ಅಧ್ಯಾಯ 25
ಹೊರಮೇರೆಯ ಉಪಯೋಗ
ಹೊರಮೇರೆಯ ಸಹಾಯದಿಂದ ಮಾತಾಡುವ ಪ್ರತೀಕ್ಷೆಯು ಅನೇಕರಿಗೆ ಹೆದರಿಕೆಯನ್ನು ಉಂಟುಮಾಡುತ್ತದೆ. ತಾವು ಹೇಳಲಿರುವ ಪ್ರತಿಯೊಂದು ವಿಷಯವು ಬರೆಯಲ್ಪಟ್ಟಿರುವಲ್ಲಿ ಅಥವಾ ಅದನ್ನು ಅವರು ಬಾಯಿಪಾಠ ಮಾಡಿಕೊಂಡಿರುವಲ್ಲಿ ಅವರಿಗೆ ಭರವಸೆಯ ಅನಿಸಿಕೆಯಾಗುತ್ತದೆ.
ಆದರೂ ವಾಸ್ತವದಲ್ಲಿ, ನಾವು ಪ್ರತಿದಿನ ಹಸ್ತಪ್ರತಿಯಿಲ್ಲದೆ ಮಾತಾಡುತ್ತೇವೆ. ನಾವು ಕುಟುಂಬ ಮತ್ತು ಮಿತ್ರರೊಂದಿಗಿನ ಸಂಭಾಷಣೆಯಲ್ಲಿ ಹಾಗೆಯೇ ಮಾತಾಡುತ್ತೇವೆ. ನಾವು ಕ್ಷೇತ್ರ ಶುಶ್ರೂಷೆಯಲ್ಲಿ ತೊಡಗಿರುವಾಗಲೂ ಹಾಗೆಯೇ ಮಾತಾಡುತ್ತೇವೆ. ಮತ್ತು ಖಾಸಗಿಯಾಗಲಿ ಒಂದು ಗುಂಪಿನ ಪರವಾಗಿಯಾಗಲಿ ಹೃತ್ಪೂರ್ವಕವಾಗಿ ಪ್ರಾರ್ಥಿಸುವಾಗಲೂ ಅದನ್ನು ಹಸ್ತಪ್ರತಿಯಿಲ್ಲದೆ ಮಾಡುತ್ತೇವೆ.
ಒಂದು ಭಾಷಣವನ್ನು ನೀಡುವಾಗ, ನೀವು ಹಸ್ತಪ್ರತಿಯನ್ನು ಉಪಯೋಗಿಸಲಿ ಅಥವಾ ಹೊರಮೇರೆಯನ್ನು ಉಪಯೋಗಿಸಲಿ ಅದರಿಂದ ಏನಾದರೂ ವ್ಯತ್ಯಾಸ ಉಂಟಾಗುತ್ತದೊ? ಒಂದು ಹಸ್ತಪ್ರತಿಯಿಂದ ಓದುವುದು, ನಿಷ್ಕೃಷ್ಟತೆ ಮತ್ತು ಆಯ್ದ ಪದಗಳ ಉಪಯೋಗವನ್ನು ಖಾತ್ರಿಪಡಿಸಿಕೊಳ್ಳಲು ಸಹಾಯಮಾಡಸಾಧ್ಯವಿದೆಯಾದರೂ, ಹೃದಯಗಳನ್ನು ತಲಪುವ ವಿಷಯದಲ್ಲಿ ಅದಕ್ಕೆ ಮಿತಿಯಿರುತ್ತದೆ. ನೀವು ಕೆಲವೇ ವಾಕ್ಯಗಳಿಗಿಂತ ಹೆಚ್ಚನ್ನು ಓದುವಾಗ, ಸಾಮಾನ್ಯವಾಗಿ ನಿಮ್ಮ ಸ್ವಾಭಾವಿಕವಾದ ಸಂಭಾಷಣಾ ಶೈಲಿಗಿಂತ ಭಿನ್ನವಾಗಿರುವ ವೇಗ ಮತ್ತು ಧ್ವನಿಯ ಏರಿಳಿತದ ಒಂದು ನಮೂನೆಯನ್ನು ನೀವು ಉಪಯೋಗಿಸುವಿರಿ. ನೀವು ಸಭಿಕರ ಬಗ್ಗೆ ನಿಜವಾಗಿಯೂ ಚಿಂತಿಸುತ್ತಿದ್ದೀರಿ ಮತ್ತು ನಿಮ್ಮ ಭಾಷಣದ ವಿಷಯವನ್ನು ಅವರ ಸನ್ನಿವೇಶಗಳಿಗೆ ತಕ್ಕಂತೆ ಹೊಂದಿಸಿಕೊಳ್ಳುತ್ತೀರೆಂದು ಅವರಿಗನಿಸುವಾಗ ಅವರು ತದೇಕಚಿತ್ತದಿಂದ ಕಿವಿಗೊಡುವರು. ಆದರೆ ಒಂದುವೇಳೆ ನೀವು ಸಭಿಕರಿಗಿಂತ ಹೆಚ್ಚಾಗಿ ಕಾಗದಗಳ ಮೇಲೆ ಗಮನವನ್ನು ಇಡುವಲ್ಲಿ, ಅವರಲ್ಲಿ ಹೆಚ್ಚಿನವರು ಅಷ್ಟೇ ತದೇಕಚಿತ್ತದಿಂದ ಕಿವಿಗೊಡಲಿಕ್ಕಿಲ್ಲ. ನಿಜವಾಗಿಯೂ ಪ್ರೇರಕವಾಗಿರುವಂಥ ಭಾಷಣಕ್ಕೆ, ಟಿಪ್ಪಣಿಗಳನ್ನು ಹೆಚ್ಚಾಗಿ ನೋಡದೆ ಮಾಡುವ ಆಶುಭಾಷಣವೇ ಅತ್ಯುತ್ತಮ.
ನಮ್ಮ ದೈನಂದಿನ ಜೀವಿತದಲ್ಲಿ ಸಹಾಯ ನೀಡುವಂತೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯನ್ನು ವಿನ್ಯಾಸಿಸಲಾಗಿದೆ. ನಾವು ಸ್ನೇಹಿತರನ್ನು ಭೇಟಿಯಾಗುವಾಗ, ಅತ್ಯುತ್ತಮ ಪದಗಳನ್ನು ಉಪಯೋಗಿಸಲಿಕ್ಕಾಗಿ, ನಾವು ಅವರ ಮುಂದೆ ಒಂದು ಚಿಕ್ಕ ಕಾಗದವನ್ನು ಹೊರತೆಗೆದು ನಮ್ಮ ಆಲೋಚನೆಗಳನ್ನು ಓದಿಹೇಳುವುದಿಲ್ಲ. ಕ್ಷೇತ್ರ ಸೇವೆಯಲ್ಲಿ, ನಾವು ಜನರೊಂದಿಗೆ ಹಂಚಿಕೊಳ್ಳಲು ಬಯಸುವ ಅಂಶಗಳನ್ನು ಮರೆತೇವು ಎಂಬ ಭಯದಿಂದ, ಓದಲಿಕ್ಕಾಗಿ ಒಂದು ಹಸ್ತಪ್ರತಿಯನ್ನು ನಮ್ಮೊಂದಿಗೆ ಒಯ್ಯುವುದಿಲ್ಲ. ಅಂತಹ ಪರಿಸ್ಥಿತಿಗಳಲ್ಲಿ ಹೇಗೆ ಸಾಕ್ಷಿ ನೀಡಬೇಕೆಂಬುದನ್ನು ದೇವಪ್ರಭುತ್ವಾತ್ಮಕ ಶಾಲೆಯಲ್ಲಿ ಪ್ರತ್ಯಕ್ಷಾಭಿನಯಿಸಿ ತೋರಿಸುವಾಗ, ಸಾಧ್ಯವಾಗುವಷ್ಟು ಸ್ವಾಭಾವಿಕವಾಗಿ ಮಾತನಾಡಲು ಪ್ರ್ಯಾಕ್ಟಿಸ್ ಮಾಡಿಕೊಳ್ಳಿರಿ. ಚೆನ್ನಾಗಿ ತಯಾರಿಸುವಲ್ಲಿ, ನೀವು ಚರ್ಚಿಸಲು ಬಯಸುವ ಮುಖ್ಯ ವಿಚಾರಗಳನ್ನು ನಿಮಗೆ ಜ್ಞಾಪಕ ಹುಟ್ಟಿಸಲು, ಸಾಮಾನ್ಯವಾಗಿ ಮಾನಸಿಕ ಅಥವಾ ಲಿಖಿತ ಹೊರಮೇರೆಯು ಸಾಕು ಎಂಬುದನ್ನು ನೀವು ಕಂಡುಕೊಳ್ಳುವಿರಿ. ಆದರೆ ಒಂದು ಹೊರಮೇರೆಯಿಂದ ಭಾಷಣ ಕೊಡಲು ಬೇಕಾಗುವ ಭರವಸೆಯನ್ನು ನೀವು ಹೇಗೆ ಬೆಳೆಸಿಕೊಳ್ಳಬಲ್ಲಿರಿ?
ನಿಮ್ಮ ಆಲೋಚನೆಗಳನ್ನು ಸಂಘಟಿಸಿರಿ. ಭಾಷಣ ಕೊಡುವಾಗ ಹೊರಮೇರೆಯನ್ನು ಉಪಯೋಗಿಸಬೇಕಾದರೆ, ನಿಮ್ಮ ಆಲೋಚನೆಗಳನ್ನು ನೀವು ಸಂಘಟಿಸುವ ಅಗತ್ಯವಿದೆ. ಅಂದರೆ, ನೀವು ಉಪಯೋಗಿಸಲು ಯೋಜಿಸುವ ಪದಗಳನ್ನು ಆರಿಸಿಕೊಳ್ಳಬೇಕೆಂಬುದು ಇದರ ಅರ್ಥವಲ್ಲ. ಮಾತಾಡಲು ಆರಂಭಿಸುವ ಮೊದಲು ಯೋಚಿಸುವುದೇ ಇದರ ಅರ್ಥವಾಗಿದೆ.
ದೈನಂದಿನ ಜೀವಿತದಲ್ಲಿ, ದುಡುಕುವಂಥ ವ್ಯಕ್ತಿಯೊಬ್ಬನು ಏನನ್ನೊ ಹೇಳಿಬಿಟ್ಟು, ಬಳಿಕ ತಾನು ಹಾಗೆ ಹೇಳದೆ ಇರುತ್ತಿದ್ದರೆ ಒಳ್ಳೇದಿತ್ತು ಎಂದು ಪರಿತಪಿಸಬಹುದು. ಇನ್ನೊಬ್ಬನು ಒಂದು ವಿಚಾರದಿಂದ ಇನ್ನೊಂದು ವಿಚಾರಕ್ಕೆ ಅಲೆದಾಡುತ್ತಾ, ಗೊತ್ತುಗುರಿಯಿಲ್ಲದೆ ಮಾತಾಡಬಹುದು. ಆದರೆ ಮಾತಾಡುವ ಮೊದಲು ಒಂದು ಸರಳ ಮಾನಸಿಕ ಹೊರಮೇರೆಯನ್ನು ಅಣಿಗೊಳಿಸಲಿಕ್ಕಾಗಿ ತುಸು ನಿಲ್ಲಿಸಿ ಮಾತಾಡುವ ಮೂಲಕ, ಈ ಎರಡೂ ಪ್ರವೃತ್ತಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಸಾಧ್ಯವಿದೆ. ಪ್ರಥಮವಾಗಿ, ನಿಮ್ಮ ಉದ್ದೇಶವನ್ನು ಮನಸ್ಸಿನಲ್ಲಿ ಬೇರೂರಿಸಿರಿ. ಬಳಿಕ ಅದನ್ನು ಸಾಧಿಸಲು ನೀವು ತೆಗೆದುಕೊಳ್ಳಬೇಕಾಗುವ ಹೆಜ್ಜೆಗಳನ್ನು ಆರಿಸಿಕೊಳ್ಳಿ. ಆ ಬಳಿಕ ಮಾತಾಡಲು ಆರಂಭಿಸಿರಿ.
ನೀವು ಕ್ಷೇತ್ರ ಸೇವೆಗಾಗಿ ತಯಾರಿಸುತ್ತಿದ್ದೀರೊ? ನಿಮ್ಮ ಬ್ಯಾಗನ್ನು ತುಂಬಿಸಲು ಮಾತ್ರವಲ್ಲ, ನಿಮ್ಮ ಯೋಚನೆಗಳನ್ನು ಸಂಘಟಿಸಲು ಕೂಡ ಸಮಯವನ್ನು ತೆಗೆದುಕೊಳ್ಳಿ. ನಮ್ಮ ರಾಜ್ಯದ ಸೇವೆಯಲ್ಲಿ ಸೂಚಿಸಲ್ಪಟ್ಟಿರುವ ನಿರೂಪಣೆಗಳಲ್ಲಿ ಒಂದನ್ನು ಉಪಯೋಗಿಸಲು ನೀವು ನಿರ್ಧರಿಸುವಲ್ಲಿ, ಅದರ ಮುಖ್ಯ ವಿಚಾರಗಳನ್ನು ಸರಿಯಾಗಿ ಮನಸ್ಸಿನಲ್ಲಿಟ್ಟುಕೊಳ್ಳುವ ಸಲುವಾಗಿ ಅದನ್ನು ಅನೇಕ ಬಾರಿ ಓದಿ ನೋಡಿ. ಅದರ ಸಾರಾಂಶವನ್ನು ಒಂದೆರಡು ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ಹೇಳಿಕೊಳ್ಳಿ. ಅಲ್ಲಿ ಹೇಳಿರುವ ಶಬ್ದರಚನೆಯನ್ನು ನಿಮ್ಮ ಸ್ವಂತ ವ್ಯಕ್ತಿತ್ವಕ್ಕೂ ನಿಮ್ಮ ಟೆರಿಟೊರಿಯ ಪರಿಸ್ಥಿತಿಗಳಿಗೂ ಹೊಂದಿಸಿಕೊಳ್ಳಿರಿ. ಒಂದು ಮಾನಸಿಕ ಹೊರಮೇರೆಯನ್ನು ಹೊಂದಿರುವುದು ಸಹಾಯಕರವೆಂದು ನೀವು ಕಂಡುಕೊಳ್ಳುವಿರಿ. ಅದರಲ್ಲಿ ಏನೇನು ಸೇರಿರಬಹುದು? (1) ನಿಮ್ಮ ಸಮಾಜದಲ್ಲಿ ಅನೇಕರನ್ನು ಚಿಂತೆಗೊಳಪಡಿಸುವ ಸಂಗತಿಯನ್ನು ನೀವು ಪೀಠಿಕೆಯಾಗಿ ಹೇಳಬಹುದು. ಮನೆಯವನು ತನ್ನ ಹೇಳಿಕೆಗಳನ್ನು ಮಾಡುವಂತೆ ಆಹ್ವಾನಿಸಿರಿ. (2) ಆ ವಿಷಯವಸ್ತುವಿನ ಸಂಬಂಧದಲ್ಲಿ ನಿಮಗೆ ನಿರ್ದಿಷ್ಟವಾಗಿ ಹೇಳಲಿಕ್ಕಿರುವ ವಿಚಾರವನ್ನು ಮತ್ತು ಉಪಶಮನವನ್ನು ತರಲಿಕ್ಕಾಗಿ ದೇವರು ಏನನ್ನು ವಾಗ್ದಾನಿಸಿದ್ದಾನೆ ಎಂಬುದನ್ನು ತೋರಿಸುವ ಒಂದೊ ಎರಡೊ ವಚನಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಹೇಳುವ ಅವಕಾಶ ಸಿಗುವುದಾದರೆ, ಯೆಹೋವನು ತನ್ನ ರಾಜ್ಯದ ಅಂದರೆ ಸ್ವರ್ಗೀಯ ಸರಕಾರದ ಮುಖಾಂತರ ಇದನ್ನು ಮಾಡುವನೆಂದು ಒತ್ತಿಹೇಳಿರಿ. (3) ನೀವು ಚರ್ಚಿಸಿರುವ ವಿಷಯದ ಸಂಬಂಧದಲ್ಲಿ ಆ ವ್ಯಕ್ತಿಯು ಯಾವುದಾದರೂ ಕ್ರಮವನ್ನು ಕೈಕೊಳ್ಳಲು ಪ್ರಯತ್ನಿಸುವಂತೆ ಅವನನ್ನು ಪ್ರೋತ್ಸಾಹಿಸಿರಿ. ನೀವು ಸಾಹಿತ್ಯವನ್ನು ಮತ್ತು/ಅಥವಾ ಬೈಬಲ್ ಅಧ್ಯಯನವನ್ನು ನೀಡಿ, ಚರ್ಚೆಯನ್ನು ಮುಂದುವರಿಸಲು ನಿಶ್ಚಿತ ಏರ್ಪಾಡುಗಳನ್ನು ಮಾಡಬಹುದು.
ಇಂತಹ ನಿರೂಪಣೆಗಾಗಿ ನಿಮಗೆ ಬೇಕಾಗಬಹುದಾದ ಏಕಮಾತ್ರ ಹೊರಮೇರೆಯು, ಮಾನಸಿಕ ಹೊರಮೇರೆಯಾಗಿದೆ. ನಿಮ್ಮ ಪ್ರಥಮ ಮನೆಭೇಟಿಗೆ ಮೊದಲು ಲಿಖಿತ ಹೊರಮೇರೆಯನ್ನು ನೋಡಬೇಕೆಂದು ನಿಮಗೆ ಅನಿಸುವುದಾದರೆ, ಆ ಹೊರಮೇರೆಯಲ್ಲಿ ನೀವು ಪೀಠಿಕೆಯಾಗಿ ಬಳಸಲು ಕೆಲವೊಂದು ಪದಗಳು, ಒಂದೊ ಎರಡೊ ವಚನಗಳು ಮತ್ತು ನಿಮ್ಮ ಸಮಾಪ್ತಿಯಲ್ಲಿ ನೀವು ಸೇರಿಸಲು ಬಯಸುವಂಥ ವಿಷಯದ ಸಂಕ್ಷಿಪ್ತ ಟಿಪ್ಪಣಿಯಲ್ಲದೆ ಇನ್ನೇನೂ ಇರಬಾರದು. ಇಂತಹ ಹೊರಮೇರೆಯ ತಯಾರಿ ಮತ್ತು ಉಪಯೋಗವು, ನಾವು ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಹಾರುವುದನ್ನು ತಡೆಹಿಡಿದು, ನಾವು ಮನೆಯವನೊಂದಿಗೆ ಒಂದು ಸ್ಪಷ್ಟವಾದ, ಜ್ಞಾಪಿಸಿಕೊಳ್ಳಲು ಸುಲಭವಾಗಿರುವ ಸಂದೇಶವನ್ನು ಬಿಟ್ಟುಬರುವಂತೆ ಸಹಾಯಮಾಡುವುದು.
ನಿಮ್ಮ ಟೆರಿಟೊರಿಯಲ್ಲಿ ಪ್ರಶ್ನೆಯೊ ಆಕ್ಷೇಪಣೆಗಳೊ ಏಳುವಲ್ಲಿ, ಆ ವಿಷಯದಲ್ಲಿ ಸಂಶೋಧನೆ ನಡೆಸುವುದು ಸಹಾಯಕರವೆಂದು ನೀವು ಕಂಡುಕೊಳ್ಳಬಹುದು. ಸಾಮಾನ್ಯವಾಗಿ ನಿಮಗೆ ಬೇಕಾಗಿರುವುದು ಎರಡೊ ಮೂರೊ ಮೂಲಭೂತ ಅಂಶಗಳು ಮತ್ತು ಅವುಗಳಿಗೆ ಆಧಾರವನ್ನು ಕೊಡುವ ವಚನಗಳು ಅಷ್ಟೆ. “ಚರ್ಚೆಗಾಗಿ ಬೈಬಲ್ ವಿಷಯಗಳು” ಅಥವಾ ಶಾಸ್ತ್ರವಚನಗಳಿಂದ ತರ್ಕಿಸುವುದು (ಇಂಗ್ಲಿಷ್) ಪುಸ್ತಕದಲ್ಲಿನ ದಪ್ಪಕ್ಷರದ ಉಪಶಿರೋನಾಮಗಳು, ನಿಮಗೆ ಬೇಕಾಗಿರುವ ನಿರ್ದಿಷ್ಟ ಹೊರಮೇರೆಯನ್ನು ಒದಗಿಸಬಹುದು. ನಿಮಗೆ ಇನ್ನೊಂದು ಮೂಲದಿಂದ ನೀವು ಸೇರಿಸಲು ಬಯಸುವಂಥ ಒಂದು ಉತ್ತಮ ಉಲ್ಲೇಖವು ದೊರಕಬಹುದು. ಒಂದು ಸಂಕ್ಷಿಪ್ತವಾದ ಲಿಖಿತ ಹೊರಮೇರೆಯನ್ನು ಸಿದ್ಧಪಡಿಸಿ, ಅದಕ್ಕೆ ಆ ಉಲ್ಲೇಖದ ಫೋಟೋಕಾಪಿಯನ್ನು ಅಂಟಿಸಿರಿ. ಮತ್ತು ಇವುಗಳನ್ನು ನಿಮ್ಮ ಕ್ಷೇತ್ರ ಸೇವೆಯ ಉಪಕರಣಗಳೊಂದಿಗೆ ಇಡಿರಿ. ಮನೆಯವನು ಪ್ರಶ್ನೆಯನ್ನೊ ಆಕ್ಷೇಪಣೆಯನ್ನೊ ಎತ್ತುವಾಗ, ನಿಮ್ಮ ವಿಶ್ವಾಸಕ್ಕೆ ಕಾರಣ ಕೊಡುವ ಸದವಕಾಶವನ್ನು ನೀವು ಸ್ವಾಗತಿಸುತ್ತೀರೆಂಬುದು ಅವನಿಗೆ ಗೊತ್ತಾಗಲಿ. (1 ಪೇತ್ರ 3:15) ನಿಮ್ಮ ಉತ್ತರಕ್ಕೆ ಹೊರಮೇರೆಯನ್ನು ಆಧಾರವಾಗಿ ಉಪಯೋಗಿಸಿರಿ.
ನಿಮ್ಮ ಕುಟುಂಬವನ್ನು, ಪುಸ್ತಕ ಅಧ್ಯಯನದ ಒಂದು ಗುಂಪನ್ನು ಅಥವಾ ಸಭೆಯನ್ನು ಪ್ರತಿನಿಧಿಸುತ್ತಾ ನೀವು ಪ್ರಾರ್ಥಿಸುವಾಗಲೂ, ನಿಮ್ಮ ಯೋಚನೆಗಳನ್ನು ಸಂಘಟಿಸುವುದು ಪ್ರಯೋಜನಕರವಾಗಿದೆ. ಲೂಕ 11:2-4 ಕ್ಕನುಸಾರ, ಅರ್ಥವತ್ತಾಗಿ ಪ್ರಾರ್ಥಿಸಲಿಕ್ಕಾಗಿ ಯೇಸು ತನ್ನ ಶಿಷ್ಯರಿಗೆ ಒಂದು ಸರಳವಾದ ಹೊರಮೇರೆಯನ್ನು ಕೊಟ್ಟನು. ಯೆರೂಸಲೇಮಿನ ದೇವಾಲಯದ ಪ್ರತಿಷ್ಠಾಪನೆಯಲ್ಲಿ ಸೊಲೊಮೋನನು ಸವಿವರವಾದ ಪ್ರಾರ್ಥನೆಯನ್ನು ಮಾಡಿದನು. ಅವನು ಆ ವಿಷಯದಲ್ಲಿ ಮುಂದಾಲೋಚನೆ ಮಾಡಿದ್ದನು ಎಂಬುದು ಸುವ್ಯಕ್ತ. ಅವನು ಪ್ರಥಮವಾಗಿ ಯೆಹೋವನ ಮೇಲೆ ಮತ್ತು ಆತನು ದಾವೀದನಿಗೆ ಮಾಡಿದ ವಾಗ್ದಾನದ ಮೇಲೆ, ಬಳಿಕ ದೇವಾಲಯದ ಮೇಲೆ, ಆ ಬಳಿಕ ನಿರ್ದಿಷ್ಟ ಸನ್ನಿವೇಶಗಳ ಮೇಲೆ ಮತ್ತು ಜನರ ಗುಂಪುಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದನು. (1 ಅರ. 8:22-53) ನಾವು ಈ ಮಾದರಿಗಳಿಂದ ಪ್ರಯೋಜನ ಪಡೆಯಬಲ್ಲೆವು.
ನಿಮ್ಮ ಭಾಷಣದ ಹೊರಮೇರೆಯನ್ನು ಸರಳವಾಗಿಡಿರಿ. ನಿಮ್ಮ ಹೊರಮೇರೆಯು ಭಾಷಣ ಕೊಡುವಾಗ ಉಪಯೋಗಿಸಲಿಕ್ಕಾಗಿದೆಯೊ? ಅದರಲ್ಲಿ ಎಷ್ಟು ವಿಷಯಗಳು ಸೇರಿರಬೇಕು?
ಹೊರಮೇರೆಯು ನೀವು ವಿಚಾರಗಳನ್ನು ಜ್ಞಾಪಿಸಿಕೊಳ್ಳುವಂತೆ ಮಾಡುವ ಉದ್ದೇಶಕ್ಕಾಗಿದೆಯೆಂಬುದು ನೆನಪಿರಲಿ. ಪೀಠಿಕೆಯಾಗಿ ಉಪಯೋಗಿಸಲಿಕ್ಕಾಗಿ ಕೆಲವು ವಾಕ್ಯಗಳನ್ನು ಬರೆದಿಡುವುದು ಪ್ರಯೋಜನಕರವೆಂದು ನಿಮಗನಿಸಬಹುದು. ಆದರೆ ಆಮೇಲೆ, ಪದಗಳಿಗಲ್ಲ, ಬದಲಾಗಿ ವಿಚಾರಗಳಿಗೆ ಗಮನಕೊಡಿರಿ. ನೀವು ಆ ವಿಚಾರಗಳನ್ನು ವಾಕ್ಯಗಳ ರೂಪದಲ್ಲಿ ಬರೆಯುವುದಾದರೆ, ಚಿಕ್ಕ ವಾಕ್ಯಗಳನ್ನು ರಚಿಸಲು ಇಷ್ಟಪಡಿ. ನೀವು ವಿಕಸಿಸಲು ಬಯಸುವ ಕೆಲವೇ ಮುಖ್ಯಾಂಶಗಳು ನಿಮ್ಮ ಹೊರಮೇರೆಯಲ್ಲಿ ಸ್ಪಷ್ಟವಾಗಿ ಎದ್ದುಕಾಣಬೇಕು. ಅವುಗಳನ್ನು ದೊಡ್ಡ ಅಕ್ಷರಗಳಲ್ಲಿ ಬರೆದು, ಅಂಶಗಳಿಗೆ ಅಡಿಗೆರೆ ಹಾಕುವ ಇಲ್ಲವೆ ಅವುಗಳನ್ನು ಬಣ್ಣದಲ್ಲಿ ಗುರುತಿಸುವ ಮೂಲಕ ನೀವು ಇದನ್ನು ಸಾಧಿಸಬಹುದು. ಪ್ರತಿ ಮುಖ್ಯಾಂಶದ ಕೆಳಗೆ, ಅದನ್ನು ವಿಕಸಿಸುವಾಗ ನೀವು ಉಪಯೋಗಿಸಲು ಬಯಸುವ ವಿಚಾರಗಳ ಪಟ್ಟಿಮಾಡಿರಿ. ನೀವು ಓದಲು ಯೋಜಿಸುವ ವಚನಗಳನ್ನು ಉಲ್ಲೇಖಿಸಿರಿ. ವಚನವನ್ನು ಓದುವಾಗ ಸಾಮಾನ್ಯವಾಗಿ ಅದನ್ನು ಬೈಬಲಿನಿಂದಲೇ ಓದುವುದು ಅತ್ಯುತ್ತಮ. ನೀವು ಉಪಯೋಗಿಸಲು ಬಯಸುವ ದೃಷ್ಟಾಂತಗಳನ್ನು ನೆನಪಿಗಾಗಿ ಸಂಕ್ಷಿಪ್ತವಾಗಿ ಬರೆದಿಟ್ಟುಕೊಳ್ಳಿ. ಮಾತ್ರವಲ್ಲದೆ ನಿಮ್ಮಲ್ಲಿ ಸೂಕ್ತವಾದ ಐಹಿಕ ಉಲ್ಲೇಖಗಳೂ ಇರಬಹುದು. ನಿಮ್ಮ ಟಿಪ್ಪಣಿಯು ನಿರ್ದಿಷ್ಟ ನಿಜತ್ವಗಳನ್ನು ಸಾದರಪಡಿಸಲು ಸಾಕಾಗುವಷ್ಟು ವಿಸ್ತಾರವಾಗಿರಲಿ. ಹೊರಮೇರೆಯು ನೀಟಾಗಿರುವಲ್ಲಿ ಅದನ್ನು ಉಪಯೋಗಿಸುವುದು ಸುಲಭವಾಗಿರುತ್ತದೆ.
ಕೆಲವರು ತೀರ ಮೂಲಭೂತವಾದ ಹೊರಮೇರೆಗಳನ್ನು ಉಪಯೋಗಿಸುತ್ತಾರೆ. ಒಂದು ಹೊರಮೇರೆಯಲ್ಲಿ ಕೆಲವೇ ಮುಖ್ಯ ಪದಗಳು, ಭಾಷಣಕಾರನು ಜ್ಞಾಪಕದಿಂದ ಹೇಳುವಂಥ ವಚನಗಳ ಉಲ್ಲೇಖ ಮತ್ತು ವಿಚಾರಗಳನ್ನು ಜ್ಞಾಪಿಸಿಕೊಳ್ಳುವಂತೆ ಸಹಾಯಮಾಡುವ ರೇಖಾಕೃತಿಗಳು ಅಥವಾ ಚಿತ್ರಗಳು ಒಳಗೂಡಿರಬಹುದು. ಈ ಸರಳ ಟಿಪ್ಪಣಿಗಳ ಮುಖಾಂತರ ಭಾಷಣಕಾರನು ತನ್ನ ಭಾಷಣದ ವಿಷಯಭಾಗವನ್ನು ತರ್ಕಬದ್ಧವಾಗಿಯೂ ಸಂಭಾಷಣಾ ರೀತಿಯಲ್ಲಿಯೂ ನೀಡಲು ಸಮರ್ಥನಾಗುತ್ತಾನೆ. ಈ ಪಾಠದ ಉದ್ದೇಶವು ಅದೇ ಆಗಿದೆ.
ಈ ಪುಸ್ತಕದ 39ರಿಂದ 42 ರ ವರೆಗಿನ ಪುಟಗಳಲ್ಲಿ, “ಭಾಷಣದ ಹೊರಮೇರೆಯನ್ನು ತಯಾರಿಸುವುದು” ಎಂಬ ವಿಷಯದ ಚರ್ಚೆಯನ್ನು ನೀವು ಕಂಡುಕೊಳ್ಳುವಿರಿ. “ಹೊರಮೇರೆಯ ಉಪಯೋಗ” ಎಂಬ ಈ ಗುಣವನ್ನು ಉತ್ತಮಗೊಳಿಸಲು ನೀವು ಪ್ರಯತ್ನಿಸುತ್ತಿರುವಾಗ, ಆ ವಿಷಯಭಾಗವನ್ನೂ ನೀವು ಓದುವುದು ಸಹಾಯಕರವಾಗಿರುವುದು.
ಹೊರಮೇರೆಯನ್ನು ಉಪಯೋಗಿಸುವ ವಿಧ. ಆದರೆ ಈ ಹಂತದಲ್ಲಿ ನಿಮ್ಮ ಗುರಿಯು, ಭಾಷಣವನ್ನು ಹೊರಮೇರೆಯ ರೂಪದಲ್ಲಿ ತಯಾರಿಸುವುದಷ್ಟೇ ಆಗಿರುವುದಿಲ್ಲ. ಹೊರಮೇರೆಯನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು ನಿಮ್ಮ ಗುರಿಯಾಗಿರಬೇಕು.
ನಿಮ್ಮ ಹೊರಮೇರೆಯನ್ನು ಉಪಯೋಗಿಸುವುದರಲ್ಲಿರುವ ಮೊದಲನೆಯ ಹೆಜ್ಜೆಯು, ಭಾಷಣವನ್ನು ಕೊಡಲಿಕ್ಕಾಗಿರುವ ತಯಾರಿಯಾಗಿದೆ. ಭಾಷಣದ ಮುಖ್ಯ ವಿಷಯವನ್ನು ನೋಡಿ, ಬಳಿಕ ಮುಖ್ಯಾಂಶಗಳನ್ನು ಒಂದೊಂದಾಗಿ ಓದಿ, ಆ ಮುಖ್ಯಾಂಶಗಳಲ್ಲಿ ಪ್ರತಿಯೊಂದು ನಿಮ್ಮ ಮುಖ್ಯ ವಿಷಯಕ್ಕೆ ಸಂಬಂಧಿಸುವ ವಿಧವನ್ನು ಸ್ವತಃ ಹೇಳಿರಿ. ಪ್ರತಿಯೊಂದು ಮುಖ್ಯಾಂಶಕ್ಕೆ ಎಷ್ಟೆಷ್ಟು ಸಮಯವನ್ನು ವಿನಿಯೋಗಿಸಸಾಧ್ಯವಿದೆ ಎಂಬುದನ್ನು ಗುರುತಿಸಿಕೊಳ್ಳಿ. ಈಗ ಹಿಂದೆರಳಿ, ಮೊದಲನೆಯ ಮುಖ್ಯಾಂಶವನ್ನು ಚೆನ್ನಾಗಿ ಪರಿಶೀಲಿಸಿ. ಆ ಅಂಶವನ್ನು ವಿಕಸಿಸಲಿಕ್ಕಾಗಿ ನೀವು ಬಳಸಲು ಯೋಜಿಸುವ ತರ್ಕಗಳು, ಶಾಸ್ತ್ರವಚನಗಳು, ದೃಷ್ಟಾಂತಗಳು ಮತ್ತು ಮಾದರಿಗಳನ್ನು ಪುನರ್ವಿಮರ್ಶಿಸಿರಿ. ಇದನ್ನು ಅನೇಕ ಬಾರಿ, ಅಂದರೆ ನಿಮ್ಮ ಭಾಷಣದ ಈ ವಿಷಯಭಾಗವು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗುವ ತನಕ ಪುನರಾವರ್ತಿಸಿರಿ. ಬೇರೆ ಮುಖ್ಯಾಂಶಗಳಲ್ಲಿ ಒಂದೊಂದನ್ನೂ ಹೀಗೆಯೇ ಪುನರಾವರ್ತಿಸಿರಿ. ಕೊಡಲ್ಪಟ್ಟ ಸಮಯದಲ್ಲಿ ಮುಗಿಸಲಿಕ್ಕಾಗುವಂತೆ, ಅಗತ್ಯವಿರುವಲ್ಲಿ ಏನನ್ನು ಬಿಟ್ಟುಬಿಡಬಹುದೆಂಬುದನ್ನೂ ಪರಿಗಣಿಸಿರಿ. ಆ ಬಳಿಕ ನಿಮ್ಮ ಇಡೀ ಭಾಷಣವನ್ನು ಪುನರ್ವಿಮರ್ಶಿಸಿರಿ. ಪದಗಳ ಮೇಲಲ್ಲ, ವಿಚಾರಗಳ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಭಾಷಣವನ್ನು ಬಾಯಿಪಾಠ ಮಾಡಿಕೊಳ್ಳಬೇಡಿರಿ.
ನೀವು ಭಾಷಣವನ್ನು ನೀಡುವಾಗ, ನಿಮ್ಮ ಸಭಿಕರೊಂದಿಗೆ ಸರಿಯಾದ ದೃಷ್ಟಿ ಸಂಪರ್ಕವನ್ನಿಟ್ಟುಕೊಳ್ಳಲು ನೀವು ಸಮರ್ಥರಾಗಿರಬೇಕು. ಒಂದು ಶಾಸ್ತ್ರವಚನವನ್ನು ಓದಿದ ಬಳಿಕ, ನಿಮ್ಮ ಟಿಪ್ಪಣಿಯ ಕಡೆಗೆ ಕಣ್ಣಾಡಿಸಲು ಪ್ರಯತ್ನಿಸದೆ, ನಿಮ್ಮ ಬೈಬಲನ್ನು ಉಪಯೋಗಿಸಿ ಆ ವಚನದ ಕುರಿತು ತರ್ಕಿಸಲು ಸಾಮಾನ್ಯವಾಗಿ ನೀವು ಶಕ್ತರಾಗಿರಬೇಕು. ತದ್ರೀತಿಯಲ್ಲಿ, ನೀವು ಒಂದು ದೃಷ್ಟಾಂತವನ್ನು ಉಪಯೋಗಿಸುವಲ್ಲಿ, ಅದನ್ನು ನಿಮ್ಮ ಟಿಪ್ಪಣಿಯಿಂದ ಓದುವ ಬದಲಿಗೆ, ನಿಮ್ಮ ಮಿತ್ರರಿಗೆ ಹೇಳುತ್ತಿದ್ದೀರೋ ಎಂಬಂಥ ರೀತಿಯಲ್ಲಿ ಅದನ್ನು ಹೇಳಿರಿ. ನೀವು ಮಾತನಾಡುವಾಗ, ಪ್ರತಿಯೊಂದು ವಾಕ್ಯವನ್ನು ಹೇಳಲಿಕ್ಕಾಗಿ ನಿಮ್ಮ ಟಿಪ್ಪಣಿಯನ್ನು ನೋಡಬೇಡಿರಿ. ಹೃತ್ಪೂರ್ವಕವಾಗಿ ಮಾತಾಡಿರಿ ಮತ್ತು ಆಗ ನೀವು ನಿಮಗೆ ಕಿವಿಗೊಡುತ್ತಿರುವವರ ಹೃದಯಗಳನ್ನು ತಲಪುವಿರಿ.
ಒಂದು ಹೊರಮೇರೆಯಿಂದ ಮಾತಾಡುವ ಕಲೆಯಲ್ಲಿ ನೀವು ನಿಸ್ಸೀಮರಾಗುವಾಗ, ಪರಿಣಾಮಕಾರಿಯಾದ ಭಾಷಣಕಾರರಾಗುವ ದಿಕ್ಕಿನಲ್ಲಿ ನೀವು ಅತಿ ಪ್ರಾಮುಖ್ಯವಾದ ಮುನ್ನೆಜ್ಜೆಯನ್ನು ಇಟ್ಟಿರುವಿರಿ.