ನಿತ್ಯತೆಯ ಅರಸನನ್ನು ಸ್ತುತಿಸಿರಿ!
“ಯೆಹೋವನು ಅನಿಶ್ಚಿತ ಕಾಲದ ವರೆಗೆ, ಸದಾಕಾಲಕ್ಕೂ ಅರಸನಾಗಿದ್ದಾನೆ.”—ಕೀರ್ತನೆ 10:16, NW.
1. ನಿತ್ಯತೆಯ ವಿಷಯದಲ್ಲಿ ಯಾವ ಪ್ರಶ್ನೆಗಳು ಏಳುತ್ತವೆ?
ನಿತ್ಯತೆ—ಅದನ್ನು ನೀವು ಹೇಗೆ ಅರ್ಥನಿರೂಪಿಸುವಿರಿ? ಸಮಯವು ನಿಜವಾಗಿಯೂ ಸದಾಕಾಲಕ್ಕೂ ಮುಂದುವರಿಯಸಾಧ್ಯವೆಂದು ನೀವು ನೆನಸುತ್ತೀರೋ? ಒಳ್ಳೇದು, ಸಮಯವು ಸದಾಕಾಲ ಗತಕಾಲದೊಳಗೆ ವ್ಯಾಪಿಸುತ್ತದೆಂಬುದು ನಿಸ್ಸಂದೇಹ. ಆದುದರಿಂದ ಸಮಯವು ಸದಾಕಾಲ ಭವಿಷ್ಯದೊಳಗೆ ಏಕೆ ವ್ಯಾಪಿಸಸಾಧ್ಯವಿಲ್ಲ? ನಿಶ್ಚಯವಾಗಿಯೇ, ಬೈಬಲಿನ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್, ದೇವರನ್ನು “ಅನಿಶ್ಚಿತ ಕಾಲದಿಂದ ಅನಿಶ್ಚಿತ ಕಾಲದ ವರೆಗೂ” ಸ್ತುತಿಸಲ್ಪಡುವ ದೇವರಾಗಿ ಸೂಚಿಸುತ್ತದೆ. (ಕೀರ್ತನೆ 41:13) ಈ ಅಭಿವ್ಯಕ್ತಿಯು ಏನನ್ನು ಅರ್ಥೈಸುತ್ತದೆ? ಇದಕ್ಕೆ ಸಂಬಂಧಿಸುವ ಒಂದು ವಿಷಯ—ಬಾಹ್ಯಾಕಾಶ—ವನ್ನು ನಾವು ಗಣನೆಗೆ ತೆಗೆದುಕೊಳ್ಳುವಲ್ಲಿ, ಅದನ್ನು ತಿಳಿಯುವಂತೆ ನಾವು ಸಹಾಯಿಸಲ್ಪಡಬಹುದು.
2, 3. (ಎ) ಬಾಹ್ಯಾಕಾಶದ ಕುರಿತಾದ ಯಾವ ವಿಷಯಗಳು ನಿತ್ಯತೆಯನ್ನು ಗಣ್ಯಮಾಡಲು ನಮಗೆ ಸಹಾಯ ಮಾಡುತ್ತವೆ? (ಬಿ) ನಿತ್ಯತೆಯ ಅರಸನನ್ನು ನಾವು ಏಕೆ ಆರಾಧಿಸಲು ಬಯಸಬೇಕು?
2 ಬಾಹ್ಯಾಕಾಶವು ಎಷ್ಟು ವಿಸ್ತಾರವಾಗಿದೆ? ಅದಕ್ಕೆ ಯಾವುದಾದರೂ ಮಿತಿಯಿದೆಯೊ? 400 ವರ್ಷಗಳಷ್ಟು ಹಿಂದಿನ ತನಕ, ನಮ್ಮ ಭೂಮಿಯು ವಿಶ್ವದ ಕೇಂದ್ರವಾಗಿರುವುದಾಗಿ ನೆನಸಲಾಗಿತ್ತು. ಅನಂತರ ಗ್ಯಾಲಿಲ್ಯೊ, ದೂರದರ್ಶಕವನ್ನು ನಿರ್ಮಿಸಿ, ಪರಲೋಕಗಳ ಒಂದು ಹೆಚ್ಚು ವಿಸ್ತಾರವಾದ ನೋಟವನ್ನು ಸಾಧ್ಯಮಾಡಿದನು. ಆಗ ಗ್ಯಾಲಿಲ್ಯೊ ಇನ್ನೂ ಹೆಚ್ಚಿನ ನಕ್ಷತ್ರಗಳನ್ನು ನೋಡಶಕ್ತನಾಗಿದ್ದು, ಭೂಮಿ ಮತ್ತು ಇತರ ಗ್ರಹಗಳು ಸೂರ್ಯನ ಸುತ್ತಲೂ ತಿರುಗುತ್ತವೆ ಎಂದು ತೋರಿಸಶಕ್ತನಾಗಿದ್ದನು. ಕ್ಷೀರ ಪಥವು (ಮಿಲ್ಕಿ ವೇ) ಇನ್ನು ಮುಂದೆ ಕ್ಷೀರದಂತೆ ತೋರಲಿಲ್ಲ. ಅದು ನಕ್ಷತ್ರಗಳ ಒಂದು ಆಕಾಶಗಂಗೆ—ಸಂಖ್ಯೆಯಲ್ಲಿ ಸುಮಾರು ಹತ್ತು ಸಾವಿರ ಕೋಟಿ—ಯಾಗಿ ಪರಿಣಮಿಸಿತು. ಅಷ್ಟೊಂದು ವಾಸ್ತವವಾದ ನಕ್ಷತ್ರಗಳನ್ನು ನಾವು ಎಂದೂ, ಜೀವಮಾನದಲ್ಲೂ ಎಣಿಸಸಾಧ್ಯವಿಲ್ಲ. ಅನಂತರ, ಖಗೋಳಶಾಸ್ತ್ರಜ್ಞರು ಕೋಟಿಗಟ್ಟಲೆ ಆಕಾಶಗಂಗೆಗಳನ್ನು ಕಂಡುಹಿಡಿಯುತ್ತಾ ಹೋದರು. ಇವು ಬಾಹ್ಯಾಕಾಶದಲ್ಲಿ ಅಂತ್ಯರಹಿತವಾಗಿ—ಅತಿ ಪ್ರಬಲ ದೂರದರ್ಶಕಗಳು ಶೋಧಿಸಸಾಧ್ಯವಿರುವಷ್ಟು ದೂರ—ವ್ಯಾಪಿಸಿಕೊಳ್ಳುತ್ತವೆ. ಬಾಹ್ಯಾಕಾಶಕ್ಕೆ ಮಿತಿಗಳಿಲ್ಲವೆಂದು ತೋರುತ್ತದೆ. ನಿತ್ಯತೆಯೊಂದಿಗೂ ಅದೇ ವಿಷಯವು ಸತ್ಯವಾಗಿದೆ—ಅದಕ್ಕೆ ಮಿತಿಗಳಿಲ್ಲ.
3 ನಿತ್ಯತೆಯ ವಿಚಾರವು ನಮ್ಮ ಸೀಮಿತ ಮಾನವ ಮಿದುಳುಗಳ ತಿಳಿವಳಿಕೆಯನ್ನು ಮೀರಿ ಇದೆಯೆಂದು ತೋರುತ್ತದೆ. ಆದಾಗಲೂ, ಅದನ್ನು ಪೂರ್ಣವಾಗಿ ತಿಳಿಯುವವನೊಬ್ಬನು ಇದ್ದಾನೆ. ಆತನು ನೂರಾರು ಕೋಟಿ ಆಕಾಶಗಂಗೆಗಳಲ್ಲಿರುವ ಮಿತಿಯಿಲ್ಲದ ಸಾವಿರಾರು ಕೋಟಿ ನಕ್ಷತ್ರಗಳನ್ನು ಎಣಿಸಬಲ್ಲನು, ಹೌದು ಹೆಸರಿಸಲೂ ಬಲ್ಲನು! ಈತನು ಹೇಳುವುದು: “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು. ನೀನು ಗ್ರಹಿಸಲಿಲ್ಲವೋ? ಕೇಳಲಿಲ್ಲವೋ? ಯೆಹೋವನು ನಿರಂತರದೇವರೂ ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ ಆಗಿದ್ದಾನೆ; ಆತನು ದಣಿದು ಬಳಲುವದಿಲ್ಲ; ಆತನ ವಿವೇಕವು ಪರಿಶೋಧನೆಗೆ ಅಗಮ್ಯ.” (ಯೆಶಾಯ 40:26, 28) ಎಂತಹ ಒಂದು ಅದ್ಭುತಕರ ದೇವರು! ನಿಶ್ಚಯವಾಗಿಯೂ, ನಾವು ಆರಾಧಿಸಲು ಬಯಸಬೇಕಾದ ದೇವರು ಆತನಾಗಿದ್ದಾನೆ!
‘ಅನಿಶ್ಚಿತ ಕಾಲದ ವರೆಗೆ ಅರಸನು’
4. (ಎ) ನಿತ್ಯತೆಯ ಅರಸನಿಗಾಗಿ ದಾವೀದನು ಗಣ್ಯತೆಯನ್ನು ಹೇಗೆ ವ್ಯಕ್ತಪಡಿಸಿದನು? (ಬಿ) ವಿಶ್ವದ ಮೂಲದ ಕುರಿತಾಗಿ ಇತಿಹಾಸದ ಅತ್ಯಂತ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರು ಏನು ತೀರ್ಮಾನಿಸಿದರು?
4 ಕೀರ್ತನೆ 10:16 (NW)ರಲ್ಲಿ, ಸೃಷ್ಟಿಕರ್ತನಾದ ದೇವರ ಕುರಿತಾಗಿ ದಾವೀದನು ಹೇಳುವುದು: “ಯೆಹೋವನು ಅನಿಶ್ಚಿತ ಕಾಲದ ವರೆಗೆ, ಸದಾಕಾಲಕ್ಕೂ ಅರಸನಾಗಿದ್ದಾನೆ.” ಮತ್ತು ಕೀರ್ತನೆ 29:10ರಲ್ಲಿ, ಅವನು ಪುನಃ ಹೇಳುವುದು: “ಆತನು [“ಯೆಹೋವನು,” NW] ಸದಾಕಾಲವೂ ಅರಸನಾಗಿ ಕೂತಿರುವನು.” ಹೌದು, ಯೆಹೋವನು ನಿತ್ಯತೆಯ ಅರಸನು! ಇನ್ನೂ ಹೆಚ್ಚಾಗಿ, ಈ ಉನ್ನತಕ್ಕೇರಿಸಲ್ಪಟ್ಟ ಅರಸನು, ನಾವು ಬಾಹ್ಯಾಕಾಶದಲ್ಲಿ ಕಾಣುವಂತಹದ್ದೆಲ್ಲದರ ವಿನ್ಯಾಸಕನೂ ನಿರ್ಮಾಣಿಕನೂ ಆಗಿದ್ದಾನೆಂಬುದಕ್ಕೆ ದಾವೀದನು ಸಾಕ್ಷ್ಯಕೊಡುತ್ತಾ, ಕೀರ್ತನೆ 19:1ರಲ್ಲಿ ಹೇಳುವುದು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.” ಸುಮಾರು 2,700 ವರ್ಷಗಳ ಬಳಿಕ, ಪ್ರಸಿದ್ಧ ವಿಜ್ಞಾನಿ ಸರ್ ಐಸಕ್ ನ್ಯೂಟನ್ ದಾವೀದನೊಂದಿಗೆ ಸಮ್ಮತಿಯನ್ನು ವ್ಯಕ್ತಪಡಿಸುತ್ತಾ, ಬರೆದುದು: “ಸೂರ್ಯಗಳು, ಗ್ರಹಗಳು ಮತ್ತು ಧೂಮಕೇತುಗಳ ಈ ಅತ್ಯಂತ ಸೊಬಗಿನ ವ್ಯವಸ್ಥೆಯು, ಕೇವಲ ಒಬ್ಬ ಜ್ಞಾನೋದಯವುಳ್ಳ ಹಾಗೂ ಶಕ್ತಿಯುತ ಜೀವಿಯ ಉದ್ದೇಶ ಮತ್ತು ಪರಮಾಧಿಕಾರದಿಂದ ಮಾತ್ರವೇ ಉದ್ಭವಿಸಸಾಧ್ಯವಿದೆ.”
5. ವಿವೇಕದ ಮೂಲದ ಕುರಿತಾಗಿ ಯೆಶಾಯ ಮತ್ತು ಪೌಲರು ಏನನ್ನು ಬರೆದರು?
5 ಯಾರಿಗೆ “ಆಕಾಶವೂ ಉನ್ನತೋನ್ನತವಾದ ಆಕಾಶವೂ . . . ಸಾಲ”ದೋ, ಆ ಪರಮಪ್ರಧಾನ ಕರ್ತನಾದ ಯೆಹೋವನು, ನಿತ್ಯ ಜೀವಿಸುತ್ತಾನೆಂದು ತಿಳಿಯುವುದು ನಮ್ಮನ್ನೆಷ್ಟು ನಮ್ರರನ್ನಾಗಿಸಬೇಕು! (1 ಅರಸು 8:27) “ಆಕಾಶಮಂಡಲವನ್ನು ಸೃಷ್ಟಿಸಿದ . . . ಭೂಲೋಕವನ್ನು ನಿರ್ಮಿಸಿ ರೂಪಿಸಿ”ದವನಾಗಿ ಯೆಶಾಯ 45:18ರಲ್ಲಿ ವರ್ಣಿಸಲ್ಪಟ್ಟಿರುವಂತಹ ಯೆಹೋವನು, ಮರ್ತ್ಯ ಮಾನವ ಮಿದುಳುಗಳು ಶೋಧಿಸಸಾಧ್ಯವಿರುವುದಕ್ಕಿಂತಲೂ ಹೆಚ್ಚು ವಿಸ್ತಾರವಾದ ವಿವೇಕದ ಮೂಲನಾಗಿದ್ದಾನೆ. 1 ಕೊರಿಂಥ 1:19ರಲ್ಲಿ ಎತ್ತಿತೋರಿಸಲ್ಪಟ್ಟಂತೆ, ಯೆಹೋವನು ಹೇಳಿದ್ದು: “ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು, ವಿವೇಕಿಗಳ ವಿವೇಕವನ್ನು ನಿರಾಕರಿಸುವೆನು.” ಇದಕ್ಕೆ ಅಪೊಸ್ತಲ ಪೌಲನು ವಚನ 20ರಲ್ಲಿ ಕೂಡಿಸಿದ್ದು: “ಜ್ಞಾನಿಯು ಎಲ್ಲಿ? ಶಾಸ್ತ್ರಿಯೆಲ್ಲಿ? ಇಹಲೋಕದ ತರ್ಕವಾದಿ ಎಲ್ಲಿ? ದೇವರು ಇಹಲೋಕಜ್ಞಾನವನ್ನು ಹುಚ್ಚುತನವಾಗ [“ಮೂರ್ಖತನವಾಗಿ,” NW] ಮಾಡಿದ್ದಾನಲ್ಲವೇ”? ಹೌದು, ಪೌಲನು ಅಧ್ಯಾಯ 3, ವಚನ 19ರಲ್ಲಿ ಹೇಳುತ್ತಾ ಹೋದಂತೆ, “ಇಹಲೋಕ ಜ್ಞಾನವು ದೇವರ ಮುಂದೆ ಹುಚ್ಚುತನ [“ಮೂರ್ಖತನ,” NW]ವಾಗಿದೆ.”
6. “ಅನಿಶ್ಚಿತ ಕಾಲದ” ವಿಷಯವಾಗಿ ಪ್ರಸಂಗಿ 3:11 ಏನನ್ನು ಸೂಚಿಸುತ್ತದೆ?
6 ಆಕಾಶಸ್ಥಕಾಯಗಳು, ಅರಸನಾದ ಸೊಲೊಮೋನನು ಸೂಚಿಸಿದಂತಹ ಸೃಷ್ಟಿಯ ಭಾಗವಾಗಿವೆ: “ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ; ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ [“ಅನಿಶ್ಚಿತ ಕಾಲದ,” NW] ಯೋಚನೆಯನ್ನು ಇಟ್ಟಿದ್ದಾನೆ; ಆದರೂ ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ.” (ಪ್ರಸಂಗಿ 3:11) “ಅನಿಶ್ಚಿತ ಕಾಲದ” ಅಂದರೆ ನಿತ್ಯತೆಯ ಅರ್ಥವನ್ನು ಕಂಡುಹಿಡಿಯಲು ಪ್ರಯತ್ನಿಸುವುದು ಮನುಷ್ಯನ ಹೃದಯದಲ್ಲಿ ನೆಡಲ್ಪಟ್ಟಿದೆ. ಆದರೆ ಅವನು ಅಂತಹ ಜ್ಞಾನವನ್ನು ಎಂದಾದರೂ ಹೊಂದಬಲ್ಲನೊ?
ಅದ್ಭುತಕರವಾದೊಂದು ಜೀವನ ಪ್ರತೀಕ್ಷೆ
7, 8. (ಎ) ಯಾವ ಅದ್ಭುತಕರವಾದ ಜೀವನ ಪ್ರತೀಕ್ಷೆಯು ಮಾನವ ಕುಲದ ಎದುರು ಇದೆ, ಮತ್ತು ಅದು ಹೇಗೆ ಹೊಂದಲ್ಪಡಬಹುದು? (ಬಿ) ದೈವಿಕ ಶಿಕ್ಷಣವು ಎಲ್ಲಾ ನಿತ್ಯತೆಗೆ ಮುಂದುವರಿಯುವುದೆಂಬುದಕ್ಕೆ ನಾವು ಏಕೆ ಹರ್ಷಿಸತಕ್ಕದ್ದು?
7 ಯೆಹೋವನಿಗೆ ಪ್ರಾರ್ಥನೆಯಲ್ಲಿ ಯೇಸು ಕ್ರಿಸ್ತನು ಅಂದದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ನಾವು ಅಂತಹ ಜ್ಞಾನವನ್ನು ಹೇಗೆ ಗಳಿಸಬಲ್ಲೆವು? ನಾವು ದೇವರ ವಾಕ್ಯವಾದ, ಪವಿತ್ರ ಬೈಬಲನ್ನು ಅಭ್ಯಾಸಿಸುವ ಅಗತ್ಯವಿದೆ. ಹೀಗೆ ನಾವು, ಒಂದು ಪ್ರಮೋದವನ ಭೂಮಿಯಲ್ಲಿ ನಿತ್ಯ ಜೀವಕ್ಕಾಗಿ ತನ್ನ ಪುತ್ರನ ಮೂಲಕ ಮಾಡಲ್ಪಟ್ಟ ಒದಗಿಸುವಿಕೆಯನ್ನು ಸೇರಿಸಿ, ದೇವರ ಭವ್ಯ ಉದ್ದೇಶಗಳ ನಿಷ್ಕೃಷ್ಟ ಜ್ಞಾನವನ್ನು ಗಳಿಸಸಾಧ್ಯವಿದೆ. 1 ತಿಮೊಥೆಯ 6:19ರಲ್ಲಿ ಸೂಚಿಸಲ್ಪಟ್ಟಿರುವ “ವಾಸ್ತವವಾದ ಜೀವ”ವು ಅದಾಗಿರುವುದು. ಅದು ಯಾವುದನ್ನು ಎಫೆಸ 3:11 “ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ಅನಾದಿಕಾಲದಿಂದ ಮಾಡಿದ ಸಂಕಲ್ಪ” ಎಂದು ವರ್ಣಿಸುತ್ತದೊ, ಅದಕ್ಕೆ ಹೊಂದಿಕೆಯಲ್ಲಿರುವುದು.
8 ಹೌದು, ಪಾಪಪೂರ್ಣ ಮನುಷ್ಯರಾದ ನಾವು ದೈವಿಕ ಶಿಕ್ಷಣ ಮತ್ತು ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿನ ನಂಬಿಕೆಯ ಮೂಲಕ ನಿತ್ಯ ಜೀವವನ್ನು ಗಳಿಸಬಲ್ಲೆವು. ಈ ಶಿಕ್ಷಣವು ಎಷ್ಟು ದೀರ್ಘ ಸಮಯದ ವರೆಗೆ ಮುಂದುವರಿಯುವುದು? ನಮ್ಮ ಸೃಷ್ಟಿಕರ್ತನ ವಿವೇಕದ ವಿಷಯದಲ್ಲಿ ಮಾನವಕುಲವು ಪ್ರಗತಿಪರವಾಗಿ ಉಪದೇಶಿಸಲ್ಪಟ್ಟಂತೆಯೇ ಅದು ಎಲ್ಲಾ ನಿತ್ಯತೆಗೂ ಮುಂದುವರಿಯುವುದು. ಯೆಹೋವನ ವಿವೇಕಕ್ಕೆ ಮಿತಿಗಳಿಲ್ಲ. ಇದನ್ನು ಅಂಗೀಕರಿಸುತ್ತಾ, ಅಪೊಸ್ತಲ ಪೌಲನು ಉದ್ಗರಿಸಿದ್ದು: “ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಅಗಾಧ! ಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ!” (ರೋಮಾಪುರ 11:33) 1 ತಿಮೊಥೆಯ 1:17 (NW) ಯೆಹೋವನನ್ನು “ನಿತ್ಯತೆಯ ಅರಸನು” ಎಂದು ಕರೆಯುವುದು ಖಂಡಿತವಾಗಿಯೂ ಸೂಕ್ತವಾಗಿದೆ!
ಯೆಹೋವನ ಸೃಷ್ಟಿಕಾರಕ ವಿವೇಕ
9, 10. (ಎ) ಮಾನವಕುಲಕ್ಕೆ ತನ್ನ ಕೊಡುಗೆಯಾಗಿ ಭೂಮಿಯನ್ನು ತಯಾರಿಸುವುದರಲ್ಲಿ ಯೆಹೋವನು ಯಾವ ಭವ್ಯ ಕೆಲಸಗಳನ್ನು ಪೂರೈಸಿದನು? (ಬಿ) ಯೆಹೋವನ ಅತ್ಯುತ್ಕೃಷ್ಟ ವಿವೇಕವು ಆತನ ಸೃಷ್ಟಿಗಳಲ್ಲಿ ಹೇಗೆ ಪ್ರದರ್ಶಿಸಲ್ಪಟ್ಟಿದೆ? (ರೇಖಾಚೌಕವನ್ನು ನೋಡಿ.)
9 ಮಾನವರಾದ ನಮಗಾಗಿ ನಿತ್ಯತೆಯ ಅರಸನು ಒದಗಿಸಿರುವ ಸೊಗಸಾದ ಪರಂಪರೆಯನ್ನು ಪರಿಗಣಿಸಿರಿ. ಕೀರ್ತನೆ 115:16 ನಮಗನ್ನುವುದು: “ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ.” ಅದೊಂದು ಅದ್ಭುತ ಜವಾಬ್ದಾರಿಯೆಂದು ನೀವು ನೆನಸುವುದಿಲ್ಲವೊ? ನಿಶ್ಚಯವಾಗಿಯೂ! ಮತ್ತು ಭೂಮಿಯನ್ನು ನಮ್ಮ ಮನೆಯನ್ನಾಗಿ ತಯಾರಿಸುವುದರಲ್ಲಿ ನಮ್ಮ ಸೃಷ್ಟಿಕರ್ತನ ಗಮನಾರ್ಹ ಮುಂದಾಲೋಚನೆಯನ್ನು ನಾವು ಎಷ್ಟು ಗಣ್ಯಮಾಡುತ್ತೇವೆ!—ಕೀರ್ತನೆ 107:8.
10 ಆದಿಕಾಂಡ ಅಧ್ಯಾಯ 1ರ ಆರು ಸೃಷ್ಟಿಕಾರಕ “ದಿನಗಳ” ಸಮಯದಲ್ಲಿ, ಪ್ರತಿ ದಿನವು ಸಾವಿರಾರು ವರ್ಷಗಳನ್ನು ಆವರಿಸುತ್ತಾ, ಭೂಮಿಯ ಮೇಲೆ ಅದ್ಭುತ ಬೆಳವಣಿಗೆಗಳು ನಡೆದವು. ದೇವರ ಈ ಸೃಷ್ಟಿಗಳು ಅಂತಿಮವಾಗಿ ಇಡೀ ಭೂಮಿಯನ್ನು, ಹಸುರಾದ ಹುಲ್ಲಿನ ಒಂದು ರತ್ನಗಂಬಳಿ, ಘನವಾದ ಕಾಡುಗಳು ಮತ್ತು ವರ್ಣರಂಜಿತ ಹೂವುಗಳಿಂದ ಆವರಿಸಲಿದ್ದವು. “ಅವುಗಳ ಜಾತಿಗನುಸಾರ” ಪುನರುತ್ಪತ್ತಿ ಮಾಡುವ ಗಮನಸೆಳೆಯುವ ಬಹು ಸಂಖ್ಯೆಯ ಸಮುದ್ರ ಜೀವಿಗಳು, ಸೊಗಸಾದ ರೆಕ್ಕೆಗಳುಳ್ಳ ಪಕ್ಷಿಗಳ ಹಿಂಡುಗಳು ಮತ್ತು ಮಹತ್ತರವಾದ ಸಾಕುಪ್ರಾಣಿಗಳು ಹಾಗೂ ವನ್ಯ ಮೃಗಗಳಿಂದ ಅದು ತುಂಬಿಕೊಂಡು ಇರಲಿತ್ತು. ಪುರುಷ ಮತ್ತು ಸ್ತ್ರೀಯ ಸೃಷ್ಟಿಯ ವರ್ಣನೆಯನ್ನು ಹಿಂಬಾಲಿಸುತ್ತಾ, ಆದಿಕಾಂಡ 1:31 ತಿಳಿಸುವುದು: “ದೇವರು ತಾನು ಉಂಟು ಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.” ಆ ಪ್ರಥಮ ಮನುಷ್ಯರನ್ನು ಎಂತಹ ಒಂದು ಹರ್ಷಕರ ಪರಿಸರವು ಸುತ್ತುವರಿದಿತ್ತು! ಈ ಎಲ್ಲಾ ಸೃಷ್ಟಿಗಳಲ್ಲಿ ನಾವು ಒಬ್ಬ ಪ್ರೀತಿಪೂರ್ಣ ಸೃಷ್ಟಿಕರ್ತನ ವಿವೇಕ, ಮುಂದಾಲೋಚನೆ, ಮತ್ತು ಪರಾಮರಿಕೆಯನ್ನು ಗ್ರಹಿಸುವುದಿಲ್ಲವೊ?—ಯೆಶಾಯ 45:11, 12, 18.
11. ಸೊಲೊಮೋನನು ಯೆಹೋವನ ಸೃಷ್ಟಿಕಾರಕ ವಿವೇಕವನ್ನು ಹೇಗೆ ಘನಪಡಿಸಿದನು?
11 ನಿತ್ಯತೆಯ ಅರಸನ ವಿವೇಕದ ಕುರಿತಾಗಿ ಆಶ್ಚರ್ಯಪಟ್ಟ ಒಬ್ಬ ವ್ಯಕ್ತಿ ಸೊಲೊಮೋನನಾಗಿದ್ದನು. ಅವನು ಪದೇ ಪದೇ ಸೃಷ್ಟಿಕರ್ತನ ವಿವೇಕದ ಕಡೆಗೆ ಗಮನವನ್ನು ಸೆಳೆದನು. (ಜ್ಞಾನೋಕ್ತಿ 1:1, 2; 2:1, 6; 3:13-18) “ಭೂಮಿಯಾದರೋ ಶಾಶ್ವತವಾಗಿ ನಿಲ್ಲುವದು” ಎಂದು ಸೊಲೊಮೋನನು ನಮಗೆ ಆಶ್ವಾಸನೆ ನೀಡುತ್ತಾನೆ. ನಮ್ಮ ಭೂಮಿಯನ್ನು ಚೈತನ್ಯಗೊಳಿಸುವುದರಲ್ಲಿ ಮಳೆ ಮೋಡಗಳು ವಹಿಸುವ ಪಾತ್ರವನ್ನು ಸೇರಿಸಿ, ಸೃಷ್ಟಿಯ ಅನೇಕ ಅದ್ಭುತಗಳನ್ನು ಅವನು ಗಣ್ಯ ಮಾಡಿದನು. ಹೀಗೆ, ಅವನು ಬರೆದುದು: “ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುವವು; ಆದರೂ ಸಮುದ್ರವು ತುಂಬುವದಿಲ್ಲ; ಅವು ಎಲ್ಲಿಗೆ ಹರಿದು ಹೋಗುತ್ತವೋ ಅಲ್ಲಿಗೇ ತಿರಿಗಿ ಹೋಗುವವು.” (ಪ್ರಸಂಗಿ 1:4, 7) ಹೀಗೆ, ಮಳೆ ಮತ್ತು ನದಿಗಳು ಭೂಮಿಯನ್ನು ಚೈತನ್ಯಗೊಳಿಸಿದ ಬಳಿಕ, ಅವುಗಳ ನೀರುಗಳು ಪರಿವರ್ತನೆಗೊಂಡು ಸಾಗರಗಳಿಂದ ಪುನಃ ಮೋಡಗಳಿಗೆ ಹಿಂದಿರುಗುತ್ತವೆ. ನೀರಿನ ಈ ಶುದ್ಧೀಕರಿಸುವಿಕೆ ಮತ್ತು ಪರಿವರ್ತನಾ ಶ್ರೇಣಿಯಿಲ್ಲದೆ ಈ ಭೂಮಿಯು ಹೇಗಿರುತ್ತಿತ್ತು ಮತ್ತು ನಾವು ಎಲ್ಲಿ ಇರುತ್ತಿದ್ದೆವು?
12, 13. ದೇವರ ಸೃಷ್ಟಿಗಾಗಿ ನಾವು ಹೇಗೆ ಗಣ್ಯತೆಯನ್ನು ತೋರಿಸಬಹುದು?
12 ಪ್ರಸಂಗಿಯ ಸಮಾಪ್ತಿಯ ಮಾತುಗಳಲ್ಲಿ ರಾಜನಾದ ಸೊಲೊಮೋನನು ಅವಲೋಕಿಸಿದಂತೆ, ಸೃಷ್ಟಿಯಲ್ಲಿರುವ ಸಮತೂಕಕ್ಕಾಗಿರುವ ನಮ್ಮ ಗಣ್ಯತೆಯು ಕ್ರಿಯೆಗಳ ಮೂಲಕ ಬೆಂಬಲಿಸಲ್ಪಡಬೇಕು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ. ಒಳ್ಳೇದಾಗಲಿ ಕೆಟ್ಟದಾಗಲಿ ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸುವ ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು.” (ಪ್ರಸಂಗಿ 12:13, 14) ದೇವರನ್ನು ಅಪ್ರಸನ್ನಗೊಳಿಸುವಂತಹ ಯಾವದೇ ವಿಷಯವನ್ನು ಮಾಡಲು ನಾವು ಭಯಪಡಬೇಕು. ಇದರ ಬದಲು, ನಾವು ಆತನಿಗೆ ಪೂಜ್ಯಭಾವನೆಯ ಭಯಭಕ್ತಿಯೊಂದಿಗೆ ವಿಧೇಯರಾಗಲು ಪ್ರಯತ್ನಿಸಬೇಕು.
13 ನಿಶ್ಚಯವಾಗಿಯೂ, ನಾವು ನಿತ್ಯತೆಯ ಅರಸನನ್ನು ಆತನ ಮಹಿಮಾಭರಿತ ಸೃಷ್ಟಿಕಾರ್ಯಗಳಿಗಾಗಿ ಸ್ತುತಿಸಲು ಬಯಸತಕ್ಕದ್ದು! ಕೀರ್ತನೆ 104:24 ಘೋಷಿಸುವುದು: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.” ಹರ್ಷಭರಿತರಾಗಿ, ಸ್ವತಃ ನಮಗೂ ಇತರರಿಗೂ ಹೀಗೆ ಹೇಳುತ್ತಾ, ಈ ಕೀರ್ತನೆಯ (NW) ಕೊನೆಯ ವಚನವನ್ನು ನಾವು ಅನುಮೋದಿಸೋಣ: “ನನ್ನ ಪ್ರಾಣವೇ, ಯೆಹೋವನನ್ನು ಕೊಂಡಾಡು; ಜನರೇ, ಯಾಹುವನ್ನು ಸ್ತುತಿಸಿರಿ!”
ಅತ್ಯುತ್ಕೃಷ್ಟವಾದ ಭೂಸೃಷ್ಟಿ
14. ದೇವರ ಮಾನವ ಸೃಷ್ಟಿಯು ಯಾವ ವಿಧಗಳಲ್ಲಿ ಪ್ರಾಣಿಗಳಿಗಿಂತಲೂ ಶ್ರೇಷ್ಠವಾಗಿದೆ?
14 ಯೆಹೋವನ ಎಲ್ಲಾ ಸೃಷ್ಟಿಯು ನೈಪುಣ್ಯದ್ದಾಗಿದೆ. ಆದರೆ ಅತಿ ಗಮನಾರ್ಹವಾದ ಭೂಸೃಷ್ಟಿಯು, ನಾವು—ಮಾನವಕುಲವು—ಆಗಿದ್ದೇವೆ. ಆದಾಮ ಮತ್ತು ಅನಂತರ ಹವ್ವಳು ಯೆಹೋವನ ಆರನೆಯ ಸೃಷ್ಟಿ ದಿನದ ಪರಾಕಾಷ್ಠೆಯಾಗಿ ಉತ್ಪಾದಿಸಲ್ಪಟ್ಟರು—ಮೀನು, ಪಕ್ಷಿಗಳು, ಮತ್ತು ಪ್ರಾಣಿಗಳಿಗಿಂತ ಅತಿ ಶ್ರೇಷ್ಠವಾಗಿರುವ ಒಂದು ಸೃಷ್ಟಿ! ಇವುಗಳಲ್ಲಿ ಹೆಚ್ಚಿನವು ಹುಟ್ಟರಿವಿನಿಂದ ಬುದ್ಧಿಯುಳ್ಳವುಗಳಾಗಿರುವಾಗ, ಮಾನವಕುಲವು, ವಿವೇಚನಾಶಕ್ತಿ, ಸರಿ ಮತ್ತು ತಪ್ಪಿನ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಬಲ್ಲ ಒಂದು ಮನಸ್ಸಾಕ್ಷಿ, ಭವಿಷ್ಯತ್ತಿಗಾಗಿ ಯೋಜನೆಯನ್ನು ಮಾಡುವ ಸಾಮರ್ಥ್ಯ ಮತ್ತು ಆರಾಧಿಸಲಿಕ್ಕಾಗಿ ಒಂದು ಸಹಜವಾದ ಆಶೆಯೊಂದಿಗೆ ಸಂಪನ್ನಗೊಳಿಸಲ್ಪಟ್ಟಿದೆ. ಇದೆಲ್ಲವು ಹೇಗೆ ಬಂತು? ವಿವೇಚನಾರಹಿತ ಪ್ರಾಣಿಗಳಿಂದ ವಿಕಸಿಸುವ ಬದಲಿಗೆ, ಮನುಷ್ಯನು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟನು. ಇದಕ್ಕನುಸಾರವಾಗಿ, ಮನುಷ್ಯನೊಬ್ಬನೇ, “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು” ಎಂದು ತನ್ನನ್ನು ಗುರುತಿಸಿಕೊಂಡ ನಮ್ಮ ಸೃಷ್ಟಿಕರ್ತನ ಗುಣಗಳನ್ನು ಪ್ರತಿಬಿಂಬಿಸಸಾಧ್ಯವಿದೆ.—ವಿಮೋಚನಕಾಂಡ 34:6.
15. ನಾವು ಯೆಹೋವನನ್ನು ನಮ್ರರಾಗಿ ಕೊಂಡಾಡಬೇಕು ಏಕೆ?
15 ನಮ್ಮ ದೇಹಗಳ ಅಸಾಧಾರಣ ವಿನ್ಯಾಸಕ್ಕಾಗಿ ನಾವು ಯೆಹೋವನನ್ನು ಸ್ತುತಿಸಿ ಉಪಕಾರ ಹೇಳೋಣ. ಜೀವಕ್ಕೆ ಅತ್ಯಾವಶ್ಯಕವಾಗಿರುವ ನಮ್ಮ ರಕ್ತಪ್ರವಾಹವು, ಪ್ರತಿ 60 ಸೆಕೆಂಡುಗಳಿಗೆ ಒಮ್ಮೆ ದೇಹದಲ್ಲಿ ಆವರ್ತಿಸುತ್ತದೆ. ಧರ್ಮೋಪದೇಶಕಾಂಡ 12:23 (NW) ತಿಳಿಸುವಂತೆ, “ರಕ್ತವು ಪ್ರಾಣ”—ನಮ್ಮ ಜೀವ, ದೇವರ ದೃಷ್ಟಿಯಲ್ಲಿ ಅಮೂಲ್ಯ—ಆಗಿದೆ. ಗಟ್ಟಿಮುಟ್ಟಾದ ಎಲುಬುಗಳು, ಮಣಿಯುವ ಸ್ನಾಯುಗಳು, ಮತ್ತು ಪ್ರತಿಕ್ರಿಯಿಸುವ ಒಂದು ನರವ್ಯೂಹ ರಚನೆಯು, ಯಾವುದೇ ಪ್ರಾಣಿ ಮಿದುಳಿಗಿಂತಲೂ ಶ್ರೇಷ್ಠವಾಗಿರುವ ಮತ್ತು ಒಂದು ಗಗನಚುಂಬಿಯ ಗಾತ್ರದ ಕಂಪ್ಯೂಟರ್ನಲ್ಲಿ ಹಿಡಿಯಲು ಆರಂಭವಾಗದಷ್ಟೂ ಸಾಮರ್ಥ್ಯಗಳಿರುವ ಒಂದು ಮಿದುಳಿನಿಂದ ಪೂರ್ಣಗೊಳಿಸಲ್ಪಟ್ಟಿದೆ. ಇದು ನಿಮ್ಮನ್ನು ನಮ್ರರನ್ನಾಗಿಸುವುದಿಲ್ಲವೊ? ಆಗಿಸತಕ್ಕದ್ದು. (ಜ್ಞಾನೋಕ್ತಿ 22:4) ಮತ್ತು ಇದನ್ನೂ ಪರಿಗಣಿಸಿರಿ: ನಮ್ಮ ಶ್ವಾಸಕೋಶಗಳು, ಧ್ವನಿಪೆಟ್ಟಿಗೆ, ನಾಲಗೆ, ಹಲ್ಲುಗಳು ಮತ್ತು ಬಾಯಿ, ಸಾವಿರಾರು ಭಾಷೆಗಳಲ್ಲಿ ಯಾವುದಾದರೊಂದರಲ್ಲಿ ಮಾನವ ಭಾಷೆಯನ್ನು ಒದಗಿಸಲು ಪರಸ್ಪರ ಪ್ರತಿಕ್ರಿಯಿಸುತ್ತವೆ. ಹೀಗನ್ನುತ್ತಾ ದಾವೀದನು ಯೆಹೋವನಿಗೆ ಸೂಕ್ತವಾದ ರಾಗ ವಿನ್ಯಾಸವನ್ನು ಮಾಡಿದನು: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.” (ಕೀರ್ತನೆ 139:14) ನಮ್ಮ ಅದ್ಭುತಕರ ವಿನ್ಯಾಸಕನೂ ದೇವರೂ ಆದ ಯೆಹೋವನನ್ನು ಕೃತಜ್ಞತಾಸೂಚಕವಾಗಿ ಸ್ತುತಿಸುವುದರಲ್ಲಿ ನಾವು ದಾವೀದನೊಂದಿಗೆ ಜೊತೆಗೂಡೋಣ!
16. ಯೆಹೋವನಿಗೆ ಸ್ತುತಿಯಲ್ಲಿ ಒಬ್ಬ ಪ್ರಸಿದ್ಧ ಸಂಗೀತಗಾರನು ಯಾವ ರಾಗ ವಿನ್ಯಾಸವನ್ನು ರಚಿಸಿದನು, ಮತ್ತು ಯಾವ ನಿರ್ಬಂಧಪಡಿಸುವ ಆಮಂತ್ರಣಕ್ಕೆ ನಾವು ಪ್ರತಿಕ್ರಿಯಿಸಬಹುದು?
16 ಯೋಸೆಫ್ ಹೈಡನ್ರ 18ನೇ ಶತಮಾನದ ಒಂದು ನಾಟಕಪ್ರಾಯವಾದ ಸಂಗೀತ ಕೃತಿಯು, ಯೆಹೋವನ ಸ್ತುತಿಯಲ್ಲಿ ಹೇಳುವುದು: “ಕೃತಜ್ಞರಾಗಿ ಆತನಿಗೆ, ಆತನ ಸಕಲ ಅದ್ಭುತ ಕೃತಿಗಳೇ! ಹಾಡಿ ಆತನ ಕೀರ್ತಿ, ಆತನ ಮಹಿಮೆಯ ಹಾಡಿ, ಆತನ ನಾಮವ ಹರಸಿ ಘನಪಡಿಸಿ! ಬಾಳುತೆ ಎಂದೆಂದಿಗೂ ಯೆಹೋವನ ಸ್ತುತಿ, ಆಮೆನ್, ಆಮೆನ್!” 107ನೆಯ ಕೀರ್ತನೆಯಲ್ಲಿ ನಾಲ್ಕು ಬಾರಿ ನೀಡಲ್ಪಟ್ಟಿರುವ ಆಮಂತ್ರಣದಂತಹ, ಕೀರ್ತನೆಗಳಲ್ಲಿ ಅನೇಕ ಸಲ ಪುನರುಚ್ಚರಿಸಲ್ಪಟ್ಟಿರುವ ಪ್ರೇರಿತ ಅಭಿವ್ಯಕ್ತಿಗಳು ಇನ್ನೂ ಹೆಚ್ಚು ಮನೋಹರವಾಗಿವೆ: “ಅವರು ಯೆಹೋವನ ಕೃಪೆಗೋಸ್ಕರವೂ ಆತನು ಮಾನವರಿಗಾಗಿ ನಡಿಸಿದ ಅದ್ಭುತಗಳಿಗೋಸ್ಕರವೂ ಆತನನ್ನು ಕೊಂಡಾಡಲಿ.” ನೀವು ಆ ಸ್ತುತಿಯಲ್ಲಿ ಜೊತೆಗೂಡುತ್ತೀರೊ? ನೀವು ಜೊತೆಗೂಡತಕ್ಕದ್ದು, ಯಾಕಂದರೆ ನಿಜವಾಗಿಯೂ ಸೊಗಸಾಗಿರುವಂತಹದ್ದೆಲ್ಲದ್ದರ ಉಗಮನು, ನಿತ್ಯತೆಯ ಅರಸನಾದ ಯೆಹೋವನಾಗಿದ್ದಾನೆ.
ಇನ್ನೂ ಹೆಚ್ಚು ಬಲಿಷ್ಠವಾದ ಕೆಲಸಗಳು
17. ‘ಮೋಶೆಯ ಮತ್ತು ಕುರಿಮರಿಯ ಹಾಡು’ ಯೆಹೋವನನ್ನು ಹೇಗೆ ಶ್ಲಾಘಿಸುತ್ತದೆ?
17 ಗತಿಸಿರುವ ಆರು ಸಾವಿರ ವರ್ಷಗಳಲ್ಲಿ, ನಿತ್ಯತೆಯ ಅರಸನು ಇನ್ನೂ ಹೆಚ್ಚು ಬಲಿಷ್ಠವಾದ ಕೆಲಸಗಳನ್ನು ಆರಂಭಿಸಿದ್ದಾನೆ. ಬೈಬಲಿನ ಕೊನೆಯ ಪುಸ್ತಕವಾದ ಪ್ರಕಟನೆ 15:3, 4ರಲ್ಲಿ ದೆವ್ವಸಂಬಂಧಿತ ಶತ್ರುಗಳ ಮೇಲೆ ಜಯಗಳಿಸಿರುವ ಸ್ವರ್ಗದಲ್ಲಿರುವವರ ಕುರಿತಾಗಿ ನಾವು ಓದುವುದು: “ದೇವರ ದಾಸನಾದ ಮೋಶೆಯ ಹಾಡನ್ನೂ ಯಜ್ಞದಕುರಿಯಾದಾತನ [“ಕುರಿಮರಿಯ,” NW] ಹಾಡನ್ನೂ ಹಾಡುತ್ತಾ—ದೇವರಾದ ಕರ್ತನೇ, [“ಯೆಹೋವನೇ,” NW] ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಸರ್ವಜನಾಂಗಗಳ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ; ಕರ್ತನೇ, ನಿನ್ನ ನಾಮಕ್ಕೆ ಭಯಪಡದವರೂ ಅದನ್ನು ಘನವಾದದ್ದೆಂದು ಒಪ್ಪಿಕೊಳ್ಳದವರೂ ಯಾರಾದರೂ ಇದ್ದಾರೇ? ನೀನೊಬ್ಬನೇ ಪರಿಶುದ್ಧನು; ನಿನ್ನ ನೀತಿಯುಳ್ಳ ಕೃತ್ಯಗಳು ಪ್ರಕಾಶಕ್ಕೆ ಬಂದದರಿಂದ ಎಲ್ಲಾ ಜನಾಂಗಗಳು ಬಂದು ನಿನ್ನ ಸನ್ನಿಧಾನದಲ್ಲಿ ನಮಸ್ಕಾರ ಮಾಡುವರು ಎಂದು ಹೇಳಿದರು.” ಇದನ್ನು ‘ಮೋಶೆಯ ಮತ್ತು ಕುರಿಮರಿಯ ಹಾಡು’ ಎಂದು ಏಕೆ ಕರೆಯಲಾಗಿದೆ? ನಾವು ನೋಡೋಣ.
18. ವಿಮೋಚನಕಾಂಡ ಅಧ್ಯಾಯ 15ರಲ್ಲಿರುವ ಹಾಡಿನಲ್ಲಿ ಯಾವ ಬಲಿಷ್ಠ ಕೆಲಸವು ಸ್ಮರಿಸಲ್ಪಟ್ಟಿದೆ?
18 ಸುಮಾರು 3,500 ವರ್ಷಗಳ ಹಿಂದೆ, ಫರೋಹನ ಬಲಿಷ್ಠ ಸೈನ್ಯವು ಕೆಂಪು ಸಮುದ್ರದಲ್ಲಿ ನಾಶವಾದಾಗ, ಇಸ್ರಾಯೇಲ್ಯರು ಕೃತಜ್ಞತಾಸೂಚಕವಾಗಿ ಯೆಹೋವನನ್ನು ಹಾಡಿನಲ್ಲಿ ಸ್ತುತಿಸಿದರು. ನಾವು ವಿಮೋಚನಕಾಂಡ 15:1, 18ರಲ್ಲಿ ಓದುವುದು: “ಆಗ ಮೋಶೆಯೂ ಇಸ್ರಾಯೇಲ್ಯರೂ ಯೆಹೋವನ ಸ್ತೋತ್ರಕ್ಕಾಗಿ ಈ ಕೀರ್ತನೆಯನ್ನು ಹಾಡಿದರು—ಯೆಹೋವನ ಸ್ತೋತ್ರವನ್ನು ಗಾನಮಾಡೋಣ; ಆತನು ಮಹಾಜಯಶಾಲಿಯಾದನು; ಕುದುರೆಗಳನ್ನೂ ರಾಹುತರನ್ನೂ ಸಮುದ್ರದಲ್ಲಿ ಕೆಡವಿ ನಾಶಮಾಡಿದ್ದಾನೆ. ಯೆಹೋವನೇ ಯುಗಯುಗಾಂತರಗಳಲ್ಲಿಯೂ ಆಳುವನು.” ಆತನ ಪರಮಾಧಿಕಾರವನ್ನು ಧಿಕ್ಕರಿಸಿದ ಶತ್ರುಗಳ ನ್ಯಾಯತೀರ್ಪು ಮತ್ತು ಹತಿಸುವಿಕೆಯಲ್ಲಿ ಈ ನಿತ್ಯತೆಯ ಅರಸನ ನೀತಿಯುಕ್ತ ವಿಧಿಗಳು ವ್ಯಕ್ತವಾಗಿದ್ದವು.
19, 20. (ಎ) ಯೆಹೋವನು ಇಸ್ರಾಯೇಲ್ ರಾಷ್ಟ್ರವನ್ನು ರಚಿಸಿದ್ದೇಕೆ? (ಬಿ) ಕುರಿಮರಿಯು ಮತ್ತು ಇತರರು ಸೈತಾನನ ಪಂಥಾಹ್ವಾನವನ್ನು ಹೇಗೆ ಉತ್ತರಿಸಿದ್ದಾರೆ?
19 ಇದು ಯಾಕೆ ಆವಶ್ಯಕವಾಗಿತ್ತು? ಕುಯುಕ್ತಿಯ ಸರ್ಪವು ನಮ್ಮ ಪ್ರಥಮ ಹೆತ್ತವರನ್ನು ಪಾಪದೊಳಗೆ ನಡಿಸಿದ್ದು ಏದೆನ್ ತೋಟದಲ್ಲಿಯೇ. ಇದು ಎಲ್ಲಾ ಮಾನವಕುಲಕ್ಕೆ ಪಾಪಪೂರ್ಣ ಅಪರಿಪೂರ್ಣತೆಯು ದಾಟಿಸಲ್ಪಡುವುದರಲ್ಲಿ ಪರಿಣಮಿಸಿತು. ಆದಾಗಲೂ, ನಿತ್ಯತೆಯ ಅರಸನು ತನ್ನ ಮೂಲ ಉದ್ದೇಶಕ್ಕೆ ಹೊಂದಿಕೆಯಲ್ಲಿ ತತ್ಕ್ಷಣ ಸೂಕ್ತ ಹೆಜ್ಜೆಗಳನ್ನು ತೆಗೆದುಕೊಂಡನು. ಇದು ಭೂಮಿಯ ಕ್ಷೇತ್ರದಿಂದ ಆತನ ಎಲ್ಲಾ ಶತ್ರುಗಳ ಉಚ್ಚಾಟನೆಗೆ ನಡಿಸಿ, ಪ್ರಮೋದವನೀಯ ಪರಿಸ್ಥಿತಿಗಳ ಪುನಃಸ್ಥಾಪನೆಗೆ ನಡಿಸಲಿತ್ತು. ನಿತ್ಯತೆಯ ಅರಸನು ಇಸ್ರಾಯೇಲ್ ರಾಷ್ಟ್ರವನ್ನು ರಚಿಸಿ, ಆತನು ಇದನ್ನು ಹೇಗೆ ಪೂರೈಸುವನೆಂದು ಮುಂಚಿತ್ರಿಸಲು ತನ್ನ ಧರ್ಮಶಾಸ್ತ್ರವನ್ನು ಒದಗಿಸಿದನು.—ಗಲಾತ್ಯ 3:24.
20 ಆದರೂ ಕಟ್ಟಕಡೆಗೆ, ಇಸ್ರಾಯೇಲ್ ತಾನೇ ಅಪನಂಬಿಗಸ್ತಿಕೆಯೊಳಗೆ ಮುಳುಗಿತು, ಮತ್ತು ಅದರ ಮುಖಂಡರು ದೇವರ ಏಕಜಾತ ಪುತ್ರನನ್ನು, ಭೀಕರವಾಗಿ ಹಿಂಸಿಸಲಿಕ್ಕಾಗಿ ಮತ್ತು ಕೊಲ್ಲಲಿಕ್ಕಾಗಿ ರೋಮನರ ವಶಕ್ಕೆ ಕೊಟ್ಟಾಗ ಈ ದುಃಖಕರ ಸ್ಥಿತಿಯು ತುತ್ತತುದಿಗೇರಿತು. (ಅ. ಕೃತ್ಯಗಳು 10:39; ಫಿಲಿಪ್ಪಿ 2:8) ಆದಾಗಲೂ, ಯಜ್ಞಾರ್ಪಿತ “ದೇವರು ನೇಮಿಸಿದ ಕುರಿ”ಯಾಗಿ ಯೇಸುವಿನ ಮರಣದ ತನಕದ ಸಮಗ್ರತೆಯು, ತೀವ್ರವಾದ ಪರೀಕ್ಷೆಯ ಕೆಳಗೆ ಯಾವ ಮನುಷ್ಯನೂ ದೇವರಿಗೆ ನಂಬಿಗಸ್ತನಾಗಿರಲಾರನು ಎಂಬ, ದೇವರ ಪುರಾತನ ಶತ್ರುವಾದ ಸೈತಾನನಿಂದ ಮಾಡಲ್ಪಟ್ಟ ಪಂಥಾಹ್ವಾನವನ್ನು ಗಮನಾರ್ಹವಾದ ರೀತಿಯಲ್ಲಿ ತಪ್ಪೆಂದು ಸಿದ್ಧಪಡಿಸಿದನು. (ಯೋಹಾನ 1:29, 36; ಯೋಬ 1:9-12; 27:5) ಆದಾಮನಿಂದ ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದರೂ, ದೇವ-ಭಯವುಳ್ಳ ಇತರ ಲಕ್ಷಾಂತರ ಮಾನವರು, ಸೈತಾನ ಸಂಬಂಧಿತ ಆಕ್ರಮಣಗಳ ಎದುರಿನಲ್ಲಿ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ ಯೇಸುವಿನ ಹೆಜ್ಜೆಜಾಡುಗಳನ್ನು ಅನುಸರಿಸಿದ್ದಾರೆ.—1 ಪೇತ್ರ 1:18, 19; 2:19, 21.
21. ಅ. ಕೃತ್ಯಗಳು 17:29-31ಕ್ಕೆ ಹೊಂದಿಕೆಯಲ್ಲಿ, ಮುಂದೆ ಏನು ಚರ್ಚಿಸಲ್ಪಡುವುದು?
21 ಆ ನಂಬಿಗಸ್ತರನ್ನು ಬಹುಮಾನಿಸುವ ಮತ್ತು ಸತ್ಯ ಹಾಗೂ ನೀತಿಯ ಎಲ್ಲಾ ಶತ್ರುಗಳಿಗೆ ನ್ಯಾಯತೀರ್ಪು ನೀಡುವ ದಿನವು ಈಗ ಆಗಮಿಸಿದೆ. (ಅ. ಕೃತ್ಯಗಳು 17:29-31) ಇದು ಹೇಗೆ ಸಂಭವಿಸುವುದು? ನಮ್ಮ ಮುಂದಿನ ಲೇಖನವು ಹೇಳುವುದು.
ಪುನರ್ವಿಮರ್ಶಾ ರೇಖಾಚೌಕ
◻ ಯೆಹೋವನು ಯುಕ್ತವಾಗಿಯೇ “ನಿತ್ಯತೆಯ ಅರಸನು” ಎಂದು ಏಕೆ ಕರೆಯಲ್ಪಟ್ಟಿದ್ದಾನೆ?
◻ ಯೆಹೋವನ ವಿವೇಕವು ಆತನ ಸೃಷ್ಟಿಗಳಲ್ಲಿ ಹೇಗೆ ಪ್ರದರ್ಶಿಸಲ್ಪಟ್ಟಿದೆ?
◻ ಮಾನವಕುಲವು ಯಾವ ವಿಧಗಳಲ್ಲಿ ಸೃಷ್ಟಿಯ ಒಂದು ಅನುಪಮ ಕೃತಿಯಾಗಿದೆ?
◻ ಯಾವ ಕೆಲಸಗಳು ‘ಮೋಶೆ ಮತ್ತು ಕುರಿಮರಿಯ ಹಾಡಿಗೆ’ ಕರೆಕೊಡುತ್ತವೆ?
[ಪುಟ 12 ರಲ್ಲಿರುವ ಚೌಕ]
ಯೆಹೋವನ ಅತಿಶಯವಾದ ವಿವೇಕ
ನಿತ್ಯತೆಯ ಅರಸನ ವಿವೇಕವು ಭೂಮಿಯ ಮೇಲಿನ ಆತನ ಉತ್ಪನ್ನಗಳಲ್ಲಿ ಹಲವಾರು ವಿಧಗಳಲ್ಲಿ ಪ್ರತಿಬಿಂಬಿಸಲ್ಪಟ್ಟಿದೆ. ಆಗೂರನ ಮಾತುಗಳನ್ನು ಗಮನಿಸಿರಿ: “ದೇವರ ಪ್ರತಿಯೊಂದು ಮಾತು ಶುದ್ಧವಾದದ್ದು; ಆತನು ಶರಣಾಗತರಿಗೆ ಗುರಾಣಿಯಾಗಿದ್ದಾನೆ.” (ಜ್ಞಾನೋಕ್ತಿ 30:5) ಅನಂತರ ಆಗೂರನು, ದೇವರ—ದೊಡ್ಡ ಹಾಗೂ ಚಿಕ್ಕ—ಸಜೀವ ಸೃಷ್ಟಿಗಳಿಗೆ ಸೂಚಿಸುತ್ತಾನೆ. ಉದಾಹರಣೆಗೆ 24ರಿಂದ 28ನೆಯ ವಚನಗಳಲ್ಲಿ, ಅವನು “ಭೂಮಿಯ ಮೇಲೆ ಅಧಿಕ ಜ್ಞಾನವುಳ್ಳ [“ಹುಟ್ಟರಿವಿನಿಂದ ಬುದ್ಧಿಯುಳ್ಳವುಗಳಾಗಿರುವ,” NW] ನಾಲ್ಕು ಸಣ್ಣ ಜಂತು”ಗಳನ್ನು ವರ್ಣಿಸುತ್ತಾನೆ. ಇವು ಇರುವೆ, ಬೆಟ್ಟದ ಮೊಲ, ಮಿಡತೆ ಮತ್ತು ಹಲ್ಲಿ ಆಗಿವೆ.
“ಹುಟ್ಟರಿವಿನಿಂದ ಬುದ್ಧಿಯುಳ್ಳವುಗ”ಳು—ಹೌದು, ಪ್ರಾಣಿಗಳು ಆ ರೀತಿಯಾಗಿ ಮಾಡಲ್ಪಟ್ಟಿವೆ. ಅವು ಮನುಷ್ಯರಂತೆ ವಿಷಯಗಳ ಕುರಿತಾಗಿ ವಿವೇಚಿಸುವುದಿಲ್ಲ, ಬದಲಾಗಿ ಹುಟ್ಟಿನಿಂದ ಬಂದ ವಿವೇಕದ ಮೇಲೆ ಆತುಕೊಳ್ಳುತ್ತವೆ. ನೀವು ಎಂದಾದರೂ ಇದರ ಕುರಿತಾಗಿ ಆಶ್ಚರ್ಯಪಟ್ಟಿದ್ದೀರೊ? ಅವು ಎಷ್ಟು ಸುವ್ಯವಸ್ಥಿತವಾದ ಒಂದು ಸೃಷ್ಟಿಯಾಗಿವೆ! ಉದಾಹರಣೆಗಾಗಿ ಇರುವೆಗಳು, ರಾಣಿ, ಕಾರ್ಮಿಕರು ಮತ್ತು ಗಂಡುಗಳನ್ನು ಒಳಗೊಂಡಿರುವ ಹಿಂಡುಗಳಾಗಿ ವ್ಯವಸ್ಥಾಪಿಸಲ್ಪಟ್ಟಿವೆ. ಕೆಲವು ಜಾತಿಗಳಲ್ಲಿ, ಕಾರ್ಮಿಕ ಇರುವೆಗಳು, ತಾವು ಕಟ್ಟಿರುವ ಹೊಲಾವರಣಗಳೊಳಗೆ ಗಿಡಹೇನುಗಳನ್ನು ಸಹ ಹಿಂಡುಗಟ್ಟಿಸುತ್ತವೆ. ದಾಳಿಮಾಡುವ ಯಾವುದೇ ಶತ್ರುಗಳನ್ನು ಸೈನಿಕ ಇರುವೆಗಳು ಓಡಿಸುತ್ತಿರುವಾಗ, ಅಲ್ಲಿ ಅವು ಆ ಗಿಡಹೇನುಗಳಿಂದ ಹಾಲನ್ನು ಹಿಂಡುತ್ತವೆ. ಜ್ಞಾನೋಕ್ತಿ 6:6ರಲ್ಲಿ ಈ ಬುದ್ಧಿವಾದವು ಕೊಡಲ್ಪಟ್ಟಿದೆ: “ಸೋಮಾರಿಯೇ, ಇರುವೆಯ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ತಂದುಕೋ.” ಅಂತಹ ಉದಾಹರಣೆಗಳು ಮನುಷ್ಯರಾದ ನಮ್ಮನ್ನು “ಕರ್ತನ ಕೆಲಸವನ್ನು . . . ಅತ್ಯಾಸಕ್ತಿಯಿಂದ ಮಾಡ”ಲು ಪ್ರಚೋದಿಸಬಾರದೊ?—1 ಕೊರಿಂಥ 15:58.
ಮನುಷ್ಯನು ಬೃಹತ್ತಾದ ವಿಮಾನಗಳನ್ನು ನಿರ್ಮಿಸಿದ್ದಾನೆ. ಆದರೆ 30 ಗ್ರ್ಯಾಮ್ಗಳಿಗಿಂತಲೂ ಕಡಿಮೆ ತೂಕವಿರುವ ಹಮಿಂಗ್ಬರ್ಡನ್ನು ಸೇರಿಸಿ, ಪಕ್ಷಿಗಳು ಎಷ್ಟು ಹೆಚ್ಚು ಬಹುಮುಖ ಸಾಮರ್ಥ್ಯವುಳ್ಳವುಗಳಾಗಿವೆ! ಒಂದು ಬೋಯಿಂಗ್ 747 ವಿಮಾನವು 1,80,000 ಲೀಟರ್ಗಳಷ್ಟು ಇಂಧನವನ್ನು ಒಯ್ಯಬೇಕು, ತರಬೇತಿಗೊಳಿಸಲ್ಪಟ್ಟಿರುವ ಸಿಬ್ಬಂದಿ ವರ್ಗದಿಂದ ನಡಿಸಲ್ಪಡಬೇಕು ಮತ್ತು ಒಂದು ಸಾಗರದಾಚೆಯ ದಾಟುವಿಕೆಯನ್ನು ಮಾಡಲು ಸಂಕ್ಲಿಷ್ಟಕರ ವಾಯುಯಾನ ಪ್ರಕ್ರಮಗಳನ್ನು ಬಳಸಬೇಕು. ಆದರೂ, ಒಂದು ಪುಟ್ಟ ಹಮಿಂಗ್ಬರ್ಡ್ ಉತ್ತರ ಅಮೆರಿಕದಿಂದ, ಮೆಕ್ಸಿಕೊ ಕೊಲ್ಲಿಯಾಚೆ, ಮತ್ತು ದಕ್ಷಿಣ ಅಮೆರಿಕದೊಳಗೆ ತನ್ನನ್ನು ಕೊಂಡೊಯ್ಯಲು ಕೇವಲ ಒಂದು ಗ್ರ್ಯಾಮ್ ಕೊಬ್ಬು ಇಂಧನದ ಮೇಲೆ ಆತುಕೊಳ್ಳುತ್ತದೆ. ಇಂಧನದ ಭಾರಿಯಾದ ಹೊರೆಯಿಲ್ಲ, ವಾಯುಯಾನದಲ್ಲಿ ಯಾವುದೇ ತರಬೇತಿಯಿಲ್ಲ, ಯಾವುದೇ ಸಂಕ್ಲಿಷ್ಟಕರ ನಕ್ಷೆಗಳು ಅಥವಾ ಕಂಪ್ಯೂಟರ್ಗಳಿಲ್ಲ! ವಿಕಾಸದ ಒಂದು ಆಕಸ್ಮಿಕ ಕಾರ್ಯಗತಿಯಿಂದ ಈ ಸಾಮರ್ಥ್ಯವು ಫಲಿಸಿತೊ? ನಿಶ್ಚಯವಾಗಿಯೂ ಇಲ್ಲ! ಈ ಪುಟ್ಟ ಪಕ್ಷಿಯು, ತನ್ನ ಸೃಷ್ಟಿಕರ್ತನಾದ ಯೆಹೋವ ದೇವರಿಂದ ಈ ರೀತಿ ಯೋಜಿಸಲ್ಪಟ್ಟಿದ್ದು, ಹುಟ್ಟರಿವಿನಿಂದ ಬುದ್ಧಿಯುಳ್ಳದ್ದಾಗಿದೆ.
[ಪುಟ 10 ರಲ್ಲಿರುವ ಚಿತ್ರ]
“ನಿತ್ಯತೆಯ ಅರಸನ” ವೈವಿಧ್ಯಮಯ ಸೃಷ್ಟಿಗಳು ಆತನ ಮಹಿಮೆಯನ್ನು ಶ್ಲಾಘಿಸುತ್ತವೆ
[ಪುಟ 15 ರಲ್ಲಿರುವ ಚಿತ್ರ]
ಕೆಂಪು ಸಮುದ್ರದಲ್ಲಿ ಮೋಶೆ ಮತ್ತು ಇಡೀ ಇಸ್ರಾಯೇಲ್ ಯೆಹೋವನ ವಿಜಯವನ್ನು ಆಚರಿಸಿದಂತೆ, ಅರ್ಮಗೆದೋನಿನ ನಂತರ ಮಹಾ ಹರ್ಷಿಸುವಿಕೆಯು ಇರುವುದು