ಅಧ್ಯಾಯ 74
ಮಾರ್ಥಳಿಗೆ ಬುದ್ಧಿವಾದ, ಮತ್ತು ಪ್ರಾರ್ಥನೆಯ ಮೇಲೆ ಉಪದೇಶ
ಯೇಸುವಿನ ಯೂದಾಯದ ಶುಶ್ರೂಷೆಯ ಸಮಯದಲ್ಲಿ ಅವನು ಬೇಥಾನ್ಯ ಊರನ್ನು ಪ್ರವೇಶಿಸುತ್ತಾನೆ. ಅಲ್ಲಿ ಮಾರ್ಥ, ಮರಿಯ ಮತ್ತು ಅವರ ಸಹೋದರ ಲಾಜರನು ಜೀವಿಸುತ್ತಿದ್ದರು. ಪ್ರಾಯಶಃ ಅವನ ಶುಶ್ರೂಷೆಯ ಆರಂಭದ ಸಮಯದಲ್ಲಿ ಯೇಸುವು ಈ ಮೂವರನ್ನು ಭೇಟಿಯಾಗಿದ್ದಿರಬೇಕು. ಮತ್ತು ಹೀಗೆ, ಈಗಾಗಲೇ ಅವರ ನಿಕಟ ಮಿತ್ರರುಗಳಲ್ಲಿ ಒಬ್ಬನಾಗಿದ್ದನು. ಏನೇ ಇರಲಿ, ಯೇಸುವು ಈಗ ಮಾರ್ಥಳ ಮನೆಗೆ ಹೋದಾಗ, ಅವಳಿಂದ ಸುಸ್ವಾಗತಿಸಲ್ಪಡುತ್ತಾನೆ.
ಮಾರ್ಥಳು ಅವಳಲ್ಲಿದ್ದ ಅತ್ಯುತ್ತಮವಾದವುಗಳಿಂದ ಯೇಸುವನ್ನು ಉಪಚರಿಸಲು ಪ್ರಯತ್ನಿಸುತ್ತಾಳೆ. ವಾಗ್ದಾನಿಸಲ್ಪಟ್ಟ ಮೆಸ್ಸೀಯನು ಒಬ್ಬನ ಮನೆಗೆ ಬರುವದು ಖಂಡಿತವಾಗಿಯೂ ಒಂದು ಗೌರವಾರ್ಹತೆಯದ್ದು! ಆದುದರಿಂದ ಮಾರ್ಥಳು ಒಂದು ದೊಡ್ಡ ಸಡಗರದ ಊಟವನ್ನು ತಯಾರಿಸುವದರಲ್ಲಿ ಮತ್ತು ಯೇಸುವಿನ ಅವರಲ್ಲಿನ ತಂಗುವಿಕೆಯು ಇನ್ನಷ್ಟು ಆಹ್ಲಾದಕರವೂ, ಸಂತೃಪ್ತಿಯದ್ದೂ ಆಗಿರುವಂತೆ ನೋಡಿಕೊಳ್ಳಲು ಅನೇಕ ವಿವರಣೆಗಳನ್ನು ನೋಡಿ ಕೊಳ್ಳುವದರಲ್ಲಿ ಮಗ್ನಳಾಗಿರುತ್ತಾಳೆ.
ಇನ್ನೊಂದು ಪಕ್ಕದಲ್ಲಿ, ಮಾರ್ಥಳ ಸಹೋದರಿ ಮರಿಯಳು ಯೇಸುವಿನ ಪಾದಗಳ ಕೆಳಗೆ ಕುಳಿತುಕೊಂಡು, ಅವನನ್ನು ಆಲಿಸುತ್ತಾ ಇದ್ದಾಳೆ. ಸ್ವಲ್ಪ ಸಮಯದ ನಂತರ, ಮಾರ್ಥಳು ಯೇಸುವನ್ನು ಸಮೀಪಿಸಿ, ಹೇಳುವದು: “ಸ್ವಾಮೀ, ನನ್ನ ತಂಗಿಯು ಸೇವೆಗೆ ನನ್ನೊಬ್ಬಳನ್ನೇ ಬಿಟ್ಟಿದ್ದಾಳೆ, ಇದಕ್ಕೆ ನಿನಗೆ ಚಿಂತೆಯಿಲ್ಲವೋ? ನನಗೆ ನೆರವಾಗಬೇಕೆಂದು ಆಕೆಗೆ ಹೇಳು.”
ಆದರೆ ಮರಿಯಳಿಗೆ ಏನನ್ನೂ ಹೇಳಲು ಯೇಸುವು ನಿರಾಕರಿಸುತ್ತಾನೆ. ಬದಲಿಗೆ, ಪ್ರಾಪಂಚಿಕ ವಿಷಯಗಳ ಕಡೆಗೆ ಅತಿರೇಕ ಚಿಂತೆಯುಳ್ಳವಳಾದ ಮಾರ್ಥಳಿಗೆ ಅವನು ಬುದ್ಧಿವಾದವನ್ನೀಯುವದು: “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯವಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀ. ಕೆಲವು ಮಾತ್ರ ಬೇಕಾದದ್ದು, ಅಥವಾ, ಒಂದೇ.” ಒಂದು ಊಟಕ್ಕೋಸ್ಕರ ಅನೇಕ ಬಗೆಬಗೆಯ ಖಾದ್ಯಗಳನ್ನು ತಯಾರಿಸಲು ತುಂಬಾ ಸಮಯವನ್ನು ವ್ಯಯಿಸುವದರ ಜರೂರಿಯೇನೂ ಇಲ್ಲ ಎಂದು ಯೇಸುವು ಹೇಳುತ್ತಾನೆ. ಕೇವಲ ಕೆಲವೇ ಯಾ ಕೇವಲ ಒಂದು ಮಾತ್ರ ಸಾಕಾಗುತ್ತಿತ್ತು.
ಮಾರ್ಥಳ ಉದ್ದೇಶಗಳೇನೋ ಉತ್ತಮವಾಗಿದ್ದವು; ಅವಳು ಒಂದು ಸತ್ಕಾರಮಾಡುವ ಆತಿಥೇಯಳಾಗಿರಲು ಬಯಸಿದಳು. ಆದರೂ, ಪ್ರಾಪಂಚಿಕ ಒದಗಿಸುವಿಕೆಗಳಿಗೆ ಅವಳ ಚಿಂತಾಪೂರಕವಾದ ಗಮನ ಕೊಡುವಿಕೆಯಿಂದ, ದೇವರ ಸ್ವಂತ ಮಗನ ಮೂಲಕ ವ್ಯಕ್ತಿಗತ ಉಪದೇಶವನ್ನು ಪಡೆಯುವ ಸಂದರ್ಭವನ್ನು ಅವಳು ಕಳೆದುಕೊಳ್ಳುತ್ತಾ ಇದ್ದಳು! ಆದುದರಿಂದ ಯೇಸುವು ಸಮಾಪ್ತಿಗೊಳಿಸಿದ್ದು: “ಮರಿಯಳು [ಅವಳ ವತಿಯಿಂದ] ಉತ್ತಮ ಭಾಗವನ್ನೇ ಆರಿಸಿಕೊಂಡಿದ್ದಾಳೆ; ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ.”
ತದನಂತರ, ಇನ್ನೊಂದು ಸಂದರ್ಭದಲ್ಲಿ ಒಬ್ಬ ಶಿಷ್ಯನು ಯೇಸುವನ್ನು ಕೇಳುವದು: “ಸ್ವಾಮೀ, ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆ ನಮಗೂ ಪ್ರಾರ್ಥನೆ ಮಾಡುವದನ್ನು ಕಲಿಸು.” ಸುಮಾರು ಒಂದೂವರೆ ವರ್ಷದ ಮೊದಲು ಯೇಸುವು ಒಂದು ಮಾದರಿ ಪ್ರಾರ್ಥನೆಯು ಒಳಗೂಡಿರುವ ತನ್ನ ಪರ್ವತ ಪ್ರಸಂಗವನ್ನು ನೀಡಿದಾಗ ಈ ಶಿಷ್ಯನು ಹಾಜರಿರಲಿಲ್ಲದಿರಬಹುದು. ಆದುದರಿಂದ ಯೇಸುವು ತನ್ನ ಉಪದೇಶಗಳನ್ನು ಪುನರಾವರ್ತಿಸುತ್ತಾನೆ ಆದರೆ ಪ್ರಾರ್ಥನೆಯಲ್ಲಿ ನಿರತರಾಗಿರುವ ಆವಶ್ಯಕತೆಯನ್ನು ಒತ್ತಿಹೇಳಲು ಅವನು ಒಂದು ಉದಾಹರಣೆಯನ್ನು ಹೇಳುತ್ತಾ ಮುಂದುವರಿಸುತ್ತಾನೆ.
“ನಿಮ್ಮಲ್ಲಿ ಒಬ್ಬನಿಗೆ ಸ್ನೇಹಿತನಿದ್ದಾನೆ ಎಂದು ಹೇಳೋಣ,” ಯೇಸುವು ಆರಂಭಿಸುತ್ತಾನೆ, “ಅವನು ಸರುಹೊತ್ತಿನಲ್ಲಿ ಆ ಸ್ನೇಹಿತನ ಬಳಿಗೆ ಹೋಗಿ—ಸ್ನೇಹಿತನೇ, ನನಗೆ ಮೂರು ರೊಟ್ಟಿಗಳನ್ನು ಕಡವಾಗಿ ಕೊಡು. ನನ್ನ ಸ್ನೇಹಿತರಲ್ಲಿ ಒಬ್ಬನು ಎಲ್ಲಿಗೋ ಪ್ರಯಾಣವಾಗಿ ಬಂದಿದ್ದಾನೆ; ಅವನಿಗೆ ಊಟಮಾಡಿಸುವದಕ್ಕೆ ನನ್ನಲ್ಲಿ ಏನೂ ಇಲ್ಲ ಎಂದು ಕೇಳಲು ಆ ಸ್ನೇಹಿತನು—ನನಗೆ ತೊಂದರೆ ಕೊಡಬೇಡ; ಈಗ ಕದಾಹಾಕಿ ಅದೆ; ನನ್ನ ಚಿಕ್ಕ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ನಿನಗೆ ಕೊಡುವದಕ್ಕಾಗುವದಿಲ್ಲ ಎಂದು ಒಳಗಿನಿಂದ ಉತ್ತರ ಕೊಟ್ಟರೂ ಕೊಡಬಹುದು. ಆದರೆ ಸ್ನೇಹದ ನಿಮಿತ್ತವಾಗಿ ಎದ್ದು ಕೊಡದೆ ಇದ್ದರೂ ಅವನ ಕಾಟದ ದೆಸೆಯಿಂದ ಎದ್ದು ಬಂದು ಕೇಳಿದಷ್ಟು ಅವನಿಗೆ ಕೊಡುವನೆಂದು ನಿಮಗೆ ಹೇಳುತ್ತೇನೆ.”
ಅವನ ಕಥನದಲ್ಲಿನ ಸ್ನೇಹಿತನು ಮಾಡಿದಂತೆ, ಮಾಡಿದ ಭಿನ್ನಹಗಳಿಗೆ ಯೆಹೋವ ದೇವರು ಪ್ರತಿವರ್ತಿಸಲು ಇಚ್ಚೆಯಿಲ್ಲದವನು ಎಂದು ಯೇಸುವು ಈ ತುಲನೆಯ ಮೂಲಕ ಹೇಳುತ್ತಾನೆಂಬರ್ಥವಲ್ಲ. ಇಲ್ಲ, ಬದಲು ಪಟ್ಟು ಹಿಡಿದು ಮಾಡಿದ ವಿನಂತಿಗಳಿಗೆ ಒಬ್ಬ ಇಚ್ಛೆಯಿಲ್ಲದ ಸ್ನೇಹಿತನು ಪ್ರತಿವರ್ತಿಸುವುದಾದರೆ, ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ಎಷ್ಟೊಂದು ಹೆಚ್ಚಾಗಿ ಇದನ್ನು ಮಾಡುವನು! ಆದುದರಿಂದ ಯೇಸುವು ಮುಂದರಿಸುವದು: “ಹಾಗೆಯೇ ನಾನು ನಿಮಗೆ ಹೇಳುವದೇನಂದರೆ—ಬೇಡಿಕೊಳ್ಳುತ್ತಾ ಇರ್ರಿ, ನಿಮಗೆ ದೊರೆಯುವದು; ಹುಡುಕುತ್ತಾ ಇರ್ರಿ, ನಿಮಗೆ ಸಿಕ್ಕುವದು; ತಟ್ಟುತ್ತಾ ಇರ್ರಿ, ನಿಮಗೆ ತೆರೆಯುವದು. ಯಾಕಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವದು, ತಟ್ಟುವವನಿಗೆ ತೆರೆಯುವದು.”
ಯೇಸುವು ಅನಂತರ, ಅಪರಿಪೂರ್ಣ, ಪಾಪಭರಿತ ಮಾನವ ತಂದೆಗಳನ್ನು ಉಲ್ಲೇಖಿಸುತ್ತಾ, ಮಾತಾಡುತ್ತಾನೆ: “ನಿಮ್ಮಲ್ಲಿ ತಂದೆಯಾದವನು ಮೀನನ್ನು ಕೇಳುವ ಮಗನಿಗೆ ಮೀನು ಕೊಡದೆ ಹಾವನ್ನು ಕೊಡುವನೇ? ಅಥವಾ ತತ್ತಿಯನ್ನು ಕೇಳಿದರೆ ಚೇಳನ್ನು ಕೊಡುವನೇ? ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮ ವರವನ್ನು ಕೊಡುವನಲ್ಲವೇ!” ನಿಜವಾಗಿಯೂ, ಪ್ರಾರ್ಥನೆಯಲ್ಲಿ ನಿರತರಾಗಿರುವದಕ್ಕಾಗಿ ಯೇಸುವು ಎಂಥಹ ಪ್ರೇರಕ ಪ್ರೋತ್ಸಾಹನೆಯನ್ನು ಒದಗಿಸಿರುತ್ತಾನೆ. ಲೂಕ 10:38–11:13.
▪ ಯೇಸುವಿಗೆ ಅಷ್ಟೊಂದು ಸಂಭ್ರಮದ ತಯಾರಿಯನ್ನು ಮಾರ್ಥಳು ಮಾಡಲು ಹೋದದ್ದು ಯಾಕೆ?
▪ ಮರಿಯಳು ಏನು ಮಾಡಿದಳು, ಮತ್ತು ಮಾರ್ಥಳ ಬದಲು ಅವಳನ್ನು ಯೇಸುವು ಶ್ಲಾಘಿಸಿದ್ದು ಯಾಕೆ?
▪ ಪ್ರಾರ್ಥನೆಗಳ ಮೇಲೆ ಉಪದೇಶಗಳನ್ನು ಪುನರಾವರ್ತಿಸಲು ಯೇಸುವನ್ನು ಪ್ರೇರಿಸಿದ್ದು ಯಾವದು?
▪ ಪ್ರಾರ್ಥನೆಯಲ್ಲಿ ನಿರತರಾಗಿರುವದರ ಆವಶ್ಯಕತೆಯನ್ನು ಯೇಸುವು ಹೇಗೆ ಉದಾಹರಿಸುತ್ತಾನೆ?