ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • es26 ಪು. 7-19
  • ಜನವರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿ
  • ದಿನದ ವಚನ ಓದಿ ಚರ್ಚಿಸೋಣ—2026
  • ಉಪಶೀರ್ಷಿಕೆಗಳು
  • ಗುರುವಾರ, ಜನವರಿ 1
  • ಶುಕ್ರವಾರ, ಜನವರಿ 2
  • ಶನಿವಾರ, ಜನವರಿ 3
  • ಭಾನುವಾರ, ಜನವರಿ 4
  • ಸೋಮವಾರ, ಜನವರಿ 5
  • ಮಂಗಳವಾರ, ಜನವರಿ 6
  • ಬುಧವಾರ, ಜನವರಿ 7
  • ಗುರುವಾರ, ಜನವರಿ 8
  • ಶುಕ್ರವಾರ, ಜನವರಿ 9
  • ಶನಿವಾರ, ಜನವರಿ 10
  • ಭಾನುವಾರ, ಜನವರಿ 11
  • ಸೋಮವಾರ, ಜನವರಿ 12
  • ಮಂಗಳವಾರ, ಜನವರಿ 13
  • ಬುಧವಾರ, ಜನವರಿ 14
  • ಗುರುವಾರ, ಜನವರಿ 15
  • ಶುಕ್ರವಾರ, ಜನವರಿ 16
  • ಶನಿವಾರ, ಜನವರಿ 17
  • ಭಾನುವಾರ, ಜನವರಿ 18
  • ಸೋಮವಾರ, ಜನವರಿ 19
  • ಮಂಗಳವಾರ, ಜನವರಿ 20
  • ಬುಧವಾರ, ಜನವರಿ 21
  • ಗುರುವಾರ, ಜನವರಿ 22
  • ಶುಕ್ರವಾರ, ಜನವರಿ 23
  • ಶನಿವಾರ, ಜನವರಿ 24
  • ಭಾನುವಾರ, ಜನವರಿ 25
  • ಸೋಮವಾರ, ಜನವರಿ 26
  • ಮಂಗಳವಾರ, ಜನವರಿ 27
  • ಬುಧವಾರ, ಜನವರಿ 28
  • ಗುರುವಾರ, ಜನವರಿ 29
  • ಶುಕ್ರವಾರ, ಜನವರಿ 30
  • ಶನಿವಾರ, ಜನವರಿ 31
ದಿನದ ವಚನ ಓದಿ ಚರ್ಚಿಸೋಣ—2026
es26 ಪು. 7-19

ಜನವರಿ

ಗುರುವಾರ, ಜನವರಿ 1

ಬುದ್ಧಿವಂತಿಕೆಯಲ್ಲಿ ಮಗು ತರ ಇರದೆ, ದೊಡ್ಡವ್ರ ತರ ಇರಿ.—1 ಕೊರಿಂ. 14:20.

ಒಂದು ಮಗು ಹುಟ್ಟಿದಾಗ ಅಪ್ಪ-ಅಮ್ಮನಿಗೆ ಎಷ್ಟು ಖುಷಿಯಾಗುತ್ತೆ ಅಲ್ವಾ? ಆದ್ರೆ ಆ ಮಗು ಬೆಳಿದೇ ಹಾಗೇ ಇದ್ದುಬಿಟ್ರೆ ಅವ್ರಿಗೆ ಚಿಂತೆ ಆಗುತ್ತೆ. ಅದೇ ತರ ನಾವು ಮೊದಮೊದ್ಲು ಸತ್ಯ ಕಲಿತಾಗ ಯೆಹೋವನಿಗೂ ತುಂಬ ಖುಷಿ ಆಯ್ತು. ಆದ್ರೆ ನಾವು ನಿಂತ ನೀರಿನ ತರ ಇದ್ದುಬಿಟ್ರೆ ಆತನಿಗೆ ಬೇಜಾರಾಗುತ್ತೆ. (1 ಕೊರಿಂ. 3:1) ಅದಕ್ಕೇ ಆತನು “ದೊಡ್ಡವ್ರ ತರ ಇರಿ” ಅಥವಾ ಪ್ರೌಢರಾಗಿ ಅಂತ ನಮ್ಮ ಹತ್ರ ಕೇಳ್ಕೊಳ್ತಿದ್ದಾನೆ. “ದೊಡ್ಡವ್ರ ತರ ಇರಿ” ಅನ್ನೋ ಗ್ರೀಕ್‌ ಪದವನ್ನ ಭಾಷಾಂತರಿಸಿದಾಗ “ಪ್ರೌಢರಾಗಿ ಇರೋದು,” “ಪರಿಪೂರ್ಣರಾಗಿ ಇರೋದು” ಮತ್ತು “ಪೂರ್ತಿಯಾಗಿ ಇರೋದು” ಅನ್ನೋ ಅರ್ಥನೂ ಕೊಡುತ್ತೆ. (1 ಕೊರಿಂ. 2:6) ಒಂದು ಮಗು ದೊಡ್ಡದಾಗಬೇಕಂದ್ರೆ ಬೆಳಿತಾ ಇರಬೇಕು. ಹಾಗೇ ಒಬ್ಬ ವ್ಯಕ್ತಿ ಪ್ರೌಢ ಕ್ರೈಸ್ತನಾಗಬೇಕಂದ್ರೆ ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸ್ಕೊಳ್ತಾ ಇರಬೇಕು. ಹಾಗಂತ ನಾವು ಪ್ರೌಢರಾದ ಮೇಲೆ ಪ್ರಗತಿ ಮಾಡೋದನ್ನ ನಿಲ್ಲಿಸಿಬಿಡಬಾರದು, ಪ್ರಯತ್ನ ಮಾಡ್ತಾನೇ ಇರಬೇಕು.—1 ತಿಮೊ. 4:15. w24.04 2 ¶1, 3

ಶುಕ್ರವಾರ, ಜನವರಿ 2

ನನ್ನ ಡೇರೆ ಅವ್ರ ಮಧ್ಯ ಇರುತ್ತೆ. ನಾನು ಅವ್ರ ದೇವರಾಗಿ ಇರ್ತಿನಿ.—ಯೆಹೆ. 37:27.

ಯೆಹೋವ ನಿಮ್ಮ ಜೀವನದಲ್ಲಿ ಯಾರಾಗಿದ್ದಾನೆ? ನೀವು ಕೆಲವೊಮ್ಮೆ ಯೆಹೋವ ನನಗೆ ಅಪ್ಪ ಆಗಿದ್ದಾನೆ, ನನಗೆ ದೇವರಾಗಿದ್ದಾನೆ ಅಥವಾ ನನ್ನ ಫ್ರೆಂಡ್‌ ಆಗಿದ್ದಾನೆ ಅಂತ ಹೇಳಬಹುದು. ಇದಷ್ಟೇ ಅಲ್ಲ, ಇನ್ನೂ ಬೇರೆಬೇರೆ ಪದಗಳಿಂದ ನೀವು ಯೆಹೋವನನ್ನ ವರ್ಣಿಸಬಹುದು. ಆದ್ರೆ ಯಾವತ್ತಾದ್ರೂ ನೀವು ಯೆಹೋವ ನನಗೆ ಆತಿಥ್ಯ ಮಾಡುವವನು ಅಂತ ಅಂದ್ಕೊಂಡಿದ್ದೀರಾ? ರಾಜ ದಾವೀದ ಯೆಹೋವ ದೇವರನ್ನ ಆತಿಥ್ಯ ಮಾಡುವವನಾಗಿ ಮತ್ತು ಆತನ ಸೇವಕರನ್ನ ಅತಿಥಿಗಳಾಗಿ ವರ್ಣಿಸಿದ್ದಾನೆ. ಅದಕ್ಕೆ ಅವನು “ಯೆಹೋವನೇ, ನಿನ್ನ ಡೇರೆಯಲ್ಲಿ ಯಾರು ಅತಿಥಿಯಾಗಿ ಇರಬಹುದು? ನಿನ್ನ ಪವಿತ್ರ ಬೆಟ್ಟಕ್ಕೆ ಯಾರು ಬರಬಹುದು?” ಅಂತ ಕೇಳಿದ. (ಕೀರ್ತ. 15:1) ಅವನ ಮಾತಿನಿಂದ ನಮಗೆ ಏನು ಗೊತ್ತಾಗುತ್ತೆ? ನಾವು ಯೆಹೋವ ದೇವರ ಅತಿಥಿಗಳಾಗಬಹುದು. ಅಂದ್ರೆ ಆತನ ಸ್ನೇಹಿತರು ಆಗಬಹುದು ಅಂತ ಗೊತ್ತಾಗುತ್ತೆ. ಯೆಹೋವ ದೇವರು ಎಲ್ಲವನ್ನ ಸೃಷ್ಟಿ ಮಾಡೋಕೆ ಮುಂಚೆ, ಒಬ್ಬನೇ ಇದ್ದ. ಆದ್ರೆ ಆತನು ತನ್ನ ಮೊದಲನೇ ಮಗನನ್ನ ಸೃಷ್ಟಿ ಮಾಡಿದ ಮೇಲೆ, ತನ್ನ ಸಾಂಕೇತಿಕ ಡೇರೆಗೆ ಅವನನ್ನ ಅತಿಥಿಯಾಗಿ ಕರೆದ. ಮೊದಲನೇ ಸಲ ಆತನು ಆತಿಥ್ಯ ಮಾಡಿದಾಗ ಆತನಿಗೆ ತುಂಬ ಸಂತೋಷ ಆಯ್ತು. ಆಗ ಅವ್ರಿಬ್ರಿಗೂ ಹೇಗೆ ಅನಿಸಿತ್ತು ಅಂತ ಬೈಬಲ್‌ ಹೇಳುತ್ತೆ. ಯೆಹೋವ ದೇವರು ಯೇಸುವನ್ನ “ನೋಡಿ ಖುಷಿಪಡ್ತಿದ್ದ” ಮತ್ತು ಯೇಸು ‘ಯೆಹೋವನ ಮುಂದೆ ಯಾವಾಗ್ಲೂ ನಗುನಗ್ತಾ ಇದ್ದ’ ಅಂತ ಹೇಳುತ್ತೆ.—ಜ್ಞಾನೋ. 8:30. w24.06 2 ¶1-3

ಶನಿವಾರ, ಜನವರಿ 3

ಚಾದೋಕ ಧೈರ್ಯಶಾಲಿ, ವೀರ ಸೈನಿಕನಾಗಿದ್ದ.—1 ಪೂರ್ವ. 12:28.

ಹೆಬ್ರೋನಿನ ಹತ್ರ ಇದ್ದ ಬೆಟ್ಟ ಪ್ರದೇಶದಲ್ಲಿ ಏನಾಗ್ತಿದೆ ಅಂತ ಸ್ವಲ್ಪ ಕಲ್ಪಿಸಿಕೊಳ್ಳಿ. ದಾವೀದನನ್ನ ಇಸ್ರಾಯೇಲಿನ ರಾಜನಾಗಿ ಮಾಡೋಕೆ ಸುಮಾರು 3,40,000 ಗಂಡಸರು ಸೇರಿ ಬಂದಿದ್ದಾರೆ. ಮೂರು ದಿನಗಳಿಂದ ಅವರು ತುಂಬ ಖುಷಿಯಾಗಿ ಒಬ್ರಿಗೊಬ್ರು ಮಾತಾಡ್ತಿದ್ದಾರೆ, ಯೆಹೋವನಿಗೆ ಸ್ತುತಿಗೀತೆಗಳನ್ನ ಹಾಡ್ತಿದ್ದಾರೆ. ಅವ್ರ ಆ ಸದ್ದುಗದ್ದಲ ಹೆಬ್ರೋನಿನ ಬೆಟ್ಟಗಳಲ್ಲೆಲ್ಲ ಪ್ರತಿಧ್ವನಿಸ್ತಿದೆ. (1 ಪೂರ್ವ. 12:39) ಇವ್ರೆಲ್ರ ಮಧ್ಯ ಒಬ್ಬ ವ್ಯಕ್ತಿ ಇದ್ದ. ಅವನೇ ಚಾದೋಕ. ಇಷ್ಟು ದೊಡ್ಡ ಗುಂಪಲ್ಲಿ ಜನ್ರು ಅವನನ್ನ ಗುರುತಿಸಿರಲಿಕ್ಕಿಲ್ಲ. ಆದ್ರೆ ಯೆಹೋವ ಅವನನ್ನ ಗುರುತಿಸಿದನು. ಅಷ್ಟೇ ಅಲ್ಲ ನಾವೂ ಅವನ ಬಗ್ಗೆ ತಿಳ್ಕೊಬೇಕು ಅಂತ ಆತನು ಇಷ್ಟಪಟ್ಟನು. (1 ಪೂರ್ವ. 12:22, 26-28) ಚಾದೋಕ ಒಬ್ಬ ಪುರೋಹಿತನಾಗಿದ್ದ. ಇವನು ಮಹಾ ಪುರೋಹಿತನಾದ ಎಬ್ಯಾತಾರನ ಜೊತೆ ಕೆಲಸ ಮಾಡ್ತಿದ್ದ. ಚಾದೋಕ ದಿವ್ಯದೃಷ್ಟಿ ಇರೋ ವ್ಯಕ್ತಿಯಾಗಿದ್ದ. ಅಂದ್ರೆ ದೇವರು ಅವನಿಗೆ ತುಂಬ ವಿವೇಕ ಕೊಟ್ಟಿದ್ದನು ಮತ್ತು ತನ್ನ ಇಷ್ಟವನ್ನ ಅರ್ಥಮಾಡ್ಕೊಳ್ಳೋ ಸಾಮರ್ಥ್ಯನೂ ಕೊಟ್ಟಿದ್ದನು. (2 ಸಮು. 15:27) ಅವನು ತುಂಬ ಧೈರ್ಯಶಾಲಿ ಆಗಿದ್ದ. ಈ ಕೊನೇ ದಿನಗಳಲ್ಲಿ ಯೆಹೋವನ ಜೊತೆಗೆ ನಮಗಿರೋ ಸಂಬಂಧನ ಹಾಳು ಮಾಡೋಕೆ ಸೈತಾನ ಮುಂಚೆಗಿಂತ ಈಗ ಜಾಸ್ತಿ ಪ್ರಯತ್ನ ಮಾಡ್ತಿದ್ದಾನೆ. (1 ಪೇತ್ರ 5:8) ಯೆಹೋವ ದೇವರು ಸೈತಾನನನ್ನ ಮತ್ತು ಲೋಕವನ್ನ ನಾಶ ಮಾಡೋವರೆಗೂ ಸಮಸ್ಯೆಗಳನ್ನ ಎದುರಿಸೋಕೆ ನಾವು ಧೈರ್ಯ ತೋರಿಸಬೇಕಾಗುತ್ತೆ. (ಕೀರ್ತ. 31:24) ನಮಗೆ ಚಾದೋಕನ ತರ ಧೈರ್ಯ ತೋರಿಸೋ ಅಗತ್ಯ ಇದೆ. w24.07 2 ¶1-3

ಭಾನುವಾರ, ಜನವರಿ 4

ಆದಾಮ ಒಟ್ಟು 930 ವರ್ಷ ಬದುಕಿ ಸತ್ತ.—ಆದಿ. 5:5.

ಯೆಹೋವ ದೇವರು ಮೊದಲ ಗಂಡು ಮತ್ತು ಹೆಣ್ಣನ್ನ ಸೃಷ್ಟಿ ಮಾಡಿದನು ಮತ್ತು ಅವರು ಸಂತೋಷವಾಗಿ ಇರಬೇಕು ಅಂತ ಆಸೆ ಪಟ್ಟನು. ಅವ್ರಿಗೆ ಒಂದು ಸುಂದರವಾದ ತೋಟನ ಮನೆಯಾಗಿ ಕೊಟ್ಟನು, ಅವ್ರಿಗೆ ಮದುವೆ ಮಾಡಿಸಿದನು, ಮಾಡೋಕೆ ಒಳ್ಳೇ ಕೆಲಸನೂ ಕೊಟ್ಟನು. ಅವರು ಇಡೀ ಭೂಮಿಲಿ ತಮ್ಮ ಮಕ್ಕಳು ತುಂಬ್ಕೊಳ್ಳೋ ತರ ಮಾಡಬೇಕಿತ್ತು, ಏದೆನ್‌ ತೋಟದ ತರನೇ ಇಡೀ ಭೂಮಿಯನ್ನ ಪರದೈಸಾಗಿ ಮಾಡಬೇಕಿತ್ತು. ಅದ್ರ ಜೊತೆಗೆ ಆತನು ಅವ್ರಿಗೆ ಒಂದು ಚಿಕ್ಕ ನಿಯಮನೂ ಕೊಟ್ಟನು. ಆ ನಿಯಮನ ಮುರಿದ್ರೆ ಬೇಕುಬೇಕಂತ ಪಾಪ ಮಾಡಿದ ಹಾಗೆ ಇರುತ್ತೆ ಮತ್ತು ಅದ್ರಿಂದ ಸಾವು ಬರುತ್ತೆ ಅಂತ ಅವ್ರನ್ನ ಎಚ್ಚರಿಸಿದನು. ಆಮೇಲೆ ಏನಾಯ್ತು ಅಂತ ನಮಗೇ ಚೆನ್ನಾಗಿ ಗೊತ್ತು. ಒಬ್ಬ ದೇವದೂತ ಅವ್ರ ಹತ್ರ ಬಂದ, ಅವನು ದೇವರ ನಿಯಮ ಮುರಿಯೋಕೆ ಅವ್ರನ್ನ ಪುಸಲಾಯಿಸಿದ. ಅವನಿಗೆ ದೇವರ ಮೇಲಾಗಲಿ, ಇವ್ರ ಮೇಲಾಗಲಿ ಒಂಚೂರೂ ಪ್ರೀತಿ ಇರಲಿಲ್ಲ. ಆದ್ರೆ ಆದಾಮ ಮತ್ತು ಹವ್ವ ಅವನ ಮಾತನ್ನ ಕಣ್ಮುಚ್ಚಿ ನಂಬಿದ್ರು. ಪ್ರೀತಿಯ ಅಪ್ಪ ಆಗಿರೋ ಯೆಹೋವ ಇಟ್ಟಿದ್ದ ನಂಬಿಕೆನ ಅವರು ಉಳಿಸ್ಕೊಳ್ಳಲಿಲ್ಲ. ಈ ತರ ಪಾಪ ಮಾಡಿದ್ರಿಂದ ಏನಾಯ್ತು? ಅವ್ರಿಗೆ ವಯಸ್ಸಾಯ್ತು, ಕೊನೆಗೆ ಸತ್ತುಹೋದ್ರು. ಹೀಗೆ ಯೆಹೋವ ಹೇಳಿದ ಮಾತು ನಿಜ ಆಯ್ತು.—ಆದಿ. 1:28, 29; 2:8, 9, 16-18; 3:1-6, 17-19, 24. w24.08 3 ¶3

ಸೋಮವಾರ, ಜನವರಿ 5

ದೇವರ ಮಾತಿನ ಪ್ರಕಾರ ನಡೀರಿ. ಬರೀ ಕೇಳಿ ಅದನ್ನ ಬಿಟ್ಟುಬಿಡಬೇಡಿ.—ಯಾಕೋ. 1:22.

ಯೆಹೋವ ಮತ್ತು ಯೇಸು ನಾವೆಲ್ರೂ ಚೆನ್ನಾಗಿ ಇರಬೇಕಂತ ಇಷ್ಟಪಡ್ತಾರೆ. ಅದಕ್ಕೇ ಕೀರ್ತನೆ 119:2 ಹೀಗೆ ಹೇಳುತ್ತೆ: “ಆತನು ಕೊಡೋ ಎಚ್ಚರಿಕೆಗಳನ್ನ ಯಾರು ಪಾಲಿಸ್ತಾರೋ, ಪೂರ್ಣಹೃದಯದಿಂದ ಆತನಿಗಾಗಿ ಯಾರು ಹುಡುಕ್ತಾರೋ ಅವರು ಖುಷಿಯಿಂದ ಇರ್ತಾರೆ.” ಇದ್ರ ಬಗ್ಗೆನೇ ಯೇಸು “ದೇವರ ಮಾತು ಕೇಳಿಸ್ಕೊಂಡು ಅದ್ರ ಪ್ರಕಾರ ನಡೆಯೋರು ಇನ್ನೂ ಖುಷಿಯಾಗಿ ಇರ್ತಾರೆ” ಅಂತ ಹೇಳಿದನು. (ಲೂಕ 11:28) ಯೆಹೋವನ ಜನರಾಗಿರೋ ನಾವು ಪ್ರತಿದಿನ ದೇವರ ವಾಕ್ಯ ಓದ್ತಾ, ಅದ್ರ ಪ್ರಕಾರ ನಡಿತಾ ಇದ್ರೆ ಖುಷಿಖುಷಿಯಾಗಿ ಇರ್ತೀವಿ. (ಯಾಕೋ. 1:22-25) ಈ ತರ ಮಾಡಿದ್ರೆ ನಾವು ಯೆಹೋವನ ಮನಸ್ಸನ್ನ ಖುಷಿ ಪಡಿಸಬಹುದು. (ಪ್ರಸಂ. 12:13) ಅಷ್ಟೇ ಅಲ್ಲ, ನಮ್ಮ ಕುಟುಂಬ ಖುಷಿಖುಷಿಯಾಗಿ ಇರುತ್ತೆ, ಸಭೆಯಲ್ಲಿ ಒಳ್ಳೊಳ್ಳೆ ಸ್ನೇಹಿತರನ್ನ ಮಾಡ್ಕೊಬಹುದು. ಒಂದುವೇಳೆ ದೇವರ ಮಾತಿನ ಪ್ರಕಾರ ನಡಿದೇ ಇದ್ರೆ ಏನಾಗುತ್ತೆ? ತುಂಬ ಸಮಸ್ಯೆಗಳಲ್ಲಿ ಸಿಕ್ಕಿ ಹಾಕೊಳ್ತೀವಿ. ದೇವರ ಮಾತನ್ನ ಪಾಲಿಸಿದ್ರೆ ತುಂಬ ಸಮಸ್ಯೆಗಳಿಂದ ದೂರ ಇರಬಹುದು. ಅದಕ್ಕೇ ದಾವೀದ ಯೆಹೋವನ ಆಜ್ಞೆಗಳು, ನಿಯಮಗಳು, ನ್ಯಾಯತೀರ್ಪಿನ ಬಗ್ಗೆ ಹೇಳ್ತಾ “ಅವನ್ನ ಪಾಲಿಸಿದ್ರೆ ದೊಡ್ಡ ಬಹುಮಾನ ಸಿಗುತ್ತೆ” ಅಂತ ಹೇಳಿದ್ದಾನೆ.—ಕೀರ್ತ. 19:7-11. w24.09 2 ¶1-3

ಮಂಗಳವಾರ, ಜನವರಿ 6

ಹೃದಯ ಒಡೆದು ಹೋಗಿರೋರನ್ನ ವಾಸಿಮಾಡ್ತಾನೆ, ಅವರ ಗಾಯಗಳಿಗೆ ಪಟ್ಟಿ ಕಟ್ತಾನೆ.—ಕೀರ್ತ. 147:3.

ನಮ್ಮ ಪ್ರೀತಿಯ ಅಪ್ಪಾ ಯೆಹೋವ ನಮ್ಮನ್ನ ಒಂದೊಂದು ಕ್ಷಣನೂ ನೋಡ್ತಿದ್ದಾನೆ. ನಾವು ನಗುನಗ್ತಾ ಇರೋದನ್ನಷ್ಟೇ ಅಲ್ಲ ನಾವು ಕೊರಗ್ತಾ ಇರೋದನ್ನೂ ನೋಡ್ತಾನೆ. (ಕೀರ್ತ. 37:18) ನಾವು ನೋವನ್ನ ನುಂಗ್ಕೊಂಡು ಆತನ ಸೇವೆ ಮಾಡೋದನ್ನ ನೋಡುವಾಗ ಆತನಿಗೆ ನಮ್ಮ ಬಗ್ಗೆ ತುಂಬ ಹೆಮ್ಮೆ ಆಗುತ್ತೆ. ಹಾಗಂತ ಆತನು ನಮ್ಮ ಕಷ್ಟನ ನೋಡ್ಕೊಂಡು ಸುಮ್ನೆ ಇರಲ್ಲ. ನಮಗೆ ಸಹಾಯ ಮಾಡೋಕೆ, ಸಾಂತ್ವನ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾನೆ. ಯೆಹೋವ ಹೃದಯ ಒಡೆದು ಹೋಗಿರೋರ “ಗಾಯಗಳಿಗೆ ಪಟ್ಟಿ ಕಟ್ತಾನೆ” ಅಂತ ಕೀರ್ತನೆ 147:3 ಹೇಳುತ್ತೆ. ಅಂದ್ರೆ ಮನಸ್ಸಿಗೆ ಗಾಯ ಆದವ್ರನ್ನ ತುಂಬ ಚೆನ್ನಾಗಿ ನೋಡ್ಕೊಳ್ತಾನೆ ಅಂತ ಈ ವಚನ ಹೇಳುತ್ತೆ. ಹಾಗಾದ್ರೆ ಯೆಹೋವ ಕೊಡೋ ಸಹಾಯದಿಂದ ನಾವು ಹೇಗೆ ಪ್ರಯೋಜನ ಪಡ್ಕೊಬಹುದು? ಇದಕ್ಕೊಂದು ಉದಾಹರಣೆ ನೋಡಿ. ನಮಗೆ ಗಾಯ ಆದಾಗ ನಾವು ಒಬ್ಬ ಒಳ್ಳೇ ಡಾಕ್ಟರ್‌ ಹತ್ರ ಹೋಗ್ತೀವಿ. ಅವರು ನಮ್ಮ ಗಾಯನ ವಾಸಿ ಮಾಡೋಕೆ ಪಟ್ಟಿ ಕಟ್ತಾರೆ. ನಾವು ಏನು ಮಾಡಬೇಕು, ಏನು ಮಾಡಬಾರದು ಅಂತ ಹೇಳ್ತಾರೆ. ಅದನ್ನ ನಾವು ಪಾಲಿಸಬೇಕಲ್ವಾ? ಯೆಹೋವ ದೇವರು ಕೂಡ ಆ ಡಾಕ್ಟರ್‌ ತರ ಇದ್ದಾನೆ. ನಮ್ಮ ಮನಸ್ಸಿಗಾದ ನೋವಿಂದ ಹೊರಗೆ ಬರೋಕೆ ಏನೆಲ್ಲ ಮಾಡಬೇಕು ಅಂತ ಪ್ರೀತಿಯಿಂದ ಕೆಲವು ಸಲಹೆಗಳನ್ನ ಬೈಬಲಲ್ಲಿ ತಿಳಿಸಿದ್ದಾನೆ. w24.10 6 ¶1-2

ಬುಧವಾರ, ಜನವರಿ 7

ಅವೆಲ್ಲ ಭೂಮಿಯಿಂದ ಕಣ್ಮರೆ ಆಯ್ತು.—ಆದಿ. 7:23.

ಹಿಂದೆ ನಮ್ಮ ಪ್ರಕಾಶನಗಳಲ್ಲಿ ಯೆಹೋವ ದೇವರು ಅನೀತಿವಂತರಿಗೆ ನ್ಯಾಯ ತೀರಿಸುವಾಗ ಏನಾಗುತ್ತೆ ಅಂತ ತಿಳಿಸಿತ್ತು. ಅಂಥ ಜನ್ರು ಮತ್ತೆ ಜೀವಂತವಾಗಿ ಎದ್ದು ಬರಲ್ಲ ಅಂತ ನಾವು ಮುಂಚೆ ಹೇಳಿದ್ವಿ. ಅನೀತಿವಂತ ಜನ್ರಿಗೆ ನ್ಯಾಯ ತೀರಿಸಿದ್ರ ಬಗ್ಗೆ ಬೈಬಲಲ್ಲಿ ಇದೆ. ಆ ಘಟನೆಗಳ ಬಗ್ಗೆ ಯೋಚ್ನೆ ಮಾಡಿ. ಉದಾಹರಣೆಗೆ, ನೋಹನ ಸಮಯದಲ್ಲಿ ಜಲಪ್ರಳಯ ಬಂದಾಗ ಅವನ ಕುಟುಂಬದವರು ಬಿಟ್ಟು ಬೇರೆ ಎಲ್ರೂ ನಾಶ ಆದ್ರು. ದೇವರು ಮಾತುಕೊಟ್ಟ ದೇಶ ಆಗಿರೋ ಕಾನಾನಿಗೆ ಇಸ್ರಾಯೇಲ್ಯರು ಹೋದಾಗ ಅಲ್ಲಿದ್ದ ಏಳು ಜನಾಂಗಗಳನ್ನ ನಾಶ ಮಾಡೋಕೆ ಯೆಹೋವ ಅವ್ರಿಗೆ ಹೇಳಿದನು. ಅಶ್ಶೂರ್ಯರ 1,85,000 ಸೈನಿಕರನ್ನ ಒಬ್ಬ ದೇವದೂತ ಒಂದೇ ರಾತ್ರಿಯಲ್ಲಿ ಕೊಂದು ಹಾಕಿದ. (ಧರ್ಮೋ. 7:1-3; ಯೆಶಾ. 37:36, 37) ಈ ಘಟನೆಗಳಲ್ಲಿ ತಿಳಿಸಿರೋ ಜನ್ರಿಗೆ ಮತ್ತೆ ಜೀವಿಸೋ ಅವಕಾಶ ಸಿಗದೇ ಇರೋ ತರ ಯೆಹೋವ ಅವ್ರನ್ನ ಶಾಶ್ವತಕ್ಕೂ ನಾಶ ಮಾಡಿದನು ಅಂತ ಬೈಬಲ್‌ ಹೇಳುತ್ತಾ? ಇಲ್ಲ. ಆ ಜನ್ರಿಗೆ ದೇವರು ಹೇಗೆ ತೀರ್ಪು ಮಾಡಿದನು ಅಂತ ನಮಗೆ ಗೊತ್ತಿಲ್ಲ. ಅಷ್ಟೇ ಅಲ್ಲ ಅವರೆಲ್ರಿಗೂ ಯೆಹೋವನ ಬಗ್ಗೆ ಕಲಿತು ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗ್ತಾ ಅಂತಾನೂ ಗೊತ್ತಿಲ್ಲ. w24.05 3 ¶5-7

ಗುರುವಾರ, ಜನವರಿ 8

ಒಳ್ಳೇದ್ರಿಂದ ಕೆಟ್ಟದನ್ನ ಜಯಿಸ್ತಾ ಇರು.—ರೋಮ. 12:21.

ಯೇಸು ತನ್ನ ಶಿಷ್ಯರಿಗೆ ಒಂದು ಕಥೆ ಹೇಳಿದನು. ಆ ಕಥೆಯಲ್ಲಿ ಒಬ್ಬ ವಿಧವೆ ನ್ಯಾಯಾಧೀಶನ ಹತ್ರ ನ್ಯಾಯಕ್ಕೋಸ್ಕರ ಪಟ್ಟುಹಿಡಿದು ಕೇಳ್ತಾ ಇದ್ದಳು. ಆ ವಿಧವೆಗೆ ಆಗ್ತಿದ್ದ ಅನ್ಯಾಯ ಶಿಷ್ಯರಿಗೆ ಚೆನ್ನಾಗಿ ಅರ್ಥ ಆಯ್ತು. ಯಾಕಂದ್ರೆ ಆಗಿನ ಕಾಲದಲ್ಲಿ ತುಂಬ ಜನ್ರಿಗೆ ಅನ್ಯಾಯ ಆಗ್ತಿತ್ತು. (ಲೂಕ 18:1-5) ನಾವೂ ಜೀವನದಲ್ಲಿ ಅನ್ಯಾಯ ಅನುಭವಿಸಿರೋದ್ರಿಂದ ಆ ವಿಧವೆ ನೋವು ನಮಗೂ ಅರ್ಥ ಆಗುತ್ತೆ. ಇವತ್ತು ಲೋಕದಲ್ಲಿ ತುಂಬ ಜನ ಭೇದಭಾವ ಮಾಡ್ತಾರೆ, ಸ್ವಾರ್ಥಿಗಳಾಗಿದ್ದಾರೆ, ಜನ್ರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ. ಇದನ್ನೆಲ್ಲಾ ನೋಡಿದಾಗ ನಮಗೆ ಆಶ್ಚರ್ಯ ಆಗಲ್ಲ. (ಪ್ರಸಂ. 5:8) ಆದ್ರೆ ನಮ್ಮ ಸಹೋದರ ಸಹೋದರಿಯರೇ ನಮಗೇನಾದ್ರು ಅನ್ಯಾಯ ಮಾಡಿಬಿಟ್ರೆ, ನಮ್ಮ ಜೊತೆ ತಪ್ಪಾಗಿ ನಡ್ಕೊಂಡುಬಿಟ್ರೆ ಮನಸ್ಸಿಗೆ ತುಂಬಾ ನೋವಾಗುತ್ತೆ. ಯಾಕಂದ್ರೆ ಅವರು ಈ ತರ ಮಾಡೋಕೆ ಸಾಧ್ಯನೇ ಇಲ್ಲ ಅಂತ ನಾವು ಅಂದ್ಕೊಂಡಿರ್ತೀವಿ. ಆದ್ರೆ ಅವರು ಬೇಕುಬೇಕಂತ ನಮ್ಮ ಮನಸ್ಸನ್ನ ನೋಯಿಸಿರಲ್ಲ. ಅವರು ಅಪರಿಪೂರ್ಣರಾಗಿ ಇರೋದ್ರಿಂದ ಕೆಲವೊಮ್ಮೆ ಹಾಗೆ ಆಗಿಬಿಡುತ್ತೆ. ಹಾಗಾದ್ರೆ ನಮಗೆ ಅನ್ಯಾಯ ಆದಾಗ ನಾವು ಏನು ಮಾಡಬೇಕು? ಯೇಸು ಏನು ಮಾಡಿದನೋ ಅದನ್ನೇ ಮಾಡಬೇಕು. ವಿರೋಧಿಗಳು ಅನ್ಯಾಯ ಮಾಡಿದಾಗ ಆತನು ಅದನ್ನೆಲ್ಲಾ ಸಹಿಸ್ಕೊಂಡನು. ಅದೇ ತರ ನಾವೂ ಜನ ಎಷ್ಟೇ ಅನ್ಯಾಯ ಮಾಡಿದ್ರೂ ಅದನ್ನೆಲ್ಲಾ ಸಹಿಸ್ಕೊಬೇಕು. ಹೊರಗಿನವರು ಮಾಡೋ ಅನ್ಯಾಯನೇ ನಾವು ಸಹಿಸ್ಕೊಳ್ತೀವಿ ಅಂದ್ಮೇಲೆ ನಮ್ಮ ಸಹೋದರ ಸಹೋದರಿಯರಿಂದ ಆಗೋ ಅನ್ಯಾಯನ ಇನ್ನೂ ಜಾಸ್ತಿ ಸಹಿಸ್ಕೊಬೇಕಲ್ವಾ! w24.11 2 ¶1-2

ಶುಕ್ರವಾರ, ಜನವರಿ 9

ಇವ್ರಿಗೆಲ್ಲ ತಿನ್ನೋಕೆ ರೊಟ್ಟಿಗಳನ್ನ ನಾವು ಎಲ್ಲಿಂದ ತರೋಣ?—ಯೋಹಾ. 6:5.

ಬೈಬಲ್‌ ಕಾಲದಲ್ಲಿ ತುಂಬ ಜನ ದಿನಾ ರೊಟ್ಟಿ ತಿನ್ನುತ್ತಾ ಇದ್ರು. (ಆದಿ. 14:18; ಲೂಕ 4:4) ಅಷ್ಟೇ ಅಲ್ಲ ಬೈಬಲ್‌ನಲ್ಲಿ ಊಟವನ್ನ ಸೂಚಿಸೋಕೆ ಎಷ್ಟೋ ಕಡೆ ರೊಟ್ಟಿ ಅಂತಾನೇ ಹೇಳಿದೆ. (ಮತ್ತಾ. 6:11) ಯೇಸು ರೊಟ್ಟಿಯನ್ನ ಬಳಸಿ ಹೆಸ್ರುವಾಸಿಯಾಗಿರೋ ಎರಡು ದೊಡ್ಡ ಅದ್ಭುತಗಳನ್ನ ಮಾಡಿದ್ದಾನೆ. (ಮತ್ತಾ. 16:9, 10) ಅದ್ರಲ್ಲಿ ಒಂದು, ಯೋಹಾನ 6ನೇ ಅಧ್ಯಾಯದಲ್ಲಿದೆ. ಯೇಸುವಿನ ಅಪೊಸ್ತಲರು ಸಿಹಿಸುದ್ದಿ ಸಾರಿದ ಮೇಲೆ ಸುಸ್ತಾಗಿದ್ರು. ಅದಕ್ಕೆ ಅವರು ಸ್ವಲ್ಪ ವಿಶ್ರಾಂತಿ ಮಾಡಲಿ ಅಂತ ಯೇಸು ಅವ್ರನ್ನ ಕರ್ಕೊಂಡು ಗಲಿಲಾಯ ಸಮುದ್ರದಲ್ಲಿ ದೋಣಿ ಹತ್ತಿ ಹೋದನು. (ಮಾರ್ಕ 6:7, 30-32; ಲೂಕ 9:10) ಅವರು ಬೇತ್ಸಾಯಿದ ಊರಿನಲ್ಲಿ ಯಾರೂ ಇಲ್ಲದಿರೋ ಒಂದು ಜಾಗಕ್ಕೆ ಬಂದ್ರು. ಆದ್ರೆ ಸ್ವಲ್ಪದ್ರಲ್ಲೇ ಸಾವಿರಾರು ಜನ ಯೇಸುನ ಹುಡ್ಕೊಂಡು ಅಲ್ಲಿಗೂ ಬಂದುಬಿಟ್ರು. ಆದ್ರೆ ಯೇಸು ಅವ್ರನ್ನ ನೋಡಿನೂ ನೋಡದಂಗೆ ಇರಲಿಲ್ಲ. ಸಮಯ ಮಾಡ್ಕೊಂಡು ದೇವರ ಆಳ್ವಿಕೆ ಬಗ್ಗೆ ಅವ್ರಿಗೆ ಕಲಿಸಿದನು, ಕಾಯಿಲೆ ಬಿದ್ದವ್ರನ್ನೆಲ್ಲಾ ವಾಸಿಮಾಡಿದನು. ಇದನ್ನೆಲ್ಲಾ ಮಾಡೋ ಹೊತ್ತಿಗೆ ಸಂಜೆ ಆಗೋಯ್ತು. ‘ಈ ಜನ್ರೆಲ್ಲಾ, ತಿನ್ನೋಕೆ ಏನಪ್ಪಾ ಮಾಡ್ತಾರೆ’ ಅಂತ ಶಿಷ್ಯರಿಗೆ ತುಂಬ ಚಿಂತೆ ಆಯ್ತು. ಕೆಲವು ಜನ್ರ ಹತ್ರ ತಿನ್ನೋಕೆ ಅಲ್ಪ ಸ್ವಲ್ಪ ಇತ್ತು. ಆದ್ರೆ ಇನ್ನೂ ಕೆಲವ್ರ ಹತ್ರ ಏನೇನೂ ಇರಲಿಲ್ಲ. ಅವರು ಹಳ್ಳಿಗಳಿಗೆ ಹೋಗಿ ದುಡ್ಡು ಕೊಟ್ಟು ಊಟ ತಗೋಬೇಕಿತ್ತು.—ಮತ್ತಾ. 14:15. w24.12 2 ¶1-2

ಶನಿವಾರ, ಜನವರಿ 10

ದೇವರು ಕೊಡೋ ಉಡುಗೊರೆ ನಮ್ಮ ಪ್ರಭು ಕ್ರಿಸ್ತ ಯೇಸು ಮೂಲಕ ಶಾಶ್ವತ ಜೀವ.—ರೋಮ. 6:23.

ನಮ್ಮ ಮೊದಲನೇ ಹೆತ್ತವರಾದ ಆದಾಮ ಹವ್ವ ಪರಿಪೂರ್ಣರಾಗಿದ್ರು ಮತ್ತು ಸುಂದರವಾದ ಪರದೈಸಲ್ಲಿ ಅವರು ಜೀವಿಸ್ತಿದ್ರು. (ಆದಿ. 1:27; 2:7-9) ಅಲ್ಲಿ ಅವರು ಖುಷಿಖುಷಿಯಾಗಿ ಇದ್ರು ಮತ್ತು ಅವ್ರಿಗೆ ಶಾಶ್ವತವಾಗಿ ಜೀವಿಸೋ ಅವಕಾಶನೂ ಇತ್ತು. ಆದ್ರೆ ಇದ್ದಕ್ಕಿದ್ದ ಹಾಗೆ ಎಲ್ಲಾ ತಲೆಕೆಳಗಾಗಿಬಿಡ್ತು. ಅವರು ಪರದೈಸನ್ನೂ ಕಳ್ಕೊಂಡ್ರು, ಶಾಶ್ವತವಾಗಿ ಜೀವಿಸೋ ಅವಕಾಶನೂ ಕಳ್ಕೊಂಡ್ರು. ಈ ತರ ಮಾಡಿದ್ರಿಂದ ಅವ್ರ ಮಕ್ಕಳಾದ ನಮಗೆ ಅವರು ಏನನ್ನ ದಾಟಿಸಿದ್ರು? ಬೈಬಲ್‌ ಅದ್ರ ಬಗ್ಗೆ ಹೀಗೆ ಹೇಳುತ್ತೆ: “ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು. ಎಲ್ಲ ಮನುಷ್ಯರು ಪಾಪಮಾಡಿದ್ರಿಂದ ಎಲ್ರೂ ಸಾಯ್ತಾರೆ.” (ರೋಮ. 5:12) ಆದಾಮ ನಮ್ಮೆಲ್ರಿಗೂ ಪಾಪನ ಆಸ್ತಿಯಾಗಿ ಕೊಟ್ಟ. ಇದ್ರಿಂದ ನಾವೆಲ್ರೂ ಸಾಯ್ತಾ ಇದ್ದೀವಿ. ಹಾಗಾಗಿ ಈ ಪಾಪ ಒಂದು ದೊಡ್ಡ ಸಾಲದ ತರ ಇದೆ. ನಮ್ಮಿಂದ ಯಾರಿಗೂ ಇದನ್ನ ತೀರಿಸೋಕೆ ಆಗಲ್ಲ. (ಕೀರ್ತ. 49:8) ಯೇಸು ಪಾಪಗಳನ್ನ ‘ಸಾಲಕ್ಕೆ’ ಹೋಲಿಸಿದ್ದಾನೆ. (ಮತ್ತಾ. 6:12; ಲೂಕ 11:4) ನಾವು ಪಾಪ ಮಾಡಿದಾಗ ಯೆಹೋವನಿಗೆ ಸಾಲಗಾರರಾಗ್ತೀವಿ. ನಾವು ಮಾಡಿದ ಪಾಪಕ್ಕೆ ದಂಡ ಕಟ್ಟಲೇಬೇಕು. ನಾವು ಈ ಸಾಲನ ತೀರಿಸಿಲ್ಲಾಂದ್ರೆ ಕೊನೇ ತನಕ ಸಾಲಗಾರರಾಗೇ ಇರ್ತೀವಿ. ನಾವು ಸತ್ರೆ ಮಾತ್ರ ಆ ಸಾಲ ಮನ್ನಾ ಆಗುತ್ತೆ. ಇದ್ರಿಂದ ನಮಗೆ ಮತ್ತೆ ಜೀವಿಸೋ ಅವಕಾಶನೂ ಸಿಗಲ್ಲ.—ರೋಮ. 6:7. w25.02 2-3 ¶2-3

ಭಾನುವಾರ, ಜನವರಿ 11

ನಾನು ನಿನ್ನ ಹೆಸ್ರನ್ನ ಇವ್ರಿಗೆ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ.—ಯೋಹಾ. 17:26.

ದೇವರ ಆಳ್ವಿಕೆಯ ಸಿಹಿಸುದ್ದಿ ಸಾರೋ ಅವಕಾಶ ನಮಗೆ ಸಿಕ್ಕಿರೋದು ಒಂದು ದೊಡ್ಡ ಸುಯೋಗ ಅಂತನೇ ಹೇಳಬಹುದು. ಆದ್ರೆ ಈ ಸುಯೋಗ ಎಲ್ರಿಗೂ ಸಿಗಲ್ಲ. ಯೇಸು ಭೂಮಿಲಿದ್ದಾಗ ತನ್ನ ಬಗ್ಗೆ ಮಾತಾಡೋಕೆ ಕೆಟ್ಟ ದೇವದೂತರಿಗೆ ಬಿಡಲಿಲ್ಲ. (ಲೂಕ 4:41) ಇದ್ರಿಂದ ಏನು ಗೊತ್ತಾಗುತ್ತೆ? ಒಬ್ಬ ವ್ಯಕ್ತಿ ಯೆಹೋವನ ಜನ್ರ ಜೊತೆ ಸೇರಿ ಸಿಹಿಸುದ್ದಿ ಸಾರಬೇಕಂದ್ರೆ ಅವನು ಯೆಹೋವನಿಗೆ ಇಷ್ಟ ಆಗೋ ತರ ಜೀವಿಸಬೇಕು. ನಮ್ಮ ಪರಿಸ್ಥಿತಿ ಹೇಗೇ ಇದ್ರೂ ಜನ್ರಿಗೆ ಯೆಹೋವನ ಬಗ್ಗೆ ಹೇಳುವಾಗ ಸಾರೋ ಕೆಲಸ ನಮಗೆ ಎಷ್ಟು ಇಷ್ಟ ಅಂತ ತೋರಿಸ್ತೀವಿ. ಹಾಗಾದ್ರೆ ನಮ್ಮ ಗುರಿ ಏನಾಗಿರಬೇಕು? ಯೇಸು ತರ ಜನ್ರ ಮನಸ್ಸಲ್ಲಿ ದೇವರ ಆಳ್ವಿಕೆಯ ಸಂದೇಶ ಅನ್ನೋ ಬೀಜ ಬಿತ್ತಿ, ನೀರು ಹಾಕೋದಾಗಿರಬೇಕು. (ಮತ್ತಾ. 13:3, 23; 1 ಕೊರಿಂ. 3:6) ಯೇಸು ತರಾನೇ ಇವತ್ತು ನಮ್ಮ ಸಂಘಟನೆ ಯೆಹೋವನ ಹೆಸ್ರನ್ನ ಜನ್ರಿಗೆ ತಿಳಿಸೋಕೆ ತುಂಬ ಪ್ರಯತ್ನ ಮಾಡ್ತಿದೆ. ಉದಾಹರಣೆಗೆ ಪವಿತ್ರ ಬೈಬಲ್‌ ಹೊಸ ಲೋಕ ಭಾಷಾಂತರದಲ್ಲಿ ಯೆಹೋವ ದೇವರ ಹೆಸ್ರು ಎಲ್ಲೆಲ್ಲಿ ಬರಬೇಕೋ ಅಲ್ಲೆಲ್ಲಾ ಹಾಕಿದೆ. ಈ ಬೈಬಲ್‌ ಅಥವಾ ಅದ್ರಲ್ಲಿರೋ ಕೆಲವು ಪುಸ್ತಕಗಳು 270ಕ್ಕೂ ಹೆಚ್ಚು ಭಾಷೆಗಳಲ್ಲಿದೆ. w24.04 9 ¶8-9

ಸೋಮವಾರ, ಜನವರಿ 12

ಅವಳ ಗಂಡ ಎದ್ದು ನಿಂತು ಅವಳ ಗುಣಗಾನ ಮಾಡ್ತಾನೆ.—ಜ್ಞಾನೋ. 31:28.

ಮದುವೆ ಮಾಡ್ಕೊಂಡು ಖುಷಿಖುಷಿಯಾಗಿರೋ ಕೆಲವು ಗಂಡಂದಿರು ಹೆಂಡ್ತಿ ಮೇಲೆ ಎಷ್ಟು ಪ್ರೀತಿ ಇದೆ ಅಂತ ಪ್ರತಿದಿನ ತೋರಿಸ್ತಾರೆ. (1 ಯೋಹಾ. 3:18) ಚಿಕ್ಕಚಿಕ್ಕ ವಿಷ್ಯದಲ್ಲೂ ಗಂಡ ತನ್ನ ಹೆಂಡ್ತಿ ಮೇಲೆ ಎಷ್ಟು ಪ್ರೀತಿ-ಕಾಳಜಿ ಇದೆ ಅಂತ ತೋರಿಸಬಹುದು. ಉದಾಹರಣೆಗೆ, ಕೈ ಹಿಡ್ಕೊಂಡು ಮಾತಾಡೋದು, ಪ್ರೀತಿಯಿಂದ ಅಪ್ಕೊಳ್ಳೋದು, ಕೆಲಸಕ್ಕೆ ಹೋದಾಗ ‘ಹೇಗಿದ್ದೀಯಾ, ಊಟ ಆಯ್ತಾ, ಏನ್‌ ಮಾಡ್ತಾ ಇದ್ದೀಯಾ’ ಅಂತ ಮೆಸೆಜ್‌ ಮಾಡಬಹುದು. ಅಥವಾ ಫೋನ್‌ ಮಾಡಿ ಮಾತಾಡಬಹುದು. ಹೆಂಡ್ತಿ ಮೇಲೆ ಎಷ್ಟು ಪ್ರೀತಿ ಇದೆ ಅಂತ ಅರ್ಥ ಮಾಡಿಸೋಕೆ ಆಗಾಗ ಒಂದು ಗ್ರೀಟಿಂಗ್‌ ಕಾರ್ಡ್‌ ಬರೆದು ಕೊಡಬಹುದು. ಗಂಡ ಈ ತರ ಚಿಕ್ಕಚಿಕ್ಕ ವಿಷ್ಯಗಳಲ್ಲೂ ಹೆಂಡ್ತಿ ಮೇಲಿರೋ ಪ್ರೀತಿನ ತೋರಿಸಿದ್ರೆ ಆಕೆಗೆ ಗೌರವ ಕೊಟ್ಟ ಹಾಗೆ ಆಗುತ್ತೆ. ಅವ್ರ ಮದುವೆಯ ಬಂಧ ಇನ್ನೂ ಗಟ್ಟಿ ಆಗುತ್ತೆ. ಹೆಂಡ್ತಿನ ಪ್ರೀತಿಸೋ ಗಂಡ ಅವಳೆಷ್ಟು ಅಮೂಲ್ಯ, ತನ್ನ ಜೀವನದಲ್ಲಿ ಅವಳೆಷ್ಟು ಮುಖ್ಯ ಅನ್ನೋದನ್ನ ಮಾತಲ್ಲೂ ಹೇಳ್ತಾ ಇರ್ತಾನೆ. ಇದನ್ನ ಮಾಡೋ ಒಂದು ವಿಧ, ಹೆಂಡ್ತಿ ಅವಳಿಗೆ ಮಾಡ್ತಿರೋ ಸಹಾಯನ, ಸಪೋರ್ಟನ್ನ ನೆನಸ್ಕೊಂಡು ಬಾಯಿತುಂಬ ಹೊಗಳೋದು. (ಕೊಲೊ. 3:15) ಹೀಗೆ ಗಂಡ ಮನಸಾರೆ ಮೆಚ್ಕೊಂಡಾಗ ಅವಳ ಮನಸ್ಸು ಅರಳುತ್ತೆ. ಗಂಡ ನನ್ನನ್ನ ಪ್ರೀತಿಸ್ತಾನೆ, ಗೌರವಿಸ್ತಾನೆ ಅನ್ನೋ ಭರವಸೆ ಅವಳಿಗೆ ಸಿಗುತ್ತೆ. w25.01 11 ¶15; 13 ¶16

ಮಂಗಳವಾರ, ಜನವರಿ 13

ಯೆಹೋವನಾದ ನಾನೇ ನಿನ್ನ ದೇವರು . . . ನೀನು ಯಾವ ದಾರಿಯಲ್ಲಿ ನಡಿಬೇಕಂತ ನಿನಗೆ ಮಾರ್ಗದರ್ಶಿಸುವವನು ನಾನೇ.—ಯೆಶಾ. 48:17.

ಕೀರ್ತನೆ 15​ರ ಕೊನೆ ಮಾತುಗಳು “ಇವೆಲ್ಲ ಮಾಡೋ ವ್ಯಕ್ತಿನ ಯಾವತ್ತೂ ಕದಲಿಸೋಕೆ ಆಗಲ್ಲ” ಅಂತ ಹೇಳುತ್ತೆ. ಈ ಕೀರ್ತನೆಯಲ್ಲಿ ಹೇಳಿರೋ ವಿಷ್ಯಗಳನ್ನ ನಾವು ಮಾಡಬೇಕು ಅಂತ ಯೆಹೋವ ಯಾಕೆ ಕೇಳ್ತಿದ್ದಾನೆ? ಯಾಕಂದ್ರೆ ನಾವು ಖುಷಿಯಾಗಿ ಇರಬೇಕು ಅಂತ ಆತನು ಇಷ್ಟಪಡ್ತಾನೆ. ಆತನು ಹೇಳೋ ಮಾತನ್ನ ನಾವು ಕೇಳಿದ್ರೆ ನಮಗೆ ಆಶೀರ್ವಾದನೂ ಸಿಗುತ್ತೆ, ಆತನಿಂದ ಸಂರಕ್ಷಣೆನೂ ಸಿಗುತ್ತೆ. ಯೆಹೋವನ ಅತಿಥಿಗಳಿಗೆ ಮುಂದೆ ಒಂದು ಒಳ್ಳೆ ಭವಿಷ್ಯ ಇದೆ. ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಿಗೆ ಸ್ವರ್ಗದಲ್ಲಿ “ಉಳ್ಕೊಳ್ಳೋಕೆ ತುಂಬ ಜಾಗ ಇದೆ.” ಯೇಸು ಈಗಾಗಲೇ ಅದನ್ನ ಸಿದ್ಧ ಮಾಡಿ ಇಟ್ಟಿದ್ದಾನೆ. (ಯೋಹಾ. 14:2) ಆದರೆ ಭೂಮಿಯಲ್ಲಿ ಇರೋರಿಗೆ ಯಾವ ಆಶೀರ್ವಾದ ಸಿಗುತ್ತೆ ಅಂತ ಪ್ರಕಟಣೆ 21:3ರಲ್ಲಿ ಹೇಳಿದೆ. ಯೆಹೋವನ ಸ್ನೇಹಿತರು ಆತನ ಡೇರೆಯಲ್ಲಿ ಶಾಶ್ವತಕ್ಕೂ ಅತಿಥಿಗಳಾಗಿ ಇರಬಹುದು. ಈ ಆಮಂತ್ರಣವನ್ನ ಯೆಹೋವ ದೇವರೇ ಕೊಟ್ಟಿರೋದ್ರಿಂದ ಇದು ನಮ್ಮ ಜೀವನದಲ್ಲೇ ಸಿಕ್ಕಿರೋ ದೊಡ್ಡ ಸುಯೋಗ!—ಕೀರ್ತ. 15:1-5. w24.06 13 ¶19-20

ಬುಧವಾರ, ಜನವರಿ 14

ಯೆಹೋವನ ಹೆಸ್ರಿಗೆ ಕೊಡಬೇಕಾದ ಗೌರವವನ್ನ ಕೊಡಿ.—ಕೀರ್ತ. 96:8.

ಗೌರವ ಅಂದ್ರೇನು? ಬೈಬಲಲ್ಲಿ ಒಬ್ಬ ವ್ಯಕ್ತಿಯ ಮಹಿಮೆ, ವೈಭವವನ್ನ ವರ್ಣಿಸೋಕೆ ಗೌರವ ಅನ್ನೋ ಪದನ ಬಳಸಲಾಗಿದೆ. ಯೆಹೋವನಿಗೆ ಎಷ್ಟು ಘನತೆ, ಮಹಿಮೆ, ವೈಭವ ಇದೆ ಅಂತ ಇಸ್ರಾಯೇಲ್ಯರಿಗೆ ತೋರಿಸೋಕೆ ಅವ್ರನ್ನ ಈಜಿಪ್ಟಿಂದ ಕರ್ಕೊಂಡ ಬಂದ ಸ್ವಲ್ಪದ್ರಲ್ಲೇ ಒಂದು ಅದ್ಭುತ ಘಟನೆ ನಡೀತು. ನಾವೀಗ ಅದನ್ನ ಚಿತ್ರಿಸ್ಕೊಳ್ಳೋಣ. ಲಕ್ಷಾಂತರ ಇಸ್ರಾಯೇಲ್ಯರು ಬಾನೆತ್ತರದ ಸಿನಾಯಿ ಬೆಟ್ಟದ ಬುಡದಲ್ಲಿ ದೇವರ ಮಾತನ್ನ ಕೇಳೋಕೆ ನಿಂತಿದ್ದಾರೆ. ಕಪ್ಪುಕಪ್ಪಾಗಿರೋ ಒಂದು ದೊಡ್ಡ ಮೋಡ ಇಡೀ ಬೆಟ್ಟನ ಮುಚ್ಕೊಳ್ಳುತ್ತೆ. ತಕ್ಷಣ ಒಂದು ಭಯಂಕರ ಭೂಕಂಪ ಆಗುತ್ತೆ. ಇಡೀ ಬೆಟ್ಟ ನಡುಗುತ್ತೆ. ಧಗಧಗ ಅಂತ ಉರಿಯೋ ಬೆಂಕಿ ಚಿಮ್ಮುತ್ತೆ. ಜೊತೆಗೆ ಗುಡುಗು, ಮಿಂಚು, ಕೊಂಬುಗಳ ಆರ್ಭಟಕ್ಕೆ ಜನ್ರು ನಿಂತಿರೋ ನೆಲ ಕುಸಿಯೋ ತರ ಆಗುತ್ತೆ. ಅವ್ರ ಕಿವಿಯಲ್ಲಿ ಆ ಆರ್ಭಟ ಬಿಟ್ರೆ ಬೇರೇನೂ ಕೇಳಿಸಲ್ಲ. (ವಿಮೋ. 19:16-18; 24:17; ಕೀರ್ತ. 68:8) ಇದನ್ನೆಲ್ಲ ಇಸ್ರಾಯೇಲ್ಯರು ಕಣ್ಣು ಮಿಟುಕಿಸದೆ ನೋಡ್ತಾ ನಿಂತಿದ್ದಿರಬಹುದು. ಯೆಹೋವನ ಮಹಿಮೆ, ಘನತೆ, ಗೌರವ ನೋಡಿ ಅವ್ರ ಮೈಜುಂ ಅಂದಿರುತ್ತೆ ಅಲ್ವಾ? ಇವತ್ತು ನಾವೂ ಯೆಹೋವನಿಗೆ ಗೌರವ ಕೊಡಬಹುದು. ಹೇಗೆ? ಆತನ ಮಹಿಮೆ, ಘನತೆ ಆಕಾಶದಷ್ಟು ವಿಶಾಲವಾಗಿದೆ. ಅದನ್ನ ನಾವು ಬೇರೆಯವ್ರಿಗೆ ಹೇಳಬೇಕು. ಆತನಿಗೆಷ್ಟು ಶಕ್ತಿ ಇದೆ, ಆತನಲ್ಲಿರೋ ಒಳ್ಳೊಳ್ಳೇ ಗುಣಗಳೇನು ಅಂತ ಜನ್ರಿಗೆ ಸಾರಿ ಹೇಳಬೇಕು. ಅಷ್ಟೇ ಅಲ್ಲ ನಾವೇನೇ ಸಾಧನೆ ಮಾಡಿದ್ರೂ ‘ಅದು ಯೆಹೋವನಿಂದಾನೇ, ಯೆಹೋವನೇ ಕಾರಣ!’ ಅಂತ ಕೀರ್ತಿನೆಲ್ಲಾ ಆತನಿಗೇ ಸಲ್ಲಿಸಬೇಕು.—ಯೆಶಾ. 26:12. w25.01 2 ¶2-3

ಗುರುವಾರ, ಜನವರಿ 15

ಯೆಹೋವನೇ ನನ್ನನ್ನ ಕಳಿಸಿದ್ದಾನೆ.—ಅರ. 16:28.

ಇಸ್ರಾಯೇಲ್ಯರು ದೇವರು ಮಾತು ಕೊಟ್ಟ ದೇಶಕ್ಕೆ ಹೋಗುವಾಗ ಒಂದು ಸಲ ಏನಾಯ್ತು ನೋಡಿ. ಅಧಿಕಾರದಲ್ಲಿದ್ದ ಕೆಲವು ಗಂಡಸರು ಯೆಹೋವ ನೇಮಿಸಿದ ಮೋಶೆಯ ವಿರುದ್ಧ ದಂಗೆ ಎದ್ರು. ಅವರು ಮೋಶೆಗೆ, “ನೀವು ಮಾತ್ರ ತುಂಬ ಪವಿತ್ರರು ಅಂದ್ಕೊಂಡ್ರಾ? ಯೆಹೋವ ಎಲ್ಲಾ ಇಸ್ರಾಯೇಲ್ಯರ ಮಧ್ಯ ಇದ್ದಾನೆ. ಎಲ್ಲ ಇಸ್ರಾಯೇಲ್ಯರು, ಅವರಲ್ಲಿ ಒಬ್ಬೊಬ್ಬ ಇಸ್ರಾಯೇಲ್ಯನೂ ಪವಿತ್ರನಾಗಿ ಇದ್ದಾನೆ” ಅಂತ ಹೇಳಿದ್ರು. (ಅರ. 16:1-3) ದೇವರು “ಎಲ್ಲ ಇಸ್ರಾಯೇಲ್ಯರು” ಪವಿತ್ರ ಅಂತ ನೋಡಿದ್ದು ನಿಜಾನೇ. ಆದ್ರೆ ಅವ್ರನ್ನ ಮುನ್ನಡಿಸೋಕೆ ಆತನು ಮೋಶೆಯನ್ನ ಮಾತ್ರ ನೇಮಿಸಿದ್ದನು. ಈ ಜನ್ರು ಮೋಶೆಯ ವಿರುದ್ಧ ಗೊಣಗಿದಾಗ ಯೆಹೋವ ಅದನ್ನ ತನ್ನ ವಿರುದ್ಧವೇ ಗೊಣಗಿದ್ದು ಅಂತ ಹೇಳಿದ. ಅವ್ರಿಗೆ ಹೆಚ್ಚಿನ ಅಧಿಕಾರ, ಸ್ಥಾನಮಾನ ಬೇಕಿತ್ತು. ಅದ್ರ ಬಗ್ಗೆ ಮಾತ್ರ ಅವರು ಯೋಚ್ನೆ ಮಾಡಿದ್ರು. ಯೆಹೋವ ಏನು ಇಷ್ಟಪಡ್ತಿದ್ದಾನೆ ಅಂತ ಯೋಚ್ನೆ ಮಾಡ್ಲಿಲ್ಲ. ಇದ್ರಿಂದ ಯೆಹೋವ ಆ ಅಧಿಕಾರಿಗಳನ್ನ ಮತ್ತು ಅವ್ರಿಗೆ ಬೆಂಬಲ ಕೊಟ್ಟ ಸಾವಿರಾರು ಜನ್ರನ್ನ ನಾಶ ಮಾಡಿದನು. (ಅರ. 16:30-35, 41, 49) ಇವತ್ತೂ ಯಾರಾದ್ರೂ ಯೆಹೋವನ ಸಂಘಟನೆ ಮಾಡೋ ಏರ್ಪಾಡುಗಳನ್ನ ಗೌರವಿಸಲ್ಲ ಅಂದ್ರೆ ಯೆಹೋವ ಅವ್ರನ್ನೂ ಮೆಚ್ಚೋದಿಲ್ಲ. w24.07 11 ¶11

ಶುಕ್ರವಾರ, ಜನವರಿ 16

ಆ ದರ್ಶನ ನಿರ್ಧರಿಸಿದ ಸಮಯಕ್ಕೆ ನಿಜ ಆಗುತ್ತೆ.—ಹಬ. 2:3.

ಲೋಕಾಂತ್ಯ ತುಂಬ ಹತ್ರ ಇದೆ. ಇದ್ರ ಬಗ್ಗೆ ಜನ್ರಿಗೆ ಹೇಳಿದ್ರೆ ಅವ್ರದನ್ನ ಕಿವಿಗೇ ಹಾಕೊಳ್ತಿಲ್ಲ. ನಮ್ಮನ್ನೂ ಗೇಲಿ ಮಾಡ್ತಿದ್ದಾರೆ. (2 ಪೇತ್ರ 3:3, 4) ಮುಂದೆ ಏನೆಲ್ಲ ಆಗುತ್ತೆ ಅಂತ ಎಲ್ಲಾ ವಿಷ್ಯ ನಮಗೆ ಗೊತ್ತಿಲ್ಲ. ಹಾಗಿದ್ರೂ ನಾವು ಯೆಹೋವನನ್ನ ಪೂರ್ತಿ ನಂಬ್ತೀವಿ. ಯಾಕಂದ್ರೆ ಯೆಹೋವ ಅಂತ್ಯವನ್ನ ಸರಿಯಾದ ಸಮಯಕ್ಕೆ ತಂದೇ ತರ್ತಾನೆ, ಆ ಸಮಯದಲ್ಲಿ ನಮ್ಮನ್ನ ಕಾಪಾಡೇ ಕಾಪಾಡ್ತಾನೆ. ಇವತ್ತು ಕೂಡ ನಾವು ನಮ್ಮನ್ನ ಮುಂದೆ ನಿಂತು ನಡೆಸೋರ ಮೇಲೆ ತುಂಬ ನಂಬಿಕೆ ಬೆಳೆಸ್ಕೊಬೇಕು. ಅವ್ರೇ “ನಂಬಿಗಸ್ತ, ವಿವೇಕಿ ಆದ ಆಳು.” (ಮತ್ತಾ. 24:45) ಮಹಾ ಸಂಕಟ ಶುರು ಆದಾಗ ಏನು ಮಾಡಬೇಕು, ಏನು ಮಾಡಬಾರದು ಅಂತ ನಮಗೆ ನಿರ್ದೇಶನ ಸಿಗಬಹುದು. ಅದಕ್ಕೆ ಈಗ್ಲೇ ಸಂಘಟನೆಯಲ್ಲಿರೋ ಮೇಲ್ವಿಚಾರಕರ ಮಾತು ಕೇಳಬೇಕು. ಈಗ ನಾವು ನಂಬಿಕೆ ಬೆಳೆಸ್ಕೊಂಡಿಲ್ಲ ಅಂದ್ರೆ ಮುಂದೆ ಮಹಾ ಸಂಕಟದಲ್ಲಿ ಅವರು ನಮಗೆ ನಿರ್ದೇಶನ ಕೊಟ್ಟಾಗ ಅದನ್ನ ಪಾಲಿಸೋಕೆ ಗ್ಯಾರಂಟಿ ಕಷ್ಟ ಆಗುತ್ತೆ. w24.09 11 ¶11-12

ಶನಿವಾರ, ಜನವರಿ 17

ದೇವರು ಇಷ್ಟಪಡೋ ವಿಷ್ಯಗಳು ಯಾವಾಗ್ಲೂ ಒಳ್ಳೇದಾಗಿ, ಪರಿಪೂರ್ಣವಾಗಿ, ಸರಿಯಾಗಿ ಇರುತ್ತೆ ಅಂತ ಪರೀಕ್ಷಿಸಿ ಅರ್ಥ ಮಾಡ್ಕೊಳ್ಳಿ.—ರೋಮ. 12:2.

ದೇವರ ಮೇಲೆ ನಂಬಿಕೆ ಯಾರಿಗೂ ಹುಟ್ತಾನೇ ಬರಲ್ಲ. ಅದನ್ನ ಮಕ್ಕಳು ಬೆಳೆಸ್ಕೊಬೇಕಾಗುತ್ತೆ. ಅದಕ್ಕೆ ಕೆಲವೊಮ್ಮೆ ಮಕ್ಕಳು ‘ದೇವರು ಇದ್ದಾನೆ ಅಂತ ಹೇಗ್‌ ಗೊತ್ತಾಗುತ್ತೆ? ಬೈಬಲ್‌ ಹೇಳೋದೆಲ್ಲ ಸರಿ ಅಂತ ಹೇಗೆ ನಂಬ್ಲಿ?’ ಅಂತ ಪ್ರಶ್ನೆಗಳನ್ನ ಕೇಳ್ತಾರೆ. ಈ ತರ ಕೇಳೋದ್ರಲ್ಲಿ ಏನೂ ತಪ್ಪಿಲ್ಲ. ಯಾಕಂದ್ರೆ ಬೈಬಲ್‌ “ನಿಮ್ಮ ಯೋಚನಾ ಸಾಮರ್ಥ್ಯವನ್ನ ಬಳಸಿ,” “ಎಲ್ಲವನ್ನ ಪರೀಕ್ಷಿಸಿ ಯಾವುದು ಒಳ್ಳೇದು ಅಂತ ಚೆನ್ನಾಗಿ ತಿಳ್ಕೊಳ್ಳಿ” ಅನ್ನುತ್ತೆ. (ರೋಮ. 12:1; 1 ಥೆಸ. 5:21) ಹಾಗಾಗಿ ಮಕ್ಕಳು ಪ್ರಶ್ನೆ ಕೇಳಿದಾಗ ದೇವರ ಮೇಲೆ ನಂಬಿಕೆ ಬೆಳೆಸ್ಕೊಳ್ಳೋಕೆ ಅಪ್ಪಅಮ್ಮ ಹೇಗೆ ಸಹಾಯ ಮಾಡಬಹುದು? ಸಂಶೋಧನೆ ಮಾಡೋದು ಹೇಗೆ ಅಂತ ಕಲಿಸಿ. ಮಕ್ಕಳು ಪ್ರಶ್ನೆ ಕೇಳಿದಾಗ ಆ ಅವಕಾಶನ ಬಳಸ್ಕೊಳ್ಳಿ. ಆ ಪ್ರಶ್ನೆಗೆ ಅವ್ರೇ ಹೇಗೆ ಉತ್ರ ಹುಡುಕಬಹುದು ಅಂತ ಕಲಿಸಿ. ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನದಲ್ಲಿ ಅಥವಾ ಬೇರೆ ಪ್ರಕಾಶನಗಳಲ್ಲಿ ಹೇಗೆ ಸಂಶೋಧನೆ ಮಾಡೋದು ಅಂತ ಹೇಳ್ಕೊಡಿ. ನಿಮ್ಮ ಮಗ ಸಂಶೋಧನಾ ಸಾಧನದಲ್ಲಿ “ಬೈಬಲ್‌” ವಿಷ್ಯದ ಕೆಳಗಿರೋ “ದೈವಪ್ರೇರಿತ” ಅನ್ನೋ ಸಬ್‌ಹೆಡಿಂಗ್‌ ಕೆಳಗೆ ನೋಡಿದ್ರೆ, ಬೈಬಲ್‌ ಸಾಮಾನ್ಯ ಪುಸ್ತಕ ಅಲ್ಲ, ಅದು ದೇವರ ವಾಕ್ಯ! ಅದ್ರಲ್ಲಿರೋದು “ದೇವರ ಸಂದೇಶನೇ” ಅನ್ನೋದಕ್ಕೆ ಸಾಕ್ಷಿಗಳು ಸಿಗುತ್ತೆ.—1 ಥೆಸ. 2:13. w24.12 14-15 ¶4-5

ಭಾನುವಾರ, ಜನವರಿ 18

ನಂಬಿಗಸ್ತರಿಗೆ ಕಲಿಸು. ಆಗ ಅವರು ಬೇರೆಯವ್ರಿಗೆ ಕಲಿಸೋಕೆ ಸಾಕಷ್ಟು ಅರ್ಹತೆ ಪಡ್ಕೊತಾರೆ.—2 ತಿಮೊ. 2:2.

ಯೇಸು ತರ ಇರೋಕೆ ಹಿರಿಯರು ಏನು ಮಾಡಬೇಕು? ಹಿರಿಯರು ಸಹೋದರರಿಗೆ ಒಳ್ಳೇ ತರಬೇತಿ ಕೊಡಬೇಕು. ಅವರು ವಯಸ್ಸಲ್ಲಿ ಚಿಕ್ಕವರಾಗಿದ್ರೂ ದೊಡ್ಡದೊಡ್ಡ ಜವಾಬ್ದಾರಿಗಳನ್ನ ಮಾಡೋಕೆ ಅವ್ರಿಗೆ ಕಲಿಸ್ಕೊಡಬೇಕು. ಅವರು ಯಾವ ತಪ್ಪನ್ನೂ ಮಾಡಬಾರದು, ಎಲ್ಲಾ ಪರ್ಫೆಕ್ಟಾಗಿ ಮಾಡಬೇಕು ಅಂತ ಹಿರಿಯರು ಅಂದ್ಕೊಬಾರದು. ತಪ್ಪೇನಾದ್ರೂ ಮಾಡಿದ್ರೆ ಅವ್ರನ್ನ ಪ್ರೀತಿಯಿಂದ ತಿದ್ದಬೇಕು. ಆಗ ಅವರು ಕೆಲಸನ ಚೆನ್ನಾಗಿ ಮಾಡೋಕೆ ಕಲಿತಾರೆ. ಅಷ್ಟೇ ಅಲ್ಲ ದೀನತೆ ತೋರಿಸೋದು, ನಂಬಿಕೆ ಗಳಿಸೋದು, ಬೇರೆಯವ್ರ ಸೇವೆ ಮಾಡೋದು ಎಷ್ಟು ಮುಖ್ಯ ಅಂತ ಅರ್ಥ ಮಾಡ್ಕೊಳ್ತಾರೆ. (1 ತಿಮೊ. 3:1; 1 ಪೇತ್ರ 5:5) ಯೇಸು ತನ್ನ ಶಿಷ್ಯರಿಗೆ ಸಾರೋ ಜವಾಬ್ದಾರಿ ಅಷ್ಟೇ ಅಲ್ಲ ಕಲಿಸೋ ಜವಾಬ್ದಾರಿನೂ ಕೊಟ್ಟನು. ಆದ್ರೆ ಶಿಷ್ಯರಿಗೆ ಅದನ್ನ ಮಾಡೋಕೆ ತಮ್ಮಿಂದ ಆಗಲ್ವೆನೋ ಅಂತ ಅನಿಸಿರಬಹುದು. ಆದ್ರೆ ಯೇಸುಗೆ ಅವ್ರ ಮೇಲೆ ಒಂಚೂರೂ ಸಂಶಯ ಇರಲಿಲ್ಲ. ಅದಕ್ಕೆ ಅವ್ರ ಹತ್ರ ನೇರವಾಗಿ “ಅಪ್ಪ ನನ್ನನ್ನ ಕಳಿಸಿದ ತರ ನಾನೂ ನಿಮ್ಮನ್ನ ಕಳಿಸ್ತಾ ಇದ್ದೀನಿ” ಅಂತ ಪೂರ್ತಿ ನಂಬಿಕೆಯಿಂದ ಹೇಳಿದನು.—ಯೋಹಾ. 20:21. w24.10 16 ¶15; 17 ¶17

ಸೋಮವಾರ, ಜನವರಿ 19

ದಾವೀದ . . . ನನ್ನ ಮನಸ್ಸಿಗೆ ತುಂಬ ಇಷ್ಟ.—ಅ. ಕಾ. 13:22.

ದಾವೀದ ಒಬ್ಬ ಒಳ್ಳೇ ರಾಜ ಆಗಿದ್ದ. ಜೊತೆಗೆ ಅವನೊಬ್ಬ ಸಂಗೀತಗಾರ, ಕವಿ, ಯುದ್ಧವೀರ ಮತ್ತು ಪ್ರವಾದಿಯಾಗಿದ್ದ. ಅವನು ಜೀವನದಲ್ಲಿ ತುಂಬ ಕಷ್ಟಗಳನ್ನ ಅನುಭವಿಸಿದ. ಕೆಲವು ವರ್ಷಗಳು ಅವನು ಅಲೆಮಾರಿ ತರ ಅಲೀಬೇಕಾಯ್ತು. ಯಾಕಂದ್ರೆ ರಾಜ ಸೌಲ ಅವನನ್ನ ಸಾಯಿಸಬೇಕಂತ ಹುಡುಕಾಡ್ತಾ ಇದ್ದ. ಅವನು ರಾಜ ಆದ್ಮೇಲೂ ಅವನ ಜೀವ ಉಳಿಸ್ಕೊಳ್ಳೋಕೆ ಓಡಿಹೋಗಬೇಕಾಯ್ತು. ಯಾಕಂದ್ರೆ ಅವನ ಮಗ ಅಬ್ಷಾಲೋಮ ಅವನನ್ನ ಕೊಂದು ಅವನ ಪಟ್ಟ ಕಿತ್ಕೊಬೇಕು ಅಂತ ಕಾಯ್ತಿದ್ದ. ಇಷ್ಟೆಲ್ಲಾ ಕಷ್ಟ ಬಂದ್ರೂ, ತಾನೇ ತಪ್ಪು ಮಾಡಿದ್ರೂ ದಾವೀದ ಯಾವತ್ತೂ ಯೆಹೋವನಿಂದ ದೂರ ಹೋಗಲಿಲ್ಲ, ಆತನಿಗೆ ಯಾವಾಗ್ಲೂ ನಿಯತ್ತಾಗಿದ್ದ. ಅದಕ್ಕೇ ಯೆಹೋವ “ದಾವೀದ ಅಂದ್ರೆ ನನ್ನ ಮನಸ್ಸಿಗೆ ತುಂಬ ಇಷ್ಟ” ಅಂತ ಹೇಳಿದನು. ಇಂಥ ಒಬ್ಬ ದೇವಸೇವಕ ಹೇಳಿರೋ ಬುದ್ಧಿಮಾತನ್ನ ಕೇಳಿದ್ರೆ ನಮಗೇ ಒಳ್ಳೇದಲ್ವಾ? (1 ಅರ. 15:5) ದಾವೀದ ತನ್ನ ಮಗ ಸೊಲೊಮೋನನಿಗೆ ಕೆಲವೊಂದು ಬುದ್ಧಿ ಮಾತುಗಳನ್ನ ಹೇಳಿದ. ಯಾಕಂದ್ರೆ ಸೊಲೊಮೋನ ಮುಂದೆ ಇಸ್ರಾಯೇಲ್ಯರ ರಾಜ ಆಗೋಕಿದ್ದ. ಅದೂ ಅಲ್ಲದೆ, ಯೆಹೋವ ದೇವರು ಅವನಿಗೆ ತನ್ನ ಆರಾಧನೆಗೋಸ್ಕರ ಒಂದು ಆಲಯ ಕಟ್ಟೋಕೆ ಹೇಳಿದ. (1 ಪೂರ್ವ. 22:5) ಇದನ್ನೆಲ್ಲ ಮಾಡೋದು ಅಷ್ಟು ಸುಲಭ ಆಗಿರಲಿಲ್ಲ. ಇದನ್ನ ಮಾಡೋಕೆ ಅವನಿಗೆ ಯೆಹೋವನ ಸಹಾಯ ಬೇಕಿತ್ತು. ಹಾಗಾದ್ರೆ ದಾವೀದ ಸೊಲೊಮೋನನಿಗೆ ಯಾವ ಬುದ್ಧಿಮಾತುಗಳನ್ನ ಹೇಳಿದ? ಯೆಹೋವ ದೇವರ ಮಾತನ್ನ ಕೇಳಿದ್ರೆ ಜೀವನದಲ್ಲಿ ಯಶಸ್ಸು ಪಡಿತೀಯ ಅಂತ ಹೇಳಿದ. —1 ಅರ. 2:2, 3. w24.11 10 ¶9-11

ಮಂಗಳವಾರ, ಜನವರಿ 20

ನಿನ್ನ ಜೀವನದ ಚಿಂತೆಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು, ಆತನ ಮೇಲೆ ಭರವಸೆ ಇಡು, ಆತನೇ ನಿನ್ನ ಪರವಾಗಿ ಹೆಜ್ಜೆ ತಗೊತಾನೆ.—ಕೀರ್ತ. 37:5.

ಹೆಂಡ್ತಿನ ಹೊಡಿಯೋ, ಕೆಟ್ಟದಾಗಿ ಬಯ್ಯೋ ವ್ಯಕ್ತಿ ಯೆಹೋವನ ಜೊತೆ ಮತ್ತು ಹೆಂಡ್ತಿ ಜೊತೆ ತನ್ನ ಸಂಬಂಧನ ಸರಿ ಮಾಡ್ಕೊಬೇಕು. ಇದನ್ನ ಮಾಡೋಕೆ ಹೆಜ್ಜೆಗಳನ್ನ ತಗೊಬೇಕು. ಒಂದು, ತನ್ನಲ್ಲಿ ಗಂಭೀರ ಸಮಸ್ಯೆ ಇದೆ ಅಂತ ಅವನು ಅರ್ಥ ಮಾಡ್ಕೊಬೇಕು. ಯೆಹೋವನಿಗೆ ಯಾವುದೂ ಮರೆಯಾಗಿಲ್ಲ, ಎಲ್ಲಾ ನೋಡ್ತಿದ್ದಾನೆ ಅಂತ ಅವನು ನೆನಪಿಡಬೇಕು. (ಕೀರ್ತ. 44:21; ಪ್ರಸಂ. 12:14; ಇಬ್ರಿ. 4:13) ಎರಡು, ಹೆಂಡ್ತಿ ಜೊತೆ ತಪ್ಪಾಗಿ ನಡ್ಕೊಳ್ಳೋದನ್ನ ನಿಲ್ಲಿಸಬೇಕು. ತನ್ನ ನಡತೆಯನ್ನ ಬದಲಾಯಿಸ್ಕೊಬೇಕು. (ಜ್ಞಾನೋ. 28:13) ಮೂರು, ಹೆಂಡ್ತಿ ಹತ್ರ, ಯೆಹೋವನ ಹತ್ರ ಕ್ಷಮೆ ಕೇಳಬೇಕು. ಅವರು ಕ್ಷಮಿಸೋ ತರ ನಡ್ಕೊಬೇಕು. (ಅ. ಕಾ. 3:19) ಬದಲಾಗೋಕೆ ಬಯಕೆಯನ್ನ ಕೊಡಪ್ಪಾ ಅಂತ ಯೆಹೋವನ ಹತ್ರ ಬೇಡ್ಕೊಬೇಕು. ತನ್ನ ಯೋಚ್ನೆನ, ಮಾತನ್ನ, ಕ್ರಿಯೆಗಳನ್ನ ನಿಯಂತ್ರಣದಲ್ಲಿ ಇಟ್ಕೊಳ್ಳೋಕೆ ಸಹಾಯ ಕೇಳಬೇಕು. (ಕೀರ್ತ. 51:10-12; 2 ಕೊರಿಂ. 10:5; ಫಿಲಿ. 2:13) ನಾಲ್ಕು, ಮಾಡಿದ ಪ್ರಾರ್ಥನೆಗೆ ತಕ್ಕ ಹಾಗೆ ನಡ್ಕೊಬೇಕು. ಎಲ್ಲಾ ತರದ ಹಿಂಸೆ, ಕೆಟ್ಟ ಮಾತುಗಳನ್ನ ದ್ವೇಷಿಸೋಕೆ ಪ್ರಯತ್ನ ಮಾಡ್ತಾ ಇರಬೇಕು. (ಕೀರ್ತ. 97:10) ಐದು, ಸಭೇಲಿರೋ ಹಿರಿಯರ ಹತ್ರ ತಕ್ಷಣ ಸಹಾಯ ಪಡ್ಕೊಬೇಕು. (ಯಾಕೋ. 5:14-16) ಆರು, ಮುಂದೆ ಈ ತರ ತಪ್ಪುಗಳನ್ನ ಮಾಡದೆ ಇರೋಕೆ ತನ್ನ ನಡತೆಯನ್ನ ಬದಲಾಯಿಸ್ಕೊಳ್ಳೋಕೆ ಏನೆಲ್ಲ ಮಾಡಬೇಕು ಅಂತ ಪ್ಲ್ಯಾನ್‌ ಮಾಡಬೇಕು. w25.01 11 ¶14

ಬುಧವಾರ, ಜನವರಿ 21

ನೀನು ಯಾವುದಕ್ಕಾಗಿ ಕಾಯ್ತಾ ಇದ್ದೀಯ? ಹೋಗು, ದೀಕ್ಷಾಸ್ನಾನ ಮಾಡಿಸ್ಕೊ.—ಅ. ಕಾ. 22:16.

ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಎಷ್ಟೋ ವಿಧಗಳಲ್ಲಿ ತೋರಿಸಿದ್ದಾನೆ. ನಮಗೆಲ್ಲ ಜೀವ ಕೊಟ್ಟಿರೋ ಆ ಯೆಹೋವನನ್ನ ನಾವೂ ಪ್ರೀತಿಸಬೇಕಲ್ವಾ? ಆತನನ್ನ ಪ್ರೀತಿಸ್ತೀವಿ ಅಂತ ಹೇಗೆ ತೋರಿಸಬಹುದು? ಅದನ್ನ ತೋರಿಸೋ ಒಂದು ಅತ್ಯುತ್ತಮ ವಿಧ ನಮ್ಮನ್ನ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ತಗೊಳ್ಳೋದೇ ಆಗಿದೆ. ಇದನ್ನ ಮಾಡಿದ್ರೆ ನೀವು ಯೆಹೋವನ ಕುಟುಂಬದಲ್ಲಿ ಒಬ್ಬರಾಗ್ತಿರ! ಆಗ ನಿಮ್ಮ ತಂದೆ ಮತ್ತು ನಿಮ್ಮ ಫ್ರೆಂಡಾಗಿರೋ ಯೆಹೋವ ನಿಮ್ಮನ್ನ ಸರಿ ದಾರಿಯಲ್ಲಿ ನಡೆಸ್ತಾನೆ. ನಿಮ್ಮನ್ನ ಕಾದು ಕಾಪಾಡ್ತಾನೆ. (ಕೀರ್ತ. 73:24; ಯೆಶಾ. 43:1, 2) ಅಷ್ಟೇ ಅಲ್ಲ ಶಾಶ್ವತವಾಗಿ ಬದುಕೋ ಅವಕಾಶನೂ ಸಿಗುತ್ತೆ. (1 ಪೇತ್ರ 3:21) ದೀಕ್ಷಾಸ್ನಾನ ತಗೊಳ್ಳೋಕೆ ನಿಮ್ಮನ್ನ ಯಾವುದಾದ್ರೂ ತಡೀತಿದ್ಯಾ? ಈಗಾಗ್ಲೇ ದೀಕ್ಷಾಸ್ನಾನ ತಗೊಂಡಿರೋ ಲಕ್ಷಾಂತರ ಜನ್ರಿಗೂ ಅಡ್ಡಿ ತಡೆ ಬಂದಿತ್ತು. ಆದ್ರೂ ಅವ್ರೆಲ್ಲ ತಮ್ಮ ಯೋಚ್ನೆಲಿ, ನಡತೆಲಿ ಬದಲಾವಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಂಡ್ರು. ಈಗ ಅವರು ಯೆಹೋವನನ್ನ ಸಂತೋಷದಿಂದ ಹುರುಪಿಂದ ಆರಾಧಿಸ್ತಿದ್ದಾರೆ. w25.03 2 ¶1-2

ಗುರುವಾರ, ಜನವರಿ 22

ನೀನು ಜನ್ರನ್ನ ನಿಜವಾಗ್ಲೂ ಕ್ಷಮಿಸ್ತೀಯ.—ಕೀರ್ತ. 130:4.

ನಮ್ಮ ಪಾಪ ಭಾರವಾದ ಹೊರೆ ತರ ಇದೆ ಅಂತ ಬೈಬಲ್‌ ಹೇಳುತ್ತೆ. ಅದಕ್ಕೆ ದಾವೀದ ತಾನು ಮಾಡಿದ ಪಾಪದ ಬಗ್ಗೆ “ನನ್ನ ತಪ್ಪುಗಳು ನನ್ನನ್ನ ಮುಳುಗಿಸಿಬಿಟ್ಟಿದೆ, ಅದು ಭಾರವಾದ ಹೊರೆ ತರ ಇದೆ, ನನ್ನಿಂದ ಹೊರಕ್ಕಾಗ್ತಿಲ್ಲ” ಅಂತ ಹೇಳಿದ. (ಕೀರ್ತ. 38:4) ಆದ್ರೆ ತಪ್ಪು ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಟ್ಟಾಗ ಯೆಹೋವ ಅವನ ಪಾಪನ ಕ್ಷಮಿಸ್ತಾನೆ. (ಕೀರ್ತ. 25:18; 32:5) ಇಲ್ಲಿ “ಕ್ಷಮಿಸ್ತಾನೆ” ಅಂತ ಹೇಳಿರೋದಕ್ಕೆ ಬಳಸಿರೋ ಹೀಬ್ರು ಪದದ ಅರ್ಥ “ಎತ್ತುತ್ತಾನೆ” ಅಥವಾ “ಹೊತ್ಕೊಳ್ತಾನೆ.” ಹಾಗಾಗಿ ಯೆಹೋವ ನಮ್ಮ ಪಾಪಗಳನ್ನ ಹೊತ್ಕೊಳ್ತಾನೆ ಅಂದ್ರೆ ಅದರರ್ಥ ನಮ್ಮ ಪಾಪಗಳನ್ನ ಕ್ಷಮಿಸ್ತಾನೆ. ‘ತಪ್ಪು ಮಾಡಿಬಿಟ್ನಲ್ಲಾ’ ಅನ್ನೋ ಕೊರಗನ್ನ ಕೂಡ ನಮ್ಮ ಮನಸ್ಸಿಂದ ತೆಗೆದುಹಾಕ್ತಾನೆ. ಹಾಗಾದ್ರೆ ಯೆಹೋವ ನಮ್ಮ ಪಾಪಗಳನ್ನ ಎಷ್ಟು ದೂರ ಹೊತ್ಕೊಂಡು ಹೋಗ್ತಾನೆ? ಅದನ್ನ ತಿಳ್ಕೊಳ್ಳೋಕೆ ಕೀರ್ತನೆ 103:12ರಲ್ಲಿ ಇರೋ ಉದಾಹರಣೆ ನಮಗೆ ಸಹಾಯ ಮಾಡುತ್ತೆ. ಅಲ್ಲಿ “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರ ಇದೆಯೋ, ಆತನು ನಮ್ಮ ಅಪರಾಧಗಳನ್ನ ನಮ್ಮಿಂದ ಅಷ್ಟೇ ದೂರ ಎಸಿತಾನೆ” ಅಂತ ಹೇಳುತ್ತೆ. ಪೂರ್ವಕ್ಕೂ ಪಶ್ಚಿಮಕ್ಕೂ ತುಂಬಾ ದೂರ ಇದೆ. ಅವೆರಡು ಸೇರೋಕೆ ಚ್ಯಾನ್ಸೇ ಇಲ್ಲ. ಅದೇ ತರ ಯೆಹೋವ ನಮ್ಮ ಪಾಪಗಳನ್ನ ಅಷ್ಟು ದೂರಕ್ಕೆ ಎಸೆದು ಬಿಡ್ತಾನೆ. ಇದನ್ನ ಅರ್ಥ ಮಾಡ್ಕೊಂಡಾಗ ನಮಗೆ ಎಷ್ಟು ಸಮಾಧಾನ ಆಗುತ್ತೆ ಅಲ್ವಾ? w25.02 9 ¶5-6

ಶುಕ್ರವಾರ, ಜನವರಿ 23

ನೀನು ಬಡವರಿಗೆ ಸಹಾಯ ಮಾಡುವಾಗ ಜನ್ರ ಹೊಗಳಿಕೆ ಸಿಗೋಕೆ . . . ಡಂಗುರ ಸಾರಬೇಡ.—ಮತ್ತಾ. 6:2.

ಯೇಸು ಸ್ವರ್ಗಕ್ಕೆ ಹೋದ್ಮೇಲೆ ಅಪೊಸ್ತಲ ಪೇತ್ರ ಒಬ್ಬ ಹುಟ್ಟು ಕುಂಟನನ್ನ ವಾಸಿ ಮಾಡಿದ. (ಅ. ಕಾ. 1:8, 9; 3:2, 6-8) ಜನ ಪೇತ್ರನ ಹತ್ರ ಓಡಿಬಂದು ಇದನ್ನೆಲ್ಲ ಕಣ್ಣು ಬಾಯಿ ಬಿಟ್ಕೊಂಡು ನೋಡ್ತಾ ನಿಂತ್ರು. (ಅ. ಕಾ. 3:11) ‘ಸಿಕ್ಕಿದ್ದೇ ಚಾನ್ಸ್‌, ಇದನ್ನೆಲ್ಲ ಬಳಸ್ಕೊಂಡು ಫೇಮಸ್‌ ಆಗ್ಬಿಡೋಣ’ ಅಂತ ಪೇತ್ರ ಅಂದ್ಕೊಂಡ್ನಾ? ಪೇತ್ರ ಹುಟ್ಟಿ ಬೆಳೆದ ಜಾಗದಲ್ಲಿ ಹೆಸ್ರಿಗೆ, ಸ್ಥಾನಮಾನಕ್ಕೆ ತುಂಬ ಬೆಲೆ ಕೊಡ್ತಿದ್ರು. ಇದೆಲ್ಲ ಗೊತ್ತಿದ್ರೂ ಪೇತ್ರ ಆ ಅವಕಾಶವನ್ನ ತನಗಾಗಿ ಬಳಸ್ಕೊಳ್ಳಲಿಲ್ಲ. ಬದ್ಲಿಗೆ ಎಲ್ಲ ಗೌರವ ಮತ್ತು ಕೀರ್ತಿನ ದೀನತೆಯಿಂದ ಯೆಹೋವ ಮತ್ತೆ ಯೇಸುಗೆ ಕೊಟ್ಟ. ಅದಕ್ಕೇ “ನಮಗೆ ಯೇಸುವಿನ ಹೆಸ್ರಲ್ಲಿ ನಂಬಿಕೆ ಇದೆ. ನೀವು ನೋಡ್ತಿರೋ ಈ ವ್ಯಕ್ತಿ ಆತನ ಹೆಸ್ರಿನ ಮೂಲಕನೇ ಚೆನ್ನಾಗಿ ಆಗಿದ್ದಾನೆ” ಅಂತ ಪೇತ್ರ ಎಲ್ಲಾ ಜನ್ರ ಮುಂದೆ ಹೇಳಿದ. (ಅ. ಕಾ. 3:12-16) ಪೇತ್ರನ ತರ ನಾವು ಹೇಗೆ ದೀನತೆ ಬೆಳೆಸ್ಕೊಬಹುದು? ನಾವು ಬೇರೆಯವ್ರಿಗೆ ಸಹಾಯ ಮಾಡೋಕೆ ಯೆಹೋವನ ಮೇಲೆ ಮತ್ತೆ ಜನ್ರ ಮೇಲೆ ನಮಗಿರೋ ಪ್ರೀತಿನೇ ಕಾರಣ ಆಗಿರಬೇಕು. ಬದಲಿಗೆ ಅವರು ನಮ್ಮನ್ನ ಮೆಚ್ಕೊಂಡು ಹಾಡಿ ಹೊಗಳಬೇಕು ಅನ್ನೋದಲ್ಲ. ನಮ್ಮಲ್ಲಿ ನಿಜವಾಗ್ಲೂ ದೀನತೆ ಇದ್ರೆ ನಮಗೆ ಗೌರವ ಸಿಗ್ಲಿ, ಸಿಗ್ದೇ ಇರ್ಲಿ, ನಾವು ಯೆಹೋವನ ಸೇವೆ ಮಾಡ್ತಾ ಸಹೋದರ ಸಹೋದರಿಯರಿಗೆ ಸಹಾಯ ಮಾಡ್ತಾ ಇರ್ತೀವಿ.—ಮತ್ತಾ. 6:1-4. w25.03 10-11 ¶11-12

ಶನಿವಾರ, ಜನವರಿ 24

ನೀನು ಒಳ್ಳೇ ಮಾದರಿ ಆಗಿರೋಕೆ ಮತ್ತು ಒಳ್ಳೇ ಬೋಧಕನಾಗಿ ಇರೋಕೆ ನಿನ್ನಿಂದ ಆಗೋದನ್ನೆಲ್ಲ ಮಾಡು.—1 ತಿಮೊ. 4:16.

ನಮಗೆ ಯೆಹೋವನ ಮೇಲೆ ಮತ್ತು ಜನ್ರ ಮೇಲೆ ಪ್ರೀತಿಯಿದ್ರೆ ಖುಷಿಖುಷಿಯಾಗಿ ಸಿಹಿಸುದ್ದಿ ಸಾರೋಕೆ ಆಗುತ್ತೆ. (ಮತ್ತಾ. 22:37-39) ನಾವು ಸಿಹಿಸುದ್ದಿ ಸಾರೋದನ್ನ ನೋಡುವಾಗ ಯೆಹೋವನಿಗೆ ಎಷ್ಟು ಖುಷಿಯಾಗುತ್ತೆ ಅಂತ ಸ್ವಲ್ಪ ನೆನಪಿಸ್ಕೊಳ್ಳಿ. ಬೈಬಲ್‌ ಕಲಿಯೋಕೆ ಶುರುಮಾಡಿದಾಗ ಜನ್ರು ಎಷ್ಟು ಖುಷಿಯಾಗಿ ಇರ್ತಾರೆ ಅಂತ ಯೋಚ್ನೆ ಮಾಡಿ. ನಾವು ಮಾಡೋ ಕೆಲಸ ಜನ್ರ ಜೀವನೇ ಉಳಿಸುತ್ತೆ ಅಂತ ನೆನಸ್ಕೊಂಡಾಗ ನಮಗೆ ಎಷ್ಟು ಸಮಾಧಾನ ಆಗುತ್ತೆ ಅಲ್ವಾ? (ಯೋಹಾ. 6:40) ಕೆಲವೊಮ್ಮೆ ನಿಮಗೆ ಮನೆಯಿಂದ ಹೊರಗೆ ಹೋಗಿ ಸೇವೆ ಮಾಡೋಕೆ ಆಗದೇ ಇರಬಹುದು. ಆದ್ರೂ ಯೆಹೋವ ದೇವರ ಮೇಲೆ ಮತ್ತು ಜನ್ರ ಮೇಲೆ ನಿಮಗೆ ಪ್ರೀತಿ ಇದೆ ಅಂತ ತೋರಿಸೋಕಾಗುತ್ತೆ. ಅದು ಹೇಗೆ? ಸಾಮ್ವೆಲ್‌ ಮತ್ತು ಡ್ಯಾನಿಯ ಅವ್ರ ಅನುಭವ ನೋಡಿ. ಕೋವಿಡ್‌ ಶುರು ಆದಾಗ ಅವರು ಮನೇಲೇ ಇರಬೇಕಾಯ್ತು. ಆಗ ಅವರು ಫೋನಿಂದ ಸಿಹಿಸುದ್ದಿ ಸಾರ್ತಿದ್ರು. ಪತ್ರಗಳನ್ನ ಬರೀತಿದ್ರು ಮತ್ತು ಸ್ಟಡಿಗಳನ್ನ ಜ಼ೂಮ್‌ನಲ್ಲಿ ಮಾಡ್ತಿದ್ರು. ಸಾಮ್ವೆಲ್‌ ಮತ್ತು ಡ್ಯಾನಿಯ ಅವ್ರ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ ಅಂದ್ರೂ ತಮ್ಮಿಂದ ಆದಷ್ಟು ಸೇವೆ ಮಾಡಿದ್ರು. ಅದ್ರಿಂದ ಖುಷಿನೂ ಪಡ್ಕೊಂಡ್ರು. w24.04 18 ¶15-16

ಭಾನುವಾರ, ಜನವರಿ 25

ಒಳ್ಳೇ ಹೆಂಡತಿ ಸಿಗೋದು ಅಪರೂಪ. ಅವಳು ಹವಳಕ್ಕಿಂತ ಅಮೂಲ್ಯ.—ಜ್ಞಾನೋ. 31:10.

ಖುಷಿಯಾಗಿರೋಕೆ ಮದುವೆ ಆಗ್ಲೇ ಬೇಕು ಅಂತೇನಿಲ್ಲ. ಆದ್ರೂ ತುಂಬ ಜನ ಮದುವೆ ಆಗೋಕೆ ಇಷ್ಟಪಡ್ತಾರೆ. ಆದ್ರೆ ಮದುವೆ ಆಗೋಕೆ ಮುಂಚೆ ನಿಮಗೆ ಯೆಹೋವನ ಜೊತೆ ಒಳ್ಳೇ ಸಂಬಂಧ ಇರಬೇಕು. ನಿಮ್ಮ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರಬೇಕು ಮತ್ತು ಮದುವೆ ಆದ್ಮೇಲೆ ಬರೋ ಖರ್ಚುವೆಚ್ಚಗಳನ್ನ ನೋಡ್ಕೊಬೇಕು. (1 ಕೊರಿಂ. 7:36) ಮದುವೆ ಆಗೋಕೆ ಇಷ್ಟಪಡೋರು ಡೇಟಿಂಗ್‌ ಶುರುಮಾಡೋಕೆ ಮುಂಚೆ ತಮ್ಮ ಸಂಗಾತಿ ಹೇಗಿರಬೇಕು ಅಂತ ಯೋಚ್ನೆ ಮಾಡಿರಬೇಕು. ಇಲ್ಲಾಂದ್ರೆ ಒಳ್ಳೇ ಹುಡುಗ, ಹುಡುಗಿ ನಿಮ್ಮ ಕಣ್ಮುಂದೆ ಇದ್ರೂ ನಿಮಗೆ ಅದು ಗೊತ್ತಾಗಲ್ಲ ಅಥವಾ ನಿಮಗೆ ಹೊಂದ್ಕೊಳ್ಳೋಕೆ ಆಗದೇ ಇರೋ ವ್ಯಕ್ತಿ ಜೊತೆ ಡೇಟಿಂಗ್‌ ಮಾಡಬೇಕಾಗುತ್ತೆ. ನೀವು ಹುಡುಕೋ ಸಂಗಾತಿಗೆ ದೀಕ್ಷಾಸ್ನಾನ ಆಗಿರಬೇಕು ನಿಜ. (1 ಕೊರಿಂ. 7:39) ಹಾಗಂತ ದೀಕ್ಷಾಸ್ನಾನ ತಗೊಂಡಿರೋ ಎಲ್ರೂ ನಿಮಗೆ ಒಂದು ಒಳ್ಳೇ ಜೋಡಿ ಆಗ್ತಾರೆ ಅಂತ ಹೇಳೋಕೆ ಆಗುತ್ತಾ? ಖಂಡಿತ ಇಲ್ಲ. ಅದಕ್ಕೇ ನೀವು, ‘ನಾನು ಯಾವೆಲ್ಲಾ ಗುರಿ ಇಟ್ಟಿದ್ದೀನಿ? ನಾನು ಮದುವೆ ಆಗೋ ವ್ಯಕ್ತಿಯಲ್ಲಿ ಯಾವೆಲ್ಲಾ ಗುಣಗಳಿರಬೇಕು? ಅವರು ಹೀಗೆ ಇರಬೇಕು, ಹಾಗೆ ಇರಬೇಕು ಅಂತ ಅತಿಯಾಗಿ ನಿರೀಕ್ಷಿಸ್ತಾ ಇದ್ದೀನಾ?’ ಅನ್ನೋ ಪ್ರಶ್ನೆಗಳನ್ನ ಕೇಳ್ಕೊಳ್ಳಿ. w24.05 20 ¶1; 21 ¶3

ಸೋಮವಾರ, ಜನವರಿ 26

ಒಬ್ರು ಇನ್ನೊಬ್ರಿಗೆ ದಯೆ . . . ತೋರಿಸಿ.—ಎಫೆ. 4:32.

ಡೇಟಿಂಗ್‌ ಮಾಡ್ತಿರೋ ಹುಡುಗ-ಹುಡುಗಿ ಯಾವುದಾದ್ರೂ ಸಮಸ್ಯೆಗಳು ಅಥವಾ ಭಿನ್ನಾಭಿಪ್ರಾಯಗಳು ಬಂದ್ರೆ ಏನು ಮಾಡಬೇಕು? ನಿಮ್ಮ ಮಧ್ಯೆ ಆಗಾಗ ಭಿನ್ನಾಭಿಪ್ರಾಯ ಬರ್ತಾ ಇದೆ ಅಂದ್ರೆ ನೀವು ಒಳ್ಳೆ ಜೋಡಿ ಅಲ್ಲ ಅಂತ ಅರ್ಥನಾ? ಹಾಗೇನಿಲ್ಲ. ಈ ತರ ಭಿನ್ನಾಭಿಪ್ರಾಯಗಳು ಎಲ್ಲ ಜೋಡಿ ಮಧ್ಯೆನೂ ಬರುತ್ತೆ. ಒಂದು ಮದುವೆ ಬಂಧ ಬಲವಾಗಿರಬೇಕು ಅಂದ್ರೆ ಒಬ್ರು ಇನ್ನೊಬ್ರಿಗೆ ಗೌರವ ಕೊಡಬೇಕು. ಅಷ್ಟೇ ಅಲ್ಲ ಅವರಿಬ್ರೂ ಹೊಂದ್ಕೊಂಡು ಹೋಗಬೇಕು. ಒಂದು ಸಮಸ್ಯೆ ಬಂದಾಗ ಅದನ್ನ ಈಗ ನೀವು ಚೆನ್ನಾಗಿ ನಿಭಾಯಿಸಿದ್ರೆ ಮುಂದೆ ನಿಮ್ಮ ಮದುವೆ ಬಂಧನೂ ಬಲವಾಗಿರುತ್ತೆ. ಹಾಗಾಗಿ ನೀವು ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ: ‘ಯಾವುದಾದ್ರೂ ಒಂದು ವಿಷ್ಯದ ಬಗ್ಗೆ ಚರ್ಚೆ ಮಾಡುವಾಗ ನಾವು ಶಾಂತವಾಗಿ ಗೌರವದಿಂದ ಮಾತಾಡ್ತೀವಾ? ತಪ್ಪು ಮಾಡಿದ್ರೆ ಅದನ್ನ ಒಪ್ಕೊಳ್ತೀವಾ ಮತ್ತು ತಿದ್ಕೊಳ್ತಿವಾ? ತಪ್ಪು ಮಾಡಿದಾಗ ಬೇಗ ಕ್ಷಮೆ ಕೇಳ್ತೀವಾ ಮತ್ತು ಕ್ಷಮಿಸ್ತಿವಾ?’ (ಎಫೆ. 4:31) ಒಂದುವೇಳೆ ನೀವು ಡೇಟಿಂಗ್‌ ಮಾಡುವಾಗ ಯಾವಾಗ್ಲೂ ತರ್ಕ ಮಾಡ್ತಾ, ವಾದ ಮಾಡ್ತಾ ಇದ್ರೆ ಮದುವೆ ಆದ್ಮೇಲೂ ನಿಮ್ಮ ಜೀವನ ಹಾಗೇ ಇರುತ್ತೆ. ಅದಕ್ಕೇ ‘ಇವರು ನನಗೆ ಸರಿ ಹೋಗಲ್ಲ’ ಅಂತ ಅನಿಸಿದ್ರೆ ಆ ಡೇಟಿಂಗ್‌ ಅಲ್ಲಿಗೆ ನಿಲ್ಲಿಸೋದು ಇಬ್ರಿಗೂ ಒಳ್ಳೇದು. w24.05 29 ¶12

ಮಂಗಳವಾರ, ಜನವರಿ 27

ನನ್ನ ಬಂಡೆಯಾಗಿರೋ ಯೆಹೋವನಿಗೆ ಹೊಗಳಿಕೆ ಸಿಗಲಿ, ಆತನು ನನ್ನ ಕೈಗಳಿಗೆ ಯುದ್ಧ ಮಾಡೋದನ್ನ ಕಲಿಸಿದ್ದಾನೆ.—ಕೀರ್ತ. 144:1.

ನೀವು ಸ್ಥಿರವಾಗಿದ್ರೆ ಸರಿಯಾಗಿ ಇರೋದನ್ನೇ ಮಾಡ್ತೀರ ಮತ್ತು ಯೆಹೋವನಿಗೆ ಇಷ್ಟ ಆಗೋ ತರ ನಿರ್ಣಯಗಳನ್ನ ಮಾಡ್ತೀರ. ಇದನ್ನ ಬೇರೆಯವರು ನೋಡಿ ಕಲಿತಾರೆ. ನಾವು ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಿದಾಗ, ಯೆಹೋವನ ಮೇಲೆ ನಮ್ಮ ನಂಬಿಕೆಯನ್ನ ಬಲಪಡಿಸ್ಕೊಂಡಾಗ ನಿಯತ್ತಾಗಿ ಇರ್ತೀವಿ ಮತ್ತು ಆತನ ನೀತಿ ನಿಯಮಗಳನ್ನ ಪಾಲಿಸ್ತೀವಿ. ಆಗ ನಾವು ಸುಳ್ಳು ಬೋಧನೆಯ ಅಲೆಗಳಿಗೆ ಸಿಕ್ಕಿ ಸತ್ಯದಿಂದ ತೇಲಿ ಹೋಗಲ್ಲ. ಲೋಕದ ಯೋಚನೆಗಳು ನಮ್ಮನ್ನ ರೂಪಿಸೋಕೆ ಬಿಟ್ಟುಕೊಡಲ್ಲ. (ಎಫೆ. 4:14; ಯಾಕೋ. 1:6-8) ಕಷ್ಟದಲ್ಲಿರೋ ಇರೋರಿಗೆ ಸಹಾಯ ಮಾಡೋಕೂ ಬಂದೆ ಬರ್ತೀವಿ. (1 ಥೆಸ. 3:2, 3) ಹಿರಿಯರು ಎಲ್ಲ ವಿಷ್ಯಗಳಲ್ಲೂ ಇತಿಮಿತಿಯಿಂದ ಇರ್ತಾರೆ. ತಿಳುವಳಿಕೆಯಿಂದ ನಡ್ಕೊಳ್ತಾರೆ, ಶಿಸ್ತಿಂದ ಇರ್ತಾರೆ ಮತ್ತು ನಾನು ಹೇಳಿದ್ದೇ ಆಗಬೇಕು ಅನ್ನೋ ಗುಣ ಅವರಲ್ಲಿ ಇರಲ್ಲ. ಅವರು “ದೇವರ ಮಾತನ್ನ ಚಾಚೂತಪ್ಪದೆ” ಪಾಲಿಸ್ತಾರೆ. (ತೀತ 1:9; 1 ತಿಮೊ. 3:1-3) ಹಿರಿಯರು ತಪ್ಪದೇ ಕೂಟಗಳಿಗೆ ಹೋಗ್ತಾರೆ, ಸೇವೆ ಮಾಡ್ತಾರೆ ಮತ್ತು ವೈಯಕ್ತಿಕ ಅಧ್ಯಯನ ಮಾಡ್ತಾರೆ. ಹೀಗೆ ಅವರು ಬೇರೆಯವರಿಗೆ ಒಳ್ಳೇ ಮಾದರಿ ಆಗಿರ್ತಾರೆ. ಸಹೋದರ ಸಹೋದರಿಗೆ ಪರಿಪಾಲನಾ ಭೇಟಿ ಮಾಡುವಾಗ್ಲೂ ಈ ವಿಷ್ಯಗಳನ್ನ ಮಾಡೋಕೆ ಅವರಿಗೆ ಪ್ರೋತ್ಸಾಹ ಕೊಡ್ತಾರೆ. ಕಷ್ಟ-ಸಮಸ್ಯೆಗಳಿಂದ ಚಿಂತೆಯಲ್ಲಿ ಮುಳುಗಿ ಹೋದವರಿಗೆ ಹಿರಿಯರು ಯೆಹೋವನ ಮೇಲೆ ಭರವಸೆ ಇಡೋಕೆ ಮತ್ತು ಆತನ ಕೊಟ್ಟಿರೋ ಮಾತುಗಳ ಬಗ್ಗೆ ಯೋಚಿಸೋಕೆ ಅವ್ರಿಗೆ ಪ್ರೋತ್ಸಾಹಿಸ್ತಾರೆ. w24.06 31 ¶16-18

ಬುಧವಾರ, ಜನವರಿ 28

ಪಶ್ಚಾತ್ತಾಪಪಡಿ, ಯಾಕಂದ್ರೆ ಸ್ವರ್ಗದ ಆಳ್ವಿಕೆ ಹತ್ರ ಇದೆ.—ಮತ್ತಾ. 4:17.

ಪಾಪ ಮಾಡಿದವ್ರನ್ನ ಕ್ಷಮಿಸೋಕೆ ಯೆಹೋವ ತುದಿಗಾಲಲ್ಲಿ ನಿಂತಿದ್ದಾನೆ. ಇದನ್ನ ಯೇಸು ಸೇವೆ ಮಾಡುವಾಗ ಜನ್ರಿಗೆ ಎಷ್ಟೋ ಸಲ ಅರ್ಥ ಮಾಡಿಸಿದನು. ಯೇಸು ಒಂದ್ಸಲ, ಮನೆಬಿಟ್ಟು ಹೋದ ಮಗನ ಕಥೆಯನ್ನ ಹೇಳಿದನು. ಅವನು ಕೆಟ್ಟ ದಾರಿ ಹಿಡಿದು ಅಪ್ಪನನ್ನ ಬಿಟ್ಟು ಹೋಗಿದ್ದ. ಸ್ವಲ್ಪ ಸಮಯ ಅವನು ಕೆಟ್ಟ ಜೀವನ ನಡೆಸಿದ. ಆದ್ರೆ “ಆಮೇಲೆ ಅವನಿಗೆ ಬುದ್ಧಿ ಬಂತು.” ಅದಕ್ಕೆ ಅವನು ಆಮೇಲೆ ಮನೆಗೆ ವಾಪಸ್‌ ಬಂದ. ಆಗ ಅವನ ಅಪ್ಪ ಏನು ಮಾಡಿದ? “ಮಗ ಇನ್ನೂ ತುಂಬ ದೂರ ಇರುವಾಗಲೇ ಅಪ್ಪ ಅವನನ್ನ ನೋಡಿ ಓಡೋಡಿ ಬಂದು ಅಪ್ಕೊಂಡು ಮುತ್ತು ಕೊಟ್ಟ.” ಆಗ ಆ ಮಗ ತುಂಬ ಬೇಜಾರಿಂದ ಅವನು ಅವನ ಅಪ್ಪನ ಹತ್ರ ‘ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಾಗಿ ನನ್ನ ಸೇರಿಸ್ಕೊಳ್ತಿಯಾ?’ ಅಂತ ಕೇಳಬೇಕಂತ ಇದ್ದ. ಆದ್ರೆ ಅದಕ್ಕೆ ಮುಂಚೆನೇ ಅವನ ಅಪ್ಪ ಅವನನ್ನ ಮನೆಗೆ ಸೇರಿಸ್ಕೊಂಡ. ಅವನು ಅಷ್ಟು ತಪ್ಪು ಮಾಡಿದ್ರೂ ಅವನನ್ನ ಪ್ರೀತಿಯಿಂದ “ನನ್ನ ಚಿಕ್ಕ ಮಗ” ಅಂತ ಕರೆದ. ಆಮೇಲೆ ಆ ಅಪ್ಪ ಅವನು “ಕಳೆದುಹೋಗಿದ್ದ, ಈಗ ಸಿಕ್ಕಿದ್ದಾನೆ” ಅಂತ ಹೇಳಿದ. (ಲೂಕ 15:11-32) ಈ ಕಥೆಲಿರೋ ಅಪ್ಪನ ತರನೇ ಯೆಹೋವ ಪಶ್ಚಾತ್ತಾಪಪಟ್ಟ ಎಷ್ಟೋ ಪಾಪಿಗಳನ್ನ ಕ್ಷಮಿಸಿದ್ದನ್ನ ಯೇಸು ಸ್ವರ್ಗದಲ್ಲಿದ್ದಾಗ್ಲೇ ನೋಡಿದ್ದನು. ಅದಕ್ಕೆ ಅವನು ಭೂಮಿಗೆ ಬಂದಾಗ ಯೆಹೋವ ಎಷ್ಟು ಕರುಣಾಮಯಿ ಅಂತ ಜನ ಅರ್ಥ ಮಾಡ್ಕೊಳೋಕೆ ಈ ಕಥೆನ ಹೇಳಿದನು. ಪಾಪಿಗಳಾಗಿರೋ ನಮ್ಮ ಮೇಲೆ ಯೆಹೋವನಿಗೆ ತುಂಬ ಪ್ರೀತಿಯಿದೆ, ಕರುಣೆಯಿದೆ ಅಂತ ತಿಳ್ಕೊಂಡಾಗ ನಮ್ಮ ಮನಸ್ಸು ಎಷ್ಟು ಹಗುರ ಆಗುತ್ತೆ ಅಲ್ವಾ? w24.08 11 ¶11-12

ಗುರುವಾರ, ಜನವರಿ 29

ಚೆನ್ನಾಗಿ ಯೋಚ್ನೆ ಮಾಡಿ.—1 ಪೇತ್ರ 4:7.

ಚೆನ್ನಾಗಿ ಯೋಚ್ನೆ ಮಾಡೋ ಒಬ್ಬ ಕ್ರೈಸ್ತ ಒಂದು ನಿರ್ಧಾರ ಮಾಡೋ ಮುಂಚೆ ಅದ್ರ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ ಅಂತ ತಿಳ್ಕೊಳ್ಳೋಕೆ ತನ್ನ ಕೈಲಾದ ಎಲ್ಲ ಪ್ರಯತ್ನ ಮಾಡ್ತಾನೆ. ಹೀಗೆ ತನ್ನ ಜೀವನದಲ್ಲಿ ಅವನಿಗೆ ಯೆಹೋವನಿಗಿಂತ ಬೇರೆ ಯಾವುದೂ ಮುಖ್ಯ ಅಲ್ಲ ಅಂತ ಚೆನ್ನಾಗಿ ಗೊತ್ತಿರುತ್ತೆ. ‘ನನಗೇ ಎಲ್ಲ ಗೊತ್ತು’ ಅಂತ ಯೋಚ್ನೆ ಮಾಡದೇ ತನ್ನ ಇತಿಮಿತಿಗಳನ್ನ ಅರ್ಥ ಮಾಡ್ಕೊಳ್ತಾನೆ. ಅಷ್ಟೇ ಅಲ್ಲ ಪ್ರಾರ್ಥನೆಲಿ ಯೆಹೋವನ ಹತ್ರ ಸಹಾಯ ಕೇಳ್ತಾ ಆತನ ಮೇಲೆ ಆತ್ಕೊಳ್ತಾನೆ. ನಮಗೆ ಎಷ್ಟೇ ಶಕ್ತಿ ಸಾಮರ್ಥ್ಯ ಇದ್ರೂ, ಎಷ್ಟೇ ಬುದ್ಧಿ ಇದ್ರೂ, ‘ಇದೇನು ದೊಡ್ಡ ಸಮಸ್ಯೆ ಅಲ್ಲ ಅಂತ ಅನಿಸಿದ್ರೂ’ ಯಾವಾಗ್ಲೂ ಪ್ರಾರ್ಥನೆ ಮಾಡೋದು ಮುಖ್ಯ. ಹಾಗಾಗಿ ತೀರ್ಮಾನಗಳನ್ನ ಮಾಡುವಾಗ ಅದ್ರಲ್ಲೂ ದೊಡ್ಡ ದೊಡ್ಡ ತೀರ್ಮಾನ ಮಾಡುವಾಗಂತೂ ಪ್ರಾರ್ಥನೆ ಮಾಡ್ಲೇಬೇಕು. ಯಾಕಂದ್ರೆ ನಮಗೆ ಯಾವುದು ಒಳ್ಳೇದು ಅಂತ ನಮಗಿಂತ ಜಾಸ್ತಿ ಯೆಹೋವನಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಆತನು ನಮ್ಮನ್ನ ಚೆನ್ನಾಗಿ ಮಾರ್ಗದರ್ಶಿಸ್ತಾನೆ. ಯೆಹೋವನಲ್ಲಿ ಇರೋ ಗುಣಗಳನ್ನ ತೋರಿಸೋ ಸಾಮರ್ಥ್ಯನ ಆತನೇ ನಮಗೆ ಕೊಟ್ಟಿದ್ದಾನೆ. (ಆದಿ. 1:26) ನಿಜ, ನಾವು ಯೆಹೋವನನ್ನ ಪರಿಪೂರ್ಣವಾಗಿ ಅನುಕರಿಸೋಕೆ ಆಗಲ್ಲ.—ಯೆಶಾ. 55:9. w25.03 11 ¶13; 13 ¶17-18

ಶುಕ್ರವಾರ, ಜನವರಿ 30

[ಪ್ರೀತಿ] ಎಲ್ಲವನ್ನ ನಿರೀಕ್ಷಿಸುತ್ತೆ, ಎಲ್ಲವನ್ನ ತಾಳ್ಕೊಳುತ್ತೆ.—1 ಕೊರಿಂ. 13:7.

ಬೇರೆಯವರ ಉದ್ದೇಶನ ಪ್ರಶ್ನೆ ಮಾಡೋಕೆ ಹೋಗಬೇಡಿ. ನೀವೇನಾದ್ರೂ ಒಂದು ಒಳ್ಳೆ ಕೆಲಸ ಮಾಡಿದ್ದಕ್ಕೆ ಯಾರಾದ್ರೂ ಥ್ಯಾಂಕ್ಸ್‌ ಹೇಳದೆ ಇದ್ದಾಗ ಅವರು ನಿಜವಾಗ್ಲೂ ನಾನು ಮಾಡಿದ್ದಕ್ಕೆ ಬೆಲೆನೇ ಕೊಡ್ತಿಲ್ವಾ ಅಥವಾ ಮರೆತು ಹೋಗಿದ್ದಾರಾ ಅಂತ ಯೋಚ್ನೆ ಮಾಡಿ. ಅವರು ಥ್ಯಾಂಕ್ಸ್‌ ಹೇಳದೇ ಇರೋದಕ್ಕೆ ಇನ್ನೇನಾದ್ರೂ ಕಾರಣ ಇರಬಹುದಾ ಅಂತನೂ ಯೋಚ್ನೆ ಮಾಡಿ. ಕೆಲವ್ರಿಗೆ ಮನಸ್ಸಲ್ಲಿ ಇರುತ್ತೆ, ಆದ್ರೆ ಅದನ್ನ ಹೇಗೆ ಹೇಳಬೇಕು ಅಂತ ಗೊತ್ತಿರಲ್ಲ. ಇನ್ನು ಕೆಲವ್ರಿಗೆ ಕೊಟ್ಟು ರೂಢಿ ಇರೋದ್ರಿಂದ ಬೇರೆಯವ್ರಿಂದ ತಗೊಂಡಾಗ ಮುಜುಗರ ಆಗುತ್ತೆ. ನಾವು ಇದನ್ನ ಮನಸ್ಸಲ್ಲಿ ಇಡಬೇಕು. ನೆನಪಿಡಿ, ಸಹೋದರ ಸಹೋದರಿಯರ ಮೇಲೆ ನಮಗೆ ನಿಜವಾದ ಪ್ರೀತಿ ಇದ್ರೆ ನಾವು ಅವ್ರನ್ನ ತಪ್ಪಾಗಿ ಅರ್ಥಮಾಡ್ಕೊಳಲ್ಲ. ಅಷ್ಟೇ ಅಲ್ಲ ನಾವು ಯಾವಾಗ್ಲೂ ಸಂತೋಷವಾಗಿ ಕೊಡ್ತಾನೇ ಇರ್ತೀವಿ. (ಎಫೆ. 4:2) ನಾವು ಸಹಾಯ ಮಾಡಿದಾಗ ಜನ ತಕ್ಷಣ ಥ್ಯಾಂಕ್ಸ್‌ ಹೇಳ್ತಾರೆ ಅಂತ ಅಂದ್ಕೊಬೇಡಿ. ಇದ್ರ ಬಗ್ಗೆ ವಿವೇಕಿಯಾದ ರಾಜ ಸೊಲೊಮೋನ ಹೇಗೆ ಹೇಳಿದ್ದಾನೆ ನೋಡಿ. “ನಿನ್ನ ರೊಟ್ಟಿಯನ್ನ ನೀರಿನ ಮೇಲೆ ಎಸಿ, ತುಂಬ ದಿನಗಳಾದ ಮೇಲೆ ಅದು ನಿನಗೆ ಮತ್ತೆ ಸಿಗುತ್ತೆ.” (ಪ್ರಸಂ. 11:1) ನೋಡಿದ್ರಾ, “ತುಂಬ ದಿನಗಳಾದ ಮೇಲೆ” ಕೆಲವರು ನಾವು ಮಾಡಿದ ಸಹಾಯನ ನೆನಸ್ಕೊಬಹುದು, ಥ್ಯಾಂಕ್ಸ್‌ ಹೇಳಬಹುದು ಅಂತ ಈ ವಚನದಿಂದ ನಮಗೆ ಗೊತ್ತಾಗುತ್ತೆ. w24.09 30 ¶18-19

ಶನಿವಾರ, ಜನವರಿ 31

ಪಾಪ ಮಾಡ್ತಾ ಇರುವವನನ್ನ ಎಲ್ರ ಮುಂದೆ ತಿದ್ದು. ಆಗ ಬೇರೆಯವ್ರಿಗೂ ಎಚ್ಚರಿಕೆ ಸಿಗುತ್ತೆ.—1 ತಿಮೊ. 5:20.

ಕೆಲವೊಮ್ಮೆ ಒಬ್ಬ ವ್ಯಕ್ತಿಗೆ ತಿದ್ದುಪಾಟು ಕೊಡಲಾಗಿದೆ ಅಂತ ಸಭೇಲಿ ಪ್ರಕಟಣೆ ಮಾಡ್ತಾರೆ. ಆಗ ನಾವು ಆ ವ್ಯಕ್ತಿ ಜೊತೆ ಸಹವಾಸ ಮಾಡೋದನ್ನ ನಿಲ್ಲಿಸಿಬಿಡಲ್ಲ. ಯಾಕಂದ್ರೆ ಅವನು ಪಶ್ಚಾತ್ತಾಪ ಪಟ್ಟಿರ್ತಾನೆ, ತಾನು ಮಾಡ್ತಿದ್ದ ತಪ್ಪನ್ನ ಬಿಟ್ಟುಬಿಟ್ಟಿರ್ತಾನೆ. ಅಷ್ಟೇ ಅಲ್ಲ, ಅವನಿನ್ನೂ ಸಭೆಯ ಭಾಗವಾಗಿದ್ದಾನೆ ಮತ್ತು ಅವನಿಗೆ ಸರಿಯಾಗಿರೋದನ್ನ ಮಾಡ್ತಾ ಇರೋಕೆ ನಮ್ಮ ಪ್ರೋತ್ಸಾಹನೂ ಬೇಕಿರುತ್ತೆ. (ಇಬ್ರಿ. 10:24, 25) ಅದಕ್ಕೆ ನಾವು ಅವನ ಜೊತೆ ಸಹವಾಸ ಮಾಡ್ತೀವಿ. ಆದ್ರೆ ಯಾರನ್ನ ಸಭೆಯಿಂದ ಹೊರಗೆ ಹಾಕಿದ್ದಾರೋ ‘ಅವ್ರ ಜೊತೆ ನಾವು ಸೇರೋದೂ ಇಲ್ಲ, ಊಟನೂ ಮಾಡಲ್ಲ.’ (1 ಕೊರಿಂ. 5:11) ಹಾಗಾದ್ರೆ ನಾವು ಅವನನ್ನ ನೋಡಿನೂ ನೋಡದ ಹಾಗೆ ಇರಬೇಕು ಅಂತನಾ? ಇಲ್ಲ. ನಾವು ಅವನ ಜೊತೆ ಸೇರೋದಿಲ್ಲ ಅನ್ನೋದು ನಿಜಾನೇ. ಆದ್ರೆ ನಾವು ಆ ವ್ಯಕ್ತಿನ ಕೂಟಕ್ಕೆ ಕರಿಬೇಕಾ ಬೇಡ್ವಾ ಅನ್ನೋ ತೀರ್ಮಾನವನ್ನ ನಮ್ಮ ಕ್ರೈಸ್ತ ಮನಸಾಕ್ಷಿ ಬಳಸಿ ಮಾಡಬಹುದು. ಅವನು ನಿಮ್ಮ ಸಂಬಂಧಿಕ ಆಗಿರಬಹುದು ಅಥವಾ ಈ ಹಿಂದೆ ನಿಮ್ಮ ಸ್ನೇಹಿತ ಆಗಿರಬಹುದು. w24.08 30 ¶13-14

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ