ಅದು ನಿಜವಾಗಿಯೂ ಕಳ್ಳತನವಾಗಿದೆಯೆ?
ಅಬಿಯೋಡುನ್, ನೈಜಿರೀಯದ ದೊಡ್ಡ ಹೋಟೆಲ್ ಒಂದರಲ್ಲಿ ಹಿರಿಯ ಪರಿಚಾರಕನಾಗಿದ್ದನು. ಒಂದು ಸಂಜೆ ಔತಣ ಮಂದಿರಕ್ಕೆ ಬೀಗ ಹಾಕುತ್ತಿರುವಾಗ, 1,827 ಡಾಲರುಗಳಷ್ಟು ಬೆಲೆಯ ಹಣವಿದ್ದ ಒಂದು ಚೀಲವನ್ನು ಅವನು ಕಂಡನು. ತಡಮಾಡದೆ ಆ ಹಣವನ್ನು ಅವನು ಹಿಂದಿರುಗಿಸಿದನು, ಬಳಿಕ ಆ ಹೋಟೆಲ್ನ ಅತಿಥಿಯಾಗಿದ್ದ ಅದರ ಒಡತಿಯಿಂದ ಅದು ತನ್ನದೆಂದು ಹೇಳಲ್ಪಟ್ಟಿತು. ಹೋಟೆಲ್ನ ಆಡಳಿತ ಮಂಡಲಿಯು ಅಬಿಯೋಡುನ್ನನ್ನು ಸಹಾಯಕ ಮೇಲ್ವಿಚಾರಕನನ್ನಾಗಿ ಬಡತಿಮಾಡಿತು ಮತ್ತು “ಆ ವರ್ಷದ ಅತ್ಯುತ್ತಮ ಕೆಲಸಗಾರ”ನ ಪ್ರಶಸ್ತಿಯನ್ನು ಅವನಿಗೆ ನೀಡಿತು. ಹಣದ ಒಡತಿಯು ಸಹ ಅವನಿಗೆ ಬಹುಮಾನವನ್ನಿತ್ತಳು.
ಕ್ವಾಲಿಟಿ ಎಂಬ ಒಂದು ಸ್ಥಳಿಕ ವಾರ್ತಾಪತ್ರಿಕೆಯು, ಅಬಿಯೋಡುನ್ನನ್ನು ಒಬ್ಬ “ಒಳ್ಳೆಯ ಸಮಾರ್ಯದವನು” ಎಂದು ಕರೆಯುತ್ತ, ಕಥೆಯನ್ನು ನಿರೂಪಿಸಿತು. ತಾನು ಹಣವನ್ನು ತನ್ನಲ್ಲಿಟ್ಟುಕೊಳ್ಳುವಂತೆ ಶೋಧಿಸಲ್ಪಟ್ಟಿದ್ದನೋ ಎಂದು ಕ್ವಾಲಿಟಿ ಮೂಲಕ ಕೇಳಲ್ಪಟ್ಟಾಗ, ಅಬಿಯೋಡುನ್ ಹೇಳಿದ್ದು: ‘ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದೇನೆ. ಆದುದರಿಂದ ನನಗೆ ಸಂಬಂಧಿಸಿಲ್ಲದ ಯಾವುದನ್ನಾದರೂ ನಾನು ಕಂಡಾಗ, ಅದನ್ನು ಅದರ ಒಡೆಯನಿಗೆ ನಾನು ಹಿಂದಿರುಗಿಸುತ್ತೇನೆ.’
ಅಬಿಯೋಡುನನ ಪ್ರಾಮಾಣಿಕತೆಯ ಪ್ರದರ್ಶನದಿಂದ ಸಮಾಜದಲ್ಲಿರುವ ಅನೇಕರು ಆಶ್ಚರ್ಯಗೊಂಡರು. ಏನು ಸಂಭವಿಸಿತೊ ಅದರಿಂದಾಗಿ ಅಬಿಯೋಡುನನ ಜೊತೆ ವಿಶ್ವಾಸಿಗಳು ಸಂತೋಷಗೊಂಡರಾದರೂ ಅವರು ಆಶ್ಚರ್ಯಗೊಳ್ಳಲಿಲ್ಲ. ಭೂಮಿಯಾದ್ಯಂತ ಯೆಹೋವನ ಸಾಕ್ಷಿಗಳು ತಮ್ಮ ಉತ್ತಮ ನಡೆವಳಿಕೆಗಳಿಗಾಗಿ ಪ್ರಸಿದ್ಧರಾಗಿದ್ದಾರೆ. ಅವರಲ್ಲಿ ಪ್ರಾಮಾಣಿಕತೆಯು ಅಪವಾದವಲ್ಲ; ಅದು ನಿಯಮ, ನಿಜ ಕ್ರೈಸ್ತತ್ವದ ಅತ್ಯಾವಶ್ಯಕವಾದ ಭಾಗವಾಗಿದೆ.
ಆದರೂ, ಸಂದರ್ಭಾನುಸಾರವಾಗಿ, ಯಾವುದು ಪ್ರಾಮಾಣಿಕವಾಗಿದೆ ಮತ್ತು ಯಾವುದು ಪ್ರಾಮಾಣಿಕವಾಗಿಲ್ಲ ಎಂಬುದನ್ನು ಪ್ರತ್ಯೇಕಿಸುವುದನ್ನು ಪರಿಸ್ಥಿತಿಗಳು ಕಷ್ಟಕರವನ್ನಾಗಿ ಮಾಡಬಹುದು. ಈ ಪರಿಸ್ಥಿತಿಯನ್ನು ಪರಿಗಣಿಸಿರಿ. ಪಶ್ಚಿಮ ಆಫ್ರಿಕದ ಯೆಹೋವನ ಸಾಕ್ಷಿಗಳ ಸಭೆಯೊಂದರಲ್ಲಿ ಕಾಣಿಕೆಗಳು ಮತ್ತು ಅಕೌಂಟ್ಸ್ಗಳ ಮೇಲ್ವಿಚಾರಣೆ ನಡೆಸುವ, ಫೆಸಸ್ಟ್, ಹಣದ ವಿಪರೀತ ಆವಶ್ಯಕತೆಯಲಿದ್ಲನ್ದು.a ಅವನ ಹೆಂಡತಿಗೆ ಒಂದು ಗಂಭೀರ ಶಸ್ತ್ರಚಿಕಿತ್ಸೆಯ ಆವಶ್ಯಕತೆಯಿದ್ದು, ಅದನ್ನು ಮುಂದೂಡಬಾರದೆಂದು ವೈದ್ಯರು ಹೇಳಿದ್ದರು. ಅರ್ಧ ಹಣವನ್ನು ಮುಂಗಡವಾಗಿ ನೀಡುವಂತೆ ಆಸ್ಪತ್ರೆಯು ಆವಶ್ಯಪಡಿಸಿತ್ತು.
ಫೆಸಸ್ಟ್ಗೆ ಹಣದ ಕೊರತೆಯಿತ್ತು. ಸಾಲವೊಂದಕ್ಕಾಗಿ ಅವನು ಅನೇಕ ಜನರನ್ನು ಸಮೀಪಿಸಿದಾಗ, ಅದು ನಿರಾಕರಿಸಲ್ಪಟ್ಟಿತು. ತನ್ನ ಬಳಿಯಲ್ಲಿರುವ ಹಣದ ಕುರಿತು ಆತನು ನೆನಸಿ ಹೀಗೆ ವಿವೇಚಿಸಿದನು, ‘ಮರಣವನ್ನು ತಡೆಯುವಂತೆ ಏನಾದರೂ ಮಾಡಸಾಧ್ಯವಿರುವಾಗ, ನನ್ನ ಹೆಂಡತಿ ಸಾಯುವಂತೆ ನಾನು ಬಿಡುವುದು ಸರಿಯೊ? ಸಭೆಯ ಹಣದಿಂದ ಯಾಕೆ “ಸಾಲ” ತೆಗೆದುಕೊಳ್ಳಬಾರದು? ನನಗೆ ಹಣ ಕೊಡಬೇಕಾಗಿರುವ ಕೆಲವು ಜನರು ನನಗೆ ಕೊಟ್ಟಾಗ, ನಾನದನ್ನು ಹಿಂದಿರುಗಿಸಬಲ್ಲೆ,’ ಎಂದು ತರ್ಕಿಸಿದನು.
ತನ್ನದಲ್ಲದ ಹಣವನ್ನು ಫೆಸಸ್ಟ್ ಆಸ್ಪತ್ರೆಯ ವೆಚ್ಚವನ್ನು ನೀಡಲಿಕ್ಕಾಗಿ ಉಪಯೋಗಿಸಿದನು. ಅವನ ಪರ್ಯಾಲೋಚನೆಯು ಸರಿಯಾಗಿತ್ತೊ? ಅವನು ಎದುರಿಸಿದ ತುರ್ತುಪರಿಸ್ಥಿತಿಯಲ್ಲಿ ಅವನ ಕ್ರಿಯೆಯು ಸಮರ್ಥಕವಾದದ್ದಾಗಿತ್ತೊ?
ಅದು ಯಾರ ಹಣವಾಗಿದೆ?
ಈ ಪ್ರಶ್ನೆಗಳನ್ನು ವಿಶೇಷ್ಲಿಸುವಾಗ, ಫೆಸಸ್ಟ್ ತೆಗೆದುಕೊಂಡಂತಹ ಹಣದ ಉಗಮ ಮತ್ತು ಉದ್ದೇಶದ ಕುರಿತು ಕೆಲವೊಂದು ಅಂಶಗಳನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸೋಣ. ಯೆಹೋವನ ಶುದ್ಧ ಆರಾಧನೆಯನ್ನು ವಿಸ್ತರಿಸಲು ಬಯಸುವ ಸಭೆಯ ಸದಸ್ಯರುಗಳಿಂದ ಮಾಡಲ್ಪಟ್ಟ ಸ್ವಯಂ ಕಾಣಿಕೆಗಳಿಂದ ಹಣವು ಸಂಗ್ರಹವಾಗುತ್ತದೆ. (2 ಕೊರಿಂಥ 9:7) ಸಭೆಯಲ್ಲಿ ಮಾಡುವ ಕೆಲಸಗಳಿಗೆ ಯಾರಿಗೂ ಹಣ ನೀಡಲ್ಪಡದಿರುವುದರಿಂದ, ಸಂಬಳವನ್ನು ನೀಡಲಿಕ್ಕಾಗಿ ಅದು ಉಪಯೋಗಿಸಲ್ಪಡುವುದಿಲ್ಲ. ಅದಕ್ಕೆ ಬದಲಾಗಿ, ಒಂದು ಕೂಟದ ಸ್ಥಳ, ಒಂದು ರಾಜ್ಯ ಸಭಾಗೃಹವನ್ನು ಕೊಂಡುಕೊಳ್ಳಲು ಮತ್ತು ದುರಸ್ತಾಗಿಡಲು ದಾನವಾಗಿ ಅಂಗೀಕರಿಸಲ್ಪಟ್ಟ ಹಣವನ್ನು ಉಪಯೋಗಿಸಲಾಗುತ್ತದೆ. ಬೈಬಲ್ ಬೋಧನೆಗಾಗಿ ಜನರು—ಎಳೆಯರು ಮತ್ತು ವೃದ್ಧರು, ಬಡವರು ಮುತ್ತು ಶ್ರೀಮಂತರು—ಕೂಡಿಬರಲು, ಒಂದು ಅನುಕೂಲವಾದ ಮತ್ತು ಸುಖಕರವಾದ ನೆಲೆಯನ್ನು ಇದು ಒದಗಿಸುತ್ತದೆ.
ಅದು ಯಾರ ಹಣವಾಗಿದೆ? ಅದು ಒಟ್ಟಾಗಿ ಸಭೆಗೆ ಸೇರಿದ್ದಾಗಿದೆ. ಹಣವನ್ನು ಹೇಗೆ ವ್ಯಯಿಸಬೇಕೆಂಬುದರ ಕುರಿತು ಯಾವ ವೈಯಕ್ತಿಕ ಸದಸ್ಯನೂ ನಿರ್ಧರಿಸುವುದಿಲ್ಲ. ಸಭೆಯ ಸಾಮಾನ್ಯ ವೆಚ್ಚಗಳ ಕುರಿತು ಹಿರಿಯರ ಮಂಡಲಿಯು ಸಂದಾಯವನ್ನು ನಿರ್ದೇಶಿಸುವಾಗ, ಅಸಾಮಾನ್ಯ ಸಂದಾಯವೊಂದು ಸಲ್ಲಿಸಬೇಕಾದಾಗ, ಹಿರಿಯರು ಸಮ್ಮತಿಗಾಗಿ ವಿಷಯವನ್ನು ಇಡೀ ಸಭೆಗೆ ಪ್ರಸ್ತುತ ಪಡಿಸುತ್ತಾರೆ.
ಸಾಲತೆಗೆದುಕೊಳ್ಳುವುದೊ ಕಳ್ಳತನವೊ?
ಸಾಧ್ಯವಾದಷ್ಟು ಬೇಗನೆ ಹಣವನ್ನು ಭರ್ತಿಮಾಡುವ ತನ್ನ ಯೋಜನೆಯ ಕಾರಣದಿಂದ, ಫೆಸಸ್ಟ್ ತನ್ನ ಕಾರ್ಯವನ್ನು ಸಾಲವೆಂದು ಪರಿಗಣಿಸಿದನು. ಆದಾಗ್ಯೂ, “ಸಾಮಾನ್ಯವಾಗಿ ಬೇರೊಬ್ಬರ ಸ್ವತ್ತನ್ನು ಗುಟ್ಟಾಗಿ ಅಥವಾ ಸ್ವಪ್ರಜ್ಞೆಯಿಲ್ಲದೆ ಹಾಗೂ ಯಾವಾಗಲು ಅವನ ಅನುಮತಿಯಿಲ್ಲದೆ, ತೆಗೆದುಕೊಳ್ಳುವುದು ಮತ್ತು ಸ್ಥಳಾಂತರಿಸುವುದರ” ಕುರಿತು ವೆಬ್ಸ್ಟರ್ಸ್ ನ್ಯೂ ಡಿಕ್ಷನರಿ ಆಫ್ ಸಿನೊನಿಮ್ಸ್ ಬೇರೆ ಶಬ್ದಗಳನ್ನು ಉಪಯೋಗಿಸುತ್ತದೆ. “ಕಳ್ಳತನ” ಮತ್ತು “ಕಳ್ಳ” ಶಬ್ದಗಳಾಗಿವೆ. ಅನುಮತಿಯಿಲ್ಲದೆ ಅಥವಾ ಅಧಿಕಾರವಿಲ್ಲದೆ, ಸಭೆಗೆ ಸಂಬಂಧಿಸಿದ ಹಣವನ್ನು ಫೆಸಸ್ಟ್ ತೆಗೆದುಕೊಂಡನು. ಆದುದರಿಂದ, ಹೌದು, ಅವನು ಕಳ್ಳತನದ ದೋಷಿಯಾದನು. ಅವನು ಒಬ್ಬ ಕಳ್ಳನಾದನು.
ನಿಶ್ಚಯವಾಗಿಯೂ, ಕಳ್ಳತನದ ಹಿಂದಿರುವ ಪ್ರಚೋದನೆಯಲ್ಲಿ ನಿಂದನೀಯತೆಯ ಮಟ್ಟಗಳಿವೆ. ಯೇಸು ಮತ್ತು ನಂಬಿಗಸ್ತ ಅಪೊಸ್ತಲರಿಂದ ಸಂಗ್ರಹಿಸಲ್ಪಟ್ಟ ಹಣದ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದ ಇಸ್ಕರಿಯೋತ ಯೂದನ ಉದಾಹರಣೆಯಿಂದ ನಾವದನ್ನು ಕಾಣಸಾಧ್ಯವಿದೆ. “[ಯೂದನು] ಕಳ್ಳನಾಗಿದ್ದು ತನ್ನ ವಶದಲ್ಲಿದ್ದ ಅವರ ಹಣದ ಚೀಲದಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದ್ದನು,” ಎಂದು ಬೈಬಲು ಹೇಳುತ್ತದೆ. (ಯೋಹಾನ 12:6) ಒಂದು ಕೆಟ್ಟ ಹೃದಯ ಮತ್ತು ಪರಮ ಲೋಭದಿಂದ ಪ್ರೇರಿತನಾಗಿ, ಯೂದನು ನೈತಿಕವಾಗಿ ಕೀಳಾದ ಸ್ಥಿತಿಗಿಳಿದಿದ್ದನು. ಕ್ರಮೇಣ, ಮೂವತ್ತು ಬೆಳ್ಳಿ ನಾಣ್ಯಗಳಿಗಾಗಿ ದೇವಕುಮಾರನಿಗೆ ದ್ರೋಹವೆಸಗುವಷ್ಟು ತನ್ನನ್ನು ನೈತಿಕವಾಗಿ ಅವನತಿಗಿಳಿಸಿಕೊಂಡಿದ್ದನು.—ಮತ್ತಾಯ 26:14-16.
ಆದರೂ, ಫೆಸಸ್ಟ್, ತನ್ನ ಅಸ್ವಸ್ಥಳಾದ ಪತ್ನಿಯ ಕುರಿತ ವ್ಯಾಕುಲದಿಂದ ಪ್ರಚೋದಿಸಲ್ಪಟ್ಟಿದ್ದನು. ಅವನು ದುಷಣಾರ್ಹನಲ್ಲವೆಂದು ಇದು ಅರ್ಥೈಸುತ್ತದೊ? ಖಂಡಿತವಾಗಿ ಇಲ್ಲ. ತುರ್ತಾಗಿ ಕಂಡುಬರುವ ಬೇರೊಂದು ಪರಿಸ್ಥಿತಿಯಲ್ಲಿ ಕಳ್ಳತನದ ಕುರಿತು ಬೈಬಲು ಹೇಳುವುದನ್ನು ಪರಿಗಣಿಸಿ: “ಕಳ್ಳನು ಹೊಟ್ಟೆಗಿಲ್ಲದೆ ಹಸಿವೆಯನ್ನು ನೀಗಿಸಲು ಕಳವು ಮಾಡಿದರೆ ಜನರು ಅಷ್ಟೇನೂ ಹೀಯಾಳಿಸರು. ಅವನ ತಪ್ಪು ಬೈಲಾದರೆ ಅವನು ಏಳರಷ್ಟು ಕೊಡಬೇಕಾಗುವದು, ಅಥವಾ ತನ್ನ ಮನೆಯ ಆಸ್ತಿಯನ್ನೆಲ್ಲಾ ತೆತ್ತೇ ತೀರಬೇಕು.” (ಜ್ಞಾನೋಕ್ತಿ 6:30, 31) ಬೇರೆ ಮಾತುಗಳಲ್ಲಿ, ಹಿಡಿಯಲ್ಪಟ್ಟಾಗ, ಕಳ್ಳನು ನಿಯಮದ ಸಂಪೂರ್ಣ ದಂಡನೆಯನ್ನು ಅನುಭವಿಸಬೇಕು. ಮೋಶೆಯ ನಿಯಮಶಾಸ್ತ್ರಕ್ಕನುಸಾರ, ಒಬ್ಬ ಕಳ್ಳನು ತನ್ನ ದುಷ್ಕೃತ್ಯಕ್ಕಾಗಿ ನಷ್ಟ ಪರಿಹಾರ ನೀಡಬೇಕಾಗಿತ್ತು. ಆದುದರಿಂದ ಕಳ್ಳತನವನ್ನು ಉತ್ತೇಜಿಸುವ ಅಥವಾ ಮನ್ನಿಸುವ ಬದಲಾಗಿ, ತುರ್ತು ಪರಿಸ್ಥಿತಿಗಳಲ್ಲಿ ಕೂಡ, ಕಳ್ಳತನವು ಆರ್ಥಿಕ ನಷ್ಟ, ಅಪಮಾನ, ಮತ್ತು ಅತ್ಯಂತ ಹೆಚ್ಚು ಗಂಭೀರವಾಗಿ, ದೇವರ ಅಂಗೀಕಾರದ ನಷ್ಟವನ್ನುಂಟುಮಾಡಬಲ್ಲದು ಎಂದು ಬೈಬಲ್ ಎಚ್ಚರಿಸುತ್ತದೆ.
ಯೆಹೋವನ ಸಾಕ್ಷಿಗಳೋಪಾದಿ, ನಿಜ ಕ್ರೈಸ್ತರೆಲ್ಲರೂ, ವಿಶೇಷವಾಗಿ ಸಭೆಯೊಳಗೆ ಜವಾಬ್ದಾರಿಗಳೊಂದಿಗೆ ಕಾರ್ಯನಿರ್ವಹಿಸಲ್ಪಟ್ಟವರು, “ಅವರ ಮೇಲೆ ಯಾರೂ ತಪ್ಪುಹೊರಿಸ” ದಂತೆ ಮಾದರಿಗಳಾಗಿರಬೇಕು. (1 ತಿಮೊಥೆಯ 3:10) ತಾನು ಇತರ ಜನರಿಂದ ನಿರೀಕ್ಷಿಸುತ್ತಿದ್ದ ಹಣವು ಫೆಸಸ್ಟ್ಗೆ ದೊರಕಲಿಲ್ಲ, ಮತ್ತು ಹೀಗೆ ಅವನು ತೆಗೆದುಕೊಂಡಿದ್ದ ಹಣವನ್ನು ಪುನಃ ಭರ್ತಿಮಾಡಲು ಅವನಿಗೆ ಸಾಧ್ಯವಾಗಲಿಲ್ಲ. ಅವನು ಏನು ಮಾಡಿದ್ದನೊ ಅದು ಎಲ್ಲರಿಗೆ ತಿಳಿಯಿತು. ಅವನಿಗೆ ಏನು ಸಂಭವಿಸಿತು? ಅವನೊಬ್ಬ ಪಶ್ಚಾತ್ತಾಪ ಪಡದ ಕಳ್ಳನಾಗಿದ್ದಾದರೆ, ಶುದ್ಧ ಕ್ರೈಸ್ತ ಸಭೆಯಿಂದ ಅವನು ಹೊರಹಾಕಲ್ಪಡುತ್ತಿದ್ದನು. (1 ಪೇತ್ರ 4:15) ಆದರೆ ಅವನು ಮನದಲ್ಲಿ ನೊಂದುಕೊಂಡನು ಮತ್ತು ಪಶ್ಚಾತ್ತಾಪ ಪಟ್ಟನು. ಆದುದರಿಂದಲೇ, ಅವನು ಸಭೆಯಲ್ಲಿ ಉಳಿಯುವಂತಾಯಿತಾದರೂ ತನ್ನ ಸೇವಾ ಸುಯೋಗಗಳನ್ನು ಅವನು ಕಳೆದುಕೊಂಡನು.
ದೇವರಲ್ಲಿ ಭರವಸೆಯಿಡುವುದು
ಯೆಹೋವನನ್ನು ಸೇವಿಸುವವನೆಂದು ಸಮರ್ಥಿಸುವ ವ್ಯಕ್ತಿಯೊಬ್ಬನು ಕಳ್ಳತನಮಾಡುವುದು, ದೇವರ ನಾಮಕ್ಕೆ ಮತ್ತು ಆತನ ನಾಮದ ಜನರ ಮೇಲೆ ನಿಂದೆಯನ್ನು ತರಸಾಧ್ಯವಿದೆಯೆಂದು ಅಪೊಸ್ತಲ ಪೌಲನು ಎಚ್ಚರಿಸುತ್ತಾನೆ. ಪೌಲನು ಬರೆದದ್ದು: “ಹೀಗಿರಲಾಗಿ ಮತ್ತೊಬ್ಬನಿಗೆ ಉಪದೇಶಮಾಡುವ ನೀನು ನಿನಗೆ ಉಪದೇಶಮಾಡಿಕೊಳ್ಳದೆ ಇದ್ದೀಯೋ? ಕದಿಯಬಾರದೆಂದು ಬೋಧಿಸುವ ನೀನು ಕದಿಯುತ್ತೀಯೋ? ನಿಮ್ಮ ದೆಸೆಯಿಂದ ಅನ್ಯಜನರಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತದೆ.”—ರೋಮಾಪುರ 2:21, 24.
ಪುರಾತನ ಕಾಲದ ಒಬ್ಬ ಜ್ಞಾನಿಯಾದ ಆಗೂರನು, ಅದೇ ವಿಷಯದ ಪ್ರಮುಖತೆಯನ್ನು ಒತ್ತಿಹೇಳಿದನು. “ಹೊಟ್ಟೆತುಂಬಿದವನಾದರೆ . . . ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೇನು,” ಎಂದು ತನ್ನ ಪ್ರಾರ್ಥನೆಯಲ್ಲಿ ಅವನು ಕೇಳಿಕೊಂಡನು. (ಜ್ಞಾನೋಕ್ತಿ 30:9) ಕಳ್ಳತನ ಮಾಡುವಂತೆ ನೀತಿವಂತನಾದ ವ್ಯಕ್ತಿಯೊಬ್ಬನು ಸಹ ಶೋಧಿಸಲ್ಪಡಬಹುದಾದ ಸಂದರ್ಭಗಳನ್ನು ಬಡತನವು ತರಬಲ್ಲದೆಂದು ವಿವೇಕಿಯಾದ ಮನುಷ್ಯನು ಮನಗಂಡಿದ್ದನೆಂಬುದನ್ನು ಗಮನಿಸಿ. ಹೌದು, ತನ್ನ ಜನರ ಆವಶ್ಯಕತೆಗಳಿಗೆ ಲಕ್ಷ್ಯಕೊಡುವುದರ ಕುರಿತ ಯೆಹೋವನ ಸಾಮರ್ಥ್ಯದಲ್ಲಿ ಕ್ರೈಸ್ತನೊಬ್ಬನ ನಂಬಿಕೆಯನ್ನು ಕಷ್ಟದ ಸಮಯಗಳು ಪರೀಕ್ಷಿಸಬಲ್ಲವು.
ಆದರೂ, ಯೆಹೋವನ ನಿಷ್ಠ ಸಾಕ್ಷಿಗಳು, ಬಡವರಾಗಿರುವವರೆಲ್ಲರೂ ಒಳಗೊಂಡು, ದೇವರು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂಬ ನಂಬಿಕೆ ಅವರಿಗಿದೆ. (ಇಬ್ರಿಯ 11:6) ತಮ್ಮ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ತಮಗೆ ಸಹಾಯ ಮಾಡುವ ಮೂಲಕ ತನ್ನ ನಂಬಿಗಸ್ತ ಸೇವಕರಿಗೆ ಯೆಹೋವನು ಪ್ರತಿಫಲವನ್ನು ಕೊಡುತ್ತಾನೆಂದು ಅವರು ತಿಳಿದಿದ್ದಾರೆ. ಪರ್ವತ ಪ್ರಸಂಗದಲ್ಲಿ ಯೇಸು ಅದನ್ನು ಸ್ಪಷ್ಟಪಡಿಸಿದ್ದಾನೆ, ಆತನಂದದ್ದು: “ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. . . . ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ. ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.”—ಮತ್ತಾಯ 6:31-33.
ಕ್ರೈಸ್ತ ಸಭೆಯಲ್ಲಿ ಆವಶ್ಯಕತೆಯಲ್ಲಿರುವವರಿಗೆ ದೇವರು ಹೇಗೆ ಒದಗಿಸುತ್ತಾನೆ? ಅನೇಕ ವಿಧಗಳಲ್ಲಿ. ಒಂದು ವಿಧವು ಜೊತೆ ವಿಶ್ವಾಸಿಗಳ ಮೂಲಕ ಒದಗಿಸುವುದಾಗಿದೆ. ದೇವರ ಜನರು ಒಬ್ಬರಿಗೊಬ್ಬರು ಶುದ್ಧವಾದ ಪ್ರೀತಿಯನ್ನು ತೋರಿಸುತ್ತಾರೆ. ಬೈಬಲಿನ ಬುದ್ಧಿವಾದವನ್ನು ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ: “ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿ ಬಿದ್ದಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದುಂಟೇ? ಪ್ರಿಯರಾದ ಮಕ್ಕಳೇ, ನಾವು ಬರೀಮಾತಿನಿಂದಾಗಲಿ ಬಾಯುಪಚಾರದಿಂದಾಗಲಿ ಪ್ರೀತಿಸುವವರಾಗಿರಬಾರದು; ನಿಮ್ಮ ಪ್ರೀತಿಯು ಕೃತ್ಯದಲ್ಲಿಯೂ ಸತ್ಯದಲ್ಲಿಯೂ ತೋರಬೇಕು.”—1 ಯೋಹಾನ 3:17, 18.
ಲೋಕದಾದ್ಯಂತ, 73,000 ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ, ನಾಲ್ವತೈದು ಲಕ್ಷಕ್ಕಿಂತಲೂ ಅಧಿಕ ಯೆಹೋವನ ಸಾಕ್ಷಿಗಳು, ಆತನ ನೀತಿಯ ನಿಯಮಗಳಿಗನುಸಾರ ದೇವರನ್ನು ಸೇವಿಸಲು ಶ್ರದ್ಧೆಯಿಂದ ಪ್ರಯತ್ನಿಸುತ್ತಾರೆ. ತನ್ನ ನಿಷ್ಠಾವಂತ ಸೇವಕರನ್ನು ದೇವರು ಎಂದಿಗೂ ತೊರೆಯುವುದಿಲ್ಲವೆಂದು ಅವರಿಗೆ ತಿಳಿದದೆ. ಅನೇಕ ವರ್ಷಗಳಿಂದ ಯೆಹೋವನನ್ನು ಸೇವಿಸುತ್ತಿರುವವರು, ರಾಜ ದಾವೀದನ ಏಕಾಭಿಪ್ರಾಯದೊಂದಿಗೆ ತಮ್ಮ ಧ್ವನಿಗಳನ್ನು ಒಟ್ಟುಗೂಡಿಸುತ್ತಾರೆ, ಅವನು ಬರೆದದ್ದು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.”—ಕೀರ್ತನೆ 37:25.
ಕಳ್ಳತನ ಮಾಡಲು ಸ್ವತಃ ಶೋಧನೆಗೊಳಪಟ್ಟು ಮತ್ತು ದೇವರ ಅನುಗ್ರಹವನ್ನು ಸದಾಕಾಲಕ್ಕೂ ಕಳೆದುಕೊಳ್ಳುವ ಸಂಭವನೀಯತೆಗೆ ಬದಲಾಗಿ, ಆ ಮಾತುಗಳನ್ನು ಪ್ರೇರಿಸಿದ ದೇವರಲ್ಲಿ ನಂಬಿಕೆಯನ್ನಿಡುವುದು ಎಷ್ಟೊಂದು ಉತ್ತಮವಾಗಿರುವುದು!—1 ಕೊರಿಂಥ 6:9, 10.
[ಅಧ್ಯಯನ ಪ್ರಶ್ನೆಗಳು]
a ಹೆಸರು ಬದಲಾಯಿಸಲ್ಪಟ್ಟಿದೆ.