ಜೀವದ ಅಮೂಲ್ಯ ವರದಾನವನ್ನು ಗಣ್ಯಮಾಡುವುದು
ಜೀವವು ಎಂಥ ಒಂದು ಅಮೂಲ್ಯ ಸೊತ್ತು! ಅದರ ಹೊರತು ನಾವೇನನ್ನೂ ಮಾಡಲಾರೆವು. ಒಮ್ಮೆ ಅದು ನಷ್ಟವಾಯಿತೆಂದರೆ, ಯಾವುದೇ ಮಾನವ ಸಾಧನಗಳ ಮೂಲಕ ಅದನ್ನು ಪುನರ್ಜೀವಗೊಳಿಸ ಸಾಧ್ಯವಿಲ್ಲ. ನಮ್ಮ ಜೀವವು ಅಪಾಯದಲ್ಲಿರುವುದಾದರೆ, ಅದನ್ನು ಕಾಪಾಡಲು ಸಮಂಜಸವಾದ ಎಲ್ಲಾ ಪ್ರಯತ್ನಗಳನ್ನು ನಾವು ಮಾಡುತ್ತೇವೆ. ಕೆಲವರಾದರೋ ಸಂಕಷ್ಟದಲ್ಲಿರುವಾಗ ಅಲೌಕಿಕವಾದ ಸಹಾಯಕ್ಕೂ ಮೊರೆಯಿಡುತ್ತಾರೆ!
ಸಮುದ್ರದಲ್ಲಿ ಒಂದು ಬಿರುಸಾದ ಬಿರುಗಾಳಿಗೆ ಸಿಕ್ಕಿದ ಒಂದು ಹಡಗದ ವಿಷಯವಾದ ಬೈಬಲ್ ದಾಖಲೆಯ ಕುರಿತು ನಮಗೆ ನೆನಪುಬರುತ್ತದೆ. ಅದು ಒಡೆದುಹೋಗುವ ಹಾಗಾದಾಗ, “ನಾವಿಕರು ಹೆದರಿ ತಮ್ಮ ತಮ್ಮ ದೇವರುಗಳಿಗೆ ಮೊರೆಯಿಟ್ಟರು.” ತದನಂತರ, ಅವರೆಲ್ಲರೂ ಸತ್ಯದೇವರಿಗೆ ವಿಜ್ಞಾಪನೆ ಮಾಡಿಕೊಂಡರು: “ಯೆಹೋವನೇ, ಲಾಲಿಸು, ಲಾಲಿಸು. . ನಾಶನವು ನಮಗೆ ಬಾರದಿರಲಿ.” ಬೈಬಲ್ ದಾಖಲೆಯು ಮತ್ತೂ ಅನ್ನುವುದು: “ತಮ್ಮ ಕಷ್ಟವು [ಹಡಗಿನ ಭಾರವು, NW] ಕಡಿಮೆಯಾಗುವ ಹಾಗೆ ಹಡಗಿನ ಸಾಮಾನುಗಳನ್ನು ಸಮುದ್ರಕ್ಕೆ ಬಿಸಾಟುಬಿಟ್ಟರು.”—ಯೋನ 1:4-6, 14; ಅ.ಕೃತ್ಯಗಳು 27:18, 19 ಹೋಲಿಸಿ.
ತಮ್ಮ ಜೀವಗಳನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ತಮಗೆ ಪ್ರಿಯವಾದ ಪ್ರಾಪಂಚಿಕ ಸೊತ್ತುಗಳನ್ನು ಸಹ ತ್ಯಜಿಸಿಬಿಡಲು ಆ ನಾವಿಕರು ಸಿದ್ಧರಾಗಿದ್ದರು. ಐಹಿಕ ಸೊತ್ತುಗಳನ್ನು ನಾವು ಪುನಃ ಭರ್ತಿಮಾಡಬಲ್ಲೆವು—ಆದರೆ ಜೀವವನ್ನು ಪುನಃ ತರಲಾರೆವು. ಮತ್ತು ಸಹಜವಾಗಿಯೇ ನಮ್ಮ ಜೀವವನ್ನು ಪ್ರೀತಿಸುತ್ತೇವಾದ್ದರಿಂದ, ನಾವು ಅಪಾಯದಿಂದ ಹಿಮ್ಮೆಟ್ಟುತ್ತೇವೆ. ನಮ್ಮ ಶರೀರಗಳನ್ನು ನಾವು ಉಣಿಸುತ್ತೇವೆ, ಉಡಿಸುತ್ತೇವೆ ಮತ್ತು ಪೋಷಿಸುತ್ತೇವೆ. ನಾವು ಅಸ್ವಸ್ಥ ಬೀಳುವಾಗ ವೈದ್ಯಕೀಯ ಸಹಾಯವನ್ನು ಹುಡುಕುತ್ತೇವೆ.
ಆದರೂ, ನಮ್ಮ ಆತ್ಮ-ರಕ್ಷಣೆಯ ಸಹಜ ಪ್ರವೃತ್ತಿಗಳನ್ನು ಕೇವಲ ಹಿಂಬಾಲಿಸುವುದಕ್ಕಿಂತ ಹೆಚ್ಚಿನದ್ದನ್ನು ಜೀವದಾತನು ನಮ್ಮಿಂದ ಆವಶ್ಯಕಪಡಿಸುತ್ತಾನೆ. ಎಷ್ಟೆಂದರೂ ಜೀವವು ಒಂದು ಅಮೂಲ್ಯವಾದ ವರದಾನವು ಮತ್ತು ಅದು ಇಡೀ ವಿಶ್ವದಲ್ಲಿ ಅತ್ಯಂತ ಮಹತ್ವವುಳ್ಳ ವ್ಯಕ್ತಿಯಾದಾತನಿಂದ ಬಂದಿದೆ. ಆ ಕೊಡುಗೆಗಾಗಿ ಮತ್ತು ಅದರ ದಾತನಿಗಾಗಿ ಪ್ರಾಮಾಣಿಕ ಗಣ್ಯತೆಯಲ್ಲಿ, ನಾವು ಜೀವವನ್ನು ನೆಚ್ಚಬೇಡವೇ? ಮತ್ತು ಅದರಲ್ಲಿ ಇತರರ ಜೀವಗಳಿಗಾಗಿ ಒಂದು ಪರಿಗಣನೆಯು ಕೂಡಿರದೇ?
ಆದುದರಿಂದ ಯೆಹೋವ ದೇವರು ಇಸ್ರಾಯೇಲ್ಯ ಜನಾಂಗಕ್ಕೆ ಕೊಟ್ಟ ನಿಯಮದಲ್ಲಿ, ಇತರರ ಜೀವಗಳನ್ನು ಮತ್ತು ಆರೋಗ್ಯವನ್ನು ಕಾಪಾಡುವುದಕ್ಕೆ ರಚಿಸಲ್ಪಟ್ಟ ನಿಯಮಗಳಿಂದ ಕೂಡಿದ್ದದ್ದು ನಮ್ಮನ್ನು ಆಶ್ಚರ್ಯಪಡಿಸಬಾರದು. (ವಿಮೋಚನಕಾಂಡ 21:29; ಧರ್ಮೋಪದೇಶಕಾಂಡ 22:8) ಅದೇ ರೀತಿ, ಇಂದು ಕ್ರೈಸ್ತರು ಶಾರೀರಿಕ ಸುರಕ್ಷೆಯ ಅರುಹುಳ್ಳವರಾಗಿರಬೇಕು. ದೃಷ್ಟಾಂತಕ್ಕಾಗಿ, ನಿಮ್ಮ ಮನೆಯಲ್ಲಿ ಚಿಕ್ಕಮಕ್ಕಳು ಇರುವುದಾದರೆ, ಮಣಿಗಳು, ಸೂಜಿಗಳು ಅಥವಾ ಮಗುವಿಗೆ ತೀವ್ರ ಹಾನಿಯನ್ನುಂಟುಮಾಡಬಲ್ಲ ಹರಿತವಾದ ವಸ್ತುಗಳನ್ನು, ಮಗುವು ಅರಿವಿಲ್ಲದೆ ಅವುಗಳೊಂದಿಗೆ ಆಡುವಂತೆ ಅಥವಾ ಅವನ್ನು ನುಂಗಿಬಿಡುವಂತೆ ಅವರಿಗೆ ಎಟಕಿಸಲಾಗುವ ಸ್ಥಳದಲ್ಲಿ ಅಜಾಗ್ರತೆಯಿಂದ ಬಿಟ್ಟುಹೋಗುವಿರೋ? ಅಪಾಯಕಾರಿಯಾದ ರಾಸಾಯನಿಕ ದ್ರವ್ಯಗಳನ್ನು ಅಥವಾ ಔಷಧವಸ್ತುಗಳನ್ನು ಮಕ್ಕಳಿಗೆ ಎಟಕಿಸಲಾಗದ ಸ್ಥಳದಲ್ಲಿ ಸಂಗ್ರಹಿಸಿಡಲಾಗುತ್ತದೋ? ನೆಲದ ಮೇಲೆ ನೀರು ಚೆಲ್ಲಲ್ಪಟ್ಟಿದ್ದರೆ, ಒಂದು ಅವಘಡವನ್ನು ತಪ್ಪಿಸುವಂತೆ ನೀವು ಅದನ್ನು ಕ್ಷಿಪ್ರವಾಗಿ ಒರಸಿಬಿಡುತ್ತೀರೋ? ಹಾಳಾಗಿರುವ ವಿದ್ಯುತ್ ಉಪಕರಣಗಳನ್ನು ಆ ಕೂಡಲೇ ದುರುಸ್ತಿ ಮಾಡುವಂತೆ ನೀವು ನೋಡಿಕೊಳ್ಳುತ್ತೀರೋ? ನಿಮ್ಮ ವಾಹನಕ್ಕೆ ಕ್ರಮದ ದುರುಸ್ತಿಯು ನೀಡಲ್ಪಡುತ್ತದೋ? ನೀವು ಸುರಕ್ಷಿತ ವಾಹನ ಚಾಲಕರೋ? ಜೀವದ ಅಮೂಲ್ಯತೆಯನ್ನು ನೀವು ನಿಜವಾಗಿ ಗಣ್ಯಮಾಡುವುದಾದರೆ, ಇವುಗಳಲ್ಲಿ ಮತ್ತು ತದ್ರೀತಿಯ ಕ್ಷೇತ್ರಗಳಲ್ಲಿ ಸಮಂಜಸವಾದ ಮುಂಜಾಗ್ರತೆಗಳನ್ನು ತಕ್ಕೊಳ್ಳಲು ನೀವು ಪ್ರೇರಿಸಲ್ಪಡುವಿರಿ.
ಆದರೆ ಕೆಲವರಾದರೋ ತಮ್ಮ ಸ್ವಂತ ಜೀವವನ್ನೂ ಹಗುರವೆಂದೆಣಿಸುವುದು ವಿಷಾದಕರವು. ಉದಾಹರಣೆಗೆ, ಸಿಗರೇಟು ಸೇದುವಿಕೆ ಅನಾರೋಗ್ಯಕರವೆಂದು ಇಂದು ಯಾರಿಗೆ ಗೊತ್ತಿಲ್ಲ? ಆದರೂ, ಲಕ್ಷಾಂತರ ಜನರು ಆ ದುರಭ್ಯಾಸದ ದಾಸರಾಗಿದ್ದಾರೆ, ಆ ವಿಷಕಾರಿ ಹೊಗೆಯನ್ನು ಸೇದುವ ಪ್ರತಿ ಬಾರಿ ಅವರ ಆರೋಗ್ಯವು ಕ್ಷಯಿಸುತ್ತಾ ಹೋಗುತ್ತದೆ. ಇತರರು ಮಾದಕದ್ರವ್ಯದ, ಇನ್ನಿತರರು ಮದ್ಯಸಾರದ ದುರುಪಯೋಗವನ್ನು, ಎಲ್ಲವನ್ನು ತಮ್ಮ ಸ್ವಂತ ಕೇಡಿಗಾಗಿಯೇ ಮಾಡುತ್ತಾರೆ. ಏಯ್ಡ್ಸ್ ಯಾವ ಜ್ಞಾತ ವಾಸಿಯೂ ಇಲ್ಲದ ಮಾರಕ ರೋಗವಾಗಿದೆ. ಆದರೆ ಲೈಂಗಿಕ ಅನೈತಿಕತೆಯನ್ನು, ಮತ್ತು ನಿರ್ದಿಷ್ಟ ತರದ ಮಾದಕದ್ರವ್ಯದ ದುರುಪಯೋಗವನ್ನು, ಮತ್ತು ರಕ್ತ ಪೂರಕಗಳನ್ನು ಅವರು ವರ್ಜಿಸಿದ್ದರೆ, ಅನೇಕರು ಈ ರೋಗ ತಗಲುವುದನ್ನು ತಪ್ಪಿಸಿಕೊಳ್ಳಬಹುದಿತ್ತು. ಜೀವಕ್ಕಾಗಿ ಗಣ್ಯತೆಯಲ್ಲಿ ಎಂಥ ಶೋಚನೀಯ ಕೊರತೆಯು!—ರೋಮಾಪುರ 1:26, 27; 2 ಕೊರಿಂಥ 7:1.
ಬದಲಾವಣೆ ಶಕ್ಯವು!
ತಮ್ಮ ಮಹಾ ನಿರ್ಮಾಣಿಕನಾದ ಯೆಹೋವನನ್ನು ಗಣ್ಯಮಾಡುವವರಿಗೆ ಜೀವವನ್ನು ಅಮೂಲ್ಯವಾಗಿ ವೀಕ್ಷಿಸುವುದಕ್ಕೆ ಒಂದು ಬಲವಾದ ಕಾರಣವಿದೆ. ಜೀವವು ಆತನ ಪವಿತ್ರ ದಾನವಾಗಿದೆ. ಆದುದರಿಂದ ಅದನ್ನು ಒಂದು ದೈವಿಕ ಕೊಡುಗೆಯಾಗಿ ಉಪಚರಿಸುವುದಕ್ಕೆ ಆವಶ್ಯವಾದ ಯಾವುದೇ ಬದಲಾವಣೆಗಳನ್ನು ಮಾಡಲು ಅವರು ಸಿದ್ಧರಾಗಿದ್ದಾರೆ. ಘಾನಾದ ಅಧ್ಯಾಪಕ ಕವಾಕುನ ಅನುಭವವನ್ನು ಗಮನಿಸಿರಿ. ಮತಿಗೆಟ್ಟ ಮದ್ಯಪಾನ ರೋಗಿಯಾದ ಆವನು ತನ್ನ ಜೀವವನ್ನು ಹಾಳುಗೆಡವುತ್ತಿದ್ದನು.
ಕವಾಕು ನೆನಪಿಸಿಕೊಳ್ಳುವುದು: “ನನ್ನ ಪತ್ನಿ ನನ್ನನ್ನು ಗೌರವಿಸುವಂತೆ ನಿರ್ಬಂಧಿಸಲು ನಾನು ಪ್ರಯತ್ನಿಸಿದೆ, ವಿಶಿಷ್ಟವಾಗಿ ಕುಡಿದು ಮತ್ತನಾಗಿದ್ದಾಗ ನಾನಿದ್ದನ್ನು ಮಾಡುತ್ತಿದ್ದದರಿಂದ ಇದು ಹೆಚ್ಚಾಗಿ ಕಟುವಾದ ವಾಗ್ವಾದಗಳಿಗೆ ಮತ್ತು ಜಗಳಗಳಿಗೆ ನಡಿಸುತ್ತಿತ್ತು. ಮದ್ಯಪಾನ ಲೋಲುಪತೆಯಿಂದಾಗಿ ನನ್ನ ಕೈಯಲ್ಲಿ ಹೆಚ್ಚಾಗಿ ಹಣ ಉಳಿಯುತ್ತಿರಲಿಲ್ಲ ಮತ್ತು ಕುಟುಂಬ ಪೋಷಣೆಗೆ ಹಣ ಒದಗಿಸುವುದಕ್ಕೆ ನಾನು ಆಗಾಗ್ಯೆ ತಪ್ಪುತ್ತಿದ್ದೆನು. ಇದು ನನ್ನ ಪತ್ನಿಯನ್ನು ಅತಿಯಾಗಿ ಕಾಡುತ್ತಿತ್ತೆಂಬದು ಗ್ರಾಹ್ಯ. ಹಣ ಮುಗಿದಾಗಲೆಲ್ಲಾ (ಇದು ಪದೇ ಪದೇ ಸಂಭವಿಸುತ್ತಿತ್ತು) ನನ್ನ ಮದ್ಯಪಾನದ ಚಟವನ್ನು ಪೋಷಿಸಲು ನಾನು ಏನನ್ನಾದರೂ ಮಾಡುತ್ತಿದ್ದೆನು. ಒಮ್ಮೆ ನನ್ನ ವಿದ್ಯಾರ್ಥಿಗಳಿಂದ ಸರ್ಕಾರಿ ಪರೀಕೆಗ್ಷೆ ರಿಜಿಸ್ತ್ರಿ ಮಾಡುವ ಉದ್ದೇಶಕ್ಕಾಗಿ ನಾನು ಒಟ್ಟುಮಾಡಿದ್ದ ಹಣವನ್ನು ಸ್ವಂತಕ್ಕಾಗಿ ಬಳಸುವಷ್ಟರ ಮಟ್ಟಿಗೂ ಮುಂದರಿದೆ. ನಾನು ಮದ್ಯಪಾನ ಗೋಷ್ಠಿಯಲ್ಲಿ ಮಗ್ನನಾದೆನು ಮತ್ತು ಕುಡಿತದ ಸಂಗಡಿಗರಿಗಾಗಿಯೂ ಸರಾಯಿ ತರಿಸಿದೆ. ಆದರೆ ನನ್ನ ಕೃತ್ಯಕ್ಕಾಗಿ ಲೆಕ್ಕಕೊಡಬೇಕಾದ ಸಮಯವು ಬೇಗನೇ ಬಂತು. ನನ್ನ ಮುಖ್ಯೋಪಾಧ್ಯಾಯರ ಕಾಲೋಚಿತ ಹಸ್ತಕ್ಷೇಪವಿಲ್ಲದೆ ಇರುತ್ತಿದ್ದರೆ ನನ್ನ ಕೆಲಸವನ್ನು ಕಳಕೊಳ್ಳುತ್ತಿದ್ದೆ.
“ನನ್ನ ಜೀವಿತವು ಬಹಳ ಕೆಟ್ಟ ಸ್ಥಿತಿಯಲ್ಲಿತ್ತು. ನಾನು ಸಂಕೋಚಪಟ್ಟುಕೊಂಡೆ, ಆದರೆ ಬೇಗನೇ ಆ ಭಾವನೆ ನನ್ನಿಂದ ಹೋಗಿಬಿಟ್ಟಿತು. ತದನಂತರ ನನ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಬೆಳೆಯಲಾರಂಭಿಸಿತು ಯಾಕಂದರೆ ಜೀವಿತದಲ್ಲಿ ಸೋತ ಅನಿಸಿಕೆ ನನಗಾಗಿತ್ತು. ಆದರೂ ಮದ್ಯಪಾನದ ಚಟದಿಂದ ನಾನು ಮುಕ್ತನಾಗದೆ ಇದ್ದೆನು. ಒಂದು ದಿನ ಮದ್ಯದಂಗಡಿಯಲ್ಲಿ ಕುಡಿಕರ ಜಗಳದಲ್ಲಿ ನಾನು ಒಳಗೂಡಿದೆ ಮತ್ತು ನನಗೆ ಚೂರಿಯೇಟು ಬಿತ್ತು. ಮದ್ಯಸಾರದ ಮೋಹವು ಒಂದು ದಿನ ನನ್ನ ಜೀವವನ್ನೇ ನಷ್ಟಗೊಳಿಸುವುದೆಂಬ ವೇದನಾಮಯ ಮನವರಿಕೆ ನನಗಾಯಿತು.
“ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳು ನಮಗೆ ಬೈಬಲ್ನಲ್ಲಿ ಆಸಕ್ತಿ ಹುಟ್ಟಿಸಲು ಪ್ರಯತ್ನಿಸುತ್ತಾ, ನಮ್ಮ ಮನೆಯನ್ನು ಆಗಿಂದಾಗ್ಯೆ ಸಂದರ್ಶಿಸುತ್ತಿದ್ದರು. ನನ್ನ ಪತ್ನಿ ಮತ್ತು ನಾನು ಯಾವಾಗಲೂ ಅವರಿಂದ ತಪ್ಪಿಸಿಕೊಳ್ಳುತ್ತಿದ್ದೆವು ಯಾಕಂದರೆ ಅವರೊಂದು ಉಪದ್ರವೆಂದು ನಾವು ನೆನಸಿದೆವ್ದು. ಆದರೂ ಒಂದು ಸಂದರ್ಭದಲ್ಲಿ ಅವರ ಕಡೆಗೆ ಸಹಾನುಭೂತಿಯಿಂದಾಗಿ ನಾನು ಕಿವಿಗೊಡಲು ನಿರ್ಣಯಿಸಿದೆನು. ಬೈಬಲಿನ ಅಧ್ಯಯನವು ದೇವರ ಹೊಸ ವ್ಯವಸ್ಥೆಯಲ್ಲಿ ಸದಾಕಾಲ ಜೀವಿಸುವ ಆಶ್ಚರ್ಯಕರ ಪ್ರತೀಕ್ಷೆಗೆ ನನ್ನ ಕಣ್ಣುಗಳನ್ನು ತೆರೆಯಿತು. ಯೆಹೋವನ ಸಾಕ್ಷಿಗಳ ಸಹಾಯದಿಂದ ನಾನು ಎಷ್ಟು ಹೆಚ್ಚು ಬೈಬಲ್ ಅಧ್ಯಯನ ಮಾಡಿದೆನೋ ಅಷ್ಟು ಆಳವಾಗಿ ನಮ್ಮ ಜೀವದಾತನಾದ ಯೆಹೋವನೆಡೆಗೆ ಮತ್ತು ಆತನ ಜೀವದ ವರದಾನಕ್ಕಾಗಿ ನನ್ನ ಗಣ್ಯತೆಯು ಬೆಳೆಯಿತು, ಮತ್ತು ಬೈಬಲ್ ಸೂಚನೆಯ ವ್ಯಾವಹಾರ್ಯತೆಯೊಂದಿಗೆ ನಾನು ಹೆಚ್ಚು ಪ್ರಭಾವಿತನಾದೆನು. ಇದು ನನ್ನ ಜೀವಿತವನ್ನು ಶುದ್ಧಮಾಡಿಕೊಳ್ಳುವುದಕ್ಕೆ ನನ್ನನ್ನು ಅಧಿಕ ಉತ್ತೇಜನಗೊಳಿಸಿತು. ಇದು ಸುಲಭವಾಗಿರಲಿಲ್ಲ ಯಾಕಂದರೆ ಸರಾಯಿಯನ್ನು ಮತ್ತು ನನ್ನ ಹಳೆಯ ಸಂಗಡಿಗರನ್ನು ಎಡೆಬಿಡದೆ ಎದುರಿಸಲಿಕ್ಕಿತ್ತು. ಪ್ರಾರ್ಥನೆಯನ್ನು ಆಲಿಸುವವನಾದ ಯೆಹೋವನು ನನ್ನ ಹೃದಯದ ನಿರ್ಧಾರವನ್ನು ಕಂಡು ನನಗೆ ಕಿವಿಗೊಟ್ಟನು.a
“ನನ್ನ ಪತ್ನಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಲ್ಲವಾದರೂ, ನನ್ನನ್ನು ಮತ್ತು ನನ್ನ ಧರ್ಮವನ್ನು ಈಗ ಅತಿ ಗೌರವದಿಂದ ಕಾಣುತ್ತಾಳೆ, ಯಾಕಂದರೆ ನನ್ನ ಜೀವಿತದಲ್ಲಿ ಮತ್ತು ನಮ್ಮ ದಾಂಪತ್ಯ ಸಂಬಂಧದಲ್ಲಿ ಮಹಾ ಪರಿವರ್ತನೆಯಾಗಿರುವುದನ್ನು ಆಕೆ ಕಾಣುತ್ತಾಳೆ. ನನ್ನ ಮತ್ತು ನನ್ನ ಪತ್ನಿಯ ನಡುವಣ ಜಗಳಗಳಲ್ಲಿ ನಮ್ಮ ನೆರೆಯವರಿಗೆ ನಡುವೆ ಬರುವ ಅಗತ್ಯ ಇನ್ನಿರುವುದಿಲ್ಲ. ನಾನು ಈಗ ಆನಂದಿಸುತ್ತಿರುವ ಮನಶ್ಶಾಂತಿಯನ್ನು ನಾನು ನೆಚ್ಚುತ್ತೇನೆ. ನಿಶ್ಚಯವಾಗಿ ಯೆಹೋವ ದೇವರನ್ನು ನಮ್ಮ ಜೀವದಾತನಾಗಿ ಗಣ್ಯಮಾಡುವುದು, ಜೀವದ ಅಮೂಲ್ಯ ವರದಾನದ ಮೇಲೆ ಆತನ ದೃಷ್ಟಿಕೋನವನ್ನು ಅವಲಂಬಿಸುವುದು, ಮತ್ತು ಜೀವಿಸುವ ವಿಧಾನದ ಬಗ್ಗೆ ಆತನ ಸೂಚನೆಗಳಿಗೆ ವಿಧೇಯರಾಗುವುದು ಒಂದೇ ಜೀವಿತದ ಅರ್ಹವಾದ ಮಾರ್ಗವಾಗಿದೆ.”
ದೇವರ ನೀಡಿಕೆಯಾದ ನಿತ್ಯಜೀವ
ಕವಾಕುನಂಥ ಸಾವಿರಾರು ಜನರು “ನಿಜನೀತಿ ಮತ್ತು ನಿಷ್ಠೆಯಲ್ಲಿ ದೇವರ ಚಿತ್ತಾನುಸಾರ ನಿರ್ಮಿಸಲ್ಪಟ್ಟ ಹೊಸ ವ್ಯಕ್ತಿತ್ವವನ್ನು ಧರಿಸುವಂತೆ” ಯೆಹೋವನ ಸಾಕ್ಷಿಗಳಿಂದ ಸಹಾಯ ಮಾಡಲ್ಪಟ್ಟಿದ್ದಾರೆ. (ಎಫೆಸ 4:24, NW) ಅವರು ತಮ್ಮ ಪ್ರಚಲಿತ ಜೀವನವನ್ನು ಮಾತ್ರವೇ ಅಲ್ಲ ಭೂಪರದೈಸದಲ್ಲಿ ನಿತ್ಯಜೀವದ ನಿರೀಕ್ಷೆಯನ್ನು ಸಹ ಗಣ್ಯಮಾಡತೊಡಗಿದ್ದಾರೆ. ದೇವರು ನಿರ್ಮಿಸುವ ಆ ಪರದೈಸದಲ್ಲಿ, ಭೂಮಿಯ ಯಾವ ನಿವಾಸಿಯಾದರೂ ಹಸಿವೆಯ ಎಡೆಬಿಡದ ಬಾಧೆಯನ್ನು ಪುನಃ ಅನುಭವಿಸಲಾರನು, ಯಾಕಂದರೆ “ಸೇನಾಧೀಶ್ವರನಾದ ಯೆಹೋವನು ಸಕಲ ಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದ ಕೂಡಿದ ಔತಣವನ್ನು ಅಣಿಮಾಡುವನು” ಎಂದು ಬೈಬಲ್ ವಾಗ್ದಾನಿಸುತ್ತದೆ.—ಯೆಶಾಯ 25:6.
ಜೀವವು ಒಂದು ಆಶ್ಚರ್ಯಕರವಾದ ವರದಾನವಾಗಿದ್ದರೂ, ಸದ್ಯಕ್ಕೆ ಅದು ಕೇವಲ ತಾತ್ಕಾಲಿಕವಾಗಿದೆ. ಪ್ರತಿಯೊಬ್ಬನು ಮರಣವನ್ನು ಎದುರಿಸುತ್ತಾನೆ ಮತ್ತು ಮೃತ್ಯುವು ಎಂಥ ವೇದನೀಯ ಹೊಡೆತವಾಗಿರುತ್ತದೆ! ನೀವು ಪ್ರೀತಿಸುವ ಒಬ್ಬರು ಜೀವಿತರೊಳಗಿಂದ ಸಮಾಧಿಯ ಸ್ತಬ್ಧತೆಯೊಳಗೆ ಮರೆಯಾಗಿ ಹೋಗುವುದನ್ನು ಕಾಣುವುದು ಅತ್ಯಂತ ಸಂಕಟಕಾರಿಯೆಂಬದು ಅತಿಶಯೋಕ್ತಿಯಲ್ಲ. ಆದರೆ ಕ್ರಿಸ್ತನಿಂದ ಆಳಲ್ಪಡುವ ದೇವರ ರಾಜ್ಯದ ಕೆಳಗೆ, ಯೆಹೋವನ ವಾಗ್ದಾನವು ನೆರವೇರಲಿರುವುದು: “ಇನ್ನು ಮರಣವಿರುವದಿಲ್ಲ. ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ. ಮೊದಲಿದ್ದವುಗಳೆಲ್ಲಾ ಇಲ್ಲದೆ ಹೋದವು.”—ಪ್ರಕಟನೆ 21:4.
ಆ ಸಮಯದಲ್ಲಿ ಜೀವದ ಕೊಡುಗೆಯು ವಿಸ್ಮಯಕರವಾದ ರೀತಿಯಲ್ಲಿ ವಿಸ್ತರಿಸಲ್ಪಡುವುದು. ಈ ಭೂಮಿಯ ಮೇಲೆ ಕೊನೆಯ ಸಂಕಟವನ್ನು ಪಾರಾಗುವವರು, ಜೀವದ ಪರಿಪೂರ್ಣತೆಯೊಳಗೆ ಪ್ರವೇಶಿಸುವ ಸಂದರ್ಭವನ್ನು ಪಡೆಯುವರು. ಮತ್ತು ಅನಂತರ, ಪುನರ್ಜೀವಿತಗೊಳಿಸುವ ಕ್ರಿಯೆಯಾದ ಪುನರುತ್ಥಾನದ ಮೂಲಕ, ಮರಣದಲ್ಲಿ ನಿದ್ರೆಹೋಗಿರುವವರೆಲರ್ಲಿಗೆ ಯೆಹೋವ ದೇವರು ತನ್ನ ಅಮೂಲ್ಯ ವರದಾನವನ್ನು ಪುನಃಸ್ಥಾಪಿಸುವನು. (ಯೋಹಾನ 5:24, 28, 29) ಇದು ಸತ್ತವರಾದ ಪ್ರಿಯ ಜನರ ಮತ್ತು ದೇವಭೀರುಗಳಾದ ಪುರಾತನ ಕಾಲದ ಜನರ ಹಿಂತಿರುಗುವಿಕೆಯ ಅರ್ಥದಲ್ಲಿರುವುದು!
ಇವೆಲ್ಲವು ನಂಬಲು ತೀರ ಸೊಗಸಾಗಿವೆಯೋ? ಇಲ್ಲ, ಯಾಕಂದರೆ “ದೇವರಿಂದ ಬರುವ ಯಾವ ಮಾತಾದರೂ ನಿಷ್ಪಲವಾಗುವದಿಲ್ಲ.”—ಲೂಕ 1:37; ಯೋಬ 42:2 ಹೋಲಿಸಿರಿ.
ಅದಲ್ಲದೆ, ಇವೆಲ್ಲವು ಸಂಭವಿಸುವುವು ಎಂಬದಕ್ಕೆ ಯೆಹೋವನು ತಾನೇ ಮಾನವ ಕುಲಕ್ಕೆ ಒಂದು ಭರವಸೆಯನ್ನು ಕೊಟ್ಟಿದ್ದಾನೆ. ಹೇಗೆ? ನಮ್ಮನ್ನು ಪಾಪ ಮತ್ತು ಮರಣದಿಂದ ಬಿಡಿಸುವುದಕ್ಕಾಗಿ ಆತನ ಹೃದಯಕ್ಕೆ ಅತ್ಯಂತ ಪ್ರಿಯನಾದ, ಅವನ ಪ್ರೀತಿಯ ಕುಮಾರನಾದ ಯೇಸು ಕ್ರಿಸ್ತನನ್ನು ಯಜ್ಞವಾಗಿ ಕೊಟ್ಟ ಮೂಲಕವೇ. ರೋಮಾಪುರ 8:32 ನಮಗೆ ಆಶ್ವಾಸನೆ ಕೊಡುವುದು: “[ಯೆಹೋವ ದೇವರು] ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟನ್ಟಲ್ಲಾ; ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ?” ಮಾನವ ಕುಲವನ್ನು ನೈತಿಕ ಅವನತಿಯಿಂದ ಶುದ್ಧೀಕರಿಸುವುದು ಮತ್ತು ಎಲ್ಲಾ ರೀತಿಯ ಅನ್ಯಾಯ, ಪಾತಕ ಮತ್ತು ಹಿಂಸಾಚಾರವನ್ನು ನಿರ್ಮೂಲಗೊಳಿಸುವುದೂ ಇದರಲ್ಲಿ ಸೇರಿರುವುದು ಎಂದು ಬೈಬಲ್ ನಮಗೆ ಹೇಳುತ್ತದೆ. (ಯೆಶಾಯ 11:9) ಪುನಃ ಎಂದೂ ಜೀವವು ಅಗವ್ಗಾಗಿ ವೀಕ್ಷಿಸಲ್ಪಡದು.
ಈಗಲೂ, ಅಸಂಪೂರ್ಣ ಪರಿಸ್ಥಿತಿಗಳ ಕೆಳಗೆ ಸಹ, ಜೀವಿತವು ಅತ್ಯಂತ ಆನಂದಕರವಾಗಿರಬಲ್ಲದು. ಊಟದ ಘಮಘಮಿಸುವ ಪರಿಮಳದಲ್ಲಿ, ಬೆಚ್ಚಗೆನ ದಿನದಲ್ಲಿ ಮಂದ ಮಾರುತದ ಸ್ಪರ್ಶದಲ್ಲಿ, ಒಂದು ಘನಗಂಭೀರ ಬೆಟ್ಟದ ದೃಶ್ಯದಲ್ಲಿ, ಉಜ್ವಲವಾದ ಸೂರ್ಯಾಸ್ತಮಾನದಲ್ಲಿ, ಪ್ರಶಾಂತವಾಗಿ ಹರಿಯುವ ತೊರೆಯಲ್ಲಿ, ಬೆರಗುಗೊಳಿಸುವಷ್ಟು ವರ್ಣರಂಜಿತ ಪುಷ್ಪಗಳಲ್ಲಿ, ಮಧುರ ಸಂಗೀತದ ದ್ವನಿಯಲ್ಲಿ ಅಥವಾ ಪಕ್ಷಿಗಳ ಗಾನದಲ್ಲಿ ಉಲ್ಲಾಸಪಡದಿರುವವನಾರು? ಒಂದು ಕ್ಷಣ ನಿಲ್ಲಿರಿ. ಯೋಚಿಸಿರಿ, ಅಂಥ ವಿಷಯಗಳನ್ನು ನಿರಂತರಕ್ಕೂ ಆನಂದಿಸುವುದು ಹೇಗಿರಬಹುದು?
ಹೀಗಿರಲಾಗಿ, ಒಂದು ಅವಿವೇಕದ ಸ್ವ-ಲೋಲುಪ ಜೀವನ ಕ್ರಮವು ನೀಡಬಹುದಾದ ಒಂದು ತಾತ್ಕಾಲಿಕ ಸುಖಭೋಗದ ಕಾರಣದಿಂದಾಗಿ, ಸದಾ ಜೀವಿಸುವ ಈ ಅಮೂಲ್ಯ ಸೌಭಾಗ್ಯವನ್ನು ಬಿಸಾಡಿಬಿಡುವುದು ವಿವೇಕಪ್ರದವೋ? (ಇಬ್ರಿಯ 11:25 ಹೋಲಿಸಿರಿ.) ‘ಉಳಿದಿರುವ ನಮ್ಮ ಜೀವಮಾನ ಕಾಲದಲ್ಲಿ ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವಂತೆ’ ಬೈಬಲ್ ವಿವೇಕದಿಂದ ನಮಗೆ ಬುದ್ಧಿವಾದ ನೀಡುತ್ತದೆ. (1 ಪೇತ್ರ 4:2) ದೇವರ ವಾಕ್ಯವಾದ ಬೈಬಲನ್ನು ಅಭ್ಯಾಸಿಸುವ ಮೂಲಕ ಮತ್ತು ನೀವು ಕಲಿಯುವ ವಿಷಯಗಳನ್ನು ಆಚರಣೆಯಲ್ಲಿ ತರುವ ಮೂಲಕ ನೀವದನ್ನು ಮಾಡುವಂತೆ ನಾವು ಹೃದಯಪೂರ್ವಕವಾಗಿ ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ, ಹೌದು, ಪ್ರೇರೇಪಿಸುತ್ತೇವೆ. (ಯೋಹಾನ 13:17) ಹೀಗೆ ನೀವು, ಒಳ್ಳೇತನ ಮತ್ತು ದಯೆಯಿಂದ ತುಂಬಿತುಳುಕುವವನೂ ನಿತ್ಯ ಜೀವದ ಬಹುಮಾನವನ್ನು ನಿಮಗೆ ಕೊಡಶಕ್ತನೂ ಆದ ಯೆಹೋವ ದೇವರೊಂದಿಗೆ ಒಂದು ಸುಸಂಬಂಧದೊಳಗೆ ಬರುವಿರಿ!
[ಅಧ್ಯಯನ ಪ್ರಶ್ನೆಗಳು]
a ಕುಡಿಕತನದ ರೋಗದಿಂದ ಮುಕ್ತರಾಗುವುದು ಒಂದು ದುಸ್ಸಾಧ್ಯ ಕೆಲಸವಾಗಿದ್ದು, ಹೆಚ್ಚಾಗಿ ವೈದ್ಯಕೀಯ ಸಹಾಯವನ್ನು ಆವಶ್ಯಪಡಿಸುತ್ತದೆ. ಈ ವಿಷಯದ ಸಹಾಯಕಾರಿ ಸಮಾಚಾರಕ್ಕಾಗಿ ನಮ್ಮ ಸಂಗಾತಿ ಪತ್ರಿಕೆಯಾದ ಎವೇಕ್! ಮೇ 22, 1992 (ಇಂಗ್ಲಿಷ್) ನೋಡಿರಿ.
[ಪುಟ 5 ರಲ್ಲಿರುವ ಚಿತ್ರ]
ನಿಮ್ಮ ಜೀವನ ಶೈಲಿಯು ಜೀವಕ್ಕಾಗಿ ಗಣ್ಯತೆಯನ್ನು ಪ್ರತಿಬಿಂಬಿಸುತ್ತದೋ?
[ಪುಟ 7 ರಲ್ಲಿರುವ ಚಿತ್ರ]
ಜೀವಿತದ ಸಂತೋಷಗಳನ್ನು ನಿರಂತರವಾಗಿ ಆನಂದಿಸುವುದಕ್ಕೆ ದೇವರ ಹೊಸ ಲೋಕವು ನಮಗೆ ಅವಕಾಶ ಕೊಡುವುದು!