ನಿಮ್ಮ ಭರವಸೆಯನ್ನು ಅಂತ್ಯದ ವರೆಗೆ ದೃಢವಾಗಿ ಕಾಪಾಡಿಕೊಳ್ಳಿರಿ
ಒಂದು ಚಿಕ್ಕ ವಿಮಾನವು ಕಷ್ಟಕರ ಹವಾಮಾನ ಪರಿಸ್ಥಿತಿಗಳೊಳಗೆ ಹಾರಾಡುವುದನ್ನು ಕಲ್ಪಿಸಿಕೊಳ್ಳಿ. ವಿಮಾನ ಚಾಲಕನು ಇನ್ನು ಮುಂದೆ ಹೆಗ್ಗುರುತುಗಳನ್ನು ಗ್ರಹಿಸಲಾರನು. ದಟ್ಟವಾದ ಮೋಡಗಳು ಅವನನ್ನು ಆವರಿಸುತ್ತವೆ. ತನ್ನ ಗಾಳಿ ತಡೆಯ ಆಚೆ ಅವನಿಗೆ ನೋಡಸಾಧ್ಯವಿಲ್ಲವಾದರೂ, ತನ್ನ ಪಯಣವನ್ನು ತಾನು ಸುರಕ್ಷಿತವಾಗಿ ಮುಗಿಸಸಾಧ್ಯವೆಂದು ಅವನಿಗೆ ಖಚಿತವಾಗಿ ಅನಿಸುತ್ತದೆ. ಅವನ ಭರವಸೆಗೆ ಏನು ಕಾರಣ?
ಮೋಡಗಳ ನಡುವೆ ಹಾರಿ, ಅಂಧಕಾರದಲ್ಲಿ ನೆಲ ಮುಟ್ಟುವಂತೆ ಶಕ್ತಗೊಳಿಸುವ ನಿಷ್ಕೃಷ್ಟವಾದ ಉಪಕರಣಗಳು ಅವನಲ್ಲಿವೆ. ಅವನ ಪಥದ ಉದ್ದಕ್ಕೂ, ವಿಶೇಷವಾಗಿ ವಿಮಾನ ನಿಲ್ದಾಣದ ಹತ್ತಿರ, ಸಂಜ್ಞಾಜ್ಯೋತಿಗಳು ವಿದ್ಯುನ್ಮಾನವಾಗಿ ಅವನನ್ನು ಮಾರ್ಗದರ್ಶಿಸುತ್ತವೆ, ಮತ್ತು ಅವನಿಗೆ ಭೂಮಿಯ ಮೇಲಿರುವ ವಿಮಾನ ನಿಯಂತ್ರಕರೊಂದಿಗೆ ರೇಡಿಯೊ ಸಂಪರ್ಕವಿರುತ್ತದೆ.
ತುಲನಾತ್ಮಕವಾದ ಒಂದು ವಿಧದಲ್ಲಿ, ಲೋಕ ಪರಿಸ್ಥಿತಿಗಳು ದಿನದಿನವೂ ಹೆಚ್ಚು ವಿಷಣ್ಣವಾಗುವುದಾದರೂ, ನಾವು ಭವಿಷ್ಯವನ್ನು ಭರವಸೆಯಿಂದ ಎದುರಿಸಬಲ್ಲೆವು. ಈ ದುಷ್ಟ ವ್ಯವಸ್ಥೆಯ ನಡುವೆ ಹಾದುಹೋಗುವ ನಮ್ಮ ಪಯಣವು, ಕೆಲವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿರಬಹುದು, ಆದರೆ ನಾವು ಸರಿಯಾದ ಹಾದಿಯ ಮೇಲೆ ಮತ್ತು ವೇಳಾಪಟ್ಟಿಯ ಕಾಲಕ್ಕೆ ಸರಿಯಾಗಿದ್ದೇವೆಂಬ ಭರವಸೆ ನಮಗಿರಸಾಧ್ಯವಿದೆ. ನಾವು ಏಕೆ ಅಷ್ಟು ಖಚಿತರಾಗಿರಬಲ್ಲೆವು? ಏಕೆಂದರೆ, ಮಾನವ ದೃಷ್ಟಿಗೆ ಪತ್ತೆಮಾಡಲು ಸಾಧ್ಯವಾಗದೆಯಿರುವುದನ್ನು ಪತ್ತೆಮಾಡುವಂತೆ ನಮ್ಮನ್ನು ಶಕ್ತರನ್ನಾಗಿಸುವ ಮಾರ್ಗದರ್ಶನವು ನಮಗಿದೆ.
ದೇವರ ವಾಕ್ಯವು ‘ನಮ್ಮ ದಾರಿಗೆ ಬೆಳಕು,’ ಆಗಿದೆ ಮತ್ತು ಅದು “ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ.” (ಕೀರ್ತನೆ 19:7; 119:105) ವಿಮಾನ ಚಾಲಕನ ಹಾರಾಟದ ದಾರಿಯನ್ನು ಸೂಚಿಸುವ ಸಂಜ್ಞಾಜ್ಯೋತಿಗಳಂತೆ, ಬೈಬಲ್ ನಿಷ್ಕೃಷ್ಟವಾಗಿ ಭವಿಷ್ಯತ್ತಿನ ಘಟನೆಗಳನ್ನು ರೇಖಿಸುತ್ತದೆ ಮತ್ತು ನಾವು ನಮ್ಮ ಗಮ್ಯಸ್ಥಾನವನ್ನು ಸುರಕ್ಷಿತವಾಗಿ ತಲಪುತ್ತೇವೆಂಬುದನ್ನು ನಿಶ್ಚಿತ ಮಾಡಿಕೊಳ್ಳುವ ಸಲುವಾಗಿ ನಮಗೆ ಸ್ಪಷ್ಟವಾದ ಉಪದೇಶಗಳನ್ನು ನೀಡುತ್ತದೆ. ಆದರೆ, ದೈವಿಕ ಮಾರ್ಗದರ್ಶನದಿಂದ ಪ್ರಯೋಜನ ಪಡೆಯಲು, ನಾವು ಅದರ ಮೇಲೆ ಭರವಸೆಯಿಡಬೇಕು.
ಇಬ್ರಿಯರಿಗೆ ಬರೆದ ತನ್ನ ಪತ್ರದಲ್ಲಿ, ಪೌಲನು ಯೆಹೂದಿ ಕ್ರೈಸ್ತರನ್ನು, ‘ಅವರಿಗೆ ಮೊದಲಿದ್ದ ಭರವಸೆಯ ಮೇಲಿನ ಹಿಡಿತವನ್ನು ದೃಢವಾಗಿ ಅಂತ್ಯದ ವರೆಗೆ ಬಿಗಿಮಾಡುವಂತೆ’ ಪ್ರೇರಿಸಿದನು. (ಇಬ್ರಿಯ 3:14, NW) ಅದರ ಮೇಲಿನ ನಮ್ಮ ಹಿಡಿತವನ್ನು ‘ಬಿಗಿಮಾಡ’ದಿದ್ದಲ್ಲಿ, ಭರವಸೆಯು ಅಲುಗಾಡಬಹುದು. ಆದುದರಿಂದ, ಯೆಹೋವನಲ್ಲಿ ನಮ್ಮ ಭರವಸೆಯನ್ನು ನಾವು ಅಂತ್ಯದ ವರೆಗೂ ದೃಢವಾಗಿ ಹೇಗೆ ಪೋಷಿಸಬಲ್ಲೆವು? ಎಂಬ ಪ್ರಶ್ನೆಯು ಏಳುತ್ತದೆ.
ನಿಮ್ಮ ನಂಬಿಕೆಯನ್ನು ನಿರ್ವಹಿಸಿರಿ
ಒಬ್ಬ ವಿಮಾನ ಚಾಲಕನು, ತನ್ನ ಉಪಕರಣಗಳು ಮತ್ತು ವಿಮಾನ ನಿಯಂತ್ರಕರ ಮೇಲೆ ಸಂಪೂರ್ಣವಾಗಿ ಅವಲಂಬಿಸುತ್ತಾ, ಕೇವಲ ಯಂತ್ರೋಪಕರಣಗಳನ್ನು ನೋಡಿಕೊಂಡು ವಿಮಾನ ಹಾರಾಟವನ್ನು ಮಾಡುವ ಮೊದಲು, ಅವನಿಗೆ ಸಾಕಷ್ಟು ತರಬೇತಿ ಮತ್ತು ಅನೇಕ ತಾಸುಗಳ ಹಾರಾಟಾವಧಿಯ ಅಗತ್ಯವಿರುತ್ತದೆ. ತದ್ರೀತಿಯಲ್ಲಿ, ಒಬ್ಬ ಕ್ರೈಸ್ತನಿಗೆ, ವಿಶೇಷವಾಗಿ ಕಷ್ಟಕರ ಪರಿಸ್ಥಿತಿಗಳು ಏಳುವಾಗ, ಯೆಹೋವನ ಮಾರ್ಗದರ್ಶನದಲ್ಲಿ ತನ್ನ ಭರವಸೆಯನ್ನು ಕಾಪಾಡಿಕೊಳ್ಳುವಂತೆ, ತನ್ನ ನಂಬಿಕೆಯನ್ನು ನಿರಂತರವಾಗಿ ನಿರ್ವಹಿಸುವ ಅಗತ್ಯವಿದೆ. ಅಪೊಸ್ತಲ ಪೌಲನು ಬರೆದುದು: “ಹೀಗಿದ್ದರೂ—ನಂಬಿದೆನು, ಆದದರಿಂದ ಮಾತಾಡಿದೆನು ಎಂಬ ಶಾಸ್ತ್ರೋಕ್ತಿಯಲ್ಲಿ ಕಾಣುವ ನಂಬಿಕೆಯ ಭಾವವನ್ನೇ ಹೊಂದಿ ನಾವೂ ನಂಬಿದವರು, ಆದದರಿಂದ ಮಾತಾಡುತ್ತೇವೆ.” (2 ಕೊರಿಂಥ 4:13) ಹೀಗೆ, ನಾವು ದೇವರ ಸುವಾರ್ತೆಯ ಕುರಿತು ಮಾತಾಡುವಾಗ, ನಾವು ನಮ್ಮ ನಂಬಿಕೆಯನ್ನು ನಿರ್ವಹಿಸುತ್ತಾ, ಭದ್ರಪಡಿಸುತ್ತಾ ಇದ್ದೇವೆ.
ಎರಡನೆಯ ಜಾಗತಿಕ ಯುದ್ಧದ ಸಮಯದಲ್ಲಿ, ಒಂದು ಕೂಟ ಶಿಬಿರದಲ್ಲಿ ನಾಲ್ಕು ವರ್ಷಗಳನ್ನು ಕಳೆದ ಮಾಗ್ಡಾಲೆನಾ, ಸಾರುವ ಚಟುವಟಿಕೆಯ ಮಹತ್ವವನ್ನು ವಿವರಿಸುವುದು: “ಬಲವಾದ ನಂಬಿಕೆಯನ್ನು ಕಾಪಾಡಿಕೊಳ್ಳಲು, ಇತರರ ಆತ್ಮಿಕ ಕ್ಷೇಮದ ಕುರಿತು ಚಿಂತಿತರಾಗಿರುವುದು ಅತ್ಯವಶ್ಯಕವೆಂದು ನನ್ನ ತಾಯಿ ನನಗೆ ಕಲಿಸಿದರು. ನಮಗಾದ ಅನಿಸಿಕೆಯನ್ನು ದೃಷ್ಟಾಂತಿಸುವ ಒಂದು ಘಟನೆಯನ್ನು ನಾನು ಸ್ಮರಿಸಿಕೊಳ್ಳುತ್ತೇನೆ. ರಾವೆನ್ಸ್ಬ್ರುಕ್ ಕೂಟ ಶಿಬಿರದಿಂದ ನಮ್ಮ ಬಿಡುಗಡೆಯ ತರುವಾಯ, ನನ್ನ ತಾಯಿ ಮತ್ತು ನಾನು ಒಂದು ಶುಕ್ರವಾರದಂದು ಮನೆಯನ್ನು ತಲಪಿದೆವು. ಎರಡು ದಿನಗಳ ನಂತರ, ಆದಿತ್ಯವಾರದಂದು, ಮನೆಯಿಂದ ಮನೆಗೆ ಸಾರುವ ಕೆಲಸದಲ್ಲಿ ನಾವು ಸಹೋದರರನ್ನು ಜೊತೆಗೂಡಿದೆವು. ದೇವರ ವಾಗ್ದಾನಗಳಲ್ಲಿ ಭರವಸೆಯನ್ನಿಡುವಂತೆ ನಾವು ಇತರರಿಗೆ ಸಹಾಯಮಾಡುವ ವಿಷಯದಲ್ಲಿ ಗಮನವಿಡುವುದಾದರೆ, ಅದೇ ವಾಗ್ದಾನಗಳು ನಮಗೆ ಹೆಚ್ಚು ನೈಜವಾಗುವವೆಂದು ನಾನು ದೃಢವಾಗಿ ನಂಬುತ್ತೇನೆ.”—ಹೋಲಿಸಿ ಅ. ಕೃತ್ಯಗಳು 5:42.
ನಮ್ಮ ಭರವಸೆಯನ್ನು ಅಂತ್ಯದ ವರೆಗೆ ದೃಢವಾಗಿ ಕಾಪಾಡಿಕೊಳ್ಳುವ ವಿಷಯವು, ಇತರ ಕ್ಷೇತ್ರಗಳಲ್ಲಿ ಆತ್ಮಿಕ ಚಟುವಟಿಕೆಯನ್ನು ಕೇಳಿಕೊಳ್ಳುತ್ತದೆ. ವೈಯಕ್ತಿಕ ಅಧ್ಯಯನವು, ನಂಬಿಕೆಯನ್ನು ಬಲಪಡಿಸುವ ಮತ್ತೊಂದು ಅತ್ಯುತ್ಕೃಷ್ಟ ಸಾಧನೆಯಾಗಿದೆ. ನಾವು ಬೆರೋಯದವರನ್ನು ಅನುಕರಿಸಿ, ಶಾಸ್ತ್ರಗಳನ್ನು ಪ್ರತಿದಿನ ಉದ್ಯೋಗಶೀಲರಾಗಿ ಪರೀಕ್ಷಿಸುವುದಾದರೆ, ಅದು “ನಿರೀಕ್ಷೆ ದೃಢಮಾಡಿಕೊಂಡು ಕಡೇ ತನಕ ಹಿಡಿಯುವದರಲ್ಲಿ” ನಮಗೆ ಸಹಾಯ ಮಾಡುವುದು. (ಇಬ್ರಿಯ 6:11; ಅ. ಕೃತ್ಯಗಳು 17:11) ನಿಜ, ವೈಯಕ್ತಿಕ ಅಧ್ಯಯನವು ಸಮಯ ಮತ್ತು ದೃಢ ನಿಶ್ಚಯವನ್ನು ಕೇಳಿಕೊಳ್ಳುತ್ತದೆ. ಆದುದರಿಂದಲೇ, ಇಂತಹ ವಿಷಯಗಳಲ್ಲಿ “ಮಂದಮತಿ”ಗಳು ಅಥವಾ ಮೈಗಳ್ಳರಾಗಿರುವುದರ ಅಪಾಯದ ಕುರಿತು ಪೌಲನು ಇಬ್ರಿಯರನ್ನು ಎಚ್ಚರಿಸಿದನು.—ಇಬ್ರಿಯ 6:12.
ಒಂದು ಮೈಗಳ್ಳ ಮನೋಭಾವಕ್ಕೆ ಜೀವನದ ಅನೇಕ ಕ್ಷೇತ್ರಗಳಲ್ಲಿ ಉಗ್ರವಾದ ಪರಿಣಾಮಗಳಿರಬಹುದು. ಸೊಲೊಮೋನನು ಗಮನಿಸಿದ್ದೇನೆಂದರೆ, “ಜೋಲುಗೈಯಿಂದ ಮನೆ ಸೋರುವದು.” (ಪ್ರಸಂಗಿ 10:18) ಇಂದೊ ಮುಂದೊ, ದುರಸ್ತಾಗಿಟ್ಟಿರದ ಒಂದು ಚಾವಣಿಯ ಮುಖಾಂತರ ಮಳೆಯು ತೊಟ್ಟಿಕ್ಕಲು ಆರಂಭಿಸುತ್ತದೆ. ಆತ್ಮಿಕವಾಗಿ ನಮ್ಮ ಕೈಗಳು ಜೋಲುಬೀಳುವಂತೆ ನಾವು ಬಿಡುವುದಾದರೆ ಮತ್ತು ನಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳುವುದರಲ್ಲಿ ವಿಫಲರಾದರೆ, ಸಂದೇಹಗಳು ಗೊತ್ತಾಗದಂತೆ ನುಸುಳಿಕೊಳ್ಳಬಹುದು. ಇನ್ನೊಂದು ಪಕ್ಕದಲ್ಲಿ, ದೇವರ ವಾಕ್ಯದ ಕುರಿತಾದ ಕ್ರಮವಾದ ಮನನ ಮತ್ತು ಅದರ ಅಧ್ಯಯನವು ನಮ್ಮ ನಂಬಿಕೆಯನ್ನು ಪೋಷಿಸಿ, ರಕ್ಷಿಸುವುದು.—ಕೀರ್ತನೆ 1:2, 3.
ಅನುಭವದ ಮುಖಾಂತರ ನೆಚ್ಚಿಕೆಯನ್ನು ವೃದ್ಧಿಸಿಕೊಳ್ಳುವುದು
ಒಬ್ಬ ವಿಮಾನ ಚಾಲಕನು ತನ್ನ ಉಪಕರಣಗಳು ವಿಶ್ವಾಸಾರ್ಹವೆಂಬುದನ್ನು, ಅನುಭವ ಅಷ್ಟೇ ಅಲ್ಲದೆ ಅಧ್ಯಯನದ ಮುಖಾಂತರ ಕಲಿಯುತ್ತಾನೆಂಬುದು ನಿಶ್ಚಯ. ಅಂತೆಯೇ, ನಮ್ಮ ಸ್ವಂತ ಜೀವಿತಗಳಲ್ಲಿ ಯೆಹೋವನ ಪ್ರೀತಿಯ ಆರೈಕೆಯ ಸಾಕ್ಷ್ಯವನ್ನು ನಾವು ನೋಡುವಾಗ, ಆತನಲ್ಲಿನ ನಮ್ಮ ಭರವಸೆಯು ಹೆಚ್ಚಾಗುತ್ತದೆ. ಯೆಹೋಶುವನು ಅದನ್ನು ಅನುಭವಿಸಿದನು, ಮತ್ತು ತನ್ನ ಜೊತೆ ಇಸ್ರಾಯೇಲ್ಯರನ್ನು ಅವನು ಮರುಜ್ಞಾಪಿಸಿದ್ದು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.”—ಯೆಹೋಶುವ 23:14.
ಫಿಲಿಪ್ಪೀನ್ಸ್ನ ಒಬ್ಬ ವಿವಾಹಿತ ಸಹೋದರಿಯಾದ ಹೊಸೆಫಿನಾ, ಅದೇ ಪಾಠವನ್ನು ಕಲಿತಳು. ಸತ್ಯದ ಅರಿವಾಗುವ ಮುಂಚೆ ಜೀವಿತವು ಹೇಗಿತ್ತೆಂಬುದನ್ನು ಆಕೆ ವಿವರಿಸುತ್ತಾಳೆ: “ನನ್ನ ಗಂಡನು ಬಹಳ ಕುಡಿಯುತ್ತಿದ್ದನು ಮತ್ತು ಅವನು ಕುಡಿದು ಅಮಲೇರಿರುವಾಗ, ಸಿಟ್ಟುಗೊಂಡು ನನ್ನನ್ನು ಹೊಡೆಯುತ್ತಿದ್ದನು. ನಮ್ಮ ಅಸಂತುಷ್ಟ ವಿವಾಹವು ನಮ್ಮ ಮಗನನ್ನೂ ಬಾಧಿಸುತ್ತಿತ್ತು. ಬಹಳಷ್ಟು ಹಣವನ್ನು ಸಂಪಾದಿಸುತ್ತಾ, ನನ್ನ ಗಂಡ ಮತ್ತು ನಾನು, ಇಬ್ಬರೂ ಕೆಲಸಮಾಡುತ್ತಿದ್ದೇವಾದರೂ, ನಮ್ಮ ಹಣದಲ್ಲಿ ಹೆಚ್ಚನ್ನು ಜೂಜಾಟದ ನಿಮಿತ್ತ ಕಳೆದುಕೊಂಡೆವು. ನನ್ನ ಗಂಡನಿಗೆ ಅನೇಕ ಸ್ನೇಹಿತರಿದ್ದರೂ ಅವರಲ್ಲಿ ಹೆಚ್ಚಿನವರು, ಕುಡಿತಗಳಿಗಾಗಿ ಅವನು ಹಣಕೊಡುವನೆಂಬ ಕಾರಣದಿಂದ ಅವನ ಸ್ನೇಹವನ್ನು ಕೋರಿದರು, ಮತ್ತು ಕೆಲವರು, ಕೇವಲ ಅವನಿಗೆ ಹಾಸ್ಯಮಾಡಲಿಕ್ಕಾಗಿ ಅವನು ಕುಡಿದು ಅಮಲೇರುವಂತೆ ಪ್ರಯತ್ನಿಸಿದರು ಸಹ.
“ನಮಗೆ ಯೆಹೋವನ ಪರಿಚಯವಾದಾಗ ಮತ್ತು ಆತನ ಸಲಹೆಯನ್ನು ಹೃದಯಕ್ಕೆ ತೆಗೆದುಕೊಂಡಾಗ, ವಿಷಯಗಳು ಬದಲಾದವು. ನನ್ನ ಗಂಡನು ಇನ್ನೆಂದೂ ಕುಡಿಯುವುದಿಲ್ಲ, ನಾವು ಜೂಜಾಡುವುದನ್ನು ನಿಲ್ಲಿಸಿದ್ದೇವೆ ಮತ್ತು ನಮ್ಮನ್ನು ಪ್ರೀತಿಸುವ ಮತ್ತು ಸಹಾಯ ಮಾಡುವ ನಿಜ ಸ್ನೇಹಿತರು ನಮಗಿದ್ದಾರೆ. ನಮ್ಮ ವಿವಾಹವು ಸಂತುಷ್ಟವಾದ ವಿವಾಹವಾಗಿದೆ ಮತ್ತು ನಮ್ಮ ಮಗನು ಒಬ್ಬ ಉತ್ತಮ ಯುವ ಪುರುಷನಾಗಿ ಬೆಳೆಯುತ್ತಿದ್ದಾನೆ. ನಾವು ಕಡಿಮೆ ಸಮಯ ಕೆಲಸಮಾಡಿದರೂ, ನಮಗೆ ಅಧಿಕ ಹಣವಿದೆ. ಯೆಹೋವನು ನಮ್ಮನ್ನು ಯಾವಾಗಲೂ ಸರಿಯಾದ ದಿಕ್ಕಿನಲ್ಲಿ ನಡೆಸುವ ಒಬ್ಬ ಪ್ರೀತಿಯ ತಂದೆಯೋಪಾದಿ ಇದ್ದಾನೆಂಬುದನ್ನು ಅನುಭವವು ನಮಗೆ ಕಲಿಸಿದೆ.”
ರೇಡಿಯೊದ ಮೂಲಕ ಪಡೆದ ಉಪದೇಶಗಳ ಅಥವಾ ಒಂದು ಉಪಕರಣದ ಪರಿಶೀಲನೆಯ ಪರಿಣಾಮವಾಗಿ, ತಮ್ಮ ಮಾರ್ಗವನ್ನು ಸರಿಪಡಿಸುವ ಅಗತ್ಯವಿದೆ ಎಂಬುದನ್ನು ವಿಮಾನ ಚಾಲಕರು ಕೆಲವೊಮ್ಮೆ ಗ್ರಹಿಸುತ್ತಾರೆ. ಅಂತೆಯೇ ನಾವು ಯೆಹೋವನ ಉಪದೇಶಕ್ಕನುಸಾರ ದಿಕ್ಕನ್ನು ಬದಲಾಯಿಸಬೇಕಾಗಬಹುದು. “ನಿಮ್ಮ ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” (ಯೆಶಾಯ 30:21) ಆತನ ವಾಕ್ಯ ಮತ್ತು ಆತನ ಸಂಸ್ಥೆಯ ಮುಖಾಂತರ, ಆತ್ಮಿಕ ಅಪಾಯಗಳ ವಿರುದ್ಧ ನಮ್ಮನ್ನು ಎಚ್ಚರಿಸುವ ಸಲಹೆಯನ್ನು ನಾವು ಪಡೆಯುತ್ತೇವೆ. ಇವುಗಳಲ್ಲಿ ಒಂದು, ಸಹವಾಸಗಳಿಗೆ ಸಂಬಂಧಿಸಿರುತ್ತದೆ.
ಸಹವಾಸಗಳು ಒಬ್ಬನನ್ನು ದಾರಿತಪ್ಪುವಂತೆ ಮಾಡಬಲ್ಲವು
ಬೇಕಾದ ಸರಿಪಡಿಸುವಿಕೆಗಳು ಮಾಡಲ್ಪಡದಿದ್ದಲ್ಲಿ, ಒಂದು ಚಿಕ್ಕ ವಿಮಾನವು ಸುಲಭವಾಗಿ ತನ್ನ ದಿಕ್ಕನ್ನು ಕಳೆದುಕೊಳ್ಳಬಲ್ಲದು. ಅಂತೆಯೇ, ಕ್ರೈಸ್ತರನ್ನು ಇಂದು ಹೊರಗಿನ ಪ್ರಭಾವಗಳು ಸತತವಾಗಿ ಪೀಡಿಸುತ್ತವೆ. ಹಣ ಮತ್ತು ಸುಖಭೋಗಕ್ಕೆ ಅತಿ ಹೆಚ್ಚಿನ ಪ್ರಮುಖತೆಯನ್ನು ಕೂಡಿಸುತ್ತಾ, ಆತ್ಮಿಕ ಮೌಲ್ಯಗಳನ್ನು ಅನೇಕರು ಹೀಯಾಳಿಸುವ ಭೋಗಾಸಕ್ತಿಯ ಭಾವವುಳ್ಳ ಲೋಕದಲ್ಲಿ ನಾವು ಜೀವಿಸುತ್ತೇವೆ. ಕಡೇ ದಿವಸಗಳು “ನಿಭಾಯಿಸಲು ಕಷ್ಟಕರ”ವಾಗಿರುವವೆಂದು ಪೌಲನು ತಿಮೊಥೆಯನನ್ನು ಎಚ್ಚರಿಸಿದನು. (2 ತಿಮೊಥೆಯ 3:1-5, NW) ಸ್ವೀಕಾರ ಮತ್ತು ಜನಪ್ರಿಯತೆಗಾಗಿ ಹಾತೊರೆಯುವ ಹದಿವಯಸ್ಕರು, ವಿಶೇಷವಾಗಿ ದುಸ್ಸಹವಾಸಕ್ಕೆ ಸುಲಭಭೇದ್ಯರಾಗಿದ್ದಾರೆ.—2 ತಿಮೊಥೆಯ 2:22.
17 ವರ್ಷ ಪ್ರಾಯದವಳಾಗಿರುವ ಅಮಾನ್ಡಾ ವಿವರಿಸುವುದು: “ಸ್ವಲ್ಪ ಸಮಯಕ್ಕಾಗಿ ನನ್ನ ನಂಬಿಕೆಯು ಒಂದಿಷ್ಟು ಮಟ್ಟಿಗೆ ನನ್ನ ಸಹಪಾಠಿಗಳಿಂದ ಬಲಹೀನಗೊಳಿಸಲ್ಪಟ್ಟಿತು. ನನ್ನ ಧರ್ಮವು ನಿರ್ಬಂಧಿಸುವಂತಹದ್ದೂ, ವಿಚಾರಹೀನವಾದದ್ದೂ ಆಗಿದೆ ಎಂದು ಅವರು ಹೇಳುತ್ತಾ ಇರುತ್ತಿದ್ದರು ಮತ್ತು ಇದು ನನ್ನನ್ನು ನಿರುತ್ಸಾಹಗೊಳಿಸಲಾರಂಭಿಸಿತು. ಹಾಗಿದ್ದರೂ, ಕ್ರೈಸ್ತ ಮಾರ್ಗದರ್ಶನೆಗಳು, ನಿರ್ಬಂಧಿಸುವ ಬದಲಿಗೆ ಸಂರಕ್ಷಿಸಲು ಕಾರ್ಯಮಾಡುತ್ತವೆಂಬುದನ್ನು ನಾನು ತಿಳಿದುಕೊಳ್ಳುವಂತೆ ನನ್ನ ಹೆತ್ತವರು ಸಹಾಯಮಾಡಿದರು. ನನ್ನ ಹಿಂದಿನ ಶಾಲಾ ಸಂಗಾತಿಗಳಿಗಿಂತ ಹೆಚ್ಚು ತೃಪ್ತಿದಾಯಕ ಜೀವಿತವನ್ನು ನಾನು ಪಡೆದಿರುವಂತೆ ಈ ತತ್ವಗಳು ಸಹಾಯಮಾಡುತ್ತಿವೆ ಎಂಬುದನ್ನು ನಾನು ಈಗ ಗ್ರಹಿಸುತ್ತೇನೆ. ನಿಜವಾಗಿಯೂ ನನ್ನ ಕುರಿತು ಚಿಂತಿಸುವ—ನನ್ನ ಹೆತ್ತವರು ಮತ್ತು ಯೆಹೋವನು—ವರ ಮೇಲೆ ಭರವಸೆಯನ್ನಿಡಲು ನಾನು ಕಲಿತಿದ್ದೇನೆ ಮತ್ತು ಪಯನೀಯರ್ ಸೇವೆಯಲ್ಲಿ ನಾನು ಆನಂದಿಸುತ್ತಿದ್ದೇನೆ.”
ನಾವು ಯಾವುದೇ ವಯೋವರ್ಗಕ್ಕೆ ಸೇರಿದವರಾಗಿರಲಿ, ನಮ್ಮ ನಂಬಿಕೆಗಳ ಕುರಿತು ಹೀನೈಸುವ ಹೇಳಿಕೆಗಳನ್ನು ಮಾಡುವ ಜನರನ್ನು ನಾವು ಎದುರಿಸುವೆವು. ಅವರು ಲೌಕಿಕವಾಗಿ ವಿವೇಕಯುತರಾಗಿ ತೋರಬಹುದು, ಆದರೆ ದೇವರಿಗೆ ಅವರು ಪ್ರಾಕೃತರು, ಆತ್ಮಿಕತೆಯಿಲ್ಲದವರಾಗಿದ್ದಾರೆ. (1 ಕೊರಿಂಥ 2:14) ಪೌಲನ ದಿನದ ಕೊರಿಂಥದಲ್ಲಿದ್ದ ಪ್ರತಿಷ್ಠಿತ ಪ್ರಭಾವವುಳ್ಳ ಒಂದು ಗುಂಪಿನವರು, ಲೌಕಿಕವಾಗಿ ವಿವೇಕಯುತರಾಗಿದ್ದ ನಾಸ್ತಿಕರಾಗಿದ್ದರು. ಈ ತತ್ವಜ್ಞಾನಿಗಳ ಬೋಧನೆಗಳು, ಬಹುಶಃ ಕೊರಿಂಥದ ಕೆಲವು ಕ್ರೈಸ್ತರು ಪುನರುತ್ಥಾನದ ನಿರೀಕ್ಷೆಯಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವುದಕ್ಕೆ ನಡೆಸಿದವು. (1 ಕೊರಿಂಥ 15:12) “ಮೋಸಹೋಗಬೇಡಿರಿ,” ಎಂಬುದಾಗಿ ಅಪೊಸ್ತಲ ಪೌಲನು ಎಚ್ಚರಿಸಿದನು. “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.”—1 ಕೊರಿಂಥ 15:33.
ಇನ್ನೊಂದು ಕಡೆಯಲ್ಲಿ, ಒಳ್ಳೆಯ ಸಹವಾಸಗಳು ನಮ್ಮನ್ನು ಆತ್ಮಿಕವಾಗಿ ಬಲಪಡಿಸುತ್ತವೆ. ಕ್ರೈಸ್ತ ಸಭೆಯೊಳಗೆ, ನಂಬಿಕೆಯ ಜೀವಿತವನ್ನು ಜೀವಿಸುವ ಜನರೊಂದಿಗೆ ಸೇರುವ ಸಂದರ್ಭ ನಮಗಿದೆ. 1939ರಲ್ಲಿ ಸತ್ಯವನ್ನು ಕಲಿತ ಸಹೋದರರಾದ ನಾರ್ಮನ್, ಇನ್ನೂ ಎಲ್ಲರಿಗೂ ಮಹಾ ಉತ್ತೇಜನದ ಮೂಲವಾಗಿದ್ದಾರೆ. ಅವರ ಆತ್ಮಿಕ ದೃಷ್ಟಿಯನ್ನು ಯಾವುದು ತೀಕ್ಷ್ಣವಾಗಿಟ್ಟಿದೆ? “ಕೂಟಗಳು ಮತ್ತು ನಂಬಿಗಸ್ತ ಸಹೋದರರೊಂದಿಗಿನ ಆಪ್ತ ಸ್ನೇಹಗಳು ಪ್ರಾಮುಖ್ಯವಾಗಿವೆ,” ಎಂದು ಅವರು ಉತ್ತರಿಸುತ್ತಾರೆ. “ಈ ರೀತಿಯ ಸಹವಾಸವು, ದೇವರ ಸಂಸ್ಥೆ ಮತ್ತು ಸೈತಾನನ ಸಂಸ್ಥೆಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ನೋಡುವಂತೆ ನನಗೆ ಸಹಾಯಮಾಡಿದೆ.”
ಸಿರಿತನದ ವಂಚಕ ಶಕ್ತಿ
ಬ್ರಾಯನ್ ಎಂಬ ಒಬ್ಬ ಅನುಭವಸ್ಥ ವಿಮಾನ ಚಾಲಕನು ವಿವರಿಸುವುದೇನೆಂದರೆ, “ಒಬ್ಬ ವಿಮಾನ ಚಾಲಕನು ಕೆಲವೊಮ್ಮೆ ತನ್ನ ಉಪಕರಣಗಳ ಮೇಲೆ ನಂಬಿಕೆಯಿಡುವುದನ್ನು ಕಷ್ಟಕರವಾಗಿ ಕಂಡುಕೊಳ್ಳಬಹುದು—ಕೇವಲ ಅವನ ಸಹಜಪ್ರವೃತ್ತಿಗಳು ಸಮ್ಮತಿಸದಿರುವ ಕಾರಣದಿಂದಲೇ. ಅವರ ಆಲೋಚನೆಯು ಸರಿಯಾಗಿಲ್ಲವೆಂದು ಅವರ ಉಪಕರಣಗಳು ಸೂಚಿಸಿದರೂ, ಭೂಮಿಯ ಮೇಲಿನ ಬೆಳಕುಗಳು ನಕ್ಷತ್ರಗಳಂತೆ ತೋರಿದ ಕಾರಣ, ಅನುಭವಸ್ಥ ಮಿಲಿಟರಿ ವಿಮಾನ ಚಾಲಕರು ತಮ್ಮ ವಿಮಾನಗಳೊಂದಿಗೆ ಬುಡಮೇಲಾಗಿ ಹಾರಿರುವುದು ವಿದಿತವಾಗಿದೆ.”
ತದ್ರೀತಿಯಲ್ಲಿ, ನಮ್ಮ ಸ್ವಾರ್ಥಪರ ಸಹಜಪ್ರವೃತ್ತಿಗಳು ನಮ್ಮನ್ನು ಒಂದು ಆತ್ಮಿಕ ಅರ್ಥದಲ್ಲಿ ತಪ್ಪುದಾರಿಗೆ ನಡೆಸಬಲ್ಲವು. ಸಿರಿತನಕ್ಕೆ “ವಂಚಕ ಶಕ್ತಿ” ಇದೆಯೆಂದು ಯೇಸು ಹೇಳಿದನು ಮತ್ತು ‘ಹಣದಾಸೆಯು ಅನೇಕರನ್ನು ನಂಬಿಕೆಯಿಂದ ದೂರ ನಡೆಸಿದೆ’ ಎಂಬುದಾಗಿ ಪೌಲನು ಎಚ್ಚರಿಸಿದನು.—ಮಾರ್ಕ 4:19; 1 ತಿಮೊಥೆಯ 6:10, NW.
ಮಿನುಗುವ ವಂಚಕ ಬೆಳಕುಗಳಂತೆ, ಥಳಕಿನ ಪ್ರಾಪಂಚಿಕ ಗುರಿಗಳು ನಮ್ಮನ್ನು ತಪ್ಪಾದ ದಿಕ್ಕಿನ ಕಡೆಗೆ ನಡೆಸಬಲ್ಲವು. “ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿ”ರುವುದರಲ್ಲಿ ಹರ್ಷಿಸುವುದಕ್ಕಿಂತ, ಗತಿಸಿಹೋಗುತ್ತಿರುವ ಲೋಕದ ಬದುಕುಬಾಳಿನ ಡಂಬದಿಂದ ನಾವು ನೇರದಾರಿ ಬಿಡುವಂತಾಗಬಲ್ಲದು. (ಇಬ್ರಿಯ 11:1, NW; 1 ಯೋಹಾನ 2:16, 17) ಸಂಪದ್ಸಮೃದ್ಧ ಜೀವನ ಶೈಲಿಯನ್ನು ಪಡೆದಿರಲು ನಾವು “ಮನಸ್ಸುಮಾಡು”ವುದಾದರೆ, ಆತ್ಮಿಕ ಬೆಳವಣಿಗೆಗಾಗಿ ಬಹುಶಃ ನಮಗೆ ಬಹಳ ಕಡಿಮೆ ಸಮಯವು ಉಳಿದಿರುವುದು.—1 ತಿಮೊಥೆಯ 6:9; ಮತ್ತಾಯ 6:24; ಇಬ್ರಿಯ 13:5.
ಪ್ಯಾಟ್ರಿಕ್ ಎಂಬ ಒಬ್ಬ ಯುವ ವಿವಾಹಿತ ಪುರುಷನು ಒಪ್ಪಿಕೊಂಡದ್ದೇನೆಂದರೆ, ಉತ್ತಮ ಜೀವನ ಮಟ್ಟವನ್ನು ಅನುಭವಿಸುವ ಸಲುವಾಗಿ ಅವನು ಮತ್ತು ಅವನ ಹೆಂಡತಿಯು ಆತ್ಮಿಕ ಗುರಿಗಳನ್ನು ತ್ಯಾಗಮಾಡಿದರು. ಅವನು ವಿವರಿಸುವುದು: “ಸಭೆಯಲ್ಲಿ ದುಬಾರಿಯ ವಾಹನಗಳು ಮತ್ತು ಬಹಳ ಸುಖಕರವಾದ ಮನೆಗಳಿರುವವರಿಂದ ನಾವು ಪ್ರಭಾವಿತರಾದೆವು. ರಾಜ್ಯ ನಿರೀಕ್ಷೆಯನ್ನು ನಾವು ಎಂದಿಗೂ ಮರೆಯದಿದ್ದರೂ, ಸುಖಸೌಕರ್ಯಗಳಿಂದ ಕೂಡಿದ ಜೀವನ ಶೈಲಿಯನ್ನು ನಾವು ಪಡೆದಿರಬಹುದೆಂದು ನಮಗನಿಸಿತು. ಹಾಗಿದ್ದರೂ, ಸಕಾಲದಲ್ಲಿ, ಯೆಹೋವನನ್ನು ಸೇವಿಸುವ ಮುಖಾಂತರ ಮತ್ತು ಆತ್ಮಿಕವಾಗಿ ಬೆಳೆಯುವ ಮುಖಾಂತರ ನಿಜವಾದ ಸಂತೋಷವು ಬರುತ್ತದೆಂಬುದನ್ನು ನಾವು ಗ್ರಹಿಸಿದೆವು. ಈಗ ನಮ್ಮ ಜೀವಿತಗಳು ಪುನಃ ಒಮ್ಮೆ ಸರಳವಾಗಿವೆ. ಕೆಲಸಮಾಡುವ ತಾಸುಗಳನ್ನು ನಾವು ಕಡಿಮೆಮಾಡಿದ್ದೇವೆ ಮತ್ತು ನಾವು ಕ್ರಮದ ಪಯನೀಯರರಾಗಿದ್ದೇವೆ.”
ನಂಬಿಕೆಯು ಗ್ರಹಣಶಕ್ತಿಯುಳ್ಳ ಒಂದು ಹೃದಯದ ಮೇಲೆ ಅವಲಂಬಿಸುತ್ತದೆ
ಯೆಹೋವನಲ್ಲಿ ಭರವಸೆಯನ್ನು ಕಟ್ಟುವುದರಲ್ಲಿ ಗ್ರಹಣಶಕ್ತಿಯುಳ್ಳ ಒಂದು ಹೃದಯವೂ ಪ್ರಾಮುಖ್ಯವಾದೊಂದು ಪಾತ್ರವನ್ನು ವಹಿಸುತ್ತದೆ. ನಿಜ, “ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು [ಅಥವಾ, “ಮನಗಾಣಿಸುವ ಪ್ರಮಾಣ,” ಪಾದಟಿಪ್ಪಣಿ, NW] ತಿಳುಕೊಳ್ಳುವದೂ ಆಗಿದೆ.” (ಇಬ್ರಿಯ 11:1) ಆದರೆ ನಮಗೆ ಗ್ರಹಣಶಕ್ತಿಯುಳ್ಳ ಒಂದು ಹೃದಯವಿರದ ತನಕ, ನಾವು ಮನಗಾಣಿಸಲ್ಪಡುವುದು ಅಸಂಭವ. (ಜ್ಞಾನೋಕ್ತಿ 18:15; ಮತ್ತಾಯ 5:6) ಈ ಕಾರಣಕ್ಕಾಗಿ ಅಪೊಸ್ತಲ ಪೌಲನು ಹೇಳಿದ್ದೇನೆಂದರೆ, “ನಂಬಿಕೆಯು ಎಲ್ಲ ಜನರಲ್ಲಿರುವುದಿಲ್ಲ.”—2 ಥೆಸಲೊನೀಕ 3:2, NW.
ಹಾಗಾದರೆ, ಲಭ್ಯವಿರುವ ಎಲ್ಲ ಮನಗಾಣಿಸುವ ಪ್ರಮಾಣಕ್ಕೆ ನಮ್ಮ ಹೃದಯಗಳನ್ನು ನಾವು ಹೇಗೆ ಉತ್ತರವಾದಿಯಾಗಿಡಬಲ್ಲೆವು? ದೈವಿಕ ಗುಣಗಳನ್ನು—ನಂಬಿಕೆಯನ್ನು ಅಧಿಕಮಾಡುವ ಮತ್ತು ಪ್ರಚೋದಿಸುವ ಗುಣಗಳನ್ನು—ಬೆಳೆಸಿಕೊಳ್ಳುವ ಮೂಲಕವೇ. ‘ನಮ್ಮ ನಂಬಿಕೆಗೆ, ಸದ್ಗುಣವನ್ನು, ಜ್ಞಾನವನ್ನು, ದಮೆಯನ್ನು, ತಾಳ್ಮೆಯನ್ನು, ಭಕ್ತಿಯನ್ನು, ಸಹೋದರಸ್ನೇಹವನ್ನು, ಮತ್ತು ಪ್ರೀತಿಯನ್ನು ಕೂಡಿಸು’ವಂತೆ ಪೇತ್ರನು ನಮ್ಮನ್ನು ಪ್ರೇರಿಸುತ್ತಾನೆ. (2 ಪೇತ್ರ 1:5-7; ಗಲಾತ್ಯ 5:22, 23) ಇನ್ನೊಂದು ಕಡೆಯಲ್ಲಿ, ನಾವೊಂದು ಸ್ವಾರ್ಥಮಗ್ನ ಜೀವನವನ್ನು ನಡೆಸುವುದಾದರೆ ಅಥವಾ ಯೆಹೋವನಿಗೆ ಕನಿಷ್ಠ ಸೇವೆಯನ್ನು ಮಾತ್ರ ಸಲ್ಲಿಸುವುದಾದರೆ, ನಮ್ಮ ನಂಬಿಕೆಯು ಬೆಳೆಯುವುದನ್ನು ನಾವು ವಿವೇಚನಾಯುಕ್ತವಾಗಿ ನಿರೀಕ್ಷಿಸಸಾಧ್ಯವಿಲ್ಲ.
ಯೆಹೋವನ ವಾಕ್ಯವನ್ನು ಓದಲು ಮತ್ತು ಅದನ್ನು ಆಚರಣೆಯಲ್ಲಿ ತರಲು, ಎಜ್ರನು ‘ತನ್ನ ಹೃದಯವನ್ನು ಸಿದ್ಧಪಡಿಸಿಕೊಂಡನು.’ (ಎಜ್ರ 7:10) ಮೀಕನಲ್ಲೂ ತದ್ರೀತಿಯ ಗ್ರಹಣಶಕ್ತಿಯುಳ್ಳ ಒಂದು ಹೃದಯವಿತ್ತು. “ನಾನಂತು ಯೆಹೋವನನ್ನು ಎದುರುನೋಡುವೆನು; ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು; ನನ್ನ ದೇವರು ನನ್ನ ಕಡೆಗೆ ಕಿವಿಗೊಡುವನು.”—ಮೀಕ 7:7.
ಈ ಹಿಂದೆ ಉದ್ಧರಿಸಲ್ಪಟ್ಟ ಮಾಗ್ಡಾಲೆನಾ ಕೂಡ ಯೆಹೋವನಿಗಾಗಿ ತಾಳ್ಮೆಯಿಂದ ಕಾಯುತ್ತಾಳೆ. (ಹಬಕ್ಕೂಕ 2:3) ಆಕೆ ಹೇಳುವುದು: “ನಮಗೆ ಈಗಾಗಲೇ ಆತ್ಮಿಕ ಪ್ರಮೋದವನವಿದೆ. ಮುಂದಿನ ಹಂತವಾದ ಭೌತಿಕ ಪ್ರಮೋದವನವು ಬಹಳ ಬೇಗನೆ ಬರುವುದು. ಈ ಮಧ್ಯೆ ನೂರಾರು ಸಾವಿರ ಜನರು ಮಹಾ ಸಮೂಹವನ್ನು ಸೇರುತ್ತಿದ್ದಾರೆ. ದೇವರ ಸಂಸ್ಥೆಗೆ ಇಷ್ಟೊಂದು ಜನರು ಒಟ್ಟುಗೂಡುತ್ತಿರುವುದನ್ನು ನೋಡುವ ಸಂಗತಿಯು ನನ್ನನ್ನು ರೋಮಾಂಚಗೊಳಿಸುತ್ತದೆ.”
ನಮ್ಮ ರಕ್ಷಣೆಯ ದೇವರ ಕಡೆಗೆ ದೃಷ್ಟಿಯಿಡುವುದು
ನಮ್ಮ ಭರವಸೆಯನ್ನು ಅಂತ್ಯದ ವರೆಗೆ ದೃಢವಾಗಿ ಕಾಪಾಡಿಕೊಳ್ಳುವುದು, ನಮ್ಮ ನಂಬಿಕೆಯ ಆಚರಣೆಯನ್ನು ಮತ್ತು ಯೆಹೋವ ಹಾಗೂ ಆತನ ಸಂಸ್ಥೆಯಿಂದ ನಾವು ಪಡೆಯುವ ಮಾರ್ಗದರ್ಶನಕ್ಕೆ ಜಾಗರೂಕವಾಗಿ ಕಿವಿಗೊಡುವುದನ್ನು ಕೇಳಿಕೊಳ್ಳುತ್ತದೆ. ಅದು ಖಂಡಿತವಾಗಿಯೂ ಪ್ರಯತ್ನಕ್ಕೆ ಯೋಗ್ಯವಾಗಿದೆ. ಒಂದು ದೀರ್ಘವಾದ, ಕಷ್ಟಕರ ಪಯಣದ ನಂತರ, ಅವನು ಕೆಳಕ್ಕೆ ಇಳಿದು, ಅಂತಿಮವಾಗಿ ದಟ್ಟವಾದ ಮೋಡಗಳನ್ನು ಭೇದಿಸಿ ಹೊರಬಂದಾಗ, ಒಬ್ಬ ವಿಮಾನ ಚಾಲಕನಿಗೆ ಆಳವಾದ ತೃಪ್ತಿಯ ಅನಿಸಿಕೆ ಆಗುತ್ತದೆ. ಅಲ್ಲಿ ಅವನ ಮುಂದೆ, ಹಸುರಾಗಿ ಮತ್ತು ಸ್ವಾಗತವನ್ನು ಕೋರುತ್ತಾ, ಭೂಮಿಯು ಹರಡಿರುತ್ತದೆ. ಅವನನ್ನು ಸ್ವಾಗತಿಸಲು ಕಾದುಕೊಂಡಿರುತ್ತಾ, ವಿಮಾನ ನಿಲ್ದಾಣದ ಬಯಲು ಕೆಳಗಿದೆ.
ಒಂದು ರೋಮಾಂಚಕಾರಿ ಅನುಭವವು ನಮಗಾಗಿಯೂ ಕಾದಿದೆ. ಈ ಮಂಕುಕವಿದ ದುಷ್ಟ ಲೋಕವು, ನೀತಿಯ ಹೊಸ ಭೂಮಿಗೆ ದಾರಿ ಕೊಡುವುದು. ನಮಗಾಗಿ ಒಂದು ದೈವಿಕ ಸ್ವಾಗತವು ಕಾದಿದೆ. ಕೀರ್ತನೆಗಾರನ ಮಾತುಗಳನ್ನು ನಾವು ಆಲಿಸುವುದಾದರೆ, ನಾವು ಅಲ್ಲಿಗೆ ತಲಪಸಾಧ್ಯವಿದೆ: “ಕರ್ತನಾದ ಯೆಹೋವನೇ, ಬಾಲ್ಯಾರಭ್ಯ ನನ್ನ ನಿರೀಕ್ಷೆಯೂ ಭರವಸವೂ ನೀನಲ್ಲವೂ? . . . ನಾನು ಯಾವಾಗಲೂ ಹಿಗ್ಗುತ್ತಿರುವದು ನಿನ್ನಲ್ಲಿಯೇ.”—ಕೀರ್ತನೆ 71:5, 6.