ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • es26 ಪು. 145-159
  • ಡಿಸೆಂಬರ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಡಿಸೆಂಬರ್‌
  • ದಿನದ ವಚನ ಓದಿ ಚರ್ಚಿಸೋಣ—2026
  • ಉಪಶೀರ್ಷಿಕೆಗಳು
  • ಮಂಗಳವಾರ, ಡಿಸೆಂಬರ್‌ 1
  • ಬುಧವಾರ, ಡಿಸೆಂಬರ್‌ 2
  • ಗುರುವಾರ, ಡಿಸೆಂಬರ್‌ 3
  • ಶುಕ್ರವಾರ, ಡಿಸೆಂಬರ್‌ 4
  • ಶನಿವಾರ, ಡಿಸೆಂಬರ್‌ 5
  • ಭಾನುವಾರ, ಡಿಸೆಂಬರ್‌ 6
  • ಸೋಮವಾರ, ಡಿಸೆಂಬರ್‌ 7
  • ಮಂಗಳವಾರ, ಡಿಸೆಂಬರ್‌ 8
  • ಬುಧವಾರ, ಡಿಸೆಂಬರ್‌ 9
  • ಗುರುವಾರ, ಡಿಸೆಂಬರ್‌ 10
  • ಶುಕ್ರವಾರ, ಡಿಸೆಂಬರ್‌ 11
  • ಶನಿವಾರ, ಡಿಸೆಂಬರ್‌ 12
  • ಭಾನುವಾರ, ಡಿಸೆಂಬರ್‌ 13
  • ಸೋಮವಾರ, ಡಿಸೆಂಬರ್‌ 14
  • ಮಂಗಳವಾರ, ಡಿಸೆಂಬರ್‌ 15
  • ಬುಧವಾರ, ಡಿಸೆಂಬರ್‌ 16
  • ಗುರುವಾರ, ಡಿಸೆಂಬರ್‌ 17
  • ಶುಕ್ರವಾರ, ಡಿಸೆಂಬರ್‌ 18
  • ಶನಿವಾರ, ಡಿಸೆಂಬರ್‌ 19
  • ಭಾನುವಾರ, ಡಿಸೆಂಬರ್‌ 20
  • ಸೋಮವಾರ, ಡಿಸೆಂಬರ್‌ 21
  • ಮಂಗಳವಾರ, ಡಿಸೆಂಬರ್‌ 22
  • ಬುಧವಾರ, ಡಿಸೆಂಬರ್‌ 23
  • ಗುರುವಾರ, ಡಿಸೆಂಬರ್‌ 24
  • ಶುಕ್ರವಾರ, ಡಿಸೆಂಬರ್‌ 25
  • ಶನಿವಾರ, ಡಿಸೆಂಬರ್‌ 26
  • ಭಾನುವಾರ, ಡಿಸೆಂಬರ್‌ 27
  • ಸೋಮವಾರ, ಡಿಸೆಂಬರ್‌ 28
  • ಮಂಗಳವಾರ, ಡಿಸೆಂಬರ್‌ 29
  • ಬುಧವಾರ, ಡಿಸೆಂಬರ್‌ 30
  • ಗುರುವಾರ, ಡಿಸೆಂಬರ್‌ 31
ದಿನದ ವಚನ ಓದಿ ಚರ್ಚಿಸೋಣ—2026
es26 ಪು. 145-159

ಡಿಸೆಂಬರ್‌

ಮಂಗಳವಾರ, ಡಿಸೆಂಬರ್‌ 1

ಆಮೇಲೆ ಆತನು ಗ್ರಂಥದಲ್ಲಿರೋ ಮಾತುಗಳು ಚೆನ್ನಾಗಿ ಅರ್ಥ ಆಗೋ ತರ ವಿವರಿಸಿದನು.—ಲೂಕ 24:45.

ಯೇಸುವಿನ ಶಿಷ್ಯರು ಬೈಬಲನ್ನ ನಂಬ್ತಿದ್ರು. ಅದ್ರಲ್ಲಿ ಇರೋದನ್ನೆಲ್ಲಾ ಚೆನ್ನಾಗಿ ಪಾಲಿಸ್ತಿದ್ರು. (ಯೋಹಾ. 17:6) ಆದ್ರೆ ಇಷ್ಟೊಳ್ಳೆ ಯೇಸುನ ಒಬ್ಬ ಅಪರಾಧಿ ತರ ಹಿಂಸಾ ಕಂಬದಲ್ಲಿ ಕೊಂದಾಗ ಅವ್ರ ಮನಸ್ಸಲ್ಲಿ ತುಂಬ ಪ್ರಶ್ನೆಗಳು ಹುಟ್ಕೊಳ್ತು. ಅವ್ರಿಗೆ ಗಲಿಬಿಲಿ ಆಯ್ತು. ಅವ್ರಿಗೆ ಪ್ರಶ್ನೆ ಬಂದಿದೆ ಅಂದ ತಕ್ಷಣ ತನ್ನ ಮೇಲೆ ಮತ್ತು ಯೆಹೋವನ ಮೇಲೆ ಅವ್ರಿಗೆ ಪ್ರೀತಿ ಇಲ್ಲ ಅಂತ ಯೇಸು ಅಂದ್ಕೊಳ್ಳಲಿಲ್ಲ. (ಲೂಕ 9:44, 45; ಯೋಹಾ. 20:9) ಅವ್ರಿಗೆ ಬೈಬಲನ್ನ ಚೆನ್ನಾಗಿ ಅರ್ಥಮಾಡಿಸಬೇಕು ಅಂತ ತಿಳ್ಕೊಂಡನು. ಆಮೇಲೆ ಅವ್ರಿಗೆ ಅದನ್ನ ಚೆನ್ನಾಗಿ ಅರ್ಥ ಮಾಡಿಸಿದನು. ಎಮ್ಮಾಹುಗೆ ಹೋಗ್ತಿದ್ದ ಇಬ್ರು ಶಿಷ್ಯರ ಹತ್ರ ಯೇಸು ಏನು ಮಾತಾಡಿದನು ಅಂತ ಗೊತ್ತಾ? ಯೇಸು ತಾನು ಯಾರು ಅಂತ ಶಿಷ್ಯರಿಗೆ ನೇರವಾಗಿ ಹೇಳಲಿಲ್ಲ. ಅವ್ರಿಗೆ ಕೆಲವು ಪ್ರಶ್ನೆಗಳನ್ನ ಕೇಳಿದನು. ಯಾಕೆ? ಯಾಕಂದ್ರೆ ಅವ್ರ ಮನಸ್ಸಲ್ಲಿ ಏನು ಓಡ್ತಿದೆ ಅಂತ ತಿಳ್ಕೊಳ್ಳೋಕೆ ಕೇಳಿದನು. ಆಗ ಅವರು ಮೆಸ್ಸೀಯ ತಮ್ಮನ್ನ ರೊಮನ್ನರ ಕೈಯಿಂದ ಬಿಡಿಸ್ತಾನೆ ಅಂತ ನಂಬಿದ್ವಿ ಅಂತ ಹೇಳಿದ್ರು. (ಲೂಕ 24:18-27) ಅವ್ರ ಮನಸ್ಸಲ್ಲಿರೋ ಚಿಂತೆಯನ್ನ ಯೇಸು ಅರ್ಥಮಾಡ್ಕೊಂಡ ಮೇಲೆ ಮೆಸ್ಸೀಯನಿಗೆ ಏನೆಲ್ಲಾ ಆಗುತ್ತೆ ಅಂತ ಪವಿತ್ರ ಗ್ರಂಥದಲ್ಲಿ ಮುಂಚೆನೇ ಹೇಳಿದೆ ಅಂತ ವಿವರಿಸಿದನು. ಅವತ್ತು ಸಂಜೆ ಯೇಸು ಬೇರೆ ಶಿಷ್ಯರಿಗೂ ಈ ವಿಷ್ಯಗಳನ್ನ ಅರ್ಥ ಮಾಡಿಸಿದನು.—ಲೂಕ 24: 33-48. w24.10 14 ¶9-10

ಬುಧವಾರ, ಡಿಸೆಂಬರ್‌ 2

ನನ್ನಷ್ಟಕ್ಕೆ ನಾನೇ ಏನೂ ಮಾಡಿಲ್ಲ, ಅಪ್ಪ ಕಲಿಸಿದ್ದನ್ನೇ ಮಾತಾಡಿದೆ ಅಂತ ನಿಮಗೆ ಅರ್ಥ ಆಗುತ್ತೆ.—ಯೋಹಾ. 8:28.

ಯೇಸು ತಾನು ಏನು ಮಾಡಬೇಕು, ಏನು ಮಾತಾಡಬೇಕು ಅಂತ ಯೆಹೋವನಿಂದ ಕಲಿತನು. ಯೇಸು ತರಾನೇ ಇವತ್ತು ಯೆಹೋವನ ಸಂಘಟನೆ ಸರಿ ಯಾವುದು ತಪ್ಪು ಯಾವುದು ಅಂತ ನಮಗೆ ತಿಳಿಸೋಕೆ ಮತ್ತು ನಿರ್ದೇಶನಗಳನ್ನ ಕೊಡೋಕೆ ಬೈಬಲನ್ನ ಉಪಯೋಗಿಸ್ತಾ ಇದೆ. (2 ತಿಮೊ. 3:16, 17) ಅಷ್ಟೇ ಅಲ್ಲ, ಪ್ರತಿದಿನ ದೇವರ ವಾಕ್ಯ ಓದೋಕೆ, ಅದ್ರಲ್ಲಿರೋ ತತ್ವಗಳನ್ನ ಪಾಲಿಸೋಕೂ ನಮಗೆ ಪ್ರೋತ್ಸಾಹ ಕೊಡ್ತಿದೆ. ನಾವು ಬೈಬಲ್‌ ಓದೋದ್ರ ಜೊತೆ ನಮ್ಮ ಸಂಘಟನೆ ಕೊಡೋ ಪುಸ್ತಕ-ಪತ್ರಿಕೆಗಳನ್ನೂ ಓದಬೇಕು. ಆಗ ಬೈಬಲಲ್ಲಿ ಇರೋದನ್ನ ಚೆನ್ನಾಗಿ ಅರ್ಥಮಾಡ್ಕೊಳ್ಳೋಕೆ ಆಗುತ್ತೆ. ಉದಾಹರಣೆಗೆ ಸಂಘಟನೆ ಕೆಲವು ನಿರ್ದೇಶನ ಕೊಡುವಾಗ ಅದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ ಅಂತ ತಿಳ್ಕೊಬೇಕು. ಆಗ ಆ ಸಲಹೆಗಳನ್ನ ಸಂಘಟನೆ ಬೈಬಲಿಂದನೇ ಕೊಟ್ಟಿದೆ ಅಂತ ಗೊತ್ತಾಗುತ್ತೆ. ನಮಗೆ ಸಂಘಟನೆ ಮೇಲಿರೋ ನಂಬಿಕೆನೂ ಜಾಸ್ತಿ ಆಗುತ್ತೆ. (ರೋಮ. 12:2) ಯೇಸು “ದೇವರ ಆಳ್ವಿಕೆಯ ಸಿಹಿಸುದ್ದಿನ” ಸಾರಿದನು. (ಲೂಕ 4:43, 44) ಅಷ್ಟೇ ಅಲ್ಲ, ತನ್ನ ಶಿಷ್ಯರಿಗೂ ಸಾರೋಕೆ ಆಜ್ಞೆ ಕೊಟ್ಟನು. (ಲೂಕ 9:1, 2; 10:8, 9) ಹಾಗಾಗಿ ಯೆಹೋವನ ಸಂಘಟನೆಯಲ್ಲಿ ಇರೋರು ಎಲ್ಲೇ ಇದ್ರೂ ಸಿಹಿಸುದ್ದಿ ಸಾರ್ತಾರೆ. w24.04 9 ¶5-7

ಗುರುವಾರ, ಡಿಸೆಂಬರ್‌ 3

ನೀನು ಹೇಳಿದ ಹಾಗೇ ಮಾಡ್ತೀವಿ, ಎಲ್ಲಿ ಕಳಿಸಿದ್ರೂ ಹೋಗ್ತೀವಿ.—ಯೆಹೋ. 1:16.

ಸಂಘಟನೆ ಕೊಡೋ ನಿರ್ದೇಶನವನ್ನ ಯಾವಾಗ್ಲೂ ನಂಬಿ. ಯೆಹೋವ ದೇವರು ಇಸ್ರಾಯೇಲ್ಯರಿಗೆ ಮೋಶೆ ಮತ್ತು ಯೆಹೋಶುವನ ಮೂಲಕ ನಿರ್ದೇಶನ ಕೊಟ್ಟನು. (ಯೆಹೋ. 1: 17) ಇವ್ರನ್ನ ಯೆಹೋವನೇ ನೇಮಿಸಿದ್ದಾನೆ ಅಂತ ಇಸ್ರಾಯೇಲ್ಯರು ಅರ್ಥಮಾಡ್ಕೊಂಡಾಗ ಯೆಹೋವ ಆ ಜನ್ರನ್ನ ಆಶೀರ್ವದಿಸಿದನು. ಇದಾಗಿ ಸುಮಾರು ವರ್ಷಗಳು ಆದ್ಮೇಲೆ ಮೊದಲ ಸಭೆ ಶುರು ಆದಾಗ 12 ಅಪೊಸ್ತಲರು ನಿರ್ದೇಶನ ಕೊಟ್ರು. (ಅ. ಕಾ. 8:14, 15) ಆಮೇಲೆ ಅವ್ರ ಆ ಗುಂಪಿಗೆ ಯೆರೂಸಲೇಮಿನಲ್ಲಿದ್ದ ಇನ್ನೂ ಕೆಲವು ಹಿರಿಯರು ಸೇರಿದ್ರು. ಅವರು ಕೊಟ್ಟ ನಿರ್ದೇಶನ ಪಾಲಿಸಿದ್ರಿಂದ “ಸಭೆಯಲ್ಲಿದ್ದ ಸಹೋದರರ ನಂಬಿಕೆ ಹೆಚ್ಚಾಯ್ತು. ಶಿಷ್ಯರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗ್ತಾ ಹೋಯ್ತು.” (ಅ. ಕಾ. 16:4, 5) ಇವತ್ತು ನಾವೂ ಯೆಹೋವನ ಸಂಘಟನೆ ಕೊಡೋ ನಿರ್ದೇಶನ ಪಾಲಿಸಿದ್ರೆ ಯೆಹೋವ ನಮ್ಮನ್ನೂ ಆಶೀರ್ವದಿಸ್ತಾನೆ. w24.07 10 ¶10

ಶುಕ್ರವಾರ, ಡಿಸೆಂಬರ್‌ 4

ಇಷಯನ ಮಗ ದಾವೀದ ಅಂದ್ರೆ ನನ್ನ ಮನಸ್ಸಿಗೆ ತುಂಬ ಇಷ್ಟ.—ಅ. ಕಾ. 13:22.

ಯೆಹೋವ ತಾನು ತುಂಬ ಪ್ರೀತಿಸ್ತಿದ್ದ ರಾಜ ದಾವೀದನಿಗೆ ಪಶ್ಚಾತ್ತಾಪ ಪಡೋಕೆ ಸಹಾಯ ಮಾಡಿದನು. ದಾವೀದ ಯೆಹೋವನ “ಮನಸ್ಸಿಗೆ ತುಂಬ ಇಷ್ಟ” ಆಗಿದ್ದನು. ಆದ್ರೆ ಅವನು ದೊಡ್ಡ ಪಾಪಗಳನ್ನೇ ಮಾಡಿದ. ವ್ಯಭಿಚಾರ ಮಾಡಿದ, ಕೊಲೆ ಮಾಡಿದ. ಇಷ್ಟು ದೊಡ್ಡ ಪಾಪ ಮಾಡಿದ ಅವನನ್ನ ಮೋಶೆಯ ನಿಯಮದ ಪ್ರಕಾರ ಸಾಯಿಸಬೇಕಿತ್ತು. (ಯಾಜ. 20:10; ಅರ. 35:31) ಆದ್ರೆ ಯೆಹೋವ ಹಾಗೆ ಆಗೋಕೆ ಬಿಡಲಿಲ್ಲ, ಅವನು ಪಶ್ಚಾತ್ತಾಪ ಪಡೋಕೆ ಸಹಾಯ ಮಾಡಿದನು. ಆದ್ರೆ ದಾವೀದ ತಾನು ಮಾಡಿದ ತಪ್ಪಿಗೆ ತಾನಾಗೇ ಒಂಚೂರೂ ಪಶ್ಚಾತ್ತಾಪ ಪಡಲಿಲ್ಲ. ಆದ್ರೂ ಯೆಹೋವ ಪ್ರವಾದಿ ನಾತಾನನನ್ನ ದಾವೀದನ ಹತ್ರ ಕಳಿಸಿದನು. ನಾತಾನ ಅವನ ಮನಸ್ಸಿಗೆ ನಾಟೋ ಒಂದು ಉದಾಹರಣೆ ಹೇಳಿದನು. ಅದನ್ನ ಕೇಳಿದಾಗ ದಾವೀದ ಯೆಹೋವನಿಗೆ ಎಷ್ಟು ನೋವು ಮಾಡಿದ್ದೀನಿ ಅಂತ ಅರ್ಥ ಮಾಡ್ಕೊಂಡ. ಆಮೇಲೆ ಪಶ್ಚಾತ್ತಾಪ ಪಟ್ಟ. (2 ಸಮು. 12:1-14) ಅವನು ಎಷ್ಟು ಪಶ್ಚಾತ್ತಾಪ ಪಟ್ಟ ಅಂತ ಅವನು ಬರೆದ ಕೀರ್ತನೆಗಳಿಂದನೇ ಗೊತ್ತಾಗುತ್ತೆ. (ಕೀರ್ತ. 51, ಮೇಲ್ಬರಹ) ಇವತ್ತಿಗೂ ಪಾಪ ಮಾಡಿದವ್ರಿಗೆ ಆ ಕೀರ್ತನೆ ತುಂಬ ಸಾಂತ್ವನ ಕೊಡುತ್ತೆ, ಪಶ್ಚಾತ್ತಾಪ ಪಡೋಕೆ ಪ್ರೇರೇಪಿಸುತ್ತೆ. ಯೆಹೋವ ದಾವೀದನನ್ನ ಕ್ಷಮಿಸಿದ್ದು ಎಷ್ಟು ಒಳ್ಳೆದಾಯ್ತು ಅಲ್ವಾ? ಆತನು ಕ್ಷಮಿಸಿದ್ರಿಂದಾನೇ ಇಷ್ಟು ಒಳ್ಳೇ ಕೀರ್ತನೆಗಳನ್ನ ಅವನು ಬರೆಯೋಕೆ ಆಗಿದ್ದು. w24.08 10 ¶9

ಶನಿವಾರ, ಡಿಸೆಂಬರ್‌ 5

ದೇವರು ಇಷ್ಟಪಡೋ ವಿಷ್ಯಗಳು ಯಾವಾಗ್ಲೂ ಒಳ್ಳೇದಾಗಿ, ಪರಿಪೂರ್ಣವಾಗಿ, ಸರಿಯಾಗಿ ಇರುತ್ತೆ ಅಂತ ಪರೀಕ್ಷಿಸಿ ಅರ್ಥ ಮಾಡ್ಕೊಳ್ಳಿ.—ರೋಮ. 12:2.

ಮಕ್ಕಳನ್ನ ಬೆಳೆಸೋದು ಹೇಳಿದಷ್ಟು ಸುಲಭ ಅಲ್ಲ. ನಿಮಗೆ ಬೆಳೀತಿರೋ ಮಕ್ಕಳು ಇದ್ರೆ ದೇವರ ಮೇಲೆ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ ಅವ್ರಿಗೆ ನಿಮ್ಮ ಕೈಲಾಗಿದ್ದನ್ನೆಲ್ಲ ಮಾಡ್ತಿದ್ದೀರ ಅಂತ ನಮಗೆ ಗೊತ್ತು. (ಧರ್ಮೋ. 6:6, 7) ದೇವರು ನಿಮ್ಮನ್ನ ತುಂಬ ಮೆಚ್ಕೊಳ್ತಾನೆ. ಹೋಗ್ತಾ ಹೋಗ್ತಾ ನಿಮ್ಮ ಮಕ್ಕಳು ‘ಯೆಹೋವ ದೇವರು ಯಾಕೆ ಇದನ್ನ ಮಾಡು, ಇದನ್ನ ಮಾಡಬೇಡ ಅಂತ ಹೇಳ್ತಾರೆ? ಇದನ್ನ ಮಾಡೋದ್ರಲ್ಲಿ ತಪ್ಪೇನಿದೆ?’ ಅಂತ ಕೇಳಬಹುದು. ಮೊದಮೊದ್ಲು ನಿಮ್ಮ ಮಕ್ಕಳ ಬಾಯಲ್ಲಿ ಇಂಥ ಪ್ರಶ್ನೆ ಕೇಳಿದಾಗ ನಿಮಗೆ ತಬ್ಬಿಬ್ಬಾಗಬಹುದು. ‘ಇವನೇನಾದ್ರೂ ಸತ್ಯ-ಗಿತ್ಯ ಬಿಟ್ಟು ಹೋಗಿಬಿಡ್ತಾನಾ’ ಅಂತ ತಲೆ ಕೆಟ್ಟೋಗಬಹುದು. ಆದ್ರೆ ಭಯ ಪಡಬೇಡಿ. ‘ಆಳ ನೋಡಿ ನೀರಿಗಿಳಿ’ ಅನ್ನೋ ತರ ಅವರು ನಂಬೋಕೆ ಮುಂಚೆ ನಿಜ ಏನಂತ ಅರ್ಥ ಮಾಡ್ಕೊಳ್ತಿದ್ದಾರೆ ಅಷ್ಟೆ. (1 ಕೊರಿಂ. 13:11) ಅದಕ್ಕೆ ನಿಮ್ಮ ಮಕ್ಕಳು ಪ್ರಶ್ನೆ ಕೇಳಿದಾಗೆಲ್ಲ ಚಿಂತೆ ಮಾಡದೆ, ಇದು ಅವ್ರ ನಂಬಿಕೆನ ಗಟ್ಟಿ ಮಾಡೋಕೆ ಸಿಗ್ತಿರೋ ಅವಕಾಶ ಅಂತ ನೆನಸಿ. w24.12 14 ¶1-2

ಭಾನುವಾರ, ಡಿಸೆಂಬರ್‌ 6

ನಂಬಿಕೆ ಇರುವವ್ರ ತರ ಇದ್ದೀವಿ ಮತ್ತು ನಮ್ಮ ಜೀವ ಉಳಿಸ್ಕೊಳ್ತೀವಿ.—ಇಬ್ರಿ. 10:39.

ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ತುಂಬ ನಂಬಿಕೆ ಬೆಳೆಸ್ಕೊಬೇಕಿತ್ತು. ಯಾಕಂದ್ರೆ ಯೇಸು ಹೇಳಿದ ಹಾಗೆ ದೊಡ್ಡ ಸಂಕಟ ಇನ್ನೇನು ಬರಕ್ಕಿತ್ತು. (ಇಬ್ರಿ. 10:37, 38) ಶತ್ರು ಸೈನ್ಯ ಯೆರೂಸಲೇಮಿಗೆ ಮುತ್ತಿಗೆ ಹಾಕಿದಾಗ ಅದನ್ನ ನೋಡಿದ ಜನ್ರೆಲ್ಲ ಬೆಟ್ಟಗಳಿಗೆ ಓಡಿಹೋಗಬೇಕು ಅಂತ ಯೇಸು ಎಚ್ಚರಿಕೆ ಕೊಟ್ಟಿದ್ದನು. ಇದನ್ನ ಯೆರೂಸಲೇಮ್‌ ಪಟ್ಟಣದಲ್ಲಿ ಇದ್ದವರೂ ಸುತ್ತಮುತ್ತ ಹಳ್ಳಿಯಲ್ಲಿ ಇದ್ದವರೂ ಪಾಲಿಸಬೇಕಿತ್ತು. (ಲೂಕ 21:20-24) ಆಗಿನ ಕಾಲದಲ್ಲಿ ಶತ್ರುಗಳು ಈ ತರ ದಾಳಿ ಮಾಡಿದ್ರೆ ಜನ್ರೆಲ್ಲ ಪಟ್ಟಣದ ಒಳಗೆ ಓಡಿಹೋಗಿ ಪ್ರಾಣ ಉಳಿಸ್ಕೊಳ್ತಿದ್ರು. ಆದ್ರೆ ಯೇಸು ಇಲ್ಲಿ ಪಟ್ಟಣದಿಂದ ಹೊರಗೆ ಓಡಿ ಬನ್ನಿ ಅಂತ ಉಲ್ಟಾ ಹೇಳ್ತಿದ್ದಾನೆ. ಇದನ್ನ ಕೇಳಿಸ್ಕೊಂಡಾಗ ಜನ್ರಿಗೆ ‘ತಲೆಬುಡನೇ ಇಲ್ವಲ್ಲಾ’ ಅಂತ ಅನಿಸಿರುತ್ತೆ. ಆದ್ರೂ ಯೇಸು ಹೇಳಿದ ಹಾಗೆ ಮಾಡಬೇಕಂದ್ರೆ ಅವ್ರಿಗೆ ತುಂಬ ನಂಬಿಕೆ ಬೇಕಿತ್ತು. ಆಗಿನ ಕ್ರೈಸ್ತರು ಸಭೆಯನ್ನ ನಡಿಸ್ತಿದ್ದ ಸಹೋದರರ ಮೇಲೂ ನಂಬಿಕೆ ಇಡಬೇಕಿತ್ತು. ಯಾಕಂದ್ರೆ ಯಾವಾಗ ಓಡಿಹೋಗಬೇಕು, ಹೇಗೆ ಓಡಿಹೋಗಬೇಕು ಅಂತ ಅವ್ರೇ ನಿರ್ದೇಶನ ಕೊಡ್ತಿದ್ರು.—ಇಬ್ರಿ. 13:17. w24.09 10 ¶9-10

ಸೋಮವಾರ, ಡಿಸೆಂಬರ್‌ 7

ಆತನು ಗಂಡಸ್ರನ್ನ ಉಡುಗೊರೆಗಳಾಗಿ ಕೊಟ್ಟನು.—ಎಫೆ. 4:8.

ಯೇಸು ಭೂಮಿಲಿದ್ದಾಗ ತನ್ನ ತಂದೆ ಕೊಟ್ಟ ಕೆಲ್ಸನ ಅಚ್ಚುಕಟ್ಟಾಗಿ ಮಾಡ್ತಿದ್ದ. (ಯೋಹಾ. 17:4) ಹಾಗಂತ ‘ಎಲ್ಲ ಕೆಲ್ಸನ ನಾನು ಮಾಡಿದ್ರೆನೇ ಚೆನ್ನಾಗಿ ಆಗೋದು, ಇಲ್ಲಾಂದ್ರೆ ಎಲ್ಲ ಹಾಳು ಮಾಡಿಬಿಡ್ತಾರೆ’ ಅಂತ ಯೇಸು ಯಾವಾಗಾದ್ರೂ ಅಂದ್ಕೊಂಡನಾ? ಇಲ್ಲ. ಸಾರೋದು ಹೇಗೆ ಅಂತ ಬೇರೆಯವ್ರಿಗೂ ಕಲಿಸ್ಕೊಟ್ಟನು. ಶಿಷ್ಯರಿಗೆ ದೊಡ್ಡದೊಡ್ಡ ಜವಾಬ್ದಾರಿಗಳನ್ನ ವಹಿಸ್ಕೊಟ್ಟನು. ಸಾರೋ ಮತ್ತು ಕಲಿಸೋ ಕೆಲಸನ ಮುಂದೆ ನಿಂತು ನಡಿಸೋಕೆ, ತನ್ನ ಪ್ರೀತಿಯ ಕುರಿಮಂದೆಯನ್ನ ಚೆನ್ನಾಗಿ ನೋಡ್ಕೊಳೋಕೆ ಅವ್ರಿಗೆ ಜವಾಬ್ದಾರಿ ವಹಿಸ್ಕೊಟ್ಟನು. ಅವ್ರನ್ನ ನಂಬಿ ಅವ್ರಿಗೆ ಆ ಕೆಲಸ ಕೊಟ್ಟನು. ಶಿಷ್ಯರು ಕೆಲವೊಂದು ವಿಷ್ಯಗಳನ್ನ ಸರಿ ಮಾಡ್ಕೊಬೇಕು ಅಂತ ಯೇಸುಗೆ ಗೊತ್ತಾದಾಗ ನೇರವಾಗಿ ಆದ್ರೆ ಪ್ರೀತಿಯಿಂದ ತಿದ್ದಿದನು. ಅವನೇ ಯೇಸುನಾ ಅಂತ ಅವರು ಸಂಶಯ ಪಟ್ಟಾಗ ಅವ್ರನ್ನ ತಿದ್ದಿದನು. (ಲೂಕ 24:25-27; ಯೋಹಾ. 20:27) ವ್ಯಾಪಾರ ಮಾಡಿ ಹಣ ಸಂಪಾದನೆ ಮಾಡೋದಕ್ಕಿಂತ ತನ್ನ ಕುರಿ ಮಂದೆನ ನೋಡ್ಕೊಳ್ಳೋದು ತುಂಬ ಮುಖ್ಯ ಅಂತ ಅವ್ರಿಗೆ ಅರ್ಥ ಮಾಡಿಸಿದನು. (ಯೋಹಾ. 21:15) ಬೇರೆಯವ್ರಿಗೆ ಸುಯೋಗಗಳು ಸಿಗೋದನ್ನ ನೋಡಿ ತಲೆ ಕೆಡಿಸ್ಕೊಬಾರದು ಅಂತನೂ ಅವ್ರಿಗೆ ಹೇಳಿದನು. (ಯೋಹಾ. 21:20-22) ಅಷ್ಟೇ ಅಲ್ಲ ದೇವರ ಆಳ್ವಿಕೆ ಬಗ್ಗೆ ಅವರು ತಪ್ಪರ್ಥ ಮಾಡ್ಕೊಂಡಾಗ ಸಿಹಿಸುದ್ದಿ ಸಾರೋದಕ್ಕೆ ಪ್ರಾಮುಖ್ಯತೆ ಕೊಡಿ ಅಂತ ಅರ್ಥ ಮಾಡಿಸಿದನು.—ಅ. ಕಾ. 1:6-8. w24.10 15-16 ¶13-14

ಮಂಗಳವಾರ, ಡಿಸೆಂಬರ್‌ 8

ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.—ಕೀರ್ತ. 37:29.

ಮಾತು ಕೇಳೋದು ನಮ್ಮ ಜೀವ ಉಳಿಸುತ್ತೆ. ಇಸ್ರಾಯೇಲ್ಯರು ಮಾತು ಕೊಟ್ಟ ದೇಶಕ್ಕೆ ಇನ್ನೇನು ಕಾಲು ಇಡೋಕಿದ್ರು. ನಾವೂ ಅವ್ರ ತರಾನೇ ಹೊಸ ಲೋಕಕ್ಕೆ ಹೋಗಕ್ಕೆ ಕಾಯ್ತಾ ಇದ್ದೀವಿ. ಆಗ ಇಡೀ ಭೂಮಿ ಮತ್ತೆ ಸುಂದರ ತೋಟ ಆಗುತ್ತೆ. (ಯೆಶಾ. 35:1; ಲೂಕ 23:43) ಅಲ್ಲಿ ಸೈತಾನ ಆಗ್ಲಿ ಅವನ ಜೊತೆ ಇರೋ ಕೆಟ್ಟ ದೇವದೂತರಾಗ್ಲಿ ಇರಲ್ಲ. (ಪ್ರಕ. 20:2, 3) ಯೆಹೋವ ದೇವರಿಂದ ಜನ್ರನ್ನ ತುಂಬ ದೂರ ಕರ್ಕೊಂಡು ಹೋಗ್ತಿರೋ ಸುಳ್ಳು ಧರ್ಮಗಳೂ ಇರಲ್ಲ. (ಪ್ರಕ. 17:16) ಆಮೇಲೆ ದಬ್ಬಾಳಿಕೆ ನಡಿಸ್ತಿರೋ ಮನುಷ್ಯರ ಸರ್ಕಾರನೂ ಇಲ್ಲದೆ ಹೋಗುತ್ತೆ. (ಪ್ರಕ. 19:19, 20) ಹೊಸ ಲೋಕದಲ್ಲಿ ತೊಂದ್ರೆ ಕೊಡೋರು ಯಾರೂ ಇರಲ್ಲ. (ಕೀರ್ತ. 37:10, 11) ಅಲ್ಲಿರೋ ಪ್ರತಿಯೊಬ್ರು ಯೆಹೋವನ ನೀತಿ-ನಿಯಮನಾ ಪಾಲಿಸ್ತಾ ಇರ್ತಾರೆ. ಇದ್ರಿಂದ ಅವ್ರ ಮಧ್ಯ ಒಗ್ಗಟ್ಟು, ಶಾಂತಿ ಇರುತ್ತೆ. ಆಗ ಒಬ್ರ ಮೇಲೆ ಒಬ್ರಿಗೆ ಪ್ರೀತಿ, ನಂಬಿಕೆ ಇರುತ್ತೆ. (ಯೆಶಾ. 11:9) ನಾವು ಆ ದಿನಕ್ಕೋಸ್ಕರ ಕಾಯ್ತಾ ಇದ್ದೀವಿ ಅಲ್ವಾ? ನಾವು ಯೆಹೋವ ದೇವರ ಮಾತನ್ನ ಕೇಳಿದ್ರೆ ಹೊಸ ಲೋಕದಲ್ಲಿ ಬರೀ ನೂರಾರು ವರ್ಷ ಅಷ್ಟೇ ಅಲ್ಲ ಶಾಶ್ವತವಾಗಿ ಬದುಕೋ ಅವಕಾಶ ನಮಗೆ ಸಿಗುತ್ತೆ.—ಯೋಹಾ. 3:16. w24.11 9 ¶7

ಬುಧವಾರ, ಡಿಸೆಂಬರ್‌ 9

ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ದೇಶಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ.—ಮತ್ತಾ. 24:14.

ಇವತ್ತಿನ ದಿನವಚನದಲ್ಲಿ ಹೇಳಿರೋ ಭವಿಷ್ಯವಾಣಿ ಮುಂಚೆಗಿಂತ ಈಗ ಜಾಸ್ತಿ ನೆರವೇರುತ್ತಾ ಇದೆ. jw.org ವೆಬ್‌ಸೈಟ್‌ನಲ್ಲಿ ಸಾವಿರಕ್ಕಿಂತ ಹೆಚ್ಚು ಭಾಷೆಗಳಲ್ಲಿ ದೇವರ ಆಳ್ವಿಕೆಯ ಸಂದೇಶ ಇದೆ. ಇದ್ರಿಂದ ಲೋಕದ ಎಲ್ಲಾ ಕಡೆ ಇರೋ ಜನ್ರಿಗೆ ಸಿಹಿಸುದ್ದಿ ತಿಳ್ಕೊಳ್ಳೋಕೆ ಆಗ್ತಿದೆ. ಹಾಗಿದ್ರೂ ಯೇಸು ತನ್ನ ಶಿಷ್ಯರಿಗೆ ತಾನು ಬರೋದಕ್ಕಿಂತ ಮುಂಚೆ ‘ನೀವು ಊರುಗಳಲ್ಲಿ ಮತ್ತು ಹಳ್ಳಿಗಳಲ್ಲಿ ಸಾರೋ ಕೆಲಸ ಮುಗಿಸಿರಲ್ಲ’ ಅಂತಾನೂ ಹೇಳಿದನು. (ಮತ್ತಾ. 10:23; 25:31-33) ಯೇಸು ಹೇಳಿದ ಮಾತು ಇವತ್ತಿಗೂ ನಿಜ ಆಗ್ತಿದೆ. ಅಂದ್ರೆ ಕೆಲವು ದೇಶಗಳಲ್ಲಿ ನಿರ್ಬಂಧ ಇರೋದ್ರಿಂದ ಅಲ್ಲಿ ಸಿಹಿಸುದ್ದಿ ಸಾರೋಕೆ ಕಷ್ಟ ಆಗ್ತಿದೆ. ಅಷ್ಟೇ ಅಲ್ಲ ಪ್ರತಿ ನಿಮಿಷಕ್ಕೆ ನೂರಾರು ಮಕ್ಕಳು ಹುಟ್ತಿದ್ದಾರೆ. ಹಾಗಾಗಿ “ಎಲ್ಲ ದೇಶ, ಕುಲ, ಭಾಷೆ, ಜಾತಿಯ ಜನ್ರಿಗೆ” ಸಿಹಿಸುದ್ದಿ ಸಾರೋಕೆ ನಮ್ಮಿಂದಾದ ಎಲ್ಲಾ ಪ್ರಯತ್ನ ಮಾಡ್ತಾ ಇದ್ದೀವಿ. (ಪ್ರಕ. 14:6) ಆದ್ರೆ ಅಂತ್ಯ ಬರೋಕೂ ಮುಂಚೆ ಪ್ರತಿಯೊಬ್ಬ ವ್ಯಕ್ತಿಗೆ ಸಿಹಿಸುದ್ದಿ ಸಾರೋಕೆ ಆಗಲ್ಲ ಅನ್ನೋದನ್ನ ನಾವು ನೆನಪಲ್ಲಿ ಇಡಬೇಕು. w24.05 10 ¶6-7

ಗುರುವಾರ, ಡಿಸೆಂಬರ್‌ 10

ಅವರು ಇನ್ನು ಮುಂದೆ ಇಬ್ರಲ್ಲ, ಒಂದೇ ಶರೀರ.—ಮತ್ತಾ. 19:6.

ಯೇಸುವಿನ ಮಾತು ಜನ್ರಿಗೆ ಪ್ರೋತ್ಸಾಹದ ಚಿಲುಮೆ ಆಗಿತ್ತು. ಕೇಳಿಸ್ಕೊಳ್ಳೋ ಜನ್ರ ಮನಸ್ಸಿಗೆ ಮುದ ನೀಡ್ತಿತ್ತು. ಯೇಸು ಯಾವತ್ತೂ ತನ್ನ ಶಿಷ್ಯರ ಹತ್ರ ಒರಟಾಗಿ ಮಾತಾಡ್ಲೇ ಇಲ್ಲ. (ಲೂಕ 8:47, 48) ಕ್ರೈಸ್ತ ಗಂಡಂದಿರು ಹೇಗೆ ನಡ್ಕೊಬೇಕು ಅನ್ನೋದಕ್ಕೆ ಯೇಸು ಎಂಥ ಒಳ್ಳೇ ಮಾದರಿ ಅಲ್ವಾ? “[ಗಂಡ] ತನ್ನ ಹೆಂಡತಿ ಜೊತೆ ಇರ್ತಾನೆ” ಅಂತ ತನ್ನ ತಂದೆ ಹೇಳಿದ ಮಾತು ಯೇಸುಗೆ ಗೊತ್ತಿತ್ತು. ಅದಕ್ಕೇ ಗಂಡಂದಿರು ಹೆಂಡ್ತಿಗೆ ಕೊನೇ ತನಕ ನಿಯತ್ತಾಗಿ ಇರಬೇಕು ಅಂತ ಯೇಸು ಹೇಳಿದ್ದಾನೆ. (ಮತ್ತಾ. 19:4-6) “ಜೊತೆ ಇರ್ತಾನೆ” ಅನ್ನೋ ಪದಕ್ಕೆ ಗ್ರೀಕ್‌ ಭಾಷೇಲಿ “ಅಂಟ್ಕೊಂಡು ಇರ್ತಾನೆ” ಅಂತ ಅರ್ಥ ಬರೋ ಕ್ರಿಯಾ ಪದವನ್ನ ಬಳಸಿದ್ದಾರೆ. ಅಂದ್ರೆ ಗಮ್‌ ಹಾಕಿದಾಗ ಎರಡು ವಸ್ತುಗಳು ಹೇಗೆ ಅಂಟ್ಕೊಂಡು ಇರುತ್ತೋ ಹಾಗೆನೇ ಗಂಡ-ಹೆಂಡ್ತಿಯ ಬಾಂಧವ್ಯನೂ ಬಲವಾಗಿ ಅಂಟ್ಕೊಂಡು ಇರಬೇಕು ಅಂತ ಅರ್ಥ. ಈ ಬಾಂಧವ್ಯ ಹಾಳಾದ್ರೆ ಗಂಡ-ಹೆಂಡ್ತಿ ಇಬ್ರಿಗೂ ತೊಂದ್ರೆನೇ. ಗಂಡ ಈ ಬಾಂಧವ್ಯ ಹಾಳಾಗದೇ ಇರೋ ತರ ಹೇಗೆ ನೋಡ್ಕೊಬೇಕು? ಎಲ್ಲಾ ತರದ ಅಶ್ಲೀಲ ಸಾಹಿತ್ಯದಿಂದ ದೂರ ಇರಬೇಕು. ಅದಕ್ಕೆ ಅವನು “ಅಯೋಗ್ಯ ವಿಷ್ಯಗಳನ್ನ ನೋಡದ” ಹಾಗೆ ತಕ್ಷಣ ತನ್ನ ದೃಷ್ಟಿನ ಪಕ್ಕಕ್ಕೆ ತಿರುಗಿಸ್ಕೊಬೇಕು. (ಕೀರ್ತ. 119:37) ಇನ್ನೊಂದು ಮಾತಲ್ಲಿ ಹೇಳೋದಾದ್ರೆ ತನ್ನ ಹೆಂಡ್ತಿನ ಬಿಟ್ಟು ಬೇರೆ ಯಾವುದೇ ಸ್ತ್ರೀನ ಕೆಟ್ಟ ದೃಷ್ಟಿಯಿಂದ ನೋಡದೇ ಇರೋಕೆ ತನ್ನ ಕಣ್ಣುಗಳ ಜೊತೆ ಒಪ್ಪಂದ ಮಾಡ್ಕೊಬೇಕು.—ಯೋಬ 31:1, ಪಾದಟಿಪ್ಪಣಿ. w25.01 10 ¶12-13

ಶುಕ್ರವಾರ, ಡಿಸೆಂಬರ್‌ 11

ನಮ್ಮ ದೇವರು . . . ಉದಾರವಾಗಿ ಕ್ಷಮಿಸ್ತಾನೆ.—ಯೆಶಾ. 55:7.

ಜನ್ರು ‘ಕ್ಷಮಿಸಿದ್ದೀನಿ’ ಅಂತ ಹೇಳುವಾಗ ಅದಕ್ಕೆ ಬೇರೆಬೇರೆ ಅರ್ಥ ಇರುತ್ತೆ. ಅದನ್ನ ಅರ್ಥ ಮಾಡ್ಕೊಳ್ಳೋಕೆ ನಮಗೆ ಕಷ್ಟ ಆಗುತ್ತೆ. ಅಪರಿಪೂರ್ಣರಾಗಿರೋ ನಮ್ಮನ್ನ ಯೆಹೋವ ಕ್ಷಮಿಸೋದಕ್ಕೂ ನಾವು ಬೇರೆಯವ್ರನ್ನ ಕ್ಷಮಿಸೋದಕ್ಕೂ ತುಂಬಾನೇ ವ್ಯತ್ಯಾಸ ಇದೆ. ಯೆಹೋವ ಕ್ಷಮಿಸೋ ತರ ನಾವ್ಯಾರೂ ಕ್ಷಮಿಸೋಕೆ ಆಗಲ್ಲ. ಅದಕ್ಕೆ ಕೀರ್ತನೆಗಾರ “ನೀನು ಜನ್ರನ್ನ ನಿಜವಾಗ್ಲೂ ಕ್ಷಮಿಸ್ತೀಯ, ಹಾಗಾಗಿ ಅವ್ರ ಭಯಭಕ್ತಿಗೆ ಯೋಗ್ಯನಾಗಿದ್ದೀಯ” ಅಂತ ಹೇಳಿದ. (ಕೀರ್ತ. 130:4) ಹೌದು ಯೆಹೋವ ದೇವರು ನಮ್ಮನ್ನ ‘ನಿಜವಾಗ್ಲೂ ಕ್ಷಮಿಸ್ತಾನೆ,’ ಹಾಗಾಂದ್ರೆ ಏನಂತ ನಮಗೆ ತೋರಿಸ್ಕೊಟ್ಟಿದ್ದಾನೆ. ಹಾಗಾಗಿ ಬೈಬಲ್‌ ಬರಹಗಾರರು ಕೆಲವು ವಚನಗಳಲ್ಲಿ ಕ್ಷಮಿಸೋದು ಅನ್ನೋದಕ್ಕೆ ಒಂದು ಹೀಬ್ರು ಪದವನ್ನ ಬಳಸಿದ್ದಾರೆ. ಇದನ್ನ, ಮನುಷ್ಯರು ಕ್ಷಮಿಸೋದಕ್ಕಲ್ಲ ಯೆಹೋವ ಕ್ಷಮಿಸೋದಕ್ಕೆ ಮಾತ್ರ ಬಳಸಿದ್ದಾರೆ. ಯೆಹೋವ ಒಬ್ಬ ವ್ಯಕ್ತಿಯ ಪಾಪನ ಕ್ಷಮಿಸಿದಾಗ ಆ ಪಾಪನ ಆತನು ಪೂರ್ತಿಯಾಗಿ ಅಳಿಸಿಹಾಕ್ತಾನೆ. ಅಷ್ಟೇ ಅಲ್ಲ, ಆತನ ಜೊತೆ ಒಳ್ಳೇ ಸಂಬಂಧನ ಮತ್ತೆ ಬೆಳೆಸ್ಕೊಳ್ಳೋಕೆ ಸಹಾಯ ಮಾಡ್ತಾನೆ. ಈ ತರ ಯೆಹೋವ ನಮ್ಮನ್ನ ಪೂರ್ತಿಯಾಗಿ ಮತ್ತು ಉದಾರವಾಗಿ ಕ್ಷಮಿಸ್ತಾನೆ. w25.02 8 ¶1-3

ಶನಿವಾರ, ಡಿಸೆಂಬರ್‌ 12

ಯೇಸು ನಮಗೆ . . . ‘ಎಲ್ಲ ಜನ್ರಿಗೆ ಹೇಳಿ ಮತ್ತು ಚೆನ್ನಾಗಿ ವಿವರಿಸಿ’ ಅಂತ ಆಜ್ಞೆ ಕೊಟ್ಟನು.—ಅ. ಕಾ. 10:42.

ನಾವು ಹೇಳೋದನ್ನ ಜನ ಕೇಳಲಿಲ್ಲ ಅಂದ್ರೂ ನಾವು ನಮ್ಮ ಗುರಿ ಮುಟ್ಟಿದ್ದೀವಿ ಅಂತ ಅರ್ಥ. ಯಾಕಂದ್ರೆ ಯೆಹೋವ ಮತ್ತು ಯೇಸು ಕೊಟ್ಟಿರೋ ಕೆಲಸನ ನಾವು ಮಾಡಿದ್ದೀವಿ, ಅವ್ರ ಬಗ್ಗೆ ಜನ್ರಿಗೆ ಸಾಕ್ಷಿ ಕೊಟ್ಟಿದ್ದೀವಿ. ನಮಗೆ ಮಾತಾಡೋಕೆ ಯಾರೂ ಸಿಗಲಿಲ್ಲ ಅಂದ್ರೂ ನಾವು ಹೇಳೋದನ್ನ ಯಾರೂ ಕೇಳಿಸ್ಕೊಳ್ತಿಲ್ಲ ಅಂದ್ರೂ ನಾವು ಖುಷಿಯಾಗಿ ಇರಬಹುದು. ಯಾಕಂದ್ರೆ ನಾವು ಹಾಕೋ ಪ್ರಯತ್ನ ನೋಡಿ ಯೆಹೋವ ನಮ್ಮನ್ನ ಮೆಚ್ಕೊಳ್ತಾನೆ ಅನ್ನೋ ಸಮಾಧಾನ ನಮಗಿರುತ್ತೆ. (ಜ್ಞಾನೋ. 27:11) ನಮ್ಮ ಸಭೆಯಲ್ಲಿರೋ ಸಹೋದರ ಸಹೋದರಿಯರಿಗೆ ಯಾರಾದ್ರೂ ಆಸಕ್ತಿ ತೋರಿಸಿದ ವ್ಯಕ್ತಿ ಸಿಕ್ಕಿದ್ರೆ, ಅವ್ರ ಜೊತೆ ನಾವೂ ಖುಷಿಪಡ್ತೀವಿ. ಯಾಕಂದ್ರೆ ಈ ನಮ್ಮ ಕೆಲಸನ ಒಂದು ಕಾವಲಿನಬುರುಜು ಕಳೆದುಹೋಗಿರೋ ಒಂದು ಮಗು ಹುಡುಕೋದಕ್ಕೆ ಹೋಲಿಸಿತ್ತು. ಒಂದು ಮಗು ಕಳೆದುಹೋದ್ರೆ ಎಲ್ರೂ ಹುಡುಕ್ತಾ ಇರ್ತಾರೆ, ಆದ್ರೆ ಕೊನೆಗೆ ಆ ಮಗು ಒಬ್ರಿಗೆ ಸಿಕ್ಕಾಗ ಅವ್ರಷ್ಟೇ ಅಲ್ಲ, ಎಲ್ರೂ ಖುಷಿ ಪಡ್ತಾರೆ. ಶಿಷ್ಯರಾಗಿ ಮಾಡೋ ಕೆಲಸನೂ ಅದೇ ತರಾನೇ. ನಾವೆಲ್ರೂ ಸಿಹಿಸುದ್ದಿ ಸಾರ್ತೀವಿ. ಆದ್ರೆ ಯಾರಿಗಾದ್ರು ಒಬ್ರಿಗೆ ಆಸಕ್ತಿ ತೋರಿಸಿದ ವ್ಯಕ್ತಿ ಸಿಕ್ಕಾಗ, ಆ ವ್ಯಕ್ತಿ ಕೂಟಕ್ಕೆ ಬಂದಾಗ ಅವ್ರ ಜೊತೆ ನಾವೂ ಖುಷಿಪಡ್ತೀವಿ. w24.04 18 ¶13-14

ಭಾನುವಾರ, ಡಿಸೆಂಬರ್‌ 13

ಶಾಶ್ವತ ಜೀವ ಪಡೆಯೋ ಯೋಗ್ಯತೆ ಇದ್ದ ಒಳ್ಳೇ ಮನಸ್ಸಿನ ಜನ್ರೆಲ್ಲ ಶಿಷ್ಯರಾದ್ರು.—ಅ. ಕಾ. 13:48.

ಮುಂದೆ ಏನೆಲ್ಲ ಆಗುತ್ತೆ ಅಂತ ನೋಡೋಕೆ ತುಂಬ ಆಸೆಯಿಂದ ನಾವು ಕಾಯ್ತಾ ಇದ್ದೀವಿ ಅಲ್ವಾ? ಯೆಹೋವನ ಆಶೀರ್ವಾದ ಇದ್ರೆ ಮಹಾ ಸಂಕಟ ಶುರುವಾಗುವುದಕ್ಕಿಂತ ಮುಂಚೆ ಇನ್ನೂ ತುಂಬ ಜನ ಸತ್ಯಕ್ಕೆ ಬರ್ತಾರೆ. ಅದನ್ನ ನೋಡೋಕೆ ನಾವು ತುಂಬ ಇಷ್ಟಪಡ್ತೀವಿ. ಮಹಾ ಸಂಕಟ ಶುರು ಆದ್ಮೇಲೆ ತುಂಬ ಕಷ್ಟ ಇರುತ್ತೆ. ಆ ಸಮಯದಲ್ಲೂ ಎಷ್ಟೋ ಜನ್ರು ಈ ಸೈತಾನನ ಕೆಟ್ಟ ಲೋಕ ಬಿಟ್ಟು ಯೆಹೋವನನ್ನ ಆರಾಧಿಸೋಕೆ ಬರಬಹುದು. ಇದನ್ನ ಕೇಳಿಸ್ಕೊಂಡಾಗ ನಿಮ್ಮ ಮೈ ಜುಮ್‌ ಅನ್ನುತ್ತೆ ಅಲ್ವಾ! ಮಹಾ ಸಂಕಟ ಬರೋದಕ್ಕಿಂತ ಮುಂಚೆ ಎಲ್ರಿಗೂ ಪ್ರಾಮುಖ್ಯವಾದ ಒಂದು ಕೆಲಸ ಮಾಡೋಕೆ ಇದೆ. ಅದೇ ದೇವರ ಆಳ್ವಿಕೆಯ ಸಿಹಿಸುದ್ದಿ ಸಾರೋದು. ಅಷ್ಟೇ ಅಲ್ಲ ಈ ಲೋಕ ತುಂಬ ಬೇಗ ನಾಶ ಆಗುತ್ತೆ ಅಂತ ಜನ್ರಿಗೆ ಎಚ್ಚರಿಸ್ತಾ ಇರಬೇಕು. ನಾವು ಸಿಹಿಸುದ್ದಿಯನ್ನ, ಜನ್ರನ್ನ, ಯೆಹೋವ ಮತ್ತು ಆತನ ಹೆಸ್ರನ್ನ ಪ್ರೀತಿಸೋದ್ರಿಂದ ಜನ್ರಿಗೆ ದೇವರ ಆಳ್ವಿಕೆಯ ಬಗ್ಗೆ ಸಾರುತ್ತಾ ಇರಬೇಕು. ಅಷ್ಟೇ ಅಲ್ಲ ಅಂತ್ಯ ಹತ್ರ ಇರೋದ್ರಿಂದ ಈ ಕೆಲಸನ ಈಗ ಇನ್ನೂ ಜಾಸ್ತಿ ಮಾಡಬೇಕು. ಹಾಗಾಗಿ ಯೆಹೋವ “ಸಾಕು” ಅನ್ನೋವರೆಗೂ ಹುರುಪಿಂದ ಈ ಕೆಲಸ ಮಾಡ್ತಾ ಇರೋಣ! w24.05 19 ¶14-16

ಸೋಮವಾರ, ಡಿಸೆಂಬರ್‌ 14

ತಗ್ಗಿಬಗ್ಗಿ ನಡಿರಿ. ಯಾಕಂದ್ರೆ ದೇವರಿಗೆ ಅಹಂಕಾರಿಗಳನ್ನ ಕಂಡ್ರೆ ಇಷ್ಟ ಆಗಲ್ಲ. ಆದ್ರೆ ದೀನರಿಗೆ ಅಪಾರ ಕೃಪೆ ತೋರಿಸ್ತಾನೆ.—1 ಪೇತ್ರ 5:5.

ತಾನು ಸಾಯೋ ಹಿಂದಿನ ರಾತ್ರಿ ಯೇಸು ಪೇತ್ರನಿಗೆ ಮತ್ತು ಬೇರೆ ಅಪೊಸ್ತಲರಿಗೆ ದೀನತೆ ವಿಷ್ಯದಲ್ಲಿ ಒಂದು ಮುಖ್ಯವಾದ ಪಾಠ ಕಲಿಸಿದನು. ಆ ರಾತ್ರಿ ಊಟ ಮಾಡೋ ಮುಂಚೆ ಯೇಸು ತನ್ನ ಅಂಗಿ ಬಿಚ್ಚಿ ಪಕ್ಕಕ್ಕಿಟ್ಟು, ಒಂದು ಬಟ್ಟೆ ತಗೊಂಡು ಅದನ್ನ ಸೊಂಟಕ್ಕೆ ಕಟ್ಕೊಳ್ತಾನೆ. ಆಮೇಲೆ ಪಾತ್ರೆಲಿ ನೀರು ತಗೊಂಡು ಒಬ್ಬ ಸೇವಕನ ತರ 12 ಶಿಷ್ಯರ ಕಾಲನ್ನ ತೊಳೀತಾನೆ. ನಂಬಿಕೆ ದ್ರೋಹ ಮಾಡಲಿದ್ದ ಯೂದನ ಕಾಲನ್ನೂ ತೊಳೀತಾನೆ. ಇದನ್ನ ನೋಡಿದಾಗ ಶಿಷ್ಯರಿಗೆ ತುಂಬ ಆಶ್ಚರ್ಯ ಆಯ್ತು. (ಯೋಹಾ. 13:4, 5) ಎಲ್ರ ಕಾಲನ್ನ ತೊಳಿಯೋಕೆ ತುಂಬ ಸಮಯ ಹಿಡಿದ್ರೂ ಯೇಸು ದೀನತೆಯಿಂದ ಅದನ್ನ ಮಾಡಿದನು. ಆಮೇಲೆ ಅವ್ರಿಗೆ ತಾಳ್ಮೆಯಿಂದ, “ನಾನು ಯಾಕೆ ನಿಮ್ಮ ಕಾಲು ತೊಳೆದೆ ಅಂತ ನಿಮಗೆ ಅರ್ಥ ಆಯ್ತಾ? ನೀವು ನನ್ನನ್ನ ‘ಗುರು’ ಅಂತ ‘ಪ್ರಭು’ ಅಂತ ಕರಿತೀರ. ನೀವು ಆ ತರ ಕರಿಯೋದು ಸರಿನೇ. ನಿಮ್ಮ ಗುರು, ಪ್ರಭು ಆಗಿರೋ ನಾನೇ ನಿಮ್ಮ ಕಾಲು ತೊಳೆದಿರುವಾಗ ನೀವು ಸಹ ಒಬ್ಬರ ಕಾಲನ್ನ ಇನ್ನೊಬ್ರು ತೊಳಿಲೇಬೇಕು” ಅಂತ ಹೇಳಿದನು.—ಯೋಹಾ. 13:12-14. w25.03 10 ¶9-11

ಮಂಗಳವಾರ, ಡಿಸೆಂಬರ್‌ 15

ನೀನು ಸಲಹೆ ಕೊಟ್ಟು ನನಗೆ ದಾರಿ ತೋರಿಸ್ತೀಯ, ಆಮೇಲೆ ನೀನು ನನಗೆ ಸನ್ಮಾನ ಮಾಡಿಸ್ತೀಯ.—ಕೀರ್ತ. 73:24.

ನಾವು ಈ ಲೋಕದಲ್ಲಿ ಜೀವಿಸ್ತಾ ಇರೋದ್ರಿಂದ ಯಾವಾಗ್ಲೂ ಯೆಹೋವನಿಗೆ ಹತ್ರ ಆಗಿರೋಕೆ ಕಷ್ಟ ಆಗುತ್ತೆ. ಯಾಕಂದ್ರೆ ತುಂಬ ಜನ ದೇವರೇ ಇಲ್ಲ ಅಂತ ಹೇಳ್ತಾರೆ. ಇನ್ನು ಕೆಲವರು ದೇವರಿಗೆ ಇಷ್ಟ ಇಲ್ಲದೆ ಇರೋದನ್ನ ಮಾಡಿದ್ರೂ ಸಂತೋಷದಿಂದ ಜೀವನ ಮಾಡ್ತಿದ್ದಾರೆ ಅಂತ ನಮಗೆ ಅನಿಸುತ್ತೆ. ಇದನ್ನೆಲ್ಲ ನೋಡುವಾಗ ದೇವರ ಮೇಲೆ ನಮಗೆ ನಂಬಿಕೆ ಕಡಿಮೆ ಆಗಬಹುದು. ಅಷ್ಟೇ ಅಲ್ಲ ದೇವರು ಇದ್ದಾನೆ ಅನ್ನೋ ನಂಬಿಕೆ ನಮಗಿದ್ರೂ ಆತನು ನಮಗೆ ಸಹಾಯ ಮಾಡ್ತಾನಾ ಅನ್ನೋ ಸಂಶಯ ಬರಬಹುದು. 73ನೇ ಕೀರ್ತನೆ ಬರೆದ ಕೀರ್ತನೆಗಾರನಿಗೂ ಇದೇ ತರ ಅನಿಸ್ತು. ಅವನ ಸುತ್ತಮುತ್ತ ಇದ್ದವರು ದೇವರ ನಿಯಮನ ಮುರಿದ್ರೂ ತಮ್ಮ ಜೀವನದಲ್ಲಿ ಖುಷಿಖುಷಿಯಾಗಿದ್ರು. ಇದನ್ನ ನೋಡಿದಾಗ ದೇವರ ಸೇವೆ ಮಾಡಿದ್ರೆ ಏನಾದ್ರೂ ಪ್ರಯೋಜನ ಸಿಗುತ್ತಾ ಅಂತ ಅವನಿಗೆ ಅನಿಸ್ತು. (ಕೀರ್ತ. 73:11-13) ಕೀರ್ತನೆಗಾರ ಆಮೇಲೆ ತನ್ನ ಯೋಚನೆಯನ್ನ ಬದಲಾಯಿಸಿಕೊಳ್ಳೋಕೆ ಯಾವುದು ಸಹಾಯ ಮಾಡಿತು? ಯೆಹೋವನನ್ನ ಮರೆತು ಜೀವನ ಮಾಡೋರಿಗೆ ಏನಾಗುತ್ತೆ ಅಂತ ಅವನು ಯೋಚನೆ ಮಾಡಿದ. (ಕೀರ್ತ. 73:18, 19, 27) ಅಷ್ಟೇ ಅಲ್ಲ ಯೆಹೋವನನ್ನ ಆರಾಧಿಸಿದ್ರೆ ಏನೆಲ್ಲ ಪ್ರಯೋಜನ ಆಗುತ್ತೆ ಅಂತನೂ ಯೋಚನೆ ಮಾಡಿದ. ಅದೇ ತರ ನಾವು ಯೆಹೋವ ಯಾವೆಲ್ಲ ಆಶೀರ್ವಾದ ಕೊಟ್ಟಿದ್ದಾನೆ ಅಂತ ಯೋಚನೆ ಮಾಡಬೇಕು. w24.06 25 ¶16-17

ಬುಧವಾರ, ಡಿಸೆಂಬರ್‌ 16

ಹಣದಾಸೆ ಇಲ್ಲದೆ ಜೀವನ ಮಾಡಿ.—ಇಬ್ರಿ. 13:5.

ಹಿಂದಿನ ಕಾಲದಲ್ಲಿ ಕೆಲವು ಜನರು ಬಡವರಿಗೆ ಸಾಲ ಕೊಟ್ಟು ಅವರಿಂದ ಬಡ್ಡಿ ತಗೊಳ್ತಿದ್ರು. ಅಷ್ಟೇ ಅಲ್ಲ ಕೆಲವು ನ್ಯಾಯಾಧೀಶರು ಲಂಚ ತಗೊಂಡು ನಿರಪರಾಧಿಗಳಿಗೆ ಅನ್ಯಾಯ ಮಾಡ್ತಾ ಇದ್ರು. ಇದೆಲ್ಲ ಯೆಹೋವನಿಗೆ ಒಂಚೂರು ಇಷ್ಟ ಆಗಲ್ಲ. (ಯೆಹೆ. 22:12) ಹಣದ ಬಗ್ಗೆ ನಾವು ಹೇಗೆ ಯೋಚಿಸ್ತಾ ಇದ್ದೀವಿ ಅಂತ ಆಗಾಗ ನಮ್ಮನ್ನ ಪರೀಕ್ಷೆ ಮಾಡ್ಕೊಳ್ತಾ ಇರಬೇಕು. ಅದಕ್ಕೆ ಕೆಲವು ಪ್ರಶ್ನೆ ಸಹಾಯ ಮಾಡುತ್ತೆ. ‘ನಾನು ಯಾವಾಗ್ಲೂ ಹಣದ ಬಗ್ಗೆ ಯೋಚಿಸ್ತೀನಾ ಮತ್ತು ಅದ್ರಿಂದ ಏನೆಲ್ಲ ತಗೋಬಹುದು ಅನ್ನೋದ್ರ ಬಗ್ಗೆ ಯೋಚಿಸ್ತೀನಾ? ನಾನು ಯಾರ ಹತ್ರ ಆದ್ರೂ ಹಣ ತಗೊಂಡ್ರೆ ಅವರಿಗೆ ಕೊಡೋಕೆ ತಡ ಮಾಡ್ತಿದ್ದೀನಾ ಅಥವಾ ಅವರಿಗೆ ಈ ಹಣದ ಅಗತ್ಯ ಇಲ್ಲ ಅಂತ ಅಂದ್ಕೊಳ್ತೀನಾ? ನನ್ನ ಹತ್ರ ಹಣ ಇರೋದ್ರಿಂದ ನಾನು ಎಲ್ರಿಗಿಂತ ದೊಡ್ಡವನು ಅಂತ ಅಂದ್ಕೊಳ್ತೀನಾ ಅಥವಾ ಬೇರೆಯವರಿಗೆ ಧಾರಾಳತನ ತೋರಿಸೋಕೆ ಹಿಂಜರಿತಿದ್ದೀನಾ? ಶ್ರೀಮಂತರಾಗಿರೋ ಸಹೋದರ ಸಹೋದರಿಯರನ್ನ ನೋಡಿ ಅವರಿಗೆ ಹಣದಾಸೆ ಇದೆ ಅಂತ ನಾನು ಅಂದ್ಕೊಳ್ತೀನಾ? ನಾನು ಬಡವರನ್ನ ಮೂಲೆಗೆ ತಳ್ಳಿ ಬರೀ ಶ್ರೀಮಂತರನ್ನ ಫ್ರೆಂಡ್ಸ್‌ ಮಾಡ್ಕೊಳ್ತೀನಾ?’ ನಾವು ಯೆಹೋವನ ಫ್ರೆಂಡ್ಸ್‌ ಆಗಿರಬೇಕಂದ್ರೆ ಹಣದಾಸೆಯಿಂದ ದೂರ ಇರಬೇಕು. ಹೀಗೆ ಮಾಡಿದ್ರೆ ಯೆಹೋವ ಯಾವತ್ತೂ ನಮ್ಮ ಕೈಬಿಡಲ್ಲ. w24.06 12-13 ¶17-18

ಗುರುವಾರ, ಡಿಸೆಂಬರ್‌ 17

ನಿನ್ನ ವಾಕ್ಯ ಪಾಲಿಸಬೇಕಂತ, ನಾನು ಯಾವ ಕೆಟ್ಟ ದಾರಿಯಲ್ಲೂ ನಡಿಯಲ್ಲ.—ಕೀರ್ತ. 119:101.

ತಪ್ಪಾದ ಆಸೆಗಳ ವಿರುದ್ಧ ಹೋರಾಡೋಕೆ ನಾವು ಸರಿಯಾದ ಆಸೆಗಳನ್ನ ಬೆಳೆಸ್ಕೊಬೇಕು. ‘ಕೆಟ್ಟದ್ದನ್ನ ದ್ವೇಷಿಸಿ, ಒಳ್ಳೇದನ್ನ ಪ್ರೀತಿಸೋಕೆ’ ಕಲಿತ್ರೆ ನಾವು ಸರಿಯಾಗಿರೋದನ್ನೇ ಮಾಡಬೇಕು ಅಂತ ದೃಢತೀರ್ಮಾನ ಮಾಡ್ತೀವಿ. (ಆಮೋ. 5:15) ನಮ್ಮಲ್ಲಿ ಸರಿಯಾದ ಆಸೆ ಇದ್ರೆ ತಪ್ಪು ಮಾಡೋ ಸನ್ನಿವೇಶ ಬಂದ್ರೂ ನಾವು ಅದಕ್ಕೆ ಬಲಿಯಾಗಲ್ಲ. ಯೆಹೋವನ ಜೊತೆಗಿರೋ ಸ್ನೇಹವನ್ನ ಗಟ್ಟಿ ಮಾಡ್ಕೊಳ್ಳೋಕೆ ಸಹಾಯ ಮಾಡೋ ಕೆಲಸಗಳಲ್ಲಿ ಬಿಜ಼ಿ ಆಗಿರಬೇಕು. ಅಂದ್ರೆ ಕೂಟಗಳಿಗೆ ಹೋಗ್ತಾ ಇದ್ರೆ, ಸಿಹಿಸುದ್ದಿ ಸಾರುತ್ತಾ ಇದ್ರೆ ಯೆಹೋವನನ್ನ ಖುಷಿಪಡಿಸಬೇಕು ಅನ್ನೋ ಆಸೆ ಜಾಸ್ತಿ ಆಗುತ್ತೆ. (ಮತ್ತಾ. 28:19, 20; ಇಬ್ರಿ. 10:24, 25) ನಾವು ದೇವರ ವಾಕ್ಯವನ್ನ ಓದಿ ಅಧ್ಯಯನ ಮಾಡಿ ಅದ್ರ ಬಗ್ಗೆ ಚೆನ್ನಾಗಿ ಯೋಚಿಸಿದ್ರೆ ಕೆಟ್ಟದ್ದನ್ನ ದ್ವೇಷಿಸ್ತೀವಿ ಮತ್ತು ಒಳ್ಳೇದನ್ನ ಪ್ರೀತಿಸ್ತೀವಿ. (ಯೆಹೋ. 1:8; ಕೀರ್ತ. 1:2, 3; 119:97) ಯೇಸು ತನ್ನ ಶಿಷ್ಯರಿಗೆ “ನೀವು ಪಾಪ ಮಾಡದೆ ಇರಬೇಕಂದ್ರೆ ಎಚ್ಚರವಾಗಿದ್ದು ಪ್ರಾರ್ಥನೆ ಮಾಡ್ತಾ ಇರಬೇಕು” ಅಂತ ಹೇಳಿದನು. (ಮತ್ತಾ. 26:41) ಹೀಗೆ ನಾವು, ಯೆಹೋವನ ಸಹಾಯ ತಗೊಳ್ತೀವಿ ಮತ್ತು ಆತನನ್ನ ಮೆಚ್ಚಿಸಬೇಕು ಅನ್ನೋ ಆಸೆನೂ ಬಲಪಡಿಸ್ಕೊಳ್ತೀವಿ.—ಯಾಕೋ. 4:8. w24.07 17-18 ¶14-16

ಶುಕ್ರವಾರ, ಡಿಸೆಂಬರ್‌ 18

ನಾನು ನಿನಗೆ ತಿಳುವಳಿಕೆ ಕೊಡ್ತೀನಿ. ನೀನು ಯಾವ ದಾರಿಯಲ್ಲಿ ನಡೀಬೇಕು ಅಂತ ಕಲಿಸ್ತೀನಿ. ನಿನ್ನ ಮೇಲೆ ಕಣ್ಣಿಟ್ಟು ಸಲಹೆ ಕೊಡ್ತೀನಿ.—ಕೀರ್ತ. 32:8.

ಧಾರಾಳವಾಗಿ ಕೊಡೋದು ಹೇಗೆ ಅಂತ ಕಲಿಸೋದ್ರಲ್ಲಿ ಯೆಹೋವನೇ ಎತ್ತಿದ ಕೈ. ಆತನ ತರ ನಾವೂ ಕಲ್ತಿರೋದನ್ನ, ನಮಗೆ ಗೊತ್ತಿರೋದನ್ನ ಬೇರೆಯವ್ರಿಗೆ ಹೇಳಿ ಕೊಡಬೇಕು. ಕೆಲವು ಜನ್ರು ತಮಗೆ ಗೊತ್ತಿರೋದನ್ನೆಲ್ಲಾ ಬೇರೆಯವ್ರಿಗೆ ಹೇಳಿಕೊಡಲ್ಲ. ಯಾಕಂದ್ರೆ ಎಲ್ಲಾದ್ರೂ ಹೇಳಿಕೊಟ್ರೆ ತಮ್ಮ ಜಾಗನ ಅವರು ಕಿತ್ಕೊಂಡು ಬಿಡ್ತಾರೆನೋ ಅನ್ನೋ ಭಯ ಅವ್ರಿಗಿರುತ್ತೆ. ಇನ್ನು ಕೆಲವರು ‘ನನಗ್ಯಾರೂ ಕಲಿಸ್ಕೊಟ್ಟಿಲ್ಲ, ನಾನ್ಯಾಕೆ ಅವ್ರಿಗೆ ಹೇಳ್ಕೊಡಬೇಕು? ಬೇಕಾದ್ರೆ ಅವ್ರೇ ಕಲಿತ್ಕೊಳ್ಳಲಿ’ ಅಂತ ಅಂದ್ಕೊಳ್ತಾರೆ. ಯೆಹೋವನ ಜನ್ರಾದ ನಮ್ಮ ಮನಸ್ಸಲ್ಲಿ ಇಂಥ ಯೋಚ್ನೆನೂ ಬರಬಾರದು. ಬದ್ಲಿಗೆ ನಮಗೆ ಗೊತ್ತಿರೋದನ್ನಷ್ಟೇ ಅವ್ರಿಗೆ ಹೇಳ್ಕೊಡೋದಲ್ಲ, ಅವ್ರಿಗೆ ಕಲಿಸೋಕೆ ನಾವು ಏನು ಬೇಕಾದ್ರೂ ಮಾಡೋಕೆ ರೆಡಿ ಇರ್ತೀವಿ. (1 ಥೆಸ. 2:8) ನಾವು ಈ ತರ ಕಲಿಸಿದ್ರೆ ಏನಾಗುತ್ತೆ? “ಅವರು ಬೇರೆಯವ್ರಿಗೆ ಕಲಿಸೋಕೆ ಸಾಕಷ್ಟು ಅರ್ಹತೆ ಪಡ್ಕೊತಾರೆ.” (2 ತಿಮೊ. 2:1, 2) ಹೀಗೆ ಒಬ್ಬೊಬ್ರು ಧಾರಾಳವಾಗಿ ಕಲಿಸ್ತಾ ಹೋಗೋದಾದ್ರೆ ನಮ್ಮೆಲ್ರ ಖುಷಿ, ವಿವೇಕ ಜಾಸ್ತಿ ಆಗ್ತಾ ಹೋಗುತ್ತೆ. w24.09 29 ¶12-13

ಶನಿವಾರ, ಡಿಸೆಂಬರ್‌ 19

ನಾವು ಒಬ್ಬೊಬ್ರೂ ಒಂದಕ್ಕೊಂದು ಜೋಡಿಸಿರೋ ಅಂಗಗಳಾಗಿದ್ದೀವಿ.—ರೋಮ. 12:5.

ಒಂದುವೇಳೆ ನಿಮಗೆ ‘ನನ್ನಲ್ಲಿ ಅಂಥ ದೊಡ್ಡ ಸಾಮರ್ಥ್ಯಗಳೇನೂ ಇಲ್ಲ’ ಅಂತ ಅನಿಸ್ತಿದ್ರೆ ಬೇಜಾರ್‌ ಮಾಡ್ಕೊಬೇಡಿ. ಸಭೆಲಿರೋ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ಖಂಡಿತ ನಿಮ್ಮಲ್ಲಿ ಒಳ್ಳೇ ಗುಣಗಳು ಇದ್ದೇ ಇರುತ್ತೆ. 1 ಕೊರಿಂಥ 12:12-30ರಲ್ಲಿರೋ ಪೌಲನ ಮಾತುಗಳನ್ನ ಅರ್ಥ ಮಾಡ್ಕೊಳ್ಳೋಕೆ ಯೆಹೋವ ದೇವರ ಹತ್ರ ಸಹಾಯ ಕೇಳಿ. ಸಭೆಲಿರೋ ಪ್ರತಿಯೊಬ್ರೂ ಯೆಹೋವನಿಗೆ ತುಂಬ ಅಮೂಲ್ಯ, ನಿಮ್ಮಿಂದ ಒಂದಲ್ಲಾ ಒಂದು ರೀತಿಲಿ ಸಭೆಗೆ ಸಹಾಯ ಮಾಡೋಕಾಗುತ್ತೆ ಅಂತ ಪೌಲ ಅಲ್ಲಿ ಹೇಳ್ತಿದ್ದಾನೆ. ಯೆಹೋವ ದೇವರ ಸೇವೆನ ಇನ್ನೂ ಹೇಗೆಲ್ಲಾ ಮಾಡಬಹುದು, ಸಹೋದರ ಸಹೋದರಿಯರಿಗೆ ಹೇಗೆ ಸಹಾಯ ಮಾಡಬಹುದು ಅಂತ ಯೋಚ್ನೆ ಮಾಡಿ. ಒಂದು ವಿಷ್ಯ ನೆನಪಿಡಿ, ನಿಮ್ಮಿಂದ ಯಾವ ನೇಮಕಗಳನ್ನ ಮಾಡಕ್ಕಾಗುತ್ತೆ ಅಂತ ಹಿರಿಯರಿಗೆ ಚೆನ್ನಾಗಿ ಗೊತ್ತು. ಅಂಥ ನೇಮಕಗಳನ್ನೇ ಅವರು ನಿಮಗೆ ಕೊಡ್ತಾರೆ. (ರೋಮ. 12:4-8) ನಾವೆಲ್ರೂ ಯೆಹೋವ ದೇವ್ರಿಗೆ ಹತ್ರ ಆಗಬೇಕು, ಬೇರೆಯವ್ರಿಗೆ ಕೊಡೋದ್ರಿಂದ ಸಿಗೋ ಖುಷಿ ಪಡ್ಕೊಬೇಕು, ಯೆಹೋವನಿಗೆ ಇಷ್ಟ ಆಗೋ ತರ ಜೀವನ ಮಾಡಬೇಕು. w24.11 17 ¶12-13

ಭಾನುವಾರ, ಡಿಸೆಂಬರ್‌ 20

ಹನ್ನ ಬಿಕ್ಕಿಬಿಕ್ಕಿ ಅಳ್ತಾ ದುಃಖದಿಂದ ಯೆಹೋವನಿಗೆ ಪ್ರಾರ್ಥಿಸೋಕೆ ಶುರು ಮಾಡಿದಳು.—1 ಸಮು. 1:10.

ಹನ್ನಳ ಜೀವನ ಕಣ್ಣೀರಲ್ಲಿ ಕೈತೊಳೆಯೋ ತರ ಇತ್ತು. ಹನ್ನಳ ಗಂಡ ಎರಡನೇ ಮದುವೆ ಆಗಿದ್ದ. ಆ ಎರಡನೇ ಹೆಂಡತಿ ಹೆಸ್ರು ಪೆನಿನ್ನ. ಅವಳು ಹನ್ನಳಿಗೆ ತುಂಬಾ ಚುಚ್ಚಿ-ಚುಚ್ಚಿ ಮಾತಾಡ್ತಿದ್ದಳು. ಗಾಯದ ಮೇಲೆ ಬರೆ ಎಳೆಯೋ ತರ ಹನ್ನಗೆ ಬಂಜೆತನ ಬೇರೆ ಇತ್ತು. ಆದ್ರೆ ಪೆನಿನ್ನಳಿಗೆ ಮಾತ್ರ ತುಂಬ ಮಕ್ಕಳಿದ್ರು. (1 ಸಮು. 1:1, 2) ಪೆನಿನ್ನ ಹನ್ನಳಿಗೆ ಬಂಜೆತನವನ್ನ ನೆನಪಿಸಿ-ನೆನಪಿಸಿ ತುಂಬ ಕಿರುಕುಳ ಕೊಡ್ತಿದ್ದಳು. ಪೆನಿನ್ನಳಿಂದ ಹನ್ನಳ ಮನಸ್ಸು ಎಷ್ಟು ನೊಂದೋಗಿತ್ತು ಅಂದ್ರೆ ಹನ್ನ ಕೆಲವು ಸಲ “ಊಟ” ಬಿಟ್ಟುಬಿಡ್ತಿದ್ದಳು, “ಬಿಕ್ಕಿಬಿಕ್ಕಿ ಅಳ್ತಾ” ಇದ್ದಳು. (1 ಸಮು. 1:6, 7, 10) ಹನ್ನಳಿಗೆ ಸಮಾಧಾನ ಸಿಕ್ತಾ? ಖಂಡಿತ ಸಿಕ್ತು. ಇಷ್ಟೆಲ್ಲ ನೋವಿದ್ರೂ ಯೆಹೋವನನ್ನ ಆರಾಧನೆ ಮಾಡ್ತಿದ್ದ ಡೇರೆಗೆ ಹನ್ನ ಹೋದಳು. ಅವಳು ಯೆಹೋವನ ಹತ್ರ “ನಿನ್ನ ಈ ದಾಸಿಯ ಪರಿಸ್ಥಿತಿಗೆ ಗಮನಕೊಡು. ನನ್ನನ್ನ ನೋಡಿ ನನ್ನ ಬಿನ್ನಹ ಕೇಳಿಸ್ಕೊ” ಅಂತ ತನ್ನ ದುಃಖವನ್ನೆಲ್ಲ ತೋಡ್ಕೊಂಡಳು. (1 ಸಮು. 1:11) ಇಷ್ಟು ದಿನ ಆಕೆ ಸುರಿಸ್ತಿದ್ದ ಕಣ್ಣೀರನ್ನ ಯೆಹೋವ ನೋಡಿದ, ಕಷ್ಟನ ಅರ್ಥ ಮಾಡ್ಕೊಂಡನು. ಅವಳ ಪ್ರಾರ್ಥನೆಯನ್ನ ಕೇಳಿ ಅವಳಿಗೆ ಒಂದು ಮಗು ಕೊಟ್ಟು ಆಶೀರ್ವದಿಸಿದನು.—1 ಸಮು. 1:19, 20; 2:21.w24.12 21 ¶5-7

ಸೋಮವಾರ, ಡಿಸೆಂಬರ್‌ 21

ಮನುಷ್ಯರಂದ್ರೆ ನನಗೆ ಪಂಚಪ್ರಾಣ.—ಜ್ಞಾನೋ. 8:31.

ಯೇಸುಗೆ ಮನುಷ್ಯರಂದ್ರೆ ತುಂಬಾ ಇಷ್ಟ, ಅದ್ರಲ್ಲೂ ಅವನ ಮಾತಿನ ಪ್ರಕಾರ ನಡ್ಕೊಳ್ಳೋರಂದ್ರೆ ಪಂಚಪ್ರಾಣ ಅಂತ ಬಿಡುಗಡೆ ಬೆಲೆಯಿಂದ ಗೊತ್ತಾಗುತ್ತೆ. (ಜ್ಞಾನೋ. 8:31; ಯೋಹಾನ 13:1) ಅದನ್ನ ಹೇಗೆ ಹೇಳಬಹುದು? ಯೇಸುಗೆ ಮುಂಚೆನೇ ‘ಭೂಮಿಲಿ ತುಂಬಾ ಕಷ್ಟಪಡಬೇಕಾಗುತ್ತೆ. ಜನ್ರು ನನಗೆ ಚಿತ್ರಹಿಂಸೆ ಕೊಡ್ತಾರೆ. ನಾನು ನರಳಿ ನರಳಿ ಸಾಯಬೇಕಾಗುತ್ತೆ’ ಅಂತ ಗೊತ್ತಿತ್ತು. ಆದ್ರೂ ಅವನು ಭೂಮಿಗೆ ಬಂದನು! ‘ಏನೋ ಕಣ್ಮುಚ್ಚಿ ಎಲ್ಲನೂ ಸಹಿಸ್ಕೊಂಡು ಬಿಡೋಣ’ ಅಂತ ಅಂದ್ಕೊಂಡಿಲ್ಲ. ಯೇಸು ಅದನ್ನೆಲ್ಲ ಸಹಿಸ್ಕೊಂಡಿದ್ದು ನಮ್ಮಲ್ಲಿ ಒಬ್ಬೊಬ್ಬರ ಮೇಲೆ ಇಟ್ಟಿರೋ ಪ್ರೀತಿಯಿಂದನೇ! ಅದಕ್ಕೇ ಮನಸ್ಸು ಕೊಟ್ಟು ಸಿಹಿಸುದ್ದಿ ಸಾರಿದನು, ಬೇರೆಯವ್ರಿಗೆ ದೇವರ ಬಗ್ಗೆ ಕಲಿಸಿದನು. ಅವ್ರಿಗೆ ಸಹಾಯ ಮಾಡಿದನು. ಅಷ್ಟೇ ಅಲ್ಲ, ಸಾಯೋ ಹಿಂದಿನ ರಾತ್ರಿನೂ ಸಮಯ ಮಾಡ್ಕೊಂಡು ತನ್ನ ಶಿಷ್ಯರ ಕಾಲು ತೊಳೆದನು. ಅವ್ರಿಗೆ ಬೇಕಾಗಿರೋ ಬುದ್ಧಿವಾದ ಹೇಳಿ, ಬಲ, ಸಾಂತ್ವನ ಕೊಟ್ಟನು. (ಯೋಹಾ. 13:12-15) ಅದಷ್ಟೇ ಅಲ್ಲ, ಹಿಂಸಾ ಕಂಬದ ಮೇಲಿರುವಾಗ್ಲೂ ಒಂದೊಂದು ಉಸಿರು ತಗೊಳ್ಳೋಕೆ ಕಷ್ಟ ಆಗ್ತಿರುವಾಗ್ಲೂ ಪಕ್ಕದಲ್ಲಿದ್ದ ಅಪರಾಧಿಗೆ ದೇವರ ಆಳ್ವಿಕೆಲಿ ಬದುಕೋ ಅವಕಾಶ ಸಿಗುತ್ತೆ ಅಂತ ಹೇಳಿದನು. ತನ್ನ ತಾಯಿನ ಇನ್ಮುಂದೆ ಯಾರು ನೋಡ್ಕೊಬೇಕು ಅನ್ನೋ ಏರ್ಪಾಡನ್ನೂ ಮಾಡಿದನು. (ಲೂಕ 23:42, 43; ಯೋಹಾ. 19:26, 27) ಯೇಸು ಒಂದುಸಲ ಪ್ರಾಣ ಕೊಟ್ಟು ಪ್ರೀತಿ ತೋರಿಸಿದಷ್ಟೇ ಅಲ್ಲ, ಬದುಕಿದ ಒಂದೊಂದು ಕ್ಷಣನೂ ನಮ್ಮ ಮೇಲೆ ಪ್ರೀತಿ ಇದೆ ಅಂತ ತೋರಿಸಿದನು. w25.01 23 ¶11

ಮಂಗಳವಾರ, ಡಿಸೆಂಬರ್‌ 22

ನಮ್ಮ ಶಾಂತಿಗಾಗಿ ಅವನು ಶಿಕ್ಷೆ ಅನುಭವಿಸಿದನು, ಅವನ ಗಾಯಗಳಿಂದ ನಮಗೆ ವಾಸಿ ಆಯ್ತು.—ಯೆಶಾ. 53:5.

ಯೆಹೋವ ನಮ್ಮನ್ನ ಕ್ಷಮಿಸೋದ್ರಿಂದ ನಮಗೆ ಪಾಪದಿಂದ ಬಿಡುಗಡೆ ಸಿಕ್ಕಿದೆ. ಅದೇಗೆ? ನಾವು ಅಪರಿಪೂರ್ಣರು ಆಗಿರೋದ್ರಿಂದ ಒಂದು ರೀತೀಲಿ “ಪಾಪಕ್ಕೆ ದಾಸರಾಗಿ” ಇದ್ದೀವಿ. ಆದ್ರೆ ನಮಗೆ ‘ಪಾಪದಿಂದ ಬಿಡುಗಡೆ’ ಸಿಕ್ಕಿದೆ. (ರೋಮ. 6:17, 18; ಪ್ರಕ. 1:5) ಯಾಕಂದ್ರೆ ಯೆಹೋವ ನಮ್ಮನ್ನ ಕ್ಷಮಿಸಿದ್ದಾನೆ. ಇದಕ್ಕೆ ನಾವು ಯೆಹೋವನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ. ನೀವು ಇನ್ಮುಂದೆ ದಾಸರಾಗಿಲ್ಲ ಅಂತ ಕೇಳಿಸ್ಕೊಂಡಾಗ ನಿಮಗೆ ಹೇಗನಿಸ್ತು? ನಾವು ಪಾಪಿಗಳಾಗಿ ಇರೋದ್ರಿಂದ ದೊಡ್ಡ ಕಾಯಿಲೆ ಇರೋ ಜನ್ರ ತರ ಇದ್ದೀವಿ ಅಂತ ಬೈಬಲ್‌ ಹೇಳುತ್ತೆ. ಆದ್ರೆ ಯೆಹೋವ ತನ್ನ ಮಗನನ್ನ ಬಿಡುಗಡೆ ಬೆಲೆಯಾಗಿ ಕೊಟ್ಟು ನಮ್ಮನ್ನ ವಾಸಿ ಮಾಡಿದ್ದಾನೆ. (1 ಪೇತ್ರ 2:24) ಹೇಗೆ? ನಾವು ಪಾಪ ಮಾಡಿದಾಗ ನಮಗೆ ಯೆಹೋವನ ಜೊತೆ ಇರೋ ಸಂಬಂಧ ಹಾಳಾಗುತ್ತೆ. ಆದ್ರೆ ನಮಗೆ ಬಿಡುಗಡೆ ಬೆಲೆ ಸಿಕ್ಕಿರೋದ್ರಿಂದ ಯೆಹೋವ ನಮ್ಮನ್ನ ಕ್ಷಮಿಸ್ತಾನೆ. ಆತನ ಜೊತೆ ಮತ್ತೆ ಫ್ರೆಂಡ್‌ ಆಗೋಕೆ ಸಹಾಯ ಮಾಡ್ತಾನೆ. ಇದ್ರಿಂದ, ಕಾಯಿಲೆ ಇದ್ದ ವ್ಯಕ್ತಿಗೆ ವಾಸಿ ಆದಾಗ ಹೇಗೆ ಖುಷಿ ಆಗುತ್ತೋ ನಮಗೂ ಹಾಗೆ ಖುಷಿ ಆಗುತ್ತೆ. ಯಾಕಂದ್ರೆ ನಾವು ಮತ್ತೆ ಯೆಹೋವನ ಜೊತೆ ಫ್ರೆಂಡ್‌ ಆಗಬಹುದು ಮತ್ತು ಆತನ ಮೆಚ್ಚಿಗೆ ಪಡ್ಕೊಬಹುದು. w25.02 11 ¶16-17

ಬುಧವಾರ, ಡಿಸೆಂಬರ್‌ 23

ಈ ಗುಣಗಳನ್ನ ನೀವು ಬೆಳೆಸ್ಕೊಳ್ತಾ ಹೋದ್ರೆ ಅದು ನಿಮ್ಮ ಕೈಜಾರಿ ಹೋಗಲ್ಲ.—2 ಪೇತ್ರ 1:10.

ತಲಾಂತುಗಳ ಉದಾಹರಣೆಯಲ್ಲಿ ನಿಯತ್ತಾಗಿದ್ದ ಇಬ್ರು ಸೇವಕರ ಬಗ್ಗೆ ಮತ್ತು ಸೋಮಾರಿಯಾಗಿದ್ದ ಒಬ್ಬ ಸೇವಕನ ಬಗ್ಗೆ ಯೇಸು ಹೇಳ್ತಿದ್ದಾನೆ. (ಮತ್ತಾ. 25:14-30) ನಿಯತ್ತಾಗಿದ್ದ ಇಬ್ರು ಸೇವಕರು ನಿಯತ್ತಾಗಿರೋ ಅಭಿಷಿಕ್ತ ಕ್ರೈಸ್ತರನ್ನ ಸೂಚಿಸ್ತಾರೆ. ಈ ಅಭಿಷಿಕ್ತರು ನಿಯತ್ತಾಗಿ ಇರೋದ್ರಿಂದ ‘ಬನ್ನಿ, ಯಜಮಾನನ ಜೊತೆ ಖುಷಿಪಡಿ’ ಅಂತ ಯೇಸು ಹೇಳಿದ್ದಾನೆ. ಇದರರ್ಥ ಸತ್ತವರಲ್ಲಿ ಅಭಿಷಿಕ್ತರನ್ನ ಯೇಸು ‘ಮೊದ್ಲು ಎಬ್ಬಿಸ್ತಾನೆ’ ಮತ್ತು ಅವ್ರಿಗೆ ಸ್ವರ್ಗದಲ್ಲಿ ಬಹುಮಾನ ಸಿಗುತ್ತೆ. (ಮತ್ತಾ. 25:21, 23; ಪ್ರಕ. 20:5ಬಿ) ಆದ್ರೆ ಆ ಸೋಮಾರಿಯಾದ ಆಳಿಂದನೂ ಅಭಿಷಿಕ್ತರಿಗೆ ಕಲಿಯೋಕೆ ಒಂದು ಪಾಠ ಇದೆ. ಅದೇನು? ಅಭಿಷಿಕ್ತರು ಕಷ್ಟಪಟ್ಟು ಕೆಲಸ ಮಾಡ್ತಿದ್ದೀವಿ ಅಂತ ತೋರಿಸ್ಕೊಡಬೇಕು. ಕೆಲವು ಅಭಿಷಿಕ್ತರು ಸೋಮಾರಿಗಳಾಗ್ತಾರೆ ಅಂತ ಯೇಸು ತಲಾಂತು ಉದಾಹರಣೆಯಲ್ಲಿ ಹೇಳ್ತಿಲ್ಲ. ಬದಲಿಗೆ ಅವರು ತಮ್ಮ ಉತ್ಸಾಹ ಕಳ್ಕೊಂಡ್ರೆ ಏನಾಗುತ್ತೆ ಅಂತ ಹೇಳ್ತಿದ್ದಾನೆ. ದೇವರು ಅವ್ರನ್ನ ‘ತನ್ನ ಜನರಾಗಿ ಕರೆದು ಆರಿಸ್ಕೊಂಡಿರೋ’ ಸುಯೋಗನ ಅವರು ಉಳಿಸ್ಕೊಳ್ಳಲ್ಲ. ಅಷ್ಟೇ ಅಲ್ಲ ಅವರು ಸ್ವರ್ಗಕ್ಕೆ ಹೋಗೋ ಅವಕಾಶನ ಕಳ್ಕೊಂಡು ಬಿಡ್ತಾರೆ. w24.09 22 ¶10; 23 ¶12-13

ಗುರುವಾರ, ಡಿಸೆಂಬರ್‌ 24

ತುಂಬ ಮುಖ್ಯವಾದ ವಿಷ್ಯ ಯಾವುದು ಅಂತ ನೀವು ಚೆನ್ನಾಗಿ ತಿಳ್ಕೊಬೇಕು.—ಫಿಲಿ. 1:10.

ನಮ್ಮನ್ನ, ನಮ್ಮ ಕುಟುಂಬನ ಚೆನ್ನಾಗಿ ನೋಡ್ಕೊಳ್ಬೇಕು ಅನ್ನೋ ಆಸೆ ನಮ್ಮೆಲ್ರಿಗೂ ಇರುತ್ತೆ. (ಪ್ರಸಂ. 7:12; 1 ತಿಮೊ. 5:8) ಯಾವ ಕೆಲಸಕ್ಕೆ ಹೋಗ್ಬೇಕು ಅಂತ ಆಯ್ಕೆ ಮಾಡುವಾಗ ಎಷ್ಟು ಸಂಬಳ ಸಿಗುತ್ತೆ ಅಂತ ಯೋಚ್ನೆ ಮಾಡೋದ್ರಲ್ಲಿ ತಪ್ಪೇನಿಲ್ಲ. ಆದ್ರೆ ನಾವು ಬರೀ ಇದನ್ನೇ ಮನಸ್ಸಲ್ಲಿಟ್ಟು ನಿರ್ಧಾರ ಮಾಡಿದ್ರೆ ಕಣ್ಣಿಗೆ ಕಾಣಿಸೋ ವಿಷ್ಯಗಳ ಮೇಲೆ ನಿರ್ಧಾರ ಮಾಡ್ತೀವಿ ಅಂತರ್ಥ. ನಾವು ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ರೆ ಹೇಗೆ ನಿರ್ಧಾರ ಮಾಡ್ತೀವಿ? ಒಂದು ಕೆಲಸನ ಒಪ್ಕೊಳ್ಳೋ ಮುಂಚೆ ‘ಅದು ಯೆಹೋವನ ಜೊತೆ ನನಗಿರೋ ಸಂಬಂಧದ ಮೇಲೆ ಯಾವ ಪ್ರಭಾವ ಬೀರುತ್ತೆ’ ಅಂತಾನೂ ಯೋಚ್ನೆ ಮಾಡ್ತೀವಿ. ಅದಕ್ಕೆ ನಾವು ನಮ್ಮನ್ನೇ, ‘ಈ ಕೆಲಸನ ಯೆಹೋವ ಒಪ್ತಾನಾ? ಈ ಕೆಲಸ ಒಪ್ಕೊಂಡ್ರೆ ಯೆಹೋವನಿಗೆ ಇಷ್ಟ ಇಲ್ದೆ ಇರೋದನ್ನ ನಾನು ಮಾಡಬೇಕಾಗಿ ಬರುತ್ತಾ?’ (ಜ್ಞಾನೋ. 6:16-19) ‘ಈ ಕೆಲಸದಿಂದ ಮೀಟಿಂಗ್‌ಗೆ, ಸೇವೆಗೆ ಹೋಗೋದು ಮಿಸ್‌ ಆಗುತ್ತಾ? ನನ್ನ ಕುಟುಂಬದಿಂದ ದೂರ ಇರಬೇಕಾಗುತ್ತಾ?’ ಅನ್ನೋ ಪ್ರಶ್ನೆಗಳನ್ನ ಕೇಳ್ಕೊಬೇಕು. ಒಂದುವೇಳೆ ಈ ಪ್ರಶ್ನೆಗಳಿಗೆ ಹೌದು ಅಂತ ಉತ್ರ ಬಂದ್ರೆ ಬೇರೆ ಕೆಲಸ ಸಿಗದೇ ಇದ್ರೂ ಆ ಕೆಲಸನ ಒಪ್ಕೊಳ್ಳದೆ ಇರೋದೇ ಒಳ್ಳೇದು! ಹೀಗೆ ಯೆಹೋವ ನಮ್ಮನ್ನ ನೋಡ್ಕೊಳ್ತಾನೆ ಅಂತ ನಾವು ನಂಬಿಕೆ ಇಟ್ಟಿದ್ದೀವಿ ಅಂತ ತೋರಿಸ್ಕೊಡ್ತೀವಿ.—ಮತ್ತಾ. 6:33; ಇಬ್ರಿ. 13:5. w25.03 21 ¶5-6

ಶುಕ್ರವಾರ, ಡಿಸೆಂಬರ್‌ 25

ಒಬ್ರು ಇನ್ನೊಬ್ರಿಗೆ ದಯೆ, ಕೋಮಲ ಕರುಣೆ ತೋರಿಸಿ . . . ಬೇರೆಯವ್ರನ್ನ ಉದಾರವಾಗಿ ಕ್ಷಮಿಸಿ.—ಎಫೆ. 4:32.

ನಮ್ಮ ಸಹೋದರ ಸಹೋದರಿಯರನ್ನ ಯೆಹೋವ ಹೇಗೆ ನೋಡ್ತಾನೋ ನಾವೂ ಹಾಗೇ ನೋಡಬೇಕು. ನಾವು ಅವರು ಮಾಡೋ ತಪ್ಪುಗಳಿಗಲ್ಲ, ಅವ್ರಲ್ಲಿರೋ ಒಳ್ಳೇ ಗುಣಗಳಿಗೆ ಗಮನ ಕೊಡಬೇಕು. ಯಾಕಂದ್ರೆ ಈ ತಪ್ಪು ಮಾಡೋ ಸ್ವಭಾವ ಮತ್ತು ಅಪರಿಪೂರ್ಣತೆ ಮುಂದೆ ಒಂದಿನ ಇಲ್ಲದೇ ಹೋಗಿಬಿಡುತ್ತೆ. ಆಗ ನಮ್ಮ ಮಧ್ಯ ಏನೇ ಸಮಸ್ಯೆಗಳಾದ್ರೂ ಅದನ್ನ ಪ್ರೀತಿಯಿಂದ ಸರಿ ಮಾಡ್ಕೊಳ್ಳೋಕೆ ಆಗುತ್ತೆ. ಇದನ್ನ ಹೊರಗಿನ ಜನ್ರು ನೋಡಿದಾಗ ಅವ್ರಿಗೂ ನಮ್ಮ ಜೊತೆ ಇರಬೇಕು ಅಂತ ಅನಿಸುತ್ತೆ. ಆಗ ಅವ್ರಾಗೇ ಆಧ್ಯಾತ್ಮಿಕ ಪರದೈಸಿಗೆ ಬರ್ತಾರೆ. ಈ ಪರದೈಸನ್ನ ಕೊಟ್ಟಿರೋದಕ್ಕೆ ನಾವು ಯೆಹೋವನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ. ಯಾರೆಲ್ಲ ಹೊಸಬಲ ಪಡ್ಕೊಳ್ಳೋಕೆ, ಜೀವನದಲ್ಲಿ ತೃಪ್ತಿಯಿಂದ, ಶಾಂತಿಯಿಂದ ಮತ್ತು ಸುರಕ್ಷಿತವಾಗಿ ಇರೋಕೆ ಇಷ್ಟಪಡ್ತಾರೋ ಅವ್ರೆಲ್ಲ ಈ ಆಧ್ಯಾತ್ಮಿಕ ಪರದೈಸಿಗೆ ಬರಬೇಕು. ಇದನ್ನ ಯಾವತ್ತೂ ಬಿಟ್ಟುಹೋಗಬಾರದು! ಆದ್ರೆ ಸೈತಾನ ನಾವು ಇದನ್ನ ಬಿಟ್ಟುಹೋಗೋ ತರ ಮಾಡೋಕೆ ತುಂಬ ಕುತಂತ್ರಗಳನ್ನ ಮಾಡ್ತಾನೆ. (1 ಪೇತ್ರ 5:8; ಪ್ರಕ. 12:9) ಅದಕ್ಕೆ ನಾವು ಅವಕಾಶ ಕೊಡೋದು ಬೇಡ. ಈ ಆಧ್ಯಾತ್ಮಿಕ ಪರದೈಸ್‌ ಇನ್ನೂ ಸುಂದರವಾಗಿ ಕಾಣೋ ತರ ಮಾಡೋಣ. ಅದು ಯಾವತ್ತೂ ಹಾಳಾಗದೇ ಇರೋ ತರ ನೋಡ್ಕೊಳ್ಳೋಣ. ಅಲ್ಲಿ ಯಾವಾಗ್ಲೂ ಶಾಂತಿ ತುಂಬಿರೋ ಹಾಗೆ ಮಾಡೋಣ. w24.04 24-25 ¶18-19

ಶನಿವಾರ, ಡಿಸೆಂಬರ್‌ 26

ದೇವರ ಆಳ್ವಿಕೆಗೆ . . . ಮೊದಲ ಸ್ಥಾನ ಕೊಡಿ.—ಮತ್ತಾ. 6:33.

ಹೆತ್ತವರೇ, ನಿಮ್ಮ ಮಕ್ಕಳಿಗೆ ಹುರುಪಿಂದ ಯೆಹೋವನ ಸೇವೆ ಮಾಡೋದು ಹೇಗೆ ಅಂತ ಕಲಿಸಿ. ಬೈಬಲ್‌ ಓದೋದು, ಕೂಟಗಳಿಗೆ ಹಾಜರಾಗೋದು ಮತ್ತು ಸಿಹಿಸುದ್ದಿ ಸಾರೋದು ಎಲ್ಲಕ್ಕಿಂತ ಮುಖ್ಯ ಅಂತ ನಿಮ್ಮ ಮಕ್ಕಳಿಗೆ ಹೇಳ್ಕೊಡಿ ಮತ್ತು ನಿಮ್ಮ ಜೀವನದಲ್ಲಿ ತೋರಿಸ್ಕೊಡಿ. ನೀವು ಹಾಗೆ ಮಾಡ್ಲಿಲ್ಲ ಅಂದ್ರೆ ಅಪ್ಪಅಮ್ಮ ಯೆಹೋವನ ಸಾಕ್ಷಿಗಳಾಗಿರೋದ್ರಿಂದ ತಾವೂ ಯೆಹೋವನ ಸಾಕ್ಷಿಗಳಾಗಿದ್ದೀವಿ ಅಂತ ನಿಮ್ಮ ಮಕ್ಕಳು ಅಂದ್ಕೊಂಡು ಬಿಡ್ತಾರೆ. ಕೊನೆಗೆ ಒಂದು ದಿನ ಯೆಹೋವನ ಆರಾಧನೆ ಮಾಡೋದು ಅಷ್ಟೊಂದು ಮುಖ್ಯ ಅಲ್ಲ ಅಂತ ಅಂದ್ಕೊಂಡುಬಿಡಬಹುದು. ಅಥವಾ ಯೆಹೋವನನ್ನ ಆರಾಧಿಸೋದನ್ನೇ ನಿಲ್ಲಿಸಿಬಿಡಬಹುದು. ಆದ್ರೆ ಒಬ್ಬ ವ್ಯಕ್ತಿ ಯೆಹೋವನನ್ನ ಆರಾಧಿಸೋದನ್ನ ಬಿಟ್ಟುಬಿಟ್ರೆ ಮತ್ತೆ ಅವನು ಯಾವತ್ತೂ ಆತನ ಸ್ನೇಹಿತನಾಗೋಕೆ ಆಗೋದೇ ಇಲ್ವಾ? ಹಾಗಲ್ಲ. ಅವನು ತನ್ನ ತಪ್ಪನ್ನ ತಿದ್ಕೊಂಡು ಪಶ್ಚಾತ್ತಾಪ ಪಟ್ರೆ ಮತ್ತೆ ಆತನ ಸ್ನೇಹಿತನಾಗಬಹುದು. ಆದ್ರೆ ಇದನ್ನ ಮಾಡೋಕೆ ಅಹಂಕಾರ ಬದಿಗಿಟ್ಟು ದೀನತೆ ತೋರಿಸಬೇಕು ಮತ್ತು ಸಭೆಯಲ್ಲಿರೋ ಹಿರಿಯರು ಕೊಡೋ ಸಹಾಯ ಪಡ್ಕೊಬೇಕು. (ಯಾಕೋ. 5:14) ಹೀಗೆ ಅವನು ಯೆಹೋವನ ಸಹಾಯ ಪಡ್ಕೊಳ್ಳೋಕೆ ತನ್ನಿಂದಾದ ಎಲ್ಲಾ ಪ್ರಯತ್ನ ಮಾಡಿದ್ರೆ ಅದು ಯಾವತ್ತೂ ವ್ಯರ್ಥ ಆಗಲ್ಲ. w24.07 24-25 ¶18-19

ಭಾನುವಾರ, ಡಿಸೆಂಬರ್‌ 27

ಲೈಂಗಿಕ ಅನೈತಿಕತೆಯಿಂದ ದೂರ ಓಡಿಹೋಗಿ.—1 ಕೊರಿಂ. 6:18.

ಡೇಟಿಂಗ್‌ ಮಾಡುವಾಗ ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ನೀವೇನು ಮಾಡಬೇಕು? ನೀವು ಒಬ್ರನ್ನೊಬ್ರು ಜಾಸ್ತಿ ತಿಳ್ಕೊಂಡ ಹಾಗೆ ನಿಮ್ಮ ಮಧ್ಯ ಇರೋ ಪ್ರೀತಿನೂ ಜಾಸ್ತಿ ಆಗುತ್ತೆ. ಹಾಗಾಗಿ ಈ ಸಮಯದಲ್ಲಿ ಯೆಹೋವನಿಗೆ ಏನು ಇಷ್ಟಾನೋ ಅದನ್ನೇ ಮಾಡಿ. ಅದಕ್ಕೆ ನೀವು ಏನು ಮಾಡಬೇಕು? ನೀವಿಬ್ರೂ ಲೈಂಗಿಕ ಆಸೆ ಹುಟ್ಟಿಸೋ ತರ ಮಾತಾಡಬೇಡಿ, ಒಬ್ಬೊಬ್ರೇ ಇರಬೇಡಿ, ಅತಿಯಾಗಿ ಕುಡಿಬೇಡಿ. (ಎಫೆ. 5:3) ಒಂದುವೇಳೆ ನೀವು ಹೀಗೆ ಏನಾದ್ರೂ ಮಾಡಿದ್ರೆ ಲೈಂಗಿಕ ಆಸೆ ಜಾಸ್ತಿ ಆಗುತ್ತೆ. ಸರಿಯಾಗಿರೋದನ್ನ ಮಾಡೋಕೆ ತುಂಬ ಕಷ್ಟ ಆಗುತ್ತೆ. ಹಾಗಾಗಿ ನೀವು ಒಬ್ರು ಇನ್ನೊಬ್ರನ್ನ ಗೌರವಿಸೋಕೆ, ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಏನು ಮಾಡಬಹುದು ಅಂತ ಆಗಾಗ ಮಾತಾಡ್ತಾ ಇರಿ. (ಜ್ಞಾನೋ. 22:3) ನೀವು ಒಬ್ರು ಇನ್ನೊಬ್ರಿಗೆ ಹತ್ರ ಆದಷ್ಟು ಪ್ರೀತಿ ತೋರಿಸೋಕೆ ಇಷ್ಟಪಡ್ತೀರ. ಆದ್ರೆ ನೀವು ಹೇಗೆ ಪ್ರೀತಿ ತೋರಿಸಿದ್ರೆ ಸರಿಯಾಗಿರುತ್ತೆ, ಹೇಗೆ ತೋರಿಸಿದ್ರೆ ತಪ್ಪಾಗಿರುತ್ತೆ ಅಂತ ನೀವೇ ಯೋಚ್ನೆ ಮಾಡಬೇಕು. ನೀವು ಈ ರೀತಿ ಪ್ರೀತಿ ತೋರಿಸುವಾಗ ಒಂದು ವಿಷ್ಯದ ಬಗ್ಗೆ ಎಚ್ಚರವಾಗಿರಬೇಕು. (ಪರಮ. 1:2; 2:6) ಆ ಸಮಯದಲ್ಲಿ ನಿಮಗೆ ಲೈಂಗಿಕ ಆಸೆ ಜಾಸ್ತಿಯಾದ್ರೆ ಸರಿಯಾದ ತೀರ್ಮಾನ ಮಾಡೋಕೆ ತುಂಬ ಕಷ್ಟ ಆಗುತ್ತೆ. ಅಷ್ಟೇ ಅಲ್ಲ ಕೆಲವೊಂದು ಸಲ ನೀವು ಸ್ವನಿಯಂತ್ರಣ ಕಳ್ಕೊಂಡು ತಪ್ಪು ಮಾಡಿಬಿಡಬಹುದು. (ಜ್ಞಾನೋ. 6:27) ಹಾಗಾಗಿ ಯೆಹೋವನಿಗೆ ಏನು ಇಷ್ಟ ಆಗುತ್ತೆ, ನೀವು ಪ್ರೀತಿ ತೋರಿಸುವಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಅಂತ ಮುಂಚೆನೇ ಮಾತಾಡಿ.—1 ಥೆಸ. 4:3-7. w24.05 29 ¶10-11

ಸೋಮವಾರ, ಡಿಸೆಂಬರ್‌ 28

ನಿಮ್ಮ ಮಾತು ಹೌದು ಅಂದ್ರೆ ಹೌದು, ಇಲ್ಲ ಅಂದ್ರೆ ಇಲ್ಲ ಅಂತಿರಲಿ.—ಮತ್ತಾ. 5:37.

ನಾವು ಸಹಾಯ ಮಾಡೋಕೆ ಯಾವಾಗ್ಲೂ ರೆಡಿ ಇರ್ತೀವಿ, ಕಷ್ಟ ಬಂದಾಗಲೂ ಅವರ ಜೊತೆ ಇರ್ತೀವಿ ಅಂತ ಸಭೆಯಲ್ಲಿ ಇರೋರಿಗೆ ನಮ್ಮ ಮೇಲೆ ಭರವಸೆ ಇರಬೇಕು. (ಜ್ಞಾನೋ. 17:17) ಆ ಭರವಸೆ ಬರಬೇಕಂದ್ರೆ ನಾವೇನು ಮಾಡಬೇಕು? ಯೆಹೋವನಲ್ಲಿರೋ ಗುಣಗಳನ್ನ ಯಾವಾಗ್ಲೂ ತೋರಿಸಬೇಕು. ಮಾತುಕೊಟ್ಟ ಹಾಗೆ ನಡ್ಕೋಬೇಕು. ಕೆಲಸಗಳನ್ನ ಸರಿಯಾದ ಸಮಯಕ್ಕೆ ಮಾಡಬೇಕು. ಭರವಸೆ ಗಳಿಸಿರೋ ಹಿರಿಯರು ಸಭೆಗೆ ಆಶೀರ್ವಾದ ಆಗಿದ್ದಾರೆ. ಹೇಗಂದ್ರೆ ಸಹೋದರ ಸಹೋದರಿಯರಿಗೆ ಹಿರಿಯರನ್ನ ಅಥವಾ ತಮ್ಮ ಗುಂಪು ಮೇಲ್ವಿಚಾರಕರನ್ನ ಯಾವಾಗ ಬೇಕಾದ್ರೂ ಸಹಾಯ ಕೇಳಬಹುದು ಅಂತ ಗೊತ್ತಿದ್ರೆ ಅವರು ಜಾಸ್ತಿ ಚಿಂತೆ ಮಾಡೋ ಅವಶ್ಯಕತೆ ಇರಲ್ಲ. ಹಿರಿಯರು ಸಹಾಯ ಮಾಡೋಕೆ ಯಾವಾಗ್ಲೂ ರೆಡಿ ಇದ್ರೆ ಅವರು ನಮ್ಮನ್ನ ಪ್ರೀತಿಸ್ತಾರೆ, ಅವ್ರಿಗೆ ನಮ್ಮ ಬಗ್ಗೆ ಕಾಳಜಿ ಇದೆ ಅಂತ ಸಭೆಯಲ್ಲಿ ಇರೋರಿಗೆ ಅನಿಸುತ್ತೆ. ಹಿರಿಯರು ತಮಗೆ ಅನಿಸಿದ್ದನ್ನ ಅಲ್ಲದೆ, ಬೈಬಲಿಂದ, ಪ್ರಕಾಶನಗಳಿಂದ ಸಲಹೆಗಳನ್ನ ಕೊಟ್ರೆ ಸಭೆಯಲ್ಲಿ ಇರೋರಿಗೆ ಅವರ ಮೇಲೆ ಇನ್ನೂ ಭರವಸೆ ಹೆಚ್ಚಾಗುತ್ತೆ. ತಾವು ಹೇಳೋ ವೈಯಕ್ತಿಕ ವಿಷ್ಯಗಳನ್ನ ಹಿರಿಯರು ಬೇರೆ ಯಾರಿಗೂ ಹೇಳಲ್ಲ ಮತ್ತು ಅವರು ಮಾತುಕೊಟ್ಟಂತೆ ನಡ್ಕೊಳ್ತಾರೆ ಅಂತ ಅನಿಸಿದಾಗ ಅವರ ಮೇಲೆ ಇನ್ನೂ ಭರವಸೆ ಇಡ್ತಾರೆ. w24.06 30 ¶14-15

ಮಂಗಳವಾರ, ಡಿಸೆಂಬರ್‌ 29

ನೀನು ಅವ್ರಿಗೆ ಕೊನೆ ಆಗದ ಶಾಂತಿ ಕೊಡ್ತೀಯ, ಯಾಕಂದ್ರೆ ಅವರು ನಿನ್ನ ಮೇಲೆ ಭರವಸೆ ಇಟ್ಟಿದ್ದಾರೆ.—ಯೆಶಾ. 26:3.

ಇವತ್ತು ನಮಗಿರೋ ಎಲ್ಲಾ ಕಷ್ಟಗಳನ್ನ ಯೆಹೋವ ಅದ್ಭುತವಾಗಿ ತೆಗೆದು ಹಾಕಲ್ಲ ನಿಜ. ಆದ್ರೆ ನಮಗೆ ಬೇಕಾಗಿರೋ ಸಹಾಯ, ಸಾಂತ್ವನವನ್ನ ಖಂಡಿತ ಕೊಡ್ತಾನೆ. (ಕೀರ್ತ. 41:3) ಯೆಹೋವ ನಮಗೆ ಪವಿತ್ರ ಶಕ್ತಿಯನ್ನ ಕೊಟ್ಟು ಎಲ್ಲ ಕಷ್ಟ ಸಂಕಟಗಳನ್ನ ತಾಳ್ಕೊಳೋಕೆ ಬೇಕಾಗಿರೋ ಜ್ಞಾನ, ಬಲ ಮತ್ತು ಮನಶಾಂತಿ ಕೊಡ್ತಾನೆ. (ಜ್ಞಾನೋ. 18:14; ಫಿಲಿ. 4:13) ಮುಂದೊಂದು ದಿನ ‘ಎಲ್ಲಾ ಕಾಯಿಲೆಗಳನ್ನ ತೆಗೆದುಹಾಕ್ತೀನಿ’ ಅಂತ ಮಾತೂ ಕೊಟ್ಟಿದ್ದಾನೆ. ಈ ಮಾತು ನಮಗೆ ನಿರೀಕ್ಷೆ ಕೊಡುತ್ತೆ. ಈ ನಿರೀಕ್ಷೆ ಈಗಿರೋ ಕಷ್ಟಗಳನ್ನ ತಾಳ್ಕೊಳ್ಳೋಕೆ ಸಹಾಯ ಮಾಡುತ್ತೆ. (ಯೆಶಾ. 33:24) ಬೈಬಲ್‌ನಲ್ಲಿ ನಮಗೆ ಸಾಂತ್ವನ ಕೊಡೋಕೆ ಅಂತ ಎಷ್ಟೋ ವಿಷ್ಯಗಳನ್ನ ಯೆಹೋವ ಬರೆಸಿಟ್ಟಿದ್ದಾನೆ. ಅದನ್ನ ನಾವು ಓದಿ ತಿಳ್ಕೊಬೇಕು. (ರೋಮ. 15:4) ಆಫ್ರಿಕಾದಲ್ಲಿರೋ ಒಬ್ಬ ಸಹೋದರಿಗೆ ಕ್ಯಾನ್ಸರ್‌ ಇತ್ತು. ಅವರು ಆಗಾಗ ಅದನ್ನ ನೆನಸ್ಕೊಂಡು ಅಳ್ತಿದ್ರು. ಆದ್ರೆ ಅವ್ರಿಗೆ ಬೈಬಲ್‌ ಮೂಲಕ ಸಾಂತ್ವನ ಸಿಕ್ತು. ಅವರು ಹೇಳೋದು, “ನನಗೆ ತುಂಬಾ ಸಾಂತ್ವನ ಕೊಡ್ತಿದ್ದ ಒಂದು ವಚನ ಯೆಶಾಯ 26:3. ನಮಗಿರೋ . . . ಕಷ್ಟಗಳನ್ನೆಲ್ಲ ತಾಳ್ಕೊಳ್ಳೋಕೆ ಬೇಕಾದ ಮನಶಾಂತಿನ ಯೆಹೋವ ಕೊಡ್ತಾನೆ ಅಂತ ಆ ವಚನ ನನಗೆ ನೆನಪು ಮಾಡ್ತಿತ್ತು.” ನಿಮಗೆ ತುಂಬಾ ದುಃಖ ಆದಾಗ, ಕಷ್ಟದಿಂದ ಹೊರಗೆ ಬರೋಕೆ ದಾರಿನೇ ಕಾಣಿಸದೆ ಇದ್ದಾಗ ಸಹಾಯ ಮಾಡಿದ ಯಾವುದಾದ್ರೂ ವಚನ ಇದ್ಯಾ? w24.12 24 ¶17-18

ಬುಧವಾರ, ಡಿಸೆಂಬರ್‌ 30

ಮಗ ಇನ್ನೂ ತುಂಬ ದೂರ ಇರುವಾಗಲೇ ಅಪ್ಪ ಅವನನ್ನ ನೋಡಿ ಕನಿಕರಪಟ್ಟು ಓಡೋಡಿ ಬಂದು ಅಪ್ಕೊಂಡು ಮುತ್ತು ಕೊಟ್ಟ.—ಲೂಕ 15:20.

ಈ ಅಪ್ಪನ ತರಾನೇ ಹಿರಿಯರು ಯೆಹೋವನಿಂದ ದೂರ ಹೋದವ್ರನ್ನ ಕ್ಷಮಿಸ್ತಾರೆ. ಕಳೆದುಹೋದ ಕುರಿ ಮತ್ತೆ ಸಭೆಗೆ ಬರಬೇಕು ಅಂತ ಅವರು ಆಸೆಪಡ್ತಾರೆ. (ಲೂಕ 15:22-24, 32) ಈ ತರ ಅವರು ಸಭೆಗೆ ವಾಪಸ್‌ ಬಂದಾಗ ಸಭೆಲಿರೋರು ಅಷ್ಟೇ ಅಲ್ಲ, ಸ್ವರ್ಗದಲ್ಲಿರೋ ಯೆಹೋವ, ಯೇಸು ಮತ್ತು ದೇವದೂತರೆಲ್ರೂ ತುಂಬ ಖುಷಿಪಡ್ತಾರೆ. (ಲೂಕ 15:7) ಪಾಪ ಮಾಡಿದವರು ಪಶ್ಚಾತ್ತಾಪ ಪಟ್ಟಿಲ್ಲ ಅಂದ್ರೆ ಅವ್ರನ್ನ ಸಭೆಲಿ ಇಟ್ಕೊಳ್ಳೋಕೆ ಯೆಹೋವ ಇಷ್ಟ ಪಡಲ್ಲ. ಹಾಗಂತ ಪಾಪ ಮಾಡಿದವ್ರನ್ನ ಆತನು ಬಿಟ್ಟು ಬಿಡಲ್ಲ ಅಥವಾ ಮರೆತು ಹೋಗಲ್ಲ. ಅವರು ಮತ್ತೆ ವಾಪಸ್‌ ಬರೋಕೆ ಆತನು ಖಂಡಿತ ಸಹಾಯ ಮಾಡ್ತಾನೆ. ಪಾಪ ಮಾಡಿದವರು ಪಶ್ಚಾತ್ತಾಪ ಪಟ್ಟಾಗ ಆತನಿಗೆ ಹೇಗನಿಸುತ್ತೆ ಅಂತ ಹೋಶೇಯ 14:4ರಲ್ಲಿ ಆತನು ಹೇಳಿದ್ದಾನೆ: “ಅವ್ರ ನಂಬಿಕೆ ದ್ರೋಹ ಅನ್ನೋ ಕಾಯಿಲೆಯನ್ನ ನಾನು ವಾಸಿ ಮಾಡ್ತೀನಿ. ನಾನು ಸ್ವಇಷ್ಟದಿಂದ ಅವ್ರನ್ನ ಪ್ರೀತಿಸ್ತೀನಿ, ಯಾಕಂದ್ರೆ ನನಗೆ ಅವ್ರ ಮೇಲಿದ್ದ ಕೋಪ ಹೋಗಿದೆ.” ಯೆಹೋವ ಎಂಥ ಒಳ್ಳೇ ಮಾದರಿ ಇಟ್ಟಿದ್ದಾನಲ್ವಾ? ಪಾಪ ಮಾಡಿದವರು ಪಶ್ಚಾತ್ತಾಪದ ಚಿಕ್ಕ ಸುಳಿವು ಕೊಟ್ರೂ ಅವ್ರಿಗೆ ಸಹಾಯ ಮಾಡೋಕೆ ಹಿರಿಯರಿಗೆ ಈ ಮಾತಿಂದ ತುಂಬ ಪ್ರೋತ್ಸಾಹ ಸಿಗುತ್ತೆ. ಅಷ್ಟೇ ಅಲ್ಲ, ಯೆಹೋವನನ್ನ ಬಿಟ್ಟು ಹೋದವ್ರಿಗೂ ತಕ್ಷಣ ವಾಪಸ್‌ ಬರೋದಿಕ್ಕೆ ಈ ಮಾತುಗಳಿಂದ ಪ್ರೋತ್ಸಾಹ ಸಿಗುತ್ತೆ. w24.08 28 ¶8-9

ಗುರುವಾರ, ಡಿಸೆಂಬರ್‌ 31

ನೀವು ಆ ಸಹಾಯವನ್ನ ಎಷ್ಟು ನೆನಪಿಸ್ಕೊಳ್ತೀರ ಅಂತ ತೋರಿಸಿ.—ಕೊಲೊ. 3:15.

ನಾವು ಸಹಾಯ ಮಾಡಿದವ್ರೆಲ್ಲ ನಮ್ಮನ್ನ ಮೆಚ್ಕೊಳ್ತಾರೆ ಅಂತ ಹೇಳೋಕೆ ಆಗಲ್ಲ. ಕೆಲವೊಮ್ಮೆ ನಾವು ಅವ್ರಿಗೆ ಸಹಾಯ ಮಾಡೋಕೆ ನಮ್ಮ ಸಮಯ ಶಕ್ತಿನೆಲ್ಲ ಕೊಟ್ಟಿರ್ತೀವಿ. ಆದ್ರೆ ಅವರು ಅದನ್ನೆಲ್ಲ ಲೆಕ್ಕಕ್ಕೇ ತಗೊಳ್ತಿಲ್ವೇನೋ ಅಂತ ಅನಿಸಬಹುದು. ಆದ್ರೂ ನಮ್ಮ ಖುಷಿನ ಕಳ್ಕೊಳ್ಳದೇ ಇರೋಕೆ ಮತ್ತು ಬೇಜಾರಾಗದೇ ಇರೋಕೆ ನಾವೇನು ಮಾಡಬೇಕು? ಬೇರೆಯವರು ನಮ್ಮನ್ನ ಮೆಚ್ಚೋದ್ರಿಂದಲ್ಲ, ಕೊಡೋದ್ರಿಂದ ಖುಷಿ ಸಿಗುತ್ತೆ ಅಂತ ನೆನಪಿಡಬೇಕು. (ಅ. ಕಾ. 20:35) ಹಾಗಾಗಿ ಯಾರು ನಮ್ಮನ್ನ ಮೆಚ್ಕೊಳ್ಳಲಿ ಬಿಡ್ಲಿ ಕೊಡೋದ್ರಿಂದ ಸಿಗೋ ಖುಷಿನ ನಾವು ಕಳ್ಕೊಬಾರದು. ಯೆಹೋವನನ್ನ ಅನುಕರಿಸಿ. ಜನ ಮೆಚ್ಕೊಳ್ಳಲಿ ಬಿಡ್ಲಿ ಒಳ್ಳೇದು ಮಾಡೋದನ್ನಂತೂ ಯೆಹೋವ ನಿಲ್ಲಿಸೋದೇ ಇಲ್ಲ. (ಮತ್ತಾ. 5:43-48) ಯೆಹೋವನ ತರ ನಾವೂ “ವಾಪಸ್‌ ಏನಾದ್ರೂ ಸಿಗುತ್ತೆ ಅಂತ ನೆನಸದೆ” ಸಹಾಯ ಮಾಡ್ತಾ ಇರಬೇಕು. ಆಗ ನಮಗೆ “ದೊಡ್ಡ ಪ್ರತಿಫಲ” ಸಿಗುತ್ತೆ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. (ಲೂಕ 6:35) ಇಲ್ಲಿ “ಏನಾದ್ರೂ” ಸಿಗುತ್ತೆ ಅಂತ ನೆನಸಬೇಡಿ ಅನ್ನುವಾಗ ಬೇರೆಯವ್ರ ಮೆಚ್ಚಿಕೆ ಸಿಗುತ್ತೆ ಅಂತನೂ ನಾವು ನೆನಸಬಾರದು ಅಂತರ್ಥ. ಹಾಗಾಗಿ ಜನ ಲೆಕ್ಕಕ್ಕೆ ತಗೊಳ್ಳಲಿ ಬಿಡ್ಲಿ ನಾವು ಅವ್ರಿಗೆ ಖುಷಿಯಿಂದ ಕೊಡ್ತಾ ಇರಬೇಕು. ಆಗ ಯೆಹೋವ ಅದನ್ನ ಮರಿಯಲ್ಲ, ನಮಗೆ ಆಶೀರ್ವಾದ ಕೊಟ್ಟೇ ಕೊಡ್ತಾನೆ.—ಜ್ಞಾನೋ. 19:17; 2 ಕೊರಿಂ. 9:7. w24.09 29 ¶14-16

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ