ಬೇಗನೇ, ಯಾರೊಬ್ಬನೂ ಬಡವನಾಗಿರನು!
“ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ.” (ಲೂಕ 2:10) ಯೇಸು ಜನಿಸಿದ ರಾತ್ರಿಯಂದು ಬೇತ್ಲೆಹೇಮಿನ ಸಮೀಪವಿದ್ದ ವಿಸ್ಮಯಗೊಂಡಿದ್ದ ಕುರುಬರಿಂದ ಆತ್ಮೋನ್ನತಿಯನ್ನುಂಟು ಮಾಡುವಂತಹ ಈ ಮಾತುಗಳು ಕೇಳಲ್ಪಟ್ಟಿದ್ದವು. ಆ ಘೋಷಣೆಗೆ ಹೊಂದಿಕೆಯಲ್ಲಿ, ಯೇಸು ತನ್ನ ಐಹಿಕ ಶೂಶ್ರೂಷೆಯಲ್ಲಿ “ಶುಭ ಸಮಾಚಾರ”ದ ಮೇಲೆ ಮಹತ್ತಾದ ಒತ್ತನ್ನು ಹಾಕಿದನು. ಇಂದು, ನಮ್ಮ ಅಗತ್ಯಗಳನ್ನು ನೋಡಿಕೊಳ್ಳಲು ನಾವು ಹಣದ ಮೇಲೆ ಇಷ್ಟು ಆತುಕೊಂಡಿರುವಾಗ, ಯೇಸುವಿನ ಕುರಿತಾದ ಸುವಾರ್ತೆಯು ನಮಗೆ ಹೇಗೆ ಪ್ರಯೋಜನ ತರಬಲ್ಲದು?
ಯೇಸು ಕ್ರಿಸ್ತನು “ಬಡವರಿಗೆ ಶುಭವರ್ತಮಾನವನ್ನು” ಪ್ರಕಟಪಡಿಸಿದನು. (ಲೂಕ 4:18) ಮತ್ತಾಯ 9:35 ಕ್ಕನುಸಾರವಾಗಿ, “ಯೇಸು ಎಲ್ಲಾ ಊರುಗಳನ್ನೂ ಹಳ್ಳಿಪಳ್ಳಿಗಳನ್ನೂ ಸುತ್ತಿಕೊಂಡು ಅವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ . . . ಬಂದನು.” ಆತನ ಸಂದೇಶವು ವಿಶೇಷವಾಗಿ ಬಡತನವಡಸಿದವರಿಗೆ ಉತ್ತೇಜನಕಾರಿಯಾಗಿತ್ತು. “ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” (ಮತ್ತಾಯ 9:36) “ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ,” ಎಂದು ಯೇಸು ಹೇಳಿದನು ನಿಜ, ಆದರೆ ಈ ಮಾತುಗಳಿಂದ ದರಿದ್ರರಿಗೆ ಯಾವ ನಿರೀಕ್ಷೆಯೂ ಇಲ್ಲವೆಂಬ ತೀರ್ಮಾನಕ್ಕೆ ನಾವು ಬರಬಾರದು. (ಯೋಹಾನ 12:8) ಅವರ ದಶೆಗೆ ಕಾರಣವೇನೇ ಆಗಿರಲಿ, ಈ ದುಷ್ಟ ವ್ಯವಸ್ಥೆಯ ಬಾಳುವಷ್ಟು ಸಮಯ ಬಡ ಜನರು ಇರುವರು. ದೇವರ ವಾಕ್ಯವು ಬಡತನದ ವಾಸ್ತವಿಕತೆಯನ್ನು ಅಲಕ್ಷಿಸುವದಿಲ್ಲ, ಆದರೆ ಅದು ನಕಾರಾತ್ಮಕ ಅಂಶಗಳ ಮೇಲೆ ಗಮನವನ್ನಿರಿಸುವದಿಲ್ಲ. ಬದಲಾಗಿ, ಜೀವನದ ವ್ಯಾಕುಲತೆಗಳನ್ನು ನಿಭಾಯಿಸಲು ಅದು ಬಡವರಿಗೆ ಸಹಾಯವನ್ನು ನೀಡುತ್ತದೆ.
ಬಡವರಿಗಾಗಿ ಸಹಾಯ
ಗಮನಾರ್ಹವಾಗಿ, ಹೀಗೆ ಹೇಳಲ್ಪಟ್ಟಿದೆ: “ಯಾರೂ ಪರಾಮರಿಸುವದಿಲ್ಲ ಅಥವಾ ಅರ್ಥೈಸಿಕೊಳ್ಳುವದಿಲ್ಲವೆಂದು ತಿಳಿಯುವದಕ್ಕಿಂತ ಹೆಚ್ಚಾದ ಭಾರವನ್ನು ಒಬ್ಬ ವ್ಯಕ್ತಿಯು ಸಹಿಸಲಾರನು.” ಆದರೂ, ಅಧಿಕಾಂಶ ಜನರ ಪಕ್ಷದಿಂದ ಕರುಣೆಯ ಕೊರತೆಯ ಹೊರತೂ, ಬಡವರಿಗೆ ಸದ್ಯಕ್ಕೂ ಭವಿಷ್ಯಕ್ಕಾಗಿಯೂ, ಇನ್ನೂ ಶುಭವಾರ್ತೆಯಿದೆ.
ದುಃಖಕರವಾಗಿ, ಬಡವರಿಗೆ ಸಹಾಯ ಮಾಡುವದರಲ್ಲಿ ಅನೇಕರಿಗೆ ಸ್ವಲ್ಪವೇ ಆಸಕ್ತಿಯಿದೆ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಕ್ಕನುಸಾರ, “ಸಮಾಜದಲ್ಲಿರುವ ಜನರು ಪಾರಾಗುವಿಕೆಗಾಗಿ ಸ್ಪರ್ಧಿಸುತ್ತಾರೆ ಮತ್ತು . . . ಶ್ರೇಷ್ಠ ವ್ಯಕ್ತಿಗಳು ಪ್ರಬಲರು ಮತ್ತು ಐಶ್ವರ್ಯವಂತರು ಆಗುತ್ತಾರೆ” ಎಂದು ಕೆಲವರು ನಂಬುತ್ತಾರೆ. ಸಾಮಾಜಿಕ ಡಾರ್ವಿನ್-ಸಿದ್ಧಾಂತವೆಂದು ಕರೆಯಲಾಗುವ ಈ ವಾದವನ್ನು ನಂಬುವವರು, ಬಡವರನ್ನು ಕೇವಲ ಆಲಸ್ಯವುಳ್ಳ ಜನರು ಮತ್ತು ದುಂದುಗಾರರಾಗಿ ದೃಷ್ಟಿಸಬಹುದು. ಆದರೂ, ಗ್ರಾಮೀಣ ಕೂಲಿಗಳು, ವಲಸೆಹೋಗುವ ಕಾರ್ಮಿಕರು, ಮತ್ತು ಇತರರು ಕಡಮೆ ಸಂಬಳವನ್ನು ಪಡೆಯುತ್ತಿರುವ ಹೊರತೂ, ತಮ್ಮ ಕುಟುಂಬಗಳನ್ನು ಉಣಿಸಲು ಅನೇಕ ಸಲ ತುಂಬಾ ಕಠಿನವಾಗಿ ಕೆಲಸ ಮಾಡುತ್ತಾರೆ.
ಅನೇಕ ದೇಶಗಳಲ್ಲಿ ಬಡತನವು ಸರ್ವಸಾಮಾನ್ಯವಾಗಿದೆ. ಆದುದರಿಂದ, ಅಧಿಕಾಂಶ ಜನರಾಗಿರುವ ಬಡವರು, ತಾವು ಒಂದು ಸೋಲು ಎಂದು ಅನಿಸುವಂತೆ ಮಾಡಲ್ಪಡುವದಿಲ್ಲ. ಹಾಗಿದ್ದರೂ, ಅಂತಹ ದೇಶಗಳಲ್ಲಿ ಬಡತನದ ಮಧ್ಯೆ, ಅತಿ ಸುಖಭೋಗದಿಂದ ಜೀವಿಸುತ್ತಿರುವ ಜನರಿದ್ದಾರೆ. ಕಿಕ್ಕಿರಿದಿರುವ, ಅನಾರೋಗ್ಯಕರವಾದ ಜೋಪಡಿಗಳ ಪಕ್ಕದಲ್ಲಿ ಆರಾಮವಾದ, ಘನವಾದ ಮನೆಗಳು ಇವೆ. ಹೆಚ್ಚಿನ ಸಂಬಳವನ್ನು ಪಡೆಯುವ ಪುರುಷರು ತಮ್ಮ ದುಬಾರಿ ಕಾರುಗಳನ್ನು ದರಿದ್ರರು ಮತ್ತು ನಿರುದ್ಯೋಗಿಗಳಿಂದ ಕಿಕ್ಕಿರಿದಿರುವ ಬೀದಿಗಳಲ್ಲಿ ಓಡಿಸುತ್ತಾರೆ. ಅಂತಹ ದೇಶಗಳಲ್ಲಿ ಬಡವರು ತಮ್ಮ ಅವಸ್ಥೆಯ ಕುರಿತು ವೇದನಾಭರಿತರಾಗಿ ಅರಿವುಳ್ಳವರಾಗಿರುತ್ತಾರೆ. ನಿಜವಾಗಿ “ಬಡವರು ಕೇವಲ ನ್ಯೂನ ಪೋಷಣೆಯಿಂದ, ಕೆಟ್ಟ ವಸತಿ, ಮತ್ತು ಸಾಕಾಗದ ವೈದ್ಯಕೀಯ ಆರೈಕೆಯಿಂದ ಮಾತ್ರ ಕಷ್ಟಾನುಭವಿಸುವದಿಲ್ಲ, ಬದಲಾಗಿ ತಮ್ಮ ಸ್ಥಿತಿಯ ಕುರಿತಾದ ಸತತ ಚಿಂತೆಯಿಂದಾಗಿಯೂ ಕಷ್ಟಾನುಭವಿಸುತ್ತಾರೆ” ಎಂದು ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುತ್ತದೆ. “ಒಳ್ಳೆಯ ಉದ್ಯೋಗಗಳನ್ನು ಪಡೆದು ಅವುಗಳಲ್ಲಿ ಮುಂದುವರಿಯಲು ಅಸಮರ್ಥರಾಗುತ್ತಾ, ಅವರು ಘನತೆ ಮತ್ತು ಸ್ವಪ್ರತಿಷ್ಠೆಯ ಸಕಲ ಅರ್ಥವನ್ನೂ ಕಳೆದುಕೊಳ್ಳುತ್ತಾರೆ.” ಹಾಗಿದ್ದಲ್ಲಿ, ಅತಿ ಬಡವರಾಗಿರುವವರು ತಮ್ಮ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿಕೊಳ್ಳುತ್ತಾರೆ? ನಿಭಾಯಿಸುವುದರೊಂದಿಗೆ ಯೇಸುವಿನ ಕುರಿತಾದ ಸುವಾರ್ತೆಗೆ ಏನು ಸಂಬಂಧವಿದೆ?
ಮೊದಲಾಗಿ ಅವಿವೇಕಿ ಚಾಳಿಗಳಿಂದ ಬಡತನವನ್ನು ಇನ್ನಷ್ಟು ಕೆಟ್ಟದ್ದಾಗಿ ಮಾಡಬಹುದೆಂಬದನ್ನು ನೆನಪಿನಲ್ಲಿಡಿರಿ. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ. ತನ್ನ ಹೆಂಡತಿ ಮಕ್ಕಳಿಗೆ ತಿನ್ನಲು ಸ್ವಲ್ಪವೇ ಇದ್ದಾಗ, ತಾನು ಒಂದು ಅನೈತಿಕ ಜೀವನಶೈಲಿಯನ್ನು ನಡಸಿಕೊಂಡುಹೋಗುತ್ತಾ ಹಣವನ್ನು ಹಾಳುಮಾಡುತ್ತಿದ್ದನೆಂದು ವಾಲೆಸ್ಡಿರ್ ಒಪ್ಪುತ್ತಾನೆ. ಅವನು ಹೇಳುವುದು: “ಉದ್ಯೋಗಸ್ಥನಾಗಿದ್ದರೂ, ನನ್ನಲ್ಲಿ ಎಂದೂ ಹಣ ಇರುತ್ತಿರಲಿಲ್ಲ, ಬದಲಾಗಿ ನನ್ನ ಜೇಬಿನಲ್ಲಿ ಅನೇಕ ರೀತಿಯ ಲಾಟರಿ ಟಿಕೆಟುಗಳು ಯಾವಾಗಲೂ ಇರುತ್ತಿದ್ದವು.” ಮಿತಿಮೀರಿದ ಕುಡಿಯುವಿಕೆ ಮತ್ತು ಮದ್ಯಪಾನದ ಕಾರಣದಿಂದಾಗಿ, ಮಿಲ್ಟನ್ 23 ಕೆಲಸಗಾರರಿದ್ದ ಒಂದು ವ್ಯಾಪಾರವನ್ನು ಕಳೆದುಕೊಂಡನು. ಅವನು ಹೇಳುವುದು: “ಮನೆಗೆ ಹೋಗಲು ಅಶಕ್ತನಾಗಿ, ನಾನು ಬೀದಿಗಳಲ್ಲಿ ರಾತ್ರಿಗಳನ್ನು ಕಳೆದೆ, ಮತ್ತು ನನ್ನ ಕುಟುಂಬವು ನನ್ನಿಂದಾಗಿ ತುಂಬ ಕಷ್ಟಾನುಭವಿಸಿತು.”
ಸಾಊನ್ ಸಹ ಕೆಟ್ಟ ಚಾಳಿಗಳಲ್ಲಿ ತನ್ನ ಸಂಬಳವನ್ನು ಹಾಳುಮಾಡಿದನು. “ಹಲವಾರು ರಾತ್ರಿಗಳನ್ನು ನಾನು ಮನೆಯಿಂದ ಹೊರಗೆ ಕಳೆದೆ. ನಾನು ಸಂಪಾದಿಸಿದ್ದೆಲ್ಲವು ನನ್ನ ಕೆಟ್ಟ ಚಾಳಿಗಳಿಗೆ ಮತ್ತು ಪ್ರಣಯ ವ್ಯವಹಾರಗಳಿಗೆ ಸಾಕಾಗುತ್ತಿರಲ್ಲಿಲ್ಲ. ಪರಿಸ್ಥಿತಿಯು ಸಹಿಸಲಸಾಧ್ಯವಾಗಿ ಪರಿಣಮಿಸಿತು, ಮತ್ತು ನನ್ನ ಹೆಂಡತಿ ಒಂದು ಪ್ರತ್ಯೇಕವಾಸವನ್ನು ಬಯಸಿದಳು.” ತನ್ನ ಹಣಕಾಸಿನ ಮತ್ತು ವೈವಾಹಿಕ ಸಮಸ್ಯೆಗಳಿಗೆ ಕೂಡಿಸಿ, ಇನ್ನೂ ಇತರ ಸಮಸ್ಯೆಗಳಿದ್ದವು. ಅವನು ಹೇಳುವುದು: “ನಾನು ಸಂಬಂಧಿಕರೊಂದಿಗೆ ಮತ್ತು ನೆರೆಹೊರೆಯವರೊಂದಿಗೆ ಸಮಸ್ಯೆಗಳನ್ನು ಉಂಟುಮಾಡಿದೆ, ಮತ್ತು ವಿಶೇಷವಾಗಿ ನನಗೆ ಕೆಲಸದ ಕಡೆಯಲ್ಲಿ ಸಮಸ್ಯೆಗಳಿದ್ದವು. ಫಲಿತಾಂಶವಾಗಿ, ನಾನು ಸತತವಾಗಿ ಕೆಲಸವಿಲ್ಲದೆ ಇರುತ್ತಿದ್ದೆ.” ಸುಲ್ಯೊ ಒಬ್ಬ ಅಮಲೌಷಧದ ವ್ಯಸನಿಯಾಗಿದ್ದನು. ಆದಾಗಲೂ, ಅವನು ವಿವರಿಸುವುದು: “ನನ್ನ ಅಮಲೌಷಧದ ಚಟವನ್ನು ಪೋಷಿಸಲು ನನ್ನ ಸಂಬಳವು ಸಾಕಾಗುತ್ತಿರಲಿಲ್ಲವಾದ್ದರಿಂದ, ಅಮಲೌಷಧಗಳನ್ನು ಖರೀದಿಸುವ ಅಗತ್ಯವಿರದಂತೆ ನಾನು ಒಬ್ಬ ನಾರ್ಕಾಟಿಕ್ಸ್ (ನಿದ್ರಾಜನಕಗಳ) ಮಾರುವವನಾಗಿ ಕೆಲಸ ಮಾಡಲಾರಂಭಿಸಿದೆ.”
ಎಂಟು ಮಕ್ಕಳಿದ್ದ ಒಂದು ಬಡ ಕುಟುಂಬದಲ್ಲಿ ಬೆಳೆಸಲ್ಪಟ್ಟವನಾಗಿ, ಸೂಸೆ ತನಗಾಗಿ ಏನನ್ನಾದರೂ ಪಡೆಯಲು ಬಯಸಿದನು. ತನ್ನ ಪರಿಸ್ಥಿತಿಯು ಸದ್ಯದ್ದಕ್ಕಿಂತ ಕೆಡಲು ಸಾಧ್ಯವಿಲ್ಲವೆಂದು ತೀರ್ಮಾನಿಸುತ್ತಾ, ಅವನು ಇತರ ಯುವಕರೊಂದಿಗೆ ಕೂಡಿ ಜನರಿಂದ ಕದಿಯಲಾರಂಭಿಸಿದನು. ಹತಾಶೆಯಿಂದ, ಇನ್ನೊಬ್ಬ ಯುವಕನು ಹೆಡ್ಬ್ಯಾಂಗರ್ಸ್ ಎಂಬ ತಂಡದ ಒಬ್ಬ ಸದಸ್ಯನಾದನು. ಅವನು ವಿವರಿಸುವುದು: “ನಮ್ಮಲ್ಲಿ ಹೆಚ್ಚಿನವರು ತುಂಬ ಬಡವರಾಗಿದದ್ದರಿಂದ, ವಸ್ತುಗಳನ್ನು ಒಡೆದು ಹಾಕುವುದರಲ್ಲಿ ಮತ್ತು ಜನರನ್ನು ಆಕ್ರಮಿಸುವುದರಲ್ಲಿ ಒಂದು ರೀತಿಯ ನಿರ್ದಿಷ್ಟ ತೃಪ್ತಿಯನ್ನು ನಾವು ಕಂಡುಕೊಂಡೆವು.”
ಆದರೂ, ಇಂದು ಈ ಪುರುಷರು ಮತ್ತು ಅವರ ಕುಟುಂಬಗಳು ಗಾಢವಾದ ಕೊರತೆಯನ್ನು ಅಥವಾ ಕಹಿ ಮನಸ್ಸಿನ ಮತ್ತು ಮುನಿಸಿನ ಭಾವನೆಗಳನ್ನು ಇನ್ನು ಮುಂದೆ ಅನುಭವಿಸುವದಿಲ್ಲ. ಇನ್ನು ಮೇಲೆ ಅವರು ನಿಸ್ಸಹಾಯಕರು ಅಥವಾ ನಿರೀಕ್ಷಾಹೀನರಾಗಿಲ್ಲ. ಯಾಕಿಲ್ಲ? ಯಾಕಂದರೆ ಯೇಸು ಸಾರಿದಂತಹ ಸುವಾರ್ತೆಯನ್ನು ಅವರು ಅಭ್ಯಾಸಿಸಿದರು. ಬೈಬಲಿನ ಸಲಹೆಯನ್ನು ಅವರು ಅನ್ವಯಿಸಿದರು ಮತ್ತು ಯೆಹೋವನ ಸಾಕ್ಷಿಗಳ ಸಭೆಗಳಲ್ಲಿರುವ ತದ್ರೀತಿಯ ಮನಸ್ಸಿನ ವ್ಯಕ್ತಿಗಳೊಂದಿಗೆ ಸಹವಾಸಿಸಿದರು. ಮತ್ತು ಅವರು ಐಶ್ವರ್ಯ ಹಾಗೂ ಬಡತನದ ಕುರಿತಾಗಿ ಅತಿ ಪ್ರಾಮುಖ್ಯವಾದ ಕೆಲವು ವಿಷಯಗಳನ್ನು ಕಲಿತರು.
ಬಡತನವನ್ನು ನಿಭಾಯಿಸಲು ಸಹಾಯ
ಬೈಬಲ್ ಸೂತ್ರಗಳು ಅನ್ವಯಿಸಲ್ಪಟ್ಟಲ್ಲಿ, ಬಡತನದ ಕೆಟ್ಟ ಪರಿಣಾಮಗಳನ್ನು ಕಡಮೆ ಮಾಡಸಾಧ್ಯವಿದೆಯೆಂಬದನ್ನು ಅವರು ಮೊದಲನೆದಾಗಿ ಕಲಿತರು. ಅನೈತಿಕತೆ, ಕುಡುಕತನ, ಜೂಜಾಟ ಮತ್ತು ಅಮಲೌಷಧದ ದುರುಪಯೋಗವನ್ನು ಬೈಬಲ್ ಖಂಡಿಸುತ್ತದೆ. (1 ಕೊರಿಂಥ 6:9, 10) ಅಂತಹ ವಿಷಯಗಳು ಅತಿ ದುಬಾರಿಯಾಗಿವೆ. ಅವು ಒಬ್ಬ ಶ್ರೀಮಂತ ಮನುಷ್ಯನನ್ನು ಬಡವನನ್ನಾಗಿ, ಮತ್ತು ಒಬ್ಬ ಬಡ ಮನುಷ್ಯನನ್ನು ಇನ್ನೂ ಹೆಚ್ಚು ಬಡವನನ್ನಾಗಿ ಮಾಡಬಲ್ಲವು. ಈ ಕೆಟ್ಟ ಚಾಳಿಗಳನ್ನು ಮತ್ತು ಇದರಂತಹ ಇತರ ಕೆಟ್ಟ ಚಾಳಿಗಳನ್ನು ತೊರೆಯುವುದು ಒಂದು ಕುಟುಂಬದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಹೆಚ್ಚನ್ನು ಮಾಡುತ್ತದೆ.
ಎರಡನೆಯದಾಗಿ, ಜೀವನದಲ್ಲಿ ಐಶ್ವರ್ಯಕ್ಕಿಂತ ಹೆಚ್ಚು ಪ್ರಾಮುಖ್ಯವಾದ ವಿಷಯಗಳಿವೆಯೆಂದು ಅವರು ಕಂಡುಹಿಡಿದರು. ಈ ಪ್ರೇರಿತ ಮಾತುಗಳಲ್ಲಿ ಒಂದು ಸಮತೂಕದ ನೋಟವು ವ್ಯಕ್ತಪಡಿಸಲ್ಪಟ್ಟಿದೆ: “ಧನವು ಹೇಗೋ ಹಾಗೆ ಜ್ಞಾನವೂ [ವಿವೇಕವೂ, NW] ಆಶ್ರಯ; ಜ್ಞಾನಕ್ಕೆ ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ.” (ಪ್ರಸಂಗಿ 7:12) ಹೌದು, ಹಣ ಆವಶ್ಯಕವಾಗಿದೆ. ಆದರೆ ಬೈಬಲ್ ಆಧರಿತ ವಿವೇಕವು ಮತ್ತು ದೇವರ ಉದ್ದೇಶಗಳ ಕುರಿತಾದ ಜ್ಞಾನವು ಇನ್ನೂ ಹೆಚ್ಚು ಉಪಯೋಗಕಾರಿಯಾಗಿವೆ. ಖಂಡಿತವಾಗಿಯೂ, ವಿವೇಕದ ಕೊರತೆಯುಳ್ಳ ಒಬ್ಬನಿಗೆ, ಅತಿ ಹೆಚ್ಚು ಹಣವಿರುವುದು, ತೀರ ಕಡಿಮೆಯಿರುವಷ್ಟೇ ಭಾರವಾಗಿರುವುದು. ಬೈಬಲ್ ಬರಹಗಾರನು ವಿವೇಕಯುತವಾಗಿ ಪ್ರಾರ್ಥಿಸಿದ್ದು: “ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು. ಹಾಗಾಗದೆ ಹೊಟ್ಟೆತುಂಬಿದವನಾದರೆ ಯೆಹೋವನು ಯಾರೋ ಎಂದು ನಿನ್ನನ್ನು ತಿರಸ್ಕರಿಸೇನು; ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೇನು.”—ಜ್ಞಾನೋಕ್ತಿ 30:8, 9.
ಮೂರನೆಯದಾಗಿ, ಯೇಸು ಸಾರಿದಂತಹ ಸುವಾರ್ತೆಗನುಸಾರ ಒಬ್ಬ ವ್ಯಕ್ತಿಯು ಜೀವಿಸುವುದಾದರೆ, ತಾನು ತೊರೆಯಲ್ಪಟ್ಟಿದ್ದೇನೆಂದು ಅನಿಸುವ ಅಗತ್ಯವು ಅವನಿಗೆ ಎಂದಿಗೂ ಇರಬೇಕೆಂದಿಲ್ಲವೆಂದು ಅವರು ಕಂಡುಕೊಂಡರು. ಸುವಾರ್ತೆಯು ದೇವರ ರಾಜ್ಯವನ್ನು ಒಳಗೊಳ್ಳುತ್ತದೆ. ಸಂದೇಶವನ್ನು “ರಾಜ್ಯದ ಈ ಸುವಾರ್ತೆ” ಎಂದು ಕರೆಯಲಾಗಿದೆ, ಮತ್ತು ನಮ್ಮ ದಿನದಲ್ಲಿ ಅದು ನಿವಾಸಿತ ಭೂಮಿಯಲ್ಲೆಲ್ಲಾ ಸಾರಲ್ಪಡುತ್ತಿದೆ. (ಮತ್ತಾಯ 24:14) ನಾವು ನಮ್ಮ ನಿರೀಕ್ಷೆಯನ್ನು ಆ ರಾಜ್ಯದಲ್ಲಿ ಇಟ್ಟಲ್ಲಿ, ನಾವು ಬೆಂಬಲಿಸಲ್ಪಡುವೆವೆಂದು ಯೇಸು ನಮಗೆ ಹೇಳಿದನು. ಅವನಂದದ್ದು: “ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:33) ದೇವರು, ಮನಃಕಲ್ಪಿತ ಕಾರುಗಳನ್ನು ಅಥವಾ ಬಹಳ ಸುಖಭೋಗದ ಮನೆಗಳನ್ನು ಕೊಡುವ ವಚನವನ್ನೀಯುವುದಿಲ್ಲ. ಯೇಸು, ಆಹಾರ ಮತ್ತು ಉಡಿಗೆ ತೊಡಿಗೆಯಂತಹ ಜೀವನದ ಆವಶ್ಯಕತೆಗಳ ಕುರಿತಾಗಿ ಮಾತಾಡುತ್ತಿದ್ದನು. (ಮತ್ತಾಯ 6:31) ಆದರೆ ಇಂದು ಯೇಸುವಿನ ವಾಗ್ದಾನವು ಭರವಸಾರ್ಹವಾಗಿದೆಯೆಂದು ಲಕ್ಷಾಂತರ ಜನರು ಸಾಕ್ಷಿಕೊಡಬಲ್ಲರು. ಒಬ್ಬ ವ್ಯಕ್ತಿಯು, ತೀರ ಬಡವನಾಗಿರುವ ಒಬ್ಬ ವ್ಯಕ್ತಿಯು ಸಹ, ರಾಜ್ಯವನ್ನು ಪ್ರಥಮವಾಗಿಡುವಲ್ಲಿ ಪೂರ್ಣವಾಗಿ ತೊರೆಯಲ್ಪಡುವುದಿಲ್ಲ.
ನಾಲ್ಕನೆಯದಾಗಿ, ದೇವರ ರಾಜ್ಯವನ್ನು ಪ್ರಥಮವಾಗಿಡುವವನ ಮನಸ್ಸು ಆರ್ಥಿಕ ಸಂಕಷ್ಟಗಳಿಂದ ಕೆಡಿಸಲ್ಪಡುವುದಿಲ್ಲವೆಂದು ಅವರು ಕಂಡುಹಿಡಿದರು. ಹೌದು, ಒಬ್ಬ ಬಡ ಮನುಷ್ಯನು ಕಠಿನವಾಗಿ ದುಡಿಯಬೇಕಾಗುತ್ತದೆ. ಆದರೆ ಅವನು ದೇವರನ್ನು ಸೇವಿಸುವುದಾದರೆ, ಅವನಿಗೆ ತನ್ನ ಸೃಷ್ಟಿಕರ್ತನೊಂದಿಗೆ ಒಂದು ಸುಯೋಗಿತ ಸಂಬಂಧವಿದೆ. ಆ ಸೃಷ್ಟಿಕರ್ತನ ಕುರಿತಾಗಿ ಬೈಬಲ್ ಹೇಳುವುದು: “ಆತನು ಕುಗ್ಗಿಹೋದವನ ದುರವಸ್ಥೆಯನ್ನು ತಿರಸ್ಕರಿಸಲಿಲ್ಲ, ಅದಕ್ಕೆ ಅಸಹ್ಯಪಡಲಿಲ್ಲ; ತನ್ನ ಮುಖವನ್ನು ಅವನಿಗೆ ಮರೆಮಾಡದೆ ಅವನ ಪ್ರಾರ್ಥನೆಗೆ ಕಿವಿಗೊಟ್ಟನು.” (ಕೀರ್ತನೆ 22:24) ಇದಕ್ಕೆ ಕೂಡಿಸಿ, ಒಬ್ಬ ಬಡ ವ್ಯಕ್ತಿಗೆ ಜೀವನದ ಸಮಸ್ಯೆಗಳನ್ನು ನಿಭಾಯಿಸಲು ಸಹಾಯವಿದೆ. ಅವನು ಜೊತೆ ಕ್ರೈಸ್ತರೊಂದಿಗೆ ಒಂದು ಹೃದಯೋಲ್ಲಾಸದ ಒಡನಾಟದಲ್ಲಿ ಆನಂದಿಸುತ್ತಾನೆ ಮತ್ತು ಯೆಹೋವನ ಪ್ರಕಟಿತ ಚಿತ್ತದ ಕುರಿತಾಗಿ ಜ್ಞಾನ ಮತ್ತು ಅದರಲ್ಲಿ ಭರವಸೆ ಅವನಿಗಿದೆ. ಇವುಗಳಂತಹ ವಿಷಯಗಳು “ಬಂಗಾರಕ್ಕಿಂತಲೂ ಅಪರಂಜಿರಾಶಿಗಿಂತಲೂ ಅಪೇಕ್ಷಿಸತಕ್ಕವುಗಳು.”—ಕೀರ್ತನೆ 19:10.
ಕಟ್ಟಕಡೆಗೆ, ಇನ್ನು ಮುಂದೆ ಬಡತನವಿಲ್ಲ!
ಕೊನೆಯದಾಗಿ, ಯೆಹೋವ ದೇವರು ತನ್ನ ರಾಜ್ಯದ ಮೂಲಕ ಬಡತನದ ಸಮಸ್ಯೆಯನ್ನು ಒಮ್ಮೆಗೆ ಮತ್ತು ಸದಾಕಾಲಕ್ಕಾಗಿ ಬಗೆಹರಿಸಲು ಉದ್ದೇಶಿಸಿದ್ದಾನೆಂದು ಸುವಾರ್ತೆಗೆ ಗಮನಕೊಡುವ ವ್ಯಕ್ತಿಗಳು ಕಲಿಯುತ್ತಾರೆ. ಬೈಬಲ್ ವಾಗ್ದಾನಿಸುವುದು: “ದಿಕ್ಕಿಲ್ಲದವರು ಕಡೆಯ ವರೆಗೆ ಮರೆಯಲ್ಪಡುವದಿಲ್ಲ; ದೀನರ ನಿರೀಕ್ಷಣೆಯು ಕೆಡುವದೇ ಇಲ್ಲ.” (ಕೀರ್ತನೆ 9:18) ರಾಜ್ಯವು, ಯೇಸು ಕ್ರಿಸ್ತನು ಅಧಿಪತಿಯಾಗಿದ್ದು ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿರುವ ಒಂದು ನಿಜ ಸರಕಾರವಾಗಿದೆ. ಬೇಗನೇ, ಆ ರಾಜ್ಯವು ಮಾನವ ವ್ಯವಹಾರಗಳ ಆಡಳಿತ ನಡಿಸುವುದರಲ್ಲಿ ಎಲ್ಲಾ ಮಾನವ ಸರಕಾರಗಳನ್ನು ಸ್ಥಾನಪಲ್ಲಟಗೊಳಿಸುವುದು. (ದಾನಿಯೇಲ 2:44) ಅನಂತರ, ಸಿಂಹಾಸನಕ್ಕೇರಿಸಲ್ಪಟ್ಟ ರಾಜನಾಗಿ, ಯೇಸು “ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.”—ಕೀರ್ತನೆ 72:13, 14.
ಆ ಸಮಯಕ್ಕೆ ಎದುರುನೋಡುತ್ತಾ, ಮೀಕ 4:3, 4 ಹೇಳುವುದು: “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದಿದೆ.” ಇಲ್ಲಿ ಯಾರ ಕುರಿತಾಗಿ ಮಾತಾಡಲಾಗಿದೆ? ದೇವರ ರಾಜ್ಯಕ್ಕೆ ಅಧೀನವಾಗುವವರೆಲ್ಲರ ಕುರಿತಾಗಿಯೇ. ಮಾನವಕುಲವನ್ನು ಬಾಧಿಸುವ ಎಲ್ಲಾ ಸಮಸ್ಯೆಗಳನ್ನು, ಅಸ್ವಸ್ಥತೆ ಮತ್ತು ಮರಣವನ್ನು ಸಹ ರಾಜ್ಯವು ಬಗೆಹರಿಸುವುದು. “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.” (ಯೆಶಾಯ 25:8; 33:24) ಅದು ಎಷ್ಟು ಭಿನ್ನವಾದೊಂದು ಲೋಕವಾಗಿರುವುದು! ಮತ್ತು ನೆನಪಿನಲ್ಲಿಡಿರಿ, ನಾವು ಈ ವಾಗ್ದಾನಗಳನ್ನು ನಂಬಬಲ್ಲೆವು ಯಾಕಂದರೆ ಅವು ಸ್ವತಃ ದೇವರಿಂದಲೇ ಪ್ರೇರಿತವಾಗಿವೆ. ಅವನು ಹೇಳುವುದು: “ನನ್ನ ಜನರು ಸಮಾಧಾನನಿವಾಸದಲ್ಲಿಯೂ ನಿರ್ಭಯನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.”—ಯೆಶಾಯ 32:18.
ದೇವರ ರಾಜ್ಯದಲ್ಲಿ ದೃಢವಿಶ್ವಾಸವು, ಬಡತನದಿಂದ ಉಂಟುಮಾಡಲಾದ ಆತ್ಮಗೌರವದ ಕೊರತೆಯನ್ನು ಜಯಿಸುತ್ತದೆ. ಐಶ್ವರ್ಯವಂತನಾಗಿರುವ ಒಬ್ಬ ಕ್ರೈಸ್ತನು ದೇವರ ದೃಷ್ಟಿಯಲ್ಲಿ ಎಷ್ಟು ಪ್ರಾಮುಖ್ಯನಾಗಿದ್ದಾನೋ ತಾನೂ ಅಷ್ಟೇ ಪ್ರಾಮುಖ್ಯನಾಗಿದ್ದೇನೆಂದು ಒಬ್ಬ ಬಡ ಕ್ರೈಸ್ತನು ಬಲ್ಲನು. ದೇವರು ಇಬ್ಬರನ್ನೂ ಸಮವಾಗಿ ಪ್ರೀತಿಸುತ್ತಾನೆ, ಮತ್ತು ಇಬ್ಬರಿಗೂ ಒಂದೇ ನಿರೀಕ್ಷೆಯಿದೆ. ದೇವರ ರಾಜ್ಯದ ಕೆಳಗೆ, ಬಡತನವು ಗತಕಾಲದ ಒಂದು ಸಂಗತಿಯಾಗುವ ಸಮಯಕ್ಕಾಗಿ ಇಬ್ಬರೂ ಆತುರತೆಯಿಂದ ಎದುರುನೋಡುತ್ತಾರೆ. ಅದು ಎಷ್ಟೊಂದು ಮಹಿಮಾಭರಿತವಾದೊಂದು ಸಮಯವಾಗಿರುವುದು! ಕಟ್ಟಕಡೆಗೆ, ಯಾರೊಬ್ಬನೂ ಬಡವನಾಗಿರನು!
[ಪುಟ 5 ರಲ್ಲಿರುವ ಚಿತ್ರ]
ಜೂಜಾಟ, ಧೂಮಪಾನ, ಮಿತಿಮೀರಿದ ಕುಡಿಕತನ, ಅಮಲೌಷಧದ ದುರುಪಯೋಗ, ಅಥವಾ ಒಂದು ಅನೈತಿಕ ಜೀವನಶೈಲಿಯ ಮೇಲೆ ಸಂಪನ್ಮೂಲಗಳನ್ನು ಏಕೆ ಹಾಳುಮಾಡಬೇಕು?
[ಪುಟ 7 ರಲ್ಲಿರುವ ಚಿತ್ರ]
ತನ್ನ ರಾಜ್ಯದ ಮೂಲಕ ಯೆಹೋವ ದೇವರು ಮಾನವ ಬಡತನದ ಸಮಸ್ಯೆಗಳನ್ನು ಬಗೆಹರಿಸುವನು