ಪವಿತ್ರ ರಹಸ್ಯವೂಂದು ಬಯಲಾಗುತ್ತದ
“ಈ ದಿವ್ಯ ಭಕ್ತಿಯ ಪವಿತ್ರ ರಹಸ್ಯ ಶ್ರೇಷ್ಟವೆಂಬದು ಒಪ್ಪಿಕೊಳ್ಳಬೇಕಾದ ವಿಷಯ.”—1 ತಿಮೋಥಿ 3:16, NW.
1.1 ತಿಮೋಥಿ 3:16 ರಲ್ಲಿ ಯಾವ ರಹಸ್ಯವನ್ನು ವರ್ಣಿಸಲಾಗಿದೆ?
ರಹಸ್ಯಗಳು ನಿಮ್ಮ ಆಸಕ್ತಿಯನ್ನು ಕೆರಳಿಸುತ್ತವೋ? ಗುಪ್ತ ಸಂಗತಿಗಳನ್ನು ಪರಿಶೋಧಿಸುವುದು ನಿಮಗೆ ಆನಂದಕರವೋ? ನಮ್ಮಲ್ಲಿ ಬಹುತೇಕ ಜನರಿಗೆ ಅದು ಇಷ್ಟ! ಹಾಗಾದರೆ ನಾವೀಗ ಅತ್ಯಂತ ಮಹತ್ತರವಾದ ರಹಸ್ಯವೂಂದನ್ನು, ದೇವರ ವಾಕ್ಯದಲ್ಲಿ ಸಹಸ್ರಾರು ವರ್ಷ ಮುಚ್ಚಿಡಲ್ಪಟ್ಟಿದ್ದ ರಹಸ್ಯವೂಂದನ್ನು ಪರಿಶೋಧಿಸುವಾಗ ನೀವೂ ನಮ್ಮೊಂದಿಗೆ ಬನ್ನಿರಿ. ಈ ಪವಿತ್ರ ರಹಸ್ಯವು ನಮ್ಮ ಈಗಿನ ಮತ್ತು ಭವಿಷ್ಯದ ಜೀವನಗಳೆರಡರ ಮೇಲೂ ಮಹತ್ವದ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಇದು ‘ದಿವ್ಯ ಭಕ್ತಿಯ ಪವಿತ್ರ ರಹಸ್ಯ.’ 1 ತಿಮೋಥಿ 3:16 ರಲ್ಲಿ ವರ್ಣಸಲಾಗಿರುವ ಪವಿತ್ರ ರಹಸ್ಯ. ಈ ಭವ್ಯ ರಹಸ್ಯವನ್ನು ಮತ್ತು ಅದರ ಅರ್ಥವಿವರಣೆಯನ್ನು ವಿನಯಶೀಲತೆಯಿಂದ ನಮಗೆ ತಿಳಿಸಿರುವ “ರಹಸ್ಯಗಳನ್ನು ವ್ಯಕ್ತಪಡಿಸುವ” ಯೆಹೋವನಿಗೆ ನಾವೆಷ್ಟು ಆಭಾರಿಗಳಾಗಿರಬೇಕು!—ದಾನಿಯೇಲ 2:28, 29.
2. (ಎ)ಪವಿತ್ರ ರಹಸ್ಯದ ಕುರಿತು ಯೆಹೋವನು ಮೊದಲಾಗಿ ಯಾವಾಗ ಮಾತಾಡಿದನು, ಮತ್ತು ಆಗ ಏನು ವಾಗ್ದಾನಿಸಿದನು? (ಬಿ) ಯಾವ ಪ್ರಶ್ನೆಗಳು ಉತ್ತರವನ್ನು ಕೇಳಿಕೊಳ್ಳುತ್ತವೆ?
2. ಸರ್ಪವು ಹವ್ವಳನ್ನು ವಂಚಿಸಿದ ಬಳಿಕ ಮತ್ತು ಆದಾಮನು ದಂಗೆಯೊಳಗೆ ಆಕೆಯನ್ನು ಹಿಂಬಾಲಿಸಿದ ಬಳಿಕ ಯೆಹೋವನು ಪ್ರಥಮವಾಗಿ ಪವಿತ್ರ ರಹಸ್ಯದ ಕುರಿತಾಗಿ ಮಾತಾಡಿದನು. “ಸಂತಾನ” ವಾದವನು ಅಥವಾ ಸಂತತಿಯಾಗಿರುವವನು ಸರ್ಪನ ತಲೆಯನ್ನು ಜಜ್ಜುವನೆಂದು ದೇವರು ಆಗ ವಚನವಿತ್ತನು. (ಆದಿಕಾಂಡ 3:15) ಈ ಸಂತಾನವು ಯಾರು? ಅವನು ಸರ್ಪನನ್ನು ಹೇಗೆ ಜಯಿಸುವನು? ಅವನು ದೇವರ ಸತ್ಯತೆಯನ್ನು ಮತ್ತು ಭೂಮಿಯ ಕಡೆಗೆ ಆತನ ಉದ್ದೇಶವನ್ನು ನಿರ್ದೋಷೀಕರಿಸುವನೋ?
3. ಸಂತಾನದವನ ಗುರುತು ಮತ್ತು ಚಟುವಟಿಕೆಯ ಕುರಿತು ದೈವಿಕ ಪ್ರವಾದನೆಗಳು ಯಾವ ಸುಳಿವನ್ನು ಕೊಡುತ್ತವೆ?
3. ಸಮಯಾನಂತರ, ಈ ಸಂತಾನವಾದಾತನ ಗುರುತು ಮತ್ತು ಭಾವೀ ಚಟುವಟಿಕೆಗಳ ಕುರಿತು ಸುಳಿವುಗಳನ್ನು ದೈವಿಕ ಭವಿಷ್ಯ ನುಡಿಗಳು ತಿಳಿಸಿದವು. ಅವನು ಅಬ್ರಹಾಮನ ವಂಶಜನಾಗಿ ದಾವೀದನ ರಾಜ್ಯವನ್ನು ಪಡೆದು ಶಾಂತಿಯ ಪ್ರಭುವೆಂದು ಕರೆಯಲ್ಪಡಲಿದ್ದನು. ‘ಅವನ ರಾಜ್ಯಯೋಗ್ಯವಾದ ಆಳಿಕೆಯ ಸಮೃದ್ಧಿಗೆ ಮತ್ತು ಶಾಂತಿಗೆ ಅಂತ್ಯವಿರದು.’ (ಯೆಶಾಯ 9:6, 7; ಆದಿಕಾಂಡ 22:15-18; ಕೀರ್ತನೆ 89:35-37) ಆದರೆ, ರೋಮಾಪುರ 16:25 ತಿಳಿಸುವಂತೆ, ಈ ಮರ್ಮವು “ಅನಾದಿಯಿಂದ ಗುಪ್ತ” ವಾಗಿತ್ತು.
ರಹಸ್ಯವನ್ನು ಬಗೆಹರಿಸುವುದು
4. ಸಾ.ಶ. 29ರಲ್ಲಿ ಪವಿತ್ರ ರಹಸ್ಯ ಹೇಗೆ ಬಯಲಾಗ ತೊಡಗಿತು?
4. ಕೊನೆಗೆ, ನಾಲ್ಕು ಸಹಸ್ರ ವರ್ಷಗಳ ನಂತರ, ಜ್ಞಾನೋದಯವಾಯಿತು! ಯಾವ ವಿಧದಲ್ಲಿ? ಸಾ.ಶ. 29ರಲ್ಲಿ ಯೋಹಾನನು ನಜರೇತಿನ ಯೇಸುವಿಗೆ ದೀಕ್ಷಾಸ್ನಾನ ಕೊಟ್ಟಾಗ, ದೇವರ ವಾಣಿ ಗಗನದಿಂದ, “ಈತನು ಪ್ರಿಯನಾಗಿರುವ ನನ್ನ ಮಗನು ಈತನನ್ನು ನಾನು ಮೆಚ್ಚಿದ್ದೇನೆ” ಎಂದು ಪ್ರಕಟಿಸಿತು. (ಮತ್ತಾಯ 3:17) ಹಾಗಾದರೆ, ಇಲ್ಲಿ ಕಟ್ಟಕಡೆಗೆ, ವಾಗ್ದಾನದ ಸಂತತಿಯು ತೋರಿಬಂದನು! ಪವಿತ್ರ ರಹಸ್ಯವು ದಿವ್ಯ ಭಕ್ತಿಯನ್ನೊಳಗೊಂಡ ಅದರ ಮಹಿಮಾಭರಿತ ಮುಖಗಳೊಂದಿಗೆ ಬಯಲಾಗತೊಡಗಿತು.
5. “ದಿವ್ಯಭಕ್ತಿ” ಎಂದರೇನು, ಮತ್ತು ಅದನ್ನು ಪಾಲಿಸುವವರ ಮೇಲೆ ಅದು ಯಾವ ಪರಿಣಾಮ ಬೀರುತ್ತದೆ?
5. “ದಿವ್ಯ ಭಕ್ತಿ”ಯನ್ನು ನಾವು ಯಾವ ಅರ್ಥದಲ್ಲಿ ತಿಳಿಯುತ್ತೇವೆ? ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಈ ಹೇಳಿಕೆ ಕೇವಲ 20 ಸಲ ಬರುತ್ತದೆ. ಪೌಲನು ತಿಮೋಥಿಗೆ ಬರೆದ ಎರಡು ಪತ್ರಿಕೆಗಳಲ್ಲಿ ಇದು ಹತ್ತಕ್ಕೂ ಹೆಚ್ಚು ಸಲ ಬರುತ್ತದೆ. ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಎಂಬ ಪುಸ್ತಕ “ದಿವ್ಯ ಭಕ್ತಿ” ಯನ್ನು, “ದೇವರ ವಿಶ್ವ ಪರಮಾಧಿಕಾರಕ್ಕೆ ಕರ್ತವ್ಯನಿಷ್ಟೆಯೊಂದಿಗೆ ತೋರಿಸುವ ಪೂಜ್ಯಭಾವ, ಆರಾಧನೆ, ಮತ್ತು ದೇವರ ಸೇವೆಯಾಗಿ” ಅರ್ಥ ವಿವರಿಸುತ್ತದೆ. ಈ ಪೂಜ್ಯ ಭಾವವು ಆತನ ರಾಜತ್ವ, ಶಾಶ್ವತತೆ, ಆತನ ಮಹಾ ಸೃಷ್ಟಿಗಳ ವೈವಿಧ್ಯಗಳನ್ನು ನೋಡಿ ಭಯಭಕ್ತಿ ತೋರಿಸುತ್ತಾ, ಆತನು ಗಣ್ಯತೆ ತೋರಿಸುವ ಮನುಷ್ಯರ ಮೇಲೆ ಸುರಿಸುವ ಆತ್ಮಿಕಮತ್ತು ಲೌಕಿಕ ವರಗಳಿಗಾಗಿ ಕೃತಜ್ಞತೆ ತೋರಿಸುತ್ತಾ ದೇವರ ಸಾಮೀಪ್ಯಕ್ಕೆ ಎಳೆಯುವ ಹೃದಯದಿಂದ ಬರುತ್ತದೆ. ನಿಜವಾಗಿಯೂ, ನಮ್ಮಲ್ಲಿ ದಿವ್ಯಭಕ್ತಿ ತೋರಿಸುವ ಪ್ರತಿಯೊಬ್ಬನು, ಕೀರ್ತನೆಗಾರನು ಕೀರ್ತನೆ 104:1 ರಲ್ಲಿ ಹೇಳಿರುವಂತೆ ಹೇಳಬಲ್ಲೆವು: “ನನ್ನ ಮನವೇ, ಯೆಹೋವನನ್ನು ಕೊಂಡಾಡು. ಯೆಹೋವನೇ, ನನ್ನ ದೇವರೇ, ನೀನು ಸವ್ರೋತ್ಕೃಷ್ಟನು; ಪ್ರಭಾವ ಮಹತ್ವಗಳಿಂದ ಭೂಷಿತನಾಗಿದ್ದೀ.”
6. (ಎ)ಯೆಹೋವನ ಆರಾಧಕರು ಕ್ರೈಸ್ತ ಪ್ರಪಂಚದ ಪ್ರತ್ಯೇಕ ಆವರಣದಲ್ಲಿ ಕೂತುಕೊಳ್ಳುವವರಿಗಿಂತ ಹೇಗೆ ಭಿನ್ನವಾಗಿದ್ದಾರೆ? (ಬಿ) ರೋಮಾಪುರ 11:33, 34 ರಲ್ಲಿ ಪೌಲನು ಏನು ಹೇಳಿದನು, ಮತ್ತು ಹೀಗೆ ಯಾವ ಪ್ರಶ್ನೆಗಳು ಏಳುತ್ತವೆ?
6. ದೇವರಿಗೆ ನಮ್ಮ ಭಕ್ತಿ ವ್ಯಕ್ತವಾಗತಕ್ಕದ್ದು, ಮತ್ತು ಇದು ವ್ಯಕ್ತವಾಗುವುದು ಕ್ರಿಯೆಗಳಿಂದಲೇ. ಈ ಸಂಬಂಧದಲ್ಲಿ ಸತ್ಯದೇವರಾದ ಯೆಹೋವನ ಆರಾಧಕರು ಕ್ರೈಸ್ತ ಪ್ರಪಂಚದ ಅದೃಶ್ಯವಾಗುತ್ತಿರುವ ಚರ್ಚುಗಳ ಪ್ರತ್ಯೇಕ ಆವರಣಗಳಲ್ಲಿ ಕೂತುಕೊಳ್ಳುವ ಜನರಿಗಿಂತ ಭಿನ್ನರು. ಭೂಮಿಯ ಅನೇಕ ಜನರಿಗೆ ಧರ್ಮ—ಅದನ್ನು ಇನ್ನೂ ಅವರು ಪಾಲಿಸುತ್ತಿರುವದಾದರೆ—ಕೇವಲ ಬಾಹ್ಯನಿಷ್ಟೆಯಾಗಿದೆ. ತಾವು ಸುತ್ತಲಿರುವ ಭಷ್ಟ ಲೋಕಾನುಸಾರ ಜೀವನ ನಡೆಸುತ್ತಿರುವಾಗ ಪವಿತ್ರರೆಂದು ತೋರಿಸಿಕೊಳ್ಳುವ ಮೇಲಂಗಿಯಾಗಿದೆ. ದೇವರು ಯಾರೆಂದೂ ಅವರಿಗೆ ತಿಳಿದಿಲ್ಲ. ಇಂಥವರು ಪೌಲನು ಅಪೋಸ್ತಲರ ಕೃತ್ಯ 17:23 ರಲ್ಲಿ ಹೇಳಿರುವ ಮಾತುಗಳನ್ನು ಪರಿಗಣಿಸಬೇಕೆಂಬದು ನಿಶ್ಚಯ. ಅವನು, “ತಿಳಿಯದ ದೇವರನ್ನು” ಪೂಜಿಸಿದ ಅಥೇನಿಯವರಿಗೆ ಹೇಳಿದ್ದು: “ನೀವು ಯಾವುದನ್ನು ತಿಳಿಯದೆ ಪೂಜಿಸುತ್ತಿದ್ದೀರೋ ಅದನ್ನೇ ನಿಮಗೆ ತಿಳಿಯಪಡಿಸುತ್ತೇನೆ.” ಈ ಉಜ್ವಲನಾದ ದೇವರ ಕುರಿತು ಪೌಲನು ರೋಮಾಪುರ 11:33, 34 ರಲ್ಲಿ ಹೇಳಿದ್ದು: “ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಆಗಾಧ! ಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ಆತನ ಮಾರ್ಗಗಳು ಕಂಡುಹಿಡಿಯುವುದಕ್ಕೆ ಎಷ್ಟೋ ಅಸಾಧ್ಯ! ಯೆಹೋವನ ಮನಸ್ಸನ್ನು ತಿಳುಕೊಂಡವರಾರು? ಆತನಿಗೆ ಆಲೋಚನಾ ಕರ್ತನು ಯಾರು?” ಹಾಗಾದರೆ ನಾವು ದೇವರ ಮಾರ್ಗಗಳನ್ನು ತಿಳಿಯುವ ವಿಧ ಹೇಗೆ? ‘ದಿವ್ಯ ಭಕ್ತಿಯ ಪವಿತ್ರ ರಹಸ್ಯ’ ದ ಕುರಿತು ಕಲಿಯುವದರ ಮೂಲಕವೇ. ಆದರೆ ಇದನ್ನು ನಾವು ಕಲಿಯುವುದು ಹೇಗೆ?
7. “ಈ ದಿವ್ಯಭಕ್ತಿಯ ಪವಿತ್ರ ರಹಸ್ಯ ಶ್ರೇಷ್ಟವೆಂಬದು ಒಪ್ಪಿಕೊಳ್ಳಬೇಕಾದ ವಿಷಯ” ಎಂದು ಏಕೆ ಹೇಳ ಸಾಧ್ಯವಿದೆ?
7. 1ನೇ ತಿಮೊಥಿ 3ನೇ ಅಧ್ಯಾಯದಲ್ಲಿ ಅಪೋಸ್ತಲ ಪೌಲನು ಮೊದಲು, 15ನೇ ವಚನದಲ್ಲಿ ವರ್ಣಿಸಿರುವ ‘ಯಾವುದು ಸತ್ಯಕ್ಕೆ ಸ್ತಂಭವೂ ಆಧಾರಭೂತವೂ ಆಗಿದೆಯೋ ಆ ದೇವರ ಸಭೆಯಾದ’ ದೇವರ ಮನೆಯಲ್ಲಿ ಹೊಣೆಗಾರರಾದ ಸೇವಕರುಗಳಿಂದ ಏನು ಕೇಳಿಕೊಳ್ಳಲ್ಪಡುತ್ತದೆಂದು ತಿಳಿಸುತ್ತಾನೆ. ಆ ಬಳಿಕ 16ನೇ ವಚನದಲ್ಲಿ ಪೌಲನು ತಿಳಿಸುವುದು: “ಈ ದಿವ್ಯ ಭಕ್ತಿಯ ಪವಿತ್ರರಹಸ್ಯ ಶ್ರೇಷ್ಟವೆಂಬದು ಒಪ್ಪಿಕೊಳ್ಳಬೇಕಾದ ವಿಷಯ.” ಶ್ರೇಷ್ಟವೆಂಬದು ನಿಶ್ಚಯ, ಏಕೆಂದರೆ ಯೆಹೋವನು ಈ ರಹಸ್ಯವನ್ನು ರಟ್ಟುಮಾಡಲು, ದಿವ್ಯಭಕ್ತಿ ನಿಜವಾಗಿ ಏನೆಂದು ತಿಳಿಸಲು, ಅದು ಸತ್ಯಾರಾಧನೆಗೆ ಹೇಗೆ ಪ್ರಾಮುಖ್ಯ ತಿರುಗುಗೂಟವಾಗಿದೆ ಎಂದು ತಿಳಿಯಪಡಿಸಲು ತನ್ನ ಏಕಜಾತ ಪುತ್ರನನ್ನು ಭೂಮಿಗೆ ಕಳುಹಿಸಿದನು. ಯೇಸುವಿನ ಈ ಭೂಮಿಯ ಜೀವನ ಮಾರ್ಗದಲ್ಲಿ ಈ ದಿವ್ಯ ಭಕ್ತಿಯ ಪವಿತ್ರ ರಹಸ್ಯವು ಕಾಂತಿ ಬೀರಿದೆ. ಯೆಹೋವನನ್ನು ಪ್ರೀತಿಸುವವರೆಲ್ಲರೂ ಅವರ ನಂಬಿಕೆಯನ್ನು ಮತ್ತು ಅವರ ಜೀವನವನ್ನು ದಿವ್ಯಭಕ್ತಿಯ ಆದರ್ಶನಾದ ಕ್ರಿಸ್ತನ ಮೇಲೆ ಕಟ್ಟತಕ್ಕದ್ದು. ಹಾಗಾದರೆ ಯೇಸು ಈ ದಿವ್ಯಭಕ್ತಿಯ ಪವಿತ್ರ ರಹಸ್ಯವನ್ನು ಹೇಗೆ ಸ್ಪಷ್ಟೀಕರಿಸಿದನು?
ಆರು ಮುಖಗಳು
8. (ಎ)ಪೌಲನು 1 ತಿಮೋಥಿ 3:16 ರಲ್ಲಿ ವರ್ಣಿಸಿದ ಪವಿತ್ರ ರಹಸ್ಯದ ಆರು ಮುಖಗಳಾವುವು? (ಬಿ) ಪ್ರಕಟಿಸಲ್ಪಟ್ಟ “ಅವನು” ಯಾರು?
8. ಪೌಲನು ದೇವಪ್ರೇರಣೆಯಿಂದ ಆ ಪ್ರಶ್ನೆಯನ್ನು ಉತ್ತರಿಸುತ್ತಾನೆ. 1 ತಿಮೋಥಿ 3:16 ರಲ್ಲಿ ಅವನು ಈ ಪವಿತ್ರ ರಹಸ್ಯದ ಆರು ಮುಖಗಳನ್ನು ಹೀಗೆ ವರ್ಣಿಸುತ್ತಾನೆ: “ಅವನು [1] ಶರೀರದಲ್ಲಿ ಕಾಣಿಸಲ್ಪಟ್ಟನು, [2] ಆತ್ಮದಲ್ಲಿ ನೀತಿವಂತನೆಂದು ಪ್ರಕಟಿಸಲ್ಪಟ್ಟನು, [3] ದೇವದೂತರಿಗೂ ಕಾಣಿಸಿಕೊಂಡನು, [4] ಅನ್ಯ ಜನರಲ್ಲಿ ಪ್ರಸಿದ್ಧಮಾಡಲ್ಪಟ್ಟನು, [5] ಲೋಕದಲ್ಲಿ ನಂಬಲ್ಪಟ್ಟನು, [6] ಪ್ರಭಾವದಲ್ಲಿ ಮೇಲೆ ಸ್ವೀಕೃತನಾದನು. ಹಾಗಾದರೆ ಪ್ರಕಟಿಸಲ್ಪಟ್ಟ ಅವನು ಯಾರು? ದೇವರ ಚಿತ್ತವನ್ನು ಮಾಡಲು ಬಂದ, ವಾಗ್ದಾನದ ಸಂತಾನವಾದ ಯೇಸುವೇ “ಅವನು.” ಈ ಪವಿತ್ರ ರಹಸ್ಯವನ್ನು ನಿಜವಾಗಿಯೂ ಮಹತ್ವದ್ದಾಗಿ ಮಾಡಿದ ಅವನು ಇದಕ್ಕೆ ಕೇಂದ್ರವಾಗಿದ್ದಾನೆ.
9. 1 ತಿಮೋಥಿ 3:16ನ್ನು “ದೇವರು ಶರೀರದಲ್ಲಿ ಪ್ರಕಟವಾದನು” ಎಂದು ಓದಬಾರದೆಂಬದಕ್ಕೆ ಯಾವ ರುಜುವಾತಿದೆ?
9. ತ್ರಯೈಕ್ಯವಾದಿಗಳು, 1 ತಿಮೋಥಿ 3:16ರ “ಅವನು” ದೇವರು ತಾನೇ ಎಂದು ಹೇಳಿ ಈ ಪವಿತ್ರ ರಹಸ್ಯದ ತಿಳುವಳಿಕೆಯನ್ನು ಮೊಬ್ಬಾಗಿ ಮಾಡಲು ಪ್ರಯತ್ನಿಸುತ್ತಾರೆ. “ದೇವರು ಶರೀರದಲ್ಲಿ ಪ್ರಕಟವಾದನು” ಎಂದು ಹೇಳುವ ಕಿಂಗ್ ಜೇಮ್ಸ್ ಬೈಬಲಿನ ಮೇಲೆ ಅವರು ಆಧಾರಮಾಡಿಕೊಳ್ಳುತ್ತಾರೆ. ಆದರೆ ಅತ್ಯಂತ ನಂಬಲರ್ಹವಾದ ಗ್ರೀಕ್ ಮೂಲಗ್ರಂಥಗಳೇನು ಹೇಳುತ್ತವೆ? ಹೊಂದಿಕೆಯಾಗಿ ಅವುಗಳು “ದೇವರು” ಎಂಬದರ ಬದಲಿಗೆ “ಅವನು” ಎಂಬ ಸರ್ವನಾಮವನ್ನು ಉಪಯೋಗಿಸುತ್ತವೆ. ಮೂಲಗ್ರಂಥ ವಿಮರ್ಶಕರು ಈಗ, ಈ ವಚನದಲ್ಲಿ ಹೊಕ್ಕಿರುವ “ದೇವರು” ಎಂಬದು ಲಿಪಿಕಾರರ ತಪ್ಪು ಎಂದು ಒಪ್ಪುತ್ತಾರೆ. ಹೀಗೆ, ಇತ್ತೀಚಿನ ಭಾಷಾಂತರಗಳಾದ ಅಮೇರಿಕನ್ ಸ್ಟಾಂಡರ್ಡ್ ವರ್ಶನ್, ದ ನ್ಯೂ ಇಂಗ್ಲಿಷ್ ಬೈಬಲ್ ಮತ್ತು ನ್ಯೂವರ್ಲ್ಡ್ ಟ್ರಾನ್ಸ್ಲೇಶನ್ ಸರಿಯಾಗಿಯೇ “ಅವನು [ಯಾರೋ ಅವನು] ಶರೀರದಲ್ಲಿ ಕಾಣಿಸಲ್ಪಟ್ಟನು” ಎಂದು ಹೇಳುತ್ತವೆ. ‘ಶರೀರದಲ್ಲಿ ಕಾಣಿಸಿಕೊಂಡದ್ದು’ ದೇವರಲ್ಲ. ದೇವರ ಪ್ರಿಯ ಕುಮಾರನು, ದೇವರ ಪ್ರಥಮ ಸೃಷ್ಟಿ ಅವನಾಗಿದ್ದನು. ಇವನ ಕುರಿತು ಅಪೋಸ್ತಲ ಯೋಹಾನನು ಬರೆದದ್ದು: “ವಾಕ್ಯವೆಂಬವನು ಮನುಷ್ಯನಾಗಿ ನಮ್ಮ ಮಧ್ಯೆ ವಾಸಮಾಡಿದನು. ಮತ್ತು ನಾವು ಅವನ ಮಹಿಮೆಯನ್ನು ಕಂಡೆವು. ಆ ಮಹಿಮೆ ತಂದೆಯಿಂದ ಅವನ ಏಕಜಾತ ಪುತ್ರನು ಪಡೆಯುವ ಮಹಿಮೆಯಾಗಿತ್ತು. ಅವನು ಅನರ್ಹ ಕೃಪೆ ಮತ್ತು ಸತ್ಯಭರಿತನಾಗಿದ್ದನು.”—ಯೋಹಾನ 1:14, NW.
“ಶರೀರದಲ್ಲಿ ಪ್ರಕಟಿಸಲ್ಪಟ್ಟನು”
10. (ಎ)ಯೇಸುವಿನ ದೀಕ್ಷಾಸ್ನಾನದಲ್ಲಿ ಪವಿತ್ರ ರಹಸ್ಯದ ಪ್ರಥಮ ಮುಖ ಹೇಗೆ ಸ್ಪಷ್ಟವಾಯಿತು? (ಬಿ) ಯೇಸು “ಕಡೇ ಆದಾಮ” ನಾದದ್ದು ಏಕೆ?
10. ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ಈ ಪವಿತ್ರ ರಹಸ್ಯದ ಒಂದನೇ ಮುಖ ಪ್ರತ್ಯಕ್ಷವಾಯಿತು. ಯೇಸು ದೇವರ ಅಭಿಷಿಕ್ತ ಕಮಾರನಾಗಿ “ಶರೀರದಲ್ಲಿ ಕಾಣಿಸಲ್ಪಟ್ಟನು.” ಯೇಸು ಪರಿಪೂರ್ಣ ಮಾನವನಾಗಿ ಶರೀರದಲ್ಲಿ ಹುಟ್ಟುವಂತೆ ಯೆಹೋವ ದೇವರು ತನ್ನ ಪುತ್ರನ ಜೀವವನ್ನು ಸ್ವರ್ಗದಿಂದ ಮರಿಯಳ ಗರ್ಭಕ್ಕೆ ಸ್ಥಳಾಂತರಿಸಿದ್ದನು. ಹೀಗೆ, 1 ಕೊರಿಂಥ 15:45-47 ತೋರಿಸುವಂತೆ, ಯೇಸು ಎರಡನೆಯ ಅಥವಾ, “ಕಡೇ” ಆದಾಮನು ಅಂದರೆ ಒಂದನೆಯ ಆದಾಮನಿಗೆ ನಿಷ್ಕೃಷ್ಟವಾಗಿ ಅನುರೂಪವಾಗಿದ್ದ ಪರಿಪೂರ್ಣ ಮಾನವಾತ್ಮವಾದನು. ಇದು ಯಾವ ಉದ್ದೇಶಕ್ಕಾಗಿ? 1ನೇ ತಿಮೋಥಿ 2:5, 6 “ಕಡೇ ಆದಾಮ” ನನ್ನು “ಎಲ್ಲರಿಗಾಗಿ ತನ್ನನ್ನು ಅನುರೂಪವಾದ ಪ್ರಾಯಶ್ಚಿತ್ತವಾಗಿ ಅರ್ಪಿಸಿಕೊಂಡ ಮನುಷ್ಯನಾದ ಕ್ರಿಸ್ತಯೇಸು” ಎಂದು ಸೂಚಿಸಿ ಹೇಳುತ್ತದೆ. ಈ ಪರಿಪೂರ್ಣ ಮಾನವ ಯಜ್ನವೆಂಬ ಶಾಸನ ಸಮ್ಮತ ಆಧಾರದ ಮೇರೆಗೆ ಯೇಸು ತನ್ನೊಂದಿಗೆ ರಾಜ್ಯದಲ್ಲಿ ಸಹಭಾದ್ಯರಾಗಿರುವ 144,000 ಮಾನವರೊಂದಿಗೆ ಹೊಸ ಒಡಂಬಡಿಕೆಯ ಮಧ್ಯಸ್ಥನಾಗುತ್ತಾನೆ.—ಪ್ರಕಟನೆ 14:1-3
11. ಯೇಸುವಿನ ಪ್ರಾಯಶ್ಚಿತ್ತ ಯಜ್ನದ ಪ್ರಯೋಜನಗಳು ಯಾರನ್ನು ಆವರಿಸುತ್ತವೆ?
11. ಯೇಸುವಿನ ಯಜ್ಞಾರ್ಪಿತ ಮರಣದಿಂದ ಇತರರಿಗೆ ಪ್ರಯೋಜನ ಲಭಿಸುವುದೋ? ನಿಶ್ಚಯವಾಗಿಯೂ ಹೌದು! 1ನೇ ಯೋಹಾನ 2:2 ರಲ್ಲಿ, “ಆತನು ನಮ್ಮ ಪಾಪಗಳನ್ನು [ಅಂದರೆ, ಯೋಹಾನನಂಥ ಅಭಿಷಿಕ್ತ ಕ್ರೈಸ್ತರ ಪಾಪಗಳನ್ನು] ನಿವಾರಣ ಮಾಡುವ ಯಜ್ನವಾಗಿದ್ದಾನೆ. ನಮ್ಮ ಪಾಪಗಳನ್ನು ಮಾತ್ರವಲ್ಲದೆ ಸಮಸ್ತ ಲೋಕದ ಪಾಪಗಳನ್ನು ಸಹಾ ನಿವಾರಣೆ ಮಾಡುತ್ತಾನೆ.” ಹೀಗೆ, ಯೇಸುವಿನ ಪ್ರಾಯಶ್ಚಿತ್ತ ಯಜ್ನದ ಪ್ರಯೋಜನ, 144,000 ಮಂದಿ ಅಭಿಷಿಕ್ತ ಕ್ರೈಸ್ತರಿಗಿಂತಲೂ ಹೆಚ್ಚು ದೂರ ಚಾಚಿ ಸಮಸ್ತ ಮಾನವ ಲೋಕವನ್ನು ಆವರಿಸುತ್ತದೆ. ಈಗ ಜೀವಿಸುತ್ತಿರುವ ಒಂದು “ಮಹಾ ಸಮೂಹ” ಮತ್ತು ಪ್ರಮೋದವನವಾದ ಭೂಮಿಯಲ್ಲಿ ಪುನರುತ್ಥಾನ ಹೊಂದಲಿರುವ ಕೋಟ್ಯಾಂತರ ಜನರು, ಯೇಸುವಿನ ಪ್ರಾಯಶ್ಚಿತ್ತ ಯಜ್ನದಲ್ಲಿ ಅವರಿಡುವ ನಂಬಿಕೆಯ ಆಧಾರದ ಮೇರೆಗೆ ಅನಂತ ಜೀವನವನ್ನು ಪಡೆಯುವರು. ಈ ಮಹಾ ಸಮೂಹದವರು, ಪ್ರಕಟನೆ 7:9, 10 ರಲ್ಲಿ ಆಗಲೇ ಪ್ರವಾದಿಸಿರುವಂತೆ, ಕುರಿಮರಿಯಾದ ಯೇಸುಕ್ರಿಸ್ತನ ಸುರಿಸಲ್ಪಟ್ಟ ರಕ್ತದಲ್ಲಿ ನಂಬಿಕೆಯಿಡುವುದರ ಮೂಲಕ ತಮ್ಮ ಬಟ್ಟೆಗೆಳನ್ನು ಒಗೆದು ಶುಭ್ರವಾಗಿ ಮಾಡಿದ್ದಾರೆ. ಅವರು ದೇವರೊಂದಿಗೆ ಮಿತ್ರತ್ವದ ಕಾರಣ ನೀತಿವಂತರೆಂದು ಎಣಿಸಲ್ಪಡುತ್ತಾರೆ. ಅವರು ಸಂತೋಷದಿಂದ ಪವಿತ್ರ ರಹಸ್ಯದ ವಿವಿಧ ಮುಖಗಳ ಕುರಿತು ಕಲಿತು ಯೇಸುವಿನ ಮಾದರಿಗೆ ಹೊಂದಿಕೊಂಡು ದಿವ್ಯ ಭಕ್ತಿಯನ್ನು ಪ್ರದರ್ಶಿಸುತ್ತಾರೆ!
ಇತರ ಮುಖಗಳು
12. ಯೇಸು “ಆತ್ಮದಲ್ಲಿ ನೀತಿವಂತನೆಂದು ಪ್ರಕಟಿಸಲ್ಪಟ್ಟದ್ದು” ಹೇಗೆ?
12. ಈಗ 1 ತಿಮೋಥಿ 3:16 ರಲ್ಲಿರುವ ಎರಡನೆಯ ವಿಷಯದ ಕುರಿತೇನು? ಯೇಸು “ಆತ್ಮದಲ್ಲಿ ನೀತಿವಂತನೆಂದು ಪ್ರಕಟಿಸಲ್ಪಟ್ಟನು.” ಆದ್ರೆ ಹೇಗೆ? ಯೆಹೋವನು ಸಮಗ್ರತೆ ಕಾಪಾಡಿದ ತನ್ನ ಪುತ್ರನನ್ನು ಸತ್ತವರೊಳಗಿಂದ ಆತ್ಮ ಜೀವನಕ್ಕೆ ಎಬ್ಬಿಸಿಯೇ. ಇದು ಯೇಸು ಪೂರ್ತಿ ನೀತಿವಂತನೆಂದೂ ಇನ್ನೂ ಹೆಚ್ಚು ಮಹಿಮೆಯ ನೇಮಕಗಳಿಗೆ ಯೋಗ್ಯನೆಂದೂ ದೇವರು ಪ್ರಕಟಿಸಿದ ಅರ್ಥದಲ್ಲಿತ್ತು. ರೋಮಾಪುರ 1:4 ಹೇಳುವಂತೆ ಯೇಸು, “ಪವಿತ್ರವಾದ ಆತ್ಮವುಳ್ಳವನಾಗಿದ್ದು ಸತ್ತ ಮೇಲೆ ಜೀವಿತನಾಗಿ ಎದ್ದು ಬಂದ ಮಹತ್ಕಾರ್ಯದಿಂದ ದೇವಕುಮಾರನೆಂದು ನಿರ್ಣಯಿಸಲ್ಪಟ್ಟವನೂ ಆಗಿದ್ದಾನೆ.” ಇದನ್ನು ದೃಢಪಡಿಸುತ್ತಾ ಪೇತ್ರನು ತನ್ನ ಮೊದಲನೆಯ ಪತ್ರಿಕೆಯ 3ನೇ ಅಧ್ಯಾಯ 18ನೇ ವಚನದಲ್ಲಿ ಹೇಳುವುದು: “ಕ್ರಿಸ್ತನು ಸಹಾ ನೀತವಂತನಾಗಿದ್ದು ಆನೀತಿವಂತರಿಗೋಸ್ಕರ ತನ್ನ ಪ್ರಾಣಕೊಟ್ಟು ನಮ್ಮನ್ನು ದೇವರ ಬಳಿಗೆ ಸೇರಿಸುವದಕ್ಕಾಗಿ ಒಂದೇಸಾರಿ ಪಾಪ ನಿವಾರಣೆಗೋಸ್ಕರವಾಗಿ ಬಾಧೆಪಟ್ಟು ಸತ್ತನು. ಆತನು ಶರೀರ ಸಂಬಂಧದಲ್ಲಿ ಕೊಲ್ಲಲ್ಪಟ್ಟನು. ಆತ್ಮ ಸಂಬಂಧದಲ್ಲಿ ತಿರಿಗಿ ಬದುಕುವವನಾದನು.” ಯೇಸುವಿನ ದಿವ್ಯ ಭಕ್ತಿಯ ಮಾದರಿ ನಿಮ್ಮನ್ನು ದೇವರ ಬಳಿಗೆ ನಡಿಸುತ್ತಿದೆಯೇ?
13. ಪುನರುತ್ಥಾನ ಹೊಂದಿದ ಯೇಸು ಯಾವ ದೇವದೂತರಿಗೆ ಕಾಣಿಸಿಕೊಂಡನು, ಮತ್ತು ಅವರಿಗೆ ಯಾವ ರೀತಿಯ ವಾರ್ತೆ ಸಾರಿದನು?
13. 1 ತಿಮೋಥಿ 3:16ನ್ನು ಪೌಲನು ಮುಂದುವರಿಸುತ್ತಾ, ಪವಿತ್ರ ರಹಸ್ಯದ ಮೂರನೆಯ ಮುಖವನ್ನು ಸೂಚಿಸಿ, ಯೇಸು “ದೇವದೂತರಿಗೆ ಕಾಣಿಸಿಕೊಂಡನು” ಎನ್ನುತ್ತಾನೆ. ಈ ದೇವದೂತರು ಯಾರಾಗಿರಬಹುದು? “ಆತ್ಮ ಸಂಬಂಧದಲ್ಲಿ ತಿರುಗಿ ಬದುಕುವವನಾದ” ಯೇಸುವಿನ ಕುರಿತು 1 ಪೇತ್ರ 3:19, 20 ಹೀಗನ್ನುತ್ತದೆ: “ಈ ಸ್ಥಿತಿಯಲ್ಲಿ ಸಹ ಅವನು ಹೋಗಿ ಒಮ್ಮೆ ನೋಹನ ದಿನಗಳಲ್ಲಿ ದೇವರ ತಾಳ್ಮೆ ಕಾಯತ್ತಿದ್ದಾಗ ಅವಿಧೇಯರಾಗಿದ್ದ ಸೆರೆಯಲ್ಲಿದ್ದ ಆತ್ಮಗಳಿಗೆ ಸಾರಿದನು. ಯೂದ 6 ಕ್ಕನುಸಾರವಾಗಿ ಈ ಆತ್ಮಗಳು ಸ್ವರ್ಗದಲ್ಲಿ ತಮ್ಮ ಮೂಲಸ್ಥಾನವನ್ನು ಇಟ್ಟುಕೊಳ್ಳದೆ ತಮ್ಮ ಯೋಗ್ಯ ನಿವಾಸ ಸ್ಥಾನವನ್ನು ತ್ಯಜಿಸಿದ ದೇವದೂತರು” ಆಗಿದ್ದರು. ಅವರು ಸ್ತ್ರೀಯರೊಂದಿಗೆ ಅಕ್ರಮ ಸಂಭೋಗವನ್ನು ಅನುಭವಿಸಿದ ಕಾರಣದಿಂದ ಮಾಂಸಿಕ ಶರೀರವನ್ನು ಧರಿಸಿದರು. ಜಲಪ್ರಲಯ ಬಂದಾಗ ಆತ್ಮಲೋಕಕ್ಕೆ ಹಿಂದಿರುಗುವ ನಿರ್ಭಂದಕ್ಕೆ ಅವರು ಒಳಗಾಗಲಾಗಿ ಅವರನ್ನು ಟಾರ್ಟರಸ್ಗೆ ಅಂದರೆ ಅತ್ಯಂತ ಕೀಳಾದ ಸ್ಥಾನಕ್ಕೆ ದೊಬ್ಬಲಾಯಿತು. (2 ಪೇತ್ರ 2:4) ಪುನರುತ್ಥಾನ ಹೊಂದಿದ ಯೇಸು ಅವರಿಗೆ ಸಾರಿದನು. ಆದರೆ ಅದು ರಕ್ಷಣಾ ಸಂದೇಶವಾಗಿತ್ತೋ? ನಿಶ್ಚಯವಾಗಿಯೂ ಆಗಿರಲಿಲ್ಲ! ಇದಕ್ಕೆ ಬದಲಾಗಿ ಯೇಸು ಅವರ ದುಷ್ಟತ್ವವನ್ನು, ಅದು ದಿವ್ಯ ಭಕ್ತಿಯ ವಿರೋಧ ಭಾವವೆಂದು ಖಂಡಿಸಿದನು. ಲೈಂಗಿಕ ದುರಾಚಾರದೊಂದಿಗೆ ಆಡುವ ಪ್ರತಿಯೊಬ್ಬ ದೇವಜನವೂ ಆ ದೇವದೂತರ ಮೇಲೆ ಬಂದ ತೀರ್ಪಿನಿಂದ ಇಂದು ಎಚ್ಚರಿಕೆ ತೆಗೆದುಕೊಳ್ಳಬೇಕು!
14. ಯೇಸು “ಅನ್ಯ ಜನರಲ್ಲಿ ಪ್ರಸಿದ್ಧಿ” ಯಾಗ ತೊಡಗಿದ್ದು ಹೇಗೆ?
14. 1ನೇ ತಿಮೋಥಿ 3:16 ರ ನಾಲ್ಕನೆಯ ಲಕ್ಷಣವು, ಯೇಸು “ಅನ್ಯ ಜನರಲ್ಲಿ ಪ್ರಸಿದ್ಧಿಮಾಡಲ್ಪಟ್ಟನು” ಎಂಬುದೇ. ಇದು ಹೇಗೆ ನೆರವೇರಿರುತ್ತದೆ? ಯೇಸುವನ್ನು ಕೈದು ಮಾಡಿದುದಕ್ಕೆ ತುಸು ಮುಂಚಿತವಾಗಿ ಅವನು ಅಪೋಸ್ತಲರಿಗೆ ಹೇಳಿದ್ದು: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು. ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವನು. ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ.” (ಯೋಹಾನ 14:12) ಸ್ವಲ್ಪ ಸಮಯದೊಳಗೆ, ಸಾ.ಶ. 33ರ ಪಂಚಾಶತ್ತಮ ದಿನದಲ್ಲಿ ಯೇಸು ತನ್ನ ಶಿಷ್ಯರ ಮೇಲೆ ಪವಿತ್ರಾತ್ಮವನ್ನು ಸುರಿಸಲಾಗಿ, ‘ದೇವರು ಎಬ್ಬಿಸಿದ ಈ ಯೇಸು’ ವಿನ ಕುರಿತಾಗಿ ಚಕಿತಗೊಳಿಸುವ ವಾರ್ತೆ ಯೆಹೂದ್ಯರಿಗೂ ಸಾರಲ್ಪಡತೊಡಗಿತು. ಬಳಿಕ, ಸಮಾರ್ಯದವರು ಸಹಾ ದೇವರ ವಾಕ್ಯವನ್ನು ಅಂಗೀಕರಿಸಿ ದೇವರಾತ್ಮವನ್ನು ಪಡೆಯ ತೊಡಗಿದರು. (ಅಪೋ. 2:32; 8:14-17) ಆ ಬಳಿಕ, ಸಾ.ಶ. 36 ರಲ್ಲಿ ಪೇತ್ರನು ಕೊರ್ನೇಲ್ಯನಿಗೂ ಅವನ ಮನೆಯಲ್ಲಿ ನೆರೆದುಬಂದಿದ್ದ ಇತರ ಅನ್ಯರಿಗೂ ಸಾರಿದರು. ಹೀಗೆ, ಯೇಸುವಿನ ಕುರಿತ ಸುವಾರ್ತೆ “ಅನ್ಯಜನರಲ್ಲಿ” ಅಂದರೆ ಯೆಹೂದ್ಯೇತರರಲ್ಲಿ “ಪ್ರಸಿದ್ಧಿ” ಆಗಿ ಅವರೂ ಪವಿತ್ರಾತ್ಮದಿಂದ ಅಭಿಷಿಕ್ತರಾದರು.
15. ಒಂದನೇ ಶತಮಾನದ ಕ್ರೈಸ್ತರು ದಿವ್ಯಭಕ್ತಿಯ ಪವಿತ್ರ ರಹಸ್ಯವನ್ನು ಚೆನ್ನಾಗಿ ಕಲಿತಿದರ್ದೆಂದು ಯಾವುದು ರುಜುಮಾಡುತ್ತದೆ?
15. ಅಪೋಸ್ತಲರ ಕೃತ್ಯ 12:24 ರಲ್ಲಿ ವರದಿಯಾಗಿರುವಂತೆ, “ಯೆಹೋವನ ವಾಕ್ಯ ಹಬ್ಬಿ ಹೆಚ್ಚುತ್ತಾ ಬಂತು.” ಉತ್ತರ ಗ್ರೀಸ್ನಲ್ಲಿ ವಿರೋಧಿಗಳು ಇಂದು ಕೂಗಾಡುವಂತೆಯೇ ಕೂಗಾಡಿದರೆಂದು ಅಪೋಸ್ತಲರ ಕೃತ್ಯ 17:6 ತಿಳಿಸುತ್ತದೆ: “ಲೋಕವನ್ನು ಅಲ್ಲಕಲ್ಲೋಲ ಮಾಡಿದ ಮನುಷ್ಯರು ಇಲ್ಲಿಗೂ ಬಂದಿದ್ದಾರೆ.” ಮುಂದಿನ 30 ವರ್ಷಗಳೊಳೆಗೆ ಪೌಲನು ರೋಮಿನಿಂದ, “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟ ಸುವಾರ್ತೆಯ” ಕುರಿತು ಬರೆದನು. (ಕೊಲೊಸ್ಸೆ 1:23) ಆ ಸಮಯದ ಕ್ರೈಸರು ದಿವ್ಯಭಕ್ತಿಯ ಪವಿತ್ರ ರಹಸ್ಯವನ್ನು ಚೆನ್ನಾಗಿ ಕಲಿತಿದ್ದರು. ಮತ್ತು ಅದನ್ನು ಎಷ್ಟು ಆಸಕ್ತಿಯಿಂದ ಅವರು ಪ್ರಯೋಗಿಸಿದರು! ನಾವೂ ಅವರಂತೆಯೇ, ರಾಜ್ಯ ಸಾರುವಿಕೆಯ ಪರಮಾವಧಿಯ ಈ ಸಮಯದಲ್ಲಿ ಅದನ್ನು ಕಲಿತು ಅನ್ವಯಿಸುವಂತಾಗಲಿ!
16. ಪವಿತ್ರ ರಹಸ್ಯದ ಐದನೆಯ ಮುಖ ಯಾವುದು, ಮತ್ತು ಯಾವ ಚಟುವಟಿಕೆ ಅದನ್ನು ಸ್ಪಷ್ಟಪಡಿಸಿತು?
16. ಆ ಪ್ರಥಮ ಶತಕದ ಸಾರುವಿಕೆಗೆ ಪ್ರತಿಯಾಗಿ, 1 ತಿಮೋಥಿ 3:16 ರ ಪವಿತ್ರ ರಹಸ್ಯದ ಐದನೆಯ ಮುಖ ಗಮನಾರ್ಹವಾಗಿ ಪ್ರತ್ಯಕ್ಷವಾಗುತ್ತದೆ. ಈಗ ಯೇಸು, “ಲೋಕದಲ್ಲಿ ನಂಬಲ್ಪಟ್ಟನು.” ಇದು ಸೌಲ ಮತ್ತು ತಿಮೋಥಿಯನ್ನೊಳಗೊಂಡ ಆಸಕ್ತ ಮಿಶನೆರಿಗಳ ಕ್ರೈಸ್ತ ಸದೃಶ ದಿವ್ಯ ಭಕ್ತಿಯ ಫಲವಾಗಿತ್ತು. ಅವರು ಸುವಾರ್ತೆಯನ್ನು ಏಶ್ಯಾಮೈನರ್, ಯುರೋಪ್ ಮತ್ತು ಪ್ರಾಯಶ: ಸ್ಪೆಯ್ನ್ ದೇಶದ ತನಕವೂ ಕೊಂಡುಹೋಗಿದ್ದರು. ಮತ್ತು ಪೇತ್ರನು ಬಬಿಲೋನಿನಲ್ಲಿ ಸೇವೆಮಾಡುತ್ತಿದ್ದಾಗ ದೀಕ್ಷಾಸ್ನಾನ ಪಡೆದ ಐತಿಯೋಪ್ಯನ ಬಾಯಿಯ ಮೂಲಕ ಸುವಾರ್ತೆಯು ಪೂರ್ವ ಆಫ್ರಿಕಕ್ಕೂ ಮುಟ್ಟಿತು.
17. ಆಧುನಿಕ ಲೋಕದಲ್ಲೆಲ್ಲಾ ಯೇಸು ನಂಬಲ್ಪಟ್ಟಿರುವುದೇಕೆ?
17. ನಮ್ಮ ದಿನಗಳ ವಿಷಯದಲ್ಲೀನು? 1919 ರಿಂದ ಹಿಡಿದು ಅಭಿಷಿಕ್ತ ಉಳಿಕೆಯವರು ಆದರ್ಶರೂಪವಾದ ದಿವ್ಯಭಕ್ತಿಯನ್ನು ತೋರಿಸುತ್ತಾರೆ. ಈ ಅಭಿಷಿಕ್ತರು ಯೇಸು ಇಟ್ಟ ನಂಬಿಕೆಯ ಮೇಲೆ ಸ್ಥಿರವಾಗಿ ಕಟ್ಟಿದ್ದಾರೆ. ವಿಶೇಷವಾಗಿ 1935 ರಿಂದ ಹಿಡಿದು ಅವರು ಒಂದು ಮಹಾ ಸಮೂಹವನ್ನು ಒಟ್ಟುಗೂಡಿಸ ತೊಡಗಿದ್ದಾರೆ. ಈ ಮಹಾ ಸಮೂಹದವರು “ಮಹಾ ಸಂಕಟವನ್ನು” ಪಾರಾಗಿ ಪ್ರಮೋದವನವಾದ ಭೂಮಿಯಲ್ಲಿ ಅನಂತ ಜೀವನವನ್ನು ಅನುಭವಿಸುವ ಪ್ರತೀಕ್ಷೆಯಲ್ಲಿ ಸಂತೋಷಿಸುತ್ತಾರೆ. (ಪ್ರಕಟನೆ 7:9, 14) ಹೀಗೆ, ಯೇಸುವಿನ ಮೇಲೆ ಕೇಂದ್ರೀಕೃತವಾಗಿರುವ ಸುವಾರ್ತೆಯು ಲೋಕದಲ್ಲೆಲ್ಲಾ ನಂಬಲ್ಪಡುತ್ತಾ ಇದೆ. ದಿವ್ಯಭಕ್ತಿ ತೋರಿಸುತ್ತಾ, 37 ಲಕ್ಷಕ್ಕೂ ಹೆಚ್ಚು ಯೆಹೋವನ ಸಾಕ್ಷಿಗಳು ಈಗ ಲೋಕವ್ಯಾಪಕವಾಗಿ ಸಾರುತ್ತಾ ವೃದ್ಧಿಯಾಗುತ್ತಾ ಹೋಗುತ್ತಿದ್ದಾರೆ!
18. ಯೇಸು “ಪ್ರಭಾವದಿಂದ ಮೇಲೆ ಸ್ವೀಕೃತ” ನಾದದ್ದು ಹೇಗೆ?
18. ಪವಿತ್ರ ರಹಸ್ಯದ ಇನ್ನೊಂದು ಮುಖ, ಆರನೆಯ ಮುಖ ಉಳಿದಿದೆ: “ಯೇಸು ಪ್ರಭಾವದಿಂದ ಮೇಲೆ ಸೀಕೃತನಾದನು.” ಆತ್ಮದಲ್ಲಿ ಜೀವಪಡೆದ 40 ದಿನಗಳಲ್ಲಿ ಯೇಸು ಮಾಂಸಿಕವಾಗಿ ದೇಹತಾಳಿ, ತನ್ನ ಶಿಷ್ಯರಿಗೆ ತೋರಿಸಿಕೊಳ್ಳುತ್ತಾ, ಅವರಿಗೆ “ದೇವರ ರಾಜ್ಯದ ವಿಷಯವಾದ ಸಂಗತಿಗಳನ್ನು” ತಿಳಿಸಿದನು. ಬಳಿಕ ಅವನು ಸ್ವರ್ಗಕ್ಕೇರಿ ಹೋದನು. (ಅಪೋ. 1:3, 6-9) ಹೀಗೆ, ಯೋಹಾನ 17:1-5 ರಲ್ಲಿ ದಾಖಲೆಯಾಗಿರುವ ಅವನ ಈ ಪ್ರಾರ್ಥನೆಗೆ ಉತ್ತರ ಲಭಿಸಿತು. “ ತಂದೆಯೇ, . . .ನಿನ್ನ ಮಗನನ್ನು ಮಹಿಮೆಪಡಿಸು, ಆಗ ಮಗನು ನಿನ್ನನ್ನು ಮಹಿಮೆಪಡಿಸುವದಕ್ಕಾಗುವದು. . . .ನಿನ್ನನ್ನು ಭೂಲೋಕದಲ್ಲಿ ಮಹಿಮೆಪಡಿಸಿದೆನು. ಈಗ ತಂದೆಯೇ, ನೀನು ನಿನ್ನ ಬಳಿಯಲ್ಲಿ ನನ್ನನ್ನು ಮಹಿಮೆಪಡಿಸು; ಲೋಕ ಉಂಟಾಗುವುದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದಲೇ ನನ್ನನ್ನು ಮಹಿಮೆ ಪಡಿಸು.”
19. ಯೇಸು ಸ್ವರ್ಗಕ್ಕೆ ಹಿಂದಿರುಗಿದಾಗ ಅಲ್ಲಿ ಏನು ನಡೆದಿದ್ದಿರಬೇಕು?
19. ಯೇಸು ಸ್ವರ್ಗಕ್ಕೆ ಹಿಂದಿರುಗಿ ಹೋದಾಗ ಎಂಥಾ ಮಹಾ ಸಂತೋಷ ಅಲ್ಲಿದ್ದಿರಬೇಕು! ಬಹು ಪೂರ್ವದಲ್ಲಿ ಯೆಹೋವನು ಭೂಮಿಯನ್ನು ಸ್ಥಾಪಿಸಿದಾಗ, “ದೇವಕುಮಾರರೆಲ್ಲರೂ ಆನಂದ ಘೋಷಮಾಡಿದರು.” (ಯೋಬ 38:7) ಆದರೆ ಈಗ, ಯೆಹೋವನ ಪರಮಾಧಿಕಾರದ ಕರ್ತವ್ಯನಿಷ್ಟ ವೀರನನ್ನು ತಮ್ಮ ಮಧ್ಯ ಪುನ: ಪಡೆಯಲು ಆ ದೂತ ಸೈನ್ಯಗಳು ಎಷ್ಟೋ ಹೆಚ್ಚಾಗಿ ಸಂತೋಷಿಸಿದ್ದಿರಬೇಕು!
20. ಯೇಸು ಅಷ್ಟು ಶ್ರೇಷ್ಟ ಹೆಸರನ್ನು ಏಕೆ ಹೊಂದಿದನು, ಮತ್ತು ಭೂಮಿಯಲ್ಲಿದ್ದಾಗ ಅವನೇನು ಮಾಡಿದನು?
20. ಇಬ್ರಿಯ 1:3, 4 ರಲ್ಲಿ, ವಿಜಯಶಾಲಿಯಾದ ಯೇಸುವಿನ ಕುರಿತು ಪೌಲನಂದದ್ದು: “ಪಾಪ ವಿಶುದ್ಧಿಮಾಡಿದ ಮೇಲೆ ಉನ್ನತಲೋಕದ ಮೇಲೆ ಮಹತ್ವವುಳ್ಳ ದೇವರ ಬಲಗಡೆಯಲ್ಲಿ ಆಸನಾರೂಢನಾದನು. ಈತನು ದೇವದೂತರಿಗಿಂತಲೂ ಉತ್ತಮನಾದನು. ಅವರಿಗಿಂತ ಶ್ರೇಷ್ಟವಾದ ಹೆಸರನ್ನು ಹೊಂದಿದನಲ್ಲಾ.” ಅನೀತಿಯನ್ನು ಜಯಿಸಿದ ಕಾರಣ ಕ್ರಿಸ್ತನು ಆ ಹೆಸರನ್ನು ಪಡೆದನು. ಈ ದೇವಪುತ್ರನು ಈ ಭೂಮಿಯಲ್ಲಿ ದಿವ್ಯಭಕ್ತಿಯ ಮಾರ್ಗವನ್ನು ನಿಶ್ಚಯವಾಗಿಯೂ ತೆರೆದನು. ನಿತ್ಯಜೀವ ಪಡೆಯಲಿರುವ ಇತರರಿಗೂ ಅವನು ಮಾದರಿಯನ್ನಿಟ್ಟನು. ಸ್ವರ್ಗದಲ್ಲಿ ದೇವರ ಬಲಪಕ್ಕಕ್ಕೆ ಯೇಸು ಎತ್ತಲ್ಪಟ್ಟದ್ದರೊಂದಿಗೆ ಈ ದಿವ್ಯಭಕ್ತಿಯ ಪವಿತ್ರ ರಹಸ್ಯವು ಅದರ ಎಲ್ಲಾ ಮುಖಗಳೊಂದಿಗೆ ಪ್ರಕಟಿಸಲ್ಪಟ್ಟಿತು. (w90 1/15)
ನಿಮ್ಮ ಉತ್ತರವೇನು?
◻ “ದಿವ್ಯಭಕ್ತಿ” ಎಂದರೇನು?
◻ ಯೇಸು “ಶರೀರದಲ್ಲಿ ಕಾಣಿಸಲ್ಪಟ್ಟದ್ದು” ಮತ್ತು ಬಳಿಕ “ಆತ್ಮದಲ್ಲಿ ನೀತಿವಂತನೆಂದು ಪ್ರಕಟಿಸಲ್ಪಟ್ಟದ್ದು” ಹೇಗೆ?
◻ ಯೇಸು ಯಾವ ದೇವದೂತರಿಗೆ ಕಾಣಿಸಿಕೊಂಡನು ಮತ್ತು ಯಾವ ವಾರ್ತೆ ಕೊಟ್ಟನು?
◻ ಕ್ರಿಸ್ತನು “ಅನ್ಯ ಜನರಲ್ಲಿ ಪ್ರಸಿದ್ಧಿ” ಮಾಡಲ್ಪಟ್ಟದ್ದು ಮತ್ತು “ಲೋಕದಲ್ಲಿ ನಂಬಲ್ಪಟ್ಟದ್ದು” ಹೇಗೆ?
◻ ಯೇಸು ಯಾವಾಗ “ಪ್ರಭಾವದಿಂದ ಮೇಲೆ ಸ್ವೀಕೃತ” ನಾದನು ಮತ್ತು ದಿವ್ಯಭಕ್ತಿಯ ಕುರಿತು ಏನು ಮಾಡಿದ ಬಳಿಕ?