ಕರ್ತನ ಸಂಧ್ಯಾ ಭೋಜನ ಅದು ಎಷ್ಟು ಬಾರಿ ಆಚರಿಸಲ್ಪಡಬೇಕು?
ಕ್ರಿಸ್ಮಸ್, ಈಸ್ಟರ್, “ಸಂತರ” ದಿನಗಳು. ಕ್ರೈಸ್ತ ಪ್ರಪಂಚದ ಚರ್ಚುಗಳಿಂದ ಅನೇಕ ರಜಾದಿನಗಳು ಮತ್ತು ಹಬ್ಬಗಳು ಆಚರಿಸಲ್ಪಡುತ್ತವೆ. ಆದರೆ ತನ್ನ ಹಿಂಬಾಲಕರು ಎಷ್ಟು ಉತ್ಸವಗಳನ್ನು ಆಚರಿಸಬೇಕೆಂದು ಯೇಸು ಕ್ರಿಸ್ತನು ಆಜ್ಞೆಕೊಟ್ಟಿದ್ದಾನೆಂದು ನೀವು ತಿಳಿದಿದ್ದೀರೊ? ಉತ್ತರವೇನೆಂದರೆ, ಕೇವಲ ಒಂದೇ. ಇನ್ನಿತರ ಯಾವುದೇ ಹಬ್ಬಗಳು ಕ್ರೈಸ್ತತ್ವದ ಸ್ಥಾಪಕನಿಂದ ಅನುಮತಿಸಲ್ಪಟ್ಟಿಲ್ಲ.
ಸ್ಪಷ್ಟವಾಗಿಗಿಯೇ, ಯೇಸು ಕೇವಲ ಒಂದೇ ಒಂದು ಆಚರಣೆಯನ್ನು ಸ್ಥಾಪಿಸಿರುವುದಾದರೆ, ಅದು ಅತ್ಯಂತ ಪ್ರಾಮುಖ್ಯವಾದದ್ದಾಗಿದೆ. ಯೇಸು ಆಜ್ಞಾಪಿಸಿದಂತೆಯೇ ಕ್ರೈಸ್ತರು ಅದನ್ನು ಆಚರಿಸಬೇಕು. ಈ ಅಪೂರ್ವವಾದ ಆಚರಣೆಯು ಯಾವುದಾಗಿತ್ತು?
ಏಕೈಕ ಆಚರಣೆ
ಆತನು ಮರಣಪಟ್ಟ ದಿನದಲ್ಲಿ ಈ ಆಚರಣೆಯು ಯೇಸುವಿನಿಂದ ಪರಿಚಯಿಸಲ್ಪಟ್ಟಿತು. ಯೆಹೂದ್ಯರ ಪಸ್ಕ ಹಬ್ಬವನ್ನು ಆತನು ತನ್ನ ಅಪೊಸ್ತಲರೊಂದಿಗೆ ಆಚರಿಸಿದ್ದನು. ಅನಂತರ ಆತನು ಪಸ್ಕದ ಹುಳಿಯಿಲ್ಲದ ರೊಟ್ಟಿಯನ್ನು ಅವರಿಗೆ ಕೊಡುತ್ತಾ, ಅಂದದ್ದು: “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ.” ಅನಂತರ, ದ್ರಾಕ್ಷಾರಸದ ಒಂದು ಪಾತ್ರೆಯನ್ನು ಕೊಡುತ್ತಾ, ಅಂದದ್ದು: “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.” ಆತನು ಇನ್ನೂ ಹೇಳಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (ಲೂಕ 22:19, 20; 1 ಕೊರಿಂಥ 11:24-26) ಈ ಆಚರಣೆಯು ಕರ್ತನ ಸಂಧ್ಯಾ ಭೋಜನ, ಅಥವಾ ಜ್ಞಾಪಕವೆಂದು ಕರೆಯಲ್ಪಡುತ್ತದೆ. ಯೇಸು ತನ್ನ ಹಿಂಬಾಲಕರು ಆಚರಿಸುವಂತೆ ಆಜ್ಞಾಪಿಸಿದ ಒಂದೇ ಒಂದು ಆಚರಣೆಯು ಇದಾಗಿದೆ.
ತಮ್ಮ ಇತರ ಎಲ್ಲಾ ಹಬ್ಬಗಳೊಟ್ಟಿಗೆ ಈ ಆಚರಣೆಯನ್ನೂ ನಡೆಸಿಕೊಂಡು ಹೋಗುತ್ತೇವೆಂದು ಅನೇಕ ಚರ್ಚುಗಳು ಸಮರ್ಥಿಸುತ್ತವೆ, ಆದರೆ ಅಧಿಕಾಂಶ ಚರ್ಚುಗಳು ಇದನ್ನು ಯೇಸು ಆಜ್ಞಾಪಿಸಿರುವುದಕ್ಕಿಂತಲೂ ವಿಭಿನ್ನ ರೀತಿಯಲ್ಲಿ ಆಚರಿಸುತ್ತವೆ. ಬಹುಶಃ ಅತ್ಯಂತ ಹೆಚ್ಚು ಗಮನಾರ್ಹವಾದ ವ್ಯತ್ಯಾಸವು ಆಚರಣೆಯ ಸಂಭವ ಪ್ರಮಾಣ ವಾಗಿದೆ. ಕೆಲವು ಚರ್ಚುಗಳು ಅದನ್ನು ತಿಂಗಳಿಗೊಮ್ಮೆ, ವಾರಕ್ಕೊಮ್ಮೆ, ದಿನಾಲೂ ಸಹ ಆಚರಿಸುತ್ತವೆ. “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ” ಎಂದು ತನ್ನ ಹಿಂಬಾಲಕರಿಗೆ ಯೇಸು ಹೇಳಿದಾಗ ಇದು ತಾನೇ ಆತನ ಉದ್ದೇಶವಾಗಿತ್ತೊ? ದ ನ್ಯೂ ಇಂಗ್ಲಿಷ್ ಬೈಬಲ್ ಹೇಳುವುದು: “ನನ್ನನ್ನು ಸ್ಮರಿಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (1 ಕೊರಿಂಥ 11:24, 25) ಒಂದು ಜ್ಞಾಪಕ ಅಥವಾ ವಾರ್ಷಿಕೋತ್ಸವವು ಎಷ್ಟು ಬಾರಿ ಆಚರಿಸಲ್ಪಡಬೇಕು? ಸಾಮಾನ್ಯವಾಗಿ, ಒಂದು ವರ್ಷಕ್ಕೆ ಒಮ್ಮೆ ಮಾತ್ರ.
ಈ ಆಚರಣೆಯನ್ನು ಯೇಸು ಆರಂಭಿಸಿದನು ಮತ್ತು ಅನಂತರ ಯೆಹೂದಿ ಕ್ಯಾಲೆಂಡರಿಗನುಸಾರ ನೈಸಾನ್ 14ರ ತಾರೀಖಿನಂದು ಆತನು ಮರಣಪಟ್ಟನು ಎಂಬುದನ್ನೂ ಜ್ಞಾಪಿಸಿಕೊಳ್ಳಿರಿ.a ಸಾ.ಶ.ಪೂ. 16 ನೆಯ ಶತಮಾನದಲ್ಲಿ ತಾವು ಐಗುಪ್ತದಲ್ಲಿ ಅನುಭವಿಸಿದ್ದ ಮಹಾ ಬಿಡುಗಡೆಯ ಜ್ಞಾಪಕಾರ್ಥವಾಗಿ ಯೆಹೂದ್ಯರು ಆಚರಿಸುತ್ತಿದ್ದ ಪಸ್ಕಹಬ್ಬದ ದಿನವು ಅದಾಗಿತ್ತು. ಆ ಸಮಯದಲ್ಲಿ ಯೆಹೋವನ ದೂತನು ಐಗುಪ್ತ್ಯರ ಎಲ್ಲಾ ಚೊಚ್ಚಲು ಮಕ್ಕಳನ್ನು ಸಂಹರಿಸಿದಾಗ, ಒಂದು ಕುರಿಯ ಯಜ್ಞವು ಯೆಹೂದ್ಯರ ಚೊಚ್ಚಲು ಮಕ್ಕಳಿಗೆ ರಕ್ಷಣೆಯಾಗಿ ಪರಿಣಮಿಸಿತು.—ವಿಮೋಚನಕಾಂಡ 12:21, 24-27.
ಇದು ನಮ್ಮ ತಿಳಿವಳಿಕೆಗೆ ಹೇಗೆ ಸಹಾಯಮಾಡುತ್ತದೆ? ಒಳ್ಳೇದು, ಕ್ರೈಸ್ತನಾದ ಅಪೊಸ್ತಲ ಪೌಲನು ಬರೆದದ್ದು: “ನಮ್ಮ ಪಸ್ಕದ ಯಜ್ಞದ ಕುರಿಯು ಕೊಯಿದದೆ, ಅದಾವದಂದರೆ ಕ್ರಿಸ್ತನೇ.” (1 ಕೊರಿಂಥ 5:7) ಹೆಚ್ಚು ಮಹತ್ವವಾದ ಒಂದು ರಕ್ಷಣೆಗಾಗಿ ಸದವಕಾಶವನ್ನು ಮಾನವ ಕುಲಕ್ಕೆ ಕೊಡುವ ಮೂಲಕ ಯೇಸುವಿನ ಮರಣವು ಪಸ್ಕದ ಹೆಚ್ಚು ದೊಡ್ಡ ಯಜ್ಞವಾಗಿತ್ತು. ಆದುದರಿಂದ, ಕ್ರೈಸ್ತರಿಗೆ, ಕ್ರಿಸ್ತನ ಮರಣದ ಜ್ಞಾಪಕವು ಯೆಹೂದಿ ಪಸ್ಕದ ಸ್ಥಾನವನ್ನು ಭರ್ತಿಮಾಡಿತು.—ಯೋಹಾನ 3:16.
ಪಸ್ಕವು ವಾರ್ಷಿಕ ಆಚರಣೆಯಾಗಿತ್ತು. ಹಾಗಾದರೆ ಜ್ಞಾಪಕವು ಸಹ ಹಾಗೆ ಇರಬೇಕೆಂಬುದು ಸಮಂಜಸ. ಪಸ್ಕ—ಯೇಸು ಮರಣಪಟ್ಟ ದಿನ—ವು ಯಾವಾಗಲೂ ಯೆಹೂದ್ಯರ ನೈಸಾನ್ ತಿಂಗಳ 14ನೇ ದಿನದಂದು ಸಂಭವಿಸಿತು. ಆದುದರಿಂದ, ನೈಸಾನ್ 14ನೇ ತಾರೀಖಿಗೆ ಅನುರೂಪವಾದ ಕ್ಯಾಲೆಂಡರ್ ದಿನದಂದು ವರ್ಷಕ್ಕೆ ಒಮ್ಮೆ ಕ್ರಿಸ್ತನ ಮರಣವು ಸ್ಮರಿಸಲ್ಪಡಬೇಕು. ಆ ದಿನವು, 1994 ರಲ್ಲಿ, ಮಾರ್ಚ್ 26, ಶನಿವಾರ, ಸೂರ್ಯಾಸ್ತಮಾನದ ಅನಂತರವಾಗಿದೆ. ಹಾಗಾದರೆ, ಕ್ರೈಸ್ತ ಪ್ರಪಂಚದ ಚರ್ಚುಗಳು ಈ ದಿನವನ್ನು ಒಂದು ವಿಶೇಷ ಆಚರಣೆಯಾಗಿ ಮಾಡಿರುವುದಿಲ್ಲ ಏಕೆ? ಇತಿಹಾಸದ ಕಡೆಗೆ ಒಂದು ಸಂಕ್ಷಿಪ್ತ ನೋಟವು ಆ ಪ್ರಶ್ನೆಯನ್ನು ಉತ್ತರಿಸುವುದು.
ಅಪೊಸ್ತಲ ಸಂಬಂಧಿತ ಪದ್ಧತಿ ಅಪಾಯದಲ್ಲಿ
ಸಾ.ಶ. ಪ್ರಥಮ ಶತಮಾನದಲ್ಲಿ ಯೇಸುವಿನ ಅಪೊಸ್ತಲರಿಂದ ಮಾರ್ಗದರ್ಶಿಸಲ್ಪಟ್ಟವರು ಕರ್ತನ ಸಂಧ್ಯಾ ಭೋಜನವನ್ನು ಆತನಿಂದ ಆಜ್ಞಾಪಿಸಲ್ಪಟ್ಟಂತೆಯೆ ಆಚರಿಸಿದರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಹಾಗಿದ್ದರೂ, ಎರಡನೆಯ ಶತಮಾನದ ಸಮಯದಲ್ಲಿ, ಕೆಲವರು ಅದರ ಸ್ಮರಿಸುವಿಕೆಯ ಸಮಯವನ್ನು ಬದಲಾಯಿಸಲು ಆರಂಭಿಸಿದರು. ಅವರು ನೈಸಾನ್ 14ರ ಅನುರೂಪವಾದ ದಿನದಂದು ಆಚರಿಸಲಿಲ್ಲ, ಬದಲಾಗಿ ವಾರದ ಮೊದಲ (ಈಗ ಆದಿತ್ಯವಾರವೆಂದು ಕರೆಯಲ್ಪಡುವ) ದಿನದಲ್ಲಿ ಜ್ಞಾಪಕಾಚರಣೆಯನ್ನು ನಡೆಸಿದರು. ಯಾಕೆ ಹಾಗೆ ಮಾಡಲ್ಪಟ್ಟಿತು?
ಯೆಹೂದ್ಯರಿಗೆ, ಒಂದು ದಿನವು ಸಾಯಂಕಾಲದಲ್ಲಿ ಸುಮಾರು ಆರು ಗಂಟೆಯಿಂದ ಆರಂಭಗೊಳ್ಳುತ್ತಿತ್ತು ಮತ್ತು ಅದನ್ನು ಹಿಂಬಾಲಿಸುವ ಮುಂದಿನ ದಿನದ ಅದೇ ಸಮಯದ ತನಕ ಅದು ಮುಂದುವರಿಯುತ್ತಿತ್ತು. ಗುರುವಾರ ಸಾಯಂಕಾಲದಿಂದ ಆರಂಭಿಸಿ ಶುಕ್ರವಾರ ಸಾಯಂಕಾಲದ ವರೆಗಿನ, ಸಾ.ಶ. 33ರ ನೈಸಾನ್ 14 ರಂದು ಯೇಸು ಮರಣಹೊಂದಿದನು. ಮೂರನೇ ದಿನದಲ್ಲಿ, ಆದಿತ್ಯವಾರ ಬೆಳಗ್ಗೆ ಆತನು ಪುನರುತ್ಥಾನಗೊಳಿಸಲ್ಪಟ್ಟನು. ನೈಸಾನ್ 14 ಯಾವಾಗ ಬರುತ್ತದೊ ಅದಕ್ಕೆ ಅನುರೂಪವಾದ ದಿನಕ್ಕೆ ಬದಲಾಗಿ, ಪ್ರತಿ ವರ್ಷ ಒಂದು ವಾರದ ನಿಗದಿತ ದಿನದಂದು ಯೇಸುವಿನ ಮರಣದ ಸ್ಮರಣೆಯು ಆಚರಿಸಲ್ಪಡುವಂತೆ ಕೆಲವರು ಬಯಸಿದರು. ಯೇಸುವಿನ ಮರಣಕ್ಕಿಂತಲೂ ಆತನ ಪುನರುತ್ಥಾನದ ದಿನವು ಹೆಚ್ಚು ಪ್ರಾಮುಖ್ಯವಾದದ್ದೆಂದು ಸಹ ಅವರು ಅವಲೋಕಿಸಿದರು. ಆದುದರಿಂದ, ಅವರು ಆದಿತ್ಯವಾರವನ್ನು ಆರಿಸಿಕೊಂಡರು.
ತನ್ನ ಪುನರುತ್ಥಾನವನ್ನಲ್ಲ, ಮರಣವನ್ನು ಜ್ಞಾಪಿಸಿಕೊಳ್ಳುವಂತೆ ಯೇಸು ಆಜ್ಞಾಪಿಸಿದ್ದನು. ಮತ್ತು ಪ್ರತಿ ವರ್ಷ ಯೆಹೂದಿ ಪಸ್ಕವು ಬೇರೆ ಬೇರೆ ದಿನಗಳಲ್ಲಿ ಬರುವುದರಿಂದ ನಾವು ಇಂದು ಉಪಯೋಗಿಸುತ್ತಿರುವ ಗ್ರಿಗೋರಿಯನ್ ಕ್ಯಾಲೆಂಡರಿಗನುಸಾರವಾಗಿ, ಜ್ಞಾಪಕಾಚರಣೆಯ ಕುರಿತು ಇದು ಸತ್ಯವಾಗುವುದು ಕೇವಲ ಸ್ವಾಭಾವಿಕ. ಆದುದರಿಂದಲೇ ಅನೇಕರು ಆರಂಭದ ಏರ್ಪಾಡಿಗೆ ಹೊಂದಿಕೊಂಡು, ಪ್ರತಿ ವರ್ಷ ನೈಸಾನ್ 14 ರಂದು ಕರ್ತನ ಸಂಧ್ಯಾ ಭೋಜನವನ್ನು ಆಚರಿಸಿದರು. ಸಕಾಲದಲ್ಲಿ ಅವರು ಕ್ವಾರ್ಟೊಡೆಸೆಮನ್ಸ್ ಎಂದು ಕರೆಯಲ್ಪಟ್ಟರು, “ಹದಿನಾಲ್ಕನೆಯವರು” ಎಂದಿದರ ಅರ್ಥವಾಗಿದೆ.
ಈ “ಹದಿನಾಲ್ಕನೆಯವರು” ಆರಂಭದ ಅಪೊಸ್ತಲರ ಮಾದರಿಯನ್ನು ಹಿಂಬಾಲಿಸಿದರೆಂದು ಕೆಲವು ಪಂಡಿತರು ಮನಗಂಡರು. ಒಬ್ಬ ಇತಿಹಾಸಗಾರನು ಅಂದದ್ದು: “ಪಾಸ್ಕ [ಕರ್ತನ ಸಂಧ್ಯಾ ಭೋಜನ]ದ ಆಚರಣೆಯ ದಿನದ ಕುರಿತು, ಏಷಿಯಾದ ಕ್ವಾರ್ಟೊಡೆಸೆಮನ್ ಚರ್ಚುಗಳ ಪದ್ಧತಿಯು, ಯೆರೂಸಲೇಮಿನ ಚರ್ಚಿನ ಆಚರಣೆಯೊಂದಿಗೆ ಸಂಬದ್ಧವಾಗಿತ್ತು. ಎರಡನೆಯ ಶತಮಾನದಲ್ಲಿ ನೈಸಾನ್ 14ರ ಅವರ ಪಾಸ್ಕದಂದು ಈ ಚರ್ಚುಗಳು, ಕ್ರಿಸ್ತನ ಮರಣದ ಮೂಲಕ ಕಾರ್ಯರೂಪಕ್ಕೆ ಬಂದ ವಿಮೋಚನೆಯನ್ನು ಸ್ಮರಿಸಿದವು.”—ಸ್ಟುಡೀಯ ಪ್ಯಾಟ್ರಿಸಿಕ್ಟಾ, ಸಂಪುಟ 5, 1962, ಪುಟ 8.
ವ್ಯಾಜ್ಯವೊಂದು ಬೆಳೆಯುತ್ತದೆ
ಏಷಿಯಾ ಮೈನರಿನ ಅನೇಕರು ಅಪೊಸ್ತಲರ ಪದ್ಧತಿಗಳನ್ನು ಹಿಂಬಾಲಿಸುತ್ತಿದ್ದಾಗ, ರೋಮಿನಲ್ಲಿ ಆಚರಣೆಗಾಗಿ ಆದಿತ್ಯವಾರವು ಬದಿಗಿರಿಸಲ್ಪಟ್ಟಿತ್ತು. ಸುಮಾರು ಸಾ.ಶ. 155ರ ವರ್ಷದಲ್ಲಿ, ಏಷಿಯಾದ ಸಭೆಗಳ ಒಬ್ಬ ಪ್ರತಿನಿಧಿಯಾದ, ಸ್ಮುರ್ನದ ಪಾಲಿಕಾರ್ಪ್, ಇದನ್ನು ಮತ್ತು ಇತರ ಸಮಸ್ಯೆಗಳನ್ನು ಚರ್ಚಿಸಲು ರೋಮ್ ನಗರವನ್ನು ಸಂದರ್ಶಿಸಿದನು. ಅಸಂತೋಷಕರವಾಗಿ, ಈ ವಿಚಾರವು ಯಾವುದೇ ಅಂಗೀಕಾರವನ್ನು ಮುಟ್ಟಲಿಲ್ಲ.
ಲಿಯಾನ್ಸಿನ ಐರೀನಿಯಸ್ ಒಂದು ಪತ್ರದಲ್ಲಿ ಬರೆದದ್ದು: “ನಮ್ಮ ಕರ್ತನ ಶಿಷ್ಯನಾದ ಯೋಹಾನನೊಂದಿಗೆ ಮತ್ತು ಆತನು ಸಹವಾಸಮಾಡುತ್ತಿದ್ದ ಇತರ ಅಪೊಸ್ತಲರೊಂದಿಗೆ ಆತನು ಯಾವಾಗಲೂ ಆಚರಿಸುತ್ತಿದ್ದದ್ದನ್ನು ಪಾಲಿಕಾರ್ಪನು ಆಚರಿಸದಂತೆ [ರೋಮ್ನ] ಆ್ಯನಿಸೀಟಸನು ಒತ್ತಾಯಿಸಲೂ ಇಲ್ಲ; ಆ್ಯನಿಸೀಟಸನು ಅದನ್ನು ಆಚರಿಸುವಂತೆ ಪಾಲಿಕಾರ್ಪನು ಒತ್ತಾಯಿಸಲೂ ಇಲ್ಲ, ಯಾಕೆಂದರೆ ತನ್ನ ಮುಂದಿರುವ ಹಿರಿಯರುಗಳ ಸಂಪ್ರದಾಯಕ್ಕೆ ತಾನು ದೃಢವಾಗಿ ಅಂಟಿಕೊಳ್ಳುತ್ತೇನೆಂದು ಆ್ಯನಿಸೀಟಸನು ಹೇಳಿದ್ದನು.” (ಯೂಸೀಬಿಯಸ್, ಪುಸ್ತಕ 5, ಅಧ್ಯಾಯ 24) ಪಾಲಿಕಾರ್ಪನು ತನ್ನ ನಿಲುವನ್ನು ಅಪೊಸ್ತಲರ ಅಧಿಕಾರದ ಮೇಲಾಧಾರಿಸಿದ್ದನೆಂದು ವರದಿಮಾಡಿದ್ದನ್ನು ಗಮನದಲ್ಲಿಡಿ, ಆದರೆ ಆ್ಯನಿಸೀಟಸನು ರೋಮಿನ ಹಿಂದಿನ ಹಿರಿಯರುಗಳ ಸಂಪ್ರದಾಯಗಳಿಗೆ ಮೊರೆಯಿಟ್ಟನು.
ಸಾ.ಶ. ಎರಡನೆಯ ಶತಮಾನದ ಅಂತ್ಯದಲ್ಲಿ ಈ ವ್ಯಾಜ್ಯವು ತೀಕ್ಷೈಗೊಂಡಿತು. ಸಾ.ಶ. 190ರ ಸುಮಾರಿಗೆ, ವಿಕ್ಟರ್ ಎಂಬವನೊಬ್ಬನು ರೋಮಿನ ಬಿಷಪನಾಗಿ ಚುನಾಯಿಸಲ್ಪಟ್ಟನು. ಕರ್ತನ ಸಂಧ್ಯಾ ಭೋಜನವು, ಒಂದು ಆದಿತ್ಯವಾರದಂದು ಆಚರಿಸಲ್ಪಡಬೇಕೆಂದು ಆತನು ನಂಬಿದನು, ಮತ್ತು ಸಾಧ್ಯವಾದಷ್ಟು ಇತರ ಮುಖಂಡರುಗಳ ಬೆಂಬಲವನ್ನು ಆತನು ಪಡೆದುಕೊಂಡನು. ಆದಿತ್ಯವಾರದ ಏರ್ಪಾಡಿಗೆ ಬದಲಾವಣೆಗಳನ್ನು ಮಾಡುವಂತೆ ಏಷಿಯಾದ ಸಭೆಗಳನ್ನು ವಿಕ್ಟರ್ ಒತ್ತಾಯಪಡಿಸಿದನು.
ಏಷಿಯಾ ಮೈನರಿನಲ್ಲಿರುವವರ ಪರವಾಗಿ, ಎಫೆಸದ ಪಲಿಕ್ರ್ಯಾಟೀಸನು ಪ್ರತ್ಯುತ್ತರಿಸುತ್ತಾ ಈ ಒತ್ತಾಯಕ್ಕೆ ಮಣಿಯಲು ನಿರಾಕರಿಸಿದನು. ಆತನಂದದ್ದು: “ಅದಕ್ಕೆ ಏನನ್ನೂ ಕೂಡಿಸದೆ, ಅಥವಾ ಕಳೆಯದೆ, ಅದನ್ನು ಅಕ್ರಮವಾಗಿ ತಿದದ್ದೆ ನಾವು ಆ ದಿನವನ್ನು ಆಚರಿಸುತ್ತೇವೆ.” ಬಳಿಕ ಅಪೊಸ್ತಲ ಯೋಹಾನನನ್ನೊಳಗೊಂಡು, ಅನೇಕ ತಜ್ಞರ ದಾಖಲೆಯನ್ನು ಆತನು ಮಾಡಿದನು. ಆತನಂದದ್ದು: “ಸುವಾರ್ತೆಗನುಸಾರವಾಗಿ ಇವರೆಲ್ಲರೂ ಹದಿನಾಲ್ಕನೆಯ ದಿನವನ್ನು ಪಾಸ್ಕದ ದಿನವಾಗಿ ಆಚರಿಸಿದರು, ಅದರಿಂದ ಪಥ ಭ್ರಷ್ಟರಾಗಲಿಲ್ಲ.” ಪಲಿಕ್ರ್ಯಾಟೀಸನು ಕೂಡಿಸಿದ್ದು: “ಸಹೋದರರೇ, ನಾನಂತೂ ನನ್ನ ಮಟ್ಟಿಗೆ, . . . ಬೆದರಿಕೆಗಳಿಂದ ಗಾಬರಿ ಗೊಳ್ಳುವುದಿಲ್ಲ. ಏಕೆಂದರೆ, ನನಗಿಂತ ಶ್ರೇಷ್ಠರು, ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ, ಎಂದು ಹೇಳಿದ್ದಾರೆ.”—ಯೂಸೀಬಿಯಸ್, ಪುಸ್ತಕ 5, ಅಧ್ಯಾಯ 24.
ಈ ಪ್ರತ್ಯುತ್ತರದಿಂದ ವಿಕ್ಟರ್ ಅಪ್ರಸನ್ನನಾದನು. ಆತನು “ಏಷಿಯಾದ ಎಲ್ಲಾ ಚರ್ಚುಗಳನ್ನು ಬಹಿಷ್ಕರಿಸಿದನು, ಮತ್ತು ಆತನೊಂದಿಗೆ ಸಮ್ಮತಿಸುವ ಚರ್ಚುಗಳು, ಬಹಿಷ್ಕರಿಸಲ್ಪಟ್ಟ ಚರ್ಚುಗಳೊಂದಿಗೆ ವ್ಯವಹರಿಸಬಾರದೆಂದು ತನ್ನ ಸುತ್ತೋಲೆಗಳನ್ನು ಅವರಿಗೆ ಕಳುಹಿಸಿದನು” ಎಂದು ಒಂದು ಐತಿಹಾಸಿಕ ಗ್ರಂಥವು ಹೇಳುತ್ತದೆ. ಹಾಗಿದ್ದರೂ, “ಆತನ ದುಡುಕಿನ ಮತ್ತು ಧೀರ ಕೃತ್ಯವು, ಆತನ ಸ್ವಂತ ಪಕ್ಷದ ವಿವೇಕಿಗಳೂ ಮತ್ತು ಶಾಂತರೂ ಆದ ಜನರಿಂದ ಉತ್ತಮವಾಗಿ ಸ್ವೀಕರಿಸಲ್ಪಡಲಿಲ್ಲ, ಅವರಲ್ಲಿ ಅನೇಕರು ಪ್ರೀತಿ, ಐಕ್ಯ, ಮತ್ತು ಶಾಂತಿಯನ್ನು ಅಭ್ಯಾಸಿಸುವಂತೆ . . . ಆತನಿಗೆ ಸಲಹೆ ನೀಡುತ್ತಾ, ಅವನಿಗೆ ಕಟುವಾಗಿ ಬರೆದರು.”—ಬಿಂಗಮ್ಸ್ ಆ್ಯನಿಕ್ಟಿಟ್ವೀಸ್ ಆಫ್ ದ ಕ್ರಿಸ್ಟ್ಯನ್ ಚರ್ಚ್, ಪುಸ್ತಕ 20, ಅಧ್ಯಾಯ 5.
ಪ್ರತಿಷ್ಠಾಪಿಸಲ್ಪಟ್ಟ ಧರ್ಮಭ್ರಷ್ಟತೆ
ಅಂತಹ ಆಕ್ಷೇಪಣೆಗಳಿದ್ದಾಗ್ಯೂ, ಏಷಿಯಾ ಮೈನರಿನ ಕ್ರೈಸ್ತರು ಕರ್ತನ ಸಂಧ್ಯಾ ಭೋಜನವನ್ನು ಆಚರಿಸುವುದರ ಕುರಿತಾದ ವಿವಾದಾಂಶದ ಮೇಲೆ ಇನ್ನೂ ಅಧಿಕವಾಗಿ ಪ್ರತ್ಯೇಕಿತರಾದರು. ಬೇರೆಕಡೆಗಳಲ್ಲಿ ವ್ಯತ್ಯಾಸಗಳು ಕ್ರಮೇಣ ನುಸುಳಲಾರಂಭಿಸಿದವು. ಕೆಲವರು ನೈಸಾನ್ 14 ರಿಂದ ಆರಂಭಿಸಿ ಮುಂದಿನ ಆದಿತ್ಯವಾರದ ತನಕದ ಇಡೀ ಕಾಲಾವಧಿಯನ್ನು ಆಚರಿಸಿದರು. ಇತರರು ಹೆಚ್ಚು ಬಾರಿ—ವಾರಕ್ಕೊಮ್ಮೆ ಆದಿತ್ಯವಾರದಂದು—ಆ ಸಂದರ್ಭವನ್ನು ಆಚರಿಸುತ್ತಿದ್ದರು.
ಸಾ.ಶ. 314 ರಲ್ಲಿ ರೋಮನ್ ಏರ್ಪಾಡನ್ನು ಆಚರಣೆಗೆ ತರಲು ಮತ್ತು ಇತರ ಯಾವುದೇ ಪರ್ಯಾಯ ಯೋಜನೆಯನ್ನು ನಿರೋಧಿಸಲು, ಆರ್ಲ್ಸ್ (ಫ್ರಾನ್ಸ್)ನ ಕೌನ್ಸಿಲ್ ಪ್ರಯತ್ನಿಸಿತು. ಉಳಿದಿರುವ ಹದಿನಾಲ್ಕನೆಯವರು ಇದಕ್ಕೆ ಒಪ್ಪದೆ ಮುಂದುವರಿಸಿದರು. ಸಾ.ಶ. 325 ರಲ್ಲಿ, ಇದನ್ನು ಮತ್ತು ಆತನ ಸಾಮ್ರಾಜ್ಯದಲ್ಲಿ ಕ್ರೈಸ್ತರೆಂದು ಹೇಳಿಕೊಳ್ಳುವವರನ್ನು ವಿಭಾಗಿಸುತ್ತಿರುವ ಇತರ ವಿಚಾರಗಳನ್ನು ನಿರ್ಧರಿಸಲಿಕ್ಕಾಗಿಯೆ, ವಿಧರ್ಮಿ ಚಕ್ರವರ್ತಿ ಕಾನ್ಸನ್ಟ್ಟೀನ್, ಕೌನ್ಸಿಲ್ ಆಫ್ ನೈಸೀಆ ಎಂಬ ಸಾರ್ವತ್ರಿಕ ಸಭೆಗೆ ಕರೆಕೊಟ್ಟನು. ಏಷಿಯಾ ಮೈನರಿನಲ್ಲಿರುವವರೆಲ್ಲರಿಗೆ ರೋಮನ್ ಪದ್ಧತಿಗೆ ಅನುವರ್ತಿಸುವಂತೆ ತಿಳಿಸಿದ ಒಂದು ಶಾಸನವನ್ನು ಇದು ಹೊರಡಿಸಿತು.
ಯೆಹೂದಿ ಕ್ಯಾಲೆಂಡರಿನ ತಾರೀಖಿಗೆ ಅನುಸಾರವಾಗಿ ಕ್ರಿಸ್ತನ ಮರಣದ ಜ್ಞಾಪಕವನ್ನು ಆಚರಿಸುವುದನ್ನು ಪರಿತ್ಯಜಿಸಲಿಕ್ಕಾಗಿ ಮುಂತರಲ್ಪಟ್ಟ ಪ್ರಧಾನ ವಾದಸರಣಿಗಳಲ್ಲಿ ಒಂದನ್ನು ಗಮನಿಸುವುದು ಸ್ವಾರಸ್ಯಭರಿತವಾಗಿದೆ. ಕೆ. ಜೆ. ಹೇಫೆಲೆ ಅವರ ಎ ಹಿಸ್ಟೊರಿ ಆಫ್ ದ ಕ್ರಿಸ್ಟ್ಯನ್ ಕೌನ್ಸಿಲ್ಸ್, ಹೇಳುವುದು: “ಎಲ್ಲಾ ಹಬ್ಬಗಳಲ್ಲಿ ಅತ್ಯಂತ ಪವಿತ್ರವಾದ ಈ ಹಬ್ಬವನ್ನು ಆಚರಿಸಲು, ಭಯಂಕರ ದುಷ್ಕೃತ್ಯಗಳೊಂದಿಗೆ ಲಜ್ಜಾಸ್ಪದವಾಗಿ ಒಳಗೊಂಡವರೂ, ಮತ್ತು ಕುರುಡಾದ ಮನಸ್ಸುಗಳಿರುವವರೂ ಆದ ಯೆಹೂದ್ಯರ ಪದ್ಧತಿ (ಕಾಲಗಣನೆ) ಯನ್ನು ಅನುಸರಿಸುವುದು, ಇದಕ್ಕೆ ವಿಶೇಷವಾಗಿ ಅಯೋಗ್ಯವಾಗಿದೆಯೆಂದು ಘೋಷಿಸಲ್ಪಟ್ಟಿತು.” (ಸಂಪುಟ 1, ಪುಟ 322) ಅಂತಹ ಒಂದು ಸ್ಥಾನದಲ್ಲಿರುವುದು “ಚರ್ಚಿನ ನಿಯೋಜಿತ ಅಧಿಕಾರದ ‘ಆತ್ಮ ಗೌರವಕ್ಕೆ ಕುಂದು ತರುವ ಅಧೀನತೆ’” ಯಂತೆ ಪರಿಗಣಿಸಲ್ಪಟ್ಟಿತ್ತೆಂದು, ಸಡ್ಟಿಯಾ ಪ್ಯಾಟ್ರಿಸಿಕ್ಟಾ, ಸಂಪುಟ 4, 1961, ಪುಟ 412 ರಲ್ಲಿ ಉದ್ಧರಿಸಲಾದ ವಿಷಯವನ್ನು ಜೆ. ಜಸರ್ಟ್ ಹೇಳುತ್ತಾರೆ.
ಯೆಹೂದಿ ದ್ವೇಷ! ಯೇಸು ಮರಣಪಟ್ಟ ಅದೇ ದಿನದಲ್ಲಿ ಆತನ ಮರಣದ ಜ್ಞಾಪಕವನ್ನು ಆಚರಿಸಿದವರು ಯೆಹೂದ್ಯ ಸಂಪ್ರದಾಯಿಗಳೆಂದು ಅವಲೋಕಿಸಲ್ಪಟ್ಟರು. ಯೇಸು ತಾನೇ ಒಬ್ಬ ಯೆಹೂದ್ಯನಾಗಿದ್ದನು ಮತ್ತು ಅವನು ಆಗ ತನ್ನ ಜೀವವನ್ನು ಮಾನವವರ್ಗದ ಪರವಾಗಿ ಒಪ್ಪಿಸಿಕೊಟ್ಟು ಆ ದಿನಕ್ಕೆ ಅರ್ಥವನ್ನು ಕೊಟ್ಟಿದ್ದನೆಂಬುದು ಮರೆಯಲ್ಪಟ್ಟಿತ್ತು. ಅಂದಿನಿಂದ, ಹದಿನಾಲ್ಕನೆಯವರು ಪಾಷಂಡಿಗಳು ಮತ್ತು ಭಿನ್ನಾಭಿಪ್ರಾಯಿಗಳೆಂದು ಖಂಡಿಸಲ್ಪಟ್ಟರು ಮತ್ತು ಹಿಂಸಿಸಲ್ಪಟ್ಟರು. ಸಾ.ಶ. 341 ರಲ್ಲಿ, ಅವರು ಬಹಿಷ್ಕರಿಸಲ್ಪಡಬೇಕೆಂದು ಅಂತಿಯೋಕ್ಯದ ಕೌನ್ಸಿಲ್ ತೀರ್ಪು ನೀಡಿತು. ಆದಾಗ್ಯೂ, ಸಾ.ಶ. 400 ರಲ್ಲಿ ಅವರಲ್ಲಿ ಅನೇಕರು ಇನ್ನೂ ಇದ್ದರು, ಮತ್ತು ಅನಂತರ ದೀರ್ಘ ಸಮಯದ ತನಕ ಅವರು ಚಿಕ್ಕ ಸಂಖ್ಯೆಗಳಲ್ಲಿ ದೃಢವಾಗಿ ಉಳಿದರು.
ಅಂದಿನ ದಿವಸಗಳಿಂದ, ಕ್ರೈಸ್ತ ಪ್ರಪಂಚವು ಯೇಸುವಿನ ಆರಂಭದ ಏರ್ಪಾಡಿಗೆ ಹಿಂದಿರುಗಲು ತಪ್ಪಿದೆ. ಪ್ರೊಫೆಸರ್ ವಿಲಿಯಂ ಬ್ರೈಟ್ ಒಪ್ಪಿಕೊಂಡದ್ದು: “ವಿಶೇಷವಾದ ಒಂದು ದಿನವಾದ ಗುಡ್ ಫ್ರೈಡೆ, ಯೇಸು ಕ್ರಿಸ್ತನ ಯಾತನೆಯ ಕುರಿತಾದ ಸ್ಮರಿಸುವಿಕೆಗೆ ಮೀಸಲಾಗಿಡಲ್ಪಟ್ಟಾಗ, ಸಂತ ಪೌಲನು ಸಮರ್ಪಣಾ ಮರಣದೊಂದಿಗೆ ಸಂಬಂಧಿಸಿದ ‘ಪಸ್ಕ ಸಂಬಂಧಿತ’ ಒಡನಾಡಿಗಳನ್ನು ಅದಕ್ಕೆ ಪರಿಮಿತಗೊಳಿಸಲು ತೀರ ವಿಳಂಬವಾಗಿತ್ತು: ಸ್ವತಃ ಪುನರುತ್ಥಾನದ ಹಬ್ಬಕ್ಕೆ ಅವುಗಳನ್ನು ಸ್ಪಚ್ಛಂದವಾಗಿ ಅನ್ವಯಿಸಲಾಗಿತ್ತು, ಮತ್ತು ಗ್ರೀಕ್ ಹಾಗೂ ಲ್ಯಾಟಿನ್ ಕ್ರೈಸ್ತ ಪ್ರಪಂಚದ ಸಂಸ್ಕಾರ ಸಂಬಂಧವಾದ ಭಾಷೆಯಲ್ಲಿ ವಿಚಾರಗಳ ಗಲಿಬಿಲಿಯು ನೆಲೆಗೊಂಡಿತು.”—ದಿ ಏಜ್ ಆಫ್ ದ ಫಾದರ್ಸ್, ಸಂಪುಟ 1, ಪುಟ 102.
ಈ ದಿನದ ಕುರಿತೇನು?
‘ಈ ಎಲ್ಲಾ ವರ್ಷಗಳ ಅನಂತರ’ ನೀವು ಪ್ರಶ್ನಿಸಬಹುದು, ‘ಯಾವಾಗ ಜ್ಞಾಪಕವು ಆಚರಿಸಲ್ಪಡಬೇಕೆನ್ನುವುದು ನಿಜವಾಗಿಯೂ ಪ್ರಾಮುಖ್ಯವೊ?’ ಹೌದು, ಪ್ರಾಮುಖ್ಯ. ಅಧಿಕಾರಕ್ಕಾಗಿ ಹೆಣಗಾಡುತ್ತಿದ್ದ ದೃಢ ಮನಸ್ಸಿನ ವ್ಯಕ್ತಿಗಳಿಂದ ಬದಲಾವಣೆಗಳು ಮಾಡಲ್ಪಟ್ಟವು. ಯೇಸು ಕ್ರಿಸ್ತನಿಗೆ ವಿಧೇಯರಾಗುವ ಬದಲಾಗಿ ಜನರು ತಮ್ಮ ಸ್ವಂತ ಅಭಿಪ್ರಾಯಗಳನ್ನು ಅನುಸರಿಸಿದರು. ಅಪೊಸ್ತಲ ಪೌಲನ ಎಚ್ಚರಿಕೆಯು ಸ್ಪಷ್ಟವಾಗಿಗಿ ನೆರವೇರಿಕೆಯನ್ನು ಪಡೆಯಿತು: “ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ [ಕ್ರೈಸ್ತರೊಳಗೆ] ಬರುವವೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸುವದಿಲ್ಲ. ಇದಲ್ಲದೆ ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸ ಬೋಧನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು.”—ಅ. ಕೃತ್ಯಗಳು 20:29, 30.
ವಿಧೇಯತೆಯ ವಿಷಯವೇ ಇರುವ ವಿವಾದಾಂಶವಾಗಿದೆ. ಕ್ರೈಸ್ತರು ಆಚರಿಸಲಿಕ್ಕಾಗಿ ಯೇಸು ಕೇವಲ ಒಂದು ಆಚರಣೆಯನ್ನು ಸ್ಥಾಪಿಸಿದನು. ಅದು ಯಾವಾಗ ಮತ್ತು ಹೇಗೆ ಆಚರಿಸಲ್ಪಡಬೇಕೆಂಬುದನ್ನು ಬೈಬಲ್ ಸ್ಪಷ್ಟವಾಗಿಗಿ ವಿವರಿಸುತ್ತದೆ. ಹಾಗಿರುವಾಗ, ಅದನ್ನು ಬದಲಾಯಿಸುವ ಹಕ್ಕು ಯಾರಿಗಿದೆ? ಈ ವಿಚಾರದಲ್ಲಿ ಒಪ್ಪಂದಕ್ಕೆ ಬರುವ ಬದಲಾಗಿ, ಆರಂಭದ ಹದಿನಾಲ್ಕನೆಯವರು ಹಿಂಸೆ ಮತ್ತು ಬಹಿಷ್ಕಾರವನ್ನು ಅನುಭವಿಸಿದರು.
ಯೇಸು ಸ್ಥಾಪಿಸಿದ ತಾರೀಖಿನಂದು ಆತನ ಮರಣದ ಜ್ಞಾಪಕವನ್ನು ಸ್ಮರಿಸುವ ಮತ್ತು ಯೇಸುವಿನ ಅಪೇಕ್ಷೆಗಳನ್ನು ಗೌರವಿಸುವ ಕ್ರೈಸ್ತರು ಇನ್ನೂ ಭೂಮಿಯ ಮೇಲೆ ಇದ್ದಾರೆಂದು ತಿಳಿಯಲು ನೀವು ಪ್ರಾಯಶಃ ಆಸಕ್ತಿಯುಳ್ಳವರಾಗಿರಬಹುದು. ಭೂಮಿಯಾದ್ಯಂತ ಯೆಹೋವನ ಸಾಕ್ಷಿಗಳೆಲ್ಲರೂ, ಈ ವರ್ಷ—ನೈಸಾನ್ 14ರ ದಿನವು ಆರಂಭವಾಗುವಾಗ—ಶನಿವಾರ, ಮಾಚ್ 26 ರಂದು 6:00 ಗಂಟೆಯ ಅನಂತರ ತಮ್ಮ ರಾಜ್ಯ ಸಭಾಗೃಹಗಳಲ್ಲಿ ಒಟ್ಟಿಗೆ ಕೂಟವಾಗಿ ಕೂಡುವರು. ಅನಂತರ ಅವರು ಈ ಅತ್ಯಂತ ಅರ್ಥಭರಿತ ಸಮಯದಲ್ಲಿ ಏನು ಮಾಡಲ್ಪಡಬೇಕೆಂದು ಯೇಸು ಹೇಳಿದನೊ ಹಾಗೆಯೆ ಮಾಡುವರು. ಅವರೊಂದಿಗೆ ಕರ್ತನ ಸಂಧ್ಯಾ ಭೋಜನವನ್ನು ಯಾಕೆ ಆಚರಿಸಬಾರದು? ಅಲ್ಲಿ ಹಾಜರಿರುವ ಮೂಲಕ, ಯೇಸು ಕ್ರಿಸ್ತನ ಅಪೇಕ್ಷೆಗಳಿಗೆ ನೀವೂ ಕೂಡ ನಿಮ್ಮ ಗೌರವವನ್ನು ವ್ಯಕ್ತಪಡಿಸಸಾಧ್ಯವಿದೆ.
[ಅಧ್ಯಯನ ಪ್ರಶ್ನೆಗಳು]
a ನೈಸಾನ್, ಯೆಹೂದಿ ವರ್ಷದ ಪ್ರಥಮ ತಿಂಗಳು, ಅಮಾವಾಸ್ಯೆಯ ಹೊಸಚಂದ್ರನ ಪ್ರಥಮ ಗೋಚರಿಸುವಿಕೆಯೊಂದಿಗೆ ಆರಂಭವಾಗುತ್ತದೆ. ಹೀಗೆ ನೈಸಾನ್ 14 ಯಾವಾಗಲೂ ಹುಣ್ಣಿಮೆಯಂದು ಬರುತ್ತದೆ.
[ಪುಟ 6 ರಲ್ಲಿರುವ ಚೌಕ]
“ಆ ಅಮೂಲ್ಯ ಪ್ರಾಯಶ್ಚಿತ್ತ”
ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವು ಒಂದು ತತ್ವಕ್ಕಿಂತಲೂ ಅತ್ಯಧಿಕವಾದದ್ದಾಗಿದೆ. ತನ್ನ ಕುರಿತಾಗಿ ಯೇಸು ಅಂದದ್ದು: “ಮನುಷ್ಯಕುಮಾರನು ಸಹ ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು.” (ಮಾರ್ಕ 10:45) ಆತನು ಇನ್ನೂ ವಿವರಿಸಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಸತ್ತವರಿಗಾಗಿ, ಪ್ರಾಯಶ್ಚಿತ್ತ ಯಜ್ಞವು ಪುನರುತ್ಥಾನ ಮತ್ತು ನಿತ್ಯ ಜೀವದ ಕುರಿತಾದ ನಿರೀಕ್ಷೆಯ ದಾರಿಯನ್ನು ತೆರೆಯುತ್ತದೆ.—ಯೋಹಾನ 5:28, 29.
ಯೇಸು ಕ್ರಿಸ್ತನ ಅತ್ಯಾವಶ್ಯಕವಾಗಿ ಪ್ರಾಮುಖ್ಯವಾದ ಮರಣವು ಕರ್ತನ ಸಂಧ್ಯಾ ಭೋಜನದ ಆಚರಣೆಯಲ್ಲಿ ಸ್ಮರಿಸಲ್ಪಡುತ್ತದೆ. ಆತನ ಯಜ್ಞವು ಅತ್ಯಧಿಕವಾದದ್ದನ್ನು ಪೂರೈಸುತ್ತದೆ! ದೈವಿಕ ಹೆತ್ತವರಿಂದ ತರಬೇತುಗೊಳಿಸಲ್ಪಟ್ಟ ಮತ್ತು ದಶಮಾನಗಳ ವರೆಗೆ ದೇವರ ಸತ್ಯದಲ್ಲಿ ಜೀವಿಸಿದ, ವಿವಾಹಿತ ಸ್ತ್ರೀಯೊಬ್ಬಳು ತನ್ನ ಕೃತಜ್ಞತೆಯನ್ನು ಈ ಮಾತುಗಳಲ್ಲಿ ವ್ಯಕ್ತಪಡಿಸುತ್ತಾಳೆ:
“ಜ್ಞಾಪಕವನ್ನು ನಾವು ಎದುರುನೋಡುತ್ತೇವೆ. ಪ್ರತಿ ವರ್ಷ ಅದು ಹೆಚ್ಚು ವಿಶೇಷವಾಗಿ ಪರಿಣಮಿಸುತ್ತದೆ. ಇಪ್ಪತ್ತು ವರ್ಷಗಳ ಹಿಂದೆ, ಶವ ಸಂಸ್ಕಾರದ ಮನೆಯಲ್ಲಿ, ನನ್ನ ಪ್ರೀತಿಯ ತಂದೆಯ ಶವವನ್ನು ನೋಡುತ್ತಾ ನಿಂತದ್ದನ್ನು ಮತ್ತು ಪ್ರಾಯಶ್ಚಿತ್ತ ಯಜ್ಞದ ಕುರಿತು ಒಂದು ನಿಜವಾದ ಹೃತ್ಪೂರ್ವಕ ಗಣ್ಯತೆಗೆ ಬಂದದ್ದನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ. ಇದಕ್ಕೆ ಮೊದಲು ಅದು ಕೇವಲ ತಲೆಜ್ಞಾನದ ಒಂದು ವಿಚಾರವಾಗಿತ್ತು. ಓ, ಎಲ್ಲಾ ಶಾಸ್ತ್ರವಚನಗಳನ್ನು ಮತ್ತು ಅವುಗಳನ್ನು ಹೇಗೆ ವಿವರಿಸಬೇಕೆಂಬುದನ್ನು ನಾನು ತಿಳಿದಿದ್ದೆನು! ಆದರೆ ಮರಣದ ನಿರುತ್ಸಾಹಕರ ನೈಜ್ಯವನ್ನು ಅನುಭವಿಸಿದಾಗ, ಆ ಅಮೂಲ್ಯವಾದ ಪ್ರಾಯಶ್ಚಿತ್ತ ಯಜ್ಞದ ಮೂಲಕ ನಮಗೋಸ್ಕರ ಪೂರೈಸಲ್ಪಡುವ ವಿಷಯಗಳ ಕುರಿತು ನನ್ನ ಹೃದಯವು ಸಂಪೂರ್ಣವಾಗಿ ಆನಂದದಿಂದ ನೆಗೆಯಿತು.”