ನಿಮ್ಮ ಕ್ರೈಸ್ತ ಸ್ವಾತಂತ್ರ್ಯವನ್ನು ವಿವೇಕದಿಂದ ಉಪಯೋಗಿಸಿರಿ
“ಸ್ವತಂತ್ರರಂತೆ ನಡೆದುಕೊಳ್ಳಿರಿ, . . . ಆದರೆ ನಿಮ್ಮ ಸ್ವಾತಂತ್ರ್ಯವನ್ನು . . .ದೇವರ ದಾಸರೋಪಾದಿ ಉಪಯೋಗಿಸಿರಿ.”—1 ಪೇತ್ರ 2:16, NW.
1. ಯಾವ ಸ್ವಾತಂತ್ರ್ಯವನ್ನು ಆದಾಮನು ಕಳಕೊಂಡನು, ಮತ್ತು ಮಾನವಕುಲಕ್ಕೆ ಯಾವ ಸ್ವಾತಂತ್ರ್ಯವನ್ನು ಯೆಹೋವನು ಪುನಃ ಸ್ಥಾಪಿಸಲಿರುವನು?
ನಮ್ಮ ಮೊದಲ ಹೆತ್ತವರು ಏದೆನ್ ತೋಟದಲ್ಲಿ ಪಾಪಗೈದಾಗ, ಅವರ ಮಕ್ಕಳಿಗಾಗಿ ಅವರು ಒಂದು ಮಹಿಮೆಯ ಪಿತ್ರಾರ್ಜಿತ—ಪಾಪ ಮತ್ತು ಭೃಷ್ಟತೆಯಿಂದ ಸ್ವಾತಂತ್ರ್ಯ—ವನ್ನು ಕಳಕೊಂಡರು. ಇದರ ಪರಿಣಾಮವಾಗಿ, ನಾವೆಲ್ಲರೂ, ಭೃಷ್ಟತೆಯ ಮತ್ತು ಮರಣದ ದಾಸರಾಗಿ ಹುಟ್ಟಿದೆವು. ಆದರೂ, ಸಂತಸಕರವಾಗಿಯೇ, ನಂಬಿಗಸ್ತ ಮಾನವರನ್ನು ಆಶ್ಚರ್ಯಕರವಾದ ಸ್ವಾತಂತ್ರ್ಯಕ್ಕೆ ಪುನಃ ಸ್ಥಾಪಿಸಲು ಯೆಹೋವನು ಉದ್ದೇಶಿಸಿರುತ್ತಾನೆ. ಇಂದು, ಸುಹೃದಯದ ಜನರು ಆಸಕ್ತಿಯಿಂದ “ದೇವರ ಪುತ್ರರ ಪ್ರತ್ಯಕ್ಷತೆಯನ್ನು” ಕಾದಿರುತ್ತಾರೆ, ಅದರ ಫಲಿತಾಂಶವಾಗಿ, ಅವರು “ನಾಶದ ವಶದಿಂದ [ಭೃಷ್ಟತೆಗೆ ದಾಸರಾಗುವದರಿಂದ, NW ] ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವರು.”—ರೋಮಾಪುರ 8:19-21.
‘ ಸಾರಲು ಅಭಿಷಿಕ್ತರಾಗಿದ್ದಾರೆ’
2, 3. (ಎ) “ದೇವರ ಪುತ್ರರು” ಯಾರು? (ಬಿ) ಅವರು ಯಾವ ಆಶ್ಚರ್ಯಕರವಾದ ಸ್ಥಾನದಲ್ಲಿ ಆನಂದಿಸುತ್ತಾರೆ, ಯಾವ ಜವಾಬ್ದಾರಿಕೆಯನ್ನು ತರುತ್ತದೆ?
2 ಈ “ದೇವರ ಪುತ್ರರು” ಯಾರು? ಸ್ವರ್ಗೀಯ ರಾಜ್ಯದಲ್ಲಿ ಅವನೊಂದಿಗೆ ಆಳುವ ಅವರು ಯೇಸುವಿನ ಆತ್ಮಾಭಿಷಿಕ್ತ ಸಹೋದರರಾಗಿರುತ್ತಾರೆ. ಇವರಲ್ಲಿ ಮೊದಲನೆಯವರು ಸಾ.ಶ. ಒಂದನೆಯ ಶತಕದಲ್ಲಿ ಗೋಚರಿಸಿದರು. ಅವರು ಯೇಸುವು ಕಲಿಸಿದ ವಿಮೋಚಿಸುವ ಸತ್ಯಗಳನ್ನು ಸ್ವೀಕರಿಸಿದರು, ಮತ್ತು ಸಾ.ಶ. 33 ರ ಪಂಚಾಶತ್ತಮದಂದಿನಿಂದ ಅವರು, ಪೇತ್ರನು ಅವರಿಗೆ ಬರೆದಾಗ ಅಂದಂತಹ ಮಹಿಮೆಯ ಸುಯೋಗಗಳಲ್ಲಿ ಪಾಲಿಗರಾದರು: “ನೀವಾದರೋ . . . ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ.”—1 ಪೇತ್ರ 2:9ಬಿ; ಯೋಹಾನ 8:32.
3 ದೇವರ ಸ್ವಕೀಯ ಪ್ರಜೆಯಾಗಿರುವಂಥದ್ದು—ಎಂಥ ಒಂದು ಆಶ್ಚರ್ಯಕರವಾದ ಆಶೀರ್ವಾದ! ಮತ್ತು ದೇವರ ಈ ಅಭಿಷಿಕ್ತ ಪುತ್ರರುಗಳಲ್ಲಿ ಆಧುನಿಕ ದಿನದ ಉಳಿಕೆಯವರು ದೇವರೊಂದಿಗೆ ಅದೇ ತರಹದ ಆಶೀರ್ವದಿತ ನಿಲುವಿನಲ್ಲಿ ಆನಂದಿಸುತ್ತಾರೆ. ಆದರೆ ಅಂಥ ಉಚ್ಛಮಟ್ಟದ ಸುಯೋಗದೊಂದಿಗೆ ಜವಾಬ್ದಾರಿಕೆಗಳು ಬರುತ್ತವೆ. ಅವನು ಹೇಳುವದನ್ನು ಮುಂದರಿಸಿದಾಗ, ಇವುಗಳಲ್ಲೊಂದಕ್ಕೆ ಪೇತ್ರನು ಗಮನ ಸೆಳೆದನು: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗಬೇಕು.”—1 ಪೇತ್ರ 2:9ಎ.
4. ಅಭಿಷಿಕ್ತ ಕ್ರೈಸ್ತರು ಅವರ ಕ್ರೈಸ್ತ ಸ್ವಾತಂತ್ರ್ಯದೊಂದಿಗೆ ಬರುವ ಜವಾಬ್ದಾರಿಕೆಯನ್ನು ಹೇಗೆ ನೆರವೇರಿಸಿದ್ದಾರೆ?
4 ದೇವರ ಗುಣಾತಿಶಯಗಳನ್ನು ದೇಶಾಂತರಗಳಲ್ಲಿ ಸಾರುವ ಈ ಜವಾಬ್ದಾರಿಕೆಯನ್ನು ಅಭಿಷಿಕ್ತ ಕ್ರೈಸ್ತರು ಪೂರೈಸಿದ್ದಾರೋ? ಹೌದು. 1919 ರಿಂದ ಅಭಿಷಿಕ್ತರ ಕುರಿತಾಗಿ ಪ್ರವಾದನಾರೂಪವಾಗಿ ಮಾತಾಡುತ್ತಾ ಯೆಶಾಯನು ಹೇಳಿದ್ದು: “ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ ಸೆರೆಯವರಿಗೆ ಬಿಡುಗಡೆಯಾಗುವದನ್ನು, ಬಂದಿಗಳಿಗೆ [ಕದ] ತೆರೆಯುವದನ್ನು ಪ್ರಸಿದ್ಧಿಪಡಿಸುವದಕ್ಕೂ ಯೆಹೋವನು ನೇಮಿಸಿರುವ ಶುಭವರುಷ, ನಮ್ಮ ದೇವರು ಮುಯ್ಯಿತೀರಿಸುವ ದಿನ, ಇವುಗಳನ್ನು ಪ್ರಚುರಗೊಳಿಸುವದಕ್ಕೂ . . . ನನ್ನನ್ನು ಕಳುಹಿಸಿದ್ದಾನೆ.” (ಯೆಶಾಯ 61:1, 2) ಇಂದು, ಅಭಿಷಿಕ್ತ ಉಳಿಕೆಯವರು, ಯಾರಿಗೆ ಈ ಶಾಸ್ತ್ರವಚನವು ಪ್ರಥಮವಾಗಿ ಅನ್ವಯಿಸುತ್ತದೋ ಆ ಯೇಸುವಿನ ಮಾದರಿಯನ್ನು ಅನುಸರಿಸಿ, ಸ್ವಾತಂತ್ರ್ಯದ ಶುಭವರ್ತಮಾನವನ್ನು ಇತರರಿಗೆ ಉತ್ಸಾಹದಿಂದ ಸಾರುತ್ತಿದ್ದಾರೆ.—ಮತ್ತಾಯ 4:23-25; ಲೂಕ 4:14-21.
5, 6. (ಎ) ಅಭಿಷಿಕ್ತ ಕ್ರೈಸ್ತರ ಉತ್ಸಾಹಭರಿತ ಸಾರುವಿಕೆಯಿಂದ ಯಾವ ಫಲಿತಾಂಶವುಂಟಾಗಿರುತ್ತದೆ? (ಬಿ) ಮಹಾ ಸಮೂಹದವರು ಯಾವ ಸುಯೋಗಗಳನ್ನು ಮತ್ತು ಜವಾಬ್ದಾರಿಕೆಗಳನ್ನು ಆನಂದಿಸುತ್ತಿದ್ದಾರೆ?
5 ಅವರ ಉತ್ಸಾಹಭರಿತ ಸಾರುವಿಕೆಯ ಫಲಿತಾಂಶವಾಗಿ, ಬೇರೆಕುರಿಗಳ ಒಂದು ಮಹಾ ಸಮೂಹವು ಈ ಕೊನೆಯ ದಿನಗಳಲ್ಲಿ ಲೋಕ ದೃಶ್ಯದ ಮೇಲೆ ಗೋಚರಿಸಿದೆ. ಅವರು ಯೆಹೋವನನ್ನು ಸೇವಿಸುವದಕ್ಕೆ ಅಭಿಷಿಕ್ತರೊಂದಿಗೆ ಜತೆಗೂಡಲು ಎಲ್ಲಾ ಜನಾಂಗಗಳಿಂದ ಬಂದವರಾಗಿದ್ದಾರೆ, ಮತ್ತು ಸತ್ಯವು ಇವರನ್ನು ಸಹ ಸ್ವತಂತ್ರಗೊಳಿಸಿದೆ. (ಜೆಕರ್ಯ 8:23; ಯೋಹಾನ 10:16) ಅಬ್ರಹಾಮನಂತೆ ಇವರು ನಂಬಿಕೆಯ ಆಧಾರದ ಮೇಲೆ ನೀತಿವಂತರೆಂದು ನಿರ್ಣಯಿಸಲ್ಪಟ್ಟಿರುತ್ತಾರೆ ಮತ್ತು ಯೆಹೋವ ದೇವರೊಂದಿಗೆ ಒಂದು ನಿಕಟ ಸಂಬಂಧದೊಳಗೆ ಪ್ರವೇಶಿಸಿರುತ್ತಾರೆ. ಮತ್ತು ರಹಾಬಳಂತೆ ಅವರನ್ನು ನೀತಿವಂತರೆಂದು ನಿರ್ಣಯಿಸುವದು ಅವರನ್ನು ಪಾರಾಗುವಿಕೆಯ ಸಾಲಿನಲ್ಲಿ ಇರಿಸುತ್ತದೆ—ಅವರ ವಿಚಾರದಲ್ಲಿ, ಅರ್ಮಗೆದ್ದೋನಿನಲ್ಲಿ ಪಾರಾಗುವಿಕೆ. (ಯಾಕೋಬ 2:23-25; ಪ್ರಕಟನೆ 16:14, 16) ಆದರೆ ಅಂಥ ಉನ್ನತಿಗೇರಿಸಲ್ಪಟ್ಟ ಸುಯೋಗಗಳು ಕೂಡ ಇತರರಿಗೆ ದೇವರ ಮಹಿಮೆಯ ಕುರಿತು ತಿಳಿಸುವ ಜವಾಬ್ದಾರಿಕೆಯನ್ನು ಸೇರಿಸುತ್ತವೆ. ಆದುದರಿಂದಲೇ ಯೆಹೋವನನ್ನು ಅವರು ಬಹಿರಂಗವಾಗಿ ಸ್ತುತಿಸುವದನ್ನು ಯೋಹಾನನು ಕಾಣುತ್ತಾನೆ, “ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ ಎಂದು ಮಹಾ ಶಬ್ದದಿಂದ ಕೂಗಿದರು.”—ಪ್ರಕಟನೆ 7:9, 10, 14.
6 ಕಳೆದ ವರ್ಷ ಮಹಾ ಸಮೂಹದವರು ನಾಲ್ವತ್ತು ಲಕ್ಷಗಳಿಗಿಂತಲೂ ಮೀರಿದ್ದು, ಅಭಿಷಿಕ್ತ ಕ್ರೈಸ್ತರ ಉಳಿದಿರುವವರ ಚಿಕ್ಕ ಗುಂಪಿನೊಂದಿಗೆ, ಯೆಹೋವನ ಗುಣಾತಿಶಯಗಳನ್ನು ದೇಶಾಂತರಗಳಲ್ಲಿ ಸಾರಲು ಹತ್ತಿರವಾಗಿ ಒಂದು ನೂರು ಕೋಟಿಯಷ್ಟು ತಾಸುಗಳನ್ನು ವ್ಯಯಿಸಿದರು. ಇದು ಅವರ ಆತ್ಮಿಕ ಸ್ವಾತಂತ್ರ್ಯವನ್ನು ಉಪಯೋಗಿಸುವ ಅತ್ಯುತ್ತಮ ರೀತಿಯಾಗಿತ್ತು.
“ಅರಸನನ್ನು ಸನ್ಮಾನಿಸಿರಿ”
7, 8. ಲೌಕಿಕ ಅಧಿಕಾರಿಗಳ ಕಡೆಗೆ ಕ್ರೈಸ್ತ ಸ್ವಾತಂತ್ರ್ಯವು ಯಾವ ಜವಾಬ್ದಾರಿಕೆಯನ್ನು ಸೇರಿಸುತ್ತದೆ, ಮತ್ತು ಈ ವಿಚಾರದಲ್ಲಿ, ಯಾವ ತಪ್ಪು ಮನೋಭಾವವನ್ನು ನಾವು ಹೋಗಲಾಡಿಸತಕ್ಕದ್ದು?
7 ನಮ್ಮ ಕ್ರೈಸ್ತ ಸ್ವಾತಂತ್ರ್ಯವು ಇತರ ಜವಾಬ್ದಾರಿಕೆಗಳನ್ನು ಒಳಗೂಡಿಸುತ್ತದೆ. ಪೇತ್ರನ್ನು ಬರೆದಾಗ, ಅವನು ಕೆಲವೊಂದನ್ನು ಸೂಚಿಸುತ್ತಾನೆ: “ಎಲ್ಲರನ್ನೂ ಸನ್ಮಾನಿಸಿರಿ. ಸಹೋದರರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ. ಅರಸನನ್ನು ಸನ್ಮಾನಿಸಿರಿ.” (1 ಪೇತ್ರ 2:17) “ಅರಸನನ್ನು ಸನ್ಮಾನಿಸಿರಿ” ಎಂಬ ವಾಕ್ಸರಣಿಯಿಂದ ಏನು ಧ್ವನಿತವಾಗುತ್ತದೆ?
8 “ಅರಸನು” ಲೌಕಿಕ ಅಧಿಪತಿಗಳನ್ನು ಪ್ರತಿನಿಧಿಸುತ್ತಾನೆ. ಇಂದು ಅಧಿಕಾರಕ್ಕೆ ಅಗೌರವದ ಆತ್ಮವು ಲೋಕದಲ್ಲಿ ಬೆಳದದೆ, ಮತ್ತು ಇದು ಕ್ರೈಸ್ತರನ್ನು ಸುಲಭವಾಗಿ ಬಾಧಿಸಬಲ್ಲದು. “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿರು” ವದರಿಂದ “ಅರಸನನ್ನು” ತಾನು ಯಾಕೆ ಸನ್ಮಾನಿಸತಕ್ಕದ್ದು ಎಂದು ಕ್ರೈಸ್ತನೊಬ್ಬನು ಅಚ್ಚರಿಗೊಳ್ಳಲೂಬಹುದು. (1 ಯೋಹಾನ 5:19) ಈ ಮಾತುಗಳ ನೋಟದಲ್ಲಿ, ಅನಾನುಕೂಲವಾದ ನಿಯಮಗಳಿಗೆ ಅವಿಧೇಯನಾಗಲು ತಾನು ಸ್ವತಂತ್ರನು ಎಂದು ಅವನು ಭಾವಿಸಬಹುದು ಮತ್ತು ಸಾಧ್ಯವಿರುವುದಾದರೆ ಕರ ಕೊಡುವದನ್ನು ತಡೆಹಿಡಿಯಬಹುದು. ಆದರೆ ಇದು “ಕೈಸರನದನ್ನು ಕೈಸರನಿಗೆ ಕೊಡಿರಿ” ಎಂಬ ಯೇಸುವಿನ ಸ್ಪಷ್ಟವಾಗಿದ ಆಜೆಗ್ಞೆ ವಿರುದ್ಧವಾಗಿರುತ್ತದೆ. ಇದರ ಅರ್ಥ ‘ಅವನ ಸ್ವಾತಂತ್ರ್ಯವನ್ನು ಕೆಟ್ಟತನಕ್ಕೆ ಕಣ್ಣುತಡೆಯಾಗಿ ಉಪಯೋಗಿಸುವದು’ ಎಂದಾಗುತ್ತದೆ.—ಮತ್ತಾಯ 22:21; 1 ಪೇತ್ರ 2:16.
9. ಲೌಕಿಕ ಅಧಿಕಾರಿಗಳಿಗೆ ವಿಧೇಯರಾಗಿರಲು ಯಾವ ಎರಡು ಉತ್ತಮ ಕಾರಣಗಳಿವೆ?
9 ಅಧಿಕಾರಕ್ಕೆ ಸನ್ಮಾನವಿರುವಂತಹ ಮತ್ತು ಅದಕ್ಕೆ ಅಧೀನರಾಗುವಂತಹ—ಅದು ಒಂದುವೇಳೆ ಸಂಬಂಧಿತ ರೀತಿಯಲ್ಲಿರುವದಾದರೂ ಕೂಡ—ಹಂಗಿನಲ್ಲಿ ಕ್ರೈಸ್ತರು ಇದ್ದಾರೆ. (ಅ. ಕೃತ್ಯಗಳು 5:29) ಯಾಕೆ? 1 ಪೇತ್ರ 2:14, 15 ರಲ್ಲಿ, ಅಧಿಪತಿಗಳು “ಕೆಟ್ಟ ನಡತೆಯುಳ್ಳವರನ್ನು ದಂಡಿಸುವದಕ್ಕೂ ಒಳ್ಳೇ ನಡತೆಯುಳ್ಳವರನ್ನು ಪ್ರೋತ್ಸಾಹಪಡಿಸುವದಕ್ಕೂ [ದೇವರಿಂದ] ಕಳುಹಿಸಲ್ಪಟ್ಟವರು” ಎಂದು ಅವನು ಹೇಳುವಾಗ, ಪೇತ್ರನು ಮೂರು ಕಾರಣಗಳನ್ನು ತಿಳಿಸುತ್ತಾನೆ. ದಂಡನೆಯ ಭಯವು ಅಧಿಕಾರಕ್ಕೆ ವಿಧೇಯರಾಗಲು ಸಾಕಷ್ಟು ಕಾರಣವಾಗಿದೆ. ಹಲ್ಲೆಯ, ಕಳ್ಳತನದ, ಯಾ ಇನ್ನಿತರ ಪಾತಕಕ್ಕಾಗಿ ಯೆಹೋವನ ಸಾಕ್ಷಿಯೊಬ್ಬನನ್ನು ಜುಲ್ಮಾನೆಗೊಳಪಡಿಸುವದು ಯಾ ಸೆರೆಮನೆಗೆ ಹಾಕುವದು ಎಂಥ ಒಂದು ಅವಮಾನವಾಗಿರುವದು! ಅಂಥ ಒಂದು ಸಂಗತಿಯನ್ನು ಪ್ರಚಾರಗೊಳಿಸಲು ಕೆಲವರು ಎಷ್ಟೊಂದು ಸಂತೋಷಗೊಳ್ಳುವರು ಎಂದು ಊಹಿಸಿರಿ! ಇನ್ನೊಂದು ಪಕ್ಕದಲ್ಲಿ, ನಾಗರಿಕ ವಿಧೇಯತೆಗಾಗಿ ನಾವು ಸತ್ಕೀರ್ತಿಯನ್ನು ಬೆಳಸಿಕೊಳ್ಳುವುದಾದರೆ, ನಿಷ್ಪಕ್ಷಪಾತದ ಆಡಳಿತಗಾರರಿಂದ ಹೊಗಳಿಕೆಯನ್ನು ಪಡೆಯುವೆವು. ಸುವಾರ್ತೆಯ ಸಾರುವಿಕೆಯ ನಮ್ಮ ಕಾರ್ಯದಲ್ಲಿ ಮುಂದರಿಯಲು ನಮಗೆ ಹೆಚ್ಚು ಸ್ವಾತಂತ್ರ್ಯವು ಕೂಡ ಕೊಡಲ್ಪಡಬಹುದು. ಇನ್ನೂ ಹೆಚ್ಚಾಗಿ, ‘ತಿಳಿಯದೆ ಮಾತಾಡುವ ಮೂಢಜನರ ಬಾಯನ್ನು ನಾವು ಕಟ್ಟುತ್ತೇವೆ.’ (1 ಪೇತ್ರ 2:15ಬಿ) ಇದು ಅಧಿಕಾರಿಗಳಿಗೆ ವಿಧೇಯರಾಗಲು ಎರಡನೆಯ ಕಾರಣವಾಗಿರುತ್ತದೆ.—ರೋಮಾಪುರ 13:3.
10. ಲೌಕಿಕ ಅಧಿಪತಿಗಳಿಗೆ ವಿಧೇಯರಾಗುವದಕ್ಕಾಗಿ ಇರುವ ಒಂದು ಬಲವಾದ ಕಾರಣ ಯಾವುದು?
10 ಆದರೆ ಅಲ್ಲಿ ಒಂದು ಬಲವಾದ ಕಾರಣವಿದೆ. ಯೆಹೋವನ ಅನುಮತಿಯಿಂದ ಅಧಿಕಾರಿಗಳು ಅಸ್ತಿತ್ವದಲ್ಲಿದ್ದಾರೆ. ಪೇತ್ರನು ಹೇಳುವಂತೆ, ರಾಜಕೀಯ ಆಧಿಪತಿಗಳು ಯೆಹೋವನಿಂದ “ಕಳುಹಿಸಲ್ಪಟ್ಟವರು”, ಮತ್ತು ಕ್ರೈಸ್ತರು ಅವರಿಗೆ ಅಧೀನರಾಗಿ ಉಳಿಯುವದು “ದೇವರ ಚಿತ್ತವಾಗಿದೆ.” (1 ಪೇತ್ರ 2:15ಬಿ) ತದ್ರೀತಿಯಲ್ಲಿ, ಅಪೊಸ್ತಲ ಪೌಲನು ಹೇಳುವದು: “ಇರುವ ಅಧಿಕಾರಿಗಳು ದೇವರಿಂದ ನೇಮಿಸಲ್ಪಟ್ಟವರು.” ಆದಕಾರಣ, ನಮ್ಮ ಬೈಬಲ್ ತರಬೇತಿ ಹೊಂದಿದ ಮನಸ್ಸಾಕ್ಷಿಯು ಅಧಿಕಾರಿಗಳಿಗೆ ವಿಧೇಯರಾಗಲು ನಮ್ಮನ್ನು ನಡಿಸುತ್ತದೆ. ಅವರಿಗೆ ಅಧೀನರಾಗಿರಲು ನಾವು ನಿರಾಕರಿಸುವದಾದರೆ, ನಾವು “ದೇವರ ಏರ್ಪಾಡಿಗೆ ಎದುರುಬೀಳುವ ಸ್ಥಾನವನ್ನು ತಕ್ಕೊಳ್ಳುವವರಾಗುತ್ತೇವೆ.” (ರೋಮಾಪುರ 13:1, 2, 5, NW ) ದೇವರ ಏರ್ಪಾಡಿಗೆ ವಿರುದ್ಧವಾದ ಸ್ಥಾನವನ್ನು ಸ್ವ ಇಚ್ಛೆಯಿಂದ ತಕ್ಕೊಳ್ಳಲು ನಮ್ಮಲ್ಲಿ ಯಾರು ಬಯಸುತ್ತಾರೆ? ಕ್ರೈಸ್ತ ಸ್ವಾತಂತ್ರ್ಯದ ಎಂಥ ಒಂದು ದುರುಪಯೋಗ ಅದಾಗಲಿರುವದು!
‘ ಸಹೋದರರನ್ನು ಪ್ರೀತಿಸಿರಿ’
11, 12. (ಎ) ನಮ್ಮ ಕ್ರೈಸ್ತ ಸ್ವಾತಂತ್ರ್ಯದೊಂದಿಗೆ ಜತೆ ವಿಶ್ವಾಸಿಗಳೆಡೆಗೆ ಯಾವ ಜವಾಬ್ದಾರಿಕೆಯು ಬರುತ್ತದೆ? (ಬಿ) ನಮ್ಮ ಪ್ರೀತಿಯ ಪರಿಗಣನೆಯನ್ನು ವಿಶೇಷವಾಗಿ ಹೊಂದಲು ಯಾರು ಮತ್ತು ಏಕೆ ಅರ್ಹರಾಗಿರುತ್ತಾರೆ?
11 ಕ್ರೈಸ್ತನೊಬ್ಬನಿಗೆ “ಸಹೋದರರ ಇಡೀ ಬಳಗಕ್ಕಾಗಿ ಪ್ರೀತಿಯಿರತಕ್ಕದ್ದು” ಎಂದು ಪೇತ್ರನು ಹೇಳುತ್ತಾನೆ. (1 ಪೇತ್ರ 2:17, NW ) ಕ್ರೈಸ್ತ ಸ್ವಾತಂತ್ರ್ಯದೊಂದಿಗೆ ಬರುವ ಇನ್ನೊಂದು ಜವಾಬ್ದಾರಿಕೆ ಇದಾಗಿರುತ್ತದೆ. ನಮ್ಮಲ್ಲಿ ಹೆಚ್ಚಿನವರು ಒಂದು ಸಭೆಗೆ ಸೇರಿದವರಾಗಿದ್ದೇವೆ. ನಿಶ್ಚಯವಾಗಿಯೂ, ಸಹೋದರರ ಒಂದು ಅಂತಾರಾಷ್ಟ್ರೀಯ ಬಳಗ, ಯಾ ಸಂಸ್ಥಾಪನೆಗೆ ನಾವೆಲ್ಲರೂ ಸೇರಿದವರಾಗಿದ್ದೇವೆ. ಇವರಿಗೆ ಪ್ರೀತಿ ತೋರಿಸುವದು ನಮ್ಮ ಸ್ವಾತಂತ್ರ್ಯದ ವಿವೇಕದ ಬಳಕೆಯಾಗಿದೆ.—ಯೋಹಾನ 15:12, 13.
12 ಅಪೊಸ್ತಲ ಪೌಲನು ನಮ್ಮ ಪ್ರೀತಿಗೆ ವಿಶೇಷವಾಗಿ ಅರ್ಹವಾಗಿರುವ ಕ್ರೈಸ್ತರ ಒಂದು ಗುಂಪನ್ನು ಆಯ್ದು ತೆಗೆಯುತ್ತಾನೆ. ಅವನಂದದ್ದು: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.” (ಇಬ್ರಿಯ 13:17) ಸಭೆಯಲ್ಲಿ ನಾಯಕತ್ವವನ್ನು ವಹಿಸುವವರು ಹಿರಿಯರುಗಳಾಗಿದ್ದಾರೆ. ಇವರು ಪರಿಪೂರ್ಣರಲ್ಲವೆಂಬುದೆನೋ ಸತ್ಯ. ಆದಾಗ್ಯೂ, ಆಡಳಿತ ಮಂಡಲಿಯ ಮೇಲ್ವಿಚಾರದ ಕೆಳಗೆ ಅವರು ನೇಮಿಸಲ್ಪಟ್ಟಿರುತ್ತಾರೆ. ಅವರು ಮಾದರಿಯ ಮೂಲಕ ಮತ್ತು ಪರಿಗಣನೆಯೊಂದಿಗೆ ಮುಂದಾಳುತನ ನಡಿಸುತ್ತಾರೆ ಮತ್ತು ಅವರು ನಮ್ಮ ಆತ್ಮಗಳ ಮೇಲೆ ಕಾಪಿಡುವಿಕೆಗಾಗಿ ನೇಮಿತರಾಗಿದ್ದಾರೆ. ಎಂಥ ಗುರುತರವಾದ ನೇಮಕ! (ಇಬ್ರಿಯ 13:7) ಸಂತೋಷಕರವಾಗಿಯೇ, ಹೆಚ್ಚಿನ ಸಭೆಗಳಲ್ಲಿ ಒಂದು ಉತ್ತಮ, ಸಹಕಾರದ ಆತ್ಮವು ಇದೆ, ಮತ್ತು ಅವರೊಂದಿಗೆ ಕಾರ್ಯವೆಸಗುವದು ಹಿರಿಯರಿಗೆ ಒಂದು ಆನಂದವಾಗಿರುತ್ತದೆ. ವ್ಯಕ್ತಿಗಳು ಸಹಕಾರ ಕೊಡಲು ಬಯಸುವದಿಲವ್ಲಾದರೆ, ಆಗ ಅದು ಹೆಚ್ಚು ಕಷ್ಟಕರವಾಗಿರುತ್ತದೆ. ಹಿರಿಯನು ತನ್ನ ಕೆಲಸವನ್ನು ಇನ್ನೂ ಮಾಡುತ್ತಾನೆ, ಆದರೆ ಪೌಲನು ಹೇಳುವಂತೆ ಅವನದನ್ನು “ವ್ಯಸನಪಟ್ಟು” ಮಾಡುತ್ತಾನೆ. ಖಂಡಿತವಾಗಿಯೂ, ಹಿರಿಯರು ವ್ಯಸನಪಡುವದನ್ನು ನಾವು ಬಯಸುವದಿಲ್ಲ! ಅವರು ನಮ್ಮನ್ನು ಕಟ್ಟಲು ಸಾಧ್ಯವಾಗುವಂತೆ ಅವರ ಕೆಲಸದಲ್ಲಿ ಅವರು ಸಂತೋಷವನ್ನು ಕಂಡುಕೊಳ್ಳುವಂತೆ ನಾವು ಬಯಸುತ್ತೇವೆ.
13. ಹಿರಿಯರೊಂದಿಗೆ ನಾವು ಸಹಕರಿಸಬಹುದಾದ ಕೆಲವು ವಿಧಾನಗಳು ಯಾವುವು?
13 ಹಿರಿಯರೊಂದಿಗೆ ನಾವು ಸಹಕರಿಸಬಹುದಾದ ಕೆಲವು ವಿಧಾನಗಳು ಯಾವುವು? ರಾಜ್ಯಸಭಾಗೃಹದ ದುರಸ್ತು ಮತ್ತು ಸ್ವಚ್ಛತೆಯಲ್ಲಿ ಸಹಾಯನೀಡುವುದು ಒಂದು ರೀತಿಯಾಗಿದೆ. ಇನ್ನೊಂದು, ರೋಗಿಗಳನ್ನು ಮತ್ತು ಅಂಗವಿಕಲರನ್ನು ಸಂದರ್ಶಿಸುವ ಕಾರ್ಯದಲ್ಲಿ ಸಹಕರಿಸುವ ಮೂಲಕ. ಪುನಃ, ಒಂದು ಹೊರೆಯಾಗದಂತೆ, ನಾವು ಆತ್ಮಿಕವಾಗಿ ಶಕ್ತಿಯುತರಾಗಿ ನಿಲ್ಲಲು ಪ್ರಯತ್ನಿಸುವ ಮೂಲಕ. ಸಹಕಾರದ ಇನ್ನೊಂದು ಪ್ರಮುಖ ವಿಭಾಗವು, ಸಭೆಯ ನೈತಿಕ ಮತ್ತು ಆತ್ಮಿಕ ಶುದ್ಧತೆಯನ್ನು ಕಾಪಾಡುವದು, ಸ್ವತಃ ನಮ್ಮ ನಡತೆಯ ಮೂಲಕ ಮತ್ತು ನಮ್ಮ ಗಮನಕ್ಕೆ ಬಂದಿರುವ ಗಂಭೀರವಾದ ಪಾಪದ ವಿದ್ಯಮಾನಗಳನ್ನು ವರದಿಮಾಡುವದರ ಮೂಲಕ ಆಗಿರುತ್ತದೆ.
14. ಹಿರಿಯರಿಂದ ತಕ್ಕೊಳ್ಳಲ್ಪಟ್ಟ ಶಿಸ್ತುಪಾಟದ ಕ್ರಮದ ಕಡೆಗೆ ನಾವು ಹೇಗೆ ಸಹಕರಿಸತಕ್ಕದ್ದು?
14 ಕೆಲವೊಮ್ಮೆ ಸಭೆಯನ್ನು ಶುದ್ಧವಾಗಿಡಲು, ಹಿರಿಯರು ಪಶ್ಚಾತ್ತಾಪರಹಿತ ತಪ್ಪಿತಸ್ಥನನ್ನು ಬಹಿಷ್ಕರಿಸಬೇಕಾಗುತ್ತದೆ. (1 ಕೊರಿಂಥ 5:1-5) ಇದು ಸಭೆಯನ್ನು ರಕ್ಷಿಸುತ್ತದೆ. ಇದು ತಪ್ಪಿತಸ್ಥನಿಗೂ ನೆರವಾಗಬಹುದು. ಆಗಾಗ್ಯೆ, ಅಂಥ ಶಿಸ್ತು ಪಾಪಿಯು ತನ್ನ ಬುದ್ಧಿಗೆ ಬರುವಂತೆ ಸಹಾಯ ಮಾಡಿದೆ. ಆದರೂ, ಬಹಿಷ್ಕೃತನಾದವನು ನಮ್ಮ ನಿಕಟ ಸ್ನೇಹಿತನಾಗಿರುವದಾದರೆ ಯಾ ಒಬ್ಬ ಸಂಬಂಧಿಯಾಗಿರುವದಾದರೆ, ಆಗೇನು? ಆ ವ್ಯಕ್ತಿಯು ನಮ್ಮ ತಂದೆ ಯಾ ತಾಯಿ ಯಾ ನಮ್ಮ ಮಗ ಯಾ ಮಗಳು ಆಗಿದ್ದಾರೆ ಎಂದು ಎಣಿಸಿರಿ. ಹಾಗಿದ್ದರೂ, ಹಿರಿಯರಿಂದ ತಕ್ಕೊಳ್ಳಲ್ಪಟ್ಟ ಕ್ರಮವನ್ನು ನಾವು ಗೌರವಿಸುತ್ತೇವೋ? ಅದು ಕಷ್ಟವಾಗಬಹುದು ಎಂಬುದು ಸತ್ಯ. ಆದರೆ ಹಿರಿಯರ ತೀರ್ಮಾನವನ್ನು ಪ್ರಶ್ನಿಸುವದು ಮತ್ತು ಸಭೆಗೆ ಒಂದು ಭೃಷ್ಟಗೊಳಿಸುವ ಪ್ರಭಾವವೆಂದು ರುಜುಗೊಳಿಸಲ್ಪಟ್ಟ ಒಬ್ಬನೊಂದಿಗೆ ⁄ ಒಬ್ಬಳೊಂದಿಗೆ ಆತ್ಮಿಕವಾಗಿ ಸಹವಾಸಮಾಡುವದನ್ನು ಮುಂದರಿಸುವದು, ನಮ್ಮ ಸ್ವಾತಂತ್ರ್ಯದ ಎಂಥ ಒಂದು ದುರುಪಯೋಗವಾಗಲಿರುವದು! (2 ಯೋಹಾನ 10, 11) ಅಂಥ ವಿಚಾರಗಳಲ್ಲಿ ತೋರಿಸುವ ಸಹಕರಿಸುವ ರೀತಿಗಾಗಿ ಒಟ್ಟಿನಲ್ಲಿ ಯೆಹೋವನ ಜನರನ್ನು ಪ್ರಶಂಸಿಸಬೇಕಾಗಿದೆ. ಇದರ ಫಲಿತಾಂಶವಾಗಿ, ಯೆಹೋವನ ಸಂಸ್ಥಾಪನೆಯು ಈ ಅಶುದ್ಧ ಲೋಕದಲ್ಲಿ ನಿಷ್ಕಲಂಕವಾಗಿ ಉಳಿಯುತ್ತದೆ.—ಯಾಕೋಬ 1:27.
15. ವ್ಯಕ್ತಿಯೊಬ್ಬನು ಗಂಭೀರ ಪಾಪವೊಂದನ್ನು ಗೈಯುವದಾದರೆ, ಅವನು ಬೇಗನೆ ಏನು ಮಾಡತಕ್ಕದ್ದು?
15 ನಾವು ಒಂದು ಗಂಭೀರ ಪಾಪವನ್ನು ಗೈಯುವದಾದರೆ, ಆಗೇನು? ಯೆಹೋವನು ಯಾರಿಗೆ ಪ್ರಸನ್ನತೆಯನ್ನು ತೋರಿಸುತ್ತಾನೆ ಎಂದು ದಾವೀದನು ಹೀಗಂದಾಗ ವರ್ಣಿಸಿದನು: “ಯೆಹೋವನ ಪರ್ವತವನ್ನು ಹತ್ತಕ್ಕವನು ಯಾರು? ಆತನ ಪವಿತ್ರಸ್ಥಾನದಲ್ಲಿ ನಿಲ್ಲುವದಕ್ಕೆ ಎಂಥವನು ಯೋಗ್ಯನು? ಯಾವನು ಅಯೋಗ್ಯಕಾರ್ಯಗಳಲ್ಲಿ ಮನಸ್ಸಿಡದೆ ಮೋಸಪ್ರಮಾಣಮಾಡದೆ ಶುದ್ಧಹಸ್ತವೂ ನಿರ್ಮಲಮನಸ್ಸೂ ಉಳ್ಳವನಾಗಿದ್ದಾನೋ” ಅವನಾಗಿದ್ದಾನೆ. (ಕೀರ್ತನೆ 24:3, 4) ಯಾವುದಾದರೂ ಒಂದು ಕಾರಣಕ್ಕಾಗಿ ನಮಗೆ ‘ಶುದ್ಧಹಸ್ತವೂ, ನಿರ್ಮಲಮನಸ್ಸೂ’ ಇರದೆ ಇದ್ದಲ್ಲಿ ನಾವು ತುರ್ತಿನಿಂದ ಕ್ರಿಯೆಗೈಯತಕ್ಕದ್ದು. ನಮ್ಮ ನಿತ್ಯಜೀವವು ಗಂಡಾಂತರದಲ್ಲಿದೆ.
16, 17. ಗಂಭೀರವಾದ ಪಾಪದ ತಪ್ಪಿತಸ್ಥನು ವಿಷಯವನ್ನು ತನ್ನಿಂದ ತಾನೇ ಪರಿಹರಿಸಿಕೊಳ್ಳಲು ಯಾಕೆ ಪ್ರಯತ್ನಿಸಬಾರದು?
16 ಕೆಲವರು ಹೀಗೆ ತರ್ಕಿಸುತ್ತಾ, ಗಂಭೀರವಾದ ಪಾಪಗಳನ್ನು ಅಡಗಿಸಿಡುವ ಶೋಧನೆಗೆ ಬಿದ್ದಿರುತ್ತಾರೆ: ‘ನಾನು ಯೆಹೋವನಿಗೆ ಅರಿಕೆಮಾಡಿದ್ದೇನೆ ಮತ್ತು ಪಶ್ಚಾತ್ತಾಪಪಟ್ಟಿದ್ದೇನೆ. ಆದುದರಿಂದ ಹಿರಿಯರನ್ನು ಯಾಕೆ ಒಳಗೂಡಿಸಬೇಕು?’ ತಪ್ಪಿತಸ್ಥನು ಪೇಚಾಟಕ್ಕೊಳಗಾಗಬಹುದು ಯಾ ಹಿರಿಯರು ಏನು ಮಾಡಬಹುದೋ ಎಂಬ ಹೆದರಿಕೆ ಇರಬಹುದು. ಆದರೂ, ಯೆಹೋವನೊಬ್ಬನೇ ನಮ್ಮನ್ನು ಪಾಪದಿಂದ ಶುಭ್ರಗೊಳಿಸಶಕ್ತನಾಗಿರುವದಾದರೂ, ಅವನು ಸಭೆಯ ಶುದ್ಧತೆಗಾಗಿ ಪ್ರಮುಖವಾಗಿ ಹಿರಿಯರನ್ನು ಜವಾಬ್ದಾರರನ್ನಾಗಿ ಮಾಡಿರುತ್ತಾನೆ. (ಕೀರ್ತನೆ 51:2) ಅವರು ಅಲ್ಲಿ ಇರುವದು ವಾಸಿಮಾಡಲಿಕ್ಕಾಗಿ, “ದೇವಜನರನ್ನು ಯೋಗ್ಯಸ್ಥಿತಿಗೆ ತರುವ ಕೆಲಸಕ್ಕೋಸ್ಕರವಾಗಿ.” (ಎಫೆಸ 4:12) ನಮಗೆ ಆತ್ಮಿಕ ಸಹಾಯ ಬೇಕಾದಾಗ ಅವರ ಬಳಿಗೆ ಹೋಗದಿರುವದು, ನಾವು ಅಸ್ವಸ್ಥರಾದಾಗ ವೈದ್ಯರ ಬಳಿಗೆ ಹೋಗದೆ ಇರುವದಕ್ಕೆ ಸಮಾನವಾಗಿದೆ.
17 ವಿಷಯಗಳನ್ನು ಏಕಾಂಗಿಯಾಗಿ ವ್ಯವಹರಿಸಲು ಪ್ರಯತ್ನಿಸುವ ಕೆಲವರು ತಿಂಗಳುಗಳ ಯಾ ವರ್ಷಗಳ ನಂತರ, ಅವರ ಮನಸ್ಸಾಕ್ಷಿಯು ಅವರನ್ನು ಇನ್ನೂ ಕಠಿಣವಾಗಿ ಬಾಧಿಸುವದನ್ನು ಕಂಡುಕೊಳ್ಳುತ್ತಾರೆ. ಇನ್ನೂ ಕೆಡುಕೆಂದರೆ, ಗಂಭೀರವಾದ ತಪ್ಪುಗಳನ್ನು ಮರೆಮಾಡುವವರು ಪಾಪದಲ್ಲಿ ಎರಡನೆಯ ಯಾ ಮೂರನೆಯ ಬಾರಿ ಬೀಳುತ್ತಾರೆ. ಹಿರಿಯರ ಗಮನಕ್ಕೆ ವಿಷಯವು ಕೊನೆಗೂ ತಲುಪಿದಾಗ, ಅದು ಪುನರಾವರ್ತಿಸಿದ ತಪ್ಪು ಆಗಿರುತ್ತದೆ. ಯಾಕೋಬನ ಬುದ್ಧಿವಾದವನ್ನು ಅನುಸರಿಸುವದು ಎಷ್ಟೊಂದು ಉತ್ತಮ! ಅವನು ಬರೆದದ್ದು: “ನಿಮ್ಮಲ್ಲಿ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ; ಅವರು ಕರ್ತನ [ಯೆಹೋವನ, NW ] ಹೆಸರಿನಿಂದ ಅವನಿಗೆ ಎಣ್ಣೆಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ.” (ಯಾಕೋಬ 5:14) ವಾಸಿಮಾಡುವಿಕೆಗೆ ಸಮಯ ಇನ್ನೂ ಇರುವಾಗಲೇ ಹಿರಿಯರ ಬಳಿಗೆ ಹೋಗಿರಿ. ನಾವು ದೀರ್ಘ ಕಾಲ ಕಾದುನಿಂತರೆ, ಪಾಪದ ಒಂದು ಮಾರ್ಗದಲ್ಲಿ ನಾವು ಕಾಠಿಣ್ಯತೆಯವರಾಗಬಹುದು.—ಪ್ರಸಂಗಿ 3:3; ಯೆಶಾಯ 32:1, 2.
ತೋರಿಕೆ ಮತ್ತು ವಿನೋದ
18, 19. ಯೆಹೋವನ ಸಾಕ್ಷಿಗಳ ಕುರಿತಾಗಿ ಒಬ್ಬ ಪಾದ್ರಿಯು ಯಾಕೆ ಪ್ರಶಂಸನೀಯವಾಗಿ ಹೇಳಿಕೆಯನ್ನಿತ್ತನು?
18 ಐದು ವರ್ಷಗಳ ಹಿಂದೆ, ಪ್ಯಾರಿಸಿನ ಒಂದು ಪತ್ರಿಕೆಯಲ್ಲಿ, ಇಟೆಲಿಯ ಕ್ಯಾತೊಲಿಕ್ ಪಾದ್ರಿಯೊಬ್ಬನು ಯೆಹೋವನ ಸಾಕ್ಷಿಗಳ ಕುರಿತು ಪ್ರಶಂಸನೀಯವಾಗಿ ಮಾತಾಡಿದನು.a ಅವನಂದದ್ದು: “ವ್ಯಕ್ತಿಶಃ ನಾನು ಯೆಹೋವನ ಸಾಕ್ಷಿಗಳನ್ನು ಮೆಚ್ಚುತ್ತೇನೆ; ಅದನ್ನು ನಾನು ಮುಚ್ಚುಮರೆಯಿಲ್ಲದೆ ಒಪ್ಪುತ್ತೇನೆ. . . . ನನಗೆ ಗೊತ್ತಿರುವವರು ಪಾಪಕ್ಕೀಡಾಗದ ನಡತೆಯವರೂ, ಮೃದುಭಾಷಿಗಳು . . . [ಮತ್ತು] ಅತಿ ಮನ ಒಲಿಸುವವರು ಆಗಿದ್ದಾರೆ. ಸತ್ಯಕ್ಕೆ ಸ್ವೀಕರಣೀಯವಾದ ನಿರೂಪಣೆಯು ಬೇಕಾಗಿದೆ ಎಂದು ನಾವು ಯಾವಾಗ ತಿಳಿದುಕೊಳ್ಳುವೆವು? ಸತ್ಯವನ್ನು ಪ್ರಕಟಿಸುವವರು, ಅರೆಮನಸ್ಸಿನವರೂ, ಹೊಲಸುನಾತದವರು, ಕೆದರಿದ ತಲೆಗೂದಲುಗಳುಳ್ಳವರು, ಅಚ್ಚುಕಟಿಲ್ಟದ್ಲವರು ಆಗಿರುವ ಜರೂರಿಯೇನೂ ಇಲ್ಲವಲ್ಲ?”
19 ಈ ಮಾತುಗಳಿಗನುಸಾರ, ಇತರ ವಿಷಯಗಳೊಂದಿಗೆ, ಸಾಕ್ಷಿಗಳು ಉಡುಪು ಧರಿಸಿದ ಮತ್ತು ತಮ್ಮನ್ನು ತೋರ್ಪಡಿಸಿಕೊಂಡ ವಿಧಾನದಿಂದ ಪಾದ್ರಿಯು ಪ್ರಭಾವಿತನಾದನು. ಯಾರನ್ನು ಅವನು ಭೇಟಿಯಾಗಿದ್ದನೋ, ಅವರು ವರ್ಷಗಳಿಂದ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಕೊಟ್ಟಂತಹ ಸಲಹೆಯನ್ನು ಆಲಿಸಿದವರು ಎಂಬುದು ಸ್ಫುಟವಾಗುತ್ತದೆ. (ಮತ್ತಾಯ 24:45) ಸ್ತ್ರೀಯರ ಉಡುಪು ‘ಮಾನಸ್ಥೆಯರಾಗಿಯೂ ಮರ್ಯಾದೆಗೆ ತಕ್ಕಂತೆಯೂ ಇರಬೇಕೆಂದು’ ಬೈಬಲು ಹೇಳುತ್ತದೆ. (1 ತಿಮೊಥಿ 2:9) ಈ ಅವನತಿಗಿಳಿದ ಕಾಲದಲ್ಲಿ, ಆ ಬುದ್ಧಿವಾದವು ಪುರುಷರಿಗೂ ಅಗತ್ಯವಾಗಿದೆ. ದೇವರ ರಾಜ್ಯದ ಪ್ರತಿನಿಧಿಗಳು ತಮ್ಮನ್ನು ಹೊರಗಿನವರ ಮುಂದೆ ಸಭ್ಯತೆಯಿಂದ ತೋರ್ಪಡಿಸಿಕೊಳ್ಳುವದು ಸಮಂಜಸತೆಯದ್ದಲ್ಲವೇ?
20. ಎಲ್ಲಾ ಸಮಯಗಳಲ್ಲಿ ಕ್ರೈಸ್ತನೊಬ್ಬನು ತನ್ನ ಉಡುಪಿನ ವಿಚಾರದಲ್ಲಿ ಯಾಕೆ ಪ್ರಜ್ಞೆಯುಳ್ಳವನಾಗಿರಬೇಕು?
20 ಕೂಟಗಳಲ್ಲಿ ಮತ್ತು ಕ್ಷೇತ್ರಸೇವೆಯಲ್ಲಿ ಅವರು ಹೇಗೆ ಉಡುಪುಗಳನ್ನು ಧರಿಸುತ್ತಾರೆಂಬ ವಿಷಯದಲ್ಲಿ ಜಾಗ್ರತರಾಗಿರಬೇಕು ಎಂದು ಕೆಲವರು ಒಪ್ಪಬಹುದು, ಆದರೆ ಇತರ ಸಮಯಗಳಲ್ಲಿ ಬೈಬಲ್ ಸೂತ್ರಗಳು ಅನ್ವಯಿಸುವದಿಲ್ಲವೆಂದು ಅವರು ಭಾವಿಸಬಹುದು. ಆದಾಗ್ಯೂ, ಎಂದಾದರೂ ದೇವರ ರಾಜ್ಯದ ಪ್ರತಿನಿಧಿಗಳಾಗಿರುವದನ್ನು ನಾವು ನಿಲ್ಲಿಸುತೇವ್ತೋ? ಪರಿಸ್ಥಿತಿಗಳು ವಿವಿಧತೆಯದ್ದಾಗಿರುತ್ತವೆ, ಸತ್ಯ. ರಾಜ್ಯ ಸಭಾಗೃಹವೊಂದನ್ನು ಕಟ್ಟುವದರಲ್ಲಿ ನಾವು ಸಹಾಯ ಮಾಡುತ್ತಿರುವದಾದರೆ, ಅದೇ ರಾಜ್ಯ ಸಭಾಗೃಹದಲ್ಲಿ ಕೂಟವೊಂದಕ್ಕೆ ಹಾಜರಾಗುವಾಗ ಧರಿಸಿದ ಉಡುಪಿಗಿಂತಲೂ ಬೇರೆಯಾದದ್ದನ್ನು ಧರಿಸುವೆವು. ನಾವು ಆರಾಮ ಪಡೆಯುತ್ತಿರುವಾಗ, ಹೆಚ್ಚು ವಿಶ್ರಾಂತಿಯ ಶೈಲಿಯಲ್ಲಿ ನಾವು ಉಡುಪುಗಳನ್ನು ಧರಿಸುತ್ತಿರಬಹುದು. ಅದರೆ ಇತರರಿಗೆ ನಾವು ಗೋಚರಿಸುತ್ತಿರುವಾಗ, ನಮ್ಮ ಬಟ್ಟೆಯು ಯಾವಾಗಲೂ ಸುವ್ಯವಸ್ಥಿತವೂ, ಸಭ್ಯತೆಯದ್ದೂ ಆಗಿರತಕ್ಕದ್ದು.
21, 22. ಹಾನಿಕರವಾದ ವಿನೋದಗಳಿಂದ ನಾವು ಹೇಗೆ ಸಂರಕ್ಷಿಸಲ್ಪಟ್ಟಿದ್ದೇವೆ, ಮತ್ತು ಅಂಥ ವಿಷಯಗಳ ಮೇಲೆ ಬರುವ ಬುದ್ಧಿವಾದವನ್ನು ಯಾವ ರೀತಿಯಲ್ಲಿ ನಾವು ದೃಷ್ಟಿಸತಕ್ಕದ್ದು?
21 ಹೆಚ್ಚು ಗಮನಹರಿಸಬೇಕಾದ ಇನ್ನೊಂದು ವಿಭಾಗವೆಂದರೆ ವಿನೋದ. ಮಾನವರಿಗೆ—ವಿಶೇಷವಾಗಿ ಯುವಜನರಿಗೆ—ವಿನೋದವು ಆವಶ್ಯಕವಾಗಿದೆ. ಕುಟುಂಬಕ್ಕೋಸ್ಕರ ವಿಶ್ರಾಂತಿಗಾಗಿ ಸಮಯವನ್ನು ನಿಗದಿಗೊಳಿಸವಂಥದ್ದು ಪಾಪವೇನೂ ಅಲ್ಲ ಯಾ ಸಮಯವನ್ನು ಹಾಳುಮಾಡುವದೂ ಅಲ್ಲ. ಯೇಸುವು ಕೂಡ ತನ್ನ ಶಿಷ್ಯರಿಗೆ “ಸ್ವಲ್ಪ ದಣುವಾರಿಸಿಕೊಳ್ಳಿರಿ” ಎಂದು ಆಮಂತ್ರಿಸಿದನು. (ಮಾರ್ಕ 6:31) ಆದರೆ ವಿನೋದವು ಆತ್ಮಿಕ ಕಳಂಕಗೊಳಿಸುವಿಕೆಗೆ ದ್ವಾರವನ್ನು ತೆರೆಯದಂತೆ ನಾವು ಜಾಗ್ರತೆಯಿಂದಿರತಕ್ಕದ್ದು. ಲೈಂಗಿಕ ಅನೈತಿಕತೆಯನ್ನು, ಒರಟಾದ ಹಿಂಸಾಚಾರಗಳನ್ನು, ಥರಥರಿಕೆಗಳನ್ನು, ಮತ್ತು ಪ್ರೇತವಾದಗಳನ್ನು ವಿನೋದಗಳಲ್ಲಿ ಎತ್ತಿತೋರಿಸುವ ಲೋಕವೊಂದರಲ್ಲಿ ನಾವು ಜೀವಿಸುತ್ತಾ ಇದ್ದೇವೆ. (2 ತಿಮೊಥಿ 3:3; ಪ್ರಕಟನೆ 22:15) ಅಂಥ ಅಪಾಯಗಳ ಕುರಿತು ನಂಬಿಗಸ್ತ ವಿವೇಕಿ ಆಳು ಎಚ್ಚರವಿದ್ದು, ಅವಿರತವಾಗಿ ಅವುಗಳ ವಿರುದ್ಧ ನಮ್ಮನ್ನು ಎಚ್ಚರಿಸುತ್ತಾನೆ. ಈ ಜ್ಞಾಪಿಸುವಿಕೆಗಳು ನಿಮ್ಮ ಸ್ವಾತಂತ್ರ್ಯದ ಅತಿಕ್ರಮಿಸುವಿಕೆಗಳು ಎಂದು ನೀವು ಭಾವಿಸುತ್ತೀರೋ? ಇಲ್ಲವೆ, ನಿಮ್ಮ ಗಮನಕ್ಕೆ ಅವಿರತವಾಗಿ ಅಂಥ ಅಪಾಯಗಳನ್ನು ತರುವಷ್ಟು ಮಟ್ಟಿಗೆ ಯೆಹೋವನ ಸಂಸ್ಥಾಪನೆಯು ನಿಮ್ಮನ್ನು ಲಕ್ಷ್ಯಿಸುವದಕ್ಕಾಗಿ ನೀವು ಆಭಾರಿಗಳಾಗಿದ್ದೀರೋ?—ಕೀರ್ತನೆ 19:7; 119:95.
22 ನಮ್ಮ ಸ್ವಾತಂತ್ರ್ಯವು ಯೆಹೋವನಿಂದ ಬರುತ್ತದೆಂದೂ, ನಾವದನ್ನು ಹೇಗೆ ಉಪಯೋಗಿಸುತ್ತೇವೆಂಬುದರ ಕುರಿತು ನಾವು ಹೊಣೆಗಾರರಾಗಿದ್ದೇವೆ ಎಂಬುದನ್ನು ಎಂದಿಗೂ ಮರೆಯದಿರ್ರಿ. ಒಳ್ಳೆಯ ಬುದ್ಧಿವಾದವನ್ನು ನಾವು ಅಲಕ್ಷ್ಯಿಸುವದಾದರೆ ಮತ್ತು ತಪ್ಪು ತೀರ್ಮಾನಗಳನ್ನು ಮಾಡುವದಾದರೆ, ಅದಕ್ಕಾಗಿ ಬೇರೆ ಯಾರನ್ನೂ ನಾವು ದೂರಲು ಸಾಧ್ಯವಿಲ್ಲ. ಅಪೊಸ್ತಲ ಪೌಲನು ಹೇಳುವದು: “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.”—ರೋಮಾಪುರ 14:12; ಇಬ್ರಿಯ 4:13.
ದೇವರ ಮಕ್ಕಳ ಸ್ವಾತಂತ್ರ್ಯಕ್ಕಾಗಿ ಮುನ್ನೋಡಿರಿ
23. (ಎ) ಸ್ವಾತಂತ್ರ್ಯದ ಕುರಿತಾಗಿ ಯಾವ ಆಶೀರ್ವಾದಗಳನ್ನು ನಾವೀಗ ಆನಂದಿಸುತ್ತೇವೆ? (ಬಿ) ಯಾವ ಆಶೀರ್ವಾದಗಳನ್ನು ನಾವು ಆಸಕ್ತಿಯಿಂದ ಮುನ್ನೋಡುತ್ತೇವೆ?
23 ನಾವು ಖಂಡಿತವಾಗಿಯೂ ಆಶೀರ್ವದಿತ ಜನರಾಗಿದ್ದೇವೆ. ಮಿಥ್ಯಾ ದರ್ಮದಿಂದ ಮತ್ತು ಮೂಢ ಶ್ರದ್ಧೆಯಿಂದ ನಾವು ಸ್ವತಂತ್ರರಾಗಿದ್ದೇವೆ. ವಿಮೋಚನಾ ಯಜ್ಞದ ಫಲವಾಗಿ ಉಪಕಾರಿಗಳು, ಯೆಹೋವನನ್ನು ಪರಿಶುದ್ಧಗೊಳಿಸಲ್ಪಟ್ಟ ಮನಸ್ಸಾಕ್ಷಿಯಿಂದ ನಾವು ಯೆಹೋವನನ್ನು ಸಮೀಪಿಸಬಹುದು, ಪಾಪ ಮತ್ತು ಮರಣದ ದಾಸತ್ವದಿಂದ ಆತ್ಮಿಕ ರೀತಿಯಲ್ಲಿ ನಾವು ಸ್ವತಂತ್ರರಾಗಿದ್ದೇವೆ. ಮತ್ತು ಬಲುಬೇಗನೆ “ದೇವರ ಪುತ್ರರ ಪ್ರತ್ಯಕ್ಷತೆಯು” ಬರಲಿರುವದು. ಅರ್ಮಗೆದ್ದೋನಿನಲ್ಲಿ ಅವರ ಸ್ವರ್ಗೀಯ ಮಹಿಮೆಯಿಂದ ಯೇಸುವಿನ ಸಹೋದರರು ಯೆಹೋವನ ವೈರಿಗಳ ಸಂಹಾರಕರೋಪಾದಿ ಮಾನವರಿಗೆ ಪ್ರಕಟಿಸಲ್ಪಡುವರು. (ರೋಮಾಪುರ 8:19; 2 ಥೆಸಲೊನೀಕ 1:6-8; ಪ್ರಕಟನೆ 2:26, 27) ಅದಾದನಂತರ, ಈ ದೇವರ ಪುತ್ರರು ದೇವರ ಸಿಂಹಾಸನದಿಂದ ಮಾನವ ಕುಲಕ್ಕೆ ಹರಿಯುವ ಆಶೀರ್ವಾದಗಳ ಕಾಲುವೆಯೋಪಾದಿ ಪ್ರಕಟಗೊಳ್ಳಲಿರುವರು. (ಪ್ರಕಟನೆ 22:1-5) ಕಟ್ಟಕಡೆಗೆ, ದೇವರ ಪುತ್ರರ ಈ ಪ್ರಕಟಗೊಳ್ಳುವಿಕೆಯು ನಂಬಿಗಸ್ತ ಮಾನವರಿಗೆ ದೇವರ ಮಕ್ಕಳ ಮಹಿಮೆಯ ವಿಮೋಚನೆಯೊಂದಿಗೆ ಆಶೀರ್ವಾದವಾಗಿ ಪರಿಣಮಿಸುವದು. ಆ ಸಮಯಕ್ಕಾಗಿ ನೀವು ಹಾತೊರೆಯುವಿರೋ? ಹಾಗಾದರೆ, ನಿಮ್ಮ ಕ್ರೈಸ್ತ ಸ್ವಾತಂತ್ರ್ಯವನ್ನು ವಿವೇಕದಿಂದ ಉಪಯೋಗಿಸಿರಿ. ದೇವರಿಗಾಗಿ ಈಗ ದಾಸರಾಗಿರಿ, ಮತ್ತು ಸರ್ವ ನಿತ್ಯತೆಗಾಗಿ ಆಶ್ಚರ್ಯಕರವಾದ ಸ್ವಾತಂತ್ರ್ಯದಲ್ಲಿ ನೀವು ಆನಂದಿಸಲಿರುವಿರಿ!
[ಅಧ್ಯಯನ ಪ್ರಶ್ನೆಗಳು]
a ಈ ಮೆಚ್ಚುಗೆಯನ್ನು ತದನಂತರ ಪಾದ್ರಿಯು ಹಿಂತೆಗೆದನು, ಒತ್ತಡದ ಕೆಳಗೆ ಎಂದು ತೋರುತ್ತದೆ.
ಪರಾಮರ್ಶೆಯ ಚೌಕಟ್ಟು
▫ ಅಭಿಷಿಕ್ತರು ಮತ್ತು ಬೇರೆ ಕುರಿಗಳು ಯೆಹೋವನನ್ನು ಘನಪಡಿಸಿದ್ದು ಹೇಗೆ?
▫ ಕ್ರೈಸ್ತರು ಲೌಕಿಕ ಅಧಿಕಾರಿಗಳನ್ನು ಯಾಕೆ ಸನ್ಮಾನಿಸತಕ್ಕದ್ದು?
▫ ಕ್ರೈಸ್ತನೊಬ್ಬನು ಹಿರಿಯರೊಂದಿಗೆ ಯಾವ ವಿಧಾನಗಳಲ್ಲಿ ಸಹಕರಿಸತಕ್ಕದ್ದು?
▫ ಉಡುಪಿನ ಕುರಿತು, ಲೋಕದ ಅನೇಕರಿಂದ ಯೆಹೋವನ ಸಾಕ್ಷಿಗಳು ಏಕೆ ಭಿನ್ನವಾಗಿ ಎದ್ದುಕಾಣುತ್ತಾರೆ?
▫ ವಿನೋದದ ವಿಷಯಕ್ಕೆ ನಾವು ಬರುವಾಗ ಯಾವುದನ್ನು ನಾವು ಹೋಗಲಾಡಿಸತಕ್ಕದ್ದು?
[ಪುಟ 17 ರಲ್ಲಿರುವ ಚಿತ್ರ]
ಹಿರಿಯರು ವಿಶೇಷವಾಗಿ ನಮ್ಮ ಪ್ರೀತಿಗೆ ಮತ್ತು ಸಹಕಾರಕ್ಕೆ ಅರ್ಹರಾಗಿದ್ದಾರೆ
[ಪುಟ 18 ರಲ್ಲಿರುವ ಚಿತ್ರಗಳು]
ಕ್ರೈಸ್ತನೊಬ್ಬನ ಉಡುಪು ಸುವ್ಯವಸ್ಥಿತವಾದದ್ದೂ, ಸಭ್ಯತೆಯದ್ದೂ, ಮತ್ತು ಸಂದರ್ಭಕ್ಕನುಸಾರವಾದದ್ದೂ ಆಗಿರತಕ್ಕದ್ದು