ನೀವು ನಿಮ್ಮ ಜ್ಞಾಪಕಶಕ್ತಿಯನ್ನು ಉತ್ತಮಗೊಳಿಸಿಕೊಳ್ಳಬಲ್ಲಿರಿ
ಯೆಹೋವ ದೇವರು ಮಾನವ ಮಿದುಳನ್ನು ಅದ್ಭುತಕರವಾದ ಜ್ಞಾಪಿಸಿಕೊಳ್ಳುವ ಸಾಮರ್ಥ್ಯವುಳ್ಳದ್ದಾಗಿ ಸೃಷ್ಟಿಸಿದನು. ಅದರಲ್ಲಿ ಹಾಕಲ್ಪಟ್ಟಿರುವ ಅಮೂಲ್ಯ ವಸ್ತುಗಳನ್ನು ಹೀರಿ ತೆಗೆದರೂ ಏನೂ ನಷ್ಟವಾಗದೆ ಇರುವ ಒಂದು ಭಂಡಾರವಾಗಿರುವಂತೆ ಅದನ್ನು ಆತನು ರಚಿಸಿದನು. ಮಿದುಳಿನ ರಚನೆಯು, ಮಾನವರು ಸದಾಕಾಲ ಜೀವಿಸಬೇಕು ಎಂಬ ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿದೆ.—ಕೀರ್ತ. 139:14; ಯೋಹಾ. 17:3.
ಆದರೆ ನಿಮ್ಮ ಮನಸ್ಸಿನೊಳಗೆ ಹೋಗುವ ವಿಷಯಗಳಲ್ಲಿ ಹೆಚ್ಚಿನಾಂಶವು ನಷ್ಟವಾಗಿ ಹೋಗುತ್ತದೆಂದು ನಿಮಗನಿಸಬಹುದು. ನಿಮಗೆ ಬೇಕಾಗುವಾಗ ಅದು ಅಲ್ಲಿರದಂತೆ ತೋರಬಹುದು. ಹಾಗಾದರೆ ನಿಮ್ಮ ಜ್ಞಾಪಕಶಕ್ತಿಯನ್ನು ನೀವು ಹೇಗೆ ಉತ್ತಮಗೊಳಿಸಿಕೊಳ್ಳಬಲ್ಲಿರಿ?
ಆಸಕ್ತಿ ವಹಿಸಿರಿ
ಜ್ಞಾಪಕಶಕ್ತಿಯನ್ನು ಉತ್ತಮಗೊಳಿಸುವುದರಲ್ಲಿ ಒಂದು ಪ್ರಾಮುಖ್ಯ ಅಂಶವು ಆಸಕ್ತಿಯಾಗಿದೆ. ನಾವು ಅವಲೋಕಿಸುವುದನ್ನು, ಜನರಲ್ಲಿ ಮತ್ತು ನಮ್ಮ ಸುತ್ತಲೂ ನಡೆಯುತ್ತಿರುವ ವಿಷಯಗಳಲ್ಲಿ ಆಸಕ್ತಿ ವಹಿಸುವುದನ್ನು ರೂಢಿಯಾಗಿ ಮಾಡಿಕೊಳ್ಳುವುದಾದರೆ, ನಮ್ಮ ಮನಸ್ಸು ಉತ್ತೇಜನಗೊಳ್ಳುತ್ತದೆ. ಹಾಗೆ ಮಾಡುವಲ್ಲಿ, ನಾವು ಓದುವಾಗ ಇಲ್ಲವೆ ಶಾಶ್ವತ ಮೌಲ್ಯವುಳ್ಳ ಯಾವ ವಿಷಯವನ್ನಾದರೂ ಆಲಿಸುವಾಗ ತದ್ರೀತಿಯ ಆಸಕ್ತಿಯಿಂದ ಪ್ರತಿವರ್ತನೆ ತೋರಿಸಲು ನಮಗೆ ಸುಲಭವಾಗುವುದು.
ಒಬ್ಬನಿಗೆ ಜನರ ಹೆಸರುಗಳನ್ನು ಜ್ಞಾಪಿಸಿಕೊಳ್ಳಲು ಕಷ್ಟವಾಗುವುದು ಅಸಾಮಾನ್ಯ ವಿಷಯವೇನಲ್ಲ. ಆದರೂ, ಕ್ರೈಸ್ತರಾಗಿರುವ ನಮಗೆ, ಜೊತೆ ಕ್ರೈಸ್ತರು, ನಾವು ಯಾರಿಗೆ ಸಾಕ್ಷಿಯನ್ನು ಕೊಡುತ್ತೇವೊ ಅವರು ಮತ್ತು ಜೀವನದ ಅಗತ್ಯಗಳಿಗಾಗಿ ನಾವು ಯಾರೊಂದಿಗೆ ವ್ಯವಹರಿಸುತ್ತೇವೊ ಅವರು ಪ್ರಾಮುಖ್ಯರಾಗಿದ್ದಾರೆಂಬುದು ತಿಳಿದಿದೆ. ನಮಗೆ ನಿಜವಾಗಿಯೂ ನೆನಪಿರಬೇಕಾದವರ ಹೆಸರುಗಳನ್ನು ಜ್ಞಾಪಿಸಿಕೊಳ್ಳಲು ಯಾವುದು ಸಹಾಯಮಾಡಬಲ್ಲದು? ಅಪೊಸ್ತಲ ಪೌಲನು ಒಂದು ಸಭೆಗೆ ಪತ್ರವನ್ನು ಬರೆದಾಗ, 26 ಮಂದಿಯ ಹೆಸರುಗಳನ್ನು ಪಟ್ಟಿಮಾಡಿದನು. ಅವನಿಗೆ ಅವರಲ್ಲಿ ಆಸಕ್ತಿಯಿತ್ತೆಂಬುದು ಅವನಿಗೆ ಕೇವಲ ಅವರ ಹೆಸರುಗಳು ಗೊತ್ತಿದ್ದವೆಂಬುದರಿಂದ ಮಾತ್ರವಲ್ಲ, ಅವರಲ್ಲಿ ಅನೇಕರ ಕುರಿತು ತಿಳಿಸಿದ ನಿರ್ದಿಷ್ಟ ವಿವರಗಳಿಂದಲೂ ಸೂಚಿಸಲ್ಪಡುತ್ತದೆ. (ರೋಮಾ. 16:3-16) ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಸಂಚರಣ ಮೇಲ್ವಿಚಾರಕರಲ್ಲಿ ಕೆಲವರು, ಪ್ರತಿ ವಾರ ಒಂದು ಸಭೆಯಿಂದ ಇನ್ನೊಂದು ಸಭೆಗೆ ಹೋಗುತ್ತಾರಾದರೂ, ಅವರು ಹೆಸರುಗಳನ್ನು ಜ್ಞಾಪಿಸಿಕೊಳ್ಳುವುದರಲ್ಲಿ ಸಮರ್ಥರಾಗಿದ್ದಾರೆ. ಅವರಿಗೆ ಯಾವುದು ಸಹಾಯಮಾಡುತ್ತದೆ? ಅವರು ಮೊತ್ತಮೊದಲ ಬಾರಿ ಒಟ್ಟುಗೂಡಿ ಮಾತಾಡುವಾಗ, ಇನ್ನೊಬ್ಬ ವ್ಯಕ್ತಿಯ ಹೆಸರನ್ನು ಅನೇಕ ಬಾರಿ ಉಪಯೋಗಿಸಿ ಮಾತಾಡುವುದನ್ನು ರೂಢಿ ಮಾಡಿಕೊಳ್ಳಬಹುದು. ಆ ವ್ಯಕ್ತಿಯ ಹೆಸರನ್ನು ಅವನ ಮುಖದೊಂದಿಗೆ ಜೋಡಿಸಲು ಅವರು ಪ್ರಯತ್ನಿಸುತ್ತಾರೆ. ಇದಕ್ಕೆ ಕೂಡಿಸಿ, ಕ್ಷೇತ್ರ ಶುಶ್ರೂಷೆಯಲ್ಲಿಯೂ ಒಟ್ಟುಗೂಡಿ ಊಟಮಾಡುವಾಗಲೂ ಅವರು ಬೇರೆ ಬೇರೆ ವ್ಯಕ್ತಿಗಳೊಂದಿಗೆ ಕಾಲಕಳೆಯುತ್ತಾರೆ. ನೀವು ಯಾರನ್ನಾದರೂ ಭೇಟಿಯಾಗುವಾಗ, ಅವರ ಹೆಸರು ನಿಮಗೆ ಜ್ಞಾಪಕಕ್ಕೆ ಬಂದೀತೊ? ಆ ಹೆಸರನ್ನು ಜ್ಞಾಪಿಸಿಕೊಳ್ಳಲು ಒಂದು ಒಳ್ಳೇ ಕಾರಣವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದರೊಂದಿಗೆ ಆರಂಭಿಸಿರಿ; ಬಳಿಕ ಮೇಲ್ಕಂಡ ಕೆಲವು ಸಲಹೆಗಳನ್ನು ಕಾರ್ಯರೂಪಕ್ಕೆ ಹಾಕಿರಿ.
ನೀವು ಓದುವ ವಿಷಯವನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದೂ ಪ್ರಾಮುಖ್ಯವಾಗಿದೆ. ಈ ವಿಷಯದಲ್ಲಿ ಉತ್ತಮಗೊಳ್ಳಲು ನಿಮಗೆ ಯಾವುದು ಸಹಾಯಮಾಡೀತು? ಆಸಕ್ತಿಯೂ ಅರ್ಥಗ್ರಹಣಶಕ್ತಿಯೂ ಇದರಲ್ಲಿ ಪಾತ್ರ ವಹಿಸುತ್ತದೆ. ನೀವು ಓದುತ್ತಿರುವ ವಿಷಯಕ್ಕೆ ಪೂರ್ತಿ ಗಮನ ಕೊಡಬೇಕಾದರೆ, ಅದರಲ್ಲಿ ಸಾಕಷ್ಟು ಆಸಕ್ತಿಯಿರುವುದು ಅತ್ಯಗತ್ಯ. ನೀವು ಓದಲು ಪ್ರಯತ್ನಿಸುವಾಗ ನಿಮ್ಮ ಮನಸ್ಸು ಇನ್ನೆಲ್ಲಿಯೊ ಇರುವಲ್ಲಿ ನೀವು ಆ ವಿಷಯವನ್ನು ಜ್ಞಾಪಕದಲ್ಲಿಟ್ಟುಕೊಳ್ಳಲಾರಿರಿ. ಮಾಹಿತಿಯನ್ನು ನಿಮಗೆ ಪರಿಚಿತವಾಗಿರುವ ವಿಷಯಗಳಿಗೆ ಅಥವಾ ನಿಮಗೆ ಈಗಾಗಲೇ ಇರುವ ಜ್ಞಾನಕ್ಕೆ ಸಂಬಂಧಿಸುವಲ್ಲಿ, ಅರ್ಥಗ್ರಹಣಶಕ್ತಿಯೂ ಹೆಚ್ಚುವುದು. ಸ್ವತಃ ಹೀಗೆ ಕೇಳಿಕೊಳ್ಳಿರಿ: ‘ನನ್ನ ಸ್ವಂತ ಜೀವನದಲ್ಲಿ ಈ ಮಾಹಿತಿಯನ್ನು ನಾನು ಹೇಗೆ ಮತ್ತು ಯಾವಾಗ ಅನ್ವಯಿಸಿಕೊಳ್ಳಬಲ್ಲೆ? ಇನ್ನೊಬ್ಬರಿಗೆ ಸಹಾಯಮಾಡಲು ನಾನು ಇದನ್ನು ಹೇಗೆ ಉಪಯೋಗಿಸಬಲ್ಲೆ?’ ಒಂದೊಂದು ಪದದ ಬದಲಾಗಿ ಇಡೀ ಪದಗುಚ್ಛವನ್ನು ಓದುವಲ್ಲಿ ಸಹ ಅರ್ಥಗ್ರಹಣಶಕ್ತಿಯು ಉತ್ತಮಗೊಳ್ಳುತ್ತದೆ. ಆಗ ನೀವು ಹೆಚ್ಚು ಅನಾಯಾಸವಾಗಿ ವಿಚಾರಗಳನ್ನು ಗ್ರಹಿಸಿ, ಮುಖ್ಯ ಆಲೋಚನೆಗಳನ್ನು ಗುರುತಿಸುವಿರಿ. ಇದರಿಂದ ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಹೆಚ್ಚು ಸುಲಭವಾಗುತ್ತದೆ.
ಪುನರ್ವಿಮರ್ಶೆಗೆ ಸಮಯ ತೆಗೆದುಕೊಳ್ಳಿ
ಶಿಕ್ಷಣ ಕ್ಷೇತ್ರದಲ್ಲಿ ಪರಿಣತರಾಗಿರುವವರು, ಪುನರ್ವಿಮರ್ಶೆಯ ಮಹತ್ವವನ್ನು ಒತ್ತಿಹೇಳುತ್ತಾರೆ. ವಿಷಯವನ್ನು ಕೇಳಿಸಿಕೊಂಡ ಕೂಡಲೆ ಪುನರ್ವಿಮರ್ಶೆಗಾಗಿ ಕಳೆಯುವ ಒಂದು ನಿಮಿಷವು, ಉಳಿಸಿಕೊಂಡಿರುವ ಮಾಹಿತಿಯ ಪ್ರಮಾಣವನ್ನು ಇಮ್ಮಡಿಸುವುದೆಂದು ಕಾಲೆಜ್ ಪ್ರೊಫೆಸರರೊಬ್ಬರು ಒಂದು ಅಧ್ಯಯನದಲ್ಲಿ ತೋರಿಸಿಕೊಟ್ಟರು. ಆದುದರಿಂದ, ನೀವು ನಿಮ್ಮ ವಾಚನವನ್ನು ಮುಗಿಸಿದ ಬಳಿಕ ಅಥವಾ ಅದರ ಹೆಚ್ಚಿನ ಭಾಗವನ್ನು ಓದಿ ಮುಗಿಸಿದೊಡನೆ, ಮುಖ್ಯ ವಿಚಾರಗಳನ್ನು ಮನಸ್ಸಿನಲ್ಲಿ ಅಚ್ಚೊತ್ತಲಿಕ್ಕಾಗಿ ಅವುಗಳನ್ನು ಮಾನಸಿಕವಾಗಿ ಪುನರ್ವಿಮರ್ಶಿಸಿರಿ. ನೀವು ಕಲಿತ ಹೊಸ ವಿಷಯಗಳನ್ನು ನಿಮ್ಮ ಸ್ವಂತ ಮಾತುಗಳಲ್ಲಿ ಹೇಗೆ ವಿವರಿಸುವಿರಿ ಎಂಬುದರ ಕುರಿತು ಯೋಚಿಸಿರಿ. ಒಂದು ವಿಚಾರವನ್ನು ಓದಿದ ಕೂಡಲೆ ನಿಮ್ಮ ಜ್ಞಾಪಕಶಕ್ತಿಯನ್ನು ಚುರುಕುಗೊಳಿಸುವ ಮೂಲಕ, ಆ ವಿಷಯವನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳುವ ಸಮಯಾವಧಿಯನ್ನು ನೀವು ಲಂಬಿಸುವಿರಿ.
ತದನಂತರ, ಮುಂದಿನ ಕೆಲವು ದಿನಗಳಲ್ಲಿ ಆ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ, ನೀವು ಓದಿರುವ ವಿಷಯವನ್ನು ಪುನರ್ವಿಮರ್ಶಿಸುವ ಸಂದರ್ಭಕ್ಕಾಗಿ ಹುಡುಕಿರಿ. ಇದನ್ನು ಕುಟುಂಬದ ಸದಸ್ಯನೊಬ್ಬನೊಂದಿಗಾಗಲಿ, ಸಭೆಯಲ್ಲಿನ ಒಬ್ಬ ವ್ಯಕ್ತಿಯೊಂದಿಗಾಗಲಿ, ಜೊತೆಕಾರ್ಮಿಕನೊಂದಿಗಾಗಲಿ, ಸಹಪಾಠಿಯೊಂದಿಗಾಗಲಿ, ನೆರೆಯವನೊಂದಿಗಾಗಲಿ, ಇಲ್ಲವೆ ಕ್ಷೇತ್ರ ಸೇವೆಯಲ್ಲಿ ನೀವು ಭೇಟಿಯಾಗುವವನೊಂದಿಗಾಗಲಿ ಪುನರ್ವಿಮರ್ಶಿಸಬಹುದು. ಮುಖ್ಯ ವಿಷಯಗಳನ್ನು ಮಾತ್ರವಲ್ಲ, ಅವುಗಳ ಸಂಬಂಧದಲ್ಲಿ ಉಪಯೋಗಿಸಲ್ಪಟ್ಟ ಶಾಸ್ತ್ರೀಯ ತರ್ಕಗಳನ್ನೂ ಪುನರಾವರ್ತಿಸಲು ಪ್ರಯತ್ನಿಸಿರಿ. ಇದು ನಿಮ್ಮ ಸ್ಮರಣೆಯಲ್ಲಿ ಪ್ರಾಮುಖ್ಯ ವಿಷಯಗಳನ್ನು ಅಚ್ಚೊತ್ತಲು ಸಹಾಯಮಾಡುತ್ತಾ ನಿಮಗೆ ಪ್ರಯೋಜನಕಾರಿಯಾಗಿರುವುದು ಮಾತ್ರವಲ್ಲ, ಇತರರಿಗೂ ಪ್ರಯೋಜನಕಾರಿಯಾಗುವುದು.
ಪ್ರಾಮುಖ್ಯ ವಿಷಯಗಳನ್ನು ಮನನಮಾಡಿರಿ
ನೀವು ಓದಿರುವ ವಿಷಯವನ್ನು ಪುನರ್ವಿಮರ್ಶಿಸಿ ಅದರ ಕುರಿತು ಇತರರಿಗೆ ಹೇಳುವುದಲ್ಲದೆ, ಕಲಿತಿರುವಂಥ ಪ್ರಾಮುಖ್ಯ ವಿಷಯಗಳನ್ನು ಮನನಮಾಡುವುದು ಲಾಭದಾಯಕವೆಂದು ನೀವು ಕಂಡುಕೊಳ್ಳುವಿರಿ. ಬೈಬಲ್ ಲೇಖಕರಾದ ಆಸಾಫ ಮತ್ತು ದಾವೀದರು ಹಾಗೆಯೇ ಮಾಡಿದರು. ಆಸಾಫನು ಹೇಳಿದ್ದು: “ಯೆಹೋವನ ಕೃತ್ಯಗಳನ್ನು ವರ್ಣಿಸುವೆನು; ಪೂರ್ವದಿಂದ ನೀನು ನಡಿಸಿದ ಅದ್ಭುತಗಳನ್ನು ನೆನಪು ಮಾಡಿಕೊಳ್ಳುವೆನು. ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು.” (ಕೀರ್ತ. 77:11, 12) ತದ್ರೀತಿಯಲ್ಲಿ ದಾವೀದನೂ ಬರೆದುದು: “ರಾತ್ರಿಯ ಜಾವಗಳಲ್ಲಿ ನಿನ್ನನ್ನು ಧ್ಯಾನಿಸುತ್ತಿರುವೆನು” ಮತ್ತು “ಹಳೇ ದಿನಗಳನ್ನು ನೆನಸಿಕೊಳ್ಳುತ್ತೇನೆ; ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ.” (ಕೀರ್ತ. 63:6; 143:5) ನೀವು ಹಾಗೆ ಮಾಡುತ್ತೀರೊ?
ಯೆಹೋವನ ಕಾರ್ಯಗಳು, ಆತನ ಗುಣಗಳು ಮತ್ತು ಆತನ ಉದ್ದೇಶದ ಹೇಳಿಕೆಗಳ ಕುರಿತು ಮನನಮಾಡುವುದರಲ್ಲಿ ಅಷ್ಟು ಆಳವಾದ, ಕೇಂದ್ರೀಕೃತ ಆಲೋಚಿಸುವಿಕೆಯು, ನೀವು ನಿಜತ್ವಗಳನ್ನು ಮನಸ್ಸಿನಲ್ಲಿ ಉಳಿಸಿಕೊಳ್ಳಲು ಸಹಾಯಮಾಡುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡುತ್ತದೆ. ಈ ರೀತಿಯ ಆಲೋಚಿಸುವಿಕೆಯನ್ನು ನೀವು ರೂಢಿಯಾಗಿ ಮಾಡಿಕೊಳ್ಳುವುದಾದರೆ, ಅದು ನಿಮ್ಮ ಹೃದಯದಲ್ಲಿ ನಿಜವಾಗಿಯೂ ಮಹತ್ವವುಳ್ಳ ವಿಷಯಗಳನ್ನು ನಾಟಿಸುವುದು. ಅದು ನಿಮ್ಮ ಆಂತರಿಕ ವ್ಯಕ್ತಿತ್ವವನ್ನು ರೂಪಿಸುವುದು. ಮಾಡಲ್ಪಡುವ ನೆನಪುಗಳು ಮೇಲ್ಮೈಯವುಗಳಾಗಿರದೆ, ನಿಮ್ಮ ಅಂತರಾಳದ ಯೋಚನೆಗಳನ್ನು ಪ್ರತಿನಿಧಿಸುವವು.—ಕೀರ್ತ. 119:16.
ದೇವರಾತ್ಮದ ಪಾತ್ರ
ಯೆಹೋವನ ಕಾರ್ಯಗಳ ಕುರಿತಾದ ಸತ್ಯಗಳನ್ನು ಮತ್ತು ಯೇಸು ಕ್ರಿಸ್ತನು ಹೇಳಿದ ಮಾತುಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಪ್ರಯತ್ನಿಸುವಾಗ, ನಾವು ನಮ್ಮ ಮೇಲೆಯೇ ಆತುಕೊಳ್ಳಬೇಕಾಗಿಲ್ಲ. ತನ್ನ ಮರಣಕ್ಕೆ ಮುಂಚಿನ ರಾತ್ರಿ, ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ಈ ಮಾತುಗಳನ್ನು ನಾನು ಇನ್ನೂ ನಿಮ್ಮ ಬಳಿಯಲ್ಲಿರುವಾಗ ನಿಮಗೆ ಹೇಳಿದ್ದೇನೆ. ಆದರೆ ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು.” (ಯೋಹಾ. 14:25, 26) ಆಗ ಅಲ್ಲಿದ್ದವರ ನಡುವೆ ಮತ್ತಾಯ ಮತ್ತು ಯೋಹಾನರು ಸಹ ಇದ್ದರು. ಅವರಿಗೆ ಪವಿತ್ರಾತ್ಮವು ಅಂತಹ ಸಹಾಯಕವಾಗಿ ಪರಿಣಮಿಸಿತೊ? ಹೌದು, ನಿಶ್ಚಯವಾಗಿಯೂ! ಸುಮಾರು ಎಂಟು ವರ್ಷಗಳಾನಂತರ, ಮತ್ತಾಯನು ಕ್ರಿಸ್ತನ ಜೀವನದ ಕುರಿತಾದ ಪ್ರಥಮ ಸವಿವರವಾದ ವೃತ್ತಾಂತವನ್ನು ಬರೆದು ಮುಗಿಸಿದನು. ಇದರಲ್ಲಿ ಪರ್ವತ ಪ್ರಸಂಗ ಮತ್ತು ಕ್ರಿಸ್ತನ ಸಾನ್ನಿಧ್ಯ ಹಾಗೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸವಿವರವಾದ ಸೂಚನೆಯಂಥ ಅಮೂಲ್ಯವಾದ ನೆನಪುಗಳು ಸೇರಿದ್ದವು. ಯೇಸುವಿನ ಮರಣಾನಂತರ ಅರುವತ್ತೈದು ವರುಷಗಳಾದ ಬಳಿಕ ಅಪೊಸ್ತಲ ಯೋಹಾನನು ತನ್ನ ಸುವಾರ್ತೆಯನ್ನು ಬರೆದನು. ಕರ್ತನು ತನ್ನ ಜೀವವನ್ನು ಅರ್ಪಿಸುವ ಮುಂಚೆ ಅಪೊಸ್ತಲರು ಅವನೊಂದಿಗೆ ಕಳೆದ ಆ ಕೊನೆಯ ರಾತ್ರಿಯಲ್ಲಿ ಯೇಸು ಅವರಿಗೆ ಹೇಳಿದ ಸಂಗತಿಗಳ ವಿವರಗಳೂ ಅದರಲ್ಲಿದ್ದವು. ಯೇಸು ತಮ್ಮೊಂದಿಗಿದ್ದಾಗ ಅವನು ಹೇಳಿದ್ದ ಹಾಗೂ ಮಾಡಿದ್ದ ವಿಷಯಗಳ ಸವಿವರವಾದ ನೆನಪುಗಳು ಮತ್ತಾಯ ಮತ್ತು ಯೋಹಾನರಿಬ್ಬರಿಗೂ ಇದ್ದವೆಂಬುದರ ಕುರಿತಾಗಿ ಯಾವುದೇ ಸಂದೇಹವಿರದಿದ್ದರೂ, ಯೆಹೋವನು ತನ್ನ ಲಿಖಿತ ವಾಕ್ಯದಲ್ಲಿ ಬರೆಯಲ್ಪಡುವಂತೆ ಬಯಸಿದ ಪ್ರಮುಖ ವಿವರಗಳನ್ನು ಅವರು ಮರೆಯದಂತೆ ನೋಡಿಕೊಳ್ಳುವುದರಲ್ಲಿ ಪವಿತ್ರಾತ್ಮವು ದೊಡ್ಡ ಪಾತ್ರವನ್ನು ವಹಿಸಿತು.
ಪವಿತ್ರಾತ್ಮವು ಇಂದು ದೇವರ ಸೇವಕರಿಗೆ ಸಹಾಯಕವಾಗಿ ಕಾರ್ಯನಡಿಸುತ್ತದೊ? ನಿಶ್ಚಯವಾಗಿಯೂ! ನಾವು ಹಿಂದೆಂದೂ ಕಲಿಯದಿದ್ದಂಥ ವಿಷಯಗಳನ್ನು ಆ ಪವಿತ್ರಾತ್ಮವು ನಮ್ಮ ಮನಸ್ಸುಗಳಲ್ಲಿ ತುಂಬಿಸದಿರುವುದಾದರೂ, ನಾವು ಹಿಂದೆ ಕಲಿತಿರುವ ಪ್ರಮುಖ ವಿಷಯಗಳನ್ನು ನಮ್ಮ ಮನಸ್ಸುಗಳಿಗೆ ಹಿಂದೆ ತರಲು ಅದು ಸಹಾಯಕವಾಗಿ ಕಾರ್ಯನಡಿಸುವುದಂತೂ ಖಂಡಿತ. (ಲೂಕ 11:13; 1 ಯೋಹಾ. 5:14) ಬಳಿಕ, ಅಗತ್ಯ ಬೀಳುವಾಗ, ‘ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ಕರ್ತನಾದ ರಕ್ಷಕನು ಕೊಟ್ಟ ಅಪ್ಪಣೆಯನ್ನೂ ಜ್ಞಾಪಕಮಾಡಿ’ಕೊಳ್ಳುವಂತೆ ನಮ್ಮ ಆಲೋಚನಾ ಶಕ್ತಿಗಳು ಪ್ರೇರಿಸಲ್ಪಡುತ್ತವೆ.—2 ಪೇತ್ರ 3:1, 2.
‘ನೀವು ಮರೆಯಬಾರದು’
ಯೆಹೋವನು ಇಸ್ರಾಯೇಲ್ಯರಿಗೆ ‘ನೀವು ಮರೆಯಬಾರದು’ ಎಂದು ಹೇಳಿ ಪದೇ ಪದೇ ಎಚ್ಚರಿಸಿದನು. ಅವರು ಎಲ್ಲವನ್ನೂ ಪೂರ್ಣವಾಗಿ ಜ್ಞಾಪಿಸಿಕೊಳ್ಳಬೇಕೆಂದು ಆತನು ನಿರೀಕ್ಷಿಸಿದನೆಂಬುದು ಇದರ ಅರ್ಥವಾಗಿರಲಿಲ್ಲ. ಯೆಹೋವನ ವ್ಯವಹಾರಗಳ ಸ್ಮರಣೆಗಳನ್ನು ಹಿನ್ನೆಲೆಗೆ ದೂಡುವಷ್ಟರ ಮಟ್ಟಿಗೆ ಅವರು ತಮ್ಮ ಸ್ವಂತ ಸುಖಾನ್ವೇಷಣೆಗಳಲ್ಲಿ ಮುಳುಗಿರಬಾರದಾಗಿತ್ತು. ಐಗುಪ್ತದ ಎಲ್ಲ ಜ್ಯೇಷ್ಠ ಪುತ್ರರನ್ನು ಯೆಹೋವನ ದೇವದೂತನು ವಧಿಸಿದಾಗ ಹಾಗೂ ಕೆಂಪು ಸಮುದ್ರವನ್ನು ಇಬ್ಭಾಗ ಮಾಡಿ ಆ ಬಳಿಕ ಅದನ್ನು ಒಂದಾಗಿಸಿ, ಫರೋಹನನ್ನೂ ಅವನ ಸೈನ್ಯವನ್ನೂ ಮುಳುಗಿಸಿ ಹತಿಸಿದಾಗ, ಯೆಹೋವನು ಅವರಿಗೆ ಮಾಡಿದ ಬಿಡುಗಡೆಯ ಸ್ಮರಣೆಗಳನ್ನು ಅವರು ತಮ್ಮ ಮನಸ್ಸಿನಲ್ಲಿ ಹಚ್ಚಹಸುರಾಗಿಟ್ಟುಕೊಳ್ಳಬೇಕಾಗಿತ್ತು. ದೇವರು ಸೀನಾಯಿ ಬೆಟ್ಟದಲ್ಲಿ ತಮಗೆ ಧರ್ಮಶಾಸ್ತ್ರವನ್ನು ಕೊಟ್ಟನೆಂದೂ ತಮ್ಮನ್ನು ಅರಣ್ಯದ ಮೂಲಕ ನಡೆಸಿ ವಾಗ್ದತ್ತ ದೇಶಕ್ಕೆ ಕರೆತಂದನೆಂದೂ ಇಸ್ರಾಯೇಲ್ಯರು ಜ್ಞಾಪಿಸಿಕೊಳ್ಳಬೇಕಾಗಿತ್ತು. ಈ ವಿಷಯಗಳ ಕುರಿತಾದ ನೆನಪುಗಳು, ಅವರ ದೈನಂದಿನ ಜೀವಿತಗಳ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತ ಮುಂದುವರಿಯಬೇಕೆಂಬ ಅರ್ಥದಲ್ಲಿ ಅವರು ಅವುಗಳನ್ನು ಮರೆಯಬಾರದಾಗಿತ್ತು.—ಧರ್ಮೋ. 4:9, 10; 8:10-18; ವಿಮೋ. 12:24-27; ಕೀರ್ತ. 136:15.
ನಾವೂ ಮರೆಯದಿರುವಂತೆ ಜಾಗರೂಕತೆ ವಹಿಸಬೇಕು. ಜೀವನದ ಒತ್ತಡಗಳೊಂದಿಗೆ ಹೋರಾಡುತ್ತಿರುವಾಗ, ನಾವು ಯೆಹೋವನನ್ನು ಜ್ಞಾಪಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಆತನು ಯಾವ ರೀತಿಯ ದೇವರೆಂಬುದನ್ನು, ತನ್ನ ಕುಮಾರನನ್ನು ಕೊಟ್ಟದ್ದರಲ್ಲಿ ಆತನು ತೋರಿಸಿದ ಪ್ರೀತಿಯನ್ನು ಮತ್ತು ನಾವು ಸದಾಕಾಲ ಪರಿಪೂರ್ಣರಾಗಿ ಜೀವಿಸಸಾಧ್ಯವಾಗುವಂತೆ ಆ ಕುಮಾರನು ನಮ್ಮ ಪಾಪಗಳಿಗಾಗಿ ಬಿಡುಗಡೆಯನ್ನು ಒದಗಿಸಿದ್ದನ್ನು ನಾವು ಜ್ಞಾಪಿಸಿಕೊಳ್ಳುವ ಅಗತ್ಯವಿದೆ. (ಕೀರ್ತ. 103:2, 8; 106:7, 13; ಯೋಹಾ. 3:16; ರೋಮಾ. 6:23) ಕ್ರಮವಾದ ಬೈಬಲ್ ವಾಚನ ಮತ್ತು ಸಭಾ ಕೂಟಗಳಲ್ಲಿ ಹಾಗೂ ಕ್ಷೇತ್ರ ಸೇವೆಯಲ್ಲಿ ಕ್ರಿಯಾಶೀಲವಾದ ಭಾಗವಹಿಸುವಿಕೆಯು, ಈ ಅಮೂಲ್ಯ ಸತ್ಯಗಳನ್ನು ನಮ್ಮಲ್ಲಿ ಸಜೀವವಾಗಿ ಇಡುವುದು.
ದೊಡ್ಡದಾದ ಇಲ್ಲವೆ ಚಿಕ್ಕದಾದ ನಿರ್ಣಯಗಳನ್ನು ಮಾಡುವ ಸಮಯ ಎದುರಾಗುವಾಗ, ಆ ಜೀವದಾಯಕ ಸತ್ಯಗಳನ್ನು ಮನಸ್ಸಿಗೆ ತಂದುಕೊಂಡು, ಅವು ನಿಮ್ಮ ಆಲೋಚನೆಗಳನ್ನು ಪ್ರಭಾವಿಸುವಂತೆ ಬಿಡಿರಿ. ಮರೆಯಬೇಡಿ. ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ನೋಡಿರಿ. ಕೇವಲ ಶಾರೀರಿಕ ದೃಷ್ಟಿಕೋನದಿಂದ ವಿಷಯಗಳನ್ನು ನೋಡುವುದಕ್ಕೆ ಬದಲಾಗಿ, ಇಲ್ಲವೆ ಅಪರಿಪೂರ್ಣ ಹೃದಯದ ಹಠಾತ್ ಪ್ರವೃತ್ತಿಯ ಮೇಲೆ ಭರವಸೆಯಿಡುವುದಕ್ಕೆ ಬದಲಾಗಿ, ‘ದೇವರ ವಾಕ್ಯದ ಯಾವ ಸಲಹೆ ಅಥವಾ ಮೂಲತತ್ತ್ವವು ನನ್ನ ನಿರ್ಣಯದ ಮೇಲೆ ಪ್ರಭಾವ ಬೀರಬೇಕು?’ ಎಂದು ನಿಮ್ಮನ್ನೇ ಕೇಳಿಕೊಳ್ಳಿರಿ. (ಜ್ಞಾನೋ. 3:5-7; 28:26) ನೀವು ಎಂದೂ ಓದಿರದಂತಹ ಅಥವಾ ಕೇಳಿಸಿಕೊಂಡಿರದಂತಹ ವಿಷಯಗಳನ್ನು ಖಂಡಿತ ಜ್ಞಾಪಿಸಿಕೊಳ್ಳಸಾಧ್ಯವಿಲ್ಲ. ಆದರೆ ನಿಷ್ಕೃಷ್ಟ ಜ್ಞಾನ ಮತ್ತು ಯೆಹೋವನ ಮೇಲಣ ಪ್ರೀತಿಯಲ್ಲಿ ನೀವು ಬೆಳೆದಂತೆ, ನೀವು ಜ್ಞಾಪಿಸಿಕೊಳ್ಳುವಂತೆ ದೇವರಾತ್ಮವು ಸಹಾಯಮಾಡುವ ಜ್ಞಾನಭಂಡಾರವು ವಿಸ್ತಾರಗೊಳ್ಳುವುದು ಮತ್ತು ಯೆಹೋವನಿಗಾಗಿ ನಿಮ್ಮ ಬೆಳೆಯುತ್ತಿರುವ ಪ್ರೀತಿಯು ಅದಕ್ಕನುಸಾರವಾಗಿ ಕ್ರಿಯೆಗೈಯುವಂತೆ ನಿಮ್ಮನ್ನು ಪ್ರಚೋದಿಸುವುದು.