ನ್ಯೂಕ್ಲಿಯರ್ ಬೆದರಿಕೆ—ಅಂತಿಮವಾಗಿ ಕೊನೆಗೊಂಡಿದೆಯೆ?
“ಭೂಮಿಯ ಮೇಲೆ ಶಾಂತಿಯು, II ನೆಯ ಲೋಕ ಯುದ್ಧದಿಂದೀಚಿನ ಇನ್ನಾವ ಸಮಯಕ್ಕಿಂತಲೂ ಹೆಚ್ಚಾಗಿ ಈಗ ಸಾಧ್ಯವಿರುವಂತೆ ತೋರುತ್ತದೆ.” ಒಬ್ಬ ಸುದ್ದಿಗಾರನು 1980 ಗಳ ಅಂತ್ಯದಲ್ಲಿ ಮಾಡಿದ ಈ ಆಶಾವಾದಾತ್ಮಕ ಅಂದಾಜು, ಗಮನಾರ್ಹವಾದ ನಿರಸ್ತ್ರೀಕರಣ ಒಪ್ಪಂದಗಳು ಮತ್ತು ಅನಿರೀಕ್ಷಿತ ರಾಜಕೀಯ ಉಗ್ರ ಕ್ಷೋಭೆಗಳು ಅಂತಿಮವಾಗಿ ಶೀತಲ ಯುದ್ಧವನ್ನು ಕೊನೆಗಾಣಿಸಿವೆಯೆಂಬ ನಿಜತ್ವದ ಮೇಲೆ ಆಧಾರಗೊಂಡಿತ್ತು. ಆದರೆ ಹಿಂದಿನ ಅತಿ ಶಕ್ತಿಗಳ ಮಾರೊಡ್ಡುವಿಕೆಯ ವಿಶೇಷ ಲಕ್ಷಣವಾಗಿದ್ದ ಈ ನ್ಯೂಕ್ಲಿಯರ್ ಬೆದರಿಕೆಯು ಸಹ ಅಂತ್ಯಗೊಂಡಿತೊ? ಬಾಳಿಕೆ ಬರುವ ಶಾಂತಿ ಮತ್ತು ಭದ್ರತೆ ನಿಜವಾಗಿಯೂ ಹಿಡಿತಕ್ಕೆ ಸಿಕ್ಕುವಷ್ಟು ಹತ್ತಿರದಲ್ಲಿದ್ದವೊ?
ಸಂಖ್ಯಾಭಿವೃದ್ಧಿಯ ಅಪಾಯಗಳು
ಶೀತಲ ಯುದ್ಧದ ಸಮಯದಲ್ಲಿ, ಶಾಂತಿಯನ್ನು ಕಾಪಾಡಿಕೊಳ್ಳಲು ಭಯೋತ್ಪಾದನಾ ಸಮತೆಯನ್ನು ಅವಲಂಬಿಸಿಕೊಂಡಿರುವಾಗ, ಅತಿ ಶಕ್ತಿಗಳು ಶಾಂತಿಯ ಉದ್ದೇಶಗಳನ್ನು ಬೆನ್ನಟಲ್ಟು ನ್ಯೂಕ್ಲಿಯರ್ ತಾಂತ್ರಿಕ ಕುಶಲತೆಯ ಬೆಳವಣಿಗೆಯನ್ನು ಅನುಮತಿಸಲು ಒಪ್ಪಿದರೂ ನ್ಯೂಕ್ಲಿಯರ್ ಆಯುಧ ತಯಾರಿಕೆಯಲ್ಲಿ ಅದನ್ನು ಉಪಯೋಗಿಸುವುದನ್ನು ಮಿತಗೊಳಿಸಿದವು. ಮತ್ತು 1970 ರಲ್ಲಿ ನ್ಯೂಕ್ಲಿಯರ್ ಸಂಖ್ಯಾ ಅನಭಿವೃದ್ಧಿ (ನಾನ್ಪ್ರಲಿಫರೇಷನ್) ಒಪ್ಪಂದವು ಕಾರ್ಯರೂಪಕ್ಕೆ ಬಂದಿತು; ಮತ್ತು ತರುವಾಯ ಸುಮಾರು 140 ರಾಷ್ಟ್ರಗಳು ಅದನ್ನು ಸ್ಥಿರೀಕರಿಸಿದವು. ಆದರೂ, ಆರ್ಜೆಂಟೀನ, ಬ್ರೆಜಿಲ್, ಭಾರತ, ಮತ್ತು ಇಸ್ರಾಯೇಲ್ನಂತಹ ನ್ಯೂಕ್ಲಿಯರ್ ಉತ್ಪಾದನ ಸಾಮರ್ಥ್ಯವುಳ್ಳ ಶಕ್ತಿಗಳು ಇಂದಿನ ತನಕವೂ ಅದಕ್ಕೆ ಸಹಿ ಹಾಕಲು ನಿರಾಕರಿಸಿವೆ.
ಆದರೂ, 1985 ರಲ್ಲಿ ಇನ್ನೊಂದು ಸಮರ್ಥ ಶಕ್ತಿಯಾದ ಉತ್ತರ ಕೊರಿಯ ಸಹಿ ಹಾಕಿತು. ಹೀಗೆ ಮಾರ್ಚ್ 12, 1993 ರಲ್ಲಿ ಅದು ಈ ಒಪ್ಪಂದದಿಂದ ತಾನು ಹಿಂದೆಗೆಯುತ್ತೇನೆಂದು ಪ್ರಕಟಿಸಿದಾಗ, ಜಗತ್ತು ನ್ಯಾಯಸಮ್ಮತವಾಗಿ ಕಳವಳದಿಂದ ಪ್ರತಿಕ್ರಿಯಿಸಿತು. ಜರ್ಮನ್ ವಾರ್ತಾಪತ್ರಿಕೆ ಡೇರ್ ಶ್ಪೀಗೆಲ್ ಗಮನಿಸಿದ್ದು: “ನ್ಯೂಕ್ಲಿಯರ್ ಸಂಖ್ಯಾ ಅನಭಿವೃದ್ಧಿ ಒಪ್ಪಂದದಿಂದ ಹಿಂದೆಗೆಯುವಿಕೆಯು ಪೂರ್ವ ನಿದರ್ಶನವನ್ನುಂಟುಮಾಡುತ್ತದೆ: ಈಗ ಏಷಿಯದಿಂದ ಆರಂಭವಾಗುವ ನ್ಯೂಕ್ಲಿಯರ್ ಶಸ್ತ್ರಾಸ್ತ್ರ ಪೈಪೋಟಿಯ ಬೆದರಿಕೆಯಿದೆ. ಇದು ಅತಿ ಶಕ್ತಿಗಳ ಮಧ್ಯೆಯಿದ್ದ ಬಾಂಬು ಪ್ರತಿಸ್ಪರ್ಧೆಗಿಂತಲೂ ಹೆಚ್ಚು ಅಪಾಯಕರವಾಗಬಲ್ಲದು.”
ರಾಷ್ಟ್ರೀಯತೆಯು ಬೆರಗಾಗಿಸುವ ಪ್ರಮಾಣದಲ್ಲಿ ಹೊಸ ರಾಷ್ಟ್ರಗಳಿಗೆ ಜನ್ಮ ಕೊಡುತ್ತಿರುವುದರಿಂದ ನ್ಯೂಕ್ಲಿಯರ್ ಶಕ್ತಿಗಳ ಸಂಖ್ಯೆ ಪ್ರಾಯಶಃ ಬೆಳೆಯುವುದು. ಪತ್ರಿಕೋದ್ಯೋಗಿ ಚಾರ್ಲ್ಸ್ ಕ್ರಾಟ್ಹ್ಯಾಮರ್ ಎಚ್ಚರಿಸುವುದು: “ಸೋವಿಯೆಟ್ ಬೆದರಿಕೆಯ ಅಂತ್ಯವು ನ್ಯೂಕ್ಲಿಯರ್ ಅಪಾಯದ ಅಂತ್ಯವನ್ನು ಅರ್ಥೈಸುವುದಿಲ್ಲ. ನಿಜ ಅಪಾಯವು ಸಂಖ್ಯಾಭಿವೃದ್ಧಿಯೇ, ಮತ್ತು ಸಂಖ್ಯಾಭಿವೃದ್ಧಿ ಈಗ ತಾನೇ ಆರಂಭವಾಗಿದೆ.”
ಬಾಂಬುಗಳು ಮಾರಾಟಕ್ಕೆ
ಭಾವೀ ನ್ಯೂಕ್ಲಿಯರ್ ಶಕ್ತಿಗಳು ಈ ಶಸ್ತ್ರಗಳು ನೀಡುವ ಘನತೆ ಮತ್ತು ಅಧಿಕಾರವನ್ನು ಪಡೆಯಲು ತವಕಪಡುತ್ತಿವೆ. ಒಂದು ದೇಶವು ಕಜಾಕ್ಸ್ತಾನ್ನಿಂದ ಕಡಿಮೆಪಕ್ಷ ಎರಡು ನ್ಯೂಕ್ಲಿಯರ್ ಸ್ಫೋಟಕ ಮೂತಿಗಳನ್ನು ಖರೀದಿಸಿದೆಯೆಂದು ಹೇಳಲಾಗುತ್ತದೆ. ಈ ಹಿಂದಿನ ಸೋವಿಯೆಟ್ ಗಣರಾಜ್ಯ ಈ ಸ್ಫೋಟಕ ಮೂತಿಗಳು “ಕಾಣೆಯಾಗಿವೆ” ಎಂದು ಅಧಿಕೃತವಾಗಿ ಪಟ್ಟಿ ಮಾಡುತ್ತದೆ.
ಅಕ್ಟೋಬರ್ 1992 ರಲ್ಲಿ ಜರ್ಮನಿಯ ಫ್ರ್ಯಾಂಕ್ಫರ್ಟ್ನಲ್ಲಿ ಅನೇಕ ಪುರುಷರನ್ನು 200 ಗ್ರ್ಯಾಮ್ಗಳಷ್ಟು ಅತಿ ಅಣುವಿಕಿರಣಕಾರಕ ಸೀಜೀಯಮ್—ಇಡೀ ನಗರದ ನೀರು ಸರಬರಾಯಿಯನ್ನು ವಿಷಮಯ ಮಾಡಲು ಸಾಲುವಷ್ಟು—ನೊಂದಿಗೆ ದಸ್ತಗಿರಿ ಮಾಡಲಾಯಿತು. ಒಂದು ವಾರಾನಂತರ, ಮ್ಯೂನಿಕ್ನಲ್ಲಿ ಏಳು ಮಂದಿ ಕಳ್ಳಸಾಗಣೆಗಾರರನ್ನು 2.2 ಕಿಲೊಗ್ರ್ಯಾಮ್ ಯುರೇನಿಯಮ್ನೊಂದಿಗೆ ಹಿಡಿಯಲಾಯಿತು. ಎರಡು ವಾರಗಳೊಳಗೆ ನ್ಯೂಕ್ಲಿಯರ್ ಕಳ್ಳಸಾಗಣೆಯ ಎರಡು ತಂಡಗಳ ಕಂಡುಹಿಡಿತವು ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ, ಏಕೆಂದರೆ ಹಿಂದಿನ ಇಡೀ ವರ್ಷದಲ್ಲಿ ಲೋಕಾದ್ಯಂತ ಕೇವಲ ಐದು ಕೇಸುಗಳು ವರದಿಯಾಗಿದ್ದವು.
ಈ ವ್ಯಕ್ತಿಗಳು ಅದನ್ನು ಭಯೋತ್ಪಾದಕರ ಗುಂಪುಗಳಿಗೆ ಮಾರಲು ಉದ್ದೇಶಿಸಿದ್ದರೊ ರಾಷ್ಟ್ರೀಯ ಸರಕಾರಗಳಿಗೊ ಎಂಬುದು ಅಜ್ಞಾತ. ಆದರೂ ನ್ಯೂಕ್ಲಿಯರ್ ಭಯೋತ್ಪಾದನೆಯ ಸಾಧ್ಯತೆ ಹೆಚ್ಚುತ್ತಿದೆ. ನ್ಯೂಕ್ಲಿಯರ್ ಪ್ರಲಿಫರೇಷನ್ ಇನ್ಫರ್ಮೇಶನ್ ಸೆಂಟರ್ನ ಡಾ. ಡೇವಿಡ್ ಲಾರಿ ಈ ಅಪಾಯವನ್ನು ವಿವರಿಸುತ್ತಾರೆ: “ಒಬ್ಬ ಭಯೋತ್ಪಾದಕನಿಗೆ ಮಾಡಲಿಕ್ಕಿರುವುದು ಇಷ್ಟೇ, ಏನಂದರೆ ತೀರ ಸಂಪದ್ಯುಕ್ತ ಮಾಡಿದ ಯುರೇನಿಯಂನ ಒಂದು ಸಣ್ಣ ಪಾಲನ್ನು ಒಂದು ಹೆಸರುವಾಸಿಯಾದ ಅಧಿಕೃತವರ್ಗಕ್ಕೆ ಪರೀಕೆಗ್ಷಾಗಿ ಕಳುಹಿಸಿ, ನಮ್ಮಲ್ಲಿ ಇಷ್ಟಿಷ್ಟು ಯುರೇನಿಯಂ ಇದೆ ಮತ್ತು ಇಲ್ಲಿದೆ ರುಜುವಾತು ಎಂದು ಹೇಳುವುದು. ಬಲಾತ್ಕಾರಹರಣ ಮಾಡುವವನು ಅದಕ್ಕೆ ಬಲಿಯಾದವನ ಕಿವಿಯನ್ನು ಕತ್ತರಿಸಿ ಕಳುಹಿಸುವಂತೆ.”
ಶಾಂತ ಸ್ಥಿತಿಯ “ಟೈಮ್ ಬಾಂಬುಗಳು” ಮತ್ತು “ಸಾವು ಬೋನುಗಳು”
ವರ್ಷ 1992 ಆರಂಭವಾದಾಗ 420 ಪರಮಾಣು ಶಕ್ತಿ ಉತ್ಪಾದಕಗಳು ವಿದ್ಯುತ್ ಉತ್ಪಾದನೆಯ ಶಾಂತ ಬೆನ್ನಟ್ಟುವಿಕೆಯಲ್ಲಿ ಭಾಗವಹಿಸುತ್ತಿದ್ದವು; ಬೇರೆ 76 ಕಟ್ಟಲ್ಪಡುತ್ತಿದ್ದವು. ಆದರೆ ಕಳೆದ ಅನೇಕ ವರ್ಷಗಳಲ್ಲಿ ನಡೆದ ಉತ್ಪಾದಕಗಳ ಅಪಘಾತಗಳು ಹೆಚ್ಚಿದ ಕಾಯಿಲೆಗಳು, ಅಕಾಲ ಪ್ರಸವಗಳು, ಮತ್ತು ಜನನ ನ್ಯೂನತೆಗಳ ವರದಿಗಳಿಗೆ ನಡೆಸಿವೆ. ಒಂದು ವರದಿಯು, 1967 ರೊಳಗೆ, ಸೋವಿಯೆಟ್ ಪ್ಲುಟೋನಿಯಮ್ ಸ್ಥಾವರವೊಂದರಲ್ಲಿ ನಡೆದ ಘಟನೆಗಳು ಚರ್ನಾಬಲ್ ದುರಂತದಲ್ಲಿ ಹೊರಸೂಸಿದ ಅಣು ವಿಕಿರಣಕ್ಕಿಂತ ಮೂರು ಪಾಲಿನಷ್ಟನ್ನು ಹೊರಸೂಸಿತು ಎಂದು ಹೇಳುತ್ತದೆ.
ಯುಕ್ರೇನಿನ ಚರ್ನಾಬಲ್ನಲ್ಲಿ ಎಪ್ರಿಲ್ 1986 ರಲ್ಲಿ ನಡೆದ ಈ ಘಟನೆ ಮೇಲ್ಪಂಕ್ತಿಗಳನ್ನು ಆಕರ್ಷಿಸಿತೆಂಬುದು ನಿಶ್ಚಯ. ಗ್ರಿಗಾರ್ಯಯ್ ಮೆಡೆಡ್ವೆಫ್ ಎಂಬ ಹೆಸರಿನ, 1970 ಗಳಲ್ಲಿ ಚರ್ನಾಬಲ್ ಸ್ಥಾವರದಲ್ಲಿ ಉಪ ಮುಖ್ಯ ನ್ಯೂಕ್ಲಿಯರ್ ಎಂಜಿನಿಯರ್ ವಿವರಿಸುವುದೇನಂದರೆ, ವಾತಾವರಣಕ್ಕೆ ಎಸೆಯಲ್ಪಟ್ಟಿರುವ, “ಬಹುಕಾಲ ಉಳಿಯುವ ಅಣು ವಿಕಿರಣದ ದೈತ್ಯಾಕಾರದ ಪರಿಮಾಣವು, ದೀರ್ಘಾವಧಿಯ ಪರಿಣಾಮಗಳ ದೃಷ್ಟಿಯಲ್ಲಿ ಹತ್ತು ಹಿರೋಶಿಮ ಬಾಂಬುಗಳಿಗೆ ಸಮಾನ.”
ಚರ್ನಾಬಸ್ಕಾಯ ಕ್ರಾನಿಕ ಎಂಬ ತನ್ನ ಪುಸ್ತಕದಲ್ಲಿ ಮೆಡೆಡ್ವೆಫ್, 1980 ಗಳ ಮಧ್ಯಭಾಗದೊಳಗೆ ಹಿಂದಿನ ಸೋವಿಯೆಟ್ ಯೂನಿಯನ್ನಲ್ಲಿ ನ್ಯೂಕ್ಲಿಯರ್ ಉತ್ಪಾದಕಗಳ 11 ಗುರುತರವಾದ ಘಟನೆಗಳನ್ನು ಮತ್ತು ಅಮೆರಿಕದಲ್ಲಿ 12 ಘಟನೆಗಳನ್ನು ಪಟ್ಟಿಮಾಡುತ್ತಾರೆ. ಕೊನೆಗೆ ಹೇಳಿರುವ ಘಟನೆಗಳಲ್ಲಿ 1979 ರಲ್ಲಿ ತ್ರೀ ಮೈಲ್ ಐಲೆಂಡ್ನಲ್ಲಿ ನಡೆದ ತಲ್ಲಣಗೊಳಿಸುವ ಅಪಘಾತ ಸೇರಿದೆ. ಆ ಸಂಭವದ ಕುರಿತು ಶ್ರೀ ಮೆಡೆಡ್ವೆಫ್ ಗಮನಿಸುವುದು: “ಇದು ನ್ಯೂಕ್ಲಿಯರ್ ಶಕ್ತಿಯ ವಿರುದ್ಧ ಮೊದಲ ಗುರುತರವಾದ ಪೆಟ್ಟನ್ನು ಹೊಡೆದು ನ್ಯೂಕ್ಲಿಯರ್ ಶಕ್ತಿಯ ಸ್ಥಾವರಗಳ ಭದ್ರತೆಯ ಕುರಿತು ಅನೇಕರ—ಎಲ್ಲರ ಅಲ್ಲ—ಮನಸ್ಸಿನಲ್ಲಿದ್ದ ಭ್ರಾಂತಿಗಳನ್ನು ಹೋಗಲಾಡಿಸಿತು.”
ದುರ್ಘಟನೆಗಳು ಇನ್ನೂ ಏಕೆ ನಡೆಯುತ್ತಿವೆಯೆಂದು ಇದು ತೋರಿಸುತ್ತದೆ. ರಷ್ಯದಲ್ಲಿ, 1992 ರಲ್ಲಿ ಅವು ಬಹುಮಟ್ಟಿಗೆ 20 ಪ್ರತಿಶತ ವೃದ್ಧಿಯಾದವು. ಆ ವರ್ಷದ ಮಾರ್ಚ್ನಲ್ಲಿ, ರಷ್ಯದ ಸೆಂಟ್ ಪೀಟರ್ಸ್ಬರ್ಗಿನ ಸಾಸ್ನಾವಿ ಬೋರ ಶಕ್ತಿ ಸ್ಥಾವರದಲ್ಲಿ ಈ ಘಟನೆಗಳಲ್ಲಿ ಒಂದು ಸಂಭವಿಸಿದ ಬಳಿಕ, ಈಶಾನ್ಯ ಇಂಗ್ಲೆಂಡಿನಲ್ಲಿ ವಿಕಿರಣ ಮಟ್ಟಗಳು 50 ಪ್ರತಿಶತದಷ್ಟು ಏರಿ, ಎಸ್ಟಾನಿಯ ಮತ್ತು ದಕ್ಷಿಣ ಫಿನ್ಲೆಂಡಿನಲ್ಲಿ ಅಂಗೀಕಾರಾರ್ಹವಾದ ಅಧಿಕತಮ ಮಟ್ಟಕ್ಕಿಂತ ಇಮ್ಮಡಿಗೆ ಮುಟ್ಟಿದವು. ನ್ಯೂಕ್ಯಾಸ್ಲ್ ವಿಶ್ವವಿದ್ಯಾಲಯದ ಪ್ರೊಫೆಸರ್ ಜಾನ್ ಅರ್ಕರ್ಟ್ ಒಪ್ಪಿಕೊಳ್ಳುವುದು: “ಉನ್ನತಿಯನ್ನು ಆಗಿಸಿದ್ದು ಸಾಸ್ನಾವಿ ಬೋರ ಎಂಬುದನ್ನು ನಾನು ರುಜುಪಡಿಸಲಾರೆ—ಆದರೆ ಸಾಸ್ನಾವಿ ಬೋರ ಅಲ್ಲದಿದ್ದರೆ ಇನ್ನಾವುದು?”
ಕೆಲವು ತಜ್ಞರು, ಚರ್ನಾಬಲ್ ಶೈಲಿಯ ಉತ್ಪಾದಕಗಳು ತಪ್ಪು ವಿನ್ಯಾಸವುಳ್ಳದ್ದಾಗಿವೆ ಮತ್ತು ಅವನ್ನು ನಡೆಸುವುದು ತೀರ ಅಪಾಯಕರವೆಂದು ವಾದಿಸುತ್ತಾರೆ. ಆದರೂ ವಿದ್ಯುತ್ತಿನ ಭಾರಿ ಹಕ್ಕುಕೇಳಿಕೆಗಳನ್ನು ಭರ್ತಿ ಮಾಡುವಂತೆ ಸಹಾಯ ಮಾಡಲು ಹನ್ನೆರಡಕ್ಕಿಂತಲೂ ಹೆಚ್ಚು ಉತ್ಪಾದಕಗಳನ್ನು ಇನ್ನೂ ಉಪಯೋಗಿಸಲಾಗುತ್ತದೆ. ಕೆಲವು ಉತ್ಪಾದಕ ಚಾಲಕರ ಮೇಲೆ ವಿದ್ಯುತ್ತಿನ ಒಟ್ಟು ತಯಾರಿಯನ್ನು ಹೆಚ್ಚಿಸಲು ಅವರು ಭದ್ರತೆ ಕೊಡುವ ನಿಷ್ಪರಿಣಾಮ ವ್ಯವಸ್ಥೆಯನ್ನು ಮುಚ್ಚಿಬಿಡುತ್ತಾರೆಂಬ ಅಪವಾದವನ್ನೂ ಹಾಕಲಾಗಿದೆ. ಇಂತಹ ವರದಿಗಳು, ತನ್ನ ವಿದ್ಯುಚ್ಫಕ್ತಿಯಲ್ಲಿ 70 ಪ್ರತಿಶತದಷ್ಟನ್ನು ನ್ಯೂಕ್ಲಿಯರ್ ಸ್ಥಾವರಗಳಿಂದ ಉಪಯೋಗಿಸುವ ಫ್ರಾನ್ಸ್ನಂತಹ ದೇಶಗಳನ್ನು ಗಾಬರಿಗೊಳಿಸುತ್ತವೆ. ಇನ್ನೊಂದು “ಚರ್ನಾಬಲ್” ಆಗುವಲ್ಲಿ ಫ್ರಾನ್ಸ್ನಲ್ಲಿರುವ ಅನೇಕ ಸ್ಥಾವರಗಳು ಕಾಯಂ ಆಗಿ ಮುಚ್ಚುವ ನಿರ್ಬಂಧಕ್ಕೊಳಗಾಗಬೇಕಾದೀತು.
“ಸುಭದ್ರ” ಉತ್ಪಾದಕಗಳು ಸಹ ಅವು ಹಳತಾದಂತೆ ಅಭದ್ರವಾಗುತ್ತವೆಂದು ವ್ಯಕ್ತವಾಗುತ್ತದೆ. ನಿಯತ ಕ್ರಮದ ಸುರಕ್ಷಿತತೆಯ ಪರೀಕ್ಷೆಯನ್ನು ಮಾಡುವಾಗ, 1993ರ ಆರಂಭದಲ್ಲಿ, ಜರ್ಮನಿಯ ಅತಿ ಹಳೆಯ ಉತ್ಪಾದಕಗಳಲ್ಲಿ ಒಂದಾದ ಬ್ರುನ್ಸ್ಬೂಟಲ್ನ ಉತ್ಪಾದಕದ ಉಕ್ಕಿನ ಕೊಳವೆಯಲ್ಲಿ ಒಂದು ನೂರಕ್ಕೂ ಹೆಚ್ಚು ಬಿರಿತಗಳನ್ನು ಕಂಡುಹಿಡಿಯಲಾಯಿತು. ಇದೇ ರೀತಿಯ ಬಿರಿತಗಳನ್ನು ಫ್ರಾನ್ಸ್ ಮತ್ತು ಸ್ವಿಟ್ಸರ್ಲೆಂಡ್ಗಳ ಉತ್ಪಾದಕಗಳಲ್ಲಿಯೂ ಕಂಡುಹಿಡಿಯಲಾಗಿದೆ. ಜಪಾನಿನ ಸ್ಥಾವರವೊಂದರಲ್ಲಿ ಪ್ರಥಮ ಗುರುತರವಾದ ಅಪಘಾತವು 1991 ರಲ್ಲಿ ನಡೆಯಿತು. ಅದು ಹಳೆತಾಗಿದ್ದುದು ಸಹಾಯಕ ಕಾರಣವಾಗಿದ್ದಿರುವ ಸಾಧ್ಯತೆಯಿದೆ. ಇದು ಅಮೆರಿಕದ ಉತ್ಪಾದಕಗಳಿಗೆ ಅಶುಭವನ್ನು ಸೂಚಿಸುತ್ತದೆ. ಅಲ್ಲಿ ವ್ಯಾಪಾರ ಸಂಸ್ಥೆಗಳ ಉತ್ಪಾದಕಗಳಲ್ಲಿ ಮೂರರಲ್ಲಿ ಎರಡಂಶ ಹತ್ತಕ್ಕಿಂತಲೂ ಹೆಚ್ಚು ವರ್ಷ ಹಳೆಯದ್ದಾಗಿವೆ.
ನ್ಯೂಕ್ಲಿಯರ್ ಉತ್ಪಾದಕ ಅಪಘಾತಗಳು ಎಲ್ಲಾದರೂ ಯಾವ ಸಮಯದಲ್ಲಾದರೂ ನಡೆಯಬಲ್ಲವು. ಎಷ್ಟು ಹೆಚ್ಚು ಉತ್ಪಾದಕಗಳಿವೆಯೊ, ಅಷ್ಟು ಹೆಚ್ಚು ಬೆದರಿಕೆ; ಉತ್ಪಾದಕವು ಎಷ್ಟು ಹಳೆಯದ್ದೊ, ಅಷ್ಟು ಹೆಚ್ಚು ಅಪಾಯ. ಒಂದು ವಾರ್ತಾಪತ್ರ ಇವುಗಳಿಗೆ ಟಿಕ್ಟಿಕ್ಕೆನ್ನುವ ಟೈಮ್ ಬಾಂಬುಗಳೆಂದೂ ರೇಡಿಯೊ ವಿಕಿರಣ ಸಾವಿನ ಬೋನುಗಳೆಂದೂ ಅಡ್ಡಹೆಸರಿಟ್ಟದ್ದು ಕಾರಣರಹಿತವಾಗಿ ಅಲ್ಲ.
ಅವರು ಕಚಡವನ್ನು ಎಲ್ಲಿ ಬಿಸಾಡಬೇಕು?
ಫ್ರೆಂಚ್ ಆಲ್ಪ್ಸ್ನ ಒಂದು ನದೀಬದಿಯ ವಿಹಾರ ಸ್ಥಳಕ್ಕೆ ಬೇಲಿ ಹಾಕಿ ಪೊಲೀಸರು ಅದನ್ನು ಕಾಯುವುದನ್ನು ನೋಡಿ ಜನರು ಇತ್ತೀಚೆಗೆ ಆಶ್ಚರ್ಯಪಟ್ಟರು. ದಿ ಯೂರೋಪಿಯನ್ ವಾರ್ತಾಪತ್ರ ವಿವರಿಸಿದ್ದು: “ಒಬ್ಬ ಸ್ಥಳಿಕ ಸ್ತ್ರೀ ಎರಡು ತಿಂಗಳುಗಳ ಹಿಂದೆ ಬೆರಿಲೀಯಮ್ ವಿಷದಿಂದ ಸತ್ತ ಬಳಿಕ ಆಜ್ಞಾಪಿಸಲ್ಪಟ್ಟ ನಿಯತಕ್ರಮದ ಪರೀಕ್ಷೆಯು ಈ ವಿಹಾರ ಸ್ಥಳದ ಅಣು ವಿಕಿರಣದ ಮಟ್ಟವು ಸುತ್ತಮುತ್ತಲಿನ ಪ್ರದೇಶಗಳಿಗಿಂತ 100 ಪಾಲುಗಳಷ್ಟು ಹೆಚ್ಚಾಗಿತ್ತೆಂದು ತೋರಿಸಿತು.”
ವಿವಿಧ ಕಾರ್ಯ ವಿಧಾನಗಳಿಂದ ಉತ್ಪಾದಿಸಲ್ಪಡುವ ಗಮನಾರ್ಹವಾಗಿ ಹಗುರವಾಗಿರುವ ಬೆರಿಲೀಯಮ್ ಲೋಹವನ್ನು ವಿಮಾನ ಉದ್ಯಮದಲ್ಲಿ ಉಪಯೋಗಿಸಲಾಗುತ್ತದೆ, ಮತ್ತು ವಿಷಯಸ್ಫುರಣ (ಇರೇಡಿಯೇಟ್) ಮಾಡಿದಾಗ ಅದನ್ನು ನ್ಯೂಕ್ಲಿಯರ್ ಶಕ್ತಿ ಸ್ಥಾವರಗಳಲ್ಲಿ ಉಪಯೋಗಿಸಲಾಗುತ್ತದೆ. ಬೆರಿಲೀಯಮನ್ನು ಉತ್ಪಾದಿಸುವ ಒಂದು ಕಾರ್ಖಾನೆ ಈ ಅಪಾಯಕರವಾದ ವಿಷಯಸ್ಫುರಣದಿಂದಾಗುವ ಕಚಡವನ್ನು ಈ ವಿಹಾರ ಸ್ಥಳದಲ್ಲಿ ಅಥವಾ ಸಮೀಪ ಬಿಸಾಡಿದಿರ್ದಬೇಕು. “ಬೆರಿಲೀಯಮ್ ಧೂಳಿ, ವಿಷಯಸ್ಫುರಣ ಮಾಡದೆ ಇರುವಾಗಲೂ ಉದ್ಯಮದ ಜ್ಞಾತ ಕಚಡಗಳಲ್ಲಿ ಅತ್ಯಂತ ವಿಷಮಯ ರೂಪಗಳಲ್ಲಿ ಒಂದಾಗಿದೆ,” ಎಂದು ದಿ ಯೂರೋಪಿಯನ್ ಗಮನಿಸಿತು.
ಈ ಮಧ್ಯೆ, 1950 ಗಳ ಆರಂಭದಿಂದ ಹಿಂದಿನ ಸೋವಿಯೆಟ್ ಯೂನಿಯನ್ ನ್ಯೂಕ್ಲಿಯರ್ ಪ್ರಯೋಗ ನಿವೇಶನವಾಗಿ ಉಪಯೋಗಿಸುತ್ತಿದ್ದ ನೋವಯ ಜೆಮ್ಲೀಯ ಕರಾವಳಿಯ ನೀರುಗಳಲ್ಲಿ, 30 ವರ್ಷಗಳಲ್ಲಿ ಸುಮಾರು 17,000 ಪೆಟ್ಟಿಗೆಗಳ ಅಣು ವಿಕಿರಣ ಕಚಡವನ್ನು ಬಿಸಾಡಲಾಗಿತ್ತು ಎಂದು ವರದಿಯಿದೆ. ಕೂಡಿಕೆಯಾಗಿ, ನ್ಯೂಕ್ಲಿಯರ್ ಜಲಾಂತರ್ಗಾಮಿ ನಾವೆಗಳ ವಿಕಿರಣ ವಿಭಾಗಗಳು ಮತ್ತು ಕಡಮೆ ಪಕ್ಷ 12 ಉತ್ಪಾದಕಗಳ ಭಾಗಗಳನ್ನು ಈ ಅನುಕೂಲವಾಗಿರುವ ಕಚಡದ ತೊಟ್ಟಿಗೆ ಎಸೆಯಲಾಯಿತು.
ಉದ್ದೇಶಪೂರ್ವಕವಾಗಿರಲಿ ಇಲ್ಲದಿರಲಿ, ನ್ಯೂಕ್ಲಿಯರ್ ಮಾಲಿನ್ಯ ಅಪಾಯಕರ. ನಾರ್ವೆಯ ಕರಾವಳಿಯಲ್ಲಿ 1989 ರಲ್ಲಿ ಮುಳುಗಿಹೋದ ಒಂದು ಜಲಾಂತರ್ಗಾಮಿ ನಾವೆಯ ಕುರಿತು ಟೈಮ್ ಎಚ್ಚರಿಸಿದ್ದು: “ಮುಳುಗಿದ ನಾವೆ ಆಗಲೇ ಒಂದು ಕ್ಯಾನ್ಸರ್ ಜನಕ ಸಮಸ್ಥಾನಿ (ಐಸೊಟೋಪ್) ಯನ್ನು ಹೊರಸೂಸುತ್ತಿದೆ. ಇಷ್ಟರ ವರೆಗೆ ಈ ಸೋರುವಿಕೆ ಜಲ ಜೀವಿಗಳಿಗಾಗಲಿ, ಮಾನವ ಆರೋಗ್ಯಕ್ಕಾಗಲಿ ಹಾನಿ ಮಾಡಲು ತೀರ ಚಿಕ್ಕ ಪ್ರಮಾಣದಲ್ಲಿದೆ ಎಂದು ಎಣಿಸಲಾಗುತ್ತದೆ. ಆದರೆ ಕಾಮ್ಸಮಾಲ್ಯೆಟ್ಸ್ ಎಂಬ ಈ ನಾವೆ, ನಶಿಸಲು 24,000 ವರ್ಷಗಳು ಬೇಕಾಗುವ ಮತ್ತು ಒಂದೇ ಕಣವು ಒಬ್ಬನನ್ನು ಕೊಲ್ಲಲು ಸಾಧ್ಯವಿರುವಷ್ಟು ವಿಷಮಯವಾಗಿರುವ 13 ಕಿಲೊಗ್ರ್ಯಾಮ್ ಪ್ಲುಟೋನಿಯಮ್ ಇರುವ ಎರಡು ನ್ಯೂಕ್ಲಿಯರ್ ಟಾರ್ಪೀಡೊ ಸ್ಫೋಟಕಗಳನ್ನು ಒಯ್ಯುತ್ತಿತ್ತು. ಈ ಪ್ಲುಟೋನಿಯಮ್ ನೀರಿಗೆ ಸೇರಿ 1994 ರಷ್ಟೂ ಬೇಗನೆ, ಸಾಗರದ ವ್ಯಾಪಕ ಭಾಗಗಳನ್ನು ಮಲಿನಗೊಳಿಸಬಲ್ಲದೆಂದು ರಷ್ಯನ್ ಪರಿಣತರು ಎಚ್ಚರಿಸಿದರು.”
ಅಣು ವಿಕಿರಣ ಕಚಡವನ್ನು ಬಿಸಾಕುವ ಸಮಸ್ಯೆಯು ಫ್ರಾನ್ಸ್ ಮತ್ತು ರಷ್ಯಗಳಿಗೆ ಅದ್ವಿತೀಯವಲ್ಲವೆಂಬುದು ನಿಶ್ಚಯ. ಅಮೆರಿಕದಲ್ಲಿ, “ಬೆಟ್ಟಗಳಷ್ಟು ಅಣು ವಿಕಿರಣ ಕಚಡವಿದೆ ಮತ್ತು ಅದನ್ನು ಶೇಖರಿಸುವ ಕಾಯಂ ನಿವೇಶನವಿಲ್ಲ,” ಎಂದು ಟೈಮ್ ವರದಿಸುತ್ತದೆ. ಈ ಮಾರಕ ಪದಾರ್ಥಗಳ ಹತ್ತು ಲಕ್ಷ ಪೀಪಾಯಿಗಳು ತಾತ್ಕಾಲಿಕ ಉಗ್ರಾಣದಲ್ಲಿದ್ದು, “ತಪ್ಪಾಗಿ ನಿರ್ವಹಿಸಲ್ಪಡುವುದರಿಂದ ಬರುವ ನಷ್ಟ, ಕಳ್ಳತನ ಮತ್ತು ಪರಿಸರೀಯ ಹಾನಿಯ ಅಪಾಯ” ಸದಾ ಉಪಸ್ಥಿತವಾಗಿದೆ.
ಈ ಅಪಾಯವನ್ನು ಚಿತ್ರೀಕರಿಸಲಿಕ್ಕಾಗಿಯೋ ಎಂಬಂತೆ, ಎಪ್ರಿಲ್ 1993 ರಲ್ಲಿ ಸೈಬೀರಿಯದ ಟಾಮ್ಸ್ಕ್ನಲ್ಲಿ ಹಿಂದಿನ ಒಂದು ಶಸ್ತ್ರ ಸ್ಥಾವರದಲ್ಲಿ, ಒಂದು ನ್ಯೂಕ್ಲಿಯರ್ ಕಚಡ ತೊಟ್ಟಿಯು ಸ್ಫೋಟಗೊಂಡು, ಎರಡನೆಯ ಚರ್ನಾಬಲ್ನ ಬೃಹಚ್ಫಾಯೆಯನ್ನು ಎಬ್ಬಿಸಿತು.
ನ್ಯೂಕ್ಲಿಯರ್ ಬೆದರಿಕೆ ಅಂತ್ಯಗೊಂಡಿದೆಯೆಂಬ ಭಾವನೆಯ ಆಧಾರದ ಮೇರೆಗೆ ಮಾಡುವ ಶಾಂತಿ ಮತ್ತು ಭದ್ರತೆಯ ಯಾವ ಕೂಗುಗಳೂ ಸಾಧಾರವುಳ್ಳವುಗಳಲ್ಲವೆಂಬುದು ವ್ಯಕ್ತ. ಆದರೂ ಶಾಂತಿ ಮತ್ತು ಭದ್ರತೆಗಳು ನಿಕಟ ಇವೆ. ನಮಗೆ ಹೇಗೆ ಗೊತ್ತು?
[ಪುಟ 4 ರಲ್ಲಿರುವ ಚೌಕ]
ನ್ಯೂಕ್ಲಿಯರ್ ಶಕ್ತಿಗಳು
12 ಮತ್ತು ಇನ್ನೂ ಹೆಚ್ಚುತ್ತಿವೆ
ಘೋಷಿತ ಅಥವಾ ವಸ್ತುತಃ ದೇಶಗಳು: ಬೆಲಾರೂಸ್, ಬ್ರಿಟನ್, ಚೈನಾ, ಫ್ರಾನ್ಸ್, ಭಾರತ, ಇಸ್ರಾಯೇಲ್, ಕಜಾಕ್ಸ್ತಾನ್, ಪಾಕಿಸ್ತಾನ, ರಷ್ಯ, ದಕ್ಷಿಣ ಆಫ್ರಿಕ, ಯುಕ್ರೇನ್, ಯುನೈಟೆಡ್ ಸ್ಟೇಟ್ಸ್
ಸಂಭಾವ್ಯ ದೇಶಗಳು: ಅಲೀರ್ಜಿಯ, ಆರ್ಜೆಂಟೀನ, ಬ್ರೆಜಿಲ್, ಇರಾನ್, ಇರಾಕ್, ಲಿಬಿಯ, ಉತ್ತರ ಕೊರಿಯ, ದಕ್ಷಿಣ ಕೊರಿಯ, ಸಿರಿಯ, ಟಯಿವಾನ್
[ಪುಟ 5 ರಲ್ಲಿರುವ ಚಿತ್ರ]
ನ್ಯೂಕ್ಲಿಯರ್ ಶಕ್ತಿಯ ಶಾಂತ ಸ್ಥಿತಿಯ ಬಳಕೆಯೂ ಅಪಾಯಕರವಾಗಿರಬಲ್ಲದು
[ಕೃಪೆ]
Background: U.S. National Archives photo
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover: Stockman/International Stock
[ಪುಟ 3 ರಲ್ಲಿರುವ ಚಿತ್ರ ಕೃಪೆ]
U.S. National Archives photo