ಪಾಠ 39
ರಕ್ತದ ಬಗ್ಗೆ ದೇವರ ಅನಿಸಿಕೆ ಏನು?
ರಕ್ತ ತುಂಬ ಅಮೂಲ್ಯ, ಅದಿಲ್ಲಾ ಅಂದರೆ ನಮಗೆ ಬದುಕೋಕೆ ಆಗಲ್ಲ. ರಕ್ತವನ್ನ ಹೇಗೆ ಉಪಯೋಗಿಸಬೇಕು ಅಂತ ಹೇಳುವ ಹಕ್ಕು ಸೃಷ್ಟಿಕರ್ತ ದೇವರಿಗೆ ಮಾತ್ರ ಇದೆ. ದೇವರು ರಕ್ತದ ಬಗ್ಗೆ ಏನು ಹೇಳಿದ್ದಾನೆ? ನಾವು ರಕ್ತವನ್ನ ತಿನ್ನಬಹುದಾ? ಅಥವಾ ರಕ್ತವನ್ನ ನಮ್ಮ ದೇಹಕ್ಕೆ ತೆಗೆದುಕೊಳ್ಳಬಹುದಾ? ಈ ವಿಷಯದ ಬಗ್ಗೆ ಸರಿಯಾದ ತೀರ್ಮಾನವನ್ನ ಹೇಗೆ ಮಾಡಬಹುದು?
1. ರಕ್ತದ ಬಗ್ಗೆ ಯೆಹೋವ ದೇವರ ಅನಿಸಿಕೆ ಏನು?
ಯೆಹೋವ ದೇವರು ತನ್ನ ಹಿಂದಿನ ಕಾಲದ ಆರಾಧಕರಿಗೆ ಹೀಗೆ ಹೇಳಿದನು: ‘ಪ್ರತಿಯೊಂದು ಜೀವಿಯ ಜೀವ ಅದ್ರ ರಕ್ತದಲ್ಲಿ ಇದೆ.’ (ಯಾಜಕಕಾಂಡ 17:14) ಯೆಹೋವ ದೇವರ ದೃಷ್ಟಿಯಲ್ಲಿ ರಕ್ತ ಜೀವ ಆಗಿದೆ. ಜೀವ ಯೆಹೋವ ದೇವರು ಕೊಟ್ಟಿರುವ ಒಂದು ಅಮೂಲ್ಯ ಉಡುಗೊರೆ. ಹಾಗಾಗಿ ರಕ್ತವೂ ಅಮೂಲ್ಯ.
2. ರಕ್ತವನ್ನ ಹೇಗೆ ಬಳಸಬಾರದು ಅಂತ ದೇವರು ಹೇಳಿದ್ದಾನೆ?
ಕ್ರೈಸ್ತ ಸಭೆ ಆರಂಭ ಆಗೋದಕ್ಕಿಂತ ಮುಂಚೆ ಯೆಹೋವ ದೇವರು ತನ್ನ ಆರಾಧಕರಿಗೆ ರಕ್ತವನ್ನ ತಿನ್ನಬೇಡಿ ಅನ್ನೋ ಆಜ್ಞೆಯನ್ನ ಕೊಟ್ಟಿದ್ದನು. (ಆದಿಕಾಂಡ 9:4 ಮತ್ತು ಯಾಜಕಕಾಂಡ 17:10 ಓದಿ.) ಕ್ರೈಸ್ತ ಸಭೆ ಆರಂಭವಾದ ಸಮಯದಲ್ಲಿ ಯೆಹೋವ ದೇವರು ಈ ಆಜ್ಞೆಯನ್ನ ಮತ್ತೊಮ್ಮೆ ಒತ್ತಿಹೇಳಿದನು. ಆಡಳಿತ ಮಂಡಲಿಯ ಮೂಲಕ ಕ್ರೈಸ್ತರಿಗೆ, “ರಕ್ತದಿಂದ ದೂರ ಇರಿ” ಅನ್ನೋ ಆಜ್ಞೆಯನ್ನ ಕೊಟ್ಟನು.—ಅಪೊಸ್ತಲರ ಕಾರ್ಯ 15:28, 29 ಓದಿ.
ರಕ್ತದಿಂದ ದೂರವಿರುವುದು ಅಂದರೇನು? ಒಂದುವೇಳೆ ಡಾಕ್ಟರ್ ನಿಮಗೆ ಮದ್ಯಪಾನ ಮಾಡಬೇಡಿ ಅಂತ ಹೇಳಿದ್ರೆ ನೀವದನ್ನ ಕುಡಿಯೋದಿಲ್ಲ ಅಲ್ವಾ? ಆದರೆ ನೀವು ಮದ್ಯ ಸೇರಿರುವ ಆಹಾರವನ್ನ ತಿನ್ನುತ್ತೀರಾ? ಅಥವಾ ಮದ್ಯವನ್ನ ನಿಮ್ಮ ರಕ್ತನಾಳದ ಮೂಲಕ ದೇಹಕ್ಕೆ ಸೇರಿಸಿಕೊಳ್ಳುತ್ತೀರಾ? ಖಂಡಿತ ಇಲ್ಲ ಅಲ್ವಾ? ಅದೇ ತರ ದೇವರು ರಕ್ತದಿಂದ ದೂರ ಇರಿ ಅಂತ ಹೇಳಿದ್ದರ ಅರ್ಥ ನಾವು ರಕ್ತವನ್ನ ಕುಡಿಯಬಾರದು ಮತ್ತು ರಕ್ತ ಸುರಿಸದ ಪ್ರಾಣಿಯ ಮಾಂಸವನ್ನ ತಿನ್ನಬಾರದು. ಅಷ್ಟೇ ಅಲ್ಲ ರಕ್ತ ಇರುವ ಯಾವ ಆಹಾರವನ್ನೂ ತಿನ್ನಬಾರದು.
ರಕ್ತವನ್ನ ಚಿಕಿತ್ಸೆಗಾಗಿ ಉಪಯೋಗಿಸುವುದರ ಬಗ್ಗೆ ಏನು? ಕೆಲವು ಚಿಕಿತ್ಸಾ ರೀತಿಗಳು ಬೈಬಲಿಗೆ ವಿರುದ್ಧವಾಗಿವೆ. ಅಂಥ ಚಿಕಿತ್ಸಾ ರೀತಿಗಳಲ್ಲಿ ರಕ್ತವನ್ನ ಅಥವಾ ರಕ್ತದ ಘಟಕಗಳಾದ ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು, ಪ್ಲಾಸ್ಮಾ ಮತ್ತು ಕಿರುಬಿಲ್ಲೆಗಳನ್ನ (ಪ್ಲೇಟ್ಲೆಟ್ಸ್) ತೆಗೆದುಕೊಳ್ಳೋದು ಸೇರಿದೆ. ಕೆಲವು ಚಿಕಿತ್ಸೆಗಳನ್ನ ಪಡೆದುಕೊಳ್ಳಬೇಕಾ ಬೇಡ್ವಾ ಅನ್ನೋದರ ಬಗ್ಗೆ ಬೈಬಲಿನಲ್ಲಿ ನೇರವಾದ ನಿಯಮಗಳು ಇಲ್ಲ. ಉದಾಹರಣೆಗೆ ಕೆಲವು ಚಿಕಿತ್ಸೆಯಲ್ಲಿ ರಕ್ತದ ಮುಖ್ಯ ಘಟಕಗಳಿಂದ ತೆಗೆದಿರುವ ಚಿಕ್ಕಚಿಕ್ಕ ಅಂಶಗಳನ್ನ ಉಪಯೋಗಿಸಲಾಗುತ್ತೆ. ಇನ್ನೂ ಕೆಲವು ಚಿಕಿತ್ಸಾ ವಿಧಾನಗಳಲ್ಲಿ ರೋಗಿಯ ಸ್ವಂತ ರಕ್ತವನ್ನೇ ಬಳಸಲಾಗುತ್ತೆ. ಈ ರೀತಿಯ ಚಿಕಿತ್ಸೆಗಳನ್ನ ಆಯ್ಕೆ ಮಾಡುವಾಗ ಪ್ರತಿಯೊಬ್ಬರೂ ವೈಯಕ್ತಿಕ ತೀರ್ಮಾನವನ್ನ ತೆಗೆದುಕೊಳ್ಳಬೇಕು.a—ಗಲಾತ್ಯ 6:5.
ಹೆಚ್ಚನ್ನ ತಿಳಿಯೋಣ
ನೀವು ತೆಗೆದುಕೊಳ್ಳುವ ಚಿಕಿತ್ಸೆಯ ಬಗ್ಗೆ ಸರಿಯಾದ ತೀರ್ಮಾನ ಮಾಡೋದು ಹೇಗೆ ಅಂತ ತಿಳಿಯಿರಿ.
3. ಯೆಹೋವ ದೇವರಿಗೆ ಇಷ್ಟವಾಗುವ ನಿರ್ಧಾರಗಳನ್ನ ಮಾಡಿ
ಚಿಕಿತ್ಸೆಯ ವಿಷಯದಲ್ಲಿ ಯೆಹೋವ ದೇವರಿಗೆ ಇಷ್ಟವಾಗುವ ನಿರ್ಧಾರಗಳನ್ನ ಮಾಡೋದು ಹೇಗೆ? ವಿಡಿಯೋ ನೋಡಿ, ನಂತರ ಕೆಳಗಿನ ಸಲಹೆಗಳನ್ನ ಪಾಲಿಸೋದು ಯಾಕೆ ಪ್ರಾಮುಖ್ಯ ಅಂತ ಚರ್ಚಿಸಿ.
ವಿವೇಕಕ್ಕಾಗಿ ಪ್ರಾರ್ಥಿಸಿ.—ಯಾಕೋಬ 1:5.
ಬೈಬಲ್ ತತ್ವಗಳಿಗಾಗಿ ಸಂಶೋಧನೆ ಮಾಡಿ ಮತ್ತು ಅದನ್ನ ಅನ್ವಯಿಸಿ.—ಜ್ಞಾನೋಕ್ತಿ 13:16.
ನೀವಿರೋ ಸ್ಥಳದಲ್ಲಿ ಯಾವೆಲ್ಲಾ ಚಿಕಿತ್ಸೆಗಳು ಸಿಗುತ್ತವೆ ಅಂತ ತಿಳಿದುಕೊಳ್ಳಿ.
ಅದರಲ್ಲಿ ನೀವು ತೆಗೆದುಕೊಳ್ಳಬಾರದ ಚಿಕಿತ್ಸೆಗಳು ಯಾವುದು ಅಂತ ಗುರುತಿಸಿ.
ನೀವು ಮಾಡುವ ತೀರ್ಮಾನದಿಂದ ನಿಮಗೆ ಒಳ್ಳೇ ಮನಸ್ಸಾಕ್ಷಿ ಇರುತ್ತಾ ಅಂತ ಯೋಚಿಸಿ.—ಅಪೊಸ್ತಲರ ಕಾರ್ಯ 24:16.b
ರಕ್ತದ ವಿಷಯದಲ್ಲಿ ನಿಮ್ಮ ಮನಸ್ಸಾಕ್ಷಿಗೆ ಸಂಬಂಧಪಟ್ಟ ತೀರ್ಮಾನಗಳನ್ನ ನಿಮಗೋಸ್ಕರ ಬೇರೆ ಯಾರೂ ಮಾಡಕ್ಕಾಗಲ್ಲ ಅನ್ನೋದನ್ನ ಅರ್ಥಮಾಡಿಕೊಳ್ಳಿ. ಅದನ್ನ ನಿಮಗೋಸ್ಕರ ನಿಮ್ಮ ಸಂಗಾತಿಯಾಗಲಿ, ಸಭೆಯ ಹಿರಿಯನಾಗಲಿ ಅಥವಾ ನಿಮ್ಮ ಬೈಬಲ್ ಟೀಚರ್ ಆಗಲಿ ಮಾಡಕ್ಕಾಗಲ್ಲ.—ರೋಮನ್ನರಿಗೆ 14:12.
ನಿಮ್ಮ ತೀರ್ಮಾನವನ್ನ ಬರೆದಿಡಿ.
4. ಯೆಹೋವನ ಸಾಕ್ಷಿಗಳು ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಾರೆ
ರಕ್ತದ ವಿಷಯದಲ್ಲಿ ಯೆಹೋವ ದೇವರ ನಿಯಮವನ್ನ ಪಾಲಿಸೋದರ ಜೊತೆಗೆ ಅತ್ಯುತ್ತಮ ಚಿಕಿತ್ಸೆಯನ್ನ ಪಡೆದುಕೊಳ್ಳೋಕೂ ಸಾಧ್ಯ. ವಿಡಿಯೋ ನೋಡಿ.
ತೀತ 3:2 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಡಾಕ್ಟರ್ ಹತ್ತಿರ ಮಾತಾಡುವಾಗ ನಾವು ಯಾಕೆ ಸೌಮ್ಯಭಾವದಿಂದ, ಗೌರವದಿಂದ ನಡೆದುಕೊಳ್ಳಬೇಕು?
ತೆಗೆದುಕೊಳ್ಳುವುದಿಲ್ಲ |
ನೀವೇ ನಿರ್ಧಾರ ಮಾಡಬೇಕು |
---|---|
A. ಪ್ಲಾಸ್ಮಾ |
ಪ್ಲಾಸ್ಮಾದ ಚಿಕ್ಕಚಿಕ್ಕ ಅಂಶಗಳು |
B. ಬಿಳಿ ರಕ್ತ ಕಣಗಳು |
ಬಿಳಿ ರಕ್ತ ಕಣಗಳ ಚಿಕ್ಕಚಿಕ್ಕ ಅಂಶಗಳು |
C. ಕಿರುಬಿಲ್ಲೆಗಳು (ಪ್ಲೇಟ್ಲೆಟ್ಸ್) |
ಕಿರುಬಿಲ್ಲೆಗಳ ಚಿಕ್ಕಚಿಕ್ಕ ಅಂಶಗಳು |
D. ಕೆಂಪು ರಕ್ತ ಕಣಗಳು |
ಕೆಂಪು ರಕ್ತ ಕಣಗಳ ಚಿಕ್ಕಚಿಕ್ಕ ಅಂಶಗಳು |
5. ರಕ್ತದ ಚಿಕ್ಕಚಿಕ್ಕ ಅಂಶಗಳು ಒಳಗೂಡಿರುವ ಚಿಕಿತ್ಸೆಗಳು
ರಕ್ತದಲ್ಲಿ ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು, ಪ್ಲೇಟ್ಲೆಟ್ಸ್ ಮತ್ತು ಪ್ಲಾಸ್ಮಾ ಅನ್ನೋ ನಾಲ್ಕು ಮುಖ್ಯ ಘಟಕಗಳಿವೆ. ಈ ಪ್ರತಿಯೊಂದು ಘಟಕಗಳಲ್ಲಿ ತುಂಬ ಚಿಕ್ಕಚಿಕ್ಕ ಕಣಗಳಿವೆ. ಇವುಗಳನ್ನ ಚಿಕ್ಕಚಿಕ್ಕ ಅಂಶಗಳು ಅಂತ ಕರೆಯುತ್ತಾರೆ.c ಕಾಯಿಲೆಗಳನ್ನ ತಡೆಗಟ್ಟುವ ಮತ್ತು ರಕ್ತಸ್ರಾವವನ್ನ ನಿಲ್ಲಿಸುವ ಔಷಧಿಗಳಲ್ಲಿ ಇಂಥ ಚಿಕ್ಕಚಿಕ್ಕ ಅಂಶಗಳನ್ನ ಉಪಯೋಗಿಸಲಾಗುತ್ತೆ.
ಈ ಚಿಕ್ಕಚಿಕ್ಕ ಅಂಶಗಳನ್ನ ತೆಗೆದುಕೊಳ್ಳಬೇಕಾ ಬೇಡ್ವಾ ಅಂತ ಪ್ರತಿಯೊಬ್ಬ ಕ್ರೈಸ್ತನು ಬೈಬಲಿನಿಂದ ಕಲಿತ ವಿಷಯಗಳ ಪ್ರಕಾರ ತಾವಾಗಿಯೇ ತೀರ್ಮಾನ ಮಾಡಬೇಕು. ರಕ್ತದ ಚಿಕ್ಕಚಿಕ್ಕ ಅಂಶಗಳು ಒಳಗೂಡಿರುವ ಚಿಕಿತ್ಸೆಯನ್ನ ಕೆಲವರ ಮನಸ್ಸಾಕ್ಷಿ ಒಪ್ಪುತ್ತೆ ಇನ್ನೂ ಕೆಲವರ ಮನಸ್ಸಾಕ್ಷಿ ಒಪ್ಪಲ್ಲ.
ಇಂಥ ತೀರ್ಮಾನಗಳನ್ನ ಮಾಡುವಾಗ ಈ ಪ್ರಶ್ನೆಯನ್ನ ಕೇಳಿಕೊಳ್ಳಿ:
ರಕ್ತದ ಕೆಲವು ಚಿಕ್ಕಚಿಕ್ಕ ಅಂಶಗಳನ್ನ ನಾನು ಯಾಕೆ ತೆಗೆದುಕೊಳ್ಳುವುದಿಲ್ಲ ಅಥವಾ ಯಾಕೆ ತೆಗೆದುಕೊಳ್ಳುತ್ತೇನೆ ಅಂತ ಡಾಕ್ಟರ್ಗೆ ಹೇಗೆ ವಿವರಿಸಬಹುದು?
ಕೆಲವರು ಹೀಗಂತಾರೆ: “ರಕ್ತ ತೆಗೆದುಕೊಳ್ಳಲಿಲ್ಲ ಅಂದರೆ ಜೀವ ಹೋಗುತ್ತಲ್ವಾ, ಹಾಗಾಗಿ ರಕ್ತ ತಗೊಂಡ್ರೆ ತಪ್ಪೇನಿದೆ?”
ನೀವೇನು ಹೇಳ್ತೀರಾ?
ನಾವೇನು ಕಲಿತ್ವಿ
ನಾವು ರಕ್ತವನ್ನ ಅಮೂಲ್ಯವಾಗಿ ನೋಡಬೇಕು ಅಂತ ಯೆಹೋವ ದೇವರು ಬಯಸ್ತಾನೆ.
ನೆನಪಿದೆಯಾ
ಯೆಹೋವ ದೇವರು ರಕ್ತವನ್ನ ಯಾಕೆ ಅಮೂಲ್ಯವಾಗಿ ನೋಡ್ತಾನೆ?
ರಕ್ತದಿಂದ ದೂರವಿರಿ ಅಂತ ದೇವರು ಹೇಳಿರೋದು, ರಕ್ತ ತೆಗೆದುಕೊಳ್ಳಬಾರದು ಅನ್ನೋದಕ್ಕೂ ಅನ್ವಯಿಸುತ್ತೆ ಅಂತ ಹೇಗೆ ಹೇಳಬಹುದು?
ರಕ್ತವನ್ನ ತೆಗೆದುಕೊಳ್ಳಬೇಕಾ ಬೇಡ್ವಾ ಅನ್ನೋ ವಿಷಯದಲ್ಲಿ ನೀವು ಹೇಗೆ ಒಳ್ಳೇ ತೀರ್ಮಾನವನ್ನ ಮಾಡಬಹುದು?
ಇದನ್ನೂ ನೋಡಿ
ನಿಮ್ಮ ರಕ್ತವನ್ನೇ ಉಪಯೋಗಿಸಿ ಮಾಡುವ ಚಿಕಿತ್ಸೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗ ಯಾವ ವಿಷಯಗಳನ್ನ ಮನಸ್ಸಿನಲ್ಲಿಡಬೇಕು?
ರಕ್ತದ ಚಿಕ್ಕಚಿಕ್ಕ ಅಂಶಗಳನ್ನ ತೆಗೆದುಕೊಳ್ಳಬೇಕಾ ಬೇಡ್ವಾ ಅಂತ ತೀರ್ಮಾನ ಮಾಡುವಾಗ ಯಾವೆಲ್ಲಾ ವಿಷಯಗಳನ್ನ ಮನಸ್ಸಿನಲ್ಲಿಡಬೇಕು?
ರಕ್ತವನ್ನ ಉಪಯೋಗಿಸೋದ್ರ ಬಗ್ಗೆ ಯೆಹೋವನು ಕೊಟ್ಟಿರುವ ನಿಯಮ ಸರಿಯಾಗಿದೆ ಅಂತ ಒಬ್ಬ ಡಾಕ್ಟರ್ ನಂಬಲು ಕಾರಣವೇನು?
“ರಕ್ತದ ಬಗ್ಗೆ ದೇವರ ಯೋಚನೆ ಸರಿಯಾಗಿದೆ ಅಂತ ನಾನು ಅರ್ಥಮಾಡಿಕೊಂಡೆ” (ಎಚ್ಚರ! ಲೇಖನ)
ಆಸ್ಪತ್ರೆ ಸಂಪರ್ಕ ಸಮಿತಿ (HLC) ಹಿರಿಯರು ಹೇಗೆ ಸಹೋದರ ಸಹೋದರಿಯರಿಗೆ ಸಹಾಯ ಮಾಡ್ತಿದ್ದಾರೆ ಅಂತ ನೋಡಿ.
b ಉಪಶೀರ್ಷಿಕೆ 5ರಲ್ಲಿರುವ “ರಕ್ತದ ಚಿಕ್ಕಚಿಕ್ಕ ಅಂಶಗಳು ಒಳಗೂಡಿರುವ ಚಿಕಿತ್ಸೆಗಳು,” ಮತ್ತು ಟಿಪ್ಪಣಿ 3ರಲ್ಲಿರುವ “ರಕ್ತ ಒಳಗೂಡಿರುವ ಚಿಕಿತ್ಸಾ ಕ್ರಮಗಳು.”
c ಕೆಲವು ಡಾಕ್ಟರ್ಗಳು ರಕ್ತದ ನಾಲ್ಕು ಮುಖ್ಯ ಘಟಕಗಳೇ ಅವುಗಳ ಚಿಕ್ಕಚಿಕ್ಕ ಅಂಶಗಳು ಅಂತ ಅಂದುಕೊಳ್ಳುತ್ತಾರೆ. ಹಾಗಾಗಿ ನಿಮ್ಮ ವೈಯಕ್ತಿಕ ನಿರ್ಧಾರದ ಬಗ್ಗೆ ಹೇಳುವಾಗ ನೀವು ರಕ್ತವನ್ನಾಗಲಿ, ಅದರ ನಾಲ್ಕು ಮುಖ್ಯ ಘಟಕಗಳಾಗಿರುವ ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು, ಪ್ಲೇಟ್ಲೆಟ್ಸ್ ಮತ್ತು ಪ್ಲಾಸ್ಮಾವನ್ನಾಗಲಿ ತೆಗೆದುಕೊಳ್ಳುವುದಿಲ್ಲ ಅಂತ ಸ್ಪಷ್ಟವಾಗಿ ಹೇಳಬೇಕಾಗಬಹುದು.