇವೆಯೊ?
ಬೈಬಲಿನ ಉಚ್ಚಮಟ್ಟ
ಬೈಬಲು ಎಲ್ಲ ರೀತಿಯ ಸುಳ್ಳನ್ನು ಸಂಪೂರ್ಣವಾಗಿ ಖಂಡಿಸುತ್ತದೆ. ‘ಸುಳ್ಳುಹೇಳುವವರನ್ನು [ದೇವರು] ನಾಶಮಾಡುವನು’ ಎಂದು ಕೀರ್ತನೆಗಾರನು ಹೇಳುತ್ತಾನೆ. (ಕೀರ್ತನೆ 5:6; ಪ್ರಕಟನೆ 22:15ನ್ನು ಸಹ ನೋಡಿರಿ.) ಬೈಬಲು ಜ್ಞಾನೋಕ್ತಿ 6:16-19ರಲ್ಲಿ, ಯೆಹೋವನು ದ್ವೇಷಿಸುವಂತಹ ಏಳು ವಿಷಯಗಳನ್ನು ಪಟ್ಟಿಮಾಡುತ್ತದೆ. “ಸುಳ್ಳಿನ ನಾಲಿಗೆ” ಮತ್ತು “ಅಸತ್ಯವಾಡುವ ಸುಳ್ಳುಸಾಕ್ಷಿ”ಗಳು ಆ ಪಟ್ಟಿಯಲ್ಲಿ ಮುಖ್ಯವಾಗಿ ಒಳಗೂಡಿಸಲ್ಪಟ್ಟಿವೆ. ಏಕೆ? ಏಕೆಂದರೆ ಸುಳ್ಳಾಡುವುದರಿಂದ ಉಂಟಾಗುವ ಹಾನಿಯನ್ನು ಯೆಹೋವನು ದ್ವೇಷಿಸುತ್ತಾನೆ. ಯೇಸು ಸೈತಾನನನ್ನು ಸುಳ್ಳಾಡುವವನು ಮತ್ತು ಕೊಲೆಗಾರನು ಎಂದು ಕರೆದುದಕ್ಕೆ ಇದು ಒಂದು ಕಾರಣವಾಗಿದೆ. ಸೈತಾನನ ಸುಳ್ಳುಗಳೇ ಮಾನವಕುಲವನ್ನು ದುರವಸ್ಥೆ ಮತ್ತು ಮರಣದೊಳಕ್ಕೆ ರಭಸದಿಂದ ನೂಕಿಬಿಟ್ಟವು.—ಆದಿಕಾಂಡ 3:4, 5; ಯೋಹಾನ 8:44; ರೋಮಾಪುರ 5:12.
ಯೆಹೋವನು ಸುಳ್ಳಾಡುವುದನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾನೆ ಎಂಬುದು, ಅನನೀಯ ಮತ್ತು ಸಪ್ಫೈರಳಿಗೆ ಏನು ಸಂಭವಿಸಿತೋ ಅದರಿಂದ ಎತ್ತಿ ತೋರಿಸಲ್ಪಟ್ಟಿತು. ತಾವು ತುಂಬ ಉದಾರಿಗಳು ಎಂದು ತೋರಿಸಿಕೊಳ್ಳುವ ನೆಪದಲ್ಲಿ ಇವರಿಬ್ಬರೂ ಉದ್ದೇಶಪೂರ್ವಕವಾಗಿ ಅಪೊಸ್ತಲರಿಗೆ ಸುಳ್ಳು ಹೇಳಿದರು. ಅವರು ಈ ರೀತಿ ಮಾಡಿದ್ದು ಉದ್ದೇಶಪೂರ್ವಕವಾಗಿತ್ತು ಮತ್ತು ಇದನ್ನು ಮುಂಚೆಯೇ ಯೋಜಿಸಲಾಗಿತ್ತು. ಆದುದರಿಂದ, ಅಪೊಸ್ತಲ ಪೇತ್ರನು ಪ್ರಕಟಿಸಿದ್ದು: “ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ ಆಡಿದಿ.” ಈ ಕಾರಣಕ್ಕಾಗಿ ಅವರಿಬ್ಬರೂ ದೇವರ ಕೈಯಿಂದಲೇ ಹತರಾದರು.—ಅ. ಕೃತ್ಯಗಳು 5:1-10.
ವರ್ಷಗಳಾನಂತರ ಅಪೊಸ್ತಲ ಪೌಲನು ಕ್ರೈಸ್ತರಿಗೆ ಬುದ್ಧಿಹೇಳಿದ್ದು: “ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ.” (ಕೊಲೊಸ್ಸೆ 3:9) ಕ್ರೈಸ್ತ ಸಭೆಯಲ್ಲಿ ಈ ಬುದ್ಧಿವಾದವು ವಿಶೇಷವಾಗಿ ಆವಶ್ಯಕವಾಗಿದೆ. ತತ್ವಾಧಾರಿತವಾದ ಪ್ರೀತಿಯು ತನ್ನ ನಿಜ ಹಿಂಬಾಲಕರ ಗುರುತು ಚಿಹ್ನೆಯಾಗಿರುವುದೆಂದು ಯೇಸು ಹೇಳಿದನು. (ಯೋಹಾನ 13:34, 35) ಅಂತಹ ನಿಷ್ಕಪಟ ಪ್ರೀತಿಯು, ಸಂಪೂರ್ಣ ಪ್ರಾಮಾಣಿಕತೆ ಹಾಗೂ ಭರವಸೆಯಿರುವಂತಹ ವಾತಾವರಣದಲ್ಲಿ ಮಾತ್ರ ಹುಲುಸಾಗಿ ಬೆಳೆಯಬಲ್ಲದು. ಒಬ್ಬ ವ್ಯಕ್ತಿಯು ನಮಗೆ ಯಾವಾಗಲೂ ಸತ್ಯವನ್ನು ಹೇಳುತ್ತಾನೆ ಎಂಬ ಭರವಸೆ ನಮಗಿಲ್ಲದಿರುವಲ್ಲಿ, ಅಂತಹ ವ್ಯಕ್ತಿಯನ್ನು ಪ್ರೀತಿಸುವುದು ತುಂಬ ಕಷ್ಟ.
ಎಲ್ಲ ರೀತಿಯ ಸುಳ್ಳಾಡುವಿಕೆಯು ಆಪಾದನೀಯವಾಗಿರುವಾಗ, ಕೆಲವೊಂದು ಸುಳ್ಳುಗಳು ಬೇರೆ ಸುಳ್ಳುಗಳಿಗಿಂತ ಹೆಚ್ಚು ಗಂಭೀರವಾಗಿರುತ್ತವೆ. ಉದಾಹರಣೆಗೆ, ಒಬ್ಬನು ಪೇಚಾಟ ಅಥವಾ ಭಯದ ಕಾರಣದಿಂದ ಸುಳ್ಳನ್ನು ಹೇಳಬಹುದು. ಇನ್ನೊಬ್ಬನು ಇತರರಿಗೆ ಹಾನಿಯನ್ನು ಅಥವಾ ನೋವನ್ನು ಉಂಟುಮಾಡುವ ಉದ್ದೇಶದಿಂದ ಯಾವಾಗಲೂ ಸುಳ್ಳಾಡಬಹುದು. ಅವನ ದುರುದ್ದೇಶದ ಕಾರಣ, ಇಂತಹ ಉದ್ದೇಶಪೂರ್ವಕ ಸುಳ್ಳುಗಾರನು ಇತರರಿಗೆ ಅಪಾಯವನ್ನು ಉಂಟುಮಾಡುವವನಾಗಿದ್ದಾನೆ ಮತ್ತು ಅವನು ಪಶ್ಚಾತ್ತಾಪಪಡದಿದ್ದಲ್ಲಿ ಸಭೆಯಿಂದ ಬಹಿಷ್ಕರಿಸಲ್ಪಡುವನು. ಎಲ್ಲ ಸುಳ್ಳುಗಳು ಕೇವಲ ದುರುದ್ದೇಶದಿಂದ ಹೇಳಲ್ಪಡುವುದಿಲ್ಲವಾದ್ದರಿಂದ, ಒಬ್ಬ ವ್ಯಕ್ತಿಯು ಸುಳ್ಳು ಹೇಳುವಾಗ ಅವನನ್ನು ಅನಗತ್ಯವಾಗಿ ಖಂಡಿಸುವ ಬದಲು, ಅದರಲ್ಲಿ ಒಳಗೂಡಿರುವ ಎಲ್ಲ ಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳಲು ಜಾಗ್ರತೆವಹಿಸಬೇಕು. ಸುಳ್ಳಾಡುವುದರ ಹೇತುಗಳನ್ನು ಹಾಗೂ ವಿನಾಯಿತಿ ತೋರಿಸಸಾಧ್ಯವಿರುವ ಸನ್ನಿವೇಶಗಳನ್ನು ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು.—ಯಾಕೋಬ 2:13.
“ಸರ್ಪಗಳಂತೆ ಜಾಣರು”
ನಮ್ಮಿಂದ ಯಾವುದೋ ಮಾಹಿತಿಯನ್ನು ಪಡೆದುಕೊಳ್ಳಲು ಇಷ್ಟಪಡುವ ಒಬ್ಬರಿಗೆ ನಾವು ಎಲ್ಲ ವಿಚಾರಗಳನ್ನು ಹೇಳಿಬಿಡಬೇಕೆಂಬುದು ಸತ್ಯವಂತರಾಗಿರುವುದರ ಅರ್ಥವಲ್ಲ ಎಂಬುದಂತೂ ನಿಜ. “ದೇವರ ವಸ್ತುವನ್ನು ನಾಯಿಗಳಿಗೆ ಹಾಕಬೇಡಿರಿ; ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿರಿ. ಚೆಲ್ಲಿದರೆ ತಮ್ಮ ಕಾಲಿನಿಂದ ಅವುಗಳನ್ನು ತುಳಿದು ಹಿಂತಿರುಗಿ ಬಂದು ನಿಮ್ಮನ್ನು ಸೀಳಿಬಿಟ್ಟಾವು” ಎಂದು ಮತ್ತಾಯ 7:6ರಲ್ಲಿ ಯೇಸು ಎಚ್ಚರಿಸಿದನು. ಉದಾಹರಣೆಗೆ, ದುರುದ್ದೇಶವಿರುವ ವ್ಯಕ್ತಿಗಳು ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವ ಹಕ್ಕನ್ನು ಹೊಂದಿರುವುದಿಲ್ಲ. ತಾವು ದ್ವೇಷಭರಿತ ಲೋಕದಲ್ಲಿ ಜೀವಿಸುತ್ತಿದ್ದೇವೆ ಎಂಬುದು ಕ್ರೈಸ್ತರಿಗೆ ಗೊತ್ತಿದೆ. ಹೀಗೆ, ಯೇಸು ತನ್ನ ಶಿಷ್ಯರಿಗೆ ಬುದ್ಧಿವಾದ ಹೇಳಿದ್ದು: “ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರ್ರಿ.” (ಮತ್ತಾಯ 10:16; ಯೋಹಾನ 15:19) ಯೇಸು ಪೂರ್ಣ ಸತ್ಯವನ್ನು ಹೇಳುವ ವಿಷಯದಲ್ಲಿ ತುಂಬ ಜಾಗೃತನಾಗಿದ್ದನು, ಅಂದರೆ ಎಲ್ಲ ವಾಸ್ತವಾಂಶಗಳನ್ನು ಹೇಳಿಬಿಡುವುದು ಅವನಿಗೆ ಮತ್ತು ಅವನ ಶಿಷ್ಯರಿಗೆ ಅನಗತ್ಯವಾದ ತೊಂದರೆಯನ್ನು ತರಸಾಧ್ಯವಿದ್ದಂತಹ ಸಂದರ್ಭದಲ್ಲಿ ಅವನು ಹಾಗೆ ಮಾಡಲಿಲ್ಲ. ಆದರೂ, ಅಂತಹ ತೊಂದರೆಯ ಸಮಯದಲ್ಲೂ ಅವನು ಸುಳ್ಳು ಹೇಳಲಿಲ್ಲ. ಅದಕ್ಕೆ ಬದಲಾಗಿ, ಆ ಸಂದರ್ಭದಲ್ಲಿ ಅವನು ಏನನ್ನೂ ಹೇಳದಿರುವ ಅಥವಾ ಆ ಸಂಭಾಷಣೆಯನ್ನು ಬೇರೆ ಕಡೆಗೆ ತಿರುಗಿಸುವ ಆಯ್ಕೆಯನ್ನು ಮಾಡಿದನು.—ಮತ್ತಾಯ 15:1-6; 21:23-27; ಯೋಹಾನ 7:3-10.
ಭಾವೀ ವೈರಿಗಳೊಂದಿಗೆ ವ್ಯವಹರಿಸುವಾಗ, ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಅಬ್ರಹಾಮ, ಇಸಾಕ, ರಾಹಾಬ, ಮತ್ತು ದಾವೀದರಂತಹ ನಂಬಿಗಸ್ತ ಸ್ತ್ರೀಪುರುಷರು ಸಹ ಅದೇ ರೀತಿ ವಿವೇಚನಾಶೀಲರಾಗಿದ್ದರು ಮತ್ತು ಜಾಣರಾಗಿದ್ದರು. (ಆದಿಕಾಂಡ 20:11-13; 26:9; ಯೆಹೋಶುವ 2:1-6; 1 ಸಮುವೇಲ 21:10-14) ಬೈಬಲು ಅಂತಹ ಸ್ತ್ರೀಪುರುಷರನ್ನು ನಂಬಿಗಸ್ತ ಆರಾಧಕರಾಗಿ ವರ್ಗೀಕರಿಸುತ್ತದೆ ಮತ್ತು ಇವರ ಜೀವಿತಗಳ ವೈಶಿಷ್ಟ್ಯವು ವಿಧೇಯತೆಯೇ ಆಗಿತ್ತು. ಇದು ಅವರನ್ನು ಅನುಕರಣಯೋಗ್ಯರನ್ನಾಗಿ ಮಾಡುತ್ತದೆ.—ರೋಮಾಪುರ 15:4; ಇಬ್ರಿಯ 11:8-10, 20, 31, 32-39.
ಸುಳ್ಳಾಡುವುದರ ಮೂಲಕ ಕೆಲವೊಮ್ಮೆ ಸುಲಭವಾಗಿ ಪರಿಹಾರವು ಸಿಗುವಂತೆ ತೋರುವ ಸಂದರ್ಭಗಳೂ ಇರಬಹುದು. ಆದರೆ ಇಂದು ಕಷ್ಟಕರವಾದ ಸನ್ನಿವೇಶಗಳನ್ನು ಎದುರಿಸುವಾಗ, ಕ್ರೈಸ್ತರು ಯೇಸುವಿನ ಮಾರ್ಗವನ್ನು ಅನುಕರಿಸಲು ಮತ್ತು ತಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯನ್ನು ಅನುಸರಿಸಲು ಪ್ರಯತ್ನಿಸುತ್ತಾರೆ.—ಇಬ್ರಿಯ 5:14.
ಸತ್ಯವಂತರೂ ಪ್ರಾಮಾಣಿಕರೂ ಆಗಿರುವಂತೆ ಬೈಬಲು ನಮ್ಮನ್ನು ಉತ್ತೇಜಿಸುತ್ತದೆ. ಸುಳ್ಳು ಹೇಳುವುದು ತಪ್ಪಾಗಿದೆ ಮತ್ತು ನಾವು ಬೈಬಲಿನ ಸಲಹೆಯನ್ನು ಅನುಸರಿಸತಕ್ಕದ್ದು: “ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ.” (ಎಫೆಸ 4:25) ಹಾಗೆ ಮಾಡುವ ಮೂಲಕ, ನಾವು ಒಂದು ಶುದ್ಧ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವೆವು, ಸಭೆಯಲ್ಲಿ ಶಾಂತಿಯನ್ನು ಮತ್ತು ಪ್ರೀತಿಯನ್ನು ಹೆಚ್ಚಿಸುವೆವು, ಹಾಗೂ “ಸತ್ಯದೇವರಿಗೆ” ಘನತೆಯನ್ನು ತರುತ್ತಾ ಇರುವೆವು.—ಕೀರ್ತನೆ 31:5, NW; ಇಬ್ರಿಯ 13:18.
[ಪುಟ 20ರಲ್ಲಿರುವ ಚಿತ್ರ]
ಸುಳ್ಳು ಹೇಳುವ ಮೂಲಕ ಅನನೀಯ ಮತ್ತು ಸಪ್ಫೈರರು ತಮ್ಮ ಜೀವಗಳನ್ನು ಕಳೆದುಕೊಂಡರು