ಆದಿ ಚರ್ಚ್ ದೇವರು ತ್ರಯೈಕ್ಯನೆಂದು ಕಲಿಸಿತ್ತೋ?
ಭಾಗ 4—ಯಾವಾಗ ಮತ್ತು ಹೇಗೆ ತ್ರಯೈಕ್ಯ ಬೋಧನೆಯು ವಿಕಾಸಗೊಂಡಿತು?
ತ್ರಯೈಕ್ಯ ಬೋಧನೆಯು ಯೇಸುವಿನಿಂದ ಮತ್ತು ಆತನ ಶಿಷ್ಯರಿಂದಾಗಲಿ ಅಥವಾ ಆದಿ ಚರ್ಚ್ ಪ್ರಮುಖರಿಂದಾಗಲಿ ಕಲಿಸಲ್ಪಟ್ಟಿರಲಿಲ್ಲವೆಂದು ಈ ಮಾಲೆಯ ಮೊದಲ ಮೂರು ಲೇಖನಗಳು ತೋರಿಸಿದವು. (ಕಾವಲಿನಬುರುಜು ಫೆಬ್ರವರಿ 1, 1992; ಮೇ 1, 1992; ಜುಲೈ 1, 1992) ಈ ಕೊನೆಯ ಲೇಖನವು, ತ್ರಯೈಕ್ಯ ಮತ ತತ್ವ ಹೇಗೆ ವಿಕಾಸಗೊಂಡಿತು ಮತ್ತು ನೈಸೀಯ ಮಂಡಲಿಯಿಂದ ಸಾ.ಶ. 325 ರಲ್ಲಿ ಯಾವ ಪಾತ್ರವು ವಹಿಸಲ್ಪಟ್ಟಿತ್ತು ಎಂಬದನ್ನು ಚರ್ಚಿಸುವುದು.
ರೋಮನ್ ಸಾಮ್ರಾಟ ಕಾನ್ಸ್ಟಂಟಿನ್ ಸಾ.ಶ. 325 ನೆಯ ವರ್ಷದಲ್ಲಿ, ಏಷ್ಯಾ ಮೈನರ್ನ ನೈಸೀಯ ಶಹರದಲ್ಲಿ ಬಿಷಪರುಗಳ ಒಂದು ಮಂಡಲಿಯನ್ನು ಕರೆದನು. ಅವನ ಉದ್ದೇಶವು, ಸರ್ವಶಕ್ತನಾದ ದೇವರಿಗೆ ದೇವರ ಮಗನ ಸಂಬಂಧದ ಮೇಲೆ ಮುಂದರಿಯುತ್ತಾ ಇದ್ದ ಧಾರ್ಮಿಕ ವಾಗ್ವಾದವನ್ನು ಪರಿಹರಿಸುವುದೇ ಆಗಿತ್ತು. ಆ ಮಂಡಲಿಯ ಫಲಿತಾಂಶಗಳ ಕುರಿತಾಗಿ, ಎನ್ಸೈಕ್ಲೊಪೀಡಿಯ ಬ್ರಿಟಾನಿಕ ಅನ್ನುವುದು:
“ಕಾನ್ಸ್ಟಂಟಿನನು ತಾನೇ ಅಧ್ಯಕ್ಷತೆ ವಹಿಸಿ, ಚರ್ಚೆಗಳನ್ನು ಕ್ರಿಯಾತ್ಮಕವಾಗಿ ನಡಿಸುತ್ತಾ, . . . ಮಂಡಲಿಯಿಂದ ಹೊರಡಿಸಲ್ಪಟ್ಟ ವಿಶ್ವಾಸ ಪ್ರಮಾಣದಲ್ಲಿ ದೇವರಿಗೆ ಕ್ರಿಸ್ತನ ಸಂಬಂಧವನ್ನು ಸೂಚಿಸಿದ ನಿರ್ಣಾಯಕ ಸೂತ್ರವನ್ನು ಅಂದರೆ ಪುತ್ರನು ‘ತಂದೆಯ ಜೀವದ್ರವ್ಯ [ಹೊಮ್ಯೂಸಿಯೊಸ್] ವೇ ಆಗಿದ್ದಾನೆ’ ಎಂಬದನ್ನು ಸ್ವತಃ ಮುಂದಿಟ್ಟನು. . . . ಚಕ್ರವರ್ತಿಯ ಭೀತಿಯಿಂದ ಕೇವಲ ಇಬ್ಬರನ್ನು ಬಿಟ್ಟು ಉಳಿದ ಬಿಷಪರುಗಳು—ಇವರಲ್ಲಿ ಅನೇಕರು ತಮ್ಮ ಮನಸ್ಸಿಗೆ ವಿರುದ್ಧವಾಗಿ ವರ್ತಿಸಿ ವಿಶ್ವಾಸ ಪ್ರಮಾಣಕ್ಕೆ ಸಹಿ ಹಾಕಿದರು.”
ಈ ವಿಧರ್ಮಿ ಅರಸನು ಈ ಮಧ್ಯೆ ಬಂದದ್ದು ತನ್ನ ಬೈಬಲ್ ನಂಬಿಕೆಗಳಿಂದಾಗಿ ಯೋ? ಅಲ್ಲ. ಎ ಷಾರ್ಟ್ ಹಿಸ್ಟರಿ ಆಫ್ ಕ್ರಿಶ್ಚನ್ ಡಾಕ್ಟ್ರಿನ್ ಹೇಳುವುದು: “ಕಾನ್ಸ್ಟಂಟಿನನಿಗೆ ಗ್ರೀಕ್ ದೇವಜ್ಞಾನಶಾಸ್ತ್ರದಲ್ಲಿ ಕೇಳಲ್ಪಡುತ್ತಿದ್ದ ಪ್ರಶ್ನೆಗಳ ವಿಷಯದಲ್ಲಿ ಯಾವ ಮೂಲ ತಿಳುವಳಿಕೆಯೂ ಇರಲಿಲ್ಲ.” ಆದರೆ ಧಾರ್ಮಿಕ ವಾಗ್ವಾದಗಳು ತನ್ನ ಸಾಮ್ರಾಜ್ಯದ ಐಕ್ಯತೆಗೆ ಅಪಾಯಕಾರಿ ಎಂಬ ತಿಳುವಳಿಕೆ ಅವನಿಗಿತ್ತು ಮತ್ತು ಅವನ್ನು ಬಗೆಹರಿಸಲು ಅವನು ಬಯಸಿದ್ದನು.
ಅದು ತ್ರಯೈಕ್ಯ ಬೋಧನೆಯನ್ನು ಸ್ಥಾಪಿಸಿತೋ?
ನೈಸೀಯ ಮಂಡಲಿಯು ತ್ರಯೈಕ್ಯವನ್ನು ಕ್ರೈಸ್ತ ಪ್ರಪಂಚದ ಒಂದು ಬೋಧನೆಯಾಗಿ ಸ್ಥಾಪಿಸಿತ್ತೋ, ಅಥವಾ ದೃಢೀಕರಿಸಿತ್ತೋ? ವಿಷಯವು ಹೀಗಿತ್ತೆಂದು ಅನೇಕರು ಊಹಿಸುತ್ತಾರೆ. ಆದರೆ ನಿಜತ್ವಗಳು ಬೇರೆ ರೀತಿಯಾಗಿ ತೋರಿಸುತ್ತವೆ.
ಆ ಮಂಡಲಿಯಿಂದ ಜಾರಿಗೆ ತರಲ್ಪಟ್ಟ ವಿಶ್ವಾಸ ಪ್ರಮಾಣವು, ದೇವರ ಮಗನು ತಂದೆಯಾದ ದೇವರಿಗೆ ಒಂದು ನಿರ್ದಿಷ್ಟ ರೀತಿಯಲ್ಲಿ ಸರಿಸಮಾನನು ಎಂದು ಹೆಚ್ಚಿನ ವೈದಿಕರು ವೀಕ್ಷಿಸುವಂತೆ ಅನುಮತಿಸುವ ವಿಷಯಗಳನ್ನು ಪ್ರತಿಪಾದಿಸಿತ್ತು. ಆದರೂ, ನೈಸೀಯ ವಿಶ್ವಾಸ ಪ್ರಮಾಣವು ಏನು ಹೇಳಲಿಲ್ಲವೋ ಅದನ್ನು ತಿಳಿಯುವುದು ಜ್ಞಾನೋದಯಕಾರಿಯು. ಮೂಲದಲ್ಲಿ ಪ್ರಕಾಶಿಸಲ್ಪಟ್ಟ ಪ್ರಕಾರ, ಇಡೀ ವಿಶ್ವಾಸ ಪ್ರಮಾಣ ಹೇಳಿದ್ದು:
“ನಾವು ಒಬ್ಬ ದೇವರನ್ನು, ದ್ರಶ್ಯಾದೃಶ್ಯವಾದ ಸಮಸ್ತ ವಸ್ತುಗಳ ನಿರ್ಮಾಣಿಕನಾದ ಸರ್ವಶಕ್ತನಾದ ತಂದೆಯನ್ನು, ನಂಬುತ್ತೇವೆ;
“ಮತ್ತು ದೇವರ ಕುಮಾರನು, ತಂದೆಯಿಂದ ಹುಟ್ಟಿದವನು, ಏಕಜಾತನು ಅಂದರೆ ತಂದೆಯ ಜೀವದ್ರವ್ಯದಿಂದ ಬಂದವನು, ದೇವರಿಂದ ಬಂದ ದೇವರು, ಬೆಳಕಿನಿಂದ ಬಂದ ಬೆಳಕು, ಸತ್ಯದೇವರಿಂದ ಬಂದ ಸತ್ಯದೇವರು, ಜನ್ಮಕೊಡಲ್ಪಟ್ಟವನು, ಉಂಟುಮಾಡಲ್ಪಟ್ಟವನಲ್ಲ, ತಂದೆಯೊಂದಿಗೆ ಏಕ ದ್ರವ್ಯವಾಗಿರುವವನು, ಯಾರ ಮೂಲಕವಾಗಿ ಭೂಪರಲೋಕಗಳಲ್ಲಿರುವ ಎಲ್ಲವೂ ಅಸ್ತಿತ್ವಕ್ಕೆ ಬಂತೋ, ಯಾರು ಮನುಷ್ಯರಾದ ನಮಗಾಗಿ ಮತ್ತು ನಮ್ಮ ರಕ್ಷಣೆಗಾಗಿ ಕೆಳಗೆ ಬಂದು ಮತ್ತು ಅವತಾರವನ್ನೆತ್ತಿ, ಮನುಷ್ಯನಾಗಿ, ಕಷ್ಟವನ್ನು ಅನುಭವಿಸಿ ಮತ್ತು ಮೂರನೆಯ ದಿನದಲ್ಲಿ ಪುನಃ ಎದ್ದು, ಪರಲೋಕಕ್ಕೇರಿ ಹೋಗಿ, ಜೀವಿತರಿಗೂ ಸತ್ತವರಿಗೂ ನ್ಯಾಯತೀರಿಸಲು ಬರಲಿರುವನೋ ಆ ಒಬ್ಬನೇ ಕರ್ತನಾದ ಯೇಸು ಕ್ರಿಸ್ತನನ್ನೂ ನಂಬುತ್ತೇವೆ;
“ಮತ್ತು ಪರಿಶುದ್ಧಾತ್ಮನನ್ನೂ ನಂಬುತ್ತೇವೆ.”
ಈ ವಿಶ್ವಾಸ ಪ್ರಮಾಣವು ತಂದೆ, ಮಗ ಮತ್ತು ಪವಿತ್ರಾತ್ಮ ಒಬ್ಬ ದೇವರಲ್ಲಿ ಮೂರು ವ್ಯಕ್ತಿಗಳು ಎಂದು ಹೇಳುತ್ತದೋ? ಆ ಮೂವರು ನಿತ್ಯತೆಯಲ್ಲಿ, ಶಕ್ತಿಯಲ್ಲಿ, ಸ್ಥಾನ, ಮತ್ತು ವಿವೇಕದಲ್ಲಿ ಸಮಾನರು ಎಂದು ಅದು ಹೇಳುತ್ತದೋ? ಇಲ್ಲ, ಅದು ಹೇಳುವುದಿಲ್ಲ. ಇಲ್ಲಿ ಒಬ್ಬರಲ್ಲಿ ಮೂವರು ಇರುವ ಯಾವ ಸೂತ್ರವಾಗಲಿ ಇರುವುದಿಲ್ಲ. ಮೂಲದ ನೈಸೀನ್ ವಿಶ್ವಾಸ ಪ್ರಮಾಣವು ತ್ರಯೈಕ್ಯವನ್ನು ಸ್ಥಾಪಿಸಿದ್ದಾಗಲಿ ದೃಢೀಕರಿಸಿದ್ದಾಗಲಿ ಇಲ್ಲ.
ಆ ಪ್ರಮಾಣವು, ಬಹಳವೆಂದರೆ, ಮಗನನ್ನು ತಂದೆಯೊಂದಿಗೆ “ಒಂದೇ ದ್ರವ್ಯವಾಗಿ” ಇರಿಸುವುದರಲ್ಲಿ ಸಮೀಕರಿಸುತ್ತದೆ. ಆದರೆ ಅದು ಪವಿತ್ರಾತ್ಮದ ಕುರಿತು ಅಂತಹದ್ದೇನನ್ನು ಹೇಳುವುದಿಲ್ಲ. “ನಾವು ಪರಿಶುದ್ಧಾತ್ಮನನ್ನು . . . ನಂಬುತ್ತೇವೆ,” ಎಂದಷ್ಟೇ ಅದು ಹೇಳುತ್ತದೆ. ಕ್ರೈಸ್ತ ಪ್ರಪಂಚದ ತ್ರಯೈಕ್ಯ ಬೋಧನೆ ಅದಲ್ಲ.
ಮುಖ್ಯ ವಾಕ್ಸರಣಿಯಾದ “ಒಂದೇ ದ್ರವ್ಯವಾಗಿರುವುದು” (ಹೊಮ್ಯೂಸಿಯೊಸ್) ಸಹ ತಂದೆ ಮತ್ತು ಮಗನ ಸಂಖ್ಯಾತ್ಮಕ ಸರಿಸಮಾನತೆಯನ್ನು ಮಂಡಲಿಯು ನಂಬಿತ್ತು ಎಂದು ಅರ್ಥಮಾಡುವ ಅವಶ್ಯವಿಲ್ಲ. ದ ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಹೇಳುವುದು:
“ತಂದೆ ಮತ್ತು ಮಗನ ದ್ರವ್ಯದ ಸಂಖ್ಯಾತ್ಮಕ ಗುರುತನ್ನು ದೃಢೀಕರಿಸಲು ಮಂಡಲಿಯು ಉದ್ದೇಶಿಸಿತ್ತೋ ಎಂಬದು ಅನಿಶ್ಚಿತವಾಗಿದೆ.”
ಮಗ ಮತ್ತು ತಂದೆಯು ಸಂಖ್ಯಾತ್ಮಕವಾಗಿ ಒಬ್ಬರು ಎಂಬರ್ಥವನ್ನು ಮಂಡಲಿಯು ಮಾಡಿದ್ದರೂ, ಅದು ಇನ್ನೂ ತ್ರಯೈಕ್ಯವಾಗಿರದು. ಅದು ಒಬ್ಬ ದೇವರಲ್ಲಿ ಇಬ್ಬರು ಮಾತ್ರವೇ ಆಗಿರುವುದು, ತ್ರಯೈಕ್ಯ ಬೋಧನೆಯಿಂದ ಆವಶ್ಯಪಡಿಸಲ್ಪಡುವ ಪ್ರಕಾರ ಒಬ್ಬರಲ್ಲಿ ಮೂವರು ಅಲ್ಲಿಲ್ಲ.
“ಒಂದು ಅಲ್ಪ ಸಂಖ್ಯಾತ ದೃಷ್ಟಿಕೋನ”
ನೈಸೀಯದಲ್ಲಿ ಬಿಷಪರುಗಳು, ಮಗನು ದೇವರಿಗೆ ಸರಿಸಮಾನನು ಎಂದು ಸಾಮಾನ್ಯವಾಗಿ ನಂಬಿದ್ದರೋ? ಇಲ್ಲ, ದೃಷ್ಟಿಕೋನಗಳ ಪ್ರತಿಸ್ಪರ್ಧೆಗಳು ನಡೆದಿದ್ದವು. ಉದಾಹರಣೆಗೆ, ದೇವರ ಮಗನಿಗೆ ಒಂದು ನಿರ್ದಿಷ್ಟವಾದ ಪ್ರಾರಂಭ ಇತ್ತು ಮತ್ತು ಈ ಕಾರಣದಿಂದ ಅವನು ದೇವರಿಗೆ ಸರಿಸಮಾನನಲ್ಲ ಬದಲಾಗಿ ಎಲ್ಲಾ ವಿಷಯಗಳಲ್ಲಿ ಕೈಕೆಳಗಿನವನು ಆಗಿದ್ದನು ಎಂದು ಕಲಿಸಿದ್ದ ಏರಿಯಸ್ನಿಂದ, ಒಂದು ಪ್ರತಿನಿಧಿಸಲ್ಪಟ್ಟಿತ್ತು. ಇನ್ನೊಂದು ಕಡೆ ಅಥನೇಸಿಯಸನು, ದೇವರು ಮಗನಿಗೆ ಒಂದು ನಿರ್ದಿಷ್ಟ ರೀತಿಯಲ್ಲಿ ಸರಿಸಮಾನನು ಎಂದು ನಂಬಿದ್ದನು. ಮತ್ತು ಇತರ ದೃಷ್ಟಿಕೋನಗಳೂ ಇದ್ದವು.
ಮಗನು ದೇವರಂತೆ ಒಂದೇ ದ್ರವ್ಯ (ಏಕದ್ರವ್ಯ) ವಾಗಿದ್ದಾನೆಂದು ಗಮನಿಸಲು ಮಂಡಲಿಯ ನಿರ್ಣಯದ ಕುರಿತು, ಮಾರ್ಟಿನ್ ಮಾರ್ಟಿ ಹೇಳುವುದು: “ನೈಸೀಯವು ಕಾರ್ಯತಃ ಒಂದು ಅಲ್ಪ ಸಂಖ್ಯಾತ ದೃಷ್ಟಿಕೋನವನ್ನು ಪ್ರತಿನಿಧಿಸಿತ್ತು; ಇತ್ಯರ್ಥವು ಅಹಿತಕರವಾಗಿತ್ತು ಮತ್ತು ಹೊರನೋಟದಲ್ಲಿ ಏರಿಯನ್ ಆಗಿರದ ಅನೇಕರಿಗೆ ಸ್ವೀಕರಣೀಯವಾಗಿರಲಿಲ್ಲ.” ಅದೇ ರೀತಿ, “ಏರಿಯನ್ ವಾದಕ್ಕೆ ವೈದ್ಯಶ್ಯದಲ್ಲಿ, ಒಂದು ಸ್ಪಷ್ಟವಾಗಿಗಿ ಸೂತ್ರೀಕರಿಸುವ ತಾತ್ವಿಕ ಸ್ಥಾನವು ಒಂದು ಅಲ್ಪ ಸಂಖ್ಯಾತರಿಂದ ಮಾತ್ರವೇ ತಕ್ಕೊಳ್ಳಲ್ಪಟ್ಟಿತ್ತು, ಆದರೂ, ಈ ಅಲ್ಪಸಂಖ್ಯಾತರ ಹೇತುವೇ ಪೂರೈಸಲ್ಪಟ್ಟಿತು” ಎಂದು ಏ ಸಿಲೆಕ್ಟ್ ಲೈಬ್ರರಿ ಆಫ್ ನೈಸೀನ್ ಆ್ಯಂಡ್ ಪೋಸ್ಟ್ ನೈಸೀನ್ ಫಾದರ್ಸ್ ಆಫ್ ದ ಕ್ರಿಶ್ಚನ್ ಚರ್ಚ್ ಎಂಬ ಪುಸ್ತಕವು ಹೇಳುತ್ತದೆ. ಮತ್ತು ಏ ಫಷಾರ್ಟ್ ಹಿಸ್ಟರಿ ಆಫ್ ಕ್ರಿಶ್ಚನ್ ಡಾಕ್ಟ್ರಿನ್ ಹೇಳುವುದು:
“ಪೂರ್ವದ ಹೆಚ್ಚಿನ ಬಿಷಪರುಗಳಿಗೆ ಮತ್ತು ದೇವಜ್ಞಾನಶಾಸ್ತ್ರಜ್ಞರಿಗೆ ವಿಶೇಷವಾಗಿ ಆಕ್ಷೇಪಣೀಯವಾಗಿ ಕಂಡುಬಂದದ್ದು ಯಾವುದೆಂದರೆ ಸ್ವತಃ ಕಾನ್ಸ್ಟಂಟಿನನಿಂದ ವಿಶ್ವಾಸ ಪ್ರಮಾಣದೊಳಗೆ ಹಾಕಲ್ಪಟ್ಟ ಕಲ್ಪನೆಯಾದ ಹೊಮ್ಯೂಸಿಯೊಸ್ [“ಒಂದೇ ದ್ರವ್ಯವಾಗಿರುವುದು”], ಇದು ತರುವಾಯ ಸಾಂಪ್ರದಾಯಿಕ ಮತ್ತು ಪಾಷಂಡವಾದದ ನಡುವಣ ಅನಂತರದ ಕಲಹದಲ್ಲಿ ಭಿನ್ನಾಭಿಪ್ರಾಯಕ್ಕೆ ಹೇತುವಾಗಿ ಪರಿಣಮಿಸಿತು.”
ಆ ಮಂಡಲಿಯ ಬಳಿಕ ದಶಮಾನಗಳ ವರೆಗೆ ವಾಗ್ವಾದವು ಮುಂದರಿಯಿತು. ಯಾರು ಮಗನನ್ನು ಸರ್ವಶಕ್ತನಾದ ತಂದೆಯೊಂದಿಗೆ ಸಮೀಕರಿಸುವ ವಿಚಾರದ ಪರವಾಗಿ ಇದ್ದರೋ ಅವರು ಸಹ ಕೆಲವು ಸಮಯದ ತನಕ ಜನಪ್ರಿಯತೆ ಕಳಕೊಂಡರು. ಉದಾಹರಣೆಗೆ, ಅಥನೇಸಿಯಸನ ಕುರಿತು ಮಾರ್ಟಿನ್ ಮಾರ್ಟಿ ಹೇಳುವುದು: “ಅವನ ಜನಪ್ರಿಯತೆ ಮೇಲೇರಿತು ಮತ್ತು ಕೆಳಗಿಳಿಯಿತು ಮತ್ತು [ಮಂಡಲಿಯ ಅನಂತರದ ವರ್ಷಗಳಲ್ಲಿ] ಅವನು ಎಷ್ಟು ಸಲ ದೇಶಭ್ರಷ್ಟನಾಗಿದನ್ದೆಂದರೆ, ಕಾರ್ಯತಃ ಪ್ರವಾಸಿಯಾಗಿ ಪರಿಣಮಿಸಿದ್ದನು.” ಅಥನೇಸಿಯಸನು ವರ್ಷಗಳ ವರೆಗೆ ದೇಶಭ್ರಷ್ಟನಾಗಿದ್ದನು ಯಾಕಂದರೆ ದೇವರೊಂದಿಗೆ ಮಗನನ್ನು ಸಮೀಕರಿಸಿದ ಅವನ ವೀಕ್ಷಣೆಗಳನ್ನು ರಾಜಕೀಯ ಮತ್ತು ಚರ್ಚ್ ಅಧಿಕಾರಿಗಳು ವಿರೋಧಿಸಿದ್ದರು.
ಆದುದರಿಂದ ನೈಸೀಯ ಮಂಡಲಿಯು ಸಾ.ಶ. 325 ರಲ್ಲಿ ತ್ರಯೈಕ್ಯ ಬೋಧನೆಯನ್ನು ಸ್ಧಾಪಿಸಿತು ಅಥವಾ ದೃಢೀಕರಿಸಿತು ಎಂದು ಕಂಠೋಕ್ತವಾಗಿ ಹೇಳುವುದು ಸತ್ಯವಲ್ಲ. ಯಾವುದು ತದನಂತರ ತ್ರಯೈಕ್ಯ ಬೋಧನೆಯಾಗಿ ಪರಿಣಮಿಸಿತೋ ಅದು ಆ ಸಮಯದಲ್ಲಿ ಅಸ್ತಿತ್ವದಲ್ಲಿರಲಿಲ್ಲ. ತಂದೆ, ಮಗ ಮತ್ತು ಪರಿಶುದ್ಧಾತ್ಮನು ಇವರಲ್ಲಿ ಪ್ರತಿಯೊಬ್ಬನು ಸತ್ಯ ದೇವರು ಮತ್ತು ನಿತ್ಯತೆಯಲ್ಲಿ, ಶಕ್ತಿಯಲ್ಲಿ, ಸ್ಥಾನದಲ್ಲಿ ಮತ್ತು ವಿವೇಕದಲ್ಲಿ ಸರಿಸಮಾನರು, ಆದರೂ ಅವರು ಒಬ್ಬ ದೇವರು—ಒಬ್ಬ ದೇವರಲ್ಲಿ ಮೂವರು—ಎಂಬ ವಿಚಾರವು ಆ ಮಂಡಲಿಯಿಂದಾಗಲಿ ಅಥವಾ ಆರಂಭದ ಚರ್ಚ್ ಪ್ರಮುಖರಿಂದಾಗಲಿ ವಿಕಾಸಿಸಲ್ಪಡಲಿಲ್ಲ. ದ ಚರ್ಚ್ ಆಫ್ ದ ಫರ್ಸ್ಟ್ ತ್ರೀ ಸೆಂಟ್ಯುರೀಸ್ ಹೇಳುವುದು:
“ಆಧುನಿಕವಾಗಿ ಜನಪ್ರಿಯವಾಗಿರುವ ತ್ರಿಯೇಕ ತತ್ವವು . . . ಜಸ್ಟಿನ್ [ಮಾರ್ಟಿರ್] ನ ಭಾಷೆಯಿಂದ ಯಾವ ಬೆಂಬಲವನ್ನೂ ಪಡೆಯುವುದಿಲ್ಲ; ಮತ್ತು ಈ ಅಭಿಪ್ರಾಯೋಕ್ತಿಯಲ್ಲಿ ನೈಸೀಯಕ್ಕೆ ಪೂರ್ವದ ಎಲ್ಲಾ ಪ್ರಮುಖರನ್ನು ಅಂದರೆ ಕ್ರಿಸ್ತನ ಜನನದ ತರುವಾಯ ಮೂರು ಶತಮಾನಗಳಲ್ಲಿದ್ದ ಕ್ರೈಸ್ತ ಲೇಖಕರೆಲ್ಲರನ್ನು ಸೇರಿಸಬಹುದು. ಅವರು ಪಿತ, ಪುತ್ರ ಮತ್ತು ಪ್ರವಾದನೆಯ ಅಥವಾ ಪರಿಶುದ್ಧಾತ್ಮನ ಕುರಿತು ಹೇಳುತ್ತಾರೆಂಬದು ನಿಜವಾದರೂ ತ್ರಿತ್ವವಾದಿಗಳು ಈಗ ಹೇಳುವಂತೆ ಅವರು ಸರಿಸಮಾನರು, ಸಂಖ್ಯಾ ಸತ್ವದಲ್ಲಿ ಒಂದಾಗಿದ್ದಾರೆ, ಒಬ್ಬನಲ್ಲಿ ಮೂವರು ಎಂದು ಹೇಳುವುದೇ ಇಲ್ಲ. ಇದಕ್ಕೆ ಪ್ರತಿಕೂಲವಾದ ಅಭಿಪ್ರಾಯವೇ ನಿಜತ್ವವಾಗಿದೆ. ತ್ರಯೈಕ್ಯದ ಬೋಧನೆಯು, ಚರ್ಚ್ ಪ್ರಮುಖರಿಂದ ವಿವರಿಸಲ್ಪಡುವ ಪ್ರಕಾರ, ಆಧುನಿಕ ಬೋಧನೆಗಿಂತ ಮೂಲತಃ ಬೇರೆಯಾಗಿದೆ. ಇದನ್ನು ನಾವು, ಮಾನವ ಅಭಿಪ್ರಾಯಗಳ ಇತಿಹಾಸದಲ್ಲಿ ಯಾವುದೇ ವಾಸ್ತವಿಕ ಸಂಗತಿಯನ್ನು ರುಜುವಾತು ಮಾಡಲು ಶಕ್ಯವಾದ ನಿಜತ್ವವಾಗಿ ಹೇಳುತ್ತೇವೆ.”
“ಮೊದಲಿನ ಮೂರು ಶತಮಾನಗಳಲ್ಲಿ, ಈ [ತ್ರಯೈಕ್ಯ] ಬೋಧನೆಯನ್ನು, ಅದರ ಆಧುನಿಕ ಅರ್ಥದಲ್ಲಿ ನಂಬಿದ್ದ ಯಾವನೇ ಒಬ್ಬ ಪ್ರಸಿದ್ಧ ಲೇಖಕನನ್ನು ಮುಂದಿಡುವಂತೆ ನಾವು ಯಾವನನ್ನಾದರೂ ಪಂಥಾಹ್ವಾನಕ್ಕೆ ಕರೆಯುತ್ತೇವೆ.”
ಆದರೂ ನೈಸೀಯವು, ಒಂದು ಬದಲಾವಣೆಯ ಬಿಂದುವಾಗಿ ಪ್ರತಿನಿಧಿಸಿತ್ತು. ಪುತ್ರನು ಪಿತನಿಗೆ ಸರಿಸಮಾನನೆಂಬ ಅಧಿಕೃತ ಸ್ವೀಕರಣೆಗೆ ಅದು ಬಾಗಲನ್ನು ತೆರೆಯಿತು, ಮತ್ತು ತದನಂತರದ ತ್ರಯೈಕ್ಯ ವಿಚಾರಕ್ಕೆ ದಾರಿಯನ್ನು ಸುಗಮಗೊಳಿಸಿತು. ಜೆ. ಎ. ಬಕ್ಲಿ ಇವರ ಸೆಕೆಂಡ್ ಸೆಂಟ್ಯುರಿ ಆರ್ತೊಡಾಕ್ಸಿ ಎಂಬ ಪುಸ್ತಕವು ಗಮನಿಸುವುದು:
“ಕಡಿಮೆ ಪಕ್ಷ ಎರಡನೆಯ ಶತಮಾನದ ಅಂತ್ಯದ ತನಕವೂ, ಸಾರ್ವತ್ರಿಕ ಚರ್ಚು ಒಂದು ಮೂಲಭೂತ ಅರ್ಥದಲ್ಲಿ ಒಮ್ಮತದಿಂದಿತ್ತು; ಅವರೆಲ್ಲರು ತಂದೆಯ ಸರ್ವಶ್ರೇಷ್ಠತೆಯನ್ನು ಸ್ವೀಕರಿಸಿದ್ದರು. ಸರ್ವಶಕ್ತ ತಂದೆಯಾದ ದೇವರು ಒಬ್ಬನೇ ಸರ್ವಶ್ರೇಷ್ಟನು, ಮಾರ್ಪಾಟಾಗದವನು, ಅನಿರ್ವಚನೀಯನು ಮತ್ತು ಆದಿಯಿಲ್ಲದವನು . . . ಎಂದು ಅವರೆಲ್ಲರು ಎಣಿಸಿದ್ದರು.
“ಆ ಎರಡನೆಯ ಶತಕದ ಲೇಖಕರ ಮತ್ತು ಮುಖಂಡರ ದಾಟಿಹೋಗುವಿಕೆಯೊಂದಿಗೆ, ಚರ್ಚು ತನ್ನನ್ನು . . . ಆ ಬಿಂದುವಿನೆಡೆಗೆ ನಿಧಾನವಾಗಿ ಆದರೆ ದಾಕ್ಷಿಣ್ಯಶೂನ್ಯವಾಗಿ ಸರುಕುವುದಾಗಿ ಕಂಡುಕೊಂಡು . . . ಕೊನೆಗೆ ನೈಸೀಯ ಮಂಡಲಿಯಲ್ಲಿ ಮೂಲ ನಂಬಿಕೆಯ ಈ ಎಲ್ಲಾ ಚೂರು ಚೂರು ಸವೆತದ ಪರಾಕಾಷ್ಠೆಯು ಗುರಿಮುಟ್ಟಿತು. ಅಲ್ಲಿ ಒಂದು ಚಿಕ್ಕ ಸ್ಫೋಟಕ ಅಲ್ಪಸಂಖ್ಯಾತ ಪಕ್ಷವು ತನ್ನ ಪಾಷಂಡ ತತ್ವವನ್ನು ಒಂದು ಮೂಗೊಪ್ಪಿಗೆಯ ಅಧಿಕ ಸಂಖ್ಯಾತ ಪಕ್ಷದ ಮೇಲೆ ತೂರಿಸಿತು, ಮತ್ತು ಅದರ ಹಿಂದಿದ್ದ ರಾಜಕೀಯ ಅಧಿಕಾರಿಗಳು, ಯಾರು ತಮ್ಮ ನಂಬಿಕೆಯ ಆದಿಸ್ಥಿತಿಯ ಶುದ್ಧತೆಯನ್ನು ಕಾಪಾಡಲು ಪ್ರಯಾಸಪಟ್ಟರೋ ಅವರನ್ನು ಬಲಾತ್ಕರಿಸಿದರು, ಪುಸಲಾಯಿಸಿದರು ಮತ್ತು ಹೆದರಿಸಿದರು.”
ಕಾನ್ಸ್ಟಂಟಿನೋಪಲಿನ ಮಂಡಲಿ
ಸಾ.ಶ. 381 ರಲ್ಲಿ ಕಾನ್ಸ್ಟಂಟಿನೋಪಲಿನ ಮಂಡಲಿಯು ನೈಸೀಯ ವಿಶ್ವಾಸ ಪ್ರಮಾಣವನ್ನು ದೃಢೀಕರಿಸಿತು. ಮತ್ತು ಅದು ಬೇರೇನನ್ನೋ ಕೂಡಿಸಿತು. ಅದು ಪವಿತ್ರಾತ್ಮನನ್ನು “ಕರ್ತ” ಮತ್ತು “ಜೀವದಾತ” ಎಂದು ಕರೆಯಿತು. ಸಾ.ಶ. 381 ರ ಈ ವಿಸ್ತರಿತ ವಿಶ್ವಾಸ ಪ್ರಮಾಣವು (ಇಂದು ಮುಖ್ಯವಾಗಿ ಚರ್ಚುಗಳಲ್ಲಿ ಬಳಸಲ್ಪಡುವ ಮತ್ತು “ನೈಸೀಯ ವಿಶ್ವಾಸ ಪ್ರಮಾಣ” ಎಂದು ಕರೆಯಲ್ಪಡುವಂಥದ್ದು), ಒಂದು ಪೂರ್ತಿಯಾಗಿ ಊದಿದ ತ್ರಿತ್ವವಾದಿಗಳ ಮತತತ್ವವನ್ನು ಕ್ರೈಸ್ತ ಪ್ರಪಂಚವು ಸೂತ್ರೀಕರಿಸುವ ಅಂಚಿನಲ್ಲಿತ್ತೆಂದು ತೋರಿಸಿತು. ಆದರೂ, ಈ ಮಂಡಲಿಯು ಸಹ ಆ ತತ್ವವನ್ನು ಪೂರ್ತಿಗೊಳಿಸಲಿಲ್ಲ. ದ ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಅಂಗೀಕರಿಸುವುದು:
“ನೈಸೀಯ I ನಡೆದಾದ 60 ವರ್ಷಗಳ ಅನಂತರ ಕಾನ್ಸ್ಟಂಟಿನೋಪಲಿನ ಮಂಡಲಿ I [ಸಾ. ಶ. 381] ಪವಿತ್ರಾತ್ಮನ ದೈವತ್ವದ ತನ್ನ ಅರ್ಥ ವಿವರಣೆಯಲ್ಲಿ ಹೊಮ್ಯೂಸಿಯೊಸ್ ನ್ನು ವರ್ಜಿಸಿತ್ತೆಂಬದು ಸ್ವಾರಸ್ಯಕರವಾದ ವಿಷಯ.”
“ಈ ವಿಶ್ವಾಸ ಪ್ರಮಾಣದ ವತಿಯಲ್ಲಿ ವಾಕ್ಸರಣಿಯ ಮೃದುತ್ವದ ತೋರ್ಕೆಯು, ಉದಾಹರಣೆಗೆ, ತಂದೆ ಮತ್ತು ಮಗನ ಏಕದ್ರವ್ಯಾಸ್ತಿತ್ವದಂತೆ, ಪವಿತ್ರಾತ್ಮಕ್ಕೆ ಹೊಮ್ಯೂಸಿಯೊಸ್ ಶಬ್ದಪ್ರಯೋಗವನ್ನು ಮಾಡಲು ಅದು ತಪ್ಪಿರುವುದು ಪಂಡಿತರನ್ನು ಅಚ್ಚರಿಗೊಳಿಸಿದೆ.”
ಅದೇ ಎನ್ಸೈಕ್ಲೊಪೀಡಿಯವು ಒಪ್ಪುವುದು: “ಹೊಮ್ಯೂಸಿಯೊಸ್, ಶಾಸ್ತ್ರಗ್ರಂಥದಲ್ಲಿ ಕಂಡುಬರುವುದಿಲ್ಲ.” ಇಲ್ಲ, ಬೈಬಲ್ ಸಹ ಪವಿತ್ರಾತ್ಮಕ್ಕೆ ಅಥವಾ ಮಗನು ತಂದೆಯೊಂದಿಗೆ ಏಕ ದ್ರವ್ಯವಾಗಿದ್ದಾನೆಂಬದಕ್ಕೆ ಆ ಶಬ್ದವನ್ನು ಉಪಯೋಗಿಸುವುದಿಲ್ಲ. ಅದು ಬೈಬಲಿನಲಿಲ್ಲದ್ಲ, ನಿಶ್ಚಯವಾಗಿ, ಬೈಬಲ್ವಿರೋಧಿಯಾದ, ತ್ರಯೈಕ್ಯ ಬೋಧನೆಗೆ ನಡಿಸಲು ನೆರವಾದ ಬೈಬಲಿನಲಿಲ್ಲದ್ಲ ಒಂದು ಅಭಿವ್ಯಕ್ತಿಯಾಗಿದೆ.
ಕಾನ್ಸ್ಟಂಟಿನೋಪಲಿನ ಅನಂತರವೂ, ಕ್ರೈಸ್ತ ಪ್ರಪಂಚದಲ್ಲೆಲ್ಲೂ ತ್ರಯೈಕ್ಯ ಬೋಧನೆಯು ಸ್ವೀಕರಿಸಲ್ಪಡುವ ಮುಂಚೆ ಶತಮಾನಗಳು ಕಳೆದಿದ್ದವು. ದ ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಪಶ್ಚಿಮದಲ್ಲಿ . . . ಕಾನ್ಸ್ಟಂಟಿನೋಪಲ್ I ಮತ್ತು ಅದರ ವಿಶ್ವಾಸ ಪ್ರಮಾಣದೆಡೆಗೆ ಒಂದು ಸಾಮಾನ್ಯ ನೀರವತೆಯು ನೆಲೆಸಿದ್ದಂತೆ ತೋರಿಬಂತು.” ಈ ಮಂಡಲಿಯ ವಿಶ್ವಾಸ ಪ್ರಮಾಣವು ಏಳನೆಯ ಅಥವಾ ಎಂಟನೆಯ ಶತಮಾನದ ತನಕ ಪಶ್ಚಿಮದಲ್ಲಿ ವಿಸ್ತಾರವಾಗಿ ಸ್ವೀಕರಿಸಲ್ಪಡಲಿಲ್ಲವೆಂಬದನ್ನು ಈ ಮೂಲವು ತೋರಿಸುತ್ತದೆ.
ತ್ರಯೈಕ್ಯದ ಒಂದು ಸಾಧಾರಣ ನಿಷ್ಕೃಷ್ಟಾರ್ಥ ಮತ್ತು ಬೆಂಬಲವಾಗಿ ಹೆಚ್ಚಾಗಿ ಉದ್ದರಿಸಲ್ಪಡುವ ಅಥನೇಸಿಯನ್ ವಿಶ್ವಾಸ ಪ್ರಮಾಣವು, ಅಥನೇಸಿಯಸನಿಂದಲ್ಲ, ಬದಲಾಗಿ ಒಂದು ಅಜ್ಞಾತ ಗ್ರಂಥಕರ್ತನಿಂದ ಬಹು ಸಮಯದ ನಂತರ ಬರೆಯಲ್ಪಟ್ಟಿತ್ತೆಂಬದನ್ನೂ ಪಂಡಿತರು ಅಂಗೀಕರಿಸುತ್ತಾರೆ. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟಾನಿಕ ಹೇಳುವುದು:
“ಪೌರಾತ್ಯ ಚರ್ಚಿಗೆ ಈ ಪ್ರಮಾಣವು 12 ನೆಯ ಶತಮಾನದ ತನಕ ಅಜ್ಞಾತವಾಗಿತ್ತು. 17 ನೆಯ ಶತಮಾನದಿಂದ ಹಿಡಿದು, ಅಥನೇಸಿಯಸನ ವಿಶ್ವಾಸ ಪ್ರಮಾಣವನ್ನು (373 ರಲ್ಲಿ ಸತ್ತ) ಅಥನೇಸಿಯಸನು ಬರೆಯಲಿಲ್ಲವೆಂದೂ ಅದು ಪ್ರಾಯಶಃ 5 ನೆಯ ಶತಮಾನದಲ್ಲಿ ದಕ್ಷಿಣ ಫ್ರಾನ್ಸಿನಲ್ಲಿ ರಚಿಸಲ್ಪಟ್ಟಿತ್ತೆಂದೂ ಪಂಡಿತರು ಸಾಮಾನ್ಯವಾಗಿ ಒಪ್ಪುತ್ತಾರೆ. . . . ಈ ಪ್ರಮಾಣದ ಪ್ರಭಾವವು 6 ನೆಯ ಮತ್ತು 7 ನೆಯ ಶತಮಾನಗಳಲ್ಲಿ ಪ್ರಧಾನವಾಗಿ ದಕ್ಷಿಣ ಫ್ರಾನ್ಸ್ ಮತ್ತು ಸ್ಪೆಯ್ನ್ ದೇಶಗಳಲ್ಲಿತ್ತೆಂದು ಕಂಡುಬರುತ್ತದೆ. ಚರ್ಚಿನ ಪೂಜಾವಿಧಾನದಲ್ಲಿ ಇದನ್ನು ಜರ್ಮನಿಯಲ್ಲಿ 9 ನೆಯ ಶತಮಾನದಲ್ಲಿಯೂ ಮತ್ತು ಸ್ವಲ್ಪ ತರುವಾಯ ರೋಮಿನಲ್ಲಿಯೂ ಉಪಯೋಗಿಸಲಾಯಿತು.”
ಅದು ವಿಕಾಸಗೊಂಡ ವಿಧ
ತ್ರಯೈಕ್ಯ ಬೋಧನೆಯು ಶತಮಾನಗಳ ಕಾಲಾವಧಿಯಲ್ಲಿ ತನ್ನ ನಿಧಾನ ವಿಕಾಸವನ್ನು ಪ್ರಾರಂಭಿಸಿತು. ಕ್ರಿಸ್ತನಿಗೆ ಮುಂಚೆ ಕೆಲವು ಶತಮಾನಗಳ ಹಿಂದೆ ಜೀವಿಸಿದ್ದ ಪ್ಲೇಟೋವಿನಂಥ ಗ್ರೀಕ್ ತತ್ವಜ್ಞಾನಿಗಳ ತ್ರಿತ್ವವಾದಿ ವಿಚಾರಗಳು, ಕ್ರಮೇಣ ಚರ್ಚ್ ಬೋಧನೆಯೊಳಗೆ ನುಸುಳಿದವು. ದ ಚರ್ಚ್ ಆಫ್ ದ ಫರ್ಸ್ಟ್ ತ್ರೀ ಸೆಂಟ್ಯುರೀಸ್ ಹೇಳುವುದು:
“ತ್ರಿತ್ವ ತತ್ವ ಕ್ರಮೇಣ ಮತ್ತು ತುಲನಾತ್ಮಕವಾಗಿ ಕೊನೆಗೆ ರೂಪುಗೊಂಡಿತೆಂದು ನಾವು ಸಮರ್ಥಿಸುತ್ತೇವೆ; ಇದರ ಮೂಲವು ಯೆಹೂದಿ ಮತ್ತು ಕ್ರೈಸ್ತ ಶಾಸ್ತ್ರಗ್ರಂಥಗಳಿಗೆ ತೀರಾ ಅಸಂಗತವಾಗಿತ್ತು; ಅದು ಬೆಳೆದು, ಪ್ಲೇಟೋ ವಿಚಾರಗಳಿಗೆ ಪರಿವರ್ತಿಸುತ್ತಿದ್ದ ಚರ್ಚ್ ಪ್ರಮುಖರ ಕೈಯಿಂದ ಕ್ರೈಸ್ತತ್ವದೊಳಗೆ ಸಂಯೋಜಿಸಲ್ಪಟ್ಟಿತು; ಜಸ್ಟಿನ್ನ ಸಮಯದಲ್ಲಿ, ಮತ್ತು ಅನಂತರ ಬಹು ಸಮಯದ ತನಕ, ಪುತ್ರನ ವಿಶಿಷ್ಟ ಸ್ವರೂಪ ಮತ್ತು ಕನಿಷ್ಠತೆಯು ಸಾರ್ವತ್ರಿಕವಾಗಿ ಕಲಿಸಲ್ಪಟ್ಟಿತು; ಮತ್ತು ಆಗ ತ್ರಯೈಕ್ಯದ ಪ್ರಥಮವಾದ ಛಾಯಾ ಹೊರಮೇರೆಯು ಮಾತ್ರ ದೃಶ್ಯಗೋಚರವಾಗಿತ್ತು.”
ಪ್ಲೇಟೋಗೆ ಮುಂಚೆ, ತ್ರಿತ್ವಗಳು ಅಥವಾ ತ್ರಯೈಕ್ಯಗಳು, ಬ್ಯಾಬಿಲನ್ ಮತ್ತು ಈಜಿಪ್ಟಿನಲ್ಲಿ ಸರ್ವಸಾಮಾನ್ಯವಾಗಿದ್ದವು. ಮತ್ತು ರೋಮನ್ ರಂಗದಲ್ಲಿ ಅವಿಶ್ವಾಸಿಗಳನ್ನು ಆಕರ್ಷಿಸುವುದಕ್ಕೆ ಚರ್ಚ್ ಮುಖಂಡರ ಪ್ರಯತ್ನಗಳು, ಆ ಕೆಲವು ವಿಚಾರಗಳನ್ನು ಕ್ರೈಸ್ತತ್ವದೊಳಗೆ ಕ್ರಮೇಣ ಸಂಘಟಿಸುವಂತೆ ನಡಿಸಿತು. ಇದು ಕಟ್ಟಕಡೆಗೆ, ಪುತ್ರನು ಮತ್ತು ಪವಿತ್ರಾತ್ಮನು ತಂದೆಗೆ ಸರಿಸಮಾನರು ಎಂಬ ನಂಬಿಕೆಯ ಸ್ವೀಕಾರಕ್ಕೆ ನಡಿಸಿತು.a
“ತ್ರಯೈಕ್ಯ” ಎಂಬ ಶಬ್ದವು ಸಹ ಕೇವಲ ಕ್ರಮೇಣವಾಗಿ ಸ್ವೀಕರಿಸಲ್ಪಟ್ಟಿತು. ಎರಡನೆಯ ಶತಮಾನದ ಉತ್ತರಾರ್ಧದಲ್ಲಿ, ಸಿರಿಯದ ಅಂತಿಯೋಕ್ಯದಲ್ಲಿ ಬಿಷಪನಾಗಿದ್ದ ಥಿಯೋಫಿಲಸನು, ಗ್ರೀಕಿನಲ್ಲಿ ಬರೆದು, “ಮುಕ್ಕೂಟ” ಅಥವಾ “ತ್ರಯೈಕ್ಯ” ಎಂಬರ್ಥವಿರುವ ಟ್ರೈಆ್ಯಸ್ ಎಂಬ ಶಬ್ದವನ್ನು ಮುಂತಂದನು. ಅನಂತರ ಲ್ಯಾಟಿನ್ ಲೇಖಕ ಟೆರ್ಟಲ್ಲಿಯನನು ಉತ್ತರ ಆಫ್ರಿಕದ ಕಾರ್ಥೆಜ್ನಲ್ಲಿ, “ತ್ರಯೈಕ್ಯ” ಎಂಬ ಅರ್ಥವಿರುವ ಟ್ರಿನಿಟಾಸ್ ಎಂಬ ಶಬ್ದವನ್ನು ತನ್ನ ಬರಹಗಳೊಳಗೆ ತಂದನು.b ಆದರೆ ಟ್ರೈಆ್ಯಸ್ ಶಬ್ದವು ಪ್ರೇರಿತ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ ಕಂಡುಬರುವುದಿಲ್ಲ, ಮತ್ತು ಟ್ರಿನಿಟಾಸ್ ಶಬ್ದವು, ವಲ್ಗೇಟ್ ಎಂದು ಕರೆಯಲ್ಪಡುವ ಬೈಬಲ್ನ ಲ್ಯಾಟಿನ್ ಭಾಷಾಂತರದಲ್ಲಿ ಕಂಡು ಬರುವುದಿಲ್ಲ. ಎರಡು ಹೇಳಿಕೆಗಳಲ್ಲಿ ಒಂದು ಸಹ ಬೈಬಲಿನಲ್ಲಿಲ್ಲ. ಆದರೆ ವಿಧರ್ಮಿ ಕಲ್ಪನೆಗಳ ಮೇಲೆ ಆಧಾರಿತವಾದ “ತ್ರಯೈಕ್ಯ” ಶಬ್ದವು, ಚರ್ಚ್ಗಳ ಸಾಹಿತ್ಯದೊಳಗೆ ನುಸುಳಿತು ಮತ್ತು ನಾಲ್ಕನೆಯ ಶತಮಾನದ ಬಳಿಕ ಅವರ ಮತ ತತ್ವದ ಭಾಗವಾಗಿ ಪರಿಣಮಿಸಿತು.
ಹೀಗೆ, ಅಂಥ ಒಂದು ಬೋಧನೆಯು ಬೈಬಲಿನಲ್ಲಿ ಕಲಿಸಲ್ಪಟ್ಟಿದೆಯೇ ಎಂದು ಪಂಡಿತರು ಪೂರ್ಣವಾಗಿ ಪರೀಕ್ಷಿಸಿದ್ದರೋ ಎಂದಲ್ಲ. ಬದಲಾಗಿ, ಆ ಬೋಧನೆಯನ್ನು ಹೆಚ್ಚು ಮಟ್ಟಿಗೆ ನಿರ್ಧರಿಸಿದವರು ಐಹಿಕ ಮತ್ತು ಚರ್ಚ್ ರಾಜತಂತ್ರಗಳೇ. ದ ಕ್ರಿಶ್ಚಿಯನ್ ಟ್ರಡಿಷನ್ ಪುಸ್ತಕದಲ್ಲಿ, ಗ್ರಂಥಕರ್ತ ಯರಾಸಫ್ಲ್ ಪೆಲಿಕನ್, “ಚರ್ಚೆಯಲ್ಲಿ ದೇವಜ್ಞಾನಶಾಸ್ತ್ರವಲ್ಲದ ವಿಷಯಗಳೆಡೆಗೆ, ಅವುಗಳಲ್ಲಿ ಹೆಚ್ಚಿನವು ತಮ್ಮ ಫಲಿತಾಂಶವನ್ನು ನಿರ್ಧರಿಸಲು ಪದೇ ಪದೇ ಸಿದ್ಧವಿರುವಂತೆ ತೋರಿದರೂ, ಬೇರೆ ಸಮ ಪ್ರಧಾನ ಶಕಿಗ್ತಳಿಂದ ಪ್ರತ್ಯಾಜ್ಞೆಗೆ ಗುರಿಮಾಡಲ್ಪಟ್ಟವುಗಳೆಡೆಗೆ” ಗಮನ ಸೆಳೆದಿದ್ದಾನೆ. ತತ್ವವು ಹೆಚ್ಚಾಗಿ ಚರ್ಚ್ ರಾಜತಂತ್ರಗಳ ಮತ್ತು ವ್ಯಕ್ತಿತ್ವದ ಹೋರಾಟಗಳ ಬಲಿಯಾಗಿ—ಅಥವಾ ಉತ್ಪಾದನೆಯಾಗಿ—ಇರುವಂತೆ ತೋರಿತ್ತು.” ಯೇಲ್ ಪ್ರೊಫೆಸರ್ ಇ. ವಾಷ್ಬರ್ನ್ ಹಾಪ್ಕಿನ್ಸ್, ಅದನ್ನು ಈ ರೀತಿ ಹೇಳಿದ್ದಾರೆ: “ತ್ರಯೈಕ್ಯದ ಕೊನೆಯ ಸಾಂಪ್ರದಾಯಿಕ ಅರ್ಥ ನಿರೂಪಣೆಯು ಬಹುಮಟ್ಟಿಗೆ ಚರ್ಚ್ ರಾಜತಂತ್ರವೇ ಆಗಿತ್ತು.”
ದೇವರು ಪರಮ ಶೇಷ್ಠನು ಮತ್ತು ಅವನಿಗೆ ಸರಿಸಮಾನನಿಲ್ಲವೆಂಬ ಸರಳವಾದ ಬೈಬಲ್ ಬೋಧನೆಗೆ ಹೋಲಿಸುವಲ್ಲಿ, ತ್ರಯೈಕ್ಯ ತತ್ವವು ಎಷ್ಟೊಂದು ಅಸಮಂಜಸವಾಗಿದೆ! ದೇವರು ಹೇಳುವ ಪ್ರಕಾರ, “ನನ್ನನ್ನು ಯಾರಿಗೆ ಸರಿಕಟ್ಟಿ ಹೋಲಿಸೀರಿ, ಇಬ್ಬರು ಸಮಾನರೆಂದು ನನ್ನನ್ನು ಯಾರೊಡನೆ ಸಮಮಾಡೀರಿ?”—ಯೆಶಾಯ 46:5.
ಪ್ರತಿನಿಧಿಸಲ್ಪಟ್ಟ ವಿಷಯ
ತ್ರಯೈಕ್ಯ ವಿಚಾರದ ಕ್ರಮೇಣ ವಿಕಸನವು ಏನನ್ನು ಪ್ರತಿಸಿಧಿಸಿತು? ಯೇಸುವು ಮುಂತಿಳಿಸಿದ ನಿಜ ಕ್ರೈಸ್ತತ್ವದಿಂದ ಬಿದ್ದುಹೋಗುವಿಕೆಯ ಒಂದು ಭಾಗವು ಅದಾಗಿತ್ತು. (ಮತ್ತಾಯ 13:24-43) ಅಪೊಸ್ತಲ ಪೌಲನು ಸಹ ಬರಲಿರುವ ಧರ್ಮಭ್ರಷ್ಟತೆಯನ್ನು ಮುಂತಿಳಿಸಿದ್ದನು:
“ಸ್ವಸ್ಥಬೋಧನೆಯಲ್ಲಿ ಜನರು ತೃಪ್ತರಾಗದೆ ಇರುವ ಸಮಯವು ನಿಶ್ಚಯವಾಗಿ ಬರಲಿದೆ, ಅವರು ಹೊಸರೀತಿಯ ವಿಷಯಗಳಿಗೆ ಆಶೆಯುಳ್ಳವರಾಗಿ ತಮ್ಮ ದುರಾಶೆಗೆ ಅನುಕೂಲರಾದ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು; ಸತ್ಯಕ್ಕೆ ಕಿವಿಗೊಡುವ ಬದಲಾಗಿ ಅವರು ಕಲ್ಪನಾಕಥೆಗಳನ್ನು ಕೇಳಲು ತಿರುಗುವರು.”—2 ತಿಮೊಥೆಯ 4:3, 4, ಕ್ಯಾತೊಲಿಕ್ ಜೆರೂಸಲೇಮ್ ಬೈಬಲ್.
ಆ ಕಲ್ಪನಾ ಕಥೆಗಳಲ್ಲಿ ಒಂದು ತ್ರಯೈಕ್ಯ ಬೋಧನೆಯಾಗಿದೆ. ನಿಧಾನವಾಗಿ ವಿಕಸನಗೊಂಡಿದ್ದಾಗಿ ಕ್ರೈಸ್ತತ್ವಕ್ಕೆ ಪರಕೀಯವಾದ ಬೇರೆ ಕೆಲವು ಕಲ್ಪನಾ ಕಥೆಗಳು ಯಾವುವೆಂದರೆ ಮಾನವ ಆತ್ಮದ ಅಂತರ್ಗತ ಅಮರತ್ವ, ಪರ್ಗೆಟರಿ, ಲಿಂಬೋ, ಮತ್ತು ನರಕಾಗ್ನಿಯಲ್ಲಿ ನಿತ್ಯ ಯಾತನೆ.
ಹೀಗೆ, ತ್ರಯೈಕ್ಯ ಬೋಧನೆ ಎಂದರೇನು? ಅದು ಕಾರ್ಯತಃ ಕ್ರಿಸ್ತೀಯ ವೇಶ ತಾಳಿರುವ ಒಂದು ವಿಧರ್ಮಿ ಬೋಧನೆಯಾಗಿದೆ. ಜನರನ್ನು ಮೋಸಗೊಳಿಸಲಿಕ್ಕಾಗಿ, ದೇವರು ಅವರಿಗೆ ಗಲಿಬಿಲಿಯೂ ಗೂಢನೂ ಆಗಿ ತೋರುವಂತೆ ಮಾಡಲು, ಸೈತಾನನಿಂದ ಪ್ರವರ್ಧಿಸಲ್ಪಟ್ಟದ್ದಾಗಿದೆ. ಇದು ಅವರನ್ನು ಇತರ ಸುಳ್ಳು ಧಾರ್ಮಿಕ ವಿಚಾರಗಳನ್ನು ಮತ್ತು ಕೆಟ್ಟ ಪದ್ಧತಿಗಳನ್ನು ಸ್ವೀಕರಿಸಲು ಹೆಚ್ಚು ಮನಸ್ಸುಳ್ಳವರಾಗುವಂತೆಯೂ ಮಾಡಿದೆ.
“ಅವರ ಫಲಗಳಿಂದ”
ಮತ್ತಾಯ 7:15-19 ರಲ್ಲಿ, ಸತ್ಯ ಧರ್ಮದಿಂದ ಸುಳ್ಳು ಧರ್ಮವನ್ನು ಹೀಗೆ ಗೊತ್ತುಮಾಡಬಹುದೆಂದು ಯೇಸು ಹೇಳಿದ್ದಾನೆ:
“ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ಕುರೀವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ; ಆದರೆ ಒಳಗೆ ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ. ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ. ಮುಳ್ಳುಗಿಡಗಳಲ್ಲಿ ದ್ರಾಕ್ಷೇಹಣ್ಣುಗಳನ್ನೂ ಮದ್ದುಗುಣಿಕೇ ಗಿಡಗಳಲ್ಲಿ ಅಂಜೂರಗಳನ್ನೂ ಕೊಯ್ಯುವದುಂಟೇ? ಹಾಗೆಯೇ ಒಳ್ಳೇ ಮರಗಳೆಲ್ಲಾ ಒಳ್ಳೇ ಫಲಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು. . . . ಒಳ್ಳೇ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ.”
ಒಂದು ಉದಾಹರಣೆಯನ್ನು ಗಮನಿಸಿರಿ. ಯೇಸು ಯೋಹಾನ 13:35 ರಲ್ಲಿ ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” 1 ಯೋಹಾನ 4:20 ಮತ್ತು 21 ರಲ್ಲಿ ಸಹ ದೇವರ ಪ್ರೇರಿತ ವಾಕ್ಯವು ಘೋಷಿಸುವುದು:
“ಒಬ್ಬನು ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು. ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಆಜ್ಞೆಯನ್ನು ನಾವು ಆತನಿಂದ ಹೊಂದಿದ್ದೇವೆ.”
ನಿಜ ಕ್ರೈಸ್ತರು ತಮ್ಮೊಳಗೆ ಪ್ರೀತಿಯುಳ್ಳವರಾಗಿರಬೇಕೆಂಬ ಮೂಲ ಸೂತ್ರವನ್ನು, ಈ ಶತಮಾನದ ಎರಡೂ ಲೋಕ ಯುದ್ಧಗಳಲ್ಲಿ ಹಾಗೂ ಬೇರೆ ಹೋರಾಟಗಳಲ್ಲಿ ಏನು ಸಂಭವಿಸಿತ್ತೋ ಅದಕ್ಕೆ ಅನ್ವಯಿಸಿರಿ. ಜನಾಂಗಿಕ ಭಿನ್ನತೆಗಳ ಕಾರಣ ಕ್ರೈಸ್ತ ಪ್ರಪಂಚದ ಒಂದೇ ಧರ್ಮಗಳ ಜನರು ರಣರಂಗಗಳಲ್ಲಿ ಕೂಡಿಬಂದು, ಒಬ್ಬರನ್ನೊಬ್ಬರು ಹತಿಸಿಕೊಂಡರು. ಪ್ರತಿಯೊಂದು ಪಕ್ಷವು ತಾನು ಕ್ರೈಸ್ತನೆಂದು ಹೇಳಿಕೊಂಡಿತ್ತು, ಮತ್ತು ಪ್ರತಿ ಪಕ್ಷವು, ತಮ್ಮ ಪಕ್ಕದಲ್ಲಿ ದೇವರಿದ್ದಾನೆಂದು ಹೇಳಿಕೊಂಡ ಅದರ ವೈದಿಕರಿಂದ ಬೆಂಬಲಿಸಲ್ಪಟ್ಟಿತ್ತು. “ಕ್ರೈಸ್ತ” ನಿಂದ “ಕ್ರೈಸ್ತ” ನ ಆ ಸಂಹಾರವು ಕೆಟ್ಟ ಫಲವಾಗಿದೆ. ಅದು ಕ್ರೈಸ್ತ ಪ್ರೀತಿಯ ಉಲ್ಲಂಘನೆ, ದೇವರ ನಿಯಮಗಳ ಅಲ್ಲಗಳೆಯುವಿಕೆ ಆಗಿದೆ.—1 ಯೋಹಾನ 3:10-12 ಸಹ ನೋಡಿರಿ.
ಲೆಕ್ಕತೀರಿಸುವ ದಿನ
ಹೀಗೆ, ಕ್ರೈಸ್ತತ್ವದಿಂದ ಬಿದ್ದು ಹೋಗುವಿಕೆಯು, ತ್ರಯೈಕ್ಯ ಬೋಧನೆಯಂಥ ಭಕ್ತಿಹೀನ ನಂಬಿಕೆಗಳಿಗೆ ನಡಿಸಿತು ಮಾತ್ರವಲ್ಲ, ಭಕ್ತಿಹೀನ ಪದ್ಧತಿಗಳೆಡೆಗೂ ನಡಿಸಿತು. ಆದರೂ ಲೆಕ್ಕ ಕೊಡಬೇಕಾದ ಒಂದು ದಿನವು ಬರಲಿಕ್ಕಿದೆ, ಯಾಕಂದರೆ ಯೇಸುವಂದದ್ದು: “ಒಳ್ಳೇ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ.” ಆದುದರಿಂದ ದೇವರ ವಾಕ್ಯವು ಪ್ರೇರಿಸುವುದು:
“ನನ್ನ ಪ್ರಜೆಗಳೇ, ಅವಳನ್ನು [ಸುಳ್ಳು ಧರ್ಮವನ್ನು] ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು. ಅವಳ ಪಾಪಗಳು ಒಂದರ ಮೇಲೊಂದು ಸೇರಿ ಆಕಾಶದ ಪರ್ಯಂತರಕ್ಕೂ ಬೆಳೆದವೆ. ದೇವರು ಅವಳ ಅನ್ಯಾಯಗಳನ್ನು ಜ್ಞಾಪಿಸಿಕೊಂಡನು.”—ಪ್ರಕಟನೆ 18:4, 5.
ಸುಳ್ಳು ಧರ್ಮದ ವಿರುದ್ಧವಾಗಿ ಏಳುವಂತೆ ಶೀಘ್ರದಲ್ಲೇ ದೇವರು ರಾಜಕೀಯ ಅಧಿಕಾರಿಗಳ ‘ಹೃದಯವನ್ನು ಪ್ರೇರಿಸು’ ವನು. ಅವರು “ಅವಳನ್ನು ಗತಿಗೆಟ್ಟವಳನ್ನಾಗಿಯೂ ಮಾಡಿ . . . ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವರು.” (ಪ್ರಕಟನೆ 17:16, 17) ಸುಳ್ಳು ಧರ್ಮವು ದೇವರ ಕುರಿತ ಅದರ ವಿಧರ್ಮಿ ತತ್ವಜ್ಞಾನಗಳೊಂದಿಗೆ ಶಾಶ್ವತವಾಗಿ ನಾಶವಾಗಿ ಹೋಗಲಿದೆ. ಯೇಸು ತನ್ನ ದಿನಗಳಲ್ಲಿ ಹೇಳಿದಂತೆ, ದೇವರು ಸುಳ್ಳು ಧರ್ಮವನ್ನು ಅವಲಂಬಿಸುವವರಿಗೆ ವಸ್ತುತಃ ಹೀಗನ್ನುವನು. “ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.”—ಮತ್ತಾಯ 23:38.
ಯಾರನ್ನು “ಒಬ್ಬನೇ ಸತ್ಯ ದೇವರು” ಎಂದು ಯೇಸು ಹೇಳಿದ್ದನೋ ಆತನಿಗೆ, ಕಟ್ಟಕಡೆಗೆ, ಎಲ್ಲಾ ಗೌರವ ಮತ್ತು ಮಹಿಮೆಯು ಸಲ್ಲುವಂತೆ, ಸತ್ಯ ಧರ್ಮವು ದೇವರ ತೀರ್ಪುಗಳನ್ನು ಪಾರಾಗಿ ಉಳಿಯುವುದು. ಕೀರ್ತನೆಗಾರನು ಆತನನ್ನು ಗುರುತಿಸುತ್ತಾ ಘೋಷಿಸಿದ್ದು: “ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.”—ಯೋಹಾನ 17:3; ಕೀರ್ತನೆ 83:18.
References:
1. Encyclopædia Britannica, 1971, Volume 6, page 386.
2. A Short History of Christian Doctrine, by Bernhard Lohse, 1963, page 51.
3. Ibid., pages 52-3.
4. New Catholic Encyclopedia, 1967, Volume VII, page 115.
5. A Short History of Christianity, by Martin E. Marty, 1959, page 91.
6. A Select Library of Nicene and Post-Nicene Fathers of the Christian Church, by Philip Schaff and Henry Wace, 1892, Volume IV, page xvii.
7. A Short History of Christian Doctrine, page 53.
8. A Short History of Christianity, page 91.
9. The Church of the First Three Centuries, by Alvan Lamson, 1869, pages 75-6, 341.
10. Second Century Orthodoxy, by J. A. Buckley, 1978, pages 114-15.
11. New Catholic Encyclopedia, 1967, Volume VII, page 115.
12. Ibid., Volume IV, page 436.
13. Ibid., page 251.
14. Ibid., page 436.
15. The New Encyclopædia Britannica, 1985, 15th Edition, Micropædia, Volume 1, page 665.
16. The Church of the First Three Centuries, page 52.
17. The Christian Tradition, by Jaroslav Pelikan, 1971, page 173.
18. Origin and Evolution of Religion, by E. Washburn Hopkins, 1923, page 339.
[ಅಧ್ಯಯನ ಪ್ರಶ್ನೆಗಳು]
a ಅಧಿಕ ಸಮಾಚಾರಕ್ಕಾಗಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ ಪ್ರಕಾಶಿತ, ನೀವು ತ್ರಯೈಕ್ಯವನ್ನು ನಂಬ ಬೇಕೋ? ಬ್ರೋಷರನ್ನು ನೋಡಿರಿ.
b ಈ ಮಾಲೆಯ ಹಿಂದಣ ಲೇಖನಗಳಲ್ಲಿ ತೋರಿಸಿದ ಪ್ರಕಾರ, ಥಿಯೋಫಿಲಸ್ ಮತ್ತು ಟೆರ್ಟಲ್ಲಿಯನ್ ಈ ಶಬ್ದಗಳನ್ನು ಉಪಯೋಗಿಸಿದ್ದರೂ, ಇಂದು ಕ್ರೈಸ್ತ ಪ್ರಪಂಚವು ನಂಬುವ ತ್ರಯೈಕ್ಯವು ಅವರ ಮನಸ್ಸಿನಲ್ಲಿರಲಿಲ್ಲ.
[ಪುಟ 22 ರಲ್ಲಿರುವ ಚಿತ್ರ]
ರಾಜಕೀಯ ಅಧಿಕಾರಿಗಳು ಸುಳ್ಳು ಧರ್ಮದ ವಿರುದ್ಧವಾಗಿ ಏಳುವಂತೆ ದೇವರು ಮಾಡುವನು
[ಪುಟ 24 ರಲ್ಲಿರುವ ಚಿತ್ರ]
ಸತ್ಯ ಧರ್ಮವು ದೇವರ ತೀರ್ಪುಗಳನ್ನು ಪಾರಾಗಿ ಉಳಿಯುವುದು