ದೇವರು ಯಾಕೆ ನಮ್ಮನ್ನು ಸೃಷ್ಟಿಸಿದನು?
ನೀವು ಟಿವಿಯಲ್ಲಿ, ರೇಡಿಯೋದಲ್ಲಿ ಅಥವಾ ವಾರ್ತಾ ಪತ್ರಿಕೆಯಲ್ಲಿ ಅಪರಾಧಗಳ, ಯುದ್ಧಗಳ ಮತ್ತು ಭಯೋತ್ಪಾದಕರ ದಾಳಿಗಳ ಬಗ್ಗೆ ನೋಡುತ್ತೀರಿ, ಕೇಳಿಸಿಕೊಳ್ಳುತ್ತೀರಿ. ಇಲ್ಲವೇ ನೀವೇ ಯಾವುದೋ ಕಾಯಿಲೆಯಿಂದ ನರಳುತ್ತಿರಬಹುದು ಅಥವಾ ನಿಮ್ಮ ಪ್ರೀತಿಯ ಜನರು ತೀರಿಕೊಂಡಿರುವುದರಿಂದ ದುಃಖದಲ್ಲಿರಬಹುದು.
ಹಾಗಾಗಿ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ:
ನಾನು ಮತ್ತು ನನ್ನ ಕುಟುಂಬ ಹೀಗೆಯೇ ಕಷ್ಟಪಡಬೇಕು ಅಂತ ದೇವರು ಇಷ್ಟಪಡುತ್ತಾನಾ?
ನನಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಹೇಗೆ? ನನಗೆಲ್ಲಿ ಸಹಾಯ ಸಿಗುತ್ತದೆ?
ಶಾಂತಿ-ಸಮಾಧಾನದಿಂದ ಜೀವನ ಮಾಡಲು ಯಾವತ್ತಾದರೂ ಸಾಧ್ಯವಾಗುತ್ತಾ?
ಈ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳು ಬೈಬಲಿನಲ್ಲಿ ಸಿಗುತ್ತವೆ.
ಭೂಮಿಯ ಮೇಲೆ ದೇವರು ಈ ಅದ್ಭುತವಾದ ವಿಷಯಗಳನ್ನು ಮಾಡಲಿದ್ದಾನೆಂದು ಬೈಬಲ್ ಕಲಿಸುತ್ತದೆ.
ದುಃಖ-ನೋವು ಇಲ್ಲದ ಕಾಲ ಬರುತ್ತದೆ. ಆಗ ಜನರು ಮುದುಕರಾಗುವುದೂ ಇಲ್ಲ, ಸಾಯುವುದೂ ಇಲ್ಲ.—ಪ್ರಕಟನೆ 21:4
“ಕುಂಟನು ಜಿಂಕೆಯಂತೆ ಹಾರುವನು.”—ಯೆಶಾಯ 35:5
“ಕುರುಡರ ಕಣ್ಣು ಕಾಣುವದು.”—ಯೆಶಾಯ 35:5
ಸತ್ತವರಿಗೆ ಪುನಃ ಜೀವ ಬರುತ್ತದೆ.—ಯೋಹಾನ 5:28, 29
ಯಾರಿಗೂ ಕಾಯಿಲೆ ಬರುವುದಿಲ್ಲ.—ಯೆಶಾಯ 33:24
ಎಲ್ಲರಿಗೂ ಬೇಕಾದಷ್ಟು ಆಹಾರ ಇರುತ್ತದೆ.—ಕೀರ್ತನೆ 72:16
ಬೈಬಲಿನಲ್ಲಿರುವ ವಿಷಯಗಳನ್ನು ಕಲಿತು ಪ್ರಯೋಜನ ಪಡೆಯಿರಿ
ಈ ಪುಸ್ತಕದ ಆರಂಭದ ಪುಟಗಳಲ್ಲಿ ಹೇಳಲಾಗಿರುವ ವಿಷಯಗಳು ಕೇವಲ ಕಲ್ಪನೆ ಎಂದು ನಿಮಗನಿಸಬಹುದು. ಆದರೆ ಬಲುಬೇಗನೆ ಭೂಮಿಯ ಮೇಲೆ ಈ ಎಲ್ಲ ವಿಷಯಗಳನ್ನು ಮಾಡುತ್ತೇನೆಂದು ದೇವರೇ ಮಾತುಕೊಟ್ಟಿದ್ದಾನೆ. ಅದನ್ನು ಆತನು ಹೇಗೆ ಮಾಡುತ್ತಾನೆಂದು ಬೈಬಲಿನಲ್ಲಿ ತಿಳಿಸಲಾಗಿದೆ.
ಬೈಬಲಿನಲ್ಲಿ ಈ ವಿಷಯಗಳು ಮಾತ್ರವಲ್ಲ, ಈಗ ನಾವು ಸಂತೋಷದಿಂದ ಇರಬೇಕಾದರೆ, ಬದುಕನ್ನು ಆನಂದಿಸಬೇಕಾದರೆ ನಮಗೆ ಯಾವ ವಿಷಯಗಳು ತಿಳಿದಿರಬೇಕು ಎಂಬ ವಿಷಯಗಳು ಸಹ ಇವೆ. ಯಾವೆಲ್ಲ ಚಿಂತೆಗಳು ನಿಮಗಿವೆ ಎಂದು ಸ್ವಲ್ಪ ಯೋಚಿಸಿ. ಹಣಕಾಸಿನ ವಿಷಯ, ಸಂಸಾರದ ತಾಪತ್ರಯ, ಅನಾರೋಗ್ಯ, ಆಪ್ತರ ಮರಣ ಹೀಗೆ ಹತ್ತು ಹಲವಾರು ಚಿಂತೆಗಳಿರುತ್ತವೆ. ಆದರೆ ಇವುಗಳನ್ನು ನಿಭಾಯಿಸಲು ಬೈಬಲ್ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಸಹ ಬೈಬಲ್ ಕೊಡುತ್ತದೆ. ಆ ಉತ್ತರಗಳನ್ನು ತಿಳಿದುಕೊಂಡರೆ ನಿಮಗೆ ತುಂಬ ಸಾಂತ್ವನ ಸಿಗುತ್ತದೆ.
ನಮಗೆ ಕಷ್ಟಗಳು ಯಾಕಿವೆ?
ನಮಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಹೇಗೆ?
ನಾನೂ ನನ್ನ ಕುಟುಂಬ ಸಂತೋಷದಿಂದ ಇರುವುದು ಹೇಗೆ?
ಸತ್ತ ಮೇಲೆ ನಮಗೆ ಏನಾಗುತ್ತದೆ?
ತೀರಿಕೊಂಡಿರುವ ನಮ್ಮ ಪ್ರೀತಿಯ ಜನರನ್ನು ಪುನಃ ನೋಡಲು ಆಗುತ್ತದಾ?
ಈಗಿರುವ ಕಷ್ಟಗಳನ್ನು ದೇವರು ತೆಗೆದುಹಾಕುತ್ತಾನೆಂದು ನಾವು ಹೇಗೆ ಭರವಸೆ ಇಡಬಹುದು?
ನೀವು ಈ ಪುಸ್ತಕವನ್ನು ಓದುತ್ತಿದ್ದೀರೆಂದರೆ ನಿಮಗೆ ಬೈಬಲ್ ಬಗ್ಗೆ ಕಲಿಯುವ ಆಸೆಯಿದೆ ಎಂದರ್ಥ. ಈ ಪುಸ್ತಕದ ಸಹಾಯದಿಂದ ನೀವು ಬೈಬಲಿನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬಹುದು. ಎಲ್ಲ ಪ್ಯಾರಗಳಿಗೆ ಪ್ರಶ್ನೆಗಳನ್ನು ಕೊಡಲಾಗಿದೆ. ಆ ಪ್ರಶ್ನೆಗಳಿಂದ ನಿಮಗೆ ಬೈಬಲಿನಲ್ಲಿರುವ ವಿಷಯಗಳನ್ನು ತಿಳಿದುಕೊಳ್ಳಲು ಸುಲಭವಾಗುತ್ತದೆ. ಸಾವಿರಾರು ಜನರು ಯೆಹೋವನ ಸಾಕ್ಷಿಗಳ ಸಹಾಯದಿಂದ ಬೈಬಲಿನ ಬಗ್ಗೆ ಕಲಿತು ಖುಷಿಪಟ್ಟಿದ್ದಾರೆ. ನೀವು ಸಹ ಕಲಿತು ಖುಷಿಪಡುತ್ತೀರಿ ಎಂಬ ನಂಬಿಕೆ ನಮಗಿದೆ. ಬೈಬಲಿನಲ್ಲಿರುವ ವಿಷಯಗಳನ್ನು ತಿಳಿದುಕೊಳ್ಳುತ್ತಾ ಹೋದಂತೆ ದೇವರು ನಿಮ್ಮನ್ನು ಆಶೀರ್ವದಿಸಲಿ!