ಯಾವ ವಿಧದ ಭದ್ರತೆಗಾಗಿ ನೀವು ಹಾರೈಸುತ್ತೀರಿ?
ಭದ್ರತೆಯ ಕುರಿತು ವಿವಿಧ ಜನರಿಗೆ ವಿಭಿನ್ನ ವಿಚಾರಗಳು ಇರುತ್ತವೆ. ಅದನ್ನು ವಿರುದ್ಧ ಮಿಲಿಟರಿ ಶಕ್ತಿಗಳ ನಡುವಣ ಸ್ಥಿರತೆಯಾಗಿ ಕೆಲವರು ವೀಕ್ಷಿಸುತ್ತಾರೆ. ದೃಷ್ಟಾಂತಕ್ಕಾಗಿ, ಚಿಕ್ಕ ಚಿಕ್ಕ ಫಟನೆಗಳು ಬೌಗೋಲಿಕ ಪರಮಾಣು ಯುದ್ಧವಾಗಿ ಪರಿಣಮಿಸುವ ಕೇಡನ್ನು ಕಡಿಮೆಮಾಡಲು ಲೋಕ ರಂಗದ ಬಲಾಡ್ಯ ರಾಷ್ಟ್ರಗಳು ತಮ್ಮ ಯೂರೋಪಿಯನ್ ಮಿತ್ರ ರಾಷ್ಟ್ರಗಳೊಂದಿಗೆ ಕೂಡಿ ಅನೇಕ ಕ್ರಮಗಳನ್ನು ಕೈಕೊಳ್ಳಲು ಒಪ್ಪಿವೆ. ಇಂಥ ಕ್ರಮಗಳ ಬಗ್ಗೆ “ಲೋಕದ ಇತರ ಭಾಗಗಳ” ರಾಷ್ಟ್ರಗಳಲ್ಲಿ ಆಸಕ್ತಿಯ ಕೊರತೆಯ ಕುರಿತು ಸಾಕ್ಟ್ಹಾಮ್ ಇಂಟರ್ನೇಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಯಿಯರ್ಬುಕ್ 1990 ಆಶ್ಚರ್ಯವನ್ನು ವ್ಯಕ್ತಪಡಿಸಿದೆ.
ಆದರೂ, ಬಡದೇಶಗಳಲ್ಲಿ ಜೀವಿಸುವ ಲಕ್ಷಾಂತರ ಜನರಿಗೆ ಆಹಾರ ಮತ್ತು ಆರೋಗ್ಯ ರಕ್ಷಣೆಯೇ “ಭದ್ರತೆ” ಆಗಿರುತ್ತದೆ. “‘ಶಾಂತಿ ಮತ್ತು ಭದ್ರತೆಯ’ ಕುರಿತು ಆಲೋಚಿಸುವಾಗ,” ರಾಜನೀತಿ ತಜ್ಞ ಯಶ್ ತಂಡನ್ ವಿವರಿಸುವುದು, “ಪ್ರಬಲವಾದ ಪಾಶ್ಚಿಮಾತ್ಯ ಸಂಸ್ಕ್ರತಿಯಲ್ಲಿ ಸಾಮಾನ್ಯವಾಗಿರುವ ಕಲ್ಪನೆಗಳು ಮನಸ್ಸಿಗೆ ಬರುತ್ತವೆ. . . . ‘ಭದ್ರತೆ’ಯನ್ನು ಶಸ್ತ್ರಗಳ ಮತ್ತು ನಿಶಸ್ತ್ರೀಕರಣದ ವಿಷಯವಾಗಿ ನೋಡಲಾಗುತ್ತದೆ, ಇದು ಆಹಾರ ಮತ್ತು ಆಶ್ರಯಗಳಿಲ್ಲದ ಲೋಕದ ಜನಸಂಖ್ಯೆಯ ಮೂರನೆಯ ಎರಡಂಶ ಜನತೆಗೆ ಸಂಬಂಧಿಸಿದ ಭದ್ರತೆಗಿಂತ ಬೇರೆಯಾಗಿದೆ.”
ಬೈಬಲಾದರೋ, ದೇವರ ರಾಜ್ಯದ ಕೆಳಗೆ ಯುದ್ಧವು ಇರಲಾರದೆಂದು ವಚನಕೊಡುತ್ತದೆ. “ಲೋಕದ ಎಲ್ಲಾ ಭಾಗಗಳಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ. ಬಿಲ್ಲುಗಳನ್ನೂ ಭಲ್ಲೆಯಗಳನ್ನೂ ಮುರಿದು ಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ.” (ಕೀರ್ತನೆ 46:9; ಯೆಶಾಯ 2:4) ದೈಹಿಕ ಅನಾರೋಗ್ಯವು ಗತಿಸಿಹೋದ ಸಂಗತಿಯಾಗಿರುವುದು: “ಯಾವ ನಿವಾಸಿಯೂ ತಾನು ಅಸ್ವಸ್ಥನೆಂದು ಹೇಳನು. ಅಲ್ಲಿನ ಜನರ ಪಾಪವು ಪರಿಹಾರವಾಗುವುದು.”—ಯೆಶಾಯ 33:24.
ಆ ರಾಜ್ಯದ ಕೆಳಗೆ ಆರ್ಥಿಕ ಅಭದ್ರತೆಯು ಇನ್ನು ಮುಂದೆ ಯಾರನ್ನೂ ಬೆದರಿಸದು. “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು. ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನ ವಶವಾಗದು.”—ಯೆಶಾಯ 65:21, 22.
ಅಧಿಕ ಮಹತ್ವವಾಗಿಯಾದರೋ ರಾಜ್ಯವು ಶಾಂತಿ ಮತ್ತು ಭದ್ರತೆಗಾಗಿರುವ ಮೂಲಭೂತ ಕಾರಣವನ್ನು ತೆಗೆದುಹಾಕುವುದು. ಮನುಷ್ಯನ ಅಯಶಸ್ವಿ ಹಾಗೂ ದಬ್ಬಾಳಿಕೆಯ ಸರಕಾರಗಳ ದೀರ್ಘ ಇತಿಹಾಸದ ಹಿಂದುಗಡೆ ಇದ್ದ ಆ ವ್ಯಕ್ತಿಯಾದರೂ ಯಾರು? ದೇವರು ಸಕಾರಣದಿಂದಲೇ ಅವನ್ನು ಅಸ್ತಿತ್ವದಲ್ಲಿ ಇರುವಂತೆ ಬಿಟ್ಟರೂ, ಅದಕ್ಕೆ ಹೊಣೆಗಾರನಾಗಿರುವವನು ಸೈತಾನನೇ, ಯಾಕಂದರೆ ‘ಲೋಕವೆಲ್ಲವು ಅವನ ವಶದಲ್ಲಿ ಬಿದಿದ್ದೆ’ ಎಂದು ಬೈಬಲ್ ಹೇಳುತ್ತದೆ.—1 ಯೋಹಾನ 5:19.
ದೇವರ ರಾಜ್ಯದ ಕೆಳಗೆ, ಪೌಲನು ರೋಮಾಪುರದವರಿಗೆ ಬರೆದ ಮಾತುಗಳು ಕೊನೆಗೆ ನೆರವೇರಿಕೆಯನ್ನು ಪಡೆಯುವಾಗ, ಅದೆಂಥ ಪರಿಹಾರವು ಅಲ್ಲಿರುವುದು: “ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುವನು.” (ರೋಮಾಪುರ 16:20) ದೇವರ ಸ್ವರ್ಗೀಯ ರಾಜ್ಯವು ಮಾತ್ರವೇ, ಅರಸನಾದ ಯೇಸು ಕ್ರಿಸ್ತನ ಕೈಕೆಳಗೆ, ಅಂಥ ಒಂದು ವಿಷಯವನ್ನು ಪೂರೈಸಬಲ್ಲದು. ಆದಕಾರಣ, ಆ ರಾಜ್ಯದ ಕೆಳಗೆ ಮಾತ್ರವೇ ಭೂಮಿಯು ಒಂದು ಪರದೈಸವಾಗಿ ರೂಪಾಂತರಗೊಳ್ಳುವುದು.—ಆದಿಕಾಂಡ 1:28; ಲೂಕ 23:43.
ಹೌದು, ಬೈಬಲ್ನಲ್ಲಿ ವಾಗ್ದಾನಿಸಲ್ಪಟ್ಟ ಭದ್ರತೆಯು ಮಾನವನಿಂದ ಯೋಜಿಸಲ್ಪಟ್ಟ ಯಾವುದೇ ಯೋಜನೆಗಿಂತ ಎಷ್ಟೋ ಶ್ರೇಷ್ಠವೂ ಬಹಳ ವ್ಯಾಪನೆಯುಳ್ಳದ್ದೂ ಆಗಿದೆ. “ಇನ್ನು ಮುಂದೆ ಮರಣವಿರುವುದಿಲ್ಲ, ಗೋಳಾಟವಾಗಲಿ ಕಷ್ಟವಾಗಲಿ ಇರುವುದಿಲ್ಲ” ಎಂದು ನಾವು ಓದುತ್ತೇವಲ್ಲಾ! (ಪ್ರಕಟನೆ 21:4) ಅಂಥ ವಾಗ್ದಾನಗಳನ್ನು ನಾವು ನಂಬಬಹುದೋ? ಹೌದು, ಯಾಕಂದರೆ ಅವು ಸರ್ವಶಕ್ತನಾದ ನಿರ್ಮಾಣಿಕ ಯೆಹೋವ ದೇವರಿಂದ ಬಂದಿವೆ, ಆತನು ಹೀಗೂ ಘೋಷಿಸಿದ್ದಾನೆ: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂತಿರುಗುವುದಿಲ್ಲ.” (ಯೆಶಾಯ 55:11) ಯೆಹೋವ ದೇವರು ತನ್ನ ಶಾಶ್ವತ ಪರಮಾಧಿಕಾರದ ನಿರ್ದೋಷೀಕರಣದಲ್ಲಿ, ಮಾನವರನ್ನು ಒಂದು ಬಾಳುವ ಮತ್ತು ಸಂತೋಷಕರ ಶಾಂತಿ ಮತ್ತು ಭದ್ರತೆಗೆ ತರುವುದಕ್ಕಾಗಿ ಈಗ ಸಹಾ ಕೈಕೊಂಡಿರುವ ಹೆಜ್ಜೆಗಳಲ್ಲಿ ನಿಶ್ಚಿತ ಸಾಫಲ್ಯವು ತೋರಿಬಂದಿದೆ. (w92 3⁄1)