ಅಧ್ಯಾಯ 29
ವಿಜಯೋತ್ಸವದ ಹೊಸ ಹಾಡನ್ನು ಹಾಡುವುದು
ದರ್ಶನ 9—ಪ್ರಕಟನೆ 14:1-20
ವಿಷಯ: ಚೀಯೋನ್ ಪರ್ವತದ ಮೇಲೆ ಕುರಿಮರಿಯೊಂದಿಗೆ 1,44,000 ಮಂದಿ; ಭೂಲೋಕದಲ್ಲಿಲ್ಲಾ ದೇವದೂತ ಪ್ರಕಟನೆಗಳ ಧ್ವನಿ; ಬೆಳೆಗಳ ಕೊಯ್ಲು ಮಾಡಲಾಗುತ್ತದೆ
ನೆರವೇರಿಕೆಯ ಸಮಯ: ಇಸವಿ 1919 ರಿಂದ ಮಹಾ ಸಂಕಟದ ವರೆಗೆ
1. ಪ್ರಕಟನೆ 7, 12, ಮತ್ತು 13 ನೆಯ ಅಧ್ಯಾಯಗಳ ಕುರಿತಾಗಿ ನಾವು ಈಗಾಗಲೇ ಏನನ್ನು ಕಲಿತಿದ್ದೇವೆ, ಮತ್ತು ನಾವು ಈಗ ಏನು ಕಲಿಯುವೆವು?
ಯೋಹಾನನ ಮುಂದಿನ ದರ್ಶನಕ್ಕೆ ತಿರುಗುವುದು ಎಷ್ಟೊಂದು ಚೇತೋಹಾರಿಯಾಗಿದೆ! ಘಟಸರ್ಪನ ವಿಕಟರೂಪದ ಮೃಗೀಯ ಸಂಸ್ಥೆಗಳಿಗೆ ವಿಪರ್ಯಸ್ತದಲ್ಲಿ, ಕರ್ತನ ದಿನದ ಸಮಯದಲ್ಲಿ ಯೆಹೋವನ ನಿಷ್ಠೆಯ ಸೇವಕರನ್ನು ಮತ್ತು ಅವರ ಚಟುವಟಿಕೆಗಳನ್ನು ನಾವೀಗ ನೋಡುತ್ತೇವೆ. (ಪ್ರಕಟನೆ 1:10) ಈ ಅಭಿಷಿಕ್ತ ಸೇವಕರಲ್ಲಿ 1,44,000 ಮಂದಿಗಳೆಲ್ಲರಿಗೆ ಮುದ್ರೆಯನ್ನೊತ್ತುವ ತನಕ ವಿನಾಶದ ನಾಲ್ಕು ಗಾಳಿಗಳು ತಡೆಹಿಡಿಯಲ್ಪಟ್ಟಿವೆಯೆಂದು ಈಗಾಗಲೇ ಪ್ರಕಟನೆ 7:1, 3 ನಮಗೆ ಪ್ರಕಟಪಡಿಸಿದೆ. ಆ ಸಮಯಾವಧಿಯಲ್ಲಿ “[ಸ್ತ್ರೀಯ] ಸಂತಾನದ ಉಳಿದವರು” ಘಟಸರ್ಪನಾದ ಸೈತಾನನ ವಿಶೇಷ ಗುರಿಹಲಗೆಯಾಗುವರು ಎಂದು ಪ್ರಕಟನೆ 12:17 ತಿಳಿಯಪಡಿಸಿದೆ. ಮತ್ತು ಯೆಹೋವನ ನಂಬಿಗಸ್ತ ಸೇವಕರ ಮೇಲೆ ತೀವ್ರ ಒತ್ತಡ ಮತ್ತು ಕ್ರೂರ ಹಿಂಸೆಯನ್ನು ತರಲು ಸೈತಾನನು ಭೂಮಿಯ ಮೇಲೆ ರಾಜಕೀಯ ಸಂಸ್ಥೆಗಳನ್ನು ಎಬ್ಬಿಸಿದ್ದನ್ನು ಪ್ರಕಟನೆ 13 ನೆಯ ಅಧ್ಯಾಯದಲ್ಲಿ ವಿಶದವಾಗಿ ಚಿತ್ರಿಸಲಾಗಿದೆ. ಆದರೆ ಆ ಪ್ರಧಾನ ಶತ್ರುವು ದೇವರ ಉದ್ದೇಶವನ್ನು ಭಂಗಗೊಳಿಸಲಾರನು! ಸೈತಾನನ ಕೇಡೆಣಿಸುವ ಚಟುವಟಿಕೆಯ ನಡುವೆಯೂ 1,44,000 ಮಂದಿಯೆಲ್ಲರೂ ವಿಜಯೋತ್ಸವದಿಂದ ಒಟ್ಟುಗೂಡಿಸಲ್ಪಡುತ್ತಾರೆ ಎಂಬುದನ್ನು ನಾವೀಗ ಕಲಿಯುತ್ತೇವೆ.
2. ಪ್ರಕಟನೆ 14:1 ರಲ್ಲಿ ಯೋಹಾನನು ನಮಗೆ ಯಾವ ಸಂತೋಷಕರ ಮುಕ್ತಾಯದ ಒಂದು ಮುನ್ನೋಟವನ್ನು ಕೊಡುತ್ತಾನೆ, ಮತ್ತು ಕುರಿಮರಿಯು ಯಾರು?
2 ಯೋಹಾನನಿಗೆ, ಮತ್ತು ಅವನೊಂದಿಗೆ ಇಂದಿನ ಯೋಹಾನ ವರ್ಗಕ್ಕೆ ಆ ಸಂತೋಷದ ಫಲಿತಾಂಶದ ಮುನ್ನೋಟವನ್ನು ಕೊಡಲಾಗುತ್ತದೆ: “ಮತ್ತು ಇಗೋ! ಕುರಿಮರಿಯು ಚೀಯೋನ್ ಪರ್ವತದ ಮೇಲೆ ನಿಂತಿರುವುದನ್ನು ಮತ್ತು ಅವನೊಂದಿಗೆ ತಮ್ಮ ಹಣೆಗಳ ಮೇಲೆ ಅವನ ಹೆಸರು ಮತ್ತು ಅವನ ತಂದೆಯ ಹೆಸರು ಬರೆಯಲಾಗಿರುವ ಒಂದು ಲಕ್ಷ ನಲವತ್ತನಾಲ್ಕು ಸಾವಿರ ಮಂದಿಯನ್ನು ನಾನು ನೋಡಿದೆನು.” (ಪ್ರಕಟನೆ 14:1, NW) ನಾವು ನೋಡಿದಂತೆ, ಈ ಕುರಿಮರಿಯು ಪಿಶಾಚನನ್ನು ಮತ್ತು ಅವನ ದೆವ್ವಗಳನ್ನು ಹೊರದಬ್ಬುವ ಮೂಲಕ ಪರಲೋಕವನ್ನು ಶುದ್ಧಗೊಳಿಸಿದ ಅದೇ ಮೀಕಾಯೇಲನಾಗಿದ್ದಾನೆ. ಯೆಹೋವನ ನೀತಿಯುಕ್ತ ನ್ಯಾಯತೀರ್ಪುಗಳನ್ನು ಜಾರಿಗೊಳಿಸಲು [NW]” ಸಿದ್ಧನಾಗುತ್ತಿರುವಾಗ, “[ದೇವ] ಜನರ ಪಕ್ಷವನ್ನು ಹಿಡಿದಿರುವ ಮಹಾಪಾಲಕ” ನಾಗಿ ಏಳುವನೆಂದು ದಾನಿಯೇಲನಿಂದ ವರ್ಣಿಸಲ್ಪಟ್ಟ ಮೀಕಾಯೇಲನು ಅವನಾಗಿದ್ದಾನೆ. (ದಾನಿಯೇಲ 12:1; ಪ್ರಕಟನೆ 12:7, 9) ಈ ಸ್ವತ್ಯಾಗ ಮಾಡಿದ ದೇವರ ಕುರಿಮರಿಯು 1914 ರಿಂದ ಮೆಸ್ಸೀಯ ಸಂಬಂಧಿತ ಅರಸನಾಗಿ ಚೀಯೋನ್ ಪರ್ವತದಲ್ಲಿ ನಿಂತಿದ್ದಾನೆ.
3. ಕುರಿಮರಿ ಮತ್ತು 1,44,000 ಮಂದಿ “ನಿಂತಿರುವ” ಆ “ಚೀಯೋನ್ ಪರ್ವತ” ಯಾವುದು?
3 ಇದು ಯೆಹೋವನು ಮುಂತಿಳಿಸಿದಂತೆಯೇ ಇದೆ: “ನಾನು ನೇಮಿಸಿದ ಅರಸನನ್ನು ಚೀಯೋನೆಂಬ ನನ್ನ ಪರಿಶುದ್ಧ ಪರ್ವತದಲ್ಲಿ ಸ್ಥಾಪಿಸಿದ್ದಾಯಿತು.” (ಕೀರ್ತನೆ 2:5, [2:6, NW]; 110:2) ಯಾವ ನಗರದಲ್ಲಿ ದಾವೀದನ ವಂಶದ ಮಾನವ ಅರಸರು ಆಳಿಕ್ವೆ ನಡಿಸುತ್ತಿದ್ದರೋ ಆ ಐಹಿಕ ಯೆರೂಸಲೇಮಿನ ಭೌಗೋಳಿಕ ನೆಲೆಯ ಐಹಿಕ ಚೀಯೋನ್ ಪರ್ವತವನ್ನು ಇದು ಇನ್ನು ಮುಂದೆ ಸೂಚಿಸುವುದಿಲ್ಲ. (1 ಪೂರ್ವಕಾಲವೃತ್ತಾಂತ 11:4-7; 2 ಪೂರ್ವಕಾಲವೃತ್ತಾಂತ 5:2) ಇಲ್ಲ, ಏಕೆಂದರೆ ಯೇಸು, ಸಾ. ಶ. 33 ರಲ್ಲಿ ಅವನ ಮರಣ ಮತ್ತು ಪುನರುತ್ಥಾನದ ಅನಂತರ, ಪರಲೋಕದ ಚೀಯೋನ್ ಪರ್ವತದ ಮೇಲೆ ಅಸ್ತಿವಾರದ ಮೂಲೆಗಲ್ಲಾಗಿ ಸ್ಥಾಪಿಸಲಾಗಿದೆ, ಅದು “ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮನ್ನು” ನೆಲೆಗೊಳಿಸಲು ಯೆಹೋವನು ನಿಶ್ಚಯಿಸಿದ ಸ್ವರ್ಗೀಯ ಸ್ಥಾನವಾಗಿದೆ. ಆದಕಾರಣ, “ಚೀಯೋನ್ ಪರ್ವತವು” ಇಲ್ಲಿ ಯಾವುದು ರಾಜ್ಯವಾಗಿದೆಯೋ ಆ ಪರಲೋಕದ ಯೆರೂಸಲೇಮನ್ನು ರೂಪಿಸುವ ಯೇಸು ಮತ್ತು ಅವನ ಜೊತೆಬಾಧ್ಯಸ್ಥರ ಉನ್ನತಿಗೇರಿಸಲ್ಪಟ್ಟ ಸ್ಥಾನವನ್ನು ಪ್ರತಿನಿಧಿಸುತ್ತದೆ. (ಇಬ್ರಿಯ 12:22, 28; ಎಫೆಸ 3:6) ಕರ್ತನ ದಿನದಲ್ಲಿ ಯೆಹೋವನು ಅವರನ್ನು ಉನ್ನತಿಗೇರಿಸುವ ಮಹಿಮಾಭರಿತ ರಾಜವೈಭವದ ಪರಿಸ್ಥಿತಿ ಅದಾಗಿರುತ್ತದೆ. ಶತಮಾನಗಳಲ್ಲಿಲ್ಲಾ, ಅಭಿಷಿಕ್ತ ಕ್ರೈಸ್ತರು, “ಜೀವವುಳ್ಳ ಕಲ್ಲುಗಳೋಪಾದಿ” ಆ ಪರಲೋಕದ ಚೀಯೋನ್ ಪರ್ವತದ ಮೇಲೆ ನಿಲ್ಲಲು, ಮಹಿಮೆಗೇರಿಸಲ್ಪಟ್ಟ ಕರ್ತನಾದ ಯೇಸು ಕ್ರಿಸ್ತನ ವೈಭವದ ರಾಜ್ಯದಲ್ಲಿ ಅವನೊಂದಿಗೆ ಐಕ್ಯರಾಗಲು ತೀವ್ರಾಸಕ್ತಿಯಿಂದ ಮುನ್ನೋಡುತ್ತಿದ್ದರು.—1 ಪೇತ್ರ 2:4-6; ಲೂಕ 22:28-30; ಯೋಹಾನ 14:2, 3.
4. ಚೀಯೋನ್ ಪರ್ವತದ ಮೇಲೆ ಎಲ್ಲ 1,44,000 ಮಂದಿ ನಿಂತಿರುವುದು ಹೇಗೆ?
4 ಚೀಯೋನ್ ಪರ್ವತದ ಮೇಲೆ ಕೇವಲ ಯೇಸು ಕ್ರಿಸ್ತನನ್ನು ಮಾತ್ರವಲ್ಲ, ಸ್ವರ್ಗೀಯ ಸರಕಾರದ 1,44,000 ಜೊತೆ ಬಾಧ್ಯಸ್ಥರ ಒಟ್ಟುಗುಂಪನ್ನು ಯೋಹಾನನು ನೋಡುತ್ತಾನೆ. ದರ್ಶನದಿಂದ ಪ್ರತಿನಿಧಿಸಲ್ಪಟ್ಟ ಸಮಯದಲ್ಲಿ ಎಲ್ಲಾ 1,44,000 ಮಂದಿ ಅಲ್ಲದಿದ್ದರೂ, ಹೆಚ್ಚಿನವರು ಈಗಾಗಲೇ ಪರಲೋಕದಲ್ಲಿದ್ದರು. ತದನಂತರ, ಅದೇ ದರ್ಶನದಲ್ಲಿ, ಪವಿತ್ರ ಜನರಲ್ಲಿ ಇನ್ನೂ ಕೆಲವರು ತಾಳಿಕೊಂಡಿದ್ದು, ನಂಬಿಗಸ್ತರಾಗಿ ಸಾಯಲಿಕ್ಕಿದ್ದಾರೆ ಎಂದು ಯೋಹಾನನು ಕಲಿತನು. (ಪ್ರಕಟನೆ 14:12, 13) ಹಾಗಾದರೆ, 1,44,000 ಮಂದಿಯಲ್ಲಿ ಕೆಲವರು ಇನ್ನೂ ಭೂಮಿಯಲ್ಲಿದ್ದಾರೆ ಎಂಬದು ಸ್ಪಷ್ಟ. ಆದುದರಿಂದ ಚೀಯೋನ್ ಪರ್ವತದ ಮೇಲೆ ಯೇಸುವಿನೊಂದಿಗೆ ಅವರೆಲ್ಲರೂ ನಿಂತಿರುವುದನ್ನು ಯೋಹಾನನು ಹೇಗೆ ನೋಡಶಕ್ತನಾದನು?a ಅಭಿಷಿಕ್ತ ಕ್ರೈಸ್ತರ ಸಭೆಯ ಸದಸ್ಯರೋಪಾದಿ ಅವರು ಈಗ “ಚೀಯೋನ್ ಪರ್ವತಕ್ಕೂ ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ” ಬಂದಿರುವುದರಿಂದಲೇ. (ಇಬ್ರಿಯ 12:22) ಇನ್ನೂ ಭೂಮಿಯಲ್ಲಿದ್ದಾಗ ಪೌಲನಂತೆ, ಅವರು ಈಗಾಗಲೇ—ಆತ್ಮಿಕ ರೀತಿಯಲ್ಲಿ—ಪರಲೋಕದ ಸ್ಥಾನಗಳಿಗೆ ಕ್ರಿಸ್ತ ಯೇಸುವಿನೊಂದಿಗೆ ಎಬ್ಬಿಸಲ್ಪಟ್ಟಿದ್ದಾರೆ. (ಎಫೆಸ 2:5, 6) ಇದಕ್ಕೆ ಕೂಡಿಸಿ, 1919 ರಲ್ಲಿ “ಇಲ್ಲಿ ಮೇಲಕ್ಕೆ ಬನ್ನಿರಿ” ಎಂಬ ಆಮಂತ್ರಣಕ್ಕೆ ಅವರು ಪ್ರತಿವರ್ತಿಸಿದರು, ಮತ್ತು ಸಾಂಕೇತಿಕವಾಗಿ “ಮೇಘದಲ್ಲಿ ಆಕಾಶಕ್ಕೆ ಏರಿಹೋದರು.” (ಪ್ರಕಟನೆ 11:12, NW) ಶಾಸ್ತ್ರಗಳ ಈ ವೀಕ್ಷಣದಲ್ಲಿ, 1,44,000 ಮಂದಿಯೆಲ್ಲರೂ—ಆತ್ಮಿಕವಾಗಿ ಮಾತಾಡುವುದಾದರೆ—ಯೇಸು ಕ್ರಿಸ್ತನೊಂದಿಗೆ ಚೀಯೋನ್ ಪರ್ವತದಲ್ಲಿ ನೆಲೆಗೊಂಡಿದ್ದಾರೆ.
5. ಯಾರ ಹೆಸರುಗಳು 1,44,000 ಮಂದಿಯ ಹಣೆಗಳ ಮೇಲೆ ಬರೆಯಲ್ಪಟ್ಟಿರುತ್ತವೆ, ಮತ್ತು ಪ್ರತಿಯೊಂದು ಹೆಸರಿನ ವೈಶಿಷ್ಟ್ಯವೇನು?
5 ಸಾಂಕೇತಿಕವಾದ 666 ಅಂಕೆಯೊಂದಿಗೆ ಗುರುತುಮಾಡಲ್ಪಟ್ಟಿರುವ ಕಾಡು ಮೃಗದ ಆರಾಧಕರೊಂದಿಗೆ 1,44,000 ಮಂದಿಗೆ ಯಾವುದೇ ಭಾಗವಿರುವುದಿಲ್ಲ. (ಪ್ರಕಟನೆ 13:15-18) ವ್ಯತಿರಿಕ್ತವಾಗಿ, ಈ ನಿಷ್ಠಾವಂತರ ಹಣೆಯ ಮೇಲೆ ದೇವರ ಮತ್ತು ಕುರಿಮರಿಯ ಹೆಸರು ಬರೆಯಲ್ಪಟ್ಟಿರುತ್ತದೆ. ಯಾರು ಒಬ್ಬ ಯೆಹೂದ್ಯನಾಗಿದ್ದನೋ ಆ ಯೋಹಾನನು ದೇವರ ಹೆಸರನ್ನು ಇಬ್ರಿಯ ಅಕ್ಷರಗಳಲ್ಲಿ, יהוה ನಿಸ್ಸಂಶಯವಾಗಿ ನೋಡಿರಬೇಕು.b ಅವರ ಹಣೆಯ ಮೇಲೆ ಯೇಸುವಿನ ತಂದೆಯ ಹೆಸರು ಸಾಂಕೇತಿಕವಾಗಿ ಬರೆದಿರುವುದರಿಂದ, ಈ ಮುದ್ರೆ ಹೊಂದಿದವರು ತಾವು ಯೆಹೋವನ ಸಾಕ್ಷಿಗಳು, ಆತನ ದಾಸರು ಎಂದು ಎಲ್ಲರಿಗೂ ತಿಳಿಯಪಡಿಸುತ್ತಾರೆ. (ಪ್ರಕಟನೆ 3:12) ಅವರ ಹಣೆಯ ಮೇಲೆ ಯೇಸುವಿನ ಹೆಸರನ್ನೂ ಪ್ರದರ್ಶಿಸುವುದರ ಮೂಲಕ ತಾವು ಅವನ ಸೊತ್ತು ಎಂಬುದನ್ನು ಅವರು ಅಂಗೀಕರಿಸುತ್ತಾರೆಂದು ಸೂಚಿಸುತ್ತದೆ. ಅವನು ಅವರ ನಿಶ್ಚಿತಾರ್ಥವಾದ “ಗಂಡನು” ಮತ್ತು “ಒಂದು ನೂತನ ಸೃಷ್ಟಿ” ಯಾಗಿದ್ದು ಸ್ವರ್ಗೀಯ ಜೀವಿತವನ್ನು ನೋಟದಲ್ಲಿಟ್ಟುಕೊಂಡು ದೇವರನ್ನು ಸೇವಿಸುವ ಅವರು ಅವನ ಭಾವೀ “ವಧು” ಆಗಿದ್ದಾರೆ. (ಎಫೆಸ 5:22-24; ಪ್ರಕಟನೆ 21:2, 9, NW; 2 ಕೊರಿಂಥ 5:17) ಯೆಹೋವ ಮತ್ತು ಯೇಸು ಕ್ರಿಸ್ತನೊಂದಿಗಿನ ಅವರ ಆಪ್ತ ಸಂಬಂಧವು ಅವರ ಎಲ್ಲಾ ಆಲೋಚನೆಗಳನ್ನು ಮತ್ತು ಕ್ರಿಯೆಗಳನ್ನು ಪ್ರಭಾವಿಸುತ್ತದೆ.
ಹೊಸ ಹಾಡನ್ನೋ ಎಂಬಂತೆ ಹಾಡುತ್ತಿದ್ದಾರೆ
6. ಯೋಹಾನನು ಯಾವ ಹಾಡುವಿಕೆಯನ್ನು ಕೇಳುತ್ತಾನೆ, ಮತ್ತು ಅವನದನ್ನು ಹೇಗೆ ವರ್ಣಿಸುತ್ತಾನೆ?
6 ಇದರ ಹೊಂದಿಕೆಯಲ್ಲಿ, ಯೋಹಾನನು ವರದಿಸುವುದು: “ಮತ್ತು ಪರಲೋಕದಿಂದ ಬಹಳ ನೀರುಗಳ ಘೋಷದಂತೆ ಮತ್ತು ದೊಡ್ಡ ಗುಡುಗಿನ ಶಬ್ದದಂತೆ ಇದ್ದ ಶಬ್ದವನ್ನು ನಾನು ಕೇಳಿದೆನು, ಮತ್ತು ನಾನು ಕೇಳಿದ ಆ ಶಬ್ದವು ತಮ್ಮ ವೀಣೆಗಳನ್ನು ನುಡಿಸಿಕೊಂಡು ವೀಣೆಯೊಂದಿಗೆ ತಮ್ಮನ್ನು ಜೊತೆಗೂಡಿಸಿಕೊಂಡ ಹಾಡುಗಾರರ ಶಬ್ದದಂತಿತ್ತು. ಅವರು ಸಿಂಹಾಸನದ ಮುಂದೆ ಮತ್ತು ಆ ನಾಲ್ಕು ಜೀವಿಗಳ ಮುಂದೆ ಮತ್ತು ಹಿರಿಯರ ಮುಂದೆ ಒಂದು ಹೊಸ ಹಾಡನ್ನೋ ಎಂಬಂತೆ ಹಾಡುತ್ತಿದ್ದರು. ಭೂಮಿಯಿಂದ ಕೊಂಡುಕೊಳ್ಳಲ್ಪಟ್ಟ ಒಂದು ಲಕ್ಷ ನಲವತ್ತನಾಲ್ಕು ಸಾವಿರ ಮಂದಿ ಹೊರತು ಬೇರೆ ಯಾರೂ ಆ ಹಾಡಿನ ಮೇಲೆ ಸಂಪುರ್ಣ ನಿಪುಣತೆಯನ್ನು ಸಾಧಿಸಶಕ್ತರಾಗಿರಲಿಲ್ಲ.” (ಪ್ರಕಟನೆ 14:2, 3 NW) ಈ 1,44,000 ಮಂದಿಯ ಸರ್ವಗಳು ಒಂದುಗೂಡಿದ ಸುಶ್ರಾವ್ಯ ಮೇಳಗೀತವನ್ನು ಕೇಳಿದಾಗ, ಆರ್ಭಟಿಸುವ ಜಲಪಾತದ ಮತ್ತು ಮೊಳಗುವ ಸಿಡಿಲೆರಗುವಿಕೆಗಳ ಘೋಷಗಳ ನೆನಪು ಯೋಹಾನನಿಗೆ ಆದದರ್ದಲ್ಲಿ ಆಶ್ಚರ್ಯವೇನೂ ಇಲ್ಲ. ಸ್ಪಷ್ಟವಾಗಿರುವ ವೀಣೆಗಳಂತಿರುವ ಹಿಮ್ಮೇಳವಿರುವುದು ಎಷ್ಟು ಆಹ್ಲಾದಕರ! (ಕೀರ್ತನೆ 81:2) ಭೂಮಿಯ ಮೇಲಿನ ಯಾವ ಗಾಯಕವೃಂದವು ಆ ಭವ್ಯವಾದ ಮೇಳಗೀತದ ಉತ್ಕೃಷ್ಟತೆಯನ್ನು ಮುಟ್ಟಬಲ್ಲದು?
7. (ಎ) ಪ್ರಕಟನೆ 14:3ರ ಹೊಸ ಹಾಡು ಯಾವುದು? (ಬಿ) ಕೀರ್ತನೆ 149:1ರ ಹಾಡು ನಮ್ಮ ದಿನಗಳಲ್ಲಿ ಹೊಸತಾಗಿರುವುದು ಹೇಗೆ?
7 ಮತ್ತು ಈ “ಹೊಸ ಹಾಡು” ಏನು? ಪ್ರಕಟನೆ 5:9, 10ನ್ನು ಚರ್ಚಿಸುವಾಗ ನಾವು ಗಮನಿಸಿದಂತೆ, ಯೆಹೋವನ ರಾಜ್ಯ ಉದ್ದೇಶಗಳೊಂದಿಗೆ ಮತ್ತು ಆತ್ಮಿಕ ಇಸ್ರಾಯೇಲನ್ನು “ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ” ಮಾಡುವ ಯೇಸು ಕ್ರಿಸ್ತನ ಮೂಲಕವಾಗಿರುವ ಅವನ ಆಶ್ಚರ್ಯಕರವಾದ ಒದಗಿಸುವಿಕೆಯೊಂದಿಗೆ ಈ ಹಾಡಿಗೆ ಸಂಬಂಧವಿದೆ. ದೇವರ ಇಸ್ರಾಯೇಲಿನ ಮೂಲಕವಾಗಿ ಮತ್ತು ಅದರ ಪರವಾಗಿ ಯೆಹೋವನು ಪೂರೈಸುತ್ತಿರುವ ಹೊಸ ಸಂಗತಿಗಳನ್ನು ಪ್ರಚುರಪಡಿಸುತ್ತಾ, ಅವನನ್ನು ಸ್ತುತಿಸುವ ಹಾಡು ಇದಾಗಿರುತ್ತದೆ. (ಗಲಾತ್ಯ 6:16) ಈ ಆತ್ಮಿಕ ಇಸ್ರಾಯೇಲಿನ ಸದಸ್ಯರು ಕೀರ್ತನೆಗಾರನ ಆಮಂತ್ರಣಕ್ಕೆ ಪ್ರತಿಕ್ರಿಯೆ ತೋರಿಸುತ್ತಾರೆ: “ಯಾಹುವಿಗೆ ಸ್ತೋತ್ರ! ಯೆಹೋವನಿಗೆ ನೂತನಕೀರ್ತನೆಯನ್ನು ಹಾಡಿರಿ; ಭಕ್ತಸಭೆಯಲ್ಲಿ ಆತನನ್ನು ಸ್ತುತಿಸಿರಿ. ಇಸ್ರಾಯೇಲ್ಯರು ತಮ್ಮ ಸೃಷ್ಟಿಕರ್ತನಲ್ಲಿ ಹೆಚ್ಚಳಪಡಲಿ; ಚೀಯೋನಿನವರು ತಮ್ಮ ರಾಜನಲ್ಲಿ ಹರ್ಷಿಸಲಿ.” (ಕೀರ್ತನೆ 149:1, 2) ಈ ಮಾತುಗಳು ಶತಮಾನಗಳ ಹಿಂದೆ ಬರೆದದ್ದೇನೊ ನಿಜವೇ, ಆದರೆ ನಮ್ಮ ದಿನಗಳಲ್ಲಿ, ಅವುಗಳನ್ನು ಹೊಸ ಅರ್ಥದೊಂದಿಗೆ ಹಾಡಲಾಗಿದೆ. ಮೆಸ್ಸೀಯ ಸಂಬಂಧಿತ ರಾಜ್ಯವು 1914 ರಲ್ಲಿ ಜನಿಸಿತು. (ಪ್ರಕಟನೆ 12:10) ಯೆಹೋವನ ಜನರು 1919 ರಲ್ಲಿ ಭೂಮಿಯ ಮೇಲೆ “ರಾಜ್ಯದ ವಾಕ್ಯವನ್ನು” ನವೀಕರಿಸಲಾದ ಹುರುಪಿನಿಂದ ಪ್ರಕಟಿಸಲು ಆರಂಭಿಸಿದರು. (ಮತ್ತಾಯ 13:19) ಸೊಸೈಟಿಯ 1919ರ ವರ್ಷವಚನದಿಂದ (ಯೆಶಾಯ 54:17) ಪ್ರಚೋದಿಸಲ್ಪಟ್ಟು ಮತ್ತು ಆತ್ಮಿಕ ಪ್ರಮೋದವನಕ್ಕೆ ಪುನಃ ಸ್ಥಾಪಿಸಲ್ಪಟ್ಟದ್ದರಿಂದ ಪ್ರೋತ್ಸಾಹಿಸಲ್ಪಟ್ಟು, ‘ತಮ್ಮ ಹೃದಯಗಳಲ್ಲಿ ಗಾನಮಾಡುತ್ತಾ ಯೆಹೋವನಿಗೆ ಸ್ತೋತ್ರ ಮಾಡಲು’ ಆ ವರ್ಷದಲ್ಲಿ ಅವರು ಆರಂಭಿಸಿದರು.—ಎಫೆಸ 5:19.
8. ಪ್ರಕಟನೆ 14:3ರ ಹೊಸ ಹಾಡನ್ನು ಕೇವಲ 1,44,000 ಮಂದಿ ಮಾತ್ರವೇ ಹಾಡಶಕ್ತರಾಗುವುದು ಯಾಕೆ?
8 ಆದರೂ, ಪ್ರಕಟನೆ 14:3 ರಲ್ಲಿ ಹೇಳಲ್ಪಟ್ಟ ಹಾಡನ್ನು ಕೇವಲ 1,44,000 ಮಂದಿ ಮಾತ್ರ ಕಲಿಯಲು ಶಕ್ತರಾಗುವುದು ಏಕೆ? ಯಾಕಂದರೆ ದೇವರ ರಾಜ್ಯದ ಆರಿಸಲ್ಪಟ್ಟ ಬಾಧ್ಯಸ್ಥರೋಪಾದಿ ಅವರ ಅನುಭವಗಳೊಂದಿಗೆ ಅದಕ್ಕೆ ಸಂಬಂಧವಿದೆ. ಅವರು ಮಾತ್ರವೇ ದೇವರ ಪುತ್ರರಾಗಿ ದತ್ತಕ್ಕೆ ತೆಗೆದುಕೊಳ್ಳಲ್ಪಡುತ್ತಾರೆ ಮತ್ತು ಪವಿತ್ರಾತ್ಮನಿಂದ ಅಭಿಷಿಕ್ತರಾಗುತ್ತಾರೆ. ಆ ಪರಲೋಕ ರಾಜ್ಯದ ಭಾಗವಾಗಲು ಭೂಮಿಯಿಂದ ಅವರು ಮಾತ್ರವೇ ಕ್ರಯಕ್ಕೆ ತೆಗೆದುಕೊಳ್ಳಲ್ಪಡುತ್ತಾರೆ, ಮತ್ತು ಅವರು ಮಾತ್ರವೇ, ಮಾನವ ಕುಲವನ್ನು ಪರಿಪೂರ್ಣತೆಗೆ ತರಲು ಯೇಸು ಕ್ರಿಸ್ತನೊಂದಿಗೆ ಸಾವಿರ ವರ್ಷ “ಯಾಜಕರೂ . . . ಮತ್ತು ಅರಸರೂ ಆಗಿ ಆಳುವರು” (NW). ಯೆಹೋವನ ಸನ್ನಿಧಾನದಲ್ಲೇ ಅವರು ಮಾತ್ರವೇ “ಒಂದು ಹೊಸ ಹಾಡನ್ನೋ ಎಂಬಂತೆ ಹಾಡುವ” ದನ್ನು ಕಾಣಲಾಗುತ್ತದೆ.c ಈ ವಿಶಿಷ್ಟವಾದ ಅನುಭವಗಳು ಮತ್ತು ಪ್ರತೀಕ್ಷೆಗಳು ಅವರಿಗೆ ರಾಜ್ಯದ ಅನುಪಮ ಗಣ್ಯತೆಯನ್ನು ಕೊಡುತ್ತವೆ ಮತ್ತು ಬೇರೆ ಯಾರೂ ಹಾಡದ ರೀತಿಯಲ್ಲಿ ಅದನ್ನು ಹಾಡಲು ಅವರನ್ನು ಶಕ್ತರನ್ನಾಗಿ ಮಾಡುತ್ತವೆ.—ಪ್ರಕಟನೆ 20:6; ಕೊಲೊಸ್ಸೆ 1:13; 1 ಥೆಸಲೊನೀಕ 2:11, 12.
9. ಅಭಿಷಿಕ್ತರ ಹಾಡುವಿಕೆಗೆ ಮಹಾ ಸಮೂಹದವರು ಪ್ರತಿವರ್ತನೆ ಹೇಗೆ ತೋರಿಸಿದ್ದಾರೆ, ಮತ್ತು ಹೀಗೆ ಅವರು ಯಾವ ಎಚ್ಚರಿಕೆಯನ್ನು ನೆರವೇರಿಸಿದ್ದಾರೆ?
9 ಆದಾಗ್ಯೂ, ಅವರ ಹಾಡುವಿಕೆಯನ್ನು ಇತರರು ಕೇಳುತ್ತಾರೆ ಮತ್ತು ಪ್ರತಿವರ್ತಿಸುತ್ತಾರೆ. ಬೇರೆ ಕುರಿಗಳ 1935 ರಿಂದ ಬೆಳೆಯುತ್ತಿರುವ ಮಹಾ ಸಮೂಹವು ಅವರ ವಿಜಯೋತ್ಸಾಹದ ಹಾಡನ್ನು ಕೇಳಿದೆ ಮತ್ತು ದೇವರ ರಾಜ್ಯವನ್ನು ಸಾರುವುದರಲ್ಲಿ ಅವರೊಂದಿಗೆ ಸಹಭಾಗಿಗಳಾಗುವಂತೆ ಪ್ರೇರೇಪಿಸಲ್ಪಟ್ಟಿದೆ. (ಯೋಹಾನ 10:16; ಪ್ರಕಟನೆ 7:9) ದೇವರ ರಾಜ್ಯದ ಭಾವೀ ರಾಜರು ಹಾಡುವಂತಹ ರೀತಿಯಲ್ಲಿಯೇ ನಿಖರವಾಗಿ ಈ ಹೊಸತಾಗಿ ಬಂದವರು ಹಾಡಲು ಕಲಿಯಶಕ್ತರಲ್ಲವೆಂಬುದು ದಿಟ. ಆದರೆ ಅವರು ಕೂಡ ಯೆಹೋವನು ಪೂರೈಸಲಿರುವ ಹೊಸ ಸಂಗತಿಗಳಿಗಾಗಿ ಅವನಿಗೆ ಸಂಕೀರ್ತನೆಯನ್ನು ಹಾಡುವ ಯೆಹೋವನ ಸ್ತೋತ್ರದ ಸುಶ್ರಾವ್ಯ ಮೇಳಗೀತವನ್ನು ನುಡಿಸುತ್ತಾರೆ. ಈ ರೀತಿಯಲ್ಲಿ ಅವರು ಕೀರ್ತನೆಗಾರನ ಎಚ್ಚರಿಕೆಯನ್ನು ನೆರವೇರಿಸುತ್ತಾರೆ: “ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ; ಎಲ್ಲಾ ಭೂನಿವಾಸಿಗಳೇ, ಯೆಹೋವನಿಗೆ ಹಾಡಿರಿ. ಯೆಹೋವನಿಗೆ ಹಾಡಿರಿ; ಆತನ ನಾಮವನ್ನು ಕೊಂಡಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿಹೇಳಿರಿ. ಜನಾಂಗಗಳಲ್ಲಿ ಆತನ ಘನತೆಯನ್ನೂ ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಪಡಿಸಿರಿ. ಭೂಜನಾಂಗಗಳೇ, ಬಲಪ್ರಭಾವಗಳು ಯೆಹೋವನವೇ ಯೆಹೋವನವೇ ಎಂದು ಹೇಳಿ ಆತನನ್ನು ಘನಪಡಿಸಿರಿ. ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; . . . ಎಂದು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.”—ಕೀರ್ತನೆ 96:1-3, 7, 10; 98:1-9.
10. ಸಾಂಕೇತಿಕ 24 ಮಂದಿ ಹಿರಿಯರ “ಮುಂದೆ” 1,44,000 ಮಂದಿ ಹಾಡಶಕ್ತರಾಗುವುದು ಹೇಗೆ?
10 ತಮ್ಮ ಮಹಿಮೆಯ ಸ್ವರ್ಗೀಯ ಪದವಿಗಳಲ್ಲಿರುವ 1,44,000 ಮಂದಿ ತಾವೇ 24 ಹಿರಿಯರಾಗಿರುವುದರಿಂದ, ಹಿರಿಯರ “ಮುಂದೆ” 1,44,000 ಮಂದಿ ಹಾಡಶಕ್ತರಾಗುವುದು ಹೇಗೆ? ಕರ್ತನ ದಿನದ ಆರಂಭದಲ್ಲಿ, “ಕ್ರಿಸ್ತನಲ್ಲಿರುವ ಸತ್ತವರು” ಆತ್ಮ ಜೀವಿಗಳಾಗಿ ಪುನರುತ್ಥಾನಗೊಳಿಸಲ್ಪಟ್ಟಿದ್ದರು. ಆದಕಾರಣ, ಜಯಗಳಿಸಿದ ನಂಬಿಗಸ್ತ ಅಭಿಷಿಕ್ತ ಕ್ರೈಸ್ತರು ಈಗ ಸ್ವರ್ಗದಲ್ಲಿದ್ದು, ಸಾಂಕೇತಿಕವಾಗಿ ಯಾಜಕ ಹಿರಿಯರ 24 ವರ್ಗಗಳಿಗೆ ಹೋಲಿಕೆಯಲ್ಲಿ ಕಾರ್ಯನಿರ್ವಹಣೆಯನ್ನು ಪೂರೈಸುತ್ತಿದ್ದಾರೆ. ಯೆಹೋವನ ಸ್ವರ್ಗೀಯ ಸಂಸ್ಥೆಯ ದರ್ಶನದಲ್ಲಿ ಅವರು ಒಳಗೂಡಿದ್ದಾರೆ. (1 ಥೆಸಲೊನೀಕ 4:15, 16; 1 ಪೂರ್ವಕಾಲವೃತ್ತಾಂತ 24:1-18; ಪ್ರಕಟನೆ 4:4; 6:11) ಭೂಮಿಯ ಮೇಲೆ ಇನ್ನೂ ಇರುವ 1,44,000 ಮಂದಿಯಲ್ಲಿ ಉಳಿದವರು, ಹೀಗೆ ಹೊಸ ಹಾಡನ್ನು ಪರಲೋಕದಲ್ಲಿರುವ ಅವರ ಪುನರುತಿತ್ಥ ಸಹೋದರರ ಮುಂದೆ ಅಥವಾ ಅವರಿಗೆ ಕಾಣಿಸುವಂತೆ ಹಾಡುತ್ತಿದ್ದಾರೆ.
11. ಅಭಿಷಿಕ್ತ ಜಯಶಾಲಿಗಳನ್ನು 24 ಹಿರಿಯರು ಹಾಗೂ 1,44,000 ಮಂದಿ ಎಂದು ಯಾಕೆ ಸೂಚಿಸಲಾಗಿದೆ?
11 ಈ ಬಿಂದುವಿನಲ್ಲಿ ನಾವು ಇದನ್ನೂ ಕೇಳಬಹುದು: ಈ ಅಭಿಷಿಕ್ತ ಜಯಶಾಲಿಗಳನ್ನು ಸಾಂಕೇತಿಕವಾಗಿ 24 ಹಿರಿಯರೆಂದೂ, 1,44,000 ಮಂದಿಯೆಂದೂ ಯಾಕೆ ಸೂಚಿಸಲಾಗಿದೆ? ಯಾಕಂದರೆ ಪ್ರಕಟನೆಯು ಈ ಒಂದು ಗುಂಪನ್ನು ಎರಡು ಭಿನ್ನ ದೃಷ್ಟಿಕೋನದಿಂದ ವೀಕ್ಷಿಸುತ್ತದೆ. ಯೆಹೋವನ ಸಿಂಹಾಸನದ ಸುತ್ತಲೂ ರಾಜರಾಗಿ ಮತ್ತು ಯಾಜಕರಾಗಿ ಅವರ ಕಟ್ಟಕಡೆಯ ಸ್ಥಾನದಲ್ಲಿರುವುದಾಗಿ 24 ಹಿರಿಯರನ್ನು ಯಾವಾಗಲೂ ತೋರಿಸಲಾಗಿದೆ. ಅವರಲ್ಲಿ ಒಂದು ಚಿಕ್ಕ ಉಳಿಕೆಯವರು ಇನ್ನೂ ಭೂಮಿಯ ಮೇಲೆ ಇರುವುದಾದರೂ, ಸ್ವರ್ಗೀಯ ಪದವಿಗಳಲ್ಲಿರುವ 1,44,000 ಮಂದಿಯ ಪೂರ್ಣ ಗುಂಪನ್ನು ಅವರು ಸಂಕೇತಿಸುತ್ತಾರೆ. (ಪ್ರಕಟನೆ 4:4, 10; 5:5-14; 7:11-13; 11:16-18) ಆದಾಗ್ಯೂ, ಪ್ರಕಟನೆ ಅಧ್ಯಾಯ 7, ಮಾನವಕುಲದಿಂದ ತೆಗೆದುಕೊಳ್ಳಲ್ಪಟ್ಟ 1,44,000 ಮಂದಿಯ ಮೇಲೆ ಕೇಂದ್ರೀಕರಿಸುತ್ತದೆ, ಮತ್ತು ವೈಯಕ್ತಿಕವಾಗಿ ಆತ್ಮಿಕ ಇಸ್ರಾಯೇಲ್ಯರ ಪೂರ್ಣ ಸಂಖ್ಯೆಗೆ ಮುದ್ರೆಯನ್ನೊತ್ತುವ ಮತ್ತು ಅಗಣಿತ ಮಹಾ ಸಮೂಹದವರಿಗೆ ರಕ್ಷಣೆಯನ್ನು ನೀಡುವ ಯೆಹೋವನ ಮಹಾ ಉದ್ದೇಶವನ್ನು ಅದು ಒತ್ತಿಹೇಳುತ್ತದೆ. ಪ್ರಕಟನೆ 14 ನೆಯ ಅಧ್ಯಾಯವು 1,44,000 ಮಂದಿ ವೈಯಕ್ತಿಕವಾಗಿ ಜಯಗಳಿಸಿದ ಪೂರ್ಣ ರಾಜ್ಯವರ್ಗವು ಚೀಯೋನ್ ಪರ್ವತದ ಮೇಲೆ ಕುರಿಮರಿಯೊಂದಿಗೆ ಒಟ್ಟುಗೂಡಿಸಲ್ಪಡುವುದನ್ನು ಸ್ಥಿರೀಕರಿಸುವ ಚಿತ್ರವನ್ನು ಕೊಡುತ್ತದೆ. ಒಂದು ಲಕ್ಷ ನಲ್ವತ್ತನಾಲ್ಕು ಸಾವಿರ ಮಂದಿಯೊಂದಿಗೆ ಎಣಿಸಲ್ಪಡಲು ಆವಶ್ಯಕವಾದ ಅರ್ಹತೆಗಳನ್ನು ಕೂಡ ತಿಳಿಸಲಾಗಿದೆ, ಅದನ್ನು ನಾವು ಮುಂದಕ್ಕೆ ನೋಡಲಿರುವೆವು.d
ಕುರಿಮರಿಯ ಹಿಂಬಾಲಕರು
12. (ಎ) ಯೋಹಾನನು 1,44,000 ಮಂದಿಯ ತನ್ನ ವರ್ಣನೆಯನ್ನು ಹೇಗೆ ಮುಂದುವರಿಸುತ್ತಾನೆ? (ಬಿ) ಯಾವ ಅರ್ಥದಲ್ಲಿ 1,44,000 ಮಂದಿಯನ್ನು ಕನ್ಯೆಯರೆಂದು ಸೂಚಿಸಲಾಗಿದೆ?
12 “ಭೂಮಿಯಿಂದ ಕೊಂಡುಕೊಳ್ಳಲ್ಪಟ್ಟ” 1,44,000 ಮಂದಿಯ ಕುರಿತು ತನ್ನ ವರ್ಣನೆಯನ್ನು ಮುಂದುವರಿಸುತ್ತಾ, ಯೋಹಾನನು ನಮಗೆ ಹೇಳುವುದು: “ಇವರು ಸ್ತ್ರೀಯರಿಂದ ತಮ್ಮನ್ನು ಕೆಡಿಸಿಕೊಳ್ಳದಿದ್ದವರು; ವಾಸ್ತವದಲ್ಲಿ ಅವರು ಕನ್ಯೆಯರು. ಇವರು ಕುರಿಮರಿಯು ಎಲ್ಲಿಯೇ ಹೋಗಲಿ, ಅವನನ್ನು ಹಿಂಬಾಲಿಸುತ್ತಾ ಹೋಗುವವರು, ಇವರು ದೇವರಿಗೆ ಮತ್ತು ಕುರಿಮರಿಗೆ ಪ್ರಥಮಫಲಗಳಾಗಿ ಮಾನವಕುಲದ ಮಧ್ಯದಿಂದ ಕೊಂಡುಕೊಳ್ಳಲ್ಪಟ್ಟರು, ಮತ್ತು ಅವರ ಬಾಯಿಗಳಲ್ಲಿ ಯಾವ ಸುಳ್ಳೂ ಸಿಕ್ಕಲಿಲ್ಲ; ಅವರು ಕಳಂಕರಹಿತರು.” (ಪ್ರಕಟನೆ 14:4, 5, NW) ಈ 1,44,000 ಮಂದಿ “ಕನ್ಯೆಯರು” ಎಂಬ ವಾಸ್ತವಾಂಶವು, ಈ ವರ್ಗದ ಸದಸ್ಯರು ಆವಶ್ಯಕವಾಗಿ ಶಾರೀರಿಕವಾಗಿ ಅವಿವಾಹಿತರು ಎಂದು ಅರ್ಥವಲ್ಲ. ಕ್ರೈಸ್ತ ಒಂಟಿಗತನದಲ್ಲಿ ಮೇಲ್ಮೆಗಳು ಇರುವುದಾದರೂ, ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ವಿವಾಹವು ಒಳ್ಳೆಯದು ಎಂದು ಸ್ವರ್ಗೀಯ ಕರೆಯೊಂದು ಇದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದನು. (1 ಕೊರಿಂಥ 7:1, 2, 36, 37) ಈ ವರ್ಗದ ವೈಶಿಷ್ಟ್ಯವೇನಂದರೆ ಆತ್ಮಿಕ ಕನ್ಯಾತ್ವ. ಅವರು ಲೌಕಿಕ ರಾಜಕೀಯದೊಂದಿಗೆ ಮತ್ತು ಸುಳ್ಳು ಧರ್ಮದೊಂದಿಗೆ ಆತ್ಮಿಕ ವ್ಯಭಿಚಾರವನ್ನು ವರ್ಜಿಸಿದ್ದಾರೆ. (ಯಾಕೋಬ 4:4; ಪ್ರಕಟನೆ 17:5) ಕ್ರಿಸ್ತನ ನಿಶ್ಚಿತಾರ್ಥವಾದ ವಧುವಿನೋಪಾದಿ, ಅವರು “ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ . . . ನಿಷ್ಕಳಂಕ” ರಾಗಿ, ಪರಿಶುದ್ಧರಾಗಿ ತಮ್ಮನ್ನು ಇಟ್ಟುಕೊಂಡಿದ್ದಾರೆ.—ಫಿಲಿಪ್ಪಿ 2:15.
13. ಯೇಸು ಕ್ರಿಸ್ತನಿಗೆ 1,44,000 ಮಂದಿ ಒಂದು ತಕ್ಕ ವಧು ಯಾಕೆ, ಮತ್ತು “ಕುರಿಮರಿಯು ಎಲ್ಲಿಯೇ ಹೋಗಲಿ, ಅವನನ್ನು ಹಿಂಬಾಲಿಸುತ್ತಾ” ಅವರು ಹೋಗುವುದು ಹೇಗೆ?
13 ಇದಕ್ಕೆ ಕೂಡಿಸಿ, “ಅವರ ಬಾಯಿಗಳಲ್ಲಿ ಯಾವ ಸುಳ್ಳೂ ಸಿಕ್ಕಲಿಲ್ಲ.” ಇದರಲ್ಲಿ, ಅವರು ತಮ್ಮ ರಾಜನಾದ ಯೇಸು ಕ್ರಿಸ್ತನಂತೆ ಇದ್ದಾರೆ. ಪರಿಪೂರ್ಣ ಮಾನವನೋಪಾದಿ “ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ.” (1 ಪೇತ್ರ 2:21, 22) ಏಕಕಾಲದಲ್ಲಿಯೇ ನಿಷ್ಕಳಂಕರೂ, ಸತ್ಯವಂತರೂ ಆಗಿರುವುದರಿಂದ, 1,44,000 ಮಂದಿ ಯೆಹೋವನ ಉನ್ನತ ಮಹಾ ಯಾಜಕನ ಪರಿಶುದ್ಧ ವಧುವಿನಂತೆ ಸಿದ್ಧಗೊಳಿಸಲ್ಪಡುತ್ತಾರೆ. ಯೇಸುವು ಭೂಮಿಯ ಮೇಲೆ ಇದ್ದಾಗ, ತನ್ನನ್ನು ಹಿಂಬಾಲಿಸುವಂತೆ ಅವನು ಸಹೃದಯಿಗಳನ್ನು ಆಮಂತ್ರಿಸಿದನು. (ಮಾರ್ಕ 8:34; 10:21; ಯೋಹಾನ 1:43) ಅದಕ್ಕೆ ಪ್ರತಿವರ್ತನೆ ತೋರಿಸಿದವರು ಆತನ ಜೀವ ಮಾರ್ಗವನ್ನು ಅನುಕರಿಸಿದರು ಮತ್ತು ಆತನ ಬೋಧನೆಗಳಿಗೆ ವಿಧೇಯರಾದರು. ಹೀಗೆ, ಅವರ ಭೂಯಾತ್ರೆಯ ಸಮಯದಲ್ಲಿ, ಸೈತಾನನ ಲೋಕದೊಳಗೆ ಅವರನ್ನು ಅವನು ಮಾರ್ಗದರ್ಶಿಸುವಾಗ ಅವರು, “ಕುರಿಮರಿಯು ಎಲ್ಲಿಯೇ ಹೋಗಲಿ, ಅವನನ್ನು ಹಿಂಬಾಲಿಸುತ್ತಾ” ಹೋಗುತ್ತಾರೆ.
14. (ಎ) “ದೇವರಿಗೆ ಮತ್ತು ಕುರಿಮರಿಗೆ ಪ್ರಥಮಫಲಗಳಾಗಿ” 1,44,000 ಮಂದಿ ಆಗುವುದು ಹೇಗೆ? (ಬಿ) ಮಹಾ ಸಮೂಹದವರೂ ಯಾವ ಅರ್ಥದಲ್ಲಿ ಪ್ರಥಮಫಲಗಳಾಗಿದ್ದಾರೆ?
14 “ಭೂಮಿಯಿಂದ ಕೊಂಡುಕೊಳ್ಳಲ್ಪಟ್ಟ,” ಒಂದು ಲಕ್ಷ ನಲವತ್ತನಾಲ್ಕು ಸಾವಿರ ಮಂದಿ “ಮನುಷ್ಯರೊಳಗಿಂದ ಕೊಂಡುಕೊಳ್ಳಲ್ಪಟ್ಟವರು” ಆಗಿದ್ದಾರೆ. ಅವರು ದೇವರ ಆತ್ಮ ಪುತ್ರರಾಗಿ ದತ್ತು ತೆಗೆದುಕೊಂಡವರಾಗಿದ್ದಾರೆ, ಮತ್ತು ಅವರ ಪುನರುತ್ಥಾನದ ಅನಂತರ ಅವರು ಮುಂದಕ್ಕೆ ಕೇವಲ ರಕ್ತ ಮಾಂಸದ ಮಾನವರಾಗಿರುವದಿಲ್ಲ. ವಚನ 4 ರಲ್ಲಿ ಹೇಳಲ್ಪಟ್ಟಂತೆ, ಅವರು “ದೇವರಿಗೆ ಮತ್ತು ಕುರಿಮರಿಗೆ ಪ್ರಥಮ ಫಲಗಳಂತೆ” ಆಗುವರು. ಹಿಂದೆ ಮೊದಲನೆಯ ಶತಮಾನದಲ್ಲಿ, ಯೇಸುವು “ನಿದ್ರೆಹೋದವರಲ್ಲಿ ಪ್ರಥಮಫಲವಾದನು” ಎಂಬದು ಸತ್ಯ. (1 ಕೊರಿಂಥ 15:20, 23) ಆದರೆ, ಯೇಸುವಿನ ಯಜ್ಞದ ಮೂಲಕ ಕ್ರಯಕ್ಕೆ ಕೊಂಡುಕೊಳ್ಳಲ್ಪಟ್ಟ 1,44,000 ಮಂದಿ ಅಪರಿಪೂರ್ಣ ಮಾನವ ಕುಲದಲ್ಲಿ “ನಿರ್ದಿಷ್ಟ [NW] ಪ್ರಥಮಫಲ” ವಾಗಿದ್ದಾರೆ. (ಯಾಕೋಬ 1:18) ಆದಾಗ್ಯೂ, ಮಾನವ ಕುಲದಿಂದ ಫಲದ ಒಟ್ಟುಗೂಡಿಸುವಿಕೆಯು ಅವರೊಂದಿಗೆ ಮುಕ್ತಾಯಗೊಳ್ಳುವುದಿಲ್ಲ. ಪ್ರಕಟನೆಯ ಪುಸ್ತಕವು ಈಗಾಗಲೇ ಗಟ್ಟಿಯಾದ ಸ್ವರದಿಂದ ಕೂಗುವ ಅಗಣಿತ ಮಹಾ ಸಮೂಹದ ಕೊಯ್ಲಿನ ಕುರಿತಾಗಿ ಸೂಚಿಸಿದೆ: “ಸಿಂಹಾಸನಾಸೀನನಾದಾತನಾದ ನಮ್ಮ ದೇವರಿಗೂ ಮತ್ತು ಕುರಿಮರಿಗೂ ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ.” ಈ ಮಹಾ ಸಮೂಹವು ಮಹಾ ಸಂಕಟವನ್ನು ಪಾರಾಗುವುದು, ಮತ್ತು ಅವರು ತಮ್ಮನ್ನು “ಜೀವ ಜಲಗಳ ಒರತೆಗಳ” ಮೂಲಕ ನವಚೈತನ್ಯ ಹೊಂದುವುದನ್ನು ಮುಂದುವರಿಸುವಾಗ, ಭೂಮಿಯ ಮೇಲೆ ಮಾನವ ಪರಿಪೂರ್ಣತೆಗೇರಿಸಲ್ಪಡುವರು. ಮಹಾ ಸಂಕಟದ ಸ್ವಲ್ಪ ಸಮಯದ ಅನಂತರ, ಹೇಡೀಸನ್ನು ಬರಿದುಗೊಳಿಸಲಾಗುವುದು ಮತ್ತು ಅಸಂಖ್ಯಾತ ಲಕ್ಷಗಟ್ಟಲೆ ಇತರ ಮಾನವರು ಪುನರುತ್ಥಾನಗೊಳಿಸಲ್ಪಡುವರು ಮತ್ತು ಅದೇ ಜೀವ ಜಲಗಳನ್ನು ಕುಡಿಯುವ ಅವಕಾಶವು ಇರುವುದು. ಇದನ್ನು ಮನಸ್ಸಿನಲ್ಲಿಡುತ್ತಾ, ಮಹಾ ಸಮೂಹವನ್ನು ಬೇರೆ ಕುರಿಗಳ ಪ್ರಥಮಫಲಗಳೆಂದು ಕರೆಯುವುದು ಸರಿಯಾಗಿದೆ—ಭೂಮಿಯ ಮೇಲೆ ಸದಾ ಜೀವಿಸುವ ನಿರೀಕ್ಷೆಯೊಂದಿಗೆ, ಅವರು ‘ಕುರಿಮರಿಯ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿಕೊಂಡವರಲ್ಲಿ’ ಮೊದಲಿಗರಾಗಿದ್ದಾರೆ.—ಪ್ರಕಟನೆ 7:9, 10, 14, 17; 20:12, 13.
15. ಮೂರು ಭಿನ್ನವಾದ ಪ್ರಥಮಫಲಗಳ, ಮತ್ತು ಮೋಶೆಯ ನಿಯಮಶಾಸ್ತ್ರದ ಕೆಳಗೆ ಆಚರಿಸಿದ ಹಬ್ಬಗಳ ನಡುವೆ ಯಾವ ಸರಿಹೋಲಿಕೆಗಳಿವೆ?
15 ಈ ಮೂರು ಪ್ರಥಮ ಫಲಗಳಿಗೆ (ಯೇಸು ಕ್ರಿಸ್ತನು, 1,44,000 ಮಂದಿ, ಮತ್ತು ಮಹಾ ಸಮೂಹ) ಪುರಾತನ ಮೋಶೆಯ ನಿಯಮಶಾಸ್ತ್ರಕ್ಕನುಸಾರ ಆಚರಿಸಲ್ಪಡುತ್ತಿದ್ದ ಹಬ್ಬಗಳಲ್ಲಿ ಆಸಕ್ತಿಕರವಾದ ಸರಿಹೋಲಿಕೆಗಳಿವೆ. ನೈಸಾನ್ 16 ರಂದು, ಹುಳಿಯಿಲ್ಲದ ರೊಟ್ಟಿಗಳ ಹಬ್ಬದಲ್ಲಿ, ಜವೆಗೋದಿಯ ಪೈರಿನ ಪ್ರಥಮ ಸಿವುಡನ್ನು ಯೆಹೋವನಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತಿತ್ತು. (ಯಾಜಕಕಾಂಡ 23:6-14) ನೈಸಾನ್ 16 ಯೇಸುವು ಸತ್ತವರೊಳಗಿಂದ ಪುನರುತ್ಥಾನಗೊಳಿಸಲ್ಪಟ್ಟ ದಿನವಾಗಿತ್ತು. ನೈಸಾನ್ 16 ರಿಂದ 50 ನೆಯ ದಿನದಲ್ಲಿ, ಮೂರನೆಯ ತಿಂಗಳಲ್ಲಿ, ಇಸ್ರಾಯೇಲ್ಯರು ಗೋದಿ ಕೊಯ್ಲಿನ ಪ್ರಥಮ ಫಲಸಂಗ್ರಹದ ಸುಗ್ಗಿಯ ಜಾತ್ರೆಯನ್ನು ಆಚರಿಸಿದರು. (ವಿಮೋಚನಕಾಂಡ 23:16; ಯಾಜಕಕಾಂಡ 23:15, 16) ಈ ಹಬ್ಬವು ಪಂಚಾಶತ್ತಮವೆಂದು ಕರೆಯಲ್ಪಟ್ಟಿತು (“ಐವತ್ತನೆಯ” ಎಂದು ಅರ್ಥ ಬರುವ ಗ್ರೀಕ್ ಪದದಿಂದ), ಮತ್ತು ಸಾ. ಶ. 33ರ ಪಂಚಾಶತ್ತಮದಲ್ಲಿ 1,44,000 ಮಂದಿಯ ಮೊದಲ ಸದಸ್ಯರು ಪವಿತ್ರಾತ್ಮನಿಂದ ಅಭಿಷೇಕಿಸಲ್ಪಟ್ಟರು. ಕೊನೆಗೆ, ಎಲ್ಲಾ ಕೊಯ್ಲನ್ನು ಒಟ್ಟುಗೂಡಿಸುವ ಏಳನೆಯ ತಿಂಗಳಲ್ಲಿ, ಪರ್ಣಶಾಲೆಗಳ ಹಬ್ಬವಿದ್ದು, ಇದು ಇಸ್ರಾಯೇಲ್ಯರು ಒಂದು ವಾರದ ತನಕ ಇತರ ವಸ್ತುಗಳೊಂದಿಗೆ ಕೊಂಬೆಗರಿಗಳಿಂದ ಮಾಡಿದ ಪರ್ಣಶಾಲೆಗಳಲ್ಲಿ ವಾಸಿಸುತ್ತಾ ಸಂತೋಷದ ಉಪಕಾರಸ್ತುತಿಯನ್ನು ಸಲ್ಲಿಸುವ ಸಮಯವಾಗಿತ್ತು. (ಯಾಜಕಕಾಂಡ 23:33-43) ಅದಕ್ಕೆ ಸರಿಹೋಲಿಕೆಯಲ್ಲಿ, ಮಹಾ ಒಟ್ಟುಗೂಡಿಸುವಿಕೆಯ ಭಾಗವಾಗಿರುವ ಮಹಾ ಸಮೂಹವು ಸಿಂಹಾಸನದ ಮುಂದೆ “ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡು” ಉಪಕಾರಸ್ತುತಿ ಸಲ್ಲಿಸುತ್ತದೆ.—ಪ್ರಕಟನೆ 7:9.
ನಿತ್ಯವಾದ ಶುಭವರ್ತಮಾನವನ್ನು ಸಾರುವುದು
16, 17. (ಎ) ದೇವದೂತನು ಎಲ್ಲಿ ಹಾರುವುದನ್ನು ಯೋಹಾನನು ಕಂಡನು, ಮತ್ತು ಯಾವ ಘೋಷಣೆಯನ್ನು ದೇವದೂತನು ಮಾಡುತ್ತಾನೆ? (ಬಿ) ರಾಜ್ಯ ಸಾರುವಿಕೆಯ ಕಾರ್ಯದಲ್ಲಿ ಯಾರು ಸೇರಿರುತ್ತಾರೆ, ಮತ್ತು ಇದನ್ನು ಯಾವ ಅನುಭವಗಳು ತೋರಿಸುತ್ತವೆ?
16 ಅನಂತರ ಯೋಹಾನನು ಬರೆದದ್ದು: “ಮತ್ತು ಇನ್ನೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವುದನ್ನು ನಾನು ಕಂಡೆನು, ಮತ್ತು ಭೂನಿವಾಸಿಗಳಿಗೆ ಮತ್ತು ಸಕಲ ಜನಾಂಗ ಮತ್ತು ಕುಲ ಮತ್ತು ಭಾಷೆ ಮತ್ತು ಪ್ರಜೆಗಳವರಿಗೆ ಸಾರಿಹೇಳುವುದಕ್ಕೆ ಸಂತೋಷದ ವಾರ್ತೆಯಾಗಿ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು. ಅವನು ಮಹಾಶಬ್ದದಿಂದ ಹೇಳಿದ್ದು: ‘ದೇವರಿಗೆ ಭಯಪಡಿರಿ ಮತ್ತು ಆತನನ್ನು ಮಹಿಮೆಪಡಿಸಿರಿ, ಯಾಕಂದರೆ ಆತನಿಂದ ನ್ಯಾಯತೀರ್ಪುಮಾಡುವ ಗಳಿಗೆ ಬಂದಿದೆ, ಮತ್ತು ಆದುದರಿಂದ ಆಕಾಶ ಮತ್ತು ಭೂಮಿ ಮತ್ತು ಸಮುದ್ರ ಮತ್ತು ನೀರುಗಳ ಬುಗ್ಗೆಗಳನ್ನು ಉಂಟುಮಾಡಿದ ಆತನನ್ನು ಆರಾಧಿಸಿರಿ.’” (ಪ್ರಕಟನೆ 14:6, 7, NW) ಹಕ್ಕಿಗಳು ಹಾರಾಡುವ “ಆಕಾಶಮಧ್ಯ” ದಲ್ಲಿ ಈ ದೇವದೂತನು ಹಾರಾಡುತ್ತಿದ್ದಾನೆ. (ಹೋಲಿಸಿರಿ ಪ್ರಕಟನೆ 19:17.) ಆದಕಾರಣ, ಅವನ ಧ್ವನಿಯು ಭೂಮಂಡಲದಲ್ಲಿಲ್ಲಾ ಕೇಳಿಸಬಲ್ಲದು. ಈ ದೇವದೂತನ ಲೋಕವ್ಯಾಪಕ ಘೋಷಣೆಯ ಬಿತ್ತರಿಸುವಿಕೆಯು ಯಾವುದೇ ಟೆಲಿವಿಷನ್ ಸುದ್ದಿ ಬಿತ್ತರಿಸುವಿಕೆಗಿಂತಲೂ ಎಷ್ಟೊಂದು ಅಧಿಕ ವ್ಯಾಪ್ತಿಯದ್ದಾಗಿದೆ!
17 ಕಾಡು ಮೃಗಕ್ಕಾಗಲಿ, ಅದರ ವಿಗ್ರಹಕ್ಕಾಗಲಿ ಭಯಪಡಬೇಕು ಎಂದು ಹೇಳದೆ, ಸೈತಾನನಿಂದ ನಿಯಂತ್ರಿಸಲ್ಪಟ್ಟ ಯಾವುದೇ ಸಾಂಕೇತಿಕ ಮೃಗಕ್ಕಿಂತಲೂ ಎಣೆಯಿಲ್ಲದ ಪ್ರಮಾಣದಲ್ಲಿ ಅತಿ ಹೆಚ್ಚು ಬಲಾಢ್ಯನಾದ ಯೆಹೋವನಿಗೆ ಭಯಪಡಬೇಕು ಎಂದು ಪ್ರತಿಯೊಬ್ಬನನ್ನು ಒತ್ತಾಯಿಸಲಾಗಿದೆ. ಹೌದು, ಪರಲೋಕ ಮತ್ತು ಭೂಲೋಕಗಳನ್ನು ಯೆಹೋವನು ಸೃಷ್ಟಿಸಿದನು ಮತ್ತು ಭೂಲೋಕವನ್ನು ತೀರ್ಪುಮಾಡುವ ಸಮಯ ಅವನಿಗೆ ಈಗ ಬಂದದೆ! (ಹೋಲಿಸಿರಿ ಆದಿಕಾಂಡ 1:1; ಪ್ರಕಟನೆ 11:18.) ಭೂಮಿಯಲ್ಲಿರುವಾಗ, ಯೇಸುವು ನಮ್ಮ ದಿನಗಳ ಕುರಿತು ಪ್ರವಾದನೆ ಮಾಡಿದ್ದು: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಅಭಿಷಿಕ್ತ ಕ್ರೈಸ್ತರ ಸಭೆಯು ಈ ನಿಯೋಗವನ್ನು ನೆರವೇರಿಸುತ್ತಿದೆ. (1 ಕೊರಿಂಥ 9:16; ಎಫೆಸ 6:15) ಈ ಸಾರುವ ಕಾರ್ಯದಲ್ಲಿ ಅದೃಶ್ಯ ದೇವದೂತರು ಕೂಡ ಸೇರಿರುತ್ತಾರೆ ಎಂದು ಪ್ರಕಟನೆಯು ಇಲ್ಲಿ ಪ್ರಕಟಿಸುತ್ತದೆ. ಆತ್ಮಿಕ ಸಹಾಯಕ್ಕಾಗಿ ಹಾತೊರೆಯುವ,—ಪ್ರಾರ್ಥಿಸುತ್ತಿರಲೂ ಬಹುದು—ಸಂಕಟಕ್ಕೊಳಗಾದ ವ್ಯಕ್ತಿಯೊಬ್ಬನ ಮನೆಗೆ ಯೆಹೋವನ ಸಾಕ್ಷಿಗಳಲ್ಲೊಬ್ಬನು ತರಲ್ಪಡುವಂತೆ ದೇವದೂತರ ಮಾರ್ಗದರ್ಶನವು ಎಷ್ಟೊಂದು ಬಾರಿ ತೋರಿಬಂದಿರುತ್ತದೆ!
18. ಆಕಾಶಮಧ್ಯದಲ್ಲಿ ಹಾರುವ ದೇವದೂತನಿಗನುಸಾರ ಯಾವುದಕ್ಕೆ ಗಳಿಗೆಯು ಬಂದಿದೆ, ಮತ್ತು ಇನ್ನೂ ಹೆಚ್ಚಿನ ಪ್ರಕಟನೆಗಳನ್ನು ಯಾರು ಮಾಡುವರು?
18 ಆಕಾಶಮಧ್ಯದಲ್ಲಿ ಹಾರುತ್ತಿರುವ ದೇವದೂತನು ಘೋಷಿಸಿದಂತೆ, ನ್ಯಾಯತೀರ್ಪುಮಾಡುವ ಗಳಿಗೆ ಬಂದಿದೆ. ಈಗ ದೇವರು ಯಾವ ನ್ಯಾಯತೀರ್ಪನ್ನು ನೀಡುವನು? ಎರಡನೆಯ, ಮೂರನೆಯ, ನಾಲ್ಕನೆಯ ಮತ್ತು ಐದನೆಯ ದೇವದೂತರು ಈಗ ಮಾಡಲಿರುವ ಪ್ರಕಟನೆಗಳನ್ನು ಕೇಳಿ ಕಿವಿಗಳು ಮೊರ್ರೆನ್ನುವವು.—ಯೆರೆಮೀಯ 19:3.
[ಅಧ್ಯಯನ ಪ್ರಶ್ನೆಗಳು]
a ಒಂದನೆಯ ಕೊರಿಂಥ 4:8 ರಲ್ಲಿ ತೋರಿಸಿದಂತೆ, ಅಭಿಷಿಕ್ತ ಕ್ರೈಸ್ತರು ಭೂಮಿಯ ಮೇಲಿರುವಾಗ ರಾಜರಾಗಿ ಆಳುವುದಿಲ್ಲ. ಆದಾಗ್ಯೂ, ಪ್ರಕಟನೆ 14:3, 6, 12, 13ರ ಪೂರ್ವಾಪರದ ಪ್ರಕಾರ, ಅವರ ಐಹಿಕ ಮಾರ್ಗದ ಅಂತ್ಯದ ತನಕ ಅವರು ತಾಳಿಕೊಳ್ಳುತ್ತಿರುವಾಗ, ಶುಭವಾರ್ತೆಯನ್ನು ಸಾರುವುದರ ಮೂಲಕ ಅವರು ಹೊಸ ಹಾಡನ್ನು ಹಾಡುವುದರಲ್ಲಿ ಪಾಲಿಗರಾಗುತ್ತಾರೆ.
b ಇದು ಇತರ ದರ್ಶನಗಳಲ್ಲಿ ಹೀಬ್ರು ಹೆಸರುಗಳ ಬಳಕೆಯಿಂದ ಬೆಂಬಲಿಸಲ್ಪಡುತ್ತದೆ; ಯೇಸುವಿಗೆ ಹೀಬ್ರು ಹೆಸರಾದ “ಅಬ್ಯಾಡನ್” (ಅರ್ಥ ಸಂಹಾರ) ಎಂದು ಕೊಡಲಾಗಿದೆ ಮತ್ತು ಹೀಬ್ರು ಭಾಷೆಯಲ್ಲಿ “ಹರ್ಮಗೆದೋನ್” ಎಂಬ ಹೆಸರುಳ್ಳ ಸ್ಥಳದಲ್ಲಿ ಅವನು ನ್ಯಾಯತೀರ್ಪನ್ನು ಜಾರಿಗೊಳಿಸುವನು.—ಪ್ರಕಟನೆ 9:11; 16:16.
c ಶಾಸ್ತ್ರವಚನವು “ಒಂದು ಹೊಸ ಹಾಡನ್ನೋ ಎಂಬಂತೆ” ಎಂದು ಹೇಳುತ್ತದೆ ಯಾಕಂದರೆ ಹಾಡು ತಾನೇ ಪ್ರಾಚೀನ ಕಾಲಗಳಲ್ಲಿ ಪ್ರವಾದನಾ ಮಾತಿನಲ್ಲಿ ಬರೆಯಲ್ಪಟ್ಟಿದೆ. ಅದನ್ನು ಹಾಡಲು ಅರ್ಹರಾದ ಯಾರೊಬ್ಬನೂ ಇರಲಿಲ್ಲ. ಈಗ ರಾಜ್ಯದ ಸ್ಥಾಪನೆ ಮತ್ತು ದೇವಜನರ ಪುನರುತ್ಥಾನದೊಂದಿಗೆ, ಪ್ರವಾದನೆಗಳ ನೆರವೇರಿಕೆಯಲ್ಲಿ ವಾಸ್ತವತೆಗಳು ಹೊರಬಂದಿದ್ದವು, ಮತ್ತು ಅದರ ಎಲ್ಲಾ ಘನಗಾಂಭೀರ್ಯದೊಂದಿಗೆ ಸಂಗೀತವನ್ನು ಉಚ್ಚರಿಸುವ ಸಮಯ ಬಂದಿತ್ತು.
d ಈ ಸನ್ನಿವೇಶವನ್ನು ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗವು ತಕ್ಕ ಸಮಯದಲ್ಲಿ ಆಹಾರವನ್ನು ಮನೆಯವರಿಗೆ ಕೊಡುವುದಕ್ಕೆ ಹೋಲಿಸಬಹುದು. (ಮತ್ತಾಯ 24:45) ಆಳು ಒಂದು ಸಮೂಹವಾಗಿ ಆಹಾರವನ್ನು ಒದಗಿಸಲು ಜವಾಬ್ದಾರವಾಗಿದೆ, ಆದರೆ ಮನೆಯವರು ಅಂದರೆ ಆ ವರ್ಗದ ವೈಯಕ್ತಿಕ ಸದಸ್ಯರು ಆ ಆತ್ಮಿಕ ಒದಗಿಸುವಿಕೆಯಲ್ಲಿ ಪಾಲಿಗರಾಗುವುದರಿಂದ ಪೋಷಿಸಲ್ಪಡುತ್ತಾರೆ. ಅವರು ಒಂದೇ ಗುಂಪಾಗಿದ್ದಾರೆ, ಆದರೆ—ಸಾಮೂಹಿಕವಾಗಿ ಮತ್ತು ವೈಯಕ್ತಿಕವಾಗಿ—ಬೇರೆ ಬೇರೆ ಪದಗಳಿಂದ ವರ್ಣಿಸಲ್ಪಡುತ್ತಾರೆ.
[Pictures on page 202, 203]
1,44,000
24 ಮಂದಿ ಹಿರಿಯರು
ಎರಡು ಭಿನ್ನ ದೃಷ್ಟಿಕೋನಗಳಿಂದ ವೀಕ್ಷಿಸಲ್ಪಟ್ಟ ಕುರಿಮರಿಯಾದ ಕ್ರಿಸ್ತ ಯೇಸುವಿನ ಸಹಬಾಧ್ಯಸ್ಥರು