“ನಿಮಗೆ ತೆರಿಗೆಗಳನ್ನು ಸಲ್ಲಿಸಲಿಕ್ಕಿರುವದಾದರೆ, ತೆರಿಗೆಗಳನ್ನು ಸಲ್ಲಿಸಿರಿ”
“ಈ ಲೋಕದಲ್ಲಿ ಮರಣ ಮತ್ತು ತೆರಿಗೆಗಳನ್ನು ಬಿಟ್ಟರೆ ಬೇರೆ ಯಾವದೂ ನಿಶ್ಚಯವಿಲ್ಲ.” ಹೀಗಂದವರು 18 ನೆಯ ಶತಮಾನದ ಅಮೆರಿಕದ ರಾಜ್ಯ ನೀತಿಜ್ಞ ಮತ್ತು ನಿರ್ಮಾಪಕ ಬೆಂಜಮಿನ್ ಫ್ರ್ಯಾಂಕ್ಲಿನ್. ಹಲವಾರು ಸಾರಿ ಉದ್ಧರಿಸಲ್ಪಡುವ ಅವನ ಮಾತುಗಳು, ತೆರಿಗೆಗಳ ಅನಿವಾರ್ಯತೆಯನ್ನು ಮಾತ್ರವಲ್ಲ, ಅವು ಆಹ್ವಾನಿಸುವ ಭೀತಿಯನ್ನು ಸಹ ಪ್ರತಿಬಿಂಬಿಸುತ್ತವೆ. ಅನೇಕ ಜನರಿಗೆ, ಸಾಯುವುದು ಎಷ್ಟು ಹಿಡಿಸುತ್ತದೋ ತೆರಿಗೆ ಸಲ್ಲಿಸುವುದು ಅಷ್ಟೇ ಹಿಡಿಸುತ್ತದೆ.
ತೆರಿಗೆಗಳನ್ನು ಸಲ್ಲಿಸುವದು ಎಷ್ಟು ಅಹಿತಕರವಾಗಿದ್ದರೂ, ಇದು ಯಥಾರ್ಥವಂತ ಕೈಸ್ತರು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಒಂದು ಹಂಗಾಗಿರುತ್ತದೆ. ರೋಮಿನಲ್ಲಿರುವ ಕ್ರೈಸ್ತ ಸಭೆಗೆ ಅಪೊಸ್ತಲ ಪೌಲನು ಬರೆದದ್ದು: “ನೀವು ಒಬ್ಬನಿಗೆ ಏನು ಸಲ್ಲಿಸಬೇಕೋ ಅದನ್ನು ಕೊಡಿರಿ: ನಿಮಗೆ ತೆರಿಗೆಯನ್ನು ಸಲ್ಲಿಸಲಿಕ್ಕಿರುವದಾದರೆ, ತೆರಿಗೆಯನ್ನು ಸಲ್ಲಿಸಿರಿ; ಭೂಕಂದಾಯ ಸಲ್ಲಿಸಲಿಕ್ಕಿರುವದಾದರೆ, ಅದನ್ನು ಸಲ್ಲಿಸಿರಿ; ಗೌರವವನ್ನು ಸಲ್ಲಿಸಬೇಕಾಗಿದ್ದರೆ, ಗೌರವವನ್ನು ಸಲ್ಲಿಸಿರಿ; ಸನ್ಮಾನವನ್ನು ಕೊಡಬೇಕಾದರೆ, ಸನ್ಮಾನವನ್ನು ಕೊಡಿರಿ.” (ರೋಮಾಪುರ 13:7, ನ್ಯೂ ಇಂಟರ್ನ್ಯಾಷನಲ್ ವರ್ಶನ್) ಮತ್ತು ಯೇಸು ಹೀಗಂದಾಗ ಅವನು ನಿರ್ದಿಷ್ಟವಾಗಿ ತೆರಿಗೆಗಳಿಗೆ ಸೂಚಿಸುತ್ತಿದ್ದನು: “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ.”—ಮಾರ್ಕ 12:14, 17.
ಯೆಹೋವನು ಸರಕಾರಿ “ಉಚ್ಚ ಅಧಿಕಾರಿ” ಗಳನ್ನು ಅಸ್ತಿತ್ವದಲ್ಲಿರಲು ಅನುಮತಿಸಿದ್ದಾನೆ ಮತ್ತು ತನ್ನ ಸೇವಕರು ಅವರಿಗೆ ಸಂಬಂಧಿ ಅಧೀನತೆಯಲ್ಲಿರಬೇಕೆಂದು ಆತನು ಅವಶ್ಯಪಡುತ್ತಾನೆ. ಹಾಗಿದ್ದಲ್ಲಿ, ಆತನ ಆರಾಧಕರು ತೆರಿಗೆಗಳನ್ನು ಸಲ್ಲಿಸುವ ಕುರಿತಾಗಿ ದೇವರು ಯಾಕೆ ಅಷ್ಟು ಒತ್ತನ್ನು ಹಾಕುತ್ತಾನೆ? ಪೌಲನು ಮೂರು ಮೂಲಭೂತ ಕಾರಣಗಳನ್ನು ತಿಳಿಸುತ್ತಾನೆ: (1) ಕಾನೂನು ಮುರಿಯುವವರನ್ನು ಶಿಕ್ಷಿಸುವದರಲ್ಲಿ “ಉಚ್ಚ ಅಧಿಕಾರಿ” ಗಳ “ಕೋಪ” (2) ತನ್ನ ತೆರಿಗೆಗಳ ಕುರಿತಾಗಿ ಮೋಸ ಮಾಡಿದರೆ, ಶುದ್ಧವಾಗಿರಲಾರದ ಒಬ್ಬ ಕ್ರೈಸ್ತನ ಮನಸ್ಸಾಕ್ಷಿ; (3) ಈ “ಸಾರ್ವಜನಿಕ ಸೇವಕನು” ಒದಗಿಸುವ ಸೇವೆಗಾಗಿ ಮತ್ತು ಒಂದು ಕ್ರಮದ ಮಟ್ಟವನ್ನು ಕಾಪಾಡುವುದಕ್ಕಾಗಿ ವೇತನ ನೀಡುವ ಅಗತ್ಯ. (ರೋಮಾಪುರ 13:1-7 NW) ಅನೇಕರಿಗೆ ತೆರಿಗೆಯನ್ನು ಸಲ್ಲಿಸಲು ಇಷ್ಟವಿರಲಿಕ್ಕಿಲ್ಲ. ಆದರೂ, ನಿಸ್ಸಂದೇಹವಾಗಿ ಅವರು ಪೋಲಿಸ್ ಅಥವಾ ಅಗ್ನಿಶಾಮಕ ದಳದ ಸಂರಕ್ಷಣೆ, ರಸ್ತೆ ದುರಸ್ತಿ, ಸಾರ್ವಜನಿಕ ಶಾಲೆಗಳು ಮತ್ತು ಅಂಚೆ ವ್ಯವಸ್ಥೆ ಇಲ್ಲದಿರುವ ಒಂದು ಪ್ರದೇಶದಲ್ಲಿ ಜೀವಿಸಲು ಇನ್ನೂ ಕಡಿಮೆ ಇಷ್ಟಪಟ್ಟಾರು. ಅಮೆರಿಕನ್ ನ್ಯಾಯ ಶಾಸ್ತ್ರಜ್ಞ, ಆಲಿವರ್ ವೆಂಡೆಲ್ ಹೋಮ್ಸ್ ಒಮ್ಮೆ ಅದನ್ನು ಹೀಗೆ ಹೇಳಿದರು: “ಸುಸಂಸ್ಕೃತ ಸಮಾಜಕ್ಕಾಗಿ ನಾವು ಪಾವತಿ ಮಾಡುವಂತಹದ್ದೇ ತೆರಿಗೆಯಾಗಿದೆ.”
ದೇವರ ಸೇವಕರಿಗೆ ತೆರಿಗೆಗಳನ್ನು ಸಲ್ಲಿಸುವದು ಏನೂ ಹೊಸ ವಿಷಯವಲ್ಲ. ಪುರಾತನ ಇಸ್ರಾಯೇಲಿನ ನಿವಾಸಿಗಳು ತಮ್ಮ ರಾಜನನ್ನು ಬೆಂಬಲಿಸಲು ಒಂದು ಪ್ರಕಾರದ ತೆರಿಗೆಯನ್ನು ಸಲ್ಲಿಸುತ್ತಿದ್ದರು, ಮತ್ತು ಅವರಲ್ಲಿ ಕೆಲವು ಅಧಿಪತಿಗಳು ನ್ಯಾಯವಲ್ಲದ ತೆರಿಗೆ ವಸೂಲಿಯ ಮೂಲಕ ಜನರ ಮೇಲೆ ಭಾರವಾದ ಹೊರೆಗಳನ್ನು ಹಾಕುತ್ತಿದ್ದರು. ತಮ್ಮ ಮೇಲೆ ದೊರೆತನ ನಡಿಸಿದ ಐಗುಪ್ತ, ಪರ್ಷಿಯ, ಮತ್ತು ರೋಮಿನಂತಹ ಪರದೇಶದ ಶಕಿಗ್ತಳಿಗೂ ಯೆಹೂದ್ಯರು ಕಪ್ಪಗಳನ್ನು ಮತ್ತು ತೆರಿಗೆಗಳನ್ನು ಸಲ್ಲಿಸಿದರು. ಆದುದರಿಂದ ಪೌಲನ ದಿನಗಳಲ್ಲಿದ್ದ ಕ್ರೈಸ್ತರಿಗೆ, ಅವನು ತೆರಿಗೆಯನ್ನು ಸಲ್ಲಿಸುವ ವಿಷಯವನ್ನು ತಿಳಿಸಿದಾಗ ಯಾವುದರ ಕುರಿತಾಗಿ ಮಾತಾಡುತ್ತಿದ್ದನು ಎಂದು ಅವರಿಗೆ ತಿಳಿದಿತ್ತು. ತೆರಿಗೆಯು ಸಮಂಜಸವಾಗಿದ್ದರೂ ಆಗಿಲ್ಲದಿದ್ದರೂ, ಮತ್ತು ಸರಕಾರವು ಈ ಹಣವನ್ನು ಯಾವದೇ ರೀತಿಯಲ್ಲಿ ಉಪಯೋಗಿಸಿದರೂ, ಅವರು ಸಲ್ಲಿಸಬೇಕಾಗಿದ್ದ ಯಾವದೇ ತೆರಿಗೆಯನ್ನು ಅವರು ಸಲ್ಲಿಸಲೇಬೇಕು ಎಂದು ಅವರಿಗೆ ತಿಳಿದಿತ್ತು. ಇಂದು ಕ್ರೈಸ್ತರಿಗೂ ಇದೇ ವಿಷಯವು ಅನ್ವಯಿಸುತ್ತದೆ. ಹಾಗಿದ್ದರೂ, ಈ ತೊಡಕಿನ ಸಮಯಗಳಲ್ಲಿ ನಮ್ಮ ತೆರಿಗೆಗಳನ್ನು ಸಲ್ಲಿಸುವಾಗ ಯಾವ ಸೂತ್ರಗಳು ನಮಗೆ ಮಾರ್ಗದರ್ಶನವನ್ನು ನೀಡಬಹುದು?
ಐದು ಮಾರ್ಗದರ್ಶಕ ಸೂತ್ರಗಳು
ಕ್ರಮಬದ್ಧರಾಗಿರಿ. “ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣ” ನಾಗಿರದ ದೇವರಾದ ಯೆಹೋವನನ್ನು ನಾವು ಸೇವಿಸಿ ಅನುಕರಿಸುತ್ತೇವೆ. (1 ಕೊರಿಂಥ 14:33; ಎಫೆಸ 5:1) ತೆರಿಗೆಗಳನ್ನು ಸಲ್ಲಿಸುವ ವಿಷಯದಲ್ಲಿ ಕ್ರಮಬದ್ಧರಾಗಿರುವದು ಬಹು ಮುಖ್ಯವಾಗಿರುತ್ತದೆ. ನಿಮ್ಮ ರೆಕಾರ್ಡುಗಳು ಪೂರ್ಣವಾಗಿದ್ದು, ನಿಷ್ಕೃಷ್ಟ, ಮತ್ತು ವ್ಯವಸ್ಥಿತವಾಗಿವೆಯೋ? ಸಾಮಾನ್ಯವಾಗಿ, ಒಂದು ದುಬಾರಿಯಾದ ಜೋಡಿಸಿಡುವ ವ್ಯವಸ್ಥೆಯ ಅಗತ್ಯವಿರುವದಿಲ್ಲ. ನಿಮ್ಮ ವಿವಿಧ ಖರ್ಚುಗಳ ವಿವರ ಕೊಡುವ ಪ್ರತಿಯೊಂದು ರೀತಿಯ (ರಸೀತಿಗಳಂತಹ) ರೆಕಾರ್ಡನ್ನು ಹೆಸರಿಸುವ ಒಂದು ಸುತ್ತೋಲೆ ನಿಮಗಿರಬಹುದು. ಪ್ರತಿ ವರ್ಷ ಇವುಗಳನ್ನು ದೊಡ್ಡ ಸುತ್ತೋಲೆಗಳಿಗೆ ಸೇರಿಸಿದರೆ ಸಾಕಾದೀತು. ಒಂದು ವೇಳೆ ಸರಕಾರವು ಹಿಂದಿನ ರೆಕಾರ್ಡುಗಳನ್ನು ಪರೀಕ್ಷಿಸಲು ನಿರ್ಣಯಿಸಬಹುದಾದರ್ದಿಂದ ಅನೇಕ ದೇಶಗಳಲ್ಲಿ ಇಂತಹ ಫೈಲುಗಳನ್ನು ಹಲವಾರು ವರ್ಷಗಳಿಗಾಗಿ ಇಡುವದು ಆವಶ್ಯಕವಾಗಿದೆ. ಆದುದರಿಂದ ಯಾವುದನ್ನೂ ಎಸೆಯುವ ಮುಂಚೆ ಇನ್ನು ಮುಂದೆ ಅದರ ಆವಶ್ಯಕತೆಯಿಲ್ಲವೆಂಬದನ್ನು ಖಚಿತಪಡಿಸಿಕೊಳ್ಳಿರಿ.
ಪ್ರಾಮಾಣಿಕರಾಗಿರಿ. ಪೌಲನು ಬರೆದದ್ದು: “ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ (ಪ್ರಾಮಾಣಿಕರಾಗಿ, NW) ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ನಮ್ಮ ಮನಸ್ಸಿನಿಂದ ಒಳ್ಳೇ ಸಾಕ್ಷಿ (ಪ್ರಾಮಾಣಿಕ ಮನಸ್ಸಾಕ್ಷಿ, NW) ಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ.” (ಇಬ್ರಿಯ 13:18) ಪ್ರಾಮಾಣಿಕರಾಗಿರುವ ಒಂದು ಹೃದಯಪೂರ್ವಕ ಇಚ್ಛೆಯು ನಮ್ಮ ತೆರಿಗೆಗಳನ್ನು ಸಲ್ಲಿಸುವಾಗ ನಾವು ಮಾಡುವ ಪ್ರತಿಯೊಂದು ನಿರ್ಣಯವನ್ನು ಮಾರ್ಗದರ್ಶಿಸಬೇಕು. ಮೊದಲು, ವರದಿಸಲ್ಪಡಬಹುದಾದ ವೇತನದ ಮೇಲೆ ಸಲ್ಲಿಸಬೇಕಾದ ತೆರಿಗೆಗಳನ್ನು ಪರಿಗಣಿಸಿರಿ. ಅನೇಕ ದೇಶಗಳಲ್ಲಿ, ಬಕ್ಷೀಸುಗಳು, ಚಿಲ್ಲರ ಕೆಲಸಗಳು, ಮಾರಾಟಗಳಿಂದ ಪಡೆದಂತಹ—ಹೆಚ್ಚಿನ ವೇತನ ಒಂದು ನಿರ್ದಿಷ್ಟ ಮೊತ್ತವನ್ನು ಮೀರಿದ ಕೂಡಲೇ ತೆರಿಗೆಗೆ ಈಡಾಗುತ್ತದೆ. “ಪ್ರಾಮಾಣಿಕ ಮನಸ್ಸಾಕ್ಷಿ” ಯುಳ್ಳ ಒಬ್ಬ ಕ್ರೈಸ್ತನು ತಾನು ಜೀವಿಸುವಲ್ಲಿ ಯಾವ ರೀತಿಯ ಮತ್ತು ಮೊತ್ತದ ವೇತನಕ್ಕೆ ತಾನು ತೆರಿಗೆಯನ್ನು ಸಲ್ಲಿಸಲು ಹಂಗುಳ್ಳವನಾಗಿದ್ದೇನೆಂಬದನ್ನು ತಿಳಿದುಕೊಳ್ಳುವನು ಮತ್ತು ಅನ್ವಯಿಸುವ ತೆರಿಗೆಯನ್ನು ಸಲ್ಲಿಸುವನು.
ಎರಡನೆಯದಾಗಿ, ವ್ಯವಕಲಿತ ಮೊತ್ತಗಳ ವಿಷಯವಿದೆ. ಸಾಮಾನ್ಯವಾಗಿ ಸರಕಾರಗಳು ತೆರಿಗೆ ಸಲ್ಲಿಸುವವರು ತಮ್ಮ ತೆರಿಗೆ ವಸೂಲಿಮಾಡುವ ಆದಾಯದಿಂದ ಕೆಲವು ಖರ್ಚುಗಳನ್ನು ತೆಗೆದುಬಿಡಲು ಅನುಮತಿಸುತ್ತವೆ. ಈ ವ್ಯವಕಲಿತ ಮೊತ್ತಗಳನ್ನು ಕೇಳಿಕೊಳ್ಳುವಾಗ, ಈ ಅಪ್ರಾಮಾಣಿಕ ಲೋಕದಲ್ಲಿ ಅನೇಕರು “ರಚನಾತ್ಮಕ” ಅಥವಾ “ಕಾಲ್ಪನಿಕ” ರಾಗಿರುವದರಲ್ಲಿ ಯಾವ ಹಾನಿಯನ್ನೂ ಕಾಣುವದಿಲ್ಲ. ಅಮೆರಿಕದಲ್ಲಿ ಒಬ್ಬ ಮನುಷ್ಯನು ತನ್ನ ಹೆಂಡತಿಗಾಗಿ ಒಂದು ದುಬಾರಿ ತುಪ್ಪುಳಿನ (ಫರ್) ಮೇಲಂಗಿಯನ್ನು ಖರೀದಿಸಿ, ಅನಂತರ ಅದರ ಖರ್ಚನ್ನು ಕಳೆಯುವದಕ್ಕಾಗಿ ಅದನ್ನು ಕೆಲಸ ಸ್ಥಳದ “ಅಲಂಕಾರ” ವೆಂದು ತನ್ನ ವ್ಯಾಪಾರ ಸ್ಥಳದಲ್ಲಿ ತೂಗಹಾಕಿದನಂತೆ! ಇನ್ನೊಬ್ಬ ಮನುಷ್ಯನು ತನ್ನ ಮಗಳ ಮದುವೆ ಖರ್ಚುಗಳನ್ನು ವ್ಯಾಪಾರದ ವ್ಯವಕಲಿತ ಮೊತ್ತಗಳಾಗಿ ಕೇಳಿಕೊಂಡನು. ಮತ್ತೊಬ್ಬನು ತನ್ನೊಂದಿಗೆ ತನ್ನ ಹೆಂಡತಿ ಹಲವಾರು ತಿಂಗಳುಗಳಿಗೆ ಪೂರ್ವ ದೇಶಗಳಿಗೆ ಸಂಚರಿಸುವ ಖರ್ಚುಗಳನ್ನು ಕಳೆಯಲು ಪ್ರಯತ್ನಿಸಿದನು. ಆದರೆ ಅವಳು ಮುಖ್ಯವಾಗಿ ಅಲ್ಲಿ ಸಾಮಾಜಿಕ ಮತ್ತು ವಿನೋದದ ಉದ್ದೇಶಗಳಿಗಾಗಿ ಹೋಗಿದ್ದಳು. ಇಂತಹ ಪ್ರಸಂಗಗಳಿಗೆ ಅಂತ್ಯವಿರುವಂತೆ ತೋರುವದಿಲ್ಲ. ಸರಳವಾಗಿ ಹೇಳುವದಾದರೆ, ಯಾವುದು ನಿಜವಾಗಿಯೂ ಒಂದು ವ್ಯಾಪಾರ ವ್ಯವಕಲಿತ ಮೊತ್ತವಾಗಿರುವದಿಲ್ಲವೋ, ಅದನ್ನು ಹಾಗೆ ಕರೆಯುವದು ಸುಳ್ಳಾಡುವಿಕೆಯ—ನಮ್ಮ ದೇವರಾದ ಯೆಹೋವನು, ಅತ್ಯಂತವಾಗಿ ಉಪೇಕ್ಷಿಸುವ—ಒಂದು ರೂಪವಾಗಿದೆ.—ಜ್ಞಾನೋಕ್ತಿ 6:16-19.
ಹುಷಾರಾಗಿರಿ. ಯೇಸು ತನ್ನ ಹಿಂಬಾಲಕರು “ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ” ಆಗಿರುವಂತೆ ಪ್ರೋತ್ಸಾಹಿಸಿದನು. (ಮತ್ತಾಯ 10:16) ಆ ಸಲಹೆಯು ನಮ್ಮ ತೆರಿಗೆ ಸಲ್ಲಿಸುವ ಅಭ್ಯಾಸಗಳಿಗೂ ಚೆನ್ನಾಗಿ ಅನ್ವಯಿಸಬಲ್ಲದು. ನಿರ್ದಿಷ್ಟವಾಗಿ ಅಭಿವೃದ್ಧಿಹೊಂದಿದ ದೇಶಗಳಲ್ಲಿ, ಈ ದಿನಗಳಲ್ಲಿ ಹೆಚ್ಚೆಚ್ಚು ಜನರು ತಮ್ಮ ತೆರಿಗೆಗಳನ್ನು ತಯಾರಿಸಲು ಲೆಕ್ಕವನ್ನಿಡುವ ಒಂದು ಸಂಸ್ಥೆ ಅಥವಾ ಒಬ್ಬ ಕಸಬುದಾರನಿಗೆ ಹಣ ಕೊಡುತ್ತಾರೆ. ಅನಂತರ ಅವರು ಕೇವಲ ಸಹಿ ಹಾಕುತ್ತಾರೆ ಮತ್ತು ಚೆಕ್ಕನ್ನು ಕಳುಹಿಸುತ್ತಾರೆ. ಜ್ಞಾನೋಕ್ತಿ 14:15 ರಲ್ಲಿ ದಾಖಲಿಸಲ್ಪಟ್ಟ ಎಚ್ಚರಿಕೆಯನ್ನು ಪಾಲಿಸಲು ಇದು ಒಂದು ಒಳ್ಳೆಯ ಸಂದರ್ಭವಾಗಿರುವದು: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.”
ತೆರಿಗೆ ಸಲ್ಲಿಸುವವರಲ್ಲಿ ಅನೇಕರು ಸರಕಾರದೊಂದಿಗೆ ತೊಂದರೆಯನ್ನು ಎದುರಿಸಿದ್ದಾರೆ ಯಾಕಂದರೆ ಅವರು ನೀತಿ, ನಿಷ್ಠೆಗಳಿಲ್ಲದ ಲೆಕ್ಕ ಪರೀಕ್ಷಕನ ಅಥವಾ ಅನನುಭವಿ ತೆರಿಗೆ ತಯಾರಿಸುವವನ ‘ಪ್ರತಿ ಮಾತನ್ನೂ ನಂಬಿದರು’. ಚುರುಕುಬುದ್ಧಿಯವರಾಗಿರುವದು ಎಷ್ಟೊಂದು ಉತ್ತಮ! ನೀವು ಯಾವದೇ ದಸ್ತಾವೇಜಿಗೆ ಸಹಿ ಮಾಡುವ ಮುಂಚೆ, ಅದನ್ನು ಜಾಗರೂಕತೆಯಿಂದ ಓದುವ ಮೂಲಕ ನಿಮ್ಮ ಹೆಜ್ಜೆಗಳನ್ನು ಪರಿಗಣಿಸಿರಿ. ಯಾವುದೇ ನಮೂದಿಸುವಿಕೆ, ಬಿಟ್ಟುಬಿಡುವಿಕೆ, ಅಥವಾ ವ್ಯವಕಲನ ನಿಮಗೆ ಅಸಾಮಾನ್ಯವೆಂದು ತೋರಿದರೆ, ವಿಷಯವು ಪ್ರಾಮಾಣಿಕ ಮತ್ತು ಕಾನೂನುಬದ್ಧವಾಗಿದೆ ಎಂದು ನಿಮಗೆ ತೃಪ್ತಿಯಾಗುವ ತನಕ ಅದನ್ನು ವಿವರಿಸುವಂತೆ—ಅಗತ್ಯವಿದ್ದರೆ ಪುನಃ ಪುನಃ—ಮಾಡಿರಿ. ಹಲವಾರು ದೇಶಗಳಲ್ಲಿ ತೆರಿಗೆ ನಿಯಮಗಳು ಅತಿಯಾಗಿ ಜಟಿಲಗೊಂಡಿವೆ ಎಂಬದು ಸತ್ಯ, ಆದರೆ ಸಾಧ್ಯವಿರುವಷ್ಟರ ಮಟ್ಟಿಗೆ, ನೀವು ಸಹಿ ಹಾಕುವ ಮುಂಚೆ ಯಾವುದೇ ವಿಷಯವನ್ನು ಅರ್ಥಮಾಡಿಕೊಳ್ಳುವದು ವಿವೇಕದ ಕ್ರಮವಾಗಿದೆ. ಕೆಲವು ವಿದ್ಯಮಾನಗಳಲ್ಲಿ, ತೆರಿಗೆಯ ನಿಯಮದೊಂದಿಗೆ ಪರಿಚಿತನಾಗಿರುವ ಜೊತೆ ಕ್ರೈಸ್ತನೊಬ್ಬನು ಸ್ವಲ್ಪ ಒಳನೋಟವನ್ನು ನೀಡಬಲ್ಲನು ಎಂದು ನೀವು ಕಂಡು ಹಿಡಿಯಬಹುದು. ವಕೀಲನೋಪಾದಿ ತೆರಿಗೆಯ ವಿಷಯಗಳೊಂದಿಗೆ ವ್ಯವಹರಿಸುವ ಒಬ್ಬ ಕ್ರೈಸ್ತ ಹಿರಿಯನು ಸಂಕ್ಷಿಪ್ತವಾಗಿ ಹೇಳಿದ್ದು: “ನಿಮ್ಮ ಲೆಕ್ಕ ಪರೀಕ್ಷಕನು ವಾಸ್ತವಿಕವಾಗಿರಲಾರದಷ್ಟು ಒಳ್ಳೇದಾಗಿರುವ ಒಂದು ವಿಷಯವನ್ನು ಸೂಚಿಸುವದಾದರೆ, ಅದು ಪ್ರಾಯಶಃ ವಾಸ್ತವವಲ್ಲ!”
ಜವಾಬ್ದಾರಿಯುಳ್ಳವರಾಗಿರಿ. “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು” ಎಂದು ಅಪೊಸ್ತಲ ಪೌಲನು ಬರೆದನು. (ಗಲಾತ್ಯ 6:5) ತೆರಿಗೆಯನ್ನು ಸಲ್ಲಿಸುವ ವಿಷಯಕ್ಕೆ ಬರುವಾಗ, ಪ್ರತಿಯೊಬ್ಬ ಕ್ರೈಸ್ತನು ಪ್ರಾಮಾಣಿಕ ಮತ್ತು ನಿಯಮಬದ್ಧನಾಗಿರುವ ಜವಾಬ್ದಾರಿಯನ್ನು ಹೊರಬೇಕು. ತಮ್ಮ ಆರೈಕೆಯಲ್ಲಿರುವ ಮಂದೆಯನ್ನು ಸಭೆಯ ಹಿರಿಯರು ಉಸ್ತುವಾರಿ ನಡಿಸುವ ಒಂದು ವಿಷಯ ಇದಾಗಿರುವದಿಲ್ಲ. (2 ಕೊರಿಂಥ 1:24 ನ್ನು ಹೋಲಿಸಿರಿ.) ಗಂಭೀರ ತಪ್ಪುಗೈಯುವಿಕೆ, ಪ್ರಾಯಶಃ ಸಮಾಜದಲ್ಲಿ ಅಪನಿಂದೆಯನ್ನು ಒಳಗೂಡುವ ಒಂದು ಸಂಗತಿಯು ಅವರ ಗಮನಕ್ಕೆ ಬಂದ ಹೊರತು, ಅವರು ತಮ್ಮನ್ನು ತೆರಿಗೆಯ ವಿಷಯಗಳಲ್ಲಿ ಒಳಗೂಡಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ, ಕ್ರೈಸ್ತ ವ್ಯಕ್ತಿಯೊಬ್ಬನು ಶಾಸ್ತ್ರೀಯ ಸೂತ್ರಗಳನ್ನು ಅನ್ವಯಿಸುವದರಲ್ಲಿ ಚೆನ್ನಾಗಿ ತರಬೇತುಗೊಳಿಸಲ್ಪಟ್ಟ ತನ್ನ ಮನಸ್ಸಾಕ್ಷಿಯನ್ನು ಬಳಸಲು ಜವಾಬ್ದಾರನಾಗಿರುವ ಒಂದು ಕ್ಷೇತ್ರ ಇದಾಗಿದೆ. (ಇಬ್ರಿಯ 5:14) ಇದರಲ್ಲಿ, ಒಂದು ತೆರಿಗೆ ದಸ್ತಾವೇಜಿಗೆ—ಅದನ್ನು ತಯಾರಿಸಿದವರು ಯಾರೇ ಆಗಿರಲಿ—ಸಹಿ ಹಾಕುವದು, ನೀವು ಆ ದಸ್ತಾವೇಜನ್ನು ಓದಿದ್ದೀರಿ ಮತ್ತು ಅದರಲ್ಲಿ ಇದ್ದ ವಿಷಯವು ಸತ್ಯವೆಂದು ನಂಬುತ್ತೀರೆಂದು ತಿಳಿಸುವ ಒಂದು ಶಾಸನಬದ್ಧ ಹೇಳಿಕೆಯನ್ನು ನಿಶ್ಚಯವಾಗಿ ಸಂಯೋಜಿಸುತ್ತದೆ ಎಂಬದನ್ನು ಅರಿತಿರುವದು ಒಳಗೂಡಿದೆ.a
ದೋಷಾರೋಪಣೆಯಿಲ್ಲದವರಾಗಿರಿ. ಕ್ರೈಸ್ತ ಮೇಲ್ವಿಚಾರಕರು ತಮ್ಮ ಸ್ಥಾನಕ್ಕೆ ಯೋಗ್ಯರಾಗಲು “ದೋಷಾರೋಪಣೆಯಿಲ್ಲದವರಾಗಿರಬೇಕು”. ತದ್ರೀತಿಯಲ್ಲಿ, ದೇವರ ದೃಷ್ಟಿಯಲ್ಲಿ ಇಡೀ ಸಭೆಯು ದೋಷಾರೋಪಣೆಯಿಲ್ಲದ್ದಾಗಿರಬೇಕು. (1 ತಿಮೊಥೆಯ 3:2; ಹೋಲಿಸಿರಿ ಎಫೆಸ 5:27.) ಆದದರಿಂದ ಅವರು, ತೆರಿಗೆಗಳನ್ನು ಸಲ್ಲಿಸುವ ವಿಷಯದಲ್ಲೂ, ಸಮಾಜದಲ್ಲಿ ಒಂದು ಒಳ್ಳೆಯ ಹೆಸರನ್ನು ಕಾಪಾಡಿಕೊಳ್ಳಲು ಪ್ರಯತ್ನಪಡುತ್ತಾರೆ. ಯೇಸು ಕ್ರಿಸ್ತನು ತಾನೇ ಈ ಸಂಬಂಧದಲ್ಲಿ ಮಾದರಿಯನ್ನಿಟ್ಟನು. ಎರಡು ಡ್ರಾಕ್ಮಾಗಳನ್ನು ಒಳಗೂಡುವ ಒಂದು ಚಿಕ್ಕ ವಿಷಯವಾದ, ದೇವಾಲಯದ ತೆರಿಗೆಯನ್ನು ಯೇಸು ಸಲ್ಲಿಸುತ್ತಾನೋ ಎಂದು ಆತನ ಶಿಷ್ಯನಾದ ಪೇತ್ರನನ್ನು ಕೇಳಲಾಯಿತು. ನಿಜವಾಗಿ, ಯೇಸು ಈ ತೆರಿಗೆಯಿಂದ ವಿಮುಕ್ತನಾಗಿದ್ದನು, ಏಕೆಂದರೆ ದೇವಾಲಯವು ಆತನ ತಂದೆಯ ಮನೆಯಾಗಿತ್ತು ಮತ್ತು ಯಾವ ಅರಸನೂ ತನ್ನ ಸ್ವಂತ ಮಗನ ಮೇಲೆ ತೆರಿಗೆಯನ್ನು ವಿಧಿಸುವದಿಲ್ಲ. ಯೇಸು ಹಾಗೆಂದು ಹೇಳಿದರೂ, ಅವನು ಆ ತೆರಿಗೆಯನ್ನು ಸಲ್ಲಿಸಿದನು. ವಾಸ್ತವದಲ್ಲಿ, ಅಗತ್ಯವಿದ್ದ ಹಣವನ್ನು ಉಂಟುಮಾಡಲು ಅವನು ಒಂದು ಅದ್ಭುತವನ್ನೂ ಉಪಯೋಗಿಸಿದನು! ಯಾವುದರಿಂದ ತಾನು ಯೋಗ್ಯವಾಗಿಯೇ ವಿಮುಕ್ತನಾಗಿದ್ದನೋ ಅಂತಹ ತೆರಿಗೆಯನ್ನು ಏಕೆ ಸಲ್ಲಿಸಬೇಕು? ಯೇಸು ತಾನೇ ಹೇಳಿದಂತೆ, “ನಮ್ಮ ವಿಷಯದಲ್ಲಿ ಅವರು ಬೇಸರಗೊಳ್ಳಬಾರದು (ಎಡವಿ ಬೀಳಬಾರದು, NW)” ಎಂಬ ಕಾರಣಕ್ಕಾಗಿಯೇ.—ಮತ್ತಾಯ 17:24-27.b
ದೇವರನ್ನು ಸನ್ಮಾನಿಸುವ ಹೆಸರನ್ನು ಕಾಪಾಡಿಕೊಳ್ಳಿರಿ
ಅಂತೆಯೇ ಇಂದು ಯೆಹೋವನ ಸಾಕ್ಷಿಗಳು ಇತರರನ್ನು ಎಡವಬಾರದೆಂಬದರ ಕುರಿತಾಗಿ ಚಿಂತಿಸುತ್ತಾರೆ. ಹಾಗಿರುವಾಗ ಒಂದು ಇಡೀ ಗುಂಪಿನೋಪಾದಿ, ಅವರು ಪ್ರಾಮಾಣಿಕ, ತೆರಿಗೆಯನ್ನು ಸಲ್ಲಿಸುವ ಪ್ರಜೆಗಳಾಗಿ ಲೋಕವ್ಯಾಪಕವಾಗಿ ಪ್ರಖ್ಯಾತಿಯನ್ನು ಅನುಭವಿಸುವುದು ಆಶ್ಚರ್ಯಜನಕವಲ್ಲ. ಉದಾಹರಣೆಗಾಗಿ, ಸ್ಪ್ಯಾನಿಷ್ ವಾರ್ತಾಪತ್ರಿಕೆ ಎಲ್ ಡಿಆರ್ಯೋ ವಾಸ್ಕೋ ಸ್ಪೆಯ್ನಿನಲ್ಲಿ ವ್ಯಾಪಕವಾಗಿರುವ ತೆರಿಗೆ ತಪ್ಪಿಸಿಕೊಳ್ಳುವಿಕೆಯ ಮೇಲೆ ಹೇಳಿಕೆಯನ್ನಿತ್ತರೂ, ಇದನ್ನು ಗಮನಿಸಿತು: “ಇದಕ್ಕೆ ಒಂದೇ ವಿನಾಯಿತಿ ಯೆಹೋವನ ಸಾಕ್ಷಿಗಳು. ಅವರು ಖರೀದಿಸುವಾಗ ಯಾ ಮಾರುವಾಗ, ಅವರು ಘೋಷಿಸುವ [ಆಸ್ತಿಯ] ಮೌಲ್ಯವು ಸಮಗ್ರ ಸತ್ಯವಾಗಿದೆ.” ತದ್ರೀತಿಯಲ್ಲಿ, ಕೆಲವು ವರ್ಷಗಳ ಹಿಂದೆ ಸಾನ್ ಫ್ರಾನ್ಸಿಸ್ಕೊ ಎಕ್ಸಾಮಿನರ್ ಎಂಬ ಅಮೆರಿಕದ ವಾರ್ತಾಪತ್ರಿಕೆ ಹೀಗೆ ಹೇಳಿಕೆಯನ್ನಿತ್ತಿತ್ತು: “ನೀವು [ಯೆಹೋವನ ಸಾಕ್ಷಿಗಳನ್ನು] ಆದರ್ಶ ಪ್ರಜೆಗಳಾಗಿ ಎಣಿಸಬಹುದು. ಅವರು ತೆರಿಗೆಗಳನ್ನು ಶ್ರದ್ಧೆಯಿಂದ ಸಲ್ಲಿಸುತ್ತಾರೆ, ಅಸ್ವಸ್ಥರನ್ನು ಉಪಚರಿಸುತ್ತಾರೆ, ಅನಕ್ಷರಸತ್ಥೆಯ ವಿರುದ್ಧ ಹೋರಾಡುತ್ತಾರೆ.”
ಕಠಿನ ಪ್ರಯತ್ನದಿಂದ ಗಳಿಸಿದ ಈ ಹೆಸರನ್ನು ಕಳಂಕಗೊಳಿಸಬಹುದಾದ ಯಾವದನ್ನೂ ಮಾಡಲು ಯಾವ ನಿಜ ಕ್ರೈಸ್ತನೂ ಬಯಸಲಾರನು. ಒಂದು ಆಯ್ಕೆಯನ್ನು ಮಾಡುವ ಸಂದರ್ಭ ನಿಮಗಿರುವಲ್ಲಿ, ಸ್ವಲ್ಪ ಹಣವನ್ನು ಉಳಿಸುವದಕ್ಕಾಗಿ ಒಬ್ಬ ತೆರಿಗೆ ಮೋಸಗಾರನೆಂದು ಪ್ರಸಿದ್ಧನಾಗಲು ನೀವು ಸಿದ್ಧರಾಗಿದ್ದೀರೋ? ಇಲ್ಲ. ಖಂಡಿತವಾಗಿ ನೀವು ನಿಮ್ಮ ಒಳ್ಳೇ ಹೆಸರನ್ನು ದೂಷಣೆಗೊಳಪಡಿಸುವ ಮತ್ತು ನಿಮ್ಮ ಮೌಲ್ಯಗಳ ಹಾಗೂ ಯೆಹೋವನ ನಿಮ್ಮ ಆರಾಧನೆಯ ಮೇಲೆಯೂ ಒಂದು ಅಶುಭಕರವಾದ ಪ್ರಭಾವವನ್ನು ಹಾಕುವ ಬದಲು, ಸ್ವಲ್ಪ ಹಣವನ್ನು ಕಳೆದುಕೊಳ್ಳಲು ಸಿದ್ಧರಾಗುವಿರಿ.
ನಿಜವಾಗಿ, ಒಬ್ಬ ನ್ಯಾಯವಂತ, ಪ್ರಾಮಾಣಿಕ ವ್ಯಕ್ತಿಯೋಪಾದಿ ಒಂದು ಹೆಸರನ್ನು ಕಾಪಾಡಿಕೊಳ್ಳುವಾಗ, ನಿಮಗೆ ಕೆಲವು ಸಲ ಹಣ ನಷ್ಟವಾದೀತು. ಪುರಾತನ ಗ್ರೀಕ್ ತತ್ವಜ್ಞಾನಿ ಪ್ಲೇಟೋ ಕೆಲವು 24 ಶತಮಾನಗಳ ಹಿಂದೆ ಅವಲೋಕಿಸಿದಂತೆ: “ಒಂದು ವರಮಾನ ತೆರಿಗೆ ಇರುವಾಗ, ನ್ಯಾಯವಂತ ಮನುಷ್ಯನು ಹೆಚ್ಚನ್ನು ಸಲ್ಲಿಸುವನು ಮತ್ತು ಅನ್ಯಾಯವಂತನು ಅದೇ ಮೊತ್ತದ ಆದಾಯದ ಮೇಲೆ ಕಡಿಮೆ ಸಲ್ಲಿಸುವನು.” ನ್ಯಾಯವಂತ ಮನುಷ್ಯನು ನ್ಯಾಯವಂತನಾಗಿರಲು ಬೆಲೆಯನ್ನು ತೆತ್ತದ್ದಕ್ಕಾಗಿ ಎಂದೂ ವಿಶಾದ ಪಡುವದಿಲ್ಲವೆಂದು ಅವನು ಕೂಡಿಸಬಹುದಿತ್ತು. ಕೇವಲ ಅಂತಹ ಒಂದು ಹೆಸರು ಇರುವದು, ತೆರುವ ಬೆಲೆಗೆ ಯೋಗ್ಯವಾಗಿದೆ. ಈ ಪ್ರಖ್ಯಾತಿಯು ಅವರಿಗೆ ಅಮೂಲ್ಯವಾಗಿದೆ ಏಕಂದರೆ ಅದು ಅವರ ಸ್ವರ್ಗೀಯ ತಂದೆಯನ್ನು ಸನ್ಮಾನಿಸುತ್ತದೆ ಮತ್ತು ಇತರರನ್ನು ತಮ್ಮ ಜೀವಿತದ ಮಾರ್ಗಕ್ಕೆ ಹಾಗೂ ತಮ್ಮ ದೇವರಾದ ಯೆಹೋವನ ಕಡೆಗೆ ಆಕರ್ಷಿಸಲು ಸಹಾಯ ಮಾಡಬಲ್ಲದು.—ಜ್ಞಾನೋಕ್ತಿ 11:30; 1 ಪೇತ್ರ 3:1.
ಆದಾಗ್ಯೂ, ಎಲ್ಲಕ್ಕಿಂತಲೂ ಹೆಚ್ಚಾಗಿ, ನಿಜ ಕ್ರೈಸ್ತರು ಯೆಹೋವನೊಂದಿಗಿನ ತಮ್ಮ ಸ್ವಂತ ಸಂಬಂಧಕ್ಕೆ ಮಹತ್ವವನ್ನು ಕೊಡುತ್ತಾರೆ. ಅವರು ಮಾಡುವದನ್ನೆಲ್ಲಾ ದೇವರು ನೋಡುತ್ತಾನೆ, ಮತ್ತು ಅವನನ್ನು ಮೆಚ್ಚಿಸಲು ಅವರು ಆಶಿಸುತ್ತಾರೆ. (ಇಬ್ರಿಯ 4:13) ಆದುದರಿಂದ, ಅವರು ಸರಕಾರವನ್ನು ಮೋಸಗೊಳಿಸುವ ದುಷ್ಪ್ರೇರಣೆಯನ್ನು ತಿರಸ್ಕರಿಸುತ್ತಾರೆ. ದೇವರು ಪ್ರಾಮಾಣಿಕ, ಯಥಾರ್ಥವಂತ ನಡತೆಯಲ್ಲಿ ಆನಂದಿಸುತ್ತಾನೆ ಎಂದು ಅವರು ಅಂಗೀಕರಿಸುತ್ತಾರೆ. (ಕೀರ್ತನೆ 15:1-3) ಮತ್ತು ಅವರು ಯೆಹೋವನ ಹೃದಯವನ್ನು ಸಂತೋಷಗೊಳಿಸಲು ಬಯಸುವದರಿಂದ, ತಾವು ಸಲ್ಲಿಸಬೇಕಾದ ಎಲ್ಲಾ ತೆರಿಗೆಗಳನ್ನು ಅವರು ಸಲ್ಲಿಸುತ್ತಾರೆ.—ಜ್ಞಾನೋಕ್ತಿ 27:11; ರೋಮಾಪುರ 13:7.
[ಅಧ್ಯಯನ ಪ್ರಶ್ನೆಗಳು]
a ಒಬ್ಬ ಅವಿಶ್ವಾಸಿ ಸಂಗಾತಿಯೊಂದಿಗೆ ಒಂದು ಜಂಟಿ ತೆರಿಗೆ ವರದಿಯನ್ನು ಇಡುವ ಕ್ರೈಸ್ತರಿಗೆ ಇದು ಒಂದು ಪಂಥಾಹ್ವಾನವನ್ನು ಒಡ್ಡಬಹುದು. ಒಬ್ಬ ಕ್ರೈಸ್ತ ಪತ್ನಿ ಶಿರಸ್ಸುತನದ ಸೂತ್ರವನ್ನು ಕೈಸರನ ತೆರಿಗೆ ನಿಯಮಗಳೊಂದಿಗೆ ಸರಿದೂಗಿಸಲು ಶುದ್ಧಾಂತಃಕರಣದಿಂದ ಪ್ರಯತ್ನವನ್ನು ಮಾಡುವಳು. ಆದರೂ, ಅಸತ್ಯವಾದ ಒಂದು ದಸ್ತಾವೇಜಿಗೆ ಬುದ್ಧಿಪೂರ್ವಕವಾಗಿ ಸಹಿ ಹಾಕುವದರ ಸಂಭವನೀಯ ಶಾಸನಬದ್ಧ ಪರಿಣಾಮಗಳ ಕುರಿತಾಗಿ ಅವಳಿಗೆ ತಿಳಿದಿರಬೇಕು.—ಹೋಲಿಸಿರಿ ರೋಮಾಪುರ 13:1; 1 ಕೊರಿಂಥ 11:3.
b ಆಸಕ್ತಿಕರವಾಗಿ, ಯೇಸುವಿನ ಭೂಜೀವಿತದಲ್ಲಿ ಈ ಘಟನೆಯನ್ನು ದಾಖಲಿಸುವ ಒಂದೇ ಸುವಾರ್ತೆಯು ಮತ್ತಾಯನದ್ದಾಗಿದೆ. ಸ್ವತಃ ಒಬ್ಬ ಮಾಜಿ ತೆರಿಗೆ ವಸೂಲಿಮಾಡುವವನೋಪಾದಿ, ಈ ವಿಷಯದಲ್ಲಿ ಯೇಸುವಿನ ಮನೋಭಾವನೆಯು ನಿಸ್ಸಂದೇಹವಾಗಿ ಮತ್ತಾಯನ ಮನಸ್ಸಿನ ಮೇಲೆ ಪ್ರಭಾವ ಬೀರಿತು.