ದೈವಿಕ ಬೋಧನೆಯ ಪ್ರಯೋಜನಗಳಲ್ಲಿ ಆನಂದಿಸಿರಿ
“ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ಪ್ರಯೋಜನವಾಗುವದನ್ನು ಬೋಧಿಸುವೆನು.”—ಯೆಶಾಯ 48:17, NW.
1. ನಮ್ಮ ಜೀವಿತಗಳಲ್ಲಿ ದೈವಿಕ ಬೋಧನೆಯನ್ನು ನಾವು ಅನ್ವಯಿಸುವುದಾದರೆ, ನಾವೇನನ್ನು ಹೊಂದುವೆವು?
ಯೆಹೋವ ದೇವರಿಗೆ ಅತ್ಯುತ್ತಮವಾಗಿ ತಿಳಿದಿದೆ. ಆಲೋಚನೆಯಲ್ಲಿ, ಮಾತಿನಲ್ಲಿ, ಯಾ ಕ್ರಿಯೆಯಲ್ಲಿ ಯಾರೂ ಅವನನ್ನು ಮೀರಿ ಹೋಗುವುದಿಲ್ಲ. ನಮ್ಮ ನಿರ್ಮಾಣಿಕನೋಪಾದಿ, ನಮ್ಮ ಆವಶ್ಯಕತೆಗಳ ಪ್ರಜ್ಞೆ ಅವನಿಗೆ ಇದೆ ಮತ್ತು ಅವುಗಳನ್ನು ಅವನು ಹೇರಳವಾಗಿ ಒದಗಿಸುತ್ತಾನೆ. ನಮಗೆ ಕಲಿಸುವ ವಿಧವನ್ನು ಅವನು ಖಂಡಿತವಾಗಿಯೂ ಬಲ್ಲನು. ಮತ್ತು ನಾವು ದೈವಿಕ ಬೋಧನೆಯನ್ನು ಅನ್ವಯಿಸುವುದಾದರೆ, ನಾವು ಸ್ವತಃ ಪ್ರಯೋಜಿತರಾಗುವೆವು ಮತ್ತು ನಿಜ ಆನಂದದಲ್ಲಿ ಸಂತೋಷಿಸುವೆವು.
2, 3. (ಎ) ಅವನ ಆಜೆಗ್ಞಳಿಗೆ ಅವರು ವಿಧೇಯರಾಗಿದ್ದರೆ, ದೇವರ ಪುರಾತನ ಜನರು ಹೇಗೆ ಸ್ವತಃ ಪ್ರಯೋಜನ ಪಡೆಯುತ್ತಿದ್ದರು? (ಬಿ) ನಮ್ಮ ಜೀವಿತಗಳಲ್ಲಿ ಇಂದು ದೈವಿಕ ಬೋಧನೆಯನ್ನು ನಾವು ಅನ್ವಯಿಸಿದ್ದಲ್ಲಿ, ಏನು ಸಂಭವಿಸಲಿರುವುದು?
2 ಅವನ ನಿಯಮಗಳ ಮತ್ತು ತತ್ವಗಳೊಂದಿಗೆ ಹೊಂದಿಕೆಯಿಂದಿರುವ ಮೂಲಕ ಅವನ ಸೇವಕರು ವಿಪತ್ತನ್ನು ಹೋಗಲಾಡಿಸಲು ಮತ್ತು ಜೀವಿತದಲ್ಲಿ ಸಂತೋಷಿಸಲು ದೇವರಿಗೆ ಇರುವ ತೀವ್ರಾಶೆಯನ್ನು ದೈವಿಕ ಬೋಧನೆಯು ಪ್ರಕಟಿಸುತ್ತದೆ. ಯೆಹೋವನ ಪುರಾತನ ಜನರು ಅವನಿಗೆ ಕಿವಿಗೊಟ್ಟಿದ್ದರೆ, ಹೇರಳವಾದ ಆಶೀರ್ವಾದಗಳಲ್ಲಿ ಅವರು ಆನಂದಿಸುತ್ತಿದ್ದರು, ಯಾಕಂದರೆ ಅವನು ಅವರಿಗಂದದ್ದು: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ. ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು; ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.”—ಯೆಶಾಯ 48:17, 18.
3 ಅವನ ಆಜೆಗ್ಞಳಿಗೆ ಮತ್ತು ಉಪದೇಶಗಳಿಗೆ ಅವರು ಗಮನಕೊಟ್ಟಿದ್ದರೆ, ದೇವರ ಪ್ರಾಚೀನ ಜನರು ತಾವಾಗಿಯೇ ಪ್ರಯೋಜನ ಹೊಂದುತ್ತಿದ್ದರು. ಬಾಬೆಲಿನವರ ಹಸ್ತದಲ್ಲಿ ವಿಪತ್ತನ್ನು ಅನುಭವಿಸುವ ಬದಲು, ತುಂಬಿರುವ, ಆಳವಾದ, ಮತ್ತು ಎಲ್ಲಾ ಕಾಲಗಳಲ್ಲಿ ಹರಿಯುವ ಒಂದು ನದಿಯೋಪಾದಿ, ಶಾಂತಿ ಮತ್ತು ಅಭ್ಯುದಯವನ್ನು ಅವರು ಆನಂದಿಸಬಹುದಿತ್ತು. ಇನ್ನೂ ಹೆಚ್ಚಾಗಿ, ಅವರ ನೀತಿಯ ಕೃತ್ಯಗಳು ಸಮುದ್ರದ ಅಸಂಖ್ಯಾತ ತೆರೆಗಳಂತೆ ಇರುತ್ತಿದ್ದವು. ತದ್ರೀತಿಯಲ್ಲಿ, ನಾವು ದೈವಿಕ ಬೋಧನೆಯನ್ನು ನಮ್ಮ ಜೀವಿತಗಳಲ್ಲಿ ಅನ್ವಯಿಸುವುದಾದರೆ, ಅದರ ಹಲವು ಪ್ರಯೋಜನಗಳಲ್ಲಿ ನಾವು ಆನಂದಿಸಬಲ್ಲೆವು. ಇವುಗಳಲ್ಲಿ ಕೆಲವು ಯಾವುವು?
ಅದು ಜೀವಿತಗಳನ್ನು ಮಾರ್ಪಡಿಸುತ್ತದೆ
4. ಅನೇಕ ಜನರ ಜೀವಿತಗಳನ್ನು ದೈವಿಕ ಬೋಧನೆಯು ಹೇಗೆ ಪ್ರಭಾವಿಸುತ್ತಿದೆ?
4 ದೈವಿಕ ಬೋಧನೆಯು ಅವರ ಜೀವಿತಗಳನ್ನು ಒಳ್ಳೆಯದಕ್ಕಾಗಿ ಬದಲಾಯಿಸುವುದರಿಂದ, ಅನೇಕ ಜನರಿಗೆ ಪ್ರಯೋನಕಾರಿಯಾಗಿರುತ್ತದೆ. ಯೆಹೋವನ ಉಪದೇಶವನ್ನು ಅನ್ವಯಿಸುವವರು ಸಡಿಲು ನಡತೆ, ವಿಗ್ರಹಾರಾಧನೆ, ಮಾಟ, ಜಗಳ, ಮತ್ತು ಹೊಟ್ಟೇಕಿಚ್ಚಿನಂಥ “ಶರೀರ ಭಾವದ ಕರ್ಮಗಳನ್ನು” ತೊರೆದುಬಿಡುತ್ತಾರೆ. ಅದಕ್ಕೆ ಬದಲಾಗಿ, ಅವರು ಆತ್ಮದ ಫಲಗಳಾದ ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಮತ್ತು ಶಮೆದಮೆಯನ್ನು ಪ್ರದರ್ಶಿಸುತ್ತಾರೆ. (ಗಲಾತ್ಯ 5:19-23) ಎಫೆಸ 4:17-24 ರಲ್ಲಿರುವ ಪೌಲನ ಮಾತುಗಳನ್ನೂ ಕೂಡ ಅವರು ಆಲಿಸುತ್ತಾರೆ. ಅಲ್ಲಿ ಅವನು ಜೊತೆ ವಿಶ್ವಾಸಿಗಳನ್ನು, ಅವರು ಜನಾಂಗಗಳಂತೆ ಅವರ ಮನಸ್ಸುಗಳ ನಿಷ್ಪಯ್ರೋಜಕತೆಯಲ್ಲಿ, ಮಾನಸಿಕ ಅಂಧಕಾರದಲ್ಲಿ, ಮತ್ತು ದೇವರಿಗೆ ಸೇರಿರುವ ಜೀವದಿಂದ ದೂರವಿರುವಂತೆ ನಡೆಯಬಾರದೆಂದು ಪ್ರೋತ್ಸಾಹಿಸುತ್ತಾನೆ. ಹೃದಯದ ಕಾಠಿಣ್ಯದಿಂದ ನಡಿಸಲ್ಪಡದೆ, ಕ್ರಿಸ್ತನಂತಹ ವ್ಯಕ್ತಿಗಳು ‘ತಮ್ಮ ಹಿಂದಿನ ನಡತೆಗೆ ಅನುಸಾರವಾಗಿದ್ದ ಪೂರ್ವಸ್ವಭಾವವನ್ನು ತೆಗೆದುಹಾಕಿ ತಮ್ಮ ಆಂತರ್ಯದಲ್ಲಿ ಹೊಸಬರಾಗಿ ಮಾಡಲ್ಪಡುತ್ತಾರೆ, ಅವರು ‘ದೇವರ ಚಿತ್ತಕ್ಕನುಸಾರವಾಗಿ ನಿಜ ನೀತಿ ಮತ್ತು ನಿಷ್ಠೆಯಿಂದ ನಿರ್ಮಿಸಲ್ಪಟ್ಟಿರುವ ನೂತನಸ್ವಭಾವವನ್ನು ಧರಿಸುತ್ತಾರೆ.’
5. ಜನರು ನಡೆಯುವಂತಹ ಮಾರ್ಗವನ್ನು ದೈವಿಕ ಬೋಧನೆಯು ಹೇಗೆ ಪ್ರಭಾವಿಸುತ್ತದೆ?
5 ದೈವಿಕ ಬೋಧನೆಯ ಅನ್ವಯಿಸುವ ಒಂದು ವಿಜಯಿ ಪ್ರಭಾವವೇನಂದರೆ ದೇವರೊಂದಿಗೆ ಹೇಗೆ ನಡೆಯಬೇಕೆಂದು ಅದು ನಮಗೆ ತೋರಿಸುತ್ತದೆ. ನೋಹನು ಮಾಡಿದಂತೆ, ನಾವು ಯೆಹೋವನೊಂದಿಗೆ ನಡೆಯುವದಾದರೆ, ನಮ್ಮ ಮಹಾ ಉಪದೇಶಕನಿಂದ ರೂಪಿಸಲಾದ ಜೀವನ ಮಾರ್ಗವನ್ನು ನಾವು ಅನುಸರಿಸುತ್ತೇವೆ. (ಆದಿಕಾಂಡ 6:9; ಯೆಶಾಯ 30:20, 21) ಆದರೆ ಅಪೊಸ್ತಲ ಪೌಲನು ಹೇಳಿದಂತೆ, ಅನ್ಯಜನರು “ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ.” ಮತ್ತು ಅಂಥ ಮನಸ್ಸುಗಳ ಕೆಲವು ಬರಹಗಳು ಎಷ್ಟು ಹಾನಿಕಾರಕವಾಗಿರಬಲ್ಲವು! ಪಾಂಪೆಯ ಗೋಡೆಯೊಂದರ ಮೇಲೆ ಇತರರ ಬರಹಗಳನ್ನು ಗಮನಿಸಿದ ಒಬ್ಬ ಪ್ರೇಕ್ಷಕ ತಾನೇ ಬರೆದದ್ದು: “ಓ ಗೋಡೆಯೇ, ಇಷ್ಟೊಂದು ಅರ್ಥವಿಲ್ಲದ ಬರಹದ ಭಾರದಿಂದ ನೀನು ಇನ್ನೂ ಪುಡಿಪುಡಿಯಾಗಲಿಲ್ಲವೆಂಬುದು ಒಂದು ಆಶ್ಚರ್ಯವೇ,” ಆದರೆ “ಯೆಹೋವನ ಬೋಧನೆ” ಯಲ್ಲಿ ಮತ್ತು ಅದು ಸಾಧ್ಯಗೊಳಿಸುವ ರಾಜ್ಯ ಪ್ರಚಾರ ಕಾರ್ಯದಲ್ಲಿ ಅರ್ಥವಿಲ್ಲದ ಯಾವುದೇ ಮಾತುಗಳಿಲ್ಲ. (ಅ. ಕೃತ್ಯಗಳು 13:12) ಆ ಕೆಲಸದ ಮೂಲಕ, ಸತ್ಯವನ್ನು ಪ್ರೀತಿಸುವ ಜನರು ವಿವೇಕತನದಿಂದ ಕಾರ್ಯ ಮಾಡುವಂತೆ ಸಹಾಯ ಮಾಡಲ್ಪಡುತ್ತಿದ್ದಾರೆ. ದೇವರ ಉದ್ದೇಶಗಳ ಅಜ್ಞಾನದಲ್ಲಿ, ತಮ್ಮ ಪಾಪಪೂರ್ಣ ಮಾರ್ಗದಲ್ಲಿ ನಡೆಯುವುದನ್ನು ಹೇಗೆ ನಿಲ್ಲಿಸುವುದೆಂದು ಅವರಿಗೆ ಕಲಿಸಲಾಗುತ್ತದೆ. ಇನ್ನು ಮುಂದೆ ಅವರ ಮನಸ್ಸು ಮೊಬ್ಬಾಗಿರುವದಿಲ್ಲ, ಮತ್ತು ನಿಷ್ಪ್ರಯೋಜನವಾದ ಗುರಿಗಳನ್ನು ಹುಡುಕುವುದರಲ್ಲಿ ತಮ್ಮ ಕಠಿನ ಹೃದಯಗಳಿಂದ ಅವರು ಪ್ರಚೋದಿಸಲ್ಪಡುವುದಿಲ್ಲ.
6. ಯೆಹೋವನ ಬೋಧನೆಗೆ ನಮ್ಮ ವಿಧೇಯತೆ ಮತ್ತು ನಮ್ಮ ಆನಂದದ ನಡುವೆ ಯಾವ ಸಂಬಂಧವಿದೆ?
6 ಯೆಹೋವನೊಂದಿಗೆ ಮತ್ತು ಅವನ ವ್ಯವಹಾರಗಳೊಂದಿಗೆ ನಮ್ಮನ್ನು ದೈವಿಕ ಬೋಧನೆಯು ಸುಪರಿಚಯಗೊಳಿಸುವುದರಿಂದ ಕೂಡ, ದೈವಿಕ ಬೋಧನೆಯು ನಮಗೆ ಪ್ರಯೋಜನವನ್ನುಂಟುಮಾಡುತ್ತದೆ. ಅಂಥ ಜ್ಞಾನವು ನಮ್ಮನ್ನು ದೇವರ ಬಳಿಗೆ ಸೆಳೆಯುತ್ತದೆ, ಅವನಿಗಾಗಿ ನಮ್ಮ ಪ್ರೀತಿಯನ್ನು ವರ್ಧಿಸುತ್ತದೆ, ಮತ್ತು ಆತನಿಗೆ ವಿಧೇಯರಾಗುವ ನಮ್ಮ ಆಶೆಯನ್ನು ಹೆಚ್ಚಿಸುತ್ತದೆ. ಒಂದನೆಯ ಯೋಹಾನ 5:3 ಹೇಳುವುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.” ಯೇಸುವಿನ ಆಜೆಗ್ಞಳಿಗನುಸಾರವೂ ನಾವು ವರ್ತಿಸುತ್ತೇವೆ ಯಾಕಂದರೆ ಅವನ ಬೋಧನೆಯು ದೇವರಿಂದ ಬಂದದ್ದೆಂದು ನಮಗೆ ಗೊತ್ತಿದೆ. (ಯೋಹಾನ 7:16-18) ಅಂತಹ ವಿಧೇಯತೆಯು ನಮ್ಮನ್ನು ಆತ್ಮಿಕ ಹಾನಿಯಿಂದ ಸಂರಕ್ಷಿಸುತ್ತದೆ ಮತ್ತು ನಮ್ಮ ಸಂತೋಷವನ್ನು ಪ್ರವರ್ಧಿಸುತ್ತದೆ.
ಜೀವಿತದಲ್ಲೊಂದು ನಿಜ ಉದ್ದೇಶ
7, 8. (ಎ) ಕೀರ್ತನೆ 90:12ನ್ನು ನಾವು ಹೇಗೆ ಅರ್ಥೈಸತಕ್ಕದ್ದು? (ಬಿ) ವಿವೇಕದ ಹೃದಯವೊಂದನ್ನು ನಾವು ಹೇಗೆ ಪಡೆಯಸಾಧ್ಯವಿದೆ?
7 ನಮ್ಮ ಜೀವಿತವನ್ನು ಒಂದು ಉದ್ದೇಶಭರಿತ ವಿಧಾನದಲ್ಲಿ ಬಳಸುವುದು ಹೇಗೆ ಎಂದು ತೋರಿಸುವುದರಲ್ಲಿ ಯೆಹೋವನ ಬೋಧನೆಯು ಉಪಯುಕ್ತವಾಗಿದೆ. ವಾಸ್ತವದಲ್ಲಿ, ದೈವಿಕ ಬೋಧನೆಯು ನಮ್ಮ ದಿನಗಳನ್ನು ಒಂದು ವಿಶೇಷವಾದ ರೀತಿಯಲ್ಲಿ ಎಣಿಸುವುದು ಹೇಗೆಂದು ತೋರಿಸುತ್ತದೆ. ಎಪ್ಪತ್ತು ವರ್ಷಗಳ ಒಂದು ಜೀವನ ನಿರೀಕ್ಷೆಯು ಸುಮಾರು 25,550 ದಿನಗಳ ವಾಗ್ದಾನವನ್ನು ನೀಡುತ್ತದೆ. ಐವತ್ತು ವರ್ಷಗಳ ವಯಸ್ಸಾದ ಒಬ್ಬ ವ್ಯಕ್ತಿಯು ಈಗಾಗಲೇ ಅವುಗಳಲ್ಲಿ 18,250 ದಿನಗಳನ್ನು ಕಳೆದಿದ್ದಾನೆ, ಮತ್ತು ಅವನ 7,300 ಉಳಿದ ನಿರೀಕ್ಷಿಸಲ್ಪಟ್ಟಿರುವ ದಿನಗಳು ಕೊಂಚವೆಂದೇ ತೋರುತ್ತವೆ. ವಿಶೇಷವಾಗಿ ಆಗ ಅವನು ಕೀರ್ತನೆ 90:12 ರಲ್ಲಿ “ನಮ್ಮ ದಿನಗಳು ಕೊಂಚವೇ ಎಂದು ಎಣಿಸಿ ಕೊಳ್ಳುವ ಹಾಗೆ ನಮಗೆ ಕಲಿಸು; ಆಗ ಜ್ಞಾನದ (ವಿವೇಕ, NW) ಹೃದಯವನ್ನು ಪಡಕೊಳ್ಳುವೆವು,” ಎಂದು ಪ್ರವಾದಿಯಾದ ಮೋಶೆಯು ಯಾಕೆ ದೇವರಿಗೆ ಪ್ರಾರ್ಥಿಸಿದನೆಂದು ಪೂರ್ಣವಾಗಿ ಗಣ್ಯಮಾಡಬಲ್ಲನು. ಆದರೆ ಅದರಿಂದ ಮೋಶೆಯ ಅರ್ಥವೇನಾಗಿತ್ತು?
8 ದೇವರು ಪ್ರತಿಯೊಬ್ಬ ಇಸ್ರಾಯೇಲ್ಯರ ಜೀವಮಾನಕಾಲದಲ್ಲಿ ಇರಬಹುದಾದ ನಿಖರವಾದ ದಿನಗಳ ಸಂಖ್ಯೆಯನ್ನು ಪ್ರಕಟಿಸುವನೆಂದು ಮೋಶೆಯು ಅರ್ಥೈಸಲಿಲ್ಲ. ಕೀರ್ತನೆ 90, ವಚನಗಳು 9 ಮತ್ತು 10 ಕ್ಕನುಸಾರ, ಆ ಇಬ್ರಿಯ ಪ್ರವಾದಿಯು ಸುಮಾರು 70 ಯಾ 80 ವರ್ಷಗಳು ಆಗಿರಬಹುದಾದ ಒಂದು ಜೀವನ ಕಾಲವು—ನಿಜವಾಗಿಯೂ ಸಂಕ್ಷಿಪ್ತವೆಂದು ಗುರುತಿಸಿದನು. ಆದುದರಿಂದ ಕೀರ್ತನೆ 90:12ರ ಮಾತುಗಳು, ‘ತಮ್ಮ ವರ್ಷಗಳ ದಿನಗಳನ್ನು’ ಎಣಿಸುವುದರಲ್ಲಿ ವಿವೇಕವನ್ನು ಉಪಯೋಗಿಸುವಂತೆ ಯೆಹೋವನು ತನಗೆ ಮತ್ತು ಆತನ ಜನರಿಗೆ ತೋರಿಸಲು ಯಾ ಕಲಿಸಲು ಮತ್ತು ಅವುಗಳನ್ನು ದೇವರು ಮೆಚ್ಚುವಂತಹ ರೀತಿಯಲ್ಲಿ ಉಪಯೋಗಿಸುವಂತೆ ಮೋಶೆಯ ಪ್ರಾರ್ಥನಾಪೂರ್ವಕವಾದ ಬಯಕೆಯನ್ನು ನಿಜವಾಗಿಯೂ ವ್ಯಕ್ತಪಡಿಸಿದವು. ಒಳ್ಳೆಯದು, ಹಾಗಾದರೆ, ನಮ್ಮ ವಿಷಯದಲ್ಲೇನು? ನಾವು ಪ್ರತಿಯೊಂದು ಬೆಲೆಯುಳ್ಳ ದಿನವನ್ನು ಗಣ್ಯಮಾಡುತ್ತೇವೊ? ನಮ್ಮ ಮಹಾ ಬೋಧಕನಾದ ಯೆಹೋವ ದೇವರ ಮಹಿಮೆಗಾಗಿ ಪ್ರತಿ ದಿನವನ್ನು ಸಾರ್ಥಕವಾಗಿ ಕಳೆಯಲು ಹುಡುಕುವುದರಲ್ಲಿ ನಾವು ವಿವೇಕದ ಹೃದಯವನ್ನು ಪಡೆದುಕೊಳ್ಳುತ್ತಾ ಇದ್ದೇವೊ? ದೈವಿಕ ಬೋಧನೆಯು ಕೇವಲ ಅದನ್ನೇ ಮಾಡಲು ನಮಗೆ ಸಹಾಯ ಮಾಡುತ್ತದೆ.
9. ಯೆಹೋವನ ಮಹಿಮೆಗೆ ನಮ್ಮ ದಿನಗಳನ್ನು ನಾವು ಲೆಕ್ಕಿಸಲು ಕಲಿಯುವುದಾದರೆ ಏನನ್ನು ನಿರೀಕ್ಷಿಸಬಲ್ಲೆವು?
9 ಯೆಹೋವನ ಮಹಿಮೆಗಾಗಿ ನಾವು ನಮ್ಮ ದಿನಗಳನ್ನು ಎಣಿಸಲು ಕಲಿಯುವದಾದರೆ, ನಮ್ಮ ದಿನಗಳನ್ನು ಎಣಿಸುತ್ತಾ ಮುಂದುವರಿಯುತ್ತಿರಲು ನಾವು ಶಕ್ತರಾಗಬಹುದು, ಯಾಕಂದರೆ ದೈವಿಕ ಬೋಧನೆಯು ಅನಂತ ಜೀವನದ ಜ್ಞಾನವನ್ನು ನೀಡುತ್ತದೆ. “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು,” ಎಂದನು ಯೇಸು. (ಯೋಹಾನ 17:3) ನಿಜವಾಗಿಯೂ, ಲಭ್ಯವಿರುವ ಎಲ್ಲಾ ಲೌಕಿಕ ಜ್ಞಾನವನ್ನು ನಾವು ಪಡೆಯುವದಾದರೆ, ಅದು ನಮಗೆ ಅನಂತ ಜೀವನವನ್ನು ತರಲಾರದು. ಆದರೆ ವಿಶ್ವದಲ್ಲಿರುವ ಎರಡು ಅತಿ ಮುಖ್ಯ ವ್ಯಕ್ತಿಗಳ ನಿಷ್ಕೃಷ್ಟವಾದ ಜ್ಞಾನವನ್ನು ನಾವು ಪಡೆದು, ಅನ್ವಯಿಸುವದಾದರೆ ಮತ್ತು ನಿಜವಾಗಿಯೂ ನಂಬಿಕೆಯನ್ನು ಪ್ರದರ್ಶಿಸುವದಾದರೆ ನಿತ್ಯಜೀವವು ನಮ್ಮದಾಗಿರಬಲ್ಲದು.
10. ಶಿಕ್ಷಣದ ಕುರಿತು ಒಂದು ಎನ್ಸೈಕ್ಲೊಪೀಡಿಯಾ ಏನನ್ನುತ್ತದೆ, ಮತ್ತು ದೈವಿಕ ಬೋಧನೆಯ ಪ್ರಯೋಜನಗಳೊಂದಿಗೆ ಇದು ಹೇಗೆ ಹೋಲುತ್ತದೆ?
10 ನಾವು ಈಗಾಗಲೇ ಎಷ್ಟೊಂದು ದೀರ್ಘಕಾಲ ಬದುಕಿದ್ದರೂ ಕೂಡ, ದೈವಿಕ ಬೋಧನೆಯ ಈ ಗಮನಾರ್ಹ ಪ್ರಯೋಜನವನ್ನು ನಾವು ನೆನಪಿನಲ್ಲಿಡೋಣ: ಅದನ್ನು ಅನ್ವಯಿಸುವವರಿಗೆ ಅದು ಜೀವನದಲ್ಲಿ ಒಂದು ನಿಜವಾದ ಉದ್ದೇಶವನ್ನು ಕೊಡುತ್ತದೆ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಶಿಕ್ಷಣವು ಜನರು ಸಮಾಜದ ಉಪಯುಕ್ತ ಸದಸ್ಯರಾಗುವಂತೆ ಸಹಾಯಮಾಡಬೇಕು. ಪಿತ್ರಾರ್ಜಿತವಾಗಿ ಪಡೆದ ತಮ್ಮ ಸಂಸ್ಕೃತಿಯ ಕಡೆಗೆ ಗಣ್ಯತೆಯನ್ನು ಬೆಳೆಸಲು ಮತ್ತು ಹೆಚ್ಚಿನ ತೃಪ್ತಿಕರ ಜೀವಿತಗಳನ್ನು ಜೀವಿಸಲು ಅದು ಸಹಾಯ ಮಾಡಬೇಕು.” ದೈವಿಕ ಬೋಧನೆಯು ತೃಪ್ತಿಕರ ಜೀವಿತಗಳನ್ನು ಜೀವಿಸಲು ನಮಗೆ ಸಹಾಯ ಮಾಡುವುದರಲ್ಲಿ ಪ್ರಯೋಜನಕಾರಿಯಾಗಿದೆ. ದೇವರ ಜನರೋಪಾದಿ ಅದು ನಮ್ಮಲ್ಲಿ ನಮ್ಮ ಆತ್ಮಿಕ ಸೊತ್ತಿನ ಕಡೆಗೆ ತೀಕ್ಷೈವಾದ ಗಣ್ಯತೆಯನ್ನು ಬೆಳೆಸುತ್ತದೆ. ಮತ್ತು ಅದು ನಿಜವಾಗಿಯೂ ನಮ್ಮನ್ನು ಸಮಾಜದ ಉಪಯುಕ್ತ ಸದಸ್ಯರನ್ನಾಗಿ ಮಾಡುತ್ತದೆ, ಯಾಕಂದರೆ ಭೂ ವ್ಯಾಪಕವಾಗಿ ಜನರ ಆವಶ್ಯಕತೆಗಳನ್ನು ಎದುರಿಸುವಲ್ಲಿ ನಾವು ಒಂದು ಪ್ರಾಮುಖ್ಯ ಪಾತ್ರವನ್ನು ನಿರ್ವಹಿಸಲು ಅದು ನಮ್ಮನ್ನು ಶಕ್ತಗೊಳಿಸುತ್ತದೆ. ಅದನ್ನು ಯಾಕೆ ಹೇಳಸಾಧ್ಯವಿದೆ?
ಲೋಕವ್ಯಾಪಕ ಶಿಕ್ಷಣ ಕಾರ್ಯಕ್ರಮ
11. ತೋಮಸ್ ಜೆಫರ್ಸನ್ರು ಯೋಗ್ಯವಾದ ಶಿಕ್ಷಣದ ಅಗತ್ಯತೆಯನ್ನು ಹೇಗೆ ಎತ್ತಿತೋರಿಸಿದರು?
11 ಬೇರೆ ಯಾವುದೇ ಕಲಿಸುವ ಕಾರ್ಯಕ್ರಮಕ್ಕಿಂತಲೂ, ದೈವಿಕ ಬೋಧನೆಯು ಜನರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತದೆ. ಅಮೆರಿಕದ ಮೂರನೆಯ ಅಧ್ಯಕ್ಷರಾದ ತೋಮಸ್ ಜೆಫರ್ಸನ್ರಿಂದ ಜನರಿಗೆ ಕಲಿಸುವ ಅಗತ್ಯವು ಗಮನಿಸಲ್ಪಟ್ಟಿತು. ಸ್ವಾತಂತ್ರ್ಯ ಘೋಷಣೆಯ ಪತ್ರಕ್ಕೆ ಜೊತೆ ರುಜುಗಾರ ಹಾಗೂ ಒಬ್ಬ ಗೆಳೆಯನಾಗಿದ್ದ, ಜಾರ್ಜ್ ವಿತ್ಗೆ, ಆಗಸ್ಟ್ 13, 1786ರ ಒಂದು ಪತ್ರದಲ್ಲಿ, ಜೆಫರ್ಸನ್ ಬರೆದದ್ದು: “ನಮ್ಮ ಸಂಪೂರ್ಣ ಕಾನೂನುಗಳ ಸಂಗ್ರಹದಲ್ಲಿ, ಜನರೊಳಗೆ ಜ್ಞಾನದ ಹರಡುವಿಕೆಯೆ ಅತಿ ಮುಖ್ಯವಾದ ಕಾನೂನೆಂದು ನಾನು ಯೋಚಿಸುತ್ತೇನೆ. ಸಂತೋಷ ಮತ್ತು ಸ್ವಾತಂತ್ರ್ಯದ ಉಳಿಯುವಿಕೆಗೆ, ಬೇರೆ ಯಾವ ನಿಶ್ಚಿತ ಆಧಾರವನ್ನು ಯೋಜಿಸಲು ಸಾಧ್ಯವಿಲ್ಲ. . . . ನನ್ನ ನೆಚ್ಚಿನ ಮಿತ್ರನೇ, ಅಜ್ಞಾನದ ವಿರುದ್ಧ ಒಂದು ಚಳುವಳಿಯನ್ನು ಪ್ರಚಾರ ಮಾಡು; ಸಾಮಾನ್ಯ ಜನರಿಗೆ ಶಿಕ್ಷಣವನ್ನೀಯಲು ಕಾನೂನನ್ನು ಸ್ಥಾಪಿಸಿ ಉತ್ತಮಗೊಳಿಸು. [ಶಿಕ್ಷಣದ] ಉದ್ದೇಶಕ್ಕಾಗಿ ಕೊಡಲಾಗುವ ತೆರಿಗೆಯು, ನಾವು ಜನರನ್ನು ಅಜ್ಞಾನದಲ್ಲಿ ಬಿಡುವುದಾದರೆ ನಮ್ಮಲ್ಲಿ ಎದ್ದು ಬರುವ ರಾಜರು, ಯಾಜಕರು, ಮತ್ತು ಪ್ರಭುಗಳಿಗೆ ಕೊಡಲಾಗುವುದರಲ್ಲಿ ಸಾವಿರಕ್ಕೊಂದು ಭಾಗಕ್ಕಿಂತ ಅಧಿಕವಿಲ್ಲವೆಂದು . . . ನಮ್ಮ ಸ್ವದೇಶಿಯರಿಗೆ ಗೊತ್ತಿರಲಿ.”
12. ಭೂವ್ಯಾಪಕ ಶಿಕ್ಷಣಕ್ಕಾಗಿ ದೈವಿಕ ಬೋಧನೆಯು ಅತಿ ಯಶಸ್ವಿಯಾದ ಮತ್ತು ಪ್ರಯೋಜನಕರ ಕಾರ್ಯಕ್ರಮವೆಂದು ಯಾಕೆ ಹೇಳಸಾಧ್ಯವಿದೆ?
12 ನೀತಿಯ ಪ್ರವೃತ್ತಿಯುಳ್ಳ ಜನರನ್ನು ಅಜ್ಞಾನದಲ್ಲಿ ಬಿಡುವುದರ ಬದಲಾಗಿ, ಯೆಹೋವನ ಬೋಧನೆಯು ಅವರ ಪ್ರಯೋಜನಕ್ಕಾಗಿ ಭೂವ್ಯಾಪಕ ಶಿಕ್ಷಣದ ಒಂದು ಅತ್ಯುತ್ತಮ ಕಾರ್ಯಕ್ರಮವನ್ನು ಒದಗಿಸುತ್ತದೆ. ಐವತ್ತು ವರ್ಷಗಳ ಹಿಂದೆ, II ನೆಯ ಲೋಕ ಯುದ್ಧವು ಇನ್ನೂ ಪ್ರಬಲವಾಗಿದ್ದಾಗ, ಶೈಕ್ಷಣಿಕ ಪುನಃಸ್ಥಾಪನೆಯ ಅಮೆರಿಕದ ಕಮಿಟಿಯು “ಭೂವ್ಯಾಪಕ ಶಿಕ್ಷಣದ” ಒಂದು ತುರ್ತಿನ ಅಗತ್ಯವನ್ನು ಕಂಡಿತು. ಆ ಅಗತ್ಯವು ಇನ್ನೂ ಅಸ್ತಿತ್ವದಲ್ಲಿದೆ, ಆದರೆ ಭೂವ್ಯಾಪಕ ಶಿಕ್ಷಣಕ್ಕಾಗಿ ಕೇವಲ ಒಂದೇ ಸಫಲವಾದ ಕಾರ್ಯಕ್ರಮವು ದೈವಿಕ ಬೋಧನೆಯಾಗಿದೆ. ಅದು ಅತಿ ಪ್ರಯೋಜನಕಾರಿಯೂ ಆಗಿರುತ್ತದೆ ಯಾಕಂದರೆ ಅದು ಜನರನ್ನು ನಿರಾಶೆಯಿಂದ ಎಬ್ಬಿಸುತ್ತದೆ, ನೈತಿಕವಾಗಿ ಮತ್ತು ಆತ್ಮಿಕವಾಗಿ ಅವರನ್ನು ಮೇಲೆತ್ತುತ್ತದೆ, ಲೋಕದ ದುರಭಿಮಾನ ಮತ್ತು ಪೂರ್ವಾಗ್ರಹದಿಂದ ಅವರನ್ನು ರಕ್ಷಿಸುತ್ತದೆ, ಮತ್ತು ಅನಂತ ಜೀವನಕ್ಕಾಗಿ ಜ್ಞಾನವನ್ನು ನೀಡುತ್ತದೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ಈ ಕಾರ್ಯಕ್ರಮವು ಯೆಹೋವ ದೇವರನ್ನು ಸೇವಿಸಲು ಎಲ್ಲೆಡೆಯೂ ಇರುವ ಜನರಿಗೆ ಕಲಿಸುವುದರ ಮೂಲಕ ಅವರಿಗೆ ಪ್ರಯೋಜನವನ್ನೀಯುತ್ತದೆ.
13. ಯೆಶಾಯ 2:2-4 ಇಂದು ಹೇಗೆ ನೆರವೇರುತ್ತಾ ಇದೆ?
13 ದೈವಿಕ ಬೋಧನೆಯ ಪ್ರಯೋಜನಗಳು ಇಂದು ದೇವರ ಸೇವಕರಾಗುತ್ತಿರುವ ಬಹುಸಂಖ್ಯಾತ ಜನರಿಂದ ಆನಂದಿಸಲ್ಪಡುತ್ತಿವೆ. ಅವರು ತಮ್ಮ ಆತ್ಮಿಕ ಅಗತ್ಯದ ಅರುಹುಳ್ಳವರಾಗಿದ್ದಾರೆ ಮತ್ತು ಯೆಹೋವನ ದಿನವು ಹತ್ತಿರದಲ್ಲಿದೆ ಎಂದು ಪೂರ್ಣವಾಗಿ ಪ್ರಜ್ಞೆಯುಳ್ಳವರಾಗಿದ್ದಾರೆ. (ಮತ್ತಾಯ 5:3; 1 ಥೆಸಲೋನಿಕ 5:1-6) ಈಗಾಗಲೇ, “ಅಂತ್ಯಕಾಲದಲ್ಲಿ,” ಎಲ್ಲಾ ರಾಷ್ಟ್ರಗಳ ಈ ಜನರು ಯೆಹೋವನ ಬೆಟ್ಟಕ್ಕೆ, ಆತನ ಶುದ್ಧ ಆರಾಧನೆಗೆ ಪ್ರವಾಹಗಳಂತೆ ಬರುತ್ತಿದ್ದಾರೆ. ಅದು ದೃಢವಾಗಿ ನೆಲೆಗೊಂಡಿದೆ ಮತ್ತು ದೇವರ ಚಿತ್ತಕ್ಕೆ ಪ್ರತಿಕೂಲವಾದ ಎಲ್ಲಾ ಆರಾಧನೆಗಿಂತಲೂ ಉನ್ನತಕ್ಕೇರಿಸಲ್ಪಟ್ಟಿದೆ. (ಯೆಶಾಯ 2:2-4) ನೀವೊಬ್ಬ ಯೆಹೋವನ ಸಮರ್ಪಿತ ಸಾಕ್ಷಿಯಾಗಿರುವಲ್ಲಿ, ಆತನನ್ನು ಆರಾಧಿಸುವ ಮತ್ತು ದೈವಿಕ ಬೋಧನೆಯಿಂದ ಪ್ರಯೋಜನ ಪಡೆಯುತ್ತಿರುವ ಸದಾ ಹೆಚ್ಚುತ್ತಿರುವ ಜನಸಂದಣಿಯಲ್ಲಿರಲು ನೀವು ಆನಂದಿಸುವದಿಲ್ಲವೇ? “ಯೆಹೋವನಿಗೆ ಸ್ತೋತ್ರ” ಎಂಬ ಜಯ ಘೋಷಣೆ ಮಾಡುವವರೊಂದಿಗೆ ಇರುವುದು ಎಷ್ಟು ಅದ್ಭುತವಾಗಿದೆ!—ಕೀರ್ತನೆ 150:6.
ನಮ್ಮ ಆತ್ಮದ ಮೇಲೆ ಪ್ರಯೋಜನದಾಯಕ ಪರಿಣಾಮ
14. ಒಂದನೆಯ ಕೊರಿಂಥ 14:20 ರಲ್ಲಿ ಪೌಲನ ಹಿತೋಕ್ತಿಯನ್ನು ಅನುಸರಿಸುವುದರಲ್ಲಿ ಯಾವ ಪ್ರಯೋಜನವಿದೆ?
14 ದೈವಿಕ ಬೋಧನೆಯ ಅನೇಕ ಪ್ರಯೋಜನಗಳಲ್ಲಿ ಒಂದು, ನಮ್ಮ ಆಲೋಚನೆಯ ಮತ್ತು ಆತ್ಮದ ಮೇಲೆ ಅದಕ್ಕಿರಬಹುದಾದ ಉತ್ತಮ ಪರಿಣಾಮವಾಗಿದೆ. ನ್ಯಾಯವೂ, ಶುದ್ಧವೂ, ಸದ್ಗುಣವೂ, ಮತ್ತು ಕೀರ್ತಿಗೆ ಯೋಗ್ಯವೂ ಆದ ಸಂಗತಿಗಳ ಮೇಲೆ ಆಲೋಚಿಸಲು ಅದು ನಮ್ಮನ್ನು ಪ್ರಚೋದಿಸುತ್ತದೆ. (ಫಿಲಿಪ್ಪಿ 4:8) ಪೌಲನ ಹಿತೋಕ್ತಿಯನ್ನು ಅನುಸರಿಸಲು ಯೆಹೋವನ ಬೋಧನೆಯು ನಮಗೆ ಸಹಾಯ ಮಾಡುತ್ತದೆ: “ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿಯೇ ಇದ್ದು ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರಬೇಕು.” (1 ಕೊರಿಂಥ 14:20) ಈ ಪ್ರಬೋಧನೆಯನ್ನು ನಾವು ಅನ್ವಯಿಸುವುದಾದರೆ, ಕೆಟ್ಟತನದ ಜ್ಞಾನವನ್ನು ನಾವು ಅನ್ವೇಷಣೆ ಮಾಡೆವು. ಪೌಲನು ಇದನ್ನೂ ಬರೆದನು: “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ.” (ಎಫೆಸ 4:31) ಅಂತಹ ಬುದ್ಧಿವಾದವನ್ನು ಆಲಿಸುವುದು ಅನೈತಿಕತೆಯನ್ನು ಮತ್ತು ಇತರ ಗಂಭೀರ ಪಾಪಗಳನ್ನು ಹೋಗಲಾಡಿಸಲು ನಮಗೆ ಸಹಾಯ ಮಾಡುವುದು. ದೈಹಿಕವಾಗಿ ಮತ್ತು ಮಾನಸಿಕವಾಗಿ ಇದು ಪ್ರಯೋಜನಕರವಾಗಿರುವಾಗ, ನಾವು ದೇವರನ್ನು ಮೆಚ್ಚಿಸುತ್ತೇವೆ ಎಂಬುದರ ಅರುಹಿನ ಸಂತೋಷವನ್ನು ವಿಶೇಷವಾಗಿ ಅದು ನಮಗೆ ತರುವುದು.
15. ಆಲೋಚನೆಯಲ್ಲಿ ಸದ್ಗುಣಿಗಳಾಗಿ ಉಳಿಯಲು ನಮಗೆ ಯಾವುದು ಸಹಾಯ ಮಾಡಬಲ್ಲದು?
15 ಯೋಚನೆಯಲ್ಲಿ ನಾವು ಸದ್ಗುಣಿಗಳಾಗಿ ಉಳಿದುಕೊಳ್ಳಬೇಕಾದರೆ, ‘ಸದಾಚಾರವನ್ನು ಕೆಡಿಸುವ ದುಸ್ಸಹವಾಸವನ್ನು’ ಹೋಗಲಾಡಿಸುವುದು ಒಂದು ಸಹಾಯವಾಗಿದೆ. (1 ಕೊರಿಂಥ 15:33) ಕ್ರೈಸ್ತರೋಪಾದಿ, ನಾವು ಜಾರರೊಂದಿಗೆ, ವ್ಯಭಿಚಾರಿಗಳೊಂದಿಗೆ, ಮತ್ತು ಇತರ ದುಷ್ಟತನ ನಡಿಸುವವರೊಂದಿಗೆ ಸಂಗವನ್ನು ಇಟ್ಟುಕೊಳ್ಳೆವು. ತಾರ್ಕಿಕವಾಗಿ, ಹಾಗಾದರೆ, ಇಂದ್ರಿಯ ಸುಖಕ್ಕಾಗಿ ಅವರ ಕುರಿತು ಓದುವುದರಿಂದ ಯಾ ಅವರನ್ನು ಟೆಲಿವಿಶನ್ ಯಾ ಚಲನಚಿತ್ರಗಳಲ್ಲಿ ವೀಕ್ಷಿಸುವುದರ ಮೂಲಕ ಅಂತಹ ವ್ಯಕ್ತಿಗಳೊಂದಿಗೆ ನಾವು ಸಹವಾಸ ಇಡಕೂಡದು. ಹೃದಯ ವಂಚಕವಾಗಿದೆ, ಕೆಟ್ಟ ವಿಷಯಗಳಿಗಾಗಿ ಆಶೆಯೊಂದನ್ನು ಬಹಳ ಸುಲಭವಾಗಿ ಎಟಕಿಸಿಕೊಳ್ಳಬಲ್ಲದು, ಮತ್ತು ಅವುಗಳನ್ನು ಮಾಡುವಂತೆ ಶೋಧಿಸಲ್ಪಡಬಲ್ಲದು. (ಯೆರೆಮೀಯ 17:9) ಆದುದರಿಂದ ನಾವು ದೈವಿಕ ಬೋಧನೆಗೆ ಅಂಟಿಕೊಂಡಿರುವುದರ ಮೂಲಕ ಅಂತಹ ಶೋಧನೆಗಳನ್ನು ಹೋಗಲಾಡಿಸೋಣ. ಅವರು “ಯಾವುದು ಕೆಟ್ಟದ್ದೋ ಅದನ್ನು ದ್ವೇಷಿಸಲು” ಆಗುವಂತೆ ಪ್ರಯೋಜನಕರವಾಗಿ “ಯೆಹೋವನನ್ನು ಪ್ರೀತಿಸುವವರ” ಯೋಚನೆಗಳನ್ನು ಅದು ಪ್ರಭಾವಿಸಬಲ್ಲದು.—ಕೀರ್ತನೆ 97:10.
16. ನಾವು ಪ್ರದರ್ಶಿಸುವ ಆತ್ಮವನ್ನು ದೈವಿಕ ಬೋಧನೆಯು ಹೇಗೆ ಪ್ರಭಾವಿಸಬಲ್ಲದು?
16 ಪೌಲನು ತನ್ನ ಸಹಕಾರ್ಮಿಕನಾಗಿದ್ದ ತಿಮೊಥೆಯನಿಗೆ ಹೇಳಿದ್ದು: “ಕರ್ತನು ನಿನ್ನ ಆತ್ಮದ ಸಂಗಡ ಇರಲಿ. ಕೃಪೆಯು ನಿಮ್ಮೊಂದಿಗಿರಲಿ.” (2 ತಿಮೊಥೆಯ 4:22) ಕರ್ತನಾದ ಯೇಸು ಕ್ರಿಸ್ತನ ಮುಖೇನ ದೇವರು ತಿಮೊಥೆಯ ಮತ್ತು ಇತರ ಕ್ರೈಸ್ತರನ್ನು ಪ್ರೇರಿಸುತ್ತಿದ್ದ ಅವರ ಪ್ರೇರೇಪಣೆಯ ಶಕ್ತಿಯನ್ನು ಸಮ್ಮತಿಸಲಿ ಎಂದು ಅಪೊಸ್ತಲನು ಆಶಿಸಿದನು. ದೇವರ ಬೋಧನೆಯು ಒಂದು ಪ್ರೀತಿಯ, ದಯೆಯ, ನಮ್ರತೆಯ ಆತ್ಮವನ್ನು ಪ್ರದರ್ಶಿಸಲು ನಮಗೆ ಸಹಾಯ ಮಾಡುತ್ತದೆ. (ಕೊಲೊಸ್ಸೆ 3:9-14) ಮತ್ತು ಈ ಕಡೇ ದಿವಸಗಳಲ್ಲಿನ ಅನೇಕವುಗಳಿಗಿಂತ ಇದು ಎಷ್ಟು ಭಿನ್ನವಾಗಿದೆ! ಅವರು ಅಹಂಕಾರಿಗಳೂ, ಉಪಕಾರನೆನಸದವರೂ, ಸ್ವಾಭಾವಿಕ ಮಮತೆಯ ಕೊರತೆಯುಳ್ಳವರೂ, ಸಮಾಧಾನವಾಗದವರೂ, ದುಡುಕಿನವರೂ, ಸುಖಭೋಗಗಳನ್ನು ಹುಡುಕುವವರೂ, ಮತ್ತು ನಿಜ ದೇವಭಕ್ತಿಯಿಲ್ಲದವರೂ ಆಗಿದ್ದಾರೆ. (2 ತಿಮೊಥೆಯ 3:1-5) ಆದರೆ, ನಮ್ಮ ಜೀವಿತಗಳಲ್ಲಿ ದೈವಿಕ ಬೋಧನೆಯ ಪ್ರಯೋಜನಗಳನ್ನು ಅನ್ವಯಿಸುವುದನ್ನು ನಾವು ಮುಂದರಿಸುತ್ತಿದ್ದಂತೆ, ದೇವರಿಗೆ ಮತ್ತು ಸಹ ಮಾನವರಿಗೆ ನಮ್ಮನ್ನು ಪ್ರೀತಿಪಾತ್ರರಾಗಿ ಮಾಡುವ ಆತ್ಮವೊಂದನ್ನು ನಾವು ಪ್ರದರ್ಶಿಸುತ್ತೇವೆ.
ಮಾನವೀಯ ಸಂಬಂಧಗಳಲ್ಲಿ ಪ್ರಯೋಜನಕರ
17. ವಿನೀತ ಸಹಕಾರವು ಯಾಕೆ ಅಷ್ಟೊಂದು ಪ್ರಾಮುಖ್ಯವಾಗಿದೆ?
17 ನಮ್ಮ ಸಹ ಆರಾಧಕರೊಂದಿಗೆ ವಿನೀತ ಸಹಕಾರದ ಪ್ರಯೋಜನಗಳನ್ನು ಕಾಣಲು ಯೆಹೋವನ ಬೋಧನೆಯು ನಮಗೆ ಸಹಾಯ ಮಾಡುತ್ತದೆ. (ಕೀರ್ತನೆ 138:6) ಇಂದಿನ ಅನೇಕ ಜನರಂತಿರದೆ, ನಾವು ನೀತಿಯ ತತ್ವಗಳನ್ನು ಉಲ್ಲಂಘಿಸುವುದಿಲ್ಲ, ಬದಲಿಗೆ ಸಹಮತದಲ್ಲಿರಲು ಸಿದ್ಧರಾಗಿರುತ್ತೇವೆ. ಉದಾಹರಣೆಗೆ, ಹಿರಿಯರ ಕೂಟಗಳಲ್ಲಿ ಸಹಮತದಲ್ಲಿರಲು ನೇಮಿತ ಮೇಲ್ವಿಚಾರಕರು ಸಿದ್ಧರಾಗಿರುವುದರ ಮೂಲಕ ಬಹಳಷ್ಟು ಉತ್ತಮ ಫಲವುಂಟಾಗುತ್ತದೆ. ಸತ್ಯದ ಅಭಿರುಚಿಯಲ್ಲಿ ಈ ಪುರುಷರು ಶಾಂತತೆಯಿಂದ ಮಾತಾಡುವಾಗ, ತರ್ಕಬದ್ಧತೆಯನ್ನು ಮಬ್ಬುಗವಿಸುವಂತೆ ಯಾ ಅನೈಕ್ಯತೆಯನ್ನು ಉಂಟುಮಾಡುವಂತೆ ಭಾವಾವೇಶವನ್ನು ಅನುಮತಿಸರು. ದೈವಿಕ ಬೋಧನೆಯನ್ನು ಅನ್ವಯಿಸುವುದರಲ್ಲಿ ನಾವೆಲ್ಲರೂ ಮುಂದರಿಸುತ್ತಿರುವುದಾದರೆ, ನಾವು ಆನಂದಿಸುವ ಐಕ್ಯತೆಯ ಆತ್ಮದಿಂದ ಸಭೆಯ ಎಲ್ಲಾ ಸದಸ್ಯರು ಪ್ರಯೋಜನ ಪಡೆಯುವರು.—ಕೀರ್ತನೆ 133:1-3.
18. ಸಹ ವಿಶ್ವಾಸಿಗಳ ಬಗ್ಗೆ ಯಾವ ನೋಟವಿರುವಂತೆ ದೈವಿಕ ಬೋಧನೆಯು ನಮಗೆ ಸಹಾಯ ಮಾಡುತ್ತದೆ?
18 ಸಹ ವಿಶ್ವಾಸಿಗಳ ಒಂದು ಯೋಗ್ಯ ನೋಟವಿರುವಂತೆ ನಮಗೆ ಸಹಾಯ ಮಾಡುವುದರಲ್ಲಿ ಕೂಡ ದೈವಿಕ ಬೋಧನೆಯು ಪ್ರಯೋಜನಕರವಾಗಿದೆ. ಯೇಸುವು ಅಂದದ್ದು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.” (ಯೋಹಾನ 6:44) ವಿಶೇಷವಾಗಿ 1919 ರಿಂದ, ತನ್ನ ತೀರ್ಪುಗಳನ್ನು ಅವನ ಸೇವಕರು ಘೋಷಿಸುವಂತೆ ಯೆಹೋವನು ಮಾಡಿದ್ದನು, ಮತ್ತು ಈ ಭೌಗೋಳಿಕ ಎಚ್ಚರಿಕೆಯ ಮೂಲಕ ಸೈತಾನನ ಲೋಕ ವ್ಯವಸ್ಥೆಯ ಅಲುಗಾಡಿಸಲ್ಪಟ್ಟಿದೆ ಮತ್ತು ತತ್ತರಿಸಲ್ಪಟ್ಟಿದೆ. ಅದೇ ಸಮಯದಲ್ಲಿ, ದೇವ-ಭೀರು ಮಾನವರು—“ಇಷ್ಟವಸ್ತುಗಳು”—ಜನಾಂಗಗಳಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲು ಮತ್ತು ಮಹಿಮೆಯಿಂದ ಯೆಹೋವನ ಆರಾಧನಾಲಯವನ್ನು ತುಂಬಿಸುವುದರಲ್ಲಿ ಪಾಲಿಗರಾಗಲು ಅಭಿಷಿಕ್ತ ಕ್ರೈಸ್ತರೊಂದಿಗೆ ದೇವರಿಂದ ಎಳೆಯಲ್ಪಟ್ಟಿದ್ದಾರೆ. (ಹಗ್ಗಾಯ 2:7) ನಿಶ್ಚಯವಾಗಿಯೂ, ಅಂತಹ ದೇವರಿಂದ ಎಳೆಯಲ್ಪಟ್ಟಿರುವ ಇಷ್ಟರಾದವರನ್ನು ನಾವು ಪ್ರೀತಿಯ ಸಹವಾಸಿಗಳೋಪಾದಿ ದೃಷ್ಟಿಸತಕ್ಕದ್ದು.
19. ಜೊತೆ ಕ್ರೈಸ್ತರೊಂದಿಗಿನ ವೈಯಕ್ತಿಕ ಭಿನ್ನತೆಗಳನ್ನು ಬಗೆಹರಿಸುವುದರ ಕುರಿತು ದೈವಿಕ ಬೋಧನೆಯು ಏನನ್ನು ಪ್ರಕಟಿಸುತ್ತದೆ?
19 ನಾವೆಲ್ಲರೂ ಅಪರಿಪೂರ್ಣರಾಗಿರುವುದರ ಕಾರಣ, ಸಂಗತಿಗಳು ಯಾವಾಗಲೂ ನುಣುಪಾಗಿ ಮುಂದುವರಿಯುವುದಿಲ್ಲವೆಂಬುದು ದಿಟ. ತನ್ನ ಎರಡನೆಯ ಮಿಷನೆರಿ ಪ್ರಯಾಣಕ್ಕೆ ಹೊರಡಲಿದ್ದಾಗ, ಬಾರ್ನಬನು ಒಟ್ಟಿಗೆ ಮಾರ್ಕನನ್ನು ಕೊಂಡೊಯ್ಯಲು ದೃಢಮನಸ್ಕನಾಗಿದ್ದನು. ಪೌಲನು ಇದಕ್ಕೆ ಸಹಮತಿಸಲಿಲ್ಲ ಯಾಕಂದರೆ ಮಾರ್ಕನು “ಅವರೊಂದಿಗೆ ಕೆಲಸಕ್ಕೆ ಬಾರದೆ ಪಂಫುಲ್ಯದಲ್ಲಿ ಅವರನ್ನು ಬಿಟ್ಟು ಹೋಗಿದ್ದನು.” ಆಗ, “ತೀಕ್ಷೈ ವಾಗ್ವಾದವು” ಉಂಟಾಯಿತು. ಬಾರ್ನಬನು ಮಾರ್ಕನನ್ನು ತೆಗೆದುಕೊಡು ಕುಪ್ರದ್ವೀಪಕ್ಕೆ ಹೋದರೆ, ಪೌಲನು ಸೀಲನೊಂದಿಗೆ ಸಿರಿಯ ಕಿಲಿಕ್ಯ ಸೀಮೆಗಳಿಗೆ ಹೋದನು. (ಅ. ಕೃತ್ಯಗಳು 15:36-41, NW) ತದನಂತರ, ಈ ಬಿರುಕು ವಾಸಿಯಾಗಿರುವುದು ವ್ಯಕ್ತವಾಗುತ್ತದೆ, ಯಾಕಂದರೆ ರೋಮಿನಲ್ಲಿ ಪೌಲನೊಂದಿಗೆ ಮಾರ್ಕನು ಇದ್ದನು, ಮತ್ತು ಅಪೊಸ್ತಲನು ಅವನ ಕುರಿತು ಒಳ್ಳೆಯದನ್ನು ಮಾತಾಡಿದನು. (ಕೊಲೊಸ್ಸೆ 4:10) ದೈವಿಕ ಬೋಧನೆಯ ಒಂದು ಪ್ರಯೋಜನವೇನಂದರೆ, ಮತ್ತಾಯ 5:23, 24 ಮತ್ತು ಮತ್ತಾಯ 18:15-17 ರಲ್ಲಿ ಯೇಸುವು ಕೊಟ್ಟಂತಹ ಬುದ್ಧಿವಾದಗಳನ್ನು ಅನುಸರಿಸುವುದರ ಮೂಲಕ ಕ್ರೈಸ್ತರು ತಮ್ಮ ನಡುವಿನ ವೈಯಕ್ತಿಕ ಭಿನ್ನತೆಗಳನ್ನು ಹೇಗೆ ಬಗೆಹರಿಸಬಹುದು ಎಂದು ಇದು ನಮಗೆ ತೋರಿಸುತ್ತದೆ.
ಎಂದೆಂದಿಗೂ ಪ್ರಯೋಜನಕರ ಮತ್ತು ವಿಜಯಿ
20, 21. ದೈವಿಕ ಬೋಧನೆಯ ನಮ್ಮ ಪರಿಗಣನೆಯು ಏನನ್ನು ಮಾಡುವಂತೆ ನಮ್ಮನ್ನು ಪ್ರೇರಿಸತಕ್ಕದ್ದು?
20 ದೈವಿಕ ಬೋಧನೆಯ ಕೆಲವು ಪ್ರಯೋಜನಗಳ ಮತ್ತು ವಿಜಯಗಳ ನಮ್ಮ ಸಂಕ್ಷಿಪ್ತ ಪರಿಗಣನೆಯಿಂದ ಕೂಡ, ನಮ್ಮ ಜೀವಿತಗಳಲ್ಲಿ ಅದನ್ನು ಅನ್ವಯಿಸುವುದನ್ನು ಎಡೆಬಿಡದೆ ಮುಂದುವರಿಸುವ ಆವಶ್ಯಕತೆಯನ್ನು ನಾವೆಲ್ಲರೂ ನಿಸ್ಸಂದೇಹವಾಗಿ ಕಾಣಬಲ್ಲೆವು. ಹಾಗಾದರೆ, ಪ್ರಾರ್ಥನಾಪೂರ್ವಕ ಆತ್ಮದೊಂದಿಗೆ ನಮ್ಮ ಮಹಾ ಉಪದೇಶಕನಿಂದ ಕಲಿಯುವುದನ್ನು ನಾವು ಮುಂದುವರಿಸೋಣ. ಬೇಗನೆ, ಹಿಂದೆಂದೂ ಆಗದ ರೀತಿಯಲ್ಲಿ ದೈವಿಕ ಬೋಧನೆಯು ವಿಜಯಿಯಾಗುವುದು. ಈ ಲೋಕದ ಬುದ್ಧಿವಂತರು ತಮ್ಮ ಕೊನೆಯ ಉಸಿರೆಳೆದಾಗ ಅದು ವಿಜಯಿಯಾಗುವುದು. (ಹೋಲಿಸಿರಿ 1 ಕೊರಿಂಥ 1:19.) ಇದಲ್ಲದೆ, ಇನ್ನೂ ಲಕ್ಷಾಂತರ ಮಂದಿ ದೇವರ ಚಿತ್ತವನ್ನು ಕಲಿತು ಅದರಂತೆ ನಡೆದಾಗ, ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಳ್ಳುವುದು. (ಯೆಶಾಯ 11:9) ಇದು ವಿಧೇಯ ಮಾನವ ಕುಲಕ್ಕೆ ಎಷ್ಟೊಂದು ಮಹಿಮಾಭರಿತವಾಗಿ ಪ್ರಯೋಜನವಾಗಲಿರುವದು ಮತ್ತು ಯೆಹೋವನನ್ನು ವಿಶ್ವದ ಪರಮಾಧಿಕಾರಿಯೋಪಾದಿ ಎಷ್ಟೊಂದು ಸಮರ್ಥಿಸಲಿರುವುದು!
21 ಯೆಹೋವನ ಬೋಧನೆಯು ಯಾವಾಗಲೂ ಪ್ರಯೋಜನಕರವಾಗಲಿರುವುದು ಮತ್ತು ವಿಜಯಿಯಾಗಲಿರುವುದು. ದೇವರ ಮಹಾ ಪಠ್ಯಪುಸ್ತಕದ ಒಬ್ಬ ಉತ್ಸುಕ ವಿದ್ಯಾರ್ಥಿಯಾಗಿ ನೀವು ಅದರಿಂದ ಪ್ರಯೋಜನ ಪಡೆಯುವುದನ್ನು ಮುಂದುವರಿಸುವಿರೊ? ಬೈಬಲಿನೊಂದಿಗೆ ಹೊಂದಾಣಿಕೆಯಲ್ಲಿ ನೀವು ಜೀವಿಸುತ್ತಾ ಇದ್ದೀರೋ ಮತ್ತು ಅದರ ಸತ್ಯಗಳನ್ನು ಇತರರಿಗೆ ಹಂಚುತ್ತಿದ್ದೀರೊ? ಹಾಗಿದ್ದಲ್ಲಿ, ನಮ್ಮ ಮಹಾ ಉಪದೇಶಕನಾದ ಸಾರ್ವಭೌಮ ಕರ್ತ ಯೆಹೋವನ ಮಹಿಮೆಗೆ, ದೈವಿಕ ಬೋಧನೆಯ ಸಂಪೂರ್ಣ ವಿಜಯವನ್ನು ನೋಡುವುದನ್ನು ನೀವು ಮುನ್ನೋಡಬಲ್ಲಿರಿ.
ನೀವೇನನ್ನು ಕಲಿತಿರಿ?
▫ ನಮ್ಮ ಜೀವಿತಗಳ ಮೇಲೆ ದೈವಿಕ ಬೋಧನೆಯು ಯಾವ ಪ್ರಭಾವಬೀರಬಲ್ಲದು?
▫ ಯೆಹೋವನ ಬೋಧನೆಯು ಶೈಕ್ಷಣಿಕ ಆವಶ್ಯಕತೆಗಳನ್ನು ಹೇಗೆ ಪೂರೈಸುತ್ತಿದೆ?
▫ ನಮ್ಮ ಆಲೋಚನೆ ಮತ್ತು ಮನೋಭಾವದ ಮೇಲೆ ದೈವಿಕ ಬೋಧನೆಯು ಯಾವ ಪ್ರಯೋಜನಕರ ಪ್ರಭಾವವನ್ನು ಬೀರಬಲ್ಲದು?
▫ ಮಾನವೀಯ ಸಂಬಂಧಗಳ ಕುರಿತು ದೈವಿಕ ಬೋಧನೆಯು ಪ್ರಯೋಜನಕರವೆಂದು ಹೇಗೆ ರುಜುವಾಗುತ್ತದೆ?
[ಪುಟ 15 ರಲ್ಲಿರುವ ಚಿತ್ರ]
ನೋಹನು ಮಾಡಿದಂತೆ, ದೇವರೊಂದಿಗೆ ನಡೆದಾಡುವ ವಿಧವನ್ನು ದೈವಿಕ ಬೋಧನೆಯು ನಮಗೆ ತೋರಿಸುತ್ತದೆ.
[ಪುಟ 17 ರಲ್ಲಿರುವ ಚಿತ್ರ]
ಎಲ್ಲಾ ಜನಾಂಗಗಳ ಜನರು ಯೆಹೋವನ ಪರ್ವತಕ್ಕೆ ಪ್ರವಾಹಗಳಂತೆ ಬರುತ್ತಿದ್ದಾರೆ