ಅಧ್ಯಾಯ 65
ಯೆರೂಸಲೇಮಿಗೆ ಒಂದು ಗುಟ್ಟಿನ ಪ್ರಯಾಣ
ಸಾ.ಶ. 32ರ ಶರತ್ಕಾಲ ಅದಾಗಿತ್ತು ಮತ್ತು ಪರ್ಣಶಾಲೆಗಳ ಹಬ್ಬವು ಸಮೀಪಿಸಿತ್ತು. ಯೆಹೂದ್ಯರು ಅವನನ್ನು ಕೊಲ್ಲಲು ಪ್ರಯತ್ನಿಸಿದಾಗ ಅಂದರೆ ಸಾ.ಶ. 31ರ ಪಸ್ಕ ಹಬ್ಬದ ನಂತರ ಯೇಸುವು ತನ್ನ ಕಾರ್ಯ ಚಟುವಟಿಕೆಯನ್ನು ಅಧಿಕಾಂಶ ಗಲಿಲಾಯಕ್ಕೆ ಸೀಮಿತಗೊಳಿಸಿದ್ದನು. ಅಂದಿನಿಂದ ಯೆಹೂದ್ಯರ ಮೂರು ವಾರ್ಷಿಕ ಹಬ್ಬಗಳಿಗೆ ಹಾಜರಾಗಲು ಮಾತ್ರವೇ ಯೇಸುವು ಯೆರೂಸಲೇಮಿಗೆ ಭೇಟಿಯನ್ನಿತ್ತಿರಬಹುದು.
ಈಗ ಯೇಸುವಿನ ಸಹೋದರರು ಅವನಿಗೆ ಒತ್ತಾಯಿಸುವದು: “ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು.” ಯೆರೂಸಲೇಮ್ ಯೆಹೂದ್ಯರ ಮುಖ್ಯ ಪಟ್ಟಣವಾಗಿತ್ತು ಮತ್ತು ಇಡೀ ದೇಶದ ಧಾರ್ಮಿಕ ಕೇಂದ್ರವಾಗಿತ್ತು. ಅವನ ಸಹೋದರರು ಸಮಾಲೋಚಿಸುವದು: “ಪ್ರಸಿದ್ಧಿಗೆ ಬರಬೇಕೆಂದಿರುವ ಯಾವನಾದರೂ ತಾನು ಮಾಡುವದನ್ನು ಮರೆಯಲ್ಲಿ ಮಾಡುವದಿಲ್ಲವಲ್ಲಾ”
ಯಾಕೋಬ, ಸೀಮೋನ, ಯೋಸೇಫ ಮತ್ತು ಯೂದರು, ತಮ್ಮ ಹಿರಿಯಣ್ಣನಾದ ಯೇಸುವು ನಿಜವಾದ ಮೆಸ್ಸೀಯನೆಂದು ನಂಬುತ್ತಿರಲಿಲ್ಲವಾದರೂ, ಹಬ್ಬಕ್ಕೆ ನೆರೆದು ಬರುವ ಎಲ್ಲರ ಮುಂದೆ ಅವನ ಅದ್ಭುತಕರ ಶಕ್ತಿಯನ್ನು ಅವನು ತೋರಿಸುವಂತೆ ಅವರು ಬಯಸಿದ್ದರು. ಆದಾಗ್ಯೂ, ಯೇಸುವು ಅಪಾಯದ ಅರುಹು ಉಳ್ಳವನಾಗಿದ್ದನು. “ಲೋಕವು ನಿಮ್ಮನ್ನು ಹಗೆ ಮಾಡಲಾರದು,” ಅಂದನು ಅವನು, “ಆದರೆ ನಾನು ಅದರ ಕ್ರಿಯೆಗಳು ಕೆಟ್ಟವುಗಳೆಂದು ಸಾಕ್ಷಿ ಹೇಳುವದರಿಂದ ನನ್ನನ್ನು ಹಗೆ ಮಾಡುತ್ತದೆ.” ಆದುದರಿಂದ ಯೇಸುವು ತನ್ನ ಸಹೋದರರಿಗೆ ಹೇಳುವದು: “ನೀವು ಜಾತ್ರೆಗೆ ಹೋಗಿರಿ; ನಾನು ಈ ಜಾತ್ರೆಗೆ ಈಗ ಹೋಗುವದಿಲ್ಲ.”
ಪರ್ಣಶಾಲೆಗಳ ಹಬ್ಬವು ಏಳು ದಿನಗಳ ಆಚರಣೆಯಾಗಿತ್ತು. ಎಂಟನೆಯ ದಿನದಲ್ಲಿ ಸಾಂಭ್ರಮಿಕ ಚಟುವಟಿಕೆಗಳಿಂದ ಅದು ಮುಕ್ತಾಯಗೊಳ್ಳುತ್ತಿತ್ತು. ಈ ಹಬ್ಬವು ವ್ಯವಸಾಯದ ವರ್ಷದ ಅಂತ್ಯವನ್ನು ತರುತ್ತಿತ್ತು ಮತ್ತು ಇದು ಮಹಾ ಸಂತೋಷ ಪಡುವಿಕೆಯ ಮತ್ತು ಕೃತಜ್ಞತಾ ಸ್ತುತಿಯ ಸಮಯವಾಗಿತ್ತು. ಪ್ರಯಾಣಿಕರ ದೊಡ್ಡ ಗುಂಪಿನೊಂದಿಗೆ ಯೇಸುವಿನ ಸಹೋದರರು ಹಾಜರಾಗಲು ತೆರಳಿದ ಹಲವಾರು ದಿನಗಳ ನಂತರ, ಅವನು ಮತ್ತು ಅವನ ಶಿಷ್ಯರು, ಜನರಿಗೆ ಕಾಣುವಂತೆ ಹೋಗದೆ, ಮರೆಯಾಗಿ ಹೋಗುತ್ತಾರೆ. ಹೆಚ್ಚಿನ ಜನರು ಬಳಸುತ್ತಿದ್ದ ಯೊರ್ದನ್ ನದಿಯ ಪಕ್ಕದ ದಾರಿಯ ಬದಲಾಗಿ, ಅವರು ಸಮಾರ್ಯದ ಮಾರ್ಗದಿಂದ ಹೋಗುತ್ತಾರೆ.
ಒಂದು ಸಮಾರ್ಯದ ಹಳ್ಳಿಯಲ್ಲಿ ಯೇಸುವಿಗೆ ಮತ್ತು ಅವನ ತಂಡಕ್ಕೆ ವಸತಿಯ ಆವಶ್ಯಕತೆ ಇದ್ದುದರಿಂದ, ಅವನು ಸಿದ್ಧತೆಗಳನ್ನು ಮಾಡಲು ದೂತರನ್ನು ಮುಂದಕ್ಕೆ ಕಳುಹಿಸುತ್ತಾನೆ. ಆದರೆ ಜನರು, ಇವನು ಯೆರೂಸಲೇಮಿಗೆ ಹೋಗುವವನೆಂದು ತಿಳಿದುಕೊಂಡ ಬಳಿಕ, ಅವರು ಯೇಸುವಿಗಾಗಿ ಏನನ್ನೂ ಮಾಡಲು ಸಿದ್ಧರಿರಲಿಲ್ಲ. ಕೋಪಗೊಂಡು, ಯಾಕೋಬ ಮತ್ತು ಯೋಹಾನರು ಕೇಳುವದು: “ಸ್ವಾಮೀ, ಆಕಾಶದಿಂದ ಬೆಂಕಿಬಿದ್ದು ಇವರನ್ನು ನಾಶ ಮಾಡಲಿ ಎಂದು ನಾವು ಹೇಳುವದಕ್ಕೆ ನಿನಗೆ ಮನಸ್ಸುಂಟೋ?” ಅಂತಹ ಒಂದು ಸಂಗತಿಯನ್ನು ಸೂಚಿಸಿದ್ದಕ್ಕಾಗಿ ಯೇಸುವು ಅವರನ್ನು ಗದರಿಸುತ್ತಾನೆ, ಮತ್ತು ಅವರು ಬೇರೆ ಹಳ್ಳಿಗೆ ಹೋಗುತ್ತಾರೆ.
ಅವರು ದಾರಿಯಲ್ಲಿ ಹೋಗುತ್ತಿರುವಾಗ, ಒಬ್ಬ ಶಾಸ್ತ್ರಿಯು ಯೇಸುವಿಗೆ ಅಂದದ್ದು: “ನೀನು ಎಲ್ಲಿಗೆ ಹೋದರೂ ನಾನು ನಿನ್ನ ಹಿಂದೆ ಬರುತ್ತೇನೆ.”
“ನರಿಗಳಿಗೆ ಗುದ್ದುಗಳವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳವೆ,” ಎಂದು ಯೇಸುವು ಪ್ರತಿಕ್ರಿಯಿಸುತ್ತಾ ಹೇಳುವದು, “ಆದರೆ ಮನುಷ್ಯ ಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ.” ಆ ಶಾಸ್ತ್ರಿಯು ತನ್ನನ್ನು ಹಿಂಬಾಲಿಸಿದರೆ, ಅವನು ಕಷ್ಟಗಳನ್ನು ಅನುಭವಿಸಬೇಕಾಗುವದು ಎಂದು ಯೇಸುವು ಅವನಿಗೆ ವಿವರಿಸುತ್ತಾನೆ. ಈ ರೀತಿಯ ಜೀವನ ಪದ್ಧತಿಯನ್ನು ಸ್ವೀಕರಿಸದಷ್ಟು ಆ ಶಾಸ್ತ್ರಿಯು ಅಹಂಕಾರಿಯಾಗಿದ್ದನು ಎಂದು ಒಳಾರ್ಥದಿಂದ ಭಾಸವಾಗುತ್ತದೆ.
ಇನ್ನೊಬ್ಬ ಮನುಷ್ಯನಿಗೆ ಯೇಸುವು ಹೇಳುವದು: “ನನ್ನನ್ನು ಹಿಂಬಾಲಿಸು.”
“ನಾನು ಮೊದಲು ಹೋಗಿ ನನ್ನ ತಂದೆಯನ್ನು ದಫನಮಾಡಿ ಬರಲು ಅಪ್ಪಣೆಯಾಗಬೇಕು,” ಎಂದು ಆ ಮನುಷ್ಯನು ಉತ್ತರಿಸುತ್ತಾನೆ.
“ಸತ್ತವರೇ ತಮ್ಮವರಲ್ಲಿ ಸತ್ತವರನ್ನು ದಫನಮಾಡಲಿ,” ಉತ್ತರಿಸುತ್ತಾನೆ ಯೇಸುವು, “ನೀನಂತೂ ಹೋಗಿ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸು.” ಆ ಮನುಷ್ಯನ ತಂದೆಯು ಸತ್ತಿರಲಿಕ್ಕಿಲ್ಲ ಎಂದು ತಿಳಿದು ಬರುತ್ತದೆ, ಯಾಕಂದರೆ ಹಾಗೆ ಅವನು ಸತ್ತಿದ್ದರೆ, ಯೇಸುವನ್ನು ಆಲಿಸಲು ಮಗನು ಅಲ್ಲಿ ಇರುವ ಸಂಭಾವ್ಯತೆಗಳು ಬಹಳ ಕಡಿಮೆ. ಅವನ ತಂದೆಯ ಮರಣಕ್ಕಾಗಿ ಕಾದುನಿಲ್ಲಲು ಸಮಯ ಕೊಡಬೇಕೆಂದು ಮಗನು ಕೇಳುತ್ತಿದ್ದಿರಬಹುದು. ಅವನ ಜೀವಿತದಲ್ಲಿ ದೇವರ ರಾಜ್ಯವನ್ನು ಪ್ರಥಮವಾಗಿ ಇಡಲು ಅವನು ಸಿದ್ಧನಿರಲಿಲ್ಲ.
ಯೆರೂಸಲೇಮಿನ ದಾರಿಯಲ್ಲಿ ಅವರು ಮುಂದೆ ಸಾಗುತ್ತಿರುವಾಗ, ಇನ್ನೊಬ್ಬ ಮನುಷ್ಯನು ಯೇಸುವಿಗೆ ಹೇಳುವದು: “ಸ್ವಾಮೀ, ನಿನ್ನನ್ನು ಹಿಂಬಾಲಿಸುತ್ತೇನೆ, ಆದರೆ ಮೊದಲು ನನ್ನ ಮನೆಯವರಿಗೆ ಹೇಳಿ ಬರುವದಕ್ಕೆ ನನಗೆ ಅಪ್ಪಣೆಯಾಗಬೇಕು.”
ಯೇಸುವು ಉತ್ತರವಾಗಿ ಹೇಳುವದು: “ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನು ಹಾಕಿ ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲ.” ಯೇಸುವಿನ ಶಿಷ್ಯರಾಗಲಿರುವರು ಅವರ ಕಣ್ಣುಗಳನ್ನು ರಾಜ್ಯದ ಸೇವೆಯ ಮೇಲೆ ಕೇಂದ್ರಿಸತಕ್ಕದ್ದು. ನೇರವಾಗಿ ಉಳುವವನು ಮುಂದಕ್ಕೆ ನೋಡದಿದ್ದರೆ, ಉಳುವ ಸಾಲು ಡೊಂಕಾಗುವ ಸಾಧ್ಯತೆ ಇರುವಂತೆಯೇ, ಈ ಹಳೆಯ ವಿಷಯಗಳ ವ್ಯವಸ್ಥೆಯ ಕಡೆಗೆ ಹಿಂದಿರುಗಿ ನೋಡುವ ಯಾವನಾದರೂ, ನಿತ್ಯ ಜೀವಕ್ಕೆ ನಡಿಸುವ ದಾರಿಯಿಂದ ಪಕ್ಕಕ್ಕೆ ಎಡವಿ ಬೀಳಬಹುದು. ಯೋಹಾನ 7:2-10; ಲೂಕ 9:51-62; ಮತ್ತಾಯ 8:19-22.
▪ ಯೇಸುವಿನ ಸಹೋದರರು ಯಾರು, ಮತ್ತು ಅವನ ಕುರಿತು ಅವರ ಭಾವನೆಗಳೇನು?
▪ ಸಮಾರ್ಯದವರು ಅಷ್ಟು ಅಸಭ್ಯರಾಗಿದ್ದರು ಯಾಕೆ, ಮತ್ತು ಯಾಕೋಬ ಮತ್ತು ಯೋಹಾನರು ಏನನ್ನು ಮಾಡಲು ಬಯಸಿದ್ದರು?
▪ ದಾರಿಯಲ್ಲಿ ಯೇಸುವು ಯಾವ ಮೂರು ಸಂಭಾಷಣೆಗಳನ್ನು ಮಾಡಿದನು, ಮತ್ತು ಸ್ವ-ತ್ಯಾಗ ಮಾಡುವ ಸೇವೆಯ ಆವಶ್ಯಕತೆಯನ್ನು ಅವನು ಹೇಗೆ ಒತ್ತಿ ಹೇಳಿದನು?