ಗಮಲಿಯೇಲ—ಅವನು ತಾರ್ಸದ ಸೌಲನಿಗೆ ಕಲಿಸಿದನು
ಆ ಗುಂಪು ತುಂಬಾ ನಿಶ್ಶಬ್ದವಾಗಿ ನಿಂತಿತು. ಕೆಲವೊಂದು ಕ್ಷಣಗಳಿಗೆ ಮುಂಚೆ, ಅವರು ಅಪೊಸ್ತಲ ಪೌಲನನ್ನು ಬಹುಮಟ್ಟಿಗೆ ಕೊಂದಿದ್ದರು. ತಾರ್ಸದ ಸೌಲನೆಂದೂ ಪ್ರಸಿದ್ಧನಾಗಿದ್ದ ಅವನು, ರೋಮನ್ ಸೈನಿಕರಿಂದ ರಕ್ಷಿಸಲ್ಪಟ್ಟಿದ್ದನು ಮತ್ತು ಈಗ ಯೆರೂಸಲೇಮಿನಲ್ಲಿದ್ದ ದೇವಾಲಯದ ಬಳಿಯ ಮೆಟ್ಟಿಲುಗಳ ಸಮೀಪವಿದ್ದ ಜನರನ್ನು ಎದುರಿಸಿದನು.
ನಿಶ್ಶಬ್ದವಾಗಿರುವಂತೆ ತನ್ನ ಕೈಯಿಂದ ಸನ್ನೆಮಾಡುತ್ತಾ, ಪೌಲನು ಹೀಬ್ರು ಭಾಷೆಯಲ್ಲಿ ಹೀಗೆ ಹೇಳುತ್ತಾ ಮಾತಾಡಲಾರಂಭಿಸಿದನು: “ಸಹೋದರರೇ, ತಂದೆಗಳೇ, ಈಗ ನಾನು ನಿಮಗೆ ಮಾಡುವ ಪ್ರತಿವಾದವನ್ನು ಕೇಳಿರಿ . . . ನಾನು ಯೆಹೂದ್ಯನು, ಕಿಲಿಕ್ಯದ ತಾರ್ಸದಲ್ಲಿ ಹುಟ್ಟಿದವನು, ಆದರೆ ಈ ಪಟ್ಟಣದಲ್ಲೇ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ ನಮ್ಮ ಪಿತೃಗಳ ಧರ್ಮಶಾಸ್ತ್ರದಲ್ಲಿ ಪೂರ್ಣ ಶಿಕ್ಷಿತನಾದೆನು; ನೀವೆಲ್ಲರೂ ಈಹೊತ್ತು ದೇವರ ವಿಷಯದಲ್ಲಿ ಅಭಿಮಾನಿಗಳಾಗಿರುವಂತೆಯೇ ನಾನು ಅಭಿಮಾನಿಯಾಗಿದ್ದೆನು.”—ಅ. ಕೃತ್ಯಗಳು 22:1-3.
ತನ್ನ ಜೀವವು ಅಪಾಯದಲ್ಲಿದ್ದಾಗ, ಪೌಲನು ತಾನು ಗಮಲಿಯೇಲನಿಂದ ಶಿಕ್ಷಿತನಾಗಿದ್ದೆನೆಂದು ಹೇಳುತ್ತಾ ತನ್ನ ಸಮರ್ಥನೆಯನ್ನು ಏಕೆ ಆರಂಭಿಸಿದನು? ಗಮಲಿಯೇಲನು ಯಾರಾಗಿದ್ದನು, ಮತ್ತು ಅವನಿಂದ ಕಲಿಸಲ್ಪಡುವುದರಲ್ಲಿ ಏನು ಒಳಗೂಡಿತ್ತು? ಅವನು ಕ್ರೈಸ್ತ ಅಪೊಸ್ತಲ ಪೌಲನಾದ ಬಳಿಕವೂ, ಈ ತರಬೇತಿಯು ಸೌಲನನ್ನು ಪ್ರಭಾವಿಸಿತೊ?
ಗಮಲಿಯೇಲನು ಯಾರಾಗಿದ್ದನು?
ಗಮಲಿಯೇಲನು ಒಬ್ಬ ಪ್ರಖ್ಯಾತ ಫರಿಸಾಯನಾಗಿದ್ದನು. ಅವನು, ಫರಿಸಾಯಸಂಬಂಧಿತ ಯೆಹೂದ್ಯಮತದೊಳಗೆ ಎರಡು ಮುಖ್ಯ ಚಿಂತನ ಪಂಥಗಳಲ್ಲಿ ಒಂದನ್ನು ಸ್ಥಾಪಿಸಿದ ಹಿರಿಯ ಹಿಲೆಲನ ಮೊಮ್ಮಗನಾಗಿದ್ದನು.a ಹಿಲೆಲನ ಬೋಧನಾ ವಿಧಾನವು, ಅವನ ಪ್ರತಿಸ್ಪರ್ಧಿಯಾದ ಶಾಮೈಯ ಬೋಧನಾ ವಿಧಾನಕ್ಕಿಂತಲೂ ಹೆಚ್ಚು ಸಹಿಷ್ಣುತೆಯುಳ್ಳದ್ದಾಗಿ ಪರಿಗಣಿಸಲ್ಪಟ್ಟಿತ್ತು. ಸಾ.ಶ. 70ರಲ್ಲಿ, ಯೆರೂಸಲೇಮಿನ ದೇವಾಲಯದ ನಾಶನದ ನಂತರ, ಯೆಹೂದ್ಯರು ಬೆಟ್ ಹಿಲೆಲ್ (ಹಿಲೆಲ್ ಮನೆತನ) ಅನ್ನು ಬೆಟ್ ಶಾಮೈ (ಶಾಮೈ ಮನೆತನ)ಕ್ಕಿಂತ ಹೆಚ್ಚು ಇಷ್ಟಪಟ್ಟರು. ದೇವಾಲಯದ ನಾಶನದೊಂದಿಗೆ ಇತರ ಎಲ್ಲಾ ಪಂಥಗಳು ಕಾಣೆಯಾದುದರಿಂದ, ಹಿಲೆಲನ ಮನೆತನವು ಯೆಹೂದ್ಯಮತದ ಅಧಿಕೃತ ಅಭಿವ್ಯಕ್ತಿಯಾಯಿತು. ಅನೇಕವೇಳೆ ಹಿಲೆಲ್ ಮನೆತನದ ನಿರ್ಣಯಗಳು, ಟ್ಯಾಲ್ಮುಡ್ನ ಮೂಲಾಧಾರವಾಗಿ ಪರಿಣಮಿಸಿದ ಮಿಷ್ನದಲ್ಲಿನ ಯೆಹೂದಿ ನಿಯಮಶಾಸ್ತ್ರಕ್ಕೆ ಆಧಾರವಾಗಿದ್ದವು, ಮತ್ತು ಅದರ ಪ್ರಾಬಲ್ಯದಲ್ಲಿ ಗಮಲಿಯೇಲನ ಪ್ರಭಾವವು ಒಂದು ಪ್ರಮುಖ ಅಂಶವಾಗಿತ್ತೆಂಬುದು ಸುವ್ಯಕ್ತ.
ಗಮಲಿಯೇಲನು ಎಷ್ಟು ಗೌರವದಿಂದ ಕಾಣಲ್ಪಟ್ಟಿದ್ದನೆಂದರೆ, ರಬ್ಬಿಗಿಂತ ಹೆಚ್ಚು ಉತ್ತಮವಾದ ರಾಬ್ಬನ್ ಎಂಬ ಬಿರುದಿನಿಂದ ಕರೆಯಲ್ಪಡುವುದರಲ್ಲಿ ಅವನು ಪ್ರಥಮನಾಗಿದ್ದನು. ವಾಸ್ತವದಲ್ಲಿ, ಗಮಲಿಯೇಲನು ಎಷ್ಟು ವಿಶೇಷವಾಗಿ ಗೌರವಿಸಲ್ಪಟ್ಟ ವ್ಯಕ್ತಿಯಾಗಿ ಪರಿಣಮಿಸಿದನೆಂದರೆ, ಅವನ ಕುರಿತಾಗಿ ಮಿಷ್ನ ಹೇಳುವುದು: “ಮಠದ ಹಿರಿಯನಾದ ರಾಬ್ಬನ್ ಗಮಲಿಯೇಲನು ಮರಣಪಟ್ಟಾಗ, ಟೋರಾದ ಪ್ರತಿಷ್ಠೆಯು ನಿಂತುಹೋಯಿತು, ಮತ್ತು ಪರಿಶುದ್ಧತೆ ಹಾಗೂ ಸಂತತನ [ಪದಶಃ, “ಪ್ರತ್ಯೇಕತೆ”]ಗಳು ಕ್ಷಯಿಸಿಹೋದವು.”—ಸೋಟ 9:15.
ಗಮಲಿಯೇಲನಿಂದ ಕಲಿಸಲ್ಪಟ್ಟದ್ದು—ಹೇಗೆ?
ಅಪೊಸ್ತಲ ಪೌಲನು ತಾನು ‘ಗಮಲಿಯೇಲನ ಪಾದಸನ್ನಿಧಿಯಲ್ಲಿ ಶಿಕ್ಷಿತ’ನಾದೆನೆಂದು ಯೆರೂಸಲೇಮಿನಲ್ಲಿದ್ದ ಗುಂಪಿಗೆ ಹೇಳಿದಾಗ, ಅವನು ಏನನ್ನು ಅರ್ಥೈಸಿದನು? ಗಮಲಿಯೇಲನಂತಹ ಶಿಕ್ಷಕನ ಶಿಷ್ಯನಾಗಿರುವುದರಲ್ಲಿ ಏನು ಒಳಗೂಡಿತ್ತು?
ಅಂತಹ ತರಬೇತಿಯ ಕುರಿತಾಗಿ, ಜೂಯಿಷ್ ಥಿಯೊಲಾಜಿಕಲ್ ಸೆಮಿನರಿ ಆಫ್ ಅಮೆರಿಕದ ಪ್ರೊಫೆಸರ್ ಡೋವ್ ಸ್ಲಾಟ್ನೀಕ್ ಬರೆಯುವುದು: “ವಾಚಿಕ ನಿಯಮಶಾಸ್ತ್ರದ ನಿಷ್ಕೃಷ್ಟತೆ, ಆದಕಾರಣ, ಅದರ ವಿಶ್ವಾಸಾರ್ಹತೆಯು, ಬಹುಮಟ್ಟಿಗೆ ಸಂಪೂರ್ಣವಾಗಿ ಗುರುಶಿಷ್ಯರ ಸಂಬಂಧದ ಮೇಲೆ ಅವಲಂಬಿಸುತ್ತದೆ: ನಿಯಮಶಾಸ್ತ್ರವನ್ನು ಬೋಧಿಸುವುದರಲ್ಲಿ ಗುರುವಿನಿಂದ ಕೈಕೊಳ್ಳಲ್ಪಡುವ ಜಾಗರೂಕತೆ ಹಾಗೂ ಅದನ್ನು ಕಲಿಯುವುದರಲ್ಲಿ ಶಿಷ್ಯನ ಶ್ರದ್ಧಾಪೂರ್ವಕತೆ. . . . ಆದುದರಿಂದಲೇ, ವಿದ್ವಾಂಸರ ಪಾದಗಳ ಬಳಿಯಲ್ಲಿ ಕುಳಿತುಕೊಳ್ಳುವಂತೆ . . . ‘ಅವರ ಮಾತುಗಳನ್ನು ಬಾಯಾರಿಕೆಯಿಂದ ಕುಡಿಯು’ವಂತೆ ಶಿಷ್ಯರು ಪ್ರೇರೇಪಿಸಲ್ಪಟ್ಟರು.”—ಏವೋಟ್ 1:4, ದ ಮಿಷ್ನ.
ಏಮೀಲ್ ಶೂರರ್, ಎ ಹಿಸ್ಟರಿ ಆಫ್ ದ ಜೂಯಿಷ್ ಪೀಪ್ಲ್ ಇನ್ ದ ಟೈಮ್ ಆಫ್ ಜೀಸಸ್ ಕ್ರೈಸ್ಟ್ ಎಂಬ ತಮ್ಮ ಪುಸ್ತಕದಲ್ಲಿ, ಪ್ರಥಮ ಶತಮಾನದ ರಬ್ಬಿಸಂಬಂಧಿತ ಶಿಕ್ಷಕರ ವಿಧಾನಗಳ ಮೇಲೆ ಬೆಳಕುಬೀರುತ್ತಾರೆ. ಅವರು ಬರೆಯುವುದು: “ಹೆಚ್ಚು ವಿಭಾಗಿತವಾದ ಹಾಗೂ ವಾಕ್ಸಂಪತ್ತಿಯುಳ್ಳ ‘ವಾಚಿಕ ನಿಯಮಶಾಸ್ತ್ರ’ದೊಂದಿಗೆ ಸಮಗ್ರವಾಗಿ ಪರಿಚಿತರಾಗುವಂತೆ ಯುವ ಜನರನ್ನು ಪ್ರೇರಿಸುವ ಉದ್ದೇಶದಿಂದ, ಹೆಚ್ಚು ಪ್ರಸಿದ್ಧರಾಗಿದ್ದ ರಬ್ಬಿಗಳು ಅನೇಕವೇಳೆ ತಮ್ಮ ಸುತ್ತಲೂ ಹೆಚ್ಚಿನ ಸಂಖ್ಯೆಗಳಲ್ಲಿ ಬೋಧನೆಯನ್ನು ಪಡೆಯುವ ಅಭಿಲಾಷೆಯುಳ್ಳ ಯುವ ಜನರನ್ನು ಕೂಡಿಸಿಕೊಂಡರು. . . . ಆ ಬೋಧನೆಯು, ಜ್ಞಾಪಕಶಕ್ತಿಯ ಪಟ್ಟುಹಿಡಿದ ಸತತ ಅಭ್ಯಾಸವನ್ನು ಒಳಗೊಂಡಿತ್ತು. . . . ಶಿಕ್ಷಕನು ತನ್ನ ವಿದ್ಯಾರ್ಥಿಗಳ ನಿರ್ಣಯಕ್ಕಾಗಿ ನ್ಯಾಯಸಮ್ಮತವಾದ ಅನೇಕ ಪ್ರಶ್ನೆಗಳನ್ನು ಅವರ ಮುಂದೆ ತಂದನು ಹಾಗೂ ತನ್ನ ಶಿಷ್ಯರು ಆ ಪ್ರಶ್ನೆಗಳಿಗೆ ಉತ್ತರಿಸುವಂತೆ ಮಾಡಿದನು ಅಥವಾ ತಾನೇ ಅವುಗಳನ್ನು ಉತ್ತರಿಸಿದನು. ಆ ವಿದ್ಯಾರ್ಥಿಗಳು ಶಿಕ್ಷಕನಿಗೆ ಪ್ರಶ್ನೆಗಳನ್ನು ಹಾಕುವಂತೆ ಸಹ ಅನುಮತಿಸಲ್ಪಟ್ಟಿದ್ದರು.”
ರಬ್ಬಿಗಳ ದೃಷ್ಟಿಕೋನದಿಂದ, ವಿದ್ಯಾರ್ಥಿಗಳಿಗೆ ವಾದಾಂಶವು, ಕೇವಲ ತೇರ್ಗಡೆಹೊಂದುವ ಒಂದು ಗ್ರೇಡನ್ನು ಪಡೆದುಕೊಳ್ಳುವುದಕ್ಕಿಂತಲೂ ಹೆಚ್ಚು ಅಧಿಕವಾಗಿತ್ತು. ಅಂತಹ ಶಿಕ್ಷಕರ ಅಧೀನದಲ್ಲಿ ಅಭ್ಯಾಸಮಾಡುತ್ತಿರುವವರಿಗೆ ಹೀಗೆ ಎಚ್ಚರಿಕೆನೀಡಲಾಗಿತ್ತು: “ತಾನು ಕಲಿತಿರುವ ವಿಷಯಗಳಿಂದ ಒಂದೇ ಒಂದು ವಿಷಯವನ್ನು ಮರೆಯುವ ಯಾವನಿಗೇ ಆದರೂ—ಶಾಸ್ತ್ರಕ್ಕನುಸಾರವಾಗಿ ಅದು ಜೀವಮರಣಗಳ ಒಂದು ವಿಷಯವಾಗಿದೆ.” (ಏವೋಟ್ 3:8) “ನೀರಿನ ಒಂದು ಹನಿಯನ್ನೂ ಹೊರಗೆಹಾಕದ, ಪಳಾಸ್ತ್ರಿ ಹಾಕಲ್ಪಟ್ಟ ಒಂದು ಬಾವಿ”ಯಂತಿದ್ದ ಒಬ್ಬ ವಿದ್ಯಾರ್ಥಿಗೆ ಅತ್ಯಧಿಕವಾದ ಸ್ತುತಿಯು ಅನುಗ್ರಹಿಸಲ್ಪಟ್ಟಿತು. (ಏವೋಟ್ 2:8) ಆಗ ತಾರ್ಸದ ಸೌಲನೆಂಬ ತನ್ನ ಹೀಬ್ರು ಹೆಸರಿನಿಂದ ಪ್ರಸಿದ್ಧನಾಗಿದ್ದ ಪೌಲನು, ಗಮಲಿಯೇಲನಿಂದ ಪಡೆದುಕೊಂಡಿದ್ದ ತರಬೇತಿಯು ಈ ರೀತಿಯದ್ದಾಗಿತ್ತು.
ಗಮಲಿಯೇಲನ ಬೋಧನೆಗಳ ನಿಜಾರ್ಥ
ಫರಿಸಾಯಸಂಬಂಧಿತ ಬೋಧನೆಗಳಿಗೆ ಅನುಸಾರವಾಗಿ, ಗಮಲಿಯೇಲನು ವಾಚಿಕ ನಿಯಮಶಾಸ್ತ್ರದಲ್ಲಿ ನಂಬಿಕೆಯನ್ನು ಪ್ರವರ್ಧಿಸಿದನು. ಹೀಗೆ ಅವನು ಪ್ರೇರಿತ ಶಾಸ್ತ್ರಕ್ಕಿಂತಲೂ ಹೆಚ್ಚಾಗಿ ರಬ್ಬಿಗಳ ಸಂಪ್ರದಾಯಗಳ ಮೇಲೆ ಹೆಚ್ಚು ಮಹತ್ತಾದ ಒತ್ತನ್ನು ಹಾಕಿದನು. (ಮತ್ತಾಯ 15:3-9) ಗಮಲಿಯೇಲನು ಹೀಗೆ ಹೇಳುವುದನ್ನು ಮಿಷ್ನ ಉದ್ಧರಿಸುತ್ತದೆ: “ಸ್ವತಃ ನಿಮಗಾಗಿ ಒಬ್ಬ ಶಿಕ್ಷಕ [ಒಬ್ಬ ರಬ್ಬಿ]ನನ್ನು ನೇಮಿಸಿಕೊಳ್ಳಿರಿ ಹಾಗೂ ನಿಮ್ಮನ್ನು ಸಂದೇಹದಿಂದ ಬಿಡುಗಡೆಗೊಳಿಸಿಕೊಳ್ಳಿರಿ, ಏಕೆಂದರೆ ಬರಿಯ ಊಹೆಯ ಮೂಲಕ ನೀವು ಅತಿರೇಕ ದಶಾಂಶವನ್ನು ಕೊಡಬಾರದು.” (ಏವೋಟ್ 1:16) ಇದು ಏನು ಮಾಡಬೇಕೆಂಬುದನ್ನು ಹೀಬ್ರು ಶಾಸ್ತ್ರವಚನಗಳು ಸ್ಪಷ್ಟವಾಗಿ ಹೇಳದಿರುವಾಗ, ವ್ಯಕ್ತಿಯೊಬ್ಬನು ಒಂದು ನಿರ್ಣಯವನ್ನು ಮಾಡಲಿಕ್ಕಾಗಿ ತನ್ನ ಸ್ವಂತ ತರ್ಕಬುದ್ಧಿಯನ್ನು ಉಪಯೋಗಿಸಬಾರದು ಅಥವಾ ತನ್ನ ಮನಸ್ಸಾಕ್ಷಿಯನ್ನು ಅನುಸರಿಸಬಾರದು ಎಂಬುದನ್ನು ಅರ್ಥೈಸಿತು. ಅದಕ್ಕೆ ಬದಲಾಗಿ, ತನಗಾಗಿ ನಿರ್ಣಯವನ್ನು ಮಾಡಸಾಧ್ಯವಿರುವ ಅರ್ಹನಾದ ಒಬ್ಬ ರಬ್ಬಿಯನ್ನು ಅವನು ಕಂಡುಕೊಳ್ಳಬೇಕಿತ್ತು. ಗಮಲಿಯೇಲನಿಗನುಸಾರ, ಒಬ್ಬ ವ್ಯಕ್ತಿಯು ಪಾಪ ಮಾಡುವುದನ್ನು ಈ ರೀತಿಯಲ್ಲಿ ಮಾತ್ರವೇ ತೊರೆಯಸಾಧ್ಯವಿತ್ತು.—ಹೋಲಿಸಿರಿ ರೋಮಾಪುರ 14:1-12.
ಹಾಗಿದ್ದರೂ, ಗಮಲಿಯೇಲನು ತನ್ನ ಧಾರ್ಮಿಕ ನ್ಯಾಯನಿರ್ಣಯಗಳಲ್ಲಿ ಹೆಚ್ಚು ಸಹನಶೀಲತೆ, ಉದಾರಾಭಿಪ್ರಾಯಕ್ಕಾಗಿ ಪ್ರಸಿದ್ಧನಾಗಿದ್ದನು. ಉದಾಹರಣೆಗಾಗಿ, ತಾನು “ಒಬ್ಬ ಹೆಂಡತಿಗೆ, [ತನ್ನ ಗಂಡನ ಮರಣಕ್ಕೆ] ಒಬ್ಬ ಸಾಕ್ಷಿಯ ಸಾಕ್ಷ್ಯದ ಮೇಲೆ ಪುನರ್ವಿವಾಹವಾಗುವಂತೆ ಅನುಮತಿಸು”ವೆನೆಂದು ಅವನು ನಿರ್ಣಯಿಸಿದಾಗ, ಅವನು ಸ್ತ್ರೀಯರಿಗಾಗಿ ಪರಿಗಣನೆಯನ್ನು ತೋರಿಸಿದನು. (ಯವಮಾಟ್ 16:7, ದ ಮಿಷ್ನ) ಇದಕ್ಕೆ ಕೂಡಿಸಿ, ದಾಂಪತ್ಯ ವಿಚ್ಛೇದಿತೆಯರನ್ನು ಸಂರಕ್ಷಿಸಲಿಕ್ಕಾಗಿ, ವಿಚ್ಛೇದದ ಒಂದು ಪತ್ರವನ್ನು ಕೊಡುವುದರಲ್ಲಿ ಗಮಲಿಯೇಲನು ಅನೇಕ ನಿರ್ಬಂಧಗಳನ್ನು ಒಳತಂದನು.
ಯೇಸು ಕ್ರಿಸ್ತನ ಆರಂಭದ ಹಿಂಬಾಲಕರೊಂದಿಗಿನ ಗಮಲಿಯೇಲನ ವ್ಯವಹಾರಗಳಲ್ಲಿ ಸಹ ಈ ಉದಾರಾಭಿಪ್ರಾಯವು ಕಂಡುಬರುತ್ತದೆ. ಸಾರಿದ್ದಕ್ಕಾಗಿ ಅವರು ಯಾರನ್ನು ಸೆರೆಹಿಡಿದಿದ್ದರೋ ಆ ಯೇಸುವಿನ ಅಪೊಸ್ತಲರನ್ನು ಕೊಲ್ಲಲು ಇತರ ಯೆಹೂದಿ ಮುಖಂಡರು ಪ್ರಯತ್ನಿಸಿದಾಗ, “ಎಲ್ಲಾ ಜನರಿಂದ ಮಾನಹೊಂದಿದ ನ್ಯಾಯಶಾಸ್ತ್ರಿಯಾದ ಗಮಲಿಯೇಲನೆಂಬ ಒಬ್ಬ ಫರಿಸಾಯನು ಹಿರೀಸಭೆಯಲ್ಲಿ ಎದ್ದುನಿಂತು ಈ ಮನುಷ್ಯರನ್ನು ಸ್ವಲ್ಪ ಹೊತ್ತು ಹೊರಗೆ ಕಳುಹಿಸಬೇಕೆಂದು ಅಪ್ಪಣೆಕೊಟ್ಟು ಸಭೆಯವರಿಗೆ—ಇಸ್ರಾಯೇಲ್ ಜನರೇ, ನೀವು ಈ ಮನುಷ್ಯರ ವಿಷಯದಲ್ಲಿ ಮಾಡಬೇಕೆಂದಿರುವದನ್ನು ಕುರಿತು ಎಚ್ಚರಿಕೆಯುಳ್ಳವರಾಗಿರ್ರಿ. . . . ನಾನು ನಿಮಗೆ ಹೇಳುವದೇನಂದರೆ ನೀವು ಆ ಮನುಷ್ಯರ ಗೊಡವೆಗೆ ಹೋಗಬೇಡಿರಿ, ಅವರನ್ನು ಬಿಡಿರಿ; . . . ನೀವು ಒಂದು ವೇಳೆ ದೇವರ ಮೇಲೆ ಯುದ್ಧಮಾಡುವವರಾಗಿ ಕಾಣಿಸಿಕೊಂಡೀರಿ ಎಂದು ಹೇಳಿದನು” ಎಂದು ಅಪೊಸ್ತಲರ ಕೃತ್ಯಗಳು ಪುಸ್ತಕವು ಹೇಳುತ್ತದೆ. ಗಮಲಿಯೇಲನ ಬುದ್ಧಿವಾದಕ್ಕೆ ಲಕ್ಷ್ಯಕೊಡಲಾಯಿತು, ಮತ್ತು ಅಪೊಸ್ತಲರು ಬಿಡುಗಡೆಗೊಳಿಸಲ್ಪಟ್ಟರು—ಅ. ಕೃತ್ಯಗಳು 5:34-40.
ಅದು ಪೌಲನಿಗೆ ಏನನ್ನು ಅರ್ಥೈಸಿತು?
ಸಾ.ಶ. ಪ್ರಥಮ ಶತಮಾನದ ಅತ್ಯಂತ ಮಹಾ ರಬ್ಬಿಸಂಬಂಧಿತ ಶಿಕ್ಷಕರಲ್ಲಿ ಒಬ್ಬನಿಂದ ಪೌಲನು ತರಬೇತಿಗೊಳಿಸಲ್ಪಟ್ಟು, ಶಿಕ್ಷಿತನಾಗಿದ್ದನು. ಅಪೊಸ್ತಲನು ಗಮಲಿಯೇಲನ ಕಡೆಗೆ ನಿರ್ದೇಶಿಸಿದ್ದು, ಯೆರೂಸಲೇಮಿನಲ್ಲಿದ್ದ ಗುಂಪು ಅವನ ಭಾಷಣಕ್ಕೆ ವಿಶೇಷವಾದ ಗಮನವನ್ನು ಕೊಡುವಂತೆ ಮಾಡಿತೆಂಬುದರಲ್ಲಿ ಸಂದೇಹವಿಲ್ಲ. ಆದರೆ ಅವನು ಅವರ ಬಳಿ ಗಮಲಿಯೇಲನಿಗಿಂತಲೂ ಹೆಚ್ಚು ಶ್ರೇಷ್ಠನಾದ ಒಬ್ಬ ಶಿಕ್ಷಕ, ಮೆಸ್ಸೀಯನಾದ ಯೇಸುವಿನ ಕುರಿತಾಗಿ ಮಾತಾಡಿದನು. ಈಗ ಪೌಲನು ಗಮಲಿಯೇಲನ ಶಿಷ್ಯನೋಪಾದಿ ಅಲ್ಲ, ಬದಲಾಗಿ ಯೇಸುವಿನ ಶಿಷ್ಯನೋಪಾದಿ ಆ ಗುಂಪನ್ನು ಸಂಬೋಧಿಸಿದನು.—ಅ. ಕೃತ್ಯಗಳು 22:4-21.
ಗಮಲಿಯೇಲನಿಂದ ಕೊಡಲ್ಪಟ್ಟ ತರಬೇತಿಯು, ಒಬ್ಬ ಕ್ರೈಸ್ತನೋಪಾದಿ ಪೌಲನ ಬೋಧನೆಯನ್ನು ಪ್ರಭಾವಿಸಿತೊ? ಶಾಸ್ತ್ರವಚನಗಳಲ್ಲಿನ ಹಾಗೂ ಯೆಹೂದಿ ನಿಯಮಶಾಸ್ತ್ರದಲ್ಲಿನ ಕಟ್ಟುನಿಟ್ಟಾದ ಉಪದೇಶವು, ಒಬ್ಬ ಕ್ರೈಸ್ತ ಶಿಕ್ಷಕನೋಪಾದಿ ಪೌಲನಿಗೆ ಪ್ರಯೋಜನಕರವಾಗಿ ಪರಿಣಮಿಸಿರುವುದು ಸಂಭವನೀಯ. ಆದರೂ, ಅವನು ಗಮಲಿಯೇಲನ ಫರಿಸಾಯಸಂಬಂಧಿತ ನಂಬಿಕೆಯ ಮೂಲಭೂತ ಬೋಧನೆಗಳನ್ನು ತಿರಸ್ಕರಿಸಿದನೆಂಬುದನ್ನೂ, ಬೈಬಲಿನಲ್ಲಿ ಕಂಡುಬರುವ ಪೌಲನ ದೈವಿಕ ಪ್ರೇರಿತ ಪತ್ರಗಳು ಸ್ಪಷ್ಟವಾಗಿ ತೋರಿಸುತ್ತವೆ. ಪೌಲನು ತನ್ನ ಜೊತೆ ಯೆಹೂದ್ಯರನ್ನು ಹಾಗೂ ಇತರರೆಲ್ಲರನ್ನು, ಯೆಹೂದ್ಯಮತದ ರಬ್ಬಿಗಳ ಕಡೆಗಾಗಲಿ ಅಥವಾ ಮಾನವ ನಿರ್ಮಿತ ಸಂಪ್ರದಾಯಗಳ ಕಡೆಗಾಗಲಿ ಅಲ್ಲ, ಬದಲಾಗಿ ಯೇಸು ಕ್ರಿಸ್ತನ ಕಡೆಗೆ ನಿರ್ದೇಶಿಸಿದನು.—ರೋಮಾಪುರ 10:1-4.
ಪೌಲನು ಗಮಲಿಯೇಲನ ಒಬ್ಬ ಶಿಷ್ಯನಾಗಿ ಮುಂದುವರಿದಿದ್ದಲ್ಲಿ, ಅವನು ಭಾರಿ ಘನತೆಯನ್ನು ಅನುಭವಿಸಿದ್ದಿರಸಾಧ್ಯವಿತ್ತು. ಗಮಲಿಯೇಲನ ಗುಂಪಿನಿಂದ ಬಂದ ಇತರರು, ಯೆಹೂದ್ಯಮತದ ಭವಿಷ್ಯತ್ತನ್ನು ರೂಪಿಸಲು ಸಹಾಯಮಾಡಿದರು. ಉದಾಹರಣೆಗಾಗಿ, ಬಹುಶಃ ಪೌಲನ ಒಬ್ಬ ಜೊತೆ ವಿದ್ಯಾರ್ಥಿಯಾಗಿದ್ದ, ಗಮಲಿಯೇಲನ ಮಗನಾದ ಸಿಮೆಯೋನನು, ರೋಮ್ನ ವಿರುದ್ಧವಾದ ಯೆಹೂದಿ ಕ್ರಾಂತಿಯಲ್ಲಿ ಒಂದು ಪ್ರಮುಖವಾದ ಪಾತ್ರವನ್ನು ವಹಿಸಿದನು. ದೇವಾಲಯದ ನಾಶನದ ಬಳಿಕ, ಗಮಲಿಯೇಲನ ಮೊಮ್ಮಗನಾದ IIನೆಯ ಗಮಲಿಯೇಲನು, ಸನ್ಹೆದ್ರಿನ್ ಅನ್ನು ಯಾವ್ನೆಗೆ ಸ್ಥಳಾಂತರಿಸುತ್ತಾ, ಅದರ ಅಧಿಕಾರವನ್ನು ಪುನಸ್ಸ್ಥಾಪಿಸಿದನು. IIನೆಯ ಗಮಲಿಯೇಲನ ಮೊಮ್ಮಗನಾದ ಜೂಡ ಹನಾಸಿ, ಮಿಷ್ನದ—ಇದು ನಮ್ಮ ದಿನಗಳ ತನಕವೂ ಯೆಹೂದಿ ಚಿಂತನದ ಮೂಲೆಗಲ್ಲಾಗಿ ಪರಿಣಮಿಸಿದೆ—ಸಂಗ್ರಾಹಕನಾಗಿದ್ದನು.
ಗಮಲಿಯೇಲನ ಒಬ್ಬ ವಿದ್ಯಾರ್ಥಿಯೋಪಾದಿ, ತಾರ್ಸದ ಸೌಲನು ಯೆಹೂದ್ಯಮತದಲ್ಲಿ ಬಹಳ ಪ್ರಮುಖನಾಗಿದ್ದಿರಬಹುದು. ಆದರೂ, ಅಂತಹ ಒಂದು ಜೀವನಗತಿಯ ಕುರಿತಾಗಿ ಪೌಲನು ಬರೆದುದು: “ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತ ಯೇಸುವನ್ನರಿಯುವದೇ, ಅತಿಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.”—ಫಿಲಿಪ್ಪಿ 3:7, 8.
ಒಬ್ಬ ಫರಿಸಾಯನೋಪಾದಿ ತನ್ನ ಜೀವನಗತಿಯನ್ನು ತಿರಸ್ಕರಿಸಿ, ಯೇಸು ಕ್ರಿಸ್ತನ ಒಬ್ಬ ಹಿಂಬಾಲಕನಾಗಿ ಪರಿಣಮಿಸುತ್ತಾ, ಪೌಲನು “ದೇವರ ಮೇಲೆ ಯುದ್ಧಮಾಡುವವರಾಗಿ ಕಾಣಿಸಿ”ಕೊಳ್ಳುವವನಾಗಿರುವುದರ ವಿರುದ್ಧವಾಗಿ ಕಾಪಾಡಿಕೊಳ್ಳಲು, ತನ್ನ ಮಾಜಿ ಶಿಕ್ಷಕನ ಬುದ್ಧಿವಾದದ ಪ್ರಾಯೋಗಿಕ ಅನ್ವಯಿಸುವಿಕೆಯನ್ನು ಮಾಡಿಕೊಳ್ಳುತ್ತಿದ್ದನು. ಯೇಸುವಿನ ಶಿಷ್ಯರ ಮೇಲಿನ ತನ್ನ ಹಿಂಸೆಯನ್ನು ನಿಲ್ಲಿಸಿಬಿಡುವ ಮೂಲಕ, ಪೌಲನು ದೇವರ ವಿರುದ್ಧವಾಗಿ ಯುದ್ಧಮಾಡುವುದನ್ನು ನಿಲ್ಲಿಸಿದನು. ಅದಕ್ಕೆ ಬದಲಾಗಿ, ಕ್ರಿಸ್ತನ ಒಬ್ಬ ಹಿಂಬಾಲಕನಾಗಿ, ಅವನು “ದೇವರ ಜೊತೆಕೆಲಸದವ”ರಲ್ಲಿ ಒಬ್ಬನಾಗಿ ಪರಿಣಮಿಸಿದನು.—1 ಕೊರಿಂಥ 3:9.
ನಮ್ಮ ದಿನದಲ್ಲಿಯೂ ನಿಜ ಕ್ರೈಸ್ತತ್ವದ ಸಂದೇಶವು, ಹುರುಪಿನ ಸಾಕ್ಷಿಗಳಿಂದ ಘೋಷಿಸಲ್ಪಡುತ್ತಾ ಮುಂದುವರಿಯುತ್ತದೆ. ಪೌಲನಂತೆ, ಇವರಲ್ಲಿ ಅನೇಕರು ತಮ್ಮ ಜೀವಿತಗಳಲ್ಲಿ ಪರಿಣಾಮಕರವಾದ ಬದಲಾವಣೆಗಳನ್ನು ಮಾಡಿದ್ದಾರೆ. ನಿಜವಾಗಿಯೂ “ದೇವರಿಂದ” ಬಂದ ಒಂದು ಕೆಲಸವಾದ, ರಾಜ್ಯ ಸಾರುವಿಕೆಯ ಚಟುವಟಿಕೆಯಲ್ಲಿ ಹೆಚ್ಚು ಮಹತ್ತರವಾದ ಪಾಲನ್ನು ಹೊಂದಲಿಕ್ಕಾಗಿ ಕೆಲವರು ಲಾಭಕರವಾದ ಜೀವನಗತಿಗಳನ್ನು ತೊರೆದಿದ್ದಾರೆ. (ಅ. ಕೃತ್ಯಗಳು 5:39) ಪೌಲನ ಮಾಜಿ ಶಿಕ್ಷಕನಾದ ಗಮಲಿಯೇಲನಿಗೆ ಬದಲಾಗಿ, ಪೌಲನ ಮಾದರಿಯನ್ನು ಅವರು ಅನುಸರಿಸಿರುವುದರಿಂದ ಅವರೆಷ್ಟು ಸಂತೋಷಿತರಾಗಿದ್ದಾರೆ.
[ಪಾದಟಿಪ್ಪಣಿ]
a ಗಮಲಿಯೇಲನು ಹಿಲೆಲನ ಮಗನಾಗಿದ್ದನೆಂದು ಕೆಲವು ಮೂಲಗಳು ಹೇಳುತ್ತವೆ. ಈ ವಿಷಯದಲ್ಲಿ ಟ್ಯಾಲ್ಮುಡ್ ಅಸ್ಪಷ್ಟವಾಗಿದೆ.
[ಪುಟ 28 ರಲ್ಲಿರುವ ಚಿತ್ರ]
ಅಪೊಸ್ತಲ ಪೌಲನಾಗಿ, ತಾರ್ಸದ ಸೌಲನು ಎಲ್ಲಾ ಜನಾಂಗಗಳ ಜನರಿಗೆ ಸುವಾರ್ತೆಯನ್ನು ಘೋಷಿಸಿದನು