ಕ್ರೈಸ್ತರು ಒಂದು ವಿಶ್ರಾಂತಿ ದಿನವನ್ನು ಆಚರಿಸಬೇಕೋ?
ಜೂನ್ ಅಸಾಧಾರಣ ಮಳೆಯ ತಿಂಗಳಾಗಿತ್ತು. ಇದರ ಕಾರಣ, 1991 ರ ವಿಂಬಲನ್ಡ್ ಟೆನ್ನಿಸ್ ಚ್ಯಾಂಪಿಯನ್ಶಿಪ್ಗಳ ಸಮಯದಲ್ಲಿ ಒಂದು ದೀರ್ಘಾವಧಿಯ ಐಹಿಕ ಸಂಪ್ರದಾಯವು ಮುರಿಯಲ್ಪಟ್ಟಿತು. ಕಳಕೊಂಡ ಸಮಯವನ್ನು ಭರ್ತಿಮಾಡಲು, ಇತಿಹಾಸದಲ್ಲಿ ಮೊತ್ತಮೊದಲಾಗಿ, ಆದಿತ್ಯವಾರದಂದು ಮ್ಯಾಚ್ಗಳನ್ನು ಆಡಲಾಯಿತು. ಇದರಂಥ ನಿಯಮಗಳ ಒಂದು ಪ್ರಾಸಂಗಿಕ ದುರ್ಲಕ್ಷ್ಯದ ಹೊರತು, ಇಂಗ್ಲೆಂಡಿನಲ್ಲಿ ಹಾಗೂ ಬೇರೆ ಅನೇಕ ದೇಶಗಳಲ್ಲಿ, ಆದಿತ್ಯವಾರವು ಒಂದು ಪವಿತ್ರ ವಿಶ್ರಾಂತಿ ದಿನವಾಗಿ ಉಳಿದದೆ.
ಕೆಲವು ಜನರು ಒಂದು ಬೇರೆಯಾದ ವಿಶ್ರಾಂತಿ ದಿನವನ್ನು ಆಚರಿಸುತ್ತಾರೆ. ಯೆಹೂದ್ಯರು ಲೋಕ ವ್ಯಾಪಕವಾಗಿ, ಶುಕ್ರವಾರ ಸೂರ್ಯಾಸ್ತಮಾನದಿಂದ ಹಿಡಿದು ಶನಿವಾರ ಸೂರ್ಯಾಸ್ತಮಾನದ ತನಕ ಕಟ್ಟುನಿಟ್ಟಿನಿಂದ ಸಬ್ಬತನ್ನು ಆಚರಿಸುತ್ತಾರೆ. ಸಬ್ಬತಿನ ಸಮಯದಲ್ಲಿ ಇಸ್ರಾಯೇಲಿನ ರಾಷ್ಟ್ರೀಯ ವಿಮಾನಮಾರ್ಗವು ಹಾರುವುದಿಲ್ಲ, ಮತ್ತು ಕೆಲವು ಊರುಗಳಲ್ಲಿ ಸಾರ್ವಜನಿಕ ವಾಹನ ಸೌಕರ್ಯವು ನಡಿಯುವುದಿಲ್ಲ. ಯೆರೂಸಲೇಮಿನಲ್ಲಿ ಸಂಪ್ರದಾಯವಾದಿಗಳು, ಸಬ್ಬತಿನಲ್ಲಿ ನ್ಯಾಯಬಾಹಿರವೆಂದು ಅವರು ಪರಿಗಣಿಸುವ ಎಲ್ಲಾ ವಾಹನ ಸಂಚಾರವನ್ನು ಪ್ರತಿಬಂಧಿಸಲು, ನಿರ್ದಿಷ್ಟ ಮಾರ್ಗಗಳಿಗೆ ತಡೆಗಟ್ಟನ್ನು ಹಾಕುತ್ತಾರೆ.
ಅನೇಕ ಧರ್ಮಗಳು ಇನ್ನೂ ಒಂದು ಸಾಪ್ತಾಹಿಕ ವಿಶ್ರಾಂತಿ ದಿನವನ್ನು ಅಥವಾ ಸಬ್ಬತನ್ನು ಆಚರಿಸುವ ನಿಜತ್ವವು, ಹಲವಾರು ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಸಬ್ಬತ್ ಆಚರಣೆಯು ಯೆಹೂದ್ಯರಿಗೆ ಮಾತ್ರವೆಯೋ? ಕ್ರೈಸ್ತ ಪ್ರಪಂಚದ ಹೆಚ್ಚಿನ ಧರ್ಮಗಳು ವಿಶ್ರಾಂತಿಗಾಗಿ ಒಂದು ಬೇರೆ ದಿನವನ್ನು ಸ್ವೀಕರಿಸಲು ತೊಡಗಿದ್ದೇಕೆ? ವಾರದಲ್ಲಿ ಒಂದು ವಿಶ್ರಾಂತಿ ದಿನವನ್ನಾಚರಿಸುವುದು ಒಂದು ಬೈಬಲ್ ಆವಶ್ಯಕತೆಯಾಗಿ ಇಂದು ಉಳಿದಿದೆಯೇ?
ಸಬ್ಬತು ಯಾವಾಗಲೂ ಅಸ್ತಿತ್ವದಲ್ಲಿತ್ತೋ?
ಸಬ್ಬತಿನ ಕುರಿತಾದ ಮೊದಲನೆಯ ಶಾಸ್ತ್ರೀಯ ತಿಳಿಸುವಿಕೆಯನ್ನು ನಾವು ವಿಮೋಚನಕಾಂಡದಲ್ಲಿ ಕಾಣುತ್ತೇವೆ. ಇಸ್ರಾಯೇಲ್ಯರು ಅರಣ್ಯದಲ್ಲಿದ್ದಾಗ, ಒಂದು ಅದ್ಭುತಕರವಾದ ಆಹಾರವಾದ ಮನ್ನವು ಯೆಹೋವನಿಂದ ಅವರಿಗೆ ದೊರಕಿತು. ವಾರದ ಪ್ರತಿ ಆರನೆಯ ದಿನದಲ್ಲಿ ಅವರು ಎರಡು ಪಾಲನ್ನು ಕೂಡಿಸಿಡಬೇಕಾಗಿತ್ತು ಯಾಕಂದರೆ ಏಳನೆಯ ದಿನವು ಎಲ್ಲಾ ಕೆಲಸವು ನಿಷೇಧಿಸಲ್ಪಟ್ಟಿದ್ದ “ಯೆಹೋವನ ಸಬ್ಬತ್” ದಿನವಾಗಿರಲಿಕ್ಕಿತ್ತು.—ವಿಮೋಚನಕಾಂಡ 16:4, 5, 22-25.
ಅದಲ್ಲದೆ, ಇಸ್ರಾಯೇಲ್ಯರು ಐಗುಪ್ತ ದೇಶದಲ್ಲಿ ದಾಸರಾಗಿದ್ದದ್ದನ್ನು ನೆನಪಿಗೆ ತರಲು ಅವರಿಗೆ ಸಬ್ಬತನ್ನು ಕೊಡಲಾಗಿತ್ತು. ಅವರು ಹಿಂದೆ ಅಂಥ ಒಂದು ನಿಯಮವನ್ನು ಅನುಸರಿಸಿದ್ದರೆ, ಈ ಜ್ಞಾಪಕವು ಕೊಂಚವೇ ಗಮನಾರ್ಹವಾಗಿರುತ್ತಿತ್ತು. ಆದುದರಿಂದ, ಸಬ್ಬತನ್ನು ನಿಯಂತ್ರಿಸುವ ನಿಯಮಗಳು ಇಸ್ರಾಯೇಲಿಗೆ ಮಾತ್ರವೇ ಕೊಡಲ್ಪಟ್ಟಿದ್ದವು.—ಧರ್ಮೋಪದೇಶಕಾಂಡ 5:2, 3, 12-15.
ಸೂಕ್ಷ್ಮವಿವರಗಳುಳ್ಳ ಮತ್ತು ಹೊರೆಯಾದ ಪದ್ಧತಿಗಳು
ಸಬ್ಬತಿನ ಕುರಿತು ಮೋಶೆಯ ನಿಯಮವು ಸವಿಸ್ತಾರ ವಿವರವನ್ನು ಕೊಡಲಿಲ್ಲವಾದ್ದರಿಂದ, ರಬ್ಬಿಗಳು ಶತಮಾನಗಳಲ್ಲಿ, ಮುಖ್ಯವಾಗಿ ಸಬ್ಬತಿನಲ್ಲಿ ಎಲ್ಲಾ ತೆರದ ಕೆಲಸಗಳನ್ನು ನಿರೋಧಿಸುವ, ಹಲವಾರು ನಿಷೇಧಗಳನ್ನು ರಚಿಸಿದರು. ಮಿಷ್ನಾಕ್ಕೆ ಅನುಸಾರವಾಗಿ, ನಿಷೇಧಿಸಲ್ಪಟ್ಟ ಕೆಲಸವು ಹೊಲಿಯುವುದು, ಬರೆಯುವುದು, ಮತ್ತು ಹೊಲದ ಕೆಲಸದಂಥ 39 ಮುಖ್ಯ ತೆರದ ಗುಂಪಾಗಿ ಮಾಡಲ್ಪಟ್ಟಿದ್ದವು. ಈ ನಿಯಮಗಳಲ್ಲಿ ಹೆಚ್ಚಿನವು ಬೈಬಲಾಧಾರಿತವಲ್ಲ. ಮಿಷ್ನಾವನ್ನು ಉದಾಹರಿಸುತ್ತಾ, ಎನ್ಸೈಕ್ಲೊಪೀಡಿಯ ಜೂಡೈಕಾ ಅಂಗೀಕರಿಸುವುದೇನಂದರೆ ಈ ನಿಯಮಗಳು “ಕೂದಲಿನಿಂದ ನೇತಾಡುವ ಬೆಟ್ಟಗಳಂತಿವೆ, ಯಾಕಂದರೆ ಶಾಸ್ತ್ರಗ್ರಂಥದಲ್ಲಿ ಆ ವಿಷಯಗಳ ಕುರಿತು ಏನೂ ಇಲ್ಲದಿದ್ದರೂ, ನಿಯಮಗಳಾದರೋ ಅನೇಕ.”
“ಏಳನೆಯ ದಿನದಲ್ಲಿ ಮನುಷ್ಯನು ತನ್ನ ಸ್ಥಳದಿಂದ ಹೊರಗೆ ಹೋಗಬಾರದು” ಎಂಬ ನಿಯಮವನ್ನು ಅನ್ವಯಿಸಲಿಕ್ಕಾಗಿ, ಅಧಿಕತಮ ದೂರವು ನಿರ್ಧರಿಸಲ್ಪಟ್ಟಿತ್ತು, ಮತ್ತು ಇದಕ್ಕೆ “ಸಬ್ಬತ್ ಸೀಮಿತ” ಎಂದು ಹೆಸರಾಯಿತು. ನಿರ್ದಿಷ್ಟ ಮೂಲಗಳಿಗನುಸಾರವಾಗಿ, ಅದು ಎರಡು ಸಾವಿರ ಕ್ಯೂಬಿಟ್ಸ್ ಅಥವಾ ಸುಮಾರು 900 ಮೀಟರುಗಳಿಗೆ ಅನುರೂಪವಾಗಿದೆ. (ವಿಮೋಚನಕಾಂಡ 16:29, ಕಿಂಗ್ ಜೇಮ್ಸ್ ವರ್ಷನ್) ಆದರೂ, ಈ ನಿಯಮವನ್ನು ಯುಕ್ತಿಯಿಂದ ಅಡಹ್ಡಾಯಬಹುದಾಗಿತ್ತು: ಮುಂಚಿನ ಸಂಜೆ ಸಬ್ಬತ್ ಊಟಗಳನ್ನು ಮನೆಯಿಂದ 2000 ಕ್ಯೂಬಿಟ್ಸ್ ದೂರದಲ್ಲಿ ಇಡಸಾಧ್ಯವಿತ್ತು. ಈ ಸ್ಥಳವನ್ನು ಆಗ ಕುಟುಂಬ ನಿವಾಸದ ಒಂದು ವಿಸ್ತೃತ ಭಾಗವಾಗಿ ಪರಿಗಣಿಸಬಹುದು ಮತ್ತು ಆ ಬಿಂದುವಿಂದ ಇನ್ನು ಎರಡು ಸಾವಿರ ಕ್ಯೂಬಿಟ್ಗಳನ್ನು ಲೆಕ್ಕಿಸಬಹುದಿತ್ತು.
ಈ ಹೆಚ್ಚಿನ ಮಾನವ-ನಿರ್ಮಿತ ನಿಯಮಗಳು ಯೇಸುವಿನ ದಿನಗಳಲ್ಲಿ ಜಾರಿಯಲ್ಲಿದ್ದವು. ಹೀಗೆ, ಆತನ ಶಿಷ್ಯರು ಧಾನ್ಯದ ಹೊಲಗಳನ್ನು ಹಾದುಹೋಗುತ್ತಿದ್ದಾಗ ತೆನೆಗಳನ್ನು ಮುರುಕೊಂಡು ತಿಂದದಕ್ಕಾಗಿ ಧಾರ್ಮಿಕ ಮುಖಂಡರು ಅವರನ್ನು ಖಂಡಿಸಿದ್ದರು. ಅವರು ಸಬ್ಬತನ್ನು ಮುರಿದವರೆಂದು ಆರೋಪಿಸಲಾಯಿತು—ಧಾನ್ಯವನ್ನು ಕೀಳುವುದು ಕೊಯ್ಯುವಿಕೆಯಾಗಿ, ಮತ್ತು ಅದನ್ನು ತೀಡುವುದು ತೆನೆ ಪುಡಿಮಾಡುವಿಕೆ ಯಾ ಬೀಸುವಿಕೆಯಾಗಿ ಪರಿಗಣಿಸಲ್ಪಡುತ್ತಿತ್ತು. ಹಲವಾರು ಸಂದರ್ಭಗಳಲ್ಲಿ ಯೇಸು ಅವರ ಅತಿರೇಕ ನೋಟಗಳನ್ನು ಖಂಡಿಸಿದ್ದನು ಯಾಕಂದರೆ ಅವು ಯೆಹೋವನ ನಿಯಮದ ಆತ್ಮವನ್ನು ತಪ್ಪಾಗಿ ಪ್ರತಿನಿಧಿಸಿದ್ದವು.—ಮತ್ತಾಯ 12:1-8; ಲೂಕ 13:10-17; 14:1-6; ಯೋಹಾನ 5:1-16; 9:1-16.
ಶನಿವಾರದಿಂದ ಆದಿತ್ಯವಾರ ಸಬ್ಬತಿಗೆ
“ಆದಿತ್ಯವಾರಗಳು ದೇವರ ಭಕ್ತಿಪೂರ್ವಕ ಸೇವೆಗಾಗಿ ಇಡಲ್ಪಡುವುವು.” ಇಂಥ ಸಬ್ಬತ್ನ ಮೇಲಣ ನಾಲ್ಕನೆಯ ಆಜ್ಞೆಯು ಕ್ಯಾತೊಲಿಕ್ ಚರ್ಚಿನಿಂದ ನಿರೂಪಿಸಲ್ಪಟ್ಟಿದೆ. ಇತ್ತೀಚೆಗೆ ಪ್ರಕಾಶಿತವಾದ ಫ್ರೆಂಚ್ ಕಟಾಶ್ಜೆಮ್ ಪರ್ ಎಡ್ಯುಲ್ಟ್ ವಿವರಿಸುವುದು: “ಕ್ರೈಸ್ತ ಭಾನುವಾರವು ಸಬ್ಬತಿನ ಮರುದಿನ ಆಚರಿಸಲ್ಪಡುತ್ತಿದೆ: ಎಂಟನೆಯ ದಿನದಲ್ಲಿ, ಅಂದರೆ, ಹೊಸ ಸೃಷ್ಟಿಯ ಮೊದಲನೆಯ ದಿನದಲ್ಲಿ. ಅದು ಸಬ್ಬತಿನ ಆವಶ್ಯಕ ಮೂಲಾಂಶಗಳನ್ನು ಸ್ವೀಕರಿಸುತ್ತದೆ ಆದರೆ, ಕ್ರಿಸ್ತನ ಪಸ್ಕದ ಮೇಲೆ ಕೇಂದ್ರಿತವಾಗಿದೆ.” ಶನಿವಾರದಿಂದ ಆದಿತ್ಯವಾರಕ್ಕೆ ಈ ಸಬ್ಬತಿನ ಬದಲಾವಣೆಯು ಸಂಭವಿಸಿದ್ದು ಹೇಗೆ?
ಆದಿತ್ಯವಾರವು ಯೇಸು ಪುನರುತ್ಥಾನಗೊಂಡ ದಿನವಾಗಿದ್ದರೂ, ಆದಿ ಕ್ರೈಸ್ತರಿಗೆ ಅದು ಬೇರೆ ಯಾವುದೇ ದಿನದಂತೆ ಕೆಲಸದ ದಿನವಾಗಿತ್ತು. ಆದರೆ (ಸಾ.ಶ. ನಾಲ್ಕನೆಯ ಶತಮಾನದ ಮಧ್ಯದಿಂದ-ಕೊನೆಯ ತನಕದ) ಲವೊದೇಕಿಯ ಚರ್ಚ್ ಮಂಡಲಿಯ ನಿರ್ಣಯವು ಪ್ರಕಟಿಸುವುದೇನಂದರೆ, ಸಮಯವು ಗತಿಸಿದಷ್ಟಕ್ಕೆ, ಯೆಹೂದ್ಯ ಶನಿವಾರ ಸಬ್ಬತು “ಕ್ರೈಸ್ತ” ಭಾನುವಾರ ಸಬ್ಬತಿನಿಂದ ಸ್ಥಾನಪಲ್ಲಟಗೊಂಡಿತು. ಈ ಕಟ್ಟಳೆಯು “ಕ್ರೈಸ್ತರಿಗೆ [ಯೆಹೂದ್ಯ] ಸಬ್ಬತಿನ ಆ ದಿನದಲ್ಲಿ ಯೆಹೂದ್ಯಾನುಕರಣ ಮಾಡುವುದನ್ನು, ಕೆಲಸಮಾಡದೆ ವ್ಯರ್ಥವಾಗಿ ಕಳೆಯುವುದನ್ನು ನಿಷೇಧಿಸಿತು, ಮತ್ತು ಕರ್ತನ ದಿನವು [ಆತನು ಪುನರುತ್ಥಾನಗೊಂಡ ಆ ವಾರದ ದಿನದಲ್ಲಿ] ಕ್ರಿಸ್ತೀಯ ರೀತಿಯಲ್ಲಿ ಗೌರವಿಸಲ್ಪಡಬೇಕಿತ್ತು.” ಅಂದಿನಿಂದ ಮೊದಲುಗೊಂಡು ಕ್ರೈಸ್ತ ಪ್ರಪಂಚದ ಮತಾವಲಂಬಿಗಳಿಗೆ ಶನಿವಾರದಂದು ಕೆಲಸಮಾಡಬೇಕಿತ್ತು ಮತ್ತು ಆದಿತ್ಯವಾರದಂದು ಕೆಲಸವನ್ನು ವರ್ಜಿಸಬೇಕಿತ್ತು. ತದನಂತರ, ಆದಿತ್ಯವಾರದಂದು ಮಾಸ್ಗೆ ಹಾಜರಾಗಲು ಅವರು ಆವಶ್ಯಪಡಿಸಲ್ಪಟ್ಟರು.
ಐಹಿಕ ಅಧಿಕಾರಿಗಳ ಬೆಂಬಲದೊಂದಿಗೆ, ಆದಿತ್ಯವಾರಗಳಲ್ಲಿ ಕೆಲಸವು ಕ್ರೈಸ್ತ ಪ್ರಪಂಚದಲ್ಲೆಲ್ಲೂ ತರ್ವೆಯಾಗಿ ನಿಷೇಧಿಸಲ್ಪಟ್ಟಿತು. ಆರನೆಯ ಶತಮಾನದಿಂದ ಮುಂದೆ, ಉಲ್ಲಂಘಕರಿಗೆ ದಂಡ ಅಥವಾ ಚಾವಟಿಯೇಟು ಬೀಳುತ್ತಿತ್ತು, ಮತ್ತು ಅವರ ಹಸುಗಳನ್ನು ವಶಪಡಿಸಿಕೊಳ್ಳುತ್ತಿದ್ದರು. ಪಶ್ಚಾತ್ತಾಪ ಪಡದ ಪಾಪಿಗಳನ್ನು ಕೆಲವೊಮ್ಮೆ ದಾಸತ್ವಕ್ಕೂ ಒಳಪಡಿಸ ಸಾಧ್ಯವಿತ್ತು.
ಒಂದು ಅರ್ಥದಲ್ಲಿ, ಆದಿತ್ಯವಾರಗಳಲ್ಲಿ ಸ್ವೀಕರಣೀಯ ಕೆಲಸಗಳಿಗೆ ಸಂಬಂಧಿಸಿದ ನಿಯಮಗಳು ಯೆಹೂದ್ಯ ಸಬ್ಬತನ್ನು ನಿಯಂತ್ರಿಸುವ ನಿಯಮಗಳಷ್ಟೇ ಜಟಿಲವಾಗಿದ್ದವು. ಡಿಕ್ಷೆನೆರ್ ಡಿ ಥಿಯೊಲಜಿ ಕ್ಯಾತೊಲೀಕ್, ಚರ್ಚಿನ ಧರ್ಮಸೂಕ್ಷ್ಮ ವಿವೇಚನೆಯ ವಿಕಾಸದ ಕುರಿತು ವಿಸ್ತಾರವಾದ ವಿವರಣೆಗಳನ್ನು ಕೊಡುತ್ತದೆ, ಮತ್ತು ನಿಷೇಧಿಸಲ್ಪಟ್ಟ ವಿಷಯಗಳಲ್ಲಿ, ದಾಸ್ಯದ ಕೆಲಸ, ಹೊಲದ ಕೆಲಸ, ನ್ಯಾಯಾಂಗ ವ್ಯವಹಾರಗಳು, ಮಾರ್ಕೆಟುಗಳು, ಮತ್ತು ಬೇಟೆಯಾಡುವಿಕೆಯನ್ನು ತಿಳಿಸಲಾಗಿದೆ.
ಅಸಮಂಜಸವಾಗಿ, ಈ ನಿಷೇಧಗಳ ಸಮರ್ಥನೆಗಾಗಿ ಯೆಹೂದ್ಯ ಸಬ್ಬತನ್ನು ನಿರ್ದೇಶಿಸಲಾಗಿದೆ. ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಆದಿತ್ಯವಾರಗಳ ಕುರಿತು ಸಾಮ್ರಾಟ ಷಾರ್ಲ್ಮ್ಯಾನ್ನ ನಿಯಮಗಳನ್ನು ತಿಳಿಸುತ್ತದೆ: “ಸಬ್ಬತ್ವಾದಿಗಳ ವಿಚಾರವು ಯೆಹೂದ್ಯರದ್ದು ಮತ್ತು ಕ್ರೈಸ್ತೇತರದ್ದು ಎಂಬದು ಸಂತ ಜೆರೋಮನಿಂದ ಬಹಿರಂಗವಾಗಿ ನಿರಾಕರಿಸಲ್ಪಟ್ಟದ್ದಾಗಿ ಮತ್ತು 538 ರಲ್ಲಿ ಓರ್ಲಿನ್ ಮಂಡಳಿಯಿಂದ ಖಂಡಿಸಲ್ಪಟ್ಟದ್ದಾಗಿ ಷಾರ್ಲ್ಮ್ಯಾನನ ರಾಜಾಜ್ಞೆಯಲ್ಲಿ ಸ್ಪಷ್ಟವಾಗಿಗಿ ನಮೂದಿಸಲ್ಪಟ್ಟಿತ್ತು, ಅದು ಆದಿತ್ಯವಾರದಲ್ಲಿ ಎಲ್ಲಾ ಕೆಲಸವನ್ನು [ದಶಾಜ್ಞೆಗಳ ಉಲ್ಲಂಘನೆಯಾಗಿ] ನಿಷೇಧಿಸಿತ್ತು.” ಹೀಗೆ, ಪ್ರಜಾಧಿಕಾರಿಗಳು ಆದಿತ್ಯವಾರವನ್ನು ವಿಶ್ರಾಂತಿಯ ದಿನವಾಗಿ ವಿಧಿಸುವುದನ್ನು ಕಾಣಲು ಚರ್ಚು ಸಂತೋಷಪಟ್ಟರೂ, ಚರ್ಚು ತಾನೇ ತಿರಸ್ಕರಿಸಿದ್ದ ಒಂದು ನ್ಯಾಯಾಂಗ ಬುನಾದಿಯ ಮೇಲೆ ಅಂದರೆ ಸಬ್ಬತಿನ ಕುರಿತಾದ ಮೋಶೆಯ ನಿಯಮದ ಆಧಾರದ ಮೇಲೆ ಪ್ರಜಾಧಿಕಾರಿಗಳು ಈ ನಿರ್ಬಂಧಗಳನ್ನು ಸಮರ್ಥಿಸುವಂತೆ ಅನುಮತಿಸಿತು.
ಶಾಸ್ತ್ರೀಯವಲ್ಲದ ನಿಲುವು
ಶತಮಾನಗಳ ಹಿಂದೆ ಹಲವಾರು ಚರ್ಚು ಗುರುಗಳು, ವಿಶಿಷ್ಟವಾಗಿ ಆಗುಸ್ತೀನನು, ಸರಿಯಾಗಿಯೇ ಘೋಷಿಸಿದ್ದೇನಂದರೆ ಸಬ್ಬತು ಯೆಹೂದ್ಯರಿಗಾಗಿ ಕಾದಿರಿಸಲ್ಪಟ್ಟ ಒಂದು ತಾತ್ಕಾಲಿಕ ಏರ್ಪಾಡು. ಹೀಗೆ ಚರ್ಚ್ ಗುರುಗಳು ಕ್ರೈಸ್ತ ಗ್ರೀಕ್ ಶಾಸ್ತ್ರವು ಏನನ್ನು ವಿವರಿಸುತ್ತದೋ ಅದನ್ನು, ಅಂದರೆ, ಸಬ್ಬತು ಯೇಸುವಿನ ಯಜ್ಞದಿಂದ ರದ್ದುಮಾಡಲ್ಪಟ್ಟ ನಿಯಮದೊಡಂಬಡಿಕೆಯ ಅಖಂಡ ಭಾಗವೆಂಬದನ್ನು ಕೇವಲ ಸ್ವೀಕರಿಸಿದರು.—ರೋಮಾಪುರ 6:14; 7:6; 10:4; ಗಲಾತ್ಯ 3:10-14, 24, 25.
ಸಮಾನ ಕಾಲಾವಧಿಯ ವ್ಯೊಕ್ಯಾಬ್ಯುಲರ್ ಬಿಬ್ಲಿಕ್ ನಲ್ಲಿ, ಪ್ರಾಟೆಸ್ಟಂಟ್ ದೇವಶಾಸ್ತ್ರಜ್ಞ ಆಸ್ಕರ್ ಕಲ್ಮ್ಯಾನ್ನು, “ಯೇಸು ಆಗಮಿಸಿ, ಮರಣಪಟ್ಟು, ಪುನರುತ್ಥಾನ ಹೊಂದಿದರಿಂದಾಗಿ, ಹಳೇ ಒಡಂಬಡಿಕೆಯ ಹಬ್ಬಗಳು ಈಗ ನೆರವೇರಿಕೆಯನ್ನು ಪಡೆದಾಗಿವೆ, ಮತ್ತು ಅವುಗಳನ್ನು ಉಳಿಸಿಕೊಳ್ಳುವದೆಂದರೆ, ‘ಹಳೇ ಒಡಂಬಡಿಕೆಗೆ, ಕ್ರಿಸ್ತನು ಆಗಮಿಸಲಿಲ್ಲವೋ ಎಂಬಂತೆ, ಪುನಃ ಮರಳುವುದಾಗಿದೆ,” ಎಂದು ಅಂಗೀಕರಿಸಿರುವುದಾಗಿ ಉಲ್ಲೇಖಿಸಲ್ಪಟ್ಟಿದ್ದಾನೆ. ಈ ಸಪ್ರಮಾಣ್ಯ ವಿಷಯವನ್ನು ಪರಿಗಣಿಸಿದ ಮೇಲೆ, ಕಡ್ಡಾಯವಾದ ಸಬ್ಬತಾಚರಣೆಯನ್ನು ಸಮರ್ಥಿಸಲು ಸಾಧ್ಯವಿದೆಯೇ?
ಇಂದು, ಕ್ಯಾತೊಲಿಕ್ ಗ್ರಂಥಕರ್ತರು ಸಾಮಾನ್ಯವಾಗಿ ಅ. ಕೃತ್ಯಗಳು 20:7 ರ ಬೆಂಬಲವನ್ನು ಹುಡುಕುತ್ತಾರೆ, ಪೌಲನು ತನ್ನ ಸಂಗಡಿಗರೊಂದಿಗೆ ಒಂದು ಊಟದಲ್ಲಿ ಪಾಲುಗಾರನಾಗಲು ಕೂಡಿದ “ವಾರದ ಮೊದಲನೆಯ ದಿವಸ” (ಆದಿತ್ಯವಾರ) ದ ಕುರಿತು ಅದು ತಿಳಿಸುತ್ತದೆ. ಆದರೂ, ಇದು ಕೇವಲ ವಿವರಣೆಯ ವಿಷಯವಾಗಿತ್ತು, ಈ ವಚನದಲ್ಲಾಗಲಿ ಬೇರೆ ಬೈಬಲ್ ವಚನಗಳಲ್ಲಾಗಲಿ, ಈ ವೃತ್ತಾಂತವು ಕ್ರೈಸ್ತರಿಂದ ಅನುಸರಿಸಲ್ಪಡಲಿಕ್ಕಿದ್ದ ಒಂದು ಮಾದರಿಯಾಗಿ ಸೂಚಿಸಲ್ಪಟ್ಟಿಲ್ಲ, ಖಂಡಿತವಾಗಿಯೂ ಒಂದು ಹಂಗಾಗಿ ಅಲ್ಲ. ಹೌದು, ಆದಿತ್ಯವಾರದ ಸಬ್ಬತಾಚರಣೆಗೆ ಶಾಸ್ತ್ರೀಯ ಬೆಂಬಲವಿಲ್ಲ.
ಕ್ರೈಸ್ತರಿಗಿರುವ ವಿಶ್ರಾಂತಿ ಯಾವುದು?
ವಾರದ ವಿಶ್ರಾಂತಿ ದಿನವನ್ನು ಆಚರಿಸುವ ಹಂಗು ಕ್ರೈಸ್ತರಿಗಿಲ್ಲವಾದರೂ, ಅವರು ಇನ್ನೊಂದು ತೆರದ ವಿಶ್ರಾಂತಿಯನ್ನು ಆಚರಿಸಲು ಆಮಂತ್ರಿಸಲ್ಪಡುತ್ತಾರೆ. ಪೌಲನು ಇದನ್ನು ತನ್ನ ಜೊತೆ ಯೆಹೂದ್ಯ ಕ್ರೈಸ್ತರಿಗೆ ವಿವರಿಸುತ್ತಾ, ಅಂದದ್ದು: “ಆದುದರಿಂದ ದೇವರ ಜನರು ಅನುಭವಿಸುವದಕ್ಕಿರುವ ಸಬ್ಬತೆಂಬ ವಿಶ್ರಾಂತಿಯು ಇನ್ನೂ ಉಂಟು. . . . ಆದದರಿಂದ ನಾವು ಆ ವಿಶ್ರಾಂತಿಯಲ್ಲಿ ಸೇರುವದಕ್ಕೆ ಪ್ರಯಾಸಪಡೋಣ.” (ಇಬ್ರಿಯ 4:4-11) ಕ್ರೈಸ್ತರಾಗುವ ಮುಂಚೆ ಈ ಯೆಹೂದ್ಯರು, ತಮ್ಮಿಂದಾದಷ್ಟು ಕಟ್ಟುನಿಟ್ಟಿನಿಂದ ಮೋಶೆಯ ನಿಯಮವನ್ನು ಪಾಲಿಸುತ್ತಿದ್ದರು. ಇಲ್ಲಿ ಪೌಲನು ಅವರನ್ನು ಇನ್ನು ಮುಂದೆ ಕ್ರಿಯೆಗಳ ಮೂಲಕವಾಗಿ ರಕ್ಷಣೆಯನ್ನು ಪಡೆಯುವಂತೆ ಉತ್ತೇಜಿಸತ್ತಿರಲಿಲ್ಲ ಬದಲಿಗೆ, ನಿರ್ಜೀವ ಕ್ರಿಯೆಗಳಿಂದ “ವಿಶ್ರಮಿಸು” ವಂತೆ ಹೇಳುತ್ತಿದ್ದನು. ಇನ್ನು ಮುಂದೆ ಅವರು ಯೇಸುವಿನ ಯಜ್ಞದಲ್ಲಿ ನಂಬಿಕೆಯನ್ನಿಡಬೇಕಿತ್ತು, ದೇವರ ದೃಷ್ಟಿಯಲ್ಲಿ ಮಾನವಕುಲವು ನೀತಿವಂತರಾಗ ಸಾಧ್ಯವಿರುವುದು ಅದರ ಮೂಲಕವಾಗಿ ಮಾತ್ರವೇ,
ದೇವರ ದೃಷ್ಟಿಕೋನಕ್ಕೆ ಅದೇ ಪರಿಗಣನೆಯನ್ನು ನಾವಿಂದು ಹೇಗೆ ತೋರಿಸಬಲ್ಲೆವು? ಅವರ ನೆರೆಯವರಂತೆ, ಯೆಹೋವನ ಸಾಕ್ಷಿಗಳು ಸಮಂಜಸ ಮಾನವರೋಪಾದಿ, ಅನೇಕ ದೇಶಗಳಲ್ಲಿ ಜಾರಿಯಲ್ಲಿರುವ, ಐಹಿಕ ಕೆಲಸದಿಂದ ದೊರಕುವ ಸಾಪ್ತಾಹಿಕ ವಿಶ್ರಾಂತಿ ದಿನವನ್ನು ಗಣ್ಯಮಾಡುತ್ತಾರೆ. ಇದು ಕುಟುಂಬ ಸಹವಾಸಕ್ಕೆ ಮತ್ತು ದಣಿವಾರಿಕೆಗೆ ಸಮಯ ಕೊಡುತ್ತದೆ. ಆದರೆ ಅಧಿಕ ವಿಶಿಷ್ಟವಾಗಿ, ಇತರ ಕ್ರಿಸ್ತೀಯ ಬೆನ್ನಟ್ಟುವಿಕೆಗಳಿಗಾಗಿರುವ ಒಂದು ಅವಧಿಯಾಗಿ ರುಜುವಾಗಿಯದೆ. (ಎಫೆಸ 5:15, 16) ಇದರಲ್ಲಿ ಕೂಟಗಳು ಮತ್ತು ಬಹಿರಂಗ ಶುಶ್ರೂಷೆಯಲ್ಲಿ ಪಾಲುಗಾರಿಕೆ, ತಮ್ಮ ನೆರೆಯವರನ್ನು ಸಂದರ್ಶಿಸುತ್ತಾ, ಯಾವಾಗ ನಂಬುವ ಮಾನವಕುಲವು ಭೂ-ವ್ಯಾಪಕ ಶಾಂತಿಯನ್ನು ಆನಂದಿಸಲಿದೆಯೇ ಆ ಬರಲಿರುವ ಸಮಯದ ಕುರಿತ ಬೈಬಲ್ ಸಮಾಚಾರವನ್ನು ಹಂಚುವುದು ಸೇರಿದೆ. ನಿಮಗೆ ಇದನ್ನು ತಿಳಿಯಲು ಇಷ್ಟವಿದ್ದರೆ, ಅದು ಶನಿವಾರವಾಗಿರಲಿ, ಆದಿತ್ಯವಾರವಾಗಿರಲಿ, ಅಥವಾ ವಾರದ ಬೇರೆ ಯಾವುದೇ ದಿನವಾಗಿರಲಿ, ನಿಮಗೆ ಸಹಾಯ ಮಾಡಲು ಯೆಹೋವನ ಸಾಕ್ಷಿಗಳು ಸಂತೋಷಪಡುವರು.
[ಪುಟ 28 ರಲ್ಲಿರುವ ಚಿತ್ರ]
ಯೇಸು ಯೆಹೂದ್ಯ ಸಂಪ್ರದಾಯಗಳಿಗಿಂತ, ಸಬ್ಬತ್ ನಿಯಮವನ್ನು ಸಂಪೂರ್ಣವಾಗಿ ಪಾಲಿಸಿದನು
[ಪುಟ 29 ರಲ್ಲಿರುವ ಚಿತ್ರ]
ಐಹಿಕ ಕೆಲಸದಿಂದ ದೊರಕುವ ವಿಶ್ರಾಂತಿಯ ದಿನಗಳಲ್ಲಿ, ಕ್ರಿಸ್ತೀಯ ಬೆನ್ನಟ್ಟುವಿಕೆಗಳು ಚೈತನ್ಯವನ್ನು ಒದಗಿಸುತ್ತವೆ