ಹಿಮಾಲಯಕ್ಕಿಂತ ಉನ್ನತವಾದ ಒಂದು ಬೆಟ್ಟವನ್ನೇರುವುದು
ಹಿಮಾಲಯ ಪರ್ವತಗಳು! ಆ ಶಬ್ದಗಳು ನಿಮ್ಮನ್ನು ಏನನ್ನು ಕಲ್ಪಿಸಿಕೊಳ್ಳುವಂತೆ ಮಾಡುತ್ತವೆ? ಚಂಡಮಾರುತಗಳಿಂದೊಡಗೂಡಿದ ಭಯಭಕ್ತಿಪ್ರೇರಕವೂ ಹಿಮಮಯವೂ ಆದ ಪರ್ವತ ಶಿಖರಗಳನ್ನೊ? ಜಗತ್ತಿನ ಅತ್ಯುನ್ನತವಾದ ಪರ್ವತದ ತುದಿಯ ಮೇಲೆ ನಿಲ್ಲುವ ಗೆಲುವಿನ ರೋಮಾಂಚನವನ್ನೊ? ನೇಪಾಲದ ಹಿಮಾಲಯ ಪರ್ವತಗಳಲ್ಲಿ, ಎವರೆಸ್ಟ್ ಪರ್ವತವನ್ನು ಹತ್ತುವುದು ನಮ್ಮಲ್ಲಿ ಹೆಚ್ಚಿನವರಿಗೆ ಅಶಕ್ಯವೆ ಸರಿ. ಆದರೂ, ಇಂದು ನೇಪಾಲದಲ್ಲಿ ಅನೇಕ ಜನರು ಹಿಮಾಲಯಕ್ಕಿಂತ ಉನ್ನತವಾದ ಒಂದು ಬೆಟ್ಟವನ್ನು ಏರುತ್ತಿದ್ದಾರೆ! ಈ ಮಹಾ ಬೆಟ್ಟಕ್ಕೆ ಪಯಣಮಾಡುವ ಕುರಿತು ತಿಳಿದುಕೊಳ್ಳುವ ಮೊದಲು, ಚಿಕ್ಕದಾಗಿದ್ದರೂ ಸುಂದರವಾದ ನೇಪಾಲ ರಾಜ್ಯದ ಕಡೆಗೆ ನಾವು ನಸುನೋಟವನ್ನು ಹರಿಸೋಣ.
ನೇಪಾಲ—ಪರ್ವತ ರಾಜ್ಯ
ನೇಪಾಲ ರಾಜ್ಯವು ಅಸಾಮಾನ್ಯ ರಾಜ್ಯ ಯಾಕಂದರೆ ಜಗತ್ತಿನಲ್ಲಿ ಉಳಿದಿರುವ ಕೆಲವೆ ರಾಜಪ್ರಭುತ್ವಗಳಲ್ಲಿ ಅದು ಒಂದು ಮತ್ತು ಅದು ಜಾತ್ಯಾತೀತವಲ್ಲ, ಬದಲಾಗಿ ಧಾರ್ಮಿಕವಾದ ರಾಜ್ಯ. ನೇಪಾಲವು ಜಗತ್ತಿನಲ್ಲಿರುವ ಏಕಮಾತ್ರ ಹಿಂದೂ ರಾಜ್ಯ. ಅದರ ಎರಡು ಕೋಟಿ ನಿವಾಸಿಗಳಲ್ಲಿ ಬಹುಮಂದಿ ಹಿಂದೂಗಳಾಗಿದ್ದಾರೆ. ಆದರೂ, ಅದರ ಜನತೆಯ ಕುಲವರ್ಣೀಯ ಮೂಲಗಳಲ್ಲಿ ಮಹಾ ವೈವಿಧ್ಯವಿದೆ. ಉತ್ತರದ ಪರ್ವತಮಯ ಪ್ರಾಂತ್ಯದಲ್ಲಿ ವಾಸಿಸುವವರು ಮುಖ್ಯವಾಗಿ ಟಿಬೆಟ್-ಬರ್ಮಾ ಮೂಲದವರಾಗಿರುವಾಗ, ದಕ್ಷಿಣದ ಬಯಲು ಸೀಮೆಗಳ ಜನರು ಪ್ರಧಾನವಾಗಿ ಹಿಂದೂ-ಆರ್ಯ ಹಿನ್ನೆಲೆಯವರು. ದೇಶದ ಅಧಿಕೃತ ಭಾಷೆ ನೇಪಾಲಿ, ಅದು ಸುಮಾರು 60 ಪ್ರತಿಶತ ಜನರ ಮಾತೃ ಭಾಷೆ. ಉಳಿದವರು 18 ಕ್ಕಿಂತಲೂ ಹೆಚ್ಚು ಕುಲಸಂಬಂಧವಾದ ಭಾಷೆಗಳನ್ನಾಡುತ್ತಾರೆ.
ನೇಪಾಲದ ಆಕಾರವು ಸ್ವಲ್ಪಮಟ್ಟಿಗೆ ಸಮಚತುಷ್ಕೋನ, ಪೂರ್ವದಿಂದ ಪಶ್ಚಿಮಕ್ಕೆ 880 ಕಿಲೊಮೀಟರ್ ಮತ್ತು ಉತ್ತರದಿಂದ ದಕ್ಷಿಣಕ್ಕೆ 200 ಕಿಲೊಮೀಟರ್. ಉತ್ತರ ಗಡಿನಾಡನ್ನು ರೂಪಿಸುವ ಭಯಭಕ್ತಿಪ್ರೇರಕ ಹಿಮಾಲಯ ಪರ್ವತ ಶ್ರೇಣಿಯಲ್ಲಿ, ಜಗತ್ತಿನಲ್ಲಿ ಅತ್ಯಂತ ಉನ್ನತ ಶಿಖರವಾದ 8,848 ಮೀಟರ್ ಎತ್ತರದ ಎವರೆಸ್ಟ್ ಪರ್ವತ ಮತ್ತು 8,000 ಮೀಟರ್ ಎತ್ತರದ ಬೇರೆ ಎಂಟು ಪರ್ವತ ಶಿಖರಗಳು ಕೂಡಿವೆ. ಮಧ್ಯ ನೇಪಾಲದಲ್ಲಿ ಚಿಕ್ಕ ಗುಡ್ಡಗಳು, ಸರೋವರಗಳು ಮತ್ತು ಕಣಿವೆಗಳು ಕೂಡಿವೆ. ಇನ್ನೂ ದಕ್ಷಿಣಕ್ಕೆ, ಭಾರತದ ಗಡಿನಾಡಿನಲ್ಲಿ ಫಲವತ್ತಾದ ಮುಖ್ಯ ವ್ಯಾವಸಾಯಿಕ ಪ್ರದೇಶವಾದ ತರೈ ನೆಲೆಸಿರುತ್ತದೆ.
ರಾಜಧಾನಿಯಾದ ಕಾಟ್ಮಂಡೂ, ನಡು ಪ್ರದೇಶದಲ್ಲಿ ನೆಲೆಸಿದ್ದು ಯಾತ್ರಿಕರಿಗೆ ಒಂದು ಆಮೋದಕರ ಸ್ಥಳವಾಗಿದೆ. ಭವ್ಯವಾದ ಬೆಟ್ಟಗಳ ಮೇಲಿನ ವಿಮಾನ ಸಂಚಾರಗಳನ್ನು, ವನ್ಯಜೀವಿಗಳ ತೋಪುಗಳಿಗೆ ಪ್ರವಾಸಗಳನ್ನು, ಮತ್ತು ಅನೇಕ ಸ್ಥಳಿಕ ಪ್ರೇಕ್ಷಣೀಯ ನೋಟಗಳನ್ನು ಅದು ನೀಡುತ್ತದೆ. ನೇಪಾಲನ್ನು ಕೆಲವೊಮ್ಮೆ ದೇವತೆಗಳ ತಗ್ಗು ಎಂದು ಕರೆಯಲಾಗುತ್ತದೆ ಯಾಕಂದರೆ ಧರ್ಮವು ಅದರ ಜನರ ಜೀವನದಲ್ಲಿ ಅತಿ ಪ್ರಭಾವಯುಕ್ತ ಪಾತ್ರವನ್ನು ವಹಿಸುತ್ತದೆ. ಭೂಸುತ್ತಲಿನ ಲಕ್ಷಾಂತರ ಜನರು ಹಿಮಾಲಯಕ್ಕಿಂತಲೂ ಹೆಚ್ಚು ಉನ್ನತವಾದ “ಬೆಟ್ಟ” ವನ್ನು ಏರುವುದಕ್ಕೆ ಕಾರಣವೂ ಧರ್ಮವೇ ಆಗಿದೆ.
ಸುಮಾರು 2,700 ವರ್ಷಗಳ ಹಿಂದೆ, ಹೀಬ್ರು ಪ್ರವಾದಿಯಾದ ಯೆಶಾಯನು ಹೀಗೆ ಮುಂತಿಳಿಸಲು ಪ್ರೇರಿಸಲ್ಪಟ್ಟಿದ್ದನು, “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; . . . ಹೊರಟುಬಂದ ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ, . . . ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು.” (ಯೆಶಾಯ 2:2, 3) ಇಲ್ಲಿ, ನಿರ್ಮಾಣಿಕನೂ ವಿಶ್ವದ ಸಾರ್ವಭೌಮ ಪ್ರಭುವೂ ಆಗಿರುವ ಯೆಹೋವನ ಎತ್ತರಿಸಲ್ಪಟ್ಟ ಶುದ್ಧಾರಾಧನೆಯು, ಬೇರೆಲ್ಲಾ ಬೆಟ್ಟದಂತಹ ಆರಾಧನಾ ಪದ್ಧತಿಗಳಿಗಿಂತ ಉನ್ನತೋನ್ನತವಾಗಿರುವ ಒಂದು ಬೆಟ್ಟಕ್ಕೆ ಹೋಲಿಸಲ್ಪಟ್ಟಿದೆ. ಸತ್ಯಕ್ಕಾಗಿ ಹಸಿದ ಜನರಿಗೆ ಯೆಹೋವನ ಮಾರ್ಗಗಳ ಕುರಿತು ಕಲಿಯಲು ನೆರವಾಗುವ ಒಂದು ಜಗದ್ವ್ಯಾಪಕ ಶೈಕ್ಷಣಿಕ ಕಾರ್ಯದ ವಿಷಯವು ಅದಾಗಿದೆ. ನೇಪಾಲದಲ್ಲಿ ಈ ಕಾರ್ಯವು ಪ್ರಾರಂಭವಾದದ್ದು ಹೇಗೆ?
ಚಿಕ್ಕ ಪ್ರಾರಂಭಗಳು
ಎರಡನೆಯ ಜಾಗತಿಕ ಯುದ್ಧದಲ್ಲಿ ಬ್ರಿಟಿಷ್ ಸೇನೆಯ ಸೈನಿಕನೊಬ್ಬನು ಸತ್ಯ ಧರ್ಮಕ್ಕಾಗಿ ಹುಡುಕುತ್ತಿದ್ದನು. ಅವನ ನೇಪಾಲಿ-ಹಿಂದೂ ಹೆತ್ತವರು ಕ್ಯಾತೊಲಿಕ್ ಧರ್ಮಕ್ಕೆ ಪರಿವರ್ತಿತರಾಗಿದ್ದರು. ಅವನು ಬೆಳೆದು ದೊಡ್ಡವನಾದಂತೆ, ವಿಗ್ರಹಾರಾಧನೆಯ ವ್ಯರ್ಥತೆಯನ್ನು ಕಂಡನು, ನರಕಾಗ್ನಿ ತತ್ವದಂತಹ ಬೋಧನೆಗಳನ್ನು ನಿರಾಕರಿಸಿದನು, ಮತ್ತು ಪ್ರಾಟೆಸ್ಟಂಟ್ ಚರ್ಚುಗಳ ಮತ ನಂಬಿಕೆಗಳನ್ನು ಪರೀಕ್ಷಿಸಲು ತೊಡಗಿದನು. ಆದರೆ ಅವನಿಗೆ ತೃಪ್ತಿಯಾಗಲಿಲ್ಲ.
ಆಗ ಯಾವುದು ಬರ್ಮಾದ ರಂಗೂನ್ ಆಗಿತ್ತೊ, ಅಲ್ಲಿ ಜಪಾನಿನವರಿಂದ ಕೈದಿಯಾಗಿ ಒಯ್ಯಲ್ಪಟ್ಟ ಈ ಸೈನಿಕನು, ತನ್ನ ಸತ್ಯಾನ್ವೇಷಣೆಯನ್ನು ಮುಂದುವರಿಸಲಾಗುವಂತೆ ಶ್ರಮ ಶಿಬಿರದ ಉಗ್ರತೆಗಳನ್ನು ಪಾರಾಗಿ ಉಳಿಯಲು ಪ್ರಾರ್ಥಿಸಿದನು. ಆಮೇಲೆ ಅವನು ತನ್ನ ಸೆರೆಯವರಿಂದ ತಪ್ಪಿಸಿಕೊಳ್ಳಲು ಶಕ್ತನಾಗಿ, ಯಾರ ಮನೆಯಲ್ಲಿ ಜೆ. ಎಫ್. ರಥರ್ಫರ್ಡ್ರಿಂದ ಬರೆಯಲ್ಪಟ್ಟ ಮೃತರು ಎಲ್ಲಿದ್ದಾರೆ? (ಇಂಗ್ಲಿಷ್) ಎಂಬ ಪುಸ್ತಿಕೆಯನ್ನು ಕಂಡನೋ, ಆ ಶಾಲಾ ಅಧ್ಯಾಪಕನಿಂದ ಸಹಾಯ ಮಾಡಲ್ಪಟ್ಟನು. ಸತ್ಯದ ಸುಳಿವನ್ನು ಗ್ರಹಿಸಿಕೊಂಡವನಾಗಿ, 1947 ರಲ್ಲಿ ಯೆಹೋವನ ಸಾಕ್ಷಿಗಳು ರಂಗೂನ್ನಲ್ಲಿ ಅವನನ್ನು ಭೇಟಿಯಾದಾಗ ಅವನು ಆತುರದಿಂದ ಅಧ್ಯಯನಕ್ಕೆ ಒಪ್ಪಿದನು. ಕೆಲವೇ ತಿಂಗಳುಗಳೊಳಗೆ ಅವನಿಗೆ ದೀಕ್ಷಾಸ್ನಾನವಾಯಿತು, ಅವನ ಯುವ ಪತ್ನಿಯೂ ತುಸು ಸಮಯದಲ್ಲಿ ಸ್ನಾನಿತಳಾದಳು. ಈಶಾನ್ಯ ಪರ್ವತ ಪ್ರಾಂತ್ಯದಲ್ಲಿರುವ ಅವರ ಹುಟ್ಟೂರಾದ ಕಾಲಿಮ್ಪಾಂಗ್ನಲ್ಲಿ ನೆಲೆಸಲಿಕ್ಕಾಗಿ ಭಾರತಕ್ಕೆ ಹಿಂದಿರುಗಿ ಬರಲು ಅವರು ನಿರ್ಧರಿಸಿದರು. ಇಲ್ಲಿ ಅವರ ಇಬ್ಬರು ಮಕ್ಕಳು ಹುಟ್ಟಿ, ವಿದ್ಯಾಭ್ಯಾಸ ಪಡೆದರು. ಮಾರ್ಚ್ 1970 ರಲ್ಲಿ ಅವರು ಕಾಟ್ಮಂಡೂಗೆ ಸ್ಥಳಾಂತರಿಸಿದರು.
ನೇಪಾಲದ ರಾಜ್ಯ ಶಾಸನವು ಮತಾಂತರವನ್ನು ನಿಷೇಧಿಸಿದೆ. ವಿದೇಶೀಯವೆನ್ನಲಾಗುವ ಧರ್ಮವೊಂದನ್ನು ಪ್ರಸಾರಮಾಡುತ್ತಿರುವವನಾಗಿ ಕಂಡುಬರುವ ಯಾವನಾದರೂ ಏಳು ವರ್ಷದ ಸೆರೆಮನೆಗೆ ಗುರಿಯಾಗುತ್ತಿದ್ದನು, ಮತ್ತು ಅಂತಹ ಧರ್ಮಕ್ಕೆ ಸೇರಿದ ವ್ಯಕ್ತಿಗೆ ಮೂರು ವರ್ಷದ ಜೈಲು ಸಜೆ ಮತ್ತು ಭಾರಿ ದಂಡವನ್ನು ವಿಧಿಸಸಾಧ್ಯವಿತ್ತು. ಆದುದರಿಂದ ಸಾಕ್ಷಿ ಕಾರ್ಯವನ್ನು ಜಾಗರೂಕತೆಯಿಂದ ಮಾಡಬೇಕಿತ್ತು, ಮನೆ ಮನೆಯ ಶುಶ್ರೂಷೆಯೆಂದರೆ, ಒಂದು ಮನೆಯನ್ನು ಸಂದರ್ಶಿಸುವುದು ಮತ್ತು ಆಮೇಲೆ ಇನ್ನೊಂದು ಕ್ಷೇತ್ರಕ್ಕೆ ಹೋಗಿ ಅಲ್ಲಿ ಇನ್ನೊಂದು ಮನೆಯನ್ನು ಸಂದರ್ಶಿಸುವುದಾಗಿತ್ತು. ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ಅನೌಪಚಾರಿಕ ಸಾಕ್ಷಿಯು ಒಂದು ದೊಡ್ಡ ಪಾತ್ರವನ್ನು ವಹಿಸಿತ್ತೆಂಬುದು ಒಪ್ಪತಕ್ಕದ್ದೆ.
ಪ್ರಗತಿಯು ಅತಿ ನಿಧಾನವಾಗಿತ್ತು. ಸುಮಾರು ಒಂದು ಕೋಟಿ ಜನಸಂಖ್ಯೆಯಿರಲಾಗಿ, ಕ್ಷೇತ್ರವು ನಿರುತ್ತೇಜನಕರವಾಗಿ ಕಂಡಿತು. ಈ ಒಂಟಿ ಕುಟುಂಬವು ತನ್ನ ಮಿತ್ರರಿಗೆ, ಪರಿಚಯಸ್ಥರಿಗೆ, ಮಾಲಿಕರಿಗೆ, ಮತ್ತು ಸಹೋದ್ಯೋಗಿಗಳಿಗೆ ಸಾಕ್ಷಿಕೊಟ್ಟಾಗ ಸತ್ಯದ ಬೀಜಗಳು ಹಾಕಲ್ಪಟ್ಟವು. ಅವರು ತಮ್ಮ ಮನೆಯಲ್ಲಿ ಕ್ರಮದ ಕೂಟಗಳನ್ನು ನಡಿಸಿ, ಆಸಕ್ತ ಜನರನ್ನು ತಮ್ಮೊಂದಿಗೆ ಜೊತೆಗೂಡಲು ಆಮಂತ್ರಿಸಿದರು. ಕೊನೆಗೆ, ಮಾರ್ಚ್ 1974 ರಲ್ಲಿ, ನಾಲ್ಕು ವರ್ಷಗಳ ಎಡೆಬಿಡದ ನೆಡುವಿಕೆ ಮತ್ತು ನೀರುಹೊಯ್ಯುವಿಕೆಯಾದ ಮೇಲೆ, ನೇಪಾಲದ ಪ್ರಥಮ ಫಲವು ಹೊರಬಂತು—ಅದೂ ಒಂದು ಅಸಂಭವನೀಯ ಮೂಲದಿಂದ!
ಪ್ರಚಾರಕನು ಒಂದು ಮನೆಯನ್ನು ಸಂದರ್ಶಿಸಿದಾಗ, ರಾಜಮನೆತನದ ಸದಸ್ಯನೊಬ್ಬನ ಕಾರ್ಯದರ್ಶಿಯಾಗಿದ್ದ ಒಬ್ಬ ಶ್ರೀಮಂತ ಮನುಷ್ಯನೊಂದಿಗೆ ಮಾತಾಡಿದನು. “ನನ್ನ ಮಗನೊಂದಿಗೆ ಮಾತಾಡು” ಎಂದನು ಆ ಮನುಷ್ಯನು. ಅವನ ಮಗನು ಬೈಬಲ್ ಅಧ್ಯಯನಕ್ಕೆ ಒಪ್ಪಿದನು. ಸಕಾಲದಲ್ಲಿ ಜೂಜಾಟದ ಕ್ಯಾಸಿನೊದಲ್ಲಿ ಅವನು ಕೆಲಸಮಾಡುತ್ತಿದ್ದುದರಿಂದ ತನ್ನ ಉದ್ಯೋಗವನ್ನೂ ಬದಲಾಯಿಸಿದನು. ಧರ್ಮನಿಷ್ಠ ಹಿಂದೂವಾದ ಅವನ ತಂದೆ ಅವನನ್ನು ವಿರೋಧಿಸಿದನು. ಆದರೂ ಈ ಯುವಕನು ಯೆಹೋವನಿಗಾಗಿ ತನ್ನ ನಿಲುವನ್ನು ತೆಗೆದುಕೊಂಡನು. ಫಲಿತಾಂಶ? ಅವನ ತಂದೆ ತರುವಾಯ ವಿರೋಧಿಸುವುದನ್ನು ನಿಲ್ಲಿಸಿದನು, ಮತ್ತು ಆಪ್ತ ಸಂಬಂಧಿಗಳ ಗುಂಪೊಂದು ಬೈಬಲ್ ಸತ್ಯವನ್ನು ಸ್ವೀಕರಿಸಿತು. ಅವನು ಈಗ ಕ್ರೈಸ್ತ ಸಭೆಯ ಒಬ್ಬ ಹಿರಿಯನಾಗಿ ಸೇವೆಮಾಡುತ್ತಿದ್ದಾನೆ.
ಆತ್ಮಿಕವಾಗಿ ದೃಢವಾಗಿ ಉಳಿಯಲು ಮತ್ತು ತಾವು ಕೂಟವಾಗಿ ಕೂಡಿಬರುವುದನ್ನು ಬಿಟ್ಟುಬಿಡದಂತೆ ಕೊಡಲ್ಪಟ್ಟ ಶಾಸ್ತ್ರೀಯ ಆಜ್ಞೆಯನ್ನು ಪಾಲಿಸಲು, ಕಾಟ್ಮಂಡೂವಿನ ಒಂದು ಚಿಕ್ಕ ಗುಂಪು ಒಂದು ಖಾಸಗಿ ಮನೆಯಲ್ಲಿ ಕ್ರಮದ ಕೂಟಗಳನ್ನು ನಡಿಸಿತು. ಆದರೆ ಬಹುಮಟ್ಟಿಗೆ ಸಹೋದರರು ದೊಡ್ಡ ಸಮ್ಮೇಳಗಳನ್ನು ಹಾಜರಾಗಲು ಶಕ್ತರಿರಲಿಲ್ಲ. ಹಾಗೆ ಮಾಡಲು ಅನುಕೂಲವಿದ್ದವರು ಸಮ್ಮೇಳನಗಳಿಗಾಗಿ ಭಾರತಕ್ಕೆ ಪ್ರಯಾಣಮಾಡಿದರು—ಅದು ಪರ್ವತ ಶ್ರೇಣಿಗಳ ಮೇಲಣ ದೀರ್ಘವಾದ ಮತ್ತು ಹೆಚ್ಚು ದುಬಾರಿಯಾದ ಪಯಣ.
ಜಿಲ್ಲಾ ಅಧಿವೇಶನದ ಇಡೀ ಕಾರ್ಯಕ್ರಮವು ಅವರು ಕೂಟಗಳನ್ನು ನಡಿಸುತ್ತಿದ್ದ ಮನೆಯಲ್ಲಿ ಏರ್ಪಡಿಸಲ್ಪಟ್ಟದ್ದು ಅದೆಂಥ ಹರ್ಷಭರಿತ ಸಂದರ್ಭ! ನಾಲ್ವರು ಸಹೋದರರು, ಭಾರತದ ಬ್ರಾಂಚ್ನ ಒಬ್ಬ ಸದಸ್ಯನೂ ಸೇರಿ, ಇಡೀ ಕಾರ್ಯಕ್ರಮವನ್ನು ನಿರ್ವಹಿಸುವುದನ್ನು ಕಲ್ಪಿಸಿಕೊಳ್ಳಿರಿ! ಬೈಬಲ್ ಡ್ರಾಮವನ್ನು ಸಹ ನಿರ್ವಹಿಸಲಾಯಿತು. ಹೇಗೆ? ಭಾರತದಲ್ಲಿ ಒಂದು ಡ್ರೆಸ್ ರಿಹರ್ಸಲ್ನಲ್ಲಿ ಸ್ಲೈಡ್ಗಳನ್ನು ತೆಗೆಯಲಾಗಿತ್ತು. ನೇಪಾಲದಲ್ಲಿ ಈ ಸ್ಲೈಡ್ಗಳನ್ನು ಟೇಪ್ ಮಾಡಲ್ಪಟ್ಟ ಸಂವಾದದ ಜೊತೆಯಲ್ಲಿ ಪರದೆಯ ಮೇಲೆ ಪ್ರದರ್ಶಿಸಲಾಯಿತು. ಸಭಿಕರು ಅದನ್ನು ಇಷ್ಟಪಟ್ಟರು. ಶ್ರೋತೃಗಳ ಸಭೆ ಎಷ್ಟು ದೊಡ್ಡದಿತ್ತು? ಹದಿನೆಂಟು ಜನರು!
ಸಾರುವ ಕೆಲಸಕ್ಕೆ ದೇಶದ ಹೊರಗಿನಿಂದ ಬರುವ ಸಹಾಯ ಸೀಮಿತವಾಗಿತ್ತು. ಮಿಷನೆರಿ ಕಾರ್ಯವು ಶಕ್ಯವಿರಲಿಲ್ಲ, ಮತ್ತು ವಿದೇಶೀಯರಿಗೆ ಐಹಿಕ ಕೆಲಸ ಸಿಗುವುದು ಸುಲಭವಾಗಿರಲಿಲ್ಲ. ಆದರೂ, ಭಾರತದ ಇಬ್ಬರು ಸಾಕ್ಷಿಗಳಿಗೆ ನೇಪಾಲದಲ್ಲಿ ಬೇರೆ ಬೇರೆ ಸಮಯದಲ್ಲಿ ಕೆಲಸ ಸಿಕ್ಕಿತು. ಅವರು ಕಾಟ್ಮಂಡೂವಿನಲ್ಲಿ ಹಲವಾರು ವರ್ಷಗಳನ್ನು ಕಳೆದು, ಹೊಸದಾಗಿ ರಚಿತವಾದ ಸಭೆಯನ್ನು ಬಲಪಡಿಸಲು ಸಹಾಯ ಮಾಡಿದರು. 1976 ರೊಳಗೆ ಕಾಟ್ಮಂಡೂವಿನಲ್ಲಿ 17 ರಾಜ್ಯ ಪ್ರಚಾರಕರಿದ್ದರು. 1985 ರಲ್ಲಿ ಸಹೋದರರು ತಮ್ಮ ಸ್ವಂತ ರಾಜ್ಯ ಸಭಾಗೃಹವನ್ನು ಕಟ್ಟಿದರು. ರಾಜ್ಯ ಸಭಾಗೃಹದ ನಿರ್ಮಾಣವು ಪೂರ್ಣಗೊಂಡಾಗ, ವಾರ್ಷಿಕ ಜಿಲ್ಲಾ ಅಧಿವೇಶನಗಳು ಹಾಗೂ ಇತರ ಸಮ್ಮೇಳನಗಳು ಅಲ್ಲಿ ಕ್ರಮವಾಗಿ ನಡಿಸಲ್ಪಡತೊಡಗಿದವು. ಆ ಅತಿದೂರದ ಪರ್ವತಮಯ ಕ್ಷೇತ್ರದಲ್ಲಿ ಆ ರಾಜ್ಯ ಸಭಾಗೃಹವು ನಿಜವಾಗಿಯೂ ಶುದ್ಧಾರಾಧನೆಯ ಕೇಂದ್ರವಾಗಿತ್ತು.
ಕಷ್ಟಗಳ ಹೊರತೂ ವಿಸ್ತಾರ್ಯ
ಆ ಪ್ರಾರಂಭದ ವರ್ಷಗಳಲ್ಲಿ ಬಹಳ ಎಚ್ಚರಿಕೆಯಿಂದ ನಡಿಸಲ್ಪಟ್ಟ ಸಾರುವ ಕಾರ್ಯವು ಅಧಿಕಾರಿಗಳ ಹೆಚ್ಚು ಗಮನವನ್ನು ಎಬ್ಬಿಸಿರಲಿಲ್ಲ. ಆದರೆ 1984ರ ಅಂತ್ಯದ ಸುಮಾರಿಗೆ ನಿರ್ಬಂಧಗಳು ಹಾಕಲ್ಪಡತೊಡಗಿದವು. ಒಬ್ಬ ಸಹೋದರನನ್ನು ಮತ್ತು ಮೂವರು ಸಹೋದರಿಯರನ್ನು ದಸ್ತಗಿರಿ ಮಾಡಿ ನಾಲ್ಕು ದಿನ ಕೈದಿನಲ್ಲಿಟ್ಟು, ಅವರ ಚಟುವಟಿಕೆಯನ್ನು ಮುಂದುವರಿಸಬಾರದೆಂಬ ಎಚ್ಚರಿಕೆಯೊಂದಿಗೆ ಬಿಡುಗಡೆಮಾಡಲಾಯಿತು. ಒಂದು ಹಳ್ಳಿಯಲ್ಲಿ ತಮ್ಮ ಮನೆಗಳಲ್ಲಿ ಬೈಬಲ್ ಅಧ್ಯಯಗಳನ್ನು ನಡಿಸುತ್ತಿರುವಾಗ ಒಂಬತ್ತು ಮಂದಿ ದಸ್ತಗಿರಿ ಮಾಡಲ್ಪಟ್ಟರು. ಆರು ಮಂದಿಯನ್ನು 43 ದಿನಗಳ ತನಕ ಸೆರೆಯಲ್ಲಿಡಲಾಯಿತು. ಹಲವಾರು ಬೇರೆ ದಸ್ತಗಿರಿಗಳಾದವು, ಆದರೆ ಯಾವ ಕಾನೂನುಬದ್ಧ ಕ್ರಮವನ್ನು ಕೈಕೊಳ್ಳಲಿಲ್ಲ.
1989 ರಷ್ಟು ಈಚೆಗೆ, ಒಂದು ಸಭಾ ಪುಸ್ತಕಭ್ಯಾಸದ ಎಲ್ಲ ಸಹೋದರ ಮತ್ತು ಸಹೋದರಿಯರನ್ನು ಕೈದು ಮಾಡಿ, ಮೂರು ದಿನ ಸೆರೆಯಲ್ಲಿಟ್ಟು, ಆಮೇಲೆ ಬಿಟ್ಟುಬಿಡಲಾಯಿತು. ಕೆಲವೊಮ್ಮೆ, ತಾವು ಸಾರುವುದಿಲ್ಲ ಎಂಬ ಹೇಳಿಕೆಗೆ ಸಹಿ ಹಾಕುವಂತೆ ಅವರಿಗೆ ಹೇಳಲಾಯಿತು. ಅವರು ನಿರಾಕರಿಸಿದರು. ಪುನಃ ಸಾರುವಾಗ ಹಿಡಿಯಲ್ಪಟ್ಟಲ್ಲಿ ಸಿಗುವ ಶಿಕ್ಷೆಗಳನ್ನು ಅನುಭವಿಸಲು ತಾವು ಸಿದ್ಧರೆಂದನ್ನುವ ಹೇಳಿಕೆಗೆ ಸಹಿ ಹಾಕಿದ ಮೇಲೆ ಮಾತ್ರ ಕೆಲವರನ್ನು ಬಿಟ್ಟುಬಿಡಲಾಯಿತು.
ಅಂತಹ ಕಷ್ಟಗಳ ಹೊರತೂ ಸಹೋದರರು ಹುರುಪಿನಿಂದ ರಾಜ್ಯ ಸುವಾರ್ತೆ ಸಾರುವುದನ್ನು ಮುಂದುವರಿಸಿದರು. ದೃಷ್ಟಾಂತಕ್ಕಾಗಿ, 1985 ರಲ್ಲಿ, ಸರ್ಕಾರದ ಹಸ್ತಕ್ಷೇಪವು ಆರಂಭವಾದ ಒಂದು ವರ್ಷದ ಬಳಿಕ, ಸಾರುವವರ ಸಂಖ್ಯೆಯಲ್ಲಿ 21 ಪ್ರತಿಶತ ಅಭಿವೃದ್ಧಿಯಾಯಿತು. ಆ 35 ಪ್ರಚಾರಕರು ಶುದ್ಧಾರಾಧನೆಯ ಕುರಿತು ಇತರರೊಂದಿಗೆ ಮಾತಾಡುವುದರಲ್ಲಿ, ತಿಂಗಳಿಗೆ ಸರಾಸರಿ 20 ತಾಸುಗಳನ್ನು ಕಳೆದರು.
ಸಮಯ ಕಳೆದಂತೆ, ನೇಪಾಲದಲ್ಲಿ ರಾಜಕೀಯ ಬದಲಾವಣೆಗಳು ಸಂಭವಿಸಲು ತೊಡಗಿದವು. ಯೆಹೋವನ ಸಾಕ್ಷಿಗಳು ಯಾವ ಬೆದರಿಕೆಯೂ ಅಲ್ಲವೆಂದು ಸರ್ಕಾರಿ ಅಧಿಕಾರಿಗಳು ಗ್ರಹಿಸತೊಡಗಿದರು. ವಾಸ್ತವದಲ್ಲಿ, ಅವರ ಬೈಬಲಿನ ಶೈಕ್ಷಣಿಕ ಕಾರ್ಯವು ಜನರ ಮೇಲೆ ಒಳ್ಳೆಯ, ಬಲವರ್ಧಕ ಪರಿಣಾಮಗಳನ್ನು ಹಾಕಿ, ಅವರನ್ನು ಹೆಚ್ಚು ಒಳ್ಳೆಯ ನಾಗರಿಕರನ್ನಾಗಿ ಮಾಡಿತು. ಪ್ರಾಮಾಣಿಕತೆ, ಕಷ್ಟದ ದುಡಿತ, ಉದಾತ್ತ ನೈತಿಕ ವರ್ತನೆಯು ಯೆಹೋವನ ಆರಾಧಕರ ಮೂಲಭೂತ ಆವಶ್ಯಕತೆಗಳಾಗಿ ಒತ್ತಿಹೇಳಲ್ಪಡುವುದನ್ನು ಅಧಿಕಾರಿಗಳು ಕಂಡರು.
ಹಿಂದಿನ ಧರ್ಮನಿಷ್ಠ ಹಿಂದೂ ಸ್ತ್ರೀಯೊಬ್ಬಳು ಸಾಕ್ಷಿಯಾಗಿ ರಕ್ತಪೂರಣವನ್ನು ಸ್ವೀಕರಿಸಲು ನಿರಾಕರಿಸಿದಾಗ ಒಂದು ಒಳ್ಳೆಯ ಸಾಕ್ಷಿ ಕೊಡಲ್ಪಟ್ಟಿತು. ಅವಳ ಸ್ಥಿರವಾದ, ಸುಶಿಕ್ಷಿತ ನಿಲುವಿನಿಂದ ವೈದ್ಯರು ಬೆರಗಾದರು. ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಎಂಬ ಬ್ರೋಷರಿನ ಸಹಾಯದಿಂದ ಸತ್ಯವನ್ನು ಕಲಿಯುವಂತೆ ಈ ಸ್ತ್ರೀಯು ಸಹಾಯ ಮಾಡಲ್ಪಟ್ಟಿದ್ದಳು. ಅವಳ ಕುಟುಂಬದಿಂದ ಬಂದ ವಿರೋಧ ಮತ್ತು ನಿಂದೆಯ ಮಧ್ಯೆಯೂ, 1990 ರಲ್ಲಿ, ತನ್ನ 70 ನೆಯ ವಯಸ್ಸಿಗೆ ಹತ್ತರಿಸಿದಂತೆ, ಆಕೆ ದೀಕ್ಷಾಸ್ನಾನ ಪಡೆದುಕೊಂಡಳು. ತದನಂತರ ಅವಳು ಬಿದ್ದು ಕಾಲು ಮುರಿದುಕೊಂಡಳು, ಮತ್ತು ಇತರ ತೊಡಕುಗಳನ್ನು ಸಹ ಅನುಭವಿಸಿದುದರಿಂದ ಒಂದು ದೊಡ್ಡ ಶಸ್ತ್ರಕ್ರಿಯೆಗೆ ಒಳಗಾಗಬೇಕಾಯಿತು. ರಕ್ತಪೂರಣವನ್ನು ತೆಗೆದುಕೊಳ್ಳುವಂತೆ ವೈದ್ಯರ ಮತ್ತು ಸಂಬಂಧಿಕರ ಒತ್ತಡವನ್ನು ಎರಡು ವಾರ ಅವಳು ಎದುರಿಸಿದಳು. ಕೊನೆಗೆ, ಶಸ್ತ್ರಕ್ರಿಯೆಯ ತಂಡವು ರಕ್ತವಿಲ್ಲದೇ ಯಶಸ್ವಿಯಾಗಿ ಶಸ್ತ್ರಕ್ರಿಯೆ ಮಾಡಿತು. ಈಗ ಸೀಮಿತ ಚಲನೆಯುಳ್ಳವಳಾದರೂ, ಈ ನಂಬಿಗಸ್ತ ಸಹೋದರಿಯು ಪ್ರತಿ ದಿನ ಬೆಳಿಗ್ಗೆ ತನ್ನ ಗೇಟಿನ ಬಳಿ ಕುಳಿತುಕೊಂಡು, ಹಾದುಹೋಕರನ್ನು ತನ್ನ ಬಳಿ ಕುಳಿತುಕೊಳ್ಳುವಂತೆ ಆಮಂತ್ರಿಸಿ, ಕೆಲವು ಉಲ್ಲಾಸಭರಿತ ಸುವಾರ್ತೆಯನ್ನು ಕೇಳುವಂತೆ ಆಮಂತ್ರಿಸುತ್ತಾಳೆ.
ಇಂದು ನೇಪಾಲ
ಇಂದು ನೇಪಾಲದಲ್ಲಿ ವಿಷಯವು ಹೇಗಿದೆ? ಜಗದ್ವ್ಯಾಪಕವಾಗಿ ಅವರ ಸಹೋದರರು ಮಾಡುವ ಪ್ರಕಾರ ಇಲಿಯ್ಲೂ ಯೆಹೋವನ ಸಾಕ್ಷಿಗಳು ಸಾಕಷ್ಟು ಪ್ರಮಾಣದ ಆರಾಧನಾ ಸ್ವಾತಂತ್ರ್ಯವನ್ನು ಆನಂದಿಸುತ್ತಾರೆ. ಸಾಂಕೇತಿಕ ಪರ್ವತವನ್ನು ಹತ್ತುವ ಒಬ್ಬಿಬ್ಬರು, ಸತ್ಯಾರಾಧನೆಯ ಬೆಟ್ಟವನ್ನು ಹತ್ತುವವರೊಂದಿಗೆ ಜೊತೆಗೂಡಲಾರಂಭಿಸಿದ ಸಮಯದಿಂದ, ಜನರು ಅಧಿಕಾಧಿಕ ಸಂಖ್ಯೆಯಲ್ಲಿ, ‘ಬನ್ನಿರಿ, ಯೆಹೋವನ ಪರ್ವತಕ್ಕೆ ಹೋಗೋಣ’ ಎಂದು ಹೇಳಿದ್ದಾರೆ. 1989 ರೊಳಗೆ ಪ್ರತಿ ತಿಂಗಳು ಸರಾಸರಿ 43 ಮಂದಿ ಸಾರುವ ಕಾರ್ಯದಲ್ಲಿ ಪಾಲಿಗರಾದರು, ಮತ್ತು ಆ ವರ್ಷ ಕ್ರಿಸ್ತನ ಮರಣದ ಸ್ಮಾರಕಕ್ಕೆ 204 ಮಂದಿ ಉಪಸ್ಥಿತರಿದ್ದರು.
ಅನಂತರ, ವಾಗ್ದಾನವಿತ್ತ ಪ್ರಕಾರ, ಯೆಹೋವನು ತನ್ನ ಆಲಯಕ್ಕೆ ಸತ್ಯಾನ್ವೇಷಕರ ಒಂದುಗೂಡುವಿಕೆಯನ್ನು ತರ್ವೆಗೊಳಿಸಲಾರಂಭಿಸಿದನು. (ಯೆಶಾಯ 60:22) ಸ್ವಲ್ಪ ಸಮಯದ ಹಿಂದೆ ಕಾಟ್ಮಂಡೂವಿನಲ್ಲಿ ಎರಡನೆಯ ಸಭೆಯು ಸ್ಥಾಪಿಸಲ್ಪಟ್ಟಿತು. ಮತ್ತು ರಾಜಧಾನಿಯ ಹೊರಗೆ ಈಗ ಎರಡು ಪ್ರತ್ಯೇಕ ಗುಂಪುಗಳಿವೆ. ಎಪ್ರಿಲ್ 1994 ರಲ್ಲಿ, ಸಾರುವ ಕಾರ್ಯವನ್ನು ವರದಿಮಾಡಿದ 153 ಕ್ರೈಸ್ತರು ಇದ್ದರು—ಐದಕ್ಕಿಂತಲೂ ಕಡಿಮೆ ವರ್ಷಗಳಲ್ಲಿ 350 ಪ್ರತಿಶತ ವೃದ್ಧಿ! ಆಸಕ್ತ ಜನರೊಂದಿಗೆ ಅವರು 386 ಗೃಹ ಬೈಬಲಧ್ಯಯನಗಳನ್ನು ನಡಿಸಿದರು. ವರ್ಷ 1994ರ ಸ್ಮಾರಕದಲ್ಲಿ 580 ಜನರ ರೋಮಾಂಚಕ ಉಪಸ್ಥಿತಿಯಿತ್ತು. ವಿಶೇಷ ಸಮ್ಮೇಳನ ದಿನದಲ್ಲಿ 635 ಮಂದಿ ಸಭಾಂಗಣವನ್ನು ತುಂಬಿದರು ಮತ್ತು 20 ಮಂದಿ ದೀಕ್ಷಾಸ್ನಾನಕ್ಕಾಗಿ ತಮ್ಮನ್ನು ನೀಡಿಕೊಂಡರು. ಹೀಗೆ ಜಗದ್ವ್ಯಾಪಕವಾಗಿ ಯೆಹೋವನ ಸಾಕ್ಷಿಗಳಿಂದ ಆನಂದಿಸಲ್ಪಡುವ ಮಹಾ ಅಭಿವೃದ್ಧಿಗಳು ಚಿಕ್ಕ ನೇಪಾಲದಲ್ಲೂ ಸಂಭವಿಸುತ್ತಿವೆ.
ಇತ್ತೀಚಿನ ವರ್ಷಗಳಲ್ಲಿ ನೇಪಾಲಿ ಭಾಷೆಯಲ್ಲಿ ಉತ್ಪಾದಿಸಲ್ಪಟ್ಟ ಸಾಹಿತ್ಯದ ಮೊತ್ತ ಬಹಳ ವೃದ್ಧಿಯಾಗಿದ್ದು, ನಮ್ರ ಜನರಿಗೆ ಸತ್ಯವನ್ನು ದೃಢವಾಗಿ ಹಿಡಿಯುವಂತೆ ಸಹಾಯಮಾಡಿದೆ. ಭಾರತದ ಬ್ರಾಂಚ್ ಆಫೀಸಿನಲ್ಲಿ ಭಾಷಾಂತರ ವಿಧಾನಗಳಲ್ಲಿ ಮತ್ತು ಕಂಪ್ಯೂಟರ್ ಬಳಕೆಯಲ್ಲಿ ತರಬೇತು ಹೊಂದಿದ ಭಾಷಾಂತರಕಾರರು, ಈಗ ಕಾಟ್ಮಂಡೂವಿನಲ್ಲಿ ಪೂರ್ಣ ಸಮಯದ ಸೇವೆಯಲ್ಲಿದ್ದಾರೆ. ವಿಸ್ತಾರ್ಯಕ್ಕಾಗಿ ಸನ್ನದ್ಧರಾಗಿ, ನೇಪಾಲದ ದೇವಪ್ರಭುತ್ವ ಪರ್ವತವೇರುವವರು ಪ್ರಗತಿ ಪಥದಲ್ಲಿದ್ದಾರೆ!
ಹಿಮಾಲಯಕ್ಕಿಂತಲೂ ಹೆಚ್ಚು ಉನ್ನತ ಸ್ಥಳಕ್ಕೆ ಹತ್ತಿರಿ
ಹಿಮಾಲಯಕ್ಕಿಂತ ಹೆಚ್ಚು ಉನ್ನತವಾದ ಬೆಟ್ಟವನ್ನು ಹತ್ತುವುದರಲ್ಲಿ ನೀವೂ ಆನಂದಿಸಬಲ್ಲಿರಿ. ಹಾಗೆ ಮಾಡುವಾಗ, ನೀವು ನೇಪಾಲದವರೊಂದಿಗೆ ಮಾತ್ರವಲ್ಲ “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ” ಆಗಿರುವ ಲಕ್ಷಾಂತರ ಜನರೊಂದಿಗೆ ಜೊತೆಗೂಡುವಿರಿ. (ಪ್ರಕಟನೆ 7:9) ಅವರೊಂದಿಗೆ, ನೇಪಾಲದ ಜನರಂತೆ, ಭವ್ಯವಾದ ಬೆಟ್ಟಗಳ ನಿರ್ಮಾಣಿಕನಿಂದ ಬೋಧಿಸಲ್ಪಡುವರೆ ನೀವು ಆನಂದಿಸುವಿರಿ. ನಿರ್ಮಾಣಿಕನು ‘ವಿಷಯಗಳನ್ನು ಸರಿಪಡಿಸುವುದನ್ನು’ ನೀವು ಕಾಣುವಿರಿ ಮತ್ತು ಶುದ್ಧವೂ ಸುಂದರವೂ ಆಗಿ ಮಾಡಲ್ಪಟ್ಟ ಭೂಮಿಯಲ್ಲಿ ಸದಾ ಜೀವಿಸುವುದನ್ನು ಮುನ್ನೋಡುವುದಕ್ಕೆ ನೀವು ಶಕ್ತರಾಗುವಿರಿ.—ಯೆಶಾಯ 2:4.
[ಪುಟ 24ರಲ್ಲಿರುವಚಿತ್ರ]
(For fully formatted text, see publication)
ಕಾಟ್ಮಂಡೂ
ಎವರೆಸ್ಟ್ ಪರ್ವತ
[ಪುಟ 25 ರಲ್ಲಿರುವ ಚಿತ್ರ]
ಕಾಟ್ಮಂಡೂವಿನಲ್ಲಿ ರಾಜ್ಯ ಸಭಾಗೃಹದ ಹೊರಗೆ
[ಪುಟ 26 ರಲ್ಲಿರುವ ಚಿತ್ರ]
ಅನೇಕ ನೇಪಾಲಿಗಳು ಬೈಬಲಧ್ಯಯನಗಳಿಂದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ