ದೇವ-ದತ್ತ ಸ್ವಾತಂತ್ರ್ಯಕ್ಕಾಗಿ ಸ್ಥಿರವಾಗಿ ನಿಲ್ಲಿರಿ!
“ಕ್ರಿಸ್ತನು ನಮ್ಮನ್ನು ಸ್ವತಂತ್ರದಲ್ಲಿರಿಸಬೇಕೆಂದು ನಮಗೆ ಬಿಡುಗಡೆ ಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ; ದಾಸತ್ವದ ನೊಗದಲ್ಲಿ ತಿರಿಗಿ ಸಿಕ್ಕಿಕೊಳ್ಳಬೇಡಿರಿ.”—ಗಲಾತ್ಯ 5:1.
1, 2. ದೇವ-ದತ್ತ ಸ್ವಾತಂತ್ರ್ಯವು ಹೇಗೆ ಕಳಕೊಳ್ಳಲ್ಪಟ್ಟಿತು?
ಯೆಹೋವನ ಜನರು ಸ್ವತಂತ್ರರಾಗಿದ್ದಾರೆ. ಆದರೆ ಅವರು ದೇವರಿಂದ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕೆಂದು ಬಯಸುವುದಿಲ್ಲ. ಯಾಕಂದರೆ ಅದು ಸೈತಾನನಿಗೆ ದಾಸತ್ವದಲ್ಲಿರುವ ಅರ್ಥದಲ್ಲಿರುವುದು. ಯೆಹೋವನೊಂದಿಗಿನ ಅವರ ನಿಕಟ ಸಂಬಂಧವನ್ನು ಅವರು ಆದರಿಸುತ್ತಾರೆ ಮತ್ತು ಅವನು ಅವರಿಗೆ ಕೊಡುವ ಸ್ವಾತಂತ್ರ್ಯದಲ್ಲಿ ಅವರು ಹರ್ಷಿಸುತ್ತಾರೆ.
2 ನಮ್ಮ ಮೊದಲ ಹೆತ್ತವರು, ಆದಾಮ ಮತ್ತು ಹವ್ವರು, ಪಾಪ ಮಾಡುವ ಮೂಲಕ ದೇವ-ದತ್ತ ಸ್ವಾತಂತ್ರ್ಯವನ್ನು ಕಳಕೊಂಡರು ಮತ್ತು ಪಾಪ, ಮರಣ ಹಾಗೂ ಪಿಶಾಚನಿಗೆ ದಾಸರಾದರು. (ಆದಿಕಾಂಡ 3:1-19; ರೋಮಾಪುರ 5:12) ಅಷ್ಟೇ ಅಲ್ಲ, ಸೈತಾನನು ಇಡೀ ಲೋಕವನ್ನು ನಾಶನದ ಪಾಪಪೂರ್ಣ ಮಾರ್ಗದ ಮೇಲೆ ಇರಿಸಿದನು! ಆದರೆ ದೇವ-ದತ್ತ ಸ್ವಾತಂತ್ರ್ಯಕ್ಕಾಗಿ ಸ್ಥಿರವಾಗಿ ನಿಲ್ಲುವವರು ನಿತ್ಯ ಜೀವದ ಮಾರ್ಗದಲ್ಲಿ ನಡೆಯುತ್ತಾರೆ.—ಮತ್ತಾಯ 7:13, 14; 1 ಯೋಹಾನ 5:19.
ದಾಸತ್ವದಿಂದ ಸ್ವಾತಂತ್ರ್ಯ
3. ಏದೆನಿನಲ್ಲಿ ದೇವರು ಯಾವ ನಿರೀಕ್ಷೆಯನ್ನು ಎತ್ತಿಹಿಡಿದನು?
3 ಯೆಹೋವನ ಹೆಸರನ್ನು ಗೌರವಿಸುವ ಮಾನವರು ಸೈತಾನ, ಪಾಪ, ಮತ್ತು ಮರಣದ ದಾಸತ್ವದಿಂದ ಮುಕ್ತರಾಗಿರುವರು ಎಂದು ಆತನು ಉದ್ದೇಶಿಸಿದ್ದನು. ಏದೆನಿನಲ್ಲಿ ಸೈತಾನನು ಉಪಯೋಗಿಸಿದ ಸರ್ಪಕ್ಕೆ ಹೀಗಂದಾಗ ಆ ನಿರೀಕ್ಷೆಯು ಎತ್ತಿಹಿಡಿಯಲಾಯಿತು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವುದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:14, 15) ಯೆಹೋವನ ಸ್ವರ್ಗೀಯ ಸಂಸ್ಥೆಯಿಂದ ಬಂದ ಸಂತಾನವು, ಯೇಸು ಕ್ರಿಸ್ತನು ಕಂಭದ ಮೇಲೆ ಸತ್ತಾಗ ಹಿಮ್ಮಡಿಯ ಕಚ್ಚುವಿಕೆಯನ್ನು ಅನುಭವಿಸಿದನು. ಆದರೆ ಈ ರೀತಿಯಲ್ಲಿ, ನಂಬುವ ಮಾನವ ಕುಲವನ್ನು ಪಾಪ ಮತ್ತು ಮರಣದಿಂದ ಬಿಡಿಸಲು ದೇವರು ಒಂದು ಪ್ರಾಯಶ್ಚಿತ್ತ ಯಜ್ಞವನ್ನು ಒದಗಿಸಿದನು. (ಮತ್ತಾಯ 20:28; ಯೋಹಾನ 3:16) ತಕ್ಕ ಸಮಯದಲ್ಲಿ, ಪುರಾತನ ಸರ್ಪವಾದ ಸೈತಾನನ ತಲೆಯನ್ನು ಯೇಸುವು ಜಜ್ಜಲಿರುವನು.—ಪ್ರಕಟನೆ 12:9.
4. ಅಬ್ರಹಾಮನಿಂದ ಯಾವ ಸ್ವಾತಂತ್ರ್ಯವು ಆನಂದಿಸಲ್ಪಟ್ಟಿತ್ತು, ಮತ್ತು ಯೆಹೋವನು ಅವನಿಗೆ ಏನು ವಾಗ್ದಾನಿಸಿದನು?
4 ಏದೆನಿನಲ್ಲಿ ಆಶ್ವಾಸನೆಯನ್ನು ನೀಡಿದ ಸುಮಾರು 2,000 ವರ್ಷಗಳ ನಂತರ “ದೇವರ ಸ್ನೇಹಿತನಾದ” ಅಬ್ರಹಾಮನು ದೇವರಿಗೆ ವಿಧೇಯನಾಗಿ, ಇನ್ನೊಂದು ಊರಿಗೆ ಹೋಗಲು ಊರ್ ಪಟ್ಟಣವನ್ನು ಅಗಲಿಹೋದನು. (ಯಾಕೋಬ 2:23; ಇಬ್ರಿಯ 11:8) ಹೀಗೆ, ಅವನು ದೇವ-ದತ್ತ ಸ್ವಾತಂತ್ರ್ಯವನ್ನು ಪಡೆದನು ಮತ್ತು ಇನ್ನು ಮುಂದೆ ಸುಳ್ಳು ಧರ್ಮ, ಭೃಷ್ಟ ರಾಜಕೀಯ ಮತ್ತು ದುರಾಶೆಯ ವಾಣಿಜ್ಯದ ಸೈತಾನನ ಲೋಕದ ಒಬ್ಬ ಗುಲಾಮನಾಗಿ ಜೀವಿಸಲಿಲ್ಲ. ಆ ಏದೆನಿನ ಪ್ರವಾದನೆಗೆ, ಅಬ್ರಹಾಮ ಮತ್ತು ಅವನ ಸಂತಾನದ ಮೂಲಕ ಎಲ್ಲಾ ಕುಟುಂಬಗಳು ಮತ್ತು ಜನಾಂಗಗಳು ತಮ್ಮನ್ನು ಸ್ವತಃ ಆಶೀರ್ವದಿಸಿಕೊಳ್ಳುವವು ಎಂಬ ವಾಗ್ದಾನವನ್ನು ಕೂಡಿಸಿದನು. (ಆದಿಕಾಂಡ 12:3; 22:17, 18) ಅಬ್ರಹಾಮನು ದೋಷಮುಕ್ತನಾಗಿದ್ದನು ಯಾಕಂದರೆ ‘ಅಬ್ರಹಾಮನು ಯೆಹೋವನನ್ನು ನಂಬಿದನು; ಯೆಹೋವನು ಅವನ ನಂಬಿಕೆಯನ್ನು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಿದನು.’ (ಆದಿಕಾಂಡ 15:6) ಇಂದು, ಸೈತಾನನ ಅಧಿಕಾರದಲ್ಲಿ ಬಿದ್ದಿರುವ ಲೋಕದ ದಾಸತ್ವದಿಂದ ಮತ್ತು ಖಂಡನೆಯಿಂದ, ಯೆಹೋವನೊಂದಿಗೆ ಒಂದು ನಿಕಟ ಸಂಬಂಧವು ತದ್ರೀತಿಯ ದೇವ-ದತ್ತ ಸ್ವಾತಂತ್ರ್ಯವನ್ನು ತರುವುದು.
ಆಕರ್ಷಕ ಶಕಿಯ್ತಿರುವ ಒಂದು ಸಾಂಕೇತಿಕ ನಾಟಕ
5. ಇಸಾಕನ ಜನನವು ಯಾವ ಪರಿಸ್ಥಿತಿಗಳೊಂದಿಗೆ ಜೋಡಿಸಲ್ಪಟ್ಟಿತ್ತು?
5 ಅಬ್ರಹಾಮನು ಒಂದು ಸಂತಾನವನ್ನು ಪಡೆಯಲು ಶಕ್ಯನಾಗುವಂತೆ, ಬಂಜೆಯಾದ ಅವನ ಹೆಂಡತಿ ಸಾರಳು, ಅವಳ ದಾಸಿ ಹಾಗರಳನ್ನು ಒಂದು ಮಗುವನ್ನು ಹೆರುವವಳಾಗುವಂತೆ ಅಬ್ರಹಾಮನಿಗೆ ಒಪ್ಪಿಸಿದಳು. ಅವಳ ಮೂಲಕವಾಗಿ ಅಬ್ರಹಾಮನು ಇಷ್ಮಾಯೇಲನಿಗೆ ತಂದೆಯಾದನು, ಆದರೆ ದೇವರು ಅವನನ್ನು ವಾಗ್ದಾತ್ತ ಸಂತಾನವಾಗಿ ಆಯ್ಕೆ ಮಾಡಲಿಲ್ಲ. ಅದರ ಬದಲು, ಅಬ್ರಹಾಮನು 100 ವರ್ಷದವನು ಮತ್ತು ಸಾರಳು 90 ವರ್ಷದವಳಾದಾಗ, ಇಸಾಕನೆಂದು ಹೆಸರಿಸಲ್ಪಟ್ಟ ಒಬ್ಬ ಮಗನನ್ನು ಪಡೆಯಲು ಅವರಿಗೆ ಶಕ್ಯರನ್ನಾಗಿ ಮಾಡಿದನು. ಇಷ್ಮಾಯೇಲನು ಇಸಾಕನ ಗೇಲಿ ಮಾಡಿದಾಗ, ಹಾಗರಳು ಮತ್ತು ಅವಳ ಮಗನು ಹೊರಗೆ ಅಟ್ಟಲ್ಪಟ್ಟರು, ಹೀಗೆ ಸ್ವತಂತ್ರ ಸ್ತ್ರೀಯಾದ ಸಾರಳ ಮೂಲಕವಾಗಿರುವ ಅಬ್ರಹಾಮನ ಮಗನು, ಅಬ್ರಹಾಮನ ನಿರ್ವಿವಾದದ ಸಂತಾನದವನಾಗಿ ಇರುವವನಾದನು. ಅಬ್ರಹಾಮನಂತೆ ಇಸಾಕನೂ ನಂಬಿಕೆಯನ್ನು ಪ್ರದರ್ಶಿಸಿದನು ಮತ್ತು ದೇವ-ದತ್ತ ಸ್ವಾತಂತ್ರ್ಯದಲ್ಲಿ ಆನಂದಿಸಿದನು.—ಆದಿಕಾಂಡ 16:1-16; 21:1-21; 25:5-11.
6, 7. ಸುಳ್ಳು ಬೋಧಕರು ಯಾವುದರ ಕುರಿತಾಗಿ ಗಲಾತ್ಯದ ಕೆಲವು ಕ್ರೈಸ್ತರ ಮನವೊಡಂಬಡಿಸಿದರು, ಮತ್ತು ಪೌಲನು ಏನನ್ನು ವಿವರಿಸಿದನು?
6 ದೇವ-ದತ್ತ ಸ್ವಾತಂತ್ರ್ಯ ಪ್ರಿಯರಿಗೆ ಈ ಘಟನೆಗಳು ತುಂಬಾ ಮಹತ್ವದ ವಿಷಯಗಳನ್ನು ಮುನ್-ಚಿತ್ರಿಸಿದವು. ಸಾ.ಶ. 50 ರಿಂದ 52 ರ ವರೆಗೆ ಗಲಾತ್ಯದಲ್ಲಿನ ಸಭೆಗಳಿಗೆ ಅಪೊಸ್ತಲ ಪೌಲನು ಬರೆದ ಪತ್ರದಿಂದ ಇದನ್ನು ಗಮನಿಸಲಾಯಿತು. ಅಷ್ಟರೊಳಗೆ, ಆಡಳಿತ ಮಂಡಲಿಯು ನಿರ್ಣಯಿಸಿತ್ತೇನಂದರೆ ಸುನ್ನತಿಯು ಕ್ರೈಸ್ತರಿಗೆ ಜರೂರಿಯದ್ದಲ್ಲ. ಆದರೆ ಅದು ಕ್ರೈಸ್ತತ್ವದ ಒಂದು ಮುಖ್ಯ ವೈಶಿಷ್ಟ್ಯವಾಗಿದೆ ಎಂದು ಸುಳ್ಳು ಬೋಧಕರು ಗಲಾತ್ಯದವರಲ್ಲಿ ಕೆಲವರ ಮನವೊಡಂಬಡಿಸಿದರು.
7 ಪೌಲನು ಗಲಾತ್ಯದವರಿಗೆ ಹೇಳಿದ್ದು: ಒಬ್ಬ ವ್ಯಕ್ತಿಯು ಯೇಸುವಿನಲ್ಲಿನ ನಂಬಿಕೆಯ ಮೂಲಕ ನೀತಿವಂತನೆಂದು ಘೋಷಿಸಲ್ಪಡುತ್ತಾನೆಯೇ ಹೊರತು, ಮೋಶೆಯ ನಿಯಮ ಶಾಸ್ತ್ರದ ಕ್ರಿಯೆಗಳಿಂದಲ್ಲ. (1:1–3:14) ಅಬ್ರಹಾಮನ ಒಡಂಬಡಿಕೆಯೊಂದಿಗೆ ಜೋಡಿಸಲ್ಪಟ್ಟ ವಾಗ್ದಾನವನ್ನು ನಿಯಮಶಾಸ್ತ್ರವು ನಿರರ್ಥಕಗೊಳಿಸಲಿಲ್ಲ, ಬದಲಾಗಿ ಅದು ಅಪರಾಧಗಳನ್ನು ಎತ್ತಿ ತೋರಿಸಿತು ಮತ್ತು ಕ್ರಿಸ್ತನಿಗೆ ನಡಿಸುವ ಕಾಯುವ ಆಳಿನಂತೆ ಅದು ಸೇವೆ ಸಲ್ಲಿಸಿತು. (3:15-25) ಅವನ ಮರಣದ ಮೂಲಕ, ನಿಯಮದ ಕೆಳಗೆ ಇರುವವರನ್ನು ಯೇಸು ಬಿಡುಗಡೆಗೊಳಿಸಿದನು, ಇದು ಅವರು ದೇವರ ಪುತ್ರರಾಗುವಂತೆ ಶಕ್ತರನ್ನಾಗಿ ಮಾಡಿತು. ಹೀಗಿರುವುದರಿಂದ ದಿವಸಗಳು, ತಿಂಗಳುಗಳು, ಕಾಲಗಳು ಮತ್ತು ವರ್ಷಗಳನ್ನು ಆಚರಿಸುವ ಒಂದು ವ್ಯವಸ್ಥೆಗೆ ಹಿಂತಿರುಗುವುದೆಂದರೆ, ದಾಸತ್ವದೊಳಗೆ ಪುನಃ ಹೋಗುವುದೆಂದರ್ಥದಲ್ಲಿರುತ್ತದೆ. (4:1-20) ಪೌಲನು ಅನಂತರ ಬರೆದದ್ದು:
8, 9. (ಎ) ಗಲಾತ್ಯ 4:21-26 ರಲ್ಲಿ ಪೌಲನು ಏನನ್ನು ಹೇಳಿದ್ದಾನೋ, ಅದನ್ನು ನಿಮ್ಮ ಸ್ವಂತ ಮಾತುಗಳಲ್ಲಿ ಸಂಕ್ಷಿಪ್ತವಾಗಿ ವಿವರಿಸಿರಿ. (ಬಿ) ಈ ಸಾಂಕೇತಿಕ ನಾಟಕದಲ್ಲಿ, ಅಬ್ರಹಾಮ ಮತ್ತು ಸಾರಳಿಂದ ಯಾರು ಯಾ ಏನು ಚಿತ್ರಿತವಾಗಿದೆ, ಮತ್ತು ವಾಗ್ದತ್ತ ಸಂತಾನ ಯಾರಾಗಿದ್ದಾನೆ?
8 “ಧರ್ಮಶಾಸ್ತ್ರಾಧೀನರಾಗುವದಕ್ಕೆ ಮನಸ್ಸುಳ್ಳವರೇ, ಧರ್ಮಶಾಸ್ತ್ರಕ್ಕೆ ಕಿವಿಗೊಡುವದಿಲ್ಲವೋ? ನನಗೆ ಹೇಳಿರಿ. ಅದರಲ್ಲಿ ಬರೆದಿರುವದೇನಂದರೆ ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು; ಒಬ್ಬನು (ಇಷ್ಮಾಯೇಲನು) ತೊತ್ತಿನಿಂದ ಹುಟ್ಟಿದವನು, ಒಬ್ಬನು (ಇಸಾಕನು) ಧರ್ಮಪತ್ನಿಯಿಂದ ಹುಟ್ಟಿದನು. ಧರ್ಮಪತ್ನಿಯ ಮಗನೋ ವಾಗ್ದಾನದ ಫಲವಾಗಿ ಹುಟ್ಟಿದನು. ಈ ಸಂಗತಿಗಳು ಉಪಮಾನವಾಗಿವೆ. ಹೇಗಂದರೆ ಆ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಗಳೇ. ಒಂದು ಒಡಂಬಡಿಕೆ [ನಿಯಮದೊಡಂಬಡಿಕೆ] ಸೀನಾಯಿ ಪರ್ವತದಿಂದ [ಎಲ್ಲಿ ದೇವರು ಇಸ್ರಾಯೇಲ್ಯರೊಂದಿಗೆ ಒಡಂಬಡಿಕೆಯನ್ನು ಉದ್ಘಾಟಿಸಿದನೋ] ಉತ್ಪನ್ನವಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದ್ದು. ಅದೇ ಹಾಗರ್. [ಸಂತಾನದ ಕುರಿತಾಗಿ ಅಬ್ರಹಾಮನೊಡನೆ ಮಾಡಿದಂತಹದ್ದು ಇನ್ನೊಂದು ಒಡಂಬಡಿಕೆಯಾಗಿದೆ.] ಹಾಗರ್ ಅಂದರೆ ಅರಬಸ್ಥಾನದಲ್ಲಿರುವ ಸೀನಾಯಿ ಪರ್ವತ. ಅವಳು ಈಗಿನ ಯೆರೂಸಲೇಮ್ ಎಂಬವಳಿಗೆ ಸರಿಬೀಳುತ್ತಾಳೆ; ಹೇಗಂದರೆ, ಈಗ ತನ್ನ ಮಕ್ಕಳ [ಅಬ್ರಹಾಮ, ಇಸಾಕ ಮತ್ತು ಯಾಕೋಬನ ವಂಶಜರು] ಸಹಿತ ದಾಸತ್ವದಲ್ಲಿದ್ದಾಳೆ. ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ.”—ಗಲಾತ್ಯ 4:21-26.
9 ಈ ಸಾಂಕೇತಿಕ ನಾಟಕದಲ್ಲಿ, ಅಬ್ರಹಾಮನು ಯೆಹೋವನನ್ನು ಚಿತ್ರಿಸಿದನು. “ಸ್ವತಂತ್ರ ಸ್ತ್ರೀ” ಸಾರಳು ದೇವರ “ಸ್ತ್ರೀ” ಯಾ ಪವಿತ್ರ ವಿಶ್ವ ಸಂಸ್ಥಾಪನೆಯನ್ನು ಚಿತ್ರಿಸಿತು. ಅದು ಸಾಂಕೇತಿಕ ಸ್ತ್ರೀ ಮತ್ತು ಮಹಾ ಅಬ್ರಹಾಮನ ಸಂತಾನವಾದ ಕ್ರಿಸ್ತನನ್ನು ಉತ್ಪಾದಿಸಿತು. (ಗಲಾತ್ಯ 3:16) ಅಶುದ್ಧ ಆರಾಧನೆ, ಪಾಪ, ಮತ್ತು ಸೈತಾನನಿಂದ ಬಿಡುಗಡೆಯ ಮಾರ್ಗವನ್ನು ತೋರಿಸಲಿಕ್ಕಾಗಿ ಯೇಸು ಸತ್ಯವನ್ನು ಕಲಿಸಿದನು ಮತ್ತು ಸುಳ್ಳು ಧರ್ಮವನ್ನು ಬಹಿರಂಗಪಡಿಸಿದನು, ಆದರೆ ಯೆರೂಸಲೇಮ್ ಮತ್ತು ಅವಳ ಮಕ್ಕಳು ಧಾರ್ಮಿಕ ದಾಸತ್ವದಲ್ಲಿಯೇ ಉಳಿದರು ಯಾಕಂದರೆ ಅವರು ಆತನನ್ನು ತಿರಸ್ಕರಿಸಿದರು. (ಮತ್ತಾಯ 23:37, 38) ಯೇಸುವಿನ ಯೆಹೂದಿ ಹಿಂಬಾಲಕರು, ಅಪರಿಪೂರ್ಣತೆ, ಪಾಪ ಮತ್ತು ಮರಣಕ್ಕೆ ಅವರ ದಾಸ್ವತವನ್ನು ತೋರಿಸುತ್ತಿದ್ದ ನಿಯಮಶಾಸ್ತ್ರದಿಂದ ಸ್ವತಂತ್ರರಾದರು. ಯೇಸುವು ದೇವರ “ಸ್ತ್ರೀ”ಯಿಂದ ಮುಂತರಲ್ಪಟ್ಟ ಮೆಸ್ಸೀಯ ರಾಜನು ಮತ್ತು ‘ಸೆರೆಯವರಿಗೆ ಬಿಡುಗಡೆಯಾಗುವದನ್ನು ಸಾರುವ’ ವಿಮೋಚಕನು ಎಂಬುದಾಗಿ ಅಂಗೀಕರಿಸುವ ಎಲ್ಲಾ ಮಾನವರು ನಿಜವಾಗಿಯೂ ಸ್ವತಂತ್ರರಾಗಿರುತ್ತಾರೆ!—ಯೆಶಾಯ 61:1, 2; ಲೂಕ 4:18, 19.
ದಾಸತ್ವದ ನೊಗವನ್ನು ಹೋಗಲಾಡಿಸಿರಿ
10, 11. ದಾಸತ್ವದ ಯಾವ ನೊಗದಿಂದ ಕ್ರಿಸ್ತನು ತನ್ನ ಹಿಂಬಾಲಕರನ್ನು ಬಿಡುಗಡೆಗೊಳಿಸಿದನು, ಮತ್ತು ಇಂದು ಯಾವ ಸರಿಹೋಲಿಕೆಗಳಿವೆ?
10 ಮಹಾ ಇಸಾಕನಾದ, ಕ್ರಿಸ್ತನೊಂದಿಗೆ ಅಬ್ರಹಾಮನ ಸಂತಾನವನ್ನು ರಚಿಸುವವರಿಗೆ, ಪೌಲನು ಹೇಳುವುದು: “ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ. . . . ಸಹೋದರರೇ, ನಾವು ಇಸಾಕನಂತೆ ವಾಗ್ದಾನದ ಫಲವಾಗಿ ಹುಟ್ಟಿದ ಮಕ್ಕಳಾಗಿದ್ದೇವೆ. ಆದರೆ ಪೂರ್ವದಲ್ಲಿ ಸ್ವಾಭಾವಿಕವಾಗಿ ಹುಟ್ಟಿದವನು [ಇಷ್ಮಾಯೇಲನು] ದೇವರಾತ್ಮಬಲದಿಂದ ಹುಟ್ಟಿದವನನ್ನು [ಇಸಾಕನು] ಹಿಂಸೆಪಡಿಸಿದಂತೆಯೇ ಈಗಲೂ ಇದೆ. . . . ನಾವು ದಾಸಿಯ ಮಕ್ಕಳಲ್ಲ, ಆ ಧರ್ಮಪತ್ನಿಯ ಮಕ್ಕಳೇ ಎಂದು ತಿಳುಕೊಳ್ಳಿರಿ. ಕ್ರಿಸ್ತನು ನಮ್ಮನ್ನು ಸ್ವತಂತ್ರದಲ್ಲಿರಿಸಿಬೇಕೆಂದು ನಮಗೆ [ನಿಯಮದಿಂದ] ಬಿಡುಗಡೆ ಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ; ದಾಸತ್ವದ ನೊಗದಲ್ಲಿ ತಿರಿಗಿ ಸಿಕ್ಕಿಕೊಳ್ಳಬೇಡಿರಿ.”—ಗಲಾತ್ಯ 4:26–5:1.
11 ಅವರು ನಿಯಮಕ್ಕೆ ಅಧೀನರಾಗುತ್ತಿದ್ದರೆ, ಯೇಸುವಿನ ಹಿಂಬಾಲಕರಲ್ಲಿ ಯಾವನೂ ದಾಸತ್ವದ ಒಂದು ನೊಗದೊಳಗೆ ಬಂಧಿಸಲ್ಪಡುತ್ತಿದ್ದನು. ಸುಳ್ಳು ಧರ್ಮ ಸದ್ಯದ ಒಂದು ದಾಸತ್ವದ ನೊಗವಾಗಿದೆ, ಮತ್ತು ಕ್ರೈಸ್ತ ಪ್ರಪಂಚವು ಪುರಾತನ ಯೆರೂಸಲೇಮ್ ಮತ್ತು ಅವಳ ಮಕ್ಕಳಿಗೆ ಸರಿಹೋಲಿಕೆಯಾಗಿರುತ್ತದೆ. ಆದರೆ ಅಭಿಷಿಕ್ತರು, ದೇವರ ಸ್ವತಂತ್ರವಾಗಿರುವ ಸ್ವರ್ಗೀಯ ಸಂಸ್ಥೆಯಾಗಿರುವ ಮೇಲಿನ ಯೆರೂಸಲೇಮಿನ ಮಕ್ಕಳಾಗಿರುತ್ತಾರೆ. ಅವರು ಮತ್ತು ಐಹಿಕ ನಿರೀಕ್ಷೆಗಳಿರುವ ಜತೆ ವಿಶ್ವಾಸಿಗಳು ಈ ಲೋಕದ ಭಾಗವಾಗಿಲ್ಲ ಮತ್ತು ಸೈತಾನನಿಗೆ ಗುಲಾಮರಾಗಿರುವುದಿಲ್ಲ. (ಯೋಹಾನ 14:30; 15:19; 17:14, 16) ಸತ್ಯದ ಮೂಲಕ ಮತ್ತು ಯೇಸುವಿನ ಯಜ್ಞದ ಮೂಲಕ ಬಿಡುಗಡೆಗೊಳಿಸಲ್ಪಟ್ಟಿರುವದರಿಂದ, ನಮ್ಮ ದೇವ-ದತ್ತ ಸ್ವಾತಂತ್ರ್ಯದಲ್ಲಿ ಸ್ಥಿರವಾಗಿ ನಿಲ್ಲೋಣ.
ದೇವ-ದತ್ತ ಸ್ವಾತಂತ್ರ್ಯತೆಗಾಗಿ ಒಂದು ನಿಲುವನ್ನು ತಕ್ಕೊಳ್ಳುವುದು
12. ವಿಶ್ವಾಸಿಗಳಿಂದ ಯಾವ ಮಾರ್ಗಕ್ರಮವು ತಕ್ಕೊಳ್ಳಲ್ಪಡುತ್ತದೆ, ಮತ್ತು ಈಗ ಏನನ್ನು ಚರ್ಚಿಸಲಾಗುವುದು?
12 ಯೆಹೋವನ ಸಾಕ್ಷಿಗಳಾಗಿ ಲಕ್ಷಾಂತರ ಮಂದಿ ಇಂದು ನಿಜ ಸ್ವಾತಂತ್ರ್ಯದಲ್ಲಿ ಆನಂದಿಸುತ್ತಾರೆ. ಹೆಚ್ಚಿನವರು “ನಿತ್ಯ ಜೀವಕ್ಕೆ ನೇಮಿಸಲ್ಪಟ್ಟಿರುವ” ಇತರ ಲಕ್ಷಾಂತರ ಮಂದಿಗಳೊಂದಿಗೆ ಬೈಬಲ್ ಅಭ್ಯಾಸಗಳು ನಡಿಸಲ್ಪಟ್ಟಿವೆ. ವಿಶ್ವಾಸಿಗಳಾದ ನಂತರ, ದೀಕ್ಷಾಸ್ನಾನ ಪಡೆಯುವ ಮೂಲಕ ಅವರು ದೇವ-ದತ್ತ ಸ್ವಾತಂತ್ರ್ಯತೆಗಾಗಿ ಒಂದು ನಿಲುವನ್ನು ತಕ್ಕೊಳ್ಳುತ್ತಾರೆ. (ಅ. ಕೃತ್ಯಗಳು 13:48; 18:8) ಆದರೆ ಕ್ರೈಸ್ತ ದೀಕ್ಷಾಸ್ನಾನಕ್ಕೆ ಮುಂಚಿತವಾಗಿ ಯಾವ ಹೆಜ್ಜೆಗಳು ತಕ್ಕೊಳ್ಳಲ್ಪಡಬೇಕು?
13. ಜ್ಞಾನ ಮತ್ತು ದೀಕ್ಷಾಸ್ನಾನದ ಮಧ್ಯೆ ಯಾವ ಸಂಬಂಧವಿದೆ?
13 ದೀಕ್ಷಾಸ್ನಾನ ಹೊಂದುವ ಮುಂಚೆ, ಒಬ್ಬ ವ್ಯಕ್ತಿ ಶಾಸ್ತ್ರವಚನಗಳ ನಿಷ್ಕೃಷ್ಟ ಜ್ಞಾನವನ್ನು ಸಂಪಾದಿಸಬೇಕು ಮತ್ತು ಅದಕ್ಕನುಸಾರ ಕಾರ್ಯ ನಡಿಸಬೇಕು. (ಎಫೆಸ್ಯ 4:13) ಆದುದರಿಂದ, ಯೇಸು ತನ್ನ ಹಿಂಬಾಲಕರಿಗೆ ಹೀಗಂದನು: “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.”—ಮತ್ತಾಯ 28:19, 20.
14. ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಪಡಕೊಳ್ಳುವುದು ಯಾವ ಜ್ಞಾನಕ್ಕಾಗಿ ಕರೆಕೊಡುತ್ತದೆ?
14 ತಂದೆಯ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆಯುವುದೆಂದರೆ, ದೇವರು ಸೃಷ್ಟಿಕರ್ತನು ಮತ್ತು ವಿಶ್ವದ ಸಾರ್ವಭೌಮನಾಗಿರುವ ಯೆಹೋವನ ಪದವಿ ಮತ್ತು ಅಧಿಕಾರವನ್ನು ಅಂಗೀಕರಿಸುವದಾಗಿದೆ. (ಆದಿಕಾಂಡ 17:1; 2 ಅರಸುಗಳು 19:15; ಪ್ರಕಟನೆ 4:11) ಮಗನ ಹೆಸರಿನಲ್ಲಿ ದೀಕ್ಷಾಸ್ನಾನವು, ಘನತೆಗೇರಿಸಲ್ಪಟ್ಟ ಒಬ್ಬ ಆತ್ಮಜೀವಿಯೂ, ಮೆಸ್ಸೀಯ ರಾಜನೂ ಎಂಬುದಾಗಿ ಕ್ರಿಸ್ತನ ಪದವಿಯನ್ನು ಮತ್ತು “ವಿಮೋಚನಾರ್ಥವಾಗಿ” ದೇವರಿಂದ ಒದಗಿಸಲ್ಪಟ್ಟವನು ಎಂದು ಅಂಗೀಕಾರ ಮಾಡುವಿಕೆಯನ್ನು ಕೇಳಿಕೊಳ್ಳುತ್ತದೆ. (1 ತಿಮೊಥಿ 2:5, 6; ದಾನಿಯೇಲ 7:13, 14; ಫಿಲಿಪ್ಪಿಯ 2:9-11) ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದವನು ತಿಳಿದುಕೊಳ್ಳುತ್ತಾನೇನಂದರೆ ಅದು ಸೃಷ್ಟಿಕಾರ್ಯದಲ್ಲಿ ಮತ್ತು ಬೈಬಲಿನ ಬರಹಗಾರರನ್ನು ಪ್ರೇರೇಪಿಸಲಿಕ್ಕಾಗಿ, ಹಾಗೂ ಇನ್ನಿತರ ರೀತಿಗಳಲ್ಲಿ ಯೆಹೋವನಿಂದ ಉಪಯೋಗಿಸಲ್ಪಟ್ಟ ದೇವರ ಕಾರ್ಯಕಾರೀ ಶಕ್ತಿಯಾಗಿರುತ್ತದೆ. (ಆದಿಕಾಂಡ 1:2; 2 ಪೇತ್ರ 1:21) ಖಂಡಿತವಾಗಿಯೂ, ದೇವರು, ಕ್ರಿಸ್ತನು ಮತ್ತು ಪವಿತ್ರಾತ್ಮನ ಕುರಿತಾಗಿ ಕಲಿಯಲು ಬಹಳಷ್ಟು ಇದೆ.
15. ದೀಕ್ಷಾಸ್ನಾನಗೊಳ್ಳುವ ಮುಂಚೆ ಒಬ್ಬ ವ್ಯಕ್ತಿಯು ನಂಬಿಕೆಯನ್ನು ಏಕೆ ಪ್ರದರ್ಶಿಸಬೇಕು?
15 ದೀಕ್ಷಾಸ್ನಾನಕ್ಕೆ ಮುಂಚೆ, ನಿಷೃಷ್ಟ ಜ್ಞಾನದ ಆಧಾರದ ಮೇಲೆ ವ್ಯಕ್ತಿಯೊಬ್ಬನು ನಂಬಿಕೆಯನ್ನು ಪ್ರದರ್ಶಿಸತಕ್ಕದ್ದು. “ಆದರೆ ನಂಬಿಕೆಯಿಲ್ಲದೇ [ಯೆಹೋವ] ದೇವರನ್ನು ಮೆಚ್ಚಿಸುವುದು ಅಸಾಧ್ಯ.” (ಇಬ್ರಿಯ 11:6) ದೇವರ, ಕ್ರಿಸ್ತನ ಮತ್ತು ದೈವಿಕ ಉದ್ದೇಶದ ಮೇಲೆ ನಂಬಿಕೆಯನ್ನಿಡುವ ಒಬ್ಬ ವ್ಯಕ್ತಿಯು ದೇವರ ವಾಕ್ಯಕ್ಕೆ ಹೊಂದಿಕೆಯಾಗಿ ಜೀವಿಸಲು ಮತ್ತು ಸುವಾರ್ತೆಯನ್ನು ಸಾರುವುದರಲ್ಲಿ ಒಂದು ಅರ್ಥಭರಿತ ಪಾಲನ್ನು ತಕ್ಕೊಳ್ಳುವ, ಯೆಹೋವನ ಒಬ್ಬ ಸಾಕ್ಷಿಯಾಗಲು ಬಯಸುವನು. ಯೆಹೋವನ ರಾಜ್ಯ-ವೈಭವದ ಕುರಿತಾಗಿ ಅವನು ಮಾತಾಡುವನು.—ಕೀರ್ತನೆ 145:10-13; ಮತ್ತಾಯ 24:14.
16. ಪಶ್ಚಾತ್ತಾಪವೆಂದರೆ ಏನು, ಮತ್ತು ಅದು ಕ್ರೈಸ್ತ ದೀಕ್ಷಾಸ್ನಾನಕ್ಕೆ ಹೇಗೆ ಸಂಬಂಧಿಸಿದೆ?
16 ದೀಕ್ಷಾಸ್ನಾನಕ್ಕಾಗಿ ಪಶ್ಚಾತ್ತಾಪವು ಇನ್ನೊಂದು ಪೂರ್ವಾಪೇಕ್ಷಿತ ಆವಶ್ಯಕತೆಯಾಗಿದೆ. ಪಶ್ಚಾತ್ತಾಪವೆಂದರೆ “ವಿಷಾದ ಯಾ ಅತೃಪಿಯ್ತಿಂದಾಗಿ ಹಿಂದಿನ (ಯಾ ಸಂಕಲ್ಪಿಸಿದ) ವರ್ತನೆ, ಅಥವಾ ನಡತೆಯ ಸಂಬಂಧದಲ್ಲಿ ಒಬ್ಬನು ಮನಸ್ಸನ್ನು ಬದಲಾಯಿಸುವುದು,” ಯಾ “ಒಬ್ಬನು ಮಾಡಿದಂತಹ ಅಥವಾ ಮಾಡಲು ತಪ್ಪಿದಂತಹದಕ್ಕಾಗಿ ವಿಷಾದ, ಮರುಕ ಯಾ ಅನುತಾಪ ಪಡುವಿಕೆ” ಯಾಗಿರುತ್ತದೆ. ಪ್ರಥಮ ಶತಮಾನದ ಯೆಹೂದ್ಯರು ಯೇಸು ಕ್ರಿಸ್ತನ ವಿರುದ್ಧ ಮಾಡಿದ ಅವರ ಪಾಪಗಳಿಗಾಗಿ ಪಶ್ಚಾತ್ತಾಪ ಪಡಬೇಕಾಗಿತ್ತು. (ಅ. ಕೃತ್ಯಗಳು 3:11-26) ಕೊರಿಂಥದಲ್ಲಿ ಕೆಲವು ವಿಶ್ವಾಸಿಗಳು ವ್ಯಭಿಚಾರ, ವಿಗ್ರಹಾರಾಧನೆ, ಹಾದರ, ಸಲಿಂಗಕಾಮ, ಕಳ್ಳತನ, ಲೋಭ, ಕುಡುಕತನ, ದೂಷಿಸುವಿಕೆ ಮತ್ತು ಸುಲುಕೊಳ್ಳುವಿಕೆಗಾಗಿ ಪಶ್ಚಾತ್ತಾಪಪಟ್ಟರು. ಪರಿಣಾಮವಾಗಿ, ಅವರು ಯೇಸುವಿನ ರಕ್ತದಲ್ಲಿ “ತೊಳೆದು” ಕೊಳ್ಳಲ್ಪಟ್ಟರು, ಯೆಹೋವನ ಸೇವೆಗಾಗಿ ಎಂದು ಪ್ರತ್ಯೇಕಿಸಲ್ಪಟ್ಟವರಾಗಿ “ಪರಿಶುದ್ಧಗೊಳಿಸಲ್ಪಟ್ಟರು” ಮತ್ತು ಯೇಸು ಕ್ರಿಸ್ತನ ಹೆಸರಿನಲ್ಲಿ ಹಾಗೂ ದೇವರ ಆತ್ಮದೊಂದಿಗೆ “ನೀತಿವಂತರೆಂದು ನಿರ್ಣಯ” ಹೊಂದಿದರು. (1 ಕೊರಿಂಥ 6:9-11) ಆದುದರಿಂದ ಪಶ್ಚಾತ್ತಾಪವು ಒಂದು ಒಳ್ಳೆಯ ಮನಸ್ಸಾಕ್ಷಿ ಮತ್ತು ಪಾಪದ ಕುರಿತಾಗಿ ದೋಷದ ಸಂಕಟದಿಂದ ದೇವ-ದತ್ತ ಸ್ವಾತಂತ್ರ್ಯದ ಕಡೆಗೆ ಒಂದು ಹೆಜ್ಜೆಯಾಗಿರುತ್ತದೆ.—1 ಪೇತ್ರ 3:21.
17. ಪರಿವರ್ತನೆ ಅಂದರೇನು, ಮತ್ತು ದೀಕ್ಷಾಸ್ನಾನ ಪಡಕೊಳ್ಳಲು ಯೋಜಿಸುವವನಿಂದ ಅದು ಏನನ್ನು ಅಪೇಕ್ಷಿಸುತ್ತದೆ?
17 ಒಬ್ಬ ವ್ಯಕ್ತಿಯು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಲು ದೀಕ್ಷಾಸ್ನಾನ ತಕ್ಕೊಳ್ಳುವ ಮುಂಚೆಯೇ ಪರಿವರ್ತನೆಯೂ ಸಂಭವಿಸತಕ್ಕದ್ದು. ಒಬ್ಬ ಪಶ್ಚಾತ್ತಾಪ ಪಟ್ಟ ವ್ಯಕ್ತಿಯ ಪರಿವರ್ತನೆಯು, ಅವನು ತನ್ನ ತಪ್ಪು ಮಾರ್ಗಕ್ರಮವನ್ನು ತಿರಸ್ಕರಿಸಿದ ನಂತರ ಮತ್ತು ಏನು ಸರಿಯಾಗಿದೆಯೋ ಅದನ್ನು ಮಾಡಲು ನಿರ್ಧರಿಸುವಾಗ ನಡೆಯುತ್ತದೆ. ಪರಿವರ್ತನೆಗೆ ಸಂಬಂಧಪಟ್ಟ ಹಿಬ್ರೂ ಮತ್ತು ಗ್ರೀಕ್ ಕ್ರಿಯಾಪದಗಳ ಅರ್ಥ “ಬೆನ್ನು ಹಾಕುವುದು, ತಿರುಗುವುದು, ಅಥವಾ ಹಿಂತಿರುಗುವುದು,” ಎಂದಾಗಿದೆ. ಒಂದು ಒಳ್ಳೆಯ ಆತ್ಮಿಕ ದೃಷ್ಟಿಯಲ್ಲಿ, ಇದು ತಪ್ಪು ಮಾರ್ಗವೊಂದರಿಂದ ದೇವರ ಕಡೆಗೆ ತಿರುಗುವುದನ್ನು ಸೂಚಿಸುತ್ತದೆ. (1 ಅರಸುಗಳು 8: 33, 34) ಪರಿವರ್ತನೆಯು “ಮಾನಸಾಂತರಕ್ಕೆ ಯೋಗ್ಯವಾದ ಕೃತ್ಯಗಳನ್ನು” ಅಪೇಕ್ಷಿಸುತ್ತದೆ, ಅದೇನಂದರೆ, ದೇವರು ಏನನ್ನು ಆಜ್ಞಾಪಿಸಿರುತ್ತಾನೊ ಅದನ್ನು ನಾವು ಮಾಡುವುದು, ಸುಳ್ಳು ಧರ್ಮವನ್ನು ವರ್ಜಿಸುವುದು ಮತ್ತು ಯೆಹೋವನೊಬ್ಬನನ್ನೇ ಆರಾಧಿಸಲಿಕ್ಕಾಗಿ ಆತನೆಡೆಗೆ ವಿಚಲಿತರಾಗದೆ ನಮ್ಮ ಹೃದಯಗಳನ್ನು ಮಾರ್ಗದರ್ಶಿಸುವುದು ಆಗಿದೆ. (ಅ. ಕೃತ್ಯಗಳು 26:20; ಧರ್ಮೋಪದೇಶಕಾಂಡ 30:2, 8, 10; 1 ಸಮುವೇಲ 7:3) ಇದು “ಹೃದಯವನ್ನೂ, ಸ್ವಭಾವವನ್ನೂ ನೂತನ ಮಾಡಿಕೊಳ್ಳುವದು,” ಒಂದು ಬದಲಾವಣೆಗೊಂಡ ವಿವೇಚನೆ, ಪ್ರವೃತ್ತಿ ಮತ್ತು ಜೀವಿತದ ಧ್ಯೇಯೋದ್ದೇಶಕ್ಕಾಗಿ ಕರೆನೀಡುತ್ತದೆ. (ಯೆಹೆಜ್ಕೇಲ 18:31) ಪರಿಣಾಮವಾಗಿ ಬರುವ ನೂತನ ವ್ಯಕ್ತಿತ್ವವು, ದೈವಿಕವಲ್ಲದ ಲಕ್ಷಣಗಳ ಸ್ಥಾನದಲ್ಲಿ ದೈವಿಕ ಗುಣಗಳನ್ನು ತರುತ್ತದೆ. (ಕೊಲೊಸ್ಸೆಯ 3:5-14) ಹೌದು, ನಿಜ ಪಶ್ಚಾತ್ತಾಪವು ಒಬ್ಬನನ್ನು ನಿಜವಾಗಿಯೂ “ತಿರುಗಿಕೊಳ್ಳುವಂತೆ” ಮಾಡುತ್ತದೆ.—ಅ. ಕೃತ್ಯಗಳು 3:19.
18. ಪ್ರಾರ್ಥನೆಯಲ್ಲಿ ದೇವರಿಗೆ ಒಂದು ಸಮರ್ಪಣೆಯನ್ನು ಏಕೆ ಮಾಡಬೇಕು, ಮತ್ತು ಈ ಹೆಜ್ಜೆಯ ಮಹತ್ವವೇನು?
18 ದೀಕ್ಷಾಸ್ನಾನದ ಮುಂಚೆ ಪ್ರಾರ್ಥನೆಯಲ್ಲಿ ದೇವರಿಗೆ ಸಮರ್ಪಣೆಯು ಬರತಕ್ಕದ್ದು. (ಲೂಕ 3:21, 22 ಹೋಲಿಸಿರಿ.) ಸಮರ್ಪಣೆ ಅಂದರೆ ಒಂದು ಪವಿತ್ರ ಉದ್ದೇಶಕ್ಕಾಗಿ ಪ್ರತ್ಯೇಕಿಸಿಕೊಳ್ಳುವುದು ಎಂದಾಗಿದೆ. ಈ ಹೆಜ್ಜೆಯು ಎಷ್ಟು ಪ್ರಾಮುಖ್ಯವಾಗಿದೆಯೆಂದರೆ ಆತನಿಗೆ ಮಾತ್ರ ಸಂಪೂರ್ಣ ಭಕ್ತಿಯನ್ನು ಕೊಡುವ ಮತ್ತು ಸದಾಕಾಲಕ್ಕಾಗಿ ಆತನನ್ನು ಸೇವಿಸುವ ನಮ್ಮ ನಿರ್ಧಾರವನ್ನು ಪ್ರಾರ್ಥನೆಯಲ್ಲಿ ನಾವು ದೇವರಿಗೆ ವ್ಯಕ್ತಪಡಿಸಬೇಕು. (ಧರ್ಮೋಪದೇಶಕಾಂಡ 5:8, 9; 1 ಪೂರ್ವಕಾಲವೃತ್ತಾಂತ 29:10-13) ನಿಸ್ಸಂದೇಹವಾಗಿ, ನಮ್ಮ ಸಮರ್ಪಣೆಯು ಒಂದು ಕೆಲಸಕ್ಕಲ್ಲ, ಬದಲಿಗೆ ದೇವರಿಗೆ ತಾನೇ ಆಗಿದೆ. ಈ ವಿಷಯವು ವಾಚ್ ಟವರ್ ಸೊಸೈಟಿಯ ಮೊದಲ ಅಧ್ಯಕ್ಷರಾದ ಚಾರ್ಲ್ಸ್ ಟೇಜ್ ರಸ್ಸೆಲರ ಶವಸಂಸ್ಕಾರದ ಸಮಯದಲ್ಲಿ ವ್ಯಕ್ತಪಡಿಸಲಾಯಿತು. 1916 ರಲ್ಲಿ ಆ ಸಂದರ್ಭದಲ್ಲಿ ಸೊಸೈಟಿಯ ಸೆಕ್ರಿಟರಿ-ಟ್ರೆಸರರ್ ಆಗಿದ್ದ ಡಬ್ಲ್ಯು. ಇ. ವಾನ್ ಆಂಬರ್ಗ್ ಹೇಳಿದ್ದು: “ಈ ಮಹಾ ಭೂವ್ಯಾಪಕ ಕೆಲಸವು ಒಬ್ಬ ವ್ಯಕ್ತಿಯ ಕೆಲಸವಲ್ಲ. ಅದು ಅದಕ್ಕಿಂತಲೂ ಮಹತ್ತರವಾದದ್ದಾಗಿದೆ. ಅದು ದೇವರ ಕೆಲಸ ಮತ್ತು ಅದು ಬದಲಾಗುವುದಿಲ್ಲ. ದೇವರು ಹಿಂದಿನ ಕಾಲದಲ್ಲಿ ಹಲವಾರು ಸೇವಕರನ್ನು ಉಪಯೋಗಿಸಿದನು ಮತ್ತು ನಿಸ್ಸಂದೇಹವಾಗಿ ಭವಿಷ್ಯದಲ್ಲಿ ಹಲವರನ್ನು ಉಪಯೋಗಿಸುವನು. ನಮ್ಮ ಪ್ರತಿಷ್ಠೆ [ಸಮರ್ಪಣೆ] ಯು ಒಬ್ಬ ಮನುಷ್ಯನಿಗೆ, ಅಥವಾ ಒಬ್ಬ ಮನುಷ್ಯನ ಕೆಲಸಕ್ಕಲ್ಲ, ಬದಲಾಗಿ ಆತನು ನಮಗೆ ಆತನ ವಾಕ್ಯದ ಮತ್ತು ದೈವಿಕ ಮಾರ್ಗದರ್ಶಕಗಳ ಮೂಲಕ ಪ್ರಕಟಪಡಿಸುವ, ದೇವರ ಚಿತ್ತವನ್ನು ಮಾಡಲಿಕ್ಕಾಗಿ ಆಗಿರುತ್ತದೆ.” ಆದರೆ ದೇವರಿಗೆ ಸಮರ್ಪಣೆ ಮಾಡುವ ವಿಷಯದಲ್ಲಿ ಇನ್ನೇನನ್ನು ಮಾಡಬೇಕಾಗಿದೆ?
19. (ಎ) ಯೆಹೋವನಿಗೆ ಸಮರ್ಪಣೆಯ ಬಹಿರಂಗ ರುಜುವಾತನ್ನು ವ್ಯಕ್ತಿಗಳು ಹೇಗೆ ತೋರಿಸುತ್ತಾರೆ? (ಬಿ) ನೀರಿನ ದೀಕ್ಷಾಸ್ನಾನವು ಯಾವುದರ ಒಂದು ಚಿಹ್ನೆಯಾಗಿದೆ?
19 ವ್ಯಕ್ತಿಯೊಬ್ಬನು ದೀಕ್ಷಾಸ್ನಾನ ಪಡೆದುಕೊಂಡಾಗ ಅದು ಯೆಹೋವನಿಗೆ ಮಾಡಿದ ಸಮರ್ಪಣೆಯ ಒಂದು ಬಹಿರಂಗ ರುಜುವಾತನ್ನು ಒದಗಿಸುತ್ತದೆ. ಒಂದು ಚಿಹ್ನೆಯೋಪಾದಿ ನೀರಿನಲ್ಲಿ ಮುಳುಗಿಸಲ್ಪಡುತ್ತಿರುವ ವ್ಯಕ್ತಿಯು ಯೆಹೋವ ದೇವರಿಗೆ ಯೇಸು ಕ್ರಿಸ್ತನ ಮೂಲಕ ನಿಶ್ಶರ್ತವಾಗಿ ಸಮರ್ಪಣೆಯನ್ನು ಮಾಡಿದ್ದಾನೆ ಎಂದು ದೀಕ್ಷಾಸ್ನಾನವು ಸೂಚಿಸುತ್ತದೆ. (ಮತ್ತಾಯ 16:24 ಹೋಲಿಸಿರಿ.) ದೀಕ್ಷಾಸ್ನಾನದ ಒಬ್ಬ ಅಭ್ಯರ್ಥಿಯು ನೀರಿನೊಳಗೆ ಮುಳುಗಿಸಲ್ಪಟ್ಟಾಗ ಮತ್ತು ಅನಂತರ ಅದರೊಳಗಿಂದ ಹೊರಗೆ ತರಲ್ಪಟ್ಟಾಗ, ಆತನ ಹಿಂದಿನ ಜೀವಿತಕ್ರಮಕ್ಕೆ ಅವನು ಸಾಂಕೇತಿಕವಾಗಿ ಸಾಯುತ್ತಾನೆ ಮತ್ತು ದೇವರ ಚಿತ್ತವನ್ನು ಈಗ ಸಂಪೂರ್ಣವಾಗಿ ಮಾಡಲಿಕ್ಕಾಗಿ ಜೀವಿತದ ಒಂದು ಹೊಸ ಮಾರ್ಗಕ್ಕೆ ಎಬ್ಬಿಸಲ್ಪಡುತ್ತಾನೆ. (ರೋಮಾಪುರ 6:4-6 ಹೋಲಿಸಿರಿ.) ಯೇಸುವು ದೀಕ್ಷಾಸ್ನಾನ ಹೊಂದಿದಾಗ, ಆವನು ತನ್ನ ಸ್ವರ್ಗೀಯ ತಂದೆಗೆ ಒಂದು ಮೀಸಲಾಗಿಡಲ್ಪಡದ ರೀತಿಯಲ್ಲಿ ತನ್ನನ್ನು ನೀಡಿಕೊಂಡನು. (ಮತ್ತಾಯ 3:13-17) ಆರ್ಹತೆಯುಳ್ಳ ವಿಶ್ವಾಸಿಗಳು ದೀಕ್ಷಾಸ್ನಾನ ಪಡೆಯುತ್ತಿದ್ದರೆಂದು ಶಾಸ್ತ್ರವಚನಗಳು ಪದೇ ಪದೇ ತೋರಿಸುತ್ತವೆ. (ಅ. ಕೃತ್ಯಗಳು 8:13; 16:27-34; 18:8) ಆದುದರಿಂದ, ಇಂದು ಯೆಹೋವನ ಒಬ್ಬ ಸಾಕ್ಷಿಯಾಗಲು, ವ್ಯಕ್ತಿಯೊಬ್ಬನು ನಿಜವಾಗಿಯೂ ನಂಬಿಕೆಯನ್ನು ಪ್ರದರ್ಶಿಸುವ ಮತ್ತು ದೀಕ್ಷಾಸ್ನಾನ ಪಡಕೊಳ್ಳುವ ವಿಶ್ವಾಸಿಯಾಗಿರತಕ್ಕದ್ದು.—ಅ. ಕೃತ್ಯಗಳು 8:26-29 ನ್ನು ಹೋಲಿಸಿರಿ.
ಸ್ಥಿರ ನಿಲ್ಲಿರಿ!
20. ಯೆಹೋವನ ಸ್ನಾನಿತ ಸಾಕ್ಷಿಗಳೋಪಾದಿ ದೇವ-ದತ್ತ ಸ್ವಾತಂತ್ರ್ಯಕ್ಕಾಗಿ ಒಂದು ನಿಲುವನ್ನು ತಕ್ಕೊಂಡಿದ್ದಕ್ಕಾಗಿ ನಾವು ಆಶೀರ್ವದಿಸಲ್ಪಡುವೆವು ಎಂದು ರುಜುಪಡಿಸಲು ಯಾವ ಕೆಲವು ಬೈಬಲ್ ಉದಾಹರಣೆಗಳು ಇವೆ?
20 ಯೆಹೋವನ ಒಬ್ಬ ಸ್ನಾನಿತ ಸಾಕ್ಷಿಯಾಗುವ ಮೂಲಕ ನೀವು ದೇವ-ದತ್ತ ಸ್ವಾತಂತ್ರ್ಯಕ್ಕಾಗಿ ದೃಢವಾದ ಒಂದು ನಿಲುವನ್ನು ತಕ್ಕೊಂಡಿರುವುದಾದರೆ, ಗತಕಾಲಗಳಲ್ಲಿ ಅವನು ಆತನ ಸೇವಕರನ್ನು ಆಶೀರ್ವದಿಸಿದಂತೆ, ಅವನು ನಿಮ್ಮನ್ನು ಆಶೀರ್ವದಿಸುವನು. ದೃಷ್ಟಾಂತಕ್ಕಾಗಿ, ವೃದ್ಧರಾದ ಅಬ್ರಹಾಮ ಮತ್ತು ಸಾರಳನ್ನು ಯೆಹೋವನು ಒಬ್ಬ ದೈವ ಭೀತಿಯ ಮಗನಾದ ಇಸಾಕನನ್ನು ಕೊಟ್ಟು ಆಶೀರ್ವದಿಸಿದನು. ನಂಬಿಕೆಯಿಂದ ಪ್ರವಾದಿ ಮೋಶೆಯು “ಸ್ವಲ್ಪಕಾಲ ಪಾಪ ಭೋಗಗಳನ್ನನುಭವಿಸಿವದಕ್ಕಿಂತ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತೀರ್ಮಾನಿಸಿಕೊಂಡನು. ಐಗುಪ್ತ ದೇಶದ ಸರ್ವೈಶ್ವರ್ಯಕ್ಕಿಂತಲೂ ಕ್ರಿಸ್ತನ [ಯಾ ದೇವರ ಅಭಿಷಿಕ್ತನು] ನಿಮಿತ್ತವಾಗಿ ಉಂಟಾಗುವ ನಿಂದೆಯೇ [ಒಂದು ಪ್ರಾಚೀನ ನಮೂನೆ] ಶ್ರೇಷ್ಠಭಾಗ್ಯವೆಂದೆಣಿಸಿಕೊಂಡನು.” (ಇಬ್ರಿಯ 11:24-26) ಐಗುಪ್ತದ ದಾಸತ್ವದೊಳಗಿಂದ ಇಸ್ರಾಯೇಲ್ಯರನ್ನು ಹೊರಡಿಸಲು ಯೆಹೋವನಿಂದ ಉಪಯೋಗಿಸಲ್ಪಡುವ ಸುಯೋಗವು ಮೋಶೆಗೆ ಇತ್ತು. ಇನ್ನೂ ಹೆಚ್ಚಾಗಿ, ಅವನು ದೇವರನ್ನು ನಂಬಿಗಸ್ತಿಕೆಯಿಂದ ಸೇವಿಸಿದ ಕಾರಣ, ಅವನು ಪುನರುತ್ಥಾನಗೊಳಿಸಲ್ಪಡುವನು ಮತ್ತು ಮಹಾ ಮೋಶೆಯಾಗಿರುವ ಯೇಸು ಕ್ರಿಸ್ತನ ಕೈಕೆಳಗೆ “ದೇಶದಲ್ಲೆಲ್ಲಾ ಅಧಿಕಾರಿಗಳಲ್ಲಿ” ಒಬ್ಬನಾಗಿ ಸೇವಿಸಲಿರುವನು.—ಕೀರ್ತನೆ 45:16; ಧರ್ಮೋದೇಶಕಾಂಡ 18:17-19.
21. ಪುರಾತನ ಕಾಲಗಳ ದೇವಭಕ್ತಿಯ ಹೆಂಗಸರ ಕುರಿತಾಗಿ ಯಾವ ಉತ್ತೇಜಕ ಉದಾಹರಣೆಗೆಳು ಇವೆ?
21 ನಿಜವಾಗಿಯೂ ಸ್ವಾತಂತ್ರ್ಯ ಮತ್ತು ಸಂತೋಷ ಪಡೆದ ಸ್ತ್ರೀಯರನ್ನು ಪರಿಗಣಿಸುವ ಮೂಲಕ ಸಹ ಇಂದು ಸಮರ್ಪಿತ ಕ್ರೈಸ್ತರು ಉತ್ತೇಜಿತರಾಗಬಹುದು. ಅವರಲ್ಲಿ ಮೋವಾಬ್ಯಳಾದ ರೂತಳು, ವೈಧವ್ಯದ ಹೃದಯವೇದನೆಯನ್ನು ಮತ್ತು ಸುಳ್ಳು ಧರ್ಮದಿಂದ ಪಾರಾಗಿ ದೇವ-ದತ್ತ ಸ್ವಾತಂತ್ರ್ಯದ ಆನಂದವನ್ನು ಅನುಭವಿಸಿದವಳಾಗಿದ್ದಳು. ಅವಳ ಜನರನ್ನು ಮತ್ತು ಅವಳ ದೇವರುಗಳನ್ನು ತೊರೆದು, ಅವಳ ವಿಧವೆ ಅತೆಯ್ತಾದ ನೊವೊಮಿಗೆ ಅಂಟಿಕೊಂಡಳು. “ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು” ಅನ್ನುತ್ತಾಳೆ ರೂತಳು. “ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.” (ರೂತಳು 1:16) ಬೋವಜನ ಹೆಂಡತಿಯಾಗಿ, ರೂತಳು ದಾವೀದನ ಅಜ್ಜನಾದ ಓಬೇದನ ತಾಯಿಯಾದಳು. (ರೂತಳು 4:13-17) ಯೆಹೋವನು ಇಸ್ರಾಯೇಲ್ಯಳಲ್ಲದ ಈ ವಿನೀತ ಹೆಂಗಸಿಗೆ, ಮೆಸ್ಸೀಯನಾದ ಯೇಸುವಿನ ಪೂರ್ವಜಳಾಗುವಂತೆ ಅನುಮತಿಸುವುದರ ಮೂಲಕ ಅವಳಿಗೆ “ಒಂದು ಉತ್ತಮವಾದ ಪ್ರತಿಫಲವನ್ನು” ದಯಪಾಲಿಸಿದನು! (ರೂತಳು 2:12) ಅವಳು ಪುನರುತ್ಥಾನಗೊಂಡಾಗ ಮತ್ತು ಅವಳಿಗೆ ಅಂಥ ಒಂದು ಸುಯೋಗವಿತ್ತೆಂದು ಕಲಿತಾಗ, ರೂತಳು ಎಷ್ಟು ಆನಂದಭರಿತಳಾಗುವಳು! ತದ್ರೀತಿಯ ಆನಂದವು, ಅನೈತಿಕತೆ ಮತ್ತು ಸುಳ್ಳು ಧರ್ಮದಿಂದ ಬಿಡಿಸಲ್ಪಟ್ಟ, ಹಿಂದೊಮ್ಮೆ ಸೂಳೆಯಾಗಿದ್ದ ಪುನರುತಿತ್ಥ ರಾಹಾಬಳ ಮತ್ತು ತಪ್ಪಿತಸ್ಥೆ ಆದರೂ ಪಶ್ಚಾತ್ತಾಪಪಟ್ಟ ಬತ್ಷೆಬೆಯ ಹೃದಯಗಳನ್ನು ತುಂಬುವುದು ಯಾಕಂದರೆ ಅವರು ಸಹ ಕಲಿಯಲಿರುವುದೇನಂದರೆ ಯೇಸು ಕ್ರಿಸ್ತನ ಪೂರ್ವಜರಾಗುವಂತೆ ಯೆಹೋವನು ಅವರನ್ನು ಅನುಮತಿಸಿದ್ದನು.—ಮತ್ತಾಯ 1:1-6, 16.
22. ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?
22 ದೇವ-ದತ್ತ ಸ್ವಾತಂತ್ರ್ಯವನ್ನು ಸ್ವೀಕರಿಸಿದವರ ಪರಿಗಣನೆಯು ಮುಂದರಿಯುತ್ತಾ ಹೋಗಬೇಕಾಗಿದೆ. ಉದಾಹರಣೆಗೆ, ಅವರ ಸಂಖ್ಯೆಯು ಇಬ್ರಿಯ 11 ನೆಯ ಅಧ್ಯಾಯದಲ್ಲಿ ಪ್ರಸ್ತಾಪಿಸಲಾಗಿರುವ ಗಂಡಸರು ಮತ್ತು ಹೆಂಗಸರನ್ನು ಒಳಗೂಡಿಸುತ್ತದೆ. ಅವರು ಸಂಕಷ್ಟ ಮತ್ತು ಹಿಂಸೆಯನ್ನು ಅನುಭವಿಸಿದವರು ಮತ್ತು “ಇಂಥವರಿಗೆ ಈ ಲೋಕವು ಯೋಗ್ಯ ಸ್ಥಳ”ವಾಗಿರಲಿಲ್ಲ. ಅವರ ಸಂಖ್ಯೆಗೆ ಪ್ರಥಮ ಶತಮಾನದ ಕ್ರಿಸ್ತನ ನಿಷ್ಠಾವಂತ ಹಿಂಬಾಲಕರನ್ನು ಮತ್ತು ಇಂದು ಯೆಹೋವನನ್ನು ಆತನ ಸಾಕ್ಷಿಗಳಾಗಿ ಸೇವಿಸುವ ಲಕ್ಷಾಂತರ ಮಂದಿಗಳೊಂದಿಗೆ, ಅಂದಿನಿಂದ ಇತರ ನಂಬಿಗಸ್ತರನ್ನು ಕೂಡಿಸಿರಿ. ನಾವು ಮುಂದೆ ನೋಡಲಿರುವಂತೆ, ಅವರೊಂದಿಗೆ ದೇವ-ದತ್ತ ಸ್ವಾತಂತ್ರ್ಯಕ್ಕಾಗಿ ನೀವು ಒಂದು ನಿಲುವನ್ನು ತಕ್ಕೊಂಡಿರುವುದಾದರೆ, ಆನಂದ ಪಡಲು ಹಲವಾರು ಕಾರಣಗಳು ಇರುತ್ತವೆ.
ನೀವು ಹೇಗೆ ಉತ್ತರಿಸುವಿರಿ?
▫ ದೇವ-ದತ್ತ ಸ್ವಾತಂತ್ರ್ಯವು ಕಳಕೊಳ್ಳಲ್ಪಟ್ಟಾಗ ಯಾವ ನಿರೀಕ್ಷೆಯನ್ನು ದೇವರು ಎತ್ತಿಹಿಡಿದನು?
▫ ಯಾವ “ದಾಸತ್ವದ ನೊಗದಿಂದ” ತನ್ನ ಹಿಂಬಾಲಕರನ್ನು ಯೇಸು ಬಿಡುಗಡೆಗೊಳಿಸಿದನು?
▫ ಯೆಹೋವನ ಒಬ್ಬ ಸಾಕ್ಷಿಯಾಗಿ ದೀಕ್ಷಾಸ್ನಾನ ತಕ್ಕೊಳ್ಳುವ ಮುಂಚೆ ಯಾವ ಹೆಜ್ಜೆಗಳು ಇರುತ್ತವೆ?
▫ ದೇವ-ದತ್ತ ಸ್ವಾತಂತ್ರ್ಯಕ್ಕಾಗಿ ಒಂದು ನಿಲುವನ್ನು ತಕ್ಕೊಂಡದ್ದಕ್ಕಾಗಿ ನಾವು ಆಶೀರ್ವದಿಸಲ್ಪಡುವೆವು ಎಂದು ಯಾವ ಶಾಸ್ತ್ರೀಯ ಉದಾಹರಣೆಗಳು ರುಜುಪಡಿಸುತ್ತವೆ?
[ಪುಟ 16 ರಲ್ಲಿರುವ ಚಿತ್ರ]
ಯೆಹೋವನ ಒಬ್ಬ ಸಾಕ್ಷಿಯಾಗಿ ದೀಕ್ಷಾಸ್ನಾನ ತಕ್ಕೊಳ್ಳುವ ಮುಂಚೆ ಯಾವ ಹೆಜ್ಜೆಗಳು ಇರುತ್ತವೆ ಎಂದು ಬಲ್ಲಿರೋ?