ಅವರು ಯೆಹೋವನ ಚಿತ್ತವನ್ನು ಮಾಡಿದರು
ದೃಢತೆಯಿಂದ ದಾನಿಯೇಲನು ದೇವರ ಸೇವೆಮಾಡಿದನು
ರಾತ್ರಿ ಹಗಲಾಗುವುದರೊಳಗಾಗಿ ಇತಿಹಾಸದ ಪಥವು ಬದಲಾಗುವುದು ವಿರಳ. ಆದರೂ, ಅದು ಸಾ.ಶ.ಪೂ. 539ರಲ್ಲಿ, ಬಾಬೆಲಿನ ಸಾಮ್ರಾಜ್ಯವು ಮೇದ್ಯಯರು ಮತ್ತು ಪಾರಸಿಯರ ಮುಖಾಂತರ ಕೇವಲ ಕೆಲವೇ ತಾಸುಗಳಲ್ಲಿ ಸೋಲಿಸಲ್ಪಟ್ಟಾಗ ಸಂಭವಿಸಿತು. ಆ ವರ್ಷದೊಳಗಾಗಿ, ಯೆಹೋವನ ಪ್ರವಾದಿಯಾದ ದಾನಿಯೇಲನು ಬಾಬೆಲಿನಲ್ಲಿ ಒಬ್ಬ ಯೆಹೂದಿ ದೇಶಭ್ರಷ್ಟನಾಗಿ ಸುಮಾರು 80 ವರ್ಷಗಳಿಂದ ಜೀವಿಸುತ್ತಿದ್ದನು. ಬಹುಶಃ ತನ್ನ 90ಗಳ ಪ್ರಾಯದಲ್ಲಿ ದಾನಿಯೇಲನು, ದೇವರಿಗೆ ತನ್ನ ಸಮಗ್ರತೆಯ ಅತ್ಯಂತ ದೊಡ್ಡ ಪರೀಕ್ಷೆಗಳಲ್ಲೊಂದನ್ನು ಎದುರಿಸಲಿಕ್ಕಿದ್ದನು.
ಬಾಬೆಲಿನ ಪತನದ ತರುವಾಯ, ದಾನಿಯೇಲನಿಗೆ ಆರಂಭದಲ್ಲಿ ವಿಷಯಗಳು ಸರಾಗವಾಗಿ ಇರುವಂತೆ ತೋರಿದವು. ಆ ಹೊಸ ರಾಜನು, ದಾನಿಯೇಲನನ್ನು ಅನುಗ್ರಹದಿಂದ ನೋಡಿದ 62 ವರ್ಷ ಪ್ರಾಯದ ಮನುಷ್ಯ, ಮೇದ್ಯಯನಾದ ದಾರ್ಯಾವೆಷನಾಗಿದ್ದನು. ರಾಜನೋಪಾದಿ ದಾರ್ಯಾವೆಷನ ಪ್ರಥಮ ಕಾರ್ಯಗಳಲ್ಲೊಂದು, 120 ಕ್ಷತ್ರಪರನ್ನು ನೇಮಿಸುವುದು ಮತ್ತು ಮೂವರು ಪುರುಷರನ್ನು ಉನ್ನತ ಅಧಿಕಾರಿಗಳ ಶ್ರೇಣಿಗೆ ಏರಿಸುವುದಾಗಿತ್ತು.a ಆ ಮೂವರು ಅನುಗ್ರಹಿತ ಪುರುಷರಲ್ಲಿ ದಾನಿಯೇಲನು ಒಬ್ಬನಾಗಿದ್ದನು. ದಾನಿಯೇಲನ ಅಸಾಧಾರಣವಾದ ಸಾಮರ್ಥ್ಯವನ್ನು ಗುರುತಿಸುತ್ತಾ, ದಾರ್ಯಾವೆಷನು ಅವನಿಗೆ ಪ್ರಧಾನ ಮಂತ್ರಿಯ ಸ್ಥಾನವನ್ನೂ ಕೊಡಲು ಉದ್ದೇಶಿಸಿದನು! ಆದರೆ, ಆಗ ತಾನೆ, ರಾಜನ ಯೋಜನೆಗಳನ್ನು ಹಠಾತ್ತಾಗಿ ಬದಲಾಯಿಸಿದ ಯಾವುದೊ ವಿಷಯವು ಸಂಭವಿಸಿತು.
ಒಂದು ಕುಟಿಲ ಯೋಜನೆ
ದಾನಿಯೇಲನ ಜೊತೆ ಉನ್ನತ ಅಧಿಕಾರಿಗಳು, ಕ್ಷತ್ರಪರ ಒಂದು ದೊಡ್ಡ ಗುಂಪಿನೊಂದಿಗೆ ಜೊತೆಸೇರಿ, ಒಂದು ಆಕರ್ಷಕ ವಿಚಾರದೊಂದಿಗೆ ರಾಜನನ್ನು ಸಮೀಪಿಸಿದರು. ಹೀಗೆಂದು ವಿಧಿಸುವ ಒಂದು ನಿಯಮವನ್ನು ಸ್ಥಾಪಿಸುವಂತೆ ಅವರು ದಾರ್ಯಾವೆಷನಲ್ಲಿ ಬೇಡಿಕೊಂಡರು: “ಯಾವನಾದರೂ ಮೂವತ್ತು ದಿನಗಳ ತನಕ ರಾಜನಾದ ನಿನಗೆ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ವಿಜ್ಞಾಪನೆಮಾಡಿಕೊಂಡರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು.” (ದಾನಿಯೇಲ 6:7) ಈ ಪುರುಷರು, ತನ್ನ ಕಡೆಗಿರುವ ಅವರ ನಿಷ್ಠೆಯನ್ನು ಅಂಗೀಕರಿಸಿಕೊಳ್ಳುತ್ತಿದ್ದರೆಂದು ದಾರ್ಯಾವೆಷನಿಗೆ ತೋರಿದ್ದಿರಬಹುದು. ಈ ನಿಯಮವು, ಒಬ್ಬ ವಿದೇಶೀಯನಾದ ಅವನಿಗೆ, ರಾಜ್ಯದ ತಲೆಯಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುವುದೆಂದು ಸಹ ಅವನು ವಿವೇಚಿಸಿದ್ದಿರಬಹುದು.
ಹಾಗಿದ್ದರೂ, ಉನ್ನತ ಅಧಿಕಾರಿಗಳು ಮತ್ತು ಕ್ಷತ್ರಪರು ಈ ಶಾಸನವನ್ನು ರಾಜನ ಸಲುವಾಗಿ ಪ್ರಸ್ತಾಪಿಸಲಿಲ್ಲ. ಅವರು “ರಾಜ್ಯಭಾರದ ವಿಷಯವಾಗಿ ದಾನಿಯೇಲನ ಮೇಲೆ ತಪ್ಪುಹೊರಿಸುವದಕ್ಕೆ ಸಂದರ್ಭಹುಡುಕುತ್ತಿದ್ದರು; ಆದರೆ ತಪ್ಪುಹೊರಿಸುವ ಯಾವ ಸಂದರ್ಭವನ್ನೂ ಯಾವ ತಪ್ಪನ್ನೂ ಕಾಣಲಾರದೆ ಹೋದರು; ಅವನು ನಂಬಿಗಸ್ತನೇ ಆಗಿದ್ದನು, ಅವನಲ್ಲಿ ಆಲಸ್ಯವಾಗಲಿ ಅಕ್ರಮವಾಗಲಿ ಸಿಕ್ಕಲಿಲ್ಲ.” ಆದುದರಿಂದ ಈ ಕುಟಿಲ ಪುರುಷರು ವಿವೇಚಿಸಿದ್ದು: “ಈ ದಾನಿಯೇಲನ ಮೇಲೆ ತಪ್ಪುಹೊರಿಸಲು ಇವನ ದೇವಧರ್ಮದ ಮೂಲಕವೇ ಹೊರತು ಇನ್ನಾವದರಲ್ಲಿಯೂ ನಮಗೆ ಅವಕಾಶ ದೊರೆಯದು.” (ದಾನಿಯೇಲ 6:4, 5) ದಾನಿಯೇಲನು ಯೆಹೋವನಿಗೆ ಪ್ರತಿದಿನ ಪ್ರಾರ್ಥಿಸಿದನೆಂಬ ಅರಿವಿದ್ದ ಅವರು, ಇದನ್ನು ಒಂದು ವಧಾರ್ಹವಾದ ಅಪರಾಧವಾಗಿ ಮಾಡಲು ಪ್ರಯತ್ನಿಸಿದರು.
ದಾನಿಯೇಲನಲ್ಲಿ “ಪರಮಬುದ್ಧಿ ಇದ್ದದರಿಂದ ಅವನು ಮಿಕ್ಕ ಮುಖ್ಯಾಧಿಕಾರಿಗಳಿಗಿಂತಲೂ ದೇಶಾಧಿಪತಿಗಳಿಗಿಂತಲೂ ಅಧಿಕ ಸಮರ್ಥನೆನಿಸಿಕೊಂಡಿದ್ದನು; ಅವನನ್ನು ರಾಜನು ಪೂರ್ಣರಾಜ್ಯದ ಮೇಲೆ ನೇಮಿಸಲು ಉದ್ದೇಶಿಸಿದ” ಕಾರಣ, ಪ್ರಾಯಶಃ ಈ ಉನ್ನತ ಅಧಿಕಾರಿಗಳು ಮತ್ತು ಕ್ಷತ್ರಪರು ಅವನ ಕಡೆಗಿನ ಕಡುಮತ್ಸರಕ್ಕೆ ಇಂಬುಕೊಟ್ಟರು. (ದಾನಿಯೇಲ 6:3) ದಾನಿಯೇಲನ ಪ್ರಾಮಾಣಿಕತೆಯು, ಭ್ರಷ್ಟತೆ ಹಾಗೂ ನ್ಯಾಯವಿರುದ್ಧವಾದ ಸಂಪಾದನೆಯ ವಿರುದ್ಧ ಅಸ್ವಾಗತಾರ್ಹವಾದ ತಡೆಯನ್ನು ಸೃಷ್ಟಿಸಿದ್ದಿರಬಹುದು. ವಿಷಯವು ಏನೇ ಆಗಿರಲಿ, ಆ ಶಾಸನವನ್ನು “ಮೇದ್ಯಯರ ಮತ್ತು ಪಾರಸಿಯರ ಎಂದಿಗೂ ರದ್ದಾಗದ ಧರ್ಮ ವಿಧಿಗಳ” ಭಾಗವಾಗಿ ಮಾಡುತ್ತಾ, ಅದಕ್ಕೆ ರುಜುಹಾಕುವಂತೆ ಈ ಪುರುಷರು ರಾಜನ ಮನವೊಪ್ಪಿಸಿದರು.—ದಾನಿಯೇಲ 6:8, 9.
ದಾನಿಯೇಲನು ಸ್ಥಿರಚಿತ್ತನಾಗಿ ಉಳಿಯುತ್ತಾನೆ
ಹೊಸ ಕಾನೂನಿನ ಕುರಿತು ತಿಳಿದುಕೊಂಡ ಬಳಿಕ, ದಾನಿಯೇಲನು ಯೆಹೋವನಿಗೆ ಪ್ರಾರ್ಥಿಸುವುದನ್ನು ನಿಲ್ಲಿಸಿದನೊ? ಖಂಡಿತವಾಗಿಯೂ ಇಲ್ಲ! ತನ್ನ ಮನೆಯ ಮಹಡಿಯ ಕೋಣೆಯಲ್ಲಿ ಮೊಣಕಾಲೂರುತ್ತಾ, “ಇದಕ್ಕೆ ಮೊದಲು ಅವನು ಕ್ರಮವಾಗಿ ಮಾಡುತ್ತಿದ್ದಂತೆ” ದಿನಕ್ಕೆ ಮೂರಾವರ್ತಿ ದೇವರಿಗೆ ಪ್ರಾರ್ಥಿಸಿದನು. (ದಾನಿಯೇಲ 6:10, NW) ಅವನು ಪ್ರಾರ್ಥಿಸುತ್ತಿದ್ದಾಗ, ಅವನ ವೈರಿಗಳು “ಗುಂಪಾಗಿ ಕೂಡಿ ದಾನಿಯೇಲನು ತನ್ನ ದೇವರ ಸಮ್ಮುಖದಲ್ಲಿ ಪ್ರಾರ್ಥಿಸಿ ವಿಜ್ಞಾಪಿಸುವದನ್ನು ಕಂಡ”ರು. (ದಾನಿಯೇಲ 6:11) ಅವರು ವಿಷಯವನ್ನು ರಾಜನ ಗಮನಕ್ಕೆ ತಂದಾಗ, ತಾನು ಸಹಿಮಾಡಿದ್ದ ನಿಯಮವು ದಾನಿಯೇಲನನ್ನು ಸಿಕ್ಕಿಸುವುದೆಂದು ತಿಳಿದು ದಾರ್ಯಾವೆಷನು ಸಂಕಟಪಟ್ಟನು. “ಇವನನ್ನು ಹೇಗೆ ರಕ್ಷಿಸಲಿ ಎಂದು ಸೂರ್ಯಾಸ್ತಮಾನದ ತನಕ ಪ್ರಯಾಸಪಟ್ಟ”ನೆಂದು ವೃತ್ತಾಂತವು ನಮಗೆ ಹೇಳುತ್ತದೆ. ತಾನು ವಿಧಿಸಿದ್ದ ನಿಯಮವನ್ನು ರಾಜನು ಕೂಡ ತೊಡೆದುಹಾಕಲು ಸಾಧ್ಯವಿರಲಿಲ್ಲ. ಆದುದರಿಂದ ದಾನಿಯೇಲನು ಸಿಂಹಗಳ ಗವಿಗೆ—ಸ್ಪಷ್ಟವಾಗಿ ಒಂದು ಕೆಳಮಾಳಿಗೆ ಅಥವಾ ಭೂಗತ ಸ್ಥಳಕ್ಕೆ ಕೊಂಡೊಯ್ಯಲ್ಪಟ್ಟನು. “ನೀನು ನಿತ್ಯವು ಭಜಿಸುವ ದೇವರು ನಿನ್ನನ್ನುದ್ಧರಿಸಲಿ [“ಕಾಪಾಡುವನು,” NW]” ಎಂದು ರಾಜನು ದಾನಿಯೇಲನಿಗೆ ಆಶ್ವಾಸನೆ ನೀಡಿದನು.—ದಾನಿಯೇಲ 6:12-16.
ನಿದ್ರಾಹೀನ ರಾತ್ರಿ ಮತ್ತು ಉಪವಾಸ ಮಾಡುವಿಕೆಯ ನಂತರ, ದಾರ್ಯಾವೆಷನು ಗವಿಯ ಕಡೆಗೆ ಧಾವಿಸಿದನು. ದಾನಿಯೇಲನು ಜೀವಂತನಾಗಿಯೂ ಗಾಯಗೊಳ್ಳದೆಯೂ ಇದ್ದನು! ರಾಜನ ಪ್ರತಿಕ್ರಿಯೆಯು ತಡವಿಲ್ಲದ್ದಾಗಿತ್ತು. ಪ್ರತೀಕಾರವಾಗಿ ಅವನು ದಾನಿಯೇಲನ ವೈರಿಗಳು ಮತ್ತು ಅವರ ಕುಟುಂಬದವರು ಸಿಂಹಗಳ ಗವಿಯೊಳಕ್ಕೆ ಎಸೆಯಲ್ಪಡುವಂತೆ ಮಾಡಿದನು. “ನಾನಾಳುವ ರಾಜ್ಯದವರೆಲ್ಲರೂ ದಾನಿಯೇಲನ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕೆಂದು” ದಾರ್ಯಾವೆಷನು ರಾಜ್ಯದಾದ್ಯಂತ ಗೊತ್ತುಪಡಿಸಿದನು.—ದಾನಿಯೇಲ 6:17-27.
ನಮಗಾಗಿರುವ ಪಾಠ
ದಾನಿಯೇಲನು ನಂಬಿಗಸ್ತಿಕೆಯ ಒಂದು ಉತ್ತಮ ಮಾದರಿಯಾಗಿದ್ದನು. ದಾನಿಯೇಲನು ಯೆಹೋವನನ್ನು “ದೃಢತೆಯಿಂದ” (NW) ಸೇವಿಸುವುದನ್ನು, ಆತನನ್ನು ಆರಾಧಿಸದ ರಾಜನೂ ಗಮನಿಸಿದನು. (ದಾನಿಯೇಲ 6:16, 20) “ದೃಢತೆ” ಎಂಬುದಾಗಿ ಭಾಷಾಂತರಿಸಲ್ಪಟ್ಟ ಆರಮೇಯಿಕ್ ಮೂಲ ಪದವು, ಮೂಲತಃ “ಒಂದು ವೃತ್ತದಲ್ಲಿ ಚಲಿಸು” ಎಂಬುದನ್ನು ಅರ್ಥೈಸುತ್ತದೆ. ಅದು ಅವಿಚ್ಛಿನ್ನತೆಯನ್ನು ಸೂಚಿಸುತ್ತದೆ. ಇದು ಯೆಹೋವನಿಗೆ ದಾನಿಯೇಲನ ಮುರಿಯಲಾಗದ ಸಮಗ್ರತೆಯನ್ನು ಎಷ್ಟು ಚೆನ್ನಾಗಿ ವರ್ಣಿಸುತ್ತದೆ!
ದಾನಿಯೇಲನು ಸಿಂಹಗಳ ಗವಿಯೊಳಕ್ಕೆ ಹಾಕಲ್ಪಡುವ ಬಹಳ ಮುಂಚೆಯೇ ದೃಢತೆಯ ಒಂದು ನಮೂನೆಯನ್ನು ವಿಕಸಿಸಿಕೊಂಡಿದ್ದನು. ಬಾಬೆಲಿನಲ್ಲಿ ಒಬ್ಬ ಯುವ ಬಂಧಿವಾಸಿಯೋಪಾದಿ, ಮೋಶೆಯ ಧರ್ಮಶಾಸ್ತ್ರದಿಂದ ನಿಷೇಧಿಸಲ್ಪಟ್ಟ ಅಥವಾ ವಿಧರ್ಮಿ ಮತಾಚರಣೆಯಿಂದ ಕಳಂಕಿತವಾದ ಆಹಾರ ಅಥವಾ ಪಾನೀಯವನ್ನು ಸೇವಿಸಲು ಅವನು ನಿರಾಕರಿಸಿದನು. (ದಾನಿಯೇಲ 1:8) ತದನಂತರ, ಅವನು ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನಿಗೆ ದೇವರ ಸಂದೇಶವನ್ನು ಧೈರ್ಯವಾಗಿ ಪ್ರಕಟಿಸಿದನು. (ದಾನಿಯೇಲ 4:19-25) ಬಾಬೆಲಿನ ಪತನದ ಕೆಲವೇ ತಾಸುಗಳ ಮುಂಚೆ, ರಾಜ ಬೇಲ್ಶಚ್ಚರನಿಗೆ ದೇವರ ನ್ಯಾಯತೀರ್ಪನ್ನು ದಾನಿಯೇಲನು ಹೆದರದೆ ಘೋಷಿಸಿದನು. (ದಾನಿಯೇಲ 5:22-28) ಹೀಗೆ ದಾನಿಯೇಲನು ಸಿಂಹಗಳ ಗವಿಯನ್ನು ಎದುರಿಸಿದಾಗ, ತಾನು ಸ್ಥಾಪಿಸಿಕೊಂಡಿದ್ದ ನಂಬಿಗಸ್ತ ಪಥದಲ್ಲಿ ಅವನು ಮುಂದುವರಿದನು.
ನೀವು ಸಹ ಯೆಹೋವನನ್ನು ದೃಢತೆಯಿಂದ ಸೇವಿಸಸಾಧ್ಯವಿದೆ. ನೀವು ಒಬ್ಬ ಯುವ ವ್ಯಕ್ತಿಯೊ? ಹಾಗಾದರೆ ಈ ಲೋಕದ ಕೆಟ್ಟ ಸಹವಾಸ ಮತ್ತು ಭ್ರಷ್ಟಗೊಳಿಸುವ ನಡತೆಯನ್ನು ತ್ಯಜಿಸುವ ಮೂಲಕ, ದೃಢತೆಯ ಒಂದು ನಮೂನೆಯನ್ನು ವಿಕಸಿಸಿಕೊಳ್ಳಲು ಈಗ ಕ್ರಿಯೆಗೈಯಿರಿ. ನೀವು ಸ್ವಲ್ಪ ಸಮಯದಿಂದ ದೇವರ ಸೇವೆಯನ್ನು ಮಾಡುತ್ತಿದ್ದಲ್ಲಿ, ನಂಬಿಗಸ್ತ ತಾಳ್ಮೆಯ ಒಂದು ನಮೂನೆಯನ್ನು ಕಾಪಾಡಿಕೊಳ್ಳಿರಿ. ಬಿಟ್ಟುಕೊಡದಿರಿ, ಏಕೆಂದರೆ ನಾವು ಎದುರಿಸುವ ಪ್ರತಿಯೊಂದು ಪರೀಕ್ಷೆಯು, ನಾವು ದೃಢತೆಯಿಂದ ಯೆಹೋವನ ಸೇವೆಮಾಡಲು ದೃಢನಿಶ್ಚಯವುಳ್ಳವರಾಗಿದ್ದೇವೆ ಎಂಬುದನ್ನು ಆತನಿಗೆ ತೋರಿಸುವ ಒಂದು ಅವಕಾಶವನ್ನು ನಮಗೆ ಕೊಡುತ್ತದೆ.—ಫಿಲಿಪ್ಪಿ 4:11-13.
[ಅಧ್ಯಯನ ಪ್ರಶ್ನೆಗಳು]
a “ಕ್ಷತ್ರಪ” ಎಂಬ ಪದವು (ಅಕ್ಷರಾರ್ಥವಾಗಿ “ರಾಜ್ಯದ ಸಂರಕ್ಷಕ” ಎಂಬ ಅರ್ಥವುಳ್ಳದ್ದು), ಒಂದು ಅಧಿಕಾರವ್ಯಾಪ್ತಿಯುಳ್ಳ ಜಿಲ್ಲೆಯ ಮೇಲೆ ಪ್ರಧಾನ ಪ್ರಭುವಾಗಿ ಸೇವೆಮಾಡಲು ಪರ್ಷಿಯನ್ ರಾಜನಿಂದ ನೇಮಿಸಲ್ಪಟ್ಟ ಒಬ್ಬ ಪ್ರಾಂತಾಧಿಪತಿಗೆ ಸೂಚಿಸುತ್ತದೆ. ರಾಜನ ಪ್ರತಿನಿಧಿಸ್ವರೂಪದ ಒಬ್ಬ ಅಧಿಕಾರಿಯಂತೆ, ಅವನು ತೆರಿಗೆಗಳನ್ನು ವಸೂಲಿ ಮಾಡಲು ಮತ್ತು ಕಾಣಿಕೆಯನ್ನು ರಾಜಯೋಗ್ಯ ಆಸ್ಥಾನಕ್ಕೆ ರವಾನಿಸಲು ಜವಾಬ್ದಾರನಾಗಿದ್ದನು.