ಹೆಚ್ಚು ಪೂರ್ಣವಾಗಿ ಸೇವೆಸಲ್ಲಿಸಲು ನೀವು ಹಂಬಲಿಸುತ್ತೀರೊ?
“ನಾನು ಯೆಹೋವನ ಮೇಲೆ ಸಿಟ್ಟುಗೊಂಡಿದ್ದೆ,” ಎಂದು ಹೇಳುತ್ತಾಳೆ ಲೋರ. “ನಾನು ಪಯನೀಯರ್ ಸೇವೆಯನ್ನು ಮುಂದುವರಿಸಲು ಸಾಧ್ಯವಾಗಲಿಕ್ಕಾಗಿ ಆತನು ನಮ್ಮ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡುವಂತೆ ನಾನು ಸತತವಾಗಿ ಪ್ರಾರ್ಥಿಸಿದ್ದೆ—ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ಕೊನೆಗೆ ನಾನು ಪಯನೀಯರ್ ಸೇವೆಯನ್ನು ನಿಲ್ಲಿಸಲೇಬೇಕಾಯಿತು. ಪಯನೀಯರ್ ಸೇವೆಯಲ್ಲಿ ಮುಂದುವರಿಯಲು ಸಾಧ್ಯವಿದ್ದವರ ಕುರಿತಾಗಿ ನನಗೆ ಅಸೂಯೆಯ ಭಾವನೆ ಉಂಟಾಯಿತೆಂಬುದನ್ನೂ ನಾನು ಒಪ್ಪಿಕೊಳ್ಳಬೇಕು.”
ಯೆಹೋವನ ಸಾಕ್ಷಿಗಳ ಸಭೆಯೊಂದರಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿರುವ ಮೈಕಲ್ನ ವಿದ್ಯಮಾನವನ್ನೂ ಪರಿಗಣಿಸಿರಿ. ಅವನು ಮೇಲ್ವಿಚಾರಕನ ಸ್ಥಾನಕ್ಕಾಗಿ ಎಟುಕಿಸಿಕೊಳ್ಳುತ್ತಿದ್ದನು. (1 ತಿಮೊಥೆಯ 3:1) ಅವನ ಹಂಬಲಿಕೆಯು ಹಲವಾರು ವರ್ಷಗಳ ವರೆಗೆ ಈಡೇರದೆಹೋದಾಗ, ಅವನು ಎಷ್ಟು ಅಸಮಾಧಾನಪಟ್ಟುಕೊಂಡನೆಂದರೆ, ಅವನು ಇನ್ನು ಮುಂದೆ ಆ ಸುಯೋಗಕ್ಕಾಗಿ ಪರಿಗಣಿಸಲ್ಪಡಲು ಬಯಸಲಿಲ್ಲ. “ನಾನು ಪುನಃ ಒಮ್ಮೆ ನಿರಾಶೆಯ ನೋವನ್ನು ಸಹಿಸಲು ಸಾಧ್ಯವೇ ಇರಲಿಲ್ಲ,” ಎಂದು ಅವನು ಹೇಳುತ್ತಾನೆ.
ನಿಮಗೆ ತದ್ರೀತಿಯ ಅನುಭವ ಆಗಿದೆಯೊ? ಅತಿ ಪ್ರಿಯವಾದೊಂದು ದೇವಪ್ರಭುತ್ವ ಸುಯೋಗವನ್ನು ನೀವು ಬಿಟ್ಟುಬಿಡಬೇಕಾಯಿತೊ? ಉದಾಹರಣೆಗಾಗಿ, ಒಬ್ಬ ಪೂರ್ಣ ಸಮಯದ ರಾಜ್ಯ ಘೋಷಕರಾದ ಪಯನೀಯರರಾಗಿ ಸೇವೆಸಲ್ಲಿಸುವುದನ್ನು ನೀವು ನಿಲ್ಲಿಸಬೇಕಾಯಿತೊ? ಅಥವಾ ಇತರರಿಗೆ ವಹಿಸಲ್ಪಟ್ಟಿರುವ ನಿರ್ದಿಷ್ಟ ಸಭಾ ಜವಾಬ್ದಾರಿಗಳಿಗಾಗಿ ನೀವು ಹಂಬಲಿಸುತ್ತೀರೊ? ನೀವು ಬೆತೆಲಿನಲ್ಲಿ ಅಥವಾ ಒಬ್ಬ ಮಿಷನೆರಿಯೋಪಾದಿ ಸೇವೆಸಲ್ಲಿಸಲು ತೀವ್ರವಾಗಿ ಬಯಸುತ್ತಿದ್ದರೂ, ನಿಮ್ಮ ಪರಿಸ್ಥಿತಿಗಳು ಅದನ್ನು ಅನುಮತಿಸದಿರುವುದೂ ಸಂಭಾವ್ಯ.
“ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು” ಎಂದು ಜ್ಞಾನೋಕ್ತಿ ಪುಸ್ತಕವು ಅಂಗೀಕರಿಸುತ್ತದೆ. (ಜ್ಞಾನೋಕ್ತಿ 13:12) ನೀವು ಆಶಿಸುವಂತಹ ಸುಯೋಗಗಳನ್ನೇ ಇತರರು ಪಡೆದುಕೊಳ್ಳುವಾಗ ಇದು ವಿಶೇಷವಾಗಿ ನಿಜವಾಗಿರಬಹುದು. ಅಂತಹ ನಿರಾಶೆಗಳನ್ನು ಅನುಭವಿಸುವ ಯಾರಿಗೇ ಆಗಲಿ, ದೇವರ ವಾಕ್ಯವು, ಒಳನೋಟ, ಸಾಂತ್ವನ ಮತ್ತು ನಿರೀಕ್ಷೆಯನ್ನು ಒದಗಿಸುತ್ತದೊ? ಹೌದು, ಅದು ಒದಗಿಸುತ್ತದೆ. ವಾಸ್ತವದಲ್ಲಿ, 84ನೆಯ ಕೀರ್ತನೆಯು, ಯೆಹೋವನ ಸೇವೆಯ ವಿಷಯದಲ್ಲಿ ತದ್ರೀತಿಯ ಈಡೇರದ ಬಯಕೆಗಳಿದ್ದ ಯೆಹೋವನ ಸೇವಕನೊಬ್ಬನ ರಸಭಾವಗಳನ್ನು ವ್ಯಕ್ತಪಡಿಸುತ್ತದೆ.
ಒಬ್ಬ ಲೇವ್ಯನ ಗಣ್ಯತೆ
ಎಂಬತ್ತನಾಲ್ಕನೆಯ ಕೀರ್ತನೆಯ ರಚನಾಕರ್ತರು, ಯೆಹೋವನ ಆಲಯದಲ್ಲಿ ಸೇವೆಸಲ್ಲಿಸುತ್ತಿದ್ದ ಮತ್ತು ತಮ್ಮ ಸೇವಾ ಸುಯೋಗಗಳನ್ನು ಅತಿ ಮಾನ್ಯವಾದವುಗಳೆಂದು ಎಣಿಸುತ್ತಿದ್ದ ಲೇವ್ಯರಾದ ಕೋರಹನ ಪುತ್ರರಾಗಿದ್ದರು. “ಸೇನಾಧೀಶ್ವರನಾದ ಯೆಹೋವನೇ, ನಿನ್ನ ನಿವಾಸಗಳು ಎಷ್ಟೋ ರಮ್ಯವಾಗಿವೆ” ಎಂದು ಅವರಲ್ಲೊಬ್ಬನು ಉದ್ಗರಿಸುತ್ತಾನೆ. “ಯೆಹೋವನ ಆಲಯದ ಅಂಗಳಗಳಲ್ಲಿ ಸೇರಬೇಕೆಂದು ನನ್ನ ಆತ್ಮವು ಹಂಬಲಿಸುತ್ತಾ ಕುಂದಿಹೋಗಿತ್ತು [ಆದರೆ ಈಗ] ಚೈತನ್ಯಸ್ವರೂಪನಾದ ದೇವರಿಗೆ ನನ್ನ ತನುಮನಗಳಿಂದ ಹರ್ಷಧ್ವನಿಮಾಡುತ್ತೇನೆ.”—ಕೀರ್ತನೆ 84:1, 2.
ಯೆಹೋವನ ಆಲಯದಲ್ಲಿ ಸೇವೆಸಲ್ಲಿಸಲು ಈ ಲೇವ್ಯನಿಗೆ ಎಂತಹ ಹಂಬಲವಿತ್ತೆಂದರೆ, ಯೆರೂಸಲೇಮಿಗೆ ನಡಿಸುವ ಮಾರ್ಗದ ಪಕ್ಕದಲ್ಲಿದ್ದ ಸಾಧಾರಣವಾದ ದೃಶ್ಯ ಕೂಡ ಅವನಿಗೆ ಆಕರ್ಷಕವಾಗಿ ತೋರಿಬಂತು. “ಕಣ್ಣೀರಿನ ತಗ್ಗನ್ನು ದಾಟುವಾಗ ಅಲ್ಲಿ ಒರತೆಗಳನ್ನು ತೋಡಿ ನೀರಿನ ಸ್ಥಳವಾಗ ಮಾಡುತ್ತಾರೆ” ಎಂದು ಅವನು ಹೇಳುತ್ತಾನೆ. (ಕೀರ್ತನೆ 84:6) ಹೌದು, ಸಾಮಾನ್ಯವಾಗಿ ಒಣಗಿರುವ ಒಂದು ಕ್ಷೇತ್ರವು, ಚೆನ್ನಾಗಿ ನೀರು ಹಾಯಿಸಲ್ಪಟ್ಟಿರುವ ಪ್ರದೇಶದಂತಿತ್ತು.
ಆ ಕೀರ್ತನೆಗಾರನು ಯಾಜಕನಲ್ಲದ ಒಬ್ಬ ಲೇವ್ಯನಾಗಿದ್ದುದರಿಂದ, ಅವನು ಪ್ರತಿ ಆರು ತಿಂಗಳಿಗೊಮ್ಮೆ, ಕೇವಲ ಒಂದು ವಾರ ದೇವಾಲಯದಲ್ಲಿ ಸೇವೆಸಲ್ಲಿಸಸಾಧ್ಯವಿತ್ತು. (1 ಪೂರ್ವಕಾಲವೃತ್ತಾಂತ 24:1-19; 2 ಪೂರ್ವಕಾಲವೃತ್ತಾಂತ 23:8; ಲೂಕ 1:5, 8, 9) ಅವನ ಉಳಿದ ಸಮಯವನ್ನು ಅವನು ಲೇವ್ಯ ಪಟ್ಟಣಗಳಲ್ಲಿ ಒಂದರಲ್ಲಿರುವ ಮನೆಯಲ್ಲಿ ಕಳೆಯುತ್ತಿದ್ದನು. ಆದುದರಿಂದ ಅವನು ಹಾಡಿದ್ದು: “ಆಹಾ, ಸೇನಾಧೀಶ್ವರನಾದ ಯೆಹೋವದೇವರೇ, ನನ್ನ ಅರಸನೇ, ನಿನ್ನ ವೇದಿಗಳ ಸಮೀಪದಲ್ಲಿಯೇ ಗುಬ್ಬಿಗೆ ಮನೆಯೂ ಪಾರಿವಾಳಕ್ಕೆ ಮರಿಮಾಡುವ ಗೂಡೂ ದೊರಕಿತಲ್ಲಾ!” (ಕೀರ್ತನೆ 84:3) ದೇವಾಲಯದಲ್ಲಿ ಹೆಚ್ಚು ಶಾಶ್ವತವಾದ ವಾಸಸ್ಥಾನವನ್ನು ಪಡೆದಿದ್ದ ಪಕ್ಷಿಗಳಂತೆ ಅವನು ಇರುತ್ತಿದ್ದಲ್ಲಿ, ಆ ಲೇವ್ಯನು ಎಷ್ಟು ಸಂತೋಷಿತನಾಗಿರುತ್ತಿದ್ದನು!
ತನಗೆ ದೇವಾಲಯದಲ್ಲಿ ಆಗಿಂದಾಗ್ಗೆ ಸೇವೆಸಲ್ಲಿಸಲು ಸಾಧ್ಯವಿರದಿದ್ದ ಕಾರಣ, ಆ ಲೇವ್ಯನು ತೀವ್ರ ಅಸಮಾಧಾನಪಡುವುದು ಸುಲಭವಾಗಿರುತ್ತಿತ್ತು. ಆದಾಗಲೂ, ಅವನಿಗೆ ಸಾಧ್ಯವಿರುವಷ್ಟು ಸೇವೆಯನ್ನು ಸಲ್ಲಿಸಲು ಅವನು ಸಂತೋಷಿತನಾಗಿದ್ದನು, ಮತ್ತು ಯೆಹೋವನಿಗೆ ಪೂರ್ಣಹೃದಯದಿಂದ ಸಲ್ಲಿಸುವ ಭಕ್ತಿಯು, ಪ್ರಯತ್ನಕ್ಕೆ ಅರ್ಹವಾದದ್ದಾಗಿದೆಯೆಂಬುದನ್ನು ಅವನು ನಿಶ್ಚಯವಾಗಿಯೂ ಗ್ರಹಿಸಿದನು. ತನ್ನ ಸೇವಾ ಸುಯೋಗಗಳಲ್ಲಿ ಸಂತೃಪ್ತನಾಗಿ ಉಳಿಯಲು ಈ ನಂಬಿಗಸ್ತ ಲೇವ್ಯನಿಗೆ ಸಹಾಯ ಮಾಡಿದಂತಹ ಸಂಗತಿ ಯಾವುದು?
ಸಂತೃಪ್ತರಾಗಿರಲು ಕಲಿಯಿರಿ
“ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ” ಅನ್ನುತ್ತಾನೆ ಆ ಲೇವ್ಯನು. “ದುಷ್ಟರ ಗುಡಾರಗಳಲ್ಲಿ ವಾಸಿಸುವದಕ್ಕಿಂತ ನನ್ನ ದೇವರ ಆಲಯದ ಬಾಗಿಲನ್ನು ಕಾಯ್ದುಕೊಂಡಿರುವದೇ ಲೇಸು.” (ಕೀರ್ತನೆ 84:10) ಯೆಹೋವನ ಆಲಯದಲ್ಲಿ ಒಂದು ದಿನವನ್ನು ಕಳೆಯುವುದು ಸಹ, ಒಂದು ಅನರ್ಘ್ಯ ಸುಯೋಗವೆಂದು ಅವನು ಗಣ್ಯಮಾಡಿದನು. ಮತ್ತು ಆ ಲೇವ್ಯನಿಗೆ, ದೇವಾಲಯದಲ್ಲಿ ಒಂದಕ್ಕಿಂತಲೂ ಹೆಚ್ಚು ದಿನ ಸೇವೆಸಲ್ಲಿಸುವ ಸಂದರ್ಭವಿತ್ತು. ತನ್ನ ಸುಯೋಗಗಳ ವಿಷಯದಲ್ಲಿ ಅವನಿಗಿದ್ದ ಸಂತೃಪ್ತಿಯು, ಅವನು ಆನಂದದಿಂದ ಹಾಡುವಂತೆ ಮಾಡಿತು.
ನಮ್ಮ ಕುರಿತಾಗಿ ಏನು? ನಾವು ನಮ್ಮ ಆಶೀರ್ವಾದಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೊ, ಅಥವಾ ಯೆಹೋವನ ಸೇವೆಯಲ್ಲಿ ನಮಗೆ ಈಗಾಗಲೇ ಇರುವ ಸುಯೋಗಗಳನ್ನು ಮರೆತುಬಿಡುವ ಪ್ರವೃತ್ತಿಯುಳ್ಳವರಾಗಿದ್ದೇವೊ? ಅವರು ತನಗೆ ತೋರಿಸುವ ಭಕ್ತಿಯ ಕಾರಣದಿಂದ, ಯೆಹೋವನು ತನ್ನ ಜನರಿಗೆ ಸುಯೋಗಗಳು ಮತ್ತು ಕರ್ತವ್ಯಗಳ ಒಂದು ವ್ಯಾಪಕವಾದ ವ್ಯಾಪ್ತಿಯನ್ನು ವಹಿಸಿಕೊಟ್ಟಿದ್ದಾನೆ. ಹೆಚ್ಚು ಹೊಣೆಗಾರಿಕೆಯ ಜವಾಬ್ದಾರಿಗಳಾದ, ಮೇಲ್ವಿಚಾರಣೆ, ಕುರಿಪಾಲನೆ, ಕಲಿಸುವಿಕೆ, ಮತ್ತು ಪೂರ್ಣಸಮಯದ ಸೇವೆಯ ವಿವಿಧ ವೈಶಿಷ್ಟ್ಯಗಳು ಇದರಲ್ಲಿ ಸೇರಿರುತ್ತವೆ. ಆದರೆ ಅವುಗಳು, ಯೆಹೋವನ ಆರಾಧನೆಗೆ ಸಂಬಂಧಿಸಿದ ಇತರ ಅಮೂಲ್ಯ ಸಂಗತಿಗಳನ್ನು ಕೂಡ ಒಳಗೊಂಡಿವೆ.
ಉದಾಹರಣೆಗಾಗಿ, ಕ್ರೈಸ್ತ ಶುಶ್ರೂಷೆಯನ್ನು ಪರಿಗಣಿಸಿರಿ. ಸುವಾರ್ತೆಯನ್ನು ಸಾರುವ ನಮ್ಮ ಸುಯೋಗವನ್ನು ಅಪೊಸ್ತಲ ಪೌಲನು, ನಾವು ‘ಮಣ್ಣಿನ ಘಟಗಳಲ್ಲಿ ನಿಕ್ಷೇಪ’ವನ್ನು ಹೊಂದಿರುವುದಕ್ಕೆ ಹೋಲಿಸುತ್ತಾನೆ. (2 ಕೊರಿಂಥ 4:7) ನೀವು ಅಂತಹ ಸೇವೆಯನ್ನು ಬೆಲೆಕಟ್ಟಲಸಾಧ್ಯವಾದ ಒಂದು ನಿಧಿಯೋಪಾದಿ ಕಾಣುತ್ತೀರೊ? ರಾಜ್ಯ ಸಾರುವ ಚಟುವಟಿಕೆಯ ನುಗ್ಗುಮೊನೆಯಾದ ಯೇಸು ಕ್ರಿಸ್ತನು ನಮೂನೆಯನ್ನಿಡುತ್ತಾ, ಅದನ್ನು ಆ ರೀತಿಯಲ್ಲಿ ದೃಷ್ಟಿಸಿದನು. (ಮತ್ತಾಯ 4:17) “ಆದದರಿಂದ ನಾವು . . . ಈ ಸೇವೆಯನ್ನು ಹೊಂದಿದವರಾಗಿರಲಾಗಿ ಧೈರ್ಯಗೆಟ್ಟು ಹಿಂದೆಗೆಯುವದಿಲ್ಲ” ಅಂದನು ಪೌಲನು.—2 ಕೊರಿಂಥ 4:1.
ಕ್ರೈಸ್ತ ಕೂಟಗಳು ಕೂಡ, ಹಗುರವಾಗಿ ಎಣಿಸಲ್ಪಡಬಾರದ ಒಂದು ಪವಿತ್ರ ಒದಗಿಸುವಿಕೆಯಾಗಿವೆ. ನಮ್ಮ ಕೂಟಗಳಲ್ಲಿ ನಾವು ಪ್ರಾಮುಖ್ಯವಾದ ಉಪದೇಶವನ್ನು ಪಡೆಯುತ್ತೇವೆ ಮತ್ತು ಅಗತ್ಯವಿರುವ ಸಾಹಚರ್ಯದಲ್ಲಿ ಆನಂದಿಸುತ್ತೇವೆ. ಕೂಟಗಳಲ್ಲಿ ನಾವು, ಕ್ರಮವಾಗಿ ಉತ್ತರಗಳನ್ನು ಹೇಳುವ ಮೂಲಕ ಮತ್ತು ಇತರ ವಿಧಗಳಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ, ನಮ್ಮ ನಂಬಿಕೆ ಮತ್ತು ನಿರೀಕ್ಷೆಯ ಬಹಿರಂಗ ವ್ಯಕ್ತಪಡಿಸುವಿಕೆಯನ್ನು ಸಹ ಮಾಡಸಾಧ್ಯವಿದೆ. (ಇಬ್ರಿಯ 10:23-25) ನಮ್ಮ ಕೂಟಗಳು ನಿಜವಾಗಿಯೂ ನೆಚ್ಚಿಕೊಳ್ಳಬೇಕಾದ ಒದಗಿಸುವಿಕೆಯಾಗಿವೆ!
ಈ ಮುಂಚೆ ಉಲ್ಲೇಖಿಸಲ್ಪಟ್ಟ ಮೈಕಲ್, ಈ ಆಶೀರ್ವಾದಗಳನ್ನು ಉಚ್ಚ ಮೌಲ್ಯವುಳ್ಳವುಗಳು ಎಂದೆಣಿಸಿದನು ಮತ್ತು ಅವುಗಳನ್ನು ಬಹಳವಾಗಿ ಗಣ್ಯಮಾಡಿದನು. ಆದರೆ ಒಬ್ಬ ಹಿರಿಯನೋಪಾದಿ ಸೇವೆಸಲ್ಲಿಸಲು ಶಕ್ತನಾಗಿರದಿರುವುದರ ಕುರಿತಾದ ಅವನ ನಿರಾಶೆಯು, ಅವುಗಳಿಗಾಗಿ ಅವನಿಗಿದ್ದ ಗಣ್ಯತೆಯನ್ನು ತಾತ್ಕಾಲಿಕವಾಗಿ ಕುಗ್ಗಿಸಿತು. ಆ ಸುಯೋಗಗಳ ಮೇಲೆ ಪುನಃ ಕೇಂದ್ರೀಕರಿಸುವ ಮೂಲಕ, ಅವನು ತನ್ನ ಸಮಸ್ಥಿತಿಯನ್ನು ಪುನಃ ಗಳಿಸಿ, ಯೆಹೋವನ ಮೇಲೆ ತಾಳ್ಮೆಯಿಂದ ಆತುಕೊಳ್ಳಲು ಶಕ್ತನಾದನು.
ಒಂದು ನಿರ್ದಿಷ್ಟ ಸುಯೋಗವನ್ನು ಪಡೆಯದಿರುವುದಕ್ಕಾಗಿ ಅತೃಪ್ತರಾಗಿರುವ ಬದಲಿಗೆ, ಕೀರ್ತನೆಗಾರನು ಮಾಡಿದಂತೆ ಯೆಹೋವನು ನಮ್ಮನ್ನು ಆಶೀರ್ವದಿಸುತ್ತಿರುವ ವಿಧಗಳನ್ನು ನಾವು ಪುನರ್ಪರಿಶೀಲಿಸುವುದು ಒಳ್ಳೇದು.a ನಾವು ಹೆಚ್ಚನ್ನು ನೋಡಲು ತಪ್ಪಿಹೋಗುವುದಾದರೆ, ನಾವು ಪುನಃ ನೋಡುವ ಅಗತ್ಯವಿದೆ. ನಮ್ಮ ಸುಯೋಗಗಳನ್ನು ಮತ್ತು ಆತನು ನಮ್ಮನ್ನು ಆಶೀರ್ವದಿಸುತ್ತಿರುವ ಮತ್ತು ಆತನ ಸ್ತುತಿಗಾಗಿ ನಮ್ಮನ್ನು ಉಪಯೋಗಿಸುತ್ತಿರುವ ವಿಧಗಳನ್ನು ನಾವು ನೋಡುವಂತೆ, ನಮ್ಮ ಕಣ್ಣುಗಳನ್ನು ತೆರೆಯಲು ನಾವು ಯೆಹೋವನನ್ನು ಕೇಳಿಕೊಳ್ಳಬೇಕು.—ಜ್ಞಾನೋಕ್ತಿ 10:22.
ಮೇಲ್ವಿಚಾರಕನ ಹುದ್ದೆಯಂತಹ ವಿಶೇಷ ಸುಯೋಗಗಳು, ನಿರ್ದಿಷ್ಟವಾದ ಆರ್ಹತೆಗಳನ್ನು ಅವಶ್ಯಪಡಿಸುತ್ತವೆಂಬುದನ್ನು ಗ್ರಹಿಸುವುದೂ ಪ್ರಾಮುಖ್ಯ. (1 ತಿಮೊಥೆಯ 3:1-7; ತೀತ 1:5-9) ಆದುದರಿಂದ ನಾವು ನಮ್ಮನ್ನೇ ಪರಿಶೀಲಿಸಿಕೊಂಡು, ಅಭಿವೃದ್ಧಿಯು ಅಗತ್ಯವಾಗಿರುವ ಕ್ಷೇತ್ರಗಳನ್ನು ಹುಡುಕುತ್ತಾ, ಅನಂತರ ಅಭಿವೃದ್ಧಿ ಮಾಡಲು ಶ್ರದ್ಧಾಪೂರ್ವಕ ಪ್ರಯತ್ನಗಳನ್ನು ಮಾಡುವ ಅಗತ್ಯವಿದೆ.—1 ತಿಮೊಥೆಯ 4:12-15.
ನಿರುತ್ಸಾಹಿತರಾಗಬೇಡಿರಿ
ನಾವು ಸೇವೆಯ ಒಂದು ನಿರ್ದಿಷ್ಟ ಸುಯೋಗವನ್ನು ಪಡೆಯದಿರುವಲ್ಲಿ, ಆ ಸುಯೋಗದಲ್ಲಿ ಆನಂದಿಸುವವರಿಗಾಗಿ ಯೆಹೋವನಲ್ಲಿ ಹೆಚ್ಚು ಪ್ರೀತಿಯಿದೆ ಅಥವಾ ಆತನು ನಮ್ಮಿಂದ ಒಳ್ಳೇದನ್ನು ತಡೆಹಿಡಿಯುತ್ತಿದ್ದಾನೆಂದು ನಾವು ತೀರ್ಮಾನಿಸುವ ಅಗತ್ಯವಿಲ್ಲ. ಇವರು ತಮ್ಮ ಸುಯೋಗಗಳನ್ನು ದೇವಪ್ರಭುತ್ವ ನೇಮಕದ ಬದಲಿಗೆ, ಮಾನವ ಪಕ್ಷಪಾತದ ಮೂಲಕ ಅನರ್ಹವಾಗಿ ಗಳಿಸಿದ್ದಾರೆಂದು ನಾವು ಅಸೂಯೆಯಿಂದ ಊಹಿಸಬಾರದು ನಿಶ್ಚಯ. ಅಂತಹ ವಿಚಾರಗಳ ಕುರಿತಾಗಿ ಚಿಂತಿಸುವುದು, ಈರ್ಷ್ಯೆ, ಕಲಹ, ಮತ್ತು ನಾವು ಎಲ್ಲವನ್ನು ಬಿಟ್ಟುಕೊಡುವುದಕ್ಕೂ ನಮ್ಮನ್ನು ನಡಿಸಬಹುದು.—1 ಕೊರಿಂಥ 3:3; ಯಾಕೋಬ 3:14-16.
ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಲ್ಪಟ್ಟಿರುವ ಲೋರ ಬಿಟ್ಟುಕೊಡಲಿಲ್ಲ. ಅವಳು ಕಟ್ಟಕಡೆಗೆ ತನ್ನ ಕೋಪ ಮತ್ತು ಈರ್ಷ್ಯೆಯ ಭಾವನೆಗಳನ್ನು ನಿಯಂತ್ರಣಕ್ಕೆ ತಂದಳು. ಪಯನೀಯರಳಾಗಿ ಸೇವೆಸಲ್ಲಿಸಲು ತಾನು ಅಶಕ್ತಳಾಗಿದ್ದದಕ್ಕಾಗಿ ತನ್ನ ನಕಾರಾತ್ಮಕ ಪ್ರತಿಕ್ರಿಯೆಯನ್ನು ಜಯಿಸಲು ಸಹಾಯವನ್ನು ಕೊಡುವಂತೆ, ಲೋರ ದೇವರಿಗೆ ಪದೇ ಪದೇ ಪ್ರಾರ್ಥಿಸಿದಳು. ಸಭೆಯಲ್ಲಿನ ಅರ್ಹ ಪುರುಷರಿಂದಲೂ ಅವಳು ನೆರವನ್ನು ಕೋರಿದಳು ಮತ್ತು ದೇವರ ಪ್ರೀತಿಯ ಕುರಿತಾಗಿ ಪುನರಾಶ್ವಾಸನೆಯನ್ನು ಪಡೆದಳು. “ಯೆಹೋವನು ನನಗೆ ಮನಶ್ಶಾಂತಿಯನ್ನು ಕೊಟ್ಟನು” ಎಂದು ಅವಳು ಹೇಳಿದಳು. “ನನ್ನ ಗಂಡ ಮತ್ತು ನಾನು ಈಗ ಪಯನೀಯರ್ ಸೇವೆಯನ್ನು ಮಾಡಲು ಸಾಧ್ಯವಿಲ್ಲದಿದ್ದರೂ, ನಾವು ಅದನ್ನು ಮಾಡಿದಂತಹ ಸಮಯವನ್ನು ನೆಚ್ಚುತ್ತೇವೆ ಮತ್ತು ನಾವು ಪಡೆದಂತಹ ಅನುಭವಗಳಿಂದ ಬಲವನ್ನು ಹೊಂದುತ್ತೇವೆ. ನಮ್ಮ ಬೆಳೆದಿರುವ ಮಗನಿಗೆ ಅವನ ಪಯನೀಯರ್ ಸೇವೆಯಲ್ಲಿ ನಾವು ಸಹಾಯ ಮಾಡುತ್ತೇವೆ ಕೂಡ.” ಸಂತೃಪ್ತಳಾಗಿದ್ದು, ಈಗ ಲೋರ, ಪಯನೀಯರ್ ಸೇವೆಯಲ್ಲಿ “ಸಂತೋಷಪಡುವವರ ಸಂಗಡ ಸಂತೋಷ”ಪಡಲು ಶಕ್ತಳಾಗಿದ್ದಾಳೆ.—ರೋಮಾಪುರ 12:15.
ತಲಪಸಾಧ್ಯವಿರುವ ಗುರಿಗಳನ್ನು ಇಡಿರಿ
ನಾವು ಪ್ರಚಲಿತ ಸೇವಾ ಸುಯೋಗಗಳಲ್ಲಿ ಸಂತೃಪ್ತರಾಗಿರುವುದು, ನಾವು ಇನ್ನೂ ಹೆಚ್ಚಿನ ದೇವಪ್ರಭುತ್ವ ಗುರಿಗಳನ್ನಿಡುವುದನ್ನು ನಿಲ್ಲಿಸಬೇಕೆಂಬುದನ್ನು ಅರ್ಥೈಸುವುದಿಲ್ಲ. ಸ್ವರ್ಗೀಯ ಪುನರುತ್ಥಾನದ ಕುರಿತಾಗಿ ಚರ್ಚಿಸುತ್ತಾ ಪೌಲನು, “ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವನಾಗಿ”ರುವುದರ ಕುರಿತಾಗಿ ಮಾತಾಡಿದನು. ಅವನು ಇದನ್ನೂ ಹೇಳಿದನು: “ಆದರೆ ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ.” (ಫಿಲಿಪ್ಪಿ 3:13-16) ದೇವಪ್ರಭುತ್ವ ಗುರಿಗಳು ಮುಂದಕ್ಕೆ ಚಾಚುವಂತೆ ನಮಗೆ ಸಹಾಯ ಮಾಡಬಲ್ಲವು. ಆದಾಗಲೂ, ಪಂಥಾಹ್ವಾನವೇನೆಂದರೆ, ಆ ಗುರಿಗಳನ್ನು ವಾಸ್ತವಿಕವನ್ನಾಗಿ ಇಡುವುದೇ.
ವಾಸ್ತವಿಕ ಗುರಿಗಳು ಸಮಂಜಸವೂ ತಲಪಸಾಧ್ಯವಿರುವವುಗಳೂ ಆಗಿರುತ್ತವೆ. (ಫಿಲಿಪ್ಪಿ 4:5) ಅನೇಕ ವರ್ಷಗಳ ಕಠಿನ ಶ್ರಮವನ್ನು ಅವಶ್ಯಪಡಿಸುವ ಒಂದು ಗುರಿಯು ಅವಾಸ್ತವಿಕವಾಗಿದೆಯೆಂಬುದನ್ನು ಇದು ಅರ್ಥೈಸುವುದಿಲ್ಲ. ಅಂತಹ ಒಂದು ದೀರ್ಘಾವಧಿಯ ಗುರಿಯನ್ನು, ಮಧ್ಯವರ್ತಿ ಗುರಿಗಳು ಅಥವಾ ಹೆಜ್ಜೆಗಳ ಸರಣಿಗಳನ್ನು ಸ್ಥಾಪಿಸುವ ಮೂಲಕ ಕ್ರಮೇಣವಾಗಿ ತಲಪಸಾಧ್ಯವಿದೆ. ಇವು ಆತ್ಮಿಕ ಪ್ರಗತಿಗಾಗಿ ಗುರುತು ಘಟ್ಟಗಳಾಗಿ ಕಾರ್ಯನಡಿಸಬಲ್ಲವು. ಪ್ರತಿಯೊಂದು ಹೆಜ್ಜೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು, ಹಾದಿಯುದ್ದಕ್ಕೂ ಆಶಾಭಂಗದ ಬದಲಿಗೆ ತೃಪ್ತಿಯ ಭಾವನೆಯನ್ನು ಒದಗಿಸುವುದು.
ಒಂದು ಉತ್ತಮ ಸಮತೋಲನ
ಹಾಗಿದ್ದರೂ, ನಮ್ಮ ಪರಿಸ್ಥಿತಿಗಳು ಮತ್ತು ಮಿತಿಗಳಿಂದಾಗಿ, ಕೆಲವು ಸುಯೋಗಗಳನ್ನು ಪಡೆಯಲು ಸಾಧ್ಯವಿಲ್ಲವೆಂಬುದನ್ನು ಅಂಗೀಕರಿಸುವುದು ಪ್ರಾಮುಖ್ಯ. ಅವುಗಳನ್ನು ಗುರಿಗಳನ್ನಾಗಿ ಇಡುವುದು ಕೇವಲ ಆಶಾಭಂಗ ಮತ್ತು ಹತಾಶೆಗೆ ನಡಿಸಬಲ್ಲದು. ಅಂತಹ ಗುರಿಗಳನ್ನು ಕಡಿಮೆಪಕ್ಷ ಸದ್ಯಕ್ಕೆ ಬದಿಗಿರಿಸಬೇಕು. ದೈವಿಕ ಸಂತೃಪ್ತಿಗಾಗಿ ನಾವು ಪ್ರಾರ್ಥಿಸುವಲ್ಲಿ ಮತ್ತು ಯೆಹೋವನ ಚಿತ್ತದ ಮಾಡುವಿಕೆಯನ್ನು ನಮ್ಮ ಮುಖ್ಯ ಚಿಂತೆಯನ್ನಾಗಿ ಮಾಡುವಲ್ಲಿ, ಇದನ್ನು ಮಾಡುವುದು ಕಷ್ಟಕರವಾಗಿರಲಾರದು. ನಾವು ಸುಯೋಗಗಳಿಗಾಗಿ ಎಟುಕಿಸಿಕೊಳ್ಳುವಾಗ, ನಮ್ಮ ವೈಯಕ್ತಿಕ ಸಾಧನೆಗಳ ಅಂಗೀಕಾರವಲ್ಲ, ಬದಲಾಗಿ ಯೆಹೋವನ ಮಹಿಮೆಯೇ ಪ್ರಾಮುಖ್ಯ. (ಕೀರ್ತನೆ 16:5, 6; ಮತ್ತಾಯ 6:33) ಬೈಬಲ್ ನಮಗೆ ಸೂಕ್ತವಾಗಿ ಹೇಳುವುದು: “ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿದರೆ ನಿನ್ನ ಉದ್ದೇಶಗಳು ಸಫಲವಾಗುವವು.”—ಜ್ಞಾನೋಕ್ತಿ 16:3.
ಎಂಬತ್ತನಾಲ್ಕನೆಯ ಕೀರ್ತನೆಯನ್ನು ಪರಿಗಣಿಸುವುದರಿಂದ, ಕೀರ್ತನೆಗಾರನು ಸೇವಾ ಸುಯೋಗಗಳ ಕಡೆಗೆ ಅಂತಹ ಒಂದು ಮನೋಭಾವವನ್ನು ತೋರಿಸಿದನು ಮತ್ತು ಯೆಹೋವನು ಅವನನ್ನು ಹೇರಳವಾಗಿ ಆಶೀರ್ವದಿಸಿದನೆಂಬುದನ್ನು ನಾವು ನೋಡಸಾಧ್ಯವಿದೆ. ಇನ್ನೂ ಹೆಚ್ಚಾಗಿ, ಈ ಕೀರ್ತನೆಯು ಈ ದಿನದ ವರೆಗೂ ಯೆಹೋವನ ಜನರಿಗೆ ಪ್ರಯೋಜನ ತರುತ್ತಾ ಮುಂದುವರಿದಿದೆ.
ಯೆಹೋವನ ಮೇಲೆ ಪ್ರಾರ್ಥನಾಪೂರ್ವಕವಾದ ಆತುಕೊಳ್ಳುವಿಕೆಯಿಂದ, ಹೆಚ್ಚಿನ ಸುಯೋಗಗಳಿಗಾಗಿರುವ ನಿಮ್ಮ ಹಂಬಲವನ್ನು, ನೀವು ಈಗ ಆನಂದಿಸುತ್ತಿರುವ ಸುಯೋಗಗಳೊಂದಿಗೆ ಸಮತೂಕಗೊಳಿಸಸಾಧ್ಯವಿದೆ. ಹೆಚ್ಚನ್ನು ಮಾಡುವುದಕ್ಕಾಗಿರುವ ನಿಮ್ಮ ಬಯಕೆಯು, ನಿಮಗೆ ಈಗ ಏನಿದೆಯೋ ಅದಕ್ಕಾಗಿ ಗಣ್ಯತೆ ಮತ್ತು ಯೆಹೋವನನ್ನು ಸದಾಕಾಲ ಸೇವಿಸುವ ಆನಂದವನ್ನು ಕಸಿದುಕೊಳ್ಳುವಂತೆ ಬಿಡಬೇಡಿರಿ. ಯೆಹೋವನಲ್ಲಿ ಭರವಸವಿಡಿರಿ, ಯಾಕಂದರೆ ಇದು ಆ ಲೇವ್ಯನ ಮಾತುಗಳಲ್ಲಿ ತೋರಿಸಲ್ಪಟ್ಟಿರುವಂತೆ, ಸಂತೋಷದಲ್ಲಿ ಫಲಿಸುತ್ತದೆ: “ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.”—ಕೀರ್ತನೆ 84:12.
[ಅಧ್ಯಯನ ಪ್ರಶ್ನೆಗಳು]
a ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ, ಜೂನ್ 15, 1988ರ ಸಂಚಿಕೆಯಲ್ಲಿ, “ನೀವು ಪವಿತ್ರ ವಿಷಯಗಳನ್ನು ಗಣ್ಯಮಾಡುತ್ತೀರೊ?” ಎಂಬ ಲೇಖನವನ್ನು ದಯವಿಟ್ಟು ನೋಡಿರಿ.
[ಪುಟ 11 ರಲ್ಲಿರುವ ಚೌಕ]
ನಾವು ಇಡಬಹುದಾದ ಗುರಿಗಳು
ಬೈಬಲನ್ನು ದಿನನಿತ್ಯ ಓದುವುದು.—ಯೆಹೋಶುವ 1:8; ಮತ್ತಾಯ 4:4
ಶಾಸ್ತ್ರೀಯ ತರಬೇತಿಯ ಮೂಲಕ ನಮ್ಮ ಜ್ಞಾನೇಂದ್ರಿಯ ಶಕ್ತಿಗಳನ್ನು ಉತ್ತಮಗೊಳಿಸಿಕೊಳ್ಳುವುದು.—ಇಬ್ರಿಯ 5:14
ದೇವರೊಂದಿಗೆ ಒಂದು ಹೆಚ್ಚು ನಿಕಟವಾದ ಸಂಬಂಧವನ್ನು ವಿಕಸಿಸಿಕೊಳ್ಳುವುದು.—ಕೀರ್ತನೆ 73:28
ಆತ್ಮದ ಫಲಗಳಲ್ಲಿ ಪ್ರತಿಯೊಂದನ್ನೂ ಬೆಳೆಸಿಕೊಳ್ಳುವುದು.—ಗಲಾತ್ಯ 5:22, 23
ನಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸುವುದು.—ಫಿಲಿಪ್ಪಿ 4:6, 7
ಸಾರುವಿಕೆ ಮತ್ತು ಕಲಿಸುವಿಕೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗುವುದು.—1 ತಿಮೊಥೆಯ 4:15, 16
ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳ ಪ್ರತಿಯೊಂದು ಸಂಚಿಕೆಯನ್ನು ಓದಿ, ಮನನ ಮಾಡುವುದು.—ಕೀರ್ತನೆ 49:3
[ಪುಟ 9 ರಲ್ಲಿರುವ ಚಿತ್ರ]
ವೈಯಕ್ತಿಕ ಗುರಿಗಳನ್ನು ಇಡುವಾಗ, ದೇವರ ಚಿತ್ತವನ್ನು ಮಾಡುವುದನ್ನು ಪ್ರಥಮವಾಗಿಡಿರಿ