ಶಿಕ್ಷಣ—ಯೆಹೋವನನ್ನು ಸ್ತುತಿಸಲು ಅದನ್ನು ಉಪಯೋಗಿಸಿರಿ
“ಕಲ್ಪಿಸಿ ಹೇಳುವವನು ತನಗೆ ಮಾನಬರಬೇಕೆಂದು ಅಪೇಕ್ಷಿಸುತ್ತಾನೆ; ತನ್ನನ್ನು ಕಳುಹಿಸಿದವನಿಗೆ ಮಾನಬರಬೇಕೆಂದು ಅಪೇಕ್ಷಿಸುವವನು ಸತ್ಯವಂತನು.”—ಯೋಹಾನ 7:18.
1. ಶಿಕ್ಷಣದ ಪ್ರಕ್ರಿಯೆಯು ಯಾವಾಗ ಮತ್ತು ಹೇಗೆ ತನ್ನ ಆರಂಭವನ್ನು ಪಡೆಯಿತು?
ಶಿಕ್ಷಣವು ಬಹಳ ಕಾಲದ ಹಿಂದೆಯೇ ಆರಂಭಿಸಿತು. ಮಹಾ ಶಿಕ್ಷಕನೂ ಉಪದೇಶಕನೂ ಆದ ಯೆಹೋವ ದೇವರು ತನ್ನ ಜೇಷ್ಠಪುತ್ರನನ್ನು ಸೃಷ್ಟಿಸಿಯಾದ ಕೂಡಲೇ, ಶಿಕ್ಷಣದ ಪ್ರಕ್ರಿಯೆಯು ಅದರ ಆರಂಭವನ್ನು ಪಡೆಯಿತು. (ಯೆಶಾಯ 30:20; ಕೊಲೊಸ್ಸೆ 1:15) ಸ್ವತಃ ಮಹಾ ಶಿಕ್ಷಕನಿಂದಲೇ ಕಲಿಯಸಾಧ್ಯವಿದ್ದ ಒಬ್ಬನು ಇಲ್ಲಿದ್ದನು! ತಂದೆಯೊಂದಿಗೆ ಅಗಣಿತ ಸಹಸ್ರಾರು ವರ್ಷಗಳ ಆಪ್ತ ಸಹವಾಸದ ಸಮಯದಲ್ಲಿ, ಆ ಮಗನು—ಯೇಸು ಕ್ರಿಸ್ತನೆಂದು ಜ್ಞಾತನಾದವನು—ಯೆಹೋವ ದೇವರ ಗುಣಗಳು, ಕೆಲಸಗಳು ಮತ್ತು ಉದ್ದೇಶಗಳ ಸಂಬಂಧದಲ್ಲಿ ಅಮೂಲ್ಯವಾದ ಶಿಕ್ಷಣವನ್ನು ಪಡೆದನು. ತದನಂತರ ಭೂಮಿಯ ಮೇಲೆ ಒಬ್ಬ ಮನುಷ್ಯನೋಪಾದಿ, ಯೇಸು ಹೀಗೆ ಹೇಳಸಾಧ್ಯವಿತ್ತು: “ನನ್ನಷ್ಟಕ್ಕೆ ನಾನೇ ಏನೂ ಮಾಡದೆ ತಂದೆಯು ನನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡುತ್ತೇನೆ.” (ಓರೆಅಕ್ಷರಗಳು ನಮ್ಮವು.)—ಯೋಹಾನ 8:28, NW.
2-4. (ಎ) ಯೋಹಾನ 7ನೆಯ ಅಧ್ಯಾಯಕ್ಕನುಸಾರ, ಸಾ.ಶ. 32ರಲ್ಲಿ ಪರ್ಣಶಾಲೆಗಳ ಹಬ್ಬದಲ್ಲಿ ಯೇಸುವಿನ ಉಪಸ್ಥಿತಿಯನ್ನು ಸುತ್ತುವರಿದ ಪರಿಸ್ಥಿತಿಗಳು ಏನಾಗಿದ್ದವು? (ಬಿ) ಯೇಸುವಿನ ಕಲಿಸುವ ಸಾಮರ್ಥ್ಯದ ಬಗ್ಗೆ ಯೆಹೂದ್ಯರು ಏಕೆ ದಿಗ್ಭ್ರಮೆಗೊಂಡಿದ್ದರು?
2 ತಾನು ಪಡೆದಿದ್ದ ಶಿಕ್ಷಣವನ್ನು ಯೇಸು ಹೇಗೆ ಉಪಯೋಗಿಸಿದನು? ತನ್ನ ಮೂರೂವರೆ ವರ್ಷದ ಭೌಮಿಕ ಶುಶ್ರೂಷೆಯಾದ್ಯಂತ, ತಾನು ಕಲಿತದ್ದನ್ನು ಅವನು ಇತರರೊಂದಿಗೆ ದಣಿಯದೆ ಹಂಚಿಕೊಂಡನು. ಆದರೆ ಇದು, ಮನಸ್ಸಿನಲ್ಲಿದ್ದ ಒಂದು ಪ್ರಧಾನ ಉದ್ದೇಶದಿಂದಾಗಿತ್ತು. ಮತ್ತು ಅದು ಏನಾಗಿತ್ತು? ಅವನು ಎಲ್ಲಿ ತನ್ನ ಶಿಕ್ಷಣದ ಮೂಲ ಹಾಗೂ ಉದ್ದೇಶವನ್ನು—ಎರಡನ್ನೂ—ವಿವರಿಸಿದನೊ, ಆ ಯೋಹಾನ 7ನೆಯ ಅಧ್ಯಾಯದಲ್ಲಿನ ಯೇಸುವಿನ ಮಾತುಗಳನ್ನು ನಾವು ಪರೀಕ್ಷಿಸೋಣ.
3 ಹಿನ್ನೆಲೆಯನ್ನು ಪರಿಗಣಿಸಿರಿ. ಅದು ಯೇಸುವಿನ ದೀಕ್ಷಾಸ್ನಾನದ ಸುಮಾರು ಮೂರು ವರ್ಷಗಳ ತರುವಾಯ, ಸಾ.ಶ. 32ರ ಶರತ್ಕಾಲವಾಗಿತ್ತು. ಪರ್ಣಶಾಲೆಗಳ ಹಬ್ಬಕ್ಕಾಗಿ ಯೆಹೂದ್ಯರು ಯೆರೂಸಲೇಮಿನಲ್ಲಿ ಕೂಡಿಬಂದಿದ್ದರು. ಹಬ್ಬದ ಮೊದಲಿನ ಕೆಲವು ದಿನಗಳ ಸಮಯದಲ್ಲಿ, ಯೇಸುವಿನ ಕುರಿತು ಬಹಳಷ್ಟು ಮಾತುಕತೆ ನಡೆದಿತ್ತು. ಹಬ್ಬವು ಅರ್ಧ ಮುಗಿದಿದ್ದಾಗ, ಯೇಸು ಆಲಯಕ್ಕೆ ಹೋಗಿ ಕಲಿಸಲಾರಂಭಿಸಿದನು. (ಯೋಹಾನ 7:2, 10-14) ಎಂದಿನಂತೆಯೇ ಅವನು ತನ್ನನ್ನು ಮಹಾ ಬೋಧಕನಾಗಿ ಸಿದ್ಧಪಡಿಸಿಕೊಂಡನು.—ಮತ್ತಾಯ 13:54; ಲೂಕ 4:22.
4 ಯೋಹಾನ 7ನೆಯ ಅಧ್ಯಾಯದ 15ನೆಯ ವಚನವು ಹೇಳುವುದು: “ಯೆಹೂದ್ಯರು ಅದಕ್ಕೆ ಆಶ್ಚರ್ಯಪಟ್ಟು—ವಿದ್ಯಾಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರಗಳು ತಿಳಿದಿರುವದು ಹೇಗೆ ಎಂದು ಹೇಳುತ್ತಿದ್ದರು.” ಅವರು ಏಕೆ ದಿಗ್ಭ್ರಮೆಗೊಂಡಿದ್ದರೆಂದು ನಿಮಗೆ ಅರ್ಥವಾಗುತ್ತದೊ? ಯೇಸು ಯಾವುದೇ ರಬ್ಬಿ ಸಂಬಂಧಿತ ಶಾಲೆಗಳನ್ನು ಹಾಜರಾಗಿರಲಿಲ್ಲ, ಆದುದರಿಂದ ಅವನು ಅಶಿಕ್ಷಿತನು—ಅಥವಾ ಹಾಗೆಂದು ಅವರು ನೆನಸಿದರು! ಆದರೂ, ಯೇಸು ಸರಳವಾಗಿ ಪವಿತ್ರ ಬರಹಗಳಲ್ಲಿನ ಭಾಗಗಳನ್ನು ಗುರುತಿಸಿ ಓದಬಲ್ಲವನಾಗಿದ್ದನು. (ಲೂಕ 4:16-21) ಗಲಿಲಾಯದ ಈ ಬಡಗಿಯು ಅವರಿಗೆ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಉಪದೇಶಿಸಿದನು! (ಯೋಹಾನ 7:19-23) ಇದು ಸಾಧ್ಯವಾದದ್ದು ಹೇಗೆ?
5, 6. (ಎ) ತನ್ನ ಕಲಿಸುವಿಕೆಯ ಮೂಲವನ್ನು ಯೇಸು ಹೇಗೆ ವಿವರಿಸಿದನು? (ಬಿ) ಯಾವ ವಿಧದಲ್ಲಿ ಯೇಸು ತನ್ನ ಶಿಕ್ಷಣವನ್ನು ಉಪಯೋಗಿಸಿದನು?
5 ನಾವು 16 ಮತ್ತು 17ನೆಯ ವಚನಗಳಲ್ಲಿ ಓದುವಂತೆ, ಯೇಸು ವಿವರಿಸಿದ್ದು: “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು. ಆತನ ಚಿತ್ತದಂತೆ ನಡೆಯುವದಕ್ಕೆ ಯಾರಿಗೆ ಮನಸ್ಸದೆಯೋ ಅವರಿಗೆ ಈ ಬೋಧನೆಯು ದೇವರಿಂದ ಬಂದದ್ದೋ ನಾನೇ ಕಲ್ಪಿಸಿ ಹೇಳಿದ್ದೋ ಗೊತ್ತಾಗುವದು.” ಯೇಸು ಯಾರಿಂದ ಶಿಕ್ಷಿತನಾಗಿದ್ದನೆಂದು ಅವರು ತಿಳಿಯಬಯಸಿದರು, ಮತ್ತು ತನ್ನ ಶಿಕ್ಷಣವು ದೇವರಿಂದ ಬಂದದ್ದೆಂದು ಯೇಸು ಸ್ಪಷ್ಟವಾಗಿ ಅವರಿಗೆ ಹೇಳಿದನು!—ಯೋಹಾನ 12:49; 14:10.
6 ಯೇಸು ತನ್ನ ಶಿಕ್ಷಣವನ್ನು ಹೇಗೆ ಉಪಯೋಗಿಸಿದನು? ಯೋಹಾನ 7:18ರಲ್ಲಿ ದಾಖಲಿಸಿರುವಂತೆ, ಯೇಸು ಹೇಳಿದ್ದು: “ಕಲ್ಪಿಸಿ ಹೇಳುವವನು ತನಗೆ ಮಾನಬರಬೇಕೆಂದು ಅಪೇಕ್ಷಿಸುತ್ತಾನೆ; ತನ್ನನ್ನು ಕಳುಹಿಸಿದವನಿಗೆ ಮಾನಬರಬೇಕೆಂದು ಅಪೇಕ್ಷಿಸುವವನು ಸತ್ಯವಂತನು, ಅಧರ್ಮವು ಅವನಲ್ಲಿ ಇಲ್ಲ.” (ಓರೆಅಕ್ಷರಗಳು ನಮ್ಮವು.) ಯೇಸು ತನ್ನ ಶಿಕ್ಷಣವನ್ನು “ಜ್ಞಾನಪೂರ್ಣ”ನಾದ ಯೆಹೋವನಿಗೆ ಮಹಿಮೆಯನ್ನು ತರಲು ಉಪಯೋಗಿಸಿದನೆಂಬುದು ಎಷ್ಟು ತಕ್ಕದಾದ ಸಂಗತಿ!—ಯೋಬ 37:16.
7, 8. (ಎ) ಶಿಕ್ಷಣವನ್ನು ಹೇಗೆ ಉಪಯೋಗಿಸಬೇಕು? (ಬಿ) ಸಮತೂಕದ ಶಿಕ್ಷಣದ ನಾಲ್ಕು ಮೂಲಭೂತ ಉದ್ದೇಶಗಳಾವುವು?
7 ಹೀಗೆ ನಾವು ಯೇಸುವಿನಿಂದ ಅಮೂಲ್ಯವಾದೊಂದು ಪಾಠವನ್ನು ಕಲಿಯುತ್ತೇವೆ—ಶಿಕ್ಷಣವು ನಮ್ಮನ್ನು ಮಹಿಮೆಪಡಿಸಿಕೊಳ್ಳಲು ಅಲ್ಲ, ಬದಲಿಗೆ ಯೆಹೋವನಿಗೆ ಸ್ತುತಿಯನ್ನು ತರಲು ಉಪಯೋಗಿಸಲ್ಪಡತಕ್ಕದ್ದು. ಶಿಕ್ಷಣವನ್ನು ಬಳಸುವ ಇನ್ನಾವ ಉತ್ತಮ ಮಾರ್ಗವೂ ಇರುವುದಿಲ್ಲ. ಹಾಗಾದರೆ, ಯೆಹೋವನಿಗೆ ಸ್ತುತಿಯನ್ನು ತರಲು ನೀವು ಶಿಕ್ಷಣವನ್ನು ಹೇಗೆ ಉಪಯೋಗಿಸಸಾಧ್ಯವಿದೆ?
8 ಶಿಕ್ಷಣ ನೀಡುವುದೆಂದರೆ, “ವಿಶೇಷವಾಗಿ ಒಂದು ಕೌಶಲ, ಕಸಬು ಅಥವಾ ವೃತ್ತಿಯಲ್ಲಿ ಔಪಚಾರಿಕ ಉಪದೇಶ ಹಾಗೂ ಮೇಲ್ವಿಚಾರಣೆಯನ್ನೊಳಗೊಂಡ ಅಭ್ಯಾಸದ ಮೂಲಕ ತರಬೇತಿ ನೀಡುವುದಾಗಿದೆ.” ಒಂದು ಸಮತೂಕದ ಶಿಕ್ಷಣದ ನಾಲ್ಕು ಮೂಲಭೂತ ಉದ್ದೇಶಗಳನ್ನು ಮತ್ತು ಯೆಹೋವನನ್ನು ಸ್ತುತಿಸಲು ಇವುಗಳಲ್ಲಿ ಪ್ರತಿಯೊಂದನ್ನು ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ಈಗ ನಾವು ಪರಿಗಣಿಸೋಣ. ಒಂದು ಸಮತೂಕದ ಶಿಕ್ಷಣವು (1) ಚೆನ್ನಾಗಿ ಓದಲು, (2) ಸ್ಪಷ್ಟವಾಗಿ ಬರೆಯಲು, (3) ಮಾನಸಿಕವಾಗಿಯೂ ನೈತಿಕವಾಗಿಯೂ ವಿಕಾಸಹೊಂದಲು, ಮತ್ತು (4) ಅನುದಿನದ ಜೀವನಕ್ಕಾಗಿ ಬೇಕಾಗಿರುವ ಪ್ರಾಯೋಗಿಕ ತರಬೇತಿಯನ್ನು ಪಡೆಯಲು ನಮಗೆ ಸಹಾಯ ಮಾಡಬೇಕು.
ಚೆನ್ನಾಗಿ ಓದಲು ಕಲಿಯುವುದು
9. ಒಬ್ಬ ಒಳ್ಳೆಯ ಓದುಗನಾಗಿರುವುದು ಏಕೆ ಪ್ರಾಮುಖ್ಯವಾಗಿದೆ?
9 ಪ್ರಥಮವಾಗಿ ಪಟ್ಟಿಮಾಡಲಾಗಿರುವ ವಿಷಯವು, ಚೆನ್ನಾಗಿ ಓದಲು ಕಲಿಯುವುದು. ಒಬ್ಬ ಒಳ್ಳೆಯ ಓದುಗನಾಗಿರುವುದು ಅಷ್ಟು ಪ್ರಾಮುಖ್ಯವಾಗಿದೆ ಏಕೆ? ದ ವರ್ಲ್ಡ್ ಬುಕ್ ಎನ್ಸೈಕ್ಲೋಪಿಡಿಯ ವಿವರಿಸುವುದು: “ಓದುವಿಕೆ . . . ಕಲಿಕೆಗೆ ಮೂಲಭೂತವಾದದ್ದೂ ಪ್ರತಿದಿನದ ಜೀವಿತದಲ್ಲಿನ ಅತ್ಯಂತ ಪ್ರಮುಖ ಕೌಶಲಗಳಲ್ಲಿ ಒಂದೂ ಆಗಿದೆ. . . . ನಿಪುಣ ಓದುಗರು ಯಶಸ್ವಿಯಾದ, ಉತ್ಪನ್ನಕರ ಸಮಾಜವನ್ನು ಸೃಷ್ಟಿಸುವುದರಲ್ಲಿ ನೆರವನ್ನೀಯುತ್ತಾರೆ. ಅದೇ ಸಮಯದಲ್ಲಿ, ಸ್ವತಃ ಹೆಚ್ಚು ಸಂಪೂರ್ಣವಾದ, ಅಧಿಕ ತೃಪ್ತಿದಾಯಕ ಜೀವಿತಗಳನ್ನು ಅನುಭವಿಸುತ್ತಾರೆ.”
10. ದೇವರ ವಾಕ್ಯದ ಓದುವಿಕೆಯು ಹೆಚ್ಚು ಸಂಪೂರ್ಣವಾದ, ಅಧಿಕ ತೃಪ್ತಿದಾಯಕ ಜೀವಿತಗಳನ್ನು ಅನುಭವಿಸುವಂತೆ ನಮಗೆ ಹೇಗೆ ಸಹಾಯ ಮಾಡುತ್ತದೆ?
10 ಸಾಮಾನ್ಯವಾಗಿ ಓದುವಿಕೆಯು “ಹೆಚ್ಚು ಸಂಪೂರ್ಣವಾದ, ಅಧಿಕ ತೃಪ್ತಿದಾಯಕ ಜೀವಿತಗಳನ್ನು” ಅನುಭವಿಸುವಂತೆ ನಮಗೆ ಸಹಾಯ ಮಾಡಸಾಧ್ಯವಾದರೆ, ದೇವರ ವಾಕ್ಯವನ್ನು ಓದುವುದರ ಕುರಿತು ಇದು ಇನ್ನೆಷ್ಟು ಸತ್ಯವಾಗಿದೆ! ಇಂತಹ ಓದುವಿಕೆಯು ನಮ್ಮ ಮನಸ್ಸುಗಳನ್ನೂ ಹೃದಯಗಳನ್ನೂ ಯೆಹೋವನ ವಿಚಾರಗಳಿಗೆ ಹಾಗೂ ಉದ್ದೇಶಗಳಿಗೆ ತೆರೆಯುತ್ತದೆ ಮತ್ತು ಇವುಗಳ ಸ್ಪಷ್ಟವಾದ ತಿಳಿವಳಿಕೆಯು ನಮ್ಮ ಜೀವಿತಗಳಿಗೆ ಅರ್ಥವನ್ನು ಕೊಡುತ್ತದೆ. ಇದಕ್ಕೆ ಕೂಡಿಸಿ, “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು,” ಎಂದು ಇಬ್ರಿಯ 4:12 ಹೇಳುತ್ತದೆ. ನಾವು ದೇವರ ವಾಕ್ಯವನ್ನು ಓದಿ, ಅದರ ಕುರಿತು ಮನನ ಮಾಡಿದ ಹಾಗೆ, ಅದರ ಗ್ರಂಥಕರ್ತನ ಕಡೆಗೆ ನಾವು ಸೆಳೆಯಲ್ಪಡುತ್ತೇವೆ ಮತ್ತು ದೇವರಿಗೆ ಹೆಚ್ಚು ಇಷ್ಟವುಳ್ಳವರಾಗಲು ನಮ್ಮ ಜೀವಿತಗಳಲ್ಲಿ ಬದಲಾವಣೆಗಳನ್ನು ಮಾಡುವಂತೆ ನಾವು ಪ್ರಚೋದಿಸಲ್ಪಡುತ್ತೇವೆ. (ಗಲಾತ್ಯ 5:22, 23; ಎಫೆಸ 4:22-24) ನಾವು ಓದುವ ಅಮೂಲ್ಯ ಸತ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಸಹ ನಾವು ಒತ್ತಾಯಿಸಲ್ಪಡುತ್ತೇವೆ. ಇದೆಲ್ಲವೂ ಮಹಾ ಶಿಕ್ಷಕನಾದ ಯೆಹೋವ ದೇವರಿಗೆ ಸ್ತುತಿಯನ್ನು ತರುತ್ತದೆ. ಖಂಡಿತವಾಗಿಯೂ, ಓದುವ ನಮ್ಮ ಸಾಮರ್ಥ್ಯವನ್ನು ಉಪಯೋಗಿಸುವ ಇನ್ನಾವ ಉತ್ತಮ ಮಾರ್ಗವೂ ಇರುವುದಿಲ್ಲ!
11. ವೈಯಕ್ತಿಕ ಅಭ್ಯಾಸದ ಸಮತೂಕದ ಕಾರ್ಯಕ್ರಮದಲ್ಲಿ ಏನನ್ನು ಒಳಗೂಡಿಸಬೇಕು?
11 ಎಳೆಯರಾಗಿರಲಿ ವೃದ್ಧರಾಗಿರಲಿ, ಚೆನ್ನಾಗಿ ಓದುವಂತೆ ನಾವು ಉತ್ತೇಜಿಸಲ್ಪಡುತ್ತೇವೆ ಏಕೆಂದರೆ ಓದುವಿಕೆಯು ನಮ್ಮ ಕ್ರೈಸ್ತ ಜೀವಿತದಲ್ಲಿ ಒಂದು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ದೇವರ ವಾಕ್ಯದ ಕ್ರಮವಾದ ಓದುವಿಕೆಗೆ ಸೇರಿಸಿ, ವೈಯಕ್ತಿಕ ಅಭ್ಯಾಸದ ಸಮತೂಕದ ಕಾರ್ಯಕ್ರಮವು ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಎಂಬ ಪುಸ್ತಕದಿಂದ ಬೈಬಲ್ ವಚನದ ಪರಿಗಣನೆ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಸೂಕ್ಷ್ಮವಾದ ವಾಚನ, ಮತ್ತು ಕ್ರೈಸ್ತ ಕೂಟಗಳಿಗಾಗಿ ತಯಾರಿಸುವುದು—ಇವುಗಳನ್ನು ಒಳಗೊಳ್ಳುವುದು. ಮತ್ತು ಕ್ರೈಸ್ತ ಶುಶ್ರೂಷೆಯ ಕುರಿತೇನು? ಸ್ಪಷ್ಟವಾಗಿ, ಬಹಿರಂಗವಾಗಿ ಸಾರುವುದು, ಆಸಕ್ತ ಜನರನ್ನು ಪುನಃ ಭೇಟಿಮಾಡುವುದು ಮತ್ತು ಮನೆ ಬೈಬಲ್ ಅಧ್ಯಯನಗಳನ್ನು ನಡೆಸುವುದು—ಇವೆಲ್ಲವೂ ಒಳ್ಳೆಯ ಓದುವ ಸಾಮರ್ಥ್ಯವನ್ನು ಕೇಳಿಕೊಳ್ಳುತ್ತವೆ.
ಸ್ಪಷ್ಟವಾಗಿ ಬರೆಯಲು ಕಲಿಯುವುದು
12. (ಎ) ಸ್ಪಷ್ಟವಾಗಿ ಬರೆಯಲು ಕಲಿಯುವುದು ಏಕೆ ಪ್ರಾಮುಖ್ಯವಾಗಿದೆ? (ಬಿ) ಎಂದಾದರೂ ಮಾಡಲಾದ ಅತ್ಯಂತ ಮಹಾನ್ ಬರವಣಿಗೆಯು ಯಾವುದಾಗಿತ್ತು?
12 ಎರಡನೆಯ ಉದ್ದೇಶವೇನೆಂದರೆ, ಒಂದು ಸಮತೂಕದ ಶಿಕ್ಷಣವು ಸ್ಪಷ್ಟವಾಗಿ ಬರೆಯಲು ಕಲಿಯುವಂತೆ ನಮಗೆ ಸಹಾಯ ಮಾಡಬೇಕು. ಬರವಣಿಗೆಯು ನಮ್ಮ ಮಾತುಗಳನ್ನು ಮತ್ತು ವಿಚಾರಗಳನ್ನು ರವಾನಿಸುತ್ತದೆ ಮಾತ್ರವಲ್ಲ, ಅದು ಅವುಗಳನ್ನು ಸುರಕ್ಷಿತವಾಗಿಯೂ ಇಡುತ್ತದೆ. ಅನೇಕಾನೇಕ ಶತಮಾನಗಳ ಹಿಂದೆ, ಸುಮಾರು 40 ಯೆಹೂದಿ ಪುರುಷರು ಪ್ರೇರಿತ ಶಾಸ್ತ್ರಗಳಾಗಿ ಪರಿಣಮಿಸಿದ ಮಾತುಗಳನ್ನು ಜಂಬುಕಾಗದ ಅಥವಾ ಚರ್ಮಕಾಗದದ ಮೇಲೆ ಬರೆದರು. (2 ತಿಮೊಥೆಯ 3:16) ನಿಶ್ಚಯವಾಗಿ ಇದು ಎಂದಾದರೂ ಮಾಡಲ್ಪಟ್ಟಿರುವ ಅತ್ಯಂತ ಮಹಾನ್ ಬರವಣಿಗೆಯಾಗಿತ್ತು! ನಿಸ್ಸಂದೇಹವಾಗಿ ಯೆಹೋವನು ಶತಮಾನಗಳ ಉದ್ದಕ್ಕೂ ಆ ಪವಿತ್ರ ಮಾತುಗಳ ನಕಲು ಮಾಡುವಿಕೆ ಮತ್ತು ಪುನರ್ನಕಲು ಮಾಡುವಿಕೆಯನ್ನು ಮಾರ್ಗದರ್ಶಿಸಿದನು, ಇದರಿಂದ ಅವು ನಮಗೆ ವಿಶ್ವಸನೀಯ ರೂಪದಲ್ಲಿ ತಲಪಿವೆ. ಬಾಯಿಮಾತಿನ ಪ್ರಸಾರದ ಮೇಲೆ ಅವಲಂಬಿಸುವ ಬದಲಿಗೆ, ಯೆಹೋವನು ತನ್ನ ಮಾತುಗಳನ್ನು ಬರವಣಿಗೆಗೆ ಒಪ್ಪಿಸಿದನೆಂಬುದಕ್ಕಾಗಿ ನಾವು ಕೃತಜ್ಞತೆಯುಳ್ಳವರಾಗಿರುವುದಿಲ್ಲವೊ?—ಹೋಲಿಸಿ ವಿಮೋಚನಕಾಂಡ 34:27, 28.
13. ಬರೆಯುವುದು ಹೇಗೆಂದು ಇಸ್ರಾಯೇಲ್ಯರಿಗೆ ತಿಳಿದಿತ್ತೆಂದು ಯಾವುದು ಸೂಚಿಸುತ್ತದೆ?
13 ಪ್ರಾಚೀನ ಸಮಯಗಳಲ್ಲಿ, ಮೆಸೊಪೊಟೇಮಿಯ ಮತ್ತು ಐಗುಪ್ತದಲ್ಲಿನ ಶಾಸ್ತ್ರಿಗಳಂತಹ ಸುಯೋಗ ಪಡೆದ ನಿರ್ದಿಷ್ಟ ವರ್ಗಗಳವರು ಮಾತ್ರ ಅಕ್ಷರಸ್ಥರಾಗಿದ್ದರು. ರಾಷ್ಟ್ರಗಳಿಗೆ ತೀರ ವ್ಯತಿರಿಕ್ತವಾಗಿ, ಇಸ್ರಾಯೇಲಿನಲ್ಲಿ ಪ್ರತಿಯೊಬ್ಬರು ಅಕ್ಷರಸ್ಥರಾಗಿರುವಂತೆ ಉತ್ತೇಜಿಸಲ್ಪಟ್ಟರು. ಇಸ್ರಾಯೇಲ್ಯರಿಗೆ ತಮ್ಮ ಮನೆಗಳ ಬಾಗಿಲು ನಿಲುವು ಪಟ್ಟಿಗಳ ಮೇಲೆ ಬರೆಯಬೇಕೆಂಬ ಧರ್ಮೋಪದೇಶಕಾಂಡ 6:8, 9ರಲ್ಲಿನ ಆಜ್ಞೆಯು, ಸಾಂಕೇತಿಕವೆಂದು ವ್ಯಕ್ತವಾದರೂ, ಬರೆಯಲು ಅವರಿಗೆ ಬರುತ್ತಿತ್ತು ಎಂಬುದನ್ನು ಸೂಚಿಸುತ್ತದೆ. ಬಹಳ ಎಳೆಯ ಪ್ರಾಯದಲ್ಲೇ ಮಕ್ಕಳಿಗೆ ಬರೆಯಲು ಕಲಿಸಲಾಗುತ್ತಿತ್ತು. ಪ್ರಾಚೀನ ಹೀಬ್ರು ಬರವಣಿಗೆಯ ಅತಿ ಪುರಾತನ ಉದಾಹರಣೆಗಳಲ್ಲಿ ಒಂದಾದ ಗೆಸರ್ ಕ್ಯಾಲೆಂಡರ್, ಶಾಲಾ ಹುಡುಗನ ಜ್ಞಾಪಕ ಶಕ್ತಿಗಾಗಿರುವ ಅಭ್ಯಾಸವಾಗಿದೆಯೆಂದು ಕೆಲವು ವಿದ್ವಾಂಸರಿಂದ ಆಲೋಚಿಸಲಾಗಿದೆ.
14, 15. ಬರೆಯುವ ಸಾಮರ್ಥ್ಯವನ್ನು ಉಪಯೋಗಿಸುವ ಕೆಲವು ಪ್ರಯೋಜನಕರ ಹಾಗೂ ಹಿತಕರವಾದ ಮಾರ್ಗಗಳಾವುವು?
14 ಆದರೆ ಬರೆಯುವ ಸಾಮರ್ಥ್ಯವನ್ನು ನಾವು ಪ್ರಯೋಜನಕರವೂ ಹಿತಕರವೂ ಆದ ವಿಧದಲ್ಲಿ ಹೇಗೆ ಉಪಯೋಗಿಸಬಲ್ಲೆವು? ನಿಶ್ಚಯವಾಗಿ ಕ್ರೈಸ್ತ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಟಿಪ್ಪಣಿಗಳನ್ನು ತೆಗೆದುಕೊಳ್ಳುವ ಮೂಲಕವೇ. ಒಂದು ಪತ್ರವು “ಸಂಕ್ಷೇಪವಾಗಿ ಬರೆ”ಯಲ್ಪಟ್ಟರೂ, ಅಸ್ವಸ್ಥರಾಗಿರುವ ಒಬ್ಬರಿಗೆ ಉತ್ತೇಜನವನ್ನು ನೀಡಬಲ್ಲದು, ಇಲ್ಲವೆ ನಮ್ಮ ಕಡೆಗೆ ದಯಾಪರರೂ ಸತ್ಕರಿಸುವ ಸ್ವಭಾವವುಳ್ಳವರೂ ಆಗಿದ್ದ ಒಬ್ಬ ಆತ್ಮಿಕ ಸಹೋದರ ಅಥವಾ ಸಹೋದರಿಗೆ ಉಪಕಾರವನ್ನು ಹೇಳಬಲ್ಲದು. (1 ಪೇತ್ರ 5:12) ಸಭೆಯಲ್ಲಿ ಯಾರಾದರೂ ಒಬ್ಬ ಪ್ರಿಯ ವ್ಯಕ್ತಿಯನ್ನು ಮರಣದಲ್ಲಿ ಕಳೆದುಕೊಂಡಿರುವುದಾದರೆ, ಸಂಕ್ಷಿಪ್ತವಾದ ಒಂದು ಪತ್ರವೊ ಕಾರ್ಡೊ ನಮ್ಮ ಪರವಾಗಿ ಆ ವ್ಯಕ್ತಿಯೊಡನೆ “ಸಂತೈಸುತ್ತಾ ಮಾತಾಡ”ಬಲ್ಲದು. (1 ಥೆಸಲೊನೀಕ 5:14, NW) ಕ್ಯಾನ್ಸರ್ನಿಂದಾಗಿ ತನ್ನ ತಾಯಿಯನ್ನು ಕಳೆದುಕೊಂಡ ಒಬ್ಬ ಕ್ರೈಸ್ತ ಸಹೋದರಿಯು ವಿವರಿಸಿದ್ದು: “ಒಬ್ಬ ಸ್ನೇಹಿತೆ ಒಂದು ಅಂದವಾದ ಪತ್ರ ಬರೆದಳು. ಅದು ನನಗೆ ನಿಜವಾಗಿಯೂ ಸಹಾಯ ಮಾಡಿತು ಏಕೆಂದರೆ ನಾನು ಅದನ್ನು ಪುನಃ ಪುನಃ ಓದಸಾಧ್ಯವಿತ್ತು.”
15 ಬರೆಯುವ ಸಾಮರ್ಥ್ಯವನ್ನು ಉಪಯೋಗಿಸುವುದರ ಒಂದು ಅತ್ಯುತ್ತಮ ಮಾರ್ಗವು, ರಾಜ್ಯ ಸಾಕ್ಷಿಯನ್ನು ನೀಡಲು ಒಂದು ಪತ್ರವನ್ನು ಬರೆಯುವ ಮೂಲಕ ಯೆಹೋವನಿಗೆ ಸ್ತುತಿಯನ್ನು ತರುವುದೇ ಆಗಿದೆ. ಕೆಲವೊಮ್ಮೆ ಪ್ರತ್ಯೇಕವಾದ ಕ್ಷೇತ್ರಗಳಲ್ಲಿ ಜೀವಿಸುತ್ತಿರುವ ಹೊಸದಾಗಿ ಆಸಕ್ತರಾದ ಜನರೊಂದಿಗೆ ಸಂಪರ್ಕವಿಡುವುದು ಅಗತ್ಯವಾಗಿರಬಹುದು. ಅನಾರೋಗ್ಯವು ತಾತ್ಕಾಲಿಕವಾಗಿ ಮನೆಯಿಂದ ಮನೆಗೆ ಹೋಗುವುದನ್ನು ನಿಮಗೆ ಕಷ್ಟಕರವಾಗಿ ಮಾಡಬಹುದು. ಬಹುಶಃ ಒಂದು ಪತ್ರವು ಸಾಧಾರಣವಾಗಿ ನೀವು ಖುದ್ದಾಗಿ ಹೇಳುವ ವಿಷಯವನ್ನು ಬರವಣಿಗೆಯಲ್ಲಿ ಹೇಳಬಲ್ಲದು.
16, 17. (ಎ) ಒಂದು ರಾಜ್ಯ ಸಾಕ್ಷಿಯನ್ನು ನೀಡಲು ಪತ್ರವೊಂದನ್ನು ಬರೆಯುವುದರ ಮೌಲ್ಯವನ್ನು ಯಾವ ಅನುಭವವು ತೋರಿಸುತ್ತದೆ? (ಬಿ) ತದ್ರೀತಿಯ ಒಂದು ಅನುಭವವನ್ನು ನೀವು ಹೇಳಬಲ್ಲಿರೊ?
16 ಒಂದು ಅನುಭವವನ್ನು ಪರಿಗಣಿಸಿರಿ. ಅನೇಕ ವರ್ಷಗಳ ಹಿಂದೆ ಒಬ್ಬ ಸಾಕ್ಷಿಯು, ಸ್ಥಳಿಕ ವಾರ್ತಾಪತ್ರಿಕೆಯಲ್ಲಿ ಯಾರ ಮರಣವನ್ನು ಪ್ರಕಟಿಸಲಾಗಿತ್ತೊ, ಆ ಮನುಷ್ಯನ ವಿಧವೆಗೆ ರಾಜ್ಯ ಸಾಕ್ಷಿಯನ್ನು ಕೊಡುತ್ತಾ ಒಂದು ಪತ್ರವನ್ನು ಬರೆದಳು. ಯಾವ ಉತ್ತರವೂ ದೊರೆಯಲಿಲ್ಲ. ಅನಂತರ, 1994ರ ನವೆಂಬರ್ನಲ್ಲಿ, ಸುಮಾರು 21 ವರ್ಷಗಳ ತರುವಾಯ ಸಾಕ್ಷಿಯು ಆ ಸ್ತ್ರೀಯ ಮಗಳಿಂದ ಒಂದು ಪತ್ರವನ್ನು ಪಡೆದಳು. ಮಗಳು ಬರೆದುದು:
17 “ಎಪ್ರಿಲ್ 1973ರಲ್ಲಿ ನೀವು ನನ್ನ ತಂದೆಯ ಮರಣದ ನಂತರ ನನ್ನ ತಾಯಿಗೆ ಸಾಂತ್ವನ ನೀಡಲು ಆಕೆಗೆ ಪತ್ರವನ್ನು ಬರೆದಿರಿ. ಆ ಸಮಯದಲ್ಲಿ ನಾನು ಒಂಬತ್ತು ವರ್ಷ ಪ್ರಾಯದವಳಾಗಿದ್ದೆ. ನನ್ನ ತಾಯಿ ಬೈಬಲಿನ ಅಧ್ಯಯನ ಮಾಡಿದಳು, ಆದರೆ ಇನ್ನೂ ಆಕೆ ಯೆಹೋವನ ಒಬ್ಬ ಸೇವಕಿಯಾಗಿಲ್ಲ. ಹಾಗಿದ್ದರೂ, ಆಕೆಯ ಅಧ್ಯಯನವು ಕಟ್ಟಕಡೆಗೆ ಸತ್ಯದೊಂದಿಗೆ ನನ್ನ ಸಹವಾಸಕ್ಕೆ ನಡೆಸಿತು. 1988ರಲ್ಲಿ ನನ್ನ ಬೈಬಲ್ ಅಧ್ಯಯನವನ್ನು ನಾನು ಪ್ರಾರಂಭಿಸಿದೆ—ನಿಮ್ಮ ಪತ್ರ ಪಡೆದಾದ 15 ವರ್ಷಗಳ ತರುವಾಯ. ಮಾರ್ಚ್ 9, 1990ರಂದು ನಾನು ದೀಕ್ಷಾಸ್ನಾನ ಪಡೆದೆ. ಅನೇಕ ವರ್ಷಗಳ ಹಿಂದೆ ಬರೆದ ನಿಮ್ಮ ಪತ್ರಕ್ಕಾಗಿ ನಾನು ಬಹಳ ಆಭಾರಿಯಾಗಿದ್ದೇನೆ ಮತ್ತು ನೀವು ಬಿತ್ತಿದ ಆ ಬೀಜಗಳು ಯೆಹೋವನ ಸಹಾಯದಿಂದ ಬೆಳೆದವು ಎಂಬುದನ್ನು ತಿಳಿಸಲು ನಾನು ಬಹಳ ಆನಂದಿತಳು. ನಿಮ್ಮ ಪತ್ರವನ್ನು ಸುರಕ್ಷಿತವಾಗಿಡಲು ನನ್ನ ತಾಯಿ ಅದನ್ನು ನನಗೆ ಕೊಟ್ಟಳು ಮತ್ತು ನೀವು ಯಾರೆಂದು ತಿಳಿಯಲು ನಾನು ಬಯಸುತ್ತೇನೆ. ಈ ಪತ್ರವು ನಿಮ್ಮನ್ನು ತಲಪುವುದೆಂದು ನಾನು ನಿರೀಕ್ಷಿಸುತ್ತೇನೆ.” ಆಕೆಯ ವಿಳಾಸ ಮತ್ತು ಫೋನ್ ನಂಬರ್ ಅನ್ನು ಒಳಗೊಂಡಿದ್ದ ಆ ಮಗಳ ಪತ್ರವು ಅನೇಕ ವರ್ಷಗಳ ಹಿಂದೆ ಬರೆದಿದ್ದ ಆ ಸಾಕ್ಷಿಯನ್ನು ನಿಶ್ಚಯವಾಗಿ ತಲಪಿತು. ಇತರರೊಂದಿಗೆ ರಾಜ್ಯ ನಿರೀಕ್ಷೆಯನ್ನು ಹಂಚಿಕೊಳ್ಳಲು ಪತ್ರಗಳನ್ನು ಇನ್ನೂ ಬರೆಯುವ ಆ ಸಾಕ್ಷಿಯಿಂದ ಒಂದು ಫೋನ್ ಕರೆಯನ್ನು ಆಕೆ ಪಡೆದಾಗ, ಆ ಯುವ ಸ್ತ್ರೀಗಾದ ಆಶ್ಚರ್ಯವನ್ನು ಊಹಿಸಿಕೊಳ್ಳಿರಿ!
ಮಾನಸಿಕವಾಗಿ, ನೈತಿಕವಾಗಿ ಮತ್ತು ಆತ್ಮಿಕವಾಗಿ ವಿಕಾಸಹೊಂದುವುದು
18. ಬೈಬಲ್ ಸಮಯಗಳಲ್ಲಿ, ಮಕ್ಕಳ ಮಾನಸಿಕ ಹಾಗೂ ನೈತಿಕ ಶಿಕ್ಷಣಕ್ಕಾಗಿ ಹೆತ್ತವರು ಹೇಗೆ ಕಾಳಜಿವಹಿಸಿದರು?
18 ಮೂರನೆಯ ಉದ್ದೇಶವೇನೆಂದರೆ, ಒಂದು ಸಮತೂಕದ ಶಿಕ್ಷಣವು ಮಾನಸಿಕವಾಗಿಯೂ ನೈತಿಕವಾಗಿಯೂ ವಿಕಾಸಹೊಂದಲು ನಮಗೆ ಸಹಾಯ ಮಾಡಬೇಕು. ಬೈಬಲ್ ಸಮಯಗಳಲ್ಲಿ ಮಕ್ಕಳ ಮಾನಸಿಕ ಹಾಗೂ ನೈತಿಕ ಶಿಕ್ಷಣ ನೀಡುವಿಕೆಯು, ಹೆತ್ತವರ ಪ್ರಧಾನ ಕರ್ತವ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿತು. ಮಕ್ಕಳು ಓದುವಂತೆ ಮತ್ತು ಬರೆಯುವಂತೆ ಕಲಿಸಲ್ಪಡುತ್ತಿದ್ದರು ಮಾತ್ರವಲ್ಲ, ಹೆಚ್ಚು ಪ್ರಾಮುಖ್ಯವಾಗಿ, ಜೀವಿತದ ತಮ್ಮ ಎಲ್ಲ ಚಟುವಟಿಕೆಗಳನ್ನು ಒಳಗೊಂಡ ದೇವರ ನಿಯಮದಲ್ಲಿಯೂ ಶಿಕ್ಷಣ ಪಡೆದಿದ್ದರು. ಹೀಗೆ, ಶಿಕ್ಷಣವು ತಮ್ಮ ಧಾರ್ಮಿಕ ಹಂಗುಗಳು ಮತ್ತು ವಿವಾಹ, ಕುಟುಂಬ ಸಂಬಂಧಗಳು ಹಾಗೂ ಲೈಂಗಿಕ ನೈತಿಕತೆಗೆ ಅನ್ವಯಿಸುವ ತತ್ವಗಳನ್ನು, ಅಷ್ಟೇ ಅಲ್ಲದೆ ತಮ್ಮ ಜೊತೆಮಾನವರ ಕಡೆಗೆ ತಮ್ಮ ಹಂಗುಗಳ ಕುರಿತ ಉಪದೇಶವನ್ನು ಒಳಗೊಂಡಿತು. ಇಂತಹ ಶಿಕ್ಷಣವು ಮಾನಸಿಕವಾಗಿಯೂ ನೈತಿಕವಾಗಿಯೂ ಮಾತ್ರವಲ್ಲ, ಆತ್ಮಿಕವಾಗಿಯೂ ವಿಕಾಸಹೊಂದುವಂತೆ ಅವರಿಗೆ ಸಹಾಯ ಮಾಡಿತು.—ಧರ್ಮೋಪದೇಶಕಾಂಡ 6:4-9, 20, 21; 11:18-21.
19. ಅದಕ್ಕನುಸಾರ ಜೀವಿಸುವ ಅತ್ಯುತ್ತಮ ನೈತಿಕ ಮೌಲ್ಯಗಳನ್ನು ನಮಗೆ ತೋರಿಸುವ ಮತ್ತು ಆತ್ಮಿಕವಾಗಿ ವಿಕಾಸಹೊಂದುವಂತೆ ನಮಗೆ ಸಹಾಯ ಮಾಡುವ ಶಿಕ್ಷಣವನ್ನು ನಾವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
19 ಇಂದಿನ ಕುರಿತೇನು? ಒಂದು ಒಳ್ಳೆಯ ಐಹಿಕ ಶಿಕ್ಷಣವು ಪ್ರಾಮುಖ್ಯವಾಗಿದೆ. ಅದು ಮಾನಸಿಕವಾಗಿ ವಿಕಾಸಹೊಂದುವಂತೆ ನಮಗೆ ಸಹಾಯ ಮಾಡುತ್ತದೆ. ಅದಕ್ಕನುಸಾರವಾಗಿ ಜೀವಿಸುವ ಅತ್ಯುತ್ತಮ ನೈತಿಕ ಮೌಲ್ಯಗಳನ್ನು ನಮಗೆ ತೋರಿಸುವ ಮತ್ತು ಆತ್ಮಿಕವಾಗಿ ವಿಕಾಸಹೊಂದುವಂತೆ ನಮಗೆ ಸಹಾಯ ಮಾಡುವ ಶಿಕ್ಷಣಕ್ಕಾಗಿ ನಾವು ಎಲ್ಲಿಗೆ ತಿರುಗಬಲ್ಲೆವು? ಕ್ರೈಸ್ತ ಸಭೆಯೊಳಗೆ, ಭೂಮಿಯ ಮೇಲೆ ಬೇರೆಲ್ಲಿಯೂ ಲಭ್ಯವಿರದ ದೇವಪ್ರಭುತ್ವ ಶಿಕ್ಷಣದ ಕಾರ್ಯಕ್ರಮಕ್ಕೆ ನಮಗೆ ಪ್ರವೇಶಾಧಿಕಾರವಿದೆ. ಬೈಬಲಿನ ಹಾಗೂ ಬೈಬಲಾಧಾರಿತ ಪ್ರಕಾಶನಗಳ ನಮ್ಮ ವೈಯಕ್ತಿಕ ಅಧ್ಯಯನದ ಮೂಲಕ, ಅಷ್ಟೇ ಅಲ್ಲದೆ ಸಭಾ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಒದಗಿಸಲ್ಪಡುವ ಉಪದೇಶದ ಮೂಲಕ, ನಾವು ಈ ಬೆಲೆಕಟ್ಟಲಾಗದ, ಮುಂದುವರಿಯುತ್ತಿರುವ ಶಿಕ್ಷಣ—ದೈವಿಕ ಶಿಕ್ಷಣ—ವನ್ನು ಉಚಿತವಾಗಿ ಪಡೆಯಸಾಧ್ಯವಿದೆ! ಅದು ನಮಗೆ ಏನನ್ನು ಕಲಿಸುತ್ತದೆ?
20. ದೈವಿಕ ಶಿಕ್ಷಣವು ನಮಗೆ ಏನನ್ನು ಕಲಿಸುತ್ತದೆ, ಮತ್ತು ಅದರಿಂದ ಯಾವ ಪರಿಣಾಮವುಂಟಾಗುತ್ತದೆ?
20 ನಾವು ಬೈಬಲನ್ನು ಅಭ್ಯಸಿಸಲು ತೊಡಗಿದಾಗ, ಮೂಲಭೂತ ಶಾಸ್ತ್ರೀಯ ಶಿಕ್ಷಣಗಳನ್ನು, ‘ಪ್ರಥಮಬೋಧನೆಗಳನ್ನು’ ನಾವು ಕಲಿಯುತ್ತೇವೆ. (ಇಬ್ರಿಯ 6:1) ನಾವು ಮುಂದುವರಿದ ಹಾಗೆ, ನಾವು “ಗಟ್ಟಿಯಾದ ಆಹಾರ”ವನ್ನು, ಅಂದರೆ ಹೆಚ್ಚು ಅಗಾಧವಾದ ಸತ್ಯಗಳನ್ನು ತೆಗೆದುಕೊಳ್ಳುತ್ತೇವೆ. (ಇಬ್ರಿಯ 5:14) ಆದರೆ ಅದಕ್ಕಿಂತ ಹೆಚ್ಚಾಗಿ, ನಾವು ಜೀವಿಸಬೇಕೆಂದು ದೇವರು ಬಯಸುವಂತೆ ಜೀವಿಸುವುದು ಹೇಗೆಂದು ನಮಗೆ ಕಲಿಸುವ ದೈವಿಕ ತತ್ವಗಳ ಕುರಿತು ನಾವು ಕಲಿಯುತ್ತೇವೆ. ಉದಾಹರಣೆಗೆ, “ಶರೀರವನ್ನು ಕಲುಷಿತಮಾಡುವ” ಹವ್ಯಾಸಗಳನ್ನೂ ಆಚರಣೆಗಳನ್ನೂ ತೊರೆಯಲು, ಅಧಿಕಾರಕ್ಕೆ ಹಾಗೂ ಇತರರ ಜೀವ ಮತ್ತು ಸ್ವತ್ತಿಗೆ ಗೌರವವನ್ನು ತೋರಿಸಲು ನಾವು ಕಲಿಯುತ್ತೇವೆ. (2 ಕೊರಿಂಥ 7:1, NW; ತೀತ 3:1, 2; ಇಬ್ರಿಯ 13:4) ಅದಕ್ಕೆ ಕೂಡಿಸಿ, ನಮ್ಮ ಕೆಲಸದಲ್ಲಿ ಪ್ರಾಮಾಣಿಕರೂ ಉದ್ಯೋಗಶೀಲರೂ ಆಗಿರುವ ಪ್ರಮುಖತೆಯನ್ನು ಮತ್ತು ಲೈಂಗಿಕ ನೈತಿಕತೆಯ ವಿಷಯದಲ್ಲಿ ಬೈಬಲ್ ಆಜ್ಞೆಗಳಿಗನುಸಾರ ಜೀವಿಸುವುದರ ಮೌಲ್ಯವನ್ನು ನಾವು ಗಣ್ಯಮಾಡಲು ತೊಡಗುತ್ತೇವೆ. (1 ಕೊರಿಂಥ 6:9, 10; ಎಫೆಸ 4:28) ನಮ್ಮ ಜೀವಿತಗಳಲ್ಲಿ ಈ ತತ್ವಗಳನ್ನು ಅನ್ವಯಿಸುವುದರಲ್ಲಿ ನಾವು ಪ್ರಗತಿಯನ್ನು ಮಾಡಿದ ಹಾಗೆ, ನಾವು ಆತ್ಮಿಕವಾಗಿ ಬೆಳೆಯುತ್ತೇವೆ ಮತ್ತು ದೇವರೊಂದಿಗೆ ನಮ್ಮ ಸಂಬಂಧವು ಆಳವಾಗುತ್ತದೆ. ಅಲ್ಲದೆ, ನಾವು ಎಲ್ಲಿಯೇ ಜೀವಿಸಲಿ, ನಮ್ಮ ದೈವಭಕ್ತಿಯ ನಡತೆಯು ನಮ್ಮನ್ನು ಒಳ್ಳೆಯ ಪ್ರಜೆಗಳನ್ನಾಗಿ ಮಾಡುತ್ತದೆ. ಮತ್ತು ಇದು ದೈವಿಕ ಶಿಕ್ಷಣದ ಮೂಲನಾದ ಯೆಹೋವ ದೇವರನ್ನು ಮಹಿಮೆಪಡಿಸುವಂತೆ ಇತರರನ್ನು ಪ್ರೇರೇಪಿಸಬಹುದು.—1 ಪೇತ್ರ 2:12.
ಅನುದಿನದ ಜೀವಿತಕ್ಕಾಗಿ ಪ್ರಾಯೋಗಿಕ ತರಬೇತಿ
21. ಬೈಬಲ್ ಸಮಯಗಳಲ್ಲಿ ಯಾವ ಪ್ರಾಯೋಗಿಕ ತರಬೇತಿಯನ್ನು ಮಕ್ಕಳು ಪಡೆದರು?
21 ಒಂದು ಸಮತೂಕದ ಶಿಕ್ಷಣದ ನಾಲ್ಕನೆಯ ಗುರಿಯು, ಒಬ್ಬ ವ್ಯಕ್ತಿಗೆ ಅನುದಿನದ ಜೀವನಕ್ಕಾಗಿ ಬೇಕಾಗಿರುವ ಪ್ರಾಯೋಗಿಕ ತರಬೇತಿಯನ್ನು ಒದಗಿಸುವುದು ಆಗಿದೆ. ಬೈಬಲ್ ಸಮಯಗಳಲ್ಲಿನ ಹೆತ್ತವರ ಶಿಕ್ಷಣವು ಪ್ರಾಯೋಗಿಕ ತರಬೇತನ್ನು ಒಳಗೊಂಡಿತು. ಹುಡುಗಿಯರಿಗೆ ಮನೆವಾರ್ತೆಯ ಕೌಶಲಗಳು ಕಲಿಸಲ್ಪಟ್ಟವು. ಇವು ಅನೇಕವೂ ವಿಭಿನ್ನವೂ ಆಗಿದ್ದಿರಬೇಕೆಂದು ಜ್ಞಾನೋಕ್ತಿಯ ಕೊನೆಯ ಅಧ್ಯಾಯವು ತೋರಿಸುತ್ತದೆ. ಹೀಗೆ, ಹುಡುಗಿಯರು ನೂಲು ತೆಗೆಯಲು, ನೇಯಲು, ಮತ್ತು ಅಡಿಗೆ ಮಾಡಲು ಹಾಗೂ ಸಾಮಾನ್ಯ ಮನೆವಾರ್ತೆಯ ನಿರ್ವಹಣೆ, ವ್ಯಾಪಾರ ಹಾಗೂ ಸ್ಥಿರಾಸ್ತಿಯ ವ್ಯವಹಾರ ನಡೆಸಲು ಸಜ್ಜಿತರಾಗಿದ್ದರು. ಹುಡುಗರಿಗೆ ಸಾಮಾನ್ಯವಾಗಿ ತಮ್ಮ ತಂದೆಯ ಐಹಿಕ ಉದ್ಯೋಗ—ಬೇಸಾಯ ಅಥವಾ ಯಾವುದಾದರೂ ಕಸಬು—ವನ್ನು ಕಲಿಸಲಾಗುತ್ತಿತ್ತು. ಯೇಸು ತನ್ನ ದತ್ತಕ ತಂದೆಯಾದ ಯೋಸೇಫನಿಂದ ಬಡಗಿಯ ಕೆಲಸವನ್ನು ಕಲಿತನು; ಹೀಗೆ ಅವನು “ಬಡಗಿಯ ಮಗ”ನೆಂದು ಮಾತ್ರವಲ್ಲ, “ಬಡಗಿ”ಯೆಂದು ಸಹ ಕರೆಯಲ್ಪಟ್ಟನು.—ಮತ್ತಾಯ 13:55; ಮಾರ್ಕ 6:3.
22, 23. (ಎ) ಯಾವ ವಿಷಯಕ್ಕಾಗಿ ಶಿಕ್ಷಣವು ಮಕ್ಕಳನ್ನು ತಯಾರಿಸಬೇಕು? (ಬಿ) ಹೆಚ್ಚಿನ ಶಿಕ್ಷಣವನ್ನು—ಅದು ಅಗತ್ಯವೆಂದು ತೋರಿದಾಗ—ಆಯ್ದುಕೊಳ್ಳುವುದರಲ್ಲಿ ನಮ್ಮ ಉದ್ದೇಶವು ಏನಾಗಿರಬೇಕು?
22 ಇಂದು ಕೂಡ ಒಳ್ಳೆಯ ಸಮತೂಕದ ಒಂದು ಶಿಕ್ಷಣವು, ಯಾವುದೊ ಒಂದು ದಿನ ಕುಟುಂಬದ ಅಗತ್ಯಗಳಿಗಾಗಿ ಕಾಳಜಿವಹಿಸುವ ತಯಾರಿಯನ್ನು ಒಳಗೊಳ್ಳುತ್ತದೆ. 1 ತಿಮೊಥೆಯ 5:8ರಲ್ಲಿ ಕಂಡುಕೊಳ್ಳಲ್ಪಡುವ ಅಪೊಸ್ತಲ ಪೌಲನ ಮಾತುಗಳು ಸೂಚಿಸುವುದೇನೆಂದರೆ, ಒಬ್ಬನ ಕುಟುಂಬಕ್ಕಾಗಿ ಒದಗಿಸುವುದು ಒಂದು ಪವಿತ್ರವಾದ ಹಂಗಾಗಿದೆ. ಅವನು ಬರೆದುದು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” ಹಾಗಾದರೆ ಶಿಕ್ಷಣವು, ತಾವು ಜೀವಿತದಲ್ಲಿ ತೆಗೆದುಕೊಳ್ಳಲಿರುವ ಜವಾಬ್ದಾರಿಗಳಿಗಾಗಿ ಮಕ್ಕಳನ್ನು ಸಿದ್ಧಗೊಳಿಸಬೇಕು, ಅಷ್ಟೇ ಅಲ್ಲದೆ ಅವರು ಸಮುದಾಯದ ಕಷ್ಟಪಟ್ಟು ಕೆಲಸಮಾಡುವ ಸದಸ್ಯರಾಗುವಂತೆ ಅವರನ್ನು ಸಜ್ಜುಗೊಳಿಸಬೇಕು.
23 ಐಹಿಕ ಶಿಕ್ಷಣವನ್ನು ಎಷ್ಟರ ಮಟ್ಟಿಗೆ ನಾವು ಬೆನ್ನಟ್ಟಬೇಕು? ಇದು ದೇಶದಿಂದ ದೇಶಕ್ಕೆ ಭಿನ್ನವಾಗಿರಬಹುದು. ಕಾನೂನು ಕೇಳಿಕೊಳ್ಳುವ ಕನಿಷ್ಠಮಟ್ಟದ ತರಬೇತಿಯ ಜೊತೆಗೆ ಉದ್ಯೋಗದ ಮಾರುಕಟ್ಟೆಯು ಹೆಚ್ಚನ್ನು ಅವಶ್ಯಪಡಿಸಿದರೆ, ಅಂತಹ ಹೆಚ್ಚಿನ ಅಭ್ಯಾಸಗಳ ಸಂಭಾವ್ಯ ಪ್ರಯೋಜನಗಳನ್ನು ಮತ್ತು ಅನನುಕೂಲತೆಗಳನ್ನು—ಎರಡನ್ನೂ—ತೂಗಿ ನೋಡುತ್ತಾ, ಹೆಚ್ಚಿನ ಶಿಕ್ಷಣ ಅಥವಾ ತರಬೇತಿಯ ಕುರಿತು ಒಂದು ನಿರ್ಣಯವನ್ನು ಮಾಡುವುದರಲ್ಲಿ ತಮ್ಮ ಮಕ್ಕಳಿಗೆ ಮಾರ್ಗದರ್ಶನವನ್ನು ನೀಡುವುದು ಹೆತ್ತವರಿಗೆ ಬಿಡಲ್ಪಟ್ಟಿದೆ. ಹೆಚ್ಚಿನ ಶಿಕ್ಷಣವನ್ನು—ಅದು ಅವಶ್ಯವೆಂದು ತೋರಿದಾಗ—ಆಯ್ದುಕೊಳ್ಳುವುದರಲ್ಲಿ ಒಬ್ಬರ ಉದ್ದೇಶವಾದರೂ ಏನಾಗಿರಬೇಕು? ಖಂಡಿತವಾಗಿಯೂ ಐಶ್ವರ್ಯಗಳು, ಆತ್ಮ ಶ್ಲಾಘನೆ ಅಥವಾ ಸ್ತುತಿಯಾಗಿರಬಾರದು. (ಜ್ಞಾನೋಕ್ತಿ 15:25; 1 ತಿಮೊಥೆಯ 6:17) ಯೇಸುವಿನ ಮಾದರಿಯಿಂದ ನಾವು ಕಲಿತ ಪಾಠವನ್ನು ಜ್ಞಾಪಿಸಿಕೊಳ್ಳಿರಿ—ಶಿಕ್ಷಣವು ಯೆಹೋವನಿಗೆ ಸ್ತುತಿಯನ್ನು ತರಲು ಉಪಯೋಗಿಸಲ್ಪಡಬೇಕು. ನಾವು ಹೆಚ್ಚಿನ ಶಿಕ್ಷಣವನ್ನು ಆಯ್ದುಕೊಳ್ಳುವುದಾದರೆ, ನಮ್ಮ ಉದ್ದೇಶವು, ಕ್ರೈಸ್ತ ಶುಶ್ರೂಷೆಯಲ್ಲಿ ಸಾಧ್ಯವಾದಷ್ಟು ಪೂರ್ಣವಾಗಿ ಯೆಹೋವನನ್ನು ಸೇವಿಸಸಾಧ್ಯವಾಗುವಂತೆ ನಮ್ಮನ್ನು ಯಥೋಚಿತವಾಗಿ ಬೆಂಬಲಿಸಿಕೊಳ್ಳುವ ಅಪೇಕ್ಷೆಯಾಗಿರಬೇಕು.—ಕೊಲೊಸ್ಸೆ 3:23, 24.
24. ಯೇಸುವಿನಿಂದ ಕಲಿತ ಯಾವ ಪಾಠವನ್ನು ನಾವು ಮರೆಯಬಾರದು?
24 ಆದುದರಿಂದ ನಾವು ಒಂದು ಸಮತೂಕದ ಐಹಿಕ ಶಿಕ್ಷಣವನ್ನು ಗಳಿಸುವ ನಮ್ಮ ಪ್ರಯತ್ನಗಳಲ್ಲಿ ಶ್ರಮಶೀಲರಾಗಿರೋಣ. ಯೆಹೋವನ ಸಂಸ್ಥೆಯೊಳಗೆ ಒದಗಿಸಲ್ಪಡುವ ದೈವಿಕ ಶಿಕ್ಷಣದ ಮುಂದುವರಿಯುತ್ತಿರುವ ಕಾರ್ಯಕ್ರಮದ ಪೂರ್ಣ ಲಾಭವನ್ನು ನಾವು ಪಡೆದುಕೊಳ್ಳೋಣ. ಈ ಭೂಮಿಯ ಮೇಲೆ ಎಂದಾದರೂ ಜೀವಿಸಿದ, ಅತ್ಯುತ್ತಮ ಶಿಕ್ಷಣ ಪಡೆದ ಮನುಷ್ಯ, ಯೇಸು ಕ್ರಿಸ್ತನಿಂದ ನಾವು ಕಲಿತ ಅಮೂಲ್ಯ ಪಾಠವನ್ನು ನಾವು ಎಂದಿಗೂ ಮರೆಯದಿರೋಣ—ಶಿಕ್ಷಣವು ನಮ್ಮನ್ನು ಮಹಿಮೆ ಪಡಿಸಿಕೊಳ್ಳಲು ಅಲ್ಲ, ಬದಲಿಗೆ ಎಲ್ಲರಿಗಿಂತ ಅತಿ ಮಹಾನ್ ಶಿಕ್ಷಕನಾದ ಯೆಹೋವ ದೇವರಿಗೆ ಸ್ತುತಿಯನ್ನು ತರಲು ಉಪಯೋಗಿಸಲ್ಪಡಬೇಕು!
ನಿಮ್ಮ ಉತ್ತರವು ಏನಾಗಿದೆ?
◻ ಯೇಸು ತನ್ನ ಶಿಕ್ಷಣವನ್ನು ಹೇಗೆ ಉಪಯೋಗಿಸಿದನು?
◻ ಚೆನ್ನಾಗಿ ಓದಲು ಕಲಿಯುವುದು ಏಕೆ ಪ್ರಾಮುಖ್ಯವಾಗಿದೆ?
◻ ಯೆಹೋವನಿಗೆ ಸ್ತುತಿಯನ್ನು ತರಲು ನಾವು ಬರೆಯುವ ಸಾಮರ್ಥ್ಯವನ್ನು ಹೇಗೆ ಉಪಯೋಗಿಸಬಹುದು?
◻ ದೈವಿಕ ಶಿಕ್ಷಣವು ನೈತಿಕವಾಗಿಯೂ ಆತ್ಮಿಕವಾಗಿಯೂ ವಿಕಾಸಹೊಂದುವಂತೆ ನಮಗೆ ಹೇಗೆ ಸಹಾಯ ಮಾಡುತ್ತದೆ?
◻ ಸಮತೂಕದ ಶಿಕ್ಷಣವು ಯಾವ ಪ್ರಾಯೋಗಿಕ ತರಬೇತಿಯನ್ನು ಒಳಗೊಂಡಿರಬೇಕು?
[ಪುಟ 13 ರಲ್ಲಿರುವ ಚೌಕ]
ಶಿಕ್ಷಕರಿಗಾಗಿ ಪ್ರಾಯೋಗಿಕ ಸಹಾಯ
1995/96ರಲ್ಲಿ ನಡೆದ “ಹರ್ಷಭರಿತ ಸ್ತುತಿಗಾರರು” ಎಂಬ ಜಿಲ್ಲಾ ಅಧಿವೇಶನಗಳಲ್ಲಿ, ವಾಚ್ ಟವರ್ ಸೊಸೈಟಿಯು ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ (ಇಂಗ್ಲಿಷ್) ಎಂಬ ಶೀರ್ಷಿಕೆಯುಳ್ಳ ಒಂದು ಹೊಸ ಬ್ರೋಷರನ್ನು ಬಿಡುಗಡೆ ಮಾಡಿತು. ಈ 32 ಪುಟದ, ಪೂರ್ಣ ವರ್ಣದ ಬ್ರೋಷರನ್ನು ವಿಶೇಷವಾಗಿ ಶಿಕ್ಷಕರಿಗಾಗಿ ಪ್ರಕಾಶಿಸಲಾಗಿದೆ. ಇಷ್ಟರ ತನಕ ಅದು 58 ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿದೆ.
ಶಿಕ್ಷಕರಿಗಾಗಿ ಒಂದು ಬ್ರೋಷರ್ ಏಕೆ? ಯೆಹೋವನ ಸಾಕ್ಷಿಗಳ ಮಕ್ಕಳಾಗಿರುವ ವಿದ್ಯಾರ್ಥಿಗಳ ನಂಬಿಕೆಗಳನ್ನು ಉತ್ತಮವಾಗಿ ತಿಳಿದುಕೊಳ್ಳುವಂತೆ ಅವರಿಗೆ ಸಹಾಯ ಮಾಡಲಿಕ್ಕಾಗಿಯೇ. ಬ್ರೋಷರ್ನಲ್ಲಿ ಏನು ಅಡಕವಾಗಿದೆ? ಸ್ಪಷ್ಟ ಹಾಗೂ ಸಕಾರಾತ್ಮಕವಾದ ಒಂದು ವಿಧಾನದಲ್ಲಿ, ಅದು ಹೆಚ್ಚಿನ ಶಿಕ್ಷಣ, ಜನ್ಮದಿನಗಳು ಮತ್ತು ಕ್ರಿಸ್ಮಸ್ ಹಾಗೂ ಧ್ವಜವಂದನೆಯಂತಹ ವಿವಾದಾಂಶಗಳ ಮೇಲಿನ ನಮ್ಮ ದೃಷ್ಟಿಕೋನಗಳನ್ನು ವಿವರಿಸುತ್ತದೆ. ನಮ್ಮ ಮಕ್ಕಳು ತಮ್ಮ ಶಾಲಾ ಶಿಕ್ಷಣದ ಒಳ್ಳೆಯ ಲಾಭವನ್ನು ಪಡೆಯುವಂತೆ ನಾವು ಬಯಸುತ್ತೇವೆಂದೂ ಮತ್ತು ನಮ್ಮ ಮಕ್ಕಳ ಶಿಕ್ಷಣದಲ್ಲಿ ಸಕ್ರಿಯ ಆಸಕ್ತಿಯನ್ನು ವಹಿಸುತ್ತಾ, ಶಿಕ್ಷಕರೊಂದಿಗೆ ಸಹಕರಿಸಲು ಬದ್ಧರಾಗಿದ್ದೇವೆಂದೂ ಬ್ರೋಷರ್ ಶಿಕ್ಷಕರಿಗೆ ಪುನರಾಶ್ವಾಸನೆ ನೀಡುತ್ತದೆ.
ಶಿಕ್ಷಣ ಬ್ರೋಷರನ್ನು ಹೇಗೆ ಉಪಯೋಗಿಸಬಹುದು? ಅದು ಶಿಕ್ಷಕರಿಗಾಗಿ ತಯಾರಿಸಲ್ಪಟ್ಟ ಕಾರಣ, ಅದನ್ನು ನಾವು ಅಧ್ಯಾಪಕರು, ಮುಖ್ಯೋಪಾಧ್ಯಾಯರು, ಮತ್ತು ಇತರ ಶಾಲಾ ಅಧಿಕಾರಿಗಳೊಂದಿಗೆ ಹಂಚಿಕೊಳ್ಳೋಣ. ನಮ್ಮ ದೃಷ್ಟಿಕೋನಗಳನ್ನು ಮತ್ತು ನಂಬಿಕೆಗಳನ್ನು ಹಾಗೂ ನಾವು ಕೆಲವೊಮ್ಮೆ ಭಿನ್ನರಾಗಿರುವ ಹಕ್ಕನ್ನು ಸಾಧಿಸುವುದು ಏಕೆಂದು ತಿಳಿದುಕೊಳ್ಳಲು, ಈ ಹೊಸ ಬ್ರೋಷರ್ ಅಂತಹ ಎಲ್ಲ ಶಿಕ್ಷಕರಿಗೆ ಸಹಾಯ ಮಾಡಲಿ. ತಮ್ಮ ಮಕ್ಕಳ ಶಿಕ್ಷಕರೊಂದಿಗೆ ವೈಯಕ್ತಿಕ ಚರ್ಚೆಗಾಗಿ ಈ ಬ್ರೋಷರನ್ನು ಒಂದು ಆಧಾರದಂತೆ ಉಪಯೋಗಿಸಲು ಹೆತ್ತವರು ಉತ್ತೇಜಿಸಲ್ಪಡುತ್ತಾರೆ.
[ಪುಟ 10 ರಲ್ಲಿರುವ ಚಿತ್ರ]
ಪ್ರಾಚೀನ ಇಸ್ರಾಯೇಲ್ನಲ್ಲಿ ಶಿಕ್ಷಣವು ಹೆಚ್ಚು ಗೌರವವಿಡಲ್ಪಟ್ಟದ್ದಾಗಿತ್ತು