ದುರಭಿಮಾನಿ ಪ್ರಭುವಿನ ಸಾಮ್ರಾಜ್ಯ ನಷ್ಟ
“ರಾಜನಾದ ಬೇಲ್ಶಚ್ಚರನು ತನ್ನ ರಾಜ್ಯದ ಮುಖಂಡರಲ್ಲಿ ಸಾವಿರ ಮಂದಿಗೆ ಔತಣವನ್ನು ಮಾಡಿಸಿ ಆ ಸಾವಿರ ಜನರ ಕಣ್ಣೆದುರಿಗೆ ತಾನೂ ದ್ರಾಕ್ಷಾರಸವನ್ನು ಕುಡಿದನು” ಎಂದು ಪ್ರವಾದಿಯಾದ ದಾನಿಯೇಲನು ಬರೆದನು. ಆದರೂ, ಔತಣವು ನಡೆಯುತ್ತಿರುವಾಗಲೇ, ಅರಸನ “ಮುಖ ಕಳೆಗುಂದಿತು, ಮನಸ್ಸು ಕಳವಳಗೊಂಡಿತು, ಸೊಂಟದ ಕೀಲು ಸಡಲಿತು, ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.” ಅದೇ ರಾತ್ರಿ “ಕಸ್ದೀಯ ರಾಜನಾದ ಬೇಲ್ಶಚ್ಚರನು ಕೊಲ್ಲಲ್ಪಟ್ಟನು. ಮೇದ್ಯಯನಾದ ದಾರ್ಯಾವೆಷನು ರಾಜ್ಯವನ್ನು ತೆಗೆದುಕೊಂಡನು.”—ದಾನಿಯೇಲ 5:1, 6, 30, 31.
ಬೇಲ್ಶಚ್ಚರನು ಯಾರಾಗಿದ್ದನು? ಅವನು “ಕಸ್ದೀಯ ರಾಜ”ನೆಂದು ಕರೆಯಲ್ಪಟ್ಟದ್ದು ಹೇಗೆ? ಬಾಬೆಲಿನ ಚಕ್ರಾಧಿಪತ್ಯದಲ್ಲಿ ನಿಜವಾಗಿಯೂ ಅವನ ಸ್ಥಾನಮಾನವು ಏನಾಗಿತ್ತು? ಅವನು ಚಕ್ರಾಧಿಪತ್ಯವನ್ನು ಕಳೆದುಕೊಂಡದ್ದು ಹೇಗೆ?
ಉಪಪ್ರಭುವೋ ಅಥವಾ ರಾಜನೋ?
ದಾನಿಯೇಲನು ನೆಬೂಕದ್ನೆಚ್ಚರನನ್ನು ಬೇಲ್ಶಚ್ಚರನ ತಂದೆಯೆಂದು ಸೂಚಿಸುತ್ತಾನೆ. (ದಾನಿಯೇಲ 5:2, 11, 18, 22) ಆದರೆ, ಈ ಸಂಬಂಧವು ನಿಜವಾದದ್ದಲ್ಲ. ರೇಮಂಡ್ ಡೌಅರ್ಟೀಯವರ ನಬೊನೈಡಸ್ ಆ್ಯಂಡ್ ಬೇಲ್ಶಚ್ಚರ್ ಎಂಬ ಪುಸ್ತಕವು ಸೂಚಿಸುವುದೇನೆಂದರೆ, ತನ್ನ ತಾಯಿಯಾದ ನಿಟೊಕ್ರಿಸ್ಳ ಕಡೆಯಿಂದ ನೆಬೂಕದ್ನೆಚ್ಚರನು ಬೇಲ್ಶಚ್ಚರನ ಅಜ್ಜನಾಗಿದ್ದಿರಬಹುದು. ತನ್ನ ರಾಜವಂಶದ ಪೂರ್ವಾಧಿಕಾರಿಯಾಗಿದ್ದ ನೆಬೂಕದ್ನೆಚ್ಚರನು, ಬೇಲ್ಶಚ್ಚರನಿಗೆ ಮುಂಚೆ ರಾಜನಾಗಿದ್ದ ಕಾರಣದಿಂದ ಅವನ “ತಂದೆ”ಯೆಂದು ಕರೆಯಲ್ಪಟ್ಟಿದ್ದಿರಲೂಬಹುದು. (ವಿಮೋಚನಕಾಂಡ 3:1, 2, 6ನ್ನು ಹೋಲಿಸಿರಿ.) ಏನೇ ಆಗಲಿ, 19ನೆಯ ಶತಮಾನದಲ್ಲಿ, ದಕ್ಷಿಣ ಇರಾಕ್ನಲ್ಲಿ ಕಂಡುಕೊಳ್ಳಲ್ಪಟ್ಟ ಅನೇಕ ಜೇಡಿಮಣ್ಣಿನ ಸಿಲಿಂಡರ್ಗಳ ಮೇಲಿನ ಬೆಣೆಲಿಪಿಯ ಶಿಲಾಶಾಸನಗಳು, ಬೇಲ್ಶಚ್ಚರನನ್ನು ಬಾಬೆಲಿನ ರಾಜನಾದ ನಬೊನೈಡಸನ ಹಿರಿಯ ಮಗನೆಂದು ಗುರುತಿಸುತ್ತವೆ.
ದಾನಿಯೇಲ 5ನೆಯ ಅಧ್ಯಾಯದಲ್ಲಿರುವ ವೃತ್ತಾಂತವು, ಸಾ.ಶ.ಪೂ. 539ರಲ್ಲಾದ ಬಾಬೆಲಿನ ಪತನದ ರಾತ್ರಿಯಂದು ನಡೆದ ಘಟನೆಗಳ ಮೇಲೆ ಕೇಂದ್ರೀಕರಿಸುತ್ತದಾದ ಕಾರಣ, ಬೇಲ್ಶಚ್ಚರನು ಹೇಗೆ ರಾಜಯೋಗ್ಯ ಅಧಿಕಾರಕ್ಕೆ ಬಂದನು ಎಂಬುದನ್ನು ಅದು ತಿಳಿಯಪಡಿಸುವುದಿಲ್ಲ. ಆದರೆ ಪ್ರಾಕ್ತನಶೋಧನದ ಮೂಲಗಳು, ನಬೊನೈಡಸ್ ಹಾಗೂ ಬೇಲ್ಶಚ್ಚರನ ನಡುವಿನ ಸಂಬಂಧದ ಕುರಿತು ಸ್ವಲ್ಪ ಮಾಹಿತಿಯನ್ನು ಒದಗಿಸುತ್ತವೆ. ಪ್ರಾಕ್ತನಶೋಧನ ಶಾಸ್ತ್ರಜ್ಞರೂ ಪುರಾತನ ಸಿಮಿಟಿಕ್ ಭಾಷೆಯ ಪರಿಣತರೂ ಆದ ಆ್ಯಲನ್ ಮಿಲರ್ಡ್ ಹೇಳುವುದೇನೆಂದರೆ, “ನಬೊನೈಡಸನು ಇಷ್ಟಬಂದಂತೆ ನಡೆಯುವ ರಾಜನಾಗಿದ್ದನೆಂದು ಬಾಬೆಲಿನ ಪುಸ್ತಕಗಳು ಪ್ರಕಟಪಡಿಸುತ್ತವೆ.” ಮಿಲರ್ಡ್ ಕೂಡಿಸುವುದು: “ಅವನು ಬಾಬೆಲಿನ ದೇವದೇವತೆಗಳನ್ನು ಅಲಕ್ಷಿಸದಿದ್ದರೂ, ಅವನು . . . ಊರ್ ಮತ್ತು ಹಾರಾನ್ ಎಂಬ ಎರಡು ಪಟ್ಟಣಗಳಲ್ಲಿದ್ದ ಚಂದ್ರ ದೇವನಿಗೆ ಹೆಚ್ಚು ಭಕ್ತಿಯನ್ನು ಸಲ್ಲಿಸಿದನು. ತನ್ನ ಆಳ್ವಿಕೆಯ ಅನೇಕ ವರ್ಷಗಳಲ್ಲಿ, ನಬೊನೈಡಸನು ಬಾಬೆಲಿನಲ್ಲಿ ವಾಸಿಸುತ್ತಲೇ ಇರಲಿಲ್ಲ; ಅದಕ್ಕೆ ಬದಲಾಗಿ ಅವನು ಉತ್ತರ ಅರೇಬಿಯದಲ್ಲಿನ ಥೇಮದಲ್ಲಿ ಉಳಿದುಕೊಂಡಿದ್ದನು.” ನಬೊನೈಡಸನು ತನ್ನ ಆಳ್ವಿಕೆಯ ಅಧಿಕಾಂಶ ಕಾಲಾವಧಿಯನ್ನು, ತನ್ನ ರಾಜಧಾನಿಯಾದ ಬಾಬೆಲಿನ ಹೊರಗೆ ಕಳೆದನೆಂಬುದು ಸುವ್ಯಕ್ತ. ಅವನು ಅಲ್ಲಿ ಇಲ್ಲದಿರುವಾಗ, ಆಡಳಿತದ ಅಧಿಕಾರವು ಬೇಲ್ಶಚ್ಚರನಿಗೆ ವಹಿಸಲ್ಪಟ್ಟಿತ್ತು.
ಬೇಲ್ಶಚ್ಚರನ ನಿಜವಾದ ಸ್ಥಾನಮಾನದ ಕುರಿತು ಹೆಚ್ಚನ್ನು ತಿಳಿಸುತ್ತಾ, “ನಬೊನೈಡಸನ ವಚನ ವೃತ್ತಾಂತ” ಎಂದು ವರ್ಣಿಸಲ್ಪಟ್ಟಿರುವ ಬೆಣೆಲಿಪಿಯ ದಾಖಲೆಪತ್ರವು ಹೀಗೆ ಹೇಳುತ್ತದೆ: “ಅವನು [ನಬೊನೈಡಸ್] ತನ್ನ ‘ಮಿಲಿಟರಿ ಸೇನೆ’ಯನ್ನು ಹಿರಿಯ (ಮಗ)ನಿಗೆ, ಅಂದರೆ ತನ್ನ ಜ್ಯೇಷ್ಠ ಪುತ್ರನಿಗೆ ವಹಿಸಿದ್ದನು. ಆ ದೇಶದಲ್ಲಿದ್ದ ಎಲ್ಲ ಸೈನ್ಯಗಳು ಅವನ (ಆಜ್ಞೆ)ಯ ಕೆಳಗೆ ಕಾರ್ಯನಡಿಸುವಂತೆ ಆದೇಶಿಸಲ್ಪಟ್ಟಿದ್ದವು. ಅವನು ತನ್ನ ಅಧಿಕಾರವನ್ನು ಬೇಲ್ಶಚ್ಚರನಿಗೆ ಕೊಟ್ಟಿದ್ದನು, [ಅವನು] ಬೇಲ್ಶಚ್ಚರನಿಗೆ ರಾಜತ್ವವನ್ನು ವಹಿಸಿಕೊಟ್ಟನು.” ಹೀಗೆ, ಬೇಲ್ಶಚ್ಚರನು ಒಬ್ಬ ಪ್ರಭುವಾಗಿದ್ದನು.
ಆದರೂ, ಒಬ್ಬ ಪ್ರಭುವು ರಾಜನೋಪಾದಿ ಪರಿಗಣಿಸಲ್ಪಡಸಾಧ್ಯವಿತ್ತೊ? 1970ಗಳಲ್ಲಿ, ಉತ್ತರ ಸಿರಿಯದಲ್ಲಿ ಕಂಡುಕೊಳ್ಳಲ್ಪಟ್ಟ ಪುರಾತನ ಅರಸನ ಒಂದು ಪ್ರತಿಮೆಯು ತೋರಿಸಿದ್ದೇನೆಂದರೆ, ಒಬ್ಬ ರಾಜನಿಗೆ ಕಡಿಮೆ ರಾಜಪದವಿಯು ಇರುವುದಾದರೂ ಅವನು ರಾಜನೆಂದೇ ಕರೆಯಲ್ಪಡುವುದು ವಾಡಿಕೆಯಾಗಿತ್ತು. ಆ ಪ್ರತಿಮೆಯು ಗೋಸೋನ್ನ ಅರಸನದಾಗಿತ್ತು ಮತ್ತು ಅಶ್ಶೂರ್ಯ ಹಾಗೂ ಅರಮೇಯಿಕ್ ಭಾಷೆಯಲ್ಲಿ ಕೆತ್ತಲ್ಪಟ್ಟಿತ್ತು. ಅಶ್ಶೂರ್ಯದ ಕೆತ್ತನೆಯು ಆ ಪುರುಷನನ್ನು ಗೋಸೋನ್ನ ಅಧಿಪತಿ ಎಂದು ಕರೆಯಿತು, ಆದರೆ ಸಮಾಂತರವಾದ ಅರಮೇಯಿಕ್ ಕೆತ್ತನೆಯು ಅವನನ್ನು ರಾಜನೆಂದು ಕರೆಯಿತು. ಆದುದರಿಂದ, ಬಾಬೆಲಿನ ಅಧಿಕೃತ ಕೆತ್ತನೆಗಳಲ್ಲಿ ಯುವರಾಜನೆಂದು ಕರೆಯಲ್ಪಡುವುದು, ಹಾಗೂ ಅದೇ ಸಮಯದಲ್ಲಿ ದಾನಿಯೇಲನ ಅರಮೇಯಿಕ್ ಬರಹದಲ್ಲಿ ರಾಜನೆಂದು ಕರೆಯಲ್ಪಡುವುದು ಬೇಲ್ಶಚ್ಚರನಿಗೆ ಪೂರ್ವನಿದರ್ಶನವು ಇಲ್ಲದ್ದೇನಾಗಿಲ್ಲ.
ನಬೊನೈಡಸ್ ಹಾಗೂ ಬೇಲ್ಶಚ್ಚರನ ನಡುವಿನ ಜಂಟಿ ರಾಜತ್ವದ ಏರ್ಪಾಡು, ಬಾಬೆಲಿನ ಚಕ್ರಾಧಿಪತ್ಯದ ಅಂತಿಮ ದಿನಗಳ ವರೆಗೂ ಮುಂದುವರಿಯಿತು. ಆದುದರಿಂದಲೇ, ಬಾಬೆಲಿನ ಪತನವಾದ ಅದೇ ರಾತ್ರಿ, ಬೇಲ್ಶಚ್ಚರನು ದಾನಿಯೇಲನನ್ನು ರಾಜ್ಯದ ಮೂರನೇ ಅರಸನನ್ನಾಗಿ—ಎರಡನೇ ಅರಸನನ್ನಾಗಿ ಅಲ್ಲ—ಮಾಡುವ ವಚನವನ್ನಿತ್ತನು.—ದಾನಿಯೇಲ 5:16.
ವಿಪರೀತ ಆತ್ಮವಿಶ್ವಾಸಿಯೂ ಗರ್ವಿಯೂ ಆದ ಒಬ್ಬ ಪ್ರಭು
ರಾಜಕುಮಾರನಾದ ಬೇಲ್ಶಚ್ಚರನು ವಿಪರೀತ ಆತ್ಮವಿಶ್ವಾಸಿಯೂ ಗರ್ವಿಯೂ ಆಗಿದ್ದನೆಂದು, ಅವನ ಆಳ್ವಿಕೆಯ ಕೊನೆಯ ಘಟನೆಗಳು ಸೂಚಿಸುತ್ತವೆ. ಸಾ.ಶ.ಪೂ. 539ರ ಅಕ್ಟೋಬರ್ 5ರಂದು ಅವನ ಆಳ್ವಿಕೆಯ ಅಂತ್ಯವಾದಾಗ, ನಬೊನೈಡಸನು ಮೇದ್ಯಯ-ಪಾರಸೀಯ ಸೇನೆಗಳಿಂದ ಅಪಜಯವನ್ನು ಅನುಭವಿಸಿ, ಬೋರ್ಸಿಪದಲ್ಲಿ ಅಡಗಿಕೊಂಡಿದ್ದನು. ಬಾಬೆಲು ತಾನೇ ಮುತ್ತಿಗೆಗೆ ಒಳಗಾಗಿತ್ತು. ಆದರೆ ಬೃಹದಾಕಾರದ ಗೋಡೆಗಳಿಂದ ಸುತ್ತುವರಿಯಲ್ಪಟ್ಟ ನಗರದಲ್ಲಿ ಬೇಲ್ಶಚ್ಚರನಿಗೆ ಎಷ್ಟು ಭದ್ರವಾದ ಅನಿಸಿಕೆಯಾಗಿತ್ತೆಂದರೆ, ಅದೇ ದಿನ ರಾತ್ರಿ ಅವನು “ತನ್ನ ರಾಜ್ಯದ ಮುಖಂಡರಲ್ಲಿ ಸಾವಿರ ಮಂದಿಗೆ ಔತಣವನ್ನು ಮಾಡಿಸಿ”ದನು. ಸಾ.ಶ.ಪೂ. ಐದನೆಯ ಶತಮಾನದ ಗ್ರೀಕ್ ಇತಿಹಾಸಕಾರನಾದ ಹೆರೊಡೊಟಸ್ ಹೇಳುವುದೇನೆಂದರೆ, ಆ ನಗರದ ಒಳಗೆ ಜನರು “ಆ ಸಮಯದಲ್ಲಿ ಕುಣಿಯುತ್ತಿದ್ದರು ಹಾಗೂ ಸುಖಭೋಗಪಡುತ್ತಿದ್ದರು.”
ಬಾಬೆಲಿನ ಗೋಡೆಗಳ ಹೊರಗೆ, ಮೇದ್ಯಯ-ಪಾರಸೀಯ ಸೈನ್ಯವು ಜಾಗರೂಕವಾಗಿತ್ತು. ಕೋರೇಷನ ಮಾರ್ಗದರ್ಶನಕ್ಕನುಸಾರ, ಅವರು ಆ ನಗರದ ಮಧ್ಯಭಾಗದಿಂದ ಹರಿಯುತ್ತಿದ್ದ ಯೂಫ್ರೇಟೀಸ್ ನದಿಯ ನೀರಿನ ದಿಕ್ಕನ್ನು ಬದಲಾಯಿಸಿದರು. ಅವನ ಯುದ್ಧಭಟರು, ನೀರಿನ ಮಟ್ಟವು ಸಾಕಷ್ಟು ಇಳಿದ ಕೂಡಲೆ, ನದೀತಳದ ಕೊಚ್ಚೆಯಲ್ಲಿ ನಡೆದಾಡಲು ಸಿದ್ಧರಾಗಿದ್ದರು. ಅವರು ಆ ಇಳಿಜಾರನ್ನು ಹತ್ತಿ, ನದಿಯ ಮುಂಭಾಗದ ಉದ್ದಕ್ಕೂ ಇದ್ದ, ತೆರೆದಿಡಲ್ಪಟ್ಟಿದ್ದ ತಾಮ್ರದ ಬಾಗಿಲುಗಳ ಮೂಲಕ ನಗರವನ್ನು ಪ್ರವೇಶಿಸಸಾಧ್ಯವಿತ್ತು.
ನಗರದ ಹೊರಗೆ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಬೇಲ್ಶಚ್ಚರನು ಗಮನಿಸುತ್ತಿದ್ದಲ್ಲಿ, ಅವನು ತಾಮ್ರದ ಮುಂಬಾಗಿಲುಗಳನ್ನು ಮುಚ್ಚಿಸಿ, ನದೀತೀರದ ಉದ್ದಕ್ಕೂ ಇದ್ದ ಗೋಡೆಯ ಮೇಲೆ ತನ್ನ ಬಲಿಷ್ಠ ಜನರನ್ನು ಹತ್ತಿಸಿ, ಶತ್ರುಗಳನ್ನು ಹಳ್ಳಕ್ಕೆ ಕೆಡವುತ್ತಿದ್ದನು. ಅದಕ್ಕೆ ಬದಲಾಗಿ, ದ್ರಾಕ್ಷಾರಸದಿಂದ ಮತ್ತನಾದ ದುರಹಂಕಾರಿಯಾದ ಬೇಲ್ಶಚ್ಚರನು, ಯೆಹೋವನ ದೇವಾಲಯದ ಪಾತ್ರೆಗಳನ್ನು ಅರಮನೆಗೆ ತರುವಂತೆ ಆಜ್ಞಾಪಿಸಿದನು. ತದನಂತರ, ಅವನೂ, ಅವನ ಅತಿಥಿಗಳೂ, ಅವನ ಹೆಂಡತಿಯರೂ, ಅವನ ಉಪಪತ್ನಿಯರೂ ನಿರ್ಲಕ್ಷ್ಯದಿಂದ ಅವುಗಳಲ್ಲಿ ಕುಡಿದರು; ಹಾಗೆಯೇ ಬಾಬೆಲಿನ ದೇವದೇವತೆಗಳನ್ನು ಸ್ತುತಿಸಿದರು. ತತ್ಕ್ಷಣವೇ, ಅದ್ಭುತಕರವಾಗಿ ಕೈಯೊಂದು ಕಂಡುಬಂತು ಮತ್ತು ಅರಮನೆಯ ಗೋಡೆಯ ಮೇಲೆ ಬರೆಯಲು ಆರಂಭಿಸಿತು. ಭಯಭೀತನಾದ ಬೇಲ್ಶಚ್ಚರನು, ಆ ಸಂದೇಶದ ಅರ್ಥವಿವರಣೆಯನ್ನು ತಿಳಿಸುವಂತೆ ತನ್ನ ವಿದ್ವಾಂಸರನ್ನು ಕರೆಸಿದನು. ಆದರೆ “ಆ ಬರಹವನ್ನು ಓದುವದಕ್ಕೂ ಅದರ ಅರ್ಥವನ್ನು ರಾಜನಿಗೆ ತಿಳಿಸುವದಕ್ಕೂ ಅವರಲ್ಲಿ ಯಾರಿಂದಲೂ ಆಗಲಿಲ್ಲ.” ಕಟ್ಟಕಡೆಗೆ, ದಾನಿಯೇಲನನ್ನು ರಾಜನ “ಸನ್ನಿಧಿಗೆ ಬರಮಾಡ”ಲಾಯಿತು. ದೈವ ಪ್ರೇರಣೆಯ ಕೆಳಗೆ, ಯೆಹೋವನ ಧೈರ್ಯವಂತ ಪ್ರವಾದಿಯು, ಮೇದ್ಯಯ-ಪಾರಸೀಯರ ಕೈಯಲ್ಲಿ ಬಾಬೆಲ್ ಪತನವಾಗುವುದನ್ನು ಮುಂತಿಳಿಸುತ್ತಾ, ಆ ಅದ್ಭುತಕರವಾದ ಸಂದೇಶದ ಅರ್ಥವನ್ನು ತಿಳಿಯಪಡಿಸಿದನು.—ದಾನಿಯೇಲ 5:2-28.
ಮೇದ್ಯರು ಹಾಗೂ ಪಾರಸೀಯರು ಸುಲಭವಾಗಿ ಆ ನಗರವನ್ನು ವಶಪಡಿಸಿಕೊಂಡರು, ಮತ್ತು ಬೇಲ್ಶಚ್ಚರನು ಆ ರಾತ್ರಿಯೇ ಕೊಲ್ಲಲ್ಪಟ್ಟನು. ಅವನು ಮೃತಪಟ್ಟು, ತದನಂತರ ನಬೊನೈಡಸನು ಕೋರೇಷನಿಗೆ ಶರಣಾಗತನಾದ ಬಳಿಕ, ಬಾಬೆಲಿನ ಚಕ್ರಾಧಿಪತ್ಯವು ಕೊನೆಗೊಂಡಿತು.
[ಪುಟ 8 ರಲ್ಲಿರುವ ಚಿತ್ರ]
ಬಾಬೆಲಿನ ಚಕ್ರಾಧಿಪತ್ಯದ ಪತನದ ಕುರಿತಾದ ಸಂದೇಶದ ಅರ್ಥವನ್ನು ದಾನಿಯೇಲನು ತಿಳಿಯಪಡಿಸುತ್ತಾನೆ