ಅವಿವಾಹಿತತನ—ಅನಪಕರ್ಷಿತ ಚಟುವಟಿಕೆಗೊಂದು ದ್ವಾರ
“[ಇದು] ಅಪಕರ್ಷಣೆಯಿಲ್ಲದೆ ಕರ್ತನ ಸತತವಾದ ಸೇವೆಯನ್ನು ಅರ್ಥೈಸುತ್ತದೆ.”—1 ಕೊರಿಂಥ 7:35, NW.
1. ಕೊರಿಂಥದಲ್ಲಿದ್ದ ಕ್ರೈಸ್ತರ ಕುರಿತಾಗಿ ಪೌಲನನ್ನು ಕ್ಷೋಭೆಗೊಳಿಸುವಂತಹ ಯಾವ ವರ್ತಮಾನವು ತಲಪಿತು?
ಅಪೊಸ್ತಲ ಪೌಲನು ಗ್ರೀಸ್ನ ಕೊರಿಂಥದಲ್ಲಿದ್ದ ತನ್ನ ಕ್ರೈಸ್ತ ಸಹೋದರರ ಕುರಿತಾಗಿ ಚಿಂತಿತನಾಗಿದ್ದನು. ಸುಮಾರು ಐದು ವರ್ಷಗಳಿಗೆ ಮೊದಲು, ತನ್ನ ಅನೈತಿಕತೆಗಾಗಿ ಕುಪ್ರಸಿದ್ಧವಾದ ಆ ಸಂಪದ್ಭರಿತ ನಗರದಲ್ಲಿ ಅವನು ಆ ಸಭೆಯನ್ನು ಸ್ಥಾಪಿಸಿದ್ದನು. ಈಗ, ಸುಮಾರು ಸಾ.ಶ. 55ರಲ್ಲಿ, ಏಷಿಯಾ ಮೈನರ್ನ ಎಫೆಸದಲ್ಲಿದ್ದಾಗ, ಪಕ್ಷಾವಲಂಬಿ ವಿಭಾಗಗಳು ಮತ್ತು ಅನೈತಿಕತೆಯ ಗಂಭೀರವಾದ ವಿದ್ಯಮಾನವನ್ನು ಸಹಿಸಿಕೊಳ್ಳುತ್ತಿರುವುದರ ಕುರಿತಾಗಿ, ಕೊರಿಂಥದಿಂದ ಕ್ಷೋಭೆಗೊಳಿಸುವಂತಹ ವರದಿಗಳನ್ನು ಅವನು ಪಡೆದುಕೊಂಡನು. ಇದಲ್ಲದೆ, ಪೌಲನು ಕೊರಿಂಥದ ಕ್ರೈಸ್ತರಿಂದ, ಲೈಂಗಿಕ ಸಂಬಂಧಗಳು, ಕುಮಾರವ್ರತ, ವಿವಾಹ, ಪ್ರತ್ಯೇಕವಾಸ, ಮತ್ತು ಪುನರ್ವಿವಾಹದ ಕುರಿತಾದ ಮಾರ್ಗದರ್ಶನೆಗಾಗಿ ಕೇಳಿಕೊಂಡ ಒಂದು ಪತ್ರವನ್ನು ಪಡೆದುಕೊಂಡಿದ್ದನು.
2. ಕೊರಿಂಥದಲ್ಲಿ ಪ್ರಚಲಿತವಾಗಿದ್ದ ಅನೈತಿಕತೆಯು, ಸುವ್ಯಕ್ತವಾಗಿಯೇ ಆ ನಗರದಲ್ಲಿದ್ದ ಕ್ರೈಸ್ತರ ಮೇಲೆ ಹೇಗೆ ಬಾಧಿಸುತ್ತಿತ್ತು?
2 ಕೊರಿಂಥದಲ್ಲಿ ಪ್ರಚಲಿತವಾಗಿದ್ದ ತೀವ್ರವಾದ ಅನೈತಿಕತೆಯು, ಸ್ಥಳಿಕ ಸಭೆಯನ್ನು ಎರಡು ವಿಧಗಳಲ್ಲಿ ಬಾಧಿಸುತ್ತಿರುವಂತೆ ತೋರಿತು. ಕೆಲವು ಕ್ರೈಸ್ತರು ನೈತಿಕ ಅಜಾಗರೂಕತೆಯ ವಾತಾವರಣಕ್ಕೆ ತಮ್ಮನ್ನು ಒಪ್ಪಿಸಿಕೊಡುತ್ತಿದ್ದರು ಹಾಗೂ ಅನೈತಿಕತೆಯನ್ನು ಸಹಿಸಿಕೊಳ್ಳುತ್ತಿದ್ದರು. (1 ಕೊರಿಂಥ 5:1; 6:15-17) ಸುವ್ಯಕ್ತವಾಗಿಯೇ ಇತರರು, ಆ ನಗರದಲ್ಲಿ ಸರ್ವವ್ಯಾಪಿಯಾಗಿದ್ದಂತಹ ಲೈಂಗಿಕ ಸುಖಾನುಭವಗಳ ಇರುವಿಕೆಗೆ ಪ್ರತಿಕ್ರಿಯಿಸುತ್ತಾ, ಎಲ್ಲಾ ಲೈಂಗಿಕ ಸಂಭೋಗದಿಂದ ದೂರವಿರುವುದನ್ನು—ವಿವಾಹಿತ ದಂಪತಿಗಳಿಗೂ—ಶಿಫಾರಸ್ಸು ಮಾಡುವ ವೈಪರೀತ್ಯಕ್ಕೂ ಹೋದರು.—1 ಕೊರಿಂಥ 7:5.
3. ಕೊರಿಂಥದವರಿಗೆ ಬರೆದ ತನ್ನ ಮೊದಲ ಪತ್ರದಲ್ಲಿ ಪೌಲನು ಆರಂಭದಲ್ಲಿ ಯಾವ ವಿಷಯಗಳೊಂದಿಗೆ ವ್ಯವಹರಿಸಿದನು?
3 ಪೌಲನು ಕೊರಿಂಥದವರಿಗೆ ಬರೆದ ದೀರ್ಘವಾದ ಪತ್ರದಲ್ಲಿ, ಅವನು ಮೊದಲಾಗಿ ಅನೈಕ್ಯದ ಸಮಸ್ಯೆಯನ್ನು ಸಂಬೋಧಿಸಿದನು. (1 ಕೊರಿಂಥ, 1-4ನೆಯ ಅಧ್ಯಾಯಗಳು) ಅವರನ್ನು ಹಾನಿಕರವಾದ ಒಡಕುಗಳಿಗೆ ಮಾತ್ರವೇ ಮುನ್ನಡಿಸಸಾಧ್ಯವಿದ್ದ, ಮನುಷ್ಯರನ್ನು ಹಿಂಬಾಲಿಸುವ ಪ್ರವೃತ್ತಿಯನ್ನು ತೊರೆಯುವಂತೆ ಅವನು ಅವರಿಗೆ ಬುದ್ಧಿಹೇಳಿದನು. ಅವರು ದೇವರ “ಜೊತೆ ಕೆಲಸಗಾರ”ರೋಪಾದಿ ಐಕ್ಯರಾಗಿರಬೇಕು. ತದನಂತರ ಅವನು ಅವರಿಗೆ ಸಭೆಯನ್ನು ನೈತಿಕವಾಗಿ ಶುದ್ಧವಾಗಿರಿಸುವುದರ ಕುರಿತಾಗಿ ನಿರ್ದಿಷ್ಟ ಉಪದೇಶಗಳನ್ನು ನೀಡಿದನು. (5, 6ನೆಯ ಅಧ್ಯಾಯಗಳು) ನಂತರ ಅಪೊಸ್ತಲನು ಅವರ ಪತ್ರದೊಂದಿಗೆ ವ್ಯವಹರಿಸಿದನು.
ಅವಿವಾಹಿತತನವು ಶಿಫಾರಸ್ಸು ಮಾಡಲ್ಪಟ್ಟದ್ದು
4. “ಸ್ತ್ರೀಯೊಬ್ಬಳನ್ನು ಸ್ಪರ್ಶಿಸದಿರುವುದು ಒಬ್ಬ ಪುರುಷನಿಗೆ ಒಳ್ಳೆಯದಾಗಿದೆ” ಎಂಬುದಾಗಿ ಪೌಲನು ಹೇಳಿದಾಗ ಅವನು ಏನನ್ನು ಅರ್ಥೈಸಿದನು?
4 ಅವನು ಆರಂಭಿಸಿದ್ದು: “ಈಗ ನೀವು ಬರೆದ ವಿಚಾರಗಳಿಗೆ ಸಂಬಂಧಿಸಿ, ಸ್ತ್ರೀಯೊಬ್ಬಳನ್ನು ಸ್ಪರ್ಶಿಸದಿರುವುದು ಒಬ್ಬ ಪುರುಷನಿಗೆ ಒಳ್ಳೆಯದಾಗಿದೆ.” (1 ಕೊರಿಂಥ 7:1, NW) ಇಲ್ಲಿ “ಸ್ತ್ರೀಯೊಬ್ಬಳನ್ನು ಸ್ಪರ್ಶಿಸದಿರುವುದು” ಎಂಬ ಅಭಿವ್ಯಕ್ತಿಯು, ಲೈಂಗಿಕ ಸುಖಾನುಭವಕ್ಕಾಗಿ ಒಬ್ಬ ಸ್ತ್ರೀಯೊಂದಿಗೆ ಶಾರೀರಿಕ ಸಂಪರ್ಕವನ್ನು ಮಾಡದಿರುವುದನ್ನು ಅರ್ಥೈಸುತ್ತದೆ. ಈಗಾಗಲೇ ಪೌಲನು ಜಾರತ್ವವನ್ನು ಖಂಡಿಸಿದ್ದನಾದುದರಿಂದ, ಈಗ ಅವನು ವಿವಾಹದ ಏರ್ಪಾಡಿನೊಳಗಿನ ಲೈಂಗಿಕ ಸಂಬಂಧಗಳನ್ನು ಸೂಚಿಸುತ್ತಿದ್ದನು. ಆದುದರಿಂದ, ಪೌಲನು ಈಗ ಅವಿವಾಹಿತ ಸ್ಥಿತಿಯನ್ನು ಶಿಫಾರಸ್ಸು ಮಾಡುತ್ತಿದ್ದನು. (1 ಕೊರಿಂಥ 6:9, 16, 18; ಹೋಲಿಸಿರಿ ಆದಿಕಾಂಡ 20:6; ಜ್ಞಾನೋಕ್ತಿ 6:29.) ಅವನು ಇನ್ನೂ ಹೆಚ್ಚಾಗಿ ಬರೆದುದು: “ಮದುವೆಯಿಲ್ಲದವರನ್ನೂ ವಿಧವೆಯರನ್ನೂ ಕುರಿತು ನಾನು ಹೇಳುವದೇನಂದರೆ—ನಾನಿರುವಂತೆಯೇ ಇರುವದು ಅವರಿಗೆ ಒಳ್ಳೇದು.” (1 ಕೊರಿಂಥ 7:8) ಪೌಲನು ಅವಿವಾಹಿತನಾಗಿದ್ದು, ಬಹುಶಃ ಒಬ್ಬ ವಿಧುರನಾಗಿದ್ದನು.—1 ಕೊರಿಂಥ 9:5.
5, 6. (ಎ) ಪೌಲನು ಒಂದು ಸಂನ್ಯಾಸಿ ಜೀವನ ಶೈಲಿಯನ್ನು ಶಿಫಾರಸ್ಸು ಮಾಡುತ್ತಿರಲಿಲ್ಲ ಎಂಬುದು ಏಕೆ ಸ್ಪಷ್ಟವಾಗಿದೆ? (ಬಿ) ಪೌಲನು ಅವಿವಾಹಿತತನವನ್ನು ಏಕೆ ಶಿಫಾರಸ್ಸು ಮಾಡಿದನು?
5 ಕೊರಿಂಥದಲ್ಲಿದ್ದ ಕ್ರೈಸ್ತರು, ಗ್ರೀಕ್ ತತ್ವಜ್ಞಾನದ ಸಂಪರ್ಕವನ್ನು ಮಾಡಿದ್ದಿರುವುದು ಸಂಭವನೀಯ; ಇದರಲ್ಲಿನ ಕೆಲವು ಪಂಥಗಳು ವಿಪರೀತ ಸಂನ್ಯಾಸವನ್ನು, ಅಥವಾ ಸ್ವತ್ಯಾಗವನ್ನು ಕೊಂಡಾಡಿದವು. ಕೊರಿಂಥದವರು, ಎಲ್ಲಾ ಲೈಂಗಿಕ ಸಂಭೋಗವನ್ನು ತೊರೆಯುವುದು ಕ್ರೈಸ್ತರಿಗೆ “ಒಳ್ಳೇದಾ”ಗಿರುತ್ತದೋ? ಎಂದು ಆ ಕಾರಣದಿಂದಲೇ ಪೌಲನನ್ನು ಕೇಳಿದ್ದಿರಬಹುದು. ಪೌಲನ ಉತ್ತರವು ಗ್ರೀಕ್ ತತ್ವಜ್ಞಾನವನ್ನು ಪ್ರತಿಫಲಿಸಲಿಲ್ಲ. (ಕೊಲೊಸ್ಸೆ 2:8) ಕ್ಯಾಥೊಲಿಕ್ ದೇವತಾಶಾಸ್ತ್ರಜ್ಞರಿಗೆ ಅಸದೃಶವಾಗಿ, ಅವಿವಾಹಿತ ವ್ಯಕ್ತಿಗಳು ವಿಶೇಷವಾಗಿ ಪರಿಶುದ್ಧರಾಗಿದ್ದು, ತಮ್ಮ ಜೀವನ ಶೈಲಿ ಮತ್ತು ಪ್ರಾರ್ಥನೆಗಳ ಮೂಲಕವಾಗಿ ಅವರು ತಮ್ಮದೇ ರಕ್ಷಣೆಗೆ ನೆರವನ್ನು ನೀಡುತ್ತಾರೋ ಎಂಬಂತೆ, ಒಂದು ಸಂನ್ಯಾಸಿ ಮಠದಲ್ಲಿ ಅಥವಾ ಸಂನ್ಯಾಸಿನಿಯರ ಆಶ್ರಮದಲ್ಲಿ ಒಂದು ಕುಮಾರವ್ರತ ಸಂನ್ಯಾಸಿ ಜೀವನವನ್ನು ನಡಿಸುವುದನ್ನು ಅವನು ತನ್ನ ಯಾವುದೇ ಬರಹಗಳಲ್ಲಿ ಶಿಫಾರಸ್ಸು ಮಾಡಿರಲಿಲ್ಲ.
6 “ಈಗಿನ ಕಷ್ಟಕಾಲದ ನಿಮಿತ್ತ”ವಾಗಿ ಪೌಲನು ಅವಿವಾಹಿತತನವನ್ನು ಶಿಫಾರಸ್ಸು ಮಾಡಿದನು. (1 ಕೊರಿಂಥ 7:26) ವಿವಾಹದಿಂದ ಜಟಿಲಗೊಳಿಸಲ್ಪಡಸಾಧ್ಯವಿದ್ದ, ಕ್ರೈಸ್ತರು ಅನುಭವಿಸುತ್ತಿದ್ದ ಕಷ್ಟಕರವಾದ ಸಮಯಗಳಿಗೆ ಅವನು ಸೂಚಿಸುತ್ತಿದ್ದಿರಬಹುದು. (1 ಕೊರಿಂಥ 7:28) ಅವಿವಾಹಿತ ಕ್ರೈಸ್ತರಿಗೆ ಅವನು ಕೊಟ್ಟ ಸಲಹೆಯು ಹೀಗಿತ್ತು: “ನಾನಿರುವಂತೆಯೇ ಇರುವದು ಅವರಿಗೆ ಒಳ್ಳೇದು.” ವಿಧುರರಿಗೆ ಅವನು ಹೇಳಿದ್ದು: “ನೀನು ಒಬ್ಬ ಹೆಂಡತಿಯಿಂದ ಮುಕ್ತನಾಗಿದ್ದೀಯೋ? ಒಬ್ಬ ಹೆಂಡತಿಯನ್ನು ಹುಡುಕುವುದನ್ನು ನಿಲ್ಲಿಸು” (NW). ಒಬ್ಬ ಕ್ರೈಸ್ತ ವಿಧವೆಯ ಕುರಿತಾಗಿ ಅವನು ಬರೆದುದು: “ಮದುವೆಮಾಡಿಕೊಳ್ಳುವದಕ್ಕಿಂತಲೂ ಇದ್ದ ಹಾಗೆಯೇ ಇರುವದು ಆಕೆಗೆ ಸುಖವೆಂದು ನನ್ನ ಅಭಿಪ್ರಾಯ; ನನಗೂ ದೇವರ ಆತ್ಮವುಂಟೆಂದು ನೆನಸುತ್ತೇನೆ.”—1 ಕೊರಿಂಥ 7:8, 27, 40.
ಅವಿವಾಹಿತರಾಗಿ ಉಳಿಯುವ ನಿರ್ಬಂಧವಿಲ್ಲ
7, 8. ಪೌಲನು ಯಾವನೇ ಕ್ರೈಸ್ತನಿಗೆ ಅವಿವಾಹಿತನಾಗಿ ಉಳಿಯುವಂತೆ ಒತ್ತಾಯ ಮಾಡುತ್ತಿರಲಿಲ್ಲವೆಂಬುದನ್ನು ಯಾವುದು ತೋರಿಸುತ್ತದೆ?
7 ಪೌಲನು ಈ ಸಲಹೆಯನ್ನು ಕೊಟ್ಟಾಗ, ನಿಸ್ಸಂದೇಹವಾಗಿಯೂ ಯೆಹೋವನ ಪವಿತ್ರಾತ್ಮವು ಅವನನ್ನು ಮಾರ್ಗದರ್ಶಿಸುತ್ತಿತ್ತು. ಕುಮಾರವ್ರತ ಹಾಗೂ ವಿವಾಹದ ಕುರಿತಾದ ಅವನ ಇಡೀ ನಿರೂಪಣೆಯು, ಸಮತೂಕತೆ ಹಾಗೂ ನಿಗ್ರಹವನ್ನು ತೋರಿಸುತ್ತದೆ. ಅವನು ಅದನ್ನು ನಂಬಿಗಸ್ತಿಕೆ ಅಥವಾ ಅಪನಂಬಿಗಸ್ತಿಕೆಯ ವಿಷಯವಾಗಿ ಮಾಡುವುದಿಲ್ಲ. ಬದಲಾಗಿ, ಆ ಸ್ಥಿತಿಯಲ್ಲಿ ಪರಿಶುದ್ಧರಾಗಿ ಉಳಿಯಲು ಶಕ್ತರಾಗಿರುವವರಿಗಾಗಿ ಅವಿವಾಹಿತತನವನ್ನು ಶಿಫಾರಸ್ಸು ಮಾಡುವುದರೊಂದಿಗೆ, ಇದು ಸ್ವತಂತ್ರ ಆಯ್ಕೆಯ ಒಂದು ಪ್ರಶ್ನೆಯಾಗಿದೆ.
8 “ಸ್ತ್ರೀಯೊಬ್ಬಳನ್ನು ಸ್ಪರ್ಶಿಸದಿರುವುದು ಒಬ್ಬ ಪುರುಷನಿಗೆ ಒಳ್ಳೆಯದಾಗಿದೆ” ಎಂದು ಹೇಳಿದ ಕೂಡಲೆ ಪೌಲನು ಕೂಡಿಸಿದ್ದು: “ಆದರೆ ಜಾರತ್ವವು ಪ್ರಬಲವಾಗಿರುವದರಿಂದ ಪ್ರತಿಯೊಬ್ಬನಿಗೆ ಸ್ವಂತ ಹೆಂಡತಿಯು ಇರಲಿ, ಪ್ರತಿಯೊಬ್ಬಳಿಗೆ ಸ್ವಂತ ಗಂಡನು ಇರಲಿ.” (1 ಕೊರಿಂಥ 7:1, 2) ಅವಿವಾಹಿತ ವ್ಯಕ್ತಿಗಳಿಗೆ ಹಾಗೂ ವಿಧವೆಯರಿಗೆ “ನಾನಿರುವಂತೆಯೇ ಇರು”ವಂತೆ ಬುದ್ಧಿ ಹೇಳಿದ ಬಳಿಕ, ಅವನು ಹೀಗೆ ಕೂಡಿಸಲು ತ್ವರೆಪಟ್ಟನು: “ಅವರು ದಮೆಯಿಲ್ಲದವರಾದರೆ ಮದುವೆಮಾಡಿಕೊಳ್ಳಲಿ; ಕಾಮತಾಪಪಡುವದಕ್ಕಿಂತ ಮದುವೆಮಾಡಿಕೊಳ್ಳುವದು ಉತ್ತಮವಷ್ಟೆ.” (1 ಕೊರಿಂಥ 7:8, 9) ಪುನಃ, ಅವನು ವಿಧುರರಿಗೆ ಕೊಟ್ಟ ಸಲಹೆಯು ಹೀಗಿತ್ತು: “ಒಬ್ಬ ಹೆಂಡತಿಯನ್ನು ಹುಡುಕುವುದನ್ನು ನಿಲ್ಲಿಸು. ಆದರೆ ಒಂದು ವೇಳೆ ನೀನು ಮದುವೆಮಾಡಿಕೊಂಡರೂ, ನೀನು ಪಾಪಮಾಡುವುದಿಲ್ಲ.” (1 ಕೊರಿಂಥ 7:27, 28, NW) ಈ ಸಮತೂಕದ ಸಲಹೆಯು ಆಯ್ಕೆಯ ಸ್ವಾತಂತ್ರ್ಯವನ್ನು ಪ್ರತಿಬಿಂಬಿಸುತ್ತದೆ.
9. ಯೇಸು ಮತ್ತು ಪೌಲರಿಗನುಸಾರ, ಹೇಗೆ ವಿವಾಹ ಮತ್ತು ಅವಿವಾಹಿತತನ—ಎರಡೂ ದೇವರಿಂದ ಬಂದ ವರಗಳಾಗಿವೆ?
9 ವಿವಾಹ ಮತ್ತು ಅವಿವಾಹಿತತನ—ಎರಡೂ ದೇವರಿಂದ ಬಂದ ವರಗಳಾಗಿವೆಯೆಂಬುದನ್ನು ಪೌಲನು ತೋರಿಸಿದನು. “ನಾನಿರುವಂತೆಯೇ ಎಲ್ಲಾ ಮನುಷ್ಯರು ಇರಬೇಕೆಂಬದು ನನ್ನ ಇಷ್ಟ; ಆದರೆ ಒಬ್ಬನು ಒಂದು ವಿಧವಾಗಿ ಮತ್ತೊಬ್ಬನು ಇನ್ನೊಂದು ವಿಧವಾಗಿ ದೇವರಿಂದ ವರವನ್ನು ಹೊಂದಿಕೊಂಡಿದ್ದಾರೆ.” (1 ಕೊರಿಂಥ 7:7) ನಿಸ್ಸಂದೇಹವಾಗಿಯೂ ಯೇಸು ಹೇಳಿದಂತಹ ವಿಷಯವು ಅವನ ಮನಸ್ಸಿನಲ್ಲಿತ್ತು. ವಿವಾಹವು ದೇವರಿಂದ ಬಂತೆಂಬುದನ್ನು ಸ್ಥಿರಪಡಿಸಿದ ನಂತರ, ರಾಜ್ಯಾಭಿರುಚಿಗಳನ್ನು ಕಾರ್ಯಗತಗೊಳಿಸಲಿಕ್ಕಾಗಿರುವ ಮನಃಪೂರ್ವಕವಾದ ಅವಿವಾಹಿತತನವು ಒಂದು ವಿಶೇಷವಾದ ವರವಾಗಿದೆಯೆಂಬುದನ್ನು ಯೇಸು ತೋರಿಸಿಕೊಟ್ಟನು: “ಈ ಹೇಳಿಕೆಗಾಗಿ ಎಲ್ಲಾ ಮನುಷ್ಯರೂ ಅವಕಾಶ ಮಾಡಿಕೊಳ್ಳುವುದಿಲ್ಲ, ಬದಲಾಗಿ ಆ ವರವನ್ನು ಪಡೆದಿರುವವರು ಮಾತ್ರ ಅವಕಾಶ ಮಾಡಿಕೊಳ್ಳುತ್ತಾರೆ. ಏಕೆಂದರೆ ತಮ್ಮ ತಾಯಿಯ ಗರ್ಭದಿಂದ ನಪುಂಸಕರಾಗಿ ಹುಟ್ಟಿದವರು ಇದ್ದಾರೆ, ಮತ್ತು ಮನುಷ್ಯರಿಂದ ನಪುಂಸಕರಾಗಿ ಮಾಡಲ್ಪಟ್ಟ ನಪುಂಸಕರಿದ್ದಾರೆ, ಮತ್ತು ಪರಲೋಕರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡ ನಪುಂಸಕರಿದ್ದಾರೆ. ಅದಕ್ಕಾಗಿ ಅವಕಾಶ ಮಾಡಿಕೊಳ್ಳಸಾಧ್ಯವಿರುವವನು, ಅದಕ್ಕಾಗಿ ಅವಕಾಶ ಮಾಡಿಕೊಳ್ಳಲಿ.” (NW)—ಮತ್ತಾಯ 19:4-6, 11, 12.
ಅವಿವಾಹಿತತನದ ವರಕ್ಕಾಗಿ ಅವಕಾಶ ಮಾಡಿಕೊಳ್ಳುವುದು
10. ವ್ಯಕ್ತಿಯೊಬ್ಬನು ಅವಿವಾಹಿತತನದ ವರಕ್ಕಾಗಿ ಹೇಗೆ “ಅವಕಾಶ ಮಾಡಿ”ಕೊಳ್ಳಬಲ್ಲನು?
10 ಯೇಸು ಮತ್ತು ಪೌಲರಿಬ್ಬರೂ ಅವಿವಾಹಿತತನದ ಕುರಿತಾಗಿ ಒಂದು “ವರ”ದೋಪಾದಿ ಮಾತಾಡಿರುವಾಗ, ಅದು ಕೇವಲ ಸ್ವಲ್ಪವೇ ಜನರಿಗಿರುವ ಒಂದು ಅದ್ಭುತಕರವಾದ ವರವಾಗಿದೆಯೆಂದು ಹೇಳಲಿಲ್ಲ. ಆ ವರಕ್ಕಾಗಿ “ಎಲ್ಲಾ ಮನುಷ್ಯರೂ ಅವಕಾಶ ಮಾಡಿಕೊಳ್ಳುವುದಿಲ್ಲ” ಎಂಬುದಾಗಿ ಯೇಸು ಹೇಳಿದನು, ಮತ್ತು ಹಾಗೆ ಮಾಡಲು ಸಾಧ್ಯವಿರುವವರನ್ನು “ಅದಕ್ಕಾಗಿ ಅವಕಾಶ ಮಾಡಿ”ಕೊಳ್ಳುವಂತೆ ಪ್ರೋತ್ಸಾಹಿಸಿದನು; ಇದನ್ನು ಯೇಸು ಮತ್ತು ಪೌಲರು ಮಾಡಿದರು. ನಿಜ, ಪೌಲನು ಬರೆದುದು: “ಕಾಮತಾಪಪಡುವದಕ್ಕಿಂತ ಮದುವೆಮಾಡಿಕೊಳ್ಳುವದು ಉತ್ತಮ,” ಆದರೂ, ಅವನು “ದಮೆಯಿಲ್ಲದವರ” ಕುರಿತಾಗಿ ಮಾತಾಡುತ್ತಿದ್ದನು. (1 ಕೊರಿಂಥ 7:9) ಆರಂಭದ ಬರಹಗಳಲ್ಲಿ ಪೌಲನು, ಕ್ರೈಸ್ತರು ಕಾಮತಾಪಪಡುವುದನ್ನು ತಡೆಯಸಾಧ್ಯವಿದೆಯೆಂಬುದನ್ನು ತೋರಿಸಿದನು. (ಗಲಾತ್ಯ 5:16; 22-24) ಆತ್ಮಕ್ಕನುಸಾರ ನಡೆಯುವುದು, ನಮ್ಮ ಪ್ರತಿಯೊಂದು ಹೆಜ್ಜೆಯನ್ನು ಯೆಹೋವನ ಆತ್ಮವು ಮಾರ್ಗದರ್ಶಿಸುವಂತೆ ಬಿಡುವುದನ್ನು ಅರ್ಥೈಸುತ್ತದೆ. ಯುವ ಕ್ರೈಸ್ತರು ಇದನ್ನು ಮಾಡಬಲ್ಲರೋ? ಹೌದು, ಅವರು ಯೆಹೋವನ ವಾಕ್ಯವನ್ನು ನಿಕಟವಾಗಿ ಅನುಸರಿಸುವುದಾದರೆ ಇದನ್ನು ಮಾಡಬಲ್ಲರು. ಕೀರ್ತನೆಗಾರನು ಬರೆದುದು: “ಯೌವನಸ್ಥನು [ಅಥವಾ ಯುವತಿಯು] ತನ್ನ [ಅಥವಾ ಅವಳ] ನಡತೆಯನ್ನು ಶುದ್ಧಪಡಿಸಿಕೊಳ್ಳುವದು ಯಾವದರಿಂದ? ನಿನ್ನ ವಾಕ್ಯವನ್ನು ಗಮನಿಸಿ ನಡೆಯುವದರಿಂದಲೇ.”—ಕೀರ್ತನೆ 119:9.
11. ‘ಆತ್ಮಕ್ಕೆ ಅನುಸಾರವಾಗಿ ನಡೆಯು’ವುದು ಏನನ್ನು ಅರ್ಥೈಸುತ್ತದೆ?
11 ಅನೇಕ ಟಿವಿ ಕಾರ್ಯಕ್ರಮಗಳು, ಚಲನ ಚಿತ್ರಗಳು, ಪತ್ರಿಕೆಯ ಲೇಖನಗಳು, ಪುಸ್ತಕಗಳು, ಮತ್ತು ಗೀತ ಲಹರಿಗಳ ಮಾಧ್ಯಮಗಳಿಂದ ಶಿಥಿಲಗೊಂಡ ಸ್ವೇಚ್ಛಾಚಾರದ ಕಲ್ಪನೆಗಳ ವಿರುದ್ಧವಾಗಿ ಕಾಪಾಡಿಕೊಳ್ಳುವುದನ್ನು ಇದು ಒಳಗೊಳ್ಳುತ್ತದೆ. ಅಂತಹ ಕಲ್ಪನೆಗಳು ಶರೀರಾಭಿಮುಖವಾದವುಗಳಾಗಿವೆ. ಅವಿವಾಹಿತತನಕ್ಕಾಗಿ ಅವಕಾಶವನ್ನು ಮಾಡಿಕೊಳ್ಳಲು ಬಯಸುವ, ಯಾವುದೇ ಲಿಂಗಜಾತಿಯ ಯುವ ಕ್ರೈಸ್ತನೊಬ್ಬನು, “ಶರೀರಭಾವಕ್ಕೆ ಅನುಸಾರವಾಗಿ ಅಲ್ಲ, ಬದಲಾಗಿ ಆತ್ಮಕ್ಕೆ ಅನುಸಾರವಾಗಿ ನಡೆಯಬೇಕು. ಏಕೆಂದರೆ ಶರೀರಭಾವಕ್ಕೆ ಅನುಗುಣವಾಗಿ ನಡೆಯುವವರು ಶರೀರಭಾವದ ವಿಷಯಗಳ ಮೇಲೆ ತಮ್ಮ ಮನಸ್ಸುಗಳನ್ನಿಡುತ್ತಾರೆ, ಆದರೆ ಆತ್ಮಕ್ಕೆ ಅನುಗುಣವಾಗಿ ನಡೆಯುವವರು ಆತ್ಮದ ವಿಷಯಗಳ ಮೇಲೆ [ತಮ್ಮ ಮನಸ್ಸುಗಳನ್ನಿಡುತ್ತಾರೆ].” (ರೋಮಾಪುರ 8:4, 5, NW) ಆತ್ಮದ ವಿಷಯಗಳು ನೀತಿಶೀಲವೂ, ಪರಿಶುದ್ಧವೂ, ಪ್ರೀತಿಪೂರ್ಣವೂ, ಸದ್ಗುಣಶೀಲವೂ ಆದವುಗಳಾಗಿವೆ. “ಈ ವಿಷಯಗಳನ್ನು ಪರಿಗಣಿಸುತ್ತಾ ಮುಂದುವರಿಯ”ಲಿಕ್ಕಾಗಿ ಕ್ರೈಸ್ತರು—ಎಳೆಯರು ಹಾಗೂ ವೃದ್ಧರು—ಒಳ್ಳೆಯದನ್ನು ಮಾಡುತ್ತಾರೆ.—ಫಿಲಿಪ್ಪಿ 4:8, 9.
12. ಅವಿವಾಹಿತತನದ ವರಕ್ಕಾಗಿ ಅವಕಾಶವನ್ನು ಮಾಡಿಕೊಳ್ಳುವುದರಲ್ಲಿ ಬಹುತೇಕವಾಗಿ ಯಾವುದು ಒಳಗೂಡಿದೆ?
12 ಅವಿವಾಹಿತತನದ ವರಕ್ಕಾಗಿ ಅವಕಾಶ ಮಾಡಿಕೊಳ್ಳುವುದು, ಬಹುತೇಕವಾಗಿ ಆ ಗುರಿಯ ಮೇಲೆ ಒಬ್ಬನ ಹೃದಯವನ್ನು ಇರಿಸುವುದು ಮತ್ತು ಅದನ್ನು ಬೆನ್ನಟ್ಟುವುದರಲ್ಲಿ ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸುವುದರ ವಿಷಯವಾಗಿದೆ. (ಫಿಲಿಪ್ಪಿ 4:6, 7) ಪೌಲನು ಬರೆದುದು: “ಯಾವನಾದರೂ ಆವಶ್ಯಕತೆಯಿಲ್ಲದವನಾಗಿರುವುದರಿಂದ ತನ್ನ ಹೃದಯದಲ್ಲಿ ನಿರ್ಧರಿಸಿರುವಲ್ಲಿ, ಆದರೆ ತನ್ನ ಸ್ವಂತ ಸಂಕಲ್ಪದ ಮೇಲೆ ಅಧಿಕಾರವಿದ್ದು, ತನ್ನ ಸ್ವಂತ ಅವಿವಾಹಿತ ಸ್ಥಿತಿಯನ್ನು ಕಾಪಾಡಿಕೊಳ್ಳಲು ತನ್ನ ಸ್ವಂತ ಹೃದಯದಲ್ಲಿ ತೀರ್ಮಾನಿಸಿರುವುದಾದರೆ, ಅವನು ಒಳ್ಳೆಯದನ್ನು ಮಾಡುವನು. ಆದಕಾರಣ ತನ್ನ ಅವಿವಾಹಿತ ಸ್ಥಿತಿಯನ್ನು ವಿವಾಹದಲ್ಲಿ ಕೊಡುವವನು ಸಹ ಒಳ್ಳೆಯದನ್ನು ಮಾಡುತ್ತಾನೆ, ಆದರೆ ಅದನ್ನು ವಿವಾಹದಲ್ಲಿ ಕೊಡದೆ ಇರುವವನು ಹೆಚ್ಚು ಉತ್ತಮವಾದುದನ್ನು ಮಾಡುವನು.”—1 ಕೊರಿಂಥ 7:37, 38, NW.
ಒಂದು ಉದ್ದೇಶದೊಂದಿಗೆ ಅವಿವಾಹಿತತನ
13, 14. (ಎ) ಅಪೊಸ್ತಲ ಪೌಲನು ಅವಿವಾಹಿತ ಹಾಗೂ ವಿವಾಹಿತ ಕ್ರೈಸ್ತರ ನಡುವೆ ಯಾವ ಹೋಲಿಕೆಯನ್ನು ಮಾಡಿದನು? (ಬಿ) ವಿವಾಹಿತರಾಗಿರುವವರಿಗಿಂತಲೂ ಒಬ್ಬ ಅವಿವಾಹಿತ ಕ್ರೈಸ್ತನು ಮಾತ್ರವೇ ‘ಹೆಚ್ಚು ಉತ್ತಮವಾದುದನ್ನು’ ಹೇಗೆ ‘ಮಾಡ’ಸಾಧ್ಯವಿದೆ?
13 ಅವಿವಾಹಿತತನವು ತನ್ನಲ್ಲಿಯೇ ಒಂದು ಸದುದ್ದೇಶವುಳ್ಳದ್ದಾಗಿರುವುದಿಲ್ಲ. ಹಾಗಾದರೆ ಯಾವ ಅರ್ಥದಲ್ಲಿ ಅದು “ಹೆಚ್ಚು ಉತ್ತಮವಾದು”ದಾಗಿರಸಾಧ್ಯವಿದೆ? ನಿಜವಾಗಿಯೂ ಅದು ತರುವ ಸ್ವಾತಂತ್ರ್ಯವನ್ನು ವ್ಯಕ್ತಿಯೊಬ್ಬನು ಹೇಗೆ ಉಪಯೋಗಿಸುತ್ತಾನೆ ಎಂಬುದರ ಮೇಲೆ ಇದು ಆಧಾರಿತವಾಗಿದೆ. ಪೌಲನು ಬರೆದುದು: “ವಾಸ್ತವವಾಗಿ, ನೀವು ಕಳವಳದಿಂದ ಮುಕ್ತರಾಗಬೇಕೆಂದು ನಾನು ಬಯಸುತ್ತೇನೆ. ಅವಿವಾಹಿತ ಪುರುಷನು, ತಾನು ಕರ್ತನ ಒಪ್ಪಿಗೆಯನ್ನು ಹೇಗೆ ಸಂಪಾದಿಸಬಹುದೆಂದು ಕರ್ತನ ವಿಷಯಗಳಿಗಾಗಿ ತವಕಪಡುತ್ತಾನೆ. ಆದರೆ ವಿವಾಹಿತ ಪುರುಷನು, ತನ್ನ ಪತ್ನಿಯ ಒಪ್ಪಿಗೆಯನ್ನು ಹೇಗೆ ಸಂಪಾದಿಸಬಹುದೆಂದು ಲೋಕದ ವಿಷಯಗಳಿಗಾಗಿ ತವಕಪಡುತ್ತಾನೆ, ಮತ್ತು ಅವನು ವಿಭಾಗಿತನಾಗಿದ್ದಾನೆ. ಅಲ್ಲದೆ, ಅವಿವಾಹಿತ ಸ್ತ್ರೀ ಮತ್ತು ಕನ್ಯೆಯು, ತನ್ನ ಶರೀರದಲ್ಲಿ ಮತ್ತು ಆತ್ಮದಲ್ಲಿ ಪವಿತ್ರಳಾಗಿರಬಹುದೆಂದು ಕರ್ತನ ವಿಷಯಗಳಿಗಾಗಿ ತವಕಪಡುತ್ತಾಳೆ. ಆದರೂ, ವಿವಾಹಿತ ಸ್ತ್ರೀಯು, ತನ್ನ ಪತಿಯ ಒಪ್ಪಿಗೆಯನ್ನು ಹೇಗೆ ಸಂಪಾದಿಸಬಹುದೆಂದು, ಲೋಕದ ವಿಷಯಗಳಿಗಾಗಿ ತವಕಪಡುತ್ತಾಳೆ. ಆದರೆ ನಾನು ಇದನ್ನು ಹೇಳುತ್ತಿರುವುದು ನಿಮ್ಮ ವೈಯಕ್ತಿಕ ಪ್ರಯೋಜನಕ್ಕಾಗಿ, ನಿಮ್ಮ ಮೇಲೆ ಉರುಲು ಹಾಕಲಿಕ್ಕಾಗಿ ಅಲ್ಲ; ಬದಲಾಗಿ, ಯಾವುದು ಯೋಗ್ಯವಾಗಿರುತ್ತದೋ ಮತ್ತು ಯಾವುದರ ಅರ್ಥವು ಅಪಕರ್ಷಣೆಯಿಲ್ಲದೆ ಕರ್ತನ ಸತತವಾದ ಸೇವೆಯಾಗಿರುತ್ತದೋ ಅದಕ್ಕೆ ನಿಮ್ಮನ್ನು ಪ್ರೇರೇಪಿಸಲಿಕ್ಕಾಗಿಯೇ.”—1 ಕೊರಿಂಥ 7:32-35, NW.
14 ಸ್ವಾರ್ಥ ಗುರಿಗಳನ್ನು ಬೆನ್ನಟ್ಟಲಿಕ್ಕಾಗಿ ತನ್ನ ಅವಿವಾಹಿತ ಸ್ಥಿತಿಯನ್ನು ಉಪಯೋಗಿಸುವ ಅವಿವಾಹಿತ ಕ್ರೈಸ್ತನೊಬ್ಬನು, ವಿವಾಹಿತ ಕ್ರೈಸ್ತರಿಗಿಂತ “ಹೆಚ್ಚು ಒಳ್ಳೆಯ”ದನ್ನು ಮಾಡುವುದಿಲ್ಲ. ಅವನು ಅವಿವಾಹಿತನಾಗಿ ಉಳಿದಿರುವುದು “ರಾಜ್ಯದ ನಿಮಿತ್ತವಾಗಿ” ಅಲ್ಲ, ಬದಲಾಗಿ ವೈಯಕ್ತಿಕ ಕಾರಣಗಳಿಗಾಗಿಯೇ. (ಮತ್ತಾಯ 19:12) ಅವಿವಾಹಿತ ಪುರುಷನಾಗಲಿ ಸ್ತ್ರೀಯಾಗಲಿ “ಕರ್ತನ ವಿಷಯಗಳಿಗಾಗಿ ತವಕಪಡು”ವವರೂ, “ಕರ್ತನ ಒಪ್ಪಿಗೆಯನ್ನು . . . ಸಂಪಾದಿಸ”ಲು ತವಕಪಡುವವರೂ, “ಅಪಕರ್ಷಣೆಯಿಲ್ಲದೆ ಕರ್ತನ ಸತತವಾದ ಸೇವೆ”ಯಲ್ಲಿರುವವರೂ ಆಗಿರಬೇಕು. ಯೆಹೋವನ ಹಾಗೂ ಕ್ರಿಸ್ತ ಯೇಸುವಿನ ಸೇವೆಮಾಡಲಿಕ್ಕಾಗಿ ಅವಿಭಾಗಿತ ಗಮನವನ್ನು ಮೀಸಲಾಗಿಡುವುದು ಇದರ ಅರ್ಥವಾಗಿದೆ. ಹಾಗೆ ಮಾಡುವುದರ ಮೂಲಕವಾಗಿ ಮಾತ್ರವೇ, ವಿವಾಹಿತ ಕ್ರೈಸ್ತರಿಗಿಂತ ಅವಿವಾಹಿತ ಕ್ರೈಸ್ತ ಪುರುಷರೂ ಸ್ತ್ರೀಯರೂ “ಹೆಚ್ಚು ಒಳ್ಳೆಯ”ದನ್ನು ಮಾಡುತ್ತಿದ್ದಾರೆ.
ಅನಪಕರ್ಷಿತ ಚಟುವಟಿಕೆ
15. 1 ಕೊರಿಂಥ 7ನೆಯ ಅಧ್ಯಾಯದಲ್ಲಿನ ಪೌಲನ ವಾಗ್ವಾದದ ಪ್ರಾಮುಖ್ಯವಾದ ವೈಶಿಷ್ಟ್ಯವು ಏನಾಗಿದೆ?
15 ಈ ಅಧ್ಯಾಯದಲ್ಲಿನ ಪೌಲನ ಸಂಪೂರ್ಣ ವಾಗ್ವಾದವು ಇದಾಗಿದೆ: ವಿವಾಹವು ನ್ಯಾಯಸಮ್ಮತವಾಗಿರುವಾಗ ಮತ್ತು, ನಿರ್ದಿಷ್ಟ ಪರಿಸ್ಥಿತಿಗಳ ಕೆಳಗೆ, ಕೆಲವರಿಗಾಗಿ ಸೂಕ್ತವಾದದ್ದಾಗಿರುವಾಗ, ಅತ್ಯಲ್ಪ ಅಪಕರ್ಷಣೆಯಿಂದ ಯೆಹೋವನ ಸೇವೆಮಾಡಲು ಬಯಸುವ ಕ್ರೈಸ್ತ ಪುರುಷನಿಗಾಗಿ ಮತ್ತು ಸ್ತ್ರೀಗಾಗಿ ಅವಿವಾಹಿತತನವು ನಿರ್ವಿವಾದವಾಗಿ ಪ್ರಯೋಜನಕರವಾದದ್ದಾಗಿದೆ. ವಿವಾಹಿತ ವ್ಯಕ್ತಿಯು “ವಿಭಾಗಿತ”ನಾಗಿರುವಾಗ, ಅವಿವಾಹಿತ ಕ್ರೈಸ್ತನು “ಕರ್ತನ ವಿಷಯ”ಗಳ ಕುರಿತಾಗಿ ಗಮನವನ್ನು ಕೇಂದ್ರೀಕರಿಸಲು ಸ್ವತಂತ್ರನಾಗಿದ್ದಾನೆ.
16, 17. ಅವಿವಾಹಿತ ಕ್ರೈಸ್ತನೊಬ್ಬನು ಹೇಗೆ “ಕರ್ತನ ವಿಷಯಗಳ” ಕುರಿತು ಹೆಚ್ಚು ಉತ್ತಮವಾಗಿ ಗಮನವನ್ನು ಕೇಂದ್ರೀಕರಿಸಬಲ್ಲನು?
16 ವಿವಾಹಿತರಾಗಿರುವ ಜನರಿಗಿಂತಲೂ ಅವಿವಾಹಿತ ಕ್ರೈಸ್ತನು ಹೆಚ್ಚು ಸ್ವತಂತ್ರವಾಗಿ ಗಮನವನ್ನು ಕೊಡಸಾಧ್ಯವಿರುವ ಕರ್ತನ ವಿಷಯಗಳು ಯಾವುವು? ಇನ್ನೊಂದು ಸಂದರ್ಭದಲ್ಲಿ, ಯೇಸು “ದೇವರ ವಿಷಯಗಳ”—ಕ್ರೈಸ್ತನೊಬ್ಬನು ಕೈಸರನಿಗೆ ಕೊಡಸಾಧ್ಯವಿರದ ವಿಷಯಗಳು—ಕುರಿತಾಗಿ ಮಾತಾಡಿದನು. (ಮತ್ತಾಯ 22:21, NW) ಈ ವಿಷಯಗಳು ಅತ್ಯಗತ್ಯವಾಗಿ ಕ್ರೈಸ್ತನೊಬ್ಬನ ಜೀವನ, ಆರಾಧನೆ, ಮತ್ತು ಶುಶ್ರೂಷೆಗೆ ಸಂಬಂಧಿಸುತ್ತವೆ.—ಮತ್ತಾಯ 4:10; ರೋಮಾಪುರ 14:8; 2 ಕೊರಿಂಥ 2:17; 3:5, 6; 4:1.
17 ಸಾಮಾನ್ಯವಾಗಿ ಅವಿವಾಹಿತ ವ್ಯಕ್ತಿಗಳು, ತಮ್ಮ ಆತ್ಮಿಕತೆಗೆ ಹಾಗೂ ತಮ್ಮ ಶುಶ್ರೂಷೆಯ ವ್ಯಾಪ್ತಿಗೆ ಪ್ರಯೋಜನವನ್ನು ತರಸಾಧ್ಯವಿರುವ ಯೆಹೋವನ ಸೇವೆಯಲ್ಲಿ ಸಮಯವನ್ನು ಮೀಸಲಾಗಿಡಲು ಹೆಚ್ಚು ಸ್ವತಂತ್ರರಾಗಿದ್ದಾರೆ. ಅವರು ವೈಯಕ್ತಿಕ ಅಭ್ಯಾಸ ಹಾಗೂ ಮನನಮಾಡುವಿಕೆಯಲ್ಲಿ ಹೆಚ್ಚು ಸಮಯವನ್ನು ವ್ಯಯಿಸಬಲ್ಲರು. ವಿವಾಹಿತರಾಗಿರುವವರು ಸರಿಹೊಂದಿಸಿಕೊಳ್ಳಸಾಧ್ಯವಿರುವುದಕ್ಕಿಂತಲೂ, ಹೆಚ್ಚು ಸುಲಭವಾಗಿ ಅವಿವಾಹಿತ ಕ್ರೈಸ್ತರು ಅನೇಕವೇಳೆ ತಮ್ಮ ಬೈಬಲ್ ವಾಚನವನ್ನು ತಮ್ಮ ಕಾರ್ಯತಖ್ತೆಯಲ್ಲಿ ಸರಿಹೊಂದಿಸಿಕೊಳ್ಳಬಲ್ಲರು. ಅವರು ಕೂಟಗಳಿಗಾಗಿಯೂ ಕ್ಷೇತ್ರ ಸೇವೆಗಾಗಿಯೂ ಹೆಚ್ಚು ಉತ್ತಮವಾಗಿ ತಯಾರುಮಾಡಬಹುದು. ಇದೆಲ್ಲವೂ ಅವರ “ವೈಯಕ್ತಿಕ ಪ್ರಯೋಜನಕ್ಕಾಗಿ”ಯೇ ಆಗಿದೆ.—1 ಕೊರಿಂಥ 7:35.
18. ಅನೇಕ ಅವಿವಾಹಿತ ಸಹೋದರರು, ತಾವು “ಅಪಕರ್ಷಣೆಯಿಲ್ಲದೆ” ಯೆಹೋವನ ಸೇವೆಮಾಡಲು ಬಯಸುತ್ತೇವೆಂಬುದನ್ನು ಹೇಗೆ ತೋರಿಸಸಾಧ್ಯವಿದೆ?
18 ಈಗಾಗಲೇ ಶುಶ್ರೂಷಾ ಸೇವಕರಾಗಿ ಸೇವೆಮಾಡುತ್ತಿರುವ ಅನೇಕ ಅವಿವಾಹಿತ ಸಹೋದರರು, ಯೆಹೋವನಿಗೆ ಹೀಗೆ ಹೇಳಲು ಸ್ವತಂತ್ರರಾಗಿದ್ದಾರೆ: “ಇಗೋ, ನಾನಿದ್ದೇನೆ ನನ್ನನ್ನು ಕಳುಹಿಸು.” (ಯೆಶಾಯ 6:8) ಅವರು ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾಗಲು ಅರ್ಜಿಹಾಕಸಾಧ್ಯವಿದೆ; ಇದು ಅಗತ್ಯವು ಎಲ್ಲಿ ಹೆಚ್ಚಾಗಿದೆಯೋ ಅಂತಹ ಸ್ಥಳಗಳಲ್ಲಿ ಸೇವೆಮಾಡಲು ಸ್ವತಂತ್ರರಾಗಿರುವ ಅವಿವಾಹಿತ ಶುಶ್ರೂಷಾ ಸೇವಕರು ಹಾಗೂ ಹಿರಿಯರಿಗಾಗಿ ಕಾದಿರಿಸಲ್ಪಟ್ಟಿದೆ. ತಮ್ಮ ಸಭೆಯನ್ನು ಬಿಟ್ಟುಬರಲು ಸ್ವತಂತ್ರರಾಗಿರದ ಅವಿವಾಹಿತ ಸಹೋದರರು ಸಹ, ಶುಶ್ರೂಷಾ ಸೇವಕರಾಗಿ ಅಥವಾ ಹಿರಿಯರಾಗಿ ತಮ್ಮ ಸಹೋದರರ ಸೇವೆಮಾಡಲು ತಮ್ಮನ್ನು ದೊರಕಿಸಿಕೊಳ್ಳಬಲ್ಲರು.—ಫಿಲಿಪ್ಪಿ 2:20-23.
19. ಅನೇಕ ಅವಿವಾಹಿತ ಸಹೋದರಿಯರು ಹೇಗೆ ಆಶೀರ್ವದಿಸಲ್ಪಟ್ಟಿದ್ದಾರೆ, ಮತ್ತು ಅವರು ಸಭೆಗಳಿಗೆ ಒಂದು ಆಶೀರ್ವಾದವಾಗಿರಸಾಧ್ಯವಿರುವ ಒಂದು ವಿಧವು ಯಾವುದಾಗಿದೆ?
19 ಅಭಿಪ್ರಾಯವನ್ನು ಪಡೆದುಕೊಳ್ಳಲು ಹಾಗೂ ವಿಷಯಗಳನ್ನು ಭರವಸೆಯಿಂದ ಹೇಳಿಕೊಳ್ಳಲಿಕ್ಕಾಗಿ ಗಂಡನಿರದ ಅವಿವಾಹಿತ ಸಹೋದರಿಯರು, ಹೆಚ್ಚಾಗಿ ‘ತಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕುವ’ ಪ್ರವೃತ್ತಿಯುಳ್ಳವರಾಗಿರಬಹುದು. (ಕೀರ್ತನೆ 55:22; 1 ಕೊರಿಂಥ 11:3) ಯೆಹೋವನಿಗಾಗಿರುವ ಪ್ರೀತಿಯ ಕಾರಣದಿಂದ ಅವಿವಾಹಿತರಾಗಿರುವ ಸಹೋದರಿಯರಿಗಾಗಿ ಇದು ವಿಶೇಷವಾಗಿ ಪ್ರಮುಖವಾದದ್ದಾಗಿದೆ. ಅವರು ಸಕಾಲದಲ್ಲಿ ವಿವಾಹವಾಗುವುದಾದರೆ, ಅದು “ಕರ್ತನಲ್ಲಿ ಮಾತ್ರವೇ” ಆಗಿರುವುದು, ಅಂದರೆ, ಕೇವಲ ಯೆಹೋವನಿಗೆ ಸಮರ್ಪಿಸಿಕೊಂಡಿರುವ ಯಾರೊಂದಿಗಾದರೂ ಆಗಿರುವುದು. (1 ಕೊರಿಂಥ 7:39, NW) ತಮ್ಮ ಸಭೆಗಳಲ್ಲಿ ಅವಿವಾಹಿತ ಸಹೋದರಿಯರು ಇರುವುದಕ್ಕಾಗಿ ಹಿರಿಯರು ಕೃತಜ್ಞರಾಗಿದ್ದಾರೆ; ಇವರು ಅನೇಕವೇಳೆ ಅಸ್ವಸ್ಥರನ್ನೂ ವೃದ್ಧರನ್ನೂ ಭೇಟಿಮಾಡಿ, ಸಹಾಯ ಮಾಡುತ್ತಾರೆ. ಇದು ಸಂಬಂಧಪಟ್ಟವರೆಲ್ಲರಿಗೂ ಸಂತೋಷವನ್ನು ತರುತ್ತದೆ.—ಅ. ಕೃತ್ಯಗಳು 20:35.
20. ತಾವು “ಅಪಕರ್ಷಣೆಯಿಲ್ಲದೆ ಕರ್ತನ ಸತತವಾದ ಸೇವೆ”ಯಲ್ಲಿದ್ದೇವೆಂಬುದನ್ನು ಅನೇಕ ಕ್ರೈಸ್ತರು ಹೇಗೆ ತೋರಿಸುತ್ತಿದ್ದಾರೆ?
20 “ಅಪಕರ್ಷಣೆಯಿಲ್ಲದೆ ಕರ್ತನ ಸತತವಾದ ಸೇವೆ”ಯಲ್ಲಿರಲಿಕ್ಕಾಗಿ, ಅನೇಕ ಯುವ ಕ್ರೈಸ್ತರು ತಮ್ಮ ವ್ಯವಹಾರಗಳನ್ನು ಏರ್ಪಡಿಸಿಕೊಂಡಿದ್ದಾರೆ. (1 ಕೊರಿಂಥ 7:35, NW) ಅವರು ಪೂರ್ಣ ಸಮಯದ ಪಯನೀಯರ್ ಶುಶ್ರೂಷಕರೋಪಾದಿ, ಮಿಷನೆರಿಗಳೋಪಾದಿ, ಅಥವಾ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸ್ಗಳಲ್ಲೊಂದರಲ್ಲಿ ಯೆಹೋವನ ಸೇವೆಮಾಡುತ್ತಿದ್ದಾರೆ. ಮತ್ತು ಅವರು ಎಂತಹ ಸಂತೋಷಭರಿತ ಗುಂಪಾಗಿದ್ದಾರೆ! ಅವರ ಸಮಕ್ಷಮವು ಎಷ್ಟು ಚೈತನ್ಯದಾಯಕವಾಗಿದೆ! ಅಷ್ಟೇಕೆ, ಯೆಹೋವನ ಹಾಗೂ ಯೇಸುವಿನ ದೃಷ್ಟಿಯಲ್ಲಿ ಅವರು “ಇಬ್ಬನಿ”ಯಂತಿದ್ದಾರೆ.—ಕೀರ್ತನೆ 110:3.
ಸಾರ್ವಕಾಲಿಕ ಕುಮಾರವ್ರತದ ಪ್ರತಿಜ್ಞೆಯಿಲ್ಲ
21. (ಎ) ಪೌಲನು ಕುಮಾರವ್ರತದ ಒಂದು ಪ್ರತಿಜ್ಞೆಯನ್ನು ತೆಗೆದುಕೊಳ್ಳುವುದನ್ನು ಉತ್ತೇಜಿಸಲಿಲ್ಲವೆಂಬುದು ಏಕೆ ಸ್ಪಷ್ಟವಾಗಿದೆ? (ಬಿ) ಅವನು “ಯೌವನದ ಪರಿಪಕ್ವ ಸ್ಥಿತಿಯನ್ನು ದಾಟಿರು”ವುದರ ಕುರಿತಾಗಿ ಮಾತಾಡಿದಾಗ, ಅವನು ಏನನ್ನು ಸೂಚಿಸಿದನು?
21 ಪೌಲನ ಸಲಹೆಯಲ್ಲಿದ್ದ ಮುಖ್ಯ ಅಂಶವು, ಕ್ರೈಸ್ತರು ತಮ್ಮ ಜೀವಿತಗಳಲ್ಲಿ ಅವಿವಾಹಿತತನಕ್ಕಾಗಿ ಅವಕಾಶವನ್ನು ಮಾಡಿಕೊಳ್ಳಲಿಕ್ಕಾಗಿ “ಒಳ್ಳೇದ”ನ್ನು (NW) ಮಾಡಸಾಧ್ಯವಿದೆ ಎಂಬುದಾಗಿದೆ. (1 ಕೊರಿಂಥ 7:1, 8, 26, 37) ಹಾಗಿದ್ದರೂ, ಕುಮಾರವ್ರತದ ಒಂದು ಪ್ರತಿಜ್ಞೆಯನ್ನು ತೆಗೆದುಕೊಳ್ಳುವಂತೆ ಅವನು ಅವರನ್ನು ಆಮಂತ್ರಿಸುವುದಿಲ್ಲವೆಂಬುದು ನಿಶ್ಚಯ. ಅದಕ್ಕೆ ಬದಲಾಗಿ, ಅವನು ಬರೆದುದು: “ಯಾವನಾದರೂ ತಾನು ತನ್ನ ಅವಿವಾಹಿತತನದ ಕಡೆಗೆ, ಅದು ಯೌವನದ ಪರಿಪಕ್ವ ಸ್ಥಿತಿಯನ್ನು ದಾಟಿರುವಲ್ಲಿ, ಅಯೋಗ್ಯವಾಗಿ ವರ್ತಿಸುತ್ತಿದ್ದೇನೆಂದು ಯೋಚಿಸುವಲ್ಲಿ, ಮತ್ತು ಇದು ಆ ರೀತಿಯಾಗಿ ಸಂಭವಿಸಬೇಕಾಗಿರುವಲ್ಲಿ, ಅವನು ತಾನು ಬಯಸುವುದನ್ನು ಮಾಡಲಿ; ಅವನು ಪಾಪಮಾಡುವುದಿಲ್ಲ. ಅವರು ವಿವಾಹ ಮಾಡಿಕೊಳ್ಳಲಿ.” (1 ಕೊರಿಂಥ 7:36, NW) “ಯೌವನದ ಪರಿಪಕ್ವ ಸ್ಥಿತಿಯನ್ನು ದಾಟಿರು” ಎಂದು ಭಾಷಾಂತರಿಸಲ್ಪಟ್ಟ ಒಂದು ಗ್ರೀಕ್ ಶಬ್ದವಾದ (ಹೈಪರ್ಯಾಕ್ಮಾಸ್) ಅಕ್ಷರಾರ್ಥವಾಗಿ “ಅತ್ಯುಚ್ಚ ಬಿಂದುವನ್ನೂ ಮೀರಿ” ಎಂಬುದನ್ನು ಅರ್ಥೈಸುತ್ತದೆ ಮತ್ತು ಕಾಮಾಭಿಲಾಷೆಯ ಉಕ್ಕೇರುವಿಕೆಯನ್ನು ದಾಟಿರುವುದಕ್ಕೆ ಸೂಚಿತವಾಗಿದೆ. ಆದುದರಿಂದ, ಅವಿವಾಹಿತ ಸ್ಥಿತಿಯಲ್ಲಿ ಅನೇಕ ವರ್ಷಗಳನ್ನು ಕಳೆದಿದ್ದು, ಕ್ರಮೇಣವಾಗಿ ತಾವು ವಿವಾಹವಾಗಬೇಕೆಂದು ಭಾವಿಸಿಕೊಳ್ಳುವವರು, ಜೊತೆ ನಂಬಿಗಸ್ತನೊಬ್ಬನನ್ನು ವಿವಾಹವಾಗಲು ಸಂಪೂರ್ಣವಾಗಿ ಸ್ವತಂತ್ರರಾಗಿದ್ದಾರೆ.—2 ಕೊರಿಂಥ 6:14.
22. ತೀರ ಯುವಪ್ರಾಯದಲ್ಲಿರುವಾಗ ವಿವಾಹವಾಗದಿರುವುದು ಕ್ರೈಸ್ತನೊಬ್ಬನಿಗೆ ಪ್ರತಿಯೊಂದು ದೃಷ್ಟಿಕೋನದಿಂದ ಪ್ರಯೋಜನಕರವಾದದ್ದಾಗಿದೆ ಏಕೆ?
22 ಯುವ ಕ್ರೈಸ್ತನೊಬ್ಬನು ಅಪಕರ್ಷಣೆಯಿಲ್ಲದೆ ಯೆಹೋವನ ಸೇವೆಮಾಡುತ್ತಾ ಕಳೆಯುವ ವರ್ಷಗಳು, ಒಂದು ವಿವೇಕಯುತವಾದ ಬಂಡವಾಳವಾಗಿವೆ. ಆ ವರ್ಷಗಳು ಅವನಿಗೆ ಅಥವಾ ಅವಳಿಗೆ ಪ್ರಾಯೋಗಿಕ ವಿವೇಕವನ್ನು, ಅನುಭವವನ್ನು, ಮತ್ತು ಒಳನೋಟವನ್ನು ಪಡೆದುಕೊಳ್ಳುವಂತೆ ಅನುಮತಿಸುತ್ತವೆ. (ಜ್ಞಾನೋಕ್ತಿ 1:3, 4) ರಾಜ್ಯದ ನಿಮಿತ್ತವಾಗಿ ಅವಿವಾಹಿತನಾಗಿ ಉಳಿದಿರುವ ವ್ಯಕ್ತಿಯೊಬ್ಬನು, ಒಂದುವೇಳೆ ವೈವಾಹಿಕ ಜೀವನ ಹಾಗೂ ಬಹುಶಃ ತಾಯ್ತಂದೆತನದ ಜವಾಬ್ದಾರಿಗಳನ್ನು ಸ್ವೀಕರಿಸಲು ನಿರ್ಧರಿಸುವುದಾದರೆ, ತದನಂತರ ಅವನು ಎಷ್ಟೋ ಹೆಚ್ಚು ಉತ್ತಮವಾದ ಸ್ಥಿತಿಯಲ್ಲಿದ್ದಾನೆ.
23. ವಿವಾಹವಾಗಲು ಆಲೋಚಿಸುವ ಕೆಲವರ ಮನಸ್ಸಿನಲ್ಲಿ ಏನಿರಬಹುದು, ಆದರೆ ಮುಂದಿನ ಲೇಖನಗಳಲ್ಲಿ ಯಾವ ಪ್ರಶ್ನೆಯನ್ನು ಪರಿಗಣಿಸಲಾಗುವುದು?
23 ಅವಿವಾಹಿತ ಸ್ಥಿತಿಯಲ್ಲಿ ಯೆಹೋವನನ್ನು ಪೂರ್ಣ ಸಮಯ ಸೇವಿಸುತ್ತಾ ಅನೇಕ ವರ್ಷಗಳನ್ನು ಕಳೆದಿರುವ ಕೆಲವು ಕ್ರೈಸ್ತರು, ಪೂರ್ಣ ಸಮಯದ ಸೇವೆಯ ಯಾವುದೋ ರೂಪದಲ್ಲಿ ಮುಂದುವರಿಯುವ ದೃಷ್ಟಿಯಿಂದ, ತಮ್ಮ ಭಾವೀ ಸಂಗಾತಿಯನ್ನು ಜಾಗರೂಕತೆಯಿಂದ ಆರಿಸಿಕೊಳ್ಳುತ್ತಾರೆ. ಇದು ನಿಶ್ಚಯವಾಗಿಯೂ ಅತ್ಯಂತ ಪ್ರಶಂಸಾರ್ಹವಾಗಿದೆ. ಕೆಲವರು ತಮ್ಮ ವಿವಾಹವು ಯಾವುದೇ ರೀತಿಯಲ್ಲಿ ತಮ್ಮ ಸೇವೆಗೆ ಅಡ್ಡಿಮಾಡುವುದನ್ನು ಅನುಮತಿಸದಿರುವ ಕಲ್ಪನೆಯೊಂದಿಗೆ ಸಹ ವಿವಾಹವಾಗುವುದನ್ನು ಉದ್ದೇಶಿಸಬಹುದು. ಆದರೆ ವಿವಾಹಿತ ಕ್ರೈಸ್ತನೊಬ್ಬನು, ಅವನು ಅಥವಾ ಅವಳು ಅವಿವಾಹಿತರಾಗಿದ್ದಾಗ ಸ್ವತಂತ್ರರಾಗಿದ್ದಷ್ಟು, ಈಗ ಯೆಹೋವನ ಸೇವೆಯಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸ್ವತಂತ್ರ ಭಾವನೆಯುಳ್ಳವರಾಗಿರಬೇಕೊ? ಮುಂದಿನ ಲೇಖನಗಳಲ್ಲಿ ಈ ಪ್ರಶ್ನೆಯನ್ನು ಪರಿಗಣಿಸಲಾಗುವುದು.
ಪುನರ್ವಿಮರ್ಶೆಯ ರೀತಿಯಲ್ಲಿ
◻ ಅಪೊಸ್ತಲ ಪೌಲನಿಗೆ ಕೊರಿಂಥದಲ್ಲಿದ್ದ ಸಭೆಗೆ ಬರೆಯುವ ಅಗತ್ಯದ ಅನಿಸಿಕೆಯಾಯಿತೇಕೆ?
◻ ಪೌಲನು ಒಂದು ಸಂನ್ಯಾಸಿ ಜೀವನ ಶೈಲಿಯನ್ನು ಶಿಫಾರಸ್ಸು ಮಾಡುತ್ತಿರಲಿಲ್ಲವೆಂಬುದು ನಮಗೆ ಏಕೆ ತಿಳಿದಿದೆ?
◻ ವ್ಯಕ್ತಿಯೊಬ್ಬನು ಹೇಗೆ ಅವಿವಾಹಿತತನಕ್ಕಾಗಿ “ಅವಕಾಶವನ್ನು ಮಾಡಿಕೊಳ್ಳ”ಸಾಧ್ಯವಿದೆ?
◻ ಅವಿವಾಹಿತ ಸಹೋದರಿಯರು ತಮ್ಮ ಅವಿವಾಹಿತ ಸ್ಥಿತಿಯಿಂದ ಹೇಗೆ ಪ್ರಯೋಜನಪಡೆದುಕೊಳ್ಳಸಾಧ್ಯವಿದೆ?
◻ ಯಾವ ವಿಧಗಳಲ್ಲಿ ಅವಿವಾಹಿತ ಸಹೋದರರು “ಅಪಕರ್ಷಣೆಯಿಲ್ಲದೆ” ಯೆಹೋವನ ಸೇವೆಮಾಡುವುದಕ್ಕಾಗಿರುವ ತಮ್ಮ ಸ್ವಾತಂತ್ರ್ಯದ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?