“ನಿಮ್ಮ ಬ್ರಾಲಿಯನ್ನು ಮರೆಯಬೇಡಿ!”
ಬ್ರಿಟನ್ನ ಎಚ್ಚರ! ಲೇಖಕರಿಂದ
ಬ್ರಿಟನ್ನಲ್ಲಿ ಅನೇಕರು ತಮ್ಮೊಂದಿಗೆ ಹೆಚ್ಚುಕಡಿಮೆ ಎಲ್ಲಾ ದಿನಗಳಲ್ಲಿ ಛತ್ರಿಯನ್ನು ಕೊಂಡೊಯ್ಯುತ್ತಾರೆ. ಯಾವ ಸಮಯಕ್ಕೆ ಮಳೆಬರುತ್ತದೆ ಎಂದು ಹೇಳಸಾಧ್ಯವಿಲ್ಲ. ಆದುದರಿಂದ, ಮನೆಯಿಂದ ಹೊರಡುವಾಗ ಒಬ್ಬರಿಗೊಬ್ಬರು “ನಿಮ್ಮ ಬ್ರಾಲಿಯನ್ನು ಮರೆಯಬೇಡಿ!” ಎಂದು ನಾವು ಹೇಳುತ್ತೇವೆ.a ಆದರೆ ನಂತರ ಬಸ್ಸಿನಲ್ಲಿಯೋ ರೈಲಿನಲ್ಲಿಯೋ ಅಥವಾ ಅಂಗಡಿಯಲ್ಲಿಯೋ ಅದನ್ನು ಮರೆತುಬಿಟ್ಟು ಬರುತ್ತವೆ. ಹೌದು, ನಮ್ಮ ಈ ಒಯ್ಯಲಾಗುವ ಆಸರೆಯನ್ನು ನಾವು ಹಗುರವಾಗಿ ವೀಕ್ಷಿಸುತ್ತೇವೆ ಏಕೆಂದರೆ ಒಂದು ಕಳೆದುಹೋದರೆ ಇನ್ನೊಂದನ್ನು ಖರೀದಿಸಬಲ್ಲೆವು. ಆದರೆ ಛತ್ರಿಯನ್ನು ಈ ರೀತಿಯಾಗಿ ಯಾವಾಗಲೂ ವೀಕ್ಷಿಸಲಾಗುತ್ತಿರಲಿಲ್ಲ.
ಒಂದು ವಿಶಿಷ್ಠ ಇತಿಹಾಸ
ಆರಂಭದ ಛತ್ರಿಗಳಿಗೆ ಮಳೆಯೊಂದಿಗೆ ಯಾವ ಸಂಬಂಧವೂ ಇರಲಿಲ್ಲ. ಅವುಗಳು ಪ್ರಮುಖ ಜನರಿಗಾಗಿ ಕಾದಿರಿಸಲ್ಪಟ್ಟು, ಹುದ್ದೆ ಮತ್ತು ಗೌರವದ ಕುರುಹುಗಳಾಗಿದ್ದವು. ಅಶ್ಶೂರ್ಯ, ಐಗುಪ್ತ, ಪರ್ಷಿಯ, ಮತ್ತು ಭಾರತದ ಸಾವಿರಾರು ವರುಷಗಳ ಹಿಂದಿನ ಶಿಲ್ಪಕಲಾಕೃತಿಗಳಲ್ಲಿ ಮತ್ತು ವರ್ಣಚಿತ್ರಗಳಲ್ಲಿ ಸೇವಕರು ಪ್ರಭುಗಳನ್ನು ಬಿಸಿಲಿನಿಂದ ರಕ್ಷಿಸಲು ಅವರಿಗೆ ಬಿಸಿಲುಮರೆಯನ್ನು ಹಿಡಿದಿರುವ ಚಿತ್ರಗಳನ್ನು ನೋಡುತ್ತೇವೆ. ಅಶ್ಶೂರ್ಯದಲ್ಲಿ ಕೇವಲ ರಾಜನು ಮಾತ್ರ ಛತ್ರಿಯನ್ನು ಹೊಂದಿರಲು ಅನುಮತಿಸಲಾಗಿತ್ತು.
ಇತಿಹಾಸದಾದ್ಯಂತ ಅದರಲ್ಲಿಯೂ ಮುಖ್ಯವಾಗಿ ಏಷ್ಯಾದಲ್ಲಿ ಛತ್ರಿಯು ಅಧಿಕಾರದ ಚಿಹ್ನೆಯೋಪಾದಿ ಮುಂದುವರಿಯಿತು. ಇಪ್ಪತ್ತನಾಲ್ಕು ಛತ್ರಿಗಳ ಒಡೆಯ ಎಂಬುದಾಗಿ ಕರೆಯಲ್ಪಟ್ಟ ಬರ್ಮಾ ದೇಶದ ಒಬ್ಬ ಅರಸನಿಂದ ತೋರಿಸಲ್ಪಟ್ಟಂತೆ, ಒಬ್ಬ ಅಧಿಕಾರಿಯ ಅಂತಸ್ತು ಅವನು ಹೊಂದಿರುವ ಛತ್ರಿಯ ಸಂಖ್ಯೆಗನುಸಾರ ಹೆಚ್ಚುತ್ತಿತ್ತು. ಕೆಲವೊಮ್ಮೆ ಒಂದರ ಮೇಲೊಂದರಂತೆ ಇಡಲ್ಪಟ್ಟ ಅಂತಸ್ತಿನ ಸಂಖ್ಯೆಯು ಮುಖ್ಯವಾಗಿರುತ್ತಿತ್ತು. ಚೀನಾ ದೇಶದ ಸಾಮ್ರಾಟನ ಛತ್ರಿಯು ನಾಲ್ಕು ಅಂತಸ್ತನ್ನು ಹೊಂದಿತ್ತು, ಸಿಯಾಮ್ನ [ಈಗ ಥಾಯ್ಲೆಂಡ್] ರಾಜನ ಛತ್ರಿಯು ಏಳು ಅಥವಾ ಒಂಭತ್ತು ಅಂತಸ್ತನ್ನು ಹೊಂದಿತ್ತು. ಇಂದು ಸಹ ಕೆಲವು ಪ್ರಾಚ್ಯ ಮತ್ತು ಆಫ್ರಿಕನ್ ದೇಶಗಳಲ್ಲಿ ಛತ್ರಿಯು ಅಧಿಕಾರದ ಚಿಹ್ನೆಯಾಗಿ ಉಳಿದಿದೆ.
ಧಾರ್ಮಿಕ ಛತ್ರಿಗಳು
ಛತ್ರಿಯ ಆದಿ ಇತಿಹಾಸದಲ್ಲಿ, ಅದು ಧರ್ಮದೊಂದಿಗೆ ಸಂಬಂಧಿಸಿತ್ತು. ನಟ್ ಎಂಬ ದೇವತೆಯು ತನ್ನ ದೇಹದಿಂದ ಇಡೀ ಭೂಮಿಗೆ ಛತ್ರಿಯಂತೆ ಆಸರೆ ನೀಡುತ್ತಾಳೆ ಎಂದು ಪುರಾತನ ಐಗುಪ್ತದವರು ನೆನಸಿದ್ದರು. ಆದುದರಿಂದ ಜನರು ಅವಳ ಆಸರೆಯನ್ನು ಹೊಂದಲು ತಮ್ಮದೇ ಆದ ಒಯ್ಯಲಾಗುವ “ಛಾವಣಿಗಳ” ನೆರಳಿನಲ್ಲಿ ನಡೆಯುತ್ತಾರೆ. ಭಾರತ ಮತ್ತು ಚೀನಾದಲ್ಲಿ, ತೆರೆದ ಛತ್ರಿಯು ಆಕಾಶ ಗುಮ್ಮಟವನ್ನು ಪ್ರತಿನಿಧಿಸುತ್ತದೆ ಎಂದು ಜನರು ನಂಬಿದ್ದರು. ಆರಂಭದ ಬೌದ್ಧಮತದ ಜನರು ಅದನ್ನು ಬುದ್ಧನ ಚಿಹ್ನೆಯಾಗಿ ಉಪಯೋಗಿಸುತ್ತಿದ್ದರು, ಮತ್ತು ಅನೇಕವೇಳೆ ಅವರ ಸ್ಮಾರಕಸಮಾಧಿಗಳ ನೆತ್ತಿಯ ಮೇಲೆ ಛತ್ರಿಯನ್ನು ಇಡಲಾಗುತ್ತಿತ್ತು. ಛತ್ರಿಗಳು ಹಿಂದೂ ಮತದ ಭಾಗವೂ ಆಗಿವೆ.
ಸಾ.ಶ.ಪೂ. 500ರಷ್ಟಕ್ಕೆ ಗ್ರೀಸ್ನಲ್ಲಿ ಕಂಡುಬಂದ ಛತ್ರಿಗಳು, ಧಾರ್ಮಿಕ ಹಬ್ಬಗಳಂದು ದೇವದೇವತೆಗಳ ಮೂರ್ತಿಗಳ ಮೇಲೆ ಹಿಡಿಯಲು ಉಪಯೋಗಿಸಲ್ಪಡುತ್ತಿದ್ದವು. ಅಥೇನ್ಯ ಸ್ತ್ರೀಯರಿಗೆ ಛತ್ರಿಯನ್ನು ಹಿಡಿಯಲು ಸೇವಕರಿದ್ದರು, ಆದರೆ ಪುರುಷರಲ್ಲಿ ಕೆಲವೇ ಮಂದಿ ಅದನ್ನು ಉಪಯೋಗಿಸುತ್ತಿದ್ದರು. ಗ್ರೀಸ್ನಿಂದ ಈ ಪದ್ಧತಿಯು ರೋಮಿಗೂ ಹಬ್ಬಿತು.
ರೋಮನ್ ಕ್ಯಾಥೊಲಿಕ್ ಚರ್ಚ್ ತನ್ನ ಮತಸಂಬಂಧಿತ ಆಚರಣೆಗಳ ಸಮಯದಲ್ಲಿ ಉಪಯೋಗಿಸಲಾಗುವ ವಿಶೇಷ ಲಾಂಛನಗಳಲ್ಲಿ ಛತ್ರಿಯನ್ನು ಸೇರಿಸಿತು. ಪೋಪನು ಕೆಂಪು ಮತ್ತು ಹಳದಿ ಬಣ್ಣದ ಗೆರೆಗಳಿರುವ ರೇಷ್ಮೆ ಛತ್ರಿಯ ಕೆಳಗೆ ನಡೆದುಬರುತ್ತಿದ್ದನು ಮತ್ತು ಕಾರ್ಡಿನಲ್ಗಳು ಹಾಗೂ ಬಿಷಪರು ನೇರಳೆ ಅಥವಾ ಹಸಿರು ಬಣ್ಣದ ಛತ್ರಿಗಳ ಕೆಳಗೆ ನಡೆದುಬರುತ್ತಿದ್ದರು. ಈ ದಿನದ ವರೆಗೂ ಬಸಿಲಿಕ ಚರ್ಚುಗಳಲ್ಲಿ ಪೋಪಿಗಾಗಿರುವ ಕುರ್ಚಿಯ ಮೇಲೆ ಪೋಪಿಗೆ ಸೇರಿದ ಬಣ್ಣಗಳ ಒಂದು ಛತ್ರಿಯನ್ನು ಇಡಲಾಗಿದೆ. ಒಬ್ಬ ಪೋಪರ ಮರಣವಾದ ಬಳಿಕ ಮತ್ತು ಇನ್ನೊಬ್ಬ ಪೋಪನ ಆಯ್ಕೆಯ ನಡುವಿನ ಸಮಯದಲ್ಲಿ ಚರ್ಚಿನ ಮುಖಂಡನಾಗಿ ಸೇವೆಸಲ್ಲಿಸುವ ಕಾರ್ಡಿನಲ್ಗೆ ಸಹ, ಆ ಸಮಯದಲ್ಲಿ ಅವನ ವೈಯಕ್ತಿಕ ಲಾಂಛನವಾಗಿ ಒಂದು ಛತ್ರಿಯಿರುತ್ತದೆ.
ಬಿಸಿಲು ಛತ್ರಿಯಿಂದ ಮಳೆ ಕವಚ
ಇಂದು ಮಳೆಯಿಂದ ನಮ್ಮನ್ನು ರಕ್ಷಿಸುವಂಥದ್ದನ್ನು ಛತ್ರಿಯೆಂದೂ, ಸೂರ್ಯನ ಕಿರಣಗಳಿಂದ ನಮ್ಮನ್ನು ರಕ್ಷಿಸುವಂಥದ್ದನ್ನು ಬಿಸಿಲು ಛತ್ರಿಯೆಂದೂ [ಪ್ಯಾರಸಾಲ್] ನಾವು ವ್ಯತ್ಯಾಸಮಾಡಿ ಹೇಳುತ್ತೇವೆ. ಆದರೆ ಆರಂಭದಲ್ಲಿ ಈ ಎರಡು ಪದಗಳಿಗೂ ಮಳೆಯೊಂದಿಗೆ ಯಾವುದೇ ಸಂಬಂಧವಿರಲಿಲ್ಲ. “ಅಂಬ್ರೆಲಾ” ಎಂಬ ಆಂಗ್ಲ ಪದವು, ಲ್ಯಾಟಿನ್ ಪದವಾದ ಅಂಬ್ರದಿಂದ ಬಂದಿದೆ. ಇದಕ್ಕೆ “ನೆರಳು” ಅಥವಾ “ಛಾಯೆ” ಎಂಬ ಅರ್ಥವಿದೆ. “ಪ್ಯಾರಸಾಲ್” ಎಂಬ ಪದವು “ಕವಚ” ಅಥವಾ “ಸೂರ್ಯ” ಎಂಬ ಅರ್ಥವುಳ್ಳ ಪದಗಳಿಂದ ಬಂದಿದೆ. ಚೀನಾದವರು ಅಥವಾ ಬಹುಶಃ ಪುರಾತನ ರೋಮಿನ ಸ್ತ್ರೀಯರು ತಮ್ಮ ಕಾಗದದ ಬಿಸಿಲು ಛತ್ರಿಗೆ ಎಣ್ಣೆ ಮತ್ತು ಮೇಣವನ್ನು ಹಚ್ಚಿ ಅದನ್ನು ಮಳೆಯಿಂದ ಸಂರಕ್ಷಣೆಗಾಗಿ ಉಪಯೋಗಿಸಲಾರಂಭಿಸಿದರು. ಹಾಗಿದ್ದರೂ, ಬಿಸಿಲು ಛತ್ರಿ ಅಥವಾ ಮಳೆ ಕವಚದ ಉಪಯೋಗವು ಯೂರೋಪಿನಿಂದ 16ನೆಯ ಶತಮಾನದ ವರೆಗೆ ಕಣ್ಮರೆಯಾಯಿತು. 16ನೆಯ ಶತಮಾನದಲ್ಲಿ ಇಟಲಿ ದೇಶದವರಿಂದ, ತದನಂತರ ಫ್ರೆಂಚ್ ದೇಶದವರಿಂದ ಅದು ಪುನಃ ಬಳಕೆಗೆ ತರಲ್ಪಟ್ಟಿತ್ತು.
ಹದಿನೆಂಟನೆಯ ಶತಮಾನದಷ್ಟಕ್ಕೆ ಬ್ರಿಟನಿನ ಹೆಂಗಸರು ಛತ್ರಿಯನ್ನು ಹಿಡಿದು ತಿರುಗಾಡಲು ಆರಂಭಿಸಿದರು. ಆದರೆ ಆಗಲೂ ಗಂಡಸರು ಅದನ್ನು ಕೇವಲ ಸ್ತ್ರೀಯರಿಗಾಗಿರುವ ಪ್ರಯೋಜನವಿಲ್ಲದ ಅತಿನಾಜೂಕಿನ ವಸ್ತುವಾಗಿ ವೀಕ್ಷಿಸುತ್ತಾ, ಅದನ್ನು ತೆಗೆದುಕೊಂಡುಹೋಗಲು ನಿರಾಕರಿಸಿದರು. ಆದರೆ ಉಪಹಾರ ಮಂದಿರದ ಧಣಿಗಳು ಮಾತ್ರ ಅದನ್ನು ನಿರಾಕರಿಸುತ್ತಿರಲಿಲ್ಲ. ಏಕೆಂದರೆ ಗ್ರಾಹಕರು ತಮ್ಮ ಕುದುರೆ ಸವಾರಿಬಂಡಿಯಿಂದ ಹೊರಕ್ಕೆ ಕಾಲಿಟ್ಟೊಡನೆ, ತೀಕ್ಷ್ಣವಾದ ಬಿಸಿಲು ಅಥವಾ ಮಳೆಯಿಂದ ಅವರನ್ನು ಮರೆಮಾಡಲು ಒಂದು ಛತ್ರಿಯನ್ನು ಹೊಂದಿರುವುದು ಬಹಳ ಪ್ರಯೋಜನಕಾರಿ ಎಂಬುದನ್ನು ಅವರು ಕಂಡುಕೊಂಡರು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಶವಸಂಸ್ಕಾರಸಂಬಂಧಿತ ಆರಾಧನಾ ವಿಧಿಗಳನ್ನು ನಡೆಸುತ್ತಿರುವಾಗ ಚರ್ಚ್ ಆವರಣದಲ್ಲಿ ಇದು ಅತಿ ಉಪಯುಕ್ತಕರವಾದ ವಸ್ತುವಾಗಿದೆ ಎಂದು ಪಾದ್ರಿಗಳು ಸಹ ಕಂಡುಕೊಂಡರು.
ದೇಶಸಂಚಾರಿಯೂ ಲೋಕೋಪಕಾರಿಯೂ ಆದ ಜೋನ್ಯಾಸ್ ಹ್ಯಾನ್ವೇ ಎಂಬವನು ಇಂಗ್ಲೆಂಡಿನಲ್ಲಿ ಛತ್ರಿಯ ಇತಿಹಾಸವನ್ನೇ ಬದಲಾಯಿಸಿದ ವ್ಯಕ್ತಿ. ಲಂಡನಿನಲ್ಲಿ, ಛತ್ರಿಯನ್ನು ತೆಗೆದುಕೊಂಡು ಎಲ್ಲರ ಮುಂದೆ ಧೈರ್ಯದಿಂದ ನಡೆದಾಡಿದ ಮೊದಲನೆಯ ಪುರುಷನು ಅವನೇ ಎಂದು ಹೇಳಲಾಗುತ್ತದೆ. ಅವನ ವಿದೇಶೀ ಯಾತ್ರೆಗಳ ಸಮಯದಲ್ಲಿ, ಗಂಡಸರು ಛತ್ರಿಗಳನ್ನು ಉಪಯೋಗಿಸುವುದನ್ನು ಗಮನಿಸಿರಲಾಗಿ, ಚರಂಡಿಯ ಕೊಳಚೆ ನೀರನ್ನು ಅವನ ಮೇಲೆ ಬೇಕುಬೇಕೆಂದೇ ಹಾರಿಸುತ್ತಿದ್ದ ಕುದುರೆಗಾಡಿ ಚಾಲಕರ ಕೋಪದ ಮೂದಲಿಸುವಿಕೆಯನ್ನು ಧೈರ್ಯದಿಂದ ಎದುರಿಸಲು ಅವನು ನಿರ್ಣಯಿಸಿದನು. ಸುಮಾರು 30 ವರುಷಗಳ ಸಮಯ ಹ್ಯಾನ್ವೇ ಕ್ರಮವಾಗಿ ತನ್ನ ಛತ್ರಿಯನ್ನು ಬಳಸುತ್ತಿರುವುದನ್ನು ಎಲ್ಲರೂ ನೋಡಸಾಧ್ಯವಿತ್ತು. 1786ರಲ್ಲಿ ಅವನು ಮರಣಹೊಂದಿದ ಸಮಯದೊಳಗಾಗಿ ಗಂಡಸರೂ ಹೆಂಗಸರೂ ಸಂತೋಷದಿಂದ ಛತ್ರಿಯನ್ನು ಕೊಂಡೊಯ್ಯುತ್ತಿದ್ದರು.
ಮಳೆ ಛತ್ರಿಯನ್ನು ಉಪಯೋಗಿಸುವುದು ಆಗಿನ ಕಾಲದಲ್ಲಿ ಬಹಳ ಕಷ್ಟಕರವಾಗಿತ್ತು. ಏಕೆಂದರೆ ಅಂಥ ಛತ್ರಿಗಳು ಬಹಳ ದೊಡ್ಡದಾಗಿಯೂ ಭಾರವಾಗಿಯೂ ವಿಕಾರವಾದದ್ದೂ ಆಗಿರುತ್ತಿದ್ದವು. ಅವುಗಳ ಬಟ್ಟೆಯು ಎಣ್ಣೆಹಚ್ಚಲ್ಪಟ್ಟಿದ್ದ ರೇಷ್ಮೆ ಇಲ್ಲವೇ ಕ್ಯಾನ್ವಸ್ಬಟ್ಟೆಯದ್ದಾಗಿದ್ದದರಿಂದ ಮತ್ತು ಅದರ ಕಡ್ಡಿಗಳು ಹಾಗೂ ದೊಡ್ಡ ಹಿಡಿಗಳು ಬಿದಿರು ಇಲ್ಲವೇ ತಿಮಿಂಗಿಲದ ಎಲುಬಿನಿಂದ ಮಾಡಲ್ಪಟ್ಟಿದ್ದರಿಂದ ಒದ್ದೆಯಾಗಿದ್ದಾಗ ಅವುಗಳನ್ನು ತೆರೆಯುವುದು ತುಂಬ ಕಷ್ಟವಾಗಿತ್ತು ಮತ್ತು ಅವು ಸೋರುತ್ತಿದ್ದವು ಸಹ. ಹಾಗಿದ್ದರೂ, ಅದರ ಜನಪ್ರಿಯತೆ ಹೆಚ್ಚುತ್ತಾ ಬಂತು. ಇದಕ್ಕೆ ಒಂದು ಕಾರಣ, ಮಳೆಬಂದಾಗ ಬಾಡಿಗೆ ಕುದುರೆಗಾಡಿಯಲ್ಲಿ ಹೋಗುವುದಕ್ಕಿಂತ ಒಂದು ಛತ್ರಿಯನ್ನು ಖರೀದಿಸಲು ಕಡಿಮೆ ಖರ್ಚಾಗುತ್ತಿತ್ತು. ಛತ್ರಿ ತಯಾರಕರು ಹೆಚ್ಚಾಗುತ್ತಾ ಬಂದರು ಮತ್ತು ಅದರ ಅಂಗಡಿಗಳೂ ಹೆಚ್ಚಾಗುತ್ತಾ ಹೋಯಿತು. ಅದರ ತಯಾರಕರು ಅದರ ವಿನ್ಯಾಸವನ್ನು ಇನ್ನೂ ಉತ್ತಮಗೊಳಿಸಲು ಗಮನಕೊಡಲಾರಂಭಿಸಿದರು. 19ನೆಯ ಶತಮಾನದ ಮಧ್ಯಭಾಗದಲ್ಲಿ ಸ್ಯಾಮುವೇಲ್ ಫೊಕ್ಸ್ ಎಂಬವನು, ಪ್ಯಾರಗೋನ್ ಮಾದರಿಯ ಛತ್ರಿಯನ್ನು ತಯಾರಿಸಿದರು. ಇದು ಹಗುರವಾಗಿದ್ದರೂ ಬಹಳ ಗಟ್ಟಿಯಾದ ಉಕ್ಕಿನ ರಚನಾ ವ್ಯವಸ್ಥೆ ಇರುವ ಮತ್ತು ಹಳೆಯ ಭಾರವಾದ ಕ್ಯಾನ್ವಸ್ಬಟ್ಟೆಯಹೊದಿಕೆಯ ಬದಲಿಗೆ ರೇಷ್ಮೆ, ಹತ್ತಿ, ಮತ್ತು ಮೇಣದ ಲೇಪವಿದ್ದ ನಯವಾದ ಹೊಳಪುಳ್ಳ ಹೊರಮೈ ಹೊಂದಿದ ನಾರುಬಟ್ಟೆ ಮುಂತಾದ ಹಗುರವಾದ ಬಟ್ಟೆಯನ್ನು ಹೊಂದಿದ ಛಿತ್ರಿಯಾಗಿತ್ತು. ಈ ರೀತಿಯಲ್ಲಿ ಆಧುನಿಕ ಛತ್ರಿಯ ಆಗಮನವಾಯಿತು.
ಫ್ಯಾಷನ್ ವಸ್ತು
ಆಗ ಛತ್ರಿಯು ಇಂಗ್ಲೆಂಡಿನ ಬೆಡಗಿನ ಸ್ತ್ರೀಯರ ಫ್ಯಾಷನ್ ವಸ್ತುಗಳ ಒಂದು ಅಂದವಾದ ಭಾಗವಾಗಿ ತುಂಬ ಜನಪ್ರಿಯವಾಯಿತು. ಬದಲಾಗುತ್ತಿರುವ ಫ್ಯಾಷನಿನ ತಾಳಕ್ಕೆ ತಕ್ಕಂತೆ ಸ್ತ್ರೀಯರ ಛತ್ರಿಗಳೂ ಬದಲಾಗುತ್ತಾ ಹೆಚ್ಚು ದೊಡ್ಡದ್ದಾಗುತ್ತಾ ಹೋದವು, ಮತ್ತು ಎಲ್ಲಾ ರೀತಿಯ ಉಜ್ವಲ ಬಣ್ಣಗಳ ರೇಷ್ಮೆ ಹಾಗೂ ಸ್ಯಾಟಿನ್ ಬಟ್ಟೆಗಳ ಹೊದಿಕೆಗಳನ್ನು ಹೊಂದಿದವು. ಸಾಮಾನ್ಯವಾಗಿ ಅದು ಆಕೆಯು ಧರಿಸಿದ ಬಟ್ಟೆಗೆ ಮ್ಯಾಚ್ ಆಗುತ್ತಾ, ಲೇಸ್ನ ಅಲಂಕಾರಗಳು, ಅಂಚುಗಳು, ಅಲಂಕಾರ ಪಟ್ಟಿಗಳು, ಕುಣಿಕೆಗಳು, ಮತ್ತು ಗರಿಗಳಿಂದಲೂ ಅಲಂಕರಿಸಲ್ಪಟ್ಟಿರುತ್ತಿತ್ತು. 20ನೆಯ ಶತಮಾನದಷ್ಟಕ್ಕೆ, ತನ್ನ ಕೋಮಲ ತ್ವಚೆಯ ಬಗ್ಗೆ ಕಾಳಜಿಯಿರುವ ಯಾವ ಗೌರವಾನ್ವಿತ ಮಹಿಳೆಯೂ ಛತ್ರಿಯಿಲ್ಲದೆ ಹೊರಗೆ ಕಾಣಸಿಗುತ್ತಿರಲಿಲ್ಲ.
ಇಸವಿ 1920ರಲ್ಲಿ, ಬಿಸಿಲಿಗೆ ಒಡ್ಡಿ ಕಂದಿದ ಚರ್ಮವು ಒಂದು ಫ್ಯಾಷನ್ ಆಯಿತು, ಮತ್ತು ಈ ಕಾರಣ ಛತ್ರಿಯು ಹೆಚ್ಚುಕಡಿಮೆ ಕಣ್ಮರೆಯಾಯಿತು. ಆದರೆ ಈಗ ನಗರ ಮಹಾಶಯರಯುಗವು ಆರಂಭವಾಯಿತು. ಈ ಯುಗದಲ್ಲಿ ಸಾಮಾನ್ಯವಾಗಿ ಎಲ್ಲಾ ಮಹಾಶಯರು ತಮ್ಮ ಅನಧಿಕೃತ ಸಮವಸ್ತ್ರವನ್ನು ಧರಿಸುವುದು, ಅಂದರೆ ತಲೆಯ ಮೇಲೆ ಗುಂಡುಟೋಪಿ, ಮತ್ತು ವಾಕಿಂಗ್ ಸ್ಟಿಕ್ನಂತೆಯೂ ಉಪಯೋಗಕ್ಕೆ ಬರುತ್ತಿದ್ದ ಕಪ್ಪಗಿನ, ಮಡಿಚಲಾಗುವ ಛತ್ರಿಯನ್ನು ಕೈಯಲ್ಲಿ ಹಿಡಿದುಕೊಂಡಿರುವುದು ರೂಢಿಯಾಯಿತು.
ಎರಡನೇ ಲೋಕಯುದ್ಧದ ನಂತರ, ಹೊಸ ತಾಂತ್ರಿಕತೆಯು ಹೆಚ್ಚು ಉತ್ತಮ ವಿನ್ಯಾಸಗಳ ಛತ್ರಿಯನ್ನು ಮಾರುಕಟ್ಟೆಗೆ ತಂದಿತು. ತೀರಾ ಸಣ್ಣದಾಗಿ ಮಡಿಚಲಾಗುವಂಥ ಹಾಗೂ ಜಲಾಭೇದ್ಯ ನೈಲಾನ್, ಪಾಲಿಯೆಸ್ಟರ್ ಬಟ್ಟೆ, ಮತ್ತು ಪ್ಲಾಸ್ಟಿಕ್ ಮುಂತಾದವುಗಳಿಂದ ತಯಾರಿಸಲ್ಪಟ್ಟ ಹೊದಿಕೆಗಳುಳ್ಳ ಛತ್ರಿಗಳು ಮಾರುಕಟ್ಟೆಗೆ ತರಲ್ಪಟ್ಟವು. ಉತ್ತಮವಾಗಿ ಕೈಯಿಂದಲೇ ತಯಾರಿಸಲ್ಪಟ್ಟಿರುವ ದುಬಾರಿ ಛತ್ರಿಗಳನ್ನು ತಯಾರಿಸುವ ಕೆಲವು ಅಂಗಡಿಗಳು ಇನ್ನೂ ಇವೆ. ಆದರೆ ಈಗಿನ ದಿವಸಗಳಲ್ಲಿ ಕಾರ್ಖಾನೆಗಳು ಒಂದೇ ಸಮಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಛತ್ರಿಗಳನ್ನು ತಯಾರಿಸುತ್ತವೆ. ಆದುದರಿಂದ ದೊಡ್ಡ ಗಾಲ್ಫ್ ಛತ್ರಿ ಮತ್ತು ಹೊರಾಂಗಣದಲ್ಲಿ ಊಟದ ಮೇಜನ್ನು ಆವರಿಸಲು ಉಪಯೋಗಿಸುವ ದೊಡ್ಡ ಛತ್ರಿಗಳಿಂದ ಹಿಡಿದು ನಮ್ಮ ಕೈಚೀಲದಲ್ಲಿ ಸುಲಭವಾಗಿ ಹಿಡಿಸಬಲ್ಲ 15 ಸೆಂಟಿಮೀಟರ್ನಷ್ಟು ಚಿಕ್ಕದಾಗಿ ಮಡಿಚಸಾಧ್ಯವಿರುವ ಛತ್ರಿಯ ವರೆಗೆ ವಿವಿಧ ರೀತಿಯ ಛತ್ರಿಗಳು ಎಲ್ಲಾ ಬಣ್ಣಗಳಲ್ಲಿಯೂ ಎಲ್ಲಾ ಗಾತ್ರಗಳಲ್ಲಿಯೂ ಕಡಿಮೆ ಬೆಲೆಗೆ ಸಿಗುತ್ತವೆ.
ಒಂದೊಮ್ಮೆ ಭೋಗದ ವಸ್ತುವಾಗಿ ಮತ್ತು ಒಂದು ಅಂತಸ್ತಿನ ಚಿಹ್ನೆಯಾಗಿ ವೀಕ್ಷಿಸಲ್ಪಡುತ್ತಿದ್ದರೂ ಈಗ ಛತ್ರಿಯು ಕಡಿಮೆ ಬೆಲೆಗೆ ಸುಲಭವಾಗಿ ಲಭ್ಯವಿದೆ, ಮತ್ತು ಕಳೆದುಹೋಗುವ ವಸ್ತುಗಳ ಪಟ್ಟಿಯಲ್ಲಿ ಯಾವಾಗಲೂ ಮೊದಲ ಸ್ಥಾನಕ್ಕೆ ಸಮೀಪದಲ್ಲಿರುತ್ತದೆ. ಲೋಕದ ಯಾವುದೇ ಭಾಗದಲ್ಲಿಯೂ ಬಿಸಿಲು ಮತ್ತು ಮಳೆಯಿಂದ ರಕ್ಷಿಸಿಕೊಳ್ಳಲು ಇದೊಂದು ಅತಿ ಉಪಯುಕ್ತಕರವಾದ ಸಾಧನವಾಗಿದೆ. ಸೂರ್ಯನ ಶಾಖಕ್ಕೆ ಹೆಚ್ಚಾಗಿ ನಮ್ಮನ್ನು ಒಡ್ಡುವುದರಿಂದ ಉಂಟಾಗಬಹುದಾದ ಸಮಸ್ಯೆಯ ಬಗ್ಗೆ ಹೆಚ್ಚೆಚ್ಚು ಎಚ್ಚರಿಕೆಗಳು ಸಿಕ್ಕಿದಂತೆಯೇ, ಸೂರ್ಯಕಿರಣಕ್ಕೆ ಮರೆಯಂತೆ ಛತ್ರಿಯನ್ನು ಉಪಯೋಗಿಸುವ ಆರಂಭದ ಫ್ಯಾಷನ್ ಕೆಲವು ದೇಶಗಳಲ್ಲಿ ಪುನಃ ಬಂದಿದೆ. ಆದುದರಿಂದ ಒಂದುವೇಳೆ ಇವತ್ತು ನೀವು ಮನೆಯಿಂದ ಹೊರಗೆ ಹೋಗುವಾಗ, ನೀವು ಸಹ ಈ ಜ್ಞಾಪನವನ್ನು ಕೇಳಿಸಿಕೊಳ್ಳಬಹುದು: “ನಿಮ್ಮ ಬ್ರಾಲಿಯನ್ನು ಮರೆಯಬೇಡಿ!” (g03 7/22)
[ಪಾದಟಿಪ್ಪಣಿ]
a ಬ್ರಿಟಿಷ್ ಆಡುಭಾಷೆಯಲ್ಲಿ ಛತ್ರಿಯನ್ನು “ಬ್ರಾಲಿ” ಎಂದು ಕರೆಯಲಾಗುತ್ತದೆ. ಇದಕ್ಕೆ ಅಮೆರಿಕನ್ ಸಮಾನಾರ್ಥಕ ಪದವು, “ಬಂಬರ್ಶೂಟ್” ಎಂದಾಗಿದೆ. ಆದರೆ ಇದು ಬಹಳ ವಿರಳವಾಗಿ ಉಪಯೋಗಿಸಲ್ಪಡುತ್ತದೆ.
[ಪುಟ 20ರಲ್ಲಿರುವ ಚೌಕ/ಚಿತ್ರ]
ನಿಮ್ಮ ಛತ್ರಿಯನ್ನು ಖರೀದಿಸುವುದು ಮತ್ತು ಅದರ ಜಾಗ್ರತೆ ವಹಿಸುವುದು
ಅನುಕೂಲತೆ ಮತ್ತು ಬಲದ ಮಧ್ಯೆ ನಿಮ್ಮ ಆಯ್ಕೆಯನ್ನು ಮಾಡಿರಿ. ನಿಮ್ಮ ಜೇಬಿನಲ್ಲಿಟ್ಟುಕೊಳ್ಳುವಷ್ಟು ಚಿಕ್ಕದಾಗಿ ಮಡಿಚಬಹುದಾದ ಕಡಿಮೆ ಬೆಲೆಯ ಛತ್ರಿಯಲ್ಲಿ ಕಡಿಮೆ ಕಡ್ಡಿಗಳಿರುವ ಕಾರಣ, ಬಲವಾದ ಗಾಳಿಬೀಸುವಲ್ಲಿ ಅದು ತಿರುಗಿಬಿಡುತ್ತದೆ ಮತ್ತು ಸುಲಭವಾಗಿ ಹರಿದುಹೋಗುತ್ತದೆ. ಆದರೆ, ಮಡಿಚಲಾಗದ ಕೋಲಿನಂತಿರುವ ಛತ್ರಿಯು ಹೆಚ್ಚುಬೆಲೆಯುಳ್ಳದ್ದಾಗಿದ್ದರೂ, ಯಾವುದೇ ಹವಾಮಾನವನ್ನೂ ಎದುರಿಸುವಷ್ಟು ಬಲವಾಗಿರುತ್ತದೆ ಮತ್ತು ಹೆಚ್ಚು ಸಮಯ ಬಾಳಿಕೆಬರುವಂಥದ್ದಾಗಿದೆ. ಹೌದು, ಒಂದು ಒಳ್ಳೆಯ ಛತ್ರಿಯು ಅನೇಕ ವರುಷಗಳ ಕಾಲ ಬಾಳಿಕೆಬರುತ್ತದೆ. ನೀವು ಯಾವುದೇ ರೀತಿಯ ಛತ್ರಿಯನ್ನು ಖರೀದಿಸಿದರೂ, ಅದನ್ನು ಮಳೆಯಲ್ಲಿ ಉಪಯೋಗಿಸಿದ ನಂತರ ಸಂಪೂರ್ಣವಾಗಿ ಒಣಗಿಸದೆ ಮಡಚಿಡಬೇಡಿರಿ. ಹೀಗೆ ಮಾಡುವ ಮೂಲಕ ಅದಕ್ಕೆ ಬೂಷ್ಟು ಮತ್ತು ತುಕ್ಕು ಹಿಡಿಯುವುದರಿಂದ ತಡೆಗಟ್ಟಸಾಧ್ಯವಿದೆ. ಅದನ್ನು ಯಾವಾಗಲೂ ಅದರ ಕವರ್ನಲ್ಲಿ ಇಡುವ ಮೂಲಕ ಶುದ್ಧವಾಗಿಯೂ ಧೂಳುರಹಿತವಾಗಿಯೂ ಇಡಸಾಧ್ಯವಿದೆ.
[ಪುಟ 19ರಲ್ಲಿರುವ ಚಿತ್ರಗಳು]
ಒಬ್ಬ ಸೇವಕನು ಅಶ್ಶೂರ್ಯದ ರಾಜನಿಗೆ ನೆರಳನ್ನು ನೀಡುತ್ತಾನೆ
ಪುರಾತನ ಗ್ರೀಸ್ನ ಒಬ್ಬ ಸ್ತ್ರೀಯು ಛತ್ರಿಯನ್ನು ಹಿಡಿದಿರುವುದು
[ಕೃಪೆ]
ಚಿತ್ರಗಳು: The Complete Encyclopedia of Illustration/J. G. Heck
[ಪುಟ 20ರಲ್ಲಿರುವ ಚಿತ್ರ]
ಇಸವಿ 1900ರ ಒಂದು ಬಿಸಿಲು ಛತ್ರಿ
[ಕೃಪೆ]
Culver Pictures