ಹಂಚಿಕೊಳ್ಳಲಿಕ್ಕಿರುವ ಅಮೂಲ್ಯವಾದೊಂದು ನಿಧಿ
ಗ್ಲೋರಿಯ ಮ್ಯಾಲಸ್ಪೀನ ಹೇಳಿದಂತೆ
ಸಿಸಿಲಿಯ ಕಡಲ ತೀರ ಮರೆಯಾದಂತೆ, ನನ್ನ ಗಂಡ ಮತ್ತು ನಾನು, ನಮ್ಮ ಗಮನವನ್ನು ನಮ್ಮ ಗಮ್ಯಸ್ಥಾನವಾದ ಮೆಡಿಟೆರೇನಿಯನ್ ದ್ವೀಪವಾದ ಮಾಲ್ಟದ ಕಡೆಗೆ ಕೇಂದ್ರೀಕರಿಸಲು ತೊಡಗಿದೆವು. ಎಂತಹ ಒಂದು ರೋಮಾಂಚಕ ಪ್ರತೀಕ್ಷೆ! ಹಡಗು ಸಮುದ್ರವನ್ನು ದಾಟಿದಂತೆ, ಮಾಲ್ಟದಲ್ಲಿ ಮೊದಲನೆಯ ಶತಮಾನದಲ್ಲಿ ಅಪೊಸ್ತಲ ಪೌಲನಿಗಾದ ಅನುಭವದ ಕುರಿತು ನಾವು ಯೋಚಿಸಿದೆವು.—ಅ. ಕೃತ್ಯಗಳು 28:1-10.
ವರ್ಷವು 1953 ಆಗಿತ್ತು, ಮತ್ತು ಆಗ ಮಾಲ್ಟ ಯೆಹೋವನ ಸಾಕ್ಷಿಗಳ ಸಾರುವ ಚಟುವಟಿಕೆಗೆ ಮನ್ನಣೆ ನೀಡಿರಲಿಲ್ಲ. ಅದರ ಹಿಂದಿನ ವರ್ಷ ನಾವು ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನಿಂದ ಪದವಿ ಪಡೆದಿದ್ದು, ಇಟಲಿಗೆ ನೇಮಿಸಲ್ಪಟ್ಟಿದ್ದೆವು. ಕೇವಲ ಸ್ವಲ್ಪ ಸಮಯಕ್ಕಾಗಿ ಇಟ್ಯಾಲಿಯನ್ ಭಾಷೆಯನ್ನು ಅಭ್ಯಸಿಸಿದ ಬಳಿಕ, ಮಾಲ್ಟದಲ್ಲಿ ನಮಗಾಗಿ ಏನು ಕಾದಿತ್ತೆಂದು ನೋಡಲು ನಾವು ಆತುರರಾಗಿದ್ದೆವು.
ಒಬ್ಬ ಯುವ ಸ್ತ್ರೀಯಾದ ನಾನು, ವಿದೇಶಿ ಮಿಷನೆರಿಯಾದದ್ದು ಹೇಗೆ? ನಾನು ವಿವರಿಸುತ್ತೇನೆ.
ತಾಯಿಯ ಸ್ಫೂರ್ತಿದಾಯಕ ಮಾದರಿ
1926 ರಲ್ಲಿ ನಮ್ಮ ಕುಟುಂಬವು ಕೆನಡದಲ್ಲಿನ, ಆಂಟೆರೀಯೊದ, ಫೋರ್ಟ್ ಫ್ರಾನ್ಸೆಸ್ನಲ್ಲಿ ಜೀವಿಸುತ್ತಿದ್ದಾಗ, ನನ್ನ ತಾಯಿಯು ಒಬ್ಬ ಬೈಬಲ್ ವಿದ್ಯಾರ್ಥಿಯಿಂದ (ಯೆಹೋವನ ಸಾಕ್ಷಿಗಳು ಆಗ ಗುರುತಿಸಲ್ಪಡುತ್ತಿದ್ದಂತೆ) ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ (ಇಂಗ್ಲಿಷ್ನಲ್ಲಿ) ಎಂಬ ಪುಸ್ತಿಕೆಯನ್ನು ಸ್ವೀಕರಿಸಿದರು. ತೀಕ್ಷೈವಾದ ಆಸಕ್ತಿಯಿಂದ ಅದನ್ನು ಅವರು ಓದಿದರು ಮತ್ತು ಅದೇ ವಾರ, ವಾಚ್ ಟವರ್ ಪತ್ರಿಕೆಯನ್ನು ಉಪಯೋಗಿಸುತ್ತಿದ್ದ ಬೈಬಲ್ ಅಧ್ಯಯನದ ಗುಂಪೊಂದಕ್ಕೆ ಹಾಜರಾದರು. ತಾಯಿಯು ಅತ್ಯಾಸಕ್ತಿಯ ಬೈಬಲ್ ಓದುಗರಾಗಿದ್ದರು, ಮತ್ತು ದೇವರ ರಾಜ್ಯದ ಕುರಿತಾದ ಸಂದೇಶವನ್ನು ಅವರು ತಾವು ಹುಡುಕುತ್ತಿದ್ದ ನಿಧಿಯೋಪಾದಿ ಸ್ವೀಕರಿಸಿದರು. (ಮತ್ತಾಯ 6:33; 13:44) ತಂದೆಯಿಂದ ಬಂದ ಹಿಂಸಾತ್ಮಕ ವಿರೋಧದ ಹೊರತೂ, ಮತ್ತು ಪರಾಮರಿಸಲಿಕ್ಕಾಗಿ ಮೂವರು ಚಿಕ್ಕ ಹುಡುಗಿಯರು ಅವರಿಗಿದ್ದರೂ, ಅವರು ಕಲಿಯುತ್ತಿದ್ದ ವಿಷಯಕ್ಕಾಗಿ ತಮ್ಮ ನಿಲುವನ್ನು ತೆಗೆದುಕೊಂಡರು.
ತಾಯಿಯ ಕದಲದ ನಂಬಿಕೆಯು ಮುಂದಿನ 20 ವರ್ಷಗಳಲ್ಲಿ, ನನ್ನನ್ನು ಮತ್ತು ನನ್ನ ಇಬ್ಬರು ಹಿರಿಯ ಸಹೋದರಿಯರಾದ, ಥೆಲ್ಮ ಮತ್ತು ವೈಓಲರನ್ನು, ನೀತಿಯ ಹೊಸ ಲೋಕವೊಂದರಲ್ಲಿ ಅನಂತ ಜೀವನದ ಅದ್ಭುತಕರವಾದ ನಿರೀಕ್ಷೆಯ ಕುರಿತು ಜಾಗೃತರನ್ನಾಗಿಟ್ಟಿತ್ತು. (2 ಪೇತ್ರ 3:13) ಅವರು ಅನೇಕ ಕಷ್ಟಕರ ಪರೀಕ್ಷೆಗಳನ್ನು ಎದುರಿಸಿದರು, ಆದರೆ ನಾವು ಎಂದಿಗೂ ಅವರ ಆಯ್ದ ಮಾರ್ಗದ ಯುಕ್ತತೆಯ ಬಗ್ಗೆ ಸಂದೇಹ ಪಡಲಿಲ್ಲ.
1931 ರಲ್ಲಿ ನಾನು ಕೇವಲ ಹತ್ತು ವರ್ಷದವಳಾಗಿದ್ದಾಗ, ಅಮೆರಿಕದ ಉತ್ತರ ಮಿನಸೋಟದಲ್ಲಿದ್ದ ಒಂದು ಹೊಲಪ್ರದೇಶಕ್ಕೆ ನಾವು ಸ್ಥಳಾಂತರಿಸಿದೆವು. ಆಗ ನಾವು ಯೆಹೋವನ ಸಾಕ್ಷಿಗಳೊಂದಿಗಿನ ಕ್ರಮವಾದ ಸಹವಾಸದಿಂದ ಪ್ರತ್ಯೇಕಿಸಲ್ಪಟ್ಟೆವಾದರೂ ತಾಯಿಯಿಂದ ಬರುತ್ತಿದ್ದ ಬೈಬಲಿನ ಉಪದೇಶದಿಂದ ಪ್ರತ್ಯೇಕಿಸಲ್ಪಡಲಿಲ್ಲ. ಕಾಲ್ಪೋರ್ಟರ್ರೋಪಾದಿ ಯಾ ಪೂರ್ಣ ಸಮಯದ ಶುಶ್ರೂಷಕರೋಪಾದಿ ಅವರ ಸಮರ್ಪಿತ ಸೇವೆಯು, ಆ ಕೆಲಸದಲ್ಲಿ ಅವರೊಂದಿಗೆ ಸೇರಲು ಬಯಸುವಂತೆ ನನ್ನನ್ನು ಪ್ರೇರೇಪಿಸಿತು. 1938 ರಲ್ಲಿ ನನ್ನ ಇಬ್ಬರು ಸಹೋದರಿಯರು ಮತ್ತು ನಾನು, ಮಿನಸೋಟ ಡಲೂತ್ನಲ್ಲಿ ನಡೆದ ಒಂದು ಸಮ್ಮೇಳನದಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ, ಯೆಹೋವನಿಗೆ ನಮ್ಮ ಸಮರ್ಪಣೆಯನ್ನು ಸಂಕೇತಿಸಿದೆವು.
1938 ರಲ್ಲಿ ನಾನು ಪ್ರೌಢ ಶಾಲೆಯಿಂದ ಪದವಿ ಪಡೆದ ತರುವಾಯ, ಒಬ್ಬ ಪಯನೀಯರ (ಕಾಲ್ಪೋರ್ಟರ್ಗೆ ಹೊಸ ಹೆಸರು) ಳೋಪಾದಿ ನನ್ನನ್ನು ಬೆಂಬಲಿಸಿಕೊಳ್ಳಲು ಸಾಧ್ಯವಾಗುವಂತೆ ಒಂದು ವ್ಯಾಪಾರ ಪಾಠಕ್ರಮವನ್ನು ತೆಗೆದುಕೊಳ್ಳುವಂತೆ ತಾಯಿ ನನ್ನನ್ನು ಉತ್ತೇಜಿಸಿದರು. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು, ತಮ್ಮ ಸ್ವಂತ ದಾರಿಯನ್ನು ಹಿಡಿಯಲು ತಂದೆ ನಿರ್ಣಯಿಸಿದ್ದರಿಂದ, ವಿಶೇಷವಾಗಿ ಇದು ಒಳ್ಳೆಯ ಬುದ್ಧಿವಾದವಾಗಿ ಪರಿಣಮಿಸಿತು.
ನಮ್ಮ ನಿಧಿಯನ್ನು ಪೂರ್ಣ ಸಮಯ ಹಂಚಿಕೊಳ್ಳುವುದು
ಕಟ್ಟಕಡೆಗೆ ನಾನು ಕ್ಯಾಲಿಫೋರ್ನಿಯಕ್ಕೆ ಸ್ಥಳಾಂತರಿಸಿದೆ ಮತ್ತು 1947 ರಲ್ಲಿ, ಸ್ಯಾನ್ ಫ್ರಾನ್ಸಿಸ್ಕೊನಲ್ಲಿ ಪಯನೀಯರ್ ಕಾರ್ಯವನ್ನು ಪ್ರಾರಂಭಿಸಿದೆ. ಲಾಸ್ ಆ್ಯಂಜಲಿಸ್ನಲ್ಲಿ “ಎಲ್ಲ ಜನಾಂಗಗಳ ವಿಸ್ತರಣೆ” ಎಂಬ ಸಮ್ಮೇಳನಕ್ಕಾಗಿ, ಅಧಿವೇಶನಪೂರ್ವ ಕೆಲಸದಲ್ಲಿ ತೊಡಗಿರುವಾಗ, ನಾನು ಫ್ರಾನ್ಸಿಸ್ ಮ್ಯಾಲಸ್ಪೀನರನ್ನು ಭೇಟಿಯಾದೆ. ಮಿಷನೆರಿ ಕೆಲಸದ ನಮ್ಮ ಪರಸ್ಪರ ಗುರಿಯು ಒಂದು ಪ್ರೀತಿಯ ಸಂಬಂಧದ ಆರಂಭಕ್ಕೆ ನಡೆಸಿತು. ನಾವು 1949 ರಲ್ಲಿ ಮದುವೆಯಾದೆವು.
ಸಪ್ಟಂಬರ 1951 ರಲ್ಲಿ, ಫ್ರಾನ್ಸಿಸ್ ಮತ್ತು ನಾನು ಗಿಲ್ಯಡ್ನ 18 ನೆಯ ತರಗತಿಗೆ ಆಮಂತ್ರಿಸಲ್ಪಟ್ಟೆವು. ಐದು ತಿಂಗಳುಗಳ ತೀವ್ರವಾದ ತರಬೇತಿಯ ನಂತರ, ಪದವಿ ಪಡೆಯುವ ದಿನ, 1952 ಫೆಬ್ರವರಿ 10 ರಂದು, ನಮ್ಮನ್ನು ಕಳುಹಿಸಲಾಗುತ್ತಿದ್ದ ದೇಶಗಳ ಹೆಸರುಗಳು ವರ್ಣಾನುಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ನೇಥನ್ ಏಚ್. ನಾರ್ ಅವರಿಂದ ಗಟ್ಟಿಯಾಗಿ ಓದಿಹೇಳಲಾಯಿತು. “ಇಟಲಿ, ಸಹೋದರ ಮತ್ತು ಸಹೋದರಿ ಮ್ಯಾಲಸ್ಪೀನ,” ಎಂದು ಅವರು ಹೇಳಿದಾಗ, ನಾವು ಆಗಲೇ ನಮ್ಮ ಪ್ರವಾಸವನ್ನು ಊಹಿಸಿಕೊಳ್ಳುತ್ತಿದೆವ್ದು!
ಕೆಲವು ವಾರಗಳ ನಂತರ, ಇಟಲಿಯ ಜೆನೋವಾಕ್ಕೆ ಹತ್ತು ದಿನದ ಪ್ರಯಾಣಕ್ಕಾಗಿ ನಾವು ನ್ಯೂ ಯಾರ್ಕ್ನಲ್ಲಿ ಹಡಗು ಹತ್ತಿದೆವು. ನಮ್ಮನ್ನು ಬೀಳ್ಕೊಡಲು ಬ್ರೂಕ್ಲಿನ್ ಮುಖ್ಯ ಕಾರ್ಯಾಲಯದ ಸಿಬ್ಬಂದಿಯವರಾದ, ಜೊವಾನಿ ಡೇಚೆಕ ಮತ್ತು ಮ್ಯಾಕ್ಸ್ ಲಾರ್ಸನ್ ಹಡಗುಕಟ್ಟೆಯ ಮೇಲೆ ನಿಂತಿದ್ದರು. ಜೆನೋವಾದಲ್ಲಿ ನಾವು, ದೇಶದೊಳಗೆ ಪ್ರವೇಶವನ್ನು ಪಡೆಯುವುದರ ಜಟಿಲತೆಗಳೊಂದಿಗೆ ಪರಿಚಿತರಾಗಿದ್ದ ಮಿಷನೆರಿಗಳಿಂದ ಸ್ವಾಗತಿಸಲ್ಪಟ್ಟೆವು.
ನಮ್ಮ ಸುತ್ತಲೂ ಇದ್ದ ಎಲ್ಲ ವಿಷಯಗಳಿಂದ ಉತ್ತೇಜಿತರಾಗಿದ್ದ ನಾವು ಬಲೋನ್ಯಗೆ ರೈಲುಗಾಡಿಯೊಂದನ್ನು ಹತ್ತಿದೆವು. ತಲಪಿದಾಗ ನಮ್ಮ ವೀಕ್ಷಣೆಯು, II ನೆಯ ಲೋಕ ಯುದ್ಧದ ಬಾಂಬುಗಳಿಂದ ಇನ್ನೂ ವಿಕಾರಗೊಂಡಿದ್ದ ಒಂದು ನಗರದ್ದಾಗಿತ್ತು. ಆದರೆ ಬೆಳಗ್ಗಿನ ವಾತಾವರಣವನ್ನು ಆವರಿಸುವ ಹುರಿಯುವ ಕಾಫಿಯ ತಡೆಯಲಾಗದ ಸುವಾಸನೆ ಮತ್ತು ಎಣಿಕೆಯಿಲ್ಲದ ರೀತಿಯ ಪಾಸಗ್ಟಳಿಗಾಗಿ ತಯಾರಿಸಲಾಗುತ್ತಿರುವ ಬಲು ಸೊಗಸಾದ ಸಾಸ್ (ಗೊಜ್ಜು) ಗಳ ಮಸಾಲೆಯ ಪರಿಮಳದಂತಹ ಅನೇಕ ಮನೋಹರವಾದ ವಿಷಯಗಳು ಕೂಡ ಇದ್ದವು.
ಗುರಿಯೊಂದನ್ನು ಪೂರೈಸುವುದು
ಕಂಠಪಾಠಮಾಡಲಾದ ಒಂದು ನಿರೂಪಣೆಯೊಂದಿಗೆ ನಾವು ಶುಶ್ರೂಷೆಯಲ್ಲಿ ಆರಂಭಿಸಿದೆವು, ಮತ್ತು ಸಂದೇಶವು ಸ್ವೀಕರಿಸಲ್ಪಡುವ ತನಕ ಯಾ ಬಾಗಿಲು ಮುಚ್ಚಲ್ಪಡುವ ತನಕ ನಾವು ನಿರೂಪಣೆಯನ್ನು ಪುನರಾವರ್ತಿಸಿದೆವು. ನಮ್ಮನ್ನು ನಾವು ವ್ಯಕ್ತಪಡಿಸಿಕೊಳ್ಳಬೇಕೆಂಬ ಬಯಕೆಯು ಭಾಷೆಯನ್ನು ಶ್ರಮಶೀಲರಾಗಿ ಅಭ್ಯಸಿಸುವಂತೆ ನಮ್ಮನ್ನು ಪ್ರಚೋದಿಸಿತು. ನಾಲ್ಕು ತಿಂಗಳ ನಂತರ, ನೇಪಲ್ಸ್ನಲ್ಲಿದ್ದ ಒಂದು ಹೊಸ ಮಿಷನೆರಿ ಗೃಹಕ್ಕೆ ನಾವು ನೇಮಿಸಲ್ಪಟ್ಟೆವು.
ಈ ದೊಡ್ಡ ನಗರವು ಅದರ ಅದ್ಭುತಕರವಾದ ನೋಟಗಳಿಗೆ ಹೆಸರುವಾಸಿಯಾಗಿದೆ. ಅಲ್ಲಿ ನಮ್ಮ ಸೇವೆಯನ್ನು ನಾವು ಆನಂದಿಸಿದೆವು, ಆದರೆ ಇನ್ನೊಂದು ನಾಲ್ಕು ತಿಂಗಳಿನ ತರುವಾಯ, ನನ್ನ ಗಂಡನು ಸರ್ಕಿಟ್ ಯಾ ಸಂಚರಣ ಕೆಲಸಕ್ಕೆ—ರೋಮ್ನಿಂದ ಸಿಸಿಲಿಯ ವರೆಗೆ ಇರುವ ಸಭೆಗಳನ್ನು ಸಂದರ್ಶಿಸಲು—ನೇಮಿಸಲ್ಪಟ್ಟರು. ಸಕಾಲದಲ್ಲಿ, ನಾವು ಮಾಲ್ಟ ಮತ್ತು ಉತ್ತರ ಆಫ್ರಿಕದಲ್ಲಿರುವ ಲಿಬೀಯವನ್ನೂ ಸಂದರ್ಶಿಸಿದೆವು.
ಆ ವರ್ಷಗಳಲ್ಲಿ ನೇಪಲ್ಸ್ನಿಂದ ಸಿಸಿಲಿಯ ವರೆಗಿನ ರೈಲುಗಾಡಿಯ ಸಂಚಾರಗಳು ಶಾರೀರಿಕ ತಾಳ್ಮೆಯ ಪರೀಕೆಯ್ಷಾಗಿದ್ದವು. ಕಿಕ್ಕಿರಿದು ತುಂಬಿರುವ ಒಂದು ರೈಲುಗಾಡಿಯನ್ನು ನಾವು ಹತ್ತುತ್ತಿದ್ದೆವು ಮತ್ತು ಕೆಲವೊಮ್ಮೆ ಆರರಿಂದ ಎಂಟು ತಾಸುಗಳ ವರೆಗೆ ಜನಸಮೂಹವಿದ್ದ ದಾಟುದಾರಿಗಳಲ್ಲಿ ನಿಲ್ಲುತ್ತಿದ್ದೆವು. ಹಾಗಿದ್ದರೂ, ನಮ್ಮ ಸುತ್ತಲೂ ಇರುವ ಜನರನ್ನು ಪರಿಶೀಲನ ಮಾಡಲು ಒಂದು ಉತ್ತಮ ಅವಕಾಶವನ್ನು ಅದು ನಮಗೆ ಒದಗಿಸಿತು. ಅನೇಕ ವೇಳೆ ಮನೆಯಲ್ಲಿ ತಯಾರಿಸಿದ ಮದ್ಯದ ಒಂದು ದೊಡ್ಡ ಕಿರುಕತ್ತಿನ ಸೀಸೆಯು ಅದರ ಯಜಮಾನನಿಗೆ ಆಸನವಾಗಿ ಕಾರ್ಯನಡೆಸಿತು. ಮತ್ತು ಆ ಯಜಮಾನನು ದೀರ್ಘವಾದ ಪ್ರಯಾಣದ ಸಮಯದಲ್ಲಿ ತನ್ನ ಬಾಯಾರಿಕೆಯನ್ನು ತೀರಿಸಲು ಕೆಲವೊಮ್ಮೆ ಅದರಲ್ಲಿರುವ ಮದ್ಯವನ್ನು ಕುಡಿಯುತ್ತಿದ್ದನು. ಸ್ನೇಹಪರ ಪ್ರಯಾಣಿಕರು ಅನೇಕ ವೇಳೆ ನಮ್ಮೊಂದಿಗೆ ತಮ್ಮ ರೊಟ್ಟಿ ಮತ್ತು ಸಲಾಮಿ—ಒಂದು ಬಗೆಯ ಮಾಂಸಭಕ್ಷ್ಯ—ಯನ್ನು ಹಂಚಿಕೊಳ್ಳಲು ಸಿದ್ಧರಾಗಿದ್ದರು, ಇದು ನಾವು ಗಣ್ಯಮಾಡಿದ ಒಂದು ಉದಾರ, ಹೃತ್ಪೂರ್ವಕ ಭಾವಾಭಿನಯವಾಗಿತ್ತು.
ಸಿಸಿಲಿಯಲ್ಲಿ ನಾವು, ನಮ್ಮ ಕೈಪೆಟ್ಟಿಗೆಗಳನ್ನು ಬೆಟ್ಟದ ಮೇಲಿದ್ದ ಸಭೆಗೆ, ಮೂರುವರೆ ತಾಸಿನ ಸತತವಾದ ಹತ್ತುವಿಕೆಯ ಮೂಲಕ ಕೊಂಡೊಯ್ಯುವ ಮಿತ್ರರನ್ನು ಭೇಟಿಯಾಗಲಿದ್ದೆವು. ನಮ್ಮ ಕ್ರೈಸ್ತ ಸಹೋದರರ ಹೃತ್ಪೂರ್ವಕವಾದ ಸ್ವಾಗತವು ನಮ್ಮ ಆಯಾಸವನ್ನು ಮರೆಯುವಂತೆ ಮಾಡಿತು. ಕೆಲವೊಮ್ಮೆ ದೃಢ ಹೆಜ್ಜೆಯನ್ನಿಡುವ ಹೇಸರಗತ್ತೆಯ ಮೇಲೆ ನಾವು ಪ್ರಯಾಣಿಸಿದೆವು, ಆದರೆ ಹೇಸರಗತ್ತೆಯ ಒಂದೇ ಒಂದು ತಪ್ಪು ಹೆಜ್ಜೆಯು ನಮ್ಮನ್ನು ಎಲ್ಲಿಗೆ ಬೀಳಿಸಬಹುದಿತ್ತೋ ಆ ಪ್ರಪಾತಗಳನ್ನು ನೋಡಲೇ ಇಲ್ಲ. ತಮ್ಮ ತೊಂದರೆಗಳ ಹೊರತೂ ಬೈಬಲ್ ಸತ್ಯಕ್ಕಾಗಿದ್ದ ನಮ್ಮ ಸಹೋದರರ ದೃಢವಾದ ನಿಲುವು ನಮ್ಮನ್ನು ಬಲಗೊಳಿಸಿತು, ಮತ್ತು ನಮಗಾಗಿ ತೋರಿಸಲ್ಪಟ್ಟ ಪ್ರೀತಿಯು, ಅವರೊಂದಿಗಿರುವುದಕ್ಕಾಗಿ ನಾವು ಆಭಾರಿಗಳಾಗಿರುವಂತೆ ಮಾಡಿತು.
ಮಾಲ್ಟ ಮತ್ತು ಲಿಬೀಯ
ಸಿಸಿಲಿಯಲ್ಲಿದ್ದ ನಮ್ಮ ಸಹೋದರರ ಸ್ಮರಣೆಗಳಿಂದ ತುಂಬಿತುಳುಕುತ್ತಾ, ನಾವು ಮಾಲ್ಟಕ್ಕೆ ಹಡಗು ಪ್ರಯಾಣ ಬೆಳೆಸಿದೆವು. ಅಪೊಸ್ತಲ ಪೌಲನು ಅಲ್ಲಿ ದಯಾಪರ ಜನರನ್ನು ಕಂಡುಕೊಂಡಿದ್ದನು, ಮತ್ತು ನಾವು ಸಹ ಕಂಡುಕೊಂಡೆವು. ಸೆಂಟ್ ಪೌಲ್ಸ್ ಕೊಲಿಯ್ಲಲ್ಲಿ ಆರಂಭವಾದ ಒಂದು ಬಿರುಗಾಳಿಯು, ಮೊದಲನೆಯ ಶತಮಾನದಲ್ಲಿ ಸಣ್ಣ ಹಡಗುಗಳು ಎದುರಿಸಿದ ಅಪಾಯವನ್ನು ನಾವು ಗ್ರಹಿಸುವಂತೆ ಮಾಡಿತು. (ಅ. ಕೃತ್ಯಗಳು 27:39–28:10) ನಮ್ಮ ಮುಂದಿನ ಸಂದರ್ಶನವು ಲಿಬೀಯ ಆಗಿತ್ತು. ನಮ್ಮ ಕೆಲಸವು ನಿಷೇಧಿಸಲ್ಪಟ್ಟಿದ್ದ ಈ ಆಫ್ರಿಕನ್ ದೇಶದಲ್ಲಿ ನಾವು ಹೇಗೆ ಮುಂದುವರಿಯಲಿದ್ದೆವು?
ಪುನಃ ಒಮ್ಮೆ ಸಂಪೂರ್ಣವಾಗಿ ಭಿನ್ನವಾಗಿದ್ದ ಒಂದು ಸಂಸ್ಕೃತಿಯನ್ನು ನಾವು ಅನುಭವಿಸಿದೆವು. ಪೇಟೆಯ ಪ್ರದೇಶದ ಆಧಾರಸ್ತಂಭಗಳ್ಳುಳ್ಳ ರಸ್ತೆಗಳ ಮುಖಾಂತರ ನಾವು ನಡೆದಂತೆ, ಟ್ರಿಪೊಲಿ ನಗರದ ದೃಶ್ಯಗಳು ಮತ್ತು ಶಬ್ದಗಳು ನನ್ನ ಗಮನವನ್ನು ಸೆಳೆದವು. ಹಗಲಿನಲ್ಲಿ ಸಹಾರಾ ಮರುಭೂಮಿಯ ಸುಡುವ ತಾಪದಿಂದ ಮತ್ತು ರಾತ್ರಿಯ ತಂಪಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪುರುಷರು ಒಂಟೆಯ ಕೂದಲಿನಿಂದ ನೆಯ್ದ ಉಡುಪುಗಳನ್ನು ಉಪಯೋಗಿಸಿದರು. ತಾವು ಜೀವಿಸುವ ಪ್ರದೇಶದ ಹವಾಮಾನದ ಪರಿಸ್ಥಿತಿಗಳಿಗೆ ಜನರು ಹೊಂದಿಕೊಳ್ಳುವ ವಿಧವನ್ನು ಗಣ್ಯಮಾಡಲು ಮತ್ತು ಗೌರವಿಸಲು ನಾವು ಕಲಿತೆವು.
ಯೆಹೋವನ ಮೇಲೆ ಸಂಪೂರ್ಣವಾಗಿ ಆತುಕೊಳ್ಳುವುದರ ಕುರಿತು ಮತ್ತು ಇಂತಹ ಪರಿಸ್ಥಿತಿಗಳ ಕೆಳಗೆ ಸಾರುವ ಬಗ್ಗೆ ಹೆಚ್ಚು ಜ್ಞಾನವಿರುವವರ ಉಪದೇಶಗಳನ್ನು ಅನುಸರಿಸುವ ಕುರಿತಾದ ಹೆಚ್ಚಿನ ವಿಷಯವನ್ನು, ಸಹೋದರರ ಮುಂಜಾಗ್ರತೆಯ ಹುರುಪು ನಮಗೆ ಕಲಿಸಿತು. ನಮ್ಮ ಕ್ರೈಸ್ತ ಸಹೋದರರು ಅನೇಕ ಜನಾಂಗಗಳಿಂದ ಬಂದವರಾಗಿದ್ದರು; ಆದರೂ ಯೆಹೋವನಿಗೆ ತಮ್ಮ ಸೇವೆಯಲ್ಲಿ ಅವರು ಹೊಂದಿಕೆಯಿಂದ ಕೆಲಸಮಾಡಿದರು.
ಒಂದು ಹೊಸ ನೇಮಕ
ನಮ್ಮ ಸಾರುವ ಕೆಲಸಕ್ಕೆ ವಿರೋಧದ ಕಾರಣ, ನಾವು ಇಟಲಿಯನ್ನು ಬಿಡಬೇಕಿತ್ತು, ಆದರೆ 1975 ರಲ್ಲಿ ಬ್ರೆಜೀಲ್ನಲ್ಲಿ ಸಾರುವ ಒಂದು ಹೊಸ ನೇಮಕವನ್ನು ನಾವು ಸಂತೋಷಕರವಾಗಿ ಸ್ವೀಕರಿಸಿದೆವು. ಫ್ರಾನ್ಸಿಸ್ ಮತ್ತು ನಾನು ಆ ಜೀವಿತಕ್ಕೆ ಮತ್ತು ರೂಢಿಗಳಿಗೆ ಹೊಂದಿಕೊಂಡೆವು, ಮತ್ತು ಎಂಟು ತಿಂಗಳುಗಳ ಬಳಿಕ, ಸರ್ಕಿಟ್ ಕೆಲಸವನ್ನು ಮಾಡುವಂತೆ ಫ್ರಾನ್ಸಿಸ್ ಆಮಂತ್ರಿಸಲ್ಪಟ್ಟರು. ನಾವು ಬಸ್, ವಿಮಾನ, ಮತ್ತು ನಡಿಗೆಯ ಮೂಲಕ ಪ್ರಯಾಣಿಸಿದೆವು. ಈ ಮಹತ್ತರವಾದ ಸುಂದರ ದೇಶವು ಭೂಗೋಲಶಾಸ್ತ್ರದಲ್ಲಿನ ಒಂದು ಪಾಠದಂತೆ ನಮ್ಮ ಮುಂದೆ ತೆರೆಯಿತು.
ನಮ್ಮ ಮೊದಲನೆಯ ಸರ್ಕಿಟ್, ಸಾವ್ ಪೌಲೊದ ನಗರದಲ್ಲಿದ್ದ ಹತ್ತು ಸಭೆಗಳನ್ನು ಅಷ್ಟೇ ಅಲ್ಲದೆ ಸಾವ್ ಪೌಲೊ ರಾಜ್ಯದ ಒಳಭಾಗದಲ್ಲಿ ಮತ್ತು ದಕ್ಷಿಣ ಕಡಲತೀರದ ಪ್ರದೇಶದ ಸುತ್ತಲೂ ಇರುವ ಹತ್ತು ಸಣ್ಣ ನಗರಗಳನ್ನು ಒಳಗೊಂಡಿತು. ಆ ಸಮಯದಲ್ಲಿ ಆ ಪಟ್ಟಣಗಳಲ್ಲಿ ಸಭೆಗಳಿರಲಿಲ್ಲ. ತಂಗಲಿಕ್ಕೆ ಒಂದು ಸ್ಥಳವನ್ನು ನಾವು ಹುಡುಕುತ್ತಿದ್ದೆವು, ಮತ್ತು ನೆಲಸಿದ ನಂತರ, ರಾಜ್ಯದ ಸಂದೇಶದೊಂದಿಗೆ ನಾವು ಮನೆಯಿಂದ ಮನೆಗೆ ಭೇಟಿ ನೀಡುತ್ತಿದ್ದೆವು. ವಾಚ್ ಟವರ್ ಸೊಸೈಟಿಯ ಶೈಕ್ಷಣಿಕ ಚಿತ್ರಗಳಲ್ಲಿ ಒಂದರ ಪ್ರದರ್ಶನಕ್ಕೆ ಆಮಂತ್ರಣಗಳನ್ನು ಸಹ ನಾವು ನೀಡಿದೆವು.
ಬಸ್ಸಿನೊಳಗೆ—ಚಿತ್ರಗಳು, ಪ್ರಕ್ಷೇಪಕ, ಪರಿವರ್ತಕ, ಫೈಲುಗಳು, ಸಾಹಿತ್ಯ, ಆಮಂತ್ರಣಗಳು, ಚಿತ್ರವನ್ನು ತೋರಿಸುವ ಸ್ಥಾನವನ್ನು ಆಮಂತ್ರಣಗಳ ಮೇಲೆ ಛಾಪಿಸುವ ಸಜ್ಜು—ಇವೆಲ್ಲವುಗಳೊಂದಿಗೆ ಹತ್ತುವುದು ಸುಲಭವಾಗಿರಲಿಲ್ಲ. ಹೋಲಿಕೆಯಲ್ಲಿ, ಉಡುಪುಗಳ ನಮ್ಮ ಸಣ್ಣ ಕೈಪೆಟ್ಟಿಗೆಯು ಒಂದು ದೊಡ್ಡ ವಸ್ತು ಆಗಿರಲಿಲ್ಲ. ಒರಟು ದಾರಿಗಳ ಮೇಲಿನ ಪ್ರಯಾಣದಿಂದ ಅಲುಗಾಡಿ ಮುರಿಯದಂತೆ ಪ್ರಕ್ಷೇಪಕವನ್ನು ನಮ್ಮ ಮಡಿಲ ಮೇಲೆ ಇರಿಸಬೇಕಾಗಿತ್ತು.
ಚಿತ್ರವನ್ನು ತೋರಿಸಲಿಕ್ಕಾಗಿ ಸ್ಥಳವನ್ನು ಗುರುತಿಸಿದ ಬಳಿಕ ನಾವು ಮನೆಯಿಂದ ಮನೆಗೆ ಹೋಗುತ್ತಿದ್ದೆವು ಮತ್ತು ಚಿತ್ರ ತೋರಿಸುವಿಕೆಗೆ ಆಮಂತ್ರಣಗಳನ್ನು ಬಿಟ್ಟು ಬರುತ್ತಿದ್ದೆವು. ಕೆಲವೊಮ್ಮೆ ಚಿತ್ರವನ್ನು ಒಂದು ರೆಸ್ಟೊರಂಟ್ ಯಾ ಹೋಟಲಿನಲ್ಲಿ ಪ್ರದರ್ಶಿಸುವ ಪರವಾನಿಗೆಯನ್ನು ನಾವು ಪಡೆಯುತ್ತಿದ್ದೆವು. ಇತರ ಸಮಯಗಳಲ್ಲಿ, ಬಯಲಿನಲ್ಲಿ ಎರಡು ಕಂಬಗಳ ನಡುವೆ ಒಂದು ದುಪ್ಪಟಿಯನ್ನು ಹರಡಿದೆವು. ಅವರಲ್ಲಿ ಚಲನ ಚಿತ್ರವೊಂದನ್ನು ಎಂದೂ ನೋಡಿರದ ಗುಣಗ್ರಾಹಿ ಪ್ರೇಕ್ಷಕರು, ಕಥನವನ್ನು ಫ್ರಾನ್ಸಿಸ್ ಓದಿದಂತೆ ಅಲ್ಲಿ ನಿಂತು ಗಮನವಿಟ್ಟು ಕೇಳುತ್ತಿದ್ದರು. ತದನಂತರ ನಾವು ಬೈಬಲ್ ಸಾಹಿತ್ಯವನ್ನು ಹಂಚುತ್ತಿದ್ದೆವು.
ಹಳ್ಳಿಗಳನ್ನು ತಲಪಲು ನಾವು ಬಸ್ಸಿನಲ್ಲಿ ಪ್ರಯಾಣಿಸಿದೆವು. ಕೆಲವೊಂದು ಹೊಳೆಗಳಿಗೆ ಸೇತುವೆ ಇರಲಿಲ್ಲ, ಆದುದರಿಂದ ಬಸ್ಸನ್ನು ಒಂದು ದೊಡ್ಡ ತೆಪ್ಪದ ಮೇಲೆ ಇರಿಸಿ ಮತ್ತೊಂದು ಪಕ್ಕಕ್ಕೆ ತೇಲಿಸಲಾಗುತ್ತಿತ್ತು. ಬಸ್ಸಿನಿಂದ ಇಳಿಯುವಂತೆ ಮತ್ತು ಬಸ್ಸು ಹೊಳೆಯೊಳಗೆ ಜಾರುವುದನ್ನು ನಾವು ಕಂಡರೆ, ನೀರಿನೊಳಕ್ಕೆ ಎಳೆಯಲ್ಪಡುವುದನ್ನು ತೊರೆಯಲು ತೆಪ್ಪದ ಮತ್ತೊಂದು ಪಕ್ಕಕ್ಕೆ ನೆಗೆಯುವ ಸಲಹೆ ನಮಗೆ ನೀಡಲಾಗಿತ್ತು. ಕೃತಜ್ಞತೆಯ ವಿಷಯವೇನಂದರೆ ನಾವು ಎಂದೂ ಒಂದು ಬಸ್ಸನ್ನು ಹೊಳೆಗೆ ಕಳೆದುಕೊಳ್ಳಲಿಲ್ಲ—ಅದೊಂದು ಒಳ್ಳೆಯ ಸಂಗತಿ—ವಿಶೇಷವಾಗಿ ಯಾಕೆಂದರೆ ಹೊಳೆಯು, ಮಾಂಸವನ್ನು ತಿನ್ನುವ ಪರಾನ್ಯ ಮೀನಿಗೆ ಹೆಸರುವಾಸಿಯಾಗಿತ್ತು!
1958 ರಲ್ಲಿ ಅಂತಾರಾಷ್ಟ್ರೀಯ ಅಧಿವೇಶನವನ್ನು ಹಾಜರಾದ ನಂತರ, ನಾವು ಬ್ರೆಜಿಲ್ಗೆ ಹಿಂದಿರುಗಿದೆವು ಮತ್ತು ಬೇಗನೆ ಸಂಚರಣ ಕೆಲಸದಲ್ಲಿ ಮತ್ತೆ ತೊಡಗಿದೆವು. ನಮ್ಮ ಜಿಲ್ಲೆಯು ನಮ್ಮನ್ನು ದಕ್ಷಿಣದಲ್ಲಿ ಯುರಗ್ವೈ ಎಲ್ಲೆಗೆ, ಪಶ್ಚಿಮದಲ್ಲಿ ಪ್ಯಾರಗ್ವೆ, ಉತ್ತರದಲ್ಲಿ ಪರ್ನಮ್ಬ್ಯೂಕೊದ ರಾಜ್ಯಕ್ಕೆ, ಮತ್ತು ಬ್ರೆಜಿಲ್ನ ಪೂರ್ವ ಬದಿಯಲ್ಲಿ ಅಟ್ಲ್ಯಾಂಟಿಕ್ ಮಹಾಸಾಗರಕ್ಕೆ ಕೊಂಡೊಯ್ಯಿತು.
ಕುಷ್ಠರೋಗಿಗಳ ಕೇರಿ
ಮಧ್ಯ 1960 ಗಳಲ್ಲಿ, ಕುಷ್ಠರೋಗಿಗಳ ಒಂದು ಕೇರಿಯಲ್ಲಿ ಸೊಸೈಟಿಯ ಚಿತ್ರಗಳಲ್ಲಿ ಒಂದನ್ನು ತೋರಿಸುವ ಆಮಂತ್ರಣವನ್ನು ನಾವು ಸ್ವೀಕರಿಸಿದೆವು. ಯಾವುದೊ ರೀತಿಯಲ್ಲಿ ನಾನು ಕ್ಷೋಭೆಗೊಂಡಿದ್ದೆನೆಂದು ನಾನು ಒಪ್ಪಿಕೊಳ್ಳಲೇಬೇಕು. ಕುಷ್ಠರೋಗದ ಕುರಿತು ನಾವು ಬೈಬಲಿನಲ್ಲಿ ಓದಿದ್ದ ವಿಷಯವನ್ನು ಹೊರತುಪಡಿಸಿ, ಅದರ ಬಗ್ಗೆ ನಮಗೆ ಕಡಿಮೆ ಜ್ಞಾನವಿತ್ತು. ಬಿಳಿ ಬಣ್ಣ ಹಾಕಲಾಗಿದ್ದ ಆವರಣದೊಳಗೆ ಪ್ರವೇಶಿಸಿದ ಬಳಿಕ, ನಾವೊಂದು ದೊಡ್ಡ ಪ್ರೇಕ್ಷಾಗೃಹಕ್ಕೆ ನಡೆಸಲ್ಪಟ್ಟೆವು. ನಮಗಾಗಿ ಮತ್ತು ನಮ್ಮ ಸಜ್ಜಿಗಾಗಿ ಮಧ್ಯದಲ್ಲಿ ಒಂದು ಭಾಗವನ್ನು ಬೇರ್ಪಡಿಸಲಾಗಿತ್ತು.
ನಮಗೆ ಸಹಾಯ ಮಾಡುತ್ತಿದ್ದ ಈಲೆಕಿಷ್ಟ್ರನ್ ಆ ಕೇರಿಯ 40 ವರ್ಷ ಪ್ರಾಯದ ನಿವಾಸಿಯಾಗಿದ್ದನು. ಅವನು ಸಂಪೂರ್ಣವಾಗಿ ತನ್ನ ಕೈಗಳನ್ನು ಮತ್ತು ತನ್ನ ದೇಹದ ಇತರ ಭಾಗಗಳನ್ನು ಸಹ ಕಳೆದುಕೊಂಡಿದ್ದನು, ಇದು ಅವನನ್ನು ಬಹಳ ವಿಕಾರಗೊಳಿಸಿತು. ನಾನು ಮೊದಲು ಬೆಚ್ಚಿಬಿದ್ದೆ ಆದರೆ ಅವನ ನಗುಮುಖದ ಚರ್ಯೆ ಮತ್ತು ತನ್ನ ಕೆಲಸವನ್ನು ನಿರ್ವಹಿಸುವುದರಲ್ಲಿ ನಿಪುಣತೆಯು, ನನ್ನನ್ನು ನಿರಾತಂಕವಾಗಿರುವಂತೆ ಮಾಡಿತು. ಆವಶ್ಯಕ ಸಿದ್ಧತೆಗಳನ್ನು ನಾವು ಮುಗಿಸುತ್ತಿದ್ದಂತೆಯೇ, ಅನೇಕ ವಿಷಯಗಳ ಕುರಿತು ನಾವು ಸಂಭಾಷಿಸುತ್ತಿದ್ದೆವು. ಆ ಸೌಕರ್ಯದಲ್ಲಿ ವಾಸಿಸುತ್ತಿದ್ದ ಬಾಧೆಪಡುವ ಒಂದು ಸಾವಿರ ವ್ಯಕ್ತಿಗಳಲ್ಲಿ, ಇನ್ನೂರಕ್ಕಿಂತಲೂ ಹೆಚ್ಚಿನವರು ಹಾಜರಾದರು. ಅವರು ಕುಂಟುತ್ತಾ ಒಳಬಂದಂತೆ, ಅವರು ಕಷ್ಟಾನುಭವಿಸುತ್ತಿದ್ದ ರೋಗದ ವಿಭಿನ್ನ ಹಂತಗಳನ್ನು ನಾವು ಗಮನಿಸಿದೆವು. ನಮಗೆ ಎಂತಹ ಮನಕರಗಿಸುವ ಭಾವನಾತ್ಮಕ ಅನುಭವ!
“ಸ್ವಾಮೀ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧ ಮಾಡಬಲ್ಲೇ,” ಎಂದು ಬೇಡಿದ ಕುಷ್ಠರೋಗಿಗೆ ಯೇಸು ಹೇಳಿದ ವಿಷಯದ ಕುರಿತು ನಾವು ಯೋಚಿಸಿದೆವು. ಆ ಮನುಷ್ಯನನ್ನು ಸ್ಪರ್ಶಿಸುತ್ತಾ, ಯೇಸು ಅವನಿಗೆ ಪುನರಾಶ್ವಾಸನೆ ನೀಡಿದ್ದು: “ನನಗೆ ಮನಸ್ಸುಂಟು; ಶುದ್ಧವಾಗು.” (ಮತ್ತಾಯ 8:2, 3) ಕಾರ್ಯಕ್ರಮವು ಕೊನೆಗೊಂಡ ನಂತರ, ಬಂದಿದ್ದಕ್ಕಾಗಿ ಅನೇಕರು ನಮಗೆ ಉಪಕಾರ ಸಲ್ಲಿಸಲು ಬಂದರು, ಹಾನಿಗೊಳಗಾಗಿದ್ದ ಅವರ ಶರೀರಗಳು ಮಾನವಜಾತಿಯ ಮಹಾ ಕಷ್ಟಾನುಭವಕ್ಕೆ ಸ್ಪಷ್ಟವಾಗಿದ ಸಾಕ್ಷ್ಯವಾಗಿತ್ತು. ತದನಂತರ, ಸ್ಥಳೀಯ ಸಾಕ್ಷಿಗಳು ಹೆಚ್ಚನ್ನು ಕಲಿಯಲಿಚ್ಛಿಸಿದವರೊಂದಿಗೆ ಬೈಬಲನ್ನು ಅಭ್ಯಸಿಸಿದರು.
ಕೆಲವೊಂದು ತೀವ್ರವಾದ ಆರೋಗ್ಯ ಸಮಸ್ಯೆಗಳ ಪರಾಮರಿಕೆಗಾಗಿ ನಾವು 1967 ರಲ್ಲಿ ಅಮೆರಿಕಕ್ಕೆ ಹಿಂದಿರುಗಿದೆವು. ಅವುಗಳನ್ನು ನಿಭಾಯಿಸಲು ಮುಂದುವರಿದಂತೆ, ಸರ್ಕಿಟ್ ಕೆಲಸದಲ್ಲಿ ಸೇವೆಮಾಡುವ ಸುಯೋಗವನ್ನು ನಾವು ಪುನಃ ಪಡೆದೆವು. ಮುಂದಿನ 20 ವರ್ಷಗಳಿಗೆ, ಸಂಚರಣ ಕೆಲಸದಲ್ಲಿ ನಾನು ಫ್ರಾನ್ಸಿಸ್ರೊಂದಿಗೆ ಭಾಗಿಯಾದೆ. ಈ ಸಮಯದಲ್ಲಿ ಅವರು ರಾಜ್ಯ ಶುಶ್ರೂಷಾ ಶಾಲೆಯಲ್ಲಿ ಬೋಧಕರೂ ಆಗಿದ್ದರು.
ಕೊಡಲಾದ ನೇಮಕವೂ ಏನೇ ಆಗಿರಲಿ ಅದಕ್ಕಾಗಿ ಕೆಲಸಮಾಡಿದ ಪ್ರೀತಿಯ ಗಂಡನೂ ನಂಬಿಗಸ್ತ ಸಂಗಾತಿಯೂ ನನಗಿದ್ದದ್ದು ಉತ್ತೇಜನದ ಎಂತಹ ಒಂದು ಮೂಲವಾಗಿತ್ತು! ಒಟ್ಟಿಗೆ ನಾಲ್ಕು ಭೂಖಂಡಗಳ ಭಾಗಗಳಲ್ಲಿ ಬೈಬಲ್ ಸತ್ಯದ ನಿಧಿಯನ್ನು ಹಂಚುವ ಸುಯೋಗ ನಮಗಿತ್ತು.
ನಿಧಿಯ ಮೂಲಕ ಪೋಷಿಸಲ್ಪಟ್ಟದ್ದು
1950 ರಲ್ಲಿ, ತಾಯಿಯು 1924 ರಲ್ಲಿ ದೀಕ್ಷಾಸ್ನಾನ ಪಡೆದಿದ್ದ ಒಬ್ಬ ನಂಬಿಗಸ್ತ ಸಹೋದರನಾದ ಡೇವಿಡ್ ಈಸ್ಟರ್ನನ್ನು ಮದುವೆಯಾದರು. ಅವರು ಒಟ್ಟಿಗೆ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಅನೇಕ ವರ್ಷ ಸೇವೆ ಮಾಡಿದರು. ಹಾಗಿದ್ದರೂ, ತಾಯಿಯ ಜೀವನದ ಕೊನೆಯ ಭಾಗದಲ್ಲಿ, ಆಲ್ಟ್ಸ್ಹೈಮರ್ಜ್ ರೋಗವು ಕಾಣಿಸಿಕೊಳ್ಳಲು ತೊಡಗಿತು. ರೋಗವು ಅವರ ವಿವೇಚನಾ ಶಕ್ತಿಯನ್ನು ಕುಗ್ಗಿಸಿದರಿಂದ ಅವರಿಗೆ ಹೆಚ್ಚಿನ ಪರಾಮರಿಕೆಯ ಅಗತ್ಯವಿತ್ತು. ನನ್ನ ಬೆಂಬಲದಾಯಕ ಸಹೋದರಿಯರು ಮತ್ತು ಡೇವಿಡ್ ಅವರನ್ನು ನೋಡಿಕೊಳ್ಳುವ ದೊಡ್ಡ ಹೊಣೆಯನ್ನು ವಹಿಸಿಕೊಂಡರು, ಯಾಕೆಂದರೆ ಪೂರ್ಣ ಸಮಯದ ಸೇವೆಯ ವಿಶೇಷ ಸುಯೋಗಗಳನ್ನು ನಾವು ತ್ಯಜಿಸುವುದು ಅವರಿಗೆ ಇಷ್ಟವಿರಲಿಲ್ಲ. 1987 ರಲ್ಲಿ ಅವರ ಮರಣದ ತನಕ ತಾಯಿಯ ನಂಬಿಗಸ್ತ ಮಾದರಿಯು, ಜೀವಿತದಲ್ಲಿ ನಮ್ಮ ಮಾರ್ಗವನ್ನು ಯೋಜಿಸಲು ನಮಗೆ ಬಹಳ ಸಹಾಯ ಮಾಡಿತು, ಮತ್ತು ಅವರು ನೆಚ್ಚಿಕೊಂಡಿದ್ದ ಸ್ವರ್ಗೀಯ ಪ್ರತಿಫಲದ ನಿರೀಕ್ಷೆಯು ನಮ್ಮನ್ನು ಸಾಂತ್ವನಗೊಳಿಸಿತು.
1989 ರೊಳಗಾಗಿ, ಫ್ರಾನ್ಸಿಸ್ ತಾವು ಮೊದಲಿದ್ದಷ್ಟು ಚುರುಕಾಗಿರಲಿಲ್ಲವೆಂದು ನನಗೆ ಗ್ರಹಿಸಸಾಧ್ಯವಿತ್ತು. ಲೋಕದ ಅನೇಕ ಭಾಗಗಳಲ್ಲಿ ಬಹಳ ಪ್ರಸಿದ್ಧವಾಗಿದ್ದ ಸ್ನೇಲ್ ಜ್ವರವು ತನ್ನ ಹಾನಿಕಾರಕ ಪ್ರಭಾವವನ್ನು ಬೀರುತ್ತಿತ್ತೆಂಬ ಅರಿವು ನಮಗಿರಲಿಲ್ಲ. 1990 ರಲ್ಲಿ ಈ ಕಾರುಣ್ಯರಹಿತ ವೈರಿಯು ಜಯಗಳಿಸಿತು, ಮತ್ತು ಯೆಹೋವನ ಸೇವೆಯಲ್ಲಿ 40 ಕ್ಕಿಂತಲೂ ಹೆಚ್ಚು ವರ್ಷಗಳಲ್ಲಿ ಯಾರೊಂದಿಗೆ ಪಾಲಿಗಳಾಗಿದ್ದೆನೋ ಆ ನನ್ನ ಪ್ರಿಯ ಜೊತೆಗಾರನನ್ನು ನಾನು ಕಳೆದುಕೊಂಡೆ.
ಹೊಂದಾಣಿಕೆಗಳು ಜೀವನದ ಒಂದು ಭಾಗವಾಗಿವೆ. ಕೆಲವು ಸರಳವಾಗಿವೆ, ಮತ್ತು ಕೆಲವು ಕಷ್ಟಕರವಾಗಿವೆ. ಆದರೆ ಬೈಬಲ್ ಸತ್ಯದ ಅಮೂಲ್ಯವಾದ ನಿಧಿಯನ್ನು ಕೊಡುವವನಾಗಿರುವ ಯೆಹೋವನು, ತನ್ನ ಸಂಸ್ಥೆ ಮತ್ತು ನನ್ನ ಕುಟುಂಬದ ಪ್ರೀತಿ ಹಾಗೂ ಉತ್ತೇಜನದ ಮೂಲಕ ನನ್ನನ್ನು ಪೋಷಿಸಿದ್ದಾನೆ. ಯೆಹೋವನ ತಪ್ಪಲಾರದ ಎಲ್ಲ ವಾಗ್ದಾನಗಳ ನೆರೆವೇರಿಕೆಯನ್ನು ನಾನು ಎದುರುನೋಡುತ್ತಿರುವಾಗ, ನಾನು ಇನ್ನೂ ಸಂತೃಪ್ತಿಯನ್ನು ಕಂಡುಕೊಳ್ಳುತ್ತಿದ್ದೇನೆ.
[ಪುಟ 23 ರಲ್ಲಿರುವ ಚಿತ್ರ]
ನನ್ನ ಗಂಡನೂ ನಾನೂ ಇಟಲಿಯಲ್ಲಿ ಮಿಷನೆರಿಗಳಾಗಿದ್ದಾಗ